Ravi Belagere
Welcome to my website
ನಿಮಗೂ ಯಾವಾಗಲೋ ಕಾಲು ಮುರಿದಿರಬಹುದು. ಬಚ್ಚಲಲ್ಲಿ ಕಾಲು ಜಾರಿದ್ದಿರಬಹುದು. ನಡೆಯುತ್ತ ನಡೆಯುತ್ತ ನಿಮ್ಮ ಕಾಲು ಉಳುಕಿರಬಹುದು. ಸ್ವಲ್ಪ ದಿನ ನೀವು ಉಳುಕು ಅಂದುಕೊಂಡಿರುತ್ತೀರಿ: ಡಾಕ್ಟರ್ ಬಳಿಗೆ ಹೋಗಿ ಎಕ್ಸ್‌ರೇ ತೆಗೆಸಿದಾಗ ಅದು hair line fracture. ಆಯ್ತಲ್ಲ? ಮುದ್ದಾಗಿ ಬ್ಯಾಂಡೇಜ್ ಹಾಕಿ ಆರೇ ಆರು ವಾರ ಅದನ್ನು ಹಾಕ್ಕೊಂಡಿರಿ ಅನ್ನುತ್ತಾರೆ. ಅದೊಂಥರಾ ಸಿಮೆಂಟ್‌ನ ಕಟ್ಟೆ ಕಟ್ಟಿದಂತೆಯೇ! ವಿಪರೀತ ಭಾರ. ನಡೆಯುವುದು ಯಮಹಿಂಸೆ. ನಿಮಗೆ ಯಾವತ್ತಾದರೂ ಕೈ ಕಾಲು ಮುರಿದಿದ್ದವಾ? ಯಾಕೆ? Plaster ಸುಖ ಅನುಭವಿಸಿದಿರಾ? ಎಷ್ಟು ದಿನ? ಹೋಗಲಿ ಸಮಸ್ಯೆ ಪೂರ್ಣವಾಗಿ ವಾಸಿಯಾಗಿ ಬಗೆಹರಿಯಿತಾ? ನಿಮ್ಮ ಆಗಿನ ಅನುಭವವನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಅಲ್ಲಿದ್ದ ನಾನಾ ಸೀಮೆಗಳ ನಕ್ಸಲೀಯರ ನಡುವೆ ಇವನೊಬ್ಬನಿದ್ದ ಭಜನಮೂರ್ತಿ!

ನಾನು ಅಂಥ ಯಾವ ಯಡವಟ್ಟೂ ಮಾಡಿಕೊಳ್ಳುವುದಿಲ್ಲ. Normally not. ನಾಡಿನ ಮನೆಮನೆಯಲ್ಲೂ ಕನ್ನಡವೇ ಮೊಳಗಬೇಕು. ಅಲ್ಲಿಯತನಕ ನಾನು ಹಲ್ಲು ಉಜ್ಜುವುದಿಲ್ಲ. ಚೌರ ಮಾಡಿಸಿಕೊಳ್ಳುವುದಿಲ್ಲ. ಟಾಯ್ಲೆಟ್‌ನಲ್ಲಿ ನೀರು ಇಟ್ಟುಕೊಳ್ಳಲ್ಲ ಅಂತೆಲ್ಲ ಶಪಥ ಮಾಡುವುದಿಲ್ಲ. ಮೊದಲು ಚಳವಳಿ, ಸತ್ಯಾಗ್ರಹ ಮುಂತಾದವುಗಳೆಂದರೆ ಎಕ್ಸೈಟ್ ಆಗುತ್ತಿದ್ದೆ. ಸರಿ ಸುಮಾರು ಹತ್ತು ವರ್ಷ ಕೆಂಪು ಷರ್ಟು ಧರಿಸಿದವನು ನಾನು. ಪಕ್ಕಾ ಕಮ್ಯುನಿಸ್ಟ್! ಈ ರಸ್ತೆ ಮೇಲೆಲ್ಲ ಝಂಡಾ ಎತ್ತಿಕೊಂಡು. ಓಡಾಡುವ ಕಮ್ಯುನಿಸಂ ಅಲ್ಲ ನನ್ನದು. ನಾನು ನಕ್ಸಲೀಯರ ಬಂದೂಕು ಮೊರೆಯುತ್ತಿದ್ದ ಕಾಡಿನೊಳಕ್ಕೇ ನಡೆದು ಹೋದೆ. ನನಗೆ ಕೊಂಡಪಲ್ಲಿ ಸೀತಾರಾಮಯ್ಯನವರು, ಬಂಡಯ್ಯ ಮಾಸ್ಟರ್, ರವೂಫ್ ಸಾಕೇತ್, ವರವರ ರಾವು, ಶ್ರೀ ಶ್ರೀ-ಯಾರೂ ಅಪರಿಚಿತರಲ್ಲ. ತುಂಬ ಚಿಕ್ಕವನು ನಾನು, ಆಗಲೇ ಭೂಗತ ಕಾನ್ಫರೆನ್ಸ್‌ಗಳಿಗೆ ಅಟೆಂಡ್ ಆಗಿ ಬಂದಿದ್ದೆ. ಆಗ ನಕ್ಸಲೀಯ ಬಣಗಳವರು ಸೇರಿ R.O.C ಹೆಸರಿನಲ್ಲಿ ಒಂದು Joint Action ಥರದ್ದು ಮಾಡೋಣ ಅಂತ ಸಂಭ್ರಮದಿಂದ ಓಡಾಡುತ್ತಿದ್ದರು. ಆಗ ಆಂಧ್ರದ ಕದಿರಿ ಮೂಲದ ರವೂಫ್ ಅವರು ROCಗೆ ನೇತಾರರಾಗಿದ್ದರು. ಅದೊಂದು ಬೆಳಿಗ್ಗೆ ನಾನು ಹೆಗಲ ಚೀಲ ಹಾಕಿಕೊಂಡು ಬೆಂಗಳೂರಿಗೆ ಬಂದಿಳಿದಿದ್ದೆ. ನನಗೆ ಒಂದು ಮನೆಯ ಅಡ್ರೆಸ್ ಕೊಟ್ಟಿದ್ದರು. ಅವತ್ತಿಗೆ ಅದು ಕೆಲವೇ ಮನೆಗಳಿದ್ದ ಒಂದು ಬಡಾವಣೆ. ಅಲ್ಲಿತ್ತು ಮನೆ. ಒಬ್ಬ ಮುದುಕ ಬಾಗಿಲು ತೆಗೆದು ನಕ್ಕಿದ್ದ. ಕೂತಿರು, ಒಂದು ಕಾಫಿ ಮಾಡಿ ತರ್ತೀನಿ ಅಂದ. ತಂದ ಕಾಫಿ ಕುಡಿದೆ. “ನೆನಪಾಗಲಿಲ್ಲ, ಸಿಗರೇಟು ತರೋದನ್ನ ಮರೆತೆ. ಹತ್ತಿರದಲ್ಲೆಲ್ಲಾದರೂ ಸಿಗುತ್ತಾ?" ಅಂತ ಕೇಳಿದೆ. “ಕೊಡಿ, ನಾನೇ ತರ್ತೀನಿ" ಅಂತ ಹಣ ಇಸಿದುಕೊಂಡು ಹೋಗಿ ಆತ ಸಿಗರೇಟು ತಂದ. ಒಂದು ಸಿಗರೇಟು ಕೊಟ್ಟೆ. ಆತ ಒಲ್ಲೆ ಅಂದ. ಆನಂತರ ಕರ್ನಾಟಕ ಮತ್ತು ಆಂಧ್ರದ ಗೆಳೆಯರು ಬಂದರು. ಅನಂತಪುರಂ ಜಿಲ್ಲೆಯಿಂದ ನರಸಿಂಹಾ ರೆಡ್ಡಿ ಬಂದ. ಬಂದ ಗೆಳೆಯರಲ್ಲೊಬ್ಬರು “ನಿಮ್ಮ ಹೆಸರೇನು?" ಅಂತ ಕೇಳಿದ್ದಕ್ಕೆ “I am Bhajana Murthy" ಅಂತ ಉತ್ತರಿಸಿ ಕೈ ಕುಲುಕಿದ್ದ. ನನ್ನ ಬಾಯಿಗೆ ಫಡ್ಡನೆ ಒಡೆದು ಹೋಗುವಂಥ ನಗು ಬಂದಿತ್ತು. ನಾನೂ ಸೇರಿದಂತೆ ಅಲ್ಲಿದ್ದವರೆಲ್ಲ ನಕ್ಸಲ್ ವಾದಿಗಳೇ. ನಮ್ಮನ್ನು ನಾವು “ಹಾಯ್ ಕಾಮ್ರೇಡ್" ಅಂತಲೇ ಸಂಬೋಧಿಸಿಕೊಳ್ಳುತ್ತಿದ್ದೆವು. ಒಂದು ಗಮನೀಯ ಸಂಗತಿಯೆಂದರೆ ನಮಗೆಲ್ಲರಿಗೂ ‘ಭೂಗತ’ ಹೆಸರುಗಳಿರುತ್ತಿದ್ದವು. ಅಲ್ಲಿ ರವಿ ಅಂದರೆ ಬೇರೆಯವರಿಗೆ ಗೊತ್ತಾಗುತ್ತಿರಲಿಲ್ಲ. ನನ್ನ ಹೆಸರು ಆಗ ಮನೋಹರ್. ಅದೇ ಹೆಸರಿನಲ್ಲಿ ವ್ಯವಹರಿಸುತ್ತಿದ್ದೆ. ನಕ್ಸಲ್ ಗೆಳೆಯರಿಗೂ ಗೊತ್ತಿರುತ್ತಿದ್ದುದು ಅದೇ ಹೆಸರು. ಕೆಲವು ಹುಡುಗರು ಪೊಲೀಸರ ಗುಂಡಿಗೆ ಸಿಕ್ಕು ಗತಿಸಿ ಹೋದ ಸೀನಿಯರ್ ಹೋರಾಟಗಾರರ ಹೆಸರಿಟ್ಟುಕೊಳ್ಳುತ್ತಿದ್ದರು. ಆಗ ಆಂಧ್ರದ ಕೆಲವು ಜಿಲ್ಲೆಗಳಲ್ಲಿ ನನಗೆ ಅನೇಕ ಹುಡುಗಿಯರು-ಹೆಂಗಸರು ಭೇಟಿಯಾಗುತ್ತಿದ್ದರು. ಅವರೆಲ್ಲರ ಹೆಸರೂ “ಪದ್ಮಕ್ಕ!" ಇದು ಸಂಘಟನೆಯ ನಿಯಮ. ಯಾರಿಗೂ ಮೂಲ (original) ಹೆಸರು ಗೊತ್ತು ಮಾಡಿ ಕೊಡಬೇಡಿ ಎಂಬ rule ಇತ್ತು. ಆಂಧ್ರದಲ್ಲಿ ಮೊಟ್ಟಮೊದಲ ನಕ್ಸಲ್ ಅಲೆ ಎದ್ದಾಗ ಅದರಲ್ಲಿ ಹಿರಿಯರೊಬ್ಬರು ತಮ್ಮ ಹೆಸರನ್ನು ‘ಪೊರಕಲ ದೊರ’ ಅಂತಿಟ್ಟುಕೊಂಡಿದ್ದರು.

ಇದ್ಯಾವುದೂ ನಮಗೆ ಅಪರಿಚಿತವಲ್ಲ. ಆದರೆ ಹೆಸರು ಬದಲಿಸಿಕೊಳ್ಳಿ ಅಂದ ತಕ್ಷಣ ಅನಂತಪುರಂ ಜಿಲ್ಲೆಯ ಈ ನರಸಿಂಹಾ ರೆಡ್ಡಿ ತನ್ನ ಹೆಸರು ‘ಭಜನಮೂರ್ತಿ’ ಅಂದು ಬಿಡೋದಾ? ನಕ್ಸಲ್ ಚಳವಳಿ ಹಿಂಸಾತ್ಮಕವಾಗಿದ್ದುದು ಹೌದು. ಆದರೆ ಅಲ್ಲಿ ರಂಜನೆ ಅಥವಾ sense of humourಗೆ ಕೊರತೆಯೇನಿರಲಿಲ್ಲ. ಸರಿ, ಎಲ್ಲರೂ ಬೆಳಗಿನ ಹತ್ತರ ಹೊತ್ತಿಗೆ ಆ ಮನೆಗೆ ಬಂದು settle ಆದರು. ಸಭೆಯೂ ಆರಂಭವಾಯಿತು. ಬಂದವರ ಪೈಕಿ ಒಬ್ಬ ಯುವಕ “ಈ ಬಗ್ಗೆ ನೀವೇನಂತೀರಿ ಕಾಮ್ರೇಡ್ ರವೂಫ್?" ಅಂದ. ನೋಡಿದರೆ, ಒಂದು ಮೂಲೆಯಲ್ಲಿ ಕನ್ನಡಕ ಧರಿಸಿಕೊಂಡು ಕುಳಿತಿದ್ದ ವೃದ್ಧರೊಬ್ಬರು, ಮಾತನಾಡಲು ಸಿದ್ಧರಾಗತೊಡಗಿದರು. ನನ್ನಲ್ಲಿ ಮೊದಲು ಉದ್ಭವಿಸಿದ್ದು ಸಡಗರ. ಒಂದು ರೋಮಾಂಚನ.

ನಾನು ಕಾಮ್ರೇಡ್ ರವೂಫ್‌ರನ್ನು ಭೇಟಿಯಾಗುತ್ತಿದ್ದೆನಾ? What an excitement. ಆಗೆಲ್ಲ ನಮಗೆ ಕೊಂಡಪಲ್ಲಿ ಸೀತಾರಾಮಯ್ಯ, ತರಿಮೆಲ ನಾಗಿರೆಡ್ಡಿ, ಬಂಡಯ್ಯ ಮಾಸ್ಟರ್ ಮುಂತಾದವರೆಲ್ಲ ಸಾಕ್ಷಾತ್ತು ದೈವಸಮಾನರಾದವರು. ಕಾಮ್ರೇಡ್ ರವೂಫ್ ಕೂಡ ಅದೇ ಸಾಲಿಗೆ ಸೇರಿದವರು. ಹಾಗಂತ ರೋಮಾಂಚಿತಗೊಂಡ ಮರುಕ್ಷಣವೇ ಒಂದು shock. ಅಲ್ಲಿ ಮೂಲೆಯಲ್ಲಿ ಕುಳಿತಿದ್ದ ಆ ಹಿರಿಯ ನಾಯಕರೇ ನನಗೆ ಬೆಳಿಗ್ಗೆ ಕಾಫಿ ಮಾಡಿಕೊಟ್ಟು, ಅಂಗಡಿಗೆ ಹೋಗಿ ಸಿಗರೇಟು ತಂದುಕೊಟ್ಟ ‘ಮುದುಕ!’ ನನ್ನ ಬದುಕಿನಲ್ಲಿ ಅದು ಮರೆಯಲಾಗದ ಘಟನೆ.
ಆನಂತರ ನನ್ನ ಕಣ್ಣೆದುರು ಅನೇಕ ಘಟನೆಗಳು ನಡೆದವು. ಉರವಕೊಂಡದ ಬಳಿ ಒಬ್ಬ ಭೂಮಾಲೀಕನನ್ನು ಕೊಲ್ಲಲು ಹೊರಟಾಗ ತನ್ನ ಕೈಲಿದ್ದ ಬಾಂಬ್ ಸಿಡಿದು, ತೀವ್ರವಾಗಿ ಗಾಯಗೊಂಡಿದ್ದ ಕಾಮ್ರೇಡ್ ಹರಿ ಬಂದು ತಿಂಗಳಗಟ್ಟಲೆ ನನ್ನ ಮನೆಯಲ್ಲಿ ತಲೆ ಮರೆಸಿಕೊಂಡಿದ್ದ. ಇದೇ ನರಸಿಂಹಾ ರೆಡ್ಡಿ ಅಲಿಯಾಸ್ ಭಜನಮೂರ್ತಿಯನ್ನು ಅನಂತಪುರಂ ಪೊಲೀಸರು ಬೆನ್ನತ್ತಿ ಹುಡುಕತೊಡಗಿದಾಗ ನನ್ನ ಮನೆಗೆ ಬಂದು ದಿನಗಟ್ಟಲೆ ಉಳಿದಿದ್ದ.

ಕೊಂಡಪಲ್ಲಿಯವರಿಗೆ ನಾನು ಅಡುಗೆ ಮಾಡಿ ಹಾಕಿದ್ದೇನೆ. ಇನ್ನೇನು ಅವರ ಕೊಲೆಯಾಗಲಿದೆ ಅಂದರೆ, ಸುಮಾರು ಹದಿನೈದು ದಿನಗಳ ಹಿಂದೆ ನಮ್ಮ ಮನೆಗೆ ಬಂದು ನಿರಾತಂಕವಾಗಿ ಹರಟಿ ಹೋದವರು ಅದೇ ಬಂಡಯ್ಯ ಮಾಸ್ಟರ್. ಹಾಗೆ ಸಾಕೇತ್ ಕೂಡ ಬಂದಿದ್ದರು. ಪರೋಕ್ಷವಾಗಿ ನಕ್ಸಲ್ ಚಳವಳಿಯಲ್ಲಿ ತೊಡಗಿಕೊಂಡಿದ್ದ ಚಂದ್ರಮೌಳಿ, ಪ್ರೆಸ್‌ಕ್ಲಬ್‌ನಲ್ಲಿ ಭೇಟಿಯಾಗಿ ಅಲ್ಲೇ ಪರಿಚಯವಾಗಿದ್ದ. ಆಗ ‘ದಿ ವೀಕ್’ ಪತ್ರಿಕೆಗೆ ಆತ ವರದಿಗಾರ. ಕ್ಲಬ್‌ನಿಂದ ಮನೆಗೆ ಹೊರಟವನು ತಾಜ್ ಹೊಟೇಲಿನ ಪಕ್ಕದ ರಸ್ತೆಯಲ್ಲಿ ಅಪಘಾತಕ್ಕೀಡಾದ. ಒಂದು ಲಗೇಜ್ ಗಾಡಿ, ಬೈಕಿನಿಂದ ಬಿದ್ದ ಚಂದ್ರಮೌಳಿಯನ್ನು ಸುಮಾರು ದೂರಕ್ಕೆ ಎಳೆದುಕೊಂಡು ಹೋಗಿ ತುಂಡು ಮಾಡಿ ಹಾಕಿತ್ತು. ಚಂದ್ರಮೌಳಿಯ ಪತ್ನಿ ಚಂದ್ರಿಕಾ ನಾನು ಓದಿದ ಕರ್ನಾಟಕ ಯೂನಿವರ್ಸಿಟಿಯಲ್ಲಿ ನನಗೆ ಜೂನಿಯರ್.

ಹಿಂದೊಮ್ಮೆ ಹೇಳಿದ್ದೆ. ಲಲಿತೆ ಇವತ್ತಿಗೂ ಅನ್ನುತ್ತಿರುತ್ತಾಳೆ: “ನೀನು ಏನನ್ನು ಮಾಡಿದರೂ ಅತಿಯಾಗಿ ಮಾಡ್ತೀಯ!" ಅಂತ. It is true. ನಾನು ಅದಿನ್ಯಾವ ಪರಿ ನೆಲಕ್ಕೆ ಬೀಳುವ ಹಾಗೆ ಕುಡಿದೆ? ಅವಳನ್ನು ಅದಿನ್ಯಾವ ಪರಿ ಪ್ರೀತಿಸಿದೆ? ಯಾವ ಪರಿ ಊರಿಂದ ಊರಿಗೆ ಅಲೆದೆ? ಅವೆಷ್ಟು ಕಾಲ್ನಡಿಗೆಗಳು? ಸಿಗರೇಟೇನು ಕಡಿಮೆಯಾ? ತಿಂದದ್ದು? ಯಾವುದನ್ನು ‘ಮಾಡಬೇಡ’ ಅಂತಾರೋ ಅದನ್ನೇ ಮಾಡುತ್ತಿದ್ದೆ. ಮೊದಲೊಮ್ಮೆ ಬರೆದಿದ್ದೆ: ಒಂದು ಚಟ ಹಚ್ಚಿಕೊಂಡೆ ಅಂದರೆ, ಅದರ ತುದಿ ಮುಟ್ಟಿ ಬರುವ ತನಕ ನನಗೆ ಸಮಾಧಾನವಿಲ್ಲ. ನಾನು ಅತಿರೇಕಕ್ಕೆ ಹೋಗಲೇಬೇಕು. ಆಗ ನಿಚ್ಚಳವಾಗಿ Death Warrant ಬರುತ್ತದೆ. ಜೀವ ಭಯಕ್ಕೆ ಗುರಿಯಾಗುತ್ತೇನೆ. ಅದಕ್ಕಿಂತ ಹೆಚ್ಚಾಗಿ ವಿಪರೀತವಾಗಿ chase ಮಾಡಿದ ಸಂಗತಿಯಿದೆಯಲ್ಲ? ಅದು bore ಆಗಿ ಬಿಡುತ್ತದೆ. I give it up. ಕುಡಿತ ನಿಲ್ಲಿಸಿದ್ದೂ ಹಾಗೆಯೇ. ನನಗೀಗ non veg ಸಾಕೆನ್ನಿಸತೊಡಗಿದೆ. ಯಾಕೋ ಕಾಣೆ: ಓದುವ ಚಟ ಮಾತ್ರ ಬಿಟ್ಟು ಹೋಗಿಲ್ಲ. ಮೊನ್ನೆ ನನ್ನ ಗೆಳೆಯ ವೆಂಕಿ ಅಲಿಯಾಸ್ ಬಿ.ಟಿ. ವೆಂಕಟೇಶ್ ನೆನಪು ಮಾಡಿಕೊಳ್ಳುತ್ತಿದ್ದ. ಅದಿನ್ನೇನು ನೆಲಕ್ಕೆ ಬಿದ್ದೇ ಬಿಡುತ್ತೇವೆ ಎಂಬಷ್ಟು ಕುಡಿದರೂ, ನಾವು ಓದುತ್ತಿದ್ದೆವು. ಎಚ್ಚರ ತಪ್ಪುವಷ್ಟು ಓದುತ್ತಿದ್ದೆವು. ಈಗಲೂ ಅದು ಕೈ ಬಿಟ್ಟಿಲ್ಲ. ಒಂದೇ ಬದಲಾವಣೆ ಅಂದರೆ ಮೊದಲು ಕೈಗೆ ಸಿಕ್ಕಿದ್ದನ್ನ ಓದುತ್ತಿದ್ದೆ. ಈಗ ನನ್ನ ವೃತ್ತಿಗೆ ಸಂಬಂಧಿಸಿದ್ದನ್ನು ಮಾತ್ರ ಓದುತ್ತೇನೆ. ಇವೆಲ್ಲವುಗಳ ಜೊತೆಗೆ ನನ್ನ ಹಾಡುಗಳ ಹುಚ್ಚು? ಗಝಲುಗಳೆಡೆಗಿನ ಸೆಳೆತ? ಬಹುಶಃ ಅದು ನನ್ನ ಜೊತೆ ಜೊತೆಯಲ್ಲೇ ಗೋರಿಯೊಳಕ್ಕೆ ಇಳಿಯಬೇಕು.

ನಕ್ಸಲ್ ಚಳವಳಿಯನ್ನೂ ನೀವು ಇದೇ ಸಾಲಿಗೆ ಸೇರಿಸಬಹುದು. ಅದನ್ನು ತುಂಬ ಕಷ್ಟಪಟ್ಟು ದೂರ ಮಾಡಿದೆ. ಮಾಡದೆ ಹೋಗಿದ್ದಿದ್ದರೆ, ನಿಮಗೆ ಈ ಪಾಪಿ ರವಿ ಬೆಳಗೆರೆಯ ಪರಿಚಯ ಆಗುತ್ತಲೇ ಇರಲಿಲ್ಲ. ಕೆಲವೇ ಕೆಲವು ಗೆಳೆಯರ ನೆರವಿನಿಂದಾಗಿ ನಾನು ಜೀವಂತ ಉಳಿದೆ. ಇಲ್ಲದಿದ್ದರೆ ಅದ್ಯಾವ ಪೊಲೀಸರ ಕಾಡತೂಸಿಗೆ ಬಲಿಯಾಗುತ್ತಿದ್ದೆನೋ? ಅಂಥದೊಂದು ಹಿಂಸಾತ್ಮಕ ಚಳವಳಿಯ ನಟ್ಟ ನಡುವೆ ತಿರುಗಾಡಿಕೊಂಡಿದ್ದ ನನಗೆ, ಬೆಂಗಳೂರಿನ ಕಾಂಜಿಪೀಂಜಿ ರೌಡಿಗಳನ್ನು ನೋಡಿದಾಗ, ಅವರ ಸಂದರ್ಶನ ಮಾಡಿದಾಗ ಏನಂಥ ರೋಮಾಂಚನಗಳೂ ಖಂಡಿತ ಆಗುತ್ತಿರಲಿಲ್ಲ. “ಅವರನ್ನೆಲ್ಲ ಹೊತ್ತಲ್ಲದ ಹೊತ್ತಿನಲ್ಲಿ ಭೇಟಿಯಾಗ್ತೀರಲ್ಲ? ನಿಮಗೆ ಹೆದರಿಕೆಯಾಗುವುದಿಲ್ಲವಾ?" ಅಂತ ಕೆಲವರು ಕೇಳುತ್ತಿದ್ದರು. ನಾನು ನಕ್ಕು ಬಿಡುತ್ತಿದ್ದೆ. ಆ ವಿಷಯದಲ್ಲೂ ಅಷ್ಟೆ ನೋಡಿ. ಮೊಟ್ಟ ಮೊದಲನೆಯದಾಗಿ ಶಿವಾಜಿನಗರದ ಸೈಂಧವ ರೌಡಿ ಕೋಳಿ ಫಯಾಜ್‌ನ ಪರಿಚಯವಾಗಿ, ಅವನ ಸಂದರ್ಶನ ಮಾಡಿದೆ. ಆಯ್ತು, ಅವನ ನಂತರ ಮುನಿ ಪರಿಚಯವಾಯಿತು. ಶ್ರೀರಾಂಪುರದ ಕಿಟ್ಟಿ ಸಿಕ್ಕ. ಬೆಕ್ಕಣ್ಣು ರಾಜೇಂದ್ರ ಸಿಕ್ಕ. ಸೈಲೆಂಟ್ ಸುನೀಲ ಮಾತನಾಡಿದ. ಜೇಡರಳ್ಳಿ ಕೃಷ್ಣಪ್ಪ, ಲೇ ಔಟ್ ಮಂಜ, ಮಚ್ಚ ಮಂಜ, ಹೆಬ್ಬೆಟ್ಟು ಮಂಜ... ಒಬ್ಬರಾ-ಇಬ್ಬರಾ? ಈ ಅತಿರೇಕ ಎಲ್ಲಿಗೆಲ್ಲ ಹೋಯಿತು ನೋಡಿ? ಅದು ದುಬೈಗೆ ಕರೆದೊಯ್ಯಿತು. ಅಲ್ಲಿ ಮುತ್ತಪ್ಪ ರೈ ಸಂದರ್ಶನ ಮಾಡಿದೆ.

‘ಇದೊಂದೇ’ ಅಂತ ಅಂದುಕೊಳ್ಳಬೇಡಿ. ಇಂಥ ಅನೇಕ ಅತಿರೇಕಗಳಿವೆ. ಕನ್ನಡದ ಯಾವ ಪತ್ರಕರ್ತ ಕಾರ್ಗಿಲ್ ಯುದ್ಧ ಭೂಮಿಗೆ ಹೋದ ಹೇಳಿ? ಅದೂ ಬಿಡಿ, ಅಫಘನಿಸ್ತಾನ ಯಾವ ದಿಕ್ಕಿಗಿದೆ ಅಂತ ಎಷ್ಟು ಜನ ಪತ್ರಕರ್ತರಿಗೆ ಗೊತ್ತು. ನನಗಿಂತ ಮುಂಚೆ ಇವರಲ್ಲೊಬ್ಬರಾದರೂ ಪಾಕಿಸ್ತಾನಕ್ಕೆ ಹೋಗಿದ್ದರಾ? ಇಸ್ರೇಲ್ ಇವರಿಗೆ ಗೊತ್ತಿತ್ತಾ? “ಅಯ್ತು, ನಿಮ್ಮದು ಘನಂದಾರೀ ಪತ್ರಿಕೋದ್ಯಮ ಅಂತಲೇ ಇಟ್ಟುಕೊಳ್ಳೋಣ. ಆದರೆ ನಿಮ್ಮ ‘ಮದ್ಯಾರಾಧನೆ’, ನಿಮ್ಮ ಸಿಗರೇಟಿನ ಚಟ, ನಿಮ್ಮ ಅಲೆಮಾರಿತನದ ಚಟ-ಇವೆಲ್ಲವುಗಳ ಬಗ್ಗೆ ಯಾಕೆ ಬರೀತೀರಿ. ಹುಡುಗರು ಅದನ್ನೆಲ್ಲ ಕಲಿತುಬಿಡುತ್ತಾರೆ" ಅಂದದ್ದು ನನ್ನೊಬ್ಬ ಓದುಗರು. ಅವರಿಗೆ ಏನು ಹೇಳಲಿ?

ಅದೊಂದು ದಿನ ಸಬ್ ಇನ್ಸ್‌ಪೆಕ್ಟರ್ ಕಾಂಬಳೆ ಬಂದರಂತೆ. ನಾನು ಆಫೀಸಿನಲ್ಲಿರಲಿಲ್ಲ. ಅವರು ಕೈಲೊಂದು ವಾರೆಂಟ್ ಹಿಡಿದುಕೊಂಡು ಬಂದಿದ್ದರು. “ಇಲ್ಲ, ಬೆಳಗೆರೆಯವರು ಕೋರ್ಟಿಗೆ ಬರಲೇಬೇಕು. ಅವರನ್ನ ಈಗ ಕರೆದುಕೊಂಡೇ ಹೋಗ್ತೀನಿ. ಬಿಡೋಕೆ ಸಾಧ್ಯವೇ ಇಲ್ಲ" ಅಂತ ನಮ್ಮ ಉಮೇಶ್‌ಗೆ ಹೇಳಿ ಹೆದರಿಸಿದ್ದಾರೆ. ಪಾಪ, ಉಮೇಶ್ ಗಾಬರಿಯಾಗಿದ್ದಾನೆ. “ನೋಡು, ಹೀಗೆಲ್ಲ ಆಗ್ತಿದೆ. ಅಣ್ಣಾ, ನಿನ್ನನ್ನು ಅರೆಸ್ಟ್ ಮಾಡಿ ತೆಗೆದುಕೊಂಡು ಹೋಗ್ತಾರೆ" ಅಂದ.. “ಆಯ್ತು, ಅವರಿಗೆ ಫೋನ್ ಕೊಡು" ಅಂದೆ. ಅವರೊಂದಿಗೇ ಮಾತನಾಡಿದೆ. “ನೀವು ಒದ್ದಾಡ ಬೇಡಿ. ನನ್ನನ್ನು ನಂಬಿ. ಇಲ್ಲಿ ಅನಿವಾರ್ಯ ಪರಿಸ್ಥಿತಿ ಇದೆ. ಆದರೆ ಎರಡು ದಿನದ ನಂತರ ಖಂಡಿತ ಬರ‍್ತೇನೆ" ಅಂದೆ. ಬಹುಶಃ ಅವರು convince ಆದರು.

“ಸರ್, ನಾನು ನಿಮ್ಮ ಪತ್ರಿಕೆ, ನಿಮ್ಮ ಪುಸ್ತಕಗಳನ್ನು ಓದಿಕೊಂಡೇ ಬೆಳೆದವನು. ಹತ್ತೂವರೆಗೆ ಪರೀಕ್ಷೆ ಇದೆ ಅಂದರೆ, ಎಂಟೂವರೆ ತನಕ ನಿಮ್ಮ ‘ಹೇಳಿ ಹೋಗು ಕಾರಣ’ ಕಾದಂಬರಿ ಓದಿ examಗೆ ಹೋದವನು. ನಿಮ್ಮನ್ನು ಭೇಟಿಯಾಗೋ chance ಸಿಗುತ್ತಲ್ಲಾ ಅಂತ ಬೆಂಗಳೂರಿಗೆ ಬಂದೆ. ನಿಮ್ಮ ಅಭಿಮಾನಿ ಸರ್ ನಾನು..." ಅಂದರು ಆತ. ಇಂಥವು ಸಾಕಷ್ಟು ಸಲ ಆಗಿವೆ. ಗಂಡಸರು ಅಂತ ಅಲ್ಲ, even girls have expressed this feeling. ನಾನು ಪತ್ರಿಕೋದ್ಯಮಕ್ಕೆ ಬಂದದ್ದೇ ನಿಮ್ಮ ಕಾರಣದಿಂದಾಗಿ" ಅಂತ ಒಬ್ಬ ಹುಡುಗಿಯೊಬ್ಬಳು ಮೊನ್ನೆ ಮೊನ್ನೆ ಫೇಸ್‌ಬುಕ್‌ನಲ್ಲಿ ಹೇಳಿದಳು. ಅಂದ ಮಾತ್ರಕ್ಕೆ ನಾನೇನೋ ಮಹಾನುಭಾವ ಅಂತ ಅಂದುಕೊಳ್ಳಬೇಡಿ. ನಾನೂ ಅಂದುಕೊಂಡಿಲ್ಲ. ಇದೆಲ್ಲ ಅತಿರೇಕ ಕೂಡ ನನ್ನ ಕಮಿಟ್‌ಮೆಂಟ್ ಅಂತಲೇ ನಾನು ಭಾವಿಸಿದ್ದೇನೆ. ಯಾವುದೇ ಸಂಗತಿ ನನ್ನನ್ನು ಇಂಪ್ರೆಸ್ ಮಾಡಿದರೆ, ಅದರ ಬೆನ್ನತ್ತಿ ಹೋಗುವುದು ನನ್ನ ಚಟ, ನನ್ನ ಕರ್ಮ!

ಮೊನ್ನೆ ಫಕ್ಕನೆ ಕವಿ ಸಾಹಿರ್ ಲುಧಿಯಾನವಿಯ ನೆನಪಾಯಿತು. ಆತ ನನ್ನ all time favourite. ಆತನ ಪುಸ್ತಕ ತೆಗೆದು ಓದಲಾರಂಭಿಸಿದೆ. ಅಜಮಾಸು ಇಪ್ಪತ್ತೈದು ವರ್ಷಗಳ ಹಿಂದೆ ಆ ಪುಸ್ತಕ ಓದಿದ್ದೆ. ಮೊನ್ನೆ ಓದಿದಾಗ ಅದೇ ಕಿಕ್! ಇದು ಗುಲ್ಜಾರ್ ಅವರಿಗೂ ಅನ್ವಯವಾಗುತ್ತದೆ. ಅವರು ಅರ್ಧ ಶತಮಾನದ ಹಿಂದೆ ‘ಖಾಮೋಷಿ’ ಸಿನೆಮಾಕ್ಕೆ ಬರೆದ ಹಾಡು ಇವತ್ತಿಗೂ ಇಷ್ಟವಾಗುತ್ತದೆ. ಇದು ಮೊನ್ನೆ ಮೊನ್ನೆ ಅವರು ಬರೆದ ಇನ್ನೊಂದು ಸಿನೆಮಾದ ಹಾಡಿಗೂ ಅನ್ವಯವಾಗುತ್ತದೆ. ಬರಹ, ಶಿಲ್ಪ, ಚಿತ್ರ, ಗೀತೆ-ಹೀಗೆ, ಎಲ್ಲವುಗಳಿಗೂ ಅನ್ವಯವಾಗುವ ಸಂಗತಿ.
ಹೇಳಲು ಕುಳಿತರೆ ಅದೇ ಒಂದು ಕಥನವಾದೀತು. ನನ್ನ ಹುಚ್ಚಾಟಗಳು ಹೇಗಿರುತ್ತವೆ ಅಂದರೆ, ನಾನು ನಟಿಸಿದ ಯಾವ ಸಿನೇಮವನ್ನೂ ನಾನು ನೋಡಿಲ್ಲ. ಟೀವಿಯಲ್ಲಿ ಬರುವ ನನ್ನ ಯಾವ ಕಾರ್ಯಕ್ರಮವನ್ನೂ ನಾನು ನೋಡುವುದಿಲ್ಲ. ನಾನು ಕನ್ನಡಿಯ ಮುಂದೆ ತುಂಬ ಹೊತ್ತು ಕೂಡುವುದಿಲ್ಲ. ಹಾಗೇನೇ, ಒಮ್ಮೆ ಬರೆದು ಕಂಪ್ಯೂಟರ್ ವಿಭಾಗಕ್ಕೆ ಕಳಿಸಿದೆನೆಂದರೆ, ಅಲ್ಲಿಗೆ ಕೊನೆ. ನಾನು ಪ್ರಿಂಟ್ ಆದ ನಂತರ ಅದನ್ನು ಓದಲ್ಲ, ನೋಡೋದೂ ಇಲ್ಲ. ನಿಮಗೆ ಇಷ್ಟವಾಯಿತಾ? ಸಾಕು, ನಾನು ಧನ್ಯೋಸ್ಮಿ.

ಹೀಗಿರುವುದು ಸರಿಯಾ? ಸೂಕ್ತವಾ? ಹೀಗಿರುವುದಕ್ಕಿಂತ ವಿಭಿನ್ನವಾಗಿದ್ದರೆ ಒಳ್ಳೆಯದಾ?
ಗೊತ್ತಿಲ್ಲ ಸರ್.

ಸುಮ್ಮನೆ ತಲೆ ತಗ್ಗಿಸಿ ಬರೀತಾ ಹೋಗ್ತೇನೆ.

ನಿಮ್ಮವನು
ಆರ್.ಬಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 29 July, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books