Ravi Belagere
Welcome to my website
ನಿಮಗೂ ಯಾವಾಗಲೋ ಕಾಲು ಮುರಿದಿರಬಹುದು. ಬಚ್ಚಲಲ್ಲಿ ಕಾಲು ಜಾರಿದ್ದಿರಬಹುದು. ನಡೆಯುತ್ತ ನಡೆಯುತ್ತ ನಿಮ್ಮ ಕಾಲು ಉಳುಕಿರಬಹುದು. ಸ್ವಲ್ಪ ದಿನ ನೀವು ಉಳುಕು ಅಂದುಕೊಂಡಿರುತ್ತೀರಿ: ಡಾಕ್ಟರ್ ಬಳಿಗೆ ಹೋಗಿ ಎಕ್ಸ್‌ರೇ ತೆಗೆಸಿದಾಗ ಅದು hair line fracture. ಆಯ್ತಲ್ಲ? ಮುದ್ದಾಗಿ ಬ್ಯಾಂಡೇಜ್ ಹಾಕಿ ಆರೇ ಆರು ವಾರ ಅದನ್ನು ಹಾಕ್ಕೊಂಡಿರಿ ಅನ್ನುತ್ತಾರೆ. ಅದೊಂಥರಾ ಸಿಮೆಂಟ್‌ನ ಕಟ್ಟೆ ಕಟ್ಟಿದಂತೆಯೇ! ವಿಪರೀತ ಭಾರ. ನಡೆಯುವುದು ಯಮಹಿಂಸೆ. ನಿಮಗೆ ಯಾವತ್ತಾದರೂ ಕೈ ಕಾಲು ಮುರಿದಿದ್ದವಾ? ಯಾಕೆ? Plaster ಸುಖ ಅನುಭವಿಸಿದಿರಾ? ಎಷ್ಟು ದಿನ? ಹೋಗಲಿ ಸಮಸ್ಯೆ ಪೂರ್ಣವಾಗಿ ವಾಸಿಯಾಗಿ ಬಗೆಹರಿಯಿತಾ? ನಿಮ್ಮ ಆಗಿನ ಅನುಭವವನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಒಳ್ಳೆಯದನ್ನು ರಕ್ಷಿಸಬೇಕು, ಕೆಟ್ಟದನ್ನು ಶಿಕ್ಷಿಸಬೇಕು ಎಂಬ ರಾಜನೀತಿ ಇರಬೇಕು

ದೇಶದ ಹಲವು ರಾಜ್ಯಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರ ವಿಷಯದಲ್ಲಿ ಒಂದು ಕ್ಷಣವೂ ಚಿಂತಿಸದ ಈ ದೇಶದ ಮಹಾನ್ ಮಹಾನ್ ನಾಯಕರು, ಯಾಕೂಬ್ ಮೆಮೊನ್‌ಗೆ ಗಲ್ಲು ಶಿಕ್ಷೆ ಬೇಡ ಎಂದು ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದಾರೆ. ಚಿತ್ರ ನಟ ಸಲ್ಮಾನ್ ಖಾನ್ ಇದೇ ರೀತಿ ಮಾತನಾಡುವುದು ನನಗೆ ವಿಶೇಷವಾಗಿ ಕಾಣಲಿಲ್ಲ. ಯಾಕೆಂದರೆ ಆತ ಫಿಲ್ಮಿನಲ್ಲಿ ಯಾರೋ ಡೈಲಾಗ್ ರೈಟರ್ ಬರೆದು ಕೊಟ್ಟಿದ್ದನ್ನು ಒಪ್ಪಿಸುತ್ತಾನೆ. ಅದು ಅವನ ಮಾತಲ್ಲ. ಹೀಗಾಗಿ ಆತನ ಮಾತನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿಲ್ಲ. ಯಾರು ಸ್ವಂತ ವಿವೇಚನೆಯಿಂದ ಮಾತನಾಡಬಲ್ಲರೋ, ಬರೆಯಬಲ್ಲರೋ ಅವರ ಮಾತಿಗೆ ಒಂದು ತೂಕವಿರುತ್ತದೆ. ಮೊನ್ನೆ ನಮ್ಮ ಮಾಜಿ ಕೇಂದ್ರ ಸಚಿವ ಶಶಿ ತರೂರ್ ಹೇಳಿದರು. ಭಾರತವನ್ನು ಇನ್ನೂರು ವರ್ಷಗಳ ಕಾಲ ಇಂಗ್ಲಂಡ್ ಕೊಳ್ಳೆ ಹೊಡೆಯಿತು. ಇದರಿಂದಾಗಿ ಅತ್ಯಂತ ಮೇಲ್ಮಟ್ಟದಲ್ಲಿದ್ದ ನಮ್ಮ ಜಿಡಿಪಿ (ಒಟ್ಟು ಆಂತರಿಕ ಉತ್ಪನ್ನ) ತಳ ಕಚ್ಚಿತು. ಹೀಗೆ ಕೊಳ್ಳೆ ಹೊಡೆದ ಇಂಗ್ಲಂಡ್ ಇದಕ್ಕೆ ತಕ್ಕ ಪರಿಹಾರ ಕೊಡಲೇಬೇಕು ಎಂದರು.

ಇವತ್ತು ನಾವು ಅದನ್ನು ಪಡೆಯಲು ಸಾಧ್ಯವೇ? ಅದು ಬೇರೆ ಮಾತು. ಆದರೆ ನೀವು ಮಾಡಿದ ತಪ್ಪು ನಮ್ಮ ಮನಸ್ಸಿನಲ್ಲಿದೆ. ಒಂದಿಲ್ಲ ಒಂದು ದಿನ ಅದರ ಬೆಲೆಯನ್ನು ನೀವು ತೆರಬೇಕಾಗುತ್ತದೆ ಎಂಬ ಎಚ್ಚರಿಕೆ ಆಂಗ್ಲರಿಗೆ ರವಾನೆಯಾಗಬೇಕು. ಒಂದು ದೇಶಕ್ಕೆ ನುಗ್ಗಿ ಅಲ್ಲಿ ಲೂಟಿ ಹೊಡೆದ ಪರಿಣಾಮವಾಗಿ ಹೆಚ್ಚು ಕಡಿಮೆ ಕರ್ನಾಟಕದಷ್ಟಿರುವ ಇಂಗ್ಲಂಡ್ ಇವತ್ತು ಜಗತ್ತಿನ ಸೇಫೆಸ್ಟ್ ರಾಷ್ಟ್ರಗಳಲ್ಲೊಂದು. ಅದಕ್ಕಾಗಿಯೇ ಭಾರತದ ಅರವತ್ತೊಂದು ಸಾವಿರ ಮಂದಿ ಕೋಟ್ಯಧೀಶರು ಇಂಗ್ಲಂಡ್‌ಗೆ ವಲಸೆ ಹೋಗಿದ್ದಾರೆ. ಪಾಕಿಸ್ತಾನದಲ್ಲಿ ಯಾವುದೇ ಆಂತರಿಕ ಗಲಭೆ ಶುರುವಾಗಲಿ, ಜೀವ ಭೀತಿ ಎದುರಿಸುವ ಬಹುತೇಕ ನಾಯಕರು ಓಡಿ ಹೋಗುವುದು, ಆಶ್ರಯ ಪಡೆಯುವುದು ಇಂಗ್ಲಂಡ್‌ನಲ್ಲಿ. ಯಾಕೆಂದರೆ ಒಂದು ಕಾಲದಲ್ಲಿ ಇಡೀ ಜಗತ್ತನ್ನು ಲೂಟಿ ಹೊಡೆದ ರಾಷ್ಟ್ರ ಅದು. ಸಹಜವಾಗಿಯೇ ಅಷ್ಟು ಸಣ್ಣ ರಾಷ್ಟ್ರದ ಸಂಪತ್ತು ವೃದ್ಧಿಸಿದೆ. ಬ್ರಿಟಿಷರು ಕೇವಲ ಭಾರತವನ್ನು ಕೊಳ್ಳೆ ಹೊಡೆಯಲಿಲ್ಲ. ಭಾರತ, ಪಾಕಿಸ್ತಾನ, ಬಾಂಗ್ಲಾ ಅಂತ ಪ್ರತ್ಯೇಕ ರಾಷ್ಟ್ರಗಳು ರಚನೆಯಾಗುವ ಅನಿವಾರ್ಯ ಸನ್ನಿವೇಶವನ್ನು ಸೃಷ್ಟಿಸಿದರು. ಅವರ ಒಡೆದಾಳುವ ನೀತಿಯಿಂದ ಈ ದೇಶದ ಅಂತಃಸತ್ವವೇ ಕುಸಿಯಿತು. ಇಂತಹ ಪರಿಸ್ಥಿತಿಯಲ್ಲಿ ಅವರಿಗೊಂದು ಎಚ್ಚರಿಕೆ ಕೊಡಬೇಡವೇ? ನೀವು ಮಾಡಿದ ಉಪಕಾರ ನಮ್ಮ ಮನಸ್ಸಿನಲ್ಲಿದೆ ಎಂಬ ಮೆಸೇಜು ಕೊಡಬೇಡವೇ?

ನೋಡುತ್ತಾ ಹೋಗಿ. ಈ ದೇಶದ ರಾಜನೀತಿಯೇ ಯಾವತ್ತೂ ಸಮಪಾತಳಿಯ ಮೇಲೆ ನಡೆದು ಬಂದಿಲ್ಲ. ರಾಜನೀತಿಯ ವಿಷಯದಲ್ಲಿ ನಾವು ಯಾರೊಂದಿಗೆ ಹೇಗೆ ವ್ಯವಹರಿಸಬೇಕು ಎಂಬುದನ್ನು ಮುಂಚಿನಿಂದಲೂ ಕಲಿಯಲಿಲ್ಲ. ಅದೇ ಕಾರಣಕ್ಕಾಗಿ ಚಂಘೇಸ್ ಖಾನ್ ಭಾರತದ ಮೇಲೆ ದಾಳಿ ಮಾಡಿ ಲಕ್ಷಾಂತರ ಮಂದಿಯನ್ನು ತರಿದು ಹಾಕಿದ. ಆತನ ಕ್ರೌರ್ಯಕ್ಕೆ ಜನ ತತ್ತರಿಸಿ ಹೋದರು. ಅವರ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಿದ್ದರೆ, ಅಷ್ಟೇ ನಿರ್ದಾಕ್ಷಿಣ್ಯವಾಗಿ ನಮ್ಮ ರಾಜನೀತಿ ವರ್ತಿಸಿದ್ದರೆ ಪರಕೀಯರು ಭಾರತದ ಮೇಲೆ ದಾಳಿ ಮಾಡಲು ಹಿಂಜರಿಯುತ್ತಿದ್ದರು. ಇನ್ನು ಮಹಮ್ಮದ್ ಘೋರಿಯನ್ನೇ ತೆಗೆದುಕೊಳ್ಳಿ. ಆತ ದಂಡೆತ್ತಿ ಬಂದಾಗ ಪೃಥ್ವಿರಾಜ್ ಚೌಹಾಣ್ ಆತನನ್ನು ಸೋಲಿಸುತ್ತಾನೆ. ಆನಂತರ ಕ್ಷಮಾದಾನ ಮಾಡುತ್ತಾನೆ. ಇದರಂತಹ ಕೆಟ್ಟ ರಾಜನೀತಿ ಬೇರೆ ಇಲ್ಲ. ಶತ್ರುವಿನ ವಿಷಯದಲ್ಲೂ ಔದಾರ್ಯ ತೋರಿಸುವ ಧೀಮಂತ ಮನಸ್ಸು ನಮ್ಮದು ಎಂದು ಭಟ್ಟಂಗಿಗಳು ಹಾಡಿ ಹೊಗಳುತ್ತಾರೆ. ಆದರೆ ಇಂತಹ ಔದಾರ್ಯದ ಗತಿ ಏನಾಗುತ್ತದೆ? ಮುಂದೆ ಅದೇ ಮಹಮ್ಮದ್ ಘೋರಿ ಶಕ್ತಿ ವೃದ್ಧಿಸಿಕೊಂಡು ಬಂದು ದಾಳಿ ಮಾಡುತ್ತಾನೆ. ಲಕ್ಷಾಂತರ ಮಂದಿಯನ್ನು ಕತ್ತರಿಸಿ ಹಾಕುತ್ತಾನೆ. ರಾಜನೀತಿಗೆ ತನ್ನ ಆಳ್ವಿಕೆಯಲ್ಲಿರುವ ಬಡವರ ಮೇಲೆ, ಶ್ರಮ ಜೀವಿಗಳ ಮೇಲೆ, ವ್ಯವಸ್ಥೆಯನ್ನು ನಡೆಸಲು ದುಡಿಯುತ್ತಿರುವವರ ಮೇಲೆ, ದೇಶಭಕ್ತರ ಮೇಲೆ ಕನಿಕರವಿರಬೇಕು. ಅವರಿಗೆ ಶಕ್ತಿ ತುಂಬುವ ಗುಣವಿರಬೇಕು.

ಆದರೆ ಶತ್ರುಗಳ ವಿಷಯದಲ್ಲಿ ಅದು ನಿರ್ದಾಕ್ಷಿಣ್ಯವಾಗಿರಬೇಕು. ಶತ್ರುವಿಗೆ ಉಳಿಯಲು ಎರಡನೇ ಅವಕಾಶ ಕೊಡುವುದು ಎಂದರೆ ಮುಂದಿನ ದಿನಗಳಲ್ಲಿ ತಾನು ಮಾತ್ರವಲ್ಲ, ಇಡೀ ದೇಶವನ್ನೇ ಪರಕೀಯರ ದಬ್ಬಾಳಿಕೆಗೆ ದಾರಿ ಮಾಡಿಕೊಡುವುದು ಎಂದರ್ಥ. ಇದೇ ಕಾರಣಕ್ಕಾಗಿ ಮೊಘಲರು ನುಗ್ಗಿದರು, ಬ್ರಿಟಿಷರು ನುಗ್ಗಿದರು. ಈಗ ಮಲ್ಟಿ ನ್ಯಾಷನಲ್ ಕಂಪನಿಗಳು ನುಗ್ಗುತ್ತಿವೆ. ಇವುಗಳ ಬಗ್ಗೆ ನೀವು ಸಾಫ್ಟ್ ಆಗಿರುವಷ್ಟು ಕಾಲ ನಿಮ್ಮ ಮೇಲೆ ದಬ್ಬಾಳಿಕೆ ನಡೆಯುತ್ತಲೇ ಇರುತ್ತದೆ. ಈ ದಬ್ಬಾಳಿಕೆಯನ್ನು ಯಾಕೆ ಸಹಿಸಿಕೊಳ್ಳಬೇಕು? ಮತ್ತು ಅದಕ್ಕೇಕೆ ಮಹಾನ್ ಔದಾರ್ಯ ಎಂಬ ಹೆಸರು ಕೊಡಬೇಕು. ಕೈಲಾಗದವನು ಮೈ ಪರಚಿಕೊಂಡ ಎನ್ನಬಹುದೇ ಹೊರತು ಇನ್ನೇನೂ ಹೇಳಲು ಸಾಧ್ಯವಿಲ್ಲ. ಯಾಕೂಬ್ ಮೆಮೊನ್‌ನನ್ನು ಗಲ್ಲಿಗೇರಿಸಬೇಡಿ. ಅವನು ಅಮಾಯಕ ಎಂದು ಕತೆ ಹೇಳುತ್ತಾರಲ್ಲ? ಇಷ್ಟು ವರ್ಷ ತನಿಖೆ ಮಾಡಿ ವಿಷಯ ಸೆಳೆದವರೇನು ಮೂರ್ಖರಾ? ಯಾವುದೇ ರಾಜನೀತಿಗೆ ಧರ್ಮ ಅಡ್ಡಿ ಬರಬಾರದು. ಅಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಎಂಬುದನ್ನು ಮಾತ್ರ ವಿಂಗಡಿಸಿ ನೋಡಬೇಕು. ಜಾತಿ, ಮತ, ಪಂಥ ಯಾವುದೇ ಇರಲಿ. ಆತ ಒಳ್ಳೆಯವನೋ, ಅಂತಹವನಿಗೆ ಬೆಂಬಲ ಕೊಡಿ. ಕೆಟ್ಟವನೋ, ಅಂತಹವನ ವಿಷಯದಲ್ಲಿ ನಿರ್ದಾಕ್ಷಿಣ್ಯವಾಗಿ ವರ್ತಿಸಿ. ಯಾಕೆಂದರೆ ಒಳ್ಳೆಯವರು, ಕೆಟ್ಟವರು ಯಾವುದೇ ಜಾತಿ, ಮತ, ಪಂಥಗಳಿಗೆ ಸೀಮಿತರಾಗಿರುವುದಿಲ್ಲ. ಅವರು ಸೀಮಾತೀತರು. ಆದ್ದರಿಂದ ಅಂಥವರ ವಿಷಯದಲ್ಲಿ ಸೀಮಾತೀತವಾಗಿ ವರ್ತಿಸಬೇಕಾಗುತ್ತದೆ.

ವಿಪರ್ಯಾಸವೆಂದರೆ, ಈ ದೇಶದಲ್ಲಿ ಎಲ್ಲಕ್ಕೂ ಜಾತಿ ಬಣ್ಣ ಕಟ್ಟಿ ನೋಡಲಾಗುತ್ತದೆ. ಅರೇ, ಅವನು ಇಂತಹ ಜಾತಿಯವನು. ಆತನ ವಿಷಯದಲ್ಲಿ ಕಟುವಾಗಿ ನಡೆದುಕೊಂಡರೆ ನಾಳೆ ಆ ಜನಾಂಗದವರು ವೋಟು ಕೊಡಲಿಲ್ಲ ಎಂದರೆ ಹೇಗೆ ಎಂಬಂತೆ ವರ್ತಿಸಲಾಗುತ್ತದೆ. ನಮ್ಮ ರಾಜನೀತಿಯ ದೌರ್ಬಲ್ಯ ಅದು. ಪ್ರೀತಿ ಮತ್ತು ಯುದ್ಧದಲ್ಲಿ ಏನು ಬೇಕಾದರೂ ಮಾಡು ಎಂಬ ಮಾತಿದೆ. ನಾವು ಕ್ರಿಕೆಟ್‌ನಂತಹ ಒಂದು ಆಟವನ್ನು ಯಾವ ದೇಶದ ಮುಂದೆಯೂ ಸೋಲಬಯಸುವುದಿಲ್ಲ. ಯಾಕೆ ಸೋಲು ನಮಗೆ ಬೇಕಿಲ್ಲ. ಇದೇ ನೀತಿ ರಾಜನೀತಿಯ ವಿಷಯದಲ್ಲೂ ಇರಬೇಕು. ನಮ್ಮ ಮೇಲೆ ಯಾರು ಆಕ್ರಮಣ ಮಾಡಿದ್ದಾರೋ, ಅವರ ವಿಷಯದಲ್ಲಿ ನಾವು ಸೇಡು ತೀರಿಸಿಕೊಳ್ಳಬೇಕು ಎಂದಲ್ಲ. ಆದರೆ ನೀವು ಮಾಡಿದ ಹಲಾಲುಕೋರತನ ನಮ್ಮ ಮನಸ್ಸಿನಲ್ಲಿದೆ. ದಿನದಿಂದ ದಿನಕ್ಕೆ ಅದರ ಕುದಿತ ಹೆಚ್ಚಾಗುತ್ತಿದೆ ಎಂಬುದನ್ನು ಎಂತಹವರೇ ಇರಲಿ ಅವರಿಗೆ ಮನದಟ್ಟು ಮಾಡಿಕೊಡಬೇಕು. ಇಲ್ಲದಿದ್ದರೆ ಸಾಮ್ರಾಜ್ಯಷಾಹಿ ವ್ಯವಸ್ಥೆ ದಿನದಿಂದ ದಿನಕ್ಕೆ ಬೆಳೆಯುತ್ತಾ ಹೋಗಿ ಬಡವ ಬದುಕಲಾಗದ ಒಂದು ಸ್ಥಿತಿ ಸೃಷ್ಟಿಯಾಗುತ್ತದೆ. ಇಂತಹ ಸ್ಥಿತಿಯನ್ನು ಸೃಷ್ಟಿಸುವುದು ಆಳುವವರ ಕೆಲಸವಾಗಬಾರದು. ಬದಲಿಗೆ ಬಡವನ ಸಾಮರ್ಥ್ಯ ದಿನದಿಂದ ದಿನಕ್ಕೆ ಬೆಳೆಯುತ್ತಾ ಹೋಗುವಂತೆ ನೋಡಿಕೊಳ್ಳಬೇಕು.

ನೀವು ಯಾಕೂಬ್ ಮೆಮೊನ್ ಥರದವರಿಗೆ ನಿರ್ದಾಕ್ಷಿಣ್ಯವಾಗಿ ಮರಣದಂಡನೆ ವಿಧಿಸದೆ ಹೋದರೆ, ಫುಟ್‌ಪಾತಿನಲ್ಲಿ ಮಲಗಿಕೊಂಡವರ ಮೇಲೆ ಕುಡಿದ ಅಮಲಿನಲ್ಲಿ ಕಾರು ಹತ್ತಿಸಿಕೊಂಡು ಹೋಗಿ ಸಾಯಿಸಿದವರ ವಿಷಯದಲ್ಲಿ ಯಾವ್ಯಾವುದೋ ಕಾರಣಗಳಿಗೆ ಸೈಲೆಂಟಾಗಿರುವುದನ್ನು ಅಭ್ಯಾಸ ಮಾಡಿಕೊಂಡರೆ ಅದನ್ನು ರಾಜನೀತಿ ಅನ್ನುವುದಿಲ್ಲ. ಬದಲಿಗೆ ರಣಹೇಡಿತನ ಅನ್ನುತ್ತಾರೆ. ಇಂತಹ ರಣಹೇಡಿತನಕ್ಕೆ ಔದಾರ್ಯದ ಲೇಪ ಹಚ್ಚಿ, ಭಾರತೀಯರು ಯಾವತ್ತೂ ಶಾಂತಿಪ್ರಿಯರು ಎಂಬ ಸ್ಲೋಗನ್ನು ಹೊಡೆದು ತೃಪ್ತಿ ಪಟ್ಟುಕೊಳ್ಳುವುದು ನಮಗೆ ಅಭ್ಯಾಸವಾಗಿ ಹೋಗಿದೆ. ಅದೇ ನೆರೆಯ ಚೀನಾದ ಜನಕ ಮಾವೋತ್ಸೆ ತುಂಗ್‌ನನ್ನು ತೆಗೆದುಕೊಳ್ಳಿ. ಶಾಂತಿ ಎಲ್ಲಿದೆ? ಬಂದೂಕಿನ ತುದಿಯಲ್ಲಿದೆ ಎನ್ನುತ್ತಾನೆ. ನೀವು ಬಲಿಷ್ಠರಾಗಿದ್ದಷ್ಟು ಕಾಲ ನಿಮ್ಮನ್ನು ಯಾರೂ ತಡವಿಕೊಳ್ಳುವುದಿಲ್ಲ. ನೀವು ದುರ್ಬಲರಾಗುತ್ತಾ ಹೋದಂತೆ ಎಲ್ಲರೂ ಕಾಲು ಕೆರೆದು ಜಗಳಕ್ಕೆ ಬರುತ್ತಿರುತ್ತಾರೆ. ಅಮೆರಿಕದ ದುಷ್ಟತನ ಏನೇ ಇರಲಿ, ಆದರೆ ಅದು ಶತ್ರುಗಳನ್ನು ಹೇಗೆ ಪರಿಗಣಿಸುತ್ತದೆ ಎಂಬುದನ್ನು ನೋಡಬೇಕು. ಎರಡು ಅವಳಿ ಗೋಪುರಗಳನ್ನು ಟೆರರಿಸ್ಟುಗಳು ಬೀಳಿಸಿದರು ಎಂಬುದನ್ನು ಕಾರಣವಾಗಿಟ್ಟುಕೊಂಡು ಅವರ ಮೂಲವನ್ನೇ ಜಾಡಿಸಿ, ಜಾಡಿಸಿ ಬಡಿದರು. ಇದಕ್ಕೆ ಮೂಲ ಕಾರಣನಾದ ಒಸಾಮಾ ಬಿನ್ ಲಾಡೆನ್‌ನನ್ನು ಪಾಕಿಸ್ತಾನಕ್ಕೇ ನುಗ್ಗಿ ಕೊಂದರು. ಸಮುದ್ರಕ್ಕೆ ಬಿಸಾಡಿ, ಮೀನುಗಳ ಪಾಲಿಗೆ ಆಹಾರವಾಗುವಂತೆ ನೋಡಿಕೊಂಡರು. ನಿಮ್ಮನ್ನು ತಡವಿಕೊಂಡರೆ, ಅದಕ್ಕೆ ನಾಲ್ಕರಷ್ಟು ಪ್ರತಿಯೇಟು ಗ್ಯಾರಂಟಿ ಎಂಬುದು ಗೊತ್ತಾದರೆ ಶತ್ರು ಸಹಜವಾಗಿ ತಣ್ಣಗಾಗುತ್ತಾನೆ. ಇಲ್ಲವೇ ಆತನ ಕ್ರೌರ್ಯ ಕಡಿಮೆಯಾಗುತ್ತದೆ.
ಇಲ್ಯಾರೋ ಮಾತನಾಡಿದ್ದನ್ನು ನೋಡಿದೆ. ಅಪರಾಧಿಗಳಿಗೆ ಮರಣ ದಂಡನೆ ವಿಧಿಸಬೇಡಿ. ಅವರು ತಪ್ಪು ತಿದ್ದಿಕೊಳ್ಳಲು ಅವಕಾಶ ಕೊಡಿ ಎಂಬ ಧಾರಾಳತನ ಅವರದು. ಮಹಮ್ಮದ್ ಘೋರಿಯ ವಿಷಯದಲ್ಲಿ ಪೃಥ್ವಿರಾಜ್ ಚೌಹಾಣ್ ಮಾಡಿದ್ದು ಇದೇ. ತಪ್ಪು ತಿದ್ದಿಕೊಳ್ಳಲು ಅವಕಾಶ ನೀಡಿದ್ದು. ಹೀಗೆ ಅವಕಾಶ ನೀಡಿದ ಫಲವಾಗಿ ಅವನು ಮಾತ್ರ ಕಷ್ಟ ಉಣ್ಣಲಿಲ್ಲ. ಅವನ ರಾಜ್ಯದ ಜನ ಉಂಡರು. ಘೋರಿ ಬಂದು ಲಕ್ಷಾಂತರ ಜನರಿಗೆ ಗೋರಿ ತೋಡಿದರೆ ಅದಕ್ಕುತ್ತರ ಕೊಡುವ ಶಕ್ತಿಯೇ ನಮ್ಮವರಿಗೆ ಉಳಿಯಲಿಲ್ಲ. ಹೀಗಾಗಿ ಎಲ್ಲರೂ ಇತಿಹಾಸವನ್ನು ಗಮನಿಸಬೇಕು. ಸಾಮ್ರಾಜ್ಯಷಾಹಿ ಶಕ್ತಿಗಳು ಹೇಗೆ ಬೆಳೆಯುತ್ತವೆ? ಜಾತಿಯ ಶಕ್ತಿಗಳು ಹೇಗೆ ಬೆಳೆಯುತ್ತವೆ? ಟೆರರಿಸ್ಟುಗಳು ಹೇಗೆ ಬೆಳೆಯುತ್ತಾರೆ? ವ್ಯವಸ್ಥೆಗೆ ಹಾನಿ ಉಂಟು ಮಾಡುವವರು ಹೇಗೆ ಬೆಳೆಯುತ್ತಾರೆ ಎಂಬುದನ್ನು ಅಧ್ಯಯನ ಮಾಡಬೇಕು.

ಇವತ್ತು ಲೋಕಾಯುಕ್ತದಲ್ಲಿ ಕೋಟಿ ರುಪಾಯಿ ಲಂಚದ ಹಗರಣ ನಡೆದಿದೆ. ಅಯ್ಯೋ, ಪಾಪ, ಏನೋ ತಪ್ಪು ನಡೆದಿದೆ. ಅವರನ್ನು ಕ್ಷಮಿಸಿ ಬಿಡಿ ಎನ್ನುತ್ತೀರಾ? ಭ್ರಷ್ಟರನ್ನು ಸದೆಬಡಿದು ಜನಸಾಮಾನ್ಯರಲ್ಲಿ ವಿಶ್ವಾಸ ಮೂಡಿಸಬೇಕಾದ ಸಂಸ್ಥೆಯೇ ಆರೋಪದ ಸುಳಿಗೆ ಸಿಲುಕಿಕೊಂಡರೆ ಎಷ್ಟೆಲ್ಲ ಮಾತನಾಡುತ್ತಾರೆ? ಹಾಗೆ ಮಾತನಾಡುವುದು, ಅಂತಹ ವ್ಯವಸ್ಥೆಗೆ ಕಾಯಕಲ್ಪ ನೀಡುವುದು ಸರಿ. ಆದರೆ ಅದರ ನೆಪದಲ್ಲಿ ಲೋಕಾಯುಕ್ತ ಎಂಬ ವ್ಯವಸ್ಥೆಯನ್ನೇ ಸರ್ಕಾರ ದುರ್ಬಲಗೊಳಿಸಲು ಮತ್ತು ಪ್ರತಿಪಕ್ಷಗಳೂ ಅದಕ್ಕೆ ತಕ್ಕಂತೆ ನಾಟಕವಾಡುತ್ತಾ ಸಾಥ್ ಕೊಡುವುದು ಎಲ್ಲರಿಗೂ ಅರ್ಥವಾಗುತ್ತಿದೆಯೇ? ಇವತ್ತು ವಿಧಾನಸಭೆಯಲ್ಲಿ ಮಂಡನೆಯಾದ ಲೋಕಾಯುಕ್ತ ಮಸೂದೆ, ಇಡೀ ಲೋಕಾಯುಕ್ತದ ಶಕ್ತಿಯನ್ನು ಕುಗ್ಗಿಸುತ್ತದೆ. ಇಲ್ಲಿ ನಿಮ್ಮ ರಾಜನೀತಿ ಕೆಲಸ ಮಾಡಬೇಕಿರುವುದು ಯಾರ ಮೇಲೆ ಆರೋಪ ಬಂದಿದೆಯೋ ಅಂತಹವರನ್ನು ಮುಲಾಜಿಲ್ಲದೆ ದಂಡಿಸುವುದು. ಅದನ್ನೇ ನೆಪವಾಗಿಟ್ಟುಕೊಂಡು ಲೋಕಾಯುಕ್ತ ವ್ಯವಸ್ಥೆಯನ್ನೇ ದುರ್ಬಲಗೊಳಿಸುವುದಲ್ಲ.

ಹೀಗೆ ನೋಡುತ್ತಾ ಹೋಗಿ. ನಮ್ಮ ರಾಜನೀತಿ ಆಳುವವರ ಅನುಕೂಲ ಸಿಂಧು ನೀತಿಯಾಗಿದೆಯೇ ಹೊರತು, ನಿಜವಾಗಿಯೂ ಜನಪರ ಕಾಳಜಿ ಹೊಂದಿಲ್ಲ. ಅಂತಹ ಕಾಳಜಿಯನ್ನು ಹಿಂದಿದ್ದವರು ಇಟ್ಟುಕೊಳ್ಳದ ಪರಿಣಾಮವಾಗಿ ಕಂಡ ಕಂಡವರು ಈ ದೇಶಕ್ಕೆ ನುಗ್ಗಿ ಆಳಲು ಅವಕಾಶ ಮಾಡಿಕೊಟ್ಟೆವು. ಈಗಿರುವವರು ತಮ್ಮ ರಾಜನೀತಿಯ ಮೂಲಕ ಮುಂದಿನ ಜನಾಂಗದ ನೆಮ್ಮದಿಯನ್ನು ಕಸಿದುಕೊಳ್ಳುತ್ತಾರೆ. ಇದು ಈ ದೇಶದ ದೌರ್ಭಾಗ್ಯವಲ್ಲವೇ?

-ರವಿ ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 03 August, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books