Ravi Belagere
Welcome to my website
ನಿಮಗೂ ಯಾವಾಗಲೋ ಕಾಲು ಮುರಿದಿರಬಹುದು. ಬಚ್ಚಲಲ್ಲಿ ಕಾಲು ಜಾರಿದ್ದಿರಬಹುದು. ನಡೆಯುತ್ತ ನಡೆಯುತ್ತ ನಿಮ್ಮ ಕಾಲು ಉಳುಕಿರಬಹುದು. ಸ್ವಲ್ಪ ದಿನ ನೀವು ಉಳುಕು ಅಂದುಕೊಂಡಿರುತ್ತೀರಿ: ಡಾಕ್ಟರ್ ಬಳಿಗೆ ಹೋಗಿ ಎಕ್ಸ್‌ರೇ ತೆಗೆಸಿದಾಗ ಅದು hair line fracture. ಆಯ್ತಲ್ಲ? ಮುದ್ದಾಗಿ ಬ್ಯಾಂಡೇಜ್ ಹಾಕಿ ಆರೇ ಆರು ವಾರ ಅದನ್ನು ಹಾಕ್ಕೊಂಡಿರಿ ಅನ್ನುತ್ತಾರೆ. ಅದೊಂಥರಾ ಸಿಮೆಂಟ್‌ನ ಕಟ್ಟೆ ಕಟ್ಟಿದಂತೆಯೇ! ವಿಪರೀತ ಭಾರ. ನಡೆಯುವುದು ಯಮಹಿಂಸೆ. ನಿಮಗೆ ಯಾವತ್ತಾದರೂ ಕೈ ಕಾಲು ಮುರಿದಿದ್ದವಾ? ಯಾಕೆ? Plaster ಸುಖ ಅನುಭವಿಸಿದಿರಾ? ಎಷ್ಟು ದಿನ? ಹೋಗಲಿ ಸಮಸ್ಯೆ ಪೂರ್ಣವಾಗಿ ವಾಸಿಯಾಗಿ ಬಗೆಹರಿಯಿತಾ? ನಿಮ್ಮ ಆಗಿನ ಅನುಭವವನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಜನರಿಗಾಗಿ ಸಿದ್ದರಾಮಯ್ಯ ಮುನ್ನುಗ್ಗಲಿ; ಇಲ್ಲದಿದ್ದರೆ ಮತ್ತೊಬ್ಬ ಗುಂಡೂರಾವ್ ಆಗುತ್ತಾರೆ!

ಮುಖ್ಯಮಂತ್ರಿ ಸಿದ್ದರಾಮಯ್ಯ ತಾವಾಗಿಯೇ ಪ್ರತಿಪಕ್ಷಗಳು ತೋಡಿದ ಖೆಡ್ಡಾದೊಳಗೆ ಬೀಳುವ ಲಕ್ಷಣಗಳು ಕಾಣುತ್ತಿವೆ. ಅಂದ ಹಾಗೆ ಈ ಬೆಳವಣಿಗೆ ಮೂವತ್ತೈದು ವರ್ಷಗಳ ಹಿಂದೆ ಗುಂಡೂರಾಯರು ಪ್ರತಿಪಕ್ಷಗಳ ಖೆಡ್ಡಾದೊಳಗೆ ವ್ಯವಸ್ಥಿತವಾಗಿ ಆನೆಯಂತೆ ಉರುಳಿಕೊಂಡಿದ್ದನ್ನು ನೆನಪಿಸುತ್ತದೆ. ಮೊದಲನೆಯದಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ನಂತರ ಶೋಷಿತ ವರ್ಗಗಳ ಕುರಿತು ಕಾಳಜಿ ಇದ್ದರೆ ಅವರ ಕುರಿತು ಕೆಲಸ ಮಾಡಿ ತೋರಿಸಬೇಕೇ ಹೊರತು, ಬಹಿರಂಗವಾಗಿ ನನ್ನದು ಅಹಿಂದ ಸರ್ಕಾರ ಅನ್ನಬಾರದು. ಯಾಕೆಂದರೆ ಶೋಷಿತರು ಎಲ್ಲ ವರ್ಗಗಳಲ್ಲೂ ಇರುತ್ತಾರೆ. ಅದೇ ರೀತಿ ಎಲ್ಲ ವರ್ಗಗಳವರೂ ಅವರ ಪಕ್ಷಕ್ಕೆ ಮತ ಕೊಟ್ಟಿರುತ್ತಾರೆ. ಕೆಲ ಸಮುದಾಯದವರು ಕೆಲ ಪಕ್ಷಗಳಿಗೆ ಹೆಚ್ಚು ಮತ ಕೊಟ್ಟಿರಬಹುದು. ಆದರೆ ಅದನ್ನು ಚುನಾವಣೆ ನಡೆಯುವವರೆಗೆ ಮಾತ್ರ ಗಮನಿಸಬೇಕೇ ಹೊರತು, ಒಂದು ಸರ್ಕಾರ ರಚಿಸಿದ ಮೇಲೆ ಗಮನಿಸಬಾರದು. ಹೀಗಾಗಿ ಇದು ಆರೂವರೆ ಕೋಟಿ ಜನರ ಸರ್ಕಾರವೇ ಹೊರತು ಅಹಿಂದ ಸರ್ಕಾರವಲ್ಲ.

ಒಂದು ಸರ್ಕಾರವನ್ನು ಕೆಲ ವರ್ಗಗಳಿಗೆ ಸೀಮಿತಗೊಳಿಸಿ ಹೇಳುವುದರಿಂದ ಅಪಾಯ ಹೆಚ್ಚು. ಮೊದಲನೆಯದಾಗಿ ಆ ವರ್ಗಗಳ ಕುರಿತು ಬಲಿಷ್ಠ ವರ್ಗಗಳಲ್ಲಿ ಅಸಹನೆ ಬೆಳೆಯುತ್ತದೆ. ಕರ್ನಾಟಕದಲ್ಲಿ ಅಹಿಂದ ವರ್ಗಗಳ ನಾಯಕರು ಅನ್ನಿಸಿಕೊಂಡ ದೇವರಾಜ ಅರಸರು ಕೂಡ ಬಹಿರಂಗವಾಗಿ ಈ ಮಾತುಗಳನ್ನಾಡಿರಲಿಲ್ಲ. ಬದಲಿಗೆ ಆರ್ಥಿಕ ಸಂಪತ್ತು ಎಲ್ಲರಿಗೂ ಸಮಾನ ಹಂಚಿಕೆಯಾಗಬೇಕು ಮತ್ತು ಶೋಷಿತರಿಗೂ ರಾಜಕೀಯದಲ್ಲಿ ಸೂಕ್ತ ಪ್ರಾತಿನಿಧ್ಯ ಸಿಗುವಂತಾಗಬೇಕು ಎಂದು ಬಯಸಿದ್ದರು. ಇದರ ಫಲವಾಗಿಯೇ ಅವರು ಮಹತ್ವದ ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೆ ತಂದರು. ಅದೇ ರೀತಿ ಶೋಷಿತ ವರ್ಗಗಳಿಂದಲೂ ನಾಯಕತ್ವದ ಗುಣ ಇರುವವರನ್ನು ಗುರುತಿಸಿ, ಗುರುತಿಸಿ ಮೇಲೆತ್ತಿದರು. ಹೀಗಾಗಿ ಅರಸರು ಮಾಡಿದ ಕೆಲಸ ದೀರ್ಘಕಾಲೀನ ನೆಲೆಯಲ್ಲಿ ಉಳಿಯುವಂತಾಯಿತು. ದೇವರಾಜ ಅರಸು ಜನ್ಮ ಶತಮಾನೋತ್ಸವವನ್ನು ಇಡೀ ವರ್ಷ ಆಚರಿಸಲು ಹೊರಟಿರುವ ಸರ್ಕಾರ ಈ ಅಂಶವನ್ನು ಸದಾ ಗಮನದಲ್ಲಿಟ್ಟುಕೊಳ್ಳಬೇಕು.

ಅಂದ ಹಾಗೆ ಗುಂಡೂರಾಯರ ಕಾಲದಲ್ಲಿ ರೈತ ಚಳವಳಿ ಭುಗಿಲೆದ್ದಿತ್ತು. ಮೊದಲನೆಯದಾಗಿ ಹಸಿರು ಕ್ರಾಂತಿಯ ಪರಿಣಾಮ, ಎರಡನೆಯದಾಗಿ ಅರಸರು ಜಾರಿಗೆ ತಂದಿದ್ದ ಭೂ ಸುಧಾರಣಾ ಕಾಯ್ದೆಯ ಮೂಲಕ ಭೂಮಿ ಕಳೆದುಕೊಂಡಿದ್ದ ವರ್ಗಗಳು ಕಾಂಗ್ರೆಸ್ ವಿರುದ್ಧ ತಿರುಗಿ ಬಿದ್ದಿದ್ದವು. ಆಗ ಮುಖ್ಯಮಂತ್ರಿಯಾಗಿದ್ದ ಗುಂಡೂರಾಯರು ಇದನ್ನು ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಅರ್ಥ ಮಾಡಿಕೊಳ್ಳಬೇಕಿತ್ತು. ಮೊದಲನೆಯದಾಗಿ ಆಗ ಶುರುವಾದ ರೈತ ಚಳವಳಿಯ ಹಿಂದೆ ಬಲಿಷ್ಠ ವರ್ಗಗಳು ಇದ್ದವು. ಯಾಕೆಂದರೆ, ಅರಸರ ಭೂ ಸುಧಾರಣಾ ಕಾಯ್ದೆಯ ಮೂಲಕ ಭೂಮಿ ಕಳೆದುಕೊಂಡವರೂ ಅವರೇ. ಹೀಗಾಗಿ ರೈತ ಚಳವಳಿಗೆ ದೊಡ್ಡ ಮಟ್ಟದ ಕುಮ್ಮಕ್ಕು ನೀಡಿದರು. ಅದೇ ರೀತಿ ಭೂ ಸುಧಾರಣಾ ಕಾಯ್ದೆಯಿಂದ ದಲಿತ ಸಮುದಾಯಕ್ಕೆ ದೊಡ್ಡ ಮಟ್ಟದ ಲಾಭವಾಗಿದ್ದರೂ, ಬಲಿಷ್ಠ ವರ್ಗಗಳ ಕುಮ್ಮಕ್ಕು ಅದರ ಮೇಲೂ ಕೆಲಸ ಮಾಡಿ, ಗುಂಡೂರಾಯರ ಸರ್ಕಾರದ ವಿರುದ್ಧ ತಿರುಗಿ ಬೀಳುವಂತಾಯಿತು. ಇದೆಲ್ಲ ಸಿದ್ದರಾಮಯ್ಯನವರಿಗೆ ಗೊತ್ತಿಲ್ಲವೆಂದಲ್ಲ. ಯಾಕೆಂದರೆ ಈ ಕಾಲಘಟ್ಟದಲ್ಲೇ ಅವರ ರಾಜಕೀಯ ಜೀವನ ಪ್ರವರ್ಧಮಾನಕ್ಕೆ ಬರುತ್ತಿತ್ತು.

ಅವತ್ತು ರೈತ ಚಳವಳಿಗಳು ಭುಗಿಲೆದ್ದಾಗ ಗುಂಡೂರಾಯರು ಸ್ವಲ್ಪ ಸಮಾಧಾನದಿಂದ ಅದರ ಪರಿಹಾರಕ್ಕೆ ಮುಂದಾಗಬಹುದಿತ್ತು. ಯಾಕೆಂದರೆ ಆಗ ದೆಹಲಿಯಲ್ಲಿ ಕುಳಿತಿದ್ದ ಸರ್ಕಾರವೂ ಇಂದಿರಾ ಗಾಂಧಿ ನೇತೃತ್ವದ್ದೇ ಆಗಿತ್ತು. ಹೀಗಾಗಿ ಕೇಂದ್ರದೊಂದಿಗೆ ಸಮಾಲೋಚಿಸಿ, ರೈತರಿಗೆ ಒಂದು ವಿಶೇಷ ಪ್ಯಾಕೇಜ್ ನೀಡುವ ಕೆಲಸ ಮಾಡುವುದನ್ನು ಗುಂಡೂರಾಯರು ಮಾಡಿದ್ದರೆ, ಎಂಬತ್ಮೂರರಲ್ಲಿ ಅವರ ಸರ್ಕಾರ ಉರುಳುವ ಛಾನ್ಸೇ ಇರಲಿಲ್ಲ. ಆದರೆ ಗುಂಡೂರಾಯರು ತಮಗೆ ಪರಮಾಪ್ತರಾದ ಹಿರಿಯ ಅಧಿಕಾರಿಯೊಬ್ಬರನ್ನು ಕೇಳಿದರು. ರೈತ ಚಳವಳಿಗಳನ್ನು ನಿಲ್ಲಿಸಲು ಏನು ಮಾಡಬಹುದು ಎಂದು. ಅದಕ್ಕವರು, ನಾಲ್ಕೈದು ಕಡೆ ಗೋಲಿಬಾರ್ ಮಾಡಿಸಿದರೆ ಸಾಕು, ರೈತರು ಹೆದರಿ ತಣ್ಣಗಾಗುತ್ತಾರೆ ಎಂದರು. ಸರಿ, ನವಲಗುಂದ, ನರಗುಂದ ಸೇರಿದಂತೆ ಅನೇಕ ಕಡೆ ಗೋಲಿಬಾರ್‌ಗಳು ನಡೆದವು. ನೂರಕ್ಕೂ ಹೆಚ್ಚು ಮಂದಿ ರೈತರು ಸತ್ತಿದ್ದು ಮೊಟ್ಟ ಮೊದಲು ಗುಂಡೂರಾಯರ ಕಾಲದಲ್ಲೇ. ಇದೀಗ ಸಿದ್ದರಾಮಯ್ಯನವರ ಕಾಲದಲ್ಲಿ ಈ ಸಂಖ್ಯೆ ಇನ್ನೂರರ ಗಡಿ ದಾಟಿದೆ. ಈ ಅಂಶವೇ ಸಿದ್ದರಾಮಯ್ಯನವರೂ ಗುಂಡೂರಾಯರ ಥರ ಪ್ರತಿಪಕ್ಷಗಳ ಇಕ್ಕಳಕ್ಕೆ ಸಿಕ್ಕಿ ಬೀಳುತ್ತಿದ್ದಾರಾ ಎಂಬ ಅನುಮಾನವನ್ನು ಮೂಡಿಸುತ್ತಿದೆ. ಮೊದಲನೆಯದಾಗಿ ಅವರು ರೈತರ ಆತ್ಮಹತ್ಯೆ ಪ್ರಕರಣಗಳು ಶುರುವಾದ ಕೂಡಲೇ ತಮ್ಮ ಸಚಿವ ಸಂಪುಟದ ಸಚಿವರು ಹಾಗೂ ಶಾಸಕರನ್ನು ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಕಳಿಸಿ, ಸಾಂತ್ವನ ಹೇಳುವ, ಪರಿಹಾರ ಕೊಡಿಸುವ ಕೆಲಸ ಮಾಡಬೇಕಿತ್ತು.

ಅಂದ ಹಾಗೆ ಪರಿಹಾರ ಕೊಡುವುದರಿಂದ, ಸಾಂತ್ವನ ಹೇಳುವುದರಿಂದ ರೈತ ಸಮುದಾಯ ಶಾಂತವಾಗುತ್ತದೆ ಅಂತ ಭಾವಿಸಬಾರದು. ಆದರೆ ತಮ್ಮ ಕಷ್ಟಕ್ಕೆ ಸ್ಪಂದಿಸಲು ಸರ್ಕಾರ ಸನ್ನದ್ಧವಾಗಿದೆ ಎಂಬ ಮೆಸೇಜು ಅವರಿಗೆ ತಲುಪಬೇಕಿತ್ತು. ಆದರೆ ಅಂತಹ ಮೆಸೇಜು ತಲುಪಿಸುವ ಕೆಲಸವಾಗಲೇ ಇಲ್ಲ. ಅದರ ಜೊತೆಗೆ ಸಾಲದು ಎಂಬಂತೆ ಹಿರಿಯ ನಾಯಕ ಎಸ್ಸೆಂ ಕೃಷ್ಣ ಅವರು ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬವೊಂದರ ಬಳಿ ಹೋಗಿ ಸಾಂತ್ವನ ಹೇಳಿದರು. ಅವರು ಈ ರೀತಿ ಹೋಗಿ ಸಾಂತ್ವನ ಹೇಳುವ ಮುನ್ನ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಒಂದಲ್ಲ, ಎರಡಲ್ಲ, ನಾಲ್ಕು ಬಾರಿ ಹೇಳಿದ್ದರು. ತಕ್ಷಣವೇ ಸಚಿವರು, ಶಾಸಕರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ನಡೆದ ಈ ಅವಘಡಗಳ ತೀವ್ರತೆಯನ್ನು ಕಡಿಮೆ ಮಾಡಬೇಕು. ತಕ್ಷಣವೇ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳ ಬಳಿಗೆ ಹೋಗಬೇಕು ಎಂದು ನೇರ ಮಾತುಗಳಲ್ಲಿ ಹೇಳಿದ್ದರು.

ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಂಪುಟದಲ್ಲೇ ಹಲವು ಮಂದಿ ಸಂತ್ರಸ್ತರಿದ್ದಾರೆ. ಅವರಿಗೆ ರೈತರ ಕೆಲಸವಲ್ಲ, ಶಾಸಕರ ಕೆಲಸವನ್ನೂ ಮಾಡಿಕೊಡಲು ಆಗುವುದಿಲ್ಲ. ಕೇವಲ ನಾಮ್ ಕೇ ವಾಸ್ತೆ ಸಚಿವರಾಗಿ ಗೂಟದ ಕಾರು, ಬಂಗಲೆ, ಮತ್ತಿತರ ಸವಲತ್ತುಗಳನ್ನು ಅನುಭವಿಸುತ್ತಿದ್ದಾರೆ. ಸಹಜವಾಗಿಯೇ ಏನಾಗಿದೆ ಎಂದರೆ ಬಹುತೇಕ ಶಾಸಕರಿಗೆ ಈ ವಿಷಯದಲ್ಲಿ ಅಸಮಾಧಾನವಿದೆ. ಅವರೆಲ್ಲ ಪರ್ಯಾಯ ನಾಯಕನೊಬ್ಬನ ಎಂಟ್ರಿಗಾಗಿ ಕಾಯುತ್ತಿದ್ದಾರೆ. ಒಂದು ಸಲ ಇಂತಹ ಪರ್ಯಾಯ ನಾಯಕ ಹುಟ್ಟಿಕೊಂಡರೆ ಸಿದ್ದರಾಮಯ್ಯನವರ ಸರ್ಕಾರದ ಅಧಃಪತನದ ದಿನಗಳು ಆರಂಭವಾದವು ಎಂದೇ ಅರ್ಥ. ಹೀಗಾಗಿ ಸಿದ್ದರಾಮಯ್ಯ ಇದಕ್ಕೆ ಅವಕಾಶ ನೀಡಬಾರದು. ಬಜೆಟ್‌ನಲ್ಲಿ ಯೋಜನೇತರ ವೆಚ್ಚಕ್ಕೆ ಅಂತ ಇಟ್ಟ ಹಲವು ಪ್ರಮಾಣದ ಹಣವನ್ನು ಕಡಿತ ಮಾಡಿ ಒಂದು ಬಾರಿ ರೈತರ ಸಾಲ ಮನ್ನಾ ಮಾಡಬಹುದು. ಅವರ ಸಾಲದ ಮೇಲಿನ ಬಡ್ಡಿ, ಸುಸ್ತಿ ಬಡ್ಡಿ ಮನ್ನಾ ಮಾಡಬಹುದು. ಈ ಮಧ್ಯೆ ಹಾಲು ಉತ್ಪಾದಕರ ಸ್ಥಿತಿಯೂ ಗಂಭೀರವಾಗಿದೆ. ಸರ್ಕಾರದ ವತಿಯಿಂದ ಹಾಲು ಉತ್ಪಾದಕರಿಗೆ ಕೊಡಬೇಕಾದ ಬಾಕಿ ಹಣ ಮುನ್ನೂರು ಕೋಟಿ ರುಪಾಯಿಗಳಷ್ಟಿದೆ. ಜಾಗತೀಕರಣದ ಹೊಡೆತ ಯಾವ ಮಟ್ಟದಲ್ಲಿ ದೇಶವನ್ನು ಕಾಡುತ್ತಿದೆ ಎಂದರೆ ರೈತ ಸಮುದಾಯ ಕಂಗಾಲಾಗಿದೆ. ಹೀಗಾಗಿ ಈಗಿನ ಬೆಳವಣಿಗೆಗೆ ಸಿದ್ದರಾಮಯ್ಯನವರ ಸರ್ಕಾರವೇ ಕಾರಣ ಎಂದು ಹೇಳಲಾಗುವುದಿಲ್ಲವಾದರೂ, ಸಂಕಷ್ಟದಲ್ಲಿರುವ ವರ್ಗಗಳಿಗೆ ಪರಿಹಾರ ಕಂಡುಕೊಡುವ ಜವಾಬ್ದಾರಿಯಂತೂ ಅವರ ಮೇಲಿದೆ.

ಮೊದಲನೆಯದಾಗಿ ರೈತರ ವಿಷಯವನ್ನು ಸರಿಯಾಗಿ ಹ್ಯಾಂಡಲ್ ಮಾಡುವಂತಹ ಅಧಿಕಾರಿಗಳು ಕೆಎಂಎಫ್‌ನಲ್ಲೂ ಇಲ್ಲ. ಕಬ್ಬು ಬೆಳೆಗಾರರ ವಿಷಯದಲ್ಲೂ ಇಲ್ಲ. ಒಟ್ಟಿನಲ್ಲಿ ರೈತರು ಕಾಲ ಕಾಲಕ್ಕೆ ಏನು ಮಾಡಬೇಕು? ಯಾವ ರೀತಿ ಸನ್ನಿವೇಶದ ಲಾಭ ಪಡೆಯಬೇಕು ಎಂದು ಹೇಳುವವರೇ ಇಲ್ಲ. ಹೀಗಾಗಿ ಕಬ್ಬು ಹಾಕುವ ಆರು ಲಕ್ಷ ಮಂದಿ ಬೆಳೆಗಾರರು ಬರೀ ಕಬ್ಬು ಬೆಳೆಯುತ್ತಾ ಕುಳಿತಿದ್ದಾರೆ. ಈಗ ರಾಜ್ಯದಲ್ಲೇ ನಾಲ್ಕು ವರ್ಷಗಳಿಗಾಗುವಷ್ಟು ಸಕ್ಕರೆ ಸ್ಟಾಕ್ ಇದೆ. ಇನ್ನೂ ಹೆಚ್ಚಿನ ಬೆಳೆ ಬಂದರೆ ಇಡಲೂ ಜಾಗವಿಲ್ಲ. ಗೋದಾಮುಗಳು ಇಲ್ಲವೇ ಇಲ್ಲ. ಅಂತಹ ಪರಿಸ್ಥಿತಿಯಲ್ಲಿ ಕಬ್ಬನ್ನು ನಿರ್ದಿಷ್ಟ ಪ್ರಮಾಣದಲ್ಲಿ ಬೆಳೆಯಬೇಕು. ಉಳಿದಂತೆ ಬೇರೆ ಆಹಾರ ಧಾನ್ಯಗಳನ್ನು ಬೆಳೆಯಬೇಕು ಎಂದು ಸರ್ಕಾರ ರೈತರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಅಗತ್ಯಕ್ಕಿಂತ ಹೆಚ್ಚಿನ ಕಬ್ಬು ಬಂದರೆ ಆ ಪ್ರದೇಶದ ವ್ಯಾಪ್ತಿಯಲ್ಲಿರುವ ಸಕ್ಕರೆ ಕಾರ್ಖಾನೆ ಕಕ್ಕಾಬಿಕ್ಕಿಯಾಗುತ್ತದೆ. ಅತ್ತ ರೈತರ ಕಬ್ಬಿಗೆ ನಿಗದಿ ಮಾಡಿದ ಬೆಲೆಯನ್ನು ಕೊಡಬೇಕೆಂದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಕ್ಕರೆಯ ಬೆಲೆ ಕುಸಿದು ಹೋಗಿದೆ.

ಈ ಹಿಂದೆ ಹರ್ಷ ಗುಪ್ತಾ ಅವರಂತಹ ಪ್ರಾಮಾಣಿಕ ಅಧಿಕಾರಿ ಕೆಎಂಎಫ್‌ನಲ್ಲಿದ್ದಾಗ ಒಂದು ತಂತ್ರ ಅನುಸರಿಸಿದ್ದರು. ಹಾಲಿನ ಪುಡಿ ಹಾಗೂ ಬೆಣ್ಣೆಯ ದರ ಕುಸಿದ ಕೂಡಲೇ ಅದರ ಮಾರಾಟವನ್ನು ಕೆಲವು ಕಾಲ ಸ್ಥಗಿತ ಮಾಡಿದ್ದರು. ಹೀಗಾಗಿ ನೂರು, ನೂರಿಪ್ಪತ್ತು ರುಪಾಯಿ ದರದ ಆಸುಪಾಸಿನಲ್ಲಿದ್ದ ಹಾಲಿನ ಪುಡಿ ಹಾಗೂ ಬೆಣ್ಣೆಯ ದರ ಇನ್ನೂರು, ಇನ್ನೂರೈವತ್ತಕ್ಕೆ ಏರಿ ಪ್ರತಿಯೊಂದು ಹಾಲು ಒಕ್ಕೂಟಗಳೂ ಲಾಭ ಕಾಣುವಂತಾಗಿತ್ತು. ಈಗ ಕಲಬುರ್ಗಿ (ಗುಲ್ಬರ್ಗ) ಹಾಗೂ ದಕ್ಷಿಣ ಕನ್ನಡವನ್ನು ಹೊರತುಪಡಿಸಿದರೆ ಬೇರೆ ಯಾವ ಹಾಲು ಒಕ್ಕೂಟಗಳೂ ಲಾಭದಲ್ಲಿಲ್ಲ. ಇವೆರಡರಲ್ಲಿ ಯಾಕೆ ಲಾಭವಿದೆ ಎಂದರೆ ದಕ್ಷಿಣ ಕನ್ನಡದಲ್ಲಿ ಲೋಕಲ್ ಮಾರುಕಟ್ಟೆಗೆ ಅಗತ್ಯವಾದಷ್ಟು ಹಾಲು ಮಾತ್ರ ಉತ್ಪಾದನೆಯಾಗುತ್ತದೆ. ಕಲಬುರ್ಗಿಯಲ್ಲಿ ಅಗತ್ಯಕ್ಕಿಂತ ಕಡಿಮೆ ಪ್ರಮಾಣದ ಹಾಲು ಉತ್ಪಾದನೆಯಾಗುವುದರಿಂದ ಬೇರೆ ಕಡೆಯಿಂದ ತರಿಸಿ ಮಾರಾಟ ಮಾಡುವ ಸ್ಥಿತಿಯಿದೆ. ಹೀಗಾಗಿ ಸಹಜವಾಗಿಯೇ ಈ ಎರಡು ಸಂಸ್ಥೆಗಳು ಮಾತ್ರ ಲಾಭದಲ್ಲಿವೆ. ಸಿದ್ದರಾಮಯ್ಯನವರ ಸರ್ಕಾರ ಇದರ ಅರ್ಥವನ್ನು ಗ್ರಹಿಸಬೇಕು.

ಸರ್ಕಾರದ ಸಂಸ್ಥೆಗಳೆಂದರೆ ಕೇವಲ ನಷ್ಟ ಮಾಡಿಕೊಳ್ಳಲು ಇರುವುದಲ್ಲ, ಹಾಗೆಯೇ ಸಾರ್ವಜನಿಕರಿಗೆ ತೊಂದರೆ ಕೊಟ್ಟು ದೋಚುವುದಕ್ಕೂ ಅಲ್ಲ. ಹೀಗಾಗಿ ಪ್ರಾಮಾಣಿಕ ಅಧಿಕಾರಿಗಳನ್ನು ಆಯಕಟ್ಟಿನ ಜಾಗಕ್ಕೆ ತಂದು ಕೂರಿಸಿ ಲಾಭ ಪಡೆಯುವ, ಆ ಮೂಲಕ ವ್ಯವಸ್ಥೆಯ ಶಕ್ತಿಯನ್ನು ಹೆಚ್ಚಿಸುವ ಕೆಲಸ ನಡೆಯಬೇಕು. ಅದನ್ನು ಹೊರತುಪಡಿಸಿ, ತಮ್ಮ ಬಾಲಬಡುಕರ ಮಾತುಗಳನ್ನು ನಂಬಿ ಆಕಾಶವಾಣಿಯಲ್ಲಿ ರೈತರಿಗೆ ಸಾಂತ್ವನ ಹೇಳುವುದು, ಸುಮ್ಮನೆ ಕೂರುವುದನ್ನು ಮಾಡಿದರೆ ಕ್ರಮೇಣ ಗುಂಡೂರಾಯರ ಸ್ಥಿತಿಗೆ ತಲುಪುತ್ತಾರೆ. ಈಗಾಗಲೇ ಈ ದಾರಿಯಲ್ಲಿ ಬಹುದೂರ ಕ್ರಮಿಸಿದ್ದಾರೆ. ಮೊದಲನೆಯದಾಗಿ ಸಿದ್ದರಾಮಯ್ಯ ಅಂದರೆ ಅಭಿನವ ದೇವರಾಜ ಅರಸು ಎಂಬ ಅಭಿದಾನವನ್ನು ಕೊಡುತ್ತಾ ಊರೂರು ತಿರುಗುವ ತಮ್ಮ ಭಟ್ಟಂಗಿಗಳಿಗೆ ಕಡಿವಾಣ ಹಾಕಿ, ಸರ್ಕಾರ ಕೊಡುತ್ತಿರುವ ಸಂಬಳವನ್ನು ಬಾಯಿ ಮುಚ್ಚಿಕೊಂಡು ತೆಗೆದುಕೊಳ್ಳಿ. ಜನ ಹೊಗಳಲು ದುಡ್ಡು ಕೊಡುವುದಿಲ್ಲ ಎಂದು ಗದರಬೇಕು. ಎರಡನೆಯದಾಗಿ ಆಡಳಿತದಲ್ಲಿ ಸುಧಾರಣೆ ತರಬೇಕು. ಮೂರನೆಯದಾಗಿ ರೈತರು ಯಾವ್ಯಾವ ಕಾಲದಲ್ಲಿ ಯಾವ್ಯಾವ ಬೆಳೆಯನ್ನು ಬೆಳೆಯಬೇಕು ಎಂಬುದರ ಕುರಿತು ಮಾಹಿತಿ ನೀಡಬೇಕು. ಅದೇ ರೀತಿ ಅವರಿಗೆ ತಕ್ಷಣಕ್ಕೊಂದು ಪರಿಹಾರ ನೀಡಬೇಕು. ಇಲ್ಲದೇ ಹೋದರೆ ದೇವರಾಜ ಅರಸರ ಶತಮಾನೋತ್ಸವ ಆಚರಣೆಯ ಸಂದರ್ಭದಲ್ಲೇ ಓರ್ವ ಹಿಂದುಳಿದ ವರ್ಗದ ನಾಯಕನ ಮೇಲಿರುವ ಆಸೆ ಕಮರಿ ಹೋಗುತ್ತದೆ. ಹಾಗಾಗದಿರಲಿ.

ರವಿ ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 08 August, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books