Ravi Belagere
Welcome to my website
ನಿಮಗೂ ಯಾವಾಗಲೋ ಕಾಲು ಮುರಿದಿರಬಹುದು. ಬಚ್ಚಲಲ್ಲಿ ಕಾಲು ಜಾರಿದ್ದಿರಬಹುದು. ನಡೆಯುತ್ತ ನಡೆಯುತ್ತ ನಿಮ್ಮ ಕಾಲು ಉಳುಕಿರಬಹುದು. ಸ್ವಲ್ಪ ದಿನ ನೀವು ಉಳುಕು ಅಂದುಕೊಂಡಿರುತ್ತೀರಿ: ಡಾಕ್ಟರ್ ಬಳಿಗೆ ಹೋಗಿ ಎಕ್ಸ್‌ರೇ ತೆಗೆಸಿದಾಗ ಅದು hair line fracture. ಆಯ್ತಲ್ಲ? ಮುದ್ದಾಗಿ ಬ್ಯಾಂಡೇಜ್ ಹಾಕಿ ಆರೇ ಆರು ವಾರ ಅದನ್ನು ಹಾಕ್ಕೊಂಡಿರಿ ಅನ್ನುತ್ತಾರೆ. ಅದೊಂಥರಾ ಸಿಮೆಂಟ್‌ನ ಕಟ್ಟೆ ಕಟ್ಟಿದಂತೆಯೇ! ವಿಪರೀತ ಭಾರ. ನಡೆಯುವುದು ಯಮಹಿಂಸೆ. ನಿಮಗೆ ಯಾವತ್ತಾದರೂ ಕೈ ಕಾಲು ಮುರಿದಿದ್ದವಾ? ಯಾಕೆ? Plaster ಸುಖ ಅನುಭವಿಸಿದಿರಾ? ಎಷ್ಟು ದಿನ? ಹೋಗಲಿ ಸಮಸ್ಯೆ ಪೂರ್ಣವಾಗಿ ವಾಸಿಯಾಗಿ ಬಗೆಹರಿಯಿತಾ? ನಿಮ್ಮ ಆಗಿನ ಅನುಭವವನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಅವರನ್ನು ಆ ಮುಪ್ಪಿನಲ್ಲಿ ಜನಕ್ಕೆ ತೋರಿಸಲೇ ಬಾರದೆಂಬ ನಿಲುವು!

ಏನಾಗಿದೆ?


ದೇವರಾಣೆ ಗೊತ್ತಿಲ್ಲ. ಆತ ಮಾತೇ ಆಡುವುದಿಲ್ಲ. What's wrong with him? ನಾನು ಮಹಾನ್ ನಟ ದಿಲೀಪ್ ಕುಮಾರ್ ಬಗ್ಗೆ ಮಾತಾಡುತ್ತಿದ್ದೇನೆ. ನೋಡಿದ್ದೇನಲ್ಲ, ಒಂದೆರಡು ಅವಾರ್ಡ್ ಸಮಾರಂಭಕ್ಕೆ ಆತ ಬಂದಿದ್ದರು. ಪಕ್ಕದಲ್ಲೇ ಪತ್ನಿ ಸಾಯಿರಾ ಬಾನು. ದಿಲೀಪ್‌ಗೆ ಇದು ಅಪ್ರಜ್ಞಾ ಸ್ಥಿತಿಯಾ? ಏನೂ ಕೇಳಿಸುತ್ತಿಲ್ಲವಾ? ಕಾಣಿಸುತ್ತಿಲ್ಲವಾ? ಅಸಲು ಕಣ್ಣೆದುರಿಗೆ ಏನು ನಡೆಯುತ್ತಿದೆ ಎಂಬುದು ದಿಲೀಪ್‌ಗೆ ಗೊತ್ತೇ ಆಗುತ್ತಿಲ್ಲವಾ? I get worried.

ಆತ ನನ್ನ ಪಾಲಿಗೆ ಪ್ರಾಣ, ಪ್ರಾಣ ದಂತಹ ನಟ. ಚಿಕ್ಕಂದಿನಿಂದಲೂ ನಾನು ಕೊಂಚ pathoಗಳ ಆರಾಧಕ. ಮುಕೇಶ್ ಹಾಡಬೇಕು. ಅದಕ್ಕೆ ದಿಲೀಪ್ ನಟಿಸ ಬೇಕು. Of course, ಮುಕೇಶ್‌ಗಾಗಿಯೇ ಕೆಲವರು ಹುಟ್ಟಿದಂತಿದ್ದರು. ರಾಜ್ ಕಪೂರ್ ಬಿಡಿ: ಆತನಿಗೆ ಮುಕೇಶ್ ದನಿಯೇ ದನಿ. ಮುಕೇಶ್ ತೀರಿಕೊಂಡಾಗ ರಾಜ್ ಕಪೂರ್ ಅಂದದ್ದು ಒಂದೇ ಮಾತು: : I have lost my voice! ಈ untouchable (ಅಸ್ಪೃಶ್ಯ) ಹೀರೋ ಮನೋಜ್ ಕುಮಾರ್ ಇನ್ನೇನು? ಆತನಿಗೂ ಮುಕೇಶ್ ಬೇಕು. ಹೀಗೆ ಒಬ್ಬಿಬ್ಬರಲ್ಲ. ಅನೇಕ ಹೀರೋಗಳಿಗೆ ದುಃಖವಾದಾಗೆಲ್ಲ ಅವರು ಹಾಡಬೇಕು, ಮುಕೇಶ್ ಆ ಹಾಡಿಗೆ ದನಿಯಾಗಬೇಕು. ನನ್ನ ಓರಗೆಯ, ಹಿಂದಿ ಬಲ್ಲ ಮಿತ್ರರೆಲ್ಲರಿಗೂ ಮುಕೇಶ್ ಅಚ್ಚುಮೆಚ್ಚು.

ದಿಲೀಪ್ ಬಗ್ಗೆ ಮಾತನಾಡುವುದು ಇಡೀ ರಾತ್ರಿಗಾಗುವಷ್ಟಿದೆ. ಆಗಿನ್ನೂ ಪಾಕಿಸ್ತಾನ್ ಹುಟ್ಟಿರಲಿಲ್ಲ. ಅಜಮಾಸು ೧೯೨೨ರ ಮಾತು. ಅಲ್ಲಿನ ಪೆಶಾವರ್ ಇವತ್ತಿನಂತೆಯೇ ಇತ್ತು. ಅನೇಕ ಪಠಾಣರ ಕೇಂದ್ರ ಬಿಂದುವದು. ಅದರ ತೊಟ್ಟಿಲಲ್ಲೇ ಹುಟ್ಟಿದ್ದು ಯೂಸುಫ್ ಖಾನ್. ಆತನನ್ನು ಮುಂಬಯಿಗೆ ಯಾರು ಕರೆ ತಂದರೋ ಗೊತ್ತಿಲ್ಲ. ಕರೆತಂದವರು ಯೂಸುಫ್ ಖಾನ್‌ನ ಉಡುಪು ಕಳಚಿ ದಿಲೀಪ್ ಕುಮಾರ್ ಎಂಬ ಹೆಸರಿಟ್ಟರು. ದಿಲೀಪ್ ಆ ಕಾಲದಲ್ಲೇ ನಟಿಸಲಾರಂಭಿಸಿದ್ದರು. ನಾನಿನ್ನೂ ಹುಟ್ಟಿರಲಿಲ್ಲ, ದಿಲೀಪ್ ನಟಿಸಲಾರಂಭಿಸಿದ್ದರು. ನಾನು ನೋಡಿದ ಪೈಕಿ ಆಗ ದಿಲೀಪ್ “ಮಧುಮತಿ"ಯಲ್ಲಿ ಹೀರೋ. ಸಿನೇಮಕ್ಕೆ ಅಮ್ಮ ಕರೆದುಕೊಂಡು ಹೋಗಿದ್ದಳು. ಅಮ್ಮ ಕನ್ನಡ ಶಿಕ್ಷಕಿಯಾಗಿ ಅಂದಾಜು ನಲವತ್ತೇಳು ವರ್ಷ ಕೆಲಸ ಮಾಡಿದ್ದಳು. ಆಕೆಯ ಮನೆ ಭಾಷೆ ತೆಲುಗು. ಹಿಂದಿ ಸಾಹಿತ್ಯವನ್ನ ಆಕೆ ಅರೆದು ಕುಡಿದಂತಿದ್ದಳು. ಆಕೆಯ ಬಾಯಲ್ಲಿಯೇ ನಾನು ಕೇಳಿದ್ದು, ಕಫನ್-ಗಬನ್-ಪ್ರೇಮ್‌ಚಂದ್-ನಿರಾಲಾ-ಟ್ಯಾಗೋರ್ ಇತ್ಯಾದಿ ಹೆಸರುಗಳನ್ನ. ಈಗಿನ ಅಮಿತಾಬ್ ಬಚ್ಚನ್ ಅವರ ತಂದೆ ಹರಿವಂಶ ರಾಯ್ ಬಚ್ಚನ್‌ರವರ ಕವಿತೆಗಳು ಆಕೆಗೆ ತುಂಬ ಇಷ್ಟ. ಅಮ್ಮ ಹಿಂದಿ ಕಾಲೇಜಿನಲ್ಲಿ ಲೆಕ್ಚರರ್. ಆಕೆ ಮುಂದೆ ಪ್ರಿನ್ಸಿಪಾಲಳೂ ಆಗಿದ್ದಳು. ಅಮ್ಮ ನನಗೂ ಲೆಕ್ಚರರ್ ಆಗಿ ಪಾಠ ಮಾಡುತ್ತಿದ್ದಳು. ಅದೊಮ್ಮೆ ಆಕೆ “ಸ್ಮಶಾನ್ ಮೇ" ಎಂಬ ನಾಟಕವನ್ನ ಪಾಠ ಮಾಡುತ್ತಿದ್ದಳು. ಅದರ ಕಥೆ ತುಂಬ ಚೆನ್ನಾಗಿತ್ತು. ಅದು emotional appeal ಹೊಂದಿದ್ದ ಕಥಾವಸ್ತು. ಅಮ್ಮನೂ ಕೊಂಚ ಎಮೋಷನಲ್ ಜೀವಿಯೇ. ಆ ಪಾಠ ಮಾಡುತ್ತ ಆಕೆ ತುಂಬ ಸಲ ಗದ್ಗದವಾಗುತ್ತಿದ್ದಳು. ಯಾಕೋ ಅಮ್ಮ ಇವತ್ತು ತುಂಬ ಎಮೋಷನಲ್ ಆಗುತ್ತಿದ್ದಾಳೆ ಅಂದುಕೊಂಡೆ. ಅದರಲ್ಲಿ ಒಂದು ಮಗುವಿನ ಹೆಸರು ಶಾಮ್. ಆ ಹುಡುಗನ ಸಾವಿನ ಸುತ್ತ, ಶಾಮ್‌ನ ಸಮಾಯ ಸುತ್ತಲೇ ಕತೆ ಹೆಣೆಯಲಾಗಿತ್ತು. ಕಡೆಕಡೆಗೆ ಅಮ್ಮ ಪಾಠ ಮಾಡಲಿಕ್ಕೆ ಸಾಧ್ಯವೇ ಇಲ್ಲ ಎಂಬಂತಾದಳು. ಕ್ಲಾಸ್ ಮುಗಿದು ಅಮ್ಮ ನೊಂದಿಗೆ ಮಾತನಾಡುತ್ತಾ, ಮನೆಯ ಕಡೆಗೆ ನಡೆಯುತ್ತಾ ಆಕೆಯನ್ನು ಕೇಳಿದೆ: “ಯಾಕೆ ಇವತ್ತು ತುಂಬ ಭಾವುಕಳಾಗಿ ಬಿಟ್ಟೆ?"

ಒಂದು ಕ್ಷಣ ದಾರಿಯಲ್ಲಿ ನಿಂತ ಅಮ್ಮ “ನಿನಗೆ ಶ್ಯಾಮ್ ಯಾರು ಅಂತ ಗೊತ್ತೆ? ಶ್ಯಾಮ್ ನನ್ನ ಖಾಸಾ ತಮ್ಮ. ಕಲ್ಕತ್ತಾದಿಂದ ಹಿಂದಿರುಗಿ ಊರ ಕಡೆಗೆ ಹೊರಟದ್ದು ನನ್ನ ಅಣ್ಣ ಬೆಳಗೆರೆ ಸೀತಾರಾಮ ಶಾಸ್ತ್ರಿ ಗಳು. ನಾಟಕದಲ್ಲಿನ ವೃದ್ಧ ದಂಪತಿಗಳು ನನ್ನ ತಂದೆ- ತಾಯಿ. “ನೋಡು ರವೀ, ಅದು ಕತೆಯಲ್ಲ. ನನ್ನ ಚಿಕ್ಕ ತಮ್ಮ ಶ್ಯಾಮ್ ತೀರಿಕೊಂಡಿದ್ದ. ಕಲ್ಕತ್ತಾದಿಂದ ಬಂದದ್ದು, ಅವನದೇ ಗೋರಿಯ ಮೇಲೆ ಕುಳಿತು ಆಳಿಗೆ ಕತೆ ಹೇಳಿದ್ದು ನನ್ನ ಅಣ್ಣ. ಅದರಲ್ಲಿ ವೃದ್ಧ ದಂಪತಿಗಳ ಜೊತೆಗೆ ಲಾಟೀನು ಹಿಡಿದುಕೊಂಡು ಬರುತ್ತಿದ್ದ ಹುಡುಗಿ- ನಾನೇ. ಅದ್ಯಾವುದೂ ಕಾಲ್ಪನಿಕವಲ್ಲ!" ಅಂದಳು ಅಮ್ಮ. ನಾನು ಹೆಜ್ಜೆ ಕಿತ್ತಿಡಲಾಗದಂತಾಗಿ ನಿಂತುಬಿಟ್ಟೆ. ಕನ್ನಡದಲ್ಲಿ ನನ್ನ ಮಾವ ಸೀತಾರಾಮ ಶಾಸ್ತ್ರಿಗಳು “ನಮ್ಮೂರಿನ ಪಶ್ಚಿಮಕ್ಕೆ" ಎಂಬ ನಾಟಕ ಬರೆದಿದ್ದರು. ಆಗಿನ್ನೂ ಅದನ್ನು ನಾನು ಓದಿರಲಿಲ್ಲ. ಹಿಂದಿಗೆ ಯಾರು ಅದನ್ನು ಅನುವಾದ ಮಾಡಿದ್ದರು ಎಂಬುದು ನನಗೆ ನೆನಪಿಲ್ಲ. ಅದಕ್ಕವರು ‘ಸ್ಮಶಾನ್ ಮೇ’ ಅಂತ ಹೆಸರಿಟ್ಟಿದ್ದರು. ನಮ್ಮದೇ ಮನೆಯ ಪರಮಘೋರ ಘಟನೆಯೊಂದನ್ನು ಎದುರಿಗಿಟ್ಟುಕೊಂಡು ಬರೆದದ್ದನ್ನ, ಅವರ ಪಾತ್ರಧಾರಿಯೂ ಆಗಿದ್ದ ನನ್ನ ಅಮ್ಮ ಗದ್ಗದಿತಳಾಗದೆ ಪಾಠ ಮಾಡು ಅಂದರೆ ಹೇಗೆ ಮಾಡಿಯಾಳು?

ನನ್ನ ಹಿರಿಯ ಸೋದರಮಾವ ಬೆಳಗೆರೆ ಸೀತಾ ರಾಮ ಶಾಸ್ತ್ರಿಗಳು. ಅವರು ‘ಕ್ಷೀರ ಸಾಗರ’ ಎಂಬ pen name ಇಟ್ಟುಕೊಂಡು ಬರೆಯುತ್ತಿದ್ದರು. ನಾನಿನ್ನೂ ಆಗ ಹುಡುಗ. ಆ ಕಾಲದಲ್ಲಿ ಅನೇಕ ಕನ್ನಡ ಲೇಖಕರಿಗೆ ಹೀಗೆ pen name ಇಟ್ಟುಕೊಳ್ಳುವ ಅಭ್ಯಾಸವಿತ್ತು. ಎ.ಎನ್. ಕೃಷ್ಣರಾಯರು ‘ಅನಕೃ’ ಆದರು. ರಾಯಸಂ ಭೀಮಸೇನ ರಾಯರು ‘ಬೀchi ’ ಆದಂತೆಯೇ ತಳುಕಿನ ರಾಮ ಸ್ವಾಮಿಗಳ ಮಗ ಸುಬ್ಬರಾಯರು ತ.ರಾ.ಸು ಆದರು. ನೀವು ಬೇಕಾದರೆ “ಕುಳಕುಂದ ಶಿವರಾಯರು ಚೆನ್ನಾಗಿ ಬರೆಯುತ್ತಿದ್ದರಲ್ವಾ?" ಎಂದು ಯಾರನ್ನಾದರೂ ಕೇಳಿ? ಬಹಳ ಜನಕ್ಕೆ ಉತ್ತರಿಸುವುದು ಕಷ್ಟವಾಗುತ್ತದೆ. ಏಕೆಂದರೆ ಆ ಮಹನೀಯರು ಕಡೆತನಕ ಬರೆದದ್ದು ‘ನಿರಂಜನ’ ಎಂಬ ಹೆಸರಿನಲ್ಲಿ. ಒಬ್ಬರು ‘ಜಚನಿ’ ಅಂತ ಬರೆಯುತ್ತಿದ್ದರು. ಮನುಷ್ಯರು ಬಿಡಿ, ಕೆಲ ನಾಟಕ ಕಂಪೆನಿಗಳೂ ಕಾವ್ಯನಾಮ ಹೊಂದಿದ್ದವು. ಹೆಗ್ಗೋಡಿನ ‘ನೀನಾಸಂ’ ನಿಮಗೆ ಗೊತ್ತು. ಅದಕ್ಕೊಂದು long form ಇದೆಯೆಂಬುದು ಗೊತ್ತಿದೆ ಅಂತಾದರೆ, ನೀವು ಜಾಣರು. ನೀನಾಸಂ ಅಂದರೆ ‘ನೀಲಕಂಠೇಶ್ವರ ನಾಟಕ ಸಂಘ!’ ಬಿಡಿ, ಅದರಲ್ಲೆಲ್ಲ ನಾವು ಸೂತ್ರಧಾರರಲ್ಲ. ಪಾತ್ರಧಾರರೂ ಅಲ್ಲ. ಮುಂದೆ, ಕಾವ್ಯನಾಮದ ಸಂಪ್ರದಾಯ ಹೋಗಿ ತಂತಮ್ಮ ಹೆಸರುಗಳಲ್ಲಿ ಬರೆದು ಪ್ರಕಟಿಸುವಂತಾದರು.

ನಂಗೆ ತಿಳಿದ ಮಟ್ಟಿಗೆ ಈ ಕಾವ್ಯ ನಾಮದ ಗೆಟಪ್‌ಗಳು ನವೋದಯ ಕಾಲದಲ್ಲಷ್ಟೆ ಇತ್ತಾ? ಏಕೆಂದರೆ ನವ್ಯ ಕಾಲದಲ್ಲಿ ಅದನ್ನು ಬಳಸಿದ್ದು ಕಡಿಮೆ. ಬಂಡಾಯದ ಕಾಲದಲ್ಲಿ ಅದು, ಬರೆಯೋ ಮಂದಿಗೆ ನೆನಪೂ ಆಗಲಿಲ್ಲ. ನಮ್ಮ ಚಂದ್ರಶೇಖರ ಪಾಟೀಲರೊಬ್ಬರೇ ನೋಡಿ: ಅವರು ತಮ್ಮ ಹಳೆಯ ಸಿಂಗಾರ-ಬಂಗಾರ ಕಳಚಿಟ್ಟಿಲ್ಲ. ಅವರು ‘ಚಂಪಾ’ ಎಂಬ ಕಾವ್ಯನಾಮವನ್ನು ಇನ್ನೂ ಇರಿಸಿಕೊಂಡೇ ಇದ್ದಾರೆ.

“ರವೀ, ಹಂಗ ನಾನೊಬ್ನೇ ಅಲ್ಲ. ಇನ್ನೂ ಕೆಲವರಿದ್ದಾರೆ pen name ಇಟಗೊಂಡವರು" ಅಂದರು.
“ಮತ್ಯಾರಿದ್ದಾರೆ" ಅಂದೆ.
“ದಕಡಾಸಿ ಇದ್ದಾನಲ್ಲ?" ಅಂದರು.
“ಅದ್ಯಾರು ಸರ್? ಬಿಕನಾಸಿ, ದರಬೇಸಿ ಅಂತ ಅನ್ನೋದನ್ನ ಕೇಳಿದ್ದೇನೆ. ಅದೂ pen name ಅಲ್ಲ... ದಕಡಾಸಿ ಅಂದ್ರೆ ಯಾರು?" ಅಂದೆ.

“ನಮ್ಮ ದೋಸ್ತ್ ಅಂವ. ದಲಿತ ಕವಿ ಡಾ| ಸಿದ್ದಲಿಂಗಯ್ಯ!" ಅಂದರು. ಕೂತಿದ್ದವನು ನಗೆ ತಡೆಯಲಾಗದೆ ಎದ್ದು ರೂಮಿನ ತುಂಬ ಓಡಾಡಿ ಬಿಟ್ಟೆ. Only champa can do it. ಅವರು ನನಗೆ ಪರಿಚಯವಾದ ಮೂವತ್ತು ವರ್ಷಗಳಿಂದಲೂ ಹೀಗೇ. ಹಂಪ ನಾಗರಾಜಯ್ಯನವರನ್ನು ‘ಜಹಾಂಪನಾ’ ಅಂದವರೇ ಇವರು. ಎಲ್ಲ ಬಿಟ್ಟು ಅಡಿಗರನ್ನು ‘ಚಂಪಾ’ ನಳಕವಿ ಅಂದಿದ್ದರು. ನಳ ಅಂದರೆ ಯಾರೂ... ಅಡಿಗೆ ಮಾಡುವವನು. ಹೀಗಾಗಿ ಅಡಿಗರನ್ನ ನಳಕವಿ ಅಂದೆ. ಅದು ಸರಿ ಅದ! ಎಂಬ ವಿವರಣೆ ಬೇರೆ. ಅಡಿಗರ ಕುರಿತೇ ಬರೆದ ‘ನಳಕವಿಯ ಮಸ್ತಕಾಭಿಷೇಕ’ ಎಂಬ ಬೀದಿ ನಾಟಕದಲ್ಲಿ ಅವರು ಎರಡು ಪಾತ್ರ ಸೃಷ್ಟಿಸಿದ್ದಾರೆ: ಮಾಕು ಮತ್ತು ದೇಕು. ಅದೇನು ಗೊತ್ತೆ? ಮಾಧವ ಕುಲಕರ್ಣಿ ಮತ್ತು ದೇಶ ಕುಲಕರ್ಣಿ! ಹಾಗೆ ಚಂಪಾ ಕೆಲವರನ್ನೇನೂ ಕಾಡಿಲ್ಲ. ಇಡೀ ಸಾಹಿತ್ಯ ಲೋಕ ಜಾಲಿಸಿದ್ದಾರೆ. ಜಾಲಾಡಿದ್ದಾರೆ. ಪಾಪ, ಹಿರಿಯರಾದ ಶಂಕರ ಮೊಕಾಶಿ ಪುಣೇಕರರನ್ನ ‘ಮಳ್ಳ ಮಕಾಶಿ’ ಅಂದಿದ್ದರು. ಅವರು ಪರಿಪರಿಯಾಗಿ ಇವತ್ತಿಗೂ ಕಾಡುತ್ತಿರುವುದು ಗಿರೀಶ್ ಕಾರ್ನಾಡ ರನ್ನ. ಒಂದಲ್ಲ ಒಂದು ಕೈಗೆತ್ತಿಕೊಂಡು ಕುಟುಕುತ್ತಲೇ ಇರುತ್ತಾರೆ. ಅವರು ಲಂಕೇಶರನ್ನು ‘ಪಾಳೆಗಾರ’ ಅಂದರು. ಒಮ್ಮೆ “ಲಂಕೇಶ್ ನೀನು ಆಗಷ್ಟೆ ಹಜಾಮತಿ ಮಾಡಿಸಿಕೊಂಡು ಬಂದು ಕುಂತ ವಾಲ್ಮೀಕಿಯ ಹಾಗೆ ಕಂಡೆ" ಎಂದು ಬರೆದರು. ಕೆಲವು ಸಲ ‘ಚಂಪಾ’ ಅತಿರೇಕಕ್ಕೆ ಹೋಗಿ ನಂಜುಕಾರುತ್ತಾರೆ. Otherwise ಅವರ ಹಾಸ್ಯ, ಚೇಷ್ಟೆ ಚೆನ್ನಾಗೇ ಇರುತ್ತವೆ.

ನನ್ನ ಹಿರಿಯ ಸೋದರಮಾವ ‘ಕ್ಷೀರ ಸಾಗರ’ ಎಂಬ ಹೆಸರಿನಲ್ಲಿ ಬರೆದರು ಅಂತ ಹೇಳಿದೆನಲ್ಲ? ಅವರ ಬರಹ ಅಂತ ನಾನು ನೋಡಿದ್ದು, ಓದಿದ್ದು- ಅವರ ನಾಟಕಗಳನ್ನ. ಯಾಕೋ ಕಾಣೆ, ಕೆಲವು ಬಿಟ್ಟರೆ ನನಗೆ ನಾಟಕಗಳನ್ನು ಓದಿ enjoy ಮಾಡೋದು ಕಷ್ಟ. ಕಂಬಾರರ ನಾಟಕಗಳನ್ನ ಪೂರ್ತಿಯಾಗಿ ಓದಿದ್ದೇನೆ. ಕಾರ್ನಾಡರ ‘ತುಘಲಕ್’, ‘ಹಿಟ್ಟಿನ ಹುಂಜ’ ಓದಿದ್ದೇನೆ. Not all. ನನ್ನ ಮಾವನದಾದರೂ ಅಷ್ಟೆ. ಅವರು ಅತಿಪ್ರಖ್ಯಾತ ಮ್ಯಾಥಮಟೇಷಿಯನ್ ಅಂತ ಗೊತ್ತಿತ್ತು. ಗಣಿತದಲ್ಲಿ ದೊಡ್ಡ ವಿದ್ವಾಂಸರು. ಅವರನ್ನ “ಕ್ಯಾಲ್ಕುಲಸ್ ಶಾಸ್ತ್ರಿ’ ಅನ್ನುತ್ತಿದ್ದರು. ಆದರೆ ಅವರಲ್ಲೊಬ್ಬ ತೀರ ಅಪರೂಪದ ಕವಿ ಇದ್ದಾನೆ ಅಂತ ಗೊತ್ತೇ ಇರಲಿಲ್ಲ. ನಾನು ಕೈಗೆ ಸಿಕ್ಕದ್ದನ್ನೆಲ್ಲ ಓದತೊಡಗಿದಾಗ ಅವರು ಗತಿಸಿ ಹೋಗಿದ್ದರು. ಅವರೊಬ್ಬ ಅಮೇಜಿಂಗ್ ಆದ ಕವಿ. ಅವರ ‘ಶ್ರೀರಂಗ ಪಟ್ಟಣದ ಕೊನೆ ದಿವಸ’ ಹಾಗೂ ‘ರಾಧೆ’ ಅದೆಷ್ಟು ಸಲ ಓದಿದ್ದೇನೋ: ಲೆಕ್ಕವಿಲ್ಲ. ಅಂಥ ಕವಿ ಆತ.

ಅಮ್ಮ ಕೂಡ ತುಂಬ involve ಆಗಿ ‘ಸ್ಮಶಾನ್ ಮೇ’ ಪಾಠ ಮಾಡಿದ್ದಳು. ಆಕೆ ಕೆಲವು ಸಲ ಇದ್ದಕ್ಕಿದ್ದಂತೆ ನನ್ನನ್ನು ‘ಶಾಮಣ್ಣಾ’ ಅನ್ನುತ್ತಿದ್ದಳು. I enjoyed it. ಆರಂಭದಲ್ಲಿ ಆಕೆ ಹಿಂದಿಯೆಡೆಗೆ ನನ್ನನ್ನು ಆಕರ್ಷಿತನನ್ನಾಗಿ ಮಾಡಿದ್ದು ಶರಶ್ಚಂದ್ರ, ಬಂಕಿಮಚಂದ್ರ ಮುಂತಾದವರ ಬರಹಗಳನ್ನು ಪರಿಚಯಿಸುವ ಮೂಲಕ. ಇವತ್ತಿಗೂ ನನಗೆ ಬಂಗಾಲಿ ಲೇಖಕರು ಇಷ್ಟವಾಗುತ್ತಾರೆ. ‘ಶೇಷಪ್ರಶ್ನೆ’ ಕಾದಂಬರಿಯ ‘ಕಮಲಾ’ ಎಂಬ ಪಾತ್ರ ಎಳೆ ಎಳೆಯಾಗಿ ನನಗೆ ನೆನಪಿದೆ. ಅಮ್ಮನ ಸಂಗತಿ ಬಿಡಿ, ಆಕೆ ಹಳಬಳು. ಆದರೆ ನನ್ನ ಹೆಂಡತಿ ಲಲಿತಾ? ಅವಳು ಎಕ್ಸಲೆಂಟ್ ಟೀಚರ್. ತುಂಬ ಶ್ರದ್ಧೆಯಿಂದ ಲಲಿತಾ, ಹಿಂದಿ ಕಲಿತಿದ್ದಳು. ಅಪರಿಮಿತ ಶ್ರದ್ಧೆ ಇಟ್ಟುಕೊಂಡು ಅದೇ ಹಿಂದಿ ಕಾಲೇಜಿನಲ್ಲಿ ಅವಳು ಉಪನ್ಯಾಸಕಿಯಾಗಿ ಪಾಠ ಮಾಡುತ್ತಿದ್ದಳು. ಆಗ ನಾನು ಕಾಲೇಜಿನ ವಿದ್ಯಾರ್ಥಿ! ಅವಳಿಂದ ನಾನು ಕಲಿತ ‘ಹಿಂದಿ’ ಇದೆಯಲ್ಲ? ಅದರ ಕತೆಯೇ ಬೇರೆ. ನಾನು ಅದನ್ನು ಕಲಿಯದೆ ಇದ್ದಿದ್ದರೆ ಪಾಪ, ಈ ಹುಡುಗಿ ಚೇತನಾ ಹುಟ್ಟುತ್ತಿದ್ದಳಾದರೂ ಎಲ್ಲಿ?

ಹಾಗೆ ಅಮ್ಮ-ಲಲಿತಾ ನನ್ನನ್ನು ಹಿಂದಿಯೆಡೆಗೆ ಸೆಳೆದರು. ಮೊದಲೆಲ್ಲ ಅಮ್ಮ ನನ್ನನ್ನು ಸಿನೆಮಾಗಳಿಗೆ ಕರೆದೊಯ್ಯುತ್ತಿರಲಿಲ್ಲ. ‘ಅರ್ಥ ಹೇಳು’ ಅಂತ ಅದು ನಡೀತಿದ್ದಾಗಲೇ ಕೇಳೀ ಕೇಳೀ ಹಿಂಸಿಸುತ್ತಿದ್ದೆ. ಮುಂದೆ ೧೯೬೯ರಲ್ಲಿ ನಾನೇ ಸಿನೇಮಕ್ಕೆ ಹೋದೆ. ಕೆಲವನ್ನು ಅಮ್ಮನ ಪಕ್ಕದಲ್ಲೇ ಕುಳಿತು ನೋಡಿದೆ. This ದಿಲೀಪ್ ಕುಮಾರ್ ನನಗೆ ಪರಿಚಯವಾದದ್ದೇ ಆಗ. ಆತನ ಮುಘಲ್-ಎ-ಆಜಮ್ ಇದೆಯಲ್ಲ? ಆ ಪಾತ್ರವನ್ನು ಬಹುಶಃ ದಿಲೀಪ್ ಕುಮಾರನೇ ಇನ್ನೊಮ್ಮೆ ಮಾಡಿದ್ದರೆ ಅಂಥ ನಟನೆ ಸಾಧ್ಯವಿರುತ್ತಿರಲಿಲ್ಲ. ನಂಗೆ ದಿಲೀಪ್‌ನ ಸಂಘರ್ಷ್, ಮಧುಮತಿ, ಆದ್ಮಿ, ಬೈರಾಗ್, ದೇವ ದಾಸ್, ದಾಗ್ ಮುಂತಾದವನ್ನೆಲ್ಲ ನೋಡ ಸಿಕ್ಕಿದವು. He is great an actor. ಆತನ ಉರ್ದು ಅತಿ ಶ್ರೇಷ್ಠ. ಆತನಿಗೆ ಪಾಕಿಸ್ತಾನಿ ಗೆಳೆಯರಿದ್ದಾರೆ. ಸ್ವಂತ ಅತ್ತಿಗೆಯೊಬ್ಬಾಕೆ ಅಲ್ಲೇ ನೆಲೆಸಿದ್ದಾಳೆ. ಅಲ್ಲಿಗೆ ಹೋಗೋದು ದಿಲೀಪ್‌ನ ಅಭ್ಯಾಸ. ಅಲ್ಲಿ ನಡೆದ ಸಭೆಗಳಲ್ಲಿ ಆತ ಮಾತನಾಡುತ್ತಾನಲ್ಲ? ಆ ತೆರನಾದ ಉರ್ದು ಬಹುಶಃ ಪಾಕೀಸ್ತಾನಿಗಳಿಗೇ ಬರೋದು ಡೌಟು.

Mostly, ದಿಲೀಪ್‌ಗೆ ಈಗ ತೊಂಬತ್ತಾದವಾ ಅಂತ? ಆಗಿರಬೇಕು. ಒಂಥರಾ, ಕಲ್ಲ ಬೊಂಬೆ ಯಂತಾಗಿದ್ದಾನೆ. ಮುಖದಲ್ಲಿ reactions ಕೂಡ ಇರುವುದಿಲ್ಲ. ಒಬ್ಬ ನಟನನ್ನು ಹಾಗೆಲ್ಲ ಟೀವಿ ಕಾರ್ಯಕ್ರಮಗಳಿಗೆ ಕರೆತರುವುದು ತಪ್ಪು. ಆ ಸ್ಥಿತಿಯಲ್ಲಿ ಜನ ಯಾಕೆ ನೋಡಬೇಕು. ಪರೀಕ್ಷಿಸಿ ನೋಡಿ: ನಟಿ ಸಾಧನಾ ಹಾಗೆ ಬರುವುದಿಲ್ಲ. ತುಂಬ ವಯಸ್ಸಾಗಿದೆ. “ತಾರುಣ್ಯದಲ್ಲಿ ನನ್ನ ಮುಖ, ನಟನೆ, ನೃತ್ಯ ಮುಂತಾದವನ್ನು ಆಗ ಜನ ನೋಡಿದ್ದರಲ್ಲ? ಅವರಿಗೆ ಆವತ್ತಿನ ಸಾಧನಾಳೇ ನೆನಪಿರಲಿ. ಈ ವೃದ್ಧ ಮುಖ ಕಾಣೋದು ಬೇಡ!" ಎಂಬುದು ಆಕೆಯ ವಿವರಣೆ. ಇದ್ದುದರಲ್ಲಿ ಹೆಲೆನ್ ವಾಸಿ. ಮುಮ್ತಾಜ್‌ಳನ್ನು ನೋಡೋದು ಭಯಾನಕ. ಇವರೆಲ್ಲರಿಗಿಂತ ಭೀಕರವಾಗಿ ಕಾಣಿಸಿದಾಕೆ, ರೋರಿಚ್‌ರ ಪತ್ನಿ ದೇವಿಕಾರಾಣಿ.

ಒಮ್ಮೆ ಅನಿರೀಕ್ಷಿತವಾಗಿ ಆಕೆಯನ್ನು ನೋಡಿ ವಿಹ್ವಲನಾಗಿ ಬಿಟ್ಟಿದ್ದೆ. She was like a ghost! ನಾನು ಮೊಟ್ಟ ಮೊದಲ ದಿನ ನನ್ನ ಗುರುಗಳಲ್ಲೊಬ್ಬರಾದ ಮನೋಹರ್ ಮಳ ಗಾಂವಕರ್‌ರ ವಿಡಿಯೋ ತೆಗೆಯತೊಡಗಿದೆ. ಅವರು ನನಗೆ ಆಗಷ್ಟೆ ಪರಿಚಯವಾದವರು. “No, dont do that! We should not be shown on screen. We look bad!" ಅಂದಿದ್ದರು. ಅದು ತೊಂಬತ್ತರ ಪ್ರಾಯದ ನಿವೃತ್ತ ಕರ್ನಲ್ ಸಾಹೇಬರ ಮಾತು. ಅದು ತುಂಬ ಸತ್ಯ. ನಾನು ರೂಪ-ಕುರೂಪಗಳ ವಿವರಣೆಗೆ ಇಳಿಯೋ ಮನುಷ್ಯನಲ್ಲ. ಆದರೆ ಕರ್ನಲ್ ಹೇಳಿದ್ದು ಸತ್ಯ. ಮುಪ್ಪಿನಲ್ಲಿ ಎಲ್ಲರೂ ಚೆನ್ನಾಗಿ ಕಾಣಲ್ಲ. ನಮ್ಮ ವೆಂಕಟಸುಬ್ಬಯ್ಯನವರು ಈಗಲೂ ಥಳಥಳಿಸುತ್ತಾರೆ. ಅವರ ರೂಪು ಓಕೆ. ಉಳಿದವರೆಲ್ಲ ಹಾಗಿರೋದಿಲ್ಲ. ಅಲ್ಲವಾ?

ನಿಮ್ಮವನು
ಆರ್.ಬಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 08 June, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books