Ravi Belagere
Welcome to my website
ನಿಮ್ಮದು ಎಂಥ ಮ್ಯಾರೇಜು? ಶುದ್ಧ ಅರೇಂಜ್‌ಡಾ? ನೀವೇ ಮಾಡಿಕೊಂಡ ಲವ್ ಮ್ಯಾರೇಜಾ? live in relationshipನಂತಹ  ಗಾಂಧರ್ವ ವಿವಾಹನಾ? ‘ಲವ್ ಕಮ್ ಅರೇಂಜ್ಡ್’ ಮದುವೆಯಾ? ಅಂತರ್‌ಜಾತೀಯ ವಿವಾಹವಾ? ಅಂತರ್‌ಧರ್ಮೀಯ ವಿವಾಹವಾ? (Request :ಜಾತಿಗಳ ಪುಸ್ತಾಪ ಮಾಡಬೇಡಿ) Love, run and marry ಎಂಬಂತೆ ಮನೆಗಳನ್ನು ಬಿಟ್ಟು ಹೋಗಿ ಆದ ಮದುವೆಯಾ? ಎಂಥ ಮದುವೆಯಾಗಿದ್ದರೂ ಅಡ್ಡಿಯಿಲ್ಲ. ಅದಕ್ಕೆ ಗೌರವವಿದೆ. ಒಂದು inland letterನಷ್ಟು ಬರವಣಿಗೆಯನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆಯಿರಿ. ಜೊತೆಗೆ ಇಬ್ಬರೂ ಇರುವ ಫೊಟೋ ಕಳಿಸಿ. mail ಮಾಡೋದಾದರೆ [email protected]ಗೆ ಮಾಡಿ.
Home About Us Gallery Books Feedback Prarthana Contact Us

Buy Ravi Belagere Books online

ಬರೀ ಇಬ್ಬರು ಡಕಾಯತರ ಬಗ್ಗೆ ಮಾಹಿತಿಗಾಗಿ ಎಲ್ಲೆಲ್ಲಿ ಅಲೆದೆ?

No way.

ಆ ದೇಶಕ್ಕೆ ಇದು ಸುಮ್ಮನೆ ಕಾಲಿಡುವ ಕಾಲವೇ ಅಲ್ಲ. ನನ್ನನ್ನು ಎಗಾ ದಿಗಾ ಮೇಲಿಂದ ಕೆಳಕ್ಕೆ ನೋಡಿದ ಒಬ್ಬ ಡಿ.ವೈ.ಎಸ್ಪಿ “ಇದೇನಿದು ನಿಮ್ಮ ಹುಚ್ಚಾಟ? ಈ ವಯಸ್ಸಿನಲ್ಲಿ, ಈ ರಣಬೇಸಿಗೆಯಲ್ಲಿ ಇದೆಂಥ risk ತಗೋತಿದೀರಿ? Very horrible. It is dangerous ಅಂದಿದ್ದ. ಅದು ಚಿತ್ರಕೂಟ್ ಜಿಲ್ಲೆಯ ಒಂದು ತಹ ಶೀಲು. ನಾನು ಎ.ಸಿ. ಕಾರಿನಲ್ಲೇ ಹೋಗಿದ್ದೆ. ಆ ಅಕಾರಿ ಬರುವ ತನಕ ಕಾರನ್ನು ಮರವೊಂದರ ನೆರಳಿನಲ್ಲಿ ನಿಲ್ಲಿಸಿಯೇ ಆತನಿಗಾಗಿ ಕಾಯುತ್ತಿದ್ದೆ. ಆದರೂ ದಣಿವು, ದಣಿವಿನ ಹೈರಾಣಗಳು ನನ್ನ ಮುಖ ಕಂಡ ಕೂಡಲೇ ಆತನಿಗೆ ವಿದಿತವಾಗಿದ್ದವು. ನನ್ನ water bottleನಲ್ಲಿದ್ದ ನೀರು ಬೆಚ್ಚಗಾಗಿ ಹೋಗಿದ್ದವು. “ನಿಮಗೆ ಏನಾದರೂ ಥಂಡಾ ತರಿಸಬಹುದು. ಆದರೆ ಬಿಸಿಲಲ್ಲಿ ಅಲೆದು ಬಂದಿದ್ದೀರಿ. ಈಗ ಥಂಡಾ ಕುಡಿಸಿದರೆ ನೀವು ತಕ್ಷಣ ಖಾಯಿಲೆ ಬೀಳುತ್ತೀರಿ. ಐ ಡೋಂಟ್ ರೆಕಮೆಂಡ್. Room temperature ನಲ್ಲಿ ಇರುವಂತಹ ಮಾಮೂಲಿ ನೀರು ತರಿಸುತ್ತೇನೆ. ಸ್ವಲ್ಪ ಸುಧಾರಿಸಿಕೊಳ್ಳಿ. ಡಕೇತಿ ಗ್ಯಾಂಗ್‌ನ ಫೊಟೋಗಳಿಗೇನಂತೆ. ಒಂದು ರಾಶಿ ಇದ್ದಾವೆ. ಕೊಡ್ತೀನಿ. I am more worried about your health" ಅಂದಿದ್ದರು ಆತ. ಆತನ ಹೆಸರು ಪೂರನ್ ಸಿಂಗ್ ಠಾಕೂರ್. ಆತ ನದೇ ಶಿಫಾರಸ್‌ನ ಮೇಲೆ ನಾನು ಅವತ್ತಿನ ಮಟ್ಟಿಗೆ ಉತ್ತರ ಪ್ರದೇಶ್‌ನ ಸರ್ಕಾರಿ (ನಮ್ಮ K.S.T.D.C ತರಹದ) ಹೊಟೇಲಿನಲ್ಲಿ ತಂಗಿದ್ದೆ. ನನ್ನ ಸಹಾಯಕ ನನಗಿಂತ ಚಿಕ್ಕವನು. ಆದರೆ ಬಿಸಿಲಿನ ಹೊಡೆತಕ್ಕೆ ಅವನು ನನಗಿಂತ ಹೆಚ್ಚು ಹೈರಾಣಾಗಿದ್ದ. ಅಲ್ಲಿಗೆ ಹೋಗೋ ತನಕ ಚಿತ್ರಕೂಟ್ ಎಂಬ ಹೆಸರಿನ ಒಂದು ಜಿಲ್ಲೆಯಿದೆ ಅಂತ ಗೊತ್ತೇ ಇರಲಿಲ್ಲ. ಮತ್ತೆ ಎದ್ದು ಹೊರಡೋದು, ಇನ್ನೆಲ್ಲಿಗೋ ಹೊರಟು ಮಾಹಿತಿ ಸಂಗ್ರಹಿಸೋದು- ಅದೆಲ್ಲ ಆಗೋ ಮಾತಲ್ಲ ಅಂತ ನಿರ್ಧರಿಸಿ, ಉತ್ತರ ಪ್ರದೇಶ್‌ನ ಆ ಸರಕಾರಿ ತಂಗು ನಿಲ್ದಾಣದಲ್ಲಿ “ಜೈ ಮಾಯಾವತೀ" ಅಂತ ಉದ್ಗರಿಸಿ ಮಲಗಿ ಬಿಟ್ಟಿದ್ದೆ. ಆ ತರಹದ heat ನಾನು ಅದಕ್ಕಿಂತ ಮುಂಚೆ ಖಂಡಿತವಾಗ್ಯೂ ನೋಡಿರಲಿಲ್ಲ.

ನಿಮಗೆ ನನ್ನ ತಿಕ್ಕಲು, ಹುಚ್ಚಾಟಗಳು ಗೊತ್ತಿವೆ. ಆ ಸೀಝನ್‌ನಲ್ಲಿ ನಾನು ಎರಡು ಅತಿಮುಖ್ಯ project ಗಳನ್ನ ಕೈಗೆತ್ತಿಕೊಂಡು ಅವುಗಳಿಗೆ ಸಂಬಂಸಿದ ಮಾಹಿತಿ ಹೆಕ್ಕಲು ಉತ್ತರ ಪ್ರದೇಶ್ ಹಾಗೂ ಮಧ್ಯಪ್ರದೇಶ್‌ಗಳಲ್ಲಿ ಓಡಾಡುತ್ತಿದ್ದೆ. ಆ ಪೈಕಿ ಒಂದು subject ಗೆ ವಾರಾಣಸಿ, ಗೋರಖ್‌ಪುರ್‌ಗಳು ಕೇಂದ್ರಗಳು. ಇನ್ನೊಂದಕ್ಕೆ headquarters ಅಂದರೆ ಕಾನ್‌ಪುರ್ ಮತ್ತು ಗ್ವಾಲಿಯರ್. ಅದು ನಾನೇ ಮಾಡಿ ಕೊಂಡ ನಕಾಶೆ. ಒಮ್ಮೆ ಕಾನ್‌ಪುರ್ ತಲುಪಿದೆ ಅಂದರೆ, ಅಲ್ಲಿ ಎಂಥದೋ ಒಂದು ಹೊಟೇಲಿನಲ್ಲಿ ನನ್ನ ನೆತ್ತಿಯ ಮೇಲಿನ ಗಂಟು ಇಳಿಸಿ, ಮೂಲೆಗೆ ಹಾಕಿ ಕೇವಲ ಒಂದು ಬರ್ಮುಡಾ ಮತ್ತು ಟೀಷರ್ಟ್ ಧರಿಸಿ, ಕಾಲಿಗೆ ಕೇವಲ ಹವಾಯ್ ಚಪ್ಪಲಿ ಮೆಟ್ಟಿಕೊಂಡು, ಕಿಸೆ ತುಂಬ scribling pads ಇಟ್ಟುಕೊಂಡು ಹೊರಟು ಬಿಡಬೇಕು. ಮತ್ತೆ ಅದೇ ಹೊಟೇಲಿಗೆ, ಅದೇ ದಿನ ಅಥವಾ ಅದೇ ವಾರ ಹಿಂತಿರುಗುತ್ತೇನೆಂಬ ಗ್ಯಾರಂಟಿ ಇರುವುದಿಲ್ಲ. ಈ ‘ಚಾಪೆ-ಬುಟ್ಟಿ ಹೆಣೆಯೋವಂಥ ಮಾದಿರಾಜರು ಊರಿಂದೂರಿಗೆ ಹೋಗ್ತಾನೇ ಇರ್‍ತಾರಲ್ಲ: ಹಾಗೆ ಅಲೆಯುತ್ತಿರಬೇಕು. ಮತ್ತೆ ರೂಮಿಗೆ ಹಿಂತಿರುಗಿದ ಮೇಲೆಯೇ ಸ್ನಾನ, ಬಟ್ಟೆ ಬದಲಾಯಿಸುವಿಕೆ ಇತ್ಯಾದಿ ಇತ್ಯಾದಿ. ನನಗೆ ಹಾಗೆ ಚಿತ್ರಕೂಟ್ ಎಂಬ ಜಿಲ್ಲೆಯ ದರ್ಶನವಾದದ್ದೇ ಆವಾಗ. ಇಲ್ಲಿಯ ಜನ ಹೊಟ್ಟೆಗೆ ಏನು ತಿಂತಾರೆ? ತರಕಾರಿ, ಹಣ್ಣು- ಹಂಪಲು ಹಾಗಿರಲಿ: ಇಲ್ಲಿ ಗೆಡ್ಡೆ ಗೆಣಸು ಕೂಡ ಸಿಗುತ್ತೆ ಅನ್ನಿಸೋದಿಲ್ಲ. ಎಂಥ ಸೀಮೆ ಇದು. In a way, ಇದು ಸರಿಯಾಗೇ ಇದೆ: ಚಿತ್ರಕೂಟ್. ಶ್ರೀರಾಮಚಂದ್ರ ವನವಾಸ ಕಳೆಯಲಿಕ್ಕೆ ಇಲ್ಲಿಗೇ ಬಂದಿದ್ದನಂತೆ. ಅಲ್ಲಿ ವಾಲ್ಮೀಕಿಯದೇ ಒಂದು ಗುಡಿ ಇದೆ. ಈ ಬಿಸಿಲಲ್ಲಿ ವಾಲ್ಮೀಕಿ ಚಕ್ಕಂಬಟ್ಲೆ ಹಾಕ್ಕಂಡು ಕೂತು ಅದಿನ್ನೇನು ರಾಮಾಯಣ ಬರೀತಿದ್ನೋ? ಅಂದುಕೊಳ್ಳುತ್ತಿದ್ದೆ.

ಹಾಗೆ ಚಿತ್ರಕೂಟ್‌ಗೆ ಹೋಗುವ ಹೊತ್ತಿಗಾಗಲೇ ಡಾಕ್ಟರ್ ಸಾಬ್‌ನ ಹತ್ಯೆ ಆಗಿತ್ತು. ಅಲ್ಲಿ ನಟೋರಿಯಸ್ ಡಕಾಯತ ಬಲ್‌ಖಡಿಯಾ ಇದ್ದ. ಬಾಬಾ ಘನ ಶ್ಯಾಮ್ ನಿಷಾದ್ ತುಂಬ ಹಳಬ. ಅವನನ್ನೂ ಪೊಲೀಸರು ಕೊಂದು ಹಾಕಿದ್ದರು. ಹೊಸ ತಳಿಯವನು ಅಂದರೆ ಅವನೇ: ಡಾಕ್ಟರ್ ಸಾಬ್! ಅವನ ಹೆಸರು ಅಂಬಿಕಾ ಪಟೇಲ್. ಹಿಂದಿಯಲ್ಲಿ ಠೋಕ್‌ನಾ ಅಂದರೆ ಗುಂಡು ಹಾಕೋದು, ಕೊಲ್ಲೋದು, ತೂತ ಮಾಡೋದು ಎಂದೆಲ್ಲ ಅರ್ಥಗಳಿವೆ. ಅಂಬಿಕಾ ಪಟೇಲ್ ಯಾರಿಗಾದರೂ ಫೋನ್ ಮಾಡಿ, “ತುಝೆ ಠೋಕೂಂಗಾ" ಅಂದರೆ, ಸಂಜೆ ಹೊತ್ತಿಗೆ ಅವನ ಹೆಣ ಬಿತ್ತು ಅಂತಲೇ ಅರ್ಥ. ಹೀಗಾಗಿ ಅಂಬಿಕಾ ಪಟೇಲ್‌ಗೆ ‘ಠೋಕಿಯಾ’ ಎಂಬ ಹೆಸರಿತ್ತು. ಡಕಾಯತನಾಗಿ ಕೈಗೆ ಬಂದೂಕು ಎತ್ತಿಕೊಳ್ಳುವ ಮುನ್ನ ಅವನು ಡಾಕ್ಟರಿಕೆ ಮಾಡುತ್ತಿದ್ದ. ಹಾಗಂತ ಅವನನ್ನು ವೃತ್ತಿ ನಿರತ ಡಾಕ್ಟರ್ ಅಂದುಕೋ ಬೇಡಿ. ಅವನು ಆ ಸೀಮೆಯ ಹಳ್ಳಿಗಳಲ್ಲಿ ಅಡ್ಡಾಡಿ ಜನರ ಚಿಕ್ಕಪುಟ್ಟ ರೋಗಗಳಿಗೆ, ಮುಖ್ಯವಾಗಿ ಲೈಂಗಿಕ ರೋಗಗಳಿಗೆ ಔಷ ಕೊಡುತ್ತಿದ್ದ. ಅಂಥವ ರನ್ನು ಜನ ‘ಝೋಲಾ ಛಾಪ್ ಡಾಕ್ಟರ್’ ಅನ್ನುತ್ತಾರೆ. ಇವನನ್ನು ಮಾತ್ರ ಡಾಕ್ಟರ್ ಸಾಬ್ ಅನ್ನುತ್ತಿದ್ದರು. ಅವನ ತಂಗಿಯೊಂದಿಗೆ ಒಬ್ಬನ್ಯಾವನೋ ಬಲವಂತದ ‘ಮಜಾಕ್’ ಮಾಡಿದ್ದ. ತಕ್ಷಣ ಬಂದೂಕು ಹಿಡಿದ ಝೋಲಾ ಛಾಪ್ ಡಾಕ್ಟರ್ ‘ಮಜಾಕ್’ ಮಾಡಿದವ ನನ್ನು ಕೊಂದು ಚಿತ್ರಕೂಟದ ಸುಡುಗಾಡಿನಂತಹ ಕಾಡು ಸೇರಿಬಿಟ್ಟ. ಚಂಬಲ್ ಸುತ್ತಲಿನ ಡಕಾಯತರು ಅಲ್ಲಿನ ಸವಿಸ್ತಾರವಾದ ಕೊರಕಲುಗಳಲ್ಲಿ ಆಶ್ರಯ ಪಡೆಯುತ್ತಾರೆ. ಕೊರಕಲುಗಳಿಗೆ ಅಲ್ಲಿ ‘ಬೀಹಡ್’ ಎಂಬ ಹೆಸರಿದೆ: ravines. ಚಿತ್ರಕೂಟದಲ್ಲಿ ಅಂಥ ravines ಕೂಡ ಇಲ್ಲ. ಕುರುಚಲು ಕಾಡು. ನಸೀಬು ಕೆಟ್ಟರೆ ದಿನಗಟ್ಟಲೆ ಅವರಿಗೆ ರೊಟ್ಟಿ ಸಿಗುವುದಿಲ್ಲ. ಆದರೆ ‘ಡಾಕ್ಟರ್ ಸಾಬ್’ನ ಬಳಿ AK.47 ಇತ್ತು. ಸಾಲು ಸಾಲು ಡಬಲ್ ಬ್ಯಾರಲ್ ಗನ್ (DBBL) ಗಳಿದ್ದವು. ಒಂದು ನಳಿಕೆಯ SBBLಗಳಿದ್ದವು.

ಸುಮಾರು ಇಪ್ಪತ್ತು ಜನ ಡಕಾಯತರಿದ್ದರು. ಸ್ವತಃ ಡಾಕ್ಟರ್ ಸಾಬ್ ಠೋಕಿಯಾ ತಲೆಗೆ ಆರು ಲಕ್ಷ ರುಪಾಯಿಗಳ ಇನಾಮ್ ಇತ್ತು. ಆದರೆ ವರ್ಷಗಟ್ಟಲೆ ಠೋಕಿಯಾನನ್ನು ಕಾಯ್ದದ್ದು ಅದ್ಯಾವುದೂ ಅಲ್ಲ. ಕಾಯ್ದದ್ದು ಅವನ ಜಾತಿ. ಅವನು ‘ಕೂರ್ಮಿ’ ಜಾತಿಯವನು. ಹಿಂದುಳಿದ ಜಾತಿಯವನು. ಚಿತ್ರಕೂಟ್ ಜಿಲ್ಲೆಯಾದ್ಯಂತ ಹಳ್ಳಿಗಳಲ್ಲಿ ಕೂರ್ಮಿಗಳಿದ್ದಾರೆ. ಪೊಲೀಸರು ಕಾಲಿಗೆ ಬೂಟು ಕಟ್ಟಿಕೊಂಡರೆ ಸಾಕು, ಅವನ ಜಾತಿಯ ಕೂರ್ಮಿ net workಗೆ ಮಾಹಿತಿ ಹೋಗಿಬಿಡುತ್ತಿತ್ತು. ಆನಂತರ ತಪ್ಪಿಸಿಕೊಳ್ಳುವುದರಲ್ಲಿ ಏನು ಮಹಾ ಕಷ್ಟ? ಆದರೆ ಒಮ್ಮೆ ಚಿತ್ರ ಕೂಟ್‌ನ ಕುರುಚಲು ಕಾಡಿನಲ್ಲೇ ಅವನಿಗೂ-ಪೊಲೀಸರಿಗೂ ಮುಖಾಮುಖಿಯಾಗಿ ಬಿಟ್ಟಿತ್ತು. ಅದು ಪೊಲೀಸರ STF ಪಡೆ. ಇಲ್ಲಿ ವೀರಪ್ಪನ್ ಹತ್ಯೆಗೆಂದು Special Task Force ಅಂತ ಮಾಡಿರಲಿಲ್ಲವೇ? ಅದೇ ತರಹದ್ದು. ಇವನು ಬಡಪೆಟ್ಟಿಗೆ ಸಾಯಲಿಲ್ಲ. ಜೊತೆಯಲ್ಲಿದ್ದ ಹನ್ನೊಂದು ಜನ ಗುಂಡಿಗೆ ಬಲಿಯಾದರು. ಠೋಕಿಯಾ ಕೂಡ ಒಂಬತ್ತು ಜನ ಪೊಲೀಸರ ಹೆಣ ಹಾಕಿದ. ಗಂಟೆಗಟ್ಟಲೆ ಆ ಚಕಮಕಿ ನಡೆಯಿತು. ಕಡೆಗೆ ಠೋಕಿಯಾನ ದೇಹಕ್ಕೇ ಗುಂಡುಬಿತ್ತು. ಅನತಿ ದೂರದ ತನಕ ಇತರೆ ಡಕಾಯತರು ಅವನನ್ನು ಹೊತ್ತೊ ಯ್ದರಾದರೂ, ಝೋಲಾ ಛಾಪ್ ಉಳಿಯಲಿಲ್ಲ.

ನೀವು ಉಳಿದದ್ದನ್ನು care ಮಾಡದೆ ಕಾಲೂರಿ ನಿಂತರೆ ದಿನಗಳೆದಂತೆಲ್ಲ ಡಕಾಯಿತಿ ಸಮಸ್ಯೆಯ ಸಮಗ್ರ ಚಿತ್ರಣ ದೊರೆಯುತ್ತದೆ. ಅನೇಕ ರೋಚಕ ಘಟನೆಗಳ ವಿವರ ದೊರೆಯುತ್ತದೆ. ಆದರೆ ಅಲ್ಲಿನ weather ನಿಜಕ್ಕೂ horrible and hostile. ಇನ್ನೇನು ಬೇಸಿಗೆ ಮುಗೀತು ಅನ್ನುವಷ್ಟರಲ್ಲಿ ವಿಪರೀತ ಮಳೆ ಸುರಿಯ ತೊಡಗುತ್ತದೆ. ಆ ಸೀಮೆಯಲ್ಲಿ ಚಳಿಗಾಲವೆಂಬುದು ಅತ್ಯಂತ ಕ್ರೂರಿ. ಯಾವನಿಗೂ ಅದು ಪಿಕ್‌ನಿಕ್ spot ಅಲ್ಲವೇ ಅಲ್ಲ. ಆ ಇಡೀ ಸೀಮೆಯನ್ನು ಬುಂದೇಲ್ ಖಂಡ್ ಅಂತಾರೆ. ಫೂಲನ್ ದೇವಿ ಆಡುತ್ತಿದ್ದ ಭಾಷೆಯೇ ‘ಬುಂದೇಲ್ ಖಂಡಿ’ ಭಾಷೆ. ಅವಳ ಊರಿಗೂ ನಾನು ಹೋದೆ: ಗುಡಾ ಕಾಪುರವಾ. ಅದಕ್ಕೆ ಕೆಲ ಮೈಲುಗಳ ಅಂತರದಲ್ಲಿ ಒಂದು ಪಟ್ಟಣವಿದೆ: ಒರೈಯಾ. ಅಲ್ಲೀಗ ಸೀಮಾ ಪರಿಹಾರ್ ಇದ್ದಾಳೆ: ಬಂದೂಕು ಕೆಳಗಿಟ್ಟ ಭಾಗ್ಯವಂತೆ! “ನೀವು ಫೂಲನ್ ದೇವಿ ಅಂತೀರಿ. ಅವಳೇನು ಮಹಾ? ಚಂಬಲ್ ಸೀಮೆಗೆ ಡಕೇತ್ ಹೆಂಗಸರು ಇತ್ತೀಚಿನವರಲ್ಲ. ತುಂಬ ಹಿಂದೆ ಡಾಕು ಹಸೀನಾ ಇದ್ದಳು. ಒಂದೇ ಕೈ ಇದ್ದ ಪುತಳೀಬಾಯಿ ಇದ್ದಳು. ಇದೇ ಫೂಲನ್‌ಳ ಶತ್ರು ಕುಸುಮಾನಾಯಿನ್ ಇದ್ದಳು. ಅವರೆಲ್ಲ ಘಟಾನುಘಟಿಗಳೇ. ಅವರೇನು ಕಡಿಮೆ ತಲೆ ಉರುಳಿಸಿದರಾ? ದೊಡ್ಡ ಹೆಸರು ಅಂತ ಬಂದದ್ದು ಫೂಲನ್ ದೇವಿಗೆ. ಅವಳು ಬೆಸ್ತರ ಹೆಂಗಸು: ಮಲ್ಲಾಹ್. ಒಂದೇ ಸಲಕ್ಕೆ ಇಪ್ಪತ್ತೊಂದು ಠಾಕೂರ್ ಜಾತಿಯ ಗಂಡಸರನ್ನು ಬೆಹಮಾಯಿಯಲ್ಲಿ ಕೊಂದಳಲ್ಲ? ಭಾರೀ ಹೆಸರು ಬಂದುಬಿಡ್ತು. ಅಷ್ಟೇ ಹೊರತು ಅವಳೇನೂ ಅಂಥಾ ಘನಂದಾರಿ ಹೆಂಗಸಲ್ಲ. ಯಾಕೆ, ನಾನಿರಲಿಲ್ವಾ ಹತ್ತೊಂಬತ್ತು ವರ್ಷ ಇದೇ ಚಂಬಲ್‌ನ ಕೊರಕಲುಗಳಲ್ಲಿ? ನನಗೂ ಬಂದೂಕು ಚಲಾಯಿಸಿ ಗೊತ್ತು..." ಅಂದಿದ್ದಳು ನಿವೃತ್ತ ಡಕಾಯತಳಾದ ಒರೈಯಾದ ಸೀಮಾ ಪರಿಹಾರ್.

ನನ್ನವು ಕೆಲ ವಿಚಿತ್ರ ಲಕ್ಷಣಗಳಿವೆ ಕಸುಬಿಗೆ ಸಂಬಂಧಿಸಿದಂಥವು. ಸುಮ್ಮನೆ ಅವರಿವರು ಹೇಳಿದ ಕತೆಗಳನ್ನು ಬರೆದುಕೊಂಡು ನಾನು ಬಂದುಬಿಡಲಾರೆ. ನನಗೆ ಇಡೀ ವಾತಾವರಣ feel ಆಗಬೇಕು. ಅದನ್ನ feel of the land ಅಂತಾರೆ. ಅಲ್ಲಿನ social fabric ಗೊತ್ತಾಗಬೇಕು. ಜಾತಿ ಪದ್ಧತಿ ಅರಿವಾಗಬೇಕು. ನಾಯಿನ್ ಅಂದರೆ ಕ್ಷೌರಿಕ. ಪರಿಹಾರ್ ಯಾರು? ಯಾದವ್ ಯಾರು? ಸಿಖರ್‌ವಾರ್? ಠಾಕೂರ್? ಅಲ್ಲಿನ ಬ್ರಾಮ್ಹನ್? ಅವರ್‍ಯಾರು ಮಲ್ಲಾಹ್‌ಗಳು? ಹಾಗೆ ಪೂರ್ತಿ ವಿವರ ಸಿಗುವ ತನಕ ನಾನು ಏಳೋದಿಲ್ಲ. ಇವುಗಳನ್ನೆಲ್ಲ ಯೂನಿವರ್ಸಿಟಿಯ ಪ್ರೊಫೆಸರುಗಳು ಹೇಳುವುದಿಲ್ಲ. ಯಾವ ಜಾತಿಯವರ ಆಹಾರ ಏನಿರುತ್ತದೆ? ಇವರೆಲ್ಲರ ಮಧ್ಯೆ ಒಂದಷ್ಟು ಮುಸಲ್ಮಾನ್ ಡಕಾಯತರು ಬಂದು ಬಿಟ್ಟರಲ್ಲ? ಅವರ ಪೈಕಿ ದೊಡ್ಡ ಹೆಸರು ಮಾಡಿದವರು ಬಾಬಾ ಮುಷ್ತಕೀನ್ ಮತ್ತು ಮುಸ್ಲಿಂ. ಅವರೆಲ್ಲಿಂದ ಬಂದರು? ನನ್ನ ಪ್ರಶ್ನೆಗಳಿಗೆ ಕೆಲಬಾರಿ ಜನ, ಪೊಲೀಸರು, ಡಕಾಯಿತರೇ ತಲೆ ಚಿಟ್ಟು ಹಿಡಿದವರಂತಾಗಿ ಬಿಡುತ್ತಾರೆ. ಆದರೆ ನನಗೆ ನನ್ನ ಕೆಲಸ ಪಾಂಗಿತವಾಗಿ ಆಗಲೇಬೇಕು.

ಅದೆಲ್ಲವನ್ನೂ ಚಿತ್ರಕೂಟ್‌ನಲ್ಲಿ ಮಾಡಿದೆ. ಅಲ್ಲಿ ನನಗೆ ತುಂಬ ನೆರವಾದವನು ಶಶಿಶೇಖರ್. ಆತ ಲಖನೌದಿಂದ ಪ್ರಕಟವಾಗುತ್ತಿದ್ದ ದಿನಪತ್ರಿಕೆಯೊಂದರ ಚಿತ್ರಕೂಟ್‌ನ ವರದಿಗಾರ. ಚಿಕ್ಕ ವಯಸ್ಸು. ನೋಡಲು ಲಕ್ಷಣವಾಗಿದ್ದ. ತನ್ನ ಅಷ್ಟೂ ಕೆಲಸ ಬಿಟ್ಟು ನನ್ನೊಂದಿಗೆ ಇಡೀ ಚಿತ್ರಕೂಟ್ ಜಿಲ್ಲೆ ಸುತ್ತಿದ್ದ. ಅವನಿಗೆ ಎಂಥದೋ ಗೌರವ ನನ್ನ ಮೇಲೆ. ಬಹುಶಃ ನಾನು ಅವನಿಗಿಂತ ಹಿರಿಯ ಎಂಬ ಗೌರವ. ಅದಕ್ಕಿಂತ ಮುಖ್ಯವಾಗಿ ನಾನು ಮಾಹಿತಿ ಸಂಗ್ರಹಿಸುತ್ತಿದ್ದ ಬಗೆ. He was impressed. “ಸರ್, ನಾನು ಎರಡೂವರೆ ದಿನ ನಿಮ್ಮೊಂದಿಗೆ ಅಲೆದೆ. ನಿಮ್ಮೊಂದಿಗೆ ಬರದೇ ಹೋಗಿದ್ದಿದ್ದರೆ ನನ್ನದೇ ಜಿಲ್ಲೆಯ ಈ ಮೂಲೆಗಳನ್ನು ನೋಡುತ್ತಲೇ ಇರಲಿಲ್ಲ. ಮೊದಲ ಉಪಕಾರ ಅದು. ಎರಡನೆಯದೆಂದರೆ ವೃತ್ತಿ. ಇದೇ ಡಾಕೂ ಠೋಕಿಯಾ ಬಗ್ಗೆ ನಾನು ವರದಿ ಮಾಡಿದ್ದೇನೆ. ಡಕಾಯತ ‘ದದುವ’ ಬಗ್ಗೆ ಬರೆದಿದ್ದೇನೆ. ಆದರೆ ನಿಮ್ಮ ಹಾಗೆ ಮಾಹಿತಿ ಸಂಗ್ರಹಿಸೋದು ನನಗೆ ಗೊತ್ತಾದದ್ದೇ ಇವತ್ತು. ಆಪ್ ಗ್ರೇಟ್ ಹೈ ಸರ್" ಅಂದಿದ್ದ. ಈಗಲೂ ಶಶಿಶೇಖರ್ ನನ್ನ ಸಂಪರ್ಕದಲ್ಲಿದ್ದಾನೆ. Nice boy.

ಇದೆಲ್ಲ ಇರಲಿ. ವಿಶಾಲವಾದ ಮತ್ತು ಕೆಲಬಾರಿ ಹೆದರಿಕೆ ಹುಟ್ಟಿಸುವಂಥ ಬುಂದೇಲ್ ಖಂಡ್‌ಗೆ ಯಾವಾಗ ಬಂದರೆ ಸರಿ? ಯಾವ ತಿಂಗಳಲ್ಲಿ? ಅಲ್ಲಿ ಎಲ್ಲವೂ ಅತಿರೇಕಗಳೇ. ಯಾವಾಗ ಹೋದರೂ ಅಷ್ಟೆ. ಇದೆಲ್ಲ ಯಾಕೆ ನೆನಪಾಯಿತೆಂದರೆ, ಇದೇ ತರಹದ ಒಂದು ತಿಕ್ಕಲು target ಇಟ್ಟುಕೊಂಡು ನಾನು ಯೂರಪ್‌ಗೆ ಹೋಗಬೇಕಿದೆ. ಮೊದಲು ಬುಂದೇಲ್ ಖಂಡ್‌ನ ಎರಡನೇ visit ಮುಗಿಸಿಬಿಡಲಾ? ನಂತರ ಯೂರಪ್‌ಗೆ ಹೊರಡೋಣವಾ ಅಂದುಕೊಂಡೆ. ಆದರೆ “ಸರ್, ಇಲ್ಲಿ ಕೆಂಡ ಸುರೀತಿದೆ. ಅಂಥಾ ಬಿಸಿಲು. ದಯವಿಟ್ಟು ಈಗ ಬರಬೇಡಿ" ಅಂದ ಶಶಿಶೇಖರ್. ಅನಿವಾರ್ಯ: ನಾನು ಯೂರಪ್ ಕೆಲಸ ಮುಗಿಸಿದ ನಂತರವೇ ಡಕಾಯತರ ಕಡೆಗೆ ತಿರುಗಿ ನೋಡಬೇಕು. ಅಲ್ಲೇನೂ ನನಗೆ ತುಂಬ ಕೆಲಸವಿಲ್ಲ. ಚಿಕ್ಕಪುಟ್ಟ updates ಕಲೆ ಹಾಕಬೇಕು: ಒಂದು cosmetic touch ಕೊಡಲು ಸಾಧ್ಯವಾಗುತ್ತದೆ. ಬಿಸಿಲು ಸತ್ತ ನಂತರ ಹೋಗೋಣ ಅಂದುಕೊಂಡಿದ್ದೇನೆ. ಸರಿ ಅಲ್ವಾ?

-ನಿಮ್ಮವನು, ಆರ್.ಬಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 29 April, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books