Ravi Belagere
Welcome to my website
ನಿಮ್ಮದು ಎಂಥ ಮ್ಯಾರೇಜು? ಶುದ್ಧ ಅರೇಂಜ್‌ಡಾ? ನೀವೇ ಮಾಡಿಕೊಂಡ ಲವ್ ಮ್ಯಾರೇಜಾ? live in relationshipನಂತಹ  ಗಾಂಧರ್ವ ವಿವಾಹನಾ? ‘ಲವ್ ಕಮ್ ಅರೇಂಜ್ಡ್’ ಮದುವೆಯಾ? ಅಂತರ್‌ಜಾತೀಯ ವಿವಾಹವಾ? ಅಂತರ್‌ಧರ್ಮೀಯ ವಿವಾಹವಾ? (Request :ಜಾತಿಗಳ ಪುಸ್ತಾಪ ಮಾಡಬೇಡಿ) Love, run and marry ಎಂಬಂತೆ ಮನೆಗಳನ್ನು ಬಿಟ್ಟು ಹೋಗಿ ಆದ ಮದುವೆಯಾ? ಎಂಥ ಮದುವೆಯಾಗಿದ್ದರೂ ಅಡ್ಡಿಯಿಲ್ಲ. ಅದಕ್ಕೆ ಗೌರವವಿದೆ. ಒಂದು inland letterನಷ್ಟು ಬರವಣಿಗೆಯನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆಯಿರಿ. ಜೊತೆಗೆ ಇಬ್ಬರೂ ಇರುವ ಫೊಟೋ ಕಳಿಸಿ. mail ಮಾಡೋದಾದರೆ [email protected]ಗೆ ಮಾಡಿ.
Home About Us Gallery Books Feedback Prarthana Contact Us

Buy Ravi Belagere Books online

ಸಿದ್ದು ಸರ್ಕಾರ ಹಳ್ಳಿಯ ನೆಲದ ಮೇಲೆ ನಿಲ್ಲಲಿ; ಆಗಿರುವ ಕೆಲಸವನ್ನು ಚಾಟಿ ಹಿಡಿದು ನೋಡಲಿ

ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಹತ್ತನೇ ಬಜೆಟ್ ಮಂಡಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಬಜೆಟ್ ಮಂಡನೆಯ ಬಗ್ಗೆ ತುಂಬ ಕುತೂಹಲ ಉಳಿದಿಲ್ಲ. ಆದರೆ ನನಗೆ ಖುಷಿಯಾಗಿದ್ದು ಎರಡು ವಿಷಯಗಳ ಬಗ್ಗೆ. ಮೊದಲನೆಯದು ಅನ್ನಭಾಗ್ಯ ಎಂಬ ಯೋಜನೆಯನ್ನು ಛಾನಲೈಸ್ ಮಾಡಿದ್ದು. ಅಲೆಮಾರಿಗಳು ಸೇರಿದಂತೆ ತಳಸ್ತರದ ಜನಸಮುದಾಯಗಳ ಬಗ್ಗೆ ಗಮನ ಹರಿಸಿದ್ದು. ಇವೆರಡರ ಮಧ್ಯೆ ದಲಿತ ಸಮುದಾಯಕ್ಕಾಗಿ ಅವರು ಹೆಚ್ಚಿನ ಕಾರ್ಯಕ್ರಮಗಳನ್ನು ನೀಡಿದ್ದಾರೆ ಎಂಬುದು ಮತ್ತು ಅದು ಸ್ವಾಗತಾರ್ಹವೆಂಬುದು ನಿಜ. ಆದರೆ ಅಂತಹ ಕಾರ್ಯಕ್ರಮಗಳ ಹಿಂದೆ ಒಂದು ಉದ್ದೇಶವಿದೆ. ದಲಿತ ಸಿಎಂ ಎಂಬ ಕೂಗು ಎದ್ದಿತಲ್ಲ? ಅದನ್ನು ಬಡಿದು ಹಾಕುವ ಗುರಿಯಿದೆ.


ಹಾಗೆ ನೋಡಿದರೆ ಅದೇನೂ ಸಿದ್ದರಾಮಯ್ಯನವರ ತಂತ್ರಗಾರಿಕೆಯಲ್ಲ. ರಾಜಕೀಯ ಚದುರಂಗದಾಟವನ್ನು ಬಲ್ಲ ಯಾವುದೇ ಸಿಎಂ, ತನಗೆ ಅಡ್ಡಿಯಾಗುವ ವಿಷಯವನ್ನು ದಾಟಿಕೊಳ್ಳಲು ಏನು ಮಾಡಬೇಕೋ, ಅಂತಹ ಗುರಿಯೇ ಸಿದ್ದರಾಮಯ್ಯನವರ ಈ ನಡೆಯಲ್ಲೂ ಕಾಣುತ್ತದೆ. ಅದು ತಪ್ಪು ಅಂತಲ್ಲ. ಆದರೆ ಅದಕ್ಕೊಂದು ಗುರಿ ಇದೆ ಎಂದು ಇದನ್ನು ಹೇಳಿದೆ. ಫೈನಲಿ, ಅದರಲ್ಲಿ ಅವರು ಬಯಸಿದ ಕೆಲಸವಾದರೆ ಅದು ಕ್ರಾಂತಿಯೇ. ಹಾಗೆ ನೋಡಿದರೆ ಕರ್ನಾಟಕದಲ್ಲಿ ಶೋಷಿತ ವರ್ಗಗಳ ಛಾಂಪಿಯನ್ ಅನ್ನಿಸಿಕೊಂಡ ದೇವರಾಜ ಅರಸರಿಗೂ ಅಹಿಂದ ಪರಿಕಲ್ಪನೆ ಮೂಡಿದ್ದು ರಾಜಕೀಯ ಸಂಘರ್ಷದ ನಡುವೆಯೇ. ಅವರು ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬರುವ ವೇಳೆಗಾಗಲೇ ನಿಜಲಿಂಗಪ್ಪ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಅರಸರನ್ನು ಬಕ್ಕಬೋರಲು ಹೊಡೆದಿದ್ದರು. ಅದೇ ಕಾಲಕ್ಕೆ ಸರಿಯಾಗಿ ರಾಷ್ಟ್ರ ರಾಜಕೀಯದಲ್ಲಿ ಮಹತ್ವದ ಬದಲಾವಣೆ ಕಂಡು ನಿಜಲಿಂಗಪ್ಪನವರು ದಿಲ್ಲಿ ಲೆವೆಲ್ಲಿನಲ್ಲಿ ಮಿಂಚತೊಡಗಿದರು.
ಆದರೆ ಇಂದಿರಾ ಸರ್ಕಾರ ನಾವು ಹೇಳಿದಂತೆ ಕೇಳಬೇಕು ಎಂಬ ನಿಜಲಿಂಗಪ್ಪ, ಮೊರಾರ್ಜಿ ಮತ್ತಿತರ ನಾಯಕರನ್ನುಳ್ಳ ಸಿಂಡಿಕೇಟ್ ತಕರಾರು ತೆಗೆದಾಗ, ಇಂದಿರಾ ಸಿಟ್ಟಿಗೆದ್ದರು. ಆಕೆಗೆ ಕರ್ನಾಟಕದಲ್ಲಿ ಓರ್ವ ನಿಷ್ಠಾವಂತ ನಾಯಕ ಬೇಕಾಗಿತ್ತು. ಆಗ ಸಿಕ್ಕವರು ದೇವರಾಜ ಅರಸು. ನೋಡನೋಡುತ್ತಿದ್ದಂತೆಯೇ ನಿಜಲಿಂಗಪ್ಪ ಕೃಪಾಪೋಷಿತ ಸರ್ಕಾರ ಕರ್ನಾಟಕದಲ್ಲಿ ಉರುಳಿ ಬಿತ್ತು. ಆಗ ಸಿಎಂ ಆಗಿದ್ದವರು ವೀರೇಂದ್ರ ಪಾಟೀಲ್. ಆ ಸಂದರ್ಭದಲ್ಲಿ ನಿಜಲಿಂಗಪ್ಪನವರ ಪಾಲಿಗೆ ರಾಮಕೃಷ್ಣ ಹೆಗಡೆ ಹಾಗೂ ವೀರೇಂದ್ರ ಪಾಟೀಲ್ ಲವ-ಕುಶ ಇದ್ದಂತೆ. ಹೀಗೆ ವೀರೇಂದ್ರ ಪಾಟೀಲರ ಸರ್ಕಾರ ಉರುಳುತ್ತಿದ್ದಂತೆಯೇ ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಯಿತು. ಆಗ ಇಂದಿರಾ ಗಾಂಧಿಯ ಗಮನ ಸೆಳೆದವರು ದೇವರಾಜ ಅರಸು. ಸದರಿ ಇಂದಿರಾ ಬಲದೊಂದಿಗೆ ೧೯೭೨ರಲ್ಲಿ ಅರಸರ ಸರ್ಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂತು. ಹೀಗೆ ಅರಸರ ನೇತೃತ್ವದಲ್ಲಿ ಸರ್ಕಾರವೇನೋ ಬಂತು. ಆದರೆ ಈ ಸರ್ಕಾರಕ್ಕೆ ಮೂಲ ಮತಬ್ಯಾಂಕ್ ಎಂಬುದು ಬೇಕಲ್ಲ. ಅಷ್ಟೊತ್ತಿಗಾಗಲೇ ಲಿಂಗಾಯತ ಹಾಗೂ ವಕ್ಕಲಿಗ ಸಮುದಾಯ ಕಾಂಗ್ರೆಸ್‌ನಿಂದ ಕಳಚಿಕೊಳ್ಳತೊಡಗಿತ್ತು. ಆಗ ದೇವರಾಜ ಅರಸರಿಗೆ ಮೊಳೆತಿದ್ದು ಅಹಿಂದ ಪರಿಕಲ್ಪನೆ. ಈಗ ದೇವರಾಜ ಅರಸರ ಬಗ್ಗೆ ಮಾತನಾಡುವವರು, ಬಾಲ್ಯದಿಂದಲೂ ಈ ವರ್ಗಗಳಿಗಾಗಿ ಅರಸರಿಗೆ ಒಂದು ಚಿಂತನೆಯಿತ್ತು. ಶೋಷಿತರನ್ನು ಮೇಲೆತ್ತಬೇಕು ಎಂಬ ಕನಸಿತ್ತು. ಮುಖ್ಯಮಂತ್ರಿಯಾಗಿ ಅದನ್ನವರು ಮಾಡಿದರು ಎಂದು ಹೇಳುತ್ತಾರೆ.

ಹೀಗೆ ದೇವರಾಜ ಅರಸರಿಗೆ ಶೋಷಿತರ ಬಗ್ಗೆ ಯಾವ ಕಳಕಳಿ ಇತ್ತೋ, ಅಂತಹದೇ ಕಳಕಳಿ ಹೊಂದಿದ ಹಲವು ನಾಯಕರು ಕರ್ನಾಟಕದಲ್ಲಿದ್ದರು. ಈಗಲೂ ಇದ್ದಾರೆ. ಆದರೆ ಯಾವಾಗ ವಕ್ಕಲಿಗ ಹಾಗೂ ಲಿಂಗಾಯತ ಸಮುದಾಯ ಜನತಾಪಕ್ಷದ ಬ್ಯಾನರಿನಡಿ ಒಂದಾಗುವ ಲಕ್ಷಣ ಸ್ಪಷ್ಟವಾಯಿತೋ? ಆಗ ದೇವರಾಜ ಅರಸು ಇದ್ದಕ್ಕಿದ್ದಂತೆ ಶೋಷಿತ ವರ್ಗಗಳ ಛಾಂಪಿಯನ್ ಪಟ್ಟಕ್ಕೆ ಲಗ್ಗೆ ಇಟ್ಟರು. ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರನ್ನು ಒಳಗೊಂಡ ಪಡೆಯನ್ನು ಕಟ್ಟಿದರು. ಪ್ರಬಲ ಸಮುದಾಯಗಳ ಸೈನ್ಯದ ಮುಂದೆ ಶೋಷಿತರ ಸೈನ್ಯ. ಆಳಕ್ಕಿಳಿದು ನೋಡಿದರೆ ಅರಸರ ರಾಜನೀತಿ ಸ್ಪಷ್ಟವಾಗಿ ಕಾಣುವಂತಹದ್ದು. ಒಂದು ವೇಳೆ ಅವರು ಅಹಿಂದ ಸೈನ್ಯವನ್ನು ಕಟ್ಟದೇ ಹೋಗಿದ್ದರೆ ೧೯೭೮ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತಿರಲಿಲ್ಲ. ಇಡೀ ದೇಶದಲ್ಲಿ ಇಂದಿರಾ ವಿರುದ್ಧ ಅಲೆ ಇದ್ದರೂ ಕರ್ನಾಟಕದಲ್ಲಿ ಅರಸರ ನೇತೃತ್ವದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಅರಸರು ಕಟ್ಟಿದ ಈ ಸೈನ್ಯ ಕಾರಣ. ಅಹಿಂದ ವರ್ಗಗಳಿಂದ ಆಗ ಅರಸರು ಹಲವರನ್ನು ಹೆಕ್ಕಿ ಹೆಕ್ಕಿ ತೆಗೆದರು. ಗುರುತಿಸಿ ಮುಂಚೂಣಿಗೆ ತಂದರು. ಬಂಗಾರಪ್ಪ, ಮೊಯ್ಲಿ, ಎಚ್.ವಿಶ್ವನಾಥ್ ಸೇರಿದಂತೆ ಹಲವು ನಾಯಕರು ಅರಸರ ಗರಡಿಯಲ್ಲಿ ಬೆಳೆದವರು.

ಆದರೆ ಬಂಗಾರಪ್ಪನವರು ಸೋಷಿಯಲಿಸ್ಟ್ ಮೂವ್‌ಮೆಂಟ್‌ನಿಂದ ಬಂದವರು ಎಂಬುದು ನಿಜವಾದರೂ, ಸಮಾಜವಾದಿಗಳ ಪ್ರಮುಖ ಗುರಿಯಾಗಿದ್ದ ಉಳುವವನೇ ಹೊಲದೊಡೆಯ ಎಂಬುದನ್ನು ಕಾನೂನಿನ ರೂಪದಲ್ಲಿ ಅರಸು ತಂದ ಮೇಲೆ ಬಂಗಾರಪ್ಪನವರಂತಹವರಿಗೂ ಸೋಷಿಯಲಿಸ್ಟ್ ಪಾರ್ಟಿಯಲ್ಲಿ ಆಸಕ್ತಿ ಉಳಿಯಲಿಲ್ಲ. ಅದೇನೇ ಇರಲಿ, ಅಹಿಂದ ಎಂಬ ಮಂತ್ರವನ್ನು ಹೀಗೆ ರಾಜಕೀಯವಾಗಿ ತಮ್ಮ ಅನುಕೂಲಕ್ಕೆ ಬಳಸಿಕೊಂಡರೂ ಆ ವರ್ಗಕ್ಕೆ ದೇವರಾಜ ಅರಸು ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಒಳ್ಳೆಯದನ್ನು ಮಾಡಿದರು ಎಂಬುದು ಮಾತ್ರ ನಿರ್ವಿವಾದ. ಗುರಿ ಏನೇ ಇರಲಿ, ಆದರೆ ಫೈನಲಿ, ಆ ವರ್ಗಗಳಲ್ಲಿ ಆತ್ಮವಿಶ್ವಾಸ ಮೂಡಲು ಅರಸರು ಕಾರಣರಾದರು ಎಂಬುದು ನಿರ್ವಿವಾದ. ಇವತ್ತು ದಲಿತರಿಗಾಗಿ ಸಿದ್ದರಾಮಯ್ಯ ರೂಪಿಸಿರುವ ಯೋಜನೆಗಳ ಹಿಂದಿರುವುದೂ ಅದರ ಛಾಯೆಯೇ. ಆದರೆ ಒಂದು ವ್ಯತ್ಯಾಸ, ಅರಸರು ತಮ್ಮ ಮುಂದಿನ ರಾಜಕೀಯ ಭವಿಷ್ಯಕ್ಕಾಗಿ ಅಹಿಂದ ಪರಿಕಲ್ಪನೆಯನ್ನು ಬೆಳೆಸಿದರು. ಸಿದ್ದರಾಮಯ್ಯನವರು ದಲಿತರಿಂದ ತಮಗೆ ಯಾವುದೇ ಘಾಸಿಯಾಗಬಾರದು. ಬದಲಿಗೆ ಅವರು ತಮ್ಮ ಜೊತೆಗಿರಬೇಕು ಎಂಬ ಕಾರಣಕ್ಕಾಗಿ ದಲಿತರಿಗೆ ಹೆಚ್ಚುವರಿ ಯೋಜನೆಗಳನ್ನು ಬಜೆಟ್ ಮೂಲಕ ರೂಪಿಸಿದರು. ಇದರಿಂದ ಅವರಿಗೆ ಎಷ್ಟರ ಮಟ್ಟಿಗೆ ಅನುಕೂಲವಾಗುತ್ತದೆ ಎಂಬುದು ಬೇರೆ ವಿಷಯ. ಆದರೆ ನಿಶ್ಚಿತವಾಗಿಯೂ ಇದರ ಹಿಂದಿರುವುದು ರಾಜಕೀಯ ಆಪತ್ತನ್ನು ನಿವಾರಿಸಿಕೊಳ್ಳುವ ತಂತ್ರ. ಈ ನೆಪದಲ್ಲಾದರೂ ದಲಿತರಿಗಾಗಿ ಅವರು ಕಣ್ಣಿಗೆ ಕಾಣುವಂತಹ ಕಾರ್ಯಕ್ರಮಗಳನ್ನು ರೂಪಿಸಿದರಲ್ಲ? ಇಟ್ ಈಸ್ ಫೈನ್.

ಆದರೆ ನನ್ನ ಗಮನ ಸೆಳೆದಿದ್ದು ಅನ್ನಭಾಗ್ಯ ಯೋಜನೆಯನ್ನು ಅವರು ಛಾನಲೈಸ್ ಮಾಡಿದ ರೀತಿ. ಮುಂಚೆ ಹಿಂದೆ ಮುಂದೆ ನೋಡದೆ ಅವರು, ಮೂರು ಜನರಿದ್ದ ಒಂದು ಕುಟುಂಬಕ್ಕೆ ಮೂವತ್ತು ಕೆಜಿ ಅಕ್ಕಿ ಕೊಡುತ್ತೇವೆ ಎಂದು ಘೋಷಿಸಿಬಿಟ್ಟರು. ಒಬ್ಬರಿಗೆ ಹತ್ತು ಕೆಜಿ, ಇಬ್ಬರಿಗೆ ಇಪ್ಪತ್ತು ಕೆಜಿ, ಮೂವರಿಗೆ ಮೂವತ್ತು ಕೆಜಿ. ನಿಮಗೆ ಒಂದು ವಿಷಯ ಹೇಳುತ್ತೇನೆ. ಯಾರೂ ಹಸಿವಿನಿಂದ ಇರಬಾರದು ಎಂಬುದು ಹೇಗೆ ನಿಜವೋ, ಹಾಗೆಯೇ ಯಾರೂ ಸೋಮಾರಿಗಳಾಗಬಾರದು ಎಂಬುದೂ ಅಷ್ಟೇ ನಿಜ. ನೀವು ಅಕ್ಕಿ ಕೊಟ್ಟು ಒಬ್ಬರನ್ನು ಹೇಗೆ ಬದುಕಿಸುತ್ತೀರೋ, ಹಾಗೆಯೇ ಅವರ ಕೆಲಸ ಮಾಡುವ ಶಕ್ತಿಯನ್ನು ಹೆಚ್ಚಿಸಬೇಕು. ಆದರೆ ಅನ್ನಭಾಗ್ಯ ಯೋಜನೆ ಎಂಬುದು ಒಂದು ಧಂದೆಯಂತಾಗಿ ಹೋಯಿತು. ಸದರಿ ಯೋಜನೆಯ ಅಕ್ಕಿ ರಾಜ್ಯದ ಹಲವಾರು ಹೊಟೇಲ್ಲುಗಳಿಗೆ ತಲುಪಿ, ಇಡ್ಲಿ, ದೋಸೆ, ರೊಟ್ಟಿ, ಅನ್ನವಾಗಿದ್ದು ಹೆಚ್ಚೇ ವಿನಾ ನಿಜವಾದ ಬಡವರಿಗೆ ಅದು ಹೊಟ್ಟೆ ತುಂಬಿಸಿದ್ದು ಕಡಿಮೆ. ಅಷ್ಟೇ ಅಲ್ಲ, ನೆರೆಯ ತಮಿಳ್ನಾಡು, ಆಂಧ್ರಪ್ರದೇಶದಿಂದ ಈ ಕಡಿಮೆ ರೇಟಿನ ಅಕ್ಕಿಯನ್ನು ಖರೀದಿಸಿ ತೆಗೆದುಕೊಂಡು ಹೋಗಲು ಒಂದು ದೊಡ್ಡ ಪಡೆಯೇ ಹುಟ್ಟಿಕೊಂಡಿತು. ನೀವು ಯಾವುದೇ ಊರಿಗೆ ಹೋಗಿ ನೋಡಿ. ಅನ್ನಭಾಗ್ಯದ ಅಕ್ಕಿ ಮಾರಾಟಕ್ಕೆ ಸಿಗುತ್ತಿತ್ತು. ಇಪ್ಪತ್ತೈದು, ಮೂವತ್ತು ರುಪಾಯಿಗೆ ಒಂದು ಕೆಜಿಯಂತೆ ತಿಂಡಿ ಅಕ್ಕಿ ಖರೀದಿಸಬೇಕಾದ ಜನ ಹದಿನೈದು ರುಪಾಯಿಗೆ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನೇ ಖರೀದಿಸತೊಡಗಿದರು. ಹಲವಾರು ಪಡಿತರ ಅಂಗಡಿಗಳವರಂತೂ ಮೂವತ್ತು ಕೆಜಿ ಅಕ್ಕಿಯನ್ನು ತಾವಿಟ್ಟುಕೊಳ್ಳುವುದು, ನಾಲ್ಕು ನೂರೋ, ಐದು ನೂರೋ ರುಪಾಯಿಗಳನ್ನು ಫಲಾನುಭವಿಗಳಿಗೆ ನೀಡುವುದು ಮಾಮೂಲಾಗಿ ಹೋಯಿತು. ಪರಿಣಾಮವಾಗಿ ಅನ್ನಭಾಗ್ಯ ಯೋಜನೆ ವ್ಯವಸ್ಥೆಯಲ್ಲಿ ದೊಡ್ಡ ಮಟ್ಟದ ಏರುಪೇರುಗಳನ್ನುಂಟು ಮಾಡಿತು.

ಆದರೆ ಈಗ ಬಿಪಿಎಲ್ ಕುಟುಂಬದ ಒಬ್ಬರಿಗೆ ಐದು ಕೆಜಿ ಅಕ್ಕಿಯಂತೆ ಕಾನೂನು ರೂಪಿಸಿರುವುದರಿಂದ ಒಂದು ತಿಂಗಳಿಗೆ ಉಳಿಯುವ ಅಕ್ಕಿಯ ಪ್ರಮಾಣ ಎಷ್ಟು ಗೊತ್ತೇ? ಐವತ್ತು ಸಾವಿರ ಮೆಟ್ರಿಕ್ ಟನ್. ಇವತ್ತು ಎಪಿಎಲ್ ಪಡಿತರ ಚೀಟಿದಾರರಿಗೆ ಅಕ್ಕಿ, ಗೋಧಿ ದಕ್ಕಲು ಈ ತಂತ್ರಗಾರಿಕೆಯೇ ಕಾರಣ. ಒಂದು ಸರ್ಕಾರಕ್ಕೆ ಹೀಗೆ ಯೋಜನೆಗಳನ್ನು ಛಾನಲೈಸ್ ಮಾಡುವ ಲೆಕ್ಕಾಚಾರ ಇರಬೇಕು. ಆ ದೃಷ್ಟಿಯಿಂದ ಅನ್ನಭಾಗ್ಯ ಯೋಜನೆಗೆ ಒಂದು ರೂಪ ಕೊಡುವಲ್ಲಿ ಈ ಬಜೆಟ್ ಯಶಸ್ವಿಯಾಗಿದೆ ಎಂಬುದು ನಿಜ. ಅದೇ ರೀತಿ ನನಗೆ ಖುಷಿ ಕೊಟ್ಟ ಮತ್ತೊಂದು ವಿಷಯವೆಂದರೆ ಅಲೆಮಾರಿಗಳಿಂದ ಹಿಡಿದು ಸಮಾಜದ ಕಟ್ಟ ಕಡೆಯ ಮನುಷ್ಯನಿಗೆ ಸಿದ್ದರಾಮಯ್ಯ ನೆರವಿನ ಹಸ್ತ ಚಾಚಿರುವುದು. ಒಂದು ಸರ್ಕಾರ ಮಾಡಬೇಕಿರುವ ನಿಜವಾದ ಕಾರ್ಯಕ್ರಮಗಳೆಂದರೆ ಇವು. ಆದರೆ ಹೀಗೆ ಮಾಡುವಾಗ ಸಿದ್ದರಾಮಯ್ಯ ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ತಮ್ಮ ಅನುಭವದ ಮೂಲಕ ಸಮಾಜದ ತಳಸ್ತರದಲ್ಲಿರುವ ಜನರಿಗೆ ಅವರು ನೆರವಿನ ಹಸ್ತ ಚಾಚಿರುವುದು ನಿಜ. ಆದರೆ ಫೈನಲಿ, ಅದು ಎಷ್ಟರ ಮಟ್ಟಿಗೆ ಜಾರಿಯಾಗಿದೆ ಎಂಬುದನ್ನು ಅವರು ಗ್ರಾಮ ಮಟ್ಟದಲ್ಲಿ ಪರಿಶೀಲನೆ ಮಾಡಬೇಕು.

ಇವತ್ತು ಪ್ರತಿಯೊಂದು ಜಿಲ್ಲಾ ಕೇಂದ್ರದಲ್ಲಿ ಕುಳಿತು, ಯಾವ ಕಾರ್ಯಕ್ರಮ ಎಷ್ಟರ ಮಟ್ಟಿಗೆ ಇಂಪ್ಲಿಮೆಂಟು ಆಗಿದೆ ಎಂಬುದನ್ನು ಜಿಲ್ಲಾ ಉಸ್ತುವಾರಿ ಸಚಿವರು ಪರಿಶೀಲನೆ ನಡೆಸುತ್ತಾರೆ. ಅಧಿಕಾರಿಗಳು ಇಂತಹ ಮೀಟಿಂಗುಗಳಿಗೆ ಎಷ್ಟು ನೀಟಾಗಿ ಬಂದಿರುತ್ತಾರೆ ಎಂದರೆ ಫಲಾನುಭವಿಯ ಪಟ್ಟಿಯಿಂದ ಹಿಡಿದು, ಸಹಿಯ ತನಕ ಎಲ್ಲವೂ ಅವರ ಬಳಿ ಇರುತ್ತದೆ. ಆದರೆ ವಾಸ್ತವದಲ್ಲಿ ಅದು ಜಾರಿಯಾಗಿರುವುದೇ ಇಲ್ಲ. ಪುಸ್ತಕದಲ್ಲಿ ನೋಡಿದರೆ ಸರ್ಕಾರ ಕೊಟ್ಟ ಎಲ್ಲ ಹಣ ಸದ್ಬಳಕೆ ಆಗಿರುತ್ತದೆ. ಸ್ಥಳಕ್ಕೆ ಹೋಗಿ ನೋಡಿ, ಕೆಲಸವೂ ಆಗಿರುವುದಿಲ್ಲ. ಫಲಾನುಭವಿಯ ಕುರುಹೂ ಕಾಣುವುದಿಲ್ಲ. ಹೀಗಾಗಿಯೇ ನಾನು ಹೇಳುವುದು, ಒಬ್ಬ ಮಂತ್ರಿ ಅಭಿವೃದ್ಧಿಯ ಪರಿಶೀಲನೆ ನಡೆಸಬೇಕಿರುವುದು ಜಿಲ್ಲಾ ಕೇಂದ್ರದಲ್ಲಲ್ಲ, ಗ್ರಾಮ ಕೇಂದ್ರಗಳಲ್ಲಿ. ಎಲ್ಲ ಹಳ್ಳಿಗಳಿಗೂ ಜಿಲ್ಲಾ ಉಸ್ತುವಾರಿ ಸಚಿವರೇ ಹೋಗಲು ಸಾಧ್ಯ ಎಂದು ನಾನು ಹೇಳುತ್ತಿಲ್ಲ. ಆದರೆ ಇಂತಹ ಪರಿಶೀಲನೆಯನ್ನು ತಮ್ಮ ತಮ್ಮ ಕ್ಷೇತ್ರಗಳ ಮಟ್ಟದಲ್ಲಿ ಶಾಸಕರೂ ಮಾಡಬೇಕು.


ಇವತ್ತು ಜಿಲ್ಲಾ ಮಟ್ಟದಲ್ಲಿ ಒಂದು ಕಾರ್ಯಕ್ರಮ ಹೇಗೆ ಅನುಷ್ಠಾನವಾಗಿದೆ ಎಂಬುದನ್ನು ಪರಿಶೀಲಿಸಲು ಕೂತಿರುವಾಗ ಜಿಲ್ಲಾ ಉಸ್ತುವಾರಿ ಸಚಿವರಿಗೆ ಅಂಕಿ-ಅಂಶ ನೀಡಲಾಗುತ್ತದೆಯೇ ವಿನಾ ಫಲಾನುಭವಿಯನ್ನು ತೋರಿಸುವ ಕೆಲಸವಾಗುವುದಿಲ್ಲ. ಹೀಗಾಗಿ ಈ ಅಭಿವೃದ್ಧಿ ಕೆಲಸದ ಪರಿಶೀಲನೆ ತಳ ಮಟ್ಟದಲ್ಲೇ ನಡೆಯಬೇಕು. ನಿಮಗೊಂದು ಉದಾಹರಣೆ ಹೇಳುತ್ತೇನೆ. ಒಂದು ಗ್ರಾಮಕ್ಕೆ ಅಭಿವೃದ್ಧಿಯ ವಿಷಯದಲ್ಲಿ ಕೋಟ್ಯಂತರ ರುಪಾಯಿ ಹೋಗಿರುತ್ತದೆ. ಬೆಟ್ಟೇಗೌಡನ ಮನೆಯಿಂದ ಚಿಕ್ಕೇಗೌಡನ ಮನೆಯ ತನಕ ಆರು ನೂರು ಮೀಟರ್ ರಸ್ತೆ ಆಗಿದೆ ಎಂದು ಅಧಿಕಾರಿಗಳು ಲೆಕ್ಕದಲ್ಲಿ ತೋರಿಸಿರುತ್ತಾರೆ. ಅದೇ ರೀತಿ ಇಂತಿಂಥ ಶೋಷಿತ ವರ್ಗದ ಫಲಾನುಭವಿಗಳಿಗೆ ಮನೆ ಕೊಟ್ಟೆ, ಹಸು ಕೊಟ್ಟೆ, ಕುರಿ ಕೊಟ್ಟೆ, ಹಣ ಕೊಟ್ಟೆ ಎಂದು ಅಧಿಕಾರಿಗಳು ದಾಖಲಿಸುತ್ತಾರೆ. ಅಭಿವೃದ್ಧಿಯ ಪರಿಶೀಲನೆ ನಡೆಸುವವರು ಎಲ್ಲ ವಿವರವನ್ನು ಕಣ್ಣ ಮುಂದಿಟ್ಟುಕೊಂಡು ಆ ಹಳ್ಳಿಗೇ ಹೋಗಿ, ಎಲ್ಲರನ್ನೂ ಸೇರಿಸಿ ಅಭಿವೃದ್ಧಿಯ ಪರಿಶೀಲನೆ ಕಾರ್ಯದ ವಿವರ ನೀಡಲಿ. ಬೆಟ್ಟೇಗೌಡನ ಮನೆಯಿಂದ ಚಿಕ್ಕೇಗೌಡನ ಮನೆಯ ತನಕ ಆರು ನೂರು ಮೀಟರ್ ರಸ್ತೆ ಆಗಿದೆಯೇನ್ರಪ್ಪಾ? ಎಂದು ಕೇಳಲಿ. ಒಂದು ವೇಳೆ ಆಗದಿದ್ದರೆ ಜನ ತಿರುಗಿ ಬೀಳುತ್ತಾರೆ. ಆಗ ಸಂಬಂಧಪಟ್ಟ ಅಧಿಕಾರಿಯ ಬೆಂಡೆತ್ತಿ. ಅದೇ ರೀತಿ ಸರ್ಕಾರಿ ಯೋಜನೆಗಳ ಫಲಾನುಭವಿಗಳ ಪಟ್ಟಿ ಮತ್ತು ಅವರಿಗೆ ಅದು ನಿಜವಾಗಿಯೂ ತಲುಪಿದೆಯೇ ಎಂಬುದನ್ನು ವಿಚಾರಿಸಿ.

ಅಧಿಕಾರಿಗಳು ಸುಳ್ಳು ಹೇಳಬಹುದು. ಆದರೆ ಜನ ಸುಳ್ಳು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಏನು ಕೆಲಸವಾಗಿದೆ ಎಂಬುದು ಕಣ್ಣ ಮುಂದೆ ಸಿಕ್ಕು ಬಿಡುತ್ತದೆ. ಹೀಗಾಗಿ ಸಿದ್ದರಾಮಯ್ಯನವರು ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸುವ ಕೆಲಸ ಜಿಲ್ಲಾ ಕೇಂದ್ರಗಳಲ್ಲಿ ನಡೆಸುವ ಬದಲು, ಹಳ್ಳಿಗಳಲ್ಲಿ, ಜನರ ಸಮ್ಮುಖದಲ್ಲಿ ಪರಿಶೀಲನೆ ನಡೆಯುವಂತೆ ನೋಡಿಕೊಳ್ಳಬೇಕು. ಯಾಕೆಂದರೆ ದಿನ ಕಳೆದಂತೆ ಜನರ ಸಹನೆ ಕಡಿಮೆಯಾಗುತ್ತಿದೆ. ಸರ್ಕಾರಗಳು ರೂಪಿಸುವ ಯೋಜನೆ, ಅದನ್ನು ಜಾರಿಗೆ ತರುವ ಅಧಿಕಾರಿಗಳು ಕೊಡುವ ಲೆಕ್ಕ, ಇದನ್ನೆಲ್ಲ ನೋಡಿ ನೋಡಿ ಜನ ರೋಸತ್ತು ಹೋಗಿದ್ದಾರೆ. ಇವತ್ತು ಬರಪೀಡಿತ ಜಿಲ್ಲೆಗಳಿಗೆ ನೀರು ಕೊಡುವ ವಿಷಯದಲ್ಲೇ ದಂಗೆಯ ಪರಿಸ್ಥಿತಿ ಬಂದಿದೆ. ನೋಡನೋಡುತ್ತಿದ್ದಂತೆಯೇ ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರದಂತಹ ಜಿಲ್ಲೆಗಳು ಕುಡಿಯುವ ನೀರಿಲ್ಲದೆ ತಪಿಸುತ್ತಿವೆ. ಆದರೆ ಬೆಂಗಳೂರಿಗೆ ಅಂತ ಕುಡಿಯಲು ಕಾವೇರಿಯಿಂದ ನೀರು ತರುತ್ತೇವಲ್ಲ? ಅದರಲ್ಲೇ ಹತ್ತು ಟಿಎಂಸಿಗಿಂತ ಹೆಚ್ಚಿನ ನೀರು ಸೋರಿಕೆಯಾಗಿ ತಮಿಳ್ನಾಡಿಗೆ ಹೋಗುತ್ತಿದೆ. ಈ ನೀರನ್ನು ಸಮರ್ಪಕವಾಗಿ ಹಿಡಿದಿಟ್ಟುಕೊಳ್ಳುವ ಕೆಲಸವೂ ಸರ್ಕಾರದಿಂದಾಗುತ್ತಿಲ್ಲ.

ಹೀಗೆ ನೋಡುತ್ತಾ ಹೋದರೆ ಜನ ತಾಳ್ಮೆಗೆಡುವ ಹಲವು ಸಂಗತಿಗಳು ನಡೆಯುತ್ತಿವೆ. ಇದಕ್ಕೆಲ್ಲ ಒಂದು ದಿನ ಸರ್ಕಾರ ಉತ್ತರ ಹೇಳುವ ಸ್ಥಿತಿ ಬರುತ್ತದೆ. ಅದನ್ನು ಜನರೇ ಮುಂದೆ ನಿಂತು, ಬಡಿಗೆ ತೆಗೆದುಕೊಂಡು ಕೇಳುವ ತನಕ ಬಿಡುವ ಮನೋಭಾವ ನಮ್ಮ ಜನಪ್ರತಿನಿಧಿಗಳಲ್ಲಿರಬಾರದು. ಇವತ್ತು ಸಿದ್ದರಾಮಯ್ಯನವರು ತಮ್ಮ ಬಜೆಟ್ ಮೂಲಕ ಹೇಗೆ ಅನ್ನಭಾಗ್ಯವನ್ನು ಛಾನಲೈಸ್ ಮಾಡಿದ ರೀತಿ, ತಳಸ್ತರದ ಜನರಿಗಾಗಿ ರೂಪಿಸಿದ ಕಾರ್ಯಕ್ರಮ ಹೇಗೆ ಮುಖ್ಯವೋ, ಅದೇ ರೀತಿ ಅದು ಹೇಗೆ ಜಾರಿಯಾಗುತ್ತಿದೆ ಎಂಬುದನ್ನು ಹಳ್ಳಿಗಳ ಮಟ್ಟದಲ್ಲಿ ಗಮನಿಸುವುದೂ ಅಷ್ಟೇ ಮುಖ್ಯ. ಹಾಗೆಯೇ ಕಣ್ಣ ಮುಂದಿರುವ ಹಲವು ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿನ ಆಸಕ್ತಿಯಿಂದ ಗಮನಿಸುವುದು ಸೂಕ್ತ. ಹಾಗಾಗಲಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 28 March, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books