Ravi Belagere
Welcome to my website
ನಿಮಗೂ ಯಾವಾಗಲೋ ಕಾಲು ಮುರಿದಿರಬಹುದು. ಬಚ್ಚಲಲ್ಲಿ ಕಾಲು ಜಾರಿದ್ದಿರಬಹುದು. ನಡೆಯುತ್ತ ನಡೆಯುತ್ತ ನಿಮ್ಮ ಕಾಲು ಉಳುಕಿರಬಹುದು. ಸ್ವಲ್ಪ ದಿನ ನೀವು ಉಳುಕು ಅಂದುಕೊಂಡಿರುತ್ತೀರಿ: ಡಾಕ್ಟರ್ ಬಳಿಗೆ ಹೋಗಿ ಎಕ್ಸ್‌ರೇ ತೆಗೆಸಿದಾಗ ಅದು hair line fracture. ಆಯ್ತಲ್ಲ? ಮುದ್ದಾಗಿ ಬ್ಯಾಂಡೇಜ್ ಹಾಕಿ ಆರೇ ಆರು ವಾರ ಅದನ್ನು ಹಾಕ್ಕೊಂಡಿರಿ ಅನ್ನುತ್ತಾರೆ. ಅದೊಂಥರಾ ಸಿಮೆಂಟ್‌ನ ಕಟ್ಟೆ ಕಟ್ಟಿದಂತೆಯೇ! ವಿಪರೀತ ಭಾರ. ನಡೆಯುವುದು ಯಮಹಿಂಸೆ. ನಿಮಗೆ ಯಾವತ್ತಾದರೂ ಕೈ ಕಾಲು ಮುರಿದಿದ್ದವಾ? ಯಾಕೆ? Plaster ಸುಖ ಅನುಭವಿಸಿದಿರಾ? ಎಷ್ಟು ದಿನ? ಹೋಗಲಿ ಸಮಸ್ಯೆ ಪೂರ್ಣವಾಗಿ ವಾಸಿಯಾಗಿ ಬಗೆಹರಿಯಿತಾ? ನಿಮ್ಮ ಆಗಿನ ಅನುಭವವನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ರಣಬಿಸಿಲಿನಲ್ಲಿ ಕುಳಿತು ಪೇಂಟ್ ಹಚ್ಚುತ್ತಿದ್ದಾಗ ಎರಡು ಕನಸು ಫಿಲ್ಮ್‌ನ ಹಾಡು ಕೇಳಿಸಿದ್ದು!

ನನ್ನ ಬದುಕು!

ನೆನೆಸಿಕೊಂಡರೆ ಈ ಕ್ಷಣಕ್ಕೂ ರೋಮಾಂಚಿತನಾಗುತ್ತೇನೆ. ಕೆಲ ಸಂಗತಿಗಳು, ಘಟನೆಗಳು ಊಹಿಸುವುದಕ್ಕೂ ಆಗದಂತಹ ವೇಗದಲ್ಲಿ ಘಟಿಸಿ ಹೋದವು. ನೀವೇ ಹೇಳಿ, ಯಾರಾದರೂ ಹದಿನಾಲ್ಕನೆಯ ವಯಸ್ಸಿಗೆ ‘ಪ್ರೀತಿ’ಯ ಸುಳಿಗೆ ಸಿಗುತ್ತಾರಾ? ಯಾರಾದರೂ ಗಂಡಸರು ಇಪ್ಪತ್ತೊಂದನೆಯ ವಯಸ್ಸಿಗೆ ಮದುವೆಯಾಗುತ್ತಾರಾ? ಅದಕ್ಕೆ ಮುಂಚೆ ಹದಿನೆಂಟನೇ ವಯಸ್ಸಿನಲ್ಲಿ ದೇವರನ್ನು ಹುಡುಕಿಕೊಂಡು ಹಿಮಾಲಯಕ್ಕೆ ಓಡಿ ಹೋಗುತ್ತಾರಾ? ಮೊನ್ನೆ ಕುಳಿತು ಯೋಚಿಸುತ್ತಿದ್ದೆ. ನನಗೆ ಪರಿಚಯವಿರುವ ಕೆಲವು ಹುಡುಗ-ಹುಡುಗಿಯರು ಇಪ್ಪತ್ತೊಂಬತ್ತನೇ ವಯಸ್ಸಿನಲ್ಲಿ ಇನ್ನು ಮದುವೆಯಾಗಿಲ್ಲ. “ಇನ್ನೂ life settle ಆಗಬೇಕು ಸರ್" ಅಂತಾರೆ. ಇಪ್ಪತ್ತೊಂಬತ್ತನೇ ವಯಸ್ಸಿಗೆ ನನಗೆ ಅನಾಮತ್ತು ಮೂರು ಮಕ್ಕಳಾಗಿ ಮನೆಯೆಂಬುದು ನಂದ ಗೋಕುಲವಾಗಿತ್ತು. ಹಾಗೇನೇ, ನನಗೆ ಮೊದಲ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬಂದಾಗ ನನಗಿನ್ನೂ ಇಪ್ಪತ್ಮೂರು. ಒಂಥರಾ ಬದುಕಿನಲ್ಲಿ Fast Fast.

ನಾನು ಮೊಟ್ಟ ಮೊದಲನೆಯ ನೌಕರಿಗೆ ಸೇರಿದಾಗ ನನಗೆ ಎಷ್ಟು ವಯಸ್ಸು ಗೊತ್ತೆ? Just fifteen. ಅವತ್ತು ಬಳ್ಳಾರಿಯ ಬ್ರೂಸ್‌ಪೇಟೆ ಪೊಲೀಸ್ ಸ್ಟೇಷನ್ ಪಕ್ಕದ ಒಂದು ಪುಟ್ಟ ಅಂಗಡಿಗೆ ಹೋಗಿದ್ದೆ. ಎಂಥದೋ ಹುಚ್ಚು. ನಾಗರಿಕರ ಹಕ್ಕು-ಜವಾಬ್ದಾರಿ ಇತ್ಯಾದಿಗಳ ಬಗ್ಗೆ ಒಬ್ಬರನ್ನು ಕೂಡಿಸಿ, ಕೊರೆದು ಅನಂತರ ನಮ್ಮ ಕರಪತ್ರಗಳ ಮುದ್ರಣದ ಖರ್ಚಿಗೆ ಎಂಟಾಣೆಯೋ ಒಂದು ರುಪಾಯೋ ಕೇಳುತ್ತಿದ್ದೆವು.

ಹಾಗೆಯೇ, ಆ ಪುಟ್ಟ ಅಂಗಡಿಯ ಮಾಲೀಕನನ್ನೂ ಕೇಳಿದೆ. ಏನಂದ ಗೊತ್ತೆ? “ನೀನೂ ಇದೆಲ್ಲ ಸಮಾಜ ಸೇವೆ ಅಂತ ತಲಹರಟೆ ಮಾಡಬೇಡ. ನಿಂಗೊಂದು ನೌಕರಿ ಕೊಡ್ತೀನಿ. ನಾಳೆಯಿಂದ ಬಾ.. ದಿನಕ್ಕೆ ಒಂದು ರುಪಾಯಿ ಸಂಬಳ. ಅಂಗಡೀಲಿ ಕೆಲಸ ಮಾಡು. ದುಡ್ಕಂಡು ತಿನ್ನು!" ಅಂದ. ನಾನು ಆತನನ್ನೇ ದಿಟ್ಟಿಸಿ ನೋಡಿದೆ. ಮನುಷ್ಯ ಕಪ್ಪಗಿದ್ದಾನೆ. ಕಣ್ಣು ಮೆಳ್ಳಗಣ್ಣು. ಅರ್ಧ ತೋಳಿನ ಷರಟು, ಒಂದು ಅಡ್ಡಪಂಚೆ. ಆತನ ಕಣ್ಣುಗಳಲ್ಲೊಂದು Unwanted ಕ್ರೌರ್ಯವಿತ್ತು. ವಿಪ ರೀತ ಬೊಜ್ಜು. ತುಂಬ ಮುದುಕನೇನಲ್ಲ. ಅಂಥವನಿಗೆ “ಆಯ್ತು ಕೆಲಸಕ್ಕೆ ಬರ್‍ತೀನಿ" ಅಂತ ಹೇಳಿ ಹೊರಟು ಬಂದೆ.

ನೀವು ನಂಬಬೇಕು. ಮರುದಿನ ಸರಿಯಾಗಿ ಬೆಳಗಿನ ಒಂಬತ್ತು ಗಂಟೆಗೆ ಅವನ ಅಂಗಡಿಗೆ ಹೋದೆ. ಆಯ್ತು, ಈ ಅಂಗಡಿಯಲ್ಲಿ ನೌಕರಿ. ಆದರೆ ಇದಿರುವುದೇ ಒಂದು ಕೋಳಿ ಗೂಡಿನಂತಿದೆ. ಅಂಗಡಿಯ ತುಂಬ ಸಾಮಾನು. ಅದೊಂದು ಇಲೆಕ್ಟ್ರಿಕ್ ಸಾಮಾನುಗಳ ಅಂಗಡಿ. ಈ ಧಣಿ ಒಳಕ್ಕೆ ಹೋಗಿ ತನ್ನ ಘನವಾದ ಬೊಜ್ಜು, ಕುಂಡೆ ಊರಿ ಅದರಲ್ಲಿ ಕುಳಿತರೆ-ಇನ್ನೇನು ಜಾಗ ಉಳಿದೀತು? ನಾನೆಲ್ಲಿ ಕೂಡಲಿ ಅಂತ ಯೋಚಿಸುತ್ತಿದ್ದೆ. “ಇಲ್ಲಲ್ಲ ನಿನ್ನ ಕೆಲಸ. ತೋರಿಸ್ತೀನಿ ಬಾ" ಅಂದವನೇ ಎದ್ದು ಬಂದ. ಪೊಲೀಸ್ ಸ್ಟೇಷನ್‌ನಿಂದ ಮುಂದೆ ಹತ್ತು ಹೆಜ್ಜೆ ಹಾಕಿದರೆ ಅಲ್ಲಿ ಒಂದು ದೇವಸ್ಥಾನವಿದೆ; ನಗರೇಶ್ವರ ಗುಡಿ. ಸರಿಯಾಗಿ ಅದರ ಎದುರಿಗೇ ಆ ಶೆಟ್ಟಿಯ ಇನ್ನೊಂದು ಅಂಗಡಿಯಿದೆ. ಅದರ ಹೆಸರು ಬಿ.ಎನ್.ಎಂಟರ್‌ಪ್ರೈಸಸ್! ಅದು ಕೂಡ ಇಲೆಕ್ಟ್ರಿಕ್ ಸಾಮಾನುಗಳ ಅಂಗಡಿಯೇ. ಅಲ್ಲಿ, ಶೆಟ್ಟಿಯ ಮಗ ಕುಳಿತಿದ್ದ. Smart fellow.

ಅವನ ತಮ್ಮ ಮಂಜು. ಅವನಿನ್ನೂ ಓದುತ್ತಿದ್ದ. ಆಗಾಗ ಅಂಗಡಿಗೆ ಬಂದು ಕೂಡುತ್ತಿದ್ದ. ಅಣ್ಣ-ತಮ್ಮಂದಿರಿಬ್ಬರೂ ಪಕ್ಕಾ ವ್ಯಾಪಾರಿಗಳು. ಜೊತೆಗೆ ಜಿಪುಣರು. ನನಗೆ ದಿನಕ್ಕೆ ಒಂದು ರೂಪಾಯಿ ಸಂಬಳ ಕೊಡೋಣ ಅಂತ ತಂದೆ-ಮಗ ಮಾತಾಡಿ ಕೊಂಡಿದ್ದರೇನೋ?

“ನೀನು ಇಲ್ಲೇ ನಿನ್ನ ಕೆಲಸ ಮಾಡು. ಇವಾಗಲೇ start!" ಅಂದ ಮುದುಕ ಶೆಟ್ಟಿ. ಅಲ್ಲಿ ಕೆಲಸವಾದರೂ ಏನು? “ಏಯ್ ತಮ್ಮಾ, ನಲವತ್ತು ಕ್ಯಾಂಡೆಲ್ಲಿನ ಬಲ್ಪ್ ತೆಗೆದು ಕೊಡೂ..." ಅಂದರೆ ನಾನು ಲಗುಬಗೆಯಿಂದ ಅದನ್ನು ತಂದುಕೊಡಬೇಕು. “ಆ ವೈರ್ ಕೊಡೂ...". yes sir! ದಿನವಿಡೀ ಇದೇ ಕೆಲಸ. ಕೆಲವು ಬಾರಿ, ಅಂಥ ವ್ಯಾಪಾರವೇನೂ ಇರುತ್ತಿರಲಿಲ್ಲ. ಆರಾಮಾಗಿ ಅಲ್ಲಿದ್ದ ಸ್ಟೂಲಿನ ಮೇಲೆ ಕೊಡೋಣ ಅಂದು ಕೊಂಡರೆ ಈ ಚೆಲುವ ಶೆಟ್ಟಿ ಬಿಡ ಬೇಕಲ್ಲ? ನಾನು ಸ್ಟೂಲ್ ಮೇಲೆ ಕುಳಿತರೆ, ಕೊಡೋ ಒಂದು ರುಪಾಯಿಯಲ್ಲಿ ಐದು ಪೈಸೆ ವೇಸ್ಟ್ ಆಗುತ್ತೆ! ಹಾಗಂತಲೇ ಅಂದುಕೊಂಡು, “ಏಯ್ ತಮ್ಮಾ.... ಅಲ್ಲಿ ಕಬ್ಬಿಣದ ಪೈಪ್‌ಗಳಿವೆಯಲ್ಲ? ಅವುಗಳಿಗೆ ಪೇಂಟ್ ಹಚ್ಚು" ಅನ್ನುತ್ತಿದ್ದ ಚೆಲುವಾಂತ ಶೆಟ್ಟಿ. ಆ ಪೈಪುಗಳೇನೂ ಚಿಕ್ಕವಲ್ಲ. ಅವುಗಳನ್ನು ಅಂಗಡಿಯೊಳಗೆ ಇಟ್ಟುಕೊಳ್ಳಲು ಆಗುತ್ತಿರಲಿಲ್ಲ. ಅಂಗಡಿಯ ಮುಂದೆ foot path ನಲ್ಲಿ ರಾಶಿ ಹಾಕಿರುತ್ತಿದ್ದರು.

ಹೊರಗೆ ಭಯಂಕರ ಬಿಸಿಲು. ಅದರಲ್ಲೂ ನಡು ಮಧ್ಯಾಹ್ನ. ಫುಟ್‌ಪಾತ್‌ನ ಮೇಲೆ ಭಯಂಕರ ಧೂಳು- ಅದೆಲ್ಲ ಕೇಳೋರು ಯಾರು? ಅವನ ಅಪ್ಪಣೆಯಂತೆ ಕಂಬಿಗಳಿಗೆ paint ಮಾಡಲಾರಂಭಿಸಿದೆ. ಬಿಸಿಲು- ಧೂಳು ಎಂಬುದನ್ನು ಬಿಟ್ಟರೆ ಬೇರೆ ಸಮಸ್ಯೆಯೇನೂ ಇರಲಿಲ್ಲ. ನಾನು ಕೂಡ ದಿವಿನಾಗಿದ್ದೆ. ಕುಕ್ಕರಗಾಲಿನಲ್ಲಿ ಕುಳಿತು ಒಂದು ಮಾತೂ ಗೊಣಗದೆ ಪೇಂಟ್ ಮಾಡಲಾರಂಭಿಸಿದೆ. ನನ್ನದು ಕೂಡ ಕೊಂಚ ಹೊಸ ಮಡಿವಾಳನ ಉತ್ಸಾಹ. ಸಂಜೆಯ ತನಕ paint ಹಚ್ಚೇ ಹಚ್ಚಿದೆ. ಮರುದಿನ ಎದ್ದು ನೋಡಿಕೊಂಡರೆ ಎರಡೂ ಹಸ್ತಗಳಲ್ಲಿ ಬೊಬ್ಬೆ. ಕೆಲಸ ಹಾಗಿರಲಿ: ಅಮ್ಮ ಕೊಟ್ಟ ಬೆಳಗಿನ ಕಾಫಿಯನ್ನು ಹಿಡಿಯಲಿಕ್ಕೂ ಆಗದ ಸ್ಥಿತಿಯ ಲ್ಲಿದ್ದೆ. ಅಮ್ಮನಿಗೆ “ನಾನು ಹೀಗೆ ಒಂದು ರುಪಾಯಿ ಸಂಬಳದ ನೌಕರಿ ಮಾಡ್ತಿದೀನಿ" ಅಂತ ಹೇಳಿರಲಿಲ್ಲ. ಹೇಳಿದ್ದರೆ, ಹಸ್ತದ ಮೇಲೆ ಎದ್ದ ಬೊಬ್ಬೆಗಳು ಬೆನ್ನ ಮೇಲೆ ಎದ್ದಿರುತ್ತಿದ್ದವೇನೋ? ಆ ಹೊತ್ತಿಗಾಗಲೇ ನನಗೂ - ಅಮ್ಮನಿಗೂ ಜಗಳವಾಗಿತ್ತು. ಮೊದಲೇ ಆಕೆಗೆ ಅನುಮಾನವಿತ್ತು. ಅದಕ್ಕೆ ಸರಿಯಾಗಿ, ನಾನು ಒಮ್ಮೆ ಮೈ ಮರೆತು ಸಿಗರೇಟು ಸೇದುತ್ತಾ ಅಮ್ಮನ ಕೈಗೆ ಸಿಕ್ಕು ಬಿದ್ದಿದ್ದೆ. ಅವತ್ತು ಅಮ್ಮ ಹೊಡೆಯಲಿಲ್ಲ. ಕೆಲವು ಸಲ ಸಿಟ್ಟು ತಡೆಯಲಾಗದೆ ಕೈಗೆ ಸಿಕ್ಕಿದ್ದನ್ನು ತಗೊಂಡು ಹೊಡೆದು ಬಿಡುತ್ತಿದ್ದಳು. ಅವತ್ತು ಅಮ್ಮನಿಗೆ ಏನನ್ನಿಸಿತೋ, ಗೊತ್ತಿಲ್ಲ.

“ರವೀ, ಇಲ್ಲಿ ಕುತ್ಕೋ. ನಿನಗೆ ಚೆನ್ನಾಗಿ ಗೊತ್ತಿದೆ. ನಾನು ವಿಧವೆ. ವಿಪರೀತ ಸಾಲವಿದೆ: ಮನೆಯದು. ಹಾಗಂತಲೇ ಬೆಳಿಗ್ಗೆ ಸ್ಕೂಲ್‌ನಲ್ಲಿ ಪಾಠ ಮಾಡಿ, ನಡೆ ಯುತ್ತಾ ಮನೆಗೆ ಬಂದು ಅರ್ಧ ಕಪ್ ಕಾಫಿ ಕುಡಿದು ಈವೆನಿಂಗ್ ಕಾಲೇಜಿಗೆ ಮತ್ತೆ ನಡೀತಾ ಹೋಗಿ ಪಾಠ ಮಾಡ್ತೀನಿ. ಪೈಸೆ-ಪೈಸೆಗೂ ಲೆಕ್ಕ ಹಾಕಿ ಬದುಕ್ತಿದೀನಿ. ಅಂಥದರಲ್ಲಿ ನನ್ನ ಹಣ ಕದ್ದು ಸಿಗರೇಟು ಸೇದ್ತೀಯಲ್ಲಾ, ನಿನಗೆ ಏನೂ ಅನ್ಸೋದೇ ಇಲ್ಲವಾ?" ಅಂದಳು. ನನಗೆ actually ತುಂಬ ಅವಮಾನ ವಾಗಿತ್ತು. ಆದರೆ ಆಕೆಯೆದುರು ತಲೆ ತಗ್ಗಿಸಿ ಕೂಡುವುದಕ್ಕೆ ನನಗೆ ego ಅಡ್ಡ ಬಂದಿತ್ತು. ನನ್ನ ಸೊಕ್ಕು ನೋಡಿ?

“ಅಯ್ತು, ನಿನ್ನ ದುಡ್ಡು ಮುಟ್ಟಬಾರದು. ಅಷ್ಟೇ ತಾನೇ? ನಾನೇ ದುಡ್ಕೋತೀನಿ. ಇವತ್ತಿನಿಂದ ಯಾವುದಕ್ಕೂ ನಾನು ನಿನ್ನನ್ನ ದುಡ್ಡು ಕೇಳಲ್ಲ. ಸಿಗರೇಟೊಂದೇ ಅಲ್ಲ. ಯಾವುದಕ್ಕೂ ಕೇಳಲ್ಲ" ಅಂದು ಬಿಟ್ಟೆ. ಅಮ್ಮ ತಲೆ ತಗ್ಗಿಸಿ ಕುಳಿತು ಸುಮ್ಮನೆ ಅಳುತ್ತಿದ್ದಳು. ಹಾಗೆ ಹಟಕ್ಕೆ ಬಿದ್ದು ಪ್ರತಿಜ್ಞೆ ಮಾಡಿದೆನಲ್ಲ? ಅದೇನೂ ಸುಮ್ಮನೆ ಹೋಗಲಿಲ್ಲ. ಕೆಲಸ ಯಾವುದೇ ಇರಲಿ: ಹಿಂಜರಿಕೆ ಇಲ್ಲದೆಯೇ ಮಾಡತೊಡಗಿದೆ. ಕೆಲ ಕಾಲ ಮನೆ ಮನೆಗೂ ಪೇಪರ್ ಹಂಚುತ್ತಿದ್ದೆ. ಆಗೆಲ್ಲ ಡೇರಿ ಹಾಲು ಬಾಟಲುಗಳಲ್ಲಿ ಬರುತ್ತಿತ್ತು. ಆ ಹಾಲನ್ನು ಮನೆಮನೆಗೆ ಹಂಚುತ್ತಿದ್ದೆ. ಥಿಯೇಟರಿನಲ್ಲಿ ಸಿನೆಮಾ ಟಿಕೆಟ್ ಕೊಡುತ್ತಿದ್ದೆ. ಗೇಟಿಗೆ ನಿಲ್ಲುತ್ತಿದ್ದೆ. ಮಕ್ಕಳಿಗೆ ಮನೆ ಪಾಠ ಹೇಳುತ್ತಿದ್ದೆ. ಒಂದೆರಡಲ್ಲ ಬಿಡಿ.

This made me strong. ಸಾಮಾನ್ಯವಾಗಿ ಆ ವಯಸ್ಸಿನ ಹುಡುಗರಿಗೆ ‘ದುಡಿಯುವ’ ಚಟ ಬಂದು ಬಿಡುತ್ತದೆ. ಅವರಿಗೆ ಎಂಥದೋ ಮೋಜು, ಚಟ ಇರುತ್ತವೆ ಅಂದುಕೊಳ್ಳಬೇಡಿ. ದುಡಿಯುವ ತಾಕತ್ತು ಹೆಚ್ಚಿನ ಸಲ ಇರುವುದಿಲ್ಲ. ಆದರೆ ಅದೊಂದು ಹುರುಪು, ನನ್ನ ಖರ್ಚಿಗೆ ನಾನು ದುಡಿಕೊಳ್ಳಬಲ್ಲೆ, ಅಂತ ಸಾಬೀತು ಮಾಡುವ ಉಮ್ಮೇದಿ ಬಂದು ಬಿಡುತ್ತದೆ. ಹಾಗೆ ಚಿಕ್ಕಪುಟ್ಟ ಕೆಲಸ ಮಾಡುವ ಉತ್ಸಾಹಕ್ಕೆ ತುಂಬ ದೊಡ್ಡ motivation ಇರಬೇಕಿಲ್ಲ. ಹುಡುಗರ ಮಟ್ಟಿಗೆ, ಇದು ಸತ್ಯ. ಅದನ್ನು ನೋಡಿ, ನಕ್ಕು ಸುಮ್ಮನಾಗಿಬಿಡಬಹುದು. ಆದರೆ ನಿಮಗೆ ಗೊತ್ತಿರಲಿ. ಅವರು ಅಷ್ಟು ಚಿಕ್ಕವಯಸ್ಸಿನಲ್ಲೇ ಸಿಗರೇಟು ಸೇದಲಾರಂಭಿಸುತ್ತಾರೆ. ಛಕ್ಕನೆ ಯಾರೊಂದಿಗೋ ಕುಳಿತು ಒಂದು ಬಿಯರ್ ಕುಡಿದು ಬಿಡುತ್ತಾರೆ. Even sex! ಆ ವಯಸ್ಸಿನಲ್ಲಿ ಹುಡುಗರು ಯಾರೋ ಹುಡುಗಿಯರೊಂದಿಗೆ ಆ ಕೆಲಸ ಮಾಡಿ ಬಿಡುತ್ತಾರೆ. ವೇಶ್ಯೆಯರ ಮನೆಗೆ ಹೋದರೆ ಆಶ್ಚರ್ಯ ಪಡಬೇಡಿ. ಇದೆಲ್ಲದರ ಹಿಂದಿರುವುದು ಒಂದೇ ಭಾವ. ಅವರಿಗೆ “ನಾನು ದೊಡ್ಡವನಾಗಿದ್ದೇನೆ" ಅಂತ prove ಮಾಡಬೇಕು. ಅದು assert ಮಾಡಿಕೊಳ್ಳುವ ವಯಸ್ಸು. ಕೆಲವರಿಗೆ ಅದು ಹದಿನೇಳಕ್ಕೋ, ಹದಿನೆಂಟಕ್ಕೋ ಬರುತ್ತದೆ. ನಾನು ಅದರಲ್ಲೂ fast. ನನಗೆ ಇವೆಲ್ಲವೂ ಹದಿನಾಲ್ಕಕ್ಕೇ ಒದಗಿ ಬಂದವು. ಅದು ಸರಿ ಅನ್ನಲಾ? ದೇವರು ಬಲ್ಲ. ಹೆಣ್ಣು ಮಕ್ಕಳಿಗೆ ಈ ascertaining ಚಪಲ ಬರುವುದಿಲ್ಲ ಅಂದು ಕೊಳ್ಳಬೇಡಿ. ಖಂಡಿತ ಬರುತ್ತೆ. ತುಂಬ ಭಯಾನಕ ಪರಿಣಾಮಗಳನ್ನೇ ಅದು ಮಾಡುತ್ತದೆ!

ಮತ್ತೇನಿಲ್ಲ; ತುಂಬ ಚಿಕ್ಕ ವಯಸ್ಸಿನ ಹುಡುಗೀರು ಕೇವಲ thrillಗೆ ಅಂದುಕೊಂಡು, ಕದ್ದು ಒಂದು ಸಿಗರೇಟು ಸೇದಿ ಬಿಡುತ್ತಾರೆ! ನಿಮಗೆ ಸಿಗರೇಟಿನ ಸಂಗತಿ ಗೊತ್ತಿರಲೂಬಹುದು. ಮೊಟ್ಟ ಮೊದಲ ಸಿಗರೇಟು, ದೇವರಾಣೆ ಯಾರಿಗೂ ರುಚಿಕರವೆನ್ನಿಸುವುದಿಲ್ಲ. ಮೊದಲು ಕೇವಲ ಹೊಗೆ ಎಳೆದುಕೊಂಡು ಹಾಗೇ ಬಿಟ್ಟು ಬಿಡುತ್ತಾರೆ. ‘That is not shoking'. ಅದರ ಮಜಾ ತಗೋಬೇಕು ಅಂದರೆ ಬಾಯಿಗೆ ಎಳೆದುಕೊಂಡ ಹೋಗೇನ ನೀನು ಎದೆಯೊಳಕ್ಕೆ ಎಳೆದು ಕೊಳ್ಳಬೇಕು. “Suck it" ಅನ್ನುತ್ತಾನೆ ಪಕ್ಕದ ಹುಡುಗ. ನೀವು ಹಾಗೆ ಒಮ್ಮೆ ಎಳಕೊಂಡು ನೋಡಿ? ಅದು ನಿಜಕ್ಕೂ horrible. ಕೆಮ್ಮು ಹೇಗೆ ಬರುತ್ತೆ ಗೊತ್ತಾ? ನೆತ್ತಿಗೇರಿ, ನಿಮ್ಮ ಬ್ರಹ್ಮ ರಂಧ್ರಕ್ಕೆ ತಾಕಿ ಬಿಡುತ್ತದೆ. ಹೆಚ್ಚಿನವರು ಆ ಹಿಂಸೆ ಏನೆಂದು ಗೊತ್ತಾಗುತ್ತಿದ್ದಂತೆಯೇ ಸಿಗರೇಟನ್ನ ಎಸೆದು ಬಿಡುತ್ತಾರೆ. ನನ್ನಂಥವರು ಹಟಕ್ಕೆ ಬಿದ್ದು ವಿಪರೀತ ಕೆಮ್ಮುತ್ತಲೇ ಮೇಲಿಂದ ಮೇಲೆ ಸೇದಿ, ಅದಕ್ಕೆ ದಾಸರಾಗಿ ಬಿಡುತ್ತಾರೆ. ಇದು ಹುಡುಗರಿಗಷ್ಟೇ ಆಗುವಂಥದ್ದು ಅಂದುಕೊಳ್ಳಬೇಡಿ. ಹುಡುಗಿಯರೂ ದೊಡ್ಡ ಸಂಖ್ಯೆಯಲ್ಲಿ ಸೇದುತ್ತಾರೆ.

ನೀವು ಪರೀಕ್ಷಿಸಿ ನೋಡಿ; ಯಾವುದೇ ಚಟ ಆಕರ್ಷಕವಲ್ಲ. ರುಚಿಕರವಾಗಿರುವುದಿಲ್ಲ. ಉದಾಹರಣೆಗೆ ಬಿಯರ್; ಅದು ರುಚಿಕರವಲ್ಲ. ಆರಂಭದಲ್ಲೇ RUM ಕುಡಿದರೆ ಆ ಹಿಂಸೆ ಅಷ್ಟಿಷ್ಟಲ್ಲ. ಅದರ ವಾಸನೆಯೇ ಅಸಹ್ಯಕರ. ರುಚಿಯಂತೂ, ಶುದ್ಧ ಮೋರಿ ನೀರು ಕುಡಿದಂತಿರುತ್ತದೆ. ಮೊಟ್ಟ ಮೊದಲನೆಯ Sex? ಅದನ್ನಂತೂ ವಿಪರೀತ ಒತ್ತಡ, Stress, ಭಯ ಇತ್ಯಾದಿಗಳ ನಡುವೆಯೇ ಮೊದಲ ಬಾರಿಗೆ ಮಾಡಿರುತ್ತಾರೆ. ಅವರು ಅಂದುಕೊಂಡಿದ್ದಕ್ಕಿಂತ ಸಾಕಷ್ಟು ಬೇಗನೇ ಅದು ಮುಗಿದು ಹೋಗುತ್ತದೆ. Not a good experience. ತುಂಬ ಪಾಪಪ್ರಜ್ಞೆ ಇರುತ್ತದೆ. ವೇಶ್ಯೆಯ ಬಳಿಗೆ ಹೋದರಂತೂ ಆ ಅನುಭವ ಅಸಹ್ಯಕರ. ಇನ್ನು ಗಾಂಜಾ ಸಹವಾಸ ಅಂತೀರಾ? ಅದನ್ನು ಸೇದಿಯೇ ಖಚಿತ ಪಡಿಸಿಕೊಳ್ಳಬೇಕು, ಹೇಗಿರುತ್ತದೆ ಅಂತ. ನನಗಂತೂ ಅದು ‘ತೋಬಾ ತೋಬಾ’ ಅನ್ನಿಸಿ ಬಿಟ್ಟಿತ್ತು. I never liked it. Drug. ತೆಗೆದುಕೊಳ್ಳುವುದೂ ಅಷ್ಟೇ. ನಾನು ಮಾರಿಜುವಾನಾ (ಮಾರಿವಾನಾ) ಸೇದಿದ್ದೇನೆ. ಎಕ್ಸ್‌ಟೆಸಿ ಮಾತ್ರೆ ತೆಗೆದುಕೊಂಡಿದ್ದೇನೆ. ಕೊಕೇನ್ ಉಪಯೋಗಿಸಿದ್ದೇನೆ. ಓಪಿಯಮ್‌ನ ರುಚಿ ನನಗೆ ಗೊತ್ತು. Except ಹೆರಾಯಿನ್, ಎಲ್ಲದನ್ನೂ ರುಚಿ ನೋಡಿದ್ದೇನೆ. ಇದಾವುದೂ ಮೊಟ್ಟ ಮೊದಲ ಸಲ ರುಚಿಕರವಲ್ಲ. ಹಿತ ನೀಡುವುದಿಲ್ಲ. ಸಂತೋಷಕರವಾಗಿರುವುದಿಲ್ಲ. ಅನೇಕರು ಮೊದಲ ಸಲವೇ ಅಸಹ್ಯವಾಗಿ, ಪಾಪಪ್ರಜ್ಞೆ ಕಾಡಿ-ಆ ಚಟವನ್ನು ಬಿಟ್ಟು ಬಿಡುತ್ತಾರೆ. ಉಳಿದವರು? ಏನೇ ಹಿಂಸೆಯಾದರೂ ಅದನ್ನು ಬಿಡದೆ, ಗಂಟು ಬಿದ್ದು ಅದನ್ನು ಚಟವನ್ನಾಗಿಸಿಕೊಂಡುಬಿಡುತ್ತಾರೆ. ತುಂಬ ಮೊದಲೇ ನಾನು ನಿರ್ಧರಿಸಿದ್ದೆ: ಯಾವ ಕಾರಣಕ್ಕೂ ಹೆರಾಯಿನ್ ತಂಟೆಗೆ ಹೋಗಬಾರದು ಅಂತ. ಅದು ಒಂದೇ ಒಂದು ಸಲ ಚುಚ್ಚಿಕೊಂಡು, ಒಂದೇ ಒಂದು shot ತೆಗೆದುಕೊಂಡು ಬಿಟ್ಟರೆ ಕತೆ ಮುಗಿಯಿತು. ಪ್ರಾಣಕ್ಕೇ ಅಪಾಯಕಾರಿಯಾದದ್ದು. ಮೊದಲ ಸಲ ಇವತ್ತು ನೀವು ತೆಗೆದುಕೊಂಡಿರಿ ಅನ್ನಿ. ನಾಳೆ ಮತ್ತೆ ತೆಗೆದುಕೊಳ್ಳಲೇಬೇಕು! ನಿಮ್ಮ ಗಸಗಸೆ, ಗಸಗಸೆ ಕಾಯಿಯ ಸಿಪ್ಪೆ, ಅದರಿಂದಲೇ ಮಾಡಲ್ಪಟ್ಟ ಹೆರಾಯಿನ್: ಇವೆಲ್ಲವೂ ಒಂದೇ ಜಾತಿಯವು. ಅವು deadly. ಅಪ್ಪಿತಪ್ಪಿ ಕೂಡ ಸೇವಿಸಬಾರದು. ಗಸಗಸೆ ಪಾಯಸವನ್ನು ನಾನು ಬ್ರಾಹ್ಮಣರ ಬಿಯರ್ ಅನ್ನುತ್ತೇನೆ. ಆ ಜಾತಿಯ ಯಾವ ಅಮಲನ್ನೂ ನಾನು try ಮಾಡಿಲ್ಲ. ಮಾಡುವುದೂ ಇಲ್ಲ.

ಇದೆಲ್ಲಕ್ಕಿಂತ ಅಪಾಯಕಾರಿ ಅಂದರೆ, ಹುಡುಗಿಯರಲ್ಲಿನ sex ಕುರಿತಾದ ಕುತೂಹಲ. ‘ಫರ್ ದಿ ಹೆಕ್ ಆಫ್ ಇಟ್’ ಅಂತಾರಲ್ಲ? ಹಾಗೆ ಅವರಿಗೆ ಲೈಂಗಿಕ ಕುತೂಹಲ ಬೆಳೆದು ಬಿಡುತ್ತದೆ. ‘ನಾನೂ ದೊಡ್ಡವಳಾಗಿದೀನಿ’ ಎಂದು assert ಮಾಡಿಕೊಳ್ಳಬೇಕು ಅಷ್ಟೆ! ಅವರು ಅದಕ್ಕಾಗಿ ಚಡಪಡಿಸಿ ಗಂಡಸಿನ ಸಂಗ ಮಾಡಿಬಿಡುತ್ತಾರೆ. ಮೊದಲ ಸಲದ ‘ಮಿಲನ ಮಹೋತ್ಸವ’ ಚೆನ್ನಾಗಿರುವುದಿಲ್ಲ. ಎದೆಯಲ್ಲಿ ಭಯ ಹೊರಳುತ್ತಿರುತ್ತದೆ. ಸುಲಭವಾಗಿ ಅವನು ಪ್ರವೇಶಿಸಲಾರ. ಪ್ರವೇಶಿಸಿದಾಗ ನೋವು, ಭಯ, ರಕ್ತ, ಪಾಪಪ್ರಜ್ಞೆ-ಅದೇನು ಒಂದೇ ಎರಡೇ? ಇನ್ನೊಮ್ಮೆ ಅದರ ತಂಟೆಗೆ ಹೋಗುವುದಿಲ್ಲ ಅಂದುಕೊಳ್ಳುತ್ತಾಳೆ ಹುಡುಗಿ. ಕೆಲವರು ಹೋಗುವುದಿಲ್ಲ. ಕೆಲವರು ದಾಸರಾಗಿ ಬಿಡುತ್ತಾರೆ. ತೀರ ಹದಿಮೂರು-ಹದಿನಾಲ್ಕನೇ ವಯಸ್ಸಿಗೆ ಗರ್ಭ ಹೊತ್ತು ಬರುವ ಹುಡುಗಿಯರನ್ನು ನಾನು ಬೇಕಾದಷ್ಟು ಸಲ ನೋಡಿದ್ದೇನೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಅವರನ್ನು Unwed mothers ಅನ್ನುತ್ತಾರೆ!

ಆಯ್ತಲ್ಲ: ಆ ವಯಸ್ಸಿನಲ್ಲಿ ತಗುಲಿಕೊಳ್ಳುವ ಚಟಗಳ ಪೈಕಿ ಕೆಲವು ನನಗೂ ತಗುಲಿಕೊಂಡವು. ಸಿಗರೇಟು, ಕುಡಿತ, ಅಲೆದಾಟ ಮತ್ತು ನೌಕರಿ ಮಾಡಬೇಕೆಂಬ ಹಟ. ಮುಖ್ಯವಾಗಿ ನಾನು ಹೇಳಬೇಕೆಂದುಕೊಂಡದ್ದೇ ಆ ನೌಕರಿಯ ಹುಚ್ಚನ್ನ. ನಾನು ಕೆಲಸಕ್ಕೆ ಹೋಗುತ್ತಿದ್ದ ಅಂಗಡಿಯ ಹೆಸರು ಬಿ.ಎನ್.ಎಂಟರ್‌ಪ್ರೈಸಸ್! ಅದರ ಅಂಗಳದಲ್ಲಿ ಕುಳಿತು ಪೈಪುಗಳಿಗೆ ಬಣ್ಣ ಹಚ್ಚುವ ಕಾಯಕ ಮಾಡುತ್ತಿದ್ದಾಗಲೇ ನನ್ನ ಕಿವಿಗೆ ಬಿದ್ದ ಹಾಡು ‘ಎರಡು ಕನಸು’ ಚಿತ್ರದ್ದು. ಅವಳು ಅದನ್ನು ಸಾಕಷ್ಟು ಜೋರಾಗಿಯೇ ಹಾಡುತ್ತಿದ್ದಳು: ಎಂದೆಂದೂ ನಿನ್ನನ್ನು ಮರೆತೂ...ನಾನಿರಲಾರೇ! ತನ್ನನ್ನು ತಾನು ಅವಳು ಮಂಜುಳಾ ಅಂದುಕೊಂಡಿದ್ದಳೋ ಏನೋ? ಬಲೇ ನುಲಿಯುತ್ತಿದ್ದಳು. ಅವಳು ಎದುರಿಗಿನ ದೇವಸ್ಥಾನದ ಅರ್ಚಕರ ಮಗಳೋ? ಅಲ್ಲಿ ಕೆಲಸಕ್ಕಿದ್ದ ಕುಟುಂಬಕ್ಕೆ ಸೇರಿದವಳೋ? ಗೊತ್ತಿಲ್ಲ. ನನ್ನನ್ನು ಕಂಡರೆ ಸಾಕು ಶುರು: ಎಂದೆಂದೂ...!

ಸದ್ಯ, ಆ ವಯಸ್ಸಿನಲ್ಲಿ ನನಗೆ ‘ಆ ಬಗ್ಗೆ’ ಕುತೂಹಲವಿರಲಿಲ್ಲ. ಹಸಿರು ನೆರಿಗೆ ಲಂಗದ ಹುಡುಗಿ ಪ್ರತಿಷ್ಠಾಪಿತವಾಗಿ ಬಿಟ್ಟಿದ್ದಳು. ಕಣ್ಣೆದುರಿಗೆ ಮಂಜುಳಾ ಅಲ್ಲ, ಹೇಮಾಮಾಲಿನಿ ಹಾಯ್ದರೂ ನಾನು ಗಮನಿಸುವವನಲ್ಲ. ಆ ಪರಿ ಶಪಥ ನನ್ನದು. ಬಳ್ಳಾರಿಯ ಬಿ.ಎನ್.ಎಂಟರ್ ಪ್ರೈಸಸ್‌ನಲ್ಲಿ ನಾನು ತುಂಬ ದಿನವೇನೂ ದಗದ ಮಾಡಲಿಲ್ಲ. ಆದರೆ ಕೆಲಸದ ಚಟ ನನ್ನನ್ನು ಅವತ್ತಿನಿಂದ ಇವತ್ತಿಗೂ ಬಿಟ್ಟಿಲ್ಲ.
I am this. I cannot change.

-ನಿಮ್ಮವನು, ಆರ್.ಬಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 16 June, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books