Ravi Belagere
Welcome to my website
ನಿಮ್ಮದು ಎಂಥ ಮ್ಯಾರೇಜು? ಶುದ್ಧ ಅರೇಂಜ್‌ಡಾ? ನೀವೇ ಮಾಡಿಕೊಂಡ ಲವ್ ಮ್ಯಾರೇಜಾ? live in relationshipನಂತಹ  ಗಾಂಧರ್ವ ವಿವಾಹನಾ? ‘ಲವ್ ಕಮ್ ಅರೇಂಜ್ಡ್’ ಮದುವೆಯಾ? ಅಂತರ್‌ಜಾತೀಯ ವಿವಾಹವಾ? ಅಂತರ್‌ಧರ್ಮೀಯ ವಿವಾಹವಾ? (Request :ಜಾತಿಗಳ ಪುಸ್ತಾಪ ಮಾಡಬೇಡಿ) Love, run and marry ಎಂಬಂತೆ ಮನೆಗಳನ್ನು ಬಿಟ್ಟು ಹೋಗಿ ಆದ ಮದುವೆಯಾ? ಎಂಥ ಮದುವೆಯಾಗಿದ್ದರೂ ಅಡ್ಡಿಯಿಲ್ಲ. ಅದಕ್ಕೆ ಗೌರವವಿದೆ. ಒಂದು inland letterನಷ್ಟು ಬರವಣಿಗೆಯನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆಯಿರಿ. ಜೊತೆಗೆ ಇಬ್ಬರೂ ಇರುವ ಫೊಟೋ ಕಳಿಸಿ. mail ಮಾಡೋದಾದರೆ [email protected]ಗೆ ಮಾಡಿ.
Home About Us Gallery Books Feedback Prarthana Contact Us

Buy Ravi Belagere Books online

ನನ್ನ ಪತ್ರಿಕೆಯ ಆಫೀಸೆಂದರೆ ಅದು ಎಂಥವರನ್ನೂ ರೆಡಿ ಮಾಡಿ ಕಳಿಸುವ ಗ್ಯಾರೇಜಾ?

“Raji, I will get you one C.B." ಅಂತ ಫೇಸ್‌ಬುಕ್‌ನಲ್ಲಿ ಬರೆದೆ. ನಿವೇದಿತಾಳ ನಾದಿನಿ ರಾಜಿಯ ಫೊಟೋಕ್ಕೆ ನಾನು ಹಾಕಿದ್ದ ಪ್ರತಿಕ್ರಿಯೆ ಅದು. ನಾವೆಲ್ಲರೂ ರಾಜಿಯನ್ನು ಒಂದು ಮಗು ಅಂತಲೇ treat ಮಾಡುತ್ತೇವೆ. ಅವಳಿಗೀಗ ಮೂವತ್ತೈದಿರಬೇಕು ವರ್ಷ. ತೀರ ಬುದ್ಧಿ ಬೆಳೆದವಳಲ್ಲ ಅಥವಾ ಮನೋವಿಕಲಳು ಅನ್ನಲಾಗುವುದಿಲ್ಲ. ಏಕೆಂದರೆ, ಕೆಲವೊಮ್ಮೆ ಇದ್ದಕ್ಕಿದ್ದಂತೆ ದೊಡ್ಡ ಹುಡುಗಿಯಂತಾಗಿ ಬಿಡುತ್ತಾಳೆ. “ತಿಳಿಯದೆ ಏನು, ಅವಳಿಗೆ ಎಲ್ಲ ತಿಳಿಯುತ್ತೆ" ಅನ್ನಿಸಬೇಕು: ಹಾಗೆ ವರ್ತಿಸತೊಡಗುತ್ತಾಳೆ. ನಿವೇದಿತಾಳ ಗಂಡ ಕುಮಾರ್. ಅವರ ಒಬ್ಬ ಅಕ್ಕ ಅಮೆರಿಕದಲ್ಲಿದ್ದಾರೆ. ಇನ್ನೊಬ್ಬ ಅಕ್ಕ ತೀರಿಹೋಗಿದ್ದಾರೆ. ಅವರ ಎರಡೂ ಹೆಣ್ಣುಮಕ್ಕಳನ್ನೂ ಕುಮಾರ್ ನೋಡಿಕೊಂಡರು. ಇಬ್ಬರಿಗೂ ಮದುವೆ ಮಾಡಿದರು. ಅವರ ಮದುವೆ ಟೈಮಿನಲ್ಲಿ ನಮಗೆ ರಾಜಿಯ ಬೇರೆಯದೇ ಮನಸ್ಥಿತಿ ಅರ್ಥವಾಯಿತು.

“ನಂಗೆ ಸೀರೆ ತರಬೇಕು. ಚಿನ್ನ ಹಾಕಬೇಕು. ಹುಡುಗ ಎಲ್ಲಿ?" ಅನ್ನತೊಡಗಿದಳು ರಾಜಿ. We were surprised. ಮದುವೆಯ ದಿನ ಹತ್ತಿರಾದಂತೆಲ್ಲ ರಾಜಿಯ ಅಸಹನೆ ಹೆಚ್ಚಾಯಿತು. “ನಂಗೂ ಮದುವೆ ಮಾಡಿ" ಅನ್ನತೊಡಗಿದಳು. ಆ ಬಗ್ಗೆ ನಾನು-ನಿವಿ ಮಾತನಾಡಿಕೊಳ್ಳುತ್ತಿದ್ದೆವು. ತೀರ ವಯಸ್ಸಿಗೆ ಬಂದ ಹೆಣ್ಣು ಮಗಳಂತೆ ವರ್ತಿಸುತ್ತಿದ್ದಳಲ್ಲ? ಅದರ ಮರುದಿನವೇ ನನಗೆ ಈ ಬಣ್ಣದ ಟೂತ್‌ಪೇಸ್ಟ್ ಬೇಡ ಅಂತ ಹಟ ಮಾಡತೊಡಗಿದಳು. ನಿವೇದಿತಾ confuse ಆಗುತ್ತಿದ್ದುದೇ ಆವಾಗ. “ಇವಳನ್ನ judge ಮಾಡೋದು ಹೇಗೆ ರವೀ?" ಅನ್ನುತ್ತಿದ್ದಳು. ಆ ಕಡೆ ಏನೂ ಅರಿಯದ ಮಗುವಲ್ಲ. ಈ ಕಡೆ ಎಲ್ಲವೂ ತಿಳಿಯುವ adult ಅಲ್ಲ. ಸಂತೋಷದ ವಿಷಯವೆಂದರೆ, ರಾಜಿ ವಿಪರೀತ ತೊಂದರೆ ಕೊಡುವ ಮಗು ಅಲ್ಲ. ಸರಿ ಸುಮಾರು ಮೂವತ್ತೈದಿರಬಹುದು ರಾಜಿಯ ವಯಸ್ಸು. ಅದಕ್ಕೆ ಅರ್ಧ ವಯಸ್ಸಿನ ಮಿದುಳೂ ಬೆಳೆದಿಲ್ಲ. ಕೊಂಚ ಸ್ಥೂಲಕಾಯ. ಅದೇನು ಕಾರಣವೋ ಗೊತ್ತಿಲ್ಲ: ಅವಳಿಗೆ ನನ್ನನ್ನು ಕಂಡರೆ ಖುಷಿಯಾಗುತ್ತೆ. ಆಫೀಸಿಗೆ ಬಂದವಳೇ “Good Morning Boss" ಅನ್ನುತ್ತಾಳೆ. ಕಾಲು ಜೋಡಿಸಿ ನಿಂತು ಸೆಲ್ಯೂಟ್ ಹೊಡೆಯುತ್ತಾಳೆ. ನಾನು ಯಾವುದೇ moodನಲ್ಲಿರಲಿ ಅವಳನ್ನು ಅಕ್ಕರೆಯಿಂದ ನೋಡಿ, ಮಾತಾಡಿಸಿ ಕಳಿಸುತ್ತೇನೆ.

ಹಿಂದೊಮ್ಮೆ ಕುಮಾರ್ ಅಂದಿದ್ದರು: “ಸರ್ ರಾಜಿ ಮೊದಲು ಚೆನ್ನಾಗೇ ಇದ್ದಳು. ಅವಳು mature ಆದಾಗ ಏನಾಯಿತೋ ಗೊತ್ತಿಲ್ಲ. ಆಗಿನಿಂದಲೇ ಅವಳ mental growth ನಿಂತು ಹೋಯಿತು. ಈಗಲೇ ನಾನವಳನ್ನ ಕೊಂಚ ಡಿಫರೆಂಟ್ ಆಗಿ ನೋಡ್ತಾ ಇರೋದು" ಅಂದಿದ್ದರು.

ಅದು because of Niveditha ಎಂಬುದು ಅರ್ಥವಾಗುವ ಸಂಗತಿ. ನಿವಿ ಮತ್ತು ಕುಮಾರ್ ಮದುವೆ, ಲವ್ ಮ್ಯಾರೇಜ್ ಅಲ್ಲ. ಅದು arranged marriage ಕೂಡ ಅಲ್ಲ. ಅವರು social media ದಲ್ಲಿ ಸಿಕ್ಕು ಮದುವೆಯಾದವರು. ಕುಮಾರ್ ಆಗ ಹೈದರಾಬಾದ್‌ನಲ್ಲಿದ್ದರು. ಅವರೇ ಮೊದಲು ನಿವಿಯನ್ನ ನೋಡಲಿಕ್ಕೆ ಬೆಂಗಳೂರಿಗೆ ಬಂದಿದ್ದರು. ಆಗ ನನ್ನ ಆಫೀಸಿಗೂ ಬಂದರು. ‘Nice man to know' ಅನ್ನಿಸಿತ್ತು. ಮುಂದೆ ಒಮ್ಮೆ ನಾನು-ನಿವೇದಿತಾ ಒಟ್ಟಿಗೇ ಹೈದರಾಬಾದ್‌ಗೆ ಹೋಗಿ ಕುಮಾರ್‌ನ ಭೇಟಿಯಾಗಿದ್ದೆವು. ಅವರ ಮನೆ, ನೌಕರಿ, social status ಹಾಳು-ಮೂಳು ನೋಡಬೇಕಲ್ಲ? ಹೆಣ್ಣು ಕೊಡೋರಿಗೆ ಜವಾಬ್ದಾರಿ ಇರುತ್ತಲ್ಲವಾ? ಹೋಗಿದ್ದೆ. ಕುಮಾರ್ ನಿಜಕ್ಕೂ ತುಂಬ ನೆಮ್ಮದಿವಂತ ವ್ಯಕ್ತಿ.

ಅವರು ತಮ್ಮ ಕುರಿತಾದ ಯಾವುದನ್ನೂ ಮುಚ್ಚಿಡಲಿಲ್ಲ. ಹಾಗೆ ಹೋದಾಗಲೇ ನಾನು ಹೈದರಾಬಾದ್‌ನ ಮನೆಯಲ್ಲಿ ರಾಜಿಯನ್ನು ನೋಡಿದ್ದು. ‘ಇವಳನ್ನ ನಿವಿ ಹೇಗಾದರೂ manage ಮಾಡುತ್ತಾಳೋ?’ ಅಂದುಕೊಂಡಿದ್ದೆ. ಅವಳನ್ನ ನಿವಿ ‘manage’ ಮಾಡಲಿಲ್ಲ. ನೂರಕ್ಕೆ ನೂರು adopt ಮಾಡಿಕೊಂಡುಬಿಟ್ಟಳು. ಅಂಥ ಮಾತೃ ಹೃದಯಿ ನಿವೇದಿತಾ. “ರವೀ, ನಂಗೆ ಬೇರೆ ಮಕ್ಕಳ್ಯಾಕೆ ಬೇಕು? ರಾಜೀನೇ ನನ್ನ ಮಗು" ಅಂದದ್ದು ಎಷ್ಟು ಸಲವೋ?

ಈಗಂತೂ ನಿವಿ ಕೇವಲ ರಾಜಿಗಾಗಿಯೇ ಬೆಂಗಳೂರಿನಲ್ಲಿದ್ದಾಳೆ. Of course ಅವಳು ಆಂಧ್ರದ ಆ ಗೂಡೂರಿನಲ್ಲಿ ಬಿಸಿಲು ನುಂಗುತ್ತಾ ಬದುಕೋದು ಸಾಧ್ಯವೇ ಇರಲಿಲ್ಲ. ಗೂಡೂರು ಎಂಬುದು ಆಂಧ್ರ ದೇಶದ ತುತ್ತುದಿಯಲ್ಲಿದೆ. ಶ್ರೀಹರಿಕೋಟದ ಪಕ್ಕದಲ್ಲಿ. ಇನ್ನೊಂದೆಡೆ ಮದರಾಸಿದೆ. ಬಿಸಿಲು ಸಾಲದು ಅಂತ ಮದರಾಸಿನ ಭಯಾನಕ ಸೆಖೆ. ದಿನವಿಡೀ ಕರೆಂಟ್ ಇರುವುದಿಲ್ಲ. “ನಾನು ಇಲ್ಲೇ ಇದ್ದರೆ ರೊಟ್ಟಿ ಸೀದು ಹೋದ ಹಾಗೆ ಸೀದು ಹೋಗುತ್ತೇನೆ!" ಅಂದಿದ್ದಳು ನಿವಿ. ಅದಲ್ಲದೆ ಅವಳಿಗೆ ಬೆಂಗಳೂರಿನಲ್ಲಿರಲು ಕಾರಣವೂ
ಇತ್ತು. ಅದು ರಾಜಿಯ ಕುರಿತಾದದ್ದು. ಇಲ್ಲಿ ರಾಜಿ ಒಂದು ವಿಶೇಷ schoolಗೆ ಹೋಗುತ್ತಾಳೆ. ಅದು school for differently abled school. ಅದು ಬಿಟ್ಟರೆ ಇಡೀ ದಕ್ಷಿಣ ಭಾರತದಲ್ಲೇ ಆ ತರಹದ ಇನ್ನೊಂದು ಶಾಲೆ ಇಲ್ಲ. ಹೀಗಾಗಿ ರಾಜಿಯನ್ನು ಆ ಶಾಲೆಗೇ ಕಳಿಸಬೇಕು. ಕಳಿಸದೆ ಇದ್ದರೆ ರಾಜಿಯ ವೈಕಲ್ಯ ಹೆಚ್ಚಾಗಿ ಬಿಡುತ್ತದೆ. ಅವಳು ಒಬ್ಬಳೇ ಇರಲಾರಳು. ಅವಳಿಗೆ ಇಲ್ಲಿ ಎಲ್ಲವೂ adjust ಆಗುವ ತನಕ ಜೊತೆಯಲ್ಲಿ ನಿವಿ ಇರಲೇಬೇಕು. ಹೀಗಿದೆ ಪರಿಸ್ಥಿತಿ.

ಮೊನ್ನೆ ನಿವಿ ಫೇಸ್‌ಬುಕ್‌ನಲ್ಲಿ ತನ್ನ ಮತ್ತು ರಾಜಿಯ ಫೊಟೋ ಹಾಕಿದ್ದಳು. ಅದಕ್ಕೇ ನಾನು react ಮಾಡಿ, “I will give you one C.B" ಅಂದದ್ದು. boss, ನೀವದನ್ನು ಮರೆತೇ ಇಲ್ವಾ? ನಮ್ಮ code word ಅದು: ‘ಕಾಕಾ’ ಇಟ್ಟ ಹೆಸರು ಅಂತ ನಿವಿ ಉತ್ತರಿಸಿದ್ದಳು.

ಅವಳಿಗೆ ನಾನು ಹೇಳಬೇಕಾದದ್ದೇ ಅದನ್ನ. ಅವನ ಹೆಸರು ನಾನು ಮರೆತೇ ಹೋಗಿದ್ದೆ. ನಮಗೆಲ್ಲ ಅವನು ‘ಕಾಕಾ’. ಮೂಲ ಹೆಸರು ಸಂತೋಷ್ ಸಬಾಡೆ. ಅವನು ಹೊಸಪೇಟೆಯ ಅಪ್ಪಟ ಮಾಧ್ವ ಬ್ರಾಹ್ಮಣ. ಅಲ್ಲದೆ ನನ್ನ ಬಾಲ್ಯ ಸ್ನೇಹಿತ ಕೃಷ್ಣ ಪ್ರಸಾದ್‌ಗೆ ವರಸೆಯಲ್ಲಿ ಅಳಿಯ. ನನ್ನನ್ನು ಕೂಡ ಅವನು ‘ಮಾಮಾ’ ಅಂತಲೇ ಕರೆ ಯೋದು. Actually ಅವನನ್ನು ನಾನು ನೋಡಿರಲಿಲ್ಲ. ಒಂದು ರಾತ್ರಿ ಸುಮಾರು ಹತ್ತು ಗಂಟೆಗೆ ಒಬ್ಬ ಹೆಣ್ಣು ಮಗಳು ತನ್ನಿಬ್ಬರು ಮಕ್ಕಳನ್ನು ಕರೆದುಕೊಂಡು ನನ್ನ ಆಫೀಸಿಗೆ ಬಂದಳು. “ವಾಪಸ್ ಹೋಗು ಅನ್ನಬ್ಯಾಡ್ರಿ ಅಪ್ಪಾಜೀ... ನನ್ನ ಗಂಡ ನನ್ನನ್ನ ಕೊಂದೇ ಬಿಡ್ತಾನೆ" ಅಂತ ಅಳಲಾರಂಭಿಸಿದಳು. ತೀರ ಈ ವೇಳೆಯಲ್ಲಿ ಮಕ್ಕಳ ಸಮೇತ ಬಂದಿದ್ದಾಳೆ ಅಂದರೆ ಅದಿನ್ನೆಂಥ ಕಷ್ಟವೋ ಅಂದುಕೊಂಡು ನಮ್ಮ ಸಿಬ್ಬಂದಿಯ ಹುಡುಗರಿಗೆ “ಅವನನ್ನ್ನ ಎತ್ತಿ ಜೀಪಿಗೆ ಹಾಕ್ಕೊಂಡು ಕರಕೊಂಡು ಬನ್ರೋ" ಅಂದೆ. ಮನೆ ಹತ್ತಿರದಲ್ಲೇ ಇತ್ತು. ಅವನನ್ನು ಕೊಂಚ ಹತ್ತಿಗೆ ನಮ್ಮವರು ತಂದೂ ಬಿಟ್ಟರು.

ಭಯಾನಕ ಆಳೇನಲ್ಲ. ಹೊಸ ಪೇಟೆಯ ಬ್ರಾಹ್ಮಣ. ಅವನೇನೂ ತುಂಬ ಕುಡಿದಿರಲಿಲ್ಲ ಅವತ್ತು. ಕುಡಿದವರನ್ನು handle ಮಾಡುವಾಗ ಕೊಂಚ ಎಚ್ಚರಿಕೆಯಿಂದಿರಬೇಕು. ಅಕಸ್ಮಾತ್ ಆಯಕ್ಕೆ ಪೆಟ್ಟುಬಿದ್ದರೆ ಸತ್ತೇ ಹೋಗುತ್ತಾರೆ. ಸುಖಾಸುಮ್ಮನೆ ಕುಳಿತಲ್ಲೇ ತಲೆಗೆ ಮರ್ಡರ್ ಕೇಸು. ಹಾಗಂದುಕೊಂಡೇ ಶುರು ಮಾಡಿದೆ: ತೋಂತಥಝಣ! ಅದಕ್ಕೇ ಅಂತಲೇ ಆಗೊಂದು ರೂಲ್ ದೊಣ್ಣೆ ತರಹದ್ದನ್ನು ಇಟ್ಟುಕೊಂಡಿದ್ದೆ. ಕೆಲವು ಸಲ ದೊಣ್ಣೆ ಬೇಕಾಗುತ್ತದೆ: ಅದರಲ್ಲೂ ನಮ್ಮ ಶಾಲೆಯ ಹೆಣ್ಣು ಮಕ್ಕಳನ್ನು ಕಾಡುವವರು, misguide ಮಾಡುವ ವರು-ಮುಂತಾದವರನ್ನು ದಾರಿಗೆ ತರಲಿಕ್ಕೆ. ಹಾಗೆಯೇ ಈ ಹೊಸಪೇಟೆಯ ಒಂಟೆಲುಬಿನ ಬ್ರಾಹ್ಮಣನಿಗೆ ಸರಿಯಾಗಿಯೇ ನಾಲ್ಕು ಪೆಟ್ಟು ಕೊಟ್ಟೆ. ಅವನು ತೆಪ್ಪಗೆ ಒದೆ ತಿಂದ. ತನ್ನದೇ ತಪ್ಪೇನೋ ಎಂಬಂತೆ ಬಡಿಸಿಕೊಂಡ. ಕಡೆಗೆ “ಮಾಮಾ, ನೀನು ದೊಡ್ಡೋನು, ಇನ್ನೂ ನಾಲ್ಕು ಬಡಿ. ಆದರೆ ಈಕಿ ಎಂಥೋಳು ಅಂತ ನಿನಗೆ ಬಿಡುವಿದ್ದಾಗ ವಿಚಾರಿಸಿಕೋ!" ಅಂದವನು ಎರಡೂ ಕೈ ಕಟ್ಟಿಕೊಂಡು, ಒದೆ ತಿನ್ನಲು ಬೆನ್ನು ಕೊಟ್ಟು ನಿಂತುಬಿಟ್ಟ. ಆಯ್ತು, ಹೊಡೆಯುವುದಾದರೂ ಎಷ್ಟು ಹೊತ್ತು ಅಂತ ಹೊಡೆಯೋದು? ಕಡೆಗೆ ಗಂಡ-ಹೆಂಡರಿಬ್ಬರಿಗೂ “ನೀವು ಇಬ್ರೂ ಮಕ್ಕಳ ಸಮೇತ ಇಲ್ಲೇ ಆಫೀಸಿನಲ್ಲಿ ಮಲಗಿರಿ" ಅಂಥ ಅಂದು ನನ್ನ ಲೈಬ್ರರಿಯಲ್ಲಿ ಜಾಗ ಬಿಟ್ಟುಕೊಟ್ಟೆ. ಆಯ್ತಾ? ಮಲಗಿದವರು ಬೆಳಿಗ್ಗೆ ಎದ್ದು ಮಾತನಾಡಬೇಕಾ? ಆ ಹೆಣ್ಣು ಮಗಳೂ ಇಲ್ಲ, ಮಕ್ಕಳೂ ಇಲ್ಲ. ಬಹುಶಃ ಬೆಳಿಗ್ಗೆ ಬೇಗ ಎದ್ದು ಹೋಗಿರಬೇಕು. ನೋಡಿದರೆ ಈ ಬಡಕಲ ಅಲ್ಲಿ ಬಾಗಿಲ ಬಳಿ ಕುಳಿತೇ ಇದ್ದ. “ಯಾಕೋ? ರಾತ್ರಿ ತಿಂದದ್ದು ಅರಗಲಿಲ್ಲೇನು?" ಅಂದೆ. ಉತ್ತರ ಕೊಟ್ಟನಲ್ಲ?

“ಇಲ್ಲ ಮಾಮಾ, ನೀನೂ ಇನ್ನೂ ಹೊಡಿ. ಕೊಲ್ತೀಯಾ? ಕೊಂದೇ ಬಿಡು. ನಿನ್ನ ಎಂಜಲಾ ತಿಂದು ನಿನ್ನ ನೆರಳಾಗೇ ಬದುಕಿರ್ತೀನಿ. ನಾನು ಎಲ್ಲಿಗೂ ಹೋಗೋನಲ್ಲ" ಎಂದು ಮೊಂಡಿಗೆ ಬಿದ್ದು ಕುಳಿತೇ ಬಿಟ್ಟ. ಬೆಳಿಗ್ಗೆ ಮತ್ತೆ ಎದ್ದು ಹೋಗಿ ಕುಡಿದು ಬಂದಿದ್ದಾನಾ ಅಂತ ಕೇಳಿದೆ. “ಅವರು ಹೊರಕ್ಕೆ ಬಂದಿಲ್ಲ: ಆಫೀಸಿನ ಮೆಟ್ಟಿಲೂ ಇಳಿದಿಲ್ಲ" ಅಂದರು ಸೆಕ್ಯೂರಿಟಿಯವರು. ಬೆಳ್ಳ ಬೆಳಿಗ್ಗೆ ನನಗೆ ನೂರು ಕೆಲಸ. ಅವನನ್ನೆಲ್ಲಿಟ್ಟು ಅಳೀತನ ನಡೆಸಲಿ? ‘ಬಿದ್ದಿರು’ ಅಂದುಕೊಂಡು ಸುಮ್ಮನಾದೆ. ಕೆಲವೇ ದಿನಗಳಲ್ಲಿ ಬಂತಲ್ಲ ಪ್ರೋಗ್ರೆಸ್ ರಿಪೋರ್ಟು! ಸಂತೋಷ್ ಸಬಾಡೆ ಅಲಿಯಾಸ್ ಕಾಕಾ, ಕುಡೀತಾನೆ: ಹೌದು. ತಂಬಾಕು ತಿಂತಾನೆ. ಸಿಗರೇಟೂ ಉಂಟು. ಆದರೆ ಇದ್ಯಾವುದನ್ನೂ ಮಾಡದೆಯೇ, ನನ್ನ ತನಕ ಬಂದ ಇವನ ಹೆಂಡತಿಯ ಅಬ್ಬರವಿದೆಯಲ್ಲ? ಅದು ಭಯಾನಕ. ಅವಳು ಹೇಳಿದಷ್ಟೇನೂ ಇವನು ನೀಚನಲ್ಲ. ಅವಳು ಖತರ್‌ನಾಕ್ ಶೈಲಿಯ ಹೆಂಗಸು. ನಾವು ಅವಳಿಗೆ ‘ಅಯ್ಯೋ ಪಾಪ’ ಅನ್ನೋದಕ್ಕಿಂತ ಇವನಿಗೇ ಅಂದರೆ ಬೆಟರು! ಸರಿ, ಅವಳನ್ನು ಪೂರ್ತಿ ದೂರವಿರಿಸಿದೆ. ತಮಾಷೆಯೆಂದರೆ, ಕಾಕಾ ಹೊರಳಿ ಹೋಗಲೇ ಇಲ್ಲ. ಬಹುಶಃ ನನಗೆ ಬರೋ ಕ್ಯಾರಿಯರ್‌ನಲ್ಲಿ, ನನ್ನ ಊಟದ ನಂತರ ಅವನಿಷ್ಟು ತಿನ್ನುತ್ತಿದ್ದ. ನಿವೇದಿತಾ ಸೇರಿದಂತೆ ಇದ್ದ ಸಿಬ್ಬಂದಿಯವರೆಲ್ಲ ಅವನಿಗೆ ಐದು-ಹತ್ತು ರುಪಾಯಿ ಕೊಡುತ್ತಿದ್ದರು. ಇವನಿಗೆ ಕೆಲವರು ಅಂಗಿ-ಪಂಗಿ ಕೂಡ ಕೊಟ್ಟರು. “ಆಯ್ತೂ, ನೀವೆಲ್ಲ ಅವನಿಗೆ ಕಾಸು-ಕನಕ ಕೊಟ್ಟು ಸಾಕಿದಿರಿ. ಈಗ ಅವನನ್ನ ಏನು ಮಾಡಲಿ?" ಅಂದೆ. ಆಗ ಗೊತ್ತಾಯಿತು ಪೂರ್ಣ ಪ್ರಾರಬ್ಧ. ಅವನಿಗೆ ಕೆ.ಎಸ್.ಆರ್.ಟಿ.ಸಿಯಲ್ಲಿ ಪಕ್ಕಾ ಕಂಡಕ್ಟರ್‌ನ ನೌಕರಿ ಇದೆ. ಆದರೆ ಕೆಲಸಕ್ಕೆ ಸರಿಯಾಗಿ ಹೋಗದೆ, ಸಸ್ಪೆಂಡ್ ಆಗಿ, ಹೀಗೇ ಬೇಕಾಬಿಟ್ಟಿ ಅಲೆದು ಕಡೆಗೆ ಡಿಸ್ಮಿಸ್ ಕೂಡ ಆಗಿದ್ದಾನೆ ಅಂದರು. ಆಗ ನನ್ನ ಪರಿಚಿತರ್‍ಯಾರೋ ಸಾರಿಗೆ ಮಂತ್ರಿಯಾಗಿದ್ದರು. ಅವರಿಗೆ ಹೇಳಿ, ಒಂದಷ್ಟು ಅಕಾರಿಗಳಿಗೂ ವಿನಂತಿಸಿಕೊಂಡು ಇವನನ್ನು ಮತ್ತೆ ಕಂಡಕ್ಟರ್ ನೌಕರಿಗೆ ಸೇರಿಸಿದೆ. “ಮಾಮಾ, ಹೇಳಿದೆ ಅನ್ನೋ ಕಾರಣಕ್ಕೆ ಹೋಗ್ತಿದೀನಿ. ನಂಗೆ ಇಲ್ಲೇ ಇಷ್ಟ!" ಅಂದು ನನ್ನ ಕಾಲಿಗೆ ಬಿದ್ದು ಎದ್ದು ಹೋದ.

ನಿಮಗೆ ನಂಬಲಾಗುತ್ತೋ ಇಲ್ಲವೋ ಕಾಣೆ: ಕಂಡಕ್ಟರ್ ನೌಕರಿ ಹೋಗೋ ಹೊತ್ತಿಗೆ ಅವನು ‘ಹಾಯ್ ಬೆಂಗಳೂರ್!’ ಆಫೀಸಿನಲ್ಲಿ ರವಿ ಬೆಳಗೆರೆ ಯಷ್ಟೇ ಎಲ್ಲರಿಗೂ ಆತ್ಮೀಯ! ಪ್ರತಿ ಕೆಲಸಕ್ಕೂ ಅವನೇ ಬೇಕು. ಸೋಮಾರಿತನ ಮಾಡಿ, ಕೂತು ಉಣ್ಣುವ ಜಾಯಮಾನ ಅವನದಲ್ಲವೇ ಅಲ್ಲ. ಕೆಲಸ ಯಾವುದೇ ಹೇಳಲಿ, ಅದನ್ನು ಯಾರೇ ಹೇಳಲಿ ಏಕ್‌ದಮ್ ಪಕ್ಕಾ! ಹಾಗೆ ಮಾಡಿಕೊಡುತ್ತಿದ್ದ. ಮೈಗಳ್ಳನಲ್ಲವೇ ಅಲ್ಲ. ಇಲ್ಲಿ ಇದ್ದಷ್ಟು ಕಾಲ ಅವನು ಒಂದೇ ಒಂದು ಹನಿ ಕುಡಿಯಲಿಲ್ಲ. ತಂಬಾಕೊಂದು ತಿನ್ನುತ್ತಿದ್ದ ನನಗೆ ಕಾಣದಂತೆ. ಆಫೀಸಿನದು ಬಿಡಿ, ಮನೆಯಲ್ಲಿ ನನ್ನ ಹೆಂಡತಿಯ ಎಂಬತ್ತು ವರ್ಷದ ತಾಯಿ ಇದ್ದಾರಲ್ಲಾ? ಅವರಿಗೂ ಕಾಕಾ ಅಂದರೆ ಪ್ರೀತಿ. ನನಗಿದೆಲ್ಲ ಕೇಳಿ ಸಂತೋಷವೇ ಆಗುತ್ತಿತ್ತು. ಅದಕ್ಕಿಂತ ಸಂತಸದ ಸಂಗತಿ ಯೆಂದರೆ, ಅವನ ಮಕ್ಕಳ ಸಾಧನೆ. ಮಗ-ಮಗಳು ಇಬ್ಬರಿಗೂ ‘ಪ್ರಾರ್ಥನಾ’ದಲ್ಲಿ ಸೀಟು ಕೊಟ್ಟಿದ್ದೆ. ಆ ಪೈಕಿ ಹುಡುಗನಂತೂ ಶಾಲೆಗೆ topper.

ಅವನ ಮಾರ್ಕ್ಸ್ ಕಾರ್ಡ್ ನೋಡಿ ನಿಜಕ್ಕೂ ಖುಷಿಯಾಗುತ್ತಿತ್ತು. ಅವನೂ ಬಡಕಲ ಬ್ರಾಹ್ಮಣನೇ. ಆದರೆ ಮಲ್ಲಕಂಬದಲ್ಲಿ ಅವನದು ಎತ್ತಿದ ಕೈ. ಹೆಗಲಿಗೆ ಜನಿವಾರ ಹಾಕಿಕೊಂಡೇ ಹಲ್ಲಿ ಹತ್ತಿದ ಹಾಗೆ ಮಲ್ಲಕಂಬ ಹತ್ತುತ್ತಿದ್ದ. ನಂಬಬೇಕು ನೀವು: ಅಂಥ ಕಾಕನ ಮಗ ಇವತ್ತು ಇಂಜಿನೀರಿಂಗ್ ಮಾಡುತ್ತಿದ್ದಾನೆ. ಅವನ ತಂಗಿ ಕೊಂಚ dull ಇದ್ದಾಳೆ ಅಂದುಕೊಂಡಿದ್ದೆ: ನೋಡಿದರೆ ಅವಳೂ ಎಕ್ಸಲೆಂಟ್. ಶಾಲೆಯ ಪ್ರತಿ ಶಿಕ್ಷಕರಿಗೂ ಇವರು ಪ್ರೀತಿಯ ಮಕ್ಕಳು. ಕ್ರಮೇಣ ಕಾಕನ ಹೆಂಡತಿಯೂ ಸರಿಹೋದಂತಾದಳು. ಮಧ್ಯೆ ಒಂದೆರಡು ಸಲ, ಕಾಕಾ ಸಸ್ಪೆಂಡ್ ಆಗಿದ್ದ. ಆಗಲೂ ಅವನು ಬಂದದ್ದು ನನ್ನಲ್ಲಿಗೇ. “ಬೋಳೀ ಮಗನೇ, ಕದ್ದು ಸಿಕ್ಕಿ ಬಿದ್ಯಾ?" ಅಂತ ಗದರಿಸಿದರೆ, “ಹ್ಞೂಂ ಮಾಮಾ, ಎರಡೇ ಎರಡು seat ತಿಂದಿದ್ದೆ. ಹಿಡ್ಕಂಡು ಬಿಟ್ರು" ಅನ್ನುತ್ತಿದ್ದ. ಯಥಾಪ್ರಕಾರ ನಾನೇ ಶಿಫಾರಸು ಮಾಡಿ ವಾಪಸು ಸೇರಿಸಬೇಕು. ಇಂಥವೆರಡು ಘಟನೆ ಹೊರತು ಪಡಿಸಿದರೆ, ಒಂದಿಡೀ ಕುಟುಂಬವನ್ನು ಸರಿದಾರಿಗೆ ತಂದೆ ಎಂಬ ಸಂತಸ ನನ್ನದು. ಆದರೆ ಮೊನ್ನೆ ಸುದ್ದಿ ಗೊತ್ತಾಗಿ ಒಂದೇ ಸಲಕ್ಕೆ ಮುದುಡಿ ಕೊಂಡು ಬಿಟ್ಟೆ. ನಮ್ಮ ಹುಡುಗರು ಅವನನ್ನು ನಡೆಸಿಕೊಂಡು ನನ್ನ ಛೇಂಬರಿಗೆ ಬಂದರು.

ಕಾಕನಿಗೆ ಪಾಶ್ವವಾರ್ಯು! ಬಹುಶಃ ಯಾವಾಗಲೋ ಚೆನ್ನಾಗಿ ಕುಡಿದು, ಊಟ ಮಾಡದೆ ಮಲಗಿದ್ದಾನೆ. ಬೆಳಿಗ್ಗೆ ಹೊತ್ತಿಗೆ stroke. ಒಂದು ಕೈ ಸ್ವಾಧೀನದಲ್ಲಿಲ್ಲ. ಕಾಲೂ ಊನ. ಎಲ್ಲದಕ್ಕಿಂತ ಹೆಚ್ಚಾಗಿ, ಅವನ ಬಾಯಿ ಬಿದ್ದು ಹೋಗಿದೆ. ಎದುರಿಗೆ ನಿಂತವನು ಏನೋ ಹೇಳಲು ಯತ್ನಿಸುತ್ತಾನೆ: ಹೇಳಲಾಗುವುದಿಲ್ಲ. ಬರೀ ಅಸ್ಪಷ್ಟ ಶಬ್ದ ಹೊರಡುತ್ತದೆ. ಕೆನ್ನೆಯ ಮೇಲೆ ಧಾರಾಕಾರ ಕಣ್ಣೀರ ಕೋಡಿ. ಅವನ ಹೆಂಡತಿಗಾದರೂ ಪ್ರಜ್ಞೆ ಬೇಡವೇ? ಭಿಕ್ಷುಕರು ಕೂಡ ಹಾಕಿಕೊಳ್ಳಲಿಕ್ಕಿಲ್ಲ: ಅಂಥದೊಂದು ಟೀ ಷರ್ಟ್ ಹಾಕಿ ಕಳಿಸಿದ್ದಾಳೆ. ಇವನನ್ನು ಏನು ಮಾಡೋದು ಅಂತ ಯೋಚಿಸಿಯೇ ಇನ್ನಷ್ಟು ಖಿನ್ನನಾದೆ. ಈ ಸ್ಥಿತಿಯಲ್ಲಿ ನನ್ನ ಅಮ್ಮನನ್ನು ಸುಮಾರು ಹದಿನೆಂಟು ವರ್ಷ ನೋಡಿದ್ದೇನೆ. ಈ ಖಾಯಿಲೆಗೆ ಅದೆಲ್ಲಿದೆ ಔಷಧಿ? ಒಮ್ಮೆ ಯಾರೋ ಹೇಳಿದ್ದು ನೆನಪಿದೆ. ಅಲ್ಲೆಲ್ಲೋ ಅಂಕೋಲಾದ ಆಚೆಗೆ ಒಂದು ಆಸ್ಪತ್ರೆ ಇದೆಯಂತೆ. ಅದು ವಿದೇಶಿಯರು ನಡೆಸುತ್ತಿರೋ ಆಸ್ಪತ್ರೆ. ಅವರು ಒಂದೇ ಒಂದು injection ಕೊಡುತ್ತಾರೆ. ತುಂಬ ಬೇಗ ಚೇತರಿಸಿ ಕೊಳ್ಳುವಂತೆ ಮಾಡುತ್ತದೆ ಅದು ಅಂತ ಹೇಳಿದ್ದರು. ವಿಚಾರಿಸಿ ನೋಡಬೇಕು. ಎದುರಿಗೆ ಬಂದು ಕಣ್ಣೀರು ಗರೆಯುತ್ತಾ ನಿಂತವನನ್ನು ಏನು ಮಾಡಲಿ? ಹಣ ಕೊಟ್ಟರೆ ಮತ್ತೆ ಕುಡಿಯುತ್ತಾನೆ. ನಡೆಯುವ ಚೈತನ್ಯವೇ ಇಲ್ಲ. ಇವನ ಹೆಂಡತಿಗೆ ಕೊಡೋಣವೆಂದರೆ, ಅದು ಇನ್ನೊಂದು ವಕ್ರ. ಆಯ್ತು ನೋಡೋಣ ಅಂದು ಕೊಂಡು ಎರಡು ಸಮಾಧಾನದ ಮಾತಾಡಿ ಕಾಕನನ್ನು ಕಳಿಸಿಕೊಟ್ಟೆ. ಮನಸು ಎಷ್ಟು ಖಿನ್ನಗೊಂಡಿತ್ತೆಂದರೆ, ಹೀಗೆ ಬದುಕಿ ಉಳಿಯುವ ಬದಲು ಕಾಕಾ ಸತ್ತು ಹೋಗಿದ್ದಿದ್ದರೇನೇ ಒಳ್ಳೆಯದಿತ್ತೇನೋ ಅನ್ನಿಸಿಬಿಟ್ಟಿತು.

ಯಾಕೆ ಇದನ್ನೆಲ್ಲ ಹೇಳಿದೆನೆಂದರೆ, ಅವನಿಗೂ ನಿವೇದಿತಾಳ ನಾದಿನಿ ರಾಜಿಗೂ ಮಧ್ಯೆ ಒಂದು code word ಇತ್ತು: C.B. ಅವಳು “I want C.B. Kaka" ಅನ್ನುತ್ತಿದ್ದಳು. ಸಿ.ಬಿ. ಅಂದರೆ ಚಿಕನ್ ಬಿರಿಯಾನಿಯಂತೆ! ಕಾಕಾ ಸೃಷ್ಟಿಸಿದ code. “ನಿಮಗೆ ಅದಿನ್ನೂ ನೆನಪಿದೆಯಾ ಬಾಸ್?" ಅಂತ ನಿವಿ ಅಂದಾಗಲೇ, “ನೀನು ಅವನ್ನು ನೋಡದಿದ್ದರೇನೇ ಒಳ್ಳೆಯದು ನಿವೀ. ನೋಡಿದರೆ ತುಂಬ ಸಂಕಟವಾಗುತ್ತೆ. ನೆಲ ಒರೆಸುವ ಬಟ್ಟೆಯಂತಾಗಿ ಹೋಗಿದ್ದಾನೆ" ಅಂದೆ. ಅವಳೂ ಪೇಚಾಡಿದಳು.

ನೋಡಿ, ನಮ್ಮ ರಾಜಿ ವೈಕಲ್ಯವಿರುವ ಹುಡುಗಿ. ಅವಳಿಗೆ ಕಾಕಾ ಸಿ.ಬಿ. ತಂದುಕೊಡುತ್ತಿದ್ದ. ಈಗ ಅವನಿಗೇ ವೈಕಲ್ಯ. ಚೆಂದಾಗಿ ಉಂಡು-ಉಟ್ಟವನು ಕಾಕಾ. ನಾಳೆ ಅವನಿಗೊಂದು ಲೋಟ ನೀರು ಕೊಡುವವರೂ ಇಲ್ಲ. ಅವನು ನನಗಿಂತ ಚಿಕ್ಕವನು. ಇಷ್ಟು ದೊಡ್ಡ ಬದುಕನ್ನು ಹೇಗೆ ಬದುಕುತ್ತಾನೋ? “ನಮ್ಮ ಮಾಮಾ ಮೆಕ್ಯಾನಿಕ್ ಇದ್ಹಾಗೆ. ಎಂಥ ಕೇಸೇ ತಗೊಂಡು ಬರ್ರಿ. ಚಾಣಾ ಹೊಡೆದು, fit ಮಾಡಿ ರೆಡಿ ಮಾಡಿ ಕೊಟ್ಟುಬಿಡ್ತಾನೆ. ಇದು ಮಾಮನ ಗ್ಯಾರೇಜ್!" ಅಂತ ಯಾರ ಮುಂದೋ ಕಾಕಾ ಅಂದದ್ದು ಇವತ್ತು ನೆನಪಾಯಿತು. ಏನು ಮಾಡಲಿ? I am really tired..."

ನಿಮ್ಮವನು,
ಆರ್.ಬಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 18 May, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books