Ravi Belagere
Welcome to my website
ನಿಮಗೂ ಯಾವಾಗಲೋ ಕಾಲು ಮುರಿದಿರಬಹುದು. ಬಚ್ಚಲಲ್ಲಿ ಕಾಲು ಜಾರಿದ್ದಿರಬಹುದು. ನಡೆಯುತ್ತ ನಡೆಯುತ್ತ ನಿಮ್ಮ ಕಾಲು ಉಳುಕಿರಬಹುದು. ಸ್ವಲ್ಪ ದಿನ ನೀವು ಉಳುಕು ಅಂದುಕೊಂಡಿರುತ್ತೀರಿ: ಡಾಕ್ಟರ್ ಬಳಿಗೆ ಹೋಗಿ ಎಕ್ಸ್‌ರೇ ತೆಗೆಸಿದಾಗ ಅದು hair line fracture. ಆಯ್ತಲ್ಲ? ಮುದ್ದಾಗಿ ಬ್ಯಾಂಡೇಜ್ ಹಾಕಿ ಆರೇ ಆರು ವಾರ ಅದನ್ನು ಹಾಕ್ಕೊಂಡಿರಿ ಅನ್ನುತ್ತಾರೆ. ಅದೊಂಥರಾ ಸಿಮೆಂಟ್‌ನ ಕಟ್ಟೆ ಕಟ್ಟಿದಂತೆಯೇ! ವಿಪರೀತ ಭಾರ. ನಡೆಯುವುದು ಯಮಹಿಂಸೆ. ನಿಮಗೆ ಯಾವತ್ತಾದರೂ ಕೈ ಕಾಲು ಮುರಿದಿದ್ದವಾ? ಯಾಕೆ? Plaster ಸುಖ ಅನುಭವಿಸಿದಿರಾ? ಎಷ್ಟು ದಿನ? ಹೋಗಲಿ ಸಮಸ್ಯೆ ಪೂರ್ಣವಾಗಿ ವಾಸಿಯಾಗಿ ಬಗೆಹರಿಯಿತಾ? ನಿಮ್ಮ ಆಗಿನ ಅನುಭವವನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಕನಸೆಂಬ ಬೀಜಕ್ಕೆ ನೀವೇ ನೀರು ಹಾಕಿ ಮತ್ತೊಬ್ಬರನ್ನು ಕಾಯುತ್ತಾ ಕೂರಬೇಡಿ

ನಿಮ್ಮ ಬದುಕಿನಲ್ಲಿ ನೀವು ಏನನ್ನಾದರೂ ಸಾಸಬೇಕೆಂದಿದ್ದರೆ, ಗುರಿ ಮುಟ್ಟಬೇಕೆಂದಿದ್ದರೆ ನೀವು ಬಿತ್ತಿಕೊಂಡ ಕನಸಿನ ಬೀಜಕ್ಕೆ ಸದಾಕಾಲ ನೀರು ಎರೆಯುವವರು ಸಿಗಲಿ ಎಂದು ಕಾಯಬೇಡಿ. ಒಂದು ವೇಳೆ ನೀವು ಆ ರೀತಿ ಕಾಯುವವರಾಗಿದ್ದರೆ ಸಾರಿ, ನೀವು ಬಿತ್ತಿಕೊಂಡ ಬೀಜ ಮರವಾಗಿ ಬೆಳೆಯುವುದು ಹಾಗಿರಲಿ, ಟಿಸಿಲೊಡೆದು ಆಕಾಶಕ್ಕೆ ಚಿಮ್ಮಲು ತಯಾರಾಗುವ ಮುನ್ನವೇ ಸಾರ ಕಳೆದುಕೊಂಡು ಬಿಡುತ್ತದೆ.

ನನ್ನ ಬಳಿ ಬರುವವರ ಪೈಕಿ ತುಂಬ ಜನ ತಮ್ಮ ಕನಸುಗಳ ಬಗ್ಗೆ ಹೇಳಿಕೊಳ್ಳುತ್ತಾರೆ. ಒಬ್ಬ ದೊಡ್ಡ ಲೇಖಕನಾಗಬೇಕು, ಪತ್ರಕರ್ತನಾಗಬೇಕು, ನಟನಾಗಬೇಕು, ಒಳ್ಳೆ ಬ್ಯೂಟಿಷಿಯನ್ ಆಗಬೇಕು, ಇಂಜಿನೀರ್ ಆಗಬೇಕು, ಡಾಕ್ಟರ್ ಆಗಬೇಕು, ರಾಜಕಾರಣಿಯಾಗಬೇಕು, ಅದಾಗಬೇಕು, ಇದಾಗಬೇಕು ಎಂದೆಲ್ಲ ಹೇಳಿಕೊಳ್ಳುತ್ತಾರೆ. ಹಾಗೆ ಹೇಳಿದವರ ಪೈಕಿ ಎಷ್ಟು ಜನ ಯಶಸ್ವಿಯಾದರು ಎಂದು ತಿರುಗಿ ನೋಡಿದರೆ ಮುಕ್ಕಾಲು ಪಾಲು ಜನ ಮಾಯವಾಗಿ ಬಿಟ್ಟಿರುತ್ತಾರೆ. ಕಾರಣ ಸ್ಪಷ್ಟ. ಅವರು ತಮ್ಮ ಮನಸ್ಸೆಂಬ ಮಣ್ಣಿನಲ್ಲಿ ಬಿತ್ತಿಕೊಂಡ ಕನಸಿನ ಬೀಜಕ್ಕೆ ಇನ್ನೊಬ್ಬರು ನೀರು ಎರೆಯಲಿ ಎಂದು ಕಾದಿರುತ್ತಾರೆ. ಆದರೆ ನೆನಪಿಡಿ, ನಾವು ಬಿತ್ತಿಕೊಂಡ ಕನಸುಗಳಿಗೆ ನೀರು ಎರೆಯುವವರು ಸಿಗುವುದಿಲ್ಲ ಎಂದಲ್ಲ. ಆದರೆ ಎಲ್ಲ ಕಾಲಕ್ಕೂ ನೀರು ಸುರಿಯುವವರು ಸಿಗುವುದಿಲ್ಲ. ಸಿಕ್ಕರೆ ಫೈನ್. ಸಿಗದಿದ್ದರೆ ನಿಮ್ಮ ಕನಸೆಂಬ ಬೀಜಕ್ಕೆ ನೀವೇ ನೀರು ಸುರಿಯುತ್ತಾ ಹೋಗಿ. ಈ ರೀತಿ ನೀವೇ ನೀರಿನ ಸೆಲೆಯನ್ನು ಗುರುತಿಸಿಕೊಳ್ಳದಿದ್ದರೆ, ಬೀಜಕ್ಕೆ ನೀರು ಸಿಗುವಂತೆ ಮಾಡದಿದ್ದರೆ ಅದು ಟಿಸಿಲೊಡೆಯುವುದಿಲ್ಲ. ಗಿಡವಾಗಿ ನಿಲ್ಲುವುದು, ಮರವಾಗಿ ಬೆಳೆಯುವುದು ಆಮೇಲಿನ ಮಾತು.

ಇವತ್ತು ಮಹಾವ್ಯಕ್ತಿಗಳು ಅಂತ ಕರೆಸಿಕೊಂಡವರ ಪಟ್ಟಿಯನ್ನು ಮುಂದಿಟ್ಟುಕೊಂಡು ನೋಡಿ, ಅವರ ಬದುಕಿನ ದಾರಿಯನ್ನು ಗಮನಿಸಿ. ಅವರು ತಮ್ಮ ಕನಸೆಂಬ ಬೀಜಕ್ಕೆ ಬಹುಪಾಲು ನೀರನ್ನು ಅವರೇ ಸುರಿದಿರುತ್ತಾರೆ. ಹಾಗೆ ಸುರಿಯುತ್ತಾ, ಸುರಿಯುತ್ತಾ ಅದು ಗಿಡವಾಗಿ, ಮರವಾಗಿ ಬೆಳೆಯುವಂತೆ ಮಾಡಿರುತ್ತಾರೆ. ಅಂದ ಹಾಗೆ ನಿಮ್ಮ ಮನಸ್ಸೆಂಬ ಮಣ್ಣಿನಲ್ಲಿ ಬೀಳುವ ಕನಸೆಂಬ ಬೀಜ ಯಾವುದೋ ಮೂಲದಿಂದ ಬಂದು ಬಿದ್ದಿರಬಹುದು. ನನ್ನ ಮಾವ ಬೆಳಗೆರೆ ಕೃಷ್ಣಶಾಸ್ತ್ರಿಗಳ ಬದುಕನ್ನೇ ನೋಡಿ. ಅವರಿಗೆ ಗಾಂಧಿ ಆದರ್ಶ. ಅದೇ ರೀತಿ ಬದುಕಿದ ದೊಡ್ಡ ದೊಡ್ಡ ವ್ಯಕ್ತಿಗಳು ಆದರ್ಶ. ಆದರೆ ಅವರನ್ನು ನೋಡುತ್ತಾ, ನೋಡುತ್ತಾ ಅವರು ಬೆಳೆಯಲಿಲ್ಲ. ಬದಲಿಗೆ ಅವರಿಂದ ಪಡೆದ ಪ್ರೇರಣೆಯನ್ನು ಬೀಜವಾಗಿ ಬಿತ್ತಿಕೊಂಡು ಅದಕ್ಕೆ ತಾವೇ ನೀರು ಎರೆಯುತ್ತಾ ಹೋದರು. ಇವತ್ತು ತಿರುಗಿ ನೋಡಿದರೆ ಅವರು ಒಬ್ಬ ವ್ಯಕ್ತಿಯಂತೆ ಕಾಣುವುದಿಲ್ಲ. ಒಂದು ವಿಶ್ವವಿದ್ಯಾನಿಲಯದಂತೆ ಕಾಣುತ್ತಾರೆ. ಈ ರೀತಿ ಅವರು ಬೆಳೆಯಲು ಹತ್ತಾರು ಜನರ ಸಹಕಾರ ಸಿಕ್ಕಿರುವುದಿಲ್ಲ ಅಂತಲ್ಲ. ಆದರೆ ಎಲ್ಲ ಕಾಲಕ್ಕೂ ಇನ್ನೊಬ್ಬರು ಸುರಿಯುವ ನೀರನ್ನೇ ನೆಚ್ಚಿಕೊಂಡು ಕೂತಿದ್ದರೆ ಅವರು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವೇ ಇರಲಿಲ್ಲ.

‘ತಿರುಕ’ ಅಂತ ತಮ್ಮನ್ನು ಕರೆದುಕೊಳ್ಳುತ್ತಿದ್ದ ಮಲ್ಲಾಡಿ ಹಳ್ಳಿಯ ಶ್ರೀಗಳನ್ನೇ ನೋಡಿ. ಹೆಚ್ಚು ಕಡಿಮೆ ಒಂದು ಶತಮಾನದಷ್ಟು ಕಾಲ ಬದುಕಿದ ಅವರು ಗಾಂಧಿಯ ಆದರ್ಶವನ್ನೇ ಕನಸಾಗಿ ಕಂಡು, ಅದನ್ನೇ ಬೀಜವಾಗಿ ಬಿತ್ತಿಕೊಂಡವರು. ಮಲ್ಲಾಡಿಹಳ್ಳಿ ಎಂಬ ಗ್ರಾಮ ಇವತ್ತು ಭಾರತದ ಭೂಪಟದಲ್ಲಿ ಕಾಣುವಂತೆ ಮಾಡಿದ್ದೇ ಅವರು. ಅವರು ಕಟ್ಟಿದ ವಿದ್ಯಾಸಂಸ್ಥೆಗಳು, ಬೆಳೆಸಿದ ಮಕ್ಕಳು, ಲಕ್ಷಾಂತರ ಜನರಿಗೆ ಕೊಟ್ಟ ಆರೋಗ್ಯ ಭಾಗ್ಯವನ್ನು ನೋಡಿದರೆ ನಿಜಕ್ಕೂ ವಿಸ್ಮಯವಾಗುತ್ತದೆ. ಹಾಗಂತ ತಾವು ಬಿತ್ತಿಕೊಂಡ ಕನಸೆಂಬ ಬೀಜವನ್ನು ಗಿಡವಾಗಿಸಿ, ಮರವಾಗಿಸಲು ಅವರಿಗೆ ಅಡೆತಡೆಗಳಿರಲಿಲ್ಲ ಎಂದಲ್ಲ. ನೂರಾರು ಅಡೆತಡೆಗಳು ಬಂದವು. ಆದರೆ ಎಲ್ಲ ಅಡೆತಡೆಗಳನ್ನು ಮೀರಿ ಅವರು ಆ ಮಟ್ಟಕ್ಕೆ ಬೆಳೆದರು ಎಂದರೆ ತಮ್ಮ ಕನಸೆಂಬ ಬೀಜಕ್ಕೆ ಅವರು ಸದಾಕಾಲ ನೀರು ಎರೆಯುತ್ತಲೇ ಬಂದರು. ಯಾವಾಗ ಅವರು ಬಿತ್ತಿ ಕೊಂಡ ಕನಸು ಈ ಸಮಾಜಕ್ಕಾಗಿ ಬಿತ್ತಿಕೊಂಡ ಕನಸು ಎಂಬುದು ಅರ್ಥವಾಯಿತೋ, ಆಗ ನೀರು ಎರೆಯಲು ಸಾವಿರಾರು ಜನ ಮುಂದೆ ಬಂದರು. ಒಂದು ವೇಳೆ ಆ ಬೀಜ ಟಿಸಿಲೊಡೆಯುವ ಮುನ್ನವೇ ಇದಕ್ಕೆ ಯಾರಾದರೂ ನೀರು ಎರೆಯಲಿ ಅಂತ ಅವರು ಕಾದು ಕೂತಿದ್ದರೆ ಮಲ್ಲಾಡಿ ಹಳ್ಳಿ ಎಂಬ ಗ್ರಾಮ ಇವತ್ತು ದೇಶದ ಭೂಪಟದಲ್ಲಿ ಎದ್ದು ಕಾಣುತ್ತಿರಲಿಲ್ಲ.

ಇದೇ ರೀತಿ ದೊಡ್ಡ ದೊಡ್ಡ ವ್ಯಕ್ತಿಗಳ ಬದುಕನ್ನು ನೋಡಿದರೆ ಅವರೆಲ್ಲ ಸದಾಕಾಲ ತಮ್ಮ ಕನಸು ಎಂಬ ಬೀಜಕ್ಕೆ ನೀರು ಎರೆಯುತ್ತಾ, ಬೆಳೆದ ಗಿಡಕ್ಕೆ ಪುಷ್ಟಿ ಕೊಡುತ್ತಾ, ಅದು ಮರವಾಗಿ ಬೆಳೆಯುವಂತೆ ಮಾಡಿದ್ದು ಅರ್ಥವಾಗುತ್ತಾ ಹೋಗುತ್ತದೆ. ಹೀಗಾಗಿಯೇ ನಾನು ಹೇಳಿದ್ದು, ನೀವು ಬಿತ್ತಿಕೊಳ್ಳುವ ಕನಸು ಎಂಬ ಬೀಜಕ್ಕೆ ನೀರು ಎರೆಯಲು ಇನ್ನೊಬ್ಬರು ಬರಲಿ ಎಂದು ಕಾಯುತ್ತಾ ಕೂರಬೇಡಿ. ನೀವು ಒಬ್ಬ ಯಶಸ್ವಿ ಉದ್ಯಮಿಯಾಗಬೇಕು ಎಂಬ ಕನಸು ಕಂಡಿದ್ದರೆ, ಆ ದಾರಿಯ ಮೇಲೇ ನಿಮ್ಮ ಗಮನ ನೆಟ್ಟಿರಲಿ. ಇವತ್ತು ದೇಶದ ಬಲಿಷ್ಠ ಸಂಸ್ಥೆಯಾಗಿ ಬೆಳೆದಿರುವ ರಿಲಯನ್ಸ್ ಸಂಸ್ಥೆಯ ಮೂಲ ಅನ್ನಿಸಿ ಕೊಂಡವರು ರೂಭಾಯಿ ಅಂಬಾನಿ. ಒಂದು ಕಾಲದಲ್ಲಿ ಪೆಟ್ರೋಲ್ ಬಂಕಿನಲ್ಲಿ ಕೆಲಸ ಮಾಡುತ್ತಿದ್ದರು. ಹೀಗೆ ಕೆಲಸ ಮಾಡು ಮಾಡುತ್ತಲೇ ತಾವೊಬ್ಬ ದೊಡ್ಡ ಉದ್ಯಮಿಯಾಗಬೇಕು ಎಂಬ ಕನಸನ್ನು ಬಿತ್ತಿಕೊಂಡರು. ಹೀಗೆ ಕನಸು ಬಿತ್ತಿಕೊಂಡ ರೂಭಾಯಿ ಅಂಬಾನಿ ಆ ಬೀಜಕ್ಕೆ ಇನ್ನೊಬ್ಬರು ನೀರು ಸುರಿಯಲಿ ಎಂದು ಕಾಯಲಿಲ್ಲ. ಬದಲಿಗೆ ತಮಗೆ ದೊರೆತ ಸನ್ನಿವೇಶಗಳನ್ನು ಬೊಂಬಾಟಾಗಿ ಬಳಸಿಕೊಂಡರು. ತಾವು ಕೆಲಸ ಮಾಡುತ್ತಿದ್ದ ದೇಶದಲ್ಲಿ ಸಿಗುತ್ತಿದ್ದ ಬೆಳ್ಳಿ ನಾಣ್ಯಗಳನ್ನೇ ಕರಗಿಸಿ ಲಂಡನ್ ಮಾರುಕಟ್ಟೆಗೆ ರವಾನಿಸಿದರು. ಅದರಿಂದ ಬಂದ ಲಾಭವನ್ನು ಕೈಲಿಟ್ಟುಕೊಂಡು ನೂಲು ಆಮದಿಗೆ ಕೈ ಹಾಕಿದರು. ಕಷ್ಟ ಎದುರಾಗಲಿಲ್ಲ ಅಂತಲ್ಲ. ಅವರಿಗಿಂತ ಮುಂಚೆ ನೂಲು ಉದ್ಯಮದಲ್ಲಿ ಘಟಾನುಘಟಿಗಳೆನ್ನಿಸಿಕೊಂಡವರ ಪಡೆಯೇ ಇತ್ತು. ಮತ್ತು ಅವರಿಂದ ಸವಾಲೂ ಇತ್ತು. ಆದರೆ ರೂಭಾಯಿ ಅಂಬಾನಿ ಎದುರಾದ ಕಷ್ಟದಿಂದ ಕಂಗೆಡಲಿಲ್ಲ. ಬದಲಿಗೆ ತಾವೊಬ್ಬ ದೊಡ್ಡ ಉದ್ಯಮಿ ಯಾಗಬೇಕು ಎಂಬ ಕನಸಿಗೆ ಪುಷ್ಟಿಕೊಟ್ಟುಕೊಳ್ಳುತ್ತಲೇ ಹೋದರು. ಇದಾದ ನಂತರ ಅವರ ರಿಲಯನ್ಸ್ ಸಂಸ್ಥೆ ಬೆಳೆದು ನಿಂತ ಪರಿ ಅನನ್ಯ.

ಇವತ್ತು ಕೇಂದ್ರದ ಯುಪಿಎ ಸರ್ಕಾರ ಕೂಡ ಉದ್ಯಮಕ್ಕೆ ಸಂಬಂಸಿದ ನೀತಿ ನಿಯಮಗಳನ್ನು ರೂಪಿಸುವಾಗ ಅಂಬಾನಿ ಫ್ಯಾಮಿಲಿಯ ಮಾತು ಕೇಳುತ್ತದೆ. ಅವರ ವಿರುದ್ಧ ತಿರುಗಿ ಬಿದ್ದು ನೀತಿ ನಿಯಮಗಳನ್ನು ರೂಪಿಸಲು ಕೇಂದ್ರ ಸರ್ಕಾರವೇ ಹಿಂಜರಿಯುತ್ತದೆ ಎಂದರೆ ರೂಭಾಯಿ ಅಂಬಾನಿ ಕಟ್ಟಿದ ಸಾಮ್ರಾಜ್ಯದ ಬೀಜಕ್ಕೆ ಯಾವ ಪರಿ ನೀರು, ಗೊಬ್ಬರ ಬಿದ್ದಿರಬೇಕು? ಅಂದ ಹಾಗೆ ನಾವು ನೀವೆಲ್ಲ ರೂಭಾಯಿ ಅಂಬಾನಿಯ ಥರವೋ, ಮಹಾತ್ಮಾ ಗಾಂಧಿಯ ಥರವೋ, ಸುಭಾಷ್‌ಚಂದ್ರ ಬೋಸ್ ಥರವೋ, ಬಿಲ್ ಗೇಟ್ಸ್ ಅವರಷ್ಟು ದೊಡ್ಡ ಮಟ್ಟದಲ್ಲಿ ತಲೆ ಎತ್ತಿ ನಿಲ್ಲುವ ಕನಸು ಕಾಣಬೇಕಿಲ್ಲ. ನಮ್ಮ ಶಕ್ತಿಗೆ ತಕ್ಕ ಮಟ್ಟದಲ್ಲಿ ಬೆಳೆದು ಹತ್ತು ಜನರ ಬದುಕು ಕಟ್ಟಿ ಕೊಡಲು ಶಕ್ತರಾದರೂ ಸಾಕು, ನಾವು ಬದುಕಿನಲ್ಲಿ ಗೆದ್ದಂತೆಯೇ ಅರ್ಥ. ಹಾಗಂತ ನಾವೇ ಇನ್ನೊಬ್ಬರು ಬಿತ್ತಿಕೊಂಡ ಕನಸಿನ ಬೀಜಕ್ಕೆ ಲೈಫ್ ಲಾಂಗು ನೀರು ಎರೆಯುತ್ತಾ ಕೂರಲೂ ಸಾಧ್ಯವಿಲ್ಲ. ಆದರೆ ಅಗತ್ಯ ಬಿದ್ದಾಗ ಬೆಳೆದು ನಿಲ್ಲುವ ಸಾಮರ್ಥ್ಯ ಇರುವ ಬೀಜಕ್ಕೆ ಕನಿಷ್ಟ ಒಂದೆರಡು ಬಾರಿಯಾದರೂ ನೀರು ಸುರಿಯುವ ಶಕ್ತಿ ನಮಗೆ ಬಂದರೆ ಸಾಕು. ನೀವು ಹತ್ತು ಬೀಜಕ್ಕೆ ನೀರು ಸುರಿದರೆ ಎಲ್ಲ ಬೀಜಗಳೂ ಬೆಳೆದು ಗಿಡವಾಗುತ್ತವೆ, ಮರವಾಗುತ್ತವೆ ಅಂತಲ್ಲ. ಆ ಪೈಕಿ ನಾಲ್ಕೋ ಐದೋ ಬೀಜಗಳು ಟಿಸಿಲೊಡೆದು ಗಿಡವಾದರೆ, ಮರವಾಗಿ ನಿಂತರೆ ಅದಕ್ಕಿಂತ ಸಾರ್ಥಕತೆ ಇನ್ನೇನು ಬೇಕು? ಅಂದಹಾಗೆ ನೀವು ಬಿತ್ತಿಕೊಳ್ಳುವ ಕನಸಿಗೂ ಈ ರೀತಿ ನೀರು ಎರೆಯುವವರು ಸಿಕ್ಕಿರುತ್ತಾರೆ. ಅದರ ಲಾಭ ಪಡೆದು ಮಿಕ್ಕಂತೆ ಸಾಧ್ಯವಾದಷ್ಟೂ ಪ್ರಮಾಣದಲ್ಲಿ ಅದನ್ನು ಪೋಷಿಸಿ, ಬೆಳೆಸುವುದು ನಿಮ್ಮದೇ ಜವಾಬ್ದಾರಿ. ನೀವು ಅದಕ್ಕೆ ತಯಾರಾಗಿದ್ದೀರಿ ಎಂದರೆ ನಿಮ್ಮದು ಅನ್ನುವ ಕನಸನ್ನು ಬಿತ್ತಿಕೊಳ್ಳಿ. ನಿಮಗಿರುವ ಕೆಪ್ಯಾಸಿಟಿಯನ್ನು ಪರಿಪೂರ್ಣವಾಗಿ ಬಳಸಿಕೊಂಡು ಅದಕ್ಕೆ ನೀರು ಎರೆಯಿರಿ. ಶುರು ಶುರುವಿನಲ್ಲಿ ಎಷ್ಟು ನೀರು ಸುರಿದರೂ ಅದು ಮೇಲೇಳುತ್ತಲೇ ಇಲ್ಲವಲ್ಲ ಅಂತ ನಿಮಗನ್ನಿಸ ಬಹುದು. ಆದರೆ ಸತತ ಪ್ರಯತ್ನದ ಮೂಲಕ, ಸ್ವಾವಲಂಬಿಯಾಗಿಯೇ ಅದನ್ನು ಬೆಳೆಸುತ್ತೇನೆ ಎಂಬ ಹಟದ ಮೂಲಕ ಅದು ಒಂದು ದಿನ ಟಿಸಿಲೊಡೆಯುತ್ತದೆ, ಗಿಡವಾಗಿ ಮೇಲಕ್ಕೆ ಬರುತ್ತದೆ, ಮೇಲೆ ಬಂದ ಗಿಡಕ್ಕೆ ಆಗಾಗ ನೀರು ಸುರಿಯುವವರು ಸಿಗಬಹುದು. ಹಾಗಂತ ನೀರು ಸುರಿಯುವವರು ಬಂದೇ ಬರುತ್ತಾರೆ. ಹೀಗಾಗಿ ನಾವೇನೂ ಮಾಡಬೇಕಿಲ್ಲ ಅಂತ ಸುಮ್ಮನೆ ಕೂರಬೇಡಿ. ಯಾಕೆಂದರೆ ನೀವು ಕಂಡಿರುವ ಕನಸು ನಿಮ್ಮದೇ. ಅದನ್ನು ಬೆಳೆಸಲು ಮನಸ್ಸೆಂಬ ಮಣ್ಣನ್ನು ಹದ ಮಾಡಿರುವುದೂ ನೀವೇ. ಹೀಗಾಗಿ ಅದಕ್ಕೆ ನೀರು ಎರೆಯಬೇಕಾದವರೂ ನೀವೇ. ಇದನ್ನು ಗಮನದಲ್ಲಿಟ್ಟುಕೊಂಡು ಮುಂದಡಿ ಇಟ್ಟು ನೋಡಿ. ಒಂದಲ್ಲ ಒಂದು ದಿನ ನೀವು ನಿಮ್ಮ ಬೀಜಕ್ಕೆ ಜೀವ ಕೊಡುತ್ತೀರಿ. ಅದು ಬೆಳೆಯುತ್ತಾ, ಬೆಳೆಯುತ್ತಾ ಹತ್ತಾರು ಜನರ ಬದುಕಿಗೆ ನೆರಳು ಕೊಡುವಂತೆ ಮಾಡುವುದನ್ನು ನೋಡಿ ಸಂತೋಷ ಪಡುತ್ತೀರಿ. ಹಾಗೆ ಸಂತೋಷ ಪಡುವ ಭಾಗ್ಯ ನಿಮ್ಮದಾಗಲಿ.

-ರವೀ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 30 June, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books