Ravi Belagere
Welcome to my website
ನಿಮಗೂ ಯಾವಾಗಲೋ ಕಾಲು ಮುರಿದಿರಬಹುದು. ಬಚ್ಚಲಲ್ಲಿ ಕಾಲು ಜಾರಿದ್ದಿರಬಹುದು. ನಡೆಯುತ್ತ ನಡೆಯುತ್ತ ನಿಮ್ಮ ಕಾಲು ಉಳುಕಿರಬಹುದು. ಸ್ವಲ್ಪ ದಿನ ನೀವು ಉಳುಕು ಅಂದುಕೊಂಡಿರುತ್ತೀರಿ: ಡಾಕ್ಟರ್ ಬಳಿಗೆ ಹೋಗಿ ಎಕ್ಸ್‌ರೇ ತೆಗೆಸಿದಾಗ ಅದು hair line fracture. ಆಯ್ತಲ್ಲ? ಮುದ್ದಾಗಿ ಬ್ಯಾಂಡೇಜ್ ಹಾಕಿ ಆರೇ ಆರು ವಾರ ಅದನ್ನು ಹಾಕ್ಕೊಂಡಿರಿ ಅನ್ನುತ್ತಾರೆ. ಅದೊಂಥರಾ ಸಿಮೆಂಟ್‌ನ ಕಟ್ಟೆ ಕಟ್ಟಿದಂತೆಯೇ! ವಿಪರೀತ ಭಾರ. ನಡೆಯುವುದು ಯಮಹಿಂಸೆ. ನಿಮಗೆ ಯಾವತ್ತಾದರೂ ಕೈ ಕಾಲು ಮುರಿದಿದ್ದವಾ? ಯಾಕೆ? Plaster ಸುಖ ಅನುಭವಿಸಿದಿರಾ? ಎಷ್ಟು ದಿನ? ಹೋಗಲಿ ಸಮಸ್ಯೆ ಪೂರ್ಣವಾಗಿ ವಾಸಿಯಾಗಿ ಬಗೆಹರಿಯಿತಾ? ನಿಮ್ಮ ಆಗಿನ ಅನುಭವವನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಒಂದು ಪುಸ್ತಕ ಪ್ರಕಟಿಸುವುದರ ಹಿಂದೆ ಹಿಸ್ಟರಿಯೇನೂ ಇರಲ್ಲ : ಎಕನಾಮಿಕ್ಸ್ ಇರುತ್ತೆ!

“ರೀ ಅವನ ಬಗ್ಗೆ ಮಾತಾಡ್ತಿದೀರಾ? ಅವನು ಶುದ್ಧಾನು ಶುದ್ಧ ಶೆಟ್ಟಿ ಕಣ್ರೀ. ಅವನೊಳಗೆ ಒಂದು ನೂರು ಮಾರ್ವಾಡಿಗಳಿದಾರೆ! ಪೈಸೆಗೆ ಪೈಸೆ ಲೆಕ್ಕ ಹಾಕದೆ ಬಿಡೋನಲ್ಲ. ಏನಂದುಕೊಂಡಿದ್ದೀರಿ ಅವನನ್ನ?" ಎಂಬ ಮಾತು ಕಿವಿಗೆ ಬಿತ್ತು. ಕೊಂಚ ಆಶ್ಚರ್ಯ, ಕೊಂಚ ಕಿರಿಕಿರಿ ಆದದ್ದು ಸುಳ್ಳೇನಲ್ಲ. ಏಕೆಂದರೆ, ಅವಿಷ್ಟೂ ಮಾತುಗಳನ್ನ ಅವರು ಆಡಿದುದು ನನ್ನ ಬಗ್ಗೆ. ವಿಪರೀತ ಸಿಟ್ಟೇನೂ ಬರಲಿಲ್ಲ. ಕೊಂಚ ನೋವಾದದ್ದು ನಿಜ. ಎರಡು ಸಂಗತಿಗಳನ್ನು ನಾನು ಬುದ್ಧಿ ಪೂರ್ವಕವಾಗಿ ದೂರ ಇರಿಸಿದ್ದೇನೆ. ಮೊದಲನೆಯದು ಈ ಲಾಭ-ನಷ್ಟದ ಕುರಿತು ತುಂಬ ತಲೆ ಕೆಡಿಸಿಕೊಳ್ಳುವುದು. ಎರಡನೇದು, ಕಂಪ್ಯೂಟರ್ ಕಲಿಯುವುದು! ಇವೆರಡನ್ನೂ ತುಂಬ ಸೀರಿಯಸ್ಸಾಗಿ ಮಾಡಲು ಹೊರಟರೆ ನನ್ನ ಕ್ರಿಯೇಟಿವಿಟಿಗೆ ಏಟು ಬೀಳುತ್ತದೆ. ಹಾಗಂತ ನಾನು ಅಂದುಕೊಂಡಿದ್ದೇನೆ. “ಸರ್, ನೀವು ಮೊದಲು ಕಂಪ್ಯೂಟರಿನ ಸಹವಾಸ ಬಿಡಿ. ಇಲ್ಲದಿದ್ರೆ ನಿಮ್ಮ ಕ್ರಿಯಾಶೀಲತೆ ಹಳ್ಳ ಹಿಡಿಯುತ್ತೆ" ಅಂತ ತೇಜಸ್ವಿಯವರಿಗೆ ಉದ್ರಿ ಸಲಹೆ ಕೊಟ್ಟು ಬೈಸಿಕೊಂಡಿದ್ದೆ. ಇದು ಹೇಗೆ ಅಂದರೆ, ಮೋಟರ್ ಸೈಕಲ್ ಸವಾರಿ ಮಾಡಿ ಖುಷಿ ಅನುಭವಿಸುತ್ತೇನೆ ಎಂದು ಹೊರಟ ಉತ್ಸಾಹಿಯೊಬ್ಬನು ಬೈಕ್ ರಿಪೇರಿ ಮಾಡಲು ಆರಂಭಿಸಿ, ಅಸಲು ಬೈಕ್ ಸವಾರಿಯನ್ನೇ ಮಾಡದೆ ಅವಿವೇಕಿಯಾದಂತೆ! ನಾನು ಇದೇ ಕಾರಣಕ್ಕೆ ಕಂಪ್ಯೂಟರ್ ಮುಟ್ಟುವುದಿಲ್ಲ. ಬೇಕಾದರೆ ಪರೀಕ್ಷಿಸಿ ನೋಡಿ. ನನ್ನ ಅತೀ ಇಷ್ಟದ್ದು ಆಪಲ್! ಆಪಲ್ ಕಂಪೆನಿಯ ಫೋನು, ಅವರ ಮ್ಯಾಕ್ ಕಂಪ್ಯೂಟರು, ಅವರದೇ lap top, ಜೊತೆಗೆ ಐ-ಪ್ಯಾಡ್, ಮುಂದೆ ಐ-ಪಾಡ್... ಹೀಗೆ ಎಲ್ಲವೂ ನನ್ನ ಬಳಿ ಇವೆ. “ಬೇಗ ನೋಡಿದರೆ, ನಿನ್ನ ಟೇಬಲ್ ಆಪಲ್ ಕಂಪೆನಿಯ show room ಥರಾ ಕಾಣುತ್ತೆ" ಅಂದವಳು ಕಾವ್ಯ. ಆದರೆ ನಾನು ಅವ್ಯಾವುಗಳ ಮೇಲೂ ಮೋಹ ಬೆಳೆಸಿಕೊಂಡಿಲ್ಲ. ಅವು ನನಗೆ ಗೊತ್ತೇ ಇಲ್ಲ ಅಂತೇನಲ್ಲ. ಪ್ರತಿಯೊಂದನ್ನೂ ನಾನು operate ಮಾಡಬಲ್ಲೆ. ಆದರೆ ಮಾಡೋದಿಲ್ಲ. ಪೀಡೆ ಥರಾ ಕೊರಳಿಗೆ ಕಟ್ಟಿಕೊಳ್ಳುವುದಿಲ್ಲ. ನನಗೆ ಅವುಗಳಿಂದ ಆಗಬೇಕಾದ ಕೆಲಸವೇ ನಿದೆಯೋ ಅದನ್ನಷ್ಟೆ ಮಾಡಿ, ಅವುಗಳ ಕದ ಮುಚ್ಚಿ ಎದ್ದು ಬಿಡುತ್ತೇನೆ. ಅದಕ್ಕಿಂತ ಹೆಚ್ಚಾಗಿ ನೀವು ಬಳಸಲಾರಂಭಿಸಿದಿರಾ? you are gone.

ಇನ್ನು ಲೆಕ್ಕಾಚಾರ. ನನಗದು ಗೊತ್ತೇ ಇಲ್ಲ ಎಂದು ಹೇಳಲಾರೆ. ಒಂದು ಪುಸ್ತಕ ಬರೀಬೇಕು ಅಂತ ಅಂದುಕೊಂಡ ತಕ್ಷಣ, ರಫ್ ಆಗಿ ಅದರ ಎಕನಾಮಿಕ್ಸ್ ನನಗೆ ಗೊತ್ತಾಗುತ್ತದೆ. ಪ್ರತೀ ನಿತ್ಯದ ಬರವಣಿಗೆಗೆ ನಾನು ಒಂದು pad ಬಳಸುತ್ತೇನೆ. ಅದರಲ್ಲಿ ಚೂರು ಮಾರ್ಜಿನ್ ಕೂಡ ನಾನು ಇರಿಸುವುದಿಲ್ಲ. ಹಾಗೆ ಬಿಗ್ಗ-ಬಿಗಿ ಬರೆದ ಒಂದು ಪೂರ್ತಿ ಹಾಳೆ ಮತ್ತು ಇನ್ನೊಂದು ಕಾಲು ಪುಟ: ಅಷ್ಟು ಬರೆದರೆ ಅದು ನಾನು ಬರೆಯುವ ಪುಸ್ತಕದ ಒಂದು ಪ್ರಿಂಟೆಡ್ ಪೇಜ್‌ಗೆ ಸರಿ ಹೋಗುತ್ತೆ. ಅಂದರೆ ಒಂದು ಪುಟಕ್ಕೆ ನಾನು ಒಂದೂ ಕಾಲು ಪುಟ ಬರೆಯಬೇಕು. ಇದು ಒಂದು ಹಂತದ ಲೆಕ್ಕಾಚಾರ. ಎರಡನೆಯದು, ಈ ಪುಸ್ತಕ ಯಾವುದರ ಬಗ್ಗೆ ಇದೆ? ಅದರ ಮಾರಾಟ ಬಿಸಿಬಿಸಿಯಾಗಿ ನಡೆದು ಹೋಗುತ್ತದಾ? ಕೊಂಚ slow ಆಗಿ ಅದು ಮುನ್ಸಾಗುತ್ತದಾ? ಈ ಲೆಕ್ಕಾಚಾರದ ಆಧಾರದ ಮೇಲೆ, ಎಷ್ಟು ಸಾವಿರ ಪ್ರತಿ ಮುದ್ರಿಸಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ. ಒಂದು ಪುಸ್ತಕ ಮಾಡೋದು ಅಂದರೆ ಅದಕ್ಕಿಷ್ಟು ರುಪಾಯಿ invest ಮಾಡೋದು ಅಂತಲೇ ಲೆಕ್ಕ. ಮೊದಲು ನನ್ನ ಮೇಲೆ ಎಷ್ಟು investment ಆಗ್ತಿದೆ? ಲೆಕ್ಕ ಹಾಕಿ. ನನ್ನ ‘ಹಿಮಾಗ್ನಿ’ ಕಾದಂಬರಿಗೆ ಸುಮಾರು ಎಂಟರಿಂದ ಹತ್ತು ಲಕ್ಷ invest ಮಾಡಿದೆ. ಮುಕ್ಕಾಲು Europe ಸುತ್ತಿ ಬಂದೆ. ಅಲ್ಲೇ ಕೆಲವೆಡೆ ಕುಳಿತು ಬರೆದೆ. ವಾಪಸು ಬಂದು ಒಂದು ಗುಕ್ಕಿನಲ್ಲಿ ಬರೆದು ಮುಗಿಸಿದೆ. “ನೀವು ಯೋಚನೆ ಮಾಡಲೇಬೇಡಿ: ಧಾರಾಳವಾಗಿ ಇಪ್ಪತ್ತು ಸಾವಿರ ಪ್ರತಿ print ಮಾಡಿಸಿ" ಅಂದೆ. ನನ್ನ ಪುಸ್ತಕಗಳ ಮಾರಾಟ, ಅಲ್ಲಿ ನನ್ನ BBC ಪುಸ್ತಕ ಮಳಿಗೆಯ ವ್ಯಾಪಾರ, ಕೆಲವು ಸಲ ನಾನು ಖರೀದಿಸುವ propertyಗಳ ನಿಭಾವಣೆ ಮುಂತಾದವನ್ನು ನೋಡಿಕೊಳ್ಳುವವನು, ಸುಮಾರು ಎಂಟು ವರ್ಷಗಳಿಂದ ನೋಡಿಕೊಳ್ಳುತ್ತಿರುವವನು ಕುಮಾರ್. ಅವನು ಕೊಂಚ ಯುದ್ಧೋತ್ಸಾಹಿ. “ಬಾಸ್, ನೀವು ಪುಸ್ತಕ ಬರೆದು ಕೊಡಿ ಬಾಸ್. ಮಾರೋ ಜವಾಬ್ದಾರಿ ನಂದು!" ಅನ್ನುತ್ತಿರುತ್ತಾನೆ. ಅಸಲಿಗೆ ಅಕೌಂಟ್ಸ್ ವಿಭಾಗದಲ್ಲಿ ಅಸಿಸ್ಟೆಂಟ್ ಆಗಿ ಬಂದು ಸೇರಿದ ಕುಮಾರ್, ಇವತ್ತಿಗೆ ಪುಸ್ತಕ ಮಾರಾಟದ ಒಳ-ಹೊರಗು ಚೆನ್ನಾಗಿ ತಿಳಿದುಕೊಂಡಿದ್ದಾನೆ. ಅವನು ಹಾಗೆಲ್ಲ ಅನ್ನೋ ಹೊತ್ತಿಗೆ ಅಕೌಂಟ್ಸ್ ವಿಭಾಗದವರು ಈ ಪುಸ್ತಕಕ್ಕೆ ಇಂತಿಷ್ಟು ಲಕ್ಷ ಬಂಡವಾಳ ಹಾಕಬೇಕು ಅಂತ ಕೈಗೆ ಚೀಟಿ ಕೊಡುತ್ತಾರೆ. ಅದೆಲ್ಲದಕ್ಕೂ ತಲೆ ಕೆಡಿಸಿಕೊಳ್ಳಲು ನಮ್ಮ ಉಮೇಶ್ ಇದ್ದಾನೆ: ಉಮೇಶ್ ಹೆಗಡೆ.

ನಾನು ರಫ್ ಆಗಿ ವ್ಯವಹಾರದ ಹಿಂಚು-ಮುಂಚು ನೋಡಿಕೊಳ್ಳುತ್ತೇನೆ. ಅಷ್ಟೇ ಹೊರತು, ಉಳಿದ ಉಪದ್ವ್ಯಾಪಗಳಿಗೆ ತಲೆ ಹಾಕುವುದಿಲ್ಲ. ಈ ಪುಸ್ತಕ-ಇಂತಿಷ್ಟು ಲಕ್ಷ ಗಳಿಸಲಿದೆ ಎಂಬುದು ಕಣ್ಣಳತೆಯ ಸಂಗತಿಯಾಗಿ ನನಗೆ ಗೊತ್ತಾಗುತ್ತದೆ. ಬೇರೆ ಪ್ರಕಾಶಕರು ನನಗೆ ಎರಡು- ಮೂರು ಲಕ್ಷ ಕೊಡಬಹುದು. ನಾನೇ ಬರೆದು, ನಾನೇ ಮುದ್ರಿಸಿ, ನಾನೇ ಮಾರುವುದರಿಂದಾಗಿ ಪ್ರಕಾಶಕರು ಕೊಡುವ ಮೊತ್ತಕ್ಕಿಂತ ಸಲೀಸಾಗಿ ಹತ್ತು ಪಟ್ಟು ಲಾಭ ಬಂದು ಬಿಡುತ್ತದೆ. ನನ್ನ ಲೆಕ್ಕಾಚಾರವೆಲ್ಲ ಈ ಕಣ್ಣಳತೆಯ ಮಟ್ಟದ್ದಾಗಿರುತ್ತದೆಯೇ ಹೊರತು ವಿಪರೀತವಾಗಿ ಅದರಲ್ಲಿ involve ಆಗೋದು ತಪ್ಪು ಮತ್ತು ನಿರರ್ಥಕ. ಇದನ್ನು ಯಾಕೆ ಹೇಳಿದೆ ಅಂದರೆ, ಲೆಕ್ಕಾಚಾರದಲ್ಲಿ ಏನೇನಾಗಲಿದೆ ಅಂತ ಬರೆಯುವ ಮುನ್ನವೇ ನನಗೆ ಗೊತ್ತಾಗಬೇಕು. ಆದರೆ, ಬರೆಯಲು ಕುಳಿತಾಗ ಇದ್ಯಾವ ಲೆಕ್ಕಾಚಾರವೂ ನನ್ನ ಕೈ ತಡೆಯಬಾರದು. ಅಲ್ಲಿ ಸಂಪೂರ್ಣ ಸ್ವಾತಂತ್ರ್ಯ ಅನುಭವಿಸುವ ‘ಪರಮ ಶುದ್ಧ ವಾಲ್ಮೀಕಿ’ ನಾನಾಗಿರಬೇಕು.

ಮೊನ್ನೆ ಅವಳ ಪುಸ್ತಕ ನೋಡಿದಾಗ, ಉಳಿದದ್ದೆಲ್ಲ ನೆನಪಾಯಿತು. ಅವಳು ಅದನ್ನು ಪ್ರಿಂಟು ಮಾಡಿಸಿದ್ದು ಮೂರು ವರ್ಷಗಳ ಹಿಂದೆ. ಅದರಲ್ಲಿ ನನ್ನ ಕುರಿತು ಬರೆದಿದ್ದಳು. ರವಿ ಬೆಳಗೆರೆ ಅಂತ ಹೆಸರನ್ನೇನೂ ಬರೆದಿಲ್ಲ. ‘ಅವನು’ ಅಂತ ಬರೆಯುತ್ತಾಳೆ. ತನ್ನ ಗಂಡನ ಬಗ್ಗೆ ಬರೆಯುವಾಗ ‘ಇವನು’ ಅಂತ ಬರೆಯುತ್ತಾಳೆ. ಅದು ಆತ್ಮಕಥೆಯಾ? ಹಾಗಂತ ಅವಳು ಅನ್ನುತ್ತಾಳೆ. ‘ಆತ್ಮವಿದೆಯಾ?’ ಉಹುಂ, ಆ ಬಗ್ಗೆ ಅವಳು ಸಾಕ್ಷ್ಯ ಒದಗಿ ಸುವುದಿಲ್ಲ. ಅದರ ಪುಟ ಪುಟದಲ್ಲೂ ನನ್ನೆಡೆಗೆ ಭಯಾನಕವಾದ venom ಇದೆ. ಅದು ಸರ್ಪ ವಿಷ. ಎಷ್ಟು ಸಾವಿರ ಪ್ರತಿ ಹಾಕಿಸಿದ್ದಾಳೆ ಅಂತ ನೋಡಿದೆ. ಒಂದೇ ಒಂದು ಸಾವಿರ. ಅವೆಲ್ಲ ಖರ್ಚಾಗಿದೆಯಾ? “ತುಂಬ stock ಇದೆ ಸರ್. ಯಾರಾದರೂ ಅದರ copy ಬೇಕು ಅಂತ ಕೇಳಿದರೆ ನಮ್ಮ ಅಂಗಡೀಗೆ ಕಳಿಸಿ ಸರ್" ಅಂದವನು ಪುಸ್ತಕದ ಅಂಗಡಿಯಾತ. ಅದರಲ್ಲಿ ಏನು ತಿರುಳಿದೆ ಅಂತ ಆ ಪುಸ್ತಕ ಖರ್ಚಾಗಬೇಕು? ಅದೊಂದು ದಿನ ನಾನು ಸಿಂಗಾರ ಬಂಗಾರ ಆಗಿ ಬೆಳಿಗ್ಗೆ ಹತ್ತರ ಸುಮಾರಿಗೆ ಮನೆಯಿಂದ ಆಫೀಸಿಗೆ ಬರುತ್ತಿದ್ದೆ. ಆಗೆಲ್ಲ ನಾನೇ drive ಮಾಡುತ್ತಿದ್ದೆ. ಹಿರಣ್ಣಯ್ಯನವರ ಮನೆ ದಾಟಿ, ನಿವೇದಿ ತಾಳಿದ್ದ ಅಪಾರ್ಟ್‌ಮೆಂಟ್ ದಾಟಿ, ಇನ್ನೇನು ರಸ್ತೆಯ ಏರಿಕೆಗೆ ಗಾಡಿ ಓಡಿಸಬೇಕು ಎಂಬಷ್ಟರಲ್ಲಿ ಈ ಹೆಂಗಸು ಕಾಣಿಸಿದಳು. ಅವಳು ಸ್ಕೂಟರಿನಲ್ಲಿದ್ದಳು. ನೋಡಿಯೂ ನೋಡದಂತೆ ನಾನು ಮುಂದಕ್ಕೆ ಸಾಗಿಹೋದೆ. ನಡೆದದ್ದು ಇಷ್ಟೆ. ಉಳಿದಂತೆ ನನಗೆ ಏನೆಂದರೆ ಏನೂ ಅನ್ನಿಸಲಿಲ್ಲ.

ಆದರೆ ಏನಂತ ಬರೆದಳು ಗೊತ್ತೆ? ಅವನು ಮೊನ್ನೆ ಮೊನ್ನೆ ಸಿಗರೇಟಿಗೆ ಕಾಸಿಲ್ಲ. ಒಂದು ರುಪಾಯಿ ಕೊಡು ಅನ್ನುತ್ತಿದ್ದ. ಈಗ ಅದೆಷ್ಟೋ ಲಕ್ಷಾಂತರ ರುಪಾಯಿಗಳ ವ್ಯಾನ್ ಓಡಿಸಿಕೊಂಡು ಬಂದ. ಎಂಥ ಆಶ್ಚರ್ಯ, confusion, ಆಘಾತ ಆಯಿತು ಗೊತ್ತಾ-ಅಂತೆಲ್ಲ ಬರೆದಿದ್ದಳು. ನಾನು honest ಆಗಿ ಒಂದು ಮಾತು ಹೇಳಲಾ? ನನಗೆ ಆ ಹೆಂಗಸನ್ನು ರಸ್ತೇಲಿ ನೋಡಿದ ಸಂಗತಿ ಸರಿಯಾಗಿ register ಆಗಿರಲೇ ಇಲ್ಲ. ಆಗುವುದು ನನಗೆ ಬೇಕಾಗಿಯೂ ಇರಲಿಲ್ಲ. ಏಕೆಂದರೆ, ನಾನು ಸ್ನೇಹಿತರನ್ನು ಚಿರಕಾಲ ನೆನಪಿಟ್ಟುಕೊಳ್ಳುತ್ತೇನೆ. ನನ್ನ ಶೀಲಕ್ಕ ಸುಮಾರು ನಲವತ್ತು ವರ್ಷಗಳ ಗೆಳತಿ. ಹೆಚ್ಚು ಕಡಿಮೆ ಅಷ್ಟೇ ವರ್ಷದ ಮೈತ್ರಿ ನನ್ನ ಮತ್ತು ಅಶೋಕ ಶೆಟ್ಟರ್ ನಡುವಿನದು. ಆ ಕಾಲದ ನಮ್ಮ ರೂಂ ಮೇಟ್‌ಗಳದು, ಹಾಸ್ಟೆಲಿನಲ್ಲಿ ಇದ್ದವರದು, ಅದಕ್ಕಿಂತ ಮುಂಚೆ ಹೈಸ್ಕೂಲ್‌ನಲ್ಲಿ ನನ್ನ ಜೊತೆಗಿದ್ದವರದು... ಅದರೆಲ್ಲರದೂ ನನಗೆ ನೆನಪಿದೆ. ತೀರ ಮೊನ್ನೆ, ಒಂದು ವಾರದ ಹಿಂದೆ ಮಿತ್ರ ಅಲ್ಲಾಬ? ಸಿಕ್ಕಿದ್ದ. ಅವನು ರಿಟೈರಾಗಿದ್ದಾನೆ. ಈಗ ಬಿಳೀ ಗಡ್ಡದ ಸಾಬಣ್ಣ. ಎಲ್ಲರನ್ನೂ ವಿಚಾರಿಸಿದ ನಾನು ಅವನ ತಾಯಿಯ ಬಗ್ಗೆ ಕೇಳಿದೆ. “ಇದಾರೆ ಇದಾರೆ, ನನ್ನ ಹತ್ತಿರವೇ ಇದ್ದಾರೆ. ಮನೆಗೆ ಬಾ. ಅವರಿಗೂ ಖುಷಿಯಾಗುತ್ತದೆ" ಅಂದ. ನನ್ನ-ಅವನ ಸ್ನೇಹ ೧೯೭೦ಕ್ಕೆ ಹೋಗುತ್ತದೆ. ಹೆಚ್ಚು-ಕಡಿಮೆ ಅಷ್ಟೇ ವರ್ಷದ ಮೈತ್ರಿ ನನ್ನ-ನಫೀಜಾಳದು. ನನಗೆ ಚಂದ್ರಿಕಾ ನೆನಪಿದ್ದಾಳೆ. ಗಾಯತ್ರಿ ಮರೆತಿಲ್ಲ. ಎಲ್ಲೋ ಒಂದೆರಡು ಹಾಯ್-ಬಾಯ್ ಪರಿಚಿತರು ಮರೆವಾಗಿರಬಹುದು. Not friends. ವಯಸ್ಸು ಆಗ್ತಾ ಆಗ್ತಾ ತುಂಬ ಹಳೆಯ ಗೆಳೆಯರು ಮರೆತು ಹೋಗುತ್ತಾರೇನೋ ಅಂತ ಹೆದರಿಕೆಯಾಗಿ, ನಾನು ಒಬ್ಬನೇ ಕುಳಿತಾಗ ಅವರನ್ನೆಲ್ಲ ಸರಣಿ-ಸರಣಿಯಾಗಿ ನೆನಪು ಮಾಡಿಕೊಳ್ಳುತ್ತೇನೆ. ಗೆಳೆತನದ ವಿಷಯದಲ್ಲಿ ನನಗೆ ಖಂಡಿತವಾಗ್ಯೂ ಅಂತಹ ಶ್ರದ್ಧೆ ಇದೆ. “ಮಾರಾಯ, ನಮ್ಮದೆಲ್ಲ ಬಿಡು. ನಿನ್ನದು ಹೇಳು. ನಮ್ಮ ಹಾಗೆ ಸಾಮಾನ್ಯನಲ್ಲ ನೀನು. ನೀನೀಗ ಸೆಲೆಬ್ರಿಟಿ. ಮೈತುಂಬ ಕೆಲಸ ಇಟ್ಟುಕೊಂಡಿದ್ದೀಯ. ಇದೆಲ್ಲದರ ಮಧ್ಯೆ ನಿನಗೆ ನಾವೆಲ್ಲ ನೆನಪಿದ್ದೀವಲ್ಲ" ಅಂತ ನನ್ನ ಪುರಾತನ ಮಿತ್ರ ವೆಂಕಟೇಶ ರೆಡ್ಡಿ ಅಂದ. ಅವನನ್ನ ನಾವು ಅದೇಕೋ, ತಮಾಷೆಗೆ “ಎಂಟಕೇಶ ರೆಡ್ಡಿ" ಅನ್ನುತ್ತಿದ್ದೆವು. ಕೆಲಬಾರಿ ಅದು ‘ಎಂಟ ಕೇಶಿ’ಯೂ ಆಗುತ್ತಿತ್ತು. ಅದನ್ನೆಲ್ಲ ಹೇಳುವ ಹೊತ್ತಿಗೆ ಅವನು “ರವೀ, ನೀನು ಅಗಾಧ ಬಿಡಪ್ಪ!" ಅಂದ.

ಮರೆತು ಬಿಡಬಹುದಾ ಎಂಬ ಆತಂಕ ಕಾಡಿದಾಗ ನಾವು ಬೇರೆಲ್ಲ ಕೆಲಸ ಬಿಟ್ಟು ಒಂದೊಂದೇ ಹಂತದ ಗೆಳೆಯರನ್ನು ಸ್ಮರಿಸಿಕೊಳ್ಳಬೇಕು. ನಮ್ಮ ನೆನಪುಗಳನ್ನು ತಿವಿದು ಜಾಗೃತಗೊಳಿಸಿಕೊಳ್ಳಬೇಕು. I do that. ನನ್ನ ಉಪನ್ಯಾಸಕ ಜೀವನ in a way, ಆರಂಭವಾದದ್ದು ಬಳ್ಳಾರಿಯಲ್ಲಿ. ಅಲ್ಲಿನ ಹುಡುಗೀರ ಕಾಲೇಜಿನಲ್ಲಿ ನಾನು lecturer. ನನಗೆ ಆಗ ಹೆಡ್ ಆಫ್ ದಿ ಡಿಪಾರ್ಟ್‌ಮೆಂಟ್ ಅಂತ ಇದ್ದವರು ಶಾರದಮ್ಮನವರು. ಅವರಿಗೆ ಎರಡು ಹಾಬಿಗಳಿದ್ದವು. ಮೊದಲ ಹಾಬಿ ಅಂದರೆ, ಹಿತ್ತಾಳೆ! ಅವರದು ಚಿಕ್ಕ ಮನೆ. ಮಕ್ಕಳು-ಗಂಡ ಬೆಂಗಳೂರಿನಲ್ಲಿದ್ದರು. ಇವರಿದ್ದುದು ಚಿಕ್ಕ ಮನೆಯಲ್ಲಿ. ಮನೆ ತುಂಬ ಬರೀ ಹಿತ್ತಾಳೆ! ಎಲ್ಲೆಲ್ಲಿಯೋ ಆಯ್ದು ತಂದ ದೀಪಗಂಬಗಳು. ಜೊತೆಗೆ ಆರತಿ ಹಲಗೆಗಳು. ಹಿತ್ತಾಳೆ ಪಾತ್ರೆಗಳು. “ಒಂದು ಸಲ ಕಣ್ಣು ಕಟ್ಟಿಕೊಂಡು ಮೇಡಂ ಮನೇಲಿ ಓಡಾಡಬೇಕು. ಆಗ ಕೈ ಕಾಲಿಗೆ ತಗುಲಿದ್ದೆಲ್ಲವೂ ಹಿತ್ತಾಳೆಯೇ!" ಅನ್ನುತ್ತಿದ್ದೆ ನಾನು. ಅವರಿಗೆ ಆ ತೆರನಾದುದೊಂದು ಹವ್ಯಾಸವಿತ್ತು. ಅದರ ಜೊತೆಗೆ ಇನ್ನೂ ಒಂದು ಹವ್ಯಾಸವಿದೆ ಅಂತ ನನಗೆ ಗೊತ್ತಿರಲಿಲ್ಲ.

ಅದು ಪಠಣ!

ಒಮ್ಮೆ ಅವರ ಮನೆಗೆ ಹೋದೆ. ವಿಶಾಲವಾದ ಕುರ್ಚಿಯಲ್ಲಿ ಕುಳಿತು ಎರಡೂ ಕಣ್ಣು ಮುಚ್ಚಿಕೊಂಡು ಅವರು ಏನನ್ನೋ ಪಠಿಸುತ್ತಿದ್ದರು. ನಾನು ಹೋದ ತಕ್ಷಣ, “ಸುಮ್ಮನೆ ಆ ಛೇರಿನಲ್ಲಿ ಕುಳಿತುಕೋ. ಮಾತಾಡಬೇಡ" ಎಂಬಂತೆ ಕೈ ಮಾಡಿ ತೋರಿಸಿದರು. ನಂತರ ಕೊಂಚ ಹೊತ್ತು ಅದೇನೋ ಮಂತ್ರವನ್ನು ಪಠಿಸಿದರು. ಅದೇನು ಎಂದು ನಾನು ಕೇಳಲಿಲ್ಲ. ಬಹುಶಃ ಜಪವಿರಬೇಕು ಅಂದುಕೊಂಡೆ. ಕಣ್ಣು ಬಿಟ್ಟ ಮೇಲೆ ನನ್ನೆಡೆಗೆ ನೋಡಿ smile ಮಾಡುತ್ತಾ, “ವಯಸ್ಸು ಆಗ್ತಾ ಇರುತ್ತಲ್ಲಪ್ಪಾ? It is a process... ಅದು ನಿಲ್ಲಲ್ಲ. ನನಗೆ ಆಗಲೇ ಅರವತ್ತು ತುಂಬ್ತಿದೆ. ಇನ್ನೆಷ್ಟು ವರ್ಷ ಇರ್ತೇನೋ? Who knows! ಬರೀ ವಯಸ್ಸಾಗೋದು, ಸತ್ತು ಹೋಗೋದೂ ಆದರೆ ಪರವಾಗಿಲ್ಲ. ಆದರೆ ಸಾಯೋಕೆ ಮುಂಚೆ ಕೆಲವು ಸಮಸ್ಯೆಗಳಾಗ್ತವಲ್ಲ? Like, ಕಿವಿ ಮುಚ್ಚಿ ಹೋಗೋದು. ಕಾಲು ಬಿದ್ದು ಹೋಗೋದು... ಹೀಗೆ. ನನಗೆ ಅದೆಲ್ಲಕ್ಕಿಂತ ಭಯ ಹುಟ್ಟಿಸೋದು ಅಂದ್ರೆ, ಕಣ್ಣು ಕಾಣಿಸದೆ ಹೋಗೋದು! I am really scared. ಕಣ್ಣು ಇವೆ ಅನ್ನೋ ಕಾರಣಕ್ಕೆ ನಮಗೆ ಸಮಯ ಹೋಗೋದು ಗೊತ್ತಾಗೋದಿಲ್ಲ. ಸಿನೆಮಾ ನೋಡ್ತೀವಿ, ಅವತ್ತಿನ ಪೇಪರ್ ಓದ್ತೀವಿ. ಎದ್ದು ಒಂದಷ್ಟು ದೂರಕ್ಕೆ walk ಹೋಗ್ತೀವಿ. ಸರಾಗವಾಗಿ ಬಸ್ಸು ಹತ್ತಿ -ಇಳಿದು ಮಾಡ್ತೀವಿ. ಅಕಸ್ಮಾತ್ ಕಣ್ಣು ಹೋಗಿ ಬಿಟ್ರೆ? ಇನ್ನೇನಿದೆ, ಜೀವನವೇ ಕತ್ತಲು. ನನಗೆ ಹಾಗಾಗಬಾರದು ಅಂತ ಈಗಿಂದಾನೇ ಒಂದು ಸಿದ್ಧತೆ ಮಾಡ್ಕೋತಿದೀನಿ. ಎರಡೂ ಕಣ್ಣು ಮುಚ್ಚಿ ಕೊಂಡು ನೆನಪಿರೋ ಅಷ್ಟೂ ಶ್ಲೋಕ, ಎಲ್ಲಿದೋ ಇಷ್ಟು ಮಂತ್ರ, ಹಾಡುಗಳು, ಕೀರ್ತನೆ-ಇವುಗಳನ್ನೆಲ್ಲ ಹೇಳಿಕೊಳ್ತೀನಿ. In a way, I memorise. ನಾಳೆ ಕಣ್ಣು ಹೋದ ಮೇಲೆ ಒಬ್ಬಳೇ ಕೂತು ಇವನ್ನೆಲ್ಲ ನೆನಪು ಮಾಡ್ಕೊಂಡು ಹೇಳ್ಕೋಬಹುದು. ಅಲ್ವಾ? ಇವೆಲ್ಲ ನನಗೆ ಬಾಯಿಗೇ ಬರ್ತವೆ. ಆದರೆ ಮರೆವು? ಎಂಥಾ ಬಾಯಿಗೆ ಬರ್ತವೆ ಬಿಡು ಅಂದುಕೊಂಡದ್ದೂ ಮರೆತು ಹೋಗುತ್ತೆ. ಮರೆವು ಅನ್ನೋದು ಮಹಾಪಾಪಿ. ಅದಕ್ಕೇ ನಾವು ಮತ್ತೆ ಮತ್ತೆ ಇವುಗಳನ್ನೆಲ್ಲ ಸ್ಮರಿಸಿಕೊಳ್ಳೋ ಕೆಲಸ ಮಾಡಬೇಕು" ಅಂದರು ಶಾರದಮ್ಮ ಮೇಡಂ.

ಆ ಕೆಲಸವನ್ನ ನಾನು ಸ್ನೇಹಿತರನ್ನ, ಪರಿಚಿತರನ್ನ ಮನನ ಮಾಡಿಕೊಳ್ಳೋದರ ಮೂಲಕ ಮಾಡುತ್ತೇನೆ. “ಹೌದಲ್ವಾ, ಅವನು ಜೊತೇಲಿದ್ದನಲ್ವಾ? ಅವನು ಹೀಗಂತ ಅಂದ. ವಿಪರೀತ ನಗಿಸಿದ. ಆಗ ಅವನು ಹಿಂಗೇ ಒಂದು ಹಳದಿ ಬಣ್ಣದ ಷರ್ಟ್ ಹಾಕ್ಕೊಂಡಿದ್ದ" ಅಂತ ನೆನಪಿನ ಮೆಲುಕಿಗೆ ಕೆಲಸ ಕೊಟ್ಟುಬಿಡಿ-ನಿಮಗೆ ಅದೇನೇ ಮರೆವಿನ ಶಾಪವಿರಲಿ. ಅದನ್ನ ಮೀರಿ ಈ ನೆನಪಿನ ಬುತ್ತಿ ನೆರವಿಗೆ ಬಂದು ಬಿಡುತ್ತದೆ. “ಅಲ್ಲ ಸರ್...ನಿಮ್ದು ಅದೆಂಥ ನೆನಪಿನ ಶಕ್ತಿ! ಅದ್ಹೇಗೆ ನಿಮಗೆ ಅಂಥಾ ಸೂಕ್ಷ್ಮ ಸಂಗತಿಗಳೂ ನೆನಪಿರ್ತವೆ?" ಎಂದು ಅನೇಕರು ಕೇಳುತ್ತಾರೆ. ಅವರಿಗೆ ನಾನು ಸಜೆಸ್ಟ್ ಮಾಡೋದು ಇದೆ ವ್ಯಾಯಾಮವನ್ನ. Honestly I do this.

ಮನಸು ಅಥವಾ ಮಿದುಳು ವಿಲಕ್ಷಣ ತಾಕತ್ತಿನ ಕಂಪ್ಯೂಟರಿನಂತಹುದು. ಅದಕ್ಕೆ ಏನು ಬೇಕೋ ಆ data ಮಾತ್ರ ಉಳಿಸಿಕೊಳ್ಳುತ್ತದೆ. ಬೇಕಾಗಿಲ್ವಾ? ಸ್ವಲ್ಪೇ ದಿನಕ್ಕೆ ಅದಿಷ್ಟೂ ಡಾಟಾ delete. ತೆಗೆದು ಎಸೆದೇ ಬಿಡುತ್ತದೆ. ಈ ಹೆಂಗಸಿನ ಆತ್ಮಕಥೆಯ ಸಂಗತಿ ಹೇಳುತ್ತಿದ್ದೆನಲ್ಲ? ಅದು ಯಾವತ್ತೋ delete ಆಗಿಹೋದ ಕಸ. ಅವಳ ಸ್ಮರಣೆ ಕೂಡ ನಾನು ಮಾಡಿಕೊಂಡಿಲ್ಲ. ಆತ್ಮಕಥೆ ಓದಿದಾಗ ನೆನಪಾಯ್ತು. ಓ.... this is a deleted trash.... ಅಂದುಕೊಂಡೆ. ಅವಳಿಗಿನ್ನೂ ಅದೆಲ್ಲ ನೆನಪಿದೆ. ಯಾಕೆಂದರೆ, ಅವಳಿನ್ನೂ ಅಲ್ಲೇ, ಅದೇ ಸ್ಥಿತಿಯಲ್ಲೇ ಇದ್ದಾಳೆ. ನಾನು ಬೆಳೆದು ಬಿಡು ಬೀಸಾಗಿ ನಡೆದು ಬಂದು ಬಿಟ್ಟಿದ್ದೇನೆ. ಯಾಕೆ ತಿರುಗಿ ನೋಡಲಿ?

ಆತ್ಮಕಥೆ ಎಂದು ಹೆಸರಿಟ್ಟ ಆ ಹೆಂಗಸಿನ ಕಸವನ್ನು ತಿಪ್ಪೆಗೆ ಹಾಕಿ ನಿರುಮ್ಮಳವಾಗಿ ಕುಳಿತಿದ್ದೇನೆ.

ಅಂದಹಾಗೆ, ನೀವು ಆರಾಮಾಗಿದ್ದೀರಲ್ಲ?

ನಿಮ್ಮವನು
-ಆರ್.ಬಿ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 07 July, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books