Ravi Belagere
Welcome to my website
ನಿಮಗೂ ಯಾವಾಗಲೋ ಕಾಲು ಮುರಿದಿರಬಹುದು. ಬಚ್ಚಲಲ್ಲಿ ಕಾಲು ಜಾರಿದ್ದಿರಬಹುದು. ನಡೆಯುತ್ತ ನಡೆಯುತ್ತ ನಿಮ್ಮ ಕಾಲು ಉಳುಕಿರಬಹುದು. ಸ್ವಲ್ಪ ದಿನ ನೀವು ಉಳುಕು ಅಂದುಕೊಂಡಿರುತ್ತೀರಿ: ಡಾಕ್ಟರ್ ಬಳಿಗೆ ಹೋಗಿ ಎಕ್ಸ್‌ರೇ ತೆಗೆಸಿದಾಗ ಅದು hair line fracture. ಆಯ್ತಲ್ಲ? ಮುದ್ದಾಗಿ ಬ್ಯಾಂಡೇಜ್ ಹಾಕಿ ಆರೇ ಆರು ವಾರ ಅದನ್ನು ಹಾಕ್ಕೊಂಡಿರಿ ಅನ್ನುತ್ತಾರೆ. ಅದೊಂಥರಾ ಸಿಮೆಂಟ್‌ನ ಕಟ್ಟೆ ಕಟ್ಟಿದಂತೆಯೇ! ವಿಪರೀತ ಭಾರ. ನಡೆಯುವುದು ಯಮಹಿಂಸೆ. ನಿಮಗೆ ಯಾವತ್ತಾದರೂ ಕೈ ಕಾಲು ಮುರಿದಿದ್ದವಾ? ಯಾಕೆ? Plaster ಸುಖ ಅನುಭವಿಸಿದಿರಾ? ಎಷ್ಟು ದಿನ? ಹೋಗಲಿ ಸಮಸ್ಯೆ ಪೂರ್ಣವಾಗಿ ವಾಸಿಯಾಗಿ ಬಗೆಹರಿಯಿತಾ? ನಿಮ್ಮ ಆಗಿನ ಅನುಭವವನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ನಿಮ್ ಜೊತೆ ಒಂದೇ ಒಂದು ಫೊಟೋ ತೆಗಿಸ್ಕೋತೀನಿ ಸರ್, ಸೇಫ್ಟಿಗೆ!

ಜವಾಬ್ದಾರಿ ಮುಗೀತು.
ತೀರ ಮುಗಿದೇ ಹೋಯ್ತು ಅನ್ನಲಾರೆ. ಏಕೆಂದರೆ ಹಿಮ ಇನ್ನೂ ಚಿಕ್ಕವನು. ಅವನಿಗೆ ಮದುವೆ ಮಾಡಲಿಕ್ಕೆ ಇನ್ನೂ ಇನ್ನೂ ಸಮಯವಿದೆ. ಮೊದಲ ಕುಟುಂಬಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಬಾಕಿ ಅಂತ ಇದ್ದುದು ಕರ್ಣನ ಮದುವೆಯೊಂದೇ. ಚೇತನಾ ಮದುವೆಯಾಗಿ ಎಂಟು ವರ್ಷಗಳಾದವಾ? Mostly.

ಭಾವನಾಗೆ ಇದು ಐದನೇ ಆನಿವರ್ಸರಿ. ಕನ್ನಡದಲ್ಲಿ ನಾನದನ್ನ ‘ಮದುವೆ ಹಬ್ಬ’ ಅನ್ನುತ್ತೇನೆ. ಮೊನ್ನೆ ಕರ್ಣನ ಮದುವೆಯ ಸಂಭ್ರಮದ ಮಧ್ಯೆ ನನ್ನ-ಲಲಿತಾಳ ಮದುವೆ ಹಬ್ಬ ಬಂದಿತ್ತು. ಅದು Mostly ನಮ್ಮ ಮೂವತ್ತಾರನೇ ಮದುವೆ ಹಬ್ಬ. ಹಾಗೆ, ನನ್ನ ಮತ್ತು ಲಲಿತಳ ಸ್ನೇಹಕ್ಕೆ ಮೊನ್ನೆ ಜನವರಿ ಒಂದಕ್ಕೆ ಪೂರ್ತಿ ನಲವತ್ತು ತುಂಬಿದವು. ನನ್ನ ಫಜೀತಿ ಅಂದರೆ ಮರೆವು! ನನ್ನ ಮಿತ್ರ ಉಮಾಪತಿ ನನ್ನದನ್ನ ಎಲಿಫಂಟೇನ್ ಮೆಮೊರಿ (Elephantine memory) ಅಂತಾನೆ. ತೀರಾ ಎಷ್ಟೋ ದಶಕಗಳ ಹಿಂದಿನ ಸಂಗತಿಗಳು, ಘಟನೆಗಳು, ಅವುಗಳಲ್ಲಿನ ಸೂಕ್ಷ್ಮಾತಿಸೂಕ್ಷ್ಮ ವಿವರಗಳು ಎಲ್ಲಾ ನೆನಪಿರುತ್ತವೆ. ನನಗೆ. ಆದರೆ Dates ನೆನಪಿರುವುದಿಲ್ಲ. ನನ್ನದೇ ಹುಟ್ಟು ಹಬ್ಬದ date ನನಗೆ ನೆನಪಿರುವುದಿಲ್ಲ. Actually ಡೇಟ್‌ಗಳು ನನಗೆ ನೆನಪಿರಲೇಬೇಕು. ಹಿಸ್ಟರಿ ಮಾಸ್ತರ ನಾನು. ಆದರೆ ದಿನಾಂಕಗಳು ಮರೆತು ವಿಪರೀತ ಫಜೀತಿಗಿಡಿಸುತ್ತವೆ. ಮೊನ್ನೆ ಕೂಡ ಹಾಗೆಯೇ ಆಯಿತು. ರಾತ್ರಿ ಹನ್ನೆರಡಕ್ಕೆ ಮೊಬೈಲ್‌ಗೆ ಭಾವನಾಳ ಮೆಸೇಜ್ ಬಂತು. “ಇದನ್ನೂ ಮರೆತಿರಾ? ಅಪ್ಪಾ... ಇವತ್ತು ನನ್ನ birthday!" ಅಂದಳು. ನಿಜಕ್ಕೂ ಕಂಗಾಲಾಗಿ ಹೋದೆ. ಹೆಂಡತಿ ವಿಪರೀತ ಬೇಸರ ಮಾಡಿಕೊಳ್ಳುತ್ತಾಳೆ. “ಒಂದು wish ಮಾಡೋಕೂ ಆಗಲ್ವಾ?" ಎಂಬ ಸಿಡುಕು. ನೋಡೂ, ಎಷ್ಟು birthdayಗಳಿಗೆ ನಾನು wish ಮಾಡಿದ್ದೇನೆ. ಅವೆಲ್ಲ ಮರೆತವಾ? ಇದೊಂದು ಸಲ miss ಆಯ್ತು. ಅದನ್ನಷ್ಟೇ ಇಟ್ಟುಕೊಂಡು ಕುಕ್ಕುವುದು ಏಕೆ? ಅನ್ನುತ್ತೇನೆ. ಆದರೂ I feel guilty.

ಪುಣ್ಯಾತ್ಮ ಕರ್ಣ, ಆರಾಮಾಗಿ ಓಡಾಡಿಕೊಂಡಿದ್ದ. ಬಾಂಬೆ, ದುಬೈ, ಪಾಂಡಿಚೇರಿ, ನಮ್ಮ ಜೋಗದ ತೋಟ ಅಂತ ಅಲೆಯುತ್ತಿದ್ದ. ಅವನಿಗೇನು ಕಡಿಮೆ ಸ್ನೇಹಿತರಿಲ್ಲ. ನನಗೆ ಒಂದು ವಿಷಯ ನೆನಪಾದರೆ ನಗು ಬರುತ್ತೆ. ಆಗ ನನ್ನ ಮೇಲೆ ವಿಶ್ವೇಶ್ವರ ಭಟ್ಟ ಮಣ್ಣು ಸುರೀತೀನಿ ಅಂತ ಹೊರಟಿದ್ದ. ಕೇವಲ ನನ್ನ ಮೇಲಲ್ಲ; ನನ್ನ ಕುಟುಂಬದವರು, ಆಪ್ತರು, ಕಡೆಗೆ ನಾನು ಸಾಕಿದ ನಾಯಿಯ ಮೇಲೂ ಭಟ್ಟ ಅಂಡ್ ಪಟಾಲಂ ಹಗೆತನಕ್ಕೆ ಬಿದ್ದಿತ್ತು. ಅದರಲ್ಲಿ ಈ ಉಗ್ರ ಪ್ರತಾಪಿ ಪ್ರತಾಪಸಿಂಹನದೂ ಒಂದು ಕಾರ್ಯಕ್ರಮ: ಅದು ಸುವರ್ಣ ನ್ಯೂಸ್‌ನಲ್ಲಿ, ಮೊದಲೇ ಅವನದು ಹೆಣ್ಣು ದನಿ- “ನೀವೇ ನೋಡಿ, ರವಿ ಬೆಳಗೆರೆಯ ಮಗ ಕರ್ಣ. ಆ ಹೆಸರಿನಲ್ಲಿ ಅವನದೊಂದು ಫೇಸ್‌ಬುಕ್ ಅಕೌಂಟ್ ಇದೆ. ನಾನು ಕರ್ಣ ಬೆಳಗೆರೆ ಅಂತ ಹೇಳ್ಕೋತಾನೆ. ಆದರೆ ಅವನ ಫ್ರೆಂಡ್ಸ್ ಮುಂದೆ ಅವನು ಸಡನ್ ಆಗಿ ಆದಿತ್ಯ ಅಂತಾಗಿಬಿಡ್ತಾನೆ! ಇಲ್ಲಿ ಕರ್ಣ, ಅಲ್ಲಿ ಆದಿ... ಹೇಗೆ ಮೋಸ ಮಾಡ್ತಾನೋ ನೋಡಿ!" ಅಂದ. ನಾವು ಮನೆ ಮಂದಿಯೆಲ್ಲ ಬಿದ್ದು ಬಿದ್ದು ನಕ್ಕೆವು. Actually, ಅವನ ಪೂರ್ಣ ಹೆಸರು ಆದಿತ್ಯೋದಯ ಕರ್ಣ ಬೆಳಗೆರೆ! “ಅಪ್ಪಾ, ನೀವು ಇಷ್ಟುದ್ದಾ ಹೆಸರಿಟ್ಟು ನನ್ನನ್ನ ಫಜೀತಿಗೆಳೆದು ಬಿಟ್ರಿ. ವಿಮಾನದಲ್ಲಿ ಅವರು ಕೊಡೋ form ತುಂಬೋ ಹೊತ್ತಿಗೆ ಸಾಕಾಗಿ ಹೋಗುತ್ತೆ!" ಅಂತ ಸಾವಿರ ಸಲ ಗೊಣಗಿದ್ದಾನೆ ಕರ್ಣ. ಅವನು ಬೇರೆ ಇನ್ನೇನಾದರೂ ಆದಾನು. ಮೋಸಗಾರನಂತೂ ಖಂಡಿತ ಆಗಲಾರ. ಹಿಂದೆ ಇಂಗ್ಲಂಡ್‌ನಿಂದ ಹಿಂತಿರುಗಿದನಲ್ಲ? “ರಾತ್ರಿ ಬಂದು ಕಾಣು" ಅಂದೆ. ಬರುವ ಹೊತ್ತಿಗೆ ಅವನಿಗೊಂದು peg ವಿಸ್ಕಿ ಮಾಡಿಟ್ಟಿದ್ದೆ. “Have a drink. you can smoke too" ಅಂದೆ. ಕೊಂಚ ಹೊತ್ತು ಬೆಚ್ಚಿದವನಂತೆ ಕುಳಿತಿದ್ದ. ಅವನ ಅಕ್ಕಂದಿರಿಬ್ಬರ ಸಂಗತಿ ಬೇರೆ. ಅವು ನನ್ನನ್ನು ಮೆತ್ತಿಕೊಂಡೇ ಬೆಳೆದರು. ಈ ಹುಡುಗನಿಗೆ ಅಜ್ಜಿ-ತಾತನೇ ಹತ್ತಿರ. ಇವತ್ತಿಗೂ ಅಜ್ಜಿ ರೂಮಲ್ಲಿ ಮಲಗ್ತೀನಿ ಅಂತಾನೆ. ಅವನಿಗೆ ಅವತ್ತು ಹೇಳಿದ್ದೆ: “ಕರ್ಣಯ್ಯಾ, ಸಿಗರೇಟು ಸೇದೋದಾದರೆ ಎಲ್ಲೋ ಒಂದು ಕಡೆ ಗುಟ್ಟಾಗಿ ಸೇದು. Not in the school. ಕುಡಿತವಂತೂ, be very careful. ಬೇಕಾದಾಗ ಇಲ್ಲೇ ಬಾ. we can have together. ಅಪ್ಪಿ-ತಪ್ಪಿ ಕೂಡ pubಗೆ ಹೋಗಬೇಡ. ನೀನು ಬೇರೆ ಏನೋ ಆಗಿದ್ದಿದ್ರೆ ಈ ಮಾತು ಹೇಳ್ತಿರಲಿಲ್ಲ. ಪ್ರಾರ್ಥನಾ ಎಜುಕೇಶನ್ ಸೊಸೈಟಿಗೆ ನೀನು ಡೆಪ್ಯುಟಿ ಸೆಕ್ರೆಟರಿ. ಯಾರೋ ಪೇರೆಂಟ್ಸ್ ನಿನ್ನನ್ನು ಬಾರಿನಲ್ಲೋ, ಪಬ್‌ನಲ್ಲೋ ನೋಡಿದರೆ, ಅದು ಚೆನ್ನಾಗಿರಲ್ಲ". ‘ರವಿ ಬೆಳಗೆರೆ ಮಗ ಕುಡಿತಾನೆ ಅಂದ್ರೆ ನಂಗೆ ಬೇಸರವಿಲ್ಲ... ಆದರೆ ‘ಪ್ರಾರ್ಥನಾ ಸಂಸ್ಥೆಯ ಡೆಪ್ಯುಟಿ ಸೆಕ್ರೆಟರಿ ಕುಡೀತಾನೆ’ ಅಂದರೆ ತುಂಬ hurt ಆಗುತ್ತೆ. “Dont do that" ಅಂದೆ. He never did it. ಅವನ ವಯಸ್ಸಿನ ಉಳಿದೆಲ್ಲ ಹುಡುಗರಿಗೂ ಇರುವಂತೆ ಕರ್ಣನಿಗೂ ಗೆಳತಿಯರಿದ್ದಾರೆ. ಆದರೆ ಈ ಹುಡುಗ flirt ಅಲ್ಲ. ಬೇಕಾಬಿಟ್ಟಿ ಹಣ ಖರ್ಚು ಮಾಡೋನಲ್ಲ. ಬಾಯಲ್ಲಿ ‘ಅಮ್ಮ-ಅಕ್ಕ’ ಅಂತ ಕೆಟ್ಟ ಮಾತು ಬರಲ್ಲ. ಅವನು ಖಂಡಿತ ಕುಡುಕನಲ್ಲ. “ಅಯ್ಯಾ, ತಂದೇ... ವರ್ಷಗಟ್ಟಲೆ ನಿನ್ನನ್ನು ನೋಡೀ ನೋಡೀ ಸಾಕು-ಸಾಕು ಅನ್ನಿಸಿಬಿಟ್ಟಿದೆ. ನಾನು ಖಂಡಿತ ಕುಡುಕ ಆಗಲ್ಲ" ಅಂತಾನೆ. ನನ್ನ ಕುಡಿತ ಅತಿರೇಕಕ್ಕೆ ಹೋಗಿ, ಖಾಯಿಲೆ ಬಿದ್ದೆನಲ್ಲ? ಕುಡಿತದಿಂದ ನನ್ನನ್ನು ಈಚೆಗೆ ತಂದವನೇ ಕರ್ಣ. ನನ್ನ ಮೇಲೆ ಒಬ್ಬ ತಂದೆ ತೋರಿದಷ್ಟೇ ಪ್ರೀತಿ ತೋರಿಸಿದ ಆಗ. ಕೈಕಾಲು ಕಟ್ಟಿ ಹಾಕಿ ನೀವು ನನ್ನನ್ನು ಖಂಡಿತ ಪಳಗಿಸಲಾರಿರಿ. ಒತ್ತಾಯ ಮಾಡಿದರೆ ನಾನು ಪಕ್ಕಾ ಪರಾರಿ. ತಿರುಗಿ ಬೀಳೋದಂತೂ ಭಯಾನಕ; ಹಾಗೆ ರಂಪಾಟ ಮಾಡುತ್ತೇನೆ. ಅಂಥದರಲ್ಲಿ ಈ ಹುಡುಗ ನಾನಾ ಉಪಾಯ ಮಾಡಿ, ಚಟ ಬಿಡಿಸಿಬಿಟ್ಟ. ಕೆಲವೆಲ್ಲ ಅವನಿಗೆ ಲಲಿತಳ ಕಡೆಯಿಂದ ಬಂದಿವೆ. ಅವನು ರೇಗಿ- ಕೂಗಾಡಿ ಸಿಟ್ಟು ಮಾಡಿಕೊಂಡ ಉದಾಹರಣೆ ಇಲ್ಲವೇ ಇಲ್ಲ. ಸಮಚಿತ್ತದ ಹುಡುಗ. ಒಳ್ಳೆಯ administrator. ಹಿರಿಮಗಳು ಚೇತನಾ ಕೂಡ ಅಷ್ಟೇ.

“ಆಯ್ತಪ್ಪಾ, ಇದೆಲ್ಲಾ ಸರಿ. ಮದುವೆಯಾವಾಗಯ್ಯಾ?" ಅನ್ನುತ್ತಿದ್ದೆ. “ಆಗಾಣ ಆಗಾಣ" ಎಂದು ನಗುತ್ತಿದ್ದ. ಕಡೇ ಪಕ್ಷ ಲಕ್ಷ್ಮೀಯಾದರೂ ಗಂಟು ಬೀಳುತ್ತಾಳಾ ಅಂದುಕೊಂಡರೆ, ಅವಳು “ಇಷ್ಟು ಬೇಗ ಮದುವೇ ನಾ... ಅಂಕಲ್!" ಅನ್ನುತ್ತಿದ್ದಳು. ಬೇರೇನಿಲ್ಲ; ಈ ಕಾಲದಲ್ಲಿ ತುಂಬ ಚಿಕ್ಕ ವಯಸ್ಸಿಗೆ ಯಾರೂ ಮದುವೆಯಾಗಲ್ಲ, ನಂಗೊತ್ತು. ಆದರೆ ತಡವಾಗಿ ಆಗೋದರ ಅಪಾಯಗಳು ನನಗೆ ಗೊತ್ತಿವೆ. ತುಂಬ ತಡವಾಗಿ ಆದರೆ Down syndrome ಎಂಬ ಕಷ್ಟ ಕೆಲವು ಸಲ ಎದೆ ನಡುಗಿಸಿ ಬಿಡುತ್ತದೆ. ಆಗ ಮನೋವಿಕಲ ಮಕ್ಕಳು ಹುಟ್ಟುತ್ತಾರೆ. ಇಂಥದ್ದೆಲ್ಲಾ ‘ನಮಗೆ’ ಆಗಲ್ಲ ಅಂತಲೇ ಇಟ್ಕೋಳೋಣ. ಆದರೆ ತಾಕತ್ತು? ತಡವಾಗಿ ಮಕ್ಕಳಾದರೆ ಮಗುವಿನೊಂದಿಗೆ, ಅದಕ್ಕೆ ಸರಿಸಮನಾಗಿ ಆಟ ಆಡಲು ಸಾಧ್ಯವಾಗೋದೇ ಇಲ್ಲ. ಮಗುವು ತುಂಬ ಸಹನೆ ಬೇಡುತ್ತದೆ. ಆಗ ಎಲ್ಲಿ ರುತ್ತೆ ಪೇಷನ್ಸು? ಆ ಮಗು ಎಸೆಸೆಲ್ಸಿ ದಾಟೋ ಹೊತ್ತಿಗೆ, ಅಪ್ಪ-ಅಮ್ಮಂದಿರು, ಅಜ್ಜ-ಅಜ್ಜಿಯಂತಾಗಿ ಬಿಡುತ್ತಾರೆ. ಮಕ್ಕಳ ಸಂಗತಿ ಹಾಗಿರಲಿ, ದಂಪತಿಗಳಾದರೂ ಒಂದಷ್ಟು ವರ್ಷ vibrant ಆದ sexual life ಅನುಭವಿಸಬಾರದಾ? ತಡವಾಗಿ ಲಗ್ನವಾದರೆ-ಲೈಫು ಇಷ್ಟೇನೇ ಎಂಬ ಹಾಡಿನಂತಾಗಿರುತ್ತಾರೆ. ದಾಂಪತ್ಯ ಜೀವನದ ಉತ್ಸಾಹವನ್ನು ನಾನು ಹತ್ತಿರದಿಂದ ನೋಡಿದ್ದು ಅಂದರೆ, ನನ್ನ ಮಾವ ಅರಕಲಿ ವೆಂಕಟಸುಬ್ಬರಾಯರು ಮತ್ತು ಅತ್ತೆ ಶಾರದಮ್ಮನವರು. ಅವರ ದಾಂಪತ್ಯದ ರೀತಿಯೇ ಬೇರೆ. ಎಲ್ಲಿಗಾದರೂ ಹೋದರೆ, ನನ್ನ ಮಾವನವರು ಕೈಲೊಂದು ಮಲ್ಲಿಗೆಯ ಮೊಳ ಇಲ್ಲದೆ ಹಿಂತಿರುಗುತ್ತಿರಲಿಲ್ಲ. “ಶಾರದೂ" ಅನ್ನುತ್ತಲೇ ಅವರು ಒಳಕ್ಕೆ ಕಾಲಿಡುತ್ತಿದ್ದುದು. ಕೊಂಚ ಕೋಡು ಬಳೆ, ಚಕ್ಲಿ, ಮುಚ್ಚೋರೆ ತರಹದ ಚಿರುದಿಂಡಿ ರೆಡಿ ಮಾಡಿಕೊಂಡು ನನ್ನ ಅತ್ತೆಯವರು ರೇಶ್ಮೆ ಸೀರೆ ಉಟ್ಟರೆ ಸಾಕು: ಅವತ್ತು ಸಿನಿಮಾ! ಮಾವನವರು ಒಂದೇ ಒಂದು ಸುಕ್ಕೂ ಇಲ್ಲದ ಪರಿಶುಭ್ರ ಬಟ್ಟೆ ಧರಿಸುತ್ತಿದ್ದರು. ಅವರು ಜಗಳವಾಡಿದ್ದನ್ನು ನಾನು ನೋಡೇ ಇರಲಿಲ್ಲ. ಅಂಥ ಅನ್ಯೋನ್ಯ ದಂಪತಿಗಳನ್ನು ನಾನು ಇನ್ನೊಂದೆಡೆ ನೋಡಿ ಕೂಡ ನೋಡಿಲ್ಲ.

ನಾವು ಗೆಳೆಯರು ಸೇರಿದಾಗ, “ಈ ಹೊಯ್ಸಳ ಕರ್ನಾಟಕ ಬ್ರಾಹ್ಮಣರಿಗೆ ಉಳಿದೇನನ್ನು ಕೊಡದಿದ್ದರೂ ಕೈತುಂಬ ಭರ್ಜರಿಯಾಗಿ ಮಕ್ಕಳನ್ನು ಕೊಡ್ತಾನೆ ನೋಡು" ಅಂತ ಮಾತನಾಡಿಕೊಳ್ಳುತ್ತೇವೆ. ಅದು ಪೂರ್ತಿ ಸುಳ್ಳೇನಲ್ಲ. ಕಣ್ಣೆದುರಿಗೇ ಆ ದಂಪತಿಗಳು ಇದ್ದಾರೆ. ತಲಾ ಏಳು-ಎಂಟು, ಹತ್ತು ಮಕ್ಕಳು! ಈಗೆಲ್ಲಾ ಅದು ಕಷ್ಟ ಬಿಡಿ. ಆದರೂ ಹೊಯ್ಸಳ ಕರ್ನಾಟಕರದ್ದು ಬಲು ಸಮೃದ್ಧ ಸಂತಾನ. ನನ್ನಾಕೆಯ ತಂದೆ ತಾಯಂದಿರಿಗೆ ಅನಾಮತ್ತು ಏಳು ಮಕ್ಕಳು! ಎಂಥ perfect battery ಗೊತ್ತಾ? ಹುಟ್ಟಿದ ಮಗುವಿಗೆ ಒಂದೂವರೆ ವರ್ಷದಾಟುತ್ತಿದ್ದ ಹಾಗೇ, ಆ ತಾಯಿಯ ಕಂಕುಳಲ್ಲಿ ಇನ್ನೊಂದು! ವಿಚಾರಿಸಿ ನೋಡಿ. ಅಂಥ ಕುಟುಂಬಗಳಲ್ಲಿ ಮೊದಲೇ plan ಮಾಡಿದ್ದರೇನೋ ಎಂಬಂತೆ ಸರಿಯಾಗಿ ಒಂದೂವರೆ ವರ್ಷದ ಡಿಫರೆನ್ಸ್‌ನಲ್ಲಿ ಮಕ್ಕಳಾಗಿರುತ್ತವೆ. ಪಾಪ, ಹೊಯ್ಸಳ ಕರ್ನಾಟಕದವರಷ್ಟೇ ಅಲ್ಲ; ಬ್ರಾಹ್ಮಣರ ಪೈಕಿ ಉಳಿದ ಬುಡಕಟ್ಟಿನವರೂ ಒಳ್ಳೆಯ ‘ನೇಗಿಲ ಯೋಗಿ’ಗಳೇ! ನನ್ನ ಮುತ್ತಜ್ಜಿಗೆ ಬರೋಬ್ಬರಿ ಹದಿನೆಂಟು ಹೆರಿಗೆ, ಹದಿನೆಂಟು ಅಬಾರ್ಷನ್ನು! ಅದನ್ನು ನನ್ನ ಅಮ್ಮನೇ ಹೇಳಿದ್ದಳು. ನನಗೆ ಅನಂತಿ ಎಂಬ ಮಾಧ್ವ ಬ್ರಾಹ್ಮಣ ಗೆಳೆಯನಿದ್ದ. ಅವನು, “ನಮ್ಮಪ್ಪನ specialty ನೋಡು. ಅವನು ಬೇರೇನೂ ಮಾಡೋದೇ ಬೇಡ. ಯಾರಾದರೂ ಹೆಂಗಸು ನಮ್ಮಪ್ಪನ ಲುಂಗಿ ಒಯ್ದು, ಅದನ್ನು ಸುಮ್ಮನೆ ಹೊದ್ದುಕೊಂಡು ಮಲಗಿದರೂ ಸಾಕು. ಒಂಬತ್ತನೇ ತಿಂಗಳಿಗೆ ಸರಿಯಾಗಿ ಅವಳ ಮನೇಲಿ ತೊಟ್ಲು!" ಅನ್ನುತ್ತಿದ್ದ. ಸುಮ್ಮನೆ ನಾವು ಮುಸಲ್ಮಾನರನ್ನ ಆಕ್ಷೇಪಿಸುತ್ತೇವೆ. ಅವರಿಗೆ ಮಕ್ಕಳು ಜಾಸ್ತಿ ಅಂತ. ಈಗೆಲ್ಲ ನಾಲ್ಕು ನಾಲ್ಕು ಮದುವೆ, ಯಾವನೂ ಆಗೋದಿಲ್ಲ. ಸಾಲು ಸಾಲು ಮಕ್ಕಳನ್ನ ಹೆರೋದಿಲ್ಲ. ಅವುಗಳನ್ನ ಸಾಕೋದು ಹೇಳಿ? ಅವರಿಗಿಂತ ಕೊಂಚ ಬೇಗನೆ ಎಚ್ಚರಗೊಂಡವರು ನಮ್ಮ ಮಂದಿ. ಅಷ್ಟೇ ಹೊರತು ನಾವೇನೂ ಕಡಿಮೆ ಫಲದಾಯಕರಲ್ಲ.

ಕರ್ಣನ ಸಂಗತಿಗೆ ಬರುವುದಾದರೆ, ಅವನು ಕುಡಿಯವುದಿಲ್ಲ.ಆದರೆಡೆಗೆ ಅವನಿಗೊಂದು ತಿರಸ್ಕಾರವಿದೆ. ಜೇಬಿನಲ್ಲಿ ಪ್ಯಾಕೇಟ್ ಇಟ್ಟುಕೊಳ್ಳುವುದಿಲ್ಲ. ಅಪರೂಪಕ್ಕೊಂದು ಸಿಗರೇಟು ಎಳೆಯುತ್ತಾನೆ. ಆದರೆ ಊಟದ ವಿಷಯದಲ್ಲಿ ಅವನು ಶುದ್ಧ ನಿರ್ದಯಿ. ಅವನು ಮತ್ತು ಕಿಟ್ಟಿ ತಿನ್ನಲು ಕುಳಿತರೆ ಮುಗೀತು: ಪಕ್ಕದಲ್ಲಿ ಅವರೆತ್ತರಕ್ಕೆ ಸರಿಯಾಗಿ ಮೂಳೆ ಬೀಳುತ್ತವೆ. ಇವೆಲ್ಲವೂ ನನಗೆ ಹಳೆಯವು. ಹುಡುಗರು ಚೆನ್ನಾಗಿ ಉಂಡುಟ್ಟು ತಿರುಗಿದರೆ ಖುಷಿ. ಅವನ ಮದುವೆ ಆದದ್ದು ಗುರುವಾರ. ಸೊಸೆಯನ್ನ ಮನೆ ತುಂಬಿಸಿ ಕೊಂಡದ್ದು ಭಾನುವಾರದಂದು, ಹೊಸ ಮನೆಗೆ ನಾನೂ ಹೋದೆ. ಸೊಸೆ ಬಂದ ಸಂಭ್ರಮ. ಅವಳೊಂದಿಗೆ ಸುಮ್ಮನೆ ಹೀಗೆ ಹರಟಿದ್ದಿದೆ. ಕೊಂಚ ಸಲುಗೆ, ಅಪಾರವಾದ ಪ್ರೀತಿ ಮುಂತಾದವೆಲ್ಲ ಇವೆ. ಅದೆಲ್ಲಾ ಬೇರೆ, ಈಗ ಅವಳು ಇಲ್ಲೇ ಬದುಕಬೇಕಲ್ಲ? ನನ್ನ ಹೆಂಡತಿ ಹೈಸ್ಕೂಲು ಹುಡುಗಿಯಂತೆ ಮನೆ ತುಂಬಾ ಓಡಾಡುತ್ತಿದ್ದಳು. ಆದರೆ ಲಕ್ಷ್ಮಿ ಇದ್ದುದು ಒಂದೇ ದಿನ. ಮರುದಿನದಿಂದಲೇ ಶುರವಾಯಿತಲ್ಲ ಆಷಾಢ? ಈ ಬಾರಿ ಅದೇನೋ ಎರಡು ತಿಂಗಳ ಆಷಾಢವಂತೆ. “ಸರಿ ಮಗಳೇ, ಇಷ್ಟು ದಿನವೇ ಕಾಯ್ದೆವಂತೆ, ಇನ್ನೆರಡು ತಿಂಗಳು ಕಾಯೋಕೇನು? ಹೋಗಿ ಬಾ" ಅಂದೆ.

ಮದುವೆ ಹೇಗೆಲ್ಲ ಆಗಬಹುದು ಅಂತ ನನಗೊಂದು ಅಂದಾಜಿತ್ತು. ಅದನ್ನೂ ಮೀರಿ ಅವರು ತುಂಬ ಅದ್ದೂರಿ ಮಾಡಿಬಿಟ್ಟರು. ಒಂದರ್ಥದಲ್ಲಿ ಲಕ್ಷ್ಮಿಯ ತಂದೆ ಬೂದನೂರು ಶಿವರಾಮ ಅವರು ಅದನ್ನೆಲ್ಲ ಮೊದಲೇ ಯೋಚಿಸಿದ್ದರಾ ಅಂತ. ಅರಮನೆಯಲ್ಲೇ ಮದುವೆ. “ಏನು ರವೀ, ಇದು ಇಂದ್ರಸಭೆಯಾಗಿಬಿಟ್ಟಿತಲ್ಲ?" ಅಂದದ್ದು ಬಳ್ಳಾರಿಯಿಂದ ಬಂದ ನನ್ನ ಬಾಲ್ಯದ ಮಿತ್ರ ಮಹೇಶ್ವರ ಸ್ವಾಮಿ. ಹೇಗೆ ರಿಯಾಕ್ಟ್ ಮಾಡಬೇಕೋ ತಿಳಿಯಲಿಲ್ಲ. ಮೊದಲ ದಿನ ನಾನು ಎಲ್ಲಿಂದಲೋ ಹುಡುಕಿ ಸೂಟು ಹಾಕಿಕೊಂಡೇ ಹೋದೆ. ಮರುದಿನ ಧಾರೆ ಇತ್ತು. ರೇಶ್ಮೆ ಉಟ್ಟು ಹೋದೆ. ಸಾಯಂಕಾಲ ರಿಸೆಪ್ಷನ್. ಆ ಹೊತ್ತಿ ಗಾಗಲೇ ನನಗೊಂದು ಜ್ಞಾನೋದಯವಾಗಿಬಿಟ್ಟಿತ್ತು. ‘ಯಾರು ಏನೇ ಅನ್ನಲಿ’ ಅಂತ ಮಟ್ಟಸವಾಗಿ ಪ್ಯಾಂಟು, ಮೇಲೊಂದು ಕಾಟನ್ ಷರಟು ಹಾಕಿಕೊಂಡು ಹೋಗಿಬಿಟ್ಟೆ. “ಅಪ್ಪಾ ಇದೇನು ಹೀಗೆ?" ಅಂದರು ಮಕ್ಕಳು. “ಹೌದು, ನಾನಿರೋದು ಹೀಗೆ!" ಅಂದು ಬಿಟ್ಟೆ. ಇದನ್ನು ಯಾಕೆ ಹೇಳಿದೆ ಅಂದರೆ ಜೂನ್ ತಿಂಗಳ ಮದುವೆ : ಒಂದೆರಡು ಅಡ್ಡ ಮಳೆಗಳಾಗಿದ್ದವಾದರೂ ಅಗ್ಗಿಷ್ಟಿಕೆಯ ಮುಂದೆ ಕುಳಿತರೆ ಆಗುವಂಥ ಸೆಖೆ ಇದ್ದೇ ಇತ್ತು. ಅದರಲ್ಲೂ ಅರಮನೆಯ ಒಳಗೆ ಮದುವೆ. ಹೊರಗಾದರೆ ಗಾಳಿ ಇರುತ್ತೆ. ಸಾಲದೆಂಬಂತೆ ವೇದಿಕೆಯ ಮೇಲೆ ವಿಪರೀತ ಲೈಟುಗಳು. ವಧೂವರರ ಜೊತೆ ನಾವು ಅಷ್ಟೆಲ್ಲ ಹೊತ್ತು ವೇದಿಕೆಯ ಮೇಲೆ ನಿಲ್ಲಬೇಕಿಲ್ಲ. ಆದರೆ ಶಾಸ್ತ್ರಕ್ಕೆ ಅಂತ ನಿಲ್ಲಲೇಬೇಕಲ್ಲ ಕೊಂಚ ಹೊತ್ತು? ನನ್ನ ಕುಟುಂಬದವರೆಲ್ಲ ಅಲ್ಲೇ ಆಸುಪಾಸಿನ ಹೊಟೇಲುಗಳಲ್ಲಿ ಉಳಿದುಕೊಂಡಿದ್ದರು. ನಾನು ಮಾತ್ರ ಆಫೀಸೆಂಬ ಇದೇ ಶಕ್ತಿ ಪೀಠ ಬಿಟ್ಟು ಇನ್ನೆಲ್ಲೂ ಉಳಿಯಲಾರೆ. “ಶಾಸ್ತ್ರಿಗಳೇ, ನಾನು ಎಷ್ಟು ಹೊತ್ತಿಗೆ ಬರಬೇಕು ಅನ್ನೋದನ್ನ ಸರಿಯಾಗಿ ಹೇಳಿ.. ಬರ್ತೀನಿ. ಸುಮ್ಮನೆ ಗಂಟೆಗಟ್ಟಲೆ ಕರೆಸಿ ಕೂಡಿಸಿ ಬಿಡಬೇಡಿ" ಅಂದಿದ್ದೆ. ಪುರೋಹಿತರು ಅದರಂತೆಯೇ ನಡೆಸಿಕೊಂಡರು. ಉಳಿದೆಲ್ಲರಿಗಿಂತ prompt ಆಗಿ ಮದುವೆ ಮನೇಲಿದ್ದುದು ನಾನೇ! ಶಾಸ್ತ್ರ-ಪ್ರಾಶ್ತ ನಡೆದವು. it's okay. ಆದರೆ ರಿಸೆಪ್ಷನ್? ಅಲ್ಲಿ ನಾನಂದುಕೊಂಡಂತೆಯೇ ಆಯಿತು. ವೇದಿಕೆಯ ಮೇಲೆ ಫುಲ್ ಸೂಟ್ ಧರಿಸಿ ನಿಂತಿದ್ದ ಶಿವರಾಮ ಅವರು ಬೆವರಲ್ಲಿ ತೋಯ್ದು ತೊಪ್ಪೆಯಾಗಿ ಬಿಟ್ಟಿದ್ದರು. ನನಗೆ ಸಹಿಸಲಿಕ್ಕೆ ಸಾಧ್ಯವೇ ಇಲ್ಲ ಎಂಬಂತೆ ಮಾಡೋದು ಎರಡೇ. ಮೊದಲನೇದು ಸೆಖೆ. ಎರಡನೆಯದು human smell. ಮದುವೆಗಳಲ್ಲಿ ಇವು ಏಕಕಾಲಕ್ಕೆ ಸಂಭವಿಸಿಬಿಡುತ್ತವೆ. ಮದುವೆ ಮನೇಲಿ ಬೆವರೋದೂ ನಿಜ. ಅದು ವಾಸನೆ ಹೊಡೆಯೋದೂ ನಿಜ! ನನಗೆ ಇನ್ನೂ ಒಂದು ಫಜೀತಿ ಆಗಿತ್ತು.

ಮೊದಲೆಲ್ಲ crowdಗಳಲ್ಲಿ ಹುಡಗೀರು ಆಟೋಗ್ರಾಫ್ ತೆಗೆದುಕೊಳ್ಳುತ್ತಿದ್ದರು. ಈಗ ಅದಿಲ್ಲ: ಕೇವಲ photograph! ವೇದಿಕೆಯೆದುರಿಗೆ ಒಂದು ಚಿಕ್ಕ, ಇಬ್ಬರಿಗಾಗುವಂಥ ಸೋಫಾ ಒಂದಿತ್ತು. ನಾನು ತೆಪ್ಪಗೆ ಅದರಲ್ಲಿ ಕುಳಿತೆ. ಪಕ್ಕದಲ್ಲಿ ಜಾಗವಿತ್ತಲ್ಲ? ಅದೆಲ್ಲಿಂದ ಆ ಮಾನವ ಸಮೂಹ ಬಂದಿಳಿಯಿತೋ ಕಾಣೆ. ಒಬ್ಬರಾದ ಮೇಲೆ ಒಬ್ಬರು ಬಂದು ಪಕ್ಕ ಕುಳಿತು, ನನ್ನ ಪಕ್ಕೆ ತಿವಿಯೋದು! ‘ಸ್ವಲ್ಪ ಕೆಮೆರಾ ಕಡೆ ನೋಡಿ ಸರ್!’ ಎಂಬ ಆದೇಶ. ಅವರು ತಮ್ಮ ಮೊಬೈಲನ್ನು ಇನ್ಯಾರ ಕೈಗೋ ಕೊಟ್ಟಿರುತ್ತಾರೆ. ಅವರಿಗೆ ಮೊಬೈಲು handle ಮಾಡೋದು ಗೊತ್ತಿರಲ್ಲ. ಇವರು ‘ಇನ್ನೂ ಒಂದು ತೆಗೆದುಬಿಡಿ’ ಅನ್ನುತ್ತಾರೆ. ತೆಗೆದಾದ ಮೇಲೆ ನನ್ನೆಡೆಗೆ ನೋಡಿ ‘ಎರಡಿರಲಿ ಅಂತ...ಸುಮ್ನೆ ಸೇಫ್ಟಿಗೆ ಸರ್!’ ಅಂತಾರೆ. ಯಾರ ಸೇಫ್ಟಿ? ಭಗವಂತ ಬಲ್ಲ. ಅವರು ಯಾರು? ಗೊತ್ತಿಲ್ಲ. ಅವರಿಗೆ ನಾನು ಯಾರು ಅಂತ ಗೊತ್ತಾ? Not sure. ಅದೊಂಥರಾ ಜನ ಮರಳು-ಜಾತ್ರೆ ಮರಳು. ಹಾಗೆ ಮೈಮೈ ಅಡರಿಕೊಳ್ಳುತ್ತಾರೆ. ಮೊಬೈಲುಗಳಿಗೆ ಕೆಮೆರಾ ಬಂದ ಮೇಲೆ ಕಣ್ಣಿದ್ದರೆ ಸಾಕು:

ಫೊಟೋಗ್ರಾಫರ್‌ಗಳಾಗುತ್ತಾರೆ. ಆ crowdನಲ್ಲಿ ಬರೀ ಗಂಡಸು ಅಂತಿರುವುದಿಲ್ಲ. ಹೆಣ್ಣು ಮಕ್ಕಳೂ ಅಪಾರ. Infact, ನನಗೇ ಸಂಕೋಚವಾಗುತ್ತಿರುತ್ತದೆ. ಅವರಿಗೆ ಅಂಥದ್ದೇ ನಿಲ್ಲ. “ಸ್ವಲ್ಪ ನನ್ ಮೈಮೇಲೆ ಕೈ ಹಾಕಿ ಸಾರ್!" ಅನ್ನೋ ಅಪ್ಪಣೆಗಳು. ಸರಿ, ಇದರಿಂದ ಬಿಡುಗಡೆ ಇಲ್ಲ ಅನ್ನಿಸಿ, ಪಕ್ಕದ ಸೀಟಿಗೆ ನಮ್ಮ ವಕೀಲರೂ, ನನ್ನ ಹಿರಿಯಣ್ಣನಂಥವರೂ ಆದ ರೇವಣಸಿದ್ದಯ್ಯನವರನ್ನು ಕರೆದು ಕೂಡಿಸಿಕೊಂಡು ಬಿಟ್ಟೆ! ಕೊಂಚ ಪಕ್ಕೆ ತಿವಿತಗಳು ಕಡಿಮೆಯಾದವು. ಆದರೆ ಅಷ್ಟರಲ್ಲೇ ಮಂತ್ರಿ ಆಂಜನೇಯ ಬಂದರು. ಅವರು-ನಾನು ಒಂದೇ ಜಿಲ್ಲೆಯವರು. ಅವರನ್ನ ನೋಡಿದ ತಕ್ಷಣ ರೇವಣಸಿದ್ದಯ್ಯನವರು “ಕೂತ್ಕೋ ಬನ್ನಿ ಆಂಜನೇಯಾ" ಅನ್ನುತ್ತ ಎದ್ದು ಹೋಗೇ ಬಿಡೋದಾ? ಐದು ನಿಮಿಷ ಕುಳಿತಿದ್ದ ಆಂಜನೇಯ, ನಂತರ ಎದ್ದು ವೇದಿಕೆಗೆ ಹೋಗಿ ಬಿಟ್ಟರು. ಶುರುವಾಯಿತಲ್ಲ ನನ್ನ ಮೇಲಿನ ‘ಸಾರ್ವಜನಿಕ ಅತ್ಯಾಚಾರ?’ನೂರುಗಟ್ಟಲೆ, ಸಾವಿರಗಟ್ಟಲೆ ಜನರ ಗುಂಪು. ಇದು ಮುಗಿಯೋ ಪ್ರವಾಹ ಅಲ್ಲ ಅನ್ನಿಸಿತು. ಅಷ್ಟರಲ್ಲಿ ಒಬ್ಬಾಕೆ ಬಂದರು. ಹೆಚ್ಚೆಂದರೆ ಮೂವತ್ತು ವಯಸ್ಸು. ಕೈಲೊಂದು ಮಗುವಿತ್ತು. “ಸರ್ ನನ್ನ ಮಗೂನ ನಿಮ್ಮ ತೊಡೆ ಮೇಲೆ ಕೂರಿಸ್ಕೋತೀರಾ? ಒಂದೇ ಒಂದು ಫೋಟೋ" ಅಂದರು. ‘ಆಯ್ತಮ್ಮ ಕೊಡಿ’ ಅಂದು ಮಗೂನ ಮಡಿಲಲ್ಲಿ ಕೂಡಿಸಿಕೊಂಡೆ. ಅದ್ಯಾರೋ ಫೊಟೋ ತೆಗೆದರು. ಆಕೆ "thank you Sir" ಅಂದರು. ಎದ್ದು ಹೋಗಿಯೂ ಬಿಟ್ಟರು. ಹೋದಂತೆ ಹೋದವರು ಎರಡೇ ನಿಮಿಷಕ್ಕೆ ವಾಪಸು ಬಂದರು. ‘ಸರ್ ನಾನೂ ಒಂದು ತೆಗೆಸ್ಕೋತೀನಿ. Please Sir" ಅಂದರಾಕೆ. ನನ್ನ ಮೈಮೇಲೆ ವಿಪರೀತ ಜನ ಮುಕುರಿ ಬೀಳುತ್ತಿದ್ದರು. ಪಾಪ, ಈಕೆ ಎಲ್ಲಿ ಕುಳಿತು ಎಲ್ಲಿ ಕುಳಿತು ತೆಗೆಸಿಕೊಳ್ಳುತ್ತಾರೆ ಅಂತ ಯೋಚಿಸುತ್ತಿರು ವಾಗಲೇ ಆಕೆ ಸೆರಗು ಬಿಗಿದುಕೊಂಡು ಅನಾಮತ್ತು (ಆಕೆಯ ಮಗು ಕುಳಿಡ್ತಲ್ಲ?) ಅದೇ ರೀತಿ ನನ್ನ ತೊಡೆಯ ಮೇಲೆ ಕೂತು ಬಿಡೋದಾ? ಅದೂ ಏನು? “ಸೇಫ್ಟಿಗೆ ಸರ್" ಅನ್ನುತ್ತ ಎರಡು ಪೊಟೋ ತೆಗೆಸಿಕೊಂಡರು. ರೀ, ಆ ಫೋಟೋ ನೋಡಿದರೆ ಅಲ್ಲಿನ ರಷ್, ವಿಪರೀತ ಜನ, ಬೆವರ ವಾಸನೆ ಇತ್ಯಾದಿಗಳು ಗೊತ್ತಾಗುತ್ತವಾ? ಇವನು ರವಿ ಬೆಳಗೆರೆ. ಇವನ ತೊಡೆ ಮೇಲೆ ಮೂವತ್ತರ ಯುವತಿ ಕುಳಿತಿದ್ದಾಳೆ ಅಂತ ತಾನೇ ಅನ್ನಿಸೋದು? ಗತಿ ಏನಪ್ಪಾ ಅಂದುಕೊಂಡು ಮುದ್ದೆಮಾಡಿ ಎತ್ತಿಟ್ಟ ಚಪಾತಿ ಹಿಟ್ಟಿನಂತೆ ಕುಳಿತುಬಿಟ್ಟೆ.

ಹಾಗೆ ಕೊಂಚಹೊತ್ತು ಕೂತವನ ಪೇಷನ್ಸ್ ಮುಗಿದಂತಾಯಿತು. ‘ಯಾರು ಏನೇ ಅಂದುಕೊಳ್ಳಲಿ, ಸೀನಾ ಹೊರಡು’ ಅಂದವನೇ ಎದ್ದು ನಡೆದೇ ಬಿಟ್ಟೆ. ಇದೆಲ್ಲದರ ಮಧ್ಯೆ ಮೂವರು ಮಾಜಿ ಮುಖ್ಯಮಂತ್ರಿಗಳು ಸರದಿಯಂತೆ ಬಂದು ಹೋದರು. ಮೊದಲು ಎಸ್ಸೆಂ ಕೃಷ್ಣ ಬಂದರು. ಅವರೊಂದಿಗೆ ಹರಟಿದೆ. ನಂತರ ಜಗದೀಶ್ ಶೆಟ್ಟರ್ ಬಂದರು. ಅವರೊಂದಿಗೂ ಹರಟೆ. ಮೂರನೆಯವರಾಗಿ ಬಂದವರು smile raja ಸದಾನಂದ ಗೌಡರು. “ನಮಸ್ಕಾರ ಗೌಡ್ರೇ" ಅಂದೆ. ಅವರು ಫಕ್ಕನೆ ‘ಹನ್ನೊಂದ್ ಹನ್ನೊಂದ್ ಹನ್ನೊಂದೂ!’ ಅಂತ ಕೂಗುತ್ತಾ ಹೋಗೇ ಬಿಡೋದಾ? ಏನಿದು ಹನ್ನೊಂದು? ಬಗೆ ಹರಿಯಲಿಲ್ಲ. ಅಲ್ಲಿದ್ದವರು ಯಾರೋ ‘ಇವತ್ತು ಹನ್ನೊಂದು ಮದುವೆ ಇವೆ ಸರ್. ಅಷ್ಟೂ ಮದುವೆಗಳಿಗೆ ಹೋಗೋಕಿದೆ ಅಂದ ರೀತಿ ಅದು!’ ವಿವರಿಸಿದರು.. ಒಳ್ಳೇ ಗಡಿಬಿಡಿಸಿದ್ದ ಈ smile raja ಅಂದುಕೊಂಡೆ.

ಮದುವೇಲಿ ಇಂಥ ಸಂಭ್ರಮ, ಸನ್ನಿವೇಶ ಇರಲೇಬೇಕು. ಸ್ವಲ್ಪ ಸಹನೆ ಇರಬೇಕಷ್ಟೆ: to endure. ಈ ದಂಪತಿಗಳಿಗೆ ವೆಸ್ಟ್ ಎಂಡ್‌ನಲ್ಲಿ ‘ಶುಭ ರಾತ್ರಿ’ ವ್ಯವಸ್ಥೆ ಮಾಡಿದ್ದರು. ಪೂರ್ತಿ ಎರಡು ದಿನಗಳ ನಂತರವೇ ಕರ್ಣ ಬಾಗಿಲು ತೆರೆದದ್ದು. ಈಗ ಎರಡು ತಿಂಗಳು ಲಕ್ಷ್ಮಿ ಮನೆಗೆ ಬರುವಂತಿಲ್ಲ. ‘ಒಂದ್ಕೆಲ್ಸಾ ಮಾಡು ಕರ್ಣ. ನೀನು ಅವರ ಮನೇಲೇ ಇದ್ದು ಬಿಡು!’ ಅಂದೆ. ಅವನಾಗಲೇ ವಿಮಾನದ seat ಹಿಡಿಯೋ ಅವಸರದಲ್ಲಿದ್ದ. ಯೂರಪ್‌ಗಿಂತ ಮಧುಚಂದ್ರದ ತಾಣ ಉಂಟೆ? ಗ್ರೀಸ್ , ಪೋರ್ಚುಗಲ್, ಹಂಗೆರಿ ಅಂತೆಲ್ಲ ಅಂದ. ಮೂವತ್ತೈದು ವರ್ಷಗಳ ಹಿಂದೆ ನಾವು ಮಧುಚಂದ್ರಕ್ಕೆ ಹೋದದ್ದು ನೆನಪಾಯಿತು. ಹೋದದ್ದು ಶೃಂಗೇರಿಗೆ! ಅವತ್ತಿಗೆ ಅದೇ ಭಾಗ್ಯ.

ಅಲ್ವೇನೇ ಅಂದೆ. ಲಲಿತೆ ನಕ್ಕಳು.
-ನಿಮ್ಮವನು
ಆರ್.ಬಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 29 June, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books