Ravi Belagere
Welcome to my website
ನಿಮ್ಮದು ಎಂಥ ಮ್ಯಾರೇಜು? ಶುದ್ಧ ಅರೇಂಜ್‌ಡಾ? ನೀವೇ ಮಾಡಿಕೊಂಡ ಲವ್ ಮ್ಯಾರೇಜಾ? live in relationshipನಂತಹ  ಗಾಂಧರ್ವ ವಿವಾಹನಾ? ‘ಲವ್ ಕಮ್ ಅರೇಂಜ್ಡ್’ ಮದುವೆಯಾ? ಅಂತರ್‌ಜಾತೀಯ ವಿವಾಹವಾ? ಅಂತರ್‌ಧರ್ಮೀಯ ವಿವಾಹವಾ? (Request :ಜಾತಿಗಳ ಪುಸ್ತಾಪ ಮಾಡಬೇಡಿ) Love, run and marry ಎಂಬಂತೆ ಮನೆಗಳನ್ನು ಬಿಟ್ಟು ಹೋಗಿ ಆದ ಮದುವೆಯಾ? ಎಂಥ ಮದುವೆಯಾಗಿದ್ದರೂ ಅಡ್ಡಿಯಿಲ್ಲ. ಅದಕ್ಕೆ ಗೌರವವಿದೆ. ಒಂದು inland letterನಷ್ಟು ಬರವಣಿಗೆಯನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆಯಿರಿ. ಜೊತೆಗೆ ಇಬ್ಬರೂ ಇರುವ ಫೊಟೋ ಕಳಿಸಿ. mail ಮಾಡೋದಾದರೆ [email protected]ಗೆ ಮಾಡಿ.
Home About Us Gallery Books Feedback Prarthana Contact Us

Buy Ravi Belagere Books online

ಅವನನ್ನು ನನ್ನೆದುರಿಗೇ ವಕೀಲರು ಗುಮಿಗುಮಿ ವದ್ದರಲ್ಲ... ಆಗಲೂ!

ಅದು ಈಗಿನ ಮಾತಲ್ಲ.
ಇಪ್ಪತ್ತು ವರ್ಷದ ಹಿಂದೆ ಪತ್ರಿಕೆ ಆರಂಭವಾದಾಗಲೇ ಒಂದು ಅಂಕಣ `ಮೀಡಿಯಾ ಮಸಾಲಾ' ಅಂತ ಆರಂಭಿಸಿದ್ದೆ. ಸುಮ್ನೆ ಅದೊಂಥರಾ ಗೆಳೆಯನ ಅಂಡು ಚಿವುಟಿದ ಹಾಗೆ. ಕಾಲೆಳೆದ ಹಾಗೆ. Absolutely no venum. ಮನಸಿನಲ್ಲಿ ಕಹಿ ಇಟ್ಟುಕೊಂಡು ಬರೆಯುವಂತಹುದಲ್ಲ. ವಿಷಕಾರುವ ಉದ್ದೇಶವಿಲ್ಲ. ಕೊಂಚ fun, ಕೊಂಚ ಗೇಲಿ, ತಮಾಷಿ-ಹೀಗೆ. ಒಂದಷ್ಟು ದಿನ ತೇಜಮ್ಮನನ್ನು ರೇಗಿಸುತ್ತಿದ್ದೆ. ಆಗಿನ್ನೂ ಆಕೆ ಸಂಸದಳಾಗಿರಲಿಲ್ಲ. Mostly, ಉದಯ ಟೀವಿಯಲ್ಲಿದ್ದಳು. ಅದಕ್ಕಿಂತ ಹೆಚ್ಚಾಗಿ ವಿಧಾನ ಸೌಧದಲ್ಲಿರುತ್ತಿದ್ದಳು. ಆಕೆಗೆ ನನ್ನ ಮೇಲೆ ಅದೇನು ಸಿಟ್ಟೋ? ಒಂದಷ್ಟು ಕಿರಿಕ್‌ಗಳಾದವು. ಜಗಳ ಕೋರ್ಟಿಗೂ ಹೋಯಿತು. ಖುದ್ದಾಗಿ ಬಂದು ನ್ಯಾಯಾಲಯದ ಮುಂದೆ ಅಧಿಕೃತವಾಗಿ ಆಕೆ ಮಾತೂ ಆಡಿದಳು. ಆ ಕೇಸು ಅಲ್ಲೇ ನೆಗೆದು ಎಡವಿಕೊಂಡು ಬಿತ್ತು. ನಾನು ಎದ್ದು ಬಂದೆ. ಆದರೆ ಅದೆಲ್ಲ ಆಗಿ, ಸಂಸದೆಯೂ ಆಗಿ ಅದರ ಮುಚ್ಚಟೆಯೂ ಮುಗಿದು ಆಕೆ ಹಿಂತಿರುಗಿದ್ದಳಲ್ಲ? ಆ ಹೊಸತರಲ್ಲಿ ಅದೊಂದು ದಿನ ವಾಡಿಯಾ ರಸ್ತೆಯ world cultureಗೆ ನಾನು ಹೋದೆ. ಆಗೊಮ್ಮೆ ಈಗೊಮ್ಮೆ ತುಂಬ ಆಸಕ್ತಿಕರವಾದ ಸಭೆ ನಡೆದರೆ ನಾನು ಅಲ್ಲಿಗೆ ಹೋಗುವುದುಂಟು. ಸಾಮಾನ್ಯವಾಗಿ ಅಲ್ಲಿ ಪುಸ್ತಕ ಬಿಡುಗಡೆ ಸಮಾರಂಭಗಳು ನಡೆಯುತ್ತವೆ. ನಾನು ಹೋಗಿ ಒಂದಷ್ಟು ಮಿತ್ರರ ಪುಸ್ತಕಗಳನ್ನು ಬಿಡುಗಡೆ ಮಾಡಿದ್ದೂ ಇದೆ. ನನ್ನ ಪುಸ್ತಕಗಳು ಮಾತ್ರ ಅಲ್ಲಿ ಬಿಡುಗಡೆಯಾಗುವುದಿಲ್ಲ. ಓದುಗ ದೊರೆಗಳ ಆ ಪರಿಯ crowdಗೆ ಅದು ಜಾಗವಲ್ಲ.

ರವೀಂದ್ರ ಕಲಾಕ್ಷೇತ್ರವೂ ಸಾಕಾಗಲ್ಲ. ಅಲ್ಲಿ main building ಅಲ್ಲದೆ, ಅದರ ಹಿತ್ತಿಲಿನಲ್ಲಿ ಸಂಸ ಬಯಲು ರಂಗಭೂಮಿಯಿದೆ. ಸಭೆಗೆ ಬುಕ್ ಮಾಡುವಾಗ ಎರಡನ್ನೂ book ಮಾಡ್ತೇನೆ. ಹಿತ್ತಿಲಿನ `ಸಂಸ'ದಲ್ಲಿ ಆರಾಮಾಗಿ ಕೂಡಬಹುದು. ಕೂಡಲು ಅಲ್ಲಿ ಮೆಟ್ಟಿಲುಗಳಿವೆ. ಅಲ್ಲಿ ಕೂತವರಿಗೆ ಸಭೆ ಕಾಣಬೇಕಲ್ಲ? ನಾನು ಅಲ್ಲಿ ಬೃಹತ್ ಪರದೆ ಹಾಕಿ, ಅದನ್ನು ಕೆಮೆರಾಗೆ ಹೊಂದಿಸಿ ಇಡೀ ಕಾರ್ಯಕ್ರಮವನ್ನು ಆ ಹಿತ್ತಿಲಿನವರಿಗೆ ನೋಡಲಿಕ್ಕೆ ಅನುವು ಮಾಡಿಕೊಟ್ಟದ್ದೂ ಉಂಟು. ಅದು ಯಶಸ್ವಿಯಾದದ್ದೂ ಉಂಟು. ಹಾಗೆ ಒಮ್ಮೆ ವಾಡಿಯಾ ರೋಡ್‌ನ ವರ್ಲ್ಡ್ ಕಲ್ಚರ್ ಕಟ್ಟಡದ ಆವರಣಕ್ಕೆ ಹೋದಾಗ ಇದ್ದಕ್ಕಿದ್ದಂತೆ ಅಲ್ಲಿ ತೇಜಸ್ವಿನಿ ಕಾಣಿಸಿದಳು. ಯಾರೊಂದಿಗೋ ಹರಟುತ್ತ ನಿಂತಿದ್ದಳು. ಆಕೆಯನ್ನು ನೋಡಿ ವರ್ಷಗಳೇ ಆಗಿದ್ದವು. ನಮ್ಮ ನಡುವೆ ಪರಸ್ಪರ ಮಾತು ಯಾವ ಕಾಲಕ್ಕೋ ಬಿಟ್ಟು ಹೋಗಿತ್ತು. ಕಾರ್ ಇಳಿದು ನಾನು ಆಕೆಯಿದ್ದಲ್ಲಿಗೇ ಹೋದೆ. ಅವತ್ತಿನ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆರಂಭವಾಗಲಿಕ್ಕೆ ಇನ್ನೂ time ಇತ್ತು. ತೇಜಸ್ವಿನಿ ಜೊತೆಗೆ ನನ್ನ ಮಿತ್ರರ್‍ಯಾರೋ ಮಾತಾಡುತ್ತಿದ್ದರು. ಅವರು wish ಮಾಡಿದರು. ಸರಿ ಅಂತ ಅವರಲ್ಲಿಗೇ ಹೋದೆ. ಹಾಗೆ ನಾವು ಮೂರು ಜನ ಮಾತಿಗೆ ನಿಂತೆವಲ್ಲ? ಒಂದು ಕಾಲಕ್ಕೆ ನಾವು ಶರಂಪರ ಜಗಳ ಆಡಿದ್ದೆವು ಎಂಬುದೇ ಸುಳ್ಳು ಎಂಬಂತೆ ನಾನು-ತೇಜಸ್ವಿನಿ ಆರಾಮ್‌ಸೇ ಮಾತನಾಡಿದೆವು. ಅದೇನೂ ಪರ್ಸನಲ್ ಆದ ಸಂಗತಿಯಲ್ಲ. ಹೀಗೇ, ಲೋಕಾಭಿರಾಮದ ಮಾತು. ಆಕೆಯೂ ಬಿಡುಬೀಸಾಗಿ ಹರಟಿದಳು. ನಾನೂ ಹರಟಿದೆ. ಕಾರ್ಯಕ್ರಮ ಶುರುವಾಗುತ್ತಿದ್ದ ಹಾಗೆಯೇ ಮೂವರೂ ಚೆದುರಿದೆವು. Finish!

ಹಿಂದೊಮ್ಮೆ ಜಗಳವಾಗಿತ್ತು, ಕೋರ್ಟ್ ತನಕ ಹೋಗಿದ್ದೆವು, ಬೈದಾಡಿದ್ದೆವು &No! ಅದರ ವಾಸನೆಯೂ ಇರಲಿಲ್ಲ. It went on very normally. ಏಕೆ ಹೇಳಿದೆ ಅಂದರೆ, ಪತ್ರಿಕೋದ್ಯಮಿಗಳ ವರಸೆಯೇ ಹಾಗೆ. ರಾಜಕಾರಣದಲ್ಲಿ ಶಾಶ್ವತ ಸ್ನೇಹಿತರೂ ಇರಲ್ಲ:ಶಾಶ್ವತ ಶತ್ರುಗಳೂ ಇರಲ್ಲ ಅಂತಾರಲ್ಲ? ನಾವು ರಾಜಕಾರಣಿಗಳಿಗಿಂತ ಹೆಚ್ಚು ಡಿಫರೆಂಟ್ ಏನಲ್ಲ. Of course, ಕೆಲವಿರುತ್ತವೆ: ರಾಜಿಯಾಗಲು ಸಾಧ್ಯವೇ ಇಲ್ಲ ಎಂಬಂತಹವು. ಆ ಜಗಳಗಳೂ ತುಂಬ ದೊಡ್ಡ ಮಟ್ಟದ ಜಗಳಗಳೇನಾಗಿರೋ ದಿಲ್ಲ. ಅವುಗಳಿಗೆ ಕಾರಣಗಳೂ ತುಂಬ ordinary ಆಗಿರುತ್ತವೆ. ಆದರೆ ಇಬ್ಬರು ಪತ್ರಕರ್ತರು ಜಗಳವಾಡಿಕೊಂಡಾಗ, ಮತ್ತೆ ರಾಜಿಯಾಗೋದೇ ಸಾಧ್ಯವಿಲ್ಲ ಎಂಬ ಪರಿಸ್ಥಿತಿ ಏಕೆ ನಿರ್ಮಾಣವಾಗುತ್ತದೆ ಅಂದರೆ, ಅದಕ್ಕೆ ಕಾರಣ ಮಾತು! I mean ಬರವಣಿಗೆ.

ಇಬ್ಬರೂ ಪತ್ರಕರ್ತರೇ. ಪೆನ್ನು ಇಬ್ಬರ ಕೈಲೂ ಇರುತ್ತೆ. ನಾಲಗೆಯ ನಂಜಿಗೆ ಕೊರತೆಯೇನಿರುವುದಿಲ್ಲ. ನಂಜು, ಪ್ರವಹಿಸಿಬಿಡುತ್ತದೆ. ರಸ್ತೆಯಲ್ಲಿ `ಅಮ್ಮ-ಅಕ್ಕ' ಅಂತ ಬೈದಾಡಿ ಕೊಳ್ಳುವವರಿರುತ್ತಾರಲ್ಲ? ಅವರು ಸಾವಿರ ಪಾಲು ಮೇಲು. ಆ ಬೈಗುಳಗಳಿಗೆ ಇರದಂತಹ ಒಂದು strength ನಮ್ಮ `ಸಭ್ಯ' ಮಾತುಗಳಿಗೆ ಇರುತ್ತದೆ. ತುಂಬ ಹಿಂದೆ ಈ ಕುಮಟಾ-ಕಾರವಾರದ ಕಡೆಯ ಇಬ್ಬರು ಪತ್ರಕರ್ತರು ಕಿತ್ತಾಡಿಕೊಂಡದ್ದು ನನಗೆ ನೆನಪಿದೆ. ಇಬ್ಬರಿಗೂ ಕೈಲಿ ಪತ್ರಿಕೆಗಳಿದ್ದವು. ``ಅವನು ವಿಪರೀತ ಕುಡಿದು ರಸ್ತೆ ಪಕ್ಕದಲ್ಲಿ ಬಿದ್ದಿದ್ದು ನೋಡಿದೆ" ಅಂತ ಒಬ್ಬಾತ ಬರೆದ. ಅದಕ್ಕಾತ ಕೊಟ್ಟ reply ಏನು ಗೊತ್ತೆ. ``ನಿನ್ನೆ ಯಾಕೋ ಹಾಗಾಯಿತು: ನಾನು ಅಸ್ವಸ್ಥನಾಗಿದ್ದೆ. ವಿಪರೀತವೇನೂ ಕುಡಿದಿರಲಿಲ್ಲ. ಆದರೂ ಒಳಗೆ upset ಆಯಿತು ಕರುಳು. ಅದನ್ನು ತಡೆಯಲಾಗದೆ ರಸ್ತೆ ಬದಿಯಲ್ಲಿ ಕುಳಿತು ಕಾರಿಕೊಂಡೆ. ಹಾಗೆ ಕಾರಿಕೊಂಡ ವಾಂತಿಯನ್ನು ಈ ಎದುರಾಳಿ ಪತ್ರಿಕೆಯ ಸಂಪಾದಕ ನೆಕ್ಕುತ್ತಾ ಕುಳಿತಿದ್ದ..!" ಅಂತ ಬರೆದುಬಿಡೋದೇ? My God. ಜಗಳ ಹೀಗೂ ಆಡುತ್ತಾರಾ ಅಂತ ಆಶ್ಚರ್ಯವಾಗಿತ್ತು. ಮುಂದೆ ಅದಕ್ಕಿಂತ ತೀಕ್ಷ್ಣವಾದ ಕದನಗಳನ್ನು ನೋಡಿದೆ. ಆ ಮಾತು ಬೇರೆ. ನಾನು ಗಮನಿಸಿದ ಸಂಗತಿಯೊಂದಿದೆ. ಅದು ಲಂಕೇಶರಿಗೆ ಸಂಬಂಧಿಸಿದ್ದು.

ನಮ್ಮ ವೃತ್ತಿಗೂ-ಕೋರ್ಟಿಗೂ ಬಿಡಿಸಲಾರದ ನಂಟು. ನಮಗೆ ಕೇಸುಗಳು ಇದ್ದೇ ಇರುತ್ತವೆ. ನನಗೆ ಇವತ್ತಿಗೂ ಇವೆ. ಆದರೆ ಕೇಸು ಹಾಕಿದವರ ಪೈಕಿ ಯಾವುದೇ ಸಾಹಿತಿಗಳಿಲ್ಲ. ನಾನು ಸಾಮಾನ್ಯವಾಗಿ ಕವಿ-ಸಾಹಿತಿಗಳನ್ನು ಬೆನ್ನು ಬಿದ್ದು ಬಯ್ಯುವುದಿಲ್ಲ. ಈಗ ಮೊದಲಿಗಿಂತ ಬೆಟರು. ಮೊದಲೆಲ್ಲ ಅನೇಕ ಕವಿ-ಸಾಹಿತಿಗಳಿಗೆ ಊಟಕ್ಕೂ ಸಮಸ್ಯೆಯಿರುತ್ತಿತ್ತು. ಅಂಥ ಸ್ಥಿತಿಯಲ್ಲಿರುವವರನ್ನು ಏನೂಂತ ಟೀಕಿಸಲಿ? ಆದರೆ ಲಂಕೇಶರು ಪತ್ರಿಕೆ ಆರಂಭಿಸಿದ ತಕ್ಷಣ ಕೈ ಹಾಕಿದ್ದೇ ಈ ಕವಿ ಸಾಹಿತಿಗಳ ಕಣ್ಣಿಗೆ. ಛೇಡಿಸುವ ಹಂತ ಮೀರಿ ಕೆಲವೊಮ್ಮೆ ತೀರ rude ಆಗಿ ಬರೆದು ಬಿಡುತ್ತಿದ್ದರು. ಅದರ ಝಳ ಕಡೆಕಡೆಗೆ ಲಂಕೇಶರ ಆಪ್ತಮಿತ್ರರಾಗಿದ್ದ ಪೂರ್ಣಚಂದ್ರತೇಜಸ್ವಿಯವರಿಗೂ ಬಡಿಯಿತು. ಸರಳವಾದ ಗೇಲಿ- ಛೇಡಿಸುವಿಕೆ ಮರೆಯಾಗಿ ಕೆಲವೊಮ್ಮೆ ವಿಪರೀತ ನಂಜು ಕಾರಿಬಿಡುತ್ತಿದ್ದರು. ಇದು ಒಬ್ಬಿಬ್ಬರಿಗಾದರೆ ಸರಿ. ಕಂಡೋರನ್ನೆಲ್ಲ ಚುಚ್ಚುತ್ತ ಬಂದರೆ ನಮಗೇನು ಐದು ಕೋಟಿ ಸ್ನೇಹಿತರಿರುತ್ತಾರಾ? ಅದರಲ್ಲೂ ಹುಡುಕಾಡಿ ತುಂಬ ಸಜ್ಜನರನ್ನ, ಮೃದು ಸ್ವಭಾವದವರನ್ನ ಬೈದು ಬಿಡುತ್ತಿದ್ದರು. ನಾನು ಕೆಲಕಾಲ `ಲಂಕೇಶ್ ಪತ್ರಿಕೆ'ಯಲ್ಲಿ ಕೆಲಸ ಮಾಡಿದೆ. ಒಮ್ಮೆ ನಿಸಾರ್ ಅಹ್ಮದರ ಮನೆಗೆ ಹೋದೆ. `ಪತ್ರಿಕೆಗೆ ನಿಮ್ಮ ಸಂದರ್ಶನ ಮಾಡಬೇಕಿತ್ತು' ಅಂದೆ. ಯಾವ ಪತ್ರಿಕೆಗೆ ಅಂತ ನಿಸ್ಸಾರ್‌ರು ಕೇಳಿದರು. ಅವರಿಗೆ `ಲಂಕೇಶ್ ಪತ್ರಿಕೆ'ಗೆ ಅನ್ನುತ್ತಿದ್ದಂತೆಯೇ, ``ನೋಡಪ್ಪಾ, ನೀನು ನನಗೆ ಆತ್ಮೀಯ. ಕಿರಿಯ ಸ್ನೇಹಿತ. ಒಂದು ಹೈಸ್ಕೂಲ್ ಮ್ಯಾಗಝೈನ್‌ಗೆ ಬೇಕಾದರೂ ಸರಿ: ನಾನು interview ಕೊಡ್ತೇನೆ. ಆದರೆ ಆ ಪತ್ರಿಕೆಗಲ್ಲ" ಅಂದುಬಿಟ್ಟರು. I could understand his irritation. ತೀರ ಹಾಗನ್ನುವಷ್ಟು hurt ಮಾಡಿದ್ದರು ಲಂಕೇಶ್. ನೆನಪಿರುವ ಇನ್ನೊಂದು ಸಂಗತಿ ಹಾ.ಮಾ. ನಾಯಕರಿಗೆ ಸಂಬಂಧಿಸಿದ್ದು. ಅವರು ಲಂಕೇಶರ ಮೇಲೆ ಕೇಸ್ ಹಾಕಿದ ಬುದ್ಧಿ ಜೀವಿಗಳ ಪೈಕಿ ಮೊದಲಿಗರು ಅಂತ ಕಾಣುತ್ತೆ. ಅವರಿಗೆ ಸಂಬಂಧಿಸಿದಂತೆ ಲಂಕೇಶ್ ಬೇರೆ ಏನನ್ನು ಬರೆದಿದ್ದರೂ ನಡೀತಿತ್ತು. ಎಲ್ಲ ಬಿಟ್ಟು ಅವರು ನಾಯಕರನ್ನು ಛೇಡಿಸಿ, ಅವರು ``ಕೆಂಚ ಒಕ್ಕಲಿಗ" ಎಂದು ಬರೆದು ಬಿಟ್ಟಿದ್ದರು. ಇದು ಸಭ್ಯವೇ. ನಾಗರಿಕತೆಯೇ ಅಂತ ಲಂಕೇಶ್ ಕೇಳಿಕೊಂಡೇ ಇರಲಿಲ್ಲ. ನಾವು ಇಷ್ಟೆಲ್ಲ ಸಾಹಿತ್ಯ ಓದಿದವರು. ನಾವೇ ಖುದ್ದು ಬರಹಗಾರರು. ಮುಖ್ಯವಾಗಿ ನಾಸ್ತಿಕರು. ದೇವರೇ ಇಲ್ಲ ಅಂದ ಮೇಲೆ ಜಾತಿಗಳಿಗೆ ಜಾಗ ಕೊಡುತ್ತೇವಾ? ಅದರಲ್ಲೂ ಲಂಕೇಶರು ಸಮಾಜವಾದಿ. ಅವರು ಹಾಗೆ ಬರೆದಾಗ ಉಳಿದ ಕವಿ-ಸಾಹಿತಿಗಳಂಥ ನಾಯಕರು ಸುಮ್ಮನಾಗಲಿಲ್ಲ. ತುಂಬ ಗಂಭೀರವಾಗಿ ತೆಗೆದುಕೊಂಡು, ಏಕ್-ದಮ್ ವ್ಯವಸ್ಥಿತವಾಗಿ ವಕೀಲರನ್ನಿಟ್ಟುಕೊಂಡು ಲಂಕೇಶರ ಮೇಲೆ case ಹಾಕಿದರು. ಶತಾಯಗತಾಯ ಬಿಡಲಿಲ್ಲ. ಒಮ್ಮೆ ಭೇಟಿಯಾದಾಗ ಆ ಬಗ್ಗೆ ಪ್ರಸ್ತಾಪ ಬಂತು.

``ಬೆಳಗೆರೆಯವರೇ, ಜಗತ್ತಿನಲ್ಲಿ ಪ್ರತೀ ಒಬ್ಬರಿಂದಲೂ ಏನನ್ನಾದರೂ ಕಲಿಯೋದು ಇದ್ದೇ ಇರುತ್ತೆ. ಆದರೆ ಇಂಥವರಿಂದ ಕಲಿಯೋದು ಖಂಡಿತ ಏನೂ ಇಲ್ಲ" ಅಂದುಬಿಟ್ಟರು. ಲಂಕೇಶ್ ವರ್ಷಗಟ್ಟಲೆ ಮೈಸೂರಿನ ಕೋರ್ಟ್‌ಗೆ ಅಲೆದರು. Basically ನಾನು ಜಾತಿವಾದಿಯಲ್ಲ. ನಾನು ಬರೆದ ಎಲ್ಲ ಸಂಗತಿಗಳನ್ನೂ ಒಟ್ಟು ಮಾಡಿ ನೋಡಿ. ಅತ್ಯಂತ ಕಡಿಮೆ ಯಾವುದರ ಬಗ್ಗೆಯಾದರೂ ಬರೆದಿದ್ದೇನೆ ಅಂತಾದರೆ, ಅದು ಜಾತಿಯ ಬಗ್ಗೆ. ನನಗದು ತುಂಬ ಅನವಶ್ಯಕವಾದ, ಕೆಲಸಕ್ಕೆ ಬಾರದ, ಅಸೂಕ್ಷ್ಮವಾದ ಸಂಗತಿ. ಯಾರಾದರೂ `ಅವನು ಮುಸ್ಲಿಂ ಕಣ್ರೀ!' ಅಂದರೆ ನನಗೆ ಸಿಟ್ಟು ಬರುತ್ತೆ. ನನ್ನ ಮುಸ್ಲಿಮ್ ಗೆಳೆಯರನ್ನು ನಾನು `ಏ ಸಾಬಣ್ಣಾ' ಅನ್ನುತ್ತೇನೆ. ಹೆಣ್ಣು ಮಕ್ಕಳನ್ನು `ಓ... ನೀನಾ ಬೂಬಮ್ಮಾ?' ಅನ್ನುತ್ತಿರುತ್ತೇನೆ. ನನಗೆ ಸಲುಗೆಯಿದ್ದಲ್ಲಿ ಹಾಗೆ ಮಾತಾಡೋದು ನನ್ನಿಂದ ಸಾಧ್ಯ. ಆದರೆ ಮುಸ್ಲಿಮರ ವಿರುದ್ಧ ಅದೆಂಥ hatred? ಅವರು ನನಗೆ (as a community) ಏನು ಅನ್ಯಾಯ ಮಾಡಿದ್ದಾರೆ? ಹಾಗೇನೇ ಯಾರಾದರೂ ಅತಾರ್ಕಿಕವಾಗಿ ಬ್ರಾಹ್ಮಣರನ್ನು ಬೈದರೆ ನಾನು ಹಾಗೇ ಸಿಟ್ಟಿಗೇಳುತ್ತೇನೆ. `ಇಲ್ಲಾ, ಬ್ರಾಹ್ಮಣರು ವೇದ ಕಾಲದಲ್ಲಿ, ಎರಡೂ ಮುಕ್ಕಾಲು ಸಾವಿರ ವರ್ಷಗಳ ಹಿಂದೆ ಶೂದ್ರರನ್ನು ಶೋಷಿಸ್ತಾ ಇದ್ದರು' ಎಂಬಂಥ ಮಾತನ್ನ ಅವರು ಆಡಿದಾಗ, ``ಹೌದಾ? ಚೆನ್ನಾಗಿ ನೆನಪಿಟ್ಕೊಂಡಿದೀರಿ ಸರ್. ಈಗೆಲ್ಲ ಬೆಳಿಗ್ಗೆ ಓದಿದ `ಪ್ರಜಾವಾಣಿ'ಯಲ್ಲಿನ ಸುದ್ದಿ `ಸಂಜೆವಾಣಿ' ಸಿಗೋ ಹೊತ್ತಿಗೆ ಮರೆತು ಹೋಗಿರುತ್ತೆ. ನೀವು ಈ ಪರಿ `ಇಂತಿಷ್ಟು ವರ್ಷ' ಅಂತ ಅದನ್ನೆಲ್ಲ ಯಾಕೆ ನೆನಪಿಗಿಟ್ಕೊಂಡಿದೀರಿ? ನಿಮಗೇನಾದರೂ ಖಾಯಿಲೇನಾ? ಅಂತ ಕೇಳುತ್ತೇನೆ. ಜಾತಿ ಎಂಬುದು ಅದೇಕೋ ಆರಂಭದಿಂದಲೇ ನನ್ನ system ನೊಳಕ್ಕೆ ಜಮೆಯಾಗಲಿಲ್ಲ. ಅಮ್ಮನಿಗೆ ಆ ವಿಷಯದಲ್ಲಿ ಋಣಿಯಾಗಿರಬೇಕು.

ಮನೆಯಿಂದ ಜಾತಿ ಓಡಿಸಿದ್ದು ಆಕೆಯ ಸಾಧನೆಯಲ್ಲ. ಸುಮಾರು ನೂರು ವರ್ಷದ ಹಿಂದೆ ನನ್ನ ತಾಯಿಯ ತಂದೆ (ಅಜ್ಜ) ಜಾತಿ ಬಿಟ್ಟರು. ಆನಂತರ ನನ್ನ ಸೋದರ ಮಾವ ಜಾತಿಯನ್ನು ಧಿಕ್ಕರಿಸಿದ. ಅಮ್ಮ ಬೆಳೆದದ್ದು ಆಂಧ್ರದ ಗಡಿಯ ಹಿಂದೂ ಪುರಂನ ಗಾಂಧಿ ಆಶ್ರಮದಲ್ಲಿ. ಆಕೆ ಬುದ್ಧಿಪೂರ್ವಕವಾಗಿ ಜಾತಿಯಿಂದ, ಅದರ ಉರುಲಿನಿಂದ ದೂರವಾದಳು. `ಇಂಥ ಜಾತಿಯವರು ನಮ್ಮ ಅಡುಗೆ ಮನೆಗೆ, ದೇವರ ಮನೆಗೆ ಬರಕೂಡದು ಎಂಬ ನಿಯಮ, ಕಟ್ಟಳೆ ಇರಲೇ ಇಲ್ಲ. ಉಳಿದಂತೆ ನಮ್ಮಲ್ಲಿ ನನ್ನ ಓರಗೆಯ ಕೆಲವರು ಕೊಂಚ religious. ಆದರೆ ಅವರೂ ಜಾತಿಗಳ ಉಪದ್ರಕ್ಕೆ ತಲೆ ಕೊಟ್ಟವರಲ್ಲ. ಮನೇಲಿ ನನ್ನ ಹಿರಿ ಮಗಳು ಕೊಂಚ ದೇವರು-ದೇವಸ್ಥಾನ ಅಂತ ಓಡಾಡುತ್ತಾಳೆ. ಆದರೆ ಅವಳು ಜಾತಿ-ಗೀತಿ ಅಂತ ಹಚ್ಚಿಕೊಂಡವಳಲ್ಲ. ಅದನ್ನು ಬಿಟ್ಟ ನಂತರವೇ ಅಲ್ವಾ ಅವಳು ಇಂಟರ್‌ಕ್ಯಾಸ್ಟ್ ಮದುವೆ ಆದದ್ದು. ಎರಡನೆಯವಳು ಬಾನಿ, `ಸಂಕಟ ಬಂದಾಗ ಮಿಸ್ಟರ್ ವೆಂಕಟ್' ಅನ್ನೋ ಥರದವಳು. ಅವರಿಬ್ಬರೂ ಜಾತಿ ಬಿಟ್ಟೇ ಮದುವೆಯಾದರು. ಈಗ ಕರ್ಣ: ಅವನೂ ಜಾತ್ಯಂತರ ವಿವಾಹವಾಗುತ್ತಿದ್ದಾನೆ. ಅವನದು ದೇವೆಗೌಡರೆಡೆಗಿನ ಒಲವು(!). ಒಂದು ಸಂತಸದ ಸಂಗತಿಯೆಂದರೆ ವರ್ಷ ತೊಡಕಿನಂಥ ಹಬ್ಬಗಳಾದಾಗ ನನಗೆ ಭರ್ಜರಿ ಭೋಜನ: ಮೂರೂ ಮನೆಗಳಿಂದ ಬರುತ್ತದೆ. ಥ್ರಿಬಲ್ ಧಮಾಕಾ. ಜಾತಿಗಳನ್ನ ನಾವಾಗೇ ಬಿಡಬೇಕು. ಅವು ತಂತಾನೇ ಹೋಗುವುದಿಲ್ಲ. `ಮೇಲ್ಜಾತಿ'ಯೂ ಅಷ್ಟೆ. `ಕೆಳಜಾತಿ'ಯೂ ಅಷ್ಟೇ. ಹ್ಞಾಂ, `ಮೀಡಿಯಾ ಮಸಾಲಾ' ಅಂಕಣವನ್ನ ಪ್ರತೀವಾರ ಬರೆಯುತ್ತಿರಲಿಲ್ಲ ನಾನು. ಮೀಡಿಯಾ ಪ್ರಪಂಚದಲ್ಲಿ ನಾವಿರೋದೇ ಮೂರೂ ಮುಕ್ಕಾಲು ಜನ. ಪ್ರತೀವಾರ ಮಸಾಲೆ ಅರೆಯೋದು ಹೇಗೆ. ಕ್ರಮೇಣ ಅಂಕಣವನ್ನೇ drop ಮಾಡಿದೆ. ಅದನ್ನು ಮುಂದು ವರೆಸುವುದೂ ಕಷ್ಟವಿತ್ತು. ಅದು ಯಾರೇ ಆಗಲಿ, ಪತ್ರಕರ್ತನೆಂಬುವವನು ನಿರಂತರವಾಗಿ ಟೆನ್ಷನ್‌ನಲ್ಲಿರುತ್ತಾನೆ. ಕೆಲ ಬಾರಿ stress ವಿಪರೀತವಾಗಿರುತ್ತದೆ. ಅಷ್ಟು ಸಾಕು, ಆರೋಗ್ಯ ನಿಧಾನವಾಗಿ ಹಳ್ಳ ಹಿಡಿಯುತ್ತದೆ. ಅದು ಸಾಲದೆಂಬಂತೆ ಜಗಳಗಳನ್ನೂ ಗಂಭೀರವಾಗಿ ಮನಸ್ಸಿಗೆ ಹಚ್ಚಿಕೊಂಡರೆ, ಕಥೆ ಮುಗಿಯಿತು. ಜಗಳವೆಂಬುದು ವಿಪರೀತ energy ಬೇಡುತ್ತದೆ. ಸಹನೆ ಬೇಕು. ಧಾರಣಾ ಶಕ್ತಿಯೂ ಬೇಕು. ನಾಳೆ ಅವನು ಮತ್ತೇನು ಬರೆಯುತ್ತಾನೋ ಅಂತ tense ಆಗಬೇಕು.

`ನಾನು ನೋಡಿ, ಹೆಂಗೆ ಕೊಟ್ಟೆ' ಅಂತ ಬೀಗುವುದರೊಳಗಾಗಿ ಮತ್ತೇನೋ ಸಂಭವಿಸುತ್ತದೆ. ಹೋಗಲಿ, ಆ ಜಗಳದಿಂದ ಲಾಭವಿದೆಯಾ? ತೃಪ್ತಿ ಇದೆಯಾ? ನಮ್ಮ knowledge ಹೆಚ್ಚುತ್ತದಾ? ಒಳ್ಳೆಯವರು ಅನ್ನಿಸಿಕೊಳ್ತೀವಾ? ಒಂದು thrill ಇದೆಯಾ? Social value ಬೆಳೀತದಾ? ದುಡ್ಡು-ಕಾಸು? ಯಾವ ಸುಡುಗಾಡೂ ಇಲ್ಲ. ಇದೇ ಭಟ್ಟ ತನ್ನ ಕೈಲಿದ್ದ ಟೀವಿಯಲ್ಲಿ ನನ್ನ ವಿರುದ್ಧ ಅಭಿಯಾನವನ್ನೇ ನಡೆಸಿದ. ನಾನು ದುಷ್ಟ, ಕಳ್ಳ, ಸ್ತ್ರೀ ಮೋಹಿ, ವಿಕೃತ ಅಂತೆಲ್ಲ ಅವರಿವರಿಂದ ಮಾತಾಡಿಸಿದ. ಜೊತೆಗೆ `ರವಿ ಬೆಳಗೆರೆಯಿಂದ ಲೈಂಗಿಕ ತೊಂದರೆಗೆ ಒಳಗಾಗಿದ್ದವರು ಬಂದು ನಮ್ಮನ್ನು ಕಾಣಿ' ಅಂತಲೂ ಬೊಂಬಡ ಹೊಡೆದ. ಯಾವ ಲೈಂಗಿಕ ತೊಂದರೆ? ಉಳಿದವರನ್ನು ಬಿಡಿ, ಲೈಂಗಿಕವಾಗಿ ಅವನನ್ನೂ (ಆ ಬಗ್ಗೆ ಈಗಲೂ ಮಾತಿದೆ. ಭಟ್ಟನಿಗೆ ಅದೂ ಉಂಟು ಅಂತಾರೆ) ನಾನು ಹಿಂಸಿಸಿರಲಿಲ್ಲ. ಅವನ ಪುಗಸೆಟ್ಟ ಅಭಿಯಾನದಿಂದ ಏನಾಯ್ತು? `ಅದೆಲ್ಲ ನಿಜವೇನ್ರೀ' ಅಂತ ನನ್ನ ಹೆಂಡತಿಯೂ ಕೇಳಲಿಲ್ಲ. ಸಮಾಜದಲ್ಲಿ ನನ್ನ ಗೌರವ ಒಂದು ಗುಲ ಗಂಜಿಯಷ್ಟೂ ಕಡಿಮೆಯಾಗಲಿಲ್ಲ. ಪತ್ರಿಕೆಯ ಪ್ರಸಾರ ಸಂಖ್ಯೆಗೆ ಹೊಡೆತ ಬೀಳಲಿಲ್ಲ. ಕಡೇಪಕ್ಷ, ನನಗಾದರೂ ನನ್ನ ಬಗ್ಗೆ ಬೇಸರವಾಗಬೇಕು. ನಾಚಿಕೆ ಯಾಗಬೇಕು. ಅದ್ಯಾವ ಸುಡುಗಾಡೂ ಆಗಲಿಲ್ಲ. ಹಾಗೆಲ್ಲ ಆಗುವುದಿಲ್ಲ ಅಂತ ಅವನಿಗೆ ಗೊತ್ತಿತ್ತು. ವರ್ಷಗಟ್ಟಲೆ ಜೊತೆಗಿದ್ದವನು. ನನ್ನ ಮೊಳಕೈ ಕೆಳಗಿನ ನೀರು ಕುಡಿದವನು. ಅದೆಲ್ಲ ಕದನದ ಮಧ್ಯೆ ಒಂದು ಅಘೋಷಿತ compromise ಕೂಡ ಆಗಿತ್ತು. ಸುಮ್ಮನಿರಬಾರದಾ? ಅದನ್ನೆಲ್ಲ ಪಕ್ಕಕಿಟ್ಟು `ಅಭಿಯಾನ' ನಡೆಸಿದ. ನಾನು ಹೆದರಿ, ಹೌಹಾರಿ, ಹೋಗಿ ತನ್ನ ಕಾಲಿಗೆ ಬೀಳುತ್ತೇನೆ ಅಂದುಕೊಂಡ. ಇಬ್ಬರಿಗೂ ಪರಿಚಯವಿರುವ ಕೆಲವರು `ಅವನಿಗೆ ನಾವು ಹೇಳ್ತೀವಿ' ಅಂದರು. ನಾನು ಬೇಡ ಅಂದೆ. ಮುಂದೆ ಕಾಲ ಚಕ್ರ ತಿರುಗಿತು. ವಕೀಲರ huge ಆದ ಸಮೂಹವನ್ನೇ ಭಟ್ಟ ಇದಿರು ಹಾಕಿ ಕೊಂಡ. ಅದು ಬಹಳ ಕೆಟ್ಟ ಪರಿಣಾಮ ಬೀರುತ್ತೆ ಅಂತ ಅವನಿಗೆ ಗೊತ್ತೇ ಇರಲಿಲ್ಲ. ಜರ್ಬಾಗಿ ಡ್ರೆಸ್ ಮಾಡಿಕೊಂಡು ದೀಪಾವಳಿಯ ಅಳೀಮಯ್ಯ ಹೋದಂತೆ ಕೋರ್ಟಿಗೆ ಹೋದ: ಇನ್ಯಾವುದೋ ಕೇಸಿಗಾಗಿ. ಅಲ್ಲಿ ವಕೀಲರು ಅಮರಿದರು. ಈಗಲೂ ನಂಗೆ ನೆನಪಿದೆ: ಯಾವ ಪರಿ ಹಿಡಕೊಂಡು ಗುಮಿಗುಮಿಗುಮಿ ಅಂತ ವದ್ದರೆಂದರೆ, ಪೊಲೀಸರು ಬಂದು ಬಿಡಿಸಿಕೊಂಡು ಹೋಗೋ ಹೊತ್ತಿಗೆ ಇವನು ನಾಯಿ-ನರಿಯಂತಾಗಿ ಹೋಗಿದ್ದ. ನಿಜಕ್ಕೂ ನನಗೆ ಬೇಸರವಾಗಿತ್ತು. ಅದರಲ್ಲೂ, ಕೆರಳಿದ ವಕೀಲರು ಹೊರಗೆ ನಿಂತಿದ್ದ ನನ್ನನ್ನು ಕರೆದೂ ಕರೆದು ಅವನನ್ನು ನನ್ನೆದುರಿಗೆವದ್ದರು. ಇದರ ಬಗ್ಗೆ ಮೊದ ಮೊದಲು ನಗು ಬರುತ್ತಿತ್ತು. ನಾನು ಅದನ್ನೂ ತಲೆ ಕೊಡವಿ ಬಿಟ್ಟುಬಿಟ್ಟೆ.

ಈಗಲೂ ನನಗೆ `ಮೀಡಿಯಾ ಮಸಾಲಾ'ಕ್ಕೆ ಆಗೀಗ ಬರೆಯಲು ಸಾಧ್ಯವಿದೆ. ಆದರೆ ಒಬ್ಬ ಪತ್ರಕರ್ತನ ಮನೋಸ್ಥಿತಿ ನನ್ನ ಕಣ್ಣೆದುರಿಗೆ ಬರುತ್ತೆ. ಆ ಪರಿ ಟೆನ್ಷನ್ ಅನುಭವಿಸುವ, ಹೊತ್ತಿನ ಪರಿವೆಯೇ ಇಲ್ಲದೆ ದುಡಿಯುವ, ಕೆಲಬಾರಿ ಕೈಲಿ ಹಣವೂ ಇಲ್ಲದಂತಾಗುವ ಅವನ ಪರಿಸ್ಥಿತಿ ನನಗಲ್ಲದೆ ಮತ್ಯಾರಿಗೆ ಅರ್ಥವಾದೀತು? I ignore some persons. ತೀರ ಜಗಜ್ಜಾಹೀರಾಗಿ ಲಜ್ಜೆ ಬಿಟ್ಟು ನಿಂತವರಿಗೆ, ಪ್ರಸಂಗವಿದ್ದಾಗ ಎರಡು ತಟ್ಟಿ ಮರೆತು ಬಿಡುತ್ತೇನೆ. ಅಷ್ಟೇ ಹೊರತು, ನಂಜು ಭರಿಸಲಾರೆ. ಇದೆಲ್ಲದರ ನಡುವೆಯೇ ಮೊನ್ನೆ ಭಟ್ಟನನ್ನು ಅದೇ ಟೀವಿಯವರು ಹೊರಕ್ಕೆ ಬಿಸಾಡಿದರಲ್ಲ? `ಲೈಂಗಿಕವಾಗಿ ಶೋಷಣೆ ಆಯಿತೇ?' ಅನ್ನ ಬೇಕೆನ್ನಿಸಿತು: Shit. ತಲೆ ಕೊಡವಿಬಿಟ್ಟೆ.

-ನಿಮ್ಮವನು ಆರ್.ಬಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 25 May, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books