Ravi Belagere
Welcome to my website
ನಿಮ್ಮದು ಎಂಥ ಮ್ಯಾರೇಜು? ಶುದ್ಧ ಅರೇಂಜ್‌ಡಾ? ನೀವೇ ಮಾಡಿಕೊಂಡ ಲವ್ ಮ್ಯಾರೇಜಾ? live in relationshipನಂತಹ  ಗಾಂಧರ್ವ ವಿವಾಹನಾ? ‘ಲವ್ ಕಮ್ ಅರೇಂಜ್ಡ್’ ಮದುವೆಯಾ? ಅಂತರ್‌ಜಾತೀಯ ವಿವಾಹವಾ? ಅಂತರ್‌ಧರ್ಮೀಯ ವಿವಾಹವಾ? (Request :ಜಾತಿಗಳ ಪುಸ್ತಾಪ ಮಾಡಬೇಡಿ) Love, run and marry ಎಂಬಂತೆ ಮನೆಗಳನ್ನು ಬಿಟ್ಟು ಹೋಗಿ ಆದ ಮದುವೆಯಾ? ಎಂಥ ಮದುವೆಯಾಗಿದ್ದರೂ ಅಡ್ಡಿಯಿಲ್ಲ. ಅದಕ್ಕೆ ಗೌರವವಿದೆ. ಒಂದು inland letterನಷ್ಟು ಬರವಣಿಗೆಯನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆಯಿರಿ. ಜೊತೆಗೆ ಇಬ್ಬರೂ ಇರುವ ಫೊಟೋ ಕಳಿಸಿ. mail ಮಾಡೋದಾದರೆ [email protected]ಗೆ ಮಾಡಿ.
Home About Us Gallery Books Feedback Prarthana Contact Us

Buy Ravi Belagere Books online

ಬ್ರ್ಯಾಂಡುಗಳಾಗುವವರು ನಿಜವಾದ ರಾಜರಲ್ಲ, ಬಳಕೆಯ ವಸ್ತುಗಳು ಮಾತ್ರ

ಮೊನ್ನೆ ಮೊನ್ನೆ ಕರ್ನಾಟಕದ ರಾಜ್ಯಪಾಲರಾಗಿದ್ದ, ಯಡಿಯೂರಪ್ಪನವರ ಸರ್ಕಾರವನ್ನು ಇನ್ನಿಲ್ಲದಂತೆ ಕಾಡಿದ ಹನ್ಸ್‌ರಾಜ್ ಭಾರಧ್ವಾಜ್ ಇದೀಗ ಇದ್ದಕ್ಕಿದ್ದಂತೆ ಕಾಂಗ್ರೆಸ್ ವಿರುದ್ಧ ಮಾತನಾಡುತ್ತಿದ್ದಾರೆ. ಅವರ ಪ್ರಕಾರ, ಬಿಜೆಪಿ ಅಧಿಕಾರದಲ್ಲಿದ್ದಾಗ ಅವರೇ ಪ್ರಮುಖ ಪ್ರತಿಪಕ್ಷದಂತೆ ಕೆಲಸ ಮಾಡಿದರಂತೆ. ನಿಜವಾದ ಪ್ರತಿಪಕ್ಷ ನಾಯಕರು ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿದ್ದರಂತೆ. ಹೀಗಾಗಿ ಅವರು ಪ್ರತಿಪಕ್ಷ ನಾಯಕರಾಗಿ ಕೆಲಸ ಮಾಡಿದ್ದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂತಂತೆ.

ಇದೆಲ್ಲಕ್ಕಿಂತ ಅವರು ಆಡಿದ ಮತ್ತೊಂದು ಮಾತು ತಮಾಷೆಯಾಗಿದೆ. ಯಡಿಯೂರಪ್ಪ ಹಾಗೂ ಗಣಿರೆಡ್ಡಿಗಳ ವಿಷಯದಲ್ಲಿ ಸಾಫ್ಟ್ ಆಗಿ ನಡೆದುಕೊಳ್ಳುವಂತೆ ಕಾಂಗ್ರೆಸ್ ನಾಯಕರು ಇವರಿಗೆ ಹೇಳಿದ್ದರಂತೆ. ಆದರೆ ಇವರು ಬಿಗಿಯಾಗಿ ನಡೆದುಕೊಂಡರಂತೆ. ಬೇರೆ ಯಾರೋ ಈ ಮಾತುಗಳನ್ನಾಡಿದ್ದರೆ ಹೋಗಲಿ, ಕಾಗಕ್ಕ-ಗುಬ್ಬಕ್ಕನ ಕತೆ ಹೇಳುತ್ತಿದ್ದಾರೆ ಅಂತ ತಳ್ಳಿ ಹಾಕಿಬಿಡಬಹುದಿತ್ತು. ಆದರೆ ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡು ಬದುಕಿನುದ್ದಕ್ಕೂ ಯಾವುದೋ ಒಂದು ಅಧಿಕಾರದಲ್ಲಿದ್ದುಕೊಂಡು ಮೆರೆದ ಮನುಷ್ಯ ಹೀಗೆ ಏಕಾಏಕಿಯಾಗಿ ಮಾತನಾಡಲು ಎರಡು ಕಾರಣಗಳಿರುತ್ತವೆ. ಒಂದು ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಅನುಮಾನ. ಇಲ್ಲವೇ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷ ತಮ್ಮ ಈ ಮಾತುಗಳಿಂದ ಸಂತೃಪ್ತಗೊಂಡು ಯಾವುದಾದರೂ `ಗಂಜಿ ಕೇಂದ್ರ'ವನ್ನು ತಮಗೆ ದಯಪಾಲಿಸಬಹುದು ಎಂಬ ನಿರೀಕ್ಷೆ.
ಅಲ್ರೀ, ಕಾಂಗ್ರೆಸ್ ರಾಜಕಾರಣ ಮಾಡಲೆಂದೇ ಇರುವ ಪಕ್ಷ. ಬಿಜೆಪಿ ಮತ್ತು ಜೆಡಿಎಸ್ ಕೂಡ. ಇವರೆಲ್ಲ ಟೈಮು ಸಿಕ್ಕಾಗ ರಾಜಕೀಯ ಮಾಡದೇ ಧರ್ಮಗ್ರಂಥಗಳ ಪಠಣ ಶುರು ಮಾಡುತ್ತಾರೆಯೇ? ರಾಜ್ಯದಲ್ಲಿ ಬಿಜೆಪಿಯನ್ನು ಮಣಿಸಲು ಅಗತ್ಯವಾದ ಶಕ್ತಿಗಾಗಿ ಇವರು ಜೆಡಿಎಸ್ ಅನ್ನು ಒಡೆಯಲು ಕಾಂಗ್ರೆಸ್‌ನವರು ಇನ್ನಿಲ್ಲದ ಪ್ರಯತ್ನ ನಡೆಸಿದರು. ಆದರೆ ಅದೇ ತಿಪ್ಪರಲಾಗ ಹೊಡೆದರೂ ಎಸ್ಸೆಂ ಕೃಷ್ಣ ಹಾಗೂ ಡೀಕೇಶಿಯವರಂತಹ ನಾಯಕರು ಸೇರಿ ವಕ್ಕಲಿಗ ಮತಬ್ಯಾಂಕ್‌ನ್ನು ಕಾಂಗ್ರೆಸ್ ಕಡೆ ಸೆಳೆಯಲು ಸಾಧ್ಯವಾಗಲಿಲ್ಲ. ಸಿದ್ದರಾಮಯ್ಯ ಅದಾಗಲೇ ಕುರುಬರ ನಾಯಕರಾಗಿ ಹೊರಹೊಮ್ಮಿರುವುದರಿಂದ, ವಕ್ಕಲಿಗರು ಅದೇನೇ ಮಾಡಿದರೂ ಕಾಂಗ್ರೆಸ್ ಪಕ್ಷಕ್ಕೆ ಒಲಿಯುವುದಿಲ್ಲ. ಇದ್ದುದರಲ್ಲಿ ವಕ್ಕಲಿಗ ಸಮುದಾಯದ ಕ್ಯಾಂಡಿಡೇಟು ಆ ಪಕ್ಷದಿಂದ ಸ್ಪರ್ಧಿಸಿದರೆ ಬೇರೆ ಮಾತು. ಇದು ಯಾವಾಗ ಗೊತ್ತಾಯಿತೋ? ಆಗ ನೇರವಾಗಿ ಫೀಲ್ಡಿಗಿಳಿದಿದ್ದು ಸಿದ್ದರಾಮಯ್ಯನವರಲ್ಲ, ಕಾಂಗ್ರೆಸ್ ಹೈಕಮಾಂಡ್. ಅದು ಸಿಬಿಐ ಎಂಬ ತನಿಖಾ ಸಂಸ್ಥೆಯನ್ನು ತನ್ನಿಚ್ಛೆಯಂತೆ ಬಳಸಿಕೊಂಡ ಪರಿಣಾಮವಾಗಿ ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಕಡೆ ಓಡಿ ಹೋಗಬೇಕಾಯಿತು.

ಇದೇ ರೀತಿ ಗಣಿರೆಡ್ಡಿಗಳ ಮೇಲೆ ಅದು ಮುರಕೊಂಡು ಬಿದ್ದ ಪರಿಣಾಮವಾಗಿ ಬಿ.ಶ್ರೀರಾಮುಲುರಂತಹ ವಾಲ್ಮೀಕಿ ಸಮುದಾಯದ ನಾಯಕ ಸ್ವಾಭಿಮಾನದ ಹೆಸರಿನಲ್ಲಿ ಬಿಎಸ್ಸಾರ್ ಕಾಂಗ್ರೆಸ್ ಪಕ್ಷವನ್ನು ಕಟ್ಟಿ, ಇಡೀ ನಾಡಿನುದ್ದ ಗಣ ಗಣ ಅಲೆಯುತ್ತಾ ಬಿಜೆಪಿ ಸರ್ಕಾರವನ್ನು ದೂರಿಕೊಂಡು ಹೋಗಬೇಕಾಯಿತು. ಇವತ್ತು ವಾಲ್ಮೀಕಿ ಸಮುದಾಯದ ಮತದಾರರು ರಾಜ್ಯದ ನೂರಾ ನಲವತ್ತೊಂದು ಕ್ಷೇತ್ರಗಳಲ್ಲಿದ್ದಾರೆ. ಯಾರೇನೇ ಹೇಳಿದರೂ ಈ ಮತದಾರರ ಮೇಲೆ ಇತರರೆಲ್ಲ ವಾಲ್ಮೀಕಿ ನಾಯಕರಿಗಿಂತ ಶ್ರೀರಾಮುಲು ಬೀರಿದ ಪ್ರಭಾವ ಅಪಾರ. ಇದೇ ರೀತಿ ಯಡಿಯೂರಪ್ಪ ಹೊರಹೋದ ಪರಿಣಾಮವಾಗಿ ರಾಜ್ಯದಲ್ಲಿ ಪ್ರಬಲ ಲಿಂಗಾಯತ ಸಮುದಾಯ ಒಡೆದು ಎರಡು ಹೋಳಾಯಿತು. ಇದೇ ರೀತಿ ಕಾಂಗ್ರೆಸ್‌ನ ಮುಂಚೂಣಿಯಲ್ಲಿ ದಲಿತ ಸಮುದಾಯದ ನಾಯಕ ಪರಮೇಶ್ವರ್ ಇದ್ದ ಪರಿಣಾಮವಾಗಿ, ಇದೇ ಮೊಟ್ಟ ಮೊದಲ ಬಾರಿ ಒಬ್ಬ ದಲಿತ ನಾಯಕ ಸಿಎಂ ಆಗಬಹುದು ಎಂಬ ಕಾರಣಕ್ಕಾಗಿ ದಲಿತ ಮತದಾರರು ಎಡ, ಬಲ ಎನ್ನದೆ ಕಾಂಗ್ರೆಸ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲ ನೀಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಈ ಒಡೆದು ಆಳುವ ನೀತಿ ಕಾರಣವೇ ಹೊರತು ಹನ್ಸ್‌ರಾಜ್ ಭಾರಧ್ವಾಜ್ ಅಲ್ಲ. ಸಾರ್ವಜನಿಕ ಜೀವನದಲ್ಲಿರುವವರಿಗೆ ಈ ಒಳಸುಳಿ ಅರ್ಥವಾಗಿರುತ್ತದೆ. ಆದರೆ ಸಾರ್ವಜನಿಕ ಜೀವನದಲ್ಲಿ ಮೇಲು ಮೇಲೆ ಕಾಣಿಸಿಕೊಳ್ಳುವವರಿಗೆ, ಸಕ್ರಿಯ ರಾಜಕಾರಣದ ಒಳಸುಳಿಗಳನ್ನು ಅರ್ಥ ಮಾಡಿಕೊಳ್ಳಲಾಗದವರಿಗೆ ಇಂತಹ ಭ್ರಮೆ ಬಂದು ಬಿಡುತ್ತದೆ. ರಾಜ್ಯದ ಜನ ನನ್ನನ್ನು ನೋಡಿಯೇ ಪಕ್ಷವನ್ನು ಗೆಲ್ಲಿಸಿದರು. ನಾನು ಮಾಡಿದ ಕೆಲಸ ಅವರಿಗೆ ಇಷ್ಟವಾಯಿತು ಎಂದೆಲ್ಲ ಭ್ರಮಾಲೋಕದಲ್ಲಿ ಬಿದ್ದು ಮಾತನಾಡಲು ಶುರು ಮಾಡುತ್ತಾರೆ.
ಆದರೆ ರಾಜಕಾರಣ ಎಂಬುದು ಆಲದ ಮರದ ಥರ. ಇಂತಹ ಭ್ರಮೆಗಳನ್ನಿಟ್ಟುಕೊಂಡ ಯಾರೇ ಆಗಲಿ, ಗರಿಕೆ ಹುಲ್ಲಿನ ಥರ. ತನ್ನೆದುರು ಬೆಳೆದು ನಿಂತ ಆಲದ ಮರಕ್ಕೆ ನಾನೇ ಅಪ್ಪ ಅಂತ ಅದು ಬೀಗಿದರೆ, ಆಲದ ಮರ ನಗುತ್ತದೆ ಅಷ್ಟೇ. ಕನಿಷ್ಟ ಪಕ್ಷ ಅದರ ಬಿಳಿಲುಗಳನ್ನು ಸೃಷ್ಟಿಸಲೂ ಇಂತಹವರ ಕೈಲಿ ಆಗಿರುವುದಿಲ್ಲ. ೧೯೮೩ರಲ್ಲಿ ಜನತಾ ರಂಗ ಸರ್ಕಾರ ಅಧಿಕಾರಕ್ಕೆ ಬರಲು ಏನು ಕಾರಣ ಗೊತ್ತಾ? ಗುಂಡೂರಾಯರಂತಹ ಹುಂಬ ಮುಖ್ಯಮಂತ್ರಿ ಕಾರಣ. ರೈತ ಚಳವಳಿ ಭುಗಿಲೆದ್ದಾಗ ತಮ್ಮ ಆಪ್ತರಾದ ಹಿರಿಯ ಅಧಿಕಾರಿಯೊಬ್ಬರನ್ನು ಕರೆಸಿ, ಈ ಚಳವಳಿಯನ್ನು ಬಂದ್ ಮಾಡಬೇಕಲ್ಲ? ಏನು ಮಾಡಬೇಕು? ಎಂದು ಸಲಹೆ ಕೇಳಿದರು. ಅದಕ್ಕವರು ಇನ್ನೂ ಮಹಾನ್ ಬುದ್ಧಿವಂತರಂತೆ, ಅಯ್ಯೋ, ನಾಲ್ಕು ಕಡೆ ಗೋಲಿಬಾರ್ ಮಾಡಿ ಹೆಣ ಉರುಳಿಸೋಣ. ಒಂದಷ್ಟು ಮಂದಿ ಸತ್ತರೆ ಉಳಿದವರಿಗೆ ಬುದ್ಧಿ ಬರುತ್ತದೆ ಎಂದರು. ಸರಿ, ನಿರಂತರವಾಗಿ ಗೋಲಿಬಾರುಗಳು ನಡೆದವು. ರೈತರು ಸಿಟ್ಟಿಗೆದ್ದರು. ಇವರ್‍ಯಾರಿಗೂ ಲೀಡರುಗಳಿರಲಿಲ್ಲ ಅಥವಾ ಯಾವುದೋ ನಾಯಕ ಹೇಳಿದ ಎಂಬ ಕಾರಣಕ್ಕಾಗಿ ತಿರುಗಿ ಬೀಳಲಿಲ್ಲ. ಇದೇ ರೀತಿ ಒಬ್ಬ ಸ್ವಾಮೀಜಿಯನ್ನು ಮೆಚ್ಚಿಸಲು ಹೋಗಿ ಗೋಕಾಕ್ ಚಳವಳಿಯನ್ನು ಮೈ ಮೇಲೆಳೆದುಕೊಂಡರು ಗುಂಡೂರಾವ್.

ಹೀಗೆ ನೋಡ ನೋಡುತ್ತಿದ್ದಂತೆಯೇ ರೈತ ಚಳವಳಿ, ದಲಿತ ಚಳವಳಿ, ಕನ್ನಡ ಪರ ಚಳವಳಿಗಳು ಮೇಲೆದ್ದು ನಿಂತವು. ಇಂತಹ ಟೈಮು ನೋಡಿ, ಸರಿಯಾಗಿ ಅದು ತಲುಪುವ ಗುರಿಯನ್ನು ಜನತಾ ರಂಗದ ನಾಯಕರು ಗುರುತಿಸಿದರು. ತಮ್ಮ ದೋಣಿಯನ್ನು ತಂದಿಟ್ಟುಕೊಂಡರು. ಪರಿಣಾಮವಾಗಿ ದಡ ತಲುಪಿದರು. ಅಷ್ಟೊತ್ತಿಗಾಗಲೇ ಅರಸರು ಸಿಎಂ ಹುದ್ದೆಯಿಂದ ಕೆಳಗಿಳಿದು ಕ್ರಾಂತಿರಂಗ ಕಟ್ಟಿದ್ದರು. ಅವರು ತೀರಿಕೊಂಡ ನಂತರ ಆ ಪಕ್ಷಕ್ಕೆ ಬಂಗಾರಪ್ಪ ಬಂದರು. ಇತ್ತ ದೇವೆಗೌಡ, ಬೊಮ್ಮಾಯಿ, ಪಟೇಲ್ ಥರದವರೆಲ್ಲ ಸೇರಿ ಜನತಾ ಪಕ್ಷವನ್ನು ಮುನ್ನಡೆಸಿದರು. ಇದೆಲ್ಲದರ ಪರವಾಗಿ ರೂಪುಗೊಂಡಿದ್ದು ಜನತಾ ರಂಗ. ಈ ಜನತಾ ರಂಗಕ್ಕೆ ಜನರ ಆಕ್ರೋಶ ಎಂಬ ಪ್ರವಾಹ ಯಾವ ದಿಕ್ಕಿನತ್ತ ನಡೆಯುತ್ತದೆ ಎಂಬುದು ಗೊತ್ತಿತ್ತು. ಹೀಗಾಗಿ ಪ್ರವಾಹ ಎಲ್ಲಿಗೆ ತಲುಪುತ್ತದೆ ಎಂಬುದನ್ನು ಅರ್ಥ ಮಾಡಿಕೊಂಡರು. ತಮ್ಮ ದೋಣಿಯನ್ನು ತಂದಿಟ್ಟುಕೊಂಡರು. ಗುರಿ ತಲುಪಿದರು. ಫೈನಲಿ, ಜನತಾ ರಂಗ ದಡ ತಲುಪಿದ್ದೇ ತಡ, ಯಂಗ್ ಟರ್ಕ್ ಖ್ಯಾತಿಯ ಚಂದ್ರಶೇಖರ್ ಅವರನ್ನು ಮುಂದಿಟ್ಟುಕೊಂಡ ರಾಮಕೃಷ್ಣ ಹೆಗಡೆ ಇದ್ದಕ್ಕಿದ್ದಂತೆ ರಂಗದ ಮೇಲೆ ಕಾಣಿಸಿಕೊಂಡರು. ಸಿಎಂ ಆದರು. ಈ ಎಲ್ಲ ಬೆಳವಣಿಗೆಗಳಿಗೆ ನಾನೇ ಕಾರಣ ಎಂದು ಯಾರಾದರೂ ಹೇಳಿಕೊಂಡರೆ ಅದು ಭ್ರಮೆ. ಕೇವಲ ಭ್ರಮೆ ಮಾತ್ರ. ಯಾಕೆಂದರೆ ಜನ ಗುಂಡೂರಾಯರ ವಿರುದ್ಧ ಆಕ್ರೋಶಗೊಂಡಿದ್ದರು. ಅದರ ಲಾಭ ಪಡೆಯುವವರಿಗೆ ದೋಣಿ ಪ್ರವಾಹದ ಯಾವ ದಿಕ್ಕಿನೆಡೆ ಇಡಬೇಕು ಎಂಬುದು ಗೊತ್ತಿತ್ತು ಅಷ್ಟೇ.

ಹೀಗಿರುವಾಗ ಆಗಿದ್ದಕ್ಕೆಲ್ಲ ನಾನೇ ಕಾರಣ ಎಂಬ ಭ್ರಮೆಗೆ ಬಿದ್ದರೆ ಜನ ನಗುತ್ತಾರೆ. ಹನ್ಸ್‌ರಾಜ್ ಭಾರಧ್ವಾಜ್ ಸ್ಥಿತಿಯೂ ಅದೇ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ದಿಲ್ಲಿಯ ಕಾಂಗ್ರೆಸ್ ನಾಯಕರ ತಂತ್ರಗಾರಿಕೆ ಕಾರಣವೇ ಹೊರತು ಯಾವೊಬ್ಬ ವ್ಯಕ್ತಿ ವೈಯಕ್ತಿಕವಾಗಿ ಕಾರಣವಲ್ಲ. ರಾಜ್ಯಪಾಲರಾಗಿ ಹನ್ಸ್‌ರಾಜ್ ಭಾರಧ್ವಾಜ್ ಕೂಗುಮಾರಿಯಂತೆ ಐದು ವರ್ಷಗಳ ಕಾಲ ಸಮಯ ಕಳೆದರು. ಯಾರಾದರೂ ನಾಯಕರು ಮಾತನಾಡಲು ಹೋದರೆ ಶಂಕರಾಚಾರ್ಯ, ರಾಮಾನುಜಾಚಾರ್ಯ, ಮಧ್ವಾಚಾರ್ಯರ ಕತೆ ಹೇಳುತ್ತಿದ್ದರು. ಫೈನಲಿ, ತಮ್ಮ ಇಂಗಿತವನ್ನು ತಿಳಿಸುತ್ತಿದ್ದರು. ವಿ.ಸೋಮಣ್ಣ ಅವರ ಹೆಸರು ವಿಧಾನಪರಿಷತ್ತಿಗೆ ನಾಮಕರಣವಾದಾಗ ಅವರು ಅದೇನು ಇಂಗಿತ ವ್ಯಕ್ತಪಡಿಸಿದರು ಎಂಬುದು ರಾಜಕೀಯ ವಲಯಗಳಲ್ಲಿದ್ದವರಿಗೆಲ್ಲ ಗೊತ್ತು. ಒಂದಲ್ಲ, ಎರಡು ಬಾರಿ ಸರ್ಕಾರವನ್ನು ವಜಾ ಮಾಡಿ ಎಂದು ಇವರು ಶಿಫಾರಸು ಕಳಿಸಲು ಏನು ಕಾರಣ ಎಂಬುದೂ ಎಲ್ಲರಿಗೆ ಗೊತ್ತು. ರಾಜ್ಯದ ಬಹುತೇಕ ಯೂನಿವರ್ಸಿಟಿಗಳಿಗೆ ಇವರು ತಂದಿಟ್ಟ ಉಪಕುಲಪತಿಗಳ ಮುಖ ನೋಡಿದರೆ ಸಾಕು, ಅವರೆಷ್ಟು ಭೋಜನ ಪ್ರಿಯರು ಎಂಬುದು ಗೊತ್ತಾಗುತ್ತದೆ. ಹೀಗೆ ಕರ್ನಾಟಕವನ್ನು ಹನ್ಸ್‌ರಾಜ್ ಭಾರಧ್ವಾಜ್ ಹುಲ್ಲುಗಾವಲಿನ ಥರ ಬಳಸಿಕೊಂಡರೇ ಹೊರತು, ಒಬ್ಬ ಪ್ರತಿಪಕ್ಷದ ನಾಯಕರ ಥರ ಕೆಲಸ ಮಾಡಲಿಲ್ಲ.

ನಾಡಿನ ಜನ ಅವರ ಸ್ಟೇಟ್‌ಮೆಂಟುಗಳನ್ನು ನೋಡಿ ಆನಂದಿಸಿದರೇ ಹೊರತು, ಕಾಂಗ್ರೆಸ್ ಪಕ್ಷಕ್ಕೆ ೨೦೦೮ರ ವಿಧಾನಸಭಾ ಚುನಾವಣೆಯಲ್ಲಿ ಎಷ್ಟು ಮತಗಳು ಬಂದವೋ, ಅದಕ್ಕಿಂತ ಸ್ವಲ್ಪವಷ್ಟೇ ಹೆಚ್ಚಿನ ಮತಗಳು ೨೦೧೩ರ ವಿಧಾನಸಭಾ ಚುನಾವಣೆಯಲ್ಲಿ ಬಂದವು. ರಾಜ್ಯದ ಜನರಿಗೆ ಹನ್ಸ್‌ರಾಜ್ ಭಾರಧ್ವಾಜ್ ನಿಜವಾದ ಪ್ರತಿಪಕ್ಷ ನಾಯಕ ಅಂತನ್ನಿಸಿದ್ದರೆ ನಾಲ್ಕೈದು ಪರ್ಸೆಂಟಾದರೂ ವೋಟು ಜಾಸ್ತಿ ಬರಬೇಕಿತ್ತಲ್ಲ? ಆದರೆ ಹಾಗಾಗಲಿಲ್ಲ. ದಿಲ್ಲಿಯ ನಾಯಕರು ಸಿಬಿಐ ಅನ್ನು ಬಳಸಿಕೊಂಡು ಬಿಜೆಪಿಯ ಮತಗಳು ಒಡೆಯುವಂತೆ ಮಾಡಿದ ಕಾರಣದಿಂದ ಇಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂತೇ ಹೊರತು, ನಾನು ಮಾಡಿದ ಕೆಲಸದಿಂದ ಅಧಿಕಾರಕ್ಕೆ ಬಂತು ಅಂತ ಹನ್ಸ್‌ರಾಜ್ ಭಾರಧ್ವಾಜ್ ಹೇಳಿಕೊಂಡರೆ ಅಯ್ಯೋ, ಪಾಪ ಅನ್ನಬಹುದಷ್ಟೇ.
ದೇಶದ ಖ್ಯಾತ ಉದ್ಯಮಿ ಬಿರ್ಲಾಗೂ, ತಮ್ಮ ಉದ್ಯಮವನ್ನು ಬೆಳೆಸಲು ಗಾಂಧೀಜಿ ಬೇಕಿತ್ತು, ಬಳಸಿಕೊಂಡರು. ಆದರೆ ತಮ್ಮ ಜನಪ್ರಿಯತೆ ಬಿರ್ಲಾಗೆ ಕೇವಲ ಒಂದು ಬ್ರ್ಯಾಂಡು ಎಂಬುದು ಗಾಂಧೀಜಿಗೆ ಗೊತ್ತಿರಲಿಲ್ಲ. ಆದರೆ ಕಾಲ ಬದಲಾಗಿದೆ. ಯಾರಿಗೆ ತಮ್ಮ ಜನಪ್ರಿಯತೆಯ ಲೆವೆಲ್ಲು, ಶ್ರಮದ ಶಕ್ತಿ ಕುರಿತು ಅರಿವಿದೆಯೋ ಅವರು ತಮ್ಮನ್ನು ಬ್ರ್ಯಾಂಡುಗಳನ್ನಾಗಿ ಬಳಸಿಕೊಳ್ಳಲು ಬರುವ ಬುದ್ಧಿವಂತರ ಬಳಿ ತಮಗೇನು ಅಗತ್ಯವಿದೆಯೋ ಅದನ್ನು ಮುಲಾಜಿಲ್ಲದೆ ಕೇಳುತ್ತಾರೆ, ವಸೂಲು ಮಾಡುತ್ತಾರೆ. ಸುಖಾಸುಮ್ಮನೆ ಯಾರಿಗೋ ಬ್ರ್ಯಾಂಡ್ ಆಗುವುದು, ಲಾಭ ಮಾಡಿಕೊಡುವುದು ಈ ಕಾಲದ ಮಾತಲ್ಲ. ಅಂದ ಹಾಗೆ ಕಾಂಗ್ರೆಸ್ ಕೂಡ ಹನ್ಸ್‌ರಾಜ್ ಭಾರಧ್ವಾಜ್ ಅವರಿಗೆ ರಾಜ್ಯಪಾಲರಂತಹ ಹುದ್ದೆಯನ್ನು ಕೊಡುವ ಮುನ್ನ ಒಂದು ಬ್ರ್ಯಾಂಡನ್ನಾಗಿ ನೋಡಿತ್ತೇ ವಿನಾ ಬೇರೇನಲ್ಲ. ದಿಲ್ಲಿಯಲ್ಲಿ ಅವರಿರುವುದು ಕಾಂಗ್ರೆಸ್‌ಗೆ ಬೇಕಿರಲಿಲ್ಲ. ಹೀಗಾಗಿ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರಕ್ಕೆ ಮುಜುಗರ ತರುವ ಬ್ರ್ಯಾಂಡ್ ಅಂಬಾಸಿಡರ್ ಥರ ಬಳಸಿಕೊಂಡರು.

ಅಂದ ಹಾಗೆ ಬ್ರ್ಯಾಂಡ್ ಅಂಬಾಸಿಡರ್ ಯಶಸ್ವಿಯಾಗಿ ಕೆಲಸ ಮಾಡಬಹುದು. ಆದರೆ ಅವರು ಇನ್ನೊಬ್ಬರ ಬಳಕೆಯ ದಾಳಗಳಷ್ಟೇ. ನಿಜವಾದ ಯಶಸ್ಸಿನ ಮೂಲ ಸೂತ್ರಧಾರಿಗಳಲ್ಲ. ಇದನ್ನರಿಯದೇ ಹೋದವರು ಸಲ್ಲದ ಭ್ರಮೆ ಬೆಳೆಸಿಕೊಳ್ಳುತ್ತಾರೆ. ಸೂರ್ಯ ಹುಟ್ಟುವುದೇ ನನ್ನ ಕೋಳಿ ಕೂಗಿದ್ದರಿಂದ ಅಂದುಕೊಳ್ಳುವ ಬಡಪಾಯಿಯ ಹಾಗೆ. ದಟ್ಸ್ ಆಲ್.

-ರವಿ ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 04 April, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books