Ravi Belagere
Welcome to my website
ನಿಮ್ಮದು ಎಂಥ ಮ್ಯಾರೇಜು? ಶುದ್ಧ ಅರೇಂಜ್‌ಡಾ? ನೀವೇ ಮಾಡಿಕೊಂಡ ಲವ್ ಮ್ಯಾರೇಜಾ? live in relationshipನಂತಹ  ಗಾಂಧರ್ವ ವಿವಾಹನಾ? ‘ಲವ್ ಕಮ್ ಅರೇಂಜ್ಡ್’ ಮದುವೆಯಾ? ಅಂತರ್‌ಜಾತೀಯ ವಿವಾಹವಾ? ಅಂತರ್‌ಧರ್ಮೀಯ ವಿವಾಹವಾ? (Request :ಜಾತಿಗಳ ಪುಸ್ತಾಪ ಮಾಡಬೇಡಿ) Love, run and marry ಎಂಬಂತೆ ಮನೆಗಳನ್ನು ಬಿಟ್ಟು ಹೋಗಿ ಆದ ಮದುವೆಯಾ? ಎಂಥ ಮದುವೆಯಾಗಿದ್ದರೂ ಅಡ್ಡಿಯಿಲ್ಲ. ಅದಕ್ಕೆ ಗೌರವವಿದೆ. ಒಂದು inland letterನಷ್ಟು ಬರವಣಿಗೆಯನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆಯಿರಿ. ಜೊತೆಗೆ ಇಬ್ಬರೂ ಇರುವ ಫೊಟೋ ಕಳಿಸಿ. mail ಮಾಡೋದಾದರೆ [email protected]ಗೆ ಮಾಡಿ.
Home About Us Gallery Books Feedback Prarthana Contact Us

Buy Ravi Belagere Books online

ಮನೆಗೆ ಹೊಸ ಮಗಳು ಬರುತ್ತಿದ್ದಾಳೆಂಬ ಶುದ್ಧ ಸಂಭ್ರಮದಲ್ಲಿದ್ದೇನೆ!

ನಾನು ಅಂದುಕೊಂಡಿರಲಿಲ್ಲ.

ಎಂದೋ ಒಂದು ದಿನ ಈ ಆರಡಿಯ ಹುಡುಗ ಕೇವಲ ದೈಹಿಕವಾಗಿಯಲ್ಲದೆ, ಮಾನಸಿಕವಾಗಿಯೂ ಬೆಳೆದು ನನ್ನೆದುರು ನಿಂತಾನು ಅಂದುಕೊಂಡಿರಲಿಲ್ಲ. He is ಕರ್ಣ.
ನನ್ನೊಂದಿಗೆ, ನಾಲ್ವರು ಮಕ್ಕಳ ಪೈಕಿ ಅತೀ ಕಡಿಮೆ interactionಗೆ ಬಂದವನು ಇದೇ ಹುಡುಗ. ಹೆಣ್ಣು ಮಕ್ಕಳ ಬಗ್ಗೆ ನಿಮಗೇ ಗೊತ್ತಿದೆ. ಚೇತನಾ ನನ್ನ ಮೊಟ್ಟ ಮೊದಲ girl friend. ಬರೀ ಮೂರನೇ ಕ್ಲಾಸು ಓದಿದ್ದಳು ಆವಾಗ. ಕರೆದುಕೊಂಡು ಹೋಗಿ ಹುಬ್ಬಳ್ಳಿಯಲ್ಲಿ ನನ್ನೊಂದಿಗೆ ಇಟ್ಟುಕೊಂಡೆ. ಲಲಿತಾ, ಭಾವನಾ ಬಳ್ಳಾರಿಯಲ್ಲಿದ್ದರು. ಕರ್ಣ ದಾವಣಗೆರೆಯಲ್ಲಿ ತನ್ನ ಅಜ್ಜ-ಅಜ್ಜಿಯರೊಂದಿ ಗಿದ್ದ. ಅವನು ಆಗ ತುಂಬ ಚಿಕ್ಕವನು. ಈ ಹುಡುಗಿ ಚೇತನಾ ಬಾಲ್ಯದಲ್ಲಿ ನನ್ನನ್ನು ಕಚ್ಚಿಕೊಂಡೇ ಬೆಳೆದಳು. ಅವಳು ಕೆಲವು ವಿಷಯಗಳಲ್ಲಿ ಪಕ್ಕಾ ನನ್ನನ್ನೇ ಹೋಲುತ್ತಾಳೆ. ``ಅಪ್ಪಾ, ನಿನ್ನ looks, ನಿನ್ನ ಬರವಣಿಗೆ, ಸಿಟ್ಟು, ತಿಳಿದುಕೊಳ್ಳುವ ದಾಹ, ಹಾಡುಗಳ ಮೇಲಿನ ಪ್ರೀತಿ, ಅಡ್ಮಿನಿಸ್ಟ್ರೇಷನ್ ತಾಕತ್ತು ಮುಂತಾದ ವೆಲ್ಲ by birth and blood ನಿನ್ನಿಂದಲೇ ಬಂದಿವೆ. ನನ್ನ ಬರವಣಿಗೆ ಚೆನ್ನಾಗಿದೆ ಅಂದೆಯಲ್ಲ? ಅಷ್ಟು ಸಾಕು, ಕುಣಿದಾಡಿಬಿಟ್ಟೆ. ಒಬ್ಬ ಹೊಚ್ಚ ಹೊಸ ಪತ್ರಿಕೋದ್ಯಮಿಗೆ ಅವನ ಎಡಿಟರ್ `ನಿನ್ನ ಬರವಣಿಗೆ ಚೆನ್ನಾಗಿದೆ' ಅಂದಾಗ ಆಗುವ ಸಂತೋಷವಿದೆಯಲ್ಲ? ಅದೇ ಖುಷಿ ನನಗಾಗಿದೆ" ಅಂತ ಬರೆದಿದ್ದಳು ಫೇಸ್‌ಬುಕ್‌ನಲ್ಲಿ. ಅವಳೊಂದಿಗೆ ನನ್ನ ಮಾತು ಕೆಲವೊಮ್ಮೆ Facebook ನಲ್ಲಿ ಹೀಗೇ ಮುನ್ಸಾಗಿರುತ್ತದೆ.

ಇವನು ಮಗಳನ್ನ ತುಂಬ ಹೊಗಳುತ್ತಿದ್ದಾನೆ ಅಂದುಕೊಳ್ಳಲೇಬೇಡಿ. ಅದರಲ್ಲೂ ಅವಳ ಬರವಣಿಗೆ ಕುರಿತಾಗಿ ಬರೆದಾಗ. ಚೇತನಾ, ತುಂಬ ಚೆನ್ನಾಗಿ ಬರೆಯುತ್ತಾಳೆ. ಅವಳ ಇಂಗ್ಲಿಷು ನನ್ನಲ್ಲಿ ಕೀಳರಿಮೆ ಉಂಟು ಮಾಡುತ್ತದೆ. ಅಂಥ ಅಸ್ಖಲಿತ ಭಾಷೆ, ಶೈಲಿ. ಆದರೆ ಅವಳು ಪೆನ್ನು ಕೆಳಗಿಟ್ಟು ಸುಮಾರು ಐದೂವರೆ ವರ್ಷಗಳಾಗಿವೆ. ಅವಳು ತಾಯಿಯಾಗಲಿದ್ದಾಳೆ ಅಂದಾಗ ನಾನೇ ಹೇಳಿದ್ದೆ. ``ತಾಯ್ತನವೆಂಬುದು ಬರವಣಿಗೆಯಷ್ಟೇ ಮುಖ್ಯವಾದ ಸಂಗತಿ. ಮತ್ತೆ ಬದುಕಿನಲ್ಲಿ ಯಾವಾಗ ಬೇಕಾದರೂ ಪೆನ್ನು ಕೈಯಲ್ಲಿ ಹಿಡಿಯಬಹುದು. ಅದಕ್ಕೆ ಮುನ್ನ ಸಾಂಸಾರಿಕ ಜವಾಬ್ದಾರಿಗಳನ್ನು ಪೂರೈಸು" ಅಂತ. ಅವಳು ಖುಷಿಯಿಂದಲೇ ಆ ಜವಾಬ್ದಾರಿ ನಿರ್ವಹಿಸುತ್ತಿದ್ದಾಳೆ. ಈಗ ಎರಡು ಮಕ್ಕಳು. ಇನ್ನೊಂದು ಮಗು ಮಾಡಿಕೊಳ್ಳುವ ಮಾತೇ ಇಲ್ಲ. ಅವಳು ನನ್ನ ಕಾಲದವಳಲ್ಲ. ಈಗಿನ ಹುಡುಗೀರು ಒಂದಕ್ಕೇ `ಉಸ್ಸೋ' ಅಂದು ಬಿಡುತ್ತಾರೆ. ಚೇತನಾಳ ಎರಡನೇ ಕಂದ `ಸರಯೂ' ಇನ್ನೇನು ಶಾಲೆಗೆ ಹೊರಡುವಷ್ಟು ಬೆಳೆದಿದ್ದಾಳೆ. ಚೇತನಾ ಮೊದಲಿನಂತೆಯೇ ಪತ್ರಿಕೋದ್ಯಮಕ್ಕೆ ಬರಬೇಕು. ಅದಕ್ಕೆ ಯಾವಾಗ ಮುಹೂರ್ತವೋ?
ಇನ್ನು ಪರಿಣಿತಾ. ಅವಳು ಪ್ರಿನ್ಸೆಸ್. ನನ್ನ ಮನೆಯ ಐಶ್ವರ್ಯಾ ರೈ! ಅಪಾರ ಚೆಲುವು, ತುಂಟತನ, ನಗು, ಅಕ್ಕರೆ, ಬುದ್ಧಿವಂತಿಕೆ-ಎಲ್ಲವನ್ನೂ ಒಂದೇ ಮಿಕ್ಸಿಗೆ ಹಾಕಿ ಬಸಿದಂತಿದ್ದಾಳೆ. ಅವಳ ಅಮ್ಮ ಒಂದೇ ಹೆರಿಗೆಗೆ ಉಸ್ಸೋ! ಏನೇ ಭಾವನಾ ಅಂದೆ. ನಂಗೆ ನನ್ನದೇ ಆದ ಕೆರಿಯರ್ ಇದೆ. ನೀವು ಸುಮ್ನಿರಿ ಅಂದಳು. ಅವಳು ಓದುವ, ಬರೆಯುವ ಜಾಯಮಾನದವಳಲ್ಲ. ಆದರೆ ಅವಳಿಗೆ ಟೆಲಿವಿಷನ್ ಒಲಿದಿದೆ. ಅವಳು ಚೆಲುವೆಯೂ ಹೌದು. `ನೀವು act ಮಾಡಿಬಿಡಿ ಮೇಡಂ' ಅಂತ ನಿರ್ದೇಶಕರೊಬ್ಬರು ಒತ್ತಾಯಿಸುತ್ತಿದ್ದರು. ಭಾವನಾ ಒಪ್ಪಲಿಲ್ಲ. ಆಸಕ್ತಿಯೇನಿದ್ದರೂ ತೆರೆಯ ಹಿಂದಿನ ಕೆಲಸದಲ್ಲೇ ಅಂದಳು.

ಹಾಗೆ ನನ್ನ ಮೊದಲಿಬ್ಬರೂ ಹೆಣ್ಣು ಮಕ್ಕಳು ತಮ್ಮದೇ ಪ್ರಪಂಚದಲ್ಲಿ ತೇಲಿ ಮುಳುಗಿದ್ದಾರೆ. ಕೆಲ ಬಾರಿ ನನಗೆ ಫೋನಿಗೂ ಸಿಕ್ಕುವುದಿಲ್ಲ. ಮೊದಲೆಲ್ಲ ಮನೆಯಲ್ಲೇ ಇರುತ್ತಿದ್ದರು. ತವರಿಗೂ-ಗಂಡನ ಮನೆಗೂ ಅಂಥ ವ್ಯತ್ಯಾಸವಿರಲಿಲ್ಲ. ಈಗಲೂ ಅಷ್ಟೆ. ಈಗ ಕೊಂಚ ಗಂಡಂದಿರ ಮನೆಗಳಿಗೇ ಕಚ್ಚಿ ಕೊಂಡಂತಿದ್ದಾರೆ. ನಮ್ಮ ಮನೆ ಅವತ್ತಿಂದ ಇವತ್ತಿನ ತನಕ ಗಜಿಬಿಜಿಯೇ. ಖಾಲಿ ಮನೆಯಾಗಿ ಬೋರು ಹೊಡೆಯುವ ಮಾತೇ ಇಲ್ಲ. ಆದರೆ ಈಗೀಗ ಮನೆ ಖಾಲಿ ಖಾಲಿ ಅಂತ ನನಗೇ ಅನ್ನಿಸತೊಡಗಿದೆ. ಲಲಿತಾ ಏನೋ ಕೆಲಸ ಹಚ್ಚಿಕೊಂಡು, ಯಾರೊಂದಿಗೋ ಹರಟುತ್ತಾ ಓಡಾಡುತ್ತಿರುತ್ತಾಳೆ. ಅವಳಿಗೆ ಯೋಗ ಕ್ಲಾಸ್, ಮನೆಯಂಗಳದ ಯಾವುದೋ ಕೆಲಸ, ಟೀವಿ, ಓದು... ಅಂತ ಬ್ಯುಸಿಯಾಗಿರೋದು ಗೊತ್ತು. ಅದೇನೂ ಇಲ್ಲ ಅನ್ನಿಸಿದಾಗ ತನ್ನ ಮೊಬೈಲ್‌ನಲ್ಲಿ candy crush ಆಡುತ್ತಿರುತ್ತಾಳೆ. `ಇದೇನಿದು ಈ ವಯಸ್ಸಿನಲ್ಲಿ games ಆಡ್ತಿದೀಯಾ?' ಅಂದರೆ, ``ನೀವು ಸುಮ್ನಿರಿ. ಇದನ್ನ ಆಡ್ತಾ ಇದ್ದರೆ ಮನಸ್ಸು ಬೇರೆ ಹಾಳು-ಮೂಳು ಯೋಚನೆಗೆ ಬೀಳಲ್ಲ. ನನ್ನ ಮಟ್ಟಿಗೆ ಇದು relaxing point'' ಅಂತಾಳೆ. ಇರಬಹುದೇನೋ. ಸಾಮಾನ್ಯವಾಗಿ ಮನೆಗೆ ಹೊರಟಾಗ, ಇಬ್ಬರೂ ಹೆಣ್ಣುಮಕ್ಕಳಿಗೆ ಫೋನ್ ಮಾಡು ತ್ತೇನೆ. ``ನೋಡಿ ದಿನಗಳೇ ಆದವು. ಮನೆಗೆ ನೀವೂ ಬನ್ರೇ" ಅಂದಿರುತ್ತೇನೆ. ಉಳಿದಂತೆ ಅನೇಕರಿದ್ದರೂ ಹೆಣ್ಣು ಮಕ್ಕಳಿಲ್ಲದ ಮನೆ ಖಾಲಿ ಖಾಲಿ. ಕರ್ಣ ತುಂಬ ಮಾತಿನವನಲ್ಲ. ಅವನೊಂಥರಾ cool fellow. ಅಮ್ಮನ ಹೋಲಿಕೆಗಳು ತುಂಬ ಇವೆ.

ಇದೆಲ್ಲ ಏನೇ ಇದ್ದರೂ ಮನೇಲಿ ಹೆಣ್ಣು ಮಕ್ಕಳಿರ ಬೇಕು. I love that. ನಮಗೆ ಮೊದಲನೆಯವೆರಡೂ ಹೆಣ್ಣೇ ಹುಟ್ಟಿದವಲ್ಲ? ಮೂರನೆಯದೂ ಹೆಣ್ಣೇ ಆಗಲಿ ಅಂದವನು ನಾನು. ಈ ಮಹಾರಾಯ ಹುಟ್ಟಿದ. ಅವರಿಬ್ಬರೂ ಖರ್ಚಾಗಿ ಹೋದರು. ಉಳಿದಿರುವವನು ಕರ್ಣ. ಇಂಗ್ಲಂಡಿನಲ್ಲಿ ಓದು ಮುಗಿಸಿ ಬಂದಾಗ, ``ಅವನು ತಿರುಗಾಡಿಕೊಂಡು ಆರಾಮಾಗಿರಲಿ. ಮದುವೆಯ ಮಾತು ಸದ್ಯಕ್ಕೆ ಬೇಡ" ಅಂದಿದ್ದೆ. ಆಗ ಅವನೂ ಆಸಕ್ತಿ ತೋರಿಸಿರಲಿಲ್ಲ. ಈಗವನಿಗೆ ಇಪ್ಪತ್ತೆಂಟರ ಆಸುಪಾಸು. Right time to many. ಈ ಬಗ್ಗೆ ಒಮ್ಮೆ ಲಲಿತಳೊಂದಿಗೆ ಪ್ರಸ್ತಾಪ ಮಾಡಿದ್ದೆ. ಅವಳಿಗೆ ಬೇರೆಯದೇನೋ ಯೋಚನೆ. ``ಅಲ್ಲ ರವೀ, ಮೊದಲನೆಯವಳು `ನಾಯುಡುಗಾರಿ' ಸೊಸೆ. ಎರಡನೆಯವಳು ವಕ್ಕಲಿಗ ಹುಡುಗನನ್ನ ಮದುವೆ ಯಾದಳು. ಇವನಾದರೂ ಬ್ರಾಹ್ಮಣ ಹುಡುಗೀನ ತರ್ತಾನಾ ಅಂತ ನೋಡಿದರೆ, ಇವನೇನೂ ಆ ದಾರಿಗೆ ಬರೋ ಲಕ್ಷಣಗಳಿಲ್ಲ" ಅಂದಳು.

``ನೋಡೇ ಕನ್ಯಾಮಣಿ, ನಮ್ಮ ಮನೇಲಿ ಬ್ರಾಹ್ಮಣ-ಬ್ರಾಹ್ಮಣ ವಿವಾಹ ಅಂತಾದದ್ದು ಅದೇ ಕೊನೆ: ಅಂದ್ರೆ ನಂದು ಮತ್ತು ನಿಂದು. ಅದೂ ಅಂಥಾ ಹಿರಿಯರು ನಿಶ್ಚಯಿಸಿದ ಪಕ್ಕಾ traditional ಮದುವೆ ಅಲ್ಲ. ನಾವು ಪ್ರೀತಿಸಿ ಮದುವೆಯಾದವರು. ನೀನು ಹೋ.ಕ. ನಾನು ದಾರಿ ಹೋಕ. ಹೋ.ಕ. ಅಂದ್ರೆ ಹೊಯ್ಸಳ ಕರ್ನಾ ಟಕ. ನಾನು M.M.K! ಅಂದ್ರೆ ಮುಲಕ ನಾಡು ಮುಂಡಾ ಕೊಡುಕು. ಇನ್ನು ಈ ಮನೇಲಿ ಬ್ರಾಹ್ಮಣ-ಬ್ರಾಹ್ಮಣ ಮದುವೆಯಾಗುತ್ತೆ ಅಂತ ನಿರೀಕ್ಷೆ ಇಟ್ಟುಕೊಳ್ಳಲೇ ಬೇಡ. ನಿನ್ನ ಮಗ ಮದುವೆ ಆಗ್ತಿದಾನೆ ಅನ್ನೋದೇ ಮೊದಲನೇ ಸಂತೋಷದ ಸುದ್ದಿ. ಅವನು ಹುಡುಗಿಯನ್ನೇ ಮದುವೆ ಆಗ್ತಿದಾನೆ ಅನ್ನೋದು ಪರಮ ಸಂತಸದ ಸುದ್ದಿ. ನಾನು ನನ್ನ ಬಾಯ್‌ಫ್ರೆಂಡ್‌ನ ಆಗ್ತೀನಿ ಅಂದಿದ್ದಿದ್ರೆ ಏನು ಮಾಡ್ತಿದ್ದೆ?" ಅಂದು ನಕ್ಕೆ. ಲಲಿತ ಕೂಡ ಜಾತಿಗಳ ಕುರಿತಂತೆ ತುಂಬ ಪರ್ಟಿಕ್ಯುಲರ್ ಅಲ್ಲ. ಕರ್ಣ ವಕ್ಕಲಿಗರ ಹುಡುಗಿಯೊಂದಿಗೆ ಓಡಾಡ್ತಿದ್ದಾನೆ ಅಂತ ಗೊತ್ತಾದದ್ದು ಮೊದಲು ನಂಗೆ. ಅವಳೊಂದಿಗೆ ನಾನು ಮಾತೂ ಆಡಿದ್ದೆ. Nice girl. ಅಮೆರಿಕದಲ್ಲಿ ಸುಮಾರು ಐದು ವರ್ಷ ಬೆಳೆದವಳು. ನಂತರ ಇಂಗ್ಲಂಡಿನಲ್ಲಿದ್ದವಳು. ಹಾಗಂತ ವಿಪರೀತ ಬಿಡಿಬೀಸಿನ ಮನಸ್ಥಿತಿಯವಳಲ್ಲ. ಅವಳ ತಂದೆ ಕಾಲೇಜಿ ನಲ್ಲಿ ಪ್ರೊಫೆಸರರಾಗಿದ್ದರು. ಈಗ ತುಂಬ ಯಶಸ್ವಿ ಉದ್ಯಮಿ, ಸಜ್ಜನರು. ಅವರು ಮಂಡ್ಯ ಮೂಲದವರು. ನಾನು ಮತ್ತು ಅವರು ಭೇಟಿಯಾದದ್ದು ಇತ್ತೀಚೆಗಿನ ಸಂಗತಿ. ಆದರೆ ನಾಗತಿಹಳ್ಳಿ ಚಂದ್ರಶೇಖರ್‌ನಿಂದ ಹಿಡಿದು ಅಂಬರೀಷ್ ತನಕ ಇಬ್ಬರಿಗೂ ಹತ್ತಿರದವರಾದ ಅನೇಕರಿದ್ದಾರೆ. So many common friends. ಅವರ ಪತ್ನಿ ಕೂಡ ತುಂಬ ಸಜ್ಜನಿಕೆಯ ಹೆಣ್ಣು ಮಗಳು. ಅವರ ಒಬ್ಬಳೇ ಮಗಳು ಲಕ್ಷ್ಮಿ. ಅವಳಿಗೊಬ್ಬ ಅಣ್ಣ ಇದ್ದಾನೆ. ತಂದೆಯೊಂದಿಗೆ ಉದ್ಯಮದಲ್ಲಿ ಅವನು ಭಾಗಿ. All is well. ಅವರದು ನೆಮ್ಮದಿಯ ಕುಟುಂಬ. ಸುಮ್ಮನೆ ಹಣ ಖರ್ಚು ಮಾಡಿಕೊಳ್ಳಬೇಡಿ. ಇಲ್ಲೇ ಹತ್ತಿರದ party hall ನಲ್ಲಿ ನಿಶ್ಚಿತಾರ್ಥ ಮಾಡಿ ಮುಗಿಸಿ ಅಂದಿದ್ದೆ. ಅವರು ವಿಠ್ಠಲಮಲ್ಯ ರಸ್ತೆಯ J.W. Marriot ಹೊಟೇಲಿನಲ್ಲಿ ನಿಶ್ಚಿತಾರ್ಥದ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ. ಅದು ದುಬಾರಿ ಹೊಟೇಲೇ. ನನಗೆ ಕೊಂಚ ಆತಂಕ ಆದದ್ದು ಅಂದರೆ ಮದುವೆ ಮಾಡುವ ಜಾಗದ್ದು. ಚೇತನಾಳ ಮದುವೆ ರಾಜರಾಜೇಶ್ವರಿ ನಗರದ ಮೀನಾಕ್ಷಿ ಚೌಲ್ಟ್ರಿ ಯಲ್ಲಿ. ಸಾಕಷ್ಟು ವಿಶಾಲವಾಗಿತ್ತು. ಆದರೆ ವಿಪರೀತ ಜನ ಬಂದರು. ಬಾರದೆ ಇರುತ್ತಾರೆಯೇ? ಆನಂತರ ಭಾವನಾಳ ಮದುವೆ ಬಂತಲ್ಲ? ನಾನು ಹುಶಾರಾಗಿಬಿಟ್ಟೆ. ಅದೇ ಚೌಲ್ಟ್ರಿಯ ಪಕ್ಕದಲ್ಲೇ ಇನ್ನೊಂದು ಚೌಲ್ಟ್ರಿ ಇದೆ. ಒಂದೇ ಒಡೆತನದ ಕಟ್ಟಡಗಳು. ಹೀಗಾಗಿ ಎರಡರ ನಡುವೆ ಒಂದು passage ಇದೆ. ಓಡಾಟಕ್ಕೆ, ಊಟ ತಿಂಡಿ ಬಡಿಸಲಿಕ್ಕೆ, ಆಹಾರ ಪದಾರ್ಥ ಒಯ್ಯಲಿಕ್ಕೆ ಅನುಕೂಲವಾಗುತ್ತೆ ಎಂಬ ಕಾರಣಕ್ಕೆ ಎರಡನ್ನೂ book ಮಾಡಿದ್ದೆ. ಅನುಕೂಲವಾಯಿತಾ? ಕೇಳಲೇ ಬೇಡಿ. ಮೊದಲು ಒಂದು ಛತ್ರದ ವ್ಯವಸ್ಥೆ ಇತ್ತು. ಅದಕ್ಕೂ ಮಿಕ್ಕಿ ಸ್ನೇಹಿತರು ಬಂದರು. ಎರಡನೇ ಮದುವೆ ಹೊತ್ತಿಗೆ ಛತ್ರಗಳು ಎರಡಾದವು. ಅವೆರಡಕ್ಕೂ ಮೀರಿ ಸ್ನೇಹಿತರು ಬಂದರು. ಬಾರದೆ ಇರುತ್ತಾರೆಯೇ? ಅಳಿಯ ಕಿಟ್ಟಿಯ ನೆಂಟರಿಷ್ಟರೇ ಸಾಕು. ಅವರದು ಬಹಳ ದೊಡ್ಡ ಕುಟುಂಬ. ಅವರನ್ನು ಆಮಂತ್ರಿಸದಿದ್ದರೆ ಹೇಗೆ? ನಾಯ್ಡುಗಾರಿ ಕುಟುಂಬವೂ ಅಷ್ಟೆ. ಮೊನ್ನೆ ಕರಿಷ್ಮಾ ಹಿಲ್ಸ್ ಮನೆಯ ಪ್ರವೇಶ ಸಮಾರಂಭ ಇತ್ತಲ್ಲ? ಅದಕ್ಕೆ ಚೇತನಾಳ ಮಾವ ರಮಣ ನಾಯ್ಡು ಅವರು ಬಂದಿರಲಿಲ್ಲ. ಕೊಂಚ ಅನಾರೋಗ್ಯ ಅಂದರು. ನಾನು ಅವರ ಮನೆಯವರನ್ನು ನೂರು ಸಲ ಕೇಳಿರಬಹುದು: ``ಎಲ್ರಮ್ಮಾ, ಅಣ್ಣ ಬರಲೇ ಇಲ್ಲ" ಅಂತ. ಪದೇಪದೆ ನಾವು ಭೇಟಿಯಾಗದೆ ಇರಬಹುದು. ಆದರೆ ಸಂಬಂಧಗಳು ಗಾಢವಾಗಿವೆ. ತುಂಬ close knit families. ಹಾಗಂತ ಮದುವೆಯಂಥಾ ಸಮಾರಂಭ ಗಳಲ್ಲಿ ನೆಂಟರು-ಬೀಗರು ಎಂದಷ್ಟೇ ಆಗುವುದಿಲ್ಲ. ನನ್ನ ಗೆಳೆಯರದೇ ಪಟ್ಟಿ ನೋಡಿ. ಪತ್ರಕರ್ತರಿದ್ದಾರೆ, ಪೊಲೀಸರಿದ್ದಾರೆ, ಸಿನೆಮಾ ಬಳಗವಿದೆ, ನನ್ನ ಸಿಬ್ಬಂದಿಯವರೇ ಸುಮಾರು ಐನೂರು ಜನರಿದ್ದಾರೆ. ಮೇಲೆ ರಾಜಕಾರಣಿಗಳು. ಇದು ಸಣ್ಣ ಪಟ್ಟಿನ ಮಾತಲ್ಲ. ನನ್ನ ಅಕ್ಕಂದಿರು, ಅತ್ತಿಗೆಯರು, ಅವರ ಮಕ್ಕಳು-ಮುಂತಾದ ಎಲ್ಲರನ್ನೂ ಲಲಿತೆ ಕರೆಯುತ್ತಾಳೆ. ಕರೆಯದೆ ಇದ್ದರೆ ಅಕ್ಕಂದಿರು ಸುಮ್ಮನೆ ಬಿಡುತ್ತಾರೆಯೇ? ``ನೀನು ಎಡಿಟರೋ, ಪಡಿಟರೋ: ಅದೆಲ್ಲ ಅಲ್ಲಿಗೇ ಇಟ್ಕೋ. ನಾವು ಅಕ್ಕಂದಿರು. ಗೌರವದಿಂದ ಕರೆದು, ಗೌರವದಿಂದ ನೋಡಿಕೊಳ್ಳೋ ಜವಾಬ್ದಾರಿ ನಿಂದು!" ಹಾಗಂತ ಪಕ್ಕಾ ರೋಪು ಹಾಕುತ್ತಾರೆ.

ಅಷ್ಟೆಲ್ಲ ಮಂದಿಗೆ ಚಿಕ್ಕ ಪುಟ್ಟ ಛತ್ರಗಳಾದರೆ ಸರಿಯಾಗದು. ದೊಡ್ಡ ಜಾಗಬೇಕು. ಈ ಮಾತನ್ನ ಬೀಗರಿಗೆ ಹೇಗೆ ಹೇಳೋದು? ನಾನು ಮುದುಡಿ ಕುಳಿತು ಬಿಟ್ಟಿದ್ದೆ. ಬಂಧುತ್ವ ಬೆಸೆಯುತ್ತಿರುವಾಗ ಹಾಗೆಲ್ಲ ವ್ಯವಹಾರಸ್ಥನಂತೆ ನಾನು ವರ್ತಿಸುವುದಿಲ್ಲ. ನನ್ನ ಇಬ್ಬರು ಅಳಿಯಂದಿರು, ಅವರ ಹಿರಿಯರು-ಯಾರೂ ಕೂಡ ನನ್ನೊಂದಿಗೆ `ಕೊಡೋದು- ತಗಳ್ಳೋದು' ಅಂತ ಮಾತನಾಡಲೇ ಇಲ್ಲ. ತುಂಬ ಚೆನ್ನಾಗಿ ನಡೆಸಿಕೊಂಡರು. ಈಗ ನಡೆಸಿಕೊಳ್ಳುವವರು ನಾವು. ನಾವಾದರೂ ಹುಡುಗಿಯ ತಂದೆ-ತಾಯಿಯನ್ನ ಚೆನ್ನಾಗಿ ನಡೆಸಿಕೊಳ್ಳಬೇಕು. ಲಲಿತೆ ಕೂಡ ಈ ವಿಷಯದಲ್ಲಿ ನನ್ನಷ್ಟೇ ಸಜ್ಜನಿಕೆಯುಳ್ಳವಳು. ``ನಾವು ಇನ್ನೇನೂ ಕೇಳಲ್ಲ. ಮದುವೆ ಮಾತ್ರ ಚೆನ್ನಾಗಿ ಮಾಡಿಕೊಡಿ" ಅನ್ನೋ ಮಾತಿದೆಯಲ್ಲ? ಅದಕ್ಕೆ ಇಂತಿಷ್ಟೇ ಅಂತ ಸೀಮಿತವಾದ ಅರ್ಥವಿರೋದಿಲ್ಲ. ಅದೊಂಥರಾ ಜಾಣ ದಾದಾಗಿರಿ. ಆದ್ದರಿಂದಲೇ ನಾನು ಲಕ್ಷ್ಮಿ ಮನೆಯ ಹಿರಿಯರಿಗೆ ಹೇಳಿದೆ: ``ನನಗೆ ಮತ್ತಿನ್ನೇನೂ ಬೇಡ. ಮದುವೆಗೆ ಬರೋ ಗುಂಪು ದೊಡ್ಡದು. ನನಗೂ ಬೇರೆ ದಾರಿ ಇಲ್ಲ. ಕೊಂಚ ವಿಶಾಲವಾದ ಜಾಗ ನೋಡಿ, ಅಲ್ಲಿ ಮದುವೆ ಮಾಡಿ" ಅಂದೆ. ಅಷ್ಟು ಮಾತ್ರದ ಮಾತು ಹೇಳೋದರೊಳಗಾಗಿ ಬೆವೆತು ಬಿಟ್ಟಿದ್ದೆ.
ಅಷ್ಟು ಹೇಳಿ ಹೊರಗೆ ಬಾಲ್ಕನಿಯಲ್ಲಿ ಕೂತು ಸಿಗರೇಟು ಸೇದೋಣ ಎಂಬ ನೆಪದಲ್ಲಿ ಹೊರಬಿದ್ದೆ. ನನ್ನ ಭಾವಿ ಬೀಗರಾದ ಶಿವರಾಮ ಅವರೂ ಬೆನ್ನಲ್ಲೇ ಎದ್ದು ಬಂದರು. ಇಬ್ಬರೂ ಪರಸ್ಪರರ ಡಬ್ಬಿಗಳಿಂದ ಸಿಗರೇಟು ಹಿರಿದು ಸೇದಲು ಕುಳಿತೆವು. ಹಾಗೆ ತುಂಬ ಹೊತ್ತು ಮಾತನಾಡುತ್ತ ಕುಳಿತಿದ್ದೆವು. ಮದುವೆ ವಿಷಯವೊಂದನ್ನು ಬಿಟ್ಟು ಉಳಿದ ಸಮಸ್ತ ಸಂಗತಿಗಳನ್ನೂ ಮಾತನಾಡಿದೆವು. ಬಹುಶಃ ಅದೇ ಸರಿ.

ಲಕ್ಷ್ಮಿಯ ತಾಯಿ ಸುಶೀಲಮ್ಮನವರು ತುಂಬ ಸೌಮ್ಯ ಮತ್ತು ಸಮಾಧಾನದ ಹೆಣ್ಣು ಮಗಳು. ತುಂಬ ಮಾತಿನವರಲ್ಲ. ಟೈಮ್ ಟೈಮ್‌ಗೆ ನನಗೆ ಚಹ ಸರಬರಾಜಾಗುತ್ತಿದೆಯಾ ಅಂತ ಗಮನಿಸುತ್ತಿದ್ದರು. ಅವರನ್ನು ಲಲಿತಾ ಮಾತನಾಡಿಸುತ್ತಿದ್ದಳು. ಅವರಾಗಲೇ ಎಂಗೇಜ್‌ಮೆಂಟ್ ದಾಟಿ ಮದುವೆ, ಅದರ ರಿಸೆಪ್ಷನ್ ತನಕ ಮಾತನಾಡಿಯಾಗಿತ್ತು. ಹೆಣ್ಣು ಮಕ್ಕಳೇ ಹಾಗೆ. ಮೊನ್ನೆ ಬೀಗಿತ್ತಿಯರಿಬ್ಬರೂ shoppingWæ ಹೋಗಿದ್ದರು. ಅವರ ಜೊತೆಗೆ ನೀನ್ಯಾಕಯ್ಯಾ ಹೋಗ್ತಿದೀಯ? ಹೆಣ್ಣು ಮಕ್ಕಳೊಂದಿಗೆ shoppingWæ ಹೋಗಲೇ ಕೂಡದು. ಖರ್ಚು ಮಾಡಿಸೋಷ್ಟು ಅವರು ಮಾಡಿಸೇ ಮಾಡಿಸುತ್ತಾರೆ. But you will be bored to death!'' ಅಂತ ಕರ್ಣನಿಗೆ ಹೇಳಿದ್ದೆ. ಅವನು ನನ್ನ ಮಾತು ಕಿವಿಗೆ ಹಾಕಿಕೊಳ್ಳಲಿಲ್ಲ. ಏಕೆಂದರೆ, shopping teamನÈÉ ಲಕ್ಷ್ಮಿ ಇದ್ದಳು!
ನನ್ನ ಬದುಕಿನಲ್ಲಿ ಎಲ್ಲವೂ ಹೀಗೇ ನಡೆದಿವೆ. ಉಳಿದವರಿಗಿಂತ ಮುಂಚೆಯೇ ನನ್ನನ್ನು ಅಮ್ಮ ಶಾಲೆಗೆ ಹಾಕಿದ್ದಳು. ನಾನು ಎಂ.ಎ., ಮಾಡುವಾಗ ಕ್ಲಾಸಿನಲ್ಲಿದ್ದ ಉಳಿದೆಲ್ಲರಿಗಿಂತ ಕಿರಿಯ. ಮುಂದೆ ಯೋಚನೆಗೆ ಟೈಮೇ ಇಲ್ಲದಷ್ಟು ಬೇಗ ಮದುವೆಯಾಯಿತು. ಆಗ ನನಗೆ ಇಪ್ಪತ್ತೊಂದೂವರೆ ವರ್ಷ ವಯಸ್ಸು. ಮದುವೆ ಆದ ಮೇಲೆ ಇನ್ನೇನಿದೆ? ಸಾಲಾಗಿ ಮಕ್ಕಳು. ನನಗೆ ಇಪ್ಪತ್ತೇಳು ಮುಗಿಯುವುದರೊಳಗಾಗಿ ಮೂರು ಮಕ್ಕಳಾದರು. ``ಇಷ್ಟು ಬೇಗ ಬಂದು ಬಿಡ್ತಾ?" ಅಂತ ಎಲ್ಲರೂ ಉದ್ಗರಿಸುವ ಹಾಗೆ ನನಗೆ ಮೂವತ್ಮೂರರ ವಯಸ್ಸಿನಲ್ಲಿ ಡಯಾಬಿಟಿಸ್ ಬಂತು. ಬಂದಮೇಲಿನ್ನೇನಿದೆ? ಅದು ನನ್ನೊಂದಿಗೇ ಇದೆ. ಅವಾರ್ಡುಗಳಾದರೂ ಅಷ್ಟೆ: ಮೊದಲನೆಯ ಅವಾರ್ಡು ಸಾಹಿತ್ಯ ಅಕಾಡೆಮಿಯವರು ಕೊಟ್ಟದ್ದು. ಆಗಷ್ಟೆ ನನಗೆ ಇಪ್ಪತ್ತೆರಡು ಮುಗಿಯುತ್ತಿತ್ತು. ನಂತರ ಅವು ಬರುತ್ತಲೇ ಇವೆ. ನಾನು `ಬಾ' ಅಂತ ಕರೆದಿಲ್ಲ. ಬಂದಾಗ `ತೊಲಗು' ಅಂತಲೂ ಅಂದಿಲ್ಲ. ನಮ್ಮ ಕುಟುಂಬದಲ್ಲಿ ಇನ್ನೊಬ್ಬರು ಇಲ್ಲವೇ ಇಲ್ಲ. ನಾನೇ ಫಸ್ಟು! ಸಿಗರೇಟು, ವಿಸ್ಕಿ, ಮಾಂಸ, ಎರಡು ಮದುವೆ-ನೀವು ಕೇಳಲೇ ಬೇಡಿ: ಅವುಗಳನ್ನೆಲ್ಲ ಕರೆದು ಸಾಕಿದುದರಲ್ಲಿ ನಾನೇ ಫಸ್ಟು.
ಈಗ ಮಗನ ಮದುವೆ ಆಗುತ್ತಿದೆ. `ಅಲ್ಲಿಗೆ ಜವಾಬ್ದಾರಿ ಮುಗಿಯಿತು' ಅಂತ ಖಂಡಿತ ನಾನು ಅನ್ನುವುದಿಲ್ಲ. ಏಕೆಂದರೆ, ಜವಾಬ್ದಾರಿಯನ್ನು ನಾನು ಯಾವತ್ತೂ ಹೊತ್ತವನಲ್ಲ. ಅಂದಮೇಲೆ, ಅದು ಮುಗಿಯುವುದೂ ಇಲ್ಲ. ಅಲ್ಲವಾ? "congrats' ಯಾರಿಗಾದರೂ ಹೇಳಬೇಕು ಅಂತ ಅವಸರವಾದರೆ, ಅವರು ಲಲಿತೆಗೆ ಹೇಳಬೇಕು. She deserves. ಕರ್ಣನಿಗೆ ಪ್ರತೀ ತಿಂಗಳು, ನಾನೇ ಸಂಬಳ ಕೊಡುತ್ತೇನೆ. ಏಕೆಂದರೆ `ಪ್ರಾರ್ಥನಾ'ಗೆ ಅವನು ಡೆಪ್ಯುಟಿ ಸೆಕ್ರೆಟರಿ. ಆಡಳಿತವನ್ನು ಅವನೇ ನೋಡುತ್ತಿದ್ದಾನೆ. ಮನೆಯದಾದರೂ ಅಷ್ಟೆ. ಸೊಸೆ ಬರುವ ಹೊತ್ತಿಗೆ ನಾವು ಹೊಸ ಮನೆಗೆ ಹೋಗಿ ಆಗಿರಬೇಕು ಅಂತ ಲಲಿತೆ ನಿರ್ಧರಿಸಿದ್ದಳು. ಮೊನ್ನೆ ಗೃಹಪ್ರವೇಶವಾಯಿತು. ಈಗ ಮದುವೆಯ ನಿಶ್ಚಿತಾರ್ಥ. ಜೂನ್ ಆರಂಭದಲ್ಲೇ ಮದುವೆ. ಅದರೊಳಗಾಗಿ ಮನೆ shift ಆಗಬೇಕು. ಅದಾದರೂ ಕರ್ಣನದೇ ಜವಾಬ್ದಾರಿ. ಅವರೆಲ್ಲ ಹೋಗಿ ಹೊಸ ಮನೆಯಲ್ಲಿ shift ಆಗೋ ಕೆಲಸ ಬಾಕಿ ಇದೆ. ಆನಂತರ ನಾನು ಹೋಗುತ್ತೇನೆ. ಅಕಸ್ಮಾತ್ ಒಬ್ಬನನ್ನೇ ಬಿಟ್ಟರೆ, ನನಗೆ ಖಂಡಿತ ಹೋಗಲಾಗುವುದಿಲ್ಲ. ಸರಿಯಾಗಿ ದಾರಿ ನೋಡಿಲ್ಲ. ಮಗ ಬಂದು ಕರೆದೊಯ್ಯಬೇಕು.

ಅದಕ್ಕೇ ಅಂದಿದ್ದು: ಆಗಬೇಕಾದುದೆಲ್ಲ ತನ್ನ ಪಾಡಿಗೆ ತಾನು ಆಗುತ್ತಿದೆ. ಹೆಣ್ಣು ಮಕ್ಕಳು ಮದುವೆಯಾಗಿದ್ದಾರೆ. ಈಗ ಸೊಸೆ ಬರುತ್ತಿದ್ದಾಳೆ. ಈಗಾಗಲೇ ಮೂವರು ಮೊಮ್ಮಕ್ಕಳಿದ್ದಾರೆ. ಇನ್ನೂ ಆಗುತ್ತಾರೆ. ಎಲ್ಲಕ್ಕಿಂತ ಮಿಗಿಲಾಗಿ ಲಲಿತಳ ಆರೋಗ್ಯ ಚೆನ್ನಾಗಿದೆ. ನನ್ನದೂ ಕೊಂಚ ದಾರಿತಪ್ಪಿ, ಅದೀಗ ಚಿಗುರಿಕೊಂಡು ಚೆನ್ನಾಗಿ ಆಗಿದೆ. Thanks ಹೇಳೋಣ ಅಂದರೆ ದೇವರು ಕೈಗೆ ಸಿಗುತ್ತಿಲ್ಲ. ಅವನಾದರೂ ಕರ್ಟಿಸಿಗೆ ಒಂದು ಫೋನ್ ಮಾಡಬಹುದಿತ್ತು. ಅವನೂ ಮಾಡಿಲ್ಲ. Not a good manners. ಅಲ್ವಾ?

-ನಿಮ್ಮವನು
ಆರ್.ಬಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 14 April, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books