Ravi Belagere
Welcome to my website
ನಿಮಗೂ ಯಾವಾಗಲೋ ಕಾಲು ಮುರಿದಿರಬಹುದು. ಬಚ್ಚಲಲ್ಲಿ ಕಾಲು ಜಾರಿದ್ದಿರಬಹುದು. ನಡೆಯುತ್ತ ನಡೆಯುತ್ತ ನಿಮ್ಮ ಕಾಲು ಉಳುಕಿರಬಹುದು. ಸ್ವಲ್ಪ ದಿನ ನೀವು ಉಳುಕು ಅಂದುಕೊಂಡಿರುತ್ತೀರಿ: ಡಾಕ್ಟರ್ ಬಳಿಗೆ ಹೋಗಿ ಎಕ್ಸ್‌ರೇ ತೆಗೆಸಿದಾಗ ಅದು hair line fracture. ಆಯ್ತಲ್ಲ? ಮುದ್ದಾಗಿ ಬ್ಯಾಂಡೇಜ್ ಹಾಕಿ ಆರೇ ಆರು ವಾರ ಅದನ್ನು ಹಾಕ್ಕೊಂಡಿರಿ ಅನ್ನುತ್ತಾರೆ. ಅದೊಂಥರಾ ಸಿಮೆಂಟ್‌ನ ಕಟ್ಟೆ ಕಟ್ಟಿದಂತೆಯೇ! ವಿಪರೀತ ಭಾರ. ನಡೆಯುವುದು ಯಮಹಿಂಸೆ. ನಿಮಗೆ ಯಾವತ್ತಾದರೂ ಕೈ ಕಾಲು ಮುರಿದಿದ್ದವಾ? ಯಾಕೆ? Plaster ಸುಖ ಅನುಭವಿಸಿದಿರಾ? ಎಷ್ಟು ದಿನ? ಹೋಗಲಿ ಸಮಸ್ಯೆ ಪೂರ್ಣವಾಗಿ ವಾಸಿಯಾಗಿ ಬಗೆಹರಿಯಿತಾ? ನಿಮ್ಮ ಆಗಿನ ಅನುಭವವನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಆಕೆಗೆ ಮೂವತ್ತೈದು ವರ್ಷ ಹಿಡಿದವು: ನಾವೂ ಆಕೆಗಾಗಿ ಅಷ್ಟೇ ವರ್ಷ ಕಾದೆವು!

“ಆಜ್ ಜಾನೇಕಿ
ಜಿದ್ ನಾ ಕರೋ..."

ಎಂಬ ಗಝಲ್, ಎಷ್ಟು ದಶಕಗಳಾದವೋ? ಮೊಟ್ಟ ಮೊದಲು ಯಾರು ಹಾಡಿದರೋ? ಈಗಿನ ಹುಡುಗಿಯರಿಗೆ ಯಾರು ಕಲಿಸಿದರೋ? ದೇವರಿಗೆ ಗೊತ್ತು. ನಾನು ಕೇಳ್ತಾನೇ ಇದೀನಿ. ಬಲು ಮಧುರ ಗಝಲು ಅದು. ಮನಸು ನೊಂದಾಗ, ತುಂಬ ಒಬ್ಬಂಟಿ ಅನ್ನಿಸಿದಾಗ, ನನ್ನ ನಿಸ್ಸಹಾಯಕ ಏಕಾಂತದಲ್ಲಿ ಇದನ್ನು ಕೇಳಿಸಿಕೊಳ್ತೀನಿ. I just love it.

ಮೊನ್ನೆ ಅದೊಂದು clipping ನೋಡ್ತಿದ್ದೆ. ಸ್ವಾತಂತ್ರ್ಯ ಘೋಷಣೆಯಾದಾಗ ಪಾಕಿಸ್ತಾನವನ್ನು ಆಯ್ದುಕೊಂಡ ಆಕೆ, ಅಲ್ಲೇ ಸ್ಥಿರವಾದರು. ನಾನು ತುಂಬ ಪ್ರೀತಿಸಿದ ಗಾಯಕಿ ಆಕೆ. ಅವರು 1982ರಲ್ಲಿ ಬಹುಶಃ ಭಾರತಕ್ಕೆ, ಮುಂಬಯಿಗೆ ಬಂದಿದ್ದರು. ತನ್ನ ಕಾಲದ ಅದ್ಭುತ ಗಾಯಕಿ. ಈಗೇನಿದೆ, ಬಹುಶಃ ದನಿ ಮುದುರಿ ಹೋಗಿರಬೇಕು. ವಯಸ್ಸು ಧ್ವನಿಯ ಲಾಲಿತ್ಯವನ್ನು ನುಂಗಿ ಬಿಡುತ್ತದೆ. ನೀವೇ ನೋಡಿ: ಈಗ ಲತಾ ಮಂಗೇಶ್ಕರ್ ಹಾಡಿದರೆ ಕೂತು ಕೇಳಿಸಿಕೊಳ್ಳಲಾಗುತ್ತದಾ? ಸಾಧ್ಯವಿಲ್ಲ. ಪಾಕಿಸ್ತಾನದಿಂದ ಬಂದ ಈಕೆಯದೂ ಧ್ವನಿ ಹೋಗಿ ಬಿಟ್ಟಿರಬೇಕು ಅಂದುಕೊಂಡೆ. I was wrong ಅದ್ಭುತವಾಗಿ ಹಾಡಿದರಾಕೆ.

ಆಕೆಯ ಹೆಸರು ನೂರ್ ಜಹಾನ್. ಬೇಕಾದರೆ google search ಮಾಡಿ ಆಕೆಯ ಧ್ವನಿ ಕೇಳಿ. You will enjoy it. ಆ ಸಭೆಯಲ್ಲಿ ನೂರ್ ಜಹಾನ್ ಕುಳಿತಿದ್ದರು. ಮೊದಲು ಆಮಂತ್ರಿಸಿದ್ದು ಕೈಫಿ ಅಜ್ಮಿ ಎಂಬ ಮಹಾನ್ ಲೇಖಕರ ಮಗಳು, ಚಿತ್ರನಟಿ ಶಬಾನಾ ಅಜ್ಮಿ. ಕೇವಲ ಸ್ವಾಗತಿಸಲಿಲ್ಲ. ನೂರ್ ಜಹಾನ್‌ರ ಪರಿಚಯ ಮಾಡಿಸಲಿಕ್ಕೆ ನನ್ನ ತಾಕತ್ತು ಸಾಲದು. ಆ ಕೆಲಸವನ್ನು ಒಬ್ಬ ದಿಲೀಪ್ ಕುಮಾರ್ ಮಾಡಬಲ್ಲರು ಅಂದಳು ಶಬಾನಾ. ಚೂರೆಂದರೆ ಚೂರೂ ಸುಕ್ಕಿರದ grey colour ಸೂಟು ಧರಿಸಿ ವೇದಿಕೆಗೆ ಬಂದದ್ದು ಯೂಸೂಫ್ ಖಾನ್. ದಿಲೀಪ್‌ರ ಮೊದಲ ಹೆಸರು ಯೂಸೂಫ್ ಖಾನ್. ಅವರು ಬರೋ ಹೊತ್ತಿಗೆ, ನೂರ್ ಜಹಾನ್ ಮೂವತ್ತೈದು ವರ್ಷಗಳ ನಂತರ ಮತ್ತೆ ಭಾರತಕ್ಕೆ ಬಂದಿದ್ದಾರೆ ಅಂತ ಶಬಾನಾ ಸೇರಿದಂತೆ ಅನೇಕರು ಅಂದಿದ್ದರು. ಆಗ ದಿಲೀಪ್ ಅಂದದ್ದೇನು ಗೊತ್ತೆ? “ಸರಿ, ಗೌರವಾನ್ವಿತೆ ನೂರ್ ಜಹಾನ್‌ರವರು ಭಾರತಕ್ಕೆ ಬರಲು ಮೂವತ್ತೈದು ವರ್ಷ ಕಾಯ್ದಿದ್ದಾರೆ. ಬರೋಬ್ಬರಿ ಅದೇ ಮೂವತ್ತೈದು ವರ್ಷ ನೂರ್ ಜಹಾನ್‌ರವರಿಗಾಗಿ ನಾವೂ ಕಾಯ್ದಿದ್ದೇವೆ!" ಅಂದರು.

ಇದು ಕೇವಲ ದಿಲೀಪ್ ಕುಮಾರ್ ಅವರ time sense ಕುರಿತಾದ ಮಾತಲ್ಲ. ಅದನ್ನು ಒಪ್ಪಿಕೊಳ್ಳೋಣ. ಆದರೆ ಇದು ಉರ್ದು ಭಾಷೆಯ ತಾಕತ್ತು ಕೂಡ. ಎಷ್ಟು ಚೆಂದದ ಅವಕಾಶ ಒದಗಿಸುತ್ತೆ ಮತ್ತು ಎಷ್ಟು ಚೆಂದಗೆ ಅದು ಒದಗಿ ಬರುತ್ತೆ ನೋಡಿ? ಉರ್ದುವನ್ನು ಪ್ರೀತಿಸಲಿಕ್ಕೆ ಇಂಥ ಸಾವಿರ ಕಾರಣಗಳಿವೆ ನನಗೆ. ಬಳ್ಳಾರಿಯ ಗ್ಲಾಸ್ ಬಜಾರ್, ಮಸ್‌ಜಿದ್ ಗಲ್ಲಿ, ಇಮ್ಲಿಬಾಗ್ ಎಂಬ ಶುದ್ಧ ಮುಸ್ಲಿಂ ಕ್ರೀಮ್ ಏರಿಯಾದ ಚೆಲುವೆಯೊಬ್ಬಳನ್ನು ನಾನು ಬೆನ್ನತ್ತಿದ್ದುದು ನಿಜ. ಆಗಷ್ಟೆ ನೆರಿಗೆ ಲಂಗದ ಹುಡುಗಿ ನನ್ನ ಕೈತಪ್ಪಿ ಹೋಗಿದ್ದಳು. ಅವಳು ಓದುತ್ತಿದ್ದುದು ಮುಸ್ಲಿಂ ಏರಿಯಾಕ್ಕೆ ಹೊಂದಿಕೊಂಡೇ ಇದ್ದ ಗರ್ಲ್ಸ್ ಹೈಸ್ಕೂಲ್‌ನಲ್ಲಿ. ಅದು ನನ್ನ ಕಣ್ಣೆದುರಿಗೇ ಇತ್ತು. ಹೇಗೆ ಅಂದ್ರೆ, ಗ್ಲಾಸ್ ಬಜಾರ್‌ನಲ್ಲಿದ್ದ typing instituteನಲ್ಲೇ ನಾನು typing ಕಲಿತದ್ದು. ಆಗ Institute ಕೊಂಚ ದೂರದಲ್ಲಿತ್ತು. ಮುಂದೆ ಅದರ ಕುಳ್ಳನೆಯ ಪ್ರಿನ್ಸಿಪಾಲ್, ಇನ್‌ಸ್ಟಿಟ್ಯೂಟ್‌ಗೆ ಟೈಪು ಕಲಿಯಲು ಬರುತ್ತಿದ್ದಾಕೆಯನ್ನು ಪಟಾಯಿಸಿ ಮದುವೆಯಾದ. ಅದಾದ ಮೇಲೆ ಇನ್ಸ್‌ಟಿಟ್ಯೂಟ್, ಗ್ಲಾಸ್ ಬಜಾರ್‌ನ ಈ ತುದಿಯಲ್ಲಿನ ಕಟ್ಟಡಕ್ಕೆ shift ಆಯಿತು. ಆ ಕಟ್ಟಡದ ಒಂದು ಕಿಟಕಿ ಬಳಿ ನಿಂತರೆ ಗರ್ಲ್ಸ್ ಹೈಸ್ಕೂಲ್ ನಿಡಿನಿಚ್ಚಳವಾಗಿ ಕಾಣಿಸುತ್ತಿತ್ತು. ಅಷ್ಟು ಸಾಕಲ್ಲ? ಕಿಟಕಿ ಎದುರು ಅನಾಮತ್ತು chair ಹಾಕಿಕೊಂಡೇ ಸ್ಥಾಪಿತನಾಗಿ ಬಿಡುತ್ತಿದ್ದೆ. ಮುಂದೆ ಅವಳ ಹೈಸ್ಕೂಲೂ ಮುಗಿಯಿತು. ಕೆಲ ವರ್ಷಗಳ ನಂತರ ನಮ್ಮಿಬ್ಬರ ಬಂಧವೂ ಹರಿಯಿತು. ಆಗ ಅವಳ ಮೇಲೆ ಯಾವ ಪರಿ ಉರಿದು ಬೀಳುತ್ತಿದ್ದೆನೆಂದರೆ, ಶತಾಯ ಗತಾಯ ನಾನೊಂದು girl friendನ ಹೊಂದಬೇಕಿತ್ತು. ತಕ್ಷಣಕ್ಕೆ ಒದಗಿದ್ದು ಈ ಮುಸಲ ಸುಂದರಿ! ಪಾಪ, ಅವಳು ಸಭ್ಯಸ್ತೆ. ಅತ್ತಿತ್ತ ಕಣ್ಣೆತ್ತಿ ನೋಡಿದವಳಲ್ಲ. ಖಂಡಿತಕ್ಕೂ ನನ್ನೆಡೆಗೆ ಪ್ರೀತಿಯಿಂದ ನೋಡಿದವಳಲ್ಲವೇ ಅಲ್ಲ. ಆದರೇನಂತೆ? one side loveಗೆ ಏನು ಹೋಗಬೇಕಿದೆ? ನನ್ನದು ಎಂಥ ದುಷ್ಟ ಮನಸು ನೋಡಿ? ಆಯಿತಪ್ಪ, ಅಕಸ್ಮಾತ್ ಒಲಿದಳು ಅಂತಲೇ ಇಟ್ಕಳ್ಳಿ. ಅವಳೊಂದಿಗೆ ಹೇಗೆ ಮಾತಾಡಲಿ? ಕನ್ನಡ-ತೆಲುಗು ಅವಳಿಗೆ ಬರೋಲ್ಲ. ನನಗೆ ಟೂಟಿ-ಫೂಟಿ ಉರ್ದು ಬರುತ್ತೆ. ಅದು ಸಾಕಾ ಒಲಿಸಿಕೊಳ್ಳಲಿಕ್ಕೆ? ಅದ್ಭುತವಾದ ಉರ್ದು ಕಲಿತು ಅವಳೊಂದಿಗೆ ಮಾತಾಡಬೇಕು. ಸಚ್ಚಿ, ಅದೊಂದೇ ಕಾರಣಕ್ಕೆ ನಾನು ಪಕ್ಕಾ ಉರ್ದು ಕಲಿಯಲಾರಂಭಿಸಿದೆ. Typing Instituteನಲ್ಲಿ ಕುಳಿತೇ ಕಲಿಯಲಾರಂಭಿಸಿದೆ. ಮುಂದೆ ಆ ಮ್ಲೇಚ್ಛ ಸುಂದರಿ ಒಲಿಯುವ chance ಇತ್ತೇನೋ? ಆದರೆ ಗಮನಿಸಿ ನೋಡಿದಾಗ ಗೊತ್ತಾಯಿತು: ಅಸಲು ಅವಳಿಗೆ ಉರ್ದು ಬರುತ್ತಲೇ ಇರಲಿಲ್ಲ. ಅವಳು ಮಾತನಾಡುತ್ತಿದ್ದುದು ಬಳ್ಳಾರಿಯ ಜಟಕಾ ಮುಸಲ್ಮಾನರು ಮಾತಾಡುತ್ತಿದ್ದ ‘ದಖನೀ’ ಉರ್ದುವನ್ನ. ಬಹುಶಃ ಇವತ್ತಿಗೂ ಬಳ್ಳಾರಿಯ ಮುಸ್ಲಿಮರಿಗೆ ಅದನ್ನು ‘ದಖನೀ’ ಅಂತಾರೆ ಅಂತ ಗೊತ್ತಿರಲಾರದು. ಬಿಡಿ, ಲಾಭವಾದದ್ದು ನನಗೇ. ಅವತ್ತಿಗೆ ನನಗೆ ‘ದಖನೀ’ ಬರುತ್ತಿತ್ತು. ಹಟಕ್ಕೆ ಬಿದ್ದು ನಾನು ಲಖನವೀ ಉರ್ದು ಕಲಿತೆ. ಬಳ್ಳಾರಿಯ ಬಗ್ಗೆ ನನಗೆ ಹೆಮ್ಮೆ ಮತ್ತು ಪ್ರೀತಿ ಇರಲು ಕಾರಣ ಗೊತ್ತೆ? ಶತಮಾನವೇ ಕಳೆದಿದೆ: ಒಂದೇ ಒಂದು ಹಿಂದೂ-ಮುಸ್ಲಿಂ ಗಲಭೆ ಆಗಿಲ್ಲ. ಅತ್ತ ಪರಿಶುದ್ಧ ಮುಸ್ಲಿಮರೂ ಅಲ್ಲದ, ಇತ್ತ ‘ಕಾಯಿದೆ ಪ್ರಕಾರ’ದ ಹಿಂದೂಗಳೂ ಅಲ್ಲದ ‘ಪಿಂಜಾರ’ರು ನಮ್ಮ ನಡುವೆಯೇ ಸಾವಿರ ಸಾವಿರ ಇದ್ದಾರೆ. ಅವರ ಹೆಸರುಗಳ ಮೇಲೂ ನಮಗೆಲ್ಲ ಪ್ರೀತಿಯಿದೆ. ಹುಸೇನ್ ಸಾಬ್ son of ತಿಪ್ಪೇಸ್ವಾಮಿ ಎಂಬಂಥ ಹೆಸರುಗಳು ನಿಮಗೆ ಬಳ್ಳಾರಿಯಲ್ಲಿ ಮಾತ್ರ ಕೇಳ ಸಿಗುತ್ತವೆ. ಏಕೆಂದರೆ, ಪಿಂಜಾರರಿಗೆ ಮುಸ್ಲಿಂ ಹೆಸರೂ ಬೇಕು: ಇತ್ತ ತಾವು ನಡೆದುಕೊಳ್ಳುವ ನಾಯಕನ ಹಟ್ಟಿ ತಿಪ್ಪೇಸ್ವಾಮಿಯೂ ಬೇಕು. ಆಗ ನನಗಿದ್ದ ಒಬ್ಬ ಗೆಳೆಯನ ಹೆಸರು ತಿಪ್ಪಣ್ಣ. ಇವತ್ತಿಗೂ ಇದ್ದಾನೆ. ಅವನಿಗೆ ನಯಾಪೈಸೆಯಷ್ಟೂ ಉರ್ದು ಬರುವುದಿಲ್ಲ. ಅದರಿಂದ ಅವನಿಗೆ ಆಗಬೇಕಾದ್ದೂ ಏನಿಲ್ಲ. ಎರಡೂ ಧರ್ಮಗಳ ಜನರಿಗೆ ಆ ನನ್ನ ಊರಿನಲ್ಲಿ sense ಇದೆ.

ಒಂದು ಸಂಗತಿಯ ಬಗ್ಗೆ ಈಗಲೂ ಬೇಸರಿಸಿಕೊಳ್ಳುತ್ತೇನೆ. ಅಲ್ಲಿ ಗ್ಲಾಸ್ ಬಜಾರ್‌ನಲ್ಲಿ, ಮಸ್‌ಜಿದ್ ಗಲ್ಲಿಯಲ್ಲಿ, ಇಮ್ಲೀಬಾಗ್‌ನಲ್ಲಿ ನನಗೆ ತುಂಬ ಜನ ಮಿತ್ರರಿದ್ದರು. ಒಬ್ಬ ಹುಡುಗಿಯನ್ನು ಅವಳ ಅನೇಕ ಗೆಳತಿಯರು ‘ಗೊಲ್ಲ’ ಅಂತಲೇ ಕರೆಯುತ್ತಿದ್ದರು. ಅವಳ ಅಣ್ಣ ಕೃಷ್ಣ, ನನ್ನ ಅತ್ಯಾಪ್ತ ಮಿತ್ರ. ಗ್ಲಾಸ್ ಬಜಾರ್‌ನಲ್ಲಿ ಕ್ರಿಶ್ಚಿಯನ್ನರೂ ಇದ್ದರು. ಅಲ್ಲಿ ಸೋಷಲಿಸ್ಟ್ ಮುಖಂಡ ದಾಸನ್ ಸಾಲೊಮನ್ ಇದ್ದರು. ನನ್ನ ಮಿತ್ರ ಚಿಕ್ಕ ಇದ್ದ. ಅವನ ಸಂಬಂಧಿ ಲಾವಣ್ಯ ಟೀಚರ್, ನನ್ನ ಅಮ್ಮನ ಸಹೋದ್ಯೋಗಿ. ಅದೇ ಬೀದಿಯಲ್ಲಿ ಫಯಾಜ್ ಇದ್ದ, ಅವನ ಅಣ್ಣ ಫಸಿ ಕೂಡ ಇದ್ದ. ಎಲ್ಲಿದ್ದಾರೋ? ಅವರ ಜೊತೆಯಲ್ಲಿಯೇ ನಮಗೆ ಮುಷ್ತಾಕ್ ಸಿಗುತ್ತಿದ್ದ. ಆಸ್ಟ್ರೇಲಿಯಾದಲ್ಲಿದ್ದಾನೆ ಅಂದದ್ದು ಅವನ ತಂಗಿ. ಅವಳೊಬ್ಬಳು touchನಲ್ಲಿದ್ದಾಳೆ. ಗೊಲ್ಲ ವಿಜಯಲಕ್ಷ್ಮಿ ಕೂಡ ಆಗಾಗ ಇಲ್ಲೇ ಜಯನಗರದಲ್ಲಿ ಸಿಗುತ್ತಿದ್ದಳು. ಆಕೆಯ ಯಜಮಾನರು ತೀರಿಕೊಂಡರು. ದುರಂತವೆಂದರೆ, ಆಕೆಯ ಅಣ್ಣ ಅಂದೆನಲ್ಲ? ನನ್ನ ಅತ್ಯಾಪ್ತ ಮಿತ್ರ ಕೃಷ್ಣ ವಿಪರೀತ ಕುಡಿತಕ್ಕೆ ಬಿದ್ದ. ಜೊತೆಗೆ ಗಾಂಜಾ dependency ಕೂಡ ಇತ್ತು. ಅದೆರಡನ್ನೂ ಮಿತಿ ಮೀರಿ ಬಳಸಿ ಅದೊಂದು ದಿನ ಸತ್ತೇ ಹೋದ. ನೆನೆದರೆ ಬೇಸರವಾಗುತ್ತದೆ. ಕೃಷ್ಣ ನೋಡಲಿಕ್ಕೆ ಚೆಲುವನೇನಲ್ಲ. But a very good fighter. ರಸ್ತೆ ಮಧ್ಯೆ ಬಡಿದಾಡಲು ನಿಂತರೆ ಅದ್ಭುತ. ಅವನ ಪತ್ನಿ ನನ್ನ ಇನ್ನೊಬ್ಬ ಗೆಳೆಯನ ತಂಗಿ. ಆಕೆಯ ಹೆಸರು ಫ್ರಾನ್ಸಿನಾ. ಅವಳ ಅಣ್ಣ ಸಂತಾನಮ್ ಬಾಬು. ಅವನು ಮೆಕ್ಯಾನಿಕ್. ಎಲ್ಲಿದ್ದಾನೋ? ಆಕೆ ಎಲ್ಲಿದ್ದಾಳೋ? ತಿಳಿಯದು. ತುಂಬ ಒಳ್ಳೆಯ ಜನ.

ನಿಮಗಿದು ಅರ್ಥವಾಗಬೇಕು ಅಂದರೆ, ನೀವು ಆಂಧ್ರದ ಗಡಿಯ ಆ ರಾಯಲ ಸೀಮೆಯನ್ನು ತಿಳಿದುಕೊಳ್ಳಬೇಕು. ಮೊದಲು ಬಳ್ಳಾರಿ ಜಿಲ್ಲೆಯೂ ರಾಯಲಸೀಮಾದಲ್ಲಿತ್ತು. ಅವತ್ತಿಗವು Back ಜಿಲ್ಲೆಗಳು. ಬಳ್ಳಾರಿ, ಅನಂತಪುರಂ, ಕಡಪಾ, ಕರ್ನೂಲು ಸೇರಿದರೆ Back districts. ಅದೇಕೆ ಇಂಗ್ಲಿಷರು ಸರಳವಾದ ‘ಕಡಪ’ ಎಂಬ ಹೆಸರನ್ನು ‘Cuddappah’ ಅಂತ ಬರೆದರೋ, ಅವರನ್ನೇ ಕೇಳಿಬರಬೇಕು. ಇರಲಿ, ಈ ನಾಲ್ಕು ಜಿಲ್ಲೆಗಳಲ್ಲಿ ಯಾವುದೋ ಒಂದು ಕಾಲಕ್ಕೆ ಕ್ರಿಶ್ಚಿಯನ್ನರ ಕನ್ವರ್ಷನ್ ಚಟುವಟಿಕೆ ನಡೆದಿದೆ. ಕೆಲವು ಪಕ್ಕಾ ಶ್ರೀಮಂತ ರೆಡ್ಡಿ ಕುಟುಂಬಗಳು ಮತಾಂತರಗೊಂಡಿವೆ. ಅವರಿಗೆ ಅತ್ತ ಸಂಪೂರ್ಣ ಕ್ರೈಸ್ತ ಧರ್ಮವೂ ದಕ್ಕಿಲ್ಲ. ಇತ್ತ ಹಿಂದೂ ನಂಟೂ ಬಿಟ್ಟಿಲ್ಲ. ಅಂಥವರೇ ಸಂತಾನಂ ಬಾಬು, ಸಾಲೊಮನ್ ರೆಡ್ಡಿ ಮುಂತಾದ ಹೆಸರುಗಳನ್ನಿಟ್ಟುಕೊಂಡರು. ಪಕ್ಕಾ ಉದಾಹರಣೆಯೆಂದರೆ, ಅಪಘಾತದಲ್ಲಿ ಗತಿಸಿಹೋದ ಅಂದಿನ ಆಂಧ್ರದ ಮುಖ್ಯಮಂತ್ರಿ ರಾಜಶೇಖರ ರೆಡ್ಡಿಯದು. ಅಂಥ ಅನೇಕ ಶ್ರೀಮಂತ ರೆಡ್ಡಿಗಳು ಅದೆಲ್ಲೆಲ್ಲಿಂದಲೋ ಬಂದು ಬಳ್ಳಾರಿಗೆ ಸೇರಿಕೊಂಡರು. ಅವರು ಬಂದದ್ದು ಮತ್ತೇನಕ್ಕೂ ಅಲ್ಲ: ಬಳ್ಳಾರಿಯಲ್ಲಿ ಆಗ ಸೇಂಟ್ ಜಾನ್ ಹೈಸ್ಕೂಲ್ ಇತ್ತು. ಪಕ್ಕದಲ್ಲೇ ವಾರ್ಡ್ಲಾ ಹೈಸ್ಕೂಲ್ ಇತ್ತು. ವಾರ್ಡ್‌ಲಾ ಹೈಸ್ಕೂಲ್‌ನ ಪ್ರಿನ್ಸಿಪಾಲರಾಗಿದ್ದದ್ದು ಚಿತ್ರಶೇಖರ್. ಸೇಂಟ್ ಜಾನ್ಸ್‌ನಲ್ಲೂ ಕನ್ವರ್ಟ್ ಕ್ರೈಸ್ತರೇ ಮೇಷ್ಟ್ರುಗಳಾಗಿದ್ದರು. ಅವರು ತೆಲುಗರು. ಅದೆಲ್ಲ ಯಾಕೆ, ಬಳ್ಳಾರಿಯಲ್ಲೀಗ ಇರುವ ಹಳಬರನ್ನು ಮಾತಾಡಿಸಿ ನೋಡಿ? ಅವರು ಯಾವತ್ತಿಗೂ ಸೇಂಟ್ ಜಾನ್ಸ್ ಹೈಸ್ಕೂಲ್ ಅಂದವರಲ್ಲ. ‘ಸಂಜಾನೈಸ್ಕೂಲ್’ ಅಂತ ಇವತ್ತಿಗೂ ಅನ್ನುತ್ತಾರೆ. ಅದಕ್ಕೆ ಕಾರಣ ಬಳ್ಳಾರಿಯ ತೆಲುಗರ ಅಮಾಯಕತೆ ಮತ್ತು ಸೇಂಟ್ ಜಾನ್ಸ್ ಹೈಸ್ಕೂಲ್‌ನ ಖ್ಯಾತಿ. ‘ರೆವರೆಂಡ್ ಫಾದರ್ ಲೂರ್ದ್ ಜಾನ್ ಅಯ್ಯವಾರು’ ಅಂತ ಬರೆದುಕೊಳ್ಳುತ್ತಾರೆ.

ನಿಮಗೆ ಸಂತಾನಂ ಬಾಬು ಅರ್ಥವಾದರೆ, ಹುಸೇನ್ ಸಾಬ್‌ನ ಮಗ ತಿಪ್ಪೇಸ್ವಾಮಿ ಅರ್ಥವಾಗುತ್ತಾನೆ. ನನಗೆ ಈ ತೆರನಾದ ದೃಷ್ಟಿಕೋನ ಬೆಳೆಯಲಿಕ್ಕೆ ನಾನು ಓದಿದ ಇತಿಹಾಸ ಕಾರಣ. ಜೊತೆಗೆ ನಾನಾ ಜಾತಿಗಳ ಗೆಳೆಯರು ಇದ್ದದ್ದು ಕಾರಣ. ನನ್ನ ಗೆಳೆಯರ ಗ್ಯಾಂಗ್ ಯಾವತ್ತಿಗೂ ದೊಡ್ಡದು. ಅದರಲ್ಲಿ ಷಫಿ, ಅಬ್ದುಲ್ಲಾ, ಅನೀಸ್, ಷಕೂರ್, ಫಕ್ರುದ್ದೀನ್, ಸಾಲಮನ್, ಜಾರ್ಜ್, ಲೂರ್ದ್ ಮಾತಾ-ಎಲ್ಲರೂ ಇದ್ದರಲ್ಲ? ನನ್ನ ಪರಿಚಿತ ಹಿರಿಯನೊಬ್ಬ ಇದ್ದ: ರಾಮಯ್ಯ ಅಂತ. ಆತ ಕುಷ್ಠರೋಗಿಗಳ ಒಳಿತಿಗಾಗಿ ಓಡಾಡುತ್ತಿದ್ದ. ಜೊತೆಗೆ ಮುನಿಸಿಪಲ್ ಕೌನ್ಸಿಲರ್ ಆಗಿದ್ದ. ಆತನ ಜಾತಿ ಯಾವುದು ಅಂತ ನಾನೂ ಕೇಳಿರಲಿಲ್ಲ: ಆತನೂ ಹೇಳಿರಲಿಲ್ಲ. ಆತ ತೀರಿಕೊಂಡಾಗಲೇ ನನಗೆ ಗೊತ್ತಾದದ್ದು: ರಾಮಯ್ಯ ಕ್ರಿಶ್ಚಿಯನ್! ನಟ್ಟ ನಡುರಾತ್ರಿ ರಾಮಯ್ಯನ ಶವ ನೋಡಲು ಹೋದೆ. ಅಲ್ಲಿ ಪಕ್ಕಾ ಕ್ರಿಶ್ಚಿಯನ್ ರಿವಾಜ್‌ನ ಅಂತ್ಯ ಸಂಸ್ಕಾರದ ಸಿದ್ಧತೆ ನಡೆದಿತ್ತು. ನಿಸ್ಸಹಾಯಕ ರಾಮಯ್ಯ ಉದ್ದಕ್ಕೆ ಕಾಲುಚಾಚಿ ಮಲಗಿದ್ದ. ಇಂತಹ ಅನುಭವಗಳಿಗೆ ಕಾರಣಳಾದವಳು ನನ್ನ ಆಮ್ಮ. ಆಕೆ ಎಂದೆಂದಿಗೂ ಇಂಥ ಜಾತಿಯ ಗೆಳೆಯರ ಜೊತೆಗೇ ಓಡಾಡು ಅಂತ ಅಂದಿರಲಿಲ್ಲ. ಜಾತಿ ಎಂಬುದು ಬಾಲ್ಯದಲ್ಲೇ ನನ್ನ ತಲೆಯಿಂದ ಎಗರಿ ಹೋಗಿತ್ತು. ಅದಕ್ಕೆ ಸರಿಯಾಗಿ ಜೊತೆಯಾದದ್ದು ನನ್ನ ತಂಟೆಕೋರ ತುಂಟ ಚಟುವಟಿಕೆಗಳು. ಅವುಗಳಲ್ಲಿ ಶಾಮೀಲಾಗುತ್ತಿದ್ದವರೆಲ್ಲ ಬ್ರಾಹ್ಮಣೇತರರೇ. ಹೀಗಾಗಿ, ತುಂಬ ಚಿಕ್ಕ ವಯಸ್ಸಿಗೇ ನನಗೆ ಸಿಗರೇಟು, ಕುಡಿತ, ಲವ್ವು, ಉರ್ದು ಹಾಳುಮೂಳೆಲ್ಲ ಪರಿಚಯವಾದವು.

ಈಗ ಸಾಕಷ್ಟು ವರ್ಷ ಕಳೆದು ಹೋಗಿವೆ. ಸಿಗರೇಟಿನ ಹೊರತಾಗಿ ಮತ್ಯಾವ ಚಟಗಳೂ ಉಳಿದಿಲ್ಲ. ಆದರೆ ನನ್ನಲ್ಲಿ ‘ಜಾತಿ’ ಬೆಳೆದಿಲ್ಲ. ಕೆಲವು ಸಲ ಅವರಿವರ ಮಾತು ಕೇಳುತ್ತಿರುತ್ತೇನೆ. “ಸರ್, ನಾವೆಲ್ಲ ನಿಮ್ಮ ಬರಹಗಳನ್ನು ಓದಿಕೊಂಡು ಬೆಳೆದವರು!" ಅನ್ನುತ್ತಿರುತ್ತಾರೆ. ಹೊಗಳಿಕೆ ಅನ್ನಿಸುವುದಿಲ್ಲ. ಜವಾಬ್ದಾರಿ ಹೆಚ್ಚಾಗಿದೆ ಅನ್ನಿಸಿ ಗಾಬರಿಪಡುತ್ತೇನೆ. ಮೊನ್ನೆ ಅದ್ಯಾರೋ ಫಾದರ್ಸ್ ಡೇ ವಿಷಸ್ ಕಳಿಸಿದ್ದರು. ತಂದೆಯ ಸ್ಥಾನ ಒಪ್ಪಿಕೊಳ್ಳೋದು ಎಷ್ಟು ಕಷ್ಟ! ನನಗೆ ಟೀಚರ್ಸ್ ಡೇದಂದು ಅವೆಷ್ಟು wishes ಬರುತ್ತವೆ ಗೊತ್ತಾ? ಹಾಗೆಯೇ, ‘ಫ್ರೆಂಡ್‌ಷಿಪ್ ಡೇ’ ಎಂಬ ಎಳಸುಗಳ ಹಬ್ಬಕ್ಕೂ ಸಾಲುಗಟ್ಟಿ ವಿಷಸ್ ಬರುತ್ತವೆ. ನಾನು ಕೇವಲ ಬ್ರಾಹ್ಮಣನಾಗಿದ್ದರೆ, ಕೇವಲ ಹಿಂದೂ ಆಗಿದ್ದಿದ್ದರೆ ಇವೆಲ್ಲ ಸಾಧ್ಯವಾಗುತ್ತಿದ್ದವಾ? ಯೋಚಿಸಿ ಹೇಳಿ. ನಾವು ಅದ್ಯಾವುದೂ ಆಗಬಾರದು. ಸುಮ್ಮನೆ ಮನುಷ್ಯರಾಗಿ ಉಳಿದು ಬಿಡಬೇಕು.

ನಿಮ್ಮವನು
ಆರ್.ಬಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 11 August, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books