Ravi Belagere
Welcome to my website
ನಿಮಗೂ ಯಾವಾಗಲೋ ಕಾಲು ಮುರಿದಿರಬಹುದು. ಬಚ್ಚಲಲ್ಲಿ ಕಾಲು ಜಾರಿದ್ದಿರಬಹುದು. ನಡೆಯುತ್ತ ನಡೆಯುತ್ತ ನಿಮ್ಮ ಕಾಲು ಉಳುಕಿರಬಹುದು. ಸ್ವಲ್ಪ ದಿನ ನೀವು ಉಳುಕು ಅಂದುಕೊಂಡಿರುತ್ತೀರಿ: ಡಾಕ್ಟರ್ ಬಳಿಗೆ ಹೋಗಿ ಎಕ್ಸ್‌ರೇ ತೆಗೆಸಿದಾಗ ಅದು hair line fracture. ಆಯ್ತಲ್ಲ? ಮುದ್ದಾಗಿ ಬ್ಯಾಂಡೇಜ್ ಹಾಕಿ ಆರೇ ಆರು ವಾರ ಅದನ್ನು ಹಾಕ್ಕೊಂಡಿರಿ ಅನ್ನುತ್ತಾರೆ. ಅದೊಂಥರಾ ಸಿಮೆಂಟ್‌ನ ಕಟ್ಟೆ ಕಟ್ಟಿದಂತೆಯೇ! ವಿಪರೀತ ಭಾರ. ನಡೆಯುವುದು ಯಮಹಿಂಸೆ. ನಿಮಗೆ ಯಾವತ್ತಾದರೂ ಕೈ ಕಾಲು ಮುರಿದಿದ್ದವಾ? ಯಾಕೆ? Plaster ಸುಖ ಅನುಭವಿಸಿದಿರಾ? ಎಷ್ಟು ದಿನ? ಹೋಗಲಿ ಸಮಸ್ಯೆ ಪೂರ್ಣವಾಗಿ ವಾಸಿಯಾಗಿ ಬಗೆಹರಿಯಿತಾ? ನಿಮ್ಮ ಆಗಿನ ಅನುಭವವನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಅವರಿವರ ಮಾತೇಕೆ ನೀವು ಬನ್ನಿ ಸಾಕು

ಅವತ್ತು ವಿಶೇಷ ದಿನ.

ನನಗೆ ಯಾವ ದಿನವೂ ವಿಶೇಷವಲ್ಲ, ಕೆಟ್ಟ ದಿನವಲ್ಲ, ಶುಭ-ಅಶುಭಗಳೆರಡೂ ಅಲ್ಲ. ಅವರಿ ವರದಿರಲಿ, ನನ್ನದೇ ಬರ್ತ್ ಡೇ ಮರೆತು ಹೋಗುತ್ತೇನೆ. ಮಕ್ಕಳ ಜನ್ಮದಿನ ನೆನಪಿರುವುದಿಲ್ಲ. ಹೆಚ್ಚೆಂದರೆ, ನನ್ನ ಕೋರ್ಟು ಕಚೇರಿಗಳ ಮುಖ್ಯವಾದ date ನೆನಪಿರುತ್ತದೆ. ಆದರೂ ಕೆಲವು ದಿನಗಳು ನಮಗೆ ಗೊತ್ತಿಲ್ಲದೇನೇ ಕೊರಳಿಗೆ ಬೀಳುತ್ತವೆ. ಬೆನ್ನಿಗೆ ತಗುಲಿಕೊಳ್ಳುತ್ತವೆ. ಬೇಡವೆಂದರೂ ನೆನಪಿನಲ್ಲಿ ಉಳಿಯುತ್ತವೆ. ನಟ್ಟ ನಡುರಾತ್ರಿ ಎಬ್ಬಿಸಿ ಕೂಡಿಸಿ ಕಾಡುತ್ತವೆ. ಅಂಥ ದಿನಗಳ ಚಿಕ್ಕದೊಂದು ಪಟ್ಟಿ ಈಗ ನನ್ನ ಎದುರಿನಲ್ಲಿ ಇದೆ.

ಸೆಪ್ಟಂಬರ್ 4.

ಅವತ್ತು ನಾನು ಕೊಂಚ ಮೌನಿ. ನನ್ನ ಪಾಡಿಗೆ ನಾನಿರುವ ದಿನ. ಎಲ್ಲೋ ಕಾಡಿಗೆ ಹೋಗುತ್ತೇನೆ. ಸಮುದ್ರ ದಡವಾದರೂ ಸರಿ. ನಾನು ಬೇರೆ ಏನನ್ನೂ ಮಾಡುವುದಿಲ್ಲ. ಫೋನ್ off ಮಾಡಿಡುತ್ತೇನೆ. ಈಗ ಕುಡಿತವೂ ಇಲ್ಲ. ಬಿಲ್‌ಕುಲ್ ಇಲ್ಲ. ಅವತ್ತು ಪ್ರಾರ್ಥನಾದ ಸುಮಾರು ನೂರಾ ಎಪ್ಪತ್ತೈದು ಆಯಾಗಳು, ಸೆಕ್ಯುರಿಟಿಯವರು, ಡ್ರೈವರುಗಳು ಇತ್ಯಾದಿ ಸಿಬ್ಬಂದಿಯವರಿಗೆ ಬಟ್ಟೆ ಕೊಡುವ ಕಾರ್ಯಕ್ರಮ ಇರುತ್ತದೆ. ನಾನು ಊರಲ್ಲಿ ಇಲ್ಲದಾಗ ಲಲಿತಾ ಆ ಕಾರ್ಯ ನಡೆಸಿಕೊಡುತ್ತಾಳೆ. ಬಟ್ಟೆಯೊಂದೇ ಅಲ್ಲ, ಒಂದಷ್ಟು ದಿನಸಿ, ಹಾಲು, ಮೊಸರು ಇತ್ಯಾದಿ ಹಂಚುತ್ತೇವೆ. ಅಷ್ಟೆ, ನನ್ನ ತಾಯಿಯ ಶ್ರಾದ್ಧ. ಉಳಿದಂತೆ ಧಾರ್ಮಿಕವಾದ ಯಾವುದನ್ನೂ ನಾನು ಮಾಡುವುದಿಲ್ಲ.
ಎರಡನೆಯದು ವರಮಹಾಲಕ್ಷ್ಮಿ ವ್ರತ. ಆ ದಿನ ಚಿಕ್ಕದೊಂದು ಸಂಭ್ರಮ ಮನಸ್ಸಿಗೆ. ಬೇಗ ಎದ್ದು ತಲೆ ಸ್ನಾನ ಮಾಡುತ್ತೇನೆ. ಒಂದಷ್ಟು ಸಿಹಿ ತರಿಸುತ್ತೇನೆ. ಸಿಬ್ಬಂದಿ ಮಿತ್ರರಿಗೆ ಊಟ ಹಾಕಿಸುವುದೂ ಉಂಟು. ಅದು ನನ್ನ ತಾಯಿಯ ಹುಟ್ಟು ಹಬ್ಬದ ದಿನ. ಮನಸ್ಸಿಗೆ ಎಂಥದ್ದೋ ಉಲ್ಲಾಸವಿರುತ್ತದೆ. ಆದರೆ ದೌರ್ಭಾಗ್ಯ ನೋಡಿ? ಕಳೆದ ವರಮಹಾ ಲಕ್ಷ್ಮಿ ವ್ರತದ ದಿನ ಮನಸು ಮುದುಡಿ ಹೋಗುವಂಥ ಕೆಟ್ಟ ಘಟನೆ ನಡೆಯಿತು. ಅದನ್ನು ಸುಮ್ಮನೆ ನೆನೆಸಿ ಕೊಂಡರೂ ಸಾಕು: ಕ್ಯಾಕರಿಕೆ. ಬೇಗ ಎದ್ದು ಸ್ನಾನ ಮಾಡಿ, ಒಗೆದ ಬಟ್ಟೆ ಹಾಕಿಕೊಂಡು, ಶುಭ್ರವಾಗಿ ಮನೆಯಂಗಳಕ್ಕೆ ಬಂದು ಸೂರ್ಯನಿಗೆ ನಮಸ್ಕಾರ ಮಾಡುತ್ತೇವೆ. ಅದೇ ನೆಮ್ಮದಿಯಲ್ಲಿ ವಾಪಸು ಮನೆಗೆ ಹಿಂತಿರುಗುತ್ತೇವೆ. ಎರಡೇ ಹೆಜ್ಜೆ, ಯಾರೋ ಮಾಡಿದ ಅಮೇಧ್ಯದ ಮೇಲೆ ಕಾಲಿಟ್ಟು ಬಿಡುತ್ತೇವೆ. ಆ ಕ್ಷಣಕ್ಕೆ ಮನಸ್ಸಿಗೊಂದು ಅಸಹ್ಯ ವಾಗುತ್ತದಲ್ಲ? ಅಂಥ ಘಟನೆ ಮೊನ್ನೆ ಕಳೆದ ವರ ಮಹಾಲಕ್ಷ್ಮಿ ಹಬ್ಬದಂದು ನಡೆದು ಹೋಯಿತು ಅಮೇಧ್ಯವೇನೋ ಹೋಯಿತು. ಆದರೆ ಎಷ್ಟು ತೊಳೆದರೂ ಪಾದ ಸ್ವಚ್ಛವಾಗಿಲ್ಲ ಅಂತ ಅನ್ನಿಸುತ್ತಲೇ ಇರುತ್ತದೆ.

ಬಿಡಿ, ಅದರ ಮಾತೇಕೆ? ಈ ಸಲದ ಸೆಪ್ಟಂಬರ್ ಐದಕ್ಕೆ ನನಗೆ ನೀವು ಬೇಕು. ಅವತ್ತು ಶನಿವಾರ. ‘ಪತ್ರಿಕೆ’ ಹುಟ್ಟಿ ಬರೋಬ್ಬರಿ ಇಪ್ಪತ್ತು ಮುಗಿದು ಇಪ್ಪತ್ತೊಂದನೇ ವರ್ಷ ಆರಂಭವಾಗುತ್ತದೆ. ಶನಿವಾರವಾದ್ದರಿಂದ ಬೇರೆ ಬೇರೆ ಊರಿನವರೂ ಸಲೀಸಾಗಿ ಪ್ರಯಾಣಿಸಬಹುದು. ತಿಂಗಳ ಆರಂಭವಾದ್ದರಿಂದ ಕಿಸೆಯ ಕಿರಿಕಿರಿಯೂ ಇರುವುದಿಲ್ಲ. ಅದನ್ನೆಲ್ಲ ನೋಡಿಕೊಂಡೇ ಸೆಪ್ಟಂಬರ್ 5, 2015ರಂದು ಶನಿವಾರ, ಸಂಜೆ ಐದೂವರೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ಇರಿಸಿಕೊಂಡಿದ್ದೇನೆ.

ಹೇಳಿದೆನಲ್ಲ? ನನಗೆ ನೀವು ಬೇಕು. ನಿಮ್ಮದೊಂದೈದು ತಾಸು ಬೇಕು. ಅವತ್ತು ಎಲ್ಲ ಕುಳಿತು ಒಂದಷ್ಟು ಹಾಡು ಕೇಳೋಣ. ಆಮೇಲೆ ಭಾಷಣ. ನಂತರ ನಡೆಯೋದು ಪುಸ್ತಕ ಬಿಡುಗಡೆ. ಪೆಂಡಿಗಟ್ಟಲೆ ಪುಸ್ತಕ ಬರೆದು ನಿಮಗೆ ತಲುಪಿಸುತ್ತೇನೆ ಅಂತೆಲ್ಲ ಹೇಳಲಾರೆ. But I will give you the most unexpected thrill.. ಯಾರೂ ಅಂದುಕೊಂಡಿರುವುದು ಸಾಧ್ಯವಿಲ್ಲ. ಅಂಥ ಪುಸ್ತಕ ಕೊಡುತ್ತೇನೆ. ಅದರ ಮುಖಪುಟ ನೋಡಿದರೆ ಸಾಕು: ಒಳಗೆ ಎಂಥ RDX ಬಾಂಬ್ ಇದೆ ಅಂತ ನಿಮಗೇ ಗೊತ್ತಾಗುತ್ತದೆ. ಶ್ರಮಪಟ್ಟು ಬರೆದಿದ್ದೇನೆ. ನೀವು ಆಸೆಪಟ್ಟು ಓದಬೇಕು.

ಸಾಕಷ್ಟು ಮುಂಚಿತವಾಗೇ ತಿಳಿಸಿದ್ದೇನೆ. ನಿಮ್ಮ ಪ್ರಯಾಣದ ಸೀಟು- ಪಾಟು ರಿಸರ್ವ್ ಮಾಡಿಸಿಕೊಳ್ಳಿ. ಅದಕ್ಕಿಂತ ಮುಂಚೆ ಕ್ಯಾಲೆಂಡರಿನಲ್ಲಿ ಸೆಪ್ಟಂಬರ್ 5ರ ದಿನಾಂಕ block ಮಾಡಿಟ್ಟು ಬಿಡಿ. ನಿಮ್ಮನ್ನು ನೋಡಿ ಕಾಲವೇ ಆಯಿತು. “ಈ ಬೆಳಗೆರೆಗೆ
ಏನೋ ಖಾಯಿಲೆಯಂತೆ" ಎಂಬ ರೂಮರ್ ಕಾಲಾಂತರದಿಂದ ಇದೆ. ರೂಮರು ಅವರದು. ಅದಕ್ಕೆ ಯಾವಾಗ ಉತ್ತರಿಸಬೇಕು ಎಂಬ ಲಿಬರ್ಟಿ ನನ್ನದು. ಅದೆಲ್ಲ ಯಾಕೆ? ಅವತ್ತಿಗೆ ನೀವು ಬನ್ನಿ. ಜೊತೆಯಲ್ಲಿ ನಿಂತು, ಕುಂತು, ಹಾಡಿ,
ಹರಟಿ ಅದರಲ್ಲೇ ಹಗುರಾಗೋಣ. ನಿಮ್ಮ ನಿರೀಕ್ಷೆಯಲ್ಲಿರುತ್ತೇನೆ.

-ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 13 July, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books