Ravi Belagere
Welcome to my website
ನಿಮಗೂ ಯಾವಾಗಲೋ ಕಾಲು ಮುರಿದಿರಬಹುದು. ಬಚ್ಚಲಲ್ಲಿ ಕಾಲು ಜಾರಿದ್ದಿರಬಹುದು. ನಡೆಯುತ್ತ ನಡೆಯುತ್ತ ನಿಮ್ಮ ಕಾಲು ಉಳುಕಿರಬಹುದು. ಸ್ವಲ್ಪ ದಿನ ನೀವು ಉಳುಕು ಅಂದುಕೊಂಡಿರುತ್ತೀರಿ: ಡಾಕ್ಟರ್ ಬಳಿಗೆ ಹೋಗಿ ಎಕ್ಸ್‌ರೇ ತೆಗೆಸಿದಾಗ ಅದು hair line fracture. ಆಯ್ತಲ್ಲ? ಮುದ್ದಾಗಿ ಬ್ಯಾಂಡೇಜ್ ಹಾಕಿ ಆರೇ ಆರು ವಾರ ಅದನ್ನು ಹಾಕ್ಕೊಂಡಿರಿ ಅನ್ನುತ್ತಾರೆ. ಅದೊಂಥರಾ ಸಿಮೆಂಟ್‌ನ ಕಟ್ಟೆ ಕಟ್ಟಿದಂತೆಯೇ! ವಿಪರೀತ ಭಾರ. ನಡೆಯುವುದು ಯಮಹಿಂಸೆ. ನಿಮಗೆ ಯಾವತ್ತಾದರೂ ಕೈ ಕಾಲು ಮುರಿದಿದ್ದವಾ? ಯಾಕೆ? Plaster ಸುಖ ಅನುಭವಿಸಿದಿರಾ? ಎಷ್ಟು ದಿನ? ಹೋಗಲಿ ಸಮಸ್ಯೆ ಪೂರ್ಣವಾಗಿ ವಾಸಿಯಾಗಿ ಬಗೆಹರಿಯಿತಾ? ನಿಮ್ಮ ಆಗಿನ ಅನುಭವವನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಎಲ್ಲರ ಬದುಕೂ ರೈಲಿನಂತಿರುವುದಿಲ್ಲ ಗೊತ್ತಾ?

ಬದುಕೆಂದರೆ ರೈಲಿದ್ದಂತೆ. ಅದರಲ್ಲಿ ನೂರಾರು ಜನ ಹತ್ತುತ್ತಾರೆ, ಇಳಿಯುತ್ತಾರೆ. ಒಂದು ನಿಲ್ದಾಣದಲ್ಲಿ ಹತ್ತಿದವರು ಇನ್ನೊಂದು ನಿಲ್ದಾಣದಲ್ಲಿ ಇಳಿದು ಹೋಗುತ್ತಾರೆ ಅನ್ನುವ ಮಾತನ್ನು ಯಾವುದಾದರೂ ಒಂದು ಸಂದರ್ಭದಲ್ಲಿ ನಾವು ಕೇಳಿಯೇ ಇರುತ್ತೇವೆ.

ಬದುಕನ್ನು ರೈಲಿಗೆ ಹೋಲಿಸಿರುವುದು ಸರಿಯೇ. ಆದರೆ ನನ್ನ ಪ್ರಕಾರ ಎಲ್ಲರ ಬದುಕೂ ರೈಲು ಇದ್ದಂತೆ ಇರಲು ಸಾಧ್ಯವಿಲ್ಲ. ನಿಜವಾದ ರೈಲು ಒಂದು ಗಮ್ಯದ ಕಡೆ ಸಾಗುತ್ತಲೇ ಇರುತ್ತದೆ. ಆದರೆ ತುಂಬ ಜನರ ಬದುಕನ್ನು ನೋಡಿ. ಅದಕ್ಕೆ ಗೊತ್ತು ಗುರಿಯೇ ಇರುವುದಿಲ್ಲ. ಹೀಗಾಗಿ ಬದುಕನ್ನು ರೈಲಿಗೆ ಹೋಲಿಸುವಾಗ ನಮಗೆ ನಾವೇ ಕೆಲವು ಅಂಶಗಳನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಮೊದಲನೆಯದಾಗಿ ನಮ್ಮ ಬದುಕಿಗೆ ಒಂದು ಉದ್ದೇಶವಿದೆಯಾ ಅನ್ನುವುದನ್ನು ನೋಡಿಕೊಳ್ಳಬೇಕು. ಯೆಸ್, ನಮ್ಮ ಬದುಕಿಗೆ ಒಂದು ಉದ್ದೇಶವಿದೆ ಅಂತ ಕನ್‌ಫರ್ಮ್ ಆದರೆ ರೈಲನ್ನು ಅಂತಹ ವ್ಯಕ್ತಿಯ ಬದುಕಿಗೆ ಹೋಲಿಸಬಹುದು. ಉದ್ದೇಶ, ಗುರಿ ಇಟ್ಟುಕೊಂಡ ಮನುಷ್ಯ ತನ್ನ ದಾರಿಯಲ್ಲಿ ನಡೆಯುವಾಗ ಯಾರೇ ಬರಲಿ, ಹೋಗಲಿ, ತನ್ನ ಗಮ್ಯದ ಕಡೆ ಸಾಗುತ್ತಿರುತ್ತಾನೆ. ಹೀಗೆ ಸಾಗುವ ರೈಲು ತನ್ನ ಓಡುವಿಕೆಗೆ ಅಗತ್ಯವಾದ ಕಲ್ಲಿದ್ದಲನ್ನೋ, ಕರೆಂಟನ್ನೋ ಹೊಂದಿರಬೇಕು, ಜೀವನೋತ್ಸಾಹವನ್ನು ಹೊಂದಿರಬೇಕು. ನಿಮ್ಮಲ್ಲಿ ಅಂತಹ ಜೀವನೋತ್ಸಾಹ ಇದ್ದರೆ ನೀವು ನಿಜವಾದ ರೈಲಿನಂತಾಗುತ್ತೀರಿ.

ರೈಲು ಕೇವಲ ಬೋಗಿಗಳಿಂದ ಕೂಡಿದ ಒಂದು ವಾಹನವಲ್ಲ. ಅದು ತನ್ನ ಶಕ್ತ್ಯಾನುಸಾರವಾಗಿ ಹತ್ತೋ, ಇಪ್ಪತ್ತೋ, ಐವತ್ತೋ ಬೋಗಿಗಳನ್ನು ಎಳೆದುಕೊಂಡು ಹೋಗುವ ಚೈತನ್ಯ. ಪ್ರತಿಯೊಬ್ಬರ ಬದುಕನ್ನೂ ರೈಲಿಗೆ ಹೋಲಿಸುವುದಾದರೆ ಆ ರೈಲು ಎಷ್ಟು ಬೋಗಿಗಳನ್ನು ಎಳೆದುಕೊಂಡು ಹೋಗಲು ಶಕ್ತ ಎಂಬುದನ್ನು ನೋಡಬೇಕು. ಅದು ಒಂದು ಬೋಗಿಯೇ ಆಗಿರಲಿ, ಐವತ್ತೇ ಆಗಿರಲಿ, ಒಟ್ಟಿನಲ್ಲಿ ಬೋಗಿಗಳನ್ನು ಎಳೆದುಕೊಂಡು ಹೋಗುವ ಶಕ್ತಿ ಅದಕ್ಕಿರಬೇಕು. ಅನೇಕರನ್ನು ನೋಡಿ. ಅವರ ಬದುಕು ರೈಲಿನಂತಿರುವುದಿಲ್ಲ. ಇನ್ನೊಬ್ಬರು ರೈಲಾದರೆ ಅದಕ್ಕೆ ಅಂಟಿಕೊಂಡು ಕಲ್ಲಿದ್ದಲು, ಇಂಧನದ ವೆಚ್ಚವೇ ಇಲ್ಲದಂತೆ ತಮ್ಮ ಗುರಿ ತಲುಪಲು ಯತ್ನಿಸುತ್ತಾರೆ. ಇವರು ಸ್ವಕೇಂದ್ರಿತ ವ್ಯಕ್ತಿಗಳು. ನನ್ನ ಪ್ರಕಾರ ಇಂತಹವರ ಬದುಕನ್ನು ರೈಲಿಗೆ ಹೋಲಿಸುವುದು ವ್ಯರ್ಥ. ಯಾರು ನಿಜಕ್ಕೂ ತಮ್ಮ ಜತೆ ಇನ್ನಷ್ಟು ಮಂದಿಯನ್ನು ಎಳೆದುಕೊಂಡು ಒಂದು ಗುರಿ ತಲುಪಿಸುವ ಶಕ್ತಿಯನ್ನು ಹೊಂದಿರುತ್ತಾರೋ ಅವರ ಬದುಕನ್ನು ಮಾತ್ರ ರೈಲಿಗೆ ಹೋಲಿಸಬಹುದು. ಕನಿಷ್ಟ ಪಕ್ಷ ಒಬ್ಬರ ಬದುಕನ್ನಾದರೂ ನಿರ್ದಿಷ್ಟ ಗುರಿಗೆ ತಲುಪಿಸಲಾಗದ ವ್ಯಕ್ತಿಯನ್ನು ರೈಲಿಗೆ ಹೇಗೆ ಹೋಲಿಸುತ್ತೀರಿ?

ನೀವು ಮೇಲೆ ಹೇಳಿದ ಅರ್ಹತೆಗಳನ್ನು ಹೊಂದಿರುವ ವ್ಯಕ್ತಿಯಾಗಿದ್ದರೆ, ನಿಮ್ಮ ಬದುಕು ನಿಜಕ್ಕೂ ಒಂದು ರೈಲಿನಂತೆ ಎಂಬುದು ನಿಮಗೇ ಮನವರಿಕೆ ಯಾದರೆ ಕೆಲವೊಂದು ಸೂತ್ರಗಳನ್ನು ಪಾಲಿಸುವುದು ಮುಖ್ಯ. ಮೊದಲನೆಯದಾಗಿ ನಿಮ್ಮ ಬದುಕು ಎಂಬ ರೈಲಿಗೆ ನೀವೇ ಚಾಲಕರಾಗಿ. ಆನಂತರ ನಿಮ್ಮ ರೈಲಿಗೆ ಎಷ್ಟು ಬೋಗಿಗಳನ್ನು ಜೋಡಿಸಿಕೊಳ್ಳಬಹುದು ಎಂಬುದನ್ನು ಗಮನಿಸಿ. ನೀವು ಓಡಿಸುವ ರೈಲಿನ ಎಂಜಿನ್ ಕೆಪ್ಯಾಸಿಟಿ ಏನು ಅನ್ನುವುದು ನಿಮಗೆ ಗೊತ್ತಾಗದಿದ್ದರೆ ಅದು ಓಡುವ ಬದಲು ನಿಂತಲ್ಲೇ ನಿಂತು ಬಿಡಬಹುದು. ಈ ಅಂಶವನ್ನು ಪಕ್ಕಾ ಮಾಡಿಕೊಂಡ ಮೇಲೆ ಮತ್ತೊಂದು ಅಂಶವನ್ನು ನೆನಪಿನಲ್ಲಿಟ್ಟುಕೊಳ್ಳಿ. ಕೆಲವೊಂದು ಸಲ ಬೋಗಿಗಳ ಸಂಖ್ಯೆ ಹೆಚ್ಚು ಕಡಿಮೆಯಾಗಬಹುದು.
ನಿನ್ನೆ ಮೊನ್ನೆಯ ತನಕ ಭಾಯಿ ಭಾಯಿ ಅನ್ನುವಂತೆ ಇದ್ದ ಗೆಳೆಯರ ಪೈಕಿ ಕೆಲವರು ಇದ್ದಕ್ಕಿದ್ದಂತೆ ತಮ್ಮದೇ ಟ್ರೇನು ಓಡಿಸಲು ಅಣಿಯಾಗುತ್ತಾರೆ. ಅದಕ್ಕಾಗಿ ನಿಮ್ಮ ಟ್ರೇನಿಗೆ ತಗಲಿಕೊಂಡಿರುವ ಬೋಗಿಯನ್ನು ಅವರು ಬಿಡಿಸಿಕೊಳ್ಳಬಹುದು.

ಇನ್ನು ಕೆಲವು ಸಲ ಸಹೋದರ, ಸಹೋದರಿಯರ ಪೈಕಿ ತುಂಬ ಜನ ವಿವಿಧ ಕಾರಣಗಳಿಂದಾಗಿ ತಾವೇ ಬೇರೆ ಬೋಗಿಗಳಿಗೆ ಅಟ್ಯಾಚ್ ಆಗಬಹುದು. ಅಥವಾ ಬೇರೆ ರೈಲುಗಳಿಗೆ ಹೋಗಿ ತಗಲಿಕೊಳ್ಳಬಹುದು. ಹೀಗಾಗಿ ಕಾಲ ಕಾಲಕ್ಕೆ ನಿಮ್ಮ ಬದುಕು ಅನ್ನುವ ರೈಲಿನ ಬೋಗಿಗಳ ಸಂಖ್ಯೆ ಏರುಪೇರಾಗುತ್ತಲೇ ಇರುತ್ತದೆ. ಹೀಗಾಗಿ ಡ್ರೈವಿಂಗ್ ಸೀಟಿನಲ್ಲಿ ಕುಳಿತಿರುವ ನಿಮಗೆ ರೈಲನ್ನು ಓಡಿಸಲು ಎಷ್ಟು ಇಂಧನದ ಅಗತ್ಯವಿದೆ ಎಂಬುದು ತನ್ನಿಂತಾನೇ ಮನವರಿಕೆಯಾಗುತ್ತದೆ. ಹಲವು ಸಲ ನಿಮ್ಮ ರೈಲು ತಮಗೆ ಬೇಕಾದ ವೇಗದಲ್ಲಿ ಓಡುತ್ತಿಲ್ಲ ಎಂಬ ಭಾವನೆ ಬಂದರೆ ಹಲವು ಜನ ಬೇರೆ ರೈಲಿಗೆ ಸೇರಿಕೊಳ್ಳುತ್ತಾರೆ. ಇಂತಹ ಏರುಪೇರಿಗೆ ಅಂಜದೆ, ಅಳುಕದೆ ನಿಮಗೆ ಲಭ್ಯವಿರುವ ಇಂಧನದಲ್ಲಿ ಎಷ್ಟು ಬೋಗಿಗಳನ್ನು ಎಳೆದುಕೊಂಡು ಹೋಗಬಹುದು ಅನ್ನುವುದನ್ನು ಗಮನಿಸಿ. ಆತ್ಮವಿಶ್ವಾಸ ಮಿತಿಮೀರಿದಾಗ ಹತ್ತು ಬೋಗಿಗಳನ್ನು ಎಳೆದುಕೊಂಡು ಹೋಗುವವರು, ಇನ್ನೂ ಹತ್ತು ಬೋಗಿ ಸೇರಿಸಿ, ಪರವಾಗಿಲ್ಲ ಎಂದು ಜೋಡಿಸಿಕೊಳ್ಳುತ್ತಾರೆ. ಸಹಜವಾಗಿಯೇ ಅದು ರೈಲಿನ ಎಂಜಿನ್ ಕೆಪ್ಯಾಸಿಟಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹಾಗಾದಾಗ ಅದು ಓಡುವ ವೇಗದ ಮೇಲೆ ಪರಿಣಾಮ ಬೀರುವುದಷ್ಟೇ ಅಲ್ಲ, ಹಳಿ ತಪ್ಪಿ ಉರುಳುವ ಸ್ಥಿತಿಯನ್ನೂ ತಂದುಬಿಡುತ್ತದೆ.

ನಿಮ್ಮ ಬದುಕು ಎಂಬ ರೈಲಿನ ಚಾಲಕ ನೀವೇ ಆಗಿದ್ದರೆ ಮೊದಲು ರೈಲಿಗೆ ಲಭ್ಯವಿರುವ ಇಂಧನದ ಪ್ರಮಾಣವನ್ನು ಗಮನಿಸಿ. ಅದು ಹಣಕಾಸು ಇರಬಹುದು, ಇನ್ನೊಬ್ಬರ ಸಹಕಾರ ಇರಬಹುದು. ನಿಮ್ಮಲ್ಲಿ ದುಡಿಯುವ ಉತ್ಸಾಹ ಹೇಗಿದೆ ಅನ್ನುವುದಿರ ಬಹುದು. ಇಂಧನದ ಬಗ್ಗೆ ನಿಮಗೆ ಸರಿಯಾದ ಅಂದಾಜು ಇದ್ದರೆ ನಿಮ್ಮ ರೈಲು ಸುಗಮವಾಗಿ ಓಡುತ್ತದೆ. ನಿಮ್ಮ ಬದುಕು ಎಂಬ ರೈಲಿಗೆ ಬೋಗಿಗಳನ್ನು ತಗಲಿಸಿಕೊಳ್ಳುವಾಗ ಎಚ್ಚರದಿಂದಿರಿ. ರೈಲಿಗೆ ಜೋಡಣೆಯಾಗುವ ಎಲ್ಲ ಬೋಗಿಗಳೂ ರೈಲಿನ ಎಂಜಿನ್ ಪವರ್ರನ್ನೇ ನೆಚ್ಚಿಕೊಂಡಿರುತ್ತವೆ. ಅದಕ್ಕೆ ಪವರ್ರು ಜಾಸ್ತಿ ಇದ್ದರೆ ಕಳಚಿಕೊಳ್ಳುವ ಗೊಡವೆಗೆ ಹೋಗುವುದಿಲ್ಲ. ಒಂದು ಸಲ ಪವರ್ರು ಆದರೆ ಮುಗಿಯಿತು! ಹೀಗೆ ಕಳಚಿಕೊಂಡು ಹೋಗಬಲ್ಲ ಬೋಗಿಗಳು ಯಾವುದು ಅನ್ನುವುದರ ಕುರಿತು ನೀವು ಪರಿಶೀಲಿಸುತ್ತಲೇ ಇರಬೇಕು.

ನೀವು ನನ್ನ ಬಳಿ ಬರುವ ಅನೇಕರು ನನ್ನವರೆಂದು ಬದುಕಿನುದ್ದಕ್ಕೂ ದುಡಿದೆ. ಆದರೆ ಕೊನೆಗೆ ಅವರೆಲ್ಲ ದೂರವಾದರು ಎಂದು ಯಾರನ್ನೋ ದೂರುತ್ತಿರು ತ್ತಾರೆ. ನನಗೆ ಗೊತ್ತಿರುವ ಟೀಚರ್ ಒಬ್ಬರು ಮೂವತ್ತಾರು ವರ್ಷಗಳ ಕಾಲ ಟೀಚರ್ ಆಗಿ ಹಳ್ಳಿ ಹಳ್ಳಿಗಳಲ್ಲಿ ದುಡಿದರು. ರಿಟೈರ್ಡ್ ಆದ ನಂತರ ಪಿಎಫ್, ಗ್ರಾಚ್ಯುಯಿಟಿ ಸೇರಿದಂತೆ ವಿವಿಧ ಬಾಬ್ತುಗಳ ಮೂಲಕ ಆರು-ಏಳು ಲಕ್ಷ ರುಪಾಯಿಗಳಷ್ಟು ಹಣ ಅವರ ಕೈಗೆ ಬಂತು. ಅದನ್ನು ಅವರು ಪೋಸ್ಟ್ ಆಫೀಸಿನಲ್ಲೋ, ರಾಷ್ಟ್ರೀಕೃತ ಬ್ಯಾಂಕುಗಳಲ್ಲೋ ಠೇವಣಿಯಾಗಿಟ್ಟಿದ್ದಿದ್ದರೆ ಚೆನ್ನಾಗಿರುತ್ತಿತ್ತು. ಆದರೆ ಗಂಡ, ಮಕ್ಕಳಿಲ್ಲದ ತಮಗೆ ಅಣ್ಣನ ಮಗ, ಅವನ ಹೆಂಡತಿ ಆಸರೆಯಾಗುತ್ತಾರೆ ಎಂದು ನಂಬಿ ಎಲ್ಲ ಹಣವನ್ನೂ ಅವರ ಕೈಗೆ ಕೊಟ್ಟರು. ಹಣ ಪಡೆದು ಕೊಂಡ ಅಣ್ಣನ ಮಗ ಮತ್ತವನ ಹೆಂಡತಿ ಹೊಸ ಮನೆ ಖರೀದಿಸಿ ಸೆಟ್ಲಾದರು. ನಾಲ್ಕು ದಿನ ಇವರನ್ನು ಪುಲು ಪುಲು ಅಂತ ಮಾತಾಡಿಸಿ, ಆರೈಕೆ ಮಾಡಿ ಕೊನೆಗೊಂದು ದಿನ, ನೀನಿಲ್ಲಿದ್ದರೆ ತಲೆನೋವು ಹೋಗತ್ಲಾಗೆ ಅಂತ ಓಡಿಸಿಬಿಟ್ಟರು. ಆ ಶಿಕ್ಷಕಿ ಕೊಂಚ ಎಚ್ಚರಿಕೆಯಿಂದಿದ್ದಿದ್ದರೆ ತಮ್ಮ ಬದುಕನ್ನೇ ಒಂದು ರೈಲನ್ನಾಗಿ ಪರಿವರ್ತಿಸಿಕೊಂಡು ಲಭ್ಯವಿರುವ ಇಂಧನದಲ್ಲಿ ಒಂದೋ, ಎರಡೋ ಬೋಗಿಗಳನ್ನು ಜೋಡಿಸಿ ಕೊಂಡು ಹಳಿಯ ಮೇಲೆ ಓಡಬಹುದಿತ್ತು. ಆದರೆ ಹಳಿ ರೆಡಿ ಮಾಡಿಕೊಳ್ಳುವ ಬದಲು ಇನ್ನೊಬ್ಬರ ರೈಲಿಗೆ ಬೋಗಿಯಾಗಿ ಈಗ ಹೊರಗೆ ಬಿದ್ದಿದ್ದಾರೆ. ನಿಮ್ಮ ಬದುಕು ನಿಜಕ್ಕೂ ಸ್ವಯಂ ಆಗಿ ರೈಲು ಆಗುವಂತೆ ನೋಡಿಕೊಳ್ಳಿ. ನಿಮ್ಮ ಇಂಜಿನ್ ಪವರಿನಲ್ಲೇ ನಾಲ್ಕು ಬೋಗಿಗಳನ್ನು ಎಳೆದುಕೊಂಡು ಹೋಗುವ ಶಕ್ತಿ ನಿಮಗಿದ್ದಾಗ ಇನ್ನೊಬ್ಬರ ರೈಲಿಗೆ ತಗಲಿಕೊಳ್ಳಲು ಹೋಗಬೇಡಿ. ತುಂಬ ಸಲ ನಿಮಗೆ ಸಿಗುವ ರೈಲುಗಳೆಲ್ಲ ಹಳಿಗಳ ಮೇಲೇ ಓಡುತ್ತಿರುವುದಿಲ್ಲ. ವಾಸ್ತವದಲ್ಲಿ ಅವಕ್ಕೆ ಯಾವ ಹಳಿಗಳ ಬೆಂಬಲವೂ ಇರುವುದಿಲ್ಲ. ಅವು ನೆಲದ ಮೇಲೆ, ನೀರಿನ ಮೇಲೆ ಓಡಲು ಹವಣಿಸುತ್ತಿರುತ್ತವೆ. ಅಂತಹ ಟ್ರೇನುಗಳು ಬಲು ಅಪಾಯಕಾರಿ.

ಅಂತಹ ರೈಲು ಹತ್ತಿದರೆ ನಿಮ್ಮ ಬದುಕು ಮೇಲೆ ಉಲ್ಲೇಖಿಸಿದ ಟೀಚರ್ ಕತೆಯಾಗುತ್ತದೆ. ಅಂದ ಹಾಗೆ ಒಂದು ಅಂಶವನ್ನು ನೆನಪಿನಲ್ಲಿಟ್ಟುಕೊಳ್ಳಿ. ಪ್ರತಿಯೊಬ್ಬ ಮನುಷ್ಯನೂ ಜೀವನದಲ್ಲಿ ಇದ್ದಕ್ಕಿದ್ದಂತೆ ರೈಲು ಆಗಲು ಸಾಧ್ಯವಿಲ್ಲ. ಮೊದಲು ಬೋಗಿಯ ರೂಪದಲ್ಲಿ ಇನ್ನೊಂದು ರೈಲಿಗೆ ತಗಲಿಕೊಂಡೇ ಬೆಳೆದು ಕ್ರಮೇಣ ಸ್ವಂತ ಶಕ್ತಿಯ ಮೇಲೆ ಒಂದಷ್ಟು ಬೋಗಿಗಳನ್ನು ಎಳೆದುಕೊಂಡು ಹೋಗಬಹುದು ಅನ್ನಿಸಿದಾಗ ರೈಲಾಗಬೇಕು. ಅದು ಹಳಿಯ ಮೇಲೆ ಓಡುವ ರೈಲು ಮಾತ್ರ ಆಗಬೇಕು. ಉಳಿದಂತೆ ನಿಮ್ಮ ರೈಲಿಗೆ ಜೋಡಣೆಯಾಗುವ ಬೋಗಿಗಳ ಮೇಲೆ ಒಂದು ಗಮನ ಇದ್ದೇ ಇರಲಿ. ಅದು ನಿಮ್ಮ ಕೆಪ್ಯಾಸಿಟಿಯ ಆಧಾರದ ಮೇಲೆ ನಿರ್ಧಾರವಾಗಲಿ. ಮತ್ತು ನಿಮ್ಮ ರೈಲಿಗೆ ತಗಲಿಕೊಳ್ಳಲು ಅದು ನಿಜಕ್ಕೂ ಯೋಗ್ಯವೇ ಎಂಬುದನ್ನು ಖಾತರಿ ಮಾಡಿಕೊಳ್ಳಿ. ಇಲ್ಲದಿದ್ದರೆ ಬದುಕು ಎಂಬ ರೈಲು ಹಳಿತಪ್ಪುತ್ತದೆ. ಇಲ್ಲವೇ ಹಳಿಯೇ ಇಲ್ಲದೆ ಓಡಲು ಯತ್ನಿಸಿ ಒಂದು ದಿನ ಸಾರಾಸಗಟಾಗಿ ಉರುಳಿ ಬೀಳುತ್ತದೆ. ಹಾಗಾಗದಿರಲಿ.

-ರವೀ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 09 June, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books