Ravi Belagere
Welcome to my website
ನಿಮ್ಮದು ಎಂಥ ಮ್ಯಾರೇಜು? ಶುದ್ಧ ಅರೇಂಜ್‌ಡಾ? ನೀವೇ ಮಾಡಿಕೊಂಡ ಲವ್ ಮ್ಯಾರೇಜಾ? live in relationshipನಂತಹ  ಗಾಂಧರ್ವ ವಿವಾಹನಾ? ‘ಲವ್ ಕಮ್ ಅರೇಂಜ್ಡ್’ ಮದುವೆಯಾ? ಅಂತರ್‌ಜಾತೀಯ ವಿವಾಹವಾ? ಅಂತರ್‌ಧರ್ಮೀಯ ವಿವಾಹವಾ? (Request :ಜಾತಿಗಳ ಪುಸ್ತಾಪ ಮಾಡಬೇಡಿ) Love, run and marry ಎಂಬಂತೆ ಮನೆಗಳನ್ನು ಬಿಟ್ಟು ಹೋಗಿ ಆದ ಮದುವೆಯಾ? ಎಂಥ ಮದುವೆಯಾಗಿದ್ದರೂ ಅಡ್ಡಿಯಿಲ್ಲ. ಅದಕ್ಕೆ ಗೌರವವಿದೆ. ಒಂದು inland letterನಷ್ಟು ಬರವಣಿಗೆಯನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆಯಿರಿ. ಜೊತೆಗೆ ಇಬ್ಬರೂ ಇರುವ ಫೊಟೋ ಕಳಿಸಿ. mail ಮಾಡೋದಾದರೆ [email protected]ಗೆ ಮಾಡಿ.
Home About Us Gallery Books Feedback Prarthana Contact Us

Buy Ravi Belagere Books online

ನಾನೇ ಅವರ ಮನೇಗೆ ಹೋಗಿ ಅವರ ಹೆಂಡ್ತೀಗೆ ಫೋನ್ ಕೊಟ್ಟೆ ಅಂದಿದ್ದ!

ಸುಳ್ಳು ಮತ್ತು ಸತ್ಯ

ಎರಡರ ಬಗ್ಗೆ ಈಗ ತರ್ಜನೆ-ಭರ್ಜನೆ ಮಾಡ ಲೇನೂ ನಾನು ಕುಳಿತಿಲ್ಲ. ಗೆರೆ ಗೀಚಿಕೊಂಡು, ದಾರ ಕಟ್ಟಿಕೊಂಡು ನಾನು ಬದುಕಲಾರೆ. ನನಗೆ ಸತ್ಯ-ಸುಳ್ಳಿನ ನಡುವಿನ ಅಂತರ ಚೆನ್ನಾಗಿ ಗೊತ್ತು. ಹರಿಶ್ಚಂದ್ರನಂತೆ ನಾಟಕ ಮಾಡುವುದಿಲ್ಲ ನಾನು. ಆದರೆ ನಾನು ವಿಪರೀತ ಸುಳ್ಳನಂತೂ ಖಂಡಿತ ಅಲ್ಲ. ಕೆಲಬಾರಿ casual ಆಗೊಂದು ಸುಳ್ಳು ಹೇಳ್ತೇವೆ. ಅನಿವಾರ್ಯವದು. ಸಂಕೋಚದಿಂದ ತಪ್ಪಿಸಿಕೊಳ್ಳೋಕೆ ಸುಳ್ಳು ಹೇಳ್ತೇವೆ. ಮುಖ ಉಳಿಸಿಕೊಳ್ಳಲಿಕ್ಕೆ ಹೇಳುತ್ತೇವೆ. ಇನ್ಯಾರಿಗೋ hurt ಆಗದಿರಲಿ ಅಂತ ಸುಳ್ಳು ಹೇಳ್ತೇವೆ. ಕೆಲವು ಚಟಗಳಿವೆ: ಅವುಗಳಿಗೆ ಬಲಿಯಾದ ಮೇಲೆ ಸುಳ್ಳು ಹೇಳಲೇಬೇಕು. ನಮ್ಮ ಕಡೆ ಒಂದು ಮಾತಿದೆ. `ತೀರಾ ದನಗಳ ದಲ್ಲಾಳಿ ಥರಾ ಮಾತಾಡಬೇಡ' ಅನ್ನುತ್ತಾರೆ. ಅದಕ್ಕೂ ಕಾರಣವಿದೆ. ದನದ ಸಂತೆಯಲ್ಲಿ ಒಂದೆರಡು ಹಸು ತಮ್ಮ ಕೈಯಲ್ಲಿ ಮಾರಾಟವಾದರೆ, ದಲ್ಲಾಳಿಗೆ ಬದುಕು. ಬೇರೆ ದಾರಿಯಿಲ್ಲ. `ಈ ಹಸು ಹತ್ತು ಲೀಟರ್ ಹಾಲು ಕರಿಯುತ್ತೆ ಅಂತಲೇ ಅವನು ಹೇಳೋದು. `ಸರಿ, ಹಾಲು ಕರೆದು ತೋರಿಸು `ಅಂತ ಕೆಲವರಂತಾರೆ. ದಲ್ಲಾಳಿಗೆ ಅದೂ ಗೊತ್ತು. ಅವತ್ತಿನ ಬೆಳಿಗ್ಗೆ ಅವನು ಹಾಲು ಕರೆದಿರುವುದೇ ಇಲ್ಲ. ಹಾಲು ಬಾಕಿ ಉಳಿದಿರುತ್ತೆ. ಕೆಚ್ಚಲಿಗೆ ಕೈ ಇಟ್ಟರೆ ಸಾಕು, ಸಮೃದ್ಧ ಹಾಲು. ಅವನಿಗೆ ಹಾಗೆ ಸುಳ್ಳು ಹೇಳಲು, convince ಮಾಡಲು, ಟೋಪಿ ಹಾಕಲು ಗೊತ್ತಿರದಿದ್ದರೆ ದಲ್ಲಾಳಿ ಬದುಕಲಾರ. ಈ ಸ್ಥಿತಿ ಬೇರೆ ಬೇರೆ ವೃತ್ತಿಯಲ್ಲಿರುವವರಿಗೂ ಬರುತ್ತೆ.
ಒಬ್ಬ ಗೆಳೆಯನಿದ್ದಾನೆ ನನಗೆ. ಕೊಂಚ ಕುಡುಕ. ಪ್ರತೀ ರಾತ್ರಿ ತಡವಾಗಿ ಮನೆಗೆ ಹೋಗುತ್ತಾನೆ. ಹೆಂಡತಿಗೆ ಸಿಟ್ಟು. ಕೆಲಬಾರಿ ಅವನು ರೇಷನ್ನೂ ತಂದು ಹಾಕಿರುವುದಿಲ್ಲ. ಮನೆಯ ಪರಿಸ್ಥಿತಿ ಕಡೆಗೆ ಕಣ್ಣೆತ್ತಿನೋಡೋದೂ ಇಲ್ಲ. ಹಾಗೆ ಅದೊಂದು ರಾತ್ರಿ ಇವನು ತಾರಾಡುತ್ತಾ ಮನೆ ತಲುಪಿದ್ದಾನೆ. ಮನೆಯಾಕೆಗೆ ನೆತ್ತಿ ಹೊತ್ತಿ ಉರಿಯುವಂಥ ಸಿಟ್ಟುಬಂದಿದೆ. ಆಕೆ ಮುಲಾಜು ನೋಡುತ್ತಿಲ್ಲ. ಸರ ಹೊತ್ತಾದರೆ ಏನಂತೆ? ಬಂದಿದ್ದೇ ಈಗ, ಬೈಸಿಕೋ ಎಂಬಂತಿತ್ತು ಧಾಟಿ. ಇವನು ಧಕ್ಕನೆ gap ನಲ್ಲಿ ಒಂದು ಮಾತು ಅಂದು ಬಿಟ್ಟ. ``ಆಯ್ತು, ಅದನ್ನ ಬೆಳಿಗ್ಗೆನೇ ಹೇಳ್ತಿನಿ ಬಿಡು; ನಿನ್ನ ಸಿಟ್ಟೆಲ್ಲ ಇಳೀಲಿ. ನಂದೇ time ಸರಿಯಾಗಿಲ್ಲ...!" ಅಂದ. ಮನೆಯಾಕೆಯ ಸ್ಪೀಡೇ ಕಡಿಮೆಯಾಗಿ ಹೋಯಿತು. ``ನಾಳೇನಾ? ಅದೇನೂಂತ ಈಗಲೇ ಹೇಳಿ ಮಲಗಿ..." ಅಂದಳು. ಇವನು ಸುಮ್ಮನೆ ಹೇಳಿ ಬಿಡ್ತಾನಾ? ``ಇಲ್ಲ ಬಿಡು. ನಾಳೇನೇ ಹೇಳ್ತೀನಿ, ಅದು ಇಂಪಾರ್ಟೆಂಟೇ. ಆದರೆ ನೀನು moodನಲ್ಲಿಲ್ಲ. ಅದೇನಂತೀಯೋ ಎಲ್ಲಾ ಅಂದು ಬಿಡು" ಅಂತ ಆಟ ಹಾಕಿದ. ಇನ್ನೂ ತಣ್ಣಗಾದಳಾಕೆ. ``ಪ್ಲೀಸ್ ಹೇಳಿ ನೀವು.." ಅನ್ನುವಲ್ಲಿಗಾಕೆ ಬಂದಳು. ``ಏನಿಲ್ಲ, ನೀನು ದಿನಾ ಒದ್ದಾಡ್ತೀಯ. ನೀರು ತುಂಬಿಸಿಡೋದರಲ್ಲಿ ಪಾಪ ಸಾಕಾಗಿ ಹೋಗುತ್ತೆ. ಅಲ್ದೆ ಈ ಮನೆ ನಿಜಕ್ಕೂ ಚಿಕ್ಕದು. ಸುಮ್ನೆ ಆ ಕಡೆ ನೋಡಿ ಬರೋಣ ಅಂತ ಹೋದೆ. ಆ ಏರಿಯಾನೇ ಒಂಥರಾ ಚೆಂದ. ಎಂಥ ಮನೆ ಅಂತೀಯಾ? great. ಮೂರು ಬೆಡ್ ರೂಂ ಇವೆ. ನೀರು ಬರ್‍ತಾನೇ ಇರುತ್ತೆ ಇಡೀ ದಿನ. ಪುಟಾಣಿದೊಂದು ಕೈ ತೋಟ ಇದೆ. ಇವಾಗ ಕೊಡ್ತಿರೋದಕ್ಕಿಂತ ಇನ್ನೂರು ರೂಪಾಯಷ್ಟೆ ಜಾಸ್ತಿ. ಅಡ್ವಾನ್ಸ್ ಕೊಟ್ಟೇ ಬಿಟ್ಟ... ನೀನು ಬೆಳಿಗ್ಗೆ ಬೇಗ ಎದ್ದು ರೆಡಿ ಆಗು. ಆ ಕಡೆ ಹೋಗಿ ನೋಡಿಕೊಂಡೇ ಬರೋಣ!" ಅಂದು ಬಿಟ್ಟ.

ನಂತರ ಏನಿದೆ? she was so good. ಚೆನ್ನಾಗಿ ಊಟ ಹಾಕಿದಳು. ಉಂಡ ನಂತರ ``ಸಮರಸವೇ ಜೀವನ". ಆಕೆ ಬೆಳಿಗ್ಗೆ ಇನ್ನಿಲ್ಲದ ಬಲವಂತ ಮಾಡಿ ಎಬ್ಬಿಸುತ್ತಿದ್ದಳು. ``ಏಳ್ರೀ.. ಮನೆ ನೋಡ್ಕಂಡು ಬಂದು ಬಿಡೋಣಾ..." ಅಂತ ಅನ್ನುತ್ತಿದ್ದಳು. ಈ ಮಹರಾಯ ಎದ್ದ. ``ರೀ.. ರೆಡಿಯಾಗಿ, ಮನೆ ನೋಡ್ಕೊಂಡು ಬರೋಣ" ಅಂದಳು.
``ಮನೆ? ಯಾವ ಮನೆ? ಈಗ ಮನೇಲೇ ಇದೀವಲ್ವಾ?" ಅಂದು ಬಿಟ್ಟ. ರಾತ್ರಿ ಹೇಳಿದ ಸುಳ್ಳಷ್ಟೂ ಮರೆತೇ ಹೋಗಿತ್ತು. ಆಕೆ ಅದನ್ನೆಲ್ಲ ನಂಬಿಕೊಂಡೂ ಇದ್ದಳು. ಬೆಳಿಗ್ಗೆ ಕೈಕೊಟ್ಟದ್ದು ಇವನದೇ ಸಿಸ್ಟಮ್. ಆಕೆ ಸರಿಯಾಗಿ ಛೀಮಾರಿ ಹಾಕಿದಳು. ಅವನು ತೆಪ್ಪಗೆ ಎದ್ದು ಹಿತ್ತಿಲಿಗೆ ಹೋದ. ಕುಡುಕರ ಸುಳ್ಳುಗಳು ಕೈ ಕೊಡುವುದೇ ಹೀಗೆ. ಆದರೆ ರಾತ್ರಿ ಬೀಸೋ ದೊಣ್ಣೆ ತಪ್ಪಿಸಿಕೊಂಡಾಗಿತ್ತಾ? ಅವನಿಗೆ ಅಷ್ಟು ಸಾಕು. ಅಂದಹಾಗೆ ಅವನ ಹೆಸರು ರವಿ ಬೆಳಗೆರೆ. ಈಗ ಪಾಪ, ಕುಡಿಯೋದನ್ನ ಬಿಟ್ಟಿದ್ದಾನೆ!

ಕೆಲವು ಇದಕ್ಕಿಂತಲೂ ನಿರುಪದ್ರವಿ ಸುಳ್ಳುಗಳಿರುತ್ತವೆ. ಕೆಲವು ಉಪಯೋಗಕ್ಕೆ ಬರುವಂಥವೂಇರ್‍ತವೆ. ಅದ್ಯಾಕೋಗೊತ್ತಿಲ್ಲ. ``ಇವತ್ತು ನೀನು ಬೇರೇನೇ ಥರಾ ಕಾಣ್ತಿದ್ದೀಯ.I mean, you are so beautiful!.'' ಅಂತ ಸ್ವಂತ ಹೆಂಡತಿಗೆ ಹೇಳುವುದರಲ್ಲಿ ಅದೇನು ಉಪದ್ರವಿದೆ? ಅದರಲ್ಲಿ ಒಂದೈದು ಪರ್ಸೆಂಟ್ ಸತ್ಯವಿದ್ದರೂ ಸಾಕು. ಅದು ಇದ್ದೇ ಇರುತ್ತೆ. ``ನೀನು ಬಿಡಪ್ಪಾ, ನಿಂಗೆ ಹೇಳಿಕೊಡಬೇಕಾ? ನಿನ್ನ ಸ್ಟೈಲೇ ಬೇರೆ ಬಿಡು" ಅಂದು ನೋಡಿ? ಎಂಥವನೂ ಕೂಡ ಅರ್ಧ ಕಪ್ ಕಾಫಿ ಕುಡಿಸೋಕೆ ಸಿದ್ಧವಾಗಿ ಬಿಡುತ್ತಾನೆ. ಅವು ನಿಜಕ್ಕೂ ಉಪಯೋಗಕ್ಕೆ ಬರುವ ಸುಳ್ಳುಗಳು. ಜಗಳಗಳ ಸಮ್ಮುಖದಲ್ಲಿ ರಾಜಿ ಮಾಡಿಸೋಕೆ ಅಂತಲೇ ಒಂದಷ್ಟು ಸುಳ್ಳುಗಳಿರುತ್ತವೆ. ಕೆಲವು ಸಲ, ಆ ಕ್ಷಣಕ್ಕೆ ತಂತಾನೆ ಸುರಿಸಿಬಿಡುವ ಸುಳ್ಳುಗಳೂ ಇರುತ್ತವೆ. ಫೋನು ಕೈಯಲ್ಲೇ ಇರುತ್ತದೆ. ರಿಂಗ್ ಆಗುತ್ತಿರುವಾಗ, ಏನು ಉತ್ತರ ಕೊಡಬೇಕು ಅಂತ ಗೊತ್ತಾಗುವುದಿಲ್ಲ. ಅದು ತೋಚುವ ಹೊತ್ತಿಗೆ, ಆತ ಎರಡನೇ ಸಲ ಮಾಡುತ್ತಾನೆ ಫೋನು. "oh sorry, ಬಾತ್ ರೂಮ್‌ನಲ್ಲಿದ್ದೆ..." ಅಂದು ಅದೇನು ಹೇಳಬೇಕಿತ್ತೋ ಅದನ್ನು ಹೇಳುತ್ತಾನೆ. ಕೆಲವು ಸಲ, ``ನಿಂಗೆ ಇವತ್ತಿನಿಂದ ನೂರು ವರ್ಷ ಆಯಸ್ಸು!" ಅನ್ನುವುದು ಇನ್ನೊಂದು ಸುಳ್ಳು. ಆದರೂ ಹೇಳುತ್ತೇವೆ. ಕೆಲವು ಸಲ ಅದು ಸಹಾಯ ಮಾಡುತ್ತದೆ. ಕೆಲಬಾರಿ ಬಚಾವಾಗಲಿಕ್ಕೆ ಅಥವಾ ಇನ್ಯಾರನ್ನೋ ಬಚಾವು ಮಾಡಲಿಕ್ಕೆ ಸುಳ್ಳು ಹೇಳುತ್ತೇವೆ. ಎಲ್ಲಾ ಹೊಗಳಿಕೆಗಳೂ ಒಂದರ್ಥದಲ್ಲಿ ಸುಳ್ಳುಗಳೇ. ಅವುಗಳಲ್ಲಿ ಕೊಂಚವಾದರೂ ಸತ್ಯ ಇರಬೇಕು. ಇಲ್ಲದಿದ್ದರೆ ಹೊಗಳಿಕೆ ವಾಚಾಮಗೋಚರ. ನನಗೆ ಒಂದಷ್ಟು rules ಇವೆ. ನಾನು ಯೋಚನೆಯೇ ಮಾಡದೆ ಸುಳ್ಳು ಹೇಳುವುದಿಲ್ಲ. ಸುಳ್ಳು ಹೇಳುವವರಿಗೆ ತುಂಬ ನೆನಪಿನ ಶಕ್ತಿ ಇರಬೇಕು ಅನ್ನುತ್ತಾರೆ. ಅದಿಲ್ಲದಿದ್ದರೆ ಪಿಗ್ಗಿ ಬೀಳೋದು ಖಚಿತ. ನಾನು ಒಂದು ಸುಳ್ಳಿ ನಿಂದ ಪರಾಗಲಿಕ್ಕೆ ಒಂದಾದ ಮೇಲೊಂದರಂತೆ ಸುಳ್ಳು ಪೇರಿಸುವಂತಹ ಕೆಲಸ ಮಾಡಿಕೊಳ್ಳುವುದಿಲ್ಲ. ಹಾಗೇನೇ, ಚಿಕ್ಕ ಮಕ್ಕಳಿಗೆ ಸುಳ್ಳು ಹೇಳಲ್ಲ. ಅವರ ಕೈಲಿ ಸುಳ್ಳು ಹೇಳಿಸೋದಿಲ್ಲ. ಉದಾಹರಣೆಗೆ, `ಅಪ್ಪ ಮನೆಯಲ್ಲಿಲ್ಲ' ಎಂಬಂಥ ಸುಳ್ಳುಗಳನ್ನ ಹೇಳಿಸೋದು. ಮಕ್ಕಳು ಹೇಳುವ ಸುಳ್ಳುಗಳು ತುಂಬ ಚೆನ್ನಾಗಿ, ತುಂಬ ಬೇಗ ನನಗೆ ಅರ್ಥವಾಗುತ್ತವೆ. ಅವು ಬೆಳೆಯುತ್ತಿವೆ, ಅವುಗಳ imagination ವಿಸ್ತರಗೊಳ್ಳುತ್ತಿದೆ ಎಂಬುದಕ್ಕೆ ಸುಳ್ಳುಗಳೇ ಸಾಕ್ಷಿ.

ಅನೇಕ ಸಲ ಕೋರ್ಟುಗಳಲ್ಲಿ ಸುಳ್ಳು ಹೇಳಬೇಕಾಗುತ್ತದೆ. ಸಹೋದ್ಯೋಗಿಗಳಿಗೆ ನಾನು ಸುಳ್ಳು ಹೇಳುವುದಿಲ್ಲ. ಹೇಳಿದರೆ ಅದು ಮೂರ್ಖತನವಾಗುತ್ತದೆ. ಏಕೆಂದರೆ, ಸುಳ್ಳು ಹೇಳುತ್ತಿದ್ದಾನೆ ಅಂತ ಅವರಿಗೆ ತುಂಬ ಸ್ಪಷ್ಟವಾಗಿ ಗೊತ್ತಾಗುತ್ತದೆ. ಹಣಕಾಸಿನ ಉಸ್ತುವಾರಿಕೆಗೆ ನಾನು ಕೈ ಹಾಕುವುದಿಲ್ಲವಾದ್ದರಿಂದ ದುಡ್ಡುಕಾಸಿಗೆ ಸಂಬಂಧಿಸಿದಂತೆ ಸುಳ್ಳು ಹೇಳುವ ಪ್ರಸಂಗ ನನಗೆ ಬರುವುದಿಲ್ಲ. ``ನಿಂಗೆ ಕೆಲಸ ಕೊಡುಸ್ತೀನಿ. ಅಥವಾ ಕೊಡ್ತೀನಿ. ಸಿನೆಮಾದಲ್ಲಿ chance ಕೊಡಿಸ್ತೀನಿ" ಎಂಬಂತಹ ಸುಳ್ಳುಗಳನ್ನು ಪ್ರಾಣ ಹೋದರೂ ಸರಿಯೇ, ನಾನು ಹೇಳುವುದಿಲ್ಲ. ಕೆಲವರು ಅದನ್ನೇ ಬದುಕು ಮಾಡಿಕೊಂಡಿರುತ್ತಾರೆ. ಅವರನ್ನು ಹತ್ತಿರಕ್ಕೂ ನಾನು ಬಿಟ್ಟುಕೊಳ್ಳುವುದಿಲ್ಲ. `ನನಗಿವರು ಸುಳ್ಳು ಹೇಳುತ್ತಿದ್ದಾರೆ' ಅಂತ ಅನೇಕ ಪ್ರಸಂಗಗಳಲ್ಲಿ ನನಗೆ ಗೊತ್ತಾಗುತ್ತದೆ. ``ಆಯ್ತು ಹೇಳಿ" ಎಂಬುವವನಂತೆ, ಅವರು ಹೇಳಿದ್ದನ್ನು ನಂಬಿರುವವನಂತೆ ವರ್ತಿಸುತ್ತೇನೆ. ಅವರಿಗೆ ಒಂದು ಹಂತದ ತನಕ ಆ ತೆರನಾದ comfort ಮಾಡಿಕೊಡುವುದೂ ಉಂಟು. ತುಂಬಾ ಅಪಾಯಕಾರಿಯಾದಂಥ, ಒಬ್ಬರ ಇಡೀ ನಂಬಿಕೆಯ ಅಥವಾ ಆ ನಂಬಿಕೆಯ systemನ ಬುಡಮೇಲು ಮಾಡುವಂಥ ಸುಳ್ಳುಗಳನ್ನು ನಾನು ಹೇಳುವುದಿಲ್ಲ. ಮುಖ್ಯವಾಗಿ, ನನಗೆ ನಾನು ಸುಳ್ಳು ಹೇಳಿಕೊಳ್ಳುವುದಿಲ್ಲ. ಕೆಲವರು ಅದ್ಯಾವ ಪರಿ ಸುಳ್ಳು ಹೇಳುತ್ತಾ ಸಾಗುತ್ತಾರೆಂದರೆ, ಕೆಲ ಸಮಯದ ನಂತರ ಅವರೇ ಅದನ್ನು ನಂಬತೊಡಗುತ್ತಾರೆ. ಅದು ಅಪಾಯಕಾರಿ. ನಮ್ಮ ಸ್ನೇಹವಲಯದಲ್ಲಿ ನಾವೆಲ್ಲ ಒಂದು ಚೂರು ಸುಳ್ಳು ಹೇಳುವುದು ಹೌದು. ಆದರೆ, ಕೆಲವರು ಜಗದ್ವಿಖ್ಯಾತ ಸುಳ್ಳುಗಾರರಿರುತ್ತಾರೆ. We can't just helf them. ಹಾಗೇನೇ, ಯಾರಾದರೂ ಎದುರಿಗೆ ಕುಳಿತು ಮಕ್ಕಳಿಗೂ ಅರ್ಥವಾಗುವಂಥ ಸುಳ್ಳು ಹೇಳುತ್ತಿದ್ದರೆ ಅದನ್ನು ಭರಿಸುವುದು ಪರಮಕಷ್ಟ. ``ನನ್ನನ್ನವರು rape ಮಾಡುತ್ತಿದ್ದಾರೆ ಅನ್ನಿಸಿಬಿಡುತ್ತಾರೆ.
ಮತ್ತೆ ಕೆಲವರು ವಿನಾಕಾರಣವಾಗಿ ಸುಳ್ಳೂ ಹೇಳುತ್ತಿರುತ್ತಾರೆ. ಅಸಹ್ಯ ಅದು. ನನ್ನ ಪರಿಚಿತನೊಬ್ಬನಿದ್ದ. ``ಈಗ ಸರ್, ಈಗಷ್ಟೆ ಹೋಗಿಬಂದೆ. ಅದೇ ವೀರಪ್ಪನ್ ವಿಷಯ. Kidnap ಮಾಡಿ ಇಟ್ಕೊಂಡು ಬಿಟ್ಟಿದ್ದಾನಲ್ಲ? ಅವನ ಮನೇಗೇ ಹೋಗಿ ಬಂದೆ. ಹೆಂಡತೀ ಕೈಲಿ ಮೊಬೈಲೂ ಇಲ್ಲ. ನಂದೇ ಒಂದು extra ಫೋನಿತ್ತು. ಆಕೇಗೆ ಕೊಟ್ಟುಬಂದೆ" ಅಂದ. ``ಯಾರ್ರೀ, ಯಾರ ಹೆಂಡ್ತೀಗೆ ಕೊಟ್ಟು ಬಂದ್ರಿ?" ಅಂತ ಕೇಳಿದೆ. ``ಅದೇ ಸಾರ್, ಕೃಪಾಕರ ಸೇನಾನಿ ಇದಾನಲ್ಲ? ಅವನ ಹೆಂಡ್ತೀಗೆ!" ಅಂದ. ಅವನಿಗೆ ಕೃಪಾಕರ ಬೇರೆ, ಸೇನಾನಿ ಬೇರೆ ಅಂತ ಗೊತ್ತೇಇಲ್ಲ. What a bluff master he is! ಯಾರದೋ ನಂಬಿಕೆಯ, ವಿಶ್ವಾಸದ, ಇಡೀ ಅಸ್ತಿತ್ವದ ಬುನಾದಿಯೇ ಚೆದುರಿ ಹೋಗುವಂತಹ ಸುಳ್ಳು ಹೇಳಬಾರದು. ಅದೊಂದು Crime ಅದು.

ಹಾಗೇನೇ, ಸಾಯೋತಂಕಾ ಸುಳ್ಳೇ ಹೇಳಲ್ಲ ಎಂದು ನಿರ್ಧರಿಸಿ ಸಾಯುವ ಪರಿಸ್ಥಿತಿ ತಂದುಕೊಳ್ಳುವಂತಹ ಸತ್ಯವಂತರೇ ಆಗಿಬಿಟ್ಟರೆ ಅದೂ ಕಷ್ಟವೇ. ಅಲ್ಲವಾ?

-ರವೀ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 26 May, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books