Ravi Belagere
Welcome to my website
ನಿಮಗೂ ಯಾವಾಗಲೋ ಕಾಲು ಮುರಿದಿರಬಹುದು. ಬಚ್ಚಲಲ್ಲಿ ಕಾಲು ಜಾರಿದ್ದಿರಬಹುದು. ನಡೆಯುತ್ತ ನಡೆಯುತ್ತ ನಿಮ್ಮ ಕಾಲು ಉಳುಕಿರಬಹುದು. ಸ್ವಲ್ಪ ದಿನ ನೀವು ಉಳುಕು ಅಂದುಕೊಂಡಿರುತ್ತೀರಿ: ಡಾಕ್ಟರ್ ಬಳಿಗೆ ಹೋಗಿ ಎಕ್ಸ್‌ರೇ ತೆಗೆಸಿದಾಗ ಅದು hair line fracture. ಆಯ್ತಲ್ಲ? ಮುದ್ದಾಗಿ ಬ್ಯಾಂಡೇಜ್ ಹಾಕಿ ಆರೇ ಆರು ವಾರ ಅದನ್ನು ಹಾಕ್ಕೊಂಡಿರಿ ಅನ್ನುತ್ತಾರೆ. ಅದೊಂಥರಾ ಸಿಮೆಂಟ್‌ನ ಕಟ್ಟೆ ಕಟ್ಟಿದಂತೆಯೇ! ವಿಪರೀತ ಭಾರ. ನಡೆಯುವುದು ಯಮಹಿಂಸೆ. ನಿಮಗೆ ಯಾವತ್ತಾದರೂ ಕೈ ಕಾಲು ಮುರಿದಿದ್ದವಾ? ಯಾಕೆ? Plaster ಸುಖ ಅನುಭವಿಸಿದಿರಾ? ಎಷ್ಟು ದಿನ? ಹೋಗಲಿ ಸಮಸ್ಯೆ ಪೂರ್ಣವಾಗಿ ವಾಸಿಯಾಗಿ ಬಗೆಹರಿಯಿತಾ? ನಿಮ್ಮ ಆಗಿನ ಅನುಭವವನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಜಗತ್ತು ರೂಪುಗೊಂಡಿರುವುದೇ ಒಳ್ಳೆಯ ಮತ್ತು ಕೆಟ್ಟ ನಿರ್ಧಾರಗಳಿಂದ

`ಇರೋ ವಿಷ್ಯಾನ ಹೇಳಿದ್ದೀನಿ. ನಿರ್ಧಾರ ನಿಮಗೆ ಬಿಟ್ಟಿದ್ದು'.
ಹಿರಿಯನಂತೆ ಕಾಣಿಸುವ ಪಾತ್ರಧಾರಿ ತನ್ನಷ್ಟೇ ವಯಸ್ಸಾದ ಇನ್ನೊಂದು ಪಾತ್ರಕ್ಕೆ ಹೇಳುತ್ತದೆ. ಈಗೊಂದು ಕ್ಲೋಸ್ ಅಪ್ ಶಾಟ್, ಇನ್ನೊಂದು ಪಾತ್ರಧಾರಿಯ ಮುಖವಷ್ಟೇ ತೆರೆಯ ಮೇಲೆ ಕಾಣುತ್ತದೆ, ಅಲ್ಲೇನೋ ಗೊಂದಲ, ಅನಿಶ್ಚಿತತೆ. ಆತ ಏನು ನಿರ್ಧಾರ ತೆಗೆದುಕೊಳ್ಳುತ್ತಾನೋ ಎಂದು ನೋಡುಗ ಆತಂಕಕ್ಕೀಡಾಗುತ್ತಾನೆ. ಅಷ್ಟೊತ್ತಿಗೆ ಆ ಮುಖ ಫ್ರೀಝ್ ಆಗುತ್ತದೆ. ಆವತ್ತಿನ ಎಪಿಸೋಡು ಮುಗಿದೇ ಹೋಯಿತು. ಆ ಪಾತ್ರದ ನಿರ್ಧಾರ ಏನು ಎಂದು ತಿಳಿದುಕೊಳ್ಳುವುದಕ್ಕೆ ನೀವು ನಾಳೆಯ ಎಪಿಸೋಡು ನೋಡಲೇಬೇಕು. ತಮಾಷೆಯೆಂದರೆ ಆತ ನಾಳೆಯೂ ಏನೂ ನಿರ್ಧಾರ ತೆಗೆದುಕೊಳ್ಳುವುದಿಲ್ಲ, ಅದನ್ನು ನಾಡಿದ್ದಿಗೆ ಮುಂದೂಡುತ್ತಾನೆ.

ಸಾಮಾನ್ಯವಾಗಿ ಎಲ್ಲಾ ಟೀವಿ ಸೀರಿಯಲ್ಲುಗಳಲ್ಲೂ ಇಂಥಾದ್ದೊಂದು ಸನ್ನಿವೇಶ ಆಗಾಗ ಬಂದು ಹೋಗುತ್ತಲೇ ಇರುತ್ತದೆ. ಬದುಕಿನಲ್ಲಿ ನಿರ್ಧಾರ ತೆಗೆದು ಕೊಳ್ಳುವುದು ಎಷ್ಟು ಕಷ್ಟ ಅನ್ನುವುದು ವೀಕ್ಷಕನಿಗೆ ಅರಿವಾಗುತ್ತಲೇ ಹೋಗುತ್ತದೆ. ಆ ಒಂದು ನಿರ್ಧಾರ ತೆಗೆದುಕೊಳ್ಳುವುದಕ್ಕೆ ಆ ಪಾತ್ರಧಾರಿ ಕನಿಷ್ಟ ಐದು ಎಪಿಸೋಡುಗಳನ್ನಾದರೂ ತಿಂದು ತೇಗುತ್ತಾನೆ. ನಿಮಗೆ ಕಿರಿಕಿರಿ ಆಗುತ್ತದೆ, ಸಿಟ್ಟು ಬರುತ್ತದೆ. ಸೀರಿಯಲ್ಲನ್ನು ನಿರ್ದೇಶಕ ಚೂಯಿಂಗ್ ಗಮ್ ಥರ ಎಳೀತಿದ್ದಾನೆ ಎಂದು ವಾಚಾಮಗೋಚರ ಬೈಯುತ್ತೀರಿ. ಆದರೆ ಒಂದು ಕ್ಷಣ ಯೋಚಿಸಿ ನೋಡಿ, ನೀವು ನಿಮ್ಮ ಬದುಕಲ್ಲಿ ಇಂಥಾದ್ದೇ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಕನಿಷ್ಟ ಒಂದು ತಿಂಗಳು ಖರ್ಚು ಮಾಡುತ್ತೀರಿ, ಅದಕ್ಕೆ ಹೋಲಿಸಿದಾಗ ಈ ಸೀರಿಯಲ್ ಕತೆ ಏನೂ ಅಲ್ಲ. ಸೀರಿಯಲ್ಲನ್ನು ಒಬ್ಬ ವೀಕ್ಷಕನಾಗಿ ತೆರೆಯ ಮೇಲೆ ನೋಡಿದಂತೆಯೇ, ನಮ್ಮ ಜೀವನವನ್ನೂ ಒಬ್ಬ ಔಟ್ ಸೈಡರ್ ಆಗಿ ಹೊರಗಿಂದ ನೋಡುವ ಹಾಗಿದ್ದರೆ ಈ ವಿಳಂಬ ನಿರ್ಧಾರಗಳಿಂದಾಗುವ ಫಜೀತಿಯ ಅನುಭವವಾಗಿರುವುದು.

ನೀವು ತೆಗೆದುಕೊಳ್ಳುವ ಒಂದು ನಿರ್ಧಾರ ನಿಮ್ಮ ಬದುಕಿನ ಗತಿಯನ್ನೇ ಬದಲಾಯಿಸಬಲ್ಲದು ಅನ್ನುತ್ತದೆ ವಿಮೆ ಕಂಪನಿಯೊಂದರ ಗೋಡೆ ಮೇಲಿನ ಜಾಹಿರಾತು. ಸ್ವಲ್ಪ ಮಟ್ಟಿಗೆ ಅದು ನಿಜ ಕೂಡ. ಬೇರೆಯವರು ಸಾವಿರ ಸಲಹೆ ನೀಡಿದರೂ, ನಿರ್ಧಾರ ತೆಗೆದುಕೊಳ್ಳಬೇಕಾದವರು ನಾವೇ. ಯಾಕೆಂದರೆ ಅದು ನಮ್ಮ ಬದುಕು. ನಾಳೆ ಆ ನಿರ್ಧಾರದಿಂದ ಆಗುವ ಎಲ್ಲಾ ಪರಿಣಾಮಗಳಿಗೂ ನಾವೇ ಜವಾಬ್ದಾರರು. ಆ ಕಾರಣಕ್ಕೇ ನಾವು ಆತಂಕಕ್ಕೆ ಒಳಗಾಗುತ್ತೇವೆ, ನಾಳೆ ಇನ್ನೇನಾಗುತ್ತೋ ಅನ್ನುವ ಭಯದಿಂದ ನಮ್ಮ ನಿರ್ಧಾರಗಳನ್ನು ಮುಂದೂಡುತ್ತಾ ಹೋಗುತ್ತೇವೆ. ಹಾಗಾದಾಗ ಕೆಲವೊಮ್ಮೆ ಅವಕಾಶಗಳು ಕೈ ಚೆಲ್ಲಿ ಹೋಗುತ್ತವೆ, ನಾವು ಏರಬೇಕಾಗಿದ್ದ ರೈಲು ನಮ್ಮ ಕಣ್ಣೆದುರಿಗೇ ನಮ್ಮನ್ನು ದಾಟಿ ಹೋಗುತ್ತದೆ. ಅಷ್ಟೇ ಅಲ್ಲ, ನಮಗಿಂತ ಕಡಿಮೆ ಬುದ್ಧಿವಂತ ನಮ್ಮನ್ನು ಮೀರಿ ಮುಂದೆ ಹೋಗುತ್ತಾನೆ, ಅದನ್ನು ನೋಡುತ್ತಾ ನಮಗೆ ವಯಸ್ಸಾಗುತ್ತದೆ.

ಮಧ್ಯಮ ವರ್ಗದಲ್ಲಿ ಬೆಳೆದು ಬಂದವರ ಕಷ್ಟ ಏನೆಂದರೆ, ಅವರಿಗೆ ಸ್ವಂತ ನಿರ್ಧಾರಗಳನ್ನು ತೆಗೆದು ಕೊಂಡು ಅಭ್ಯಾಸವೇ ಇರುವುದಿಲ್ಲ. ಚಿಕ್ಕವರಾಗಿದ್ದಾಗ ಬಟ್ಟೆಬರೆಯಿಂದ ಹಿಡಿದು, ದೊಡ್ಡವನಾದ ಮೇಲೆ ಯಾವ ಕಾಲೇಜಿಗೆ ನಮ್ಮನ್ನು ಸೇರಿಸಬೇಕು ಅನ್ನುವ ತನಕ ನಮ್ಮ ಪ್ರತಿ ಹೆಜ್ಜೆಯನ್ನು ನಿರ್ಧರಿಸುವವರು ಹೆತ್ತವರು. ನಿಮಗೆ ಆರ್ಟ್ಸ್ ಕೋರ್ಸ್ ಇಷ್ಟವಾಗಿದ್ದರೂ, ಬಿಎ ಓದಿದರೆ ನೌಕರಿ ಸಿಗುವುದಿಲ್ಲ ಅನ್ನುವ ಕಾರಣಕ್ಕೆ ಕಾಮರ್ಸ್ ಓದು ಅನ್ನುತ್ತಾನೆ ಅಪ್ಪ. ಖಾಸಗಿ ಕಂಪನಿಯಲ್ಲಿ ನಿಮ್ಮ ಮನಸ್ಸಿಗೆ ಹಿಡಿಸುವ ನೌಕರಿ ಸಿಕ್ಕಿದರೂ, ಸರ್ಕಾರಿ ನೌಕರಿಯೇ ಬೆಸ್ಟು ಅನ್ನುತ್ತಾನೆ ಅಣ್ಣ. ಹೀಗೇ ನಮ್ಮ ಬದುಕಿನ ಪ್ರಮುಖ ನಿರ್ಧಾರಗಳನ್ನೆಲ್ಲಾ ಇನ್ನೊಬ್ಬರು ತೆಗೆದುಕೊಳ್ಳುತ್ತಾ ಹೋಗುವುದರಿಂದ ನಮಗರಿವಿಲ್ಲದಂತೆಯೇ ನಾವು ಪ್ಯಾರಾಸೈಟ್‌ಗಳಾಗುತ್ತೇವೆ. ಒಂದು ಟೀ ಶರ್ಟ್ ಖರೀದಿಸಬೇಕಾದರೂ ಹತ್ತು ಸಾರಿ ಯೋಚಿಸುತ್ತೇವೆ, ಗೆಳೆಯನಿಗೆ ಹಿಂದಿ ಸಿನೆಮಾ ಇಷ್ಟ ಅನ್ನುವ ಕಾರಣಕ್ಕೆ ನಮ್ಮ ಕನ್ನಡಪ್ರೇಮವನ್ನು ತ್ಯಾಗ ಮಾಡುತ್ತೇವೆ. ಕೊನೆಗೆ ಈ ಪರಾವಲಂಬನೆಯಿಂದ ಕಳಚಿಕೊಳ್ಳುವ ಕಾಲ ಬಂದಾಗ ತಬ್ಬಿಬ್ಬಾಗಿ ನಿಲ್ಲುತ್ತೇವೆ. ಬೆಂಗಳೂರಲ್ಲೊಂದು ಬಾಡಿಗೆ ಮನೆ ಹಿಡಿಯಬೇಕಾದರೂ ಹತ್ತಾರು ಜನರ ಸಲಹೆ ಕೇಳುತ್ತೇವೆ. ನಮ್ಮಿಷ್ಟ ಏನು ಅನ್ನುವುದು ನಮಗೇ ಗೊತ್ತಿರುವುದಿಲ್ಲ, ನಮಗೆ ಯಾವುದು ಹಿತ ಅನ್ನುವುದೂ ನಮಗೆ ಗೊತ್ತಿರುವುದಿಲ್ಲ. ಜೀವನ ಅನ್ನುವುದೇ ನಿಗೂಢ. ಅದು ನಮ್ಮನ್ನು ನಾನಾ ಸನ್ನಿವೇಶಗಳತ್ತ ಕೈ ಹಿಡಿದು ಕರೆದೊಯ್ಯುತ್ತದೆ. ಪ್ರತಿದಿನ ಹೊಸ ಸವಾಲುಗಳು ಎದುರಾಗುತ್ತಲೇ ಇರುತ್ತವೆ, ಅನಪೇಕ್ಷಿತ ಮತ್ತು ಅನಿರೀಕ್ಷಿತ ಸಮಸ್ಯೆಗಳಿಗೆ ನಾವು ಸದಾ ಸಿದ್ಧವಾಗಿರಬೇಕು. ಅಲ್ಲೆಲ್ಲಾ ನಮ್ಮ ನಿರ್ಧಾರಗಳು ಮುಖ್ಯವಾಗುತ್ತವೆ. ನೀವು ಹೋಗುವ ಕಡೆಯಲ್ಲೆಲ್ಲಾ ನಿಮ್ಮನ್ನು ಕೈ ಹಿಡಿದು ನಡೆಸುವುದಕ್ಕೆ ಯಾರೋ ಇರುತ್ತಾರೆ ಎಂದು ಅಂದುಕೊಂಡರೆ ನಿಮಗಿಂತ ಮೂರ್ಖರು ಯಾರೂ ಇಲ್ಲ. ಹಾಗಂತ ಬೇರೆಯವರನ್ನು ಒಂದು ಮಾತು ಕೇಳುವುದರಲ್ಲಿ ತಪ್ಪೇನೂ ಇಲ್ಲ, ಆದರೆ ಅಂತಿಮ ನಿರ್ಧಾರ ಯಾವತ್ತೂ ನಿಮ್ಮದೇ ಆಗಿರಲಿ. ನಿಮ್ಮ ಭವಿಷ್ಯವನ್ನು ಕಟ್ಟುವ ಕೆಲಸ ನಿಮ್ಮಿಂದಲೇ ಆಗಲಿ.

ಆರಂಭದಲ್ಲಿ ಕೊಂಚ ಯಡವಟ್ಟುಗಳಾಗಬಹುದು. ಕೆಲವೊಮ್ಮೆ ನಿಮ್ಮ ಜಡ್ಜ್‌ಮೆಂಟ್ ಕೈ ಕೊಡಬಹುದು, ದುಡುಕಿ ನಿರ್ಧಾರ ಕೈಗೊಂಡಿರಿ ಎಂದು ಆತ್ಮೀಯರು ಟೀಕಿಸಬಹುದು. ಪರವಾಗಿಲ್ಲ, ಧೋನಿಯಂತಹ ಒಳ್ಳೆ ಕ್ಯಾಪ್ಟನ್ ಕೂಡ ತಪ್ಪು ನಿರ್ಧಾರಗಳನ್ನು ಕೈಗೊಂಡಿದ್ದುಂಟು. ಈ ಜಗತ್ತು ರೂಪುಗೊಂಡಿರುವುದೇ ಒಳ್ಳೆಯ ಮತ್ತು ಕೆಟ್ಟ ನಿರ್ಧಾರಗಳಿಂದ. ಇತಿಹಾಸದಲ್ಲಿ ಒಳ್ಳೆಯ ನಿರ್ಧಾರಗಳಿಗೆ ಉದಾಹರಣೆಗಳು ಸಿಗುತ್ತವೆ, ಕೆಟ್ಟ ನಿರ್ಧಾರಗಳಿಗೂ ಅಷ್ಟೇ ಉದಾಹರಣೆಗಳು ಸಿಗುತ್ತವೆ. ಆದರೆ ನಿರ್ಧಾರವೇ ಕೈಗೊಳ್ಳದಿರುವವರ ಹೆಸರು ಎಲ್ಲೂ ದಾಖಲಾಗುವುದೇ ಇಲ್ಲ. ಅವರು ಬದುಕಿದ್ದು ಮತ್ತು ಸತ್ತದ್ದು ಯಾರಿಗೂ ಗೊತ್ತಾಗುವುದೇ ಇಲ್ಲ. ವೈಯಕ್ತಿಕವಾಗಿಯೂ ನಮ್ಮೆಲ್ಲರ ಬದುಕು ಕೂಡ ರೂಪುಗೊಳ್ಳುವುದು ನಾವು ಕೈಗೊಳ್ಳುವ ನಿರ್ಧಾರಗಳಿಂದ. ತನ್ನ ಕಂದನಿಗೆ ಯಾವ ಹೊತ್ತಲ್ಲಿ ತುತ್ತು ಉಣಿಸಬೇಕೆಂದು ತಾಯಿ ನಿರ್ಧರಿಸುತ್ತಾಳೆ, ಮಗಳ ಮದುವೆ ವಿಚಾರ ಬಂದಾಗ ಅಪ್ಪ-ಅಮ್ಮ ಇಬ್ಬರೂ ಕುಳಿತು ನಿರ್ಧಾರ ತೆಗೆದುಕೊಳ್ಳುತ್ತಾರೆ. ಕೆಲವೊಮ್ಮೆ ಮಗಳನ್ನು ಕೇಳುವುದೇ ಇಲ್ಲ ಅನ್ನುವುದು ಬೇರೆ ಮಾತು. ಕೆಲವೊಂದು ಸಂಗತಿಗಳಲ್ಲಿ ನಾವು ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅದರಿಂದ ನಮ್ಮ ಆತ್ಮೀಯರಿಗೆ ನೋವಾಗಬಹುದು. ಆದರೆ ನಿಮ್ಮ ಭವಿಷ್ಯಕ್ಕೆ ಅದು ಮುಖ್ಯ. ಕೆಲವೊಮ್ಮೆತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ, ಯೋಚನೆ ಮಾಡುವುದಕ್ಕೆ ಸಮಯವೇ ಇರುವುದಿಲ್ಲ. ಇಲ್ಲಿ ನಿಮ್ಮ ಜಡ್ಜ್‌ಮೆಂಟ್ ಮುಖ್ಯ. ಪ್ರತಿಯೊಂದಕ್ಕೂ ಇನ್ನೊಬ್ಬರ ಸಲಹೆ ಪಡೆಯುವವರಿಗೆ ಇದು ಕಷ್ಟವೆನಿಸಬಹುದು. ನಿಧಾನವೇ ಪ್ರಧಾನ, ವೇಗದ ಪ್ರಯಾಣ ಮೃತ್ಯುವಿಗೆ ಆಹ್ವಾನ ಅನ್ನುವ ಮಾತುಗಳು ವಾಹನ ಚಾಲಕರಿಗಷ್ಟೇ ಅನ್ವಯಿಸುತ್ತದೆ. ನಮ್ಮ ಇಂದಿನ ದೈನಿಕಗಳು ವೇಗವನ್ನು ಬೇಡುತ್ತದೆ, ಪ್ರತಿಯೊಂದು ಕ್ಷೇತ್ರದಲ್ಲೂ ಪೈಪೋಟಿ ಇರುವುದ ರಿಂದ ನಾವು ರೇಸಿಗೆ ಬೀಳಲೇಬೇಕು. ಆಮೆ ಮತ್ತು ಮೊಲದ ಓಟದ ಕತೆ ಕೇಳುವುದಕ್ಕಷ್ಟೇ ಚೆಂದ. ನಗರ ಬದುಕಿಗೆ ಅದು ಅಪ್ಲೈ ಆಗುವುದಿಲ್ಲ. ಕೆಲವೊಂದು ಸಂಗತಿಗಳನ್ನು ನೆನಪಿಟ್ಟುಕೊಳ್ಳಿ. ತಮ್ಮ ಬದುಕಲ್ಲಿ ಯಾವತ್ತೂ ನಿರ್ಧಾರವನ್ನೇ ತೆಗೆದುಕೊಳ್ಳದವರನ್ನು ಜಗತ್ತು ಹೇಡಿಗಳು ಎಂದೇ ಕರೆ ಯುತ್ತದೆ. ಅಂಥವರಿಗೆ ಸಮಾಜದಲ್ಲಿ ಮನ್ನಣೆ ಸಿಗುವುದಿಲ್ಲ. ನೈತಿಕವಾಗಿ ನೀವು ಸರಿದಾರಿಯಲ್ಲಿದ್ದೀರಿ ಎಂದು ಅನಿಸಿದರೆ ವೈಫಲ್ಯದ ಭೀತಿ ನಿಮ್ಮನ್ನು ಕಾಡ ಬೇಕಾಗಿಲ್ಲ. ಯಾರು ಏನಂತಾರೋ ಅನ್ನುವ ಕಾರಣಕ್ಕೆ ತೆಪ್ಪಗಿರುವುದು ಕೂಡ ಸರಿಯಲ್ಲ, ಇನ್ನೊಬ್ಬರ ಅಭಿಪ್ರಾಯವನ್ನು ಗೌರವಿಸೋಣ. ಹಾಗಂತ ನಮ್ಮ ನಿರ್ಧಾರದಿಂದ ಹಿಂದೆ ಸರಿಯಬೇಕಾಗಿಲ್ಲ. ಪ್ರತಿಯೊಂದು ಸಂದರ್ಭದಲ್ಲೂ ಇನ್ನೊಬ್ಬರನ್ನು ಮೆಚ್ಚಿಸುವುದು ಕಷ್ಟ. ಕ್ಲಿಷ್ಟ ನಿರ್ಧಾರಗಳನ್ನು ಕೈಗೊಳ್ಳುವಷ್ಟು ಪ್ರಬುದ್ಧತೆ ನನಗಿಲ್ಲ ಅನ್ನುವ ಕೀಳರಿಮೆ ಬೇಕಾಗಿಲ್ಲ. ನಮಗಿಂತ ದಡ್ಡರು ರಾಜಕೀಯ ನಾಯಕರಾಗಿ ಮಿಂಚುತ್ತಿರುವುದನ್ನು ನೋಡಿ ಧೈರ್ಯ ತಂದುಕೊಳ್ಳಿ. ಹಿಂದೆ ಯಾವತ್ತೋ ಆದ ಯಡವಟ್ಟನ್ನು ನೆನೆಸಿಕೊಂಡು ಈಗ ಹಿಂಜರಿಯುವುದು ಸರಿಯಲ್ಲ. ಪಾಪಪ್ರಜ್ಞೆಯಲ್ಲಿ ಬಳಲುತ್ತಿರುವ ವ್ಯಕ್ತಿ ಏನನ್ನೂ ಸಾಧಿಸುವುದಿಲ್ಲ. ಇವೆಲ್ಲದರ ಜೊತೆ ಆತ್ಮವಿಶ್ವಾಸ ಅನ್ನುವ ಅಸ್ತ್ರ ಸದಾ ಜೊತೆಗಿರಲಿ. ಅದು ನಿಮ್ಮೊಳಗೊಂದು ಧೈರ್ಯವನ್ನು ಹುಟ್ಟುಹಾಕುತ್ತದೆ. ಇದು ನನ್ನ ನಿರ್ಧಾರ, ಇದರಿಂದ ಉಂಟಾಗುವ ಎಲ್ಲಾ ಅನುಕೂಲ ಮತ್ತು ಅನಾಹುತಗಳನ್ನು ನಾನೇ ಅನುಭವಿಸುತ್ತೇನೆ ಎಂದು ಆಗಾಗ ನಿಮ್ಮ ಮನಸ್ಸನ್ನು ಹುರಿದುಂಬಿಸುತ್ತಾ ಇರಿ. ಫಲಿತಾಂಶ ನಿಮ್ಮ ಪರವಾಗಿಯೇ ಇರುತ್ತದೆ.

-ರವೀ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 26 June, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books