Ravi Belagere
Welcome to my website
ನಿಮಗೂ ಯಾವಾಗಲೋ ಕಾಲು ಮುರಿದಿರಬಹುದು. ಬಚ್ಚಲಲ್ಲಿ ಕಾಲು ಜಾರಿದ್ದಿರಬಹುದು. ನಡೆಯುತ್ತ ನಡೆಯುತ್ತ ನಿಮ್ಮ ಕಾಲು ಉಳುಕಿರಬಹುದು. ಸ್ವಲ್ಪ ದಿನ ನೀವು ಉಳುಕು ಅಂದುಕೊಂಡಿರುತ್ತೀರಿ: ಡಾಕ್ಟರ್ ಬಳಿಗೆ ಹೋಗಿ ಎಕ್ಸ್‌ರೇ ತೆಗೆಸಿದಾಗ ಅದು hair line fracture. ಆಯ್ತಲ್ಲ? ಮುದ್ದಾಗಿ ಬ್ಯಾಂಡೇಜ್ ಹಾಕಿ ಆರೇ ಆರು ವಾರ ಅದನ್ನು ಹಾಕ್ಕೊಂಡಿರಿ ಅನ್ನುತ್ತಾರೆ. ಅದೊಂಥರಾ ಸಿಮೆಂಟ್‌ನ ಕಟ್ಟೆ ಕಟ್ಟಿದಂತೆಯೇ! ವಿಪರೀತ ಭಾರ. ನಡೆಯುವುದು ಯಮಹಿಂಸೆ. ನಿಮಗೆ ಯಾವತ್ತಾದರೂ ಕೈ ಕಾಲು ಮುರಿದಿದ್ದವಾ? ಯಾಕೆ? Plaster ಸುಖ ಅನುಭವಿಸಿದಿರಾ? ಎಷ್ಟು ದಿನ? ಹೋಗಲಿ ಸಮಸ್ಯೆ ಪೂರ್ಣವಾಗಿ ವಾಸಿಯಾಗಿ ಬಗೆಹರಿಯಿತಾ? ನಿಮ್ಮ ಆಗಿನ ಅನುಭವವನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಸೋತವನಿಗೆ ಬೇರಿನ ಸೆಳೆತ, ಗೆದ್ದವನಿಗೆ ಇಲ್ಲೇ ಬೇರೂರುವ ತವಕ

ಹುಟ್ಟೂರು ತೊರೆದು ಬೆಂಗಳೂರಲ್ಲಿ ಬದುಕು ಕಟ್ಟಿಕೊಂಡವರಿಗೆ ಇಲ್ಲೊಂದಿಷ್ಟು ಪ್ರಶ್ನೆಗಳಿವೆ. ಇದು ನಿಮ್ಮನ್ನು ನೀವೇ ಕೇಳಿಕೊಳ್ಳಬೇಕಾದ ಪ್ರಶ್ನೆಗಳು.

ನೀವು ನಿಮ್ಮೂರಿಗೆ ಕೊನೆಯ ಬಾರಿ ಹೋಗಿದ್ದು ಯಾವಾಗ? ಯಾಕಾಗಿ ಹೋಗಿದ್ರಿ? ನಿಮ್ಮ ಅಣ್ಣನ ಮಗಳ ಮದುವೆ ಕಾರ್ಯಕ್ರಮ ಇದ್ದಿರಬೇಕು ಅಥವಾ ಇನ್ಯಾವುದೋ ನಿಮ್ಮ ಹಾಜರಿಯನ್ನು ಬೇಡುವ ವ್ಯವಹಾರವಿದ್ದಿರಬೇಕು ಅಲ್ವಾ? ಪ್ರೈಮರಿ ಶಾಲೆಯಲ್ಲಿ ನಿಮ್ಮ ಜೊತೆ ಓದಿದ ಗೆಳೆಯರ ಹೆಸರುಗಳು ನಿಮಗೆ ನೆನಪಿದ್ಯಾ? ಅವರಲ್ಲಿ ಯಾರ ಜೊತೆಗಾದರೂ ಸಂಪರ್ಕದಲ್ಲಿದ್ದೀರಾ? ಬಾಲ್ಯದಲ್ಲಿ ನಿಮಗೆ ಬಹಳ ಪ್ರಿಯವಾಗಿದ್ದ ಒಂದು ಜಾಗಕ್ಕೆ ನೀವು ಯಾವತ್ತಾದರೂ ಮರುಭೇಟಿ ನೀಡಿದ್ದುಂಟಾ? ನಿಮಗೆ ಪಾಠ ಮಾಡಿದ ನಿಮ್ಮ ಮೆಚ್ಚಿನ ಮೇಷ್ಟ್ರು ಈಗ ಹೇಗಿದ್ದಾರೆ? ವಾರಕ್ಕೊಮ್ಮೆಯಾದರೂ ನಿಮ್ಮ ಅಮ್ಮನ ಜೊತೆ ಫೋನಲ್ಲಿ ಮಾತಾಡುತ್ತೀರಾ?
ಇವೆಲ್ಲ ಪ್ರಶ್ನೆಗಳಿಗೂ ನಿಮ್ಮ ಉತ್ತರ ಪಾಸಿಟಿವ್ ಆಗಿದ್ದರೆ ನೀವೊಬ್ಬ ಭಾವುಕ ಜೀವಿ ಎಂಬ ತೀರ್ಮಾನಕ್ಕೆ ಬರಬಹುದು. ಬೆಂಗಳೂರಲ್ಲಿದ್ದೂ ನೀವು ಮಾನಸಿಕವಾಗಿ ಭ್ರಷ್ಟರಾಗಿಲ್ಲ ಎಂದು ಮೆಚ್ಚಿಕೊಳ್ಳಬಹುದು. ನಿಮ್ಮ ಉತ್ತರಗಳು ನೆಗೆಟಿವ್ ಆಗಿದ್ದರೆ ನೀವು ಬೆಂಗಳೂರಿಗೆ ಅಡಿಕ್ಟ್ ಆಗಿದ್ದೀರಿ ಮತ್ತು ಅದರಾಚೆಗೆ ಏನನ್ನೂ ಯೋಚಿಸುವ ಸ್ಥಿತಿಯಲ್ಲಿ ನೀವಿಲ್ಲ ಅಂದುಕೊಳ್ಳಬಹುದು. ಅದು ಅಸಹಜವೇನಲ್ಲ. ಇಲ್ಲೊಂದು ಒಳ್ಳೆ ನೌಕರಿಯಿದೆ, ಕೈತುಂಬಾ ಸಂಬಳ ಬರುತ್ತದೆ, ಕೈತುಂಬಾ ಕೆಲಸವೂ ಇರುತ್ತದೆ. ಹಾಗಾಗಿ ಮಿಕ್ಕ ವಿಷಯಗಳ ಬಗ್ಗೆ ಯೋಚಿಸುವುದಕ್ಕೆ ನಿಮಗೆ ಪುರುಸೊತ್ತಿರುವುದಿಲ್ಲ. ಯಾಂತ್ರಿಕ ಬದುಕಿನಿಂದ ರಿಲೀಫ್ ಸಿಗಬೇಕಾದರೆ ಇಲ್ಲೇ ಕ್ಲಬ್ಬುಗಳುಂಟು, ರೆಸಾರ್ಟುಗಳುಂಟು. ವೀಕೆಂಡ್ ಪಾರ್ಟಿ ಮಾಡಬಹುದು, ಮನಸ್ಸನ್ನು ಆಗಾಗ ರಿಫ್ರೆಶ್ ಮಾಡಿಕೊಳ್ಳಬಹುದು. ಸ್ಪೋರ್ಟ್ಸ್, ರಾಜಕೀಯ, ಸಿನೆಮಾಗಳ ಬಗ್ಗೆ ಮಾತಾಡುವುದಕ್ಕೆ ನಿಮ್ಮ ವೇವ್ ಲೆಂಗ್ತಿಗೆ ಹೊಂದಿಕೊಳ್ಳುವ ಗೆಳೆಯರಿದ್ದಾರೆ. ಇಷ್ಟೆಲ್ಲಾ ಅನುಕೂಲಗಳು ಕಾಲಬುಡದಲ್ಲಿ ಬಿದ್ದಿರುವಾಗ ಊರಿನ ನೆನಪಾಗುವುದಾದರೂ ಹೇಗೆ?

ನೀವು ಬೆಂಗಳೂರಿಗೆ ಬಂದ ಆರಂಭದ ದಿನಗಳು ಹೀಗಿದ್ದವಾ? ಬಹುಶಃ ಇದ್ದಿರಲಾರದು. ನೌಕರಿಗೋಸ್ಕರ ಬೀದಿಬೀದಿ ಅಲೆದಾಡಿರುತ್ತೀರಿ, ನಿಮ್ಮ ಯೋಗ್ಯತೆಗೆ ಮನ್ನಣೆ ಸಿಗದಿದ್ದಾಗ ಹತಾಶರಾಗಿರುತ್ತೀರಿ, ಹೀಗೆ ಪ್ರತಿ ಸಾರಿ ಸೋತಾಗಲೂ ಊರು ನೆನಪಾಗುತ್ತಿತ್ತು. ಈ ಸಿಟಿ ನನಗಲ್ಲ, ನನಗೇನಿದ್ದರೂ ನನ್ನೂರೇ ಸರಿ ಎಂದು ವಾಪಸ್ ಹೋದವರುಂಟು. ಸೋತು ಬಂದವರನ್ನು ಯಾವ ಊರು ಕೂಡಾ ಸ್ವಾಗತಿಸುವುದಿಲ್ಲ. ಹಾಗಾಗಿ ಮರಳಿ ಬೆಂಗಳೂರಿಗೆ ಬರುತ್ತೀರಿ, ಮತ್ತೊಮ್ಮೆ ನಿಮ್ಮ ಅದೃಷ್ಟ ಪರೀಕ್ಷೆ ನಡೆಯುತ್ತದೆ. ಕೊನೆಗೆಲ್ಲೋ ಅವಕಾಶದ ಬಾಗಿಲು ತೆರೆಯುತ್ತದೆ. ಅದನ್ನು ನಿಮ್ಮ ಪರಿಶ್ರಮಕ್ಕೆ ಸಿಕ್ಕಿದ ಬೆಲೆ ಎಂದು ಭಾವಿಸುತ್ತಾ ಹಿಗ್ಗುತ್ತೀರಿ. ಇಷ್ಟೇ ಪರಿಶ್ರಮವನ್ನು ನಿಮ್ಮ ತೋಟದಲ್ಲೋ, ಗದ್ದೆಯಲ್ಲೋ ಬಂಡವಾಳವಾಗಿ ಹಾಕಿದ್ದರೆ ಅಲ್ಲೂ ಗೆಲ್ಲುವ ಸಾಧ್ಯತೆ ಇರಲಿಲ್ಲವಾ? ಊಹೂಂ, ಓದಿದವರು ಹಳ್ಳಿಯಲ್ಲಿ ಇರುವ ಹಾಗಿಲ್ಲ ಅನ್ನುವ ನಿಯಮ ಜಾರಿಯಲ್ಲಿದೆ.

ಬದುಕಿಗೊಂದು ದಾರಿ ಸಿಕ್ಕಮೇಲೆ ನಿಮಗೆ ಊರಿನ ನೆನಪು ಕಡಿಮೆಯಾಗುತ್ತದೆ, ತಿಂಗಳಿಗೊಮ್ಮೆ ಊರಿಗೆ ಧಾವಿಸುತ್ತಿದ್ದವರು ಈಗ ವರ್ಷ ಕಳೆದರೂ ಏನೋ ನೆಪ ಹೇಳಿ ಇಲ್ಲೇ ಉಳಿಯುತ್ತೀರಿ. ಸೋತವನಿಗೆ ಬೇರಿನ ಸೆಳೆತ, ಗೆದ್ದವನಿಗೆ ಇಲ್ಲೇ ಬೇರೂರುವ ತವಕ. ಊರಲ್ಲೇ ಐದೆಕರೆ ಜಾಗವಿದ್ದರೂ ಬೆಂಗಳೂರಲ್ಲೇ ಒಂದು ಸೈಟ್ ಖರೀದಿಸಬೇಕು. ಇಲ್ಲೇ ಮನೆ ಕಟ್ಟಬೇಕು. ಮಕ್ಕಳನ್ನು ಇಲ್ಲೇ ಓದಿಸಬೇಕು. ಬೆಂಗಳೂರಿನ ಪ್ರಜೆಯೆಂಬ ಗ್ರೀನ್ ಕಾರ್ಡ್ ಗಿಟ್ಟಿಸಿಕೊಳ್ಳಬೇಕು. ಇಷ್ಟೆಲ್ಲಾ ಆದಮೇಲೂ ನಮ್ಮ ಬಾಯಿ ಸುಮ್ಮನಿರುವುದಿಲ್ಲ. ದಿನಬೆಳಗಾದರೆ ಬೆಂಗಳೂರನ್ನು ಬೈಯ್ಯುತ್ತಾ ಇರಬೇಕು. ರಸ್ತೆ ಸರಿಯಿಲ್ಲ, ಜನ ಸರಿಯಿಲ್ಲ, ಬಾಸ್ ಸರಿಯಿಲ್ಲ. ಇಲ್ಲಿ ಯಾವುದೂ ಸರಿಯಿಲ್ಲ. ಆದರೂ ಇಲ್ಲಿ ಭದ್ರವಾಗಿ ಠಿಕಾಣಿ ಹೂಡಿದ್ದೀರಿ ಯಾಕೆ? ಇಂಥಾ ಅನುಕೂಲಗಳು ನಿಮ್ಮ ಊರಲ್ಲಿ ಸಿಗೋದಿಲ್ಲ. ಮಧ್ಯರಾತ್ರಿ ಕರೆಂಟು ಹೋಗುತ್ತದೆ. ಮುಸ್ಸಂಜೆಗಳು ಮಹಾ ಬೋರು. ರಂಜನೆಯಿಲ್ಲ. ಕಂಪ್ಯೂಟರ್ ಇದ್ದರೂ ನೆಟ್‌ವರ್ಕ್ ಸಿಗುವುದಿಲ್ಲ. ಹಳೆಯ ಗೆಳೆಯರನ್ನು ಈಗ ಸಹಿಸಿಕೊಳ್ಳುವುದು ಕಷ್ಟ. ಹಾಗಿದ್ದರೂ ಬೆಂಗಳೂರನ್ನು ದೂರುವಾಗಲೆಲ್ಲಾ ನಿಮಗೆ ನಿಮ್ಮೂರು ನೆನಪಾಗುತ್ತದೆ. ನಿಮ್ಮ ಬಾಲ್ಯದ ಸಾಹಸಗಳನ್ನು ಇಲ್ಲಿಯ ಗೆಳೆಯರ ಮುಂದೆ ಕೊಚ್ಚಿಕೊಳ್ಳುತ್ತೀರಿ. ನಿಮ್ಮ ಮನೆ ಪಕ್ಕದ ಗುಡ್ಡದಿಂದ ಜಿಗಿಯುವ ಜಲಧಾರೆಯ ಮುಂದೆ ಜೋಗ್ ಜಲಪಾತ ಏನೂ ಅಲ್ಲ. ನಮ್ಮೂರ ಮಳೆ ನೋಡಬೇಕು. ಹಿಡೀತು ಅಂದರೆ ಎರಡು ದಿನ ಬಿಡೋದೇ ಇಲ್ಲ ಗೊತ್ತಾ ಅನ್ನುತ್ತೀರಿ. ನೀವು ಆ ಮಳೆ ನೋಡಿ ಹದಿನೈದು ವರ್ಷವೇ ಆಯಿತು. ಮಳೆ ನೋಡುವುದಕ್ಕಾದರೂ ಒಮ್ಮೆ ಊರಿಗೆ ಹೋಗಬೇಕು ಮಾರಾಯಾ ಅನ್ನುವ ಪ್ರತಿಜ್ಞೆ ಪ್ರತಿ ವರ್ಷವೂ ನವೀಕರಣಗೊಳ್ಳುತ್ತಲೇ ಇರುತ್ತದೆ. ಈ ಬಾರಿ ಒಂದು ವಾರ ಊರಲ್ಲಿದ್ದು ಬರುತ್ತೇನೆ, ಗುಡ್ಡ, ತೋಟ, ಕೆರೆ, ದೇವಸ್ಥಾನ ಎಲ್ಲಾ ಸುತ್ತಾಡಬೇಕು, ಹಳೇ ಫ್ರೆಂಡ್ಸನ್ನು ಭೇಟಿಯಾಗಬೇಕು ಎಂದೆಲ್ಲಾ ಹೇಳಿ ಊರಿಗೆ ಹೋದವರು ಎರಡೇ ದಿನಕ್ಕೆ ವಾಪಸ್ ಬೆಂಗಳೂರಲ್ಲಿರುತ್ತಾರೆ.
ಹೀಗೆಲ್ಲಾ ಯಾಕಾಗುತ್ತದೆ? ನಿಮ್ಮ ಬದುಕೀಗ ಬದಲಾಗಿದೆ, ನೀವು ಬದುಕನ್ನು ನೋಡುವ ದೃಷ್ಟಿಯೂ ಬದಲಾಗಿದೆ, ನಿಮ್ಮ ತನುಮನವನ್ನು ಸಂತೈಸಬಲ್ಲ ನೂರಾರು ಅನುಕೂಲಗಳು ಕಣ್ಣ ಮುಂದೆ ಹರಡಿಕೊಂಡಿವೆ. ಇವೆಲ್ಲವೂ ಕಿಕ್ ಥರ ಕೆಲಸ ಮಾಡುತ್ತವೆ. ಆಫೀಸಲ್ಲಿ ಟಾರ್ಗೆಟ್ ರೀಚ್ ಆದಾಗ ಒಂದು ಕಿಕ್, ಬಿಜಿನೆಸ್ಸಲ್ಲಿ ಪ್ರತಿಸ್ಪರ್ಧಿಯನ್ನು ಹಣಿದಾಗ ಒಂದು ಕಿಕ್, ಫೇಸ್‌ಬುಕ್ಕಲ್ಲಿ ಯಾರಿಗೋ ಮುಖಭಂಗ ಮಾಡಿದಾಗಲೂ ಒಂದು ಕಿಕ್, ಪ್ರಮೋಷನ್ ಸಿಕ್ಕಾಗ, ಬೋನಸ್ ಬಂದಾಗ, ಹೊಸ ಕಾರು ಖರೀದಿಸಿದಾಗ, ಹೀಗೆ ನಮ್ಮನ್ನು ಒಂದು ಕೃತಕ ಮತ್ತಲ್ಲಿ ತೇಲಾಡುವಂತೆ ಮಾಡುವ ಕಿಕ್ಕುಗಳು ಸಾವಿರಾರಿವೆ. ಇವೆಲ್ಲದಕ್ಕೂ ನಾವು ಅಡಿಕ್ಟ್ ಆಗಿದ್ದೇವೆ. ಇದರ ಜೊತೆಗೆ ಕೆಲವು ಹುಂಬ ಧೈರ್ಯಗಳನ್ನು ನಗರ ಬದುಕು ದಯಪಾಲಿಸಿದೆ. ಕುಡಿತ, ಜೂಜು ಅಥವಾ ಇನ್ಯಾವುದೋ ಪುಟ್ಟ ವಂಚನೆ, ಇವೆಲ್ಲವನ್ನೂ ರಾಜಾರೋಷವಾಗಿ ಮಾಡಬಹುದು. ಊರಲ್ಲಿದ್ದರೆ ಇವೆಲ್ಲ ಸಾಧ್ಯವಾಗುತ್ತಿರಲಿಲ್ಲ.

ಹಾಗಿದ್ದೂ ಊರು ತೊರೆದು ಬಂದವರನ್ನೆಲ್ಲಾ ಒಂದು ವಿಚಿತ್ರ ಪಾಪಪ್ರಜ್ಞೆ ಕಾಡುತ್ತಾ ಇರುತ್ತದೆ. ಅದನ್ನು ಮೀರುವುದಕ್ಕೋಸ್ಕರ ಆಗಾಗ ಈ ದರಿದ್ರ ಬೆಂಗಳೂರಿಗಿಂತ ನಮ್ಮೂರೇ ಎಷ್ಟೋ ವಾಸಿಯಿತ್ತು ಅನ್ನುತ್ತಾರೆ. ಬಾಲ್ಯದ ಗೆಳೆಯನ ಸ್ಮರಣೆ ಮಾಡುತ್ತಾರೆ. ಆದರೆ ಆ ಗೆಳೆಯ ಬೆಂಗಳೂರಿಗೆ ಬಂದರೆ ಆತಂಕಕ್ಕೆ ಒಳಗಾಗುತ್ತಾರೆ. ಅವನನ್ನು ಮನೆಗೆ ಕರೆಯುವುದಿಲ್ಲ, ಎಲ್ಲಿ ಸಾಲ ಕೇಳುತ್ತಾನೋ ಎಂದು ತಲೆ ತಪ್ಪಿಸಿಕೊಂಡು ಓಡಾಡುವುದೂ ಉಂಟು. ಊರಿನ ಗೆಳೆಯ ಊರಲ್ಲಿದ್ದರೇ ಚೆಂದ, ತಾನೇ ಅವನನ್ನು ಅಲ್ಲಿ ಹೋಗಿ ಭೇಟಿಯಾಗಬೇಕು, ತನ್ನ ಸಾಧನೆಯ ಕತೆಗಳನ್ನು ಹೇಳಿ ಅವನ ಮೆಚ್ಚುಗೆ ಸಂಪಾದಿಸಬೇಕು ಎಂಬ ವಿಚಿತ್ರ ಕಾಂಪ್ಲೆಕ್ಸ್.

ಇಂಥಾ ಆತ್ಮವಂಚಕರಿಂದಲೇ ಬೆಂಗಳೂರು ಇಷ್ಟೊಂದು ಹದಗೆಟ್ಟಿದೆಯಾ ಅನ್ನುವ ಅನುಮಾನ ನನ್ನದು. ಬೆಂಗಳೂರಲ್ಲೇ ಹುಟ್ಟಿ ಬೆಳೆದು ಈಗ ಸೀನಿಯರ್ ಸಿಟಿಜನ್ ಆಗಿರುವ ಪರಿಚಿತರೊಬ್ಬರು ಹೇಳುತ್ತಿದ್ದರು. ‘ಬೆಂಗಳೂರು ಈ ಸ್ಥಿತಿಗೆ ಬರುವುದಕ್ಕೆ ಕಾರಣ ಹೊರಗಿಂದ ಬಂದವರು. ಎಲ್ಲಿಂದಲೋ ಬಂದು ಇಲ್ಲಿ ಸಂಪಾದನೆ ಮಾಡುತ್ತಾರೆ. ನಮ್ಮ ನೆಲ, ನೀರು, ಸವಲತ್ತುಗಳನ್ನು ಬಳಸಿಕೊಳ್ಳುತ್ತಾರೆ. ಆದರೆ ಇದು ನನ್ನೂರು ಅನ್ನುವ ಪ್ರೀತಿ ಅವರಲ್ಲಿ ಹುಟ್ಟುವುದೇ ಇಲ್ಲ. ಹಾಗಾಗಿ ಈ ಊರನ್ನು ಶುದ್ಧವಾಗಿಟ್ಟುಕೊಳ್ಳುವುದಕ್ಕೆ ಅವರು ಪ್ರಯತ್ನಿಸುವುದೇ ಇಲ್ಲ. ಮೊಘಲರು, ಬ್ರಿಟಿಷರು ಬಂದು ನಮ್ಮ ದೇಶವನ್ನು ಲೂಟಿ ಮಾಡಿದ್ದಕ್ಕೂ ಇದಕ್ಕೂ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ. ಆದರೆ ಈ ಮಂದಿ ಮಾಡುತ್ತಿರುವುದು ಅತ್ಯಾಚಾರ.’
ಇದರಲ್ಲಿ ನಮ್ಮ ಪಾಲು ಇದೆಯಾ? ಗೊತ್ತಿಲ್ಲ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 22 July, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books