Ravi Belagere
Welcome to my website
ನಿಮಗೂ ಯಾವಾಗಲೋ ಕಾಲು ಮುರಿದಿರಬಹುದು. ಬಚ್ಚಲಲ್ಲಿ ಕಾಲು ಜಾರಿದ್ದಿರಬಹುದು. ನಡೆಯುತ್ತ ನಡೆಯುತ್ತ ನಿಮ್ಮ ಕಾಲು ಉಳುಕಿರಬಹುದು. ಸ್ವಲ್ಪ ದಿನ ನೀವು ಉಳುಕು ಅಂದುಕೊಂಡಿರುತ್ತೀರಿ: ಡಾಕ್ಟರ್ ಬಳಿಗೆ ಹೋಗಿ ಎಕ್ಸ್‌ರೇ ತೆಗೆಸಿದಾಗ ಅದು hair line fracture. ಆಯ್ತಲ್ಲ? ಮುದ್ದಾಗಿ ಬ್ಯಾಂಡೇಜ್ ಹಾಕಿ ಆರೇ ಆರು ವಾರ ಅದನ್ನು ಹಾಕ್ಕೊಂಡಿರಿ ಅನ್ನುತ್ತಾರೆ. ಅದೊಂಥರಾ ಸಿಮೆಂಟ್‌ನ ಕಟ್ಟೆ ಕಟ್ಟಿದಂತೆಯೇ! ವಿಪರೀತ ಭಾರ. ನಡೆಯುವುದು ಯಮಹಿಂಸೆ. ನಿಮಗೆ ಯಾವತ್ತಾದರೂ ಕೈ ಕಾಲು ಮುರಿದಿದ್ದವಾ? ಯಾಕೆ? Plaster ಸುಖ ಅನುಭವಿಸಿದಿರಾ? ಎಷ್ಟು ದಿನ? ಹೋಗಲಿ ಸಮಸ್ಯೆ ಪೂರ್ಣವಾಗಿ ವಾಸಿಯಾಗಿ ಬಗೆಹರಿಯಿತಾ? ನಿಮ್ಮ ಆಗಿನ ಅನುಭವವನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಅವನಿಗೇನು ಬಿಡಿ: ಮಾವ ಶ್ರೀಮಂತರು ಅವನ ಅಪ್ಪನೂ ಶ್ರೀಮಂತ

ಮನಸ್ಸಿಗೆ ಏನೋ ನೆಮ್ಮದಿ.

ಮನೆಗೆ ಸೊಸೆ ಬಂದಳು. ನನ್ನ ಕರಿಷ್ಮಾ ಹಿಲ್ಸ್‌ನ ಮನೆ ‘ಲಲಿತೆ’ ಅವತ್ತು ತುಂಬಿ ತುಳುಕುತ್ತಿತ್ತು. ಈ ಹಿಂದೆ ನಮ್ಮ ಮನೆಯಲ್ಲಿ ಎರಡು ಮದುವೆಗಳಾಗಿವೆ. ಆಗೆಲ್ಲ ನಾನು ತುಂಬ ಚಟುವಟಿಕೆಯಿಂದ ಓಡಾಡುತ್ತಿದ್ದೆ. ನಾವು ಹೆಣ್ಣಿನ ಕಡೆಯವರು. ಬೀಗರೊಂದಿಗೆ ಅನುನಯದಿಂದ ನಡೆದುಕೊಳ್ಳಬೇಕು. ಮದುವೆ ಗಂಡು, ಆತನ ಸಮಸ್ತ ಬಂಧು ಬಳಗ-ಎಲ್ಲರನ್ನೂ ಚೆನ್ನಾಗಿ ನಡೆಸಿಕೊಳ್ಳಬೇಕು. ಅವರು ಇಚ್ಛಿಸಿದ ಸಂಪ್ರದಾಯಗಳನ್ನು ‘ಚಾಚು’ ತಪ್ಪದೆ ನೆರವೇರಿಸಬೇಕು. ಮುಖ್ಯವಾಗಿ ಮದುವೆಯುದ್ದಕ್ಕೂ ನಾವು humble ಆಗಿರಬೇಕು. “ಆಯ್ತು, ಅದೇನು ಸಂಪ್ರದಾಯವಿದೆಯೋ ಅದೇ ರೀತಿ ಮಾಡೋಣ. ಏನು ನಿರೀಕ್ಷೆ ಇದೆಯೋ ಅದನ್ನು ನೆರವೇರಿಸೋಣ" ಎಂಬ ನಿರ್ಧಾರಕ್ಕೆ ಬಂದಿದ್ದೆ. ಅದು ನನ್ನ ಪಾಲಿಗೆ ಹೊಸ ಅನುಭವ. ನಾನು ಲಲಿತಳನ್ನು ಮದುವೆಯಾದೆನಲ್ಲ? ಅದೇ ಕೊನೆ. ಆ ನಂತರ ನಮ್ಮ ಮನೆಯಲ್ಲಿ ಒಂದೇ ಒಂದು ಮದುವೆ ಆಗಿರಲಿಲ್ಲ. ನಮ್ಮ ಮನೆಯಲ್ಲಿ ಮೊದಲ ಹೆಣ್ಣು ಮಗು ಹುಟ್ಟಿದ್ದು, ಅದು ನನ್ನ ಪಾಲಿಗೆ ಅತಿದೊಡ್ಡ ಸಂಭ್ರಮ. ಏಕೆಂದರೆ, ಅರವತ್ತು ವರ್ಷಗಳ ನಂತರ ನಮ್ಮ ಮನೆಯಲ್ಲಿ ಹೆಣ್ಣು ಮಗು ಹುಟ್ಟಿತ್ತು. ಚೇತನಾ ಅಂತ ಅವಳಿಗೆ ಹೆಸರಿಟ್ಟೆ. ನಂತರ ಭಾವನಾ ಹುಟ್ಟಿದಳು. ಕೊನೆಯ ಬಾರಿಗೆ ಲಲಿತೆ ಆಸ್ಪತ್ರೆಯ ಹೆರಿಗೆ ಕೋಣೆಗೆ ಹೊರಟಾಗ, “ಮೂರನೇದೂ ಹೆಣ್ಣು ಮಗುವೇ ಆಗಲಿ" ಅಂದಿದ್ದೆ. ಲಲಿತೆ ಕೂಡ ಗಂಡೇ ಆಗಬೇಕು ಅಂತ ಹಟ ಹಿಡಿದಿರಲಿಲ್ಲ. ಆದರೆ, ಕರ್ಣ ಹುಟ್ಟಿದ.

ಆಯ್ತಲ್ಲ, ಗಂಡು ಹುಟ್ಟಿದ್ದೂ ಆಯ್ತು. ಡಾಕ್ಟರನ್ನ ರಿಕ್ವೆಸ್ಟ್ ಮಾಡೋಣ. ಆಪರೇಷನ್ ಆಗಿಬಿಡಲಿ ಅಂದಿದ್ದೆ. ನನಗೆ ಎರಡನೇ ಮಗು ಭಾವನಾ ಹುಟ್ಟಿದಾಗಲೇ “ಆಪರೇಷನ್ ಮಾಡಿ ಬಿಡಿ, ಮಕ್ಕಳು ಜಾಸ್ತಿಯಾದರೆ ಕಷ್ಟ" ಅಂದಿದ್ದೆ. ಡಾಕ್ಟರ ಹೆಸರು ಶಾಂತಾ ಸೀತಾರಾಮ್. “ರವೀ, ನಿಮಗಿದು ಗೊತ್ತಾಗಲ್ಲ, ಎರಡೂ ಹೆಣ್ಣೇ ಆಗಿದೆ. ಒಂದು ಗಂಡು ಆಗಲಿ ಸುಮ್ನಿರಿ" ಅಂದಿದ್ದರು ಮೇಡಂ. ಆಯ್ತಲ್ಲ, ಮೂರನೆಯದೂ ಆಯ್ತು. ಅದರಲ್ಲೂ ಗಂಡು ಮಗು. “ಇನ್ನಾದರೂ ಆಪರೇ ಷನ್ ಮಾಡಿ" ಅಂತ ನಾವಿಬ್ಬರೂ ವಿನಂತಿಸಿದ್ದೆವು. “ಇದೇನು ಹೀಗಂತೀರಿ? ಆಗಿರೋದು ಒಂದೇ ಗಂಡು ಮಗು. ಅದಿನ್ನೂ ಈಗ ಕೈಗೂಸು. ಯಾತಕ್ಕಾದ್ರೂ ಆಗಲಿ: ಮಗೂಗೆ ಐದು ವರ್ಷ ತುಂಬಲಿ" ಅಂತ ಅಂದಿದ್ದರು. ನನ್ನ ಪುತ್ರ ರತ್ನ ಕರ್ಣನಿಗೆ ಐದು ತುಂಬಿದಾಗ ನಮಗೆ ಡಾ.ಶಾಂತಾ ಸೀತಾರಾಮ್ ಅವರ ನೆನಪು ಕೂಡ ಆಗಲಿಲ್ಲ. “ಇನ್ನು ಮಕ್ಕಳು ಸಾಕೇ ಸಾಕು" ಅಂದೆ. ಅದಕ್ಕೆ ಲಲಿತೆಯೂ ತಲೆಯಾಡಿಸಿದಳು. ಆದರೆ “ಮಕ್ಕಳು ಸಾಕು" ಎಂಬ ನಮ್ಮ ಮನೋನಿರ್ಣಯ ದೇಹಕ್ಕೆ, ಗರ್ಭಕೋಶಕ್ಕೆ ಗೊತ್ತಾಗುವುದು ಹೇಗೆ? “ಸುಮ್ಮನಿರು ನೀನು. ಅದನ್ನೆಲ್ಲ ನಾನು ಸಂಭಾಳಿಸ್ತೇನೆ" ಅಂದಳು ಲಲಿತ. ಅದೇನು ಸಂಭಾಳಿಸಿದಳೋ ಕಾಣೆ. ಇನ್ನೊಂದು ಮಗುವಂತೂ ಆಗಲಿಲ್ಲ. ಅವಳ ಗರ್ಭಕೋಶ ವಿ.ಆರ್.ಎಸ್. ತೆಗೆದುಕೊಂಡಿದೆ. ಇಬ್ಬರಿಗೂ ಸಾಕಷ್ಟು ವಯಸ್ಸೂ ಆಗಿದೆ. ಮೊನ್ನೆ ಏನೋ ಕೊಂಚ ಸಮಸ್ಯೆಯಾಗಿದೆ ಅನ್ನಿಸಿದಾಗ “ಗರ್ಭಕೋಶ ತೆಗೆಸಿಕೊಂಡು ಬಿಡು" ಅಂದೆ. ಲಲಿತಾ ಜಪ್ಪಯ್ಯ ಅನ್ನಲಿಲ್ಲ. ಅವಳಿಗೆ ‘ಡಾಕ್ಟರು’ ಎಂಬ ಶಬ್ದವೇ ಅಲರ್ಜಿ. ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಅಂದಾಗ, ನಾನಾ ತರಹದ ಟ್ರಿಕ್ಕು ಮಾಡಿ, ಏನೇನೋ ಮಾತನಾಡಿ ಶತಾಯ-ಗತಾಯ ಆಸ್ಪತ್ರೆಗೆ ಹೋಗೋದನ್ನ ತಪ್ಪಿಸಿಕೊಳ್ಳುತ್ತಾಳೆ. ಈಗೀಗ ಕೊಂಚವಾಸಿ. ಮೊದಲು ಅವಳಿಗೆ ಒಂದೇ ಒಂದು ಇಂಜೆಕ್ಷನ್ ಕೊಡಿಸೋದಕ್ಕೆ ನಾನು ಪಡುತ್ತಿದ್ದ ಫಜೀತಿ ಗಳು ಒಂದೆರಡಲ್ಲ ಬಿಡಿ. ವಿಚಿತ್ರ ರೀತಿಯ ಫೋಬಿಯಾ ಅವಳದು.

ಇನ್ನು ಮದುವೆ ಸಂಗತಿ. ಮೊದಲಿನ ಎರಡು ಮದುವೆಗಳಲ್ಲಿ ಸಮಸ್ತವನ್ನೂ ಮಾಡಿದವನು ಉಮೇಶ. ಆದರೆ ನಾನು ಮಾಡಬೇಕಿದ್ದ ಉಳಿದೆಲ್ಲವನ್ನೂ ನಾನೇ ಓಡಾಡಿ ಮಾಡಿದ್ದೆ. ಚೇತನಾಳ ಮದುವೆ ಹೊತ್ತಿಗೆ ಇದ್ದ ಟೆನ್ಷನ್, ಆಗಲೇ ಭಾವನಾಳ ಮದುವೆ ಹೊತ್ತಿಗೆ ಕಡಿಮೆಯಾಗಿತ್ತು. ಆ ವಿಷಯದಲ್ಲಿ ನಾನು ತುಂಬ, ತುಂಬ ಸಂತೃಪ್ತ. ಚೇತನಾಳ ಅತ್ತೆ ಮಾವ ಯಾವುದೋ ಜನ್ಮದಲ್ಲಿ ದೇವರುಗಳಾಗಿದ್ದಿರಬೇಕು. They are so good. ಇನ್ನು ಕಿಟ್ಟಿಯ ಮನೆ: ಅಲ್ಲಿ ಕೊಂಚ ಮಾತ್ರದ ತೊಂದರೆ ಆಗಿದೆ ಅಂದರೆ, ಅದಕ್ಕೆ ಕಾರಣ ನನ್ನ ಮಗಳೇ ಆಗಿರಬೇಕು ಎಂಬಷ್ಟು ಸುಖದ ಸುಪ್ಪತ್ತಿ ಗೆಯ ಮನೆಯದು. ಕಿಟ್ಟಿಯ ತಾಯಿ ಜಯಮ್ಮನವರು ಒಂದರ್ಥದಲ್ಲಿ ದೈವಾಂಶ ಸಂಭೂತೆಯೆನ್ನಬೇಕಾದಂತಹ ಜೀವಿ. ನನ್ನ ಅಮ್ಮ ಆಕೆ. ನನಗೆ ಗೊತ್ತಿರುವ ಮಟ್ಟಿಗೆ ಈ ಐದು ವರ್ಷಗಳಲ್ಲಿ ಭಾವನಾ ಆ ಮನೆ ಯಲ್ಲಿ ಒಂದೇ ಒಂದು ಕಪ್ ಕಾಫೀನೂ ಮಾಡಿಲ್ಲ. ಅವಳ ಓರಗಿತ್ತಿಯರು ತುಂಬ ಸಹೃದಯಿ ಹೆಣ್ಣು ಮಕ್ಕಳು. ಅದೆಲ್ಲಕ್ಕಿಂತ ಹೆಚ್ಚಾಗಿ ಕಿಟ್ಟಿಯ ಹಿರಿಯಣ್ಣನವರಾದ ಶಂಕರಣ್ಣ ಅತ್ಯಂತ ಸಜ್ಜನರು. ಅಷ್ಟು ಸಮಾಧಾನದ, ತೂಕದ, ನೆಮ್ಮದಿವಂತ ಹಿರಿಯರು ಶಂಕರಣ್ಣ. ನನಗೆ ಆ ಮನೆಗೆ ಹೋಗೋದು ಅಂದರೆ ತುಂಬ ಖುಷಿ ಕೊಡುವಂತಹ ಸಂಗತಿ.

ಈ ಎರಡು ಮದುವೆಗಳಲ್ಲಿ ನಾನು ತೃಣ ಮಾತ್ರದ ಕಷ್ಟ ಅನುಭವಿಸಲಿಲ್ಲ. ಇಬ್ಬರು ಬೀಗರೂ ಬೇರೆ ಬೇರೆ ಜಾತಿಯವರು. ಇಬ್ಬರವೂ ಬೇರೆ ಬೇರೆ ಸಂಪ್ರದಾಯಗಳು. ಸ್ವತಃ ನಾನು ಬ್ರಾಹ್ಮಣ. ನನಗೆ ಬ್ರಾಹ್ಮಣರ ಸಂಪ್ರದಾಯಗಳೇ ಗೊತ್ತಿಲ್ಲ. ಅಂಥದರಲ್ಲಿ ನನ್ನ ಹೆಂಡತಿ ಮತ್ತು ಉಮೇಶ ಮುಂದೆ ಬಿದ್ದು ಎಲ್ಲವನ್ನೂ ಅರಿತುಕೊಂಡು ಅವರು ಕೋರಿದಂತೆಯೇ ಮಾಡಿಕೊಟ್ಟರು. ಅವತ್ತಿನಿಂದ ಇವತ್ತಿನ ತನಕ ನಾನು ಮಾಡಿದ ಅತ್ಯಂತ ದೊಡ್ಡ ಕೆಲಸವೆಂದರೆ, ಉಮೇಶ ಕೇಳಿದಾಗಲೆಲ್ಲ ಚೆಕ್ ಲೀಫ್‌ಗಳಿಗೆ ಸಹಿ ಹಾಕಿದ್ದೊಂದೇ. ಈ ಹಿನ್ನೆಲೆಯಲ್ಲಿ ಕರ್ಣನ ಮದುವೆಯ ಪ್ರಸ್ತಾಪ ಬಂತು. “ಯಾವ ಕಾರಣಕ್ಕೂ ಲಕ್ಷ್ಮಿಯ ತಂದೆ- ತಾಯಿಯರ ಮನಸು ನೋಯದಂತೆ ನಡೆದುಕೊಳ್ಳಿ" ಎಂದು ಮೊಟ್ಟ ಮೊದಲ ದಿನವೇ ಹೇಳಿದ್ದೆ. ಕರ್ಣ ಮತ್ತು ಲಕ್ಷ್ಮಿ ಇಬ್ಬರೂ ವಿದೇಶಗಳಲ್ಲಿ ಓದಿದವರು. ಪ್ರಜ್ಞಾವಂತರು. ಅವರು ಜೊತೆ ಜೊತೆಯಲ್ಲಿ ಓಡಾಡುತ್ತಿದ್ದಾರೆ ಎಂಬ ಸಂಗತಿ ನನಗೆ ಗೊತ್ತಿತ್ತು. In fact, ಲಕ್ಷ್ಮಿ ಅಮೆರಿಕದಲ್ಲಿದ್ದಾಗಲೇ ಈ ಯುವರಾಜನಿಗೆ ಒಲಿದಿದ್ದಳು ಎಂಬ ಗುಮಾನಿ ನನಗೆ. ನಂತರ ಲಕ್ಷ್ಮಿ ಇಂಗ್ಲಂಡಿಗೆ ಹೋದಳಲ್ಲ? ಆಗ ಇವನೂ ಅಲ್ಲಿದ್ದನಾ ಎಂಬ ಗುಮಾನಿ ನಂದು. ಒಂದರ್ಥದಲ್ಲಿ ಇದು inter continental ಮದುವೆ.

ಸಂತೋಷದ ಸಂಗತಿ ಎಂದರೆ, ಲಕ್ಷ್ಮಿಯ ತಂದೆ ಬೂದನೂರು ಶಿವರಾಮ ಅವರು ತುಂಬ cultured person. ಅವರು ಮೊದಲು ಪ್ರೊಫೆಸರರಾಗಿದ್ದರು. ಅದಕ್ಕೆ ರಾಜೀನಾಮೆ ನೀಡಿ concord group ಸಂಸ್ಥೆಯನ್ನ ಗೆಳೆಯರ ಜೊತೆ ಸೇರಿ ಆರಂಭಿಸಿದ್ದಾರೆ. ನೂರಾರು ಎಕರೆ ಜಮೀನು ಖರೀದಿಸಿ, ಅದನ್ನು ಡೆವಲಪ್ ಮಾಡುವುದು ಅವರ ಕೆಲಸ. ಜೊತೆಯಲ್ಲಿ ಗೋಪಾಲರೆಡ್ಡಿಯವರಿದ್ದಾರೆ. ಇಬ್ಬರೂ ಪರಸ್ಪರ ಮಿತ್ರರು. ವಾಸಕ್ಕೆ ಇಲ್ಲೇ ಜಯನಗರದಲ್ಲಿ ಒಂದು ಚೆಂದನೆಯ ಮನೆ ಕಟ್ಟಿಸಿದ್ದಾರೆ: ಹೆಸರು ಮಂಡ್ಯ ಹೌಸ್. ಅವರ ಒಡೆತನದಲ್ಲಿ ‘ಕಪ್ಪ’ ಎಂಬ ಹೆಸರಿನ ಹೊಟೇಲ್‌ಗಳಿವೆ. ನೀವು ಎಸ್ಸೆಂ ಕೃಷ್ಣರ ಅಳಿಯ ಸಿದ್ಧಾರ್ಥ್ ನಡೆಸುತ್ತಿರುವ ‘coffee day’ ನೋಡಿರುತ್ತೀರಿ. ಅದೇ ತರಹದ್ದು Cuppa. ನನ್ನ ಅಳಿಯ ರಂಜಿತ್ ಕೂಡ ಅದರ ಫ್ರಾಂಛೈಸಿ ತೆಗೆದುಕೊಂಡು ಜಯನಗರದಲ್ಲಿ mmZ eಟಠಿಛ್ಝಿ ನಡೆಸುತ್ತಿದ್ದ.

cuppa hotel ನಮ್ಮ ಕಿಟ್ಟಿಯನ್ನು ಹೊರತು ಪಡಿಸಿ ಉಳಿದವರೆಲ್ಲರೂ ವ್ಯವಹಾರಸ್ಥರೇ. ಲಕ್ಷ್ಮಿಯ ತಂದೆ ಒಂದರ್ಥದಲ್ಲಿ ಕೊಂಚ ಡಿಫರೆಂಟ್. ಅವರ concord ಸಂಸ್ಥೆಯನ್ನು ಒಂದು ಬದಿಗೆ ಇಡಿ. ಮಂಡ್ಯದ ಹೊರವಲಯದಲ್ಲಿ ಅವರೊಂದು ಶಾಲೆ ಮಾಡಿದ್ದಾರೆ. ತುಂಬ ಚೆನ್ನಾಗಿದೆ. ಹಾಗೆ ದೊಡ್ಡ ಮೊತ್ತ invest ಮಾಡಿ ಶಾಲೆ ಆರಂಭಿಸೋದು ಕಷ್ಟ. ನೀವೊಮ್ಮೆ ಖುದ್ದಾಗಿ ನೋಡಬೇಕು: ಚಿಕ್ಕಮಗಳೂರಿನಲ್ಲಿ ಎಸ್ಸೆಂ ಕೃಷ್ಣ ಅವರ ಅಳಿಯ ಸಿದ್ಧಾರ್ಥ್ ಒಂದು ಶಾಲೆ ಮಾಡಿದ್ದಾರೆ. ನೋಡಿದ ತಕ್ಷಣ ಅದೊಂದು ಸೆವೆನ್ ಸ್ಟಾರ್ ಹೊಟೇಲಿನಂತಿದೆ. ಅಲ್ಲಿಯ ಫೀ ಕೂಡ ದುಬಾರಿಯೇ. ಆದರೆ ಮಕ್ಕಳ ಸಂಖ್ಯೆ ಬೇಸರ ಬರುವಷ್ಟು ಕ್ಷೀಣ. ಅದು ರೆಸಿಡೆನ್ಷಿಯಲ್ ಶಾಲೆ. ಚಿಕ್ಕ ಮಗಳೂರಿನ ಶ್ರೀಮಂತ ಪ್ಲಾಂಟರ್‌ಗಳು ಅಲ್ಲಿಗೆ ಮಕ್ಕಳನ್ನು ಕಳಿಸುತ್ತಾರೆ ಎಂಬ ನಿರೀಕ್ಷೆ ಸಿದ್ಧಾರ್ಥ್‌ಗೆ ಇತ್ತು. ರೆಸಿಡೆನ್ಷಿಯಲ್ ಸ್ಕೂಲಾ? ಅದಕ್ಕೆ ಸೇರಿಸುವುದೇ ಆದರೆ, ಇಲ್ಲೇ ಮನೆ ಪಕ್ಕದಲ್ಲೇ ಯಾಕೆ ಸೇರಿಸಬೇಕು? ಊಟಿ ಶಾಲೆಯಿದೆ. ಮೈಸೂರಿನ ಆಸುಪಾಸಿನಲ್ಲೂ ಇವೆ. ಇಲ್ಯಾಕೆ ಸೇರಿಸೋಣ ಅಂತ ಸಹಜವಾಗಿಯೇ ಅನ್ನಿಸಿರ ಬೇಕು. ಸಿದ್ಧಾರ್ಥ್ ಇವತ್ತಿಗೂ ಶಾಲೆಯ ಬಾಗಿಲು ತೆರೆದಿಟ್ಟು ಕಾಯುತ್ತಲೇ ಇದ್ದಾರೆ: ಅಲ್ಲಿಗೆ ಮಕ್ಕಳು ಬರುತ್ತಿಲ್ಲ. ಹೀಗೆಯೇ ನರಳಿ ಮಚ್ಚಿ ಹೋಗುವ ಅನೇಕ ಶಾಲೆಗಳನ್ನು ನಾನು ನೋಡಿದ್ದೇನೆ. ಆದರೆ ಲಕ್ಷ್ಮಿಯ ತಂದೆ ಶಿವರಾಮ ಅವರು ತುಂಬ methodical ಆಗಿ ಶಾಲೆ ಮಾಡಿದ್ದಾರೆ. ತಕ್ಷಣಕ್ಕೆ ರೆಸಿಡೆನ್ಷಿಯಲ್ ಶಾಲೆ ಮಾಡುತ್ತೇನೆ ಅಂತ ಅವರು ಹೊರಟಿಲ್ಲ. ರೆಸಿಡೆನ್ಷಿಯಲ್ ಶಾಲೆ ಎಂಬುದು ಒಂಥರಾ ಬೆಂಝ್ ಕಾರಿದ್ದಂತೆ. ಕಾರು ಓಡಿದರೂ ಖರ್ಚು. ಅದನ್ನು ಷೆಡ್‌ನಲ್ಲಿ ನಿಲ್ಲಿಸಿಕೊಂಡರೂ ಖರ್ಚು. ವ್ಯಾಪಾರಕ್ಕೆ ಸಂಬಂಸಿದಂತೆ ನಾನು ಇವತ್ತಿಗೂ consult ಮಾಡೋದು ಒಬ್ಬ ಸಂಕೇಶ್ವರರನ್ನು ಮಾತ್ರ. ಅವರು ನನಗೆ ತುಂಬ ಹಿಂದೆಯೇ ಹೇಳಿದ್ದರು.

“ಶಾಲೆ ಮಾಡಬಾರದು. ಅದಕ್ಕೊಂದು ಎಜುಕೇಶನ್ ಸೊಸೈಟಿ ಅಂತ ಮಾಡಬೇಕು. ಪ್ರತಿಯೊಂದಕ್ಕೂ ಸರ್ಕಾರದ ತಲೆ ಹಾಕುವಿಕೆ, ನಾಳೆ ನೀವು ಮಾರುತ್ತೇನೆ ಅಂದರೂ ಮಾರುವ ಅಧಿಕಾರ ನಿಮ್ಮ ಕೈಲಿರುವುದಿಲ್ಲ. It's a bad business!" ಅಂದಿದ್ದರು. ಅವರು ಹೇಳಿದ್ದು ನಿಜಕ್ಕೂ ಸತ್ಯ. ಆದರೆ ಅವತ್ತಿಗೂ ಇವತ್ತಿಗೂ ಪ್ರಾರ್ಥನಾ ಶಾಲೆಯನ್ನ ನಾನು ಬ್ಯುಸಿನೆಸ್ ಅಂತ ನೋಡಿಲ್ಲ. ಇನ್ನೇನು ಹದಿನಾಲ್ಕು ವರ್ಷಗಳಾಗುತ್ತ ಬಂತು: ನಾನು ಲಾಭ ಅಂತ ಒಂದು ಪೈಸೆಯನ್ನೂ ಅದರಿಂದ ಪಡೆದಿಲ್ಲ. ಅದರ ಬೊಕ್ಕಸದಿಂದ ಕಾಸು ಎತ್ತಿಕೊಂಡಿಲ್ಲ. ನನ್ನ ಮಟ್ಟಿಗೆ ‘ಪತ್ರಿಕೆ’ಯೂ ಬ್ಯುಸಿನೆಸ್ ಅಲ್ಲ. ಆದರೆ ಅದರಿಂದ ಬರೋ ಲಾಭದ ಹಣ ಬೇಡವೆಂದರೂ ಬರುತ್ತಲೇ ಇರುತ್ತದೆ. ಅಷ್ಟು ಸಾಕು ನನಗೆ. ಇಷ್ಟು ವರ್ಷಗಳಾದರೂ ಪ್ರಾರ್ಥನಾ ಶಾಲೆಗೆ ನಾನು invest ಮಾಡಿದ ಕೋಟ್ಯಂತರ ರುಪಾಯಿ ನನಗೆ ಸಂಪೂರ್ಣವಾಗಿ ವಾಪಸು ಬಂದಿಲ್ಲ. ಇದೆಲ್ಲ ನಿಜವೇ: ಆದರೆ ಶಾಲೆಯಂಥ ಒಂದು ಸಂಸ್ಥೆ ನೀಡುವ ಕೆಲವು ಬೇರೆಯವೇ ಆದ ಆನಂದ ಮತ್ತು ತೃಪ್ತಿಗಳಿರುತ್ತವೆ. ಈಗ ನೋಡಿ, ಕಳೆದ ಹದಿಮೂರು-ಹದಿನಾಲ್ಕು ವರ್ಷಗಳಲ್ಲಿ ನನಗೆ ಗೊತ್ತೇ ಆಗದಂತೆ ಶಾಲೆಯ strength ಬೆಳೆದಿದೆ. ಆರಂಭಿಸಿದಾಗ ಕೇವಲ ಮುನ್ನೂರ ಐವತ್ತು ಕಂದಮ್ಮಗಳಿದ್ದವು. ಇವತ್ತು strength ನೋಡಿದರೆ: ಎಂಟು ಸಾವಿರ ಮಕ್ಕಳು! ಈ ವರ್ಷ “ಸಾಕು, ಇನ್ನು ಜಾಸ್ತಿ ಮಕ್ಕಳನ್ನು ತಗೋಬೇಡಿ" ಅಂತ ಕಡ್ಡಿ ಮುರಿದಂತೆ ಹೇಳಿಬಿಟ್ಟಿದ್ದೇನೆ. ಅವತ್ತಿನಿಂದ ಇವತ್ತಿನ ತನಕ ಒಂದು ರುಪಾಯಿಯಷ್ಟೂ ಡೊನೇಷನ್ ಯಾರಿಂದಲೂ, ಯಾವ ರೀತಿಯಲ್ಲೂ ಪಡೆದಿಲ್ಲ. ಹಾಗಂತ ಶಾಲೆಯ ಗುಣಮಟ್ಟ, ಅದರ quality ಹೇಗಿದೆ ಅಂತೀರಾ? ನೀವು ಬಂದು ನೋಡಿ. ಮೊನ್ನೆ ಮೊನ್ನೆ ತಾನೇ CBSE ಫಲಿತಾಂಶ ಬಂತು. ಸೆಂಟ್ ಪರ್‌ಸೆಂಟ್! ಎಲ್ಲೋ ಅಪರೂಪಕ್ಕೆ ಒಂದು ಮಗು, ಒಂದೇ ಒಂದು ಸಬ್ಜೆಕ್ಟಿನಲ್ಲಿ ಫೇಲಾದ, ಅಪರೂಪದ ಉದಾಹರಣೆಗಳಿವೆ. ಅದು ಬಿಟ್ಟರೆ ಪ್ರಾರ್ಥನಾದ ಏಕೈಕ ಘೋಷವಾಕ್ಯ: Prarthana is the best. ಇನ್ನು ಫೀಸು? ಮೊನ್ನೆ ಕರ್ಣನ ರಿಸೆಪ್ಷನ್‌ನಲ್ಲಿ ನನ್ನ ಪಕ್ಕಕ್ಕೆ ಡಿ.ಕೆ.ಶಿವಕುಮಾರ್ ಬಂದು ಕುಳಿತರು. ಯಾವಾಗ ಸಿಕ್ಕರೂ ಅವರು ಕೇಳುವುದು ಒಂದೇ ಪ್ರಶ್ನೆ: “ಫೀಸ್ ಜಾಸ್ತಿ ಮಾಡಿದಿರಾ?" No way. ನಾನು ಆ ಕೆಲಸಕ್ಕೂ ಕೈ ಹಾಕಿಲ್ಲ. “Fee ಜಾಸ್ತಿಯಾಯಿತು" ಅಂತ ಒಬ್ಬೇ ಒಬ್ಬ ಪೋಷಕರೂ ನಮ್ಮ ಶಾಲೆಯಲ್ಲಿ ಗೊಣಗಿದ್ದು ಇಲ್ಲವೇ ಇಲ್ಲ. ಪುಣ್ಯದ ಒಂದು ಸಂಗತಿಯೆಂದರೆ, ನಾನು ‘ಪ್ರಾರ್ಥನಾ’ ಆರಂಭಿಸಿದಾಗ ಸೈಟುಗಳ ಬೆಲೆ ತೀರ ಈ ಪರಿ ಹೆಚ್ಚಾಗಿರಲಿಲ್ಲ. ಎರಡನೆಯ ಸಂಗತಿ ಯೆಂದರೆ, ‘ಪ್ರಾರ್ಥನಾ’ ಊರಾಚೆಗಿಲ್ಲ. ಅದು ಗರ್ಭದಲ್ಲೇ ಇದೆ. Otherwise ನಾನು ಎಂಟು ಸಾವಿರ ಮಕ್ಕಳ strength ನೋಡಲು ಸಾಧ್ಯವೇ ಇರುತ್ತಿರಲಿಲ್ಲ. ಪ್ರತೀ ಸ್ಥಳ, ಪ್ರತೀ ಜಾಗಕ್ಕೂ ಒಂದು ಮಹಿಮೆ ಇರುತ್ತದೆ ಅಂತಾರೆ. ಕೃಷ್ಣರ ಅಳಿಯ ಸಿದ್ಧಾರ್ಥ್‌ಗೆ ಅಂಥ ಜಾಗದಲ್ಲಿ ಮಾಡಬೇಕು ಎಂಬ ಸಂಗತಿ ಅರ್ಥವಾಗಿಲ್ಲ.

ಲಕ್ಷ್ಮಿಯ ತಂದೆ ಮುಂಚೆ ಪ್ರೊಫೆಸರರಾಗಿದ್ದರಿಂದ ಅವರು ಈ ತರಹದ riskಗಳಿಂದ ಬಚಾವಾಗಿದ್ದಾರೆ. ಅವರ concord ಸಂಸ್ಥೆ ಮತ್ತು ಅದರ ವ್ಯಾಪಾರದ ಬಗ್ಗೆ ನನಗೆ ಗೊತ್ತಿಲ್ಲ. ಅವರ chain of hotels ಗೊತ್ತಿದೆ. ಶಾಲೆ ಗೊತ್ತಿದೆ. ಉಳಿದಂತೆ ಅವರ ಬಗ್ಗೆ ನನಗೆ ತುಂಬ ಇಷ್ಟವಾದದ್ದು, ಅವರ ಪ್ರಾಂಜಲ ಮನಸು. “ಇಂಥದು ಕೊಡಿ" ಅಂತ ಅವರೊಂದಿಗೆ ಒಂದೇ ಒಂದು ಮಾತೂ ನಾನು ಆಡಿಲ್ಲ. “ಇಂಥ ದನ್ನು ಮಾಡಲಾಗಲ್ಲ" ಅಂತ ಅವರು ಅನ್ನುವ ಪ್ರಸಂಗವೇ ಬಂದಿಲ್ಲ. ನನಗೆ ಕರ್ಣನ ನಿಶ್ಚಿತಾರ್ಥ ನಡೆದ ರೀತಿ ಕಂಡು ಕೊಂಚ ಮುಜುಗರವಾಗಿತ್ತು. ವಿಪರೀತ ದುಬಾರಿಯ ಹೊಟೇಲಿನಲ್ಲಿ ಅವರು ನಿಶ್ಚಿತಾರ್ಥ ಮಾಡಿದರು. ಅದೇ ಶೈಲಿಯಲ್ಲಿ ‘ಮೆಹಂದಿ ರಸಮ್’ ಮಾಡಿದರು. ಅಸಲಿಗೆ ನಾನು ಮದುವೆಯಾದಾಗ ಆ ಪದವೇ ಇರಲಿಲ್ಲ. ಹೆಣ್ಣು ಮಕ್ಕಳನ್ನು ಕರೆದು ಅವರು-ಇವರು ಎಂಬ ಬೇಧವಿಲ್ಲದೆ ಎಲ್ಲರಿಗೂ ಬಳೆ ಇಡಿಸುತ್ತಿದ್ದರು. ಉಳಿದಂತೆ, ಮೆಹಂದಿ ಎಂಬ ಶಬ್ದವೇ ಕಿವಿಗೆ ಬಿದ್ದಿರಲಿಲ್ಲ. ಇದು ಮಾರವಾಡಿ ಸಂಪ್ರದಾಯ. ಈಗಲೂ ಅದನ್ನು ಮಾರವಾಡಿಗಳು ಮಾಡುತ್ತಾರೆಯೆ? ಗೊತ್ತಿಲ್ಲ. ಉಳಿದ ವಿಷಯಗಳಲ್ಲಿ ಇವರ್‍ಯಾರೂ ‘ಅಸಲೀ ಮಾರವಾಡಿ’ಗಳಂತೆ ಆಗಲಿಲ್ಲ. ಅವರು ದಿವಿನಾಗಿ ಕಾಸು ಮಾಡಿಕೊಂಡು ಗುಂಡಗೆ ಚೆನ್ನಾಗಿದ್ದಾರೆ. ನಾವು ಅಂಥದನ್ನೆಲ್ಲ ಬಿಟ್ಟು ಖರ್ಚಿಗೊಂದು ದಾರಿಯೆಂಬಂತೆ ಮೆಹಂದಿ ಸಂಪ್ರದಾಯಗಳನ್ನು ಕೈ ಹಿಡಿದು ಕರೆತಂದುಕೊಂಡಿದ್ದೇವೆ. ಮೊನ್ನೆ ಆ ಸಮಾರಂಭವನ್ನೂ ನೋಡಿ ನಾನು ಮುಜುಗರಗೊಂಡೆ. ಅಷ್ಟು rich ಆಗಿತ್ತು. ಆದರೆ ಅಂತಿಮವಾಗಿ ನಾನು ನೆತ್ತಿಗೆ ಕೈ ಹೊತ್ತು ಕುಳಿತಂತಾಗಿದ್ದು ಮದುವೆ ಜಾಗವನ್ನು ನೋಡಿದಾಗ. “ಮತ್ತೇನಿಲ್ಲ, ನನಗೆ ಸ್ನೇಹಿತರು ಜಾಸ್ತಿ. ಕೊಂಚ ವಿಶಾಲವಾದ ಜಾಗದಲ್ಲಿ ಮಾಡಿಕೊಡಿ" ಅಂತ ವಿನಂತಿಸಿದ್ದೆ. ಅವರು ‘ಪ್ಯಾಲೇಸ್’ ಅಂದದ್ದು ಕಿವಿಗೆ ಬಿತ್ತು. ಕೆಲವು ಗೆಳೆಯರು ತಮ್ಮ ಮಕ್ಕಳ ಮದುವೆಗಳನ್ನು ಅಲ್ಲಿ ಮಾಡಿದ್ದಾರೆ. ಅಲ್ಲೇನೇ ಒಂದು ‘ಗಾಯತ್ರಿ ವಿಹಾರ್’ ಅಂತ ಇದೆ. ಅಂಥವು ಎರಡೋ ಮೂರೋ ಇವೆ. ಅಲ್ಲಿ ಮಾಡಿಕೊಡುತ್ತಾರೆ ಅಂದುಕೊಂಡಿದ್ದೆ. ಆದರೆ ಶಿವರಾಮ ಅವರು ಫಿಕ್ಸ್ ಮಾಡಿದ್ದು richನಲ್ಲಿ. ಆ ತೆರನಾದ ವಿಜೃಂಭಣೆಯನ್ನು ನಾನು ಖಂಡಿತವಾಗ್ಯೂ ನೋಡಿರಲಿಲ್ಲ. ಮೊನ್ನೆ ನಮ್ಮ ಡಿಸ್ಮಿಸ್ ಗಿರಾಕಿ ಪತ್ರಕರ್ತನೊಬ್ಬ ತನ್ನ ಮಗನ ಉಪನಯನ(ಮುಂಜಿ)ವನ್ನ ಪ್ಯಾಲೇಸ್ ಗ್ರೌಂಡ್ಸ್‌ನಲ್ಲಿ ಮಾಡಿದ ಸುದ್ದಿ ಕೇಳಿದೆನಲ್ಲ? “ತಲೆ ಕೆಟ್ಟಿದೆ. ರೊಕ್ಕ ಹೆಚ್ಚಾಗಿದೆ. ಆಗಲೇ ಮನುಷ್ಯ ಇಂಥವನ್ನು ಮಾಡೋದು" ಅಂದಿದ್ದೆ. ನಮ್ಮ ಕಡೆ ಕೊಂಚ ಒರಟಾಗಿ ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುತ್ತಾರೆ. “ಬರಬಾರದ ಕಾಲದಾಗೆ, ಬರಬಾರದ ರೀತಿಯಲ್ಲಿ ರೊಕ್ಕ ಬಂದರೆ, ಅವನ್ಯಾವನೋ ಅವಿವೇಕಿ ದೇಹದ ಕತ್ತಲ ಭಾಗದಲ್ಲಿ ಬೆಳೆಯೋ ಕೂದಲಿಗೆ ಮುತ್ತು ಪೋಣಿಸಿಕೊಂಡನಂತೆ" ಅನ್ನುತ್ತಾರೆ. ಹೆಚ್ಚೆಂದರೆ ಹತ್ತು ಮನೆಯ ಬ್ರಾಹ್ಮಣರನ್ನ-ಮುತ್ತೈದೆಯರನ್ನ ಕರೆದು ಊಟ ಹಾಕಿ, ಚಿಕ್ಕ ಚಪ್ಪರದ ಕೆಳಗೆ ಜನಿವಾರ ಹಾಕಿ ‘ಮುಂಜಿವೆ’ ಮುಗಿಸುತ್ತೇವೆ ನಾವು. ಇವನು ಪ್ಯಾಲೇಸ್ ಗ್ರೌಂಡ್‌ನಲ್ಲಿ ಮಗನ ಉಪನಯನ ಮಾಡಿದ ಅಂದರೆ, ಮತ್ತದು ಮುತ್ತು ಪೋಣಿಸಕೊಳ್ಳುವ ಮಾತೇ ಆಯಿತಲ್ಲ?

ಕರ್ಣನ ಮದುವೆ Main Palaceನಲ್ಲೇ ಆಯಿತು. ನಿರೀಕ್ಷಿಸಿದಂತೆಯೇ ಮಂತ್ರಿಗಳು ಬಂದರು. ನಟ ನಟಿಯರು ಬಂದರು. ಪೊಲೀಸ್ ಅಕಾರಿಗಳು ಬಂದರು. ಡಾನ್‌ಗಳೂ ಬಂದರು. ಬಳ್ಳಾರಿ-ಹುಬ್ಬಳ್ಳಿ ಮುಂತಾದ ಕಡೆಗಳಿಂದೆಲ್ಲ ಆತ್ಮೀಯ ಗೆಳೆಯರು ಬಂದರು. ಪತ್ರಕರ್ತರು ಬಂದರು. ಆ ಮಟ್ಟಿಗೆ ನಾನು ಸಂತೋಷಪಟ್ಟಿದ್ದು ಹೌದು. ನನ್ನ ಮಿತ್ರ ಅಶೋಕ ಶೆಟ್ಟರ್ ಬಂದಿದ್ದ. ಅವನು upload ಮಾಡಿದ ಒಂದು ಫೊಟೋ ಫೇಸ್‌ಬುಕ್‌ನಲ್ಲಿ ನೋಡಿ ಮನಸಾರೆ ನಕ್ಕೆ. ಅದರಲ್ಲಿ ಕರ್ಣ ಕೊರಳಿಗೆ ಶುದ್ಧ ಮೇಳದವರಂತೆ ಒಂದು ಢೋಲಕ್ ಕಟ್ಟಿಕೊಂಡಿದ್ದಾನೆ. ಅವನ ಪತ್ನಿ ಲಕ್ಷ್ಮಿ ತನ್ನಷ್ಟೇ ಉದ್ದನೆಯ ಒಂದು ಮ್ಯಾಳ (ಶಹನಾಯಿ ತರಹದ್ದು) ಬಾಯಿಗಿಟ್ಟುಕೊಂಡಿದ್ದಾಳೆ! ಅದನ್ನು ನೋಡಿದವನೇ ಲಲಿತಳಿಗೆ ಹೇಳಿದೆ: “ಈಗಿನ ಹುಡುಗರು ಎಂಥ ತುಂಟರು ನೋಡು!". ಇಂಥ ಸಂಭ್ರಮಗಳು ಅವೆಷ್ಟೋ?

ನನಗೆ ತುಂಬ ಸಂತೋಷವೆನಿಸಿದ್ದು ಲಕ್ಷ್ಮಿಯ ತಾಯಿ ಸುಶೀಲಮ್ಮನವರನ್ನು ನೋಡಿದಾಗ. ಅವರು ಹಾಸನದವರು. ಅವರ ತಂದೆಗೆ ಒಟ್ಟು ಏಳು ಹೆಣ್ಣು ಮಕ್ಕಳಂತೆ. ಎಲ್ಲರೂ ಸಾಲಾಗಿ ನಿಂತಿದ್ದರು. “ಅಮ್ಮಾ, ನೀವು ಪರಿಚಯ ಮಾಡಿಕೊಳ್ಳೋದೇ ಬೇಡ. ಸುಮ್ಮನೆ ನೋಡಿದರೆ ಸಾಕು, ಅಕ್ಕ ತಂಗೀರು ಅಂತ ಗೊತ್ತಾಗುತ್ತೆ" ಅಂದೆ. ಸುಶೀಲಮ್ಮನವರು ತುಂಬ ಒಳ್ಳೆಯವರಿದ್ದಾರೆ. ಅವರು cultured ಕೂಡ ಹೌದು.

ಮದುವೆ ಆದದ್ದು ಗುರುವಾರ. ಭಾನುವಾರ ಬೆಳಗ್ಗೆ ಲಕ್ಷ್ಮಿಯನ್ನು ಮನೆ ತುಂಬಿಸಿಕೊಂಡೆವು. ಅದೇ ದಿನ ನಾವು ಹೆಣ್ಣಿನ ಕಡೆಯವರಿಗೆ ಊಟ ಕೊಡಬೇಕು. ಅದನ್ನು ಬೀಗರ ಊಟ-ಬೀಗರ ಔತಣ ಅನ್ನುತ್ತಾರೆ. ಪಕ್ಕಾ ‘ಖಾರದ ಊಟ’ವದು. ನನಗೆ ಅರ್ಥವಾದ ಮಟ್ಟಿಗೆ ನಾವೊಂದು ಸಾವಿರ ಕೇಜಿ ಮಾಂಸ ತಂದಿದ್ದೆವು. ಅದೂ ಭೂರೀ ಭೋಜನವೇ. ಜೊತೆಗೆ ಶುದ್ಧ ಶಾಖಾಹಾರಿ ಊಟ ಇತ್ತು. ನನಗೆ ಆ ಹೊತ್ತಿಗಾಗಲೇ ಗುಂಪು ಗುಂಪು ಜನ ‘ಸಾಕು ಸಾಕು’ ಅನ್ನಿಸಿತ್ತು. ಅದೊಂದನ್ನು ತಪ್ಪಿಸಿಕೊಂಡೆ.

ಇವತ್ತಾಗಲೇ ಲಕ್ಷ್ಮಿ-ಕರ್ಣ ವೀಸಾಗಾಗಿ ಓಡಾಡುತ್ತಿದ್ದಾರೆ. ಅವನು ಗ್ರೀಸ್-ಬುಡಾಫೆಸ್ಟ್ ಅನ್ನುತ್ತಿದ್ದುದು ಕೇಳಿಸಿತು. ಇಬ್ಬರೂ ಸ್ವಿರ್ಟ್ಝರ್‌ಲಂಡ್ ನೋಡಿದ್ದೇವೆ. ಹೀಗಾಗಿ ಗ್ರೀಸ್-ಪೋರ್ಚುಗಲ್ ಕಡೆಗೆ ಹೋಗೋಣ ಅಂತ ಅಂದದ್ದೂ ಕಿವಿಗೆ ಬಿತ್ತು. “ಆಯ್ತಪ್ಪಾ, ಹೋಗಿ ಬನ್ನಿ. ನಿನ್ನ ಮಾವ ಶ್ರೀಮಂತರು. ನಿನ್ನ ಅಪ್ಪ ಶ್ರೀಮಂತ. ಏನು ಮಾಡೋದು ಹೇಳು: ನಮ್ಮ ಅಪ್ಪ ಬಡವ!" ಅಂತ ಮನಸಿನಲ್ಲಿ ಅಂದುಕೊಂಡೆ.

ಅದು ನಿಜವೇ ಅಲ್ವಾ?

-ನಿಮ್ಮವನು,
ಆರ್.ಬಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 23 June, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books