Ravi Belagere
Welcome to my website
ನಿಮಗೂ ಯಾವಾಗಲೋ ಕಾಲು ಮುರಿದಿರಬಹುದು. ಬಚ್ಚಲಲ್ಲಿ ಕಾಲು ಜಾರಿದ್ದಿರಬಹುದು. ನಡೆಯುತ್ತ ನಡೆಯುತ್ತ ನಿಮ್ಮ ಕಾಲು ಉಳುಕಿರಬಹುದು. ಸ್ವಲ್ಪ ದಿನ ನೀವು ಉಳುಕು ಅಂದುಕೊಂಡಿರುತ್ತೀರಿ: ಡಾಕ್ಟರ್ ಬಳಿಗೆ ಹೋಗಿ ಎಕ್ಸ್‌ರೇ ತೆಗೆಸಿದಾಗ ಅದು hair line fracture. ಆಯ್ತಲ್ಲ? ಮುದ್ದಾಗಿ ಬ್ಯಾಂಡೇಜ್ ಹಾಕಿ ಆರೇ ಆರು ವಾರ ಅದನ್ನು ಹಾಕ್ಕೊಂಡಿರಿ ಅನ್ನುತ್ತಾರೆ. ಅದೊಂಥರಾ ಸಿಮೆಂಟ್‌ನ ಕಟ್ಟೆ ಕಟ್ಟಿದಂತೆಯೇ! ವಿಪರೀತ ಭಾರ. ನಡೆಯುವುದು ಯಮಹಿಂಸೆ. ನಿಮಗೆ ಯಾವತ್ತಾದರೂ ಕೈ ಕಾಲು ಮುರಿದಿದ್ದವಾ? ಯಾಕೆ? Plaster ಸುಖ ಅನುಭವಿಸಿದಿರಾ? ಎಷ್ಟು ದಿನ? ಹೋಗಲಿ ಸಮಸ್ಯೆ ಪೂರ್ಣವಾಗಿ ವಾಸಿಯಾಗಿ ಬಗೆಹರಿಯಿತಾ? ನಿಮ್ಮ ಆಗಿನ ಅನುಭವವನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಯಾವ ಗೋರಿಯ ಆಳದಲ್ಲಿ ಯಾವ ಡ್ರೈವರನ ಆತ್ಮ ಮಗ್ಗಲು ಬದಲಿಸಿತೋ?

“ಸಾರ್ ನಿದ್ದೆ ಬರ‍್ತಿಲ್ಲವಾ?" ಅಂದ.
“ಬರುತ್ತೆ, ನೀನು ಮಲಗು" ಅಂದೆ.

“ಅಲ್ಲಾ, ರೂಮ್‌ನಲ್ಲಿ ಇಬ್ರೇ ಇದೀವಿ. ನಾನಿದೀನಿ ಅನ್ನೋ ಕಾರಣಕ್ಕೆ ಹೆದ್ರಿಕೆಯಾಗಿ ನಿಮಗೆ ನಿದ್ರೆ ಬರ‍್ತಿಲ್ಲವಾ ಅಂದೆ..." ಅವನ ದನಿಯಲ್ಲಿ ಸಣ್ಣ ವ್ಯಂಗ್ಯವಿತ್ತು. Stupid fellow.
“ಏಯ್ ತಮ್ಮಾ, ಜಗತ್ತಿನಲ್ಲಿ ಇರೋರ್‌ನೆಲ್ಲಾ ಕೊಂದು ಹಾಕೋಕೆ ನಿನಗೆ ಕಾಂಟ್ರಾಕ್ಟ್ ಕೊಟ್ಟಿದಾನೆ ದೇವರು ಅಂದುಕೊಂಡ್ಯಾ? ತೆಪ್ಪಗೆ ಮಲಗು. ಸರಿಯಾಗಿ ಪ್ರಿಪೇರ್ ಆಗದೆ ನಾನು ಮನೆಯಿಂದ ಹೊರಡೋದಿಲ್ಲ. ನನಗಿಂತ ಚಿಕ್ಕೋನು ನೀನು. ಯಾರಿಗ್ಗೊತ್ತು? ನಿನ್ನ ಸಾವು ನನ್ನ ಕೈಲೇ ಆಗುತ್ತೋ ಏನೋ? ಇಲ್ಲದ್ದು ಮಾಡೋಕೆ ಹೋದ್ರೆ, ನಾನೇ ಕಳಿಸಿಬಿಡ್ತೀನಿ ಮೇಲಕ್ಕೆ!" ಅಂದೆ. ಅವನು ಹಂತಕ ರವೀಂದ್ರ ಪ್ರಸಾದ್.

ನೆನಪಿದೆ: ಹಾಗಂದಾಗ ನನ್ನ ದನಿ harsh ಆಗಿರಲಿಲ್ಲ. ನನಗೆ ಪಾತಕಿಗಳನ್ನು ಹೇಗೆ approach ಮಾಡಬೇಕು, ಹೇಗೆ ಮಾತಾಡಿಸಬೇಕು...ಎಲ್ಲ ಗೊತ್ತಿವೆ. ಅಲ್ಲಿ ಹೆದರಿಕೆಗೆ ಜಾಗವಿಲ್ಲ. ಹಾಗಂತ ಹುಂಬತನ ತೋರಿಸೋಕೆ ಹೋದರೆ, ಏಟು! ನಾನು ಮೈಸೂರಿಗೆ ನನ್ನದೇ ಕಾರಿನಲ್ಲಿ ಹೋಗಿದ್ದೆ. ಆಗಿನ್ನೂ ನನ್ನ ಬಳಿ ಮಾರುತಿ 800 ಇತ್ತಾ ಅಂತ. ಅಲ್ಲೇ ಮೈಸೂರಿನ ಬಸ್‌ಸ್ಟ್ಯಾಂಡ್ ಎದುರಿಗೇನೇ ಹೊಟೇಲೊಂದರಲ್ಲಿ ರೂಮು ಮಾಡಿದ್ದೆ. ನಂಬರ್ 393. ಚಿಕ್ಕ ಹೊಟೇಲ್ ಅದು. ಎರಡು ಮಂಚಗಳಿದ್ದ ರೂಮು ಅದು. ಇಳಿ ಮಧ್ಯಾಹ್ನದ ಹೊತ್ತಿಗೆ ಇವನು ಭೇಟಿಯಾಗಿದ್ದ: ರವೀಂದ್ರ ಪ್ರಸಾದ್. ಅವನು ಆರು ಹತ್ಯೆಗಳನ್ನು ಮಾಡಿ, ಒಂದು ಜೀವಾವಧಿ ಶಿಕ್ಷೆ ಪೂರ್ತಿ ಅನುಭವಿಸಿ ಜೈಲಿನಿಂದ ಹೊರಬಿದ್ದಿದ್ದ. ಒಬ್ಬ ಕ್ರಿಮಿನಲ್‌ಗೆ ಇರಬೇಕಾದ ಶ್ಯಾಣ್ಯಾತನಗಳು ಖಂಡಿತ ಅವನಲ್ಲಿದ್ದವು. ಕೊಂಚ ಮಟ್ಟಗಿನ ಧೈರ್ಯವೂ ಇತ್ತು. ಆದರೆ ಆಳ್ತನ ಅಷ್ಟಕ್ಕಷ್ಟೆ. ತುಂಬ ಬಲಿಷ್ಠನೇನಲ್ಲ. ಅವನು ಮಾಡಿದ ಕೊಲೆಗಳಾದರೂ ಎಂಥವು? ಮೊದಲ ಎರಡು-ಮೂರು ಹತ್ಯೆಗಳನ್ನು ಅವನು ಏಕಾಂಗಿಯಾಗಿ ಮಾಡಿದ್ದು ಹೌದು.

ಅವುಗಳನ್ನೇನು ಅವನು ಘನವಾದ ಶಕ್ತಿ-ತಾಕತ್ತು ಬಳಸಿ ಮಾಡಿರಲಿಲ್ಲ. ಕೊಲೆಯಾದವರಲ್ಲಿ ಇಬ್ಬರು ಟ್ಯಾಕ್ಸಿ ಡ್ರೈವರುಗಳು. ನಂತರ ಒಬ್ಬ ಸರಕಾರಿ ನೌಕರಸ್ಥಳಾದ ಹೆಂಗಸು. ಕಾರಿನಲ್ಲಿ ಡ್ರೈವರ್ ತನ್ನ ಮುಂದಿನ ರಸ್ತೆ ನೋಡುತ್ತಾ ಕಾರು ಓಡಿಸುತ್ತಿರುತ್ತಾನೆ. ಒಂದು ಮೊಳಕೈ ಉದ್ದದ ಕೇಬಲ್ ವೈರ್ ಸಾಕು. ಹಿಂದಿನ ಸೀಟಿನಲ್ಲಿ ಕುಳಿತವನು ಅದನ್ನ ಅನಾಯಾಸವಾಗಿ ಡ್ರೈವರ್ ಕೊರಳಿಗೆ ಹಾಕಿ, ಬಲವನ್ನೆಲ್ಲ ಹಾಕಿ, ವೈರ್ ಬಿಗಿದು ಜೀರಿ ಕೊಂದು ಬಿಡಬಹುದು. ಆದರೆ ಸಾಯೋ ಮನುಷ್ಯ ಸುಮ್ಮನೆ ಏನೂ ಸಾಯುವುದಿಲ್ಲ. ಏನೇ ನಿಸ್ಸಹಾಯಕ ಅಂದರೂ, ಅವನು struggle ಮಾಡುತ್ತಾನೆ. ವಿಲಗುಟ್ಟುತ್ತಾನೆ. ಕೊಸರಲು ಯತ್ನಿಸುತ್ತಾನೆ. ಅಷ್ಟೂ ಹೊತ್ತಿನ ತನಕ ಈ ಹಂತಕ ವೈರ್‌ನ ಬಿಗಿ ಕಡಿಮೆಯಾಗದಂತೆ, ಕೊರಳ ಕುಣಿಕೆಯನ್ನು ಜೀರುತ್ತಲೇ ಇರಬೇಕು. ಒಂದು ಹುಂಬತನ ರವೀಂದ್ರ ಪ್ರಸಾದ್‌ನಲ್ಲಿ ಇದ್ದಿದ್ದು ನಿಜ. ಆದರೆ ವೈರ್‌ನಿಂದ ಜೀರಿ ಕೊಲ್ಲುವಂಥ ಶಕ್ತಿ? ಖಂಡಿತ ಇರಲಿಲ್ಲ. ಅದು ಅವನಿಗೇ ಗೊತ್ತಿತ್ತು.
ಅದಕ್ಕೆಂದೇ ಅವನೊಂದು ಉಪಾಯ ಮಾಡಿಕೊಂಡಿದ್ದ. ಹೋಗುತ್ತಿದ್ದ ಕಾರನ್ನ ಕೊಂಚ ನಿಲ್ಲಿಸಲು ಹೇಳಿ, ಡ್ರೈವರ್ ತನ್ನ ವೇಗ ಕಡಿಮೆ ಮಾಡುತ್ತಿದ್ದಂತೆಯೇ ಹಿಂದಿನ ಸೀಟಿನಿಂದ ಕೊಂಚ ಬೆನ್ನು ಎಬ್ಬಿಸಿ ತನ್ನ ಚೂರಿಯಿಂದ ಡ್ರೈವರ್‌ನ ನೆತ್ತಿಗೆ ಬಲವಾಗಿ ಚುಚ್ಚಿ ಬಿಡುತ್ತಿದ್ದ. ನೆತ್ತಿಯ ಮಧ್ಯ ಭಾಗದಲ್ಲಿ ಚೂರಿ ಇಳಿದರೆ ಸಾವು ಖಚಿತ. ಡ್ರೈವರ್ ಆ ಕ್ಷಣದಲ್ಲೇ ಸಾಯುತ್ತಾನೆ. Instant death. ಆದರೆ ನಾನು ನೂರಾರು ಪಾತಕಿಗಳನ್ನು ಮಾತಾಡಿಸಿದ್ದೇನೆ. ‘ತಲೆ’ ಅಂತ ಅಂದ ಕೂಡಲೆ rodನಿಂದ ಬಡಿದು ಕೊಲ್ಲೋದು, ತಲೆಗೆ ಗುಂಡಿಕ್ಕೋದು...ಇತ್ಯಾದಿಗಳನ್ನು ಮಾಡುತ್ತಾನೆ. ‘ಕುತ್ತಿಗೆ’ ಅಂದ ಕೂಡಲೆ ಅದನ್ನ ಹಿಸುಕೋದು, ವೈರ್ ಸುತ್ತಿ ಸಾಯಿಸೋದು! ಹೊಟ್ಟೆ ಅಂದ ಕೂಡಲೆ ಇರಿಯೋದು! ಅಲ್ಲವೇ? ಒಬ್ಬ ರವೀಂದ್ರ ಪ್ರಸಾದ್ ಮಾತ್ರ ನೆತ್ತಿಗೆ ಚುಚ್ಚುತ್ತಿದ್ದೆ ಅಂದಿದ್ದ. Funny guy.

ಅವನು ಮೈಸೂರಿನಿಂದ ಬೆಂಗಳೂರಿಗೆ ಬಂದು ಎದುರಿಗೆ ಕುಳಿತು ಮೊದಲ ಎರಡು ಹತ್ಯೆಗಳ ವಿವರ ನೀಡಿದ್ದ. ಎರಡು ಎಪಿಸೋಡ್ ಬರೆದಿದ್ದೆ: ಅವು ಪ್ರಕಟವೂ ಆಗಿದ್ದವು. ಮೂರನೆಯದಕ್ಕಾಗಲೇ ಅವನು ನಸನಸೆ ಮಾಡಲಾರಂಭಿಸಿದ್ದ. ಅಕಸ್ಮಾತ್ ಅವನು ಕೈಗೆ ಸಿಗದಿದ್ದರೆ, ಧಾರಾವಾಹಿ ನಿಲ್ಲುತ್ತೆ. ಓದುಗರು ಶಪಿಸುತ್ತಾರೆ. ಹಾಗಂದುಕೊಂಡೇ ಖುದ್ದಾಗಿ ಮೈಸೂರಿಗೆ ಹೋದೆ. ನನ್ನಲ್ಲಿ ಲೈಸೆನ್ಸ್ ಇತ್ತೋ-ಇಲ್ಲವೋ ನೆನಪಿಲ್ಲ. ಕಿಸೆಯಲ್ಲಿ ಪಿಸ್ತಲ್ ಮಾತ್ರ ಖಂಡಿತ ಇತ್ತು. ಅವನನ್ನು ಹಿಡಿದು ಕೂಡಿಸಿಕೊಂಡು ಮುಂದಿನ ಕಥನ ಹೇಳಿಸಲಾರಂಭಿಸಿದ್ದೆ. ರಾತ್ರಿ ಹನ್ನೆರಡರ ಹೊತ್ತಿಗೆ ಮುಗಿಯಬಹುದೆಂದು ಕೊಂಡಿದ್ದೆ. ಅದು ಬೆಳಗಿನ ಜಾವಕ್ಕೆ ತಿರುಗಿತ್ತು. ನಾನು ಇವತ್ತಿನ ತನಕ ಎಷ್ಟೆಲ್ಲ Interviewಗಳನ್ನು ಮಾಡಿದ್ದೇನಲ್ಲ? ಒಂದೇ ಒಂದನ್ನೂ ರೆಕಾರ್ಡ್ ಮಾಡಿಲ್ಲ. ಕೆಲವನ್ನು ಅವರೆದುರೇ ಕುಳಿತು ನನ್ನದೇ ರೀತಿಯಲ್ಲಿ, ಹತ್ತಾರು Codes ಬಳಸಿ ಬರೆದು ಕೊಂಡಿದ್ದೇನೆ. ರೆಕಾರ್ಡರ್ ಹೊರಕ್ಕೆ ತೆಗೆದ ತಕ್ಷಣ ಕೆಲವರು ಕಾಷಿಯಸ್ ಆಗಿಬಿಡುತ್ತಾರೆ; ಅದರಲ್ಲೂ ಪಾತಕಿಗಳು. ಮುಂದೆ ಕೋರ್ಟ್‌ನಲ್ಲಿ ಅದು ತಮ್ಮ ವಿರುದ್ಧ ಸಾಕ್ಷ್ಯವಾಗಿ ಬಿಟ್ಟರೆ...ಎಂಬ ಭೀತಿ. ಆದರೆ ರವೀಂದ್ರ ಪ್ರಸಾದ್ ಆಗಲೇ ಜೀವಾವಧಿ ಶಿಕ್ಷೆ ಅನುಭವಿಸಿ ಹೊರಬಿದ್ದಿದ್ದವನು. ನಿಮಗೆ ಗೊತ್ತಿರಲಿ: ಒಮ್ಮೆ ಒಂದು ಅಪರಾಧದ ವಿಚಾರಣೆ ನಡೆದ ಮೇಲೆ ಅದೇ ಅಪರಾಧಕ್ಕೆ ಸಂಬಂಧಿಸಿ ಇನ್ನೊಂದು ವಿಚಾರಣೆ ನಡೆಯುವಂತಿಲ್ಲ. ಒಮ್ಮೆ ಶಿಕ್ಷೆ ಅನುಭವಿಸಿ ಹೊರಬಿದ್ದವನನ್ನು ಅದೇ ಪಾತಕಕ್ಕೆ ಸಂಬಂಧಿಸಿದಂತೆ ಮತ್ತೆ ಶಿಕ್ಷೆಗೆ ಒಳಪಡಿಸುವಂತಿಲ್ಲ. ಹಾಗಂತ ಕಾನೂನು ಹೇಳುತ್ತದೆ.
ಇದನ್ನು ಯಾರೂ ಕೂಡ ರವೀಂದ್ರ ಪ್ರಸಾದ್‌ಗೆ ಹೇಳಿಕೊಡಬೇಕಿರಲಿಲ್ಲ. ಏಕೆಂದರೆ ಅವನಾಗಲೇ, ಜೈಲಿನಲ್ಲಿ ಕುಳಿತು ಪರೀಕ್ಷೆ ಬರೆದಿದ್ದ. ಬಿಡುಗಡೆಯಾಗುವ ಹೊತ್ತಿಗಾಗಲೇ ಅವನು ಅಡ್ವೊಕೇಟ್! ಅದು ಗೊತ್ತಿದ್ದೇ ಅವನು ನನ್ನ ಬಳಿಗೆ ಬಂದಿದ್ದ. ನನ್ನ ನೆನಪು ಸರಿಯಾಗಿರೋದೇ ಆದರೆ, ಅವನು ತಾನೇ ಮಾಡಿದ ಹತ್ಯೆಯೊಂದಕ್ಕೆ ಸಂಬಂಧಿಸಿದಂತೆ ತಾನೇ ವಕೀಲನಾಗಿದ್ದ. ಉಳಿದ ಕೇಸುಗಳಲ್ಲಿ ತಿರುಳಿರಲಿಲ್ಲ. ಆದರೆ ನಂಜನಗೂಡಿನ ಸರಸ್ವತಿ ಹತ್ಯೆ ಕೇಸಿನಲ್ಲಿ ಜೀವಾವಧಿ ಶಿಕ್ಷೆಯಾಗಿತ್ತು. ನನ್ನಲ್ಲಿಗೆ ಬರೋ ಹೊತ್ತಿಗೆ ರವೀಂದ್ರ ಪ್ರಸಾದ್ ಇನ್ನೂ ವಕೀಲನಾಗಿರಲಿಲ್ಲ. ಆಗಿನ್ನೂ ಅವನು ಕೋರ್ಟ್ ಆವರಣದಲ್ಲಿ ಕುರ್ಚಿ-ಮೇಜು ಹಾಕಿಕೊಂಡು ಕಕ್ಷಿದಾರರಿಗೆ ಅವರ ಡಾಕ್ಯುಮೆಂಟ್‌ಗಳನ್ನು ಟೈಪು ಮಾಡಿ ಕೊಡುವವನೂ ಆಗಿರಲಿಲ್ಲ. He was nothing. ಅವನೊಬ್ಬ ಮಾಜಿ ಪಾತಕಿ, ಅಷ್ಟೆ. ಆರಂಭದಲ್ಲಿ ಅವನು ನನ್ನಲ್ಲಿ ಏನನ್ನೂ ಕೇಳುತ್ತಿರಲಿಲ್ಲ. ಅನಂತರ ಅವನೊಂದು ವರಸೆ ಆರಂಭಿಸಿದ್ದ. “ನನ್ನ ಅಣ್ಣ ಗೊತ್ತಲ್ಲ ಸರ್...ಅವರು ಮೈಸೂರಿನಲ್ಲೇ ವಕೀಲರಾಗಿ ಪ್ರಾಕ್ಟೀಸ್ ಮಾಡ್ತಾ ಇದಾರೆ. ಅವರು ಕೇಳಿದ್ದು ನಿಮ್ಮನ್ನ: ಒಂದು ಬಾಟಲ್ ವಿಸ್ಕಿ ಕಳಿಸಿ ಅಂತ. ನೀವು ಕೊಡಿಸಿದರೆ ತಗೊಂಡು ಹೋಗಿ ಕೊಡ್ತೀನಿ..." ಅನ್ನ ತೊಡಗಿದ.

ಅವನ ಅಣ್ಣನ ಬಗ್ಗೆ ಗೊತ್ತಿತ್ತು. ಆತ ವಕೀಲ: ಇವನು ಆತನೊಂದಿಗೇ ಅದೇ ಮನೆಯಲ್ಲಿ ಇರುತ್ತಿದ್ದ. ಅಚ್ಚರಿಯ ಸಂಗತಿಯೆಂದರೆ, ರವೀಂದ್ರ ಪ್ರಸಾದ್ ಮಾಡುತ್ತಿದ್ದ, ಮಾಡಿದ್ದ ಕೊಲೆಗಳ ಬಗ್ಗೆ ಅವನ ಅಣ್ಣನಿಗೆ ಗೊತ್ತಿತ್ತು. ಯಾವಾಗ ಇವನು ಐದೂ-ಆರು ಹತ್ಯೆಗಳನ್ನು ಮಾಡಿ, ಇನ್ನೂ ಅದೇ ಕಸುಬು ಮಾಡಿಕೊಳ್ಳುತ್ತಿದ್ದಾನೆ ಅನ್ನಿಸಿತೋ-ಇವನ ಅಣ್ಣ ಪೊಲೀಸರಿಗೆ ಸುಳಿವು ಕೊಟ್ಟು ಇವನನ್ನು ಹಾಕಿಕೊಟ್ಟುಬಿಟ್ಟ. ಮೊದಲೆಲ್ಲ ರವೀಂದ್ರ ಪ್ರಸಾದ್ ತನ್ನ ಅಣ್ಣನ ಬಗ್ಗೆ ಗೌರವದಿಂದಲೇ ಮಾಡನಾಡುತ್ತಿದ್ದ. ಆದರೆ ಬರ‍್ತಾ ಬರ‍್ತಾ ವರಸೆ ಬದಲಾಯಿತು. “ಸಾರ್, ನನ್ನ ಅಣ್ಣನಿಗೆ ಈಗಲೂ ನನ್ನ ಬಗ್ಗೆ ಭಯ ಇದೆ. ಹಳೇದನ್ನೆಲ್ಲ ಮನಸಲ್ಲಿಟ್ಟುಕೊಂಡು ನಾನೆಲ್ಲಾದರೂ ‘ಹಾಕಿ ಬಿಡ್ತೀನೇನೋ..’ ಅನ್ನೋ ಭಯ!" ಅಂದು ಬಿಟ್ಟ. ವಿಚಿತ್ರವೆಂದರೆ ರವೀಂದ್ರ ಪ್ರಸಾದ್‌ನ ಅಣ್ಣ ಕೆಲವರ್ಷಗಳ ಹಿಂದೆ ಹಠಾತ್ತನೆ ಸತ್ತ. ಹೇಗೆ ಸತ್ತನೋ? ನಾನು ಅದರ ತನಿಖೆಗೆ ಹೋಗಲಿಲ್ಲ. ಇವನೇ ಕೊಂದಿದ್ದರೆ ನನಗೆ ಆಶ್ಚರ್ಯವಿಲ್ಲ. ಸಾಮಾನ್ಯವಾಗಿ ನಾನು ಪಾತಕಿಗಳನ್ನು ಅನುಮಾನಿಸುವುದಿಲ್ಲ: ಅದರಲ್ಲೂ ರೌಡಿಗಳನ್ನ. ನನಗೆ ಅವರ ಗಮ್ಯ ಏನು ಅಂತ ಗೊತ್ತಾಗಿರುತ್ತದೆ. ಕೆಲವರೊಂದಿಗೆ ಇಡೀ ರಾತ್ರಿ ಕಳೆದಿದ್ದೇನೆ. ಯಾವ್ಯಾವುದೋ ಊರುಗಳಿಗೆ ಹೋಗಿದ್ದೇನೆ. ಪಕ್ಕದಲ್ಲಿ ಕೂಡಿಸಿಕೊಂಡು drive ಮಾಡಿದ್ದೇನೆ. ಆದರೆ ಮೊಟ್ಟ ಮೊದಲಿನಿಂದಲೂ ರವೀಂದ್ರಪ್ರಸಾದ್ ಬಗ್ಗೆ ಇವನೊಬ್ಬ ನಂಬಿಕಸ್ಥ ಅಂತ ನನಗೆ ಅನ್ನಿಸಲೇ ಇಲ್ಲ.
ಮುಂದೆ ಇವನ ಕಥಾನಕದ ಧಾರಾವಾಹಿ ಮುಗಿಯಿತು. ಅವನಿಗೆ ನಾನು ಕಿಲುಬು ಕಾಸೂ ಕೊಡಲಿಲ್ಲ. ಆದರೆ “ದುಡ್ಡು ಗಿಡ್ಡು ಕೇಳಲ್ಲ ಸರ್. ನನಗೆ ಒಂದ್ಸಲ ಶ್ರೀಧರ್‌ನ ಪರಿಚಯ ಮಾಡಿಕೊಟ್ಟು ಬಿಡಿ. ಹೇಗೋ ನಾಲ್ಕು ಕಾಸು ಮಾಡ್ಕೋತೀನಿ" ಅಂದ. ಸಾಮಾನ್ಯವಾಗಿ ನಾನು ಹಾಗೆ ಒಬ್ಬರಿಗೊಬ್ಬರನ್ನು ಪರಿಚಯ ಮಾಡಿಕೊಡುವುದಿಲ್ಲ. ಶ್ರೀಧರ್‌ಗೆ ನಾನು ಒಂದು ಮಾತು ಹೇಳಿದ್ದು ನಿಜ: “ಇವನು ನನ್ನ ರೆಫರೆನ್ಸ್ ಇಟ್ಕೊಂಡು ಬಂದರೂ ಬಂದ. ಖಂಡಿತ ನಂಬಬೇಡ. ಇವನು ಅರ್ಹನಲ್ಲ" ಅಂದಿದ್ದೆ. ಮುಂದೆ ಶ್ರೀಧರ್ ಪತ್ರಿಕೆಗೆ ಇವನು ಏಜೆನ್ಸಿ ಪಡೆದ. ಹಣ ಕೊಡಲು ಮನೆಗೇ ಹೋಗುತ್ತಿದ್ದ. ಆದರೆ ಅದೆಲ್ಲವೂ ಅವನ ಸ್ಕೆಚ್‌ನ ಒಂದು ಭಾಗ. ಅವನು ದುಬೈನಲ್ಲಿದ್ದ ಮುತ್ತಪ್ಪ ರೈ ಜೊತೆಗೆ ಫೋನ್‌ನಲ್ಲಿ ಮಾತಾಡಲಾರಂಭಿಸಿದ್ದ. ಅದೇ ನೆರವಿನೊಂದಿಗೆ ಏಜೆನ್ಸಿ ಪಡೆದಿದ್ದ. ಅದೊಮ್ಮೆ ಇವನು ಶ್ರೀಧರ್ ಮನೆಗೆ ಒಬ್ಬ ಹುಡುಗಿಯನ್ನ ಕರೆದುಕೊಂಡು ಹೋಗಿದ್ದ. ಮುತ್ತಪ್ಪ ರೈಗೆ ಅದು ಇಷ್ಟವಾಗಿರಲಿಲ್ಲ. ಆತ ಕಡೆಗೆ ಎರಿಕ್ ಡಿಸೋಜಾನನ್ನು ಬೆಂಗಳೂರಿಗೆ ಕಳಿಸಿದ್ದ. ಬಹುಶಃ ಎರಿಕ್ ಮುಂಬೈಯಲ್ಲಿದ್ದ. ಅವನಿಗೆ ಬೆಂಗಳೂರಿನ touch ಇರಲಿಲ್ಲ. ಮೂಲ ಮಾತ್ರ ಮಂಗಳೂರಿನದು. ಒಂದೆರಡು ಸಲ ರವೀಂದ್ರ ಪ್ರಸಾದ್ ಅವನನ್ನು ಶ್ರೀಧರ್ ಮನೆಗೂ ಕರೆದೊಯ್ದ. ಆದರೆ ಆಗ ಶ್ರೀಧರ್ ಮನೆಯಲ್ಲಿ ಇರಲಿಲ್ಲ. ಒಬ್ಬ ಕೈ ಸುಟ್ಟ ಹೆಂಗಸು ಇಬ್ಬರಿಗೂ tea ಮಾಡಿಕೊಟ್ಟಿದ್ದಳು. ಅದು ಪ್ರತಿಭಾ ನಂದಕುಮಾರ್. ಮುಂದೆ ಬೆಂಗಳೂರಿನಿಂದ ವಾಪಸು ಹೋದ ಎರಿಕ್ ಮಂಗಳೂರಿನಲ್ಲಿ ಒಂದೆರಡು ಪಾತಕಗಳನ್ನು ಮಾಡಿ, ಅದರಿಂದ ಮುತ್ತಪ್ಪ ರೈಗೇ ತಲೆನೋವಾಗಿ ಹೋದ. ತಾನೇ ಪಳಗಿಸಿಕೊಂಡಿದ್ದ ಹುಡುಗನ ಮೇಲೆ ಗುಂಡು ಹಾರಿಸಿ, ಅದು miss ಆಗಿ ಎರಿಕ್‌ನದೇ ಹಸ್ತಕ್ಕೆ ತಗುಲಿ ರಂಪ ರಾಮಾಯಣವಾಗಿತ್ತು. ಮುಂದೆ ಆ ಹುಡುಗನನ್ನು ಎರಿಕ್ ಕೊಂದು ಹಾಕಿದ.

ಅಂಥ ಎರಿಕ್ ಡಿಸೋಜಾ ಎಸಿಪಿ ಆಗಿದ್ದ ಜಿ.ಎ.ಬಾವಾ ಅವರ ಕೈಗೆ ಹಾಸನದ ಲಾಡ್ಜೊಂದರಲ್ಲಿ ಸಿಕ್ಕು ಬಿದ್ದ. ಎರಿಕ್‌ನನ್ನು ಅವರು ಹೊಡೆದು ಮುಗಿಸಿದರು. ರವೀಂದ್ರ ಪ್ರಸಾದ್ ಬಗ್ಗೆ ಶ್ರೀಧರ್‌ಗೆ ಗೊತ್ತಾಗಿತ್ತು ಅಂತ ಕಾಣುತ್ತದೆ. ಎರಿಕ್‌ನ ಎನ್‌ಕೌಂಟರ್ ಆದ ಮೇಲೆ ಬಹುಶಃ ರವೀಂದ್ರ ಪ್ರಸಾದ್ ಬೆಂಗಳೂರಿಗೆ ಬರಲಿಲ್ಲ. ಅವನಿಗೆ ನನ್ನೊಂದಿಗಿನ ಕೆಲಸವೂ ಮುಗಿದಿತ್ತು. ಕೆಲವು ಸಲ ಪಾತಕಿಗಳ ಬಗ್ಗೆ ಬರೆದು ಎಲ್ಲ ಮುಗಿದ ನಂತರವೂ ಒಂದಲ್ಲ ಒಂದು ತೆರನಾದ ಸಂಪರ್ಕ ನನಗಿರುತ್ತದೆ. ಕೆಲಬಾರಿ ಅವರೇ ಫೋನು ಮಾಡುತ್ತಾರೆ. ಕೆಲಬಾರಿ ಬರುತ್ತಾರೆ. ಚಂದಪ್ಪ ಹರಿಜನನ ಉದಾಹರಣೆಯನ್ನೇ ತೆಗೆದುಕೊಳ್ಳಿ. ಅನಾಮತ್ತು ನಲವತ್ತೆಂಟು ಹತ್ಯೆ ಮಾಡಿದ್ದ ಅವನನ್ನು ಮೂರು ಜಿಲ್ಲೆಯ ಪೊಲೀಸರು ಹುಡುಕುತ್ತಿದ್ದರೆ, ಪುಣ್ಯಾತ್ಮ ನನ್ನ ಕಾರಿನಲ್ಲಿ ಆರಾಮಾಗಿ ಓಡಾಡಿಕೊಂಡಿರುತ್ತಿದ್ದ. ಅಷ್ಟೇಕೆ, ಬೆಂಗಳೂರಿಗೆ ಬಂದು ನನ್ನ ಆಫೀಸಿನಲ್ಲೇ ಊಟ ಮಾಡಿ ಉಳಿದಿರುತ್ತಿದ್ದ. ಒಂದೇನೆಂದರೆ, ನಾನು ಅವರೊಂದಿಗೆ ಹಣಕಾಸಿನ ವ್ಯವಹಾರ ಇಟ್ಟುಕೊಳ್ಳುವುದಿಲ್ಲ. ಅವರಿಗೂ ಕೊಡುವುದಿಲ್ಲ, ಅವರಿಂದ ಹಣ ಇಸಿದುಕೊಳ್ಳುವುದೂ ಇಲ್ಲ. ಇವನಾದರೂ ಅಷ್ಟೆ. ಏನೋ ಚಿಕ್ಕ-ಪುಟ್ಟ ನೆರವಾಗುವಂತಿದ್ದರೆ ಆಗುತ್ತೇನೆ: ಅಷ್ಟೆ.
ಪತ್ರಿಕೆಯಲ್ಲಿ ಅವನ ವೃತ್ತಾಂತ ಪೂರ್ತಿಯಾಗಿ ಬಂತು. ಮುಂದೆ ನಾನು ಸಾಕಷ್ಟು ಸಲ ಮೈಸೂರಿಗೆ ಹೋದೆನಾದರೂ ಅವನನ್ನು ಸಂಪರ್ಕಿಸಲಿಲ್ಲ. ಆ ಅವಧಿಯಲ್ಲೇ ಅವನು ಕೋರ್ಟ್ ಆವರಣದಲ್ಲಿ ಟೈಪ್ ಮಾಡುತ್ತ ಕುಳಿತಿರುತ್ತಿದ್ದ ಅಂತ ಕಾಣುತ್ತದೆ. ಅವನಿಗೆ ಪತ್ರಿಕೆಯಲ್ಲಿ ಲೇಖನ ಮಾಲಿಕೆ ಬಂದ ಮೇಲೆ ಕೊಂಚ ತಲೆ ತಿರುಗಿದ್ದು ನಿಜವೇ. “ಗೊತ್ತಲ್ಲ, ನಾನು ರವೀಂದ್ರ ಪ್ರಸಾದ್! ಅದೇ...ಪತ್ರಿಕೇಲಿ ಬಂತಲ್ಲ? ಸೀರಿಯಲ್ ಕಿಲ್ಲರ್!" ಅನ್ನುತ್ತಿದ್ದ ಕೆಲವರೊಂದಿಗೆ. ಆ ದಿನಗಳಲ್ಲಿ ಮೈಸೂರಿನಲ್ಲಿ ಒಬ್ಬರು ಸ್ನೇಹಿತರಾಗಿದ್ದರು. ಕ್ಷಮಿಸಿ, ಅವರ ಹೆಸರು ನೆನಪಾಗುತ್ತಿಲ್ಲ. ಅವರಿಗೆ ಅದೇನು ಖಯಾಲಿಯೋ ಕಾಣೆ. ಬೆಂಗಳೂರಿಗೆ ಬಂದು ನನಗೆ ಎಣ್ಣೆ ಹಚ್ಚಿ, ಚೆನ್ನಾಗಿ ತಟ್ಟಿ ಮಾಲೀಶು ಮಾಡಿ (ಇಡೀ ದೇಹಕ್ಕೂ ಮಾಡುತ್ತಿದ್ದರು), ಬಚ್ಚಲಿಗೊಯ್ದು ನಿಲ್ಲಿಸಿ ನನಗೊಂದು ಅದ್ಭುತವಾದ ಎಣ್ಣೆ-ನೀರಿನ ಸ್ನಾನ ತಾವೇ ಮಾಡಿಸಿ ವಾಪಸು ಹೋಗುತ್ತಿದ್ದರು! ಇದು ಅವರ ಶುದ್ಧ ಪ್ರೀತಿ...ಅವರು ಬಡವರಲ್ಲ. ನಿರುದ್ಯೋಗಿಯಲ್ಲ. ಶುದ್ಧ ಮೇಲ್ಮಧ್ಯಮ ವರ್ಗದವರು. ಮೇಲಾಗಿ body builder. ನನಗೆ ಎಣ್ಣೆ ನೀರಿನ ಸ್ನಾನ ಮಾಡಿಸಿ ಖುಷಿ ಪಡುತ್ತಿದ್ದರು! ಒಮ್ಮೆ ರವೀಂದ್ರ ಪ್ರಸಾದ್ ಅವರೆದುರು ಎಂದಿನಂತೆ ಮಾತಾಡಿದ್ದಾನೆ. “ಗೊತ್ತಲ್ಲ? ಸೀರಿಯಲ್ ಕಿಲ್ಲರ್?" ಅಂದಿದ್ದಾನೆ.

ಅದಕ್ಕವರು, “ಮುಚ್ಕಂಡಿರಯ್ಯಾ, ತಲೆ ತಗ್ಗುಸ್ಕೊಂಡು ಟೈಪ್ ಮಾಡ್ತಿದೀಯ. ಹಿಂದೆ ಯಾರಾದ್ರೂ ಬಂದು ಒಂದು ರಾಡ್ ತಗೊಂಡ್ ಬೀಸಿದ್ರೆ ಕೂತಲ್ಲೇ ಸಾಯ್ತೀಯ!" ಎಂದು ಉತ್ತರಿಸಿದ್ದರು. ಈ ನಡುವೆಯಂತೂ ಅವನ ಸುದ್ದಿ-ಸುಳಿವು ಎರಡೂ ಇರಲಿಲ್ಲ. ತುಂಬ ದಿನಕ್ಕೆ ಹಿಂದೆ ಅವನು ವಕೀಲಿಕೆ ಆರಂಭಿಸಿದ್ದ. ಹಾಸನ, ಮಂಡ್ಯಗಳಿಗೆ ಓಡಾಡುತ್ತಿದ್ದ. ಜೈಲುಗಳಲ್ಲಿ ಇರುವವರಿಗೆ ಇವನೇ ವಕಾಲತ್ತು ಹಾಕಿ ಅವರ ಕೇಸು ಹಿಡಿಯುತ್ತಿರಬೇಕು. ಒಂದಷ್ಟು ಹಣವೂ ಕೈ ಸೇರಿತ್ತು. ಮದುವೆ ಮಾಡಿಕೊಂಡ ಅಂತ ಸುದ್ದಿ ಬಂದಿತ್ತು.

ಅವನು ಓಡಾಡಲಿಕ್ಕೆ ಸ್ಯಾಂಟ್ರೋ ಕಾರು ತೆಗೆದುಕೊಂಡಿದ್ದ. ಯಾರ ಸಾವು ಎಲ್ಲಿ ನಿರ್ಧರಿತವಾಗಿರುತ್ತದೋ ಯಾರಿಗೆ ಗೊತ್ತು? ಶ್ರೀರಂಗ ಪಟ್ಟಣದ ಕೋರ್ಟಿಗೆ ಹೋದವನು, ಹಿಂದಿರುಗುವಾಗ ತುಂಬ ವೇಗವಾಗಿ ಡ್ರೈವ್ ಮಾಡಿದ್ದಾನೆ. ಇತ್ತೀಚೆಗೆ ಮೈಸೂರು ರಸ್ತೆ ತುಂಬ ಬ್ಯುಸಿಯಾಗಿದ್ದ. ನಿಂತಿದ್ದ ಲಾರಿಯೊಂದಕ್ಕೆ ಗುದ್ದಿದ್ದಾನೆ. ಕುಳಿತಲ್ಲಿಂದ ಅಲುಗಾಡಿಲ್ಲ. ಕಾರುಗಳಲ್ಲೇ ಅಲ್ಲವೇ ಅವನು ಕೊಲೆಗಳನ್ನು ಮಾಡುತ್ತಿದ್ದುದು. ಅದೀಗ ಚುಕ್ತಾ ಆಗಿದೆ. ‘ಆರು ಜನರನ್ನು ಕೊಂದ ಸೀರಿಯಲ್ ಕಿಲ್ಲರ್’ ಅನ್ನುತ್ತಿದ್ದರು. ಈಗಿನದೂ ಸೇರಿಕೊಂಡರೆ ಏಳು! ಸುದ್ದಿ ಕೇಳಿ ನನಗೆ ಏನೂ ಅನ್ನಿಸಲಿಲ್ಲ. ಎಲ್ಲರೂ ತಂತಮ್ಮ ಲೆಕ್ಕ ಚುಕ್ತಾ ಮಾಡಲೇ ಬೇಕು. ರವೀಂದ್ರ ಪ್ರಸಾದ್ ಕೂಡ ಮಾಡಿದ್ದಾನೆ.

ಯಾವ ಡ್ರೈವರನ ಆತ್ಮ ಯಾವ ಗೋರಿಯ ಆಳದಲ್ಲಿ ಮಗ್ಗಲು ಬದಲಿಸಿ ನಿಟ್ಟುಸಿರಾಯಿತೋ?

ನಿಮ್ಮವನು
ಆರ್.ಬಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 21 July, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books