Ravi Belagere
Welcome to my website
ನಿಮ್ಮದು ಎಂಥ ಮ್ಯಾರೇಜು? ಶುದ್ಧ ಅರೇಂಜ್‌ಡಾ? ನೀವೇ ಮಾಡಿಕೊಂಡ ಲವ್ ಮ್ಯಾರೇಜಾ? live in relationshipನಂತಹ  ಗಾಂಧರ್ವ ವಿವಾಹನಾ? ‘ಲವ್ ಕಮ್ ಅರೇಂಜ್ಡ್’ ಮದುವೆಯಾ? ಅಂತರ್‌ಜಾತೀಯ ವಿವಾಹವಾ? ಅಂತರ್‌ಧರ್ಮೀಯ ವಿವಾಹವಾ? (Request :ಜಾತಿಗಳ ಪುಸ್ತಾಪ ಮಾಡಬೇಡಿ) Love, run and marry ಎಂಬಂತೆ ಮನೆಗಳನ್ನು ಬಿಟ್ಟು ಹೋಗಿ ಆದ ಮದುವೆಯಾ? ಎಂಥ ಮದುವೆಯಾಗಿದ್ದರೂ ಅಡ್ಡಿಯಿಲ್ಲ. ಅದಕ್ಕೆ ಗೌರವವಿದೆ. ಒಂದು inland letterನಷ್ಟು ಬರವಣಿಗೆಯನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆಯಿರಿ. ಜೊತೆಗೆ ಇಬ್ಬರೂ ಇರುವ ಫೊಟೋ ಕಳಿಸಿ. mail ಮಾಡೋದಾದರೆ [email protected]ಗೆ ಮಾಡಿ.
Home About Us Gallery Books Feedback Prarthana Contact Us

Buy Ravi Belagere Books online

ಸಿಗರೇಟೆಂಬ ನಿರ್ಲಜ್ಜ ಸಂಗಾತಿಯನ್ನು ಜುರಿಕೆ ಎಳೆದು ಬಿಸಾಡಿದ ಕ್ಷಣದಲ್ಲಿ!

ಒಂದೊಂದಾಗಿ ಬರಲಾರಂಭಿಸಿವೆ ಮಾವಿನ ಹಣ್ಣುಗಳು ಮಾರುಕಟ್ಟೆಗೆ. ತಲೆ ಮೇಲೆ ತಲೆ ಬಿದ್ದು ಹೋದರೂ ದಿನಕ್ಕೆ ನಾನು ಒಂದಾದರೂ ಹಣ್ಣು ತಿಂದೇತಿನ್ನುತ್ತೇನೆ. ಒಳ್ಳೆಯ ಕಿತ್ತಳೆ, ಇಷ್ಟೇ ಇಷ್ಟು ಹುಳಿ ಬೆರೆತ ದ್ರಾಕ್ಷಿ, ಹಿಂಜರಿಕೆಯಿಂದಲೇ ಮೊದಲ ಹೋಳು ಅನ್ನುತ್ತೇನೆ ಸಪೋಟ, ಚೆನ್ನಾಗಿ ಕಳಿತ ಚುಕ್ಕೆ ಬಾಳೆ ಹಣ್ಣು, ತನ್ನ ಘಮದಲ್ಲೇ ಸ್ವರ್ಗ ಕಾಣಿಸುವ ಹಲಸಿನ ತೊಳೆ, ಚೆನ್ನಾಗಿ ಹಣ್ಣಾದ ಒಂದು ಪಪ್ಪಾಯ, ಪನ್ನೇರಳೆ, ನೇರಳೆ-ನಾನು ಯಾವುದನ್ನೂ ಬಿಡುವುದಿಲ್ಲ. ಆದರೆ ಮಾವು! ಅದೊಂಥರಾ ಆಸ್ಥಾನಕ್ಕೆ ಗಂಭೀರವಾಗಿ ನಡೆದು ಬರುವ ಪಟ್ಟದರಸಿಯಂತಹುದು. ಅದೂ ಏನು, ಒಂದು ತರಹದ್ದಾ? ಬಂಗಿನಪಲ್ಲಿ, ಆಪೋಸಾ, ಅಲೋನ್ಸಾ, ನೀಲಮ್, ಚೀಪಿ ಚೀಪಿಯೇ ತಿನ್ನುವಂತಹ ಆ ನಾರು ಮಾವಿನಹಣ್ಣು, ಜೀರಿಗೆ ಮಾವು, ಬಾದಾಮಿ, ಮಲಗೋವಾ, ರಸಪುರಿ-ಒಂದೊಂದಲ್ಲ ಬಿಡಿ. ಅವು ತಮ್ಮ ಸರದಿ ನಿಯಮಗಳ ಪ್ರಕಾರವೇ, ತಮ್ಮದೇ ಚೆಲುವಿನೊಂದಿಗೆ ಮಾರುಕಟ್ಟೆಗೆ ಬರುತ್ತವೆ. ನಾನು ಅತಿಕಾಮಿ ವಿಟನಂತೆ ಅವುಗಳಿಗಾಗಿ ಕಾಯುತ್ತ ಕುಳಿತಿರುತ್ತೇನೆ. ಆದರೆ ನಾನು ತಿಂದ ಅತ್ಯದ್ಭುತ ವೆರೈಟಿಯ ಮಾವು ಯಾವುದು ಗೊತ್ತಾ? ಅದರ ಹೆಸರು ಮರೆತಿದ್ದೇನೆ. ಆದರೆ ಕೈಯಲ್ಲಿ ಅದರ ಪರಿಮಳವಿನ್ನೂ ಉಳಿದಿದೆ! ಅದು ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಾನು ತಿಂದ ಮಾವು. Nothing like that. ಅಲ್ಲಿ ನಾವು ಸೆರೇನಾ ಹೊಟೇಲಿನಲ್ಲಿ ಉಳಿದದ್ದು ನೆನಪಿದೆ. ಜಗತ್ತಿನ ಯಾವುದೇ ಸ್ಟಾರ್ ಹೊಟೇಲಿಗೆ ಹೋಗಿ ನೋಡಿ, ಟೀಪಾಯಿಯ ಮೇಲೆ ಅಲಂಕಾರಿಕವಾದ ತಟ್ಟೆಯಲ್ಲಿ ಆ ಸೀಜನ್‌ನಲ್ಲಿ ಸಿಗುವ ಬೆಸ್ಟ್ quality¿á ಒಂದು ಹಣ್ಣು ಇಟ್ಟಿರುತ್ತಾರೆ. ಅಲ್ಲಿ ಮಾವಿತ್ತು. ಚಪಲ ತಡೆಯಲಾಗದೆ ಒಂದು ಹಣ್ಣುತಿಂದೆ. ಅಲ್ಲಿಗೆ ನಿಂತೀತಾ? ಹೊಟೇಲಿನ ದರ್ಬಾನ್‌ನಿಗೆ ಹೇಳಿ ಒಂದಿಡೀ fruit bowl ತುಂಬ ತರಿಸಿ, ಬಾಗಿಲು ಹಾಕಿಕೊಂಡು ಕುಳಿತು ಮನಸಾರೆ ತಿಂದೆ! ಅದು ಶತ್ರು ದೇಶ-ನಿಜ. ಮಾವು ಶತ್ರುವಲ್ಲವಲ್ಲ? ಲಾಹೋರ್‌ನ ಬಿರಿಯಾನಿ ಮತ್ತು ಕೆಬಾಬ್ ಕೂಡ ಅಷ್ಟೆ. ಶತ್ರುವಲ್ಲ. ``ರವೀ, ನಾನು ಇಷ್ಟು ದೇಶ ಸುತ್ತಿದ್ದೇನೆ. ತಿಂಗಳುಗಟ್ಟಲೆ ಲಂಡನ್‌ನಲ್ಲಿದ್ದು ಬಂದಿದ್ದೇನೆ. ಅಲ್ಲೆಲ್ಲ ಕಡೆ ಮಾವು ಸಿಗುತ್ತವೆ. ನಾನಾ ದೇಶಗಳಿಂದ ತರಿಸುತ್ತಾರೆ. ಆದರೆ best mango comes from Pakistan'' ಅಂದು ನನ್ನ ಇಸ್ಲಾಮಾಬಾದ್ ಅನುಭವವನ್ನು ಊರ್ಜಿತ ಗೊಳಿಸಿದವನು ಗಿರೀಶ್ ಹಂಪಾಳಿ. ಪಾಕಿಸ್ತಾನ್ ಅಂದ ಕೂಡಲೆ ನನಗೆ ನೆನಪಾಗೋದೇ ಮಾವು, ಬಿರಿಯಾನಿ ಮತ್ತು ಕೆಬಾಬ್! ಈಗ ಬೆಂಗಳೂರಿನಲ್ಲಿ ಮಾವಿನ ಭರಾಟೆ ಶುರುವಾಗುತ್ತಿದೆ. ಬ್ರಿಗೇಡ್ ರಸ್ತೆಯ ತುದಿಯಲ್ಲಿ ಒಂದಿಬ್ಬರು ತುಂಬ ಶ್ರೇಷ್ಠವಾದ ಹಣ್ಣು ತರಿಸಿ ಮಾರುತ್ತಾರೆ. ಖುದ್ದಾಗಿ ಹೋಗಿ ಹಣ್ಣು ತರಬೇಕು. ಕೆಲವು ಹಣ್ಣು ಹೆಚ್ಚಿಕೊಂಡು ತಿನ್ನಬೇಕು. ಮತ್ತೆ ಕೆಲವು ಹಿಂಡಿ, ರಸವನ್ನು ಜುರುಕಿಕೊಂಡು, ಕೈಯ್ಯೆಲ್ಲ ಸೋರುವ ಆ ಮಾಧುರ್ಯವನ್ನು ನೆಕ್ಕುತ್ತ ತಿನ್ನಬೇಕು. ಇನ್ನೇನು ಸೀಜನ್ ಮುಗಿಯುತ್ತಾ ಬಂದಿದೆ ಅಂದುಕೊಳ್ಳುತ್ತಿರು ವಾಗಲೇ ಬರುವ ಆ ನಾರು ಹಣ್ಣು? ಅದನ್ನು ಚೀಪುವ ಪರಮಾನಂದವೇ ಬೇರೆ. ನನಗೆ ಡಯಾಬಿಟೀಸು. ಅದು ಬಂದೇ ಇಪ್ಪತ್ತೆರಡು ವರ್ಷಗಳಾಗಿವೆ. ಬರೋದಕ್ಕೆ ಮುಂಚೆ ಹುಬ್ಬಳ್ಳಿಯಲ್ಲಿದ್ದೆ. ಅಲ್ಲಿ ಪ್ರತೀ ಬ್ರಾಹ್ಮಣರ ಮನೆಯಲ್ಲಿ ಹೋಳಿಗೆ ಮತ್ತು ಸೀಕರಣೆ ಕಾಂಬಿನೇಷನ್ ಮಾಡುತ್ತಾರೆ. ಯಾರೇ ಕರೆಯಲಿ: ಶತ್ರುಗಳೇ ಕರೆಯಲಿ.

ಜೀವದ ಮೇಲಿನ ಆಸೆ ಬಿಟ್ಟವನಂತೆ ಹೋಗಿ ಲಕ್ಷಣವಾಗಿ ಹೂರಣದ ಹೋಳಿಗೆ ಮತ್ತು ಮಾವಿನ ಸೀಕರಣೆ ತಿನ್ನುತ್ತಿದ್ದೆ. ಸಂಯುಕ್ತ ಕರ್ನಾಟಕದ ಸಹೋದ್ಯೋಗಿಗಳನೇಕರು ಅಡುಗೆ ಮಾಡಿಸಿ ಕರೆಯುತ್ತಿದ್ದರು. ಅಲ್ಲಿದ್ದಾಗಲೇ ಈ ಡಯಾಬಿಟಿಸ್ ಎಂಬ ಪೀಡೆ ತಲೆ ಎತ್ತಿದ್ದು. ಆದರೆ ಮಾವು ಎಂಬುದು ಗವರ್ನರ್ ಸಾಹೇಬರ ಕಾರ್‌ನ ಹಾಗೆ. ಟ್ರಾಫಿಕ್ ಬೇಕಾದಷ್ಟಿರಲಿ, ಗವರ್ನರ್ ಗಾಡಿ ಸರಾಗವಾಗಿ ಸಾಗು ತ್ತದೆ. ನೆತ್ತಿಯ ಮೇಲಿನ ಕೆಂಪು ದೀಪದ ಖದರ್ ಅದು. ಈ ಇತ್ತೀಚೆಗೆ ಪಥ್ಯ ಮುರಿಯಲು ಕೊಂಚ ಹೆದರುತ್ತೇನೆ. ರಸಾಯನ ಎದುರಿಗೇ ಇದ್ದರೂ `ನಂದಲ್ಲ' ಅಂದುಕೊಂಡು ತೆಪ್ಪಗಾಗಿ ಬಿಡುತ್ತೇನೆ. ಇಡೀ ಸೀಜನ್‌ನಲ್ಲಿ ಹೆಚ್ಚೆಂದರೆ ಒಂದು, ಒಂದೂವರೆ ಹಣ್ಣುತಿನ್ನುತ್ತೇನೆ: ಬೇರೆ ದಾರಿಯಿಲ್ಲ. ಸಕ್ಕರೆ ಖಾಯಿಲೆ ಎಂಬುದು ಅಂಥ ಬರಬಾರದ ಭಯಾನಕ ರೋಗವಲ್ಲ. ಆದರೆ ಸಕ್ಕರೆಯ ಅಂಶ ವಿಪರೀತ ಹೆಚ್ಚಾಯಿತಾ? ಅದಕ್ಕಿಂತ ಖತರ್‌ನಾಕ್ ಮತ್ತೊಂದಿಲ್ಲ. ಮೊನ್ನೆ ಆ ಪುಣ್ಯಾತ್ಮ ಬಂದು ಪ್ರಕೃತಿ ಚಿಕಿತ್ಸೆ ಅಂತ ಜಿಂದಲ್‌ಗೆ ಅಪ್ಪ-ಅಮ್ಮನ ಸಮೇತ ಅಡ್ಮಿಟ್ ಆಗಿದ್ದನಲ್ಲ? ಅವನೇ ಕೇಜ್ರಿವಾಲ್. ನೋಡಲಿಕ್ಕೆ ತೆಳ್ಳಗೇ ಇದ್ದಾನೆ. ಆದರೆ ಅವನ ಶುಗರ್? ಅದು ಸಚಿನ್ ತೆಂಡೂಲ್ಕರ್‌ನ ಸ್ಕೋರು! ಆರಂಭದಲ್ಲಿ ಸಕ್ಕರೆ ಅಂಶ ಹಿಡಿತದಲ್ಲೇ ಇರುತ್ತದೆ. ದಿನ ಹೋದಂ ತೆಲ್ಲ ಅದು ಆಟ ತೋರಿಸು ತ್ತದೆ. It is a progressing disease. ಸಕ್ಕರೆ ಖಾಯಿಲೆ `ಬೆಳೆಯುತ್ತ' ಹೋಗುತ್ತದೆ. ಅವನು ಕೇಜ್ರಿವಾಲ್ `ಪ್ರಕೃತಿ ಚಿಕಿತ್ಸೆ' ಅಂದಾಗಲೇ ನನಗೆ ಅನುಮಾನ ಬಂತು: ಇಂಗ್ಲಿಷ್ ಮೆಡಿಸನ್‌ಗೆ ರೋಗ ಬಗ್ಗುತ್ತಿಲ್ಲ ಅಂತ. ನಾನೂ ನೋಡಿದ್ದೇನೆ. ನಮ್ಮ ಹರಪನಹಳ್ಳಿಯ ಮುಪ್ಪಾನ ಮುಪ್ಪಿನ ಬ್ರಾಹ್ಮಣ ಹಿರಿಯರು. ಅವರಿಗೆ ಡಯಾಬಿಟಿಸ್ ಬಂದೇ ನಲವತ್ತು ವರ್ಷಗಳಾಗಿರುತ್ತದೆ. ಅವರು ಅಸಲಿಗೆ diet ಮಾಡುವುದೇ ಇಲ್ಲ. ಅದೇನು ಔಷಧಿ ತಿಂತಾರೋ ಗೊತ್ತಿಲ್ಲ. ಎಂಬತ್ತು ವರ್ಷ ಮೀರಿದರೂ ಮಸ್ತಾಗಿ ತಿಂದು, ತುಪ್ಪ ನೆಕ್ಕಿಕೊಳ್ಳುತ್ತಾ, ಓಡಾಡಿಕೊಂಡು ಇರುತ್ತಾರೆ. ಕೇಳಿದರೆ, ``ಹೋಗೋ ರಂಡೇ ಮಗನೇ... ತಿನ್ನೋದಕ್ಕೂ, ಸಕ್ರಿ ರೋಗಕ್ಕೂ ಏನು ಸಂಬಂಧ?" ಅನ್ನುತ್ತಾರೆ. ಮೊನ್ನೆ ನನ್ನ ಸೋಮಾರಿತನ ಕೊಡವಿಕೊಂಡು ಎದ್ದು, ಇಲ್ಲೇ ಸಮೀಪದಲ್ಲಿರುವ ಆಸ್ಪತ್ರೆಗೆ ಹೋದೆ.

ನನಗೆ ತಿಂಗಳು ಅಥವಾ ವರ್ಷಗಟ್ಟಲೆ ಯಾವ ರೋಗನೂ ಕಾಡುವುದಿಲ್ಲ. ನನ್ನ ಬಾಲ್ಯವಾದರೂ ಅಷ್ಟೆ. ಜ್ವರ ಬಂದರೆ ಅದು ಮೂರು ದಿನ. ನಾಲ್ಕನೇ ದಿನ ಎದ್ದು ಶಾಲೆಗೆ ಓಡುತ್ತಿದ್ದೆ. ಜ್ವರ ಎಂಟು ದಿನವಾದರೂ ಹೋಗದಿದ್ದರೆ, ಅದು ಟೈಫಾಯಿಡ್! ಅಷ್ಟು ಬಿಟ್ಟರೆ ಬೇರೆ ಯಾವ ಸುಡುಗಾಡೂ ಇರುತ್ತಿರಲಿಲ್ಲ. ನನ್ನ ಪಾಲಿಗೆ ಇವತ್ತಿಗೂ ಸಕ್ಕರೆ ಖಾಯಿಲೆ ದೊಡ್ಡ ಸಮಸ್ಯೆಯಾಗಿಲ್ಲ. ಆದರೆ ಇದೇನಿದು? ಒಂದು ಸಂಜೆ ನಮ್ಮ ಸೀನನನ್ನು ಕರೆದುಕೊಂಡು ಎಲ್ಲಿಗೋ ಹೋಗಿದ್ದೆ. ಹಿಂತಿರುಗುವಾ ಗಲೂ ಅದರ ಸುಳಿವಿರಲಿಲ್ಲ. ಆದರೆ ಹಿಂತಿರುಗಿದ ಸ್ವಲ್ಪೇ ಹೊತ್ತಿಗೆ ಶುರುವಾಯಿತು ನೋಡಿ? ಅದು ಭಯಂಕರವಾದ ಉಸಿರಾಟದ ತೊಂದರೆ. ಅಸಲಿಗೆ ಉಸಿರೇ ದಕ್ಕುತ್ತಿರಲಿಲ್ಲ. ಆಯ್ತು, ಇನ್ನೇನು ನಾನು ಸ್ವಲ್ಪ ಹೊತ್ತಿಗೆ ನಾನು ಸತ್ತೇ ಹೋಗುತ್ತೇನೆ ಅನ್ನಿಸಿತು. `ಹೀಗೆ, ಉಸಿರಾಟದ ತೊಂದರೆಯಿಂದಾಗಿ ಸಾಯುತ್ತಿದ್ದೇನೆ' ಅಂತ ನನ್ನ ಹೆಂಡತಿಗೆ ಒಂದು ಎಸ್ಸೆಮ್ಮೆಸ್ ಕಳಿಸಿ ಸತ್ತು ಹೋಗೋಣ ಅಂದುಕೊಂಡೆ. ಆ ಪರಿ ಉಸಿರ ತೊಂದರೆ ಯಲ್ಲಿ ನಿದ್ರೆ ಬರೋದಾದರೂ ಹೇಗೆ? ಮಾತ್ರೆ ತಿಂದು ದಟ್ಟವಾಗಿ ಹೊದ್ದುಕೊಂಡು ಮಲಗಿಬಿಟ್ಟೆ. ಬೆಳಿಗ್ಗೆ ಎದ್ದು ನೋಡಿದರೆ ಯಾವ ಸುಡುಗಾಡೂ ಇಲ್ಲ. Freshಆಗಿ ಎದ್ದು ಕುಳಿತೆ. ಉಸಿರಾಟ ಆರಾಮ್! ಆದರೆ ಸಂಜೆಯಾಗುತ್ತಿದ್ದಂತೆ ಶುರುವಾಯಿತಲ್ಲ? ಹಿಂದಿನ ರಾತ್ರಿ ಆದಷ್ಟೇ ತೊಂದರೆ ಯಾಯಿತು. ನನಗೆ ಯಾವತ್ತೂ ಆಸ್ತಮಾ ಅನುಭವಿಸಿ ಗೊತ್ತಿಲ್ಲ. ಈಗ ಬಂದದ್ದೂ ಆಸ್ತಮಾ ಅಲ್ಲ. ಉಸಿರೆಳೆದುಕೊಂಡರೆ ಗೂರಲು ಸದ್ದು-ಅಂಥದ್ಯಾವುದೂ ಇಲ್ಲ. ಇದ್ದದ್ದು breathlessness. ನನಗೆ ಸುಮಾರು ನಾಲ್ಕು ದಿನ ಈ ಸಮಸ್ಯೆ ಕಾಡಿತು. ನಾಲ್ಕನೆಯ ದಿನ ಸರಿಯಾಗಿ ಸಂಜೆ ಐದು ಗಂಟೆಗೆ ಯಾರೋ bell ಹೊಡೆದರೇನೋ ಎಂಬಂತೆ ಉಸಿರು ಸಿಕ್ಕು ಬೀಳುತ್ತಿತ್ತು: ಅಲ್ಲಿಂದ start ಆದರೆ ಮೊದಲ ನಾಲ್ಕು ದಿನದಷ್ಟು ಅತಿರೇಕವಿರಲಿಲ್ಲ. ಒಮ್ಮೆ ನನ್ನ ಮಿತ್ರರೂ ಆದ ಡಾ.ರಮೇಶ್ ಅವರ ಬಳಿಗೆ ಹೋದೆ. ಸಂಜೆ ಏಳೂವರೆ ಆಗಿತ್ತು. ಅವರು ಸ್ಟೆಥಾಸ್ಕೋಪ್ ಇಟ್ಟು ಸುದೀರ್ಘವಾಗಿ ಪರೀಕ್ಷೆ ಮಾಡಿದರು. ``ಇಲ್ಲ ರವೀ, ಉಸಿರು ಸಿಕ್ಕಿ ಹಾಕಿಕೊಂಡಾಗಲೇ ನನ್ನ ಹತ್ತಿರಕ್ಕೆ ಬರಬೇಕು. ಆಗ ಗೊತ್ತಾಗಬಹುದು. ಈಗ ನಿಮ್ಮ ಶ್ವಾಸಕೋಶಗಳು ತುಂಬ ಮಾಮೂಲಿಯಾಗಿವೆ. ಒಂದು ಚಿಕ್ಕ ಸದ್ದೂ ಕೇಳಿಸುತ್ತಿಲ್ಲ" ಅಂದರು.

``ಡಾಕ್ಟ್ರೇ, ಈಗಲೇ ನನಗೆ ಆ ಸಮಸ್ಯೆ ಇದೆ: right now! ಅದು ಮೇಲ್ನೋಟಕ್ಕೆ ನಿಮಗೆ ಗೊತ್ತಾಗುವುದಿಲ್ಲ. ಮೊದಲ ನಾಲ್ಕು ದಿನಗಳ severe ಆಗಿಲ್ಲ ಅಷ್ಟೆ. ಆದರೆ ಉಸಿರು ಸಿಕ್ಕಂತೆಯೇ ಇದೆ" ಅಂದೆ. ರಮೇಶ್ ಡಾಕ್ಟ್ರಿಗೆ ಏನು ಮಾಡಿದರೂ ಸಮಸ್ಯೆ ಏನೂಂತ ಗೊತ್ತಾಗಲಿಲ್ಲ. ಇನ್ನಿಬ್ಬರು ಖ್ಯಾತ ವೈದ್ಯರ ಬಳಿಗೆ ಹೋದೆ. ಆಗಲೂ ಸಂಜೆ ದಾಟುತ್ತಿತ್ತು. ಅವರೂ ಮಕಮಕ ನೋಡಿದರು. "lungs are very clear. ನಮಗೆ ಏನೂ ಗೊತ್ತಾಗ್ತಿಲ್ಲ" ಅಂದರು. ಕೊನೆಗೆ ನೋಡಿದ ಒಬ್ಬ ವೈದ್ಯರು ಮಾತ್ರ ``ನೀವು ಒಂದು ಸಲ ಪಲ್ಮನಾಲಜಿಸ್ಟ್ (pulmonologist)ಗೆ ತೋರಿಸೋದು ಒಳ್ಳೇದು. ನಮಗಿದು ಬಗೆಹರಿಯು ತ್ತಿಲ್ಲ" ಅಂದರು. ನಾನು ಆ ಹೊತ್ತಿಗೆ ರೋಸಿ ಹೋಗಿದ್ದೆ. ಎಷ್ಟು ಡಾಕ್ಟರ್‌ಗಳಿಗೇಂತ ತೋರಿ ಸೋದು? ಈಗ ಶ್ವಾಸಕೋಶ ತಜ್ಞರ ಬಳಿಗೆ ಹೋಗು ಅಂತಿದ್ದಾರೆ. ಅಲ್ಲದೆ, ಪ್ರತೀ ಡಾಕ್ಟರೂ ಅದೇ ತಪ್ಪು ಹುಡುಕುತ್ತಾರೆ. ನೀವು ಸಿಗರೇಟು ಸೇದ್ತೀರಿ. ಆದ್ದರಿಂದಲೇ ಈ ಸಮಸ್ಯೆಯಾಗಿರಬಹುದು ಅಂತಾರೆ. ಆದದ್ದಾಗಲಿ, ಇನ್ನು ನಾನು ಡಾಕ್ಟರ ಬಳಿಗೆ ಹೋಗಲ್ಲ ಅಂತ ನಿರ್ಧರಿಸಿದೆ. ಅದಕ್ಕೆ ಸರಿಯಾಗಿ ಈ ಉಸಿರಾಟದ ಸಮಸ್ಯೆ ಕೂಡ ಕೊಂಚ ಕಡಿಮೆಯಾಯಿತು. ಸಂಜೆ ಐದರ ಡಿಸಿಪ್ಲೀನ್ ಬಿಟ್ಟು, ಅದು ತನಗೆ ತೋಚಿದ ಸಮಯಕ್ಕೆ ಬರತೊಡಗಿತು. ಕೆಲವು ದಿನ ಅಸಲು ಬರುತ್ತಿರಲೇ ಇಲ್ಲ. ಇದೊಂದು ಪೀಡೆ. ಇದಕ್ಕೆ ನಾನೇ adjust ಆಗಿ ಬಿಡಬೇಕು ಅಂದುಕೊಂಡೆ. ಬೆಳಿಗ್ಗೆಯಿಂದ ಎಷ್ಟು ಸೇದಿದೆ? ಲೆಕ್ಕವಿಡತೊಡಗಿದೆ. ಹ್ಞಾಂ, ಕಡಿಮೆ ಸೇದಿದಾಗ ಇದೂ ಕಡಿಮೆ ಕಾಟ ಕೊಡುತ್ತದೆ ಎಂದು ಅರಿವಾಗಿ ಸೈಂಟಿಸ್ಟ್ ಥರ ಕುಣಿದಾಡಿದೆ. ನಿಜಕ್ಕೂ ಕಡಿಮೆ ಸೇದತೊಡಗಿದೆ. ಅದರ ಪಾಡಿಗೆ ಬಿಟ್ಟಿದ್ದಿದ್ದರೆ ಈ ಸಿಗರೇಟು-ಉಸಿರಿನ ತೊಂದರೆಗಳೆರಡೂ ಹಿಡಿತಕ್ಕೆ ಬರುತ್ತಿದ್ದವೇನೋ? ಮೊನ್ನೆ ಬೆಳಿಗ್ಗೆ ಎದ್ದವನೇ

``ಪಲ್ಮನಾಲಜಿಸ್ಟ್ ಬಳಿ ಅಪಾಯಿಂಟ್‌ಮೆಂಟ್ ತಗೋ. ಅದೊಂದು ದಂಡ ಯಾತ್ರೆ ಮುಗಿಸೇ ಬಿಡೋಣ" ಅಂತ ಉಮೇಶ್‌ಗೆ ಹೇಳಿದೆ. ಆ ಹೊತ್ತಿಗಾಗಲೇ ಸಮಸ್ಯೆಯನ್ನು ಸುಮಾರು ಆರು ತಿಂಗಳು ಅನುಭವಿಸಿದ್ದೆ. ಪಾಪ, ಉಮೇಶ್ ಅಪಾಯಿಂಟ್‌ಮೆಂಟ್ ತೆಗೆದುಕೊಂಡೇ ಬಿಟ್ಟ. ಜೊತೆಗೆ ಅವನೂ ಬಂದ. ಇನ್ನೇನು ಒಳಕ್ಕೆ ಹೋಗಬೇಕು: ಆಸ್ಪತ್ರೆಯ ಹೆಬ್ಬಾಗಿಲಲ್ಲಿ ನಿಂತು ಬುಸಬುಸ ಸಿಗರೇಟು ಸೇದಿದೆ. ``ಆಯ್ತು,mostly ಇದು ಕೊನೆ. ಡಾಕ್ಟರು ಸಿಗರೇಟು ಬಿಡಲೇಬೇಕು ಅಂತಾರೆ. ಶ್ವಾಸಕೋಶಕ್ಕೆ ಸಿಗರೇಟಿನ ಹೊರತು ಬೇರೆ ಯಾವ ಕಾಟವೂ ಇರುವುದಿಲ್ಲ. ಇದು ಕೊನೇ ಸಿಗರೇಟು" ಅಂದುಕೊಂಡು ಕೈಲಿದ್ದುದನ್ನು ಎಸೆದೆ. ಅವರ ಹೆಸರು ಡಾ. ಸುಮಾ. ತುಂಬ ಚಟುವಟಿಕೆಯ, ಶುದ್ಧ ಇಂಗ್ಲಿಷ್ ಬಲ್ಲ ಜಾಣ ಹೆಣ್ಣುಮಗಳು. ಹೋದ ತಕ್ಷಣ ಒಂದಷ್ಟು testಗಳ ಪಟ್ಟಿ ಬರೆದರು. `ಇಲ್ಲೇ ಮಾಡ್ತೇವೆ' ಅಂದರು. ಅವೆಲ್ಲ ಮುಗಿಯಲಿಕ್ಕೆ ಮೂರು ತಾಸುಗಳೇ ಹಿಡಿದವು. ಕೊನೆಗೆ, ಮಾತಿಗೆ ಕುಳಿತರು ಡಾ.ಸುಮಾ. ``ಸರ್, ನಿಮಗೆ ನ್ಯುಮೋನಿಯಾ ಆಗಿದೆ!" ಅಂದರು. ``ಹ್ಞಾಂ, ಚಿಕ್ಕ ಜ್ವರವೂ ಬಂದಿಲ್ಲ. ನ್ಯುಮೋನಿಯಾ ಹೇಗಾಗ್ತದೆ? ನನಗೆ ಕೆಮ್ಮು-ಕಫ ಯಾವುದೂ ಇಲ್ಲ" ಅಂದೆ.

``ಬೆಳಗೆರೆಯವರೇ, ನ್ಯುಮೋನಿಯಾ ಆಗಲಿಕ್ಕೆ ಅವೆಲ್ಲ ಆಗಲೇಬೇಕು ಅಂತ ಖಂಡಿತ ಇಲ್ಲ. ನಿಮ್ಮ lungs infection ಆಗಿದೆ. ಅದನ್ನ ಸರಿ ಮಾಡಬೇಕು. ಕೈಗೆ ಗ್ಲೂಕೋಸ್ ಹಚ್ಚಿದ ಹಾಗೆ ಔಷ ಹಚ್ಚಿ ಎರಡು ದಿನ ಮಲಗಿಸ್ತೇವೆ. We will cure. ಇನ್‌ಫೆಕ್ಷನ್ ಅಂದೆನಲ್ಲ? ಅದಕ್ಕೆ ಧೂಳು ಅಥವಾ ಇನ್ಯಾವ ಕಾರಣವೂ ಬೇಕಿಲ್ಲ. ಒಳಗೇ ಆಗಿಬಿಡುತ್ತೆ. ಈಗಲೇ admit ಆಗಿ ಬಿಡಿ. ಎರಡು ದಿನ ಸಾಕು" ಅಂದರು. ಅಪ್ಪಿತಪ್ಪಿ ಕೂಡ ಅವರು ಸಿಗರೇಟಿನ ಪ್ರಸ್ತಾಪ ಮಾಡಲಿಲ್ಲ. ನಾನ್ಯಾಕೆ ರಗಳೆ ಮೈಮೇಲೆಳೆದುಕೊಳ್ಳಲಿ? ``ಮೇಡಂ, ತಕ್ಷಣಕ್ಕೆ admit ಆಗಿ ಅಂದರೆ ಸ್ವಲ್ಪ ಕಷ್ಟ. ಕೆಲವೆಲ್ಲ ವ್ಯವಸ್ಥೆ ಮಾಡಿಟ್ಟು ಬರಬೇಕು. ಎರಡು ದಿನ time ಕೊಡಿ" ಅಂದೆ. ಆಕೆ ಒಪ್ಪಿದರು. ಅದರಲ್ಲೀಗ ಒಂದಿನ ಕಳೆದಿದೆ. ನಾವು ಬಳ್ಳಾರಿಯವರು. ನಮ್ಮೂರಿನದು ಒಂದು ವೈಶಿಷ್ಟ್ಯವಿದೆ. ಇಂಗ್ಲಿಷ್ ದೊರೆಗಳು ದೇಶದಲ್ಲೇ ಮೊದಲ ಕ್ಷಯದ ಆಸ್ಪತ್ರೆ ಕಟ್ಟಿಸಿದ್ದು ಬಳ್ಳಾರಿಯಲ್ಲಿ. ಅದು ಈಗಲೂ ಇದೆ: ಸ್ಯಾನಟೋರಿಯಮ್ ಅಂತಾರೆ. ಅವರ ಕಾಲಕ್ಕೆ ಕ್ಷಯವೆಂಬುದು killer ಖಾಯಿಲೆ. ಬಂತೆಂದರೆ ಸಾಕು, ಜನ ಸಾಯುತ್ತಿದ್ದರು. ನಮ್ಮಲ್ಲಿ ಅದರ ಆಸ್ಪತ್ರೆ ಯಾಕೆ ಕಟ್ಟಿದರು ಎಂದರೆ, ಅಲ್ಲಿರುವ ಚಂಡ-ಪ್ರಚಂಡ ಬಿಸಿಲು! ಆ ಪರಿ ಧೂಳಿನಲ್ಲಿ ಓಡಾಡುತ್ತೇವೆ. ಉಸಿರಾಟಕ್ಕೆ ತೊಂದರೆ ಮಾಡುವ ಹತ್ತಿ ಗಿರಣಿಗಳಲ್ಲೇ ಕೆಲಸ ಮಾಡುತ್ತೇವೆ. ಬೀಡಿ-ಸಿಗರೇಟು ಧಾರಾಕಾರ. ಒಬ್ಬನಿಗಾದರೂ ಬರಬೇಕಲ್ಲ ಕ್ಷಯ? ನಮ್ಮಲ್ಲಿ ಆಸ್ತಮಾ ಕೂಡ ಇಲ್ಲ. ಇವೆಲ್ಲವೂ ಆ ಸೂರ್ಯ ಭಗವಾನನ ಕೃಪೆಗೆ ಕರಗಿ ಕರಗಿ-ಭಸ್ಮ! ನಾನಿದನ್ನು ತಮಾಷೆಗೆ ಹೇಳುತ್ತಿಲ್ಲ. ಮೊದಲನೆಯದು ಬಿಸಿಲು, ಅದರ ಮೇಲೆ ನಾವು ಕುಡಿಯುವ ಲೀಟರ್‌ಗಟ್ಟಲೆ ಕಾಫಿ, ನಾವಾಗ ಸೇದುತ್ತಿದ್ದುದು strong, stronger, strongest ಆದ ಚಾರ್‌ಮಿನಾರ್ ಸಿಗರೇಟು, ಮಧ್ಯಾಹ್ನದಿಂದ ಚಾಲೂ ಆಗುತ್ತಿದ್ದ ರಮ್, ಮೇಲೆ ಖಾರದ ಪರಮೋಚ್ಚ ಸ್ಥಿತಿಯ ಚಿಕನ್, ಶುದ್ಧ ಬಿಸಿಲಲ್ಲೇ ನಮ್ಮ ನಡೆದಾಟ-ಇದೆಲ್ಲ ನೀವು ತಣ್ಣನೆಯ ಊರುಗಳಲ್ಲಿ ಮಾಡಿ ನೋಡಿ? ಇಂಪಾಸಿಬಲ್. ಅಲ್ಲಿ ಸೂರ್ಯ ಭಗವಾನ ನಮ್ಮ ಕೈ ಹಿಡಿದು, ಕರೆದೊಯ್ದು, ಜ್ವರ ಬಂದ ಮಕ್ಕಳಿಗೆ ಕೊಡುವಂತೆ ಎದೆಗೆಲ್ಲ ಶಾಖ ಕೊಡುತ್ತಾನೆ! ಅದರಿಂದಾಗಿ ಉಸಿರು, ಉಸಿರ ನಾಳ, ಉಸಿರತಿತ್ತಿ-ಎಲ್ಲವೂ ಕಿಲಕಿಲಾ! ಆದರಿದು ಬಳ್ಳಾರಿಯಲ್ಲವಲ್ಲ? ನ್ಯುಮೋನಿಯಾಗೆ ಔಷಧಿ ತಗೊಳ್ಳಲೇಬೇಕು. ತಗೋತೀನಿ. ಸದ್ಯಕ್ಕಿರುವ ಒಂದು ಸಂತಸವೆಂದರೆ, ಆ ದೇವರಂಥ ಡಾಕ್ಟರು ನನ್ನ ಸಿಗರೇಟಿನ ತಂಟೆಗೆ ಬಂದಿಲ್ಲ. ಥತ್, ಈ ಸಿಗರೇಟು ನನ್ನನ್ನು ನಿರ್ಲಜ್ಜನನ್ನಾಗಿ ಮಾಡಿದೆ.

ನಿಮ್ಮವನು
-ಆರ್.ಬಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 07 April, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books