Ravi Belagere
Welcome to my website
ನಿಮಗೂ ಯಾವಾಗಲೋ ಕಾಲು ಮುರಿದಿರಬಹುದು. ಬಚ್ಚಲಲ್ಲಿ ಕಾಲು ಜಾರಿದ್ದಿರಬಹುದು. ನಡೆಯುತ್ತ ನಡೆಯುತ್ತ ನಿಮ್ಮ ಕಾಲು ಉಳುಕಿರಬಹುದು. ಸ್ವಲ್ಪ ದಿನ ನೀವು ಉಳುಕು ಅಂದುಕೊಂಡಿರುತ್ತೀರಿ: ಡಾಕ್ಟರ್ ಬಳಿಗೆ ಹೋಗಿ ಎಕ್ಸ್‌ರೇ ತೆಗೆಸಿದಾಗ ಅದು hair line fracture. ಆಯ್ತಲ್ಲ? ಮುದ್ದಾಗಿ ಬ್ಯಾಂಡೇಜ್ ಹಾಕಿ ಆರೇ ಆರು ವಾರ ಅದನ್ನು ಹಾಕ್ಕೊಂಡಿರಿ ಅನ್ನುತ್ತಾರೆ. ಅದೊಂಥರಾ ಸಿಮೆಂಟ್‌ನ ಕಟ್ಟೆ ಕಟ್ಟಿದಂತೆಯೇ! ವಿಪರೀತ ಭಾರ. ನಡೆಯುವುದು ಯಮಹಿಂಸೆ. ನಿಮಗೆ ಯಾವತ್ತಾದರೂ ಕೈ ಕಾಲು ಮುರಿದಿದ್ದವಾ? ಯಾಕೆ? Plaster ಸುಖ ಅನುಭವಿಸಿದಿರಾ? ಎಷ್ಟು ದಿನ? ಹೋಗಲಿ ಸಮಸ್ಯೆ ಪೂರ್ಣವಾಗಿ ವಾಸಿಯಾಗಿ ಬಗೆಹರಿಯಿತಾ? ನಿಮ್ಮ ಆಗಿನ ಅನುಭವವನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಮೋದಿಜೀಗೆ ಒಳ್ಳೆಯ ದಿನಗಳು ಬರಲು ಜಸ್ಟ್ ಇಪ್ಪತ್ತೈದು ವರ್ಷ ಸಾಕಂತೆ

ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರನ್ನು ಕೊಂಡಾಡಲು ಈ ದೇಶಕ್ಕೆ ಮಾತುಗಳೇ ಸಿಗುತ್ತಿಲ್ಲ. ಅವರ ಪ್ರಕಾರ, ದೇಶಕ್ಕೆ ಅಚ್ಚೇ ದಿನ್ ಬರಲು ಇಪ್ಪತ್ತೈದು ವರ್ಷ ಬಿಜೆಪಿ ಅಧಿಕಾರದಲ್ಲಿ ಇರಬೇಕಂತೆ. ಅವರು ಮಾತನಾಡಿದ ಕೂಡಲೇ ಅದಕ್ಕೊಂದು ಸಮಜಾಯಿಷಿ ನೀಡಲಾಯಿತು. ಛೇ, ಛೇ ವಾಸ್ತವವಾಗಿ ಅವರು ಹೇಳಿದ್ದು ಹಾಗಲ್ಲ. ದೇಶಕ್ಕೆ ಅಚ್ಚೇ ದಿನ್ ಬರಬೇಕು ಎಂದರೆ ಇಪ್ಪತ್ತೈದು ವರ್ಷ ಬಿಜೆಪಿ ಅಧಿಕಾರದಲ್ಲಿರಬೇಕು ಎಂದಷ್ಟೇ ಅವರು ಹೇಳಿದ್ದು ಅನ್ನಲಾಯಿತು. ಅರೇಸ್ಕೀ. ಶ್ರೀರಾಮಚಂದ್ರನ ಹೆಂಡತಿಯ ಹೆಸರು ಸೀತೆ ಎಂದರೇನು? ಸೀತೆಯ ಗಂಡ ರಾಮ ಎಂದರೇನು? ಅರ್ಥದಲ್ಲಿ ಎರಡೂ ಒಂದೇ ಅಲ್ಲವೇ? ಹೀಗಾಗಿ ಅಮಿತ್ ಷಾ ಅವರ ಮಾತು ಸ್ಪಷ್ಟ.

ಅಂದ ಹಾಗೆ ಬಣ್ಣ ಬದಲಿಸುವ ವಿಷಯದಲ್ಲಿ ಬಿಜೆಪಿಯ ನಾಯಕರು ಕ್ಲೆವರ್ ಮೈಂಡಿನವರು ಎಂಬುದು ಗೊತ್ತಿತ್ತು. ಆದರೆ ಗೋಸುಂಬೆಯೂ ನಾಚುವಷ್ಟು ಬೇಗ ಕಲರ್ ಚೇಂಜು ಮಾಡುವಷ್ಟು ಕ್ಲೆವರ್ರುಗಳು ಅಂತ ಗೊತ್ತಿರಲಿಲ್ಲ. ಮೊದಲು ದೇಶ ಕಟ್ಟಲು ಗ್ಯಾಸ್ ಸಬ್ಸಿಡಿ ಬಿಡಿ ಅಂತ ಕರೆ ನೀಡಿದ ಮೋದಿ, ಹತ್ತು, ಹದಿನೈದು ಲಕ್ಷದ ಸೂಟು, ಡ್ರೆಸ್ಸು ಧರಿಸತೊಡಗಿದರು. ಒಬ್ಬ ಬಡ, ಮಧ್ಯಮ ವರ್ಗದ ವ್ಯಕ್ತಿ ಗ್ಯಾಸಿಗಾಗಿ ಪಡೆಯುವ ಸಬ್ಸಿಡಿ ಎಷ್ಟು? ಹೆಚ್ಚು ಕಡಿಮೆ ಇನ್ನೂರೈವತ್ತು ರುಪಾಯಿ. ಅಂತಹ ನಾಲ್ಕು ಸಾವಿರ ಮಂದಿ ಗ್ಯಾಸ್ ಸಬ್ಸಿಡಿ ಬಿಟ್ಟು ಕೊಟ್ಟರೆ ಮೋದಿಯ ಒಂದು ಜೊತೆ ಡ್ರೆಸ್ಸಿಗಾಗುತ್ತದೆ. ಇದು ದೇಶ ಕಟ್ಟುವ ಪರಿಯಾ? ಅಲ್ರೀ, ಗಾಂಧಿಯನ್ನು ನೋಡಿದ ನಾಡು ಗುಜರಾತ್. ಈ ದೇಶದ ಕಟ್ಟ ಕಡೆಯ ಮನುಷ್ಯನಿಗೆ ಉಡಲು ಸರಿಯಾದ ಬಟ್ಟೆ ಸಿಗುವ ತನಕ ನನಗೂ ಮೈ ಪೂರ್ಣ ಬಟ್ಟೆ ಬೇಡ ಎಂದವರು ಗಾಂಧಿ. ಇನ್ನೂ ಈ ದೇಶದ ಕೋಟ್ಯಂತರ ಮಂದಿ ಬಟ್ಟೆಯಿರಲಿ, ಹೊಟ್ಟೆಗೆ ನೆಟ್ಟಗೆ ಊಟವನ್ನೂ ಮಾಡುವುದಿಲ್ಲ.

ಅಂತಹದರಲ್ಲಿ ಮೋದಿಯ ಒಂದು ಜೊತೆ ಡ್ರೆಸ್ಸಿಗೆ ಹತ್ತು ಲಕ್ಷ. ಇದೇ ಥರದ ಒಂದೈವತ್ತು ಜೊತೆ ಡ್ರೆಸ್ಸುಗಳನ್ನು ಅವರು ಹೊಲಿಸಿಕೊಂಡರೆ ಬರೋಬ್ಬರಿ ಎರಡು ಲಕ್ಷ ಜನ ಗ್ಯಾಸ್ ಸಬ್ಸಿಡಿ ಬಿಟ್ಟು ಕೊಡಬೇಕಾಗುತ್ತದೆ. ಮೋದಿಗೆ ನಿಜವಾದ ಕಾಳಜಿ ಅಂತಿದ್ದಿದ್ದರೆ ತಾವೇ ಸರಳವಾದ ಬಟ್ಟೆಗಳನ್ನು ತೊಡುವ ಮೂಲಕ ಜನರಿಗೆ ಸರಳತೆಯ ಪಾಠ ಹೇಳಬಹುದಿತ್ತು.

ಆದರೆ ಮೋದಿಗೀಗ ಒಂದೇ ಸಮನೆ ವಿದೇಶ ಸುತ್ತುವ ತವಕ. ತಮ್ಮ ಗೆಳೆಯರಿಗೆ ದಂಡಿಯಾಗಿ ಬಿಜಿನೆಸ್ ಆಫರ್‌ಗಳು ಫಾರಿನ್ನಿನಲ್ಲಿ ಹುಟ್ಟಬೇಕು ಎಂಬ ಕಾಂಕ್ಷೆ. ಹೀಗೆ ನಿರಂತರವಾಗಿ ಅವರ ಆಸೆ ಪೂರೈಸಿದರೆ ತಾನೇ ಅವರು ಮಾಧ್ಯಮಗಳಿಂದ ಹಿಡಿದು, ಹಲವು ಮಾರ್ಗಗಳ ಮೂಲಕ ಮೋದಿಯಂತಹ ನಾಯಕನೇ ಹುಟ್ಟಿಲ್ಲ ಎಂದು ಹೇಳುವುದು? ಆದರೆ ಮೇಲಿಂದ ಮೇಲೆ ದುಡ್ಡಿದ್ದವರನ್ನು ಓಲೈಸುವ ಅವರ ಕೆಲಸ ದೇಶದ ಬಡ, ಮಧ್ಯಮ ವರ್ಗದ ಜನರ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಅಂಬಾನಿಗೆ ಉದ್ಯೋಗ ಸೃಷ್ಟಿಸಲು, ಅದಾನಿಗೆ ಕಾಂಟ್ರಾಕ್ಟು ಕೊಡಿಸಲು, ಹಲವಾರು ಉದ್ಯಮಿಗಳ ಲಕ್ಷಗಟ್ಟಲೆ ಸಾಲವನ್ನು ಮನ್ನಾ ಮಾಡಲು ಮೋದಿಯೇ ಬೇಕಿರಲಿಲ್ಲ. ಆದರೆ ಇದನ್ನೆಲ್ಲ ಮಾಡುವ ನೆಪದಲ್ಲಿ ಜನಧನ್ ಯೋಜನೆಯ ಕುರಿತು ಇವರು ಪ್ರಚಾರ ಮಾಡಿದ್ದೇನು? ಪೊರಕೆ ಹಿಡಿದುಕೊಂಡು ಇನ್ನೇನು ಭಾರತ ಸ್ವಚ್ಛವಾಯಿತು ಅಂದಿದ್ದೇನು? ಅಯ್ಯೋ ರಾಮ.

ಪ್ರಧಾನಿ ನರೇಂದ್ರಮೋದಿಯ ಕತೆಯೇ ಹೀಗಿರುವಾಗ ಇನ್ನು ಅವರ ಕಟ್ಟಾ ಬೆಂಬಲಿಗ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಮನಸ್ಥಿತಿ ಹೇಗಿರಬೇಕು? ಅಚ್ಚೇ ದಿನ್ ಬರಲು ಇಪ್ಪತ್ತೈದು ವರ್ಷ ಬೇಕಂತೆ. ಬ್ರಿಟಿಷರು ಬಂದ ಮೇಲೆ ದೇಶವೇ ಬರ್ಬಾದಾಗಿ ಹೋಗಿದೆಯಂತೆ. ಅದಕ್ಕೂ ಮುಂಚೆ ಸುವರ್ಣ ಯುಗ ಇತ್ತಂತೆ. ಇವೆಲ್ಲ ಕಾಗಕ್ಕ-ಗುಬ್ಬಕ್ಕನ ಕತೆಗಳು. ಪಂಚಾಯತ್‌ನಿಂದ ಹಿಡಿದು ಲೋಕಸಭೆಯ ತನಕ ಬಿಜೆಪಿ ಇಪ್ಪತ್ತೈದು ವರ್ಷಗಳ ಕಾಲ ಅಧಿಕಾರ ಹಿಡಿದರೆ ಅಚ್ಚೇ ದಿನ್ ಬರುತ್ತದಂತೆ. ಅಂದರೆ ಇಡೀ ದೇಶದ ಬಾಯಿಗೆ ಮಣ್ಣು ತುರುಕಲು ಬಿಜೆಪಿಗೆ ಇಷ್ಟು ವರ್ಷ ಬೇಕು ಎಂದರೆ ನಮ್ಮ ಹಿರಿಯರು ಅದೆಷ್ಟು ಕಷ್ಟಪಟ್ಟು ದೇಶ ಕಟ್ಟಿರಬೇಕು? ಸ್ವಾತಂತ್ರ್ಯ ಪೂರ್ವದಲ್ಲಿ ತಾಲೂಕು ಲೆವೆಲ್ಲಿನ ಪ್ರದೇಶಕ್ಕೆ, ಜಿಲ್ಲಾ ಲೆವೆಲ್ಲಿನ ಪ್ರದೇಶಕ್ಕೆ ಒಂದೊಂದು ಸಂಸ್ಥಾನಗಳಿದ್ದವಲ್ಲ? ಅದೇನು ದೇಶದ ಏಕತೆಯ ಸಂಕೇತವಾ? ಬ್ರಿಟಿಷರು ಬಂದಿದ್ದರಿಂದ, ದೇಶವನ್ನು ಕೊಳ್ಳೆ ಹೊಡೆದಿದ್ದರಿಂದ ನಮಗೆ ಅನ್ಯಾಯವಾಗಿರುವುದು ನಿಜ. ಆದರೆ ಒಂದು ದೇಶವಾಗಿ ಸೆಟೆದು ನಿಲ್ಲಲು ಈ ಅನುಭವ ನಮಗೆ ಪಾಠ ಕಲಿಸಿತು.

ಹೀಗಾಗಿ ಒಂದು ಕೆಟ್ಟ ಅನುಭವವನ್ನು ಒಳ್ಳೆಯದಕ್ಕಾಗಿ ಮಾರ್ಪಡಿಸಿಕೊಳ್ಳುವ ಕೆಲಸವಾಗಬೇಕೇ ಹೊರತು, ಬ್ರಿಟಿಷರು ಬರುವ ಮುಂಚೆ ಸುವರ್ಣ ಯುಗವಿತ್ತು ಎಂದು ಹೇಳುತ್ತಾರಲ್ಲ? ಅಮಿತ್ ಷಾದೇನು ಚರ್ಮದ ನಾಲಿಗೆಯೇ? ಮರದ ತುಂಡೇ? ಅಲ್ರೀ, ಶೋಷಿತ ವರ್ಗದವರಿಗೆ ಓದುವ ಹಕ್ಕೇ ಇಲ್ಲದಂತೆ ಮಾಡಿ, ಜೀತದಾಳುಗಳನ್ನಾಗಿ ಮಾಡಿ ದುಡಿಸಿಕೊಂಡು ನೆಮ್ಮದಿಯಿಂದ ಬದುಕುವ ಮಾರ್ಗವನ್ನು ಆಗ ಪುರೋಹಿತ ಷಾಹಿ ಕಂಡುಕೊಂಡಿತ್ತು. ಇದರ ಫಲವಾಗಿಯೇ ಮೊಘಲರು ಭಾರತದಲ್ಲಿ ಆ ಪರಿ ವ್ಯಾಪಿಸಿಕೊಳ್ಳಲು ಸಾಧ್ಯವಾಗಿದ್ದು. ಯುದ್ಧ ಮಾಡುವ ತಾಕತ್ತಿರುವ ಸಮುದಾಯಗಳ ಶಕ್ತಿಯನ್ನೇ ಉಡುಗಿಸಿದ ಮೇಲೆ ಮೊಘಲರಿಂದ ಕಾಪಾಡಲು ಯಾರಿಂದ ಸಾಧ್ಯವಿತ್ತು? ಆದರೆ ಮೊಘಲರೂ ಶೋಷಿತ ಸಮುದಾಯಕ್ಕೆ ದೊಡ್ಡ ಮಟ್ಟದ ನ್ಯಾಯ ದೊರಕಿಸಿಕೊಡಲು ಆಗಲಿಲ್ಲ. ಅದನ್ನು ಶಾಹು ಮಹಾರಾಜ್ ಅವರಂತಹವರು, ಜ್ಯೋತಿ ಬಾಪುಲೆಯಂತಹವರು ಮಾಡಿದರು. ಹೀಗೆ ದೇಶದ ಅಂತಃಸತ್ವವನ್ನೇ ಬಡಿದು ಹಾಕಿದ ಮೇಲೆ ದೇಶದ ಮೇಲೆ ದಾಳಿ ಮಾಡಲು ಬಂದವರ ಮೇಲೆ ಯುದ್ಧ ಮಾಡಿ ಎಂದು ಹೇಳಿದರೆ ಹೇಗೆ ಸಾಧ್ಯ?

ಹೀಗೆ ಬ್ರಿಟಿಷರಿದ್ದ ಕಾಲದಲ್ಲೇ ಭಾರತ ಮಾನಸಿಕವಾಗಿ ಎರಡು ಹೋಳಾಗಿತ್ತು. ಗಾಂಧೀಜಿ ಕಂಡ ಒಗ್ಗಟ್ಟಿನ ಭಾರತದಲ್ಲಿ, ದಾಸ್ಯದಿಂದ ನರಳಿದ ಭಾರತವೊಂದಿತ್ತು. ಮೊಘಲರು, ಬ್ರಿಟಿಷರಿಂದಲೂ ಸಂಪೂರ್ಣವಾಗಿ ಅದನ್ನು ತೊಡೆದು ಹಾಕಲು ಸಾಧ್ಯವಾಗಲಿಲ್ಲ ಎಂದ ಮೇಲೆ ಅದೆಂತಹ ಸುವರ್ಣ ಯುಗವಿರಬೇಕು? ಅಂತಹದೇ ಸುವರ್ಣ ಯುಗವನ್ನು ಮರಳಿ ಈ ದೇಶದ ಮೇಲೆ ಹೇರಲು ಬಿಜೆಪಿಗೀಗ ಇಪ್ಪತ್ತೈದು ವರ್ಷ ಬೇಕು. ಆದರೆ ಒಂದು ವ್ಯತ್ಯಾಸ. ಮೋದಿ ಹಾಗೂ ಅಮಿತ್ ಷಾ ಜೋಡಿಯೂ ಭಾರತದಲ್ಲೇ ಒಂದು ಒಳಭಾರತವನ್ನು ಸೃಷ್ಟಿಸುತ್ತಿದೆ. ಅದರಲ್ಲಿ ಮೊದಲ ಭಾರತದ ಪ್ರತಿನಿಧಿಗಳು ಅಂಬಾನಿ, ಅದಾನಿಯಂತಹ ದುಡ್ಡಿರುವ ಕುಳಗಳು. ಎರಡನೆಯ ಭಾರತದಲ್ಲಿ ಜಾತಿ, ಧರ್ಮದ ಭೇದವಿಲ್ಲದೆ ಎಲ್ಲ ಬಡ, ಮಧ್ಯಮ ವರ್ಗದ ಜನ ಇದ್ದಾರೆ. ಹೀಗೆ ಮಾತನಾಡಲು ಒಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರೊಬ್ಬರಿಗೆ ಸಂಕೋಚವಾಗುವುದಿಲ್ಲವೇ? ಅಥವಾ ಅಧಿಕಾರ ಹಿಡಿಯುವುದು ಎಂದರೆ ಕೇವಲ ದುಡ್ಡು ಮಾಡುವವರು ದುಡ್ಡು ಮಾಡಲು ಇರುವ ಮಾರ್ಗವನ್ನು ಸೃಷ್ಟಿಸುವುದೇ?

ಕೆಲವೇ ದಿನಗಳ ಹಿಂದೆ ಇದೇ ಅಮಿತ್ ಷಾ ಕರ್ನಾಟಕಕ್ಕೆ ಬಂದಾಗ ಬಹಿರಂಗವಾಗಿ ಹೇಳಿದ್ದರು. ಗ್ರಾಮ ಪಂಚಾಯ್ತಿಗಳಿಂದ ಹಿಡಿದು, ಲೋಕಸಭೆಯ ತನಕ ಬಿಜೆಪಿ ಅಧಿಕಾರಕ್ಕೆ ಬರುವಂತೆ ನೋಡಿಕೊಳ್ಳಿ ಎಂದು ಪಕ್ಷದ ನಾಯಕರಿಗೆ ಕರೆ ಕೊಟ್ಟಿದ್ದರು. ಅದು ತಪ್ಪೇನಲ್ಲ. ಒಂದು ಪಕ್ಷದ ನಾಯಕ ತಮ್ಮ ಸೈನ್ಯವನ್ನು ಈ ರೀತಿ ಅಣಿಗೊಳಿಸಬೇಕು. ಅದು ನ್ಯಾಯವೇ. ಆದರೆ ಈ ಸಭೆಯ ನಂತರ ರಹಸ್ಯವಾಗಿ ತಮ್ಮ ಪಕ್ಷದ ಕೆಲವು ನಾಯಕರ ಬಳಿ ಅವರು ಮಾತನಾಡಿದ್ದಿದೆಯಲ್ಲ? ಆ ಮಾತುಗಳೇ ಅಮಿತ್ ಷಾ ಅವರ ನಿಜಾಂತರಂಗವನ್ನು ಬಯಲು ಮಾಡಿದ್ದವು. ಮುಂದಿನ ಲೋಕಸಭಾ ಚುನಾವಣೆಯ ವೇಳೆಗೆ ಉತ್ತರ ಭಾರತದಲ್ಲಿ ಬಿಜೆಪಿ ಹಿಂದಿನಂತೆ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ಕಷ್ಟ. ಆದ್ದರಿಂದ ಈ ಕೊರತೆಯನ್ನು ದಕ್ಷಿಣ ಭಾರತ ತುಂಬಿಕೊಡಬೇಕು ಎಂದು ಅವರು ಪಕ್ಷದ ನಾಯಕರಿಗೆ ನೇರವಾಗಿ ಹೇಳಿದರು. ಅಷ್ಟು ಮಾತ್ರವಲ್ಲ, ಒಂದು ಸಲ ನೀವು ಅಧಿಕಾರಕ್ಕೆ ಬಂದರೆ ಸಾಲದು. ಮಧ್ಯಪ್ರದೇಶ, ಗುಜರಾತ್, ಛತ್ತೀಸ್ ಘಡ ಸೇರಿದಂತೆ ಹಲವು ರಾಜ್ಯಗಳಲ್ಲಿ ಮೇಲಿಂದ ಮೇಲೆ ಬಿಜೆಪಿ ಹೇಗೆ ಅಧಿಕಾರ ಹಿಡಿಯುತ್ತಿದೆಯೋ, ಅದೇ ರೀತಿ ನೀವು ಹದಿನೈದು ವರ್ಷ ನಿರಂತರವಾಗಿ ಆಳ್ವಿಕೆ ನಡೆಸುವಂತಾಗಬೇಕು ಎಂದು ಅಮಿತ್ ಷಾ ಹೇಳಿದ್ದರು.

ಅಂದರೆ ಪ್ರಜಾಪ್ರಭುತ್ವದಲ್ಲಿ ಒಂದೇ ಪಕ್ಷದ ಆಳ್ವಿಕೆ ನಿರಂತರವಾಗಿದ್ದರೆ ಜಡ್ಡು ಹಿಡಿದು ಹೋಗುತ್ತದೆ ಅಂತ ಖ್ಯಾತ ಸಮಾಜವಾದಿ ನಾಯಕ ರಾಮಮನೋಹರ ಲೋಹಿಯಾ ಹೇಳಿದ್ದರು. ಇದನ್ನೇ ನಂಬಿ, ದೇಶದಲ್ಲೇ ಬದಲಾವಣೆಯ ಪರ್ವ ಆರಂಭವಾಯಿತು. ಮೂವತ್ತೆರಡು ವರ್ಷಗಳ ಹಿಂದೆ ಕರ್ನಾಟಕದಲ್ಲಿ ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಆಳ್ವಿಕೆ ಧೂಳೀಪಟವಾಗಲು ಇಂತಹ ಮನಸ್ಥಿತಿಯೂ ಮುಖ್ಯ ಕಾರಣ. ಅದರಿಂದಾಗಿಯೇ ಬಿಜೆಪಿ ಮೊಟ್ಟ ಮೊದಲು ಅಧಿಕಾರದಲ್ಲಿ ಭಾಗಿಯಾಗಿದ್ದು. ಅವತ್ತು ರಚನೆಯಾದ ಜನತಾರಂಗ ಸರ್ಕಾರಕ್ಕೆ ಬಿಜೆಪಿಯ ಹದಿನೆಂಟು ಶಾಸಕರ ಬೆಂಬಲವಿತ್ತು. ಪಾಪ, ಅಮಿತ್ ಷಾ ಇದೆಲ್ಲವನ್ನೂ ಮರೆತಂತಿದೆ. ಅದಕ್ಕೇ ಈಗವರು ದೇಶದಲ್ಲಿ ಬಿಜೆಪಿ ಕಂಟಿನ್ಯೂಯಸ್ ಆಗಿ ಇಪ್ಪತ್ತೈದು ವರ್ಷಗಳ ಕಾಲ ಆಳ್ವಿಕೆ ನಡೆಸಬೇಕು ಅನ್ನುತ್ತಿದ್ದಾರೆ. ಒಂದು ದೇಶಕ್ಕೆ ಅಚ್ಚೇ ದಿನ್ ತರಲು ಇಪ್ಪತ್ತೈದು ವರ್ಷಗಳು ಬೇಕು ಅನ್ನುತ್ತಾರಲ್ಲ? ಮನಮೋಹನ್ ಸಿಂಗ್ ಈ ದೇಶದಲ್ಲಿ ದುಡ್ಡು ಹರಿಯಲು, ಜಾಗತೀಕರಣದ ಜಗತ್ತಿಗೆ ಕಾಲಿಡಲು ಇಷ್ಟು ವರ್ಷ ತೆಗೆದುಕೊಂಡಿರಲಿಲ್ಲ ಎಂಬುದು ದೇಶದ ಜನರಿಗೆ ಗೊತ್ತಿದೆ. ಅವರಿಗೆ ಜಾಗತೀಕರಣನ್ನು ಒಳಗೆ ಬಿಟ್ಟುಕೊಳ್ಳಲು ಗೊತ್ತಿತ್ತು. ಆದರೆ ಎರಡನೇ ಹಂತದಲ್ಲಿ ಉದ್ಯಮಿಗಳು ಬಯಸಿದ ರೀತಿಯಲ್ಲಿ ಸವಲತ್ತುಗಳನ್ನು ಒದಗಿಸಿಕೊಡಲು ಆಗಲಿಲ್ಲ. ಯಾಕೆಂದರೆ ಅವರ ಸರ್ಕಾರಕ್ಕೆ ಒಂದು ಸಮಾಜವಾದಿ ಮನಸ್ಥಿತಿಯಾದರೂ ಇತ್ತು.

ಆದರೆ ಬಿಜೆಪಿಯದು ಪಕ್ಕಾ ಬಂಡವಾಳಷಾಹಿ ಪ್ರಜಾಪ್ರಭುತ್ವ. ಇಲ್ಲಿ ದುಡ್ಡಿದ್ದವನೇ ದೊಡ್ಡಪ್ಪ. ಅಂದರೆ ದೊಡ್ಡ ದೊಡ್ಡ ಉದ್ಯಮಿಗಳು, ವ್ಯಾಪಾರಿ ವರ್ಗದ ಹಿತ ಕಾಯುವುದೇ ಅದರ ಕೆಲಸ. ಅಡ್ವಾಣಿಗಿಂತ ಮೋದಿ ಇದನ್ನು ಚೆನ್ನಾಗಿ ಮಾಡುತ್ತಾರೆ ಎಂಬುದನ್ನು ಗುಜರಾತ್‌ನಲ್ಲಿನ ಅನುಭವದಿಂದ ಉದ್ಯಮಿಗಳು ಮನಗಂಡಿದ್ದರು. ಇದೇ ಕಾರಣಕ್ಕಾಗಿ ಅಡ್ವಾಣಿಯನ್ನು ಸಂಘ ಪರಿವಾರ ಸೈಡಿಗೆ ಸರಿಸಿ, ನರೇಂದ್ರ ಮೋದಿಗೆ ಪಟ್ಟ ಕಟ್ಟಿತು. ಆದರೆ ಅದೇ ಮೋದಿ ಈಗ ಜಾಗತೀಕರಣದ ಲಾಭ ವ್ಯಾಪಾರಿ ವರ್ಗಕ್ಕೆ ಸಂಪೂರ್ಣವಾಗಿ ಸಿಗಬೇಕು ಎಂದು ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರ ವಿದೇಶ ಪ್ರವಾಸಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಒಂದು ಜೋಕು ಹುಟ್ಟಿಕೊಂಡಿದೆ. ಅದೆಂದರೆ ಐದು ವರ್ಷ ಕಳೆದ ಮೇಲೆ, ಮೋದಿ ತಮ್ಮ ಆಪ್ತ ಸಹಾಯಕನನ್ನು ಕೇಳುತ್ತಾರೆ. ಈ ಐದು ವರ್ಷದಲ್ಲಿ ನಾವು ನೋಡದೇ ಇರುವ ದೇಶ ಯಾವುದಾದರೂ ಇದೆಯೇ? ಅದಕ್ಕೆ ಆ ಸಹಾಯಕ: ಒಂದೇ ಒಂದು ದೇಶ ಉಳಿದುಕೊಂಡಿದೆ ಸಾರ್ ಎನ್ನುತ್ತಾನೆ. ಮೋದಿ ಅಚ್ಚರಿಯಿಂದ ಹೇಳುತ್ತಾರೆ. ಅರೇ, ಒಂದು ದೇಶ ಮಾತ್ರ ಉಳಿದಿದೆಯಾ? ನಡೀ ಅದನ್ನೂ ಬೇಗ ಪೂರೈಸಿ ಬಿಡೋಣ.

ಆದರೆ ಸಹಾಯಕ ಹೇಳುತ್ತಾನೆ: ಆದರೆ ನೀವು ಅದಕ್ಕಾಗಿ ಬೇರೆ ಕಡೆ ಹೋಗಬೇಕಿಲ್ಲ ಸಾರ್. ನೀವು ನೋಡದೆ ಉಳಿದಿರುವುದು ಭಾರತ ಮಾತ್ರ. ಮೋದಿ ಮೌನವಾಗುತ್ತಾರೆ. ನೀವೇ ನೋಡಿ. ಲೋಕಸಭಾ ಚುನಾವಣೆಗೂ ಮುನ್ನ ಎಲ್ಲೆಡೆ ತಿರುಗುತ್ತಾ, ಕನಸುಗಳನ್ನು ಹುಟ್ಟಿಸುತ್ತಾ, ಮೋದಿ ತಿರುಗುತ್ತಿದ್ದ ರೀತಿಗೂ, ಈಗಿನ ರೀತಿಗೂ ಅದೆಷ್ಟೊಂದು ವ್ಯತ್ಯಾಸ. ಅಂದ ಹಾಗೆ ಅವರು ಇನ್ನೂ ಭಾರತವನ್ನು ಪೂರ್ತಿಯಾಗಿ ನೋಡಿಲ್ಲ. ಇಪ್ಪತ್ತೈದು ವರ್ಷಗಳಾದರೂ ಅದನ್ನವರು ಈ ಮನಸ್ಥಿತಿಯಲ್ಲಿ ನೋಡಲು ಸಾಧ್ಯವಿಲ್ಲ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 18 July, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books