Ravi Belagere
Welcome to my website
ನಿಮಗೂ ಯಾವಾಗಲೋ ಕಾಲು ಮುರಿದಿರಬಹುದು. ಬಚ್ಚಲಲ್ಲಿ ಕಾಲು ಜಾರಿದ್ದಿರಬಹುದು. ನಡೆಯುತ್ತ ನಡೆಯುತ್ತ ನಿಮ್ಮ ಕಾಲು ಉಳುಕಿರಬಹುದು. ಸ್ವಲ್ಪ ದಿನ ನೀವು ಉಳುಕು ಅಂದುಕೊಂಡಿರುತ್ತೀರಿ: ಡಾಕ್ಟರ್ ಬಳಿಗೆ ಹೋಗಿ ಎಕ್ಸ್‌ರೇ ತೆಗೆಸಿದಾಗ ಅದು hair line fracture. ಆಯ್ತಲ್ಲ? ಮುದ್ದಾಗಿ ಬ್ಯಾಂಡೇಜ್ ಹಾಕಿ ಆರೇ ಆರು ವಾರ ಅದನ್ನು ಹಾಕ್ಕೊಂಡಿರಿ ಅನ್ನುತ್ತಾರೆ. ಅದೊಂಥರಾ ಸಿಮೆಂಟ್‌ನ ಕಟ್ಟೆ ಕಟ್ಟಿದಂತೆಯೇ! ವಿಪರೀತ ಭಾರ. ನಡೆಯುವುದು ಯಮಹಿಂಸೆ. ನಿಮಗೆ ಯಾವತ್ತಾದರೂ ಕೈ ಕಾಲು ಮುರಿದಿದ್ದವಾ? ಯಾಕೆ? Plaster ಸುಖ ಅನುಭವಿಸಿದಿರಾ? ಎಷ್ಟು ದಿನ? ಹೋಗಲಿ ಸಮಸ್ಯೆ ಪೂರ್ಣವಾಗಿ ವಾಸಿಯಾಗಿ ಬಗೆಹರಿಯಿತಾ? ನಿಮ್ಮ ಆಗಿನ ಅನುಭವವನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಒಂದೇ ಒಂದು ಘಮ ಸಾಕು: ಅದು ಎಲ್ಲೆಲ್ಲಿಯವೋ ನೆನಪು ಹೊತ್ತು ಬರುತ್ತದೆ!

ನಿಮಗಾದ ಅನುಭವವೇ ನನಗೂ ಆಗುತ್ತಾ? ನಂಗದು ಗೊತ್ತಿಲ್ಲ. ಈ ಪ್ರಶ್ನೆಯನ್ನು ಉಲ್ಟಾ ಹಾಕಿ ನೋಡಿದರೆ...? ಆಗಲೂ ಅಷ್ಟೆ. I am not sure. ಕೆಲವರು ಹಾಗೆ sensitive ಆಗಿರಲಾರರೇನೋ? ಒಂದು ಸಂಗತಿ ಹೇಳ್ತೇನೆ, ಗಮನಿಸಿ.

ಆಗಿನ್ನೂ ನಾನು ಒಂಬತ್ತನೇ ಕ್ಲಾಸಿನಲ್ಲಿದ್ದೆ ಅಂತ ಕಾಣುತ್ತೆ. ಹೆಚ್ಚೆಂದರೆ ಎಸ್ಸೆಸೆಲ್ಸಿ ಫೇಲಾಗಿದ್ದೆ. ಆ ಮನೆಗೆ ಅಮ್ಮ ಹೋಗುತ್ತಿದ್ದಳು. ಅದೊಂದೇ ಕಾರಣಕ್ಕೆ ನಾನು ಹೋಗುತ್ತಿದ್ದೆ. ಅದು ಗ್ರಹಾಂ ರೋಡ್‌ನಲ್ಲಿತ್ತು. ಒಂಥರಾ ಮೂಲೆ ಮನೆ. ಎಲ್ಲಿಂದಲೋ ಬಂದು ಇನ್ನೊಂದು ರಸ್ತೆ ಗ್ರಹಾಂ ರೋಡ್‌ಗೆ ತಾಕುತ್ತ್ತಿತ್ತು. ಆ ಮನೆ ದೊಡ್ಡದಿತ್ತು. ಆದರೆ ತುಂಬ ಕುಳ್ಳ ಮನೆ. ಮನೆಯಲ್ಲಿದ್ದವರು, ಯಾವುದೋ ಹಳ್ಳಿಯ ಶಾನುಭೋಗರಾ? ನೆನಪಿಲ್ಲ. ಮನೆಯಲ್ಲಿ ಇನ್ಯಾರಿದ್ದರು ಅಂತ ನನಗೆ ನೆನಪಿಲ್ಲ. ಒಳಕ್ಕೆ ಹೊಕ್ಕರೆ ತಕ್ಷಣ ಎಡ ಮತ್ತು ಬಲಗಳಲ್ಲಿ ಸುಮಾರು ಐವತ್ತು ಧಾನ್ಯದ ಮೂಟೆಗಳು. ಪೇರಿಸಿ ಪೇರಿಸಿ ಇಟ್ಟಿದ್ದರು. ಸಂಜೆಯಿನ್ನೂ ಐದಾಗುತ್ತಿದ್ದಂತೆಯೇ ಮನೇಲಿ ಕತ್ತಲು ಕತ್ತಲು. ಕುಳ್ಳ ಮನೆಯಲ್ಲವಾ? ಅದರ ಮನೆಯ ಅಂಗಳದಲ್ಲಿ ಸೈಕಲ್ ನಿಲ್ಲಿಸಿ ಒಳಕ್ಕೆ ಹೋಗಿ ಅಮ್ಮನಿಂದ ನಮ್ಮ ಮನೆಯ ಬೀಗದ ಕೈ ಇಸಿದುಕೊಂಡು ಬಂದು ಬಿಡುತ್ತಿದ್ದೆ.

ಆ ಮನೆಯಲ್ಲಿ ಇದ್ದಾಕೆಯ ಹೆಸರು ಉಮಾ ಅಲ್ಲವಾ? Mostly. ಆಕೆಗೆ ಮೂವತ್ತು ವರ್ಷವಂತೂ ಇದ್ದಾವು. ಮದುವೆಯಾಗಿರಲಿಲ್ಲ. ಕೊರಳಿಗೊಂದು ಬಂಗಾರದ ಚೈನಿರುತ್ತಿತ್ತು. ನನಗೆ ತುಂಬ ನಿಚ್ಚಳವಾಗಿ ನೆನಪಿರುವ ಸಂಗತಿಯೆಂದರೆ, ಉಮಾ ಎಂಬ ಹೆಸರಿರಬಹುದಾಗಿದ್ದ ಆ ಹೆಣ್ಣು ಮಗಳ ಮೊಳಕೈಯಲ್ಲಿ, just ಮೊಳಕೈ ಮೂಲೆಯಲ್ಲಿ ಎರಡು ಮೂರು ಗುಳ್ಳೆಗಳಿದ್ದವು. ಅವು ತೀರ ಇಂದು ನಿನ್ನೆ ಆದ ಗುಳ್ಳೆಗಳಲ್ಲ. ಒಣಗಿ, ಒಂಥರಾ ಶಾಶ್ವತವೆಂಬಂತೆ ಅವು ನಿಂತುಬಿಟ್ಟಿದ್ದವು. ಆ ಕಡೆ ಅವು ಇಸುಬುಗಳೂ ಅಲ್ಲ. ಮೊಳಕೈ ಮೂಲೆಯ dry patch ಮೇಲೆ ಅವು ಆಗಿದ್ದವು. ಕೆಲ ಬಾರಿ ಮೈಮೇಲೆ ಅಂಥವು ಆಗುತ್ತವೆ. ಇಂಗ್ಲಿಷ್‌ನಲ್ಲಿ ವಾರ್ಟ್ ಅಂತಾರೇನೋ? ಕೆಲವು ಬಾರಿ ತುಂಬ ನವೆಯಾಗುತ್ತವೆ ಎಂಬುದನ್ನು ಬಿಟ್ಟರೆ, ಅವು ನೋವೇನೂ ಆಗುವುದಿಲ್ಲ. ಆಕೆಗೆ ಅಂಥ ಗುಳ್ಳೆಗಳಿದ್ದವು. ನಾನೇನೂ ಆ ಕುಳ್ಳ ಮನೆಯಲ್ಲಿ ತುಂಬ ಹೊತ್ತು ಕೂಡುತ್ತಿರಲಿಲ್ಲ. ಆಕೆಗೆ ಬಹುಶಃ ಅಮ್ಮ ಪಾಠ ಹೇಳಿಕೊಡುತ್ತಿದ್ದಳು. ಅವತ್ತಿನ ಹೊಟ್ಟೆಪಾಡಿಗೆ ಅಮ್ಮ ಅದೇನೇನು ಮಾಡುತ್ತಿದ್ದಳಲ್ಲವಾ? ಈಗ ನೆನಪಾದರೆ ಸಂಕಟ-ಸಂಕಟ. ನಾನು ಮುಖ್ಯವಾಗಿ ಹೇಳಬೇಕಾದ ಸಂಗತಿಯೆಂದರೆ, ಆ ಮನೆ ಹೊಕ್ಕ ತಕ್ಷಣ ಮೂಗಿಗೆ ಅಡರುತ್ತಿದ್ದ ವಾಸನೆ. ಅದೊಂಥರಾ ಇಲಿ ಸತ್ತ ವಾಸನೆ. ಅಲ್ಲಂತೂ ಸಾಲು ಸಾಲು ಕಾಳಿನ ಮೂಟೆಗಳಿರುತ್ತಿದ್ದವು. ಒಂದ್ಯಾವುದೋ ಮೂಲೆಯಲ್ಲಿ ಇಲಿ ಸತ್ತು ಬಿದ್ದಿದ್ದರೂ ಬಿದ್ದಿರಬಹುದು. ಹುಡುಕಬೇಕು ಅಂದರೆ ಅವಿಷ್ಟೂ ಮೂಟೆ ಇಳಿಸಿ ಇಲಿ ಹುಡುಕಬೇಕು. ಹಾಗೇ ಬಿಟ್ಟರೆ ಕೆಲವು ದಿನಕ್ಕೆ ಆ ಗುಷ್ಟು ವಾಸನೆ ತಂತಾನೆ ಹೋಗಿ ಬಿಡುತ್ತದೆ ಅಂದುಕೊಂಡು ಅವರು ಬಿಟ್ಟುಬಿಟ್ಟಿದ್ದರೇನೋ?

ಇರಲಿ, ಈಗ ನೀವೇ ಎಣಿಸಿ ಹೇಳಿ. ಮೊದಲಿಗೆ, ಆ ರಸ್ತೆಗಿದ್ದ ಗ್ರಹಾಂ ರೋಡ್ ಎಂಬ ಹೆಸರು. ಅದನ್ನು ಇನ್ನೊಂದು ರಸ್ತೆ ಬಂದು ತಾಗುತ್ತಿತ್ತು ಎಂಬ ವಿವರ. ಅದು ಕುಳ್ಳು ಮನೆ, ಆಕೆ ಉಮಾ, ಪಾಠ ಹೇಳುತ್ತಿದ್ದುದು ಅಮ್ಮ, ಮನೆಯ ಚಾವಿ, ಉಮಾ ಕೊರಳಲ್ಲಿನ ಚೈನು, ಮೊಳಕೈ ತಿರುವಿನಲ್ಲಿ ಗುಳ್ಳೆ, ಮನೆಯಲ್ಲಿ ಪೇರಿಸಿಟ್ಟ ಮೂಟೆಗಳು, ಸಂಜೆ ಕವಿಯುತ್ತಿದ್ದ ಕತ್ತಲು, ಉಮಾಗೆ ಇನ್ನೂ ಮದುವೆಯಾಗಿರಲಿಲ್ಲವೆಂಬ detail, ಅವತ್ತಿನ ನಮ್ಮ ಬಡತನ, ಮೂಟೆಗಳ ಮಧ್ಯೆ ಸತ್ತಿರಬಹುದಾದ ಇಲಿ, ಅದರ ಗುಷ್ಟು ವಾಸನೆ-yes, ಇದೊಂದು ತೆರನಾದ ನೆನಪುಗಳ ಮೆರವಣಿಗೆ, ಯಾದೋಂಕಿ ಬಾರಾತ್! ಇಂಥದೊಂದು ನೆನಪುಗಳ ಮೆರವಣಿಗೆಯನ್ನು ಇವತ್ತಿಗೂ ಕಣ್ಣೆದುರಿಗೆ ತಂದು ನಿಲ್ಲಿಸುವ ಶಕ್ತಿ ಎಂದರೆ... ಆ ಇಲಿ ಸತ್ತ ವಾಸನೆ. Just that. ಬೇರೆ ಏನೇನೂ ಬೇಡ. ಆ ಗುಷ್ಟು ಮೂಗಿಗೆ ಬಡಿಯಬೇಕು. ಇಲ್ಲಿಯೇ ಆಗಬೇಕು ಅಂತಿಲ್ಲ. ಪ್ರಪಂಚದ ಛಪ್ಪನ್ ಐವತ್ತಾರು ದೇಶಗಳ ಪೈಕಿ ಎಲ್ಲಿಯೇ ಆ ಗುಷ್ಟು ನನ್ನ ಮೂಗಿಗೆ ಬಡಿದರೆ ಈ ಯಾದೋಂಕಿ ಬಾರಾತ್ ಹೊರಟು ನಿಲ್ಲುತ್ತದೆ.

ಇದೇ ತೆರನಾದ ಇನ್ನೊಂದು ಸಂಗತಿ ಎಂದರೆ, ಪೆಟ್ರೋಮ್ಯಾಕ್ಸ್ ದೀಪ. ಅದನ್ನ ಗ್ಯಾಸ್ ಲೈಟ್ ಅಂತಲೂ ಅನ್ನುತ್ತಾರೆ. ಈಗಲೂ ಅಲ್ಲೊಂದು ಇಲ್ಲೊಂದು ನೋಡ ಲಿಕ್ಕೆ ಸಿಗಬಹುದು. ನೀವು ತುಂಬ ಹಿಂದೆ ಹಳ್ಳಿಗಳ ಮದುವೆ ಮೆರವಣಿಗೆ ನೋಡಿದ್ದೇ ಆದರೆ ನಿಮಗದು ಪಕ್ಕಾ ನೆನಪಾಗುತ್ತದೆ. Sorry, ನೀವದನ್ನು ಅಜಮಾಸು ಐವತ್ತು ವರ್ಷಗಳ ಹಿಂದೆ ನೋಡಿದ್ದಿರಬೇಕು. ನಾನಂತೂ ಅದನ್ನು ನೋಡಿದ್ದು ಐವತ್ತು ವರ್ಷಗಳ ಹಿಂದೆಯೇ. ಆ ಊರೂ ನೆನಪಿದೆ. ಅದರ ಹೆಸರು ಮಲ್ಲೂರು. ಪಾವಗಡದ ಬಳಿ ಆಂಧ್ರಕ್ಕೆ ಅಂಟಿಕೊಂಡೇ ಇದೆ. ನನ್ನ ದೊಡ್ಡಪ್ಪನ ಊರು ಅದು. ಆತನ ಹೆಸರು ನರಸಿಂಹಪ್ಪ. ಅವರ ಮಗಳು, ನನ್ನನ್ನು ಎತ್ತಿ ಆಡಿಸಿದ ಅಕ್ಕ. ಕಳಾವತಿ ಅಂತ ಆಕೆಯ ಹೆಸರು. ಆಕೆಯ ತಮ್ಮ ಶೇಷಪ್ಪ ಅಂತ ಇದ್ದ. ತುಂಬ ಸಭ್ಯ. ತುಮಕೂರಿನಲ್ಲಿ ಪೋಸ್ಟಲ್ ಡಿಪಾರ್ಟ್‌ಮೆಂಟ್‌ನಲ್ಲಿ ನೌಕರಿ ಮಾಡುತ್ತಿದ್ದವನು ಏಕೋ, ನಿಗೂಢವಾಗಿ ಕೊಲೆಯಾದ.

ಅಂಥ ಮಲ್ಲೂರಿನಲ್ಲಿ ನನ್ನ ಆ ಅಕ್ಕನ ಮದುವೆಯಾಗಿತ್ತು-ನಾನು ಹೋಗಿದ್ದೆ. ಆಗ ನಾನು, ಮನೋಹರ, ವೈ.ಎನ್. ಹೊಸಕೋಟೆಯ ತಿಪ್ಪಿ-ಎಲ್ಲ ಒಂದು ಓರಗೆ ಯವರು. ಅಕ್ಕನ ಮದುವೆಯ ಮೆರವಣಿಗೆ ಹೊರಟಿತ್ತಲ್ಲ? ಅಲ್ಲಿ ಗಂಡು-ಹೆಣ್ಣಿನ ಪಕ್ಕದ್ದಲ್ಲಿ ತಲೆಗೊಂದರಂತೆ ಆರೆಂಟು ಜನ ತಲೆಗಳ ಮೇಲೆ ಪೆಟ್ರೋಮ್ಯಾಕ್ಸ್ ಹೊತ್ತು ನಡೆಯುತ್ತಿದ್ದರು. ಆ ದಿನಗಳಲ್ಲಿ ಕರೆಂಟ್ ಎಲ್ಲಿಯದು? ಜನರೇಟರ್ ಅಂತೂ ಸುಳ್ಳೇ ಸುಳ್ಳು.

ನನಗೆ ನರಸಿಂಹ ದೊಡ್ಡಪ್ಪನ ಮುಖ ನೆನಪಿದೆ. ಆತ ಮದುವೆ ಮನೆಯಲ್ಲೇ ಅದೇಕೋ ಬಿದ್ದುಬಿಟ್ಟಿದ್ದ. ಆತನ ತಂಗಿ ಮೀನಾಕ್ಷಮ್ಮ ಅಂತ ಅಲ್ಲೇ ಇದ್ದಳು. ತನ್ನ ಅಣ್ಣನ ಗಾಯಕ್ಕೆ ಪಟ್ಟಿ ಕಟ್ಟುತ್ತಿದ್ದಳು. ಆ ಮನೆಗೆ ಒಂದು speed breaker ಥರದ ಹೊಸ್ತಿಲು ಇತ್ತು. ನಾವೆಲ್ಲ ಹುಡುಗರು ಆಗ ಹೆದರುತ್ತಿದ್ದುದು ಅಂದರೆ ವಿಶಾಲಮ್ಮ ಅತ್ತಿಗೆಗೆ. ಆಕೆ ಕೆಲ ವರ್ಷಗಳ ಹಿಂದೆ ಕ್ಯಾನ್ಸರ್‌ಗೆ ಬಲಿಯಾದಳು. ನರಸಿಂಹ ದೊಡ್ಡಪ್ಪ ಹೋದ. ಮೀನಾಕ್ಷಮ್ಮ ಹೋದಳು. ಶೇಷಪ್ಪ ಕೊಲೆಯಾದ. ಇತ್ತೀಚೆಗೊಮ್ಮೆ ಚಳ್ಳಕೆರೆಯಲ್ಲಿ ಕಳಾವತಿ ಅಕ್ಕನನ್ನು ಭೇಟಿಯಾಗಿದ್ದೆ. ಇದೆಲ್ಲ ಆಯಿತಲ್ಲ, ಒಮ್ಮೆ ನಾನು ಪಾವಗಡಕ್ಕೆ ಹೋದೆ. ಆ ಸೀಮೆಯ ಬೆಟ್ಟಗಳನ್ನು ನೋಡಬೇಕು ನೀವು. ಹೆದರಿಕೆ ಹುಟ್ಟಿಸುವಂತಹ ಬೆಟ್ಟಗಳವು. ಆಗ ಅಲ್ಲೆಲ್ಲ ನಕ್ಸಲೀಯರು ತುಂಬ active ಆಗಿದ್ದರು. ಸ್ವತಃ ವೆಟ್ಟಿ ಮುತ್ಯಾಲಪ್ಪ ಇದ್ದ. ಆತನೂ ಸೇರಿದಂತೆ ಇಬ್ಬರು ಮೂವರು hard-core ನಕ್ಸಲೈಟರನ್ನು ಭೇಟಿಯಾಗಿ, ಸಂದರ್ಶನ ಮಾಡಿ, ವಾಪಸು ಬೆಂಗಳೂರಿಗೆ ಹೊರಟಿದ್ದೆ. ರಸ್ತೆಯ ಪಕ್ಕದಲ್ಲೇ ಇತ್ತು ಮಲ್ಲೂರು. ನರಸಿಂಹಪ್ಪ ಅದ್ಯಾವ ಕಾಲಕ್ಕೋ ತೀರಿ ಹೋಗಿದ್ದ. ಮನೆಯನ್ನಾದರೂ ನೋಡಿ, ಒಳಗೊಂದು ಸುತ್ತು ಹಾಕಿ ಬರೋಣ ಅಂದುಕೊಂಡೆ. ಆದರೆ ಎಲ್ಲಿದೆ ಮನೆ? ಆರೆಂಟು ಕಲ್ಲಿನ ಕಂಬಗಳಿದ್ದವು ಅಷ್ಟೆ. “ಇದೆಲ್ಲ ಹೀಗೇಕಾಯಿತು? ಆತನ ಮೊಮ್ಮಕ್ಕಳ್ಯಾರೂ ಇಲ್ಲಿ ಇಲ್ಲವಾ?" ಅಂತ ಕೇಳಿದೆ. “ನೀನು ಒಳ್ಳೆ ಮಾತು ಕೇಳಿದಿ ನೋಡು ಸ್ವಾಮೀ. ಇವತ್ತಿನ ದಿನಮಾನದಲ್ಲಿ ಹಳ್ಳಿಗಳಲ್ಲಿ ಯಾವ ಬ್ರಾಹ್ಮಣರು ಉಳಕೊಂಡಿದ್ದಾರೆ...? ಸತ್ತೋರು ಸತ್ತರು. ಉಳಿದೋರು, ಪ್ರಾಣ ಉಳಿಸಿಕೊಂಡ್ರೆ ಸಾಕು ಅಂತ ಓಡಿ ಹೋಗಿ ಪಟ್ಟಣ ಸೇರಿಕೊಂಡ್ರು. ಇಲ್ಲಿ ಯಾರಿ ದ್ದಾರು ಸ್ವಾಮೀ?" ಅಂದ ಒಬ್ಬ ಹಿರಿಯ.

“ಅವರನ್ನ ಆ ಪರಿ ಹೆದರಿಸಿ, ಊರು ಬಿಡಿಸಿದವರು ಯಾರು?" ಅಂದೆ.
“ಅವರೇ ಸ್ವಾಮೀ... ನಕ್ಸಲೈಟರು..." ಅಂತ ಆತ ಪಿಸುಗುಟ್ಟಿದ. ಕೊಂಚ ಹೊತ್ತು ಅಲ್ಲಿದ್ದು ನಾನು ಹೊರಟು ಬಂದೆ. ಮುಂದೆ ಅಂಥಾ ನಕ್ಸಲ್ ವೀರ ವೆಟ್ಟಿ ಮುತ್ಯಾಲಪ್ಪನೇ ತಲೆಮರೆಸಿಕೊಂಡು ನನ್ನಲ್ಲಿಗೆ ಬಂದಿದ್ದ. ನಾಲ್ಕಾರು ಸಲ ಬಂದಿದ್ದ. ತಲೆಗೆ ಗಾಂಧಿ ಟೋಪಿ ಹಾಕಿ, ಹಣೆಗೆ ಮೂರು ತಿರುಪತಿ ನಾಮಗಳನ್ನಿರಿಸಿ ಕೊಂಡು, ಕೂಲಿಂಗ್ ಗ್ಲಾಸ್ ಹಾಕಿಕೊಂಡು ಬರುತ್ತಿದ್ದ. ಆತ ತೀರ ಮಾಮೂಲಿ, ನಾಮ್ ಕಾ ವಾಸ್ತೆ ನಕ್ಸಲೀಯನೇನಲ್ಲ. ಕೊಂಡಪಲ್ಲಿ ಸೀತಾರಾಮಯ್ಯನವ ರಿಗೆ ಆತ ಪರಿಚಯವಿದ್ದ. ಬಂಡಯ್ಯ ಮಾಸ್ಟರ್ ಗೊತ್ತಿತ್ತು. ಅಷ್ಟೇಕೆ, ತೆಲುಗು ದೇಶಂ ಮಂತ್ರಿ-ಶಾಸಕ ಪರಿಟಾಲ ರವಿ ಇದ್ದನಲ್ಲ? ಅವನ ತಂದೆ ಶ್ರೀರಾಮುಲಯ್ಯ ನಿಗೆ ಮುತ್ಯಾಲಪ್ಪ ಪರಿಚಯವಿದ್ದ. ಆತ ಬಂದಾಗ ನಾನು ಮಲ್ಲೂರು ಬ್ರಾಹ್ಮಣರ ಬಗ್ಗೆ ಸುಮ್ಮನೆ ವಿಚಾರಿಸಿದೆ. “ಅವರನ್ನ ನಾವೇನೂ ಮುಟ್ಟಲಿಲ್ಲ ಸ್ವಾಮೀ. ಅವರ ಜಮೀನುಗಳನ್ನು ಕಿತ್ತುಕೊಂಡು ರೈತ ಕೂಲಿಗಳಿಗೆ ಹಂಚಿದ್ದು ನಿಜ. ಮುಂದೆ ಅವರೇ ಊರು ಬಿಟ್ಟು ಹೋದರು. ಅವರನ್ನ ಮುಟ್ಟಿ, ಜೀವ ತೆಗೀಲಿಲ್ಲ ನಾವು. ಪಾಪ, ಆ ಬ್ರಾಹ್ಮಣರ ಮೇಲೆ ಕೈ ಎತ್ತುವಂಥಾದ್ದು ಏನಿತ್ತು ಸ್ವಾಮೀ?" ಅಂತ ಮುತ್ಯಾಲಪ್ಪ ನನ್ನನ್ನೇ ಕೇಳಿದ್ದ. ಅಲ್ಲಿ ಇದ್ದದ್ದು ಒಂದೇ ಬ್ರಾಹ್ಮಣರ ಮನೆ: ನನ್ನ ನರಸಿಂಹ ದೊಡ್ಡಪ್ಪನದು. ಆ ವಿಷಯವನ್ನು ನಾನು ಮುತ್ಯಾಲಪ್ಪನಿಗೆ ಹೇಳಲಿಲ್ಲ. ಆ ಹೊತ್ತಿಗೆ ಪಾವಗಡ ಸೀಮೆಯಲ್ಲಿ ನಕ್ಸಲೀಯ ಚಳು ವಳಿಯ ಕಾವು ಎಂಥದಿತ್ತು ಅಂತ ನನಗೆ ಗೊತ್ತು. ಮುಂದೆ ವೆಟ್ಟಿ ಮುತ್ಯಾಲಪ್ಪನೇ ತೀರಿಕೊಂಡ. ಆತನ ಕರ್ಮಾದಿಗಳಿಗೆ, ಮಾಂಸದ ಊಟಕ್ಕೆ ಬರಬೇಕು ಎಂದು ತೆಲುಗಿನಲ್ಲಿ ಪ್ರಿಂಟಾದ ಒಂದು ಕಾರ್ಡು ಬಂದಿತ್ತು. ಮುತ್ಯಾಲಪ್ಪನ ಮಕ್ಕಳು ಕಳಿಸಿದ್ದಿರಬೇಕು.

ಇದು ಎಲ್ಲಿಂದ ಹೊರಟು ಎಲ್ಲಿಗೆ ಹೋಗಿ, ಕಡೆಗೆ ಎಲ್ಲಿಗೆ ಬಂದು ನಿಂತಿತು ನೋಡಿ? Just, ಒಂದು ಪೆಟ್ರೋಮ್ಯಾಕ್ಸ್ ಬೆಳಕು, ಅದರ hiss ಎಂಬ ಸದ್ದು ಸಾಕು. ಇವು ನಿಮಗೂ ಆಗಿರುತ್ತವೆ. Nothing great about me. ನಿಮಗೆ ಪಾಪ, ನೂರೆಂಟು ಕೆಲಸ. ನನಗೆ ಬರೆಯುವುದೇ ಕೆಲಸ. ನಾವು ಬರಹಗಾರರು ಈ ಕತ್ತಲು-ಬೆಳಕು, ಯಾವುದೋ ಘಮ, ಗುಷ್ಟು ವಾಸನೆ ಮುಂತಾದವುಗಳನ್ನು ಹಿಡಿದು ಜೀಕುತ್ತಾ ಬದುಕುವ ಜನ. Sometimes, ಇದು ಶ್ರವಣಕ್ಕೂ ಸಂಬಂಧ ಪಡುತ್ತದೆ. ಒಂದು ಹಾಡು ಸಾಕು. ಯಾವತ್ತಿನದೋ? ಅದರ ಗೊಡವೆಯಿಲ್ಲ. ತುಂಬ ದೂರದಿಂದ, ತುಂಬ soft ಆಗಿ ಆ ಹಾಡು ತೇಲಿ ಬಂದರೂ ಸಾಕು. ನೆನಪುಗಳು ರೆಕ್ಕೆ ಕೆದರಿಕೊಂಡು ಎದ್ದು ಬಿಡುತ್ತವೆ. ಕೇವಲ ನಿನ್ನೆಯಷ್ಟೆ ನನ್ನ ಕಂಪ್ಯೂಟರಿಗೆ ಹಾಡುಗಳ ಒಂದು app ಹಾಕಿಕೊಂಡೆ. ಅದರಲ್ಲಿ ಹಿಂದಿ, ಕನ್ನಡ, ತೆಲುಗಿನ ಹಾಡುಗಳನ್ನು ಕೇಳಬಹುದು. ಅದರಲ್ಲೇ ನಾನು ಕೇಳಿದ್ದು: “ನೀಲಿ ಮೇಘಾಲಲೋ... ಗಾಲಿ ಕೆರಟಾಲಲೋ, ನೀವು ಪಾಡೇ ಪಾಟ ವಿನಿಪಿಂಚೆನೀ ವೇಳಾ..." ಇದನ್ನು ಜಾನಕಿ ಹಾಡಿದ್ದಾರೆ. ಘಂಟಸಾಲ ಕೂಡ ಹಾಡಿದ್ದಾರೆ. ಆದರೆ ನನ್ನ ಕಿವಿಗೆ ಈ ಹಾಡು ಬಿದ್ದ ಕೂಡಲೆ ನೆನಪಾದದ್ದು ಬದರುದ್ದೀನ್!

ಹಾಗೆ ನೋಡಿದರೆ ಗೆಳೆಯ ಬದರುದ್ದೀನ್‌ಗೂ ಈ ಹಾಡಿಗೂ ನೇರಾನೇರ ಎಂಬಂಥ ಯಾವ ಸಂಬಂಧವೂ ಇರಲಿಲ್ಲ: ಈಗಲೂ ಇಲ್ಲ. ಆತನಿಗೆ ತೆಲುಗು ಬರುತ್ತಿರಲಿಲ್ಲ. ಹೇಳಿ ಕೇಳಿ ಕೊಪ್ಪಳ ಜಿಲ್ಲೆಯವನು. ತೆಲುಗು ಎಲ್ಲಿಂದ ಬರಬೇಕು? ಆಗ ಬಳ್ಳಾರಿಯ ಆ ಹಾಸ್ಟೆಲಿನಲ್ಲಿ ತೆಲುಗರದೇ domination. ಆಂಧ್ರದಿಂದ ಬಂದವರು ತುಂಬ ಜನರಿದ್ದರು. ಈಶ್ವರ ರೆಡ್ಡಿ, ರಂಗಾರೆಡ್ಡಿ, ನಾಗಿರೆಡ್ಡಿ, ಸತ್ಯನಾರಾಯಣ-ಎಲ್ಲರೂ ತೆಲುಗರೇ. ಆ ಹಾಡು ‘ಬಾವ-ಮರದಳ್ಳು’ ಎಂಬ ತೆಲುಗು ಸಿನೆಮಾದ್ದು. ಅದನ್ನು ಬರೆದವರು ನಿಜಕ್ಕೂ ಶ್ರೇಷ್ಠ ಗೀತರಚನಕಾರರಾದ ಆರುದ್ರ. ಅವತ್ತಿಗೆ ಇದಕ್ಕೆ ಸಂಗೀತ ನೀಡಿದವರು ಪೆಂಡ್ಯಾಲ ನಾಗೇಶ್ವರ ರಾವು. ಘಂಟಸಾಲ ಮತ್ತು ಜಾನಕಿ ಇಬ್ಬರೂ ಪ್ರತ್ಯೇಕ-ಪ್ರತ್ಯೇಕವಾಗಿ ಹಾಡಿದ್ದಾರೆ. ಆ ಸಿನೆಮಾ ಬಂದು ಇವತ್ತಿಗೆ ಅಜಮಾಸು ಐವತ್ತೈದು ವರ್ಷಗಳಾಗಿವೆ. ಬದ್ರುದ್ದೀನ್ ಹಾಸ್ಟೆಲಿನ ಕಾರಿಡಾರ್ ತುದಿಯಲ್ಲಿ ಬರಿಯದೊಂದು ಲುಂಗಿ ಉಟ್ಟುಕೊಂಡು ನಿಂತು, ತನಗೆ ತಾನೇ ಹಾಡಿಕೊಂಡದ್ದು ೧೯೬೯ರಲ್ಲಿ. ಆಗ ನಾನು ಒಂಬತ್ತನೇ ಕ್ಲಾಸಿನಲ್ಲಿ ಓದುತ್ತಿದ್ದೆ. ಹೀಗೆ ನನ್ನ ಮಿದುಳು ಅಕ್ಷರಶಃ ಗೂಗಲ್‌ನಂತೆ ಹುಡುಕುತ್ತಾ, ಹೆಕ್ಕುತ್ತಾ ಅಲೆದಾಡುತ್ತದೆ.

ಈ ಮೇಲೆ ಕೆಲವು ತೆಲುಗು ಹೆಸರುಗಳನ್ನು ಬರೆದೆ ನೋಡಿ? ಅವರ ಪೈಕಿ ನನಗೆ ಇಷ್ಟವಾಗುತ್ತಿದ್ದವರು ಈಶ್ವರ ರೆಡ್ಡಿ, ನಾಗಿರೆಡ್ಡಿ ಮತ್ತು ಬದ್ರುದ್ದೀನ್. ಈ ಮೂರೂ ಜನ ಆಗಿನ್ನೂ ಡಾಕ್ಟರುಗಳಾಗಿರಲಿಲ್ಲ. ಅವರು BAMS ಓದುತ್ತಿದ್ದರು. ಆಗ ಆಯುರ್ವೇದಿಕ್ ಕಾಲೇಜು ಮತ್ತು ಹಾಸ್ಟೆಲುಗಳೆರಡೂ ಎದುರಾಬದುರಾ ಇದ್ದವು: ಸತ್ಯನಾರಾಯಣ ಪೇಟೆಯ ಎಂಟ್ರೆನ್ಸ್‌ನಲ್ಲಿ. ಬದ್ರುದ್ದೀನ್ ಕೊಂಚ ಸ್ಥೂಲದೇಹಿ. ಆತನಿಗೆ ಕೊಂಚ ಉಬ್ಬು ಹಲ್ಲು. ಆದರೆ ಮೈ ಬಣ್ಣ ಚೆನ್ನಾಗಿತ್ತು. ಎಲ್ಲರೊಂದಿಗೂ ಬೆರೆಯುತ್ತಿದ್ದ. ಇಷ್ಟು ವರ್ಷಗಳಾದರೂ ನನಗೆ ಉತ್ತರ ಸಿಗದೆ ಸತಾಯಿಸುತ್ತಿರುವ ಸಂಗತಿಯೆಂದರೆ, ಆಯುರ್ವೇದಿಕ್ ವಿದ್ಯಾರ್ಥಿಗಳೇ ಇದ್ದ ಆ ಹಾಸ್ಟೆಲಿನಲ್ಲಿ ನಾನೇಕೆ ಇದ್ದೆ? ಅಲ್ಲಿಂದ ನನ್ನ ಮನೆ ಸಾಕಷ್ಟು ಹತ್ತಿರದಲ್ಲಿತ್ತು. ಮನೆಗೆ ಹೋಗಿ ಊಟ ಮಾಡಿ ಬರುತ್ತಿದ್ದೆ. ಈಶ್ವರರೆಡ್ಡಿ ಅವತ್ತಿಗಾಗಲೇ ವಿಪರೀತ ಓದಿನ book worm. ಅವರ ಮುಂದಲೆಯಲ್ಲಿ ಕೂದಲು ಅವತ್ತಿಗಾಗಲೇ ತೆಳುವಾಗ ತೊಡಗಿತ್ತು. ಅವರವು ಕೊಂಚ ಮಟ್ಟಿಗೆ ಕೆಂಚಗೂದಲು. ವಿಪರೀತವಾಗಿ ಸಿಗರೇಟು ಸೇದುತ್ತಿದ್ದರು. ನಾನು ಹಾಸ್ಟೆಲಿನ ಇತರೆ ವೈದ್ಯ ವಿದ್ಯಾರ್ಥಿಗಳಂತೆ ರೆಟ್ಟೆ ದಪ್ಪದ ಪುಸ್ತಕಗಳನ್ನೇನೂ ಓದಬೇಕಿರಲಿಲ್ಲವಲ್ಲ? ಆರಾಮಾಗಿ ಉಂಡು, ತಿಂದು ಬೀಡಿ-ಪಾಡಿ ಸೇದಿಕೊಂಡು ಬಿಡುಬೀಸಾಗಿ ಇರುತ್ತಿದ್ದೆ. ಹಾಸ್ಟೆಲಿನ ತುಂಬ ನನಗೆ ಫ್ರೆಂಡ್ಸೆ! ಅವರೆಲ್ಲ ನನಗಿಂತ ದೊಡ್ಡವರು. ರೂಮಿಗೆ ಹೋದರೆ ಸ್ನೇಹದಿಂದಲೇ ಮಾತನಾಡಿಸುತ್ತಿದ್ದರು. ಆದರೆ none like Badaruddin. ಆತನ ಪ್ರೀತಿಯೇ ಬೇರೆ. “ಆ ಹಾಡು ನನಗೋಸ್ಕರ ಒಂದು ಸಲ ಹಾಡಿ ಬಿಡು" ಅಂತ ಗಂಟು ಬೀಳುತ್ತಿದ್ದೆ. ತಪ್ಪದೆ ಹಾಡುತ್ತಿದ್ದ: “ನೀಲಿ ಮೇಘಾಲಲೋ..."

ಇದೆಲ್ಲ ಆಗಿ ಎಷ್ಟಾದವು? ನಲವತ್ತೈದು ವರ್ಷಗಳಾ? ನೆನೆಸಿಕೊಂಡರೆ “ಹೌದಲ್ವಾ?" ಅನ್ನಿಸುತ್ತದೆ. ಅಲ್ಲಿದ್ದುಕೊಂಡೇ ನಾನು ಎಸೆಸೆಲ್ಸಿ ಪರೀಕ್ಷೆ ಬರೆದು: ಡುಮುಕಿಯೂ ಹೊಡೆದೆ. ಅವರೆಲ್ಲ ಮುಂದೆ ಡಾಕ್ಟರುಗಳಾದರು. ಆ ಪೈಕಿ ಅಚ್ಚರಿಯೆಂದರೆ, ಡಾ.ಈಶ್ವರ ರೆಡ್ಡಿ ಆಯುರ್ವೇದಿಕ್ ಕಾಲೇಜಿನಲ್ಲಿ ಲೆಕ್ಚರರ್ ಆಗಿ ಸೇರಿಕೊಂಡರು. ನನ್ನ ಕಂಪೋಂಡಿನಲ್ಲೇ ಇದ್ದ ಪುಟ್ಟದೊಂದು ಕೋಣೆಗೆ ಬಾಡಿಗೆಗೆ ಬಂದರು. ಅಮ್ಮನಿಗೆ ಅವರ ಮೇಲೆ ತುಂಬ ಗೌರವ, ನಂಬಿಕೆ. ಸಣ್ಣಪುಟ್ಟ ಅನಾರೋಗ್ಯಕ್ಕೆಲ್ಲ ಅವರೇ ಡಾಕ್ಟರು. ಆಗ ಡಾ.ಈಶ್ವರ ರೆಡ್ಡಿಯವರಿಗೆ ಮದುವೆಯಾಗಿರಲಿಲ್ಲ. ತಲೆ ಮಾತ್ರ ಪೂರ್ತಿ ಬೋಳಾಗಿತ್ತು. ಅಲ್ಲಿದ್ದಾಗಲೇ ಅವರು ಬೆಂಗಳೂರಿಗೆ ಬಂದು ಒಂದು ವಿಗ್ ಖರೀದಿಸಿ ತಂದಿದ್ದರು. ಹಾಕಿಕೊಳ್ಳುತ್ತಲೂ ಇದ್ದರು. ಅವರಿಗೆ ಆಯುರ್ವೇದಿಕ್ ಆಸ್ಪತ್ರೆಯವಳೇ ಆದ ನರ್ಸ್ ಒಬ್ಬಾಕೆಯೊಂದಿಗೆ ಸ್ನೇಹವಿತ್ತು. ಆಕೆ ಕೊಂಚ ಸ್ಥೂಲದೇಹಿ. ರೂಮಿಗೇ ಬರುತ್ತಿದ್ದಳು. ನಮ್ಮೊಂದಿಗೆಲ್ಲ ಕಲೆತು-ಬೆರೆತು ಇರುತ್ತಿದ್ದಳು. ಕೆಲವು ಸಲ ಅವರಿಬ್ಬರಿಗೂ ಜಗಳ. ಈಶ್ವರ ರೆಡ್ಡಿ ಜೋರಾಗಿ ಮಾತಾಡಿದವರೇ ಅಲ್ಲ. ನರ್ಸ್ ಮಾತ್ರ ಕಿರಿಚುತ್ತಿದ್ದಳು.

ಉಳಿದಂತೆ, ಒಬ್ಬ ವೈದ್ಯರಾಗಿ, ಬೋಧಕರಾಗಿ ಡಾ.ಈಶ್ವರ ರೆಡ್ಡಿ ಹೇಗಿದ್ದರು ಎಂಬುದು ನನಗೆ ಗೊತ್ತಿರಲಿಲ್ಲ. ಭೇಟಿಯಾಗಲಿಕ್ಕೆಂದು ತುಂಬ ಜನ ವಿದ್ಯಾರ್ಥಿಗಳು ಬರುತ್ತಿದ್ದರು. ತುಂಬ ಗೌರವಿಸುತ್ತಿದ್ದರು. ರೆಡ್ಡಿಯವರು ವಿಪರೀತ ಓದುತ್ತಿದ್ದರೆಂಬುದಷ್ಟೆ ನನ್ನ ಗಮನಕ್ಕೆ ಬಂದಿತ್ತು. ಕೆಲಬಾರಿ ಅವರ ಸಿಗರೇಟು ಇಸಿದುಕೊಂಡು ಸೇದುತ್ತಿದ್ದೆ. ಅವರಂತೂ chain smoker. ಮುಂದೆ ನಾನು ಬಳ್ಳಾರಿಯಿಂದ ಗುಳೇ ಎದ್ದು ಬೆಂಗಳೂರಿಗೆ ಬಂದೆನಲ್ಲ? ಒಮ್ಮೆ ಡಾ.ರೆಡ್ಡಿ ನನ್ನನ್ನು ಹುಡುಕಿಕೊಂಡು ಆಫೀಸಿಗೇ ಬಂದರು. ನಾನು ಅವತ್ತಿಗಾಗಲೇ ಖ್ಯಾತನಾಗಿದ್ದೆ. ‘ಪತ್ರಿಕೆ’ಯಂತೂ ಕಡುಗಪ್ಪನೆಯ ರೇಸು ಕುದುರೆ! ಜೊತೆಯಲ್ಲಿ ತಮ್ಮ ಜೂನಿಯರ್ ಡಾ.ಕ್ಷೀರಸಾಗರ ತುಕಾರಾಂ ಅವರನ್ನೂ ಕರೆದುಕೊಂಡು ಬಂದಿದ್ದರು. ಇಬ್ಬರೂ ಸಿಗರೇಟು ಸೇದುತ್ತಾ, ಯಥಾಪ್ರಕಾರದ ಮಾತು. ಅವರ ಮಧ್ಯೆ ನನಗೆ ಯಾಕೆ ನೆನಪಾದನೋ ಕಾಣೆ, ಬದ್ರುದ್ದೀನ್ ನೆನಪಾದ.

“ಹ್ಞಾ ರವೀ, ಬದ್ರುದ್ದೀನ್ ಅಲ್ಲೇ ಕೊಪ್ಪಳದಲ್ಲೇ ಇದಾನೆ. ಹೆಸರಿಗೊಂದು ಕ್ಲಿನಿಕ್ಕು, ಪ್ರಾಕ್ಟೀಸು. ಅದಕ್ಕಿಂತ ಹೆಚ್ಚಾಗಿ ಒಂಥರಾ ಮೌಲ್ವಿಗಳ ಥರಾ ಆಗಿ ಹೋಗಿದಾನೆ. . Looks very religious" ಅಂದರು. ನಾನು ಬದ್ರುದ್ದೀನ್‌ನ ವಿಳಾಸ ಕೂಡ ಕೇಳಲಿಲ್ಲ. ಅಂಗೈ ಅಗಲದ ಆ ಕೊಪ್ಪಳದಲ್ಲಿ ಗೆಳೆಯನನ್ನು ಹುಡುಕೋದು ಕಷ್ಟವೇ? ನನಗೆ ಕೊಪ್ಪಳ ತುಂಬ ಪರಿಚಿತ. ಆದರೆ ಕೊಪ್ಪಳಕ್ಕೆ ಹೋಗೋದು ಮಾತ್ರ ಆಗಲಿಲ್ಲ. ಇವತ್ತಿಗೂ ಆಗಿಲ್ಲ. ಮುಂದೆ ಡಾ.ರೆಡ್ಡಿ ಇನ್ನೊಮ್ಮೆ ಬಂದರು. ಬದ್ರುದ್ದೀನ್ ಸುದ್ದಿ ನಾನೇ ತೆಗೆದೆ.

“ರವೀ, I met him. ಅದೇನು ಕಾರಣವೋ ಗೊತ್ತಿಲ್ಲ. ಪರೀಕ್ಷೆ ಮಾಡಿ ನೋಡೋಣ ಅಂದರೆ ಅವನು ಒಪ್ಪಲಿಲ್ಲ. ಎಷ್ಟು ಕೃಶನಾಗಿ ಹೋಗಿದ್ದಾನೆ ಅಂದರೆ, ಇಡೀ ಮೈಯಲ್ಲಿ ಒಂದು ಪಾವು ಮಾಂಸ ಇಲ್ಲ. Felt very bad. ಅದೇನೂ ಗುಣ ಆಗದಂಥ ಖಾಯಿಲೆ ಅಲ್ಲ. ಆದರೆ ಅವನಿಗೇ ಚಿಕಿತ್ಸೆ ಮಾಡಿಸಿಕೊಳ್ಳೋ ಮನಸ್ಸಿರಲಿಲ್ಲ" ಅಂದರು.

ಮೂರನೇ ಬಾರಿ ಭೇಟಿಯಾದಾಗ ಡಾ.ರೆಡ್ಡಿ ಕೊಂಚ ವಿಷಣ್ಣರಾಗಿ ಮಾತಾಡಿದ್ದರು. ಗೆಳೆಯ ಬದ್ರುದ್ದೀನ್ ತೀರಿ ಹೋಗಿದ್ದ. ಅವನ ಸಜ್ಜನಿಕೆ ನನಗೆ ಗೊತ್ತಿತ್ತು. ಡಾ. ರೆಡ್ಡಿಗೆ ಅರ್ಥವಾಗದ ಖಾಯಿಲೆ ಅಲ್ಲ. ತುಂಬ ರಿಲಿಜಿಯಸ್ ಆಗಿದ್ದ ಆ ಮಿತ್ರನಿಗೆ ಏಡ್ಸು-ಪಾಡ್ಸು ತಗಲೋ ಛಾನ್ಸೇ ಇರಲಿಲ್ಲ. ಒಟ್ಟಿನಲ್ಲಿ ಆತ ಉಳಿದಿರಲಿಲ್ಲ. ದುರಂತ ಅಲ್ಲಿಗೇ ನಿಲ್ಲಲಿಲ್ಲ. ಅಷ್ಟು ಒಳ್ಳೆಯ ವೈದ್ಯರಾಗಿದ್ದ ಡಾ.ಈಶ್ವರ ರೆಡ್ಡಿ, ತಮ್ಮದೇ ಬಿ.ಪಿ. ನಿರ್ಲಕ್ಷ್ಯ ಮಾಡಿ, ಅದೊಂದು ದಿನ ಬಚ್ಚಲು ಮನೇಲಿ ಬಿದ್ದರು. ಆಗ ತಪ್ಪಿದ ಪ್ರಜ್ಞೆ ಮತ್ತೆ ಬರಲಿಲ್ಲ. ಅವರು ಮಿದುಳಿನ ಹೆಮೊರೇಜ್ ಆಗಿ ತೀರಿಕೊಂಡರು. ಮದುವೆಯಾಗಿ ಅವರಿಗೆ ಮಕ್ಕಳಾಗಿದ್ದರು. ತೀರ ಸಾಯೋದಕ್ಕೆ ಒಂದು ತಿಂಗಳ ಮುಂಚೆ ನನಗೆ ಸಿಕ್ಕಿದ್ದರು. ಸಾವಿನ ಸುದ್ದಿಯನ್ನ ಅವರ ಮಿತ್ರ ಡಾ.ಕ್ಷೀರಸಾಗರ ತುಕಾರಾಂ ಫೋನು ಮಾಡಿ ತಿಳಿಸಿದ್ದರು.

ಆಯ್ತಲ್ಲ, ಮೊನ್ನೆ ಐಪ್ಯಾಡ್‌ನಲ್ಲಿ ಏನೋ ಮಾಡುತ್ತಿದ್ದವನು ಫಕ್ಕನೆ ಅದೇ ತೆಲುಗು ಹಾಡು ಕೇಳಿದೆ. ಅದೇ ಹಾಡು: ನೀಲಿ ಮೇಘಾಲಲೋ...! ಗೆಳೆಯ ಬದ್ರುದ್ದೀನ್ ನೆನಪಾದ. ಅದರ ಮರುದಿನವೇ, ಉಗಾಂಡಾದಲ್ಲಿ ನೆಲೆಯಾಗಿರುವ ಪ್ರಕಾಶ್ ಮತ್ತು ಅವರ ಪತ್ನಿ ರಶ್ಮಿ ಅಗ್ನಿಹೋತ್ರಿ ಆಫೀಸಿಗೆ ಬಂದಿದ್ದರು. ಅವರು ನನ್ನ ಫೇಸ್‌ಬುಕ್ ಗೆಳೆಯರು. ಅವರೊಂದಿಗೆ ಪ್ರಕಾಶ್ ಅವರ ಸೋದರಿ ಬಂದಿದ್ದರು. ಆಕೆ ಆಯುರ್ವೇದಿಕ್ ಡಾಕ್ಟರು ಅಂತ ಪರಿಚಯ ಮಾಡಿಕೊಡುತ್ತಿದ್ದಂತೆಯೇ ನಾನು ಡಾ.ರೆಡ್ಡಿ ಅಂದ. “ಸರ್, ಅವರೊಂದು ಎನ್‌ಸೈಕಲೋಪೀಡಿಯಾ ಇದ್ದ ಹಾಗೆ. ತಲೆತಲಮಾರಿಗೂ ಅವರ ಪರಿಚಯವಾಗ್ತಾನೇ ಇರ್ತಾರೆ. ತುಂಬ ಅಥಾರಿಟೇಟಿವ್ ವೈದ್ಯರು" ಅಂದರಾಕೆ.

ಎಲ್ಲವೂ ಒಂದರ್ಥದಲ್ಲಿ ಕಾಕತಾಳೀಯವೇ. ಇದು ನನಗೊಬ್ಬನಿಗೇ ಆಗೋ ಅನುಭವವಲ್ಲ. ಒಂದು ವಾಸನೆ, ಒಂದು ಹಾಡು, just ಒಂದು ಶಬ್ದ... ಎಲ್ಲೆಲ್ಲಿಯವೋ ನೆನಪುಗಳನ್ನು ಎಬ್ಬಿಸಿಕೊಂಡು ಬಂದು ಅಂಗಳದಲ್ಲಿ ಬಿಟ್ಟು ಹೋಗುತ್ತವೆ. ನಿಮಗೂ ಈ ಅನುಭವವಾಗಿರುತ್ತದೆ. ವ್ಯತ್ಯಾಸವೆಂದರೆ, ನಾನು ಇದನ್ನೆಲ್ಲ ಬರ್‍ಕೋತೀನಿ. ನೀವು ಕೇವಲ ಇದನ್ನ ಓದುತ್ತೀರಿ.

ನಿಮ್ಮವನು
ಆರ್.ಬಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 14 July, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books