Ravi Belagere
Welcome to my website
ನಿಮ್ಮದು ಎಂಥ ಮ್ಯಾರೇಜು? ಶುದ್ಧ ಅರೇಂಜ್‌ಡಾ? ನೀವೇ ಮಾಡಿಕೊಂಡ ಲವ್ ಮ್ಯಾರೇಜಾ? live in relationshipನಂತಹ  ಗಾಂಧರ್ವ ವಿವಾಹನಾ? ‘ಲವ್ ಕಮ್ ಅರೇಂಜ್ಡ್’ ಮದುವೆಯಾ? ಅಂತರ್‌ಜಾತೀಯ ವಿವಾಹವಾ? ಅಂತರ್‌ಧರ್ಮೀಯ ವಿವಾಹವಾ? (Request :ಜಾತಿಗಳ ಪುಸ್ತಾಪ ಮಾಡಬೇಡಿ) Love, run and marry ಎಂಬಂತೆ ಮನೆಗಳನ್ನು ಬಿಟ್ಟು ಹೋಗಿ ಆದ ಮದುವೆಯಾ? ಎಂಥ ಮದುವೆಯಾಗಿದ್ದರೂ ಅಡ್ಡಿಯಿಲ್ಲ. ಅದಕ್ಕೆ ಗೌರವವಿದೆ. ಒಂದು inland letterನಷ್ಟು ಬರವಣಿಗೆಯನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆಯಿರಿ. ಜೊತೆಗೆ ಇಬ್ಬರೂ ಇರುವ ಫೊಟೋ ಕಳಿಸಿ. mail ಮಾಡೋದಾದರೆ [email protected]ಗೆ ಮಾಡಿ.
Home About Us Gallery Books Feedback Prarthana Contact Us

Buy Ravi Belagere Books online

ಹುಚ್ಚು ಮನಸ್ಸಿನ ಹತ್ತು ಮುಖಗಳು ಮತ್ತು ನೂರಾರು ಲೈಕುಗಳು

ನೀನು ಸುಂದರಿ!
ಹಾಗಂತ ಕನ್ನಡಿ ಅವಳಿಗೆ ಹೇಳುತ್ತದೆ. ಕನ್ನಡಿಯೂ ಸುಳ್ಳು ಹೇಳುತ್ತದೆ ಎಂದು ಅವಳಿಗೆ ಗೊತ್ತಿಲ್ಲ. ಯಾಕೆಂದರೆ ಅವಳಿಗಿನ್ನೂ ಹದಿನಾರು. ಹುಚ್ಚುಖೋಡಿ ಮನಸ್ಸು. ಅವಳ ಮನಸ್ಸು ಹೇಳಿದ್ದನ್ನೇ ಕನ್ನಡಿ ಪ್ರತಿಫಲಿಸುತ್ತದೆ. ಹೇರ್‌ಸ್ಟೈಲ್ ಸರಿ ಇದೆಯಾ, ಮುಂಗುರುಳು ಗಾಳಿಗೆ ಹಾರುವಂತಿದೆಯಾ, ಕಣ್ಣಿಗೆ ಕಾಡಿಗೆ ಹಚ್ಚಬೇಕು, ತುಟಿಗೂ ಒಂದಿಷ್ಟು ಬಣ್ಣ ಮೆತ್ತಬೇಕು, ಹಣೆ ಖಾಲಿ ಬಿಟ್ಟರೂ ನಡೆಯುತ್ತದೆ, ಆದರೆ ಅಮ್ಮ ಬೈತಾಳೆ, ಹಾಗಾಗಿ ಕಂಡೂ ಕಾಣದಂತಿರುವ ಒಂದು ಚಿಕ್ಕ ಬೊಟ್ಟಿಡುತ್ತಾಳೆ, ಒಂದು ಕಿರುನಗು ತುಟಿಯ ಮೇಲೆ ಹಾದು ಹೋಗುತ್ತದೆ. ಕನ್ನಡಿ ಮತ್ತೆ ಹೇಳುತ್ತದೆ- ನೀನು ಸುಂದರಿ.
ಆಕೆ ಕನ್ನಡಿಯನ್ನು ಮೋಹಿಸುವ ಹುಡುಗಿ.

ಈಗ ಅದೇ ಹುಡುಗಿಯ ಕೈಗೆ ಸ್ಮಾರ್ಟ್ ಫೋನ್ ಬಂದಿದೆ. ಒಂದು ಕೈಯಲ್ಲಿ ಫೋನ್ ಹಿಡಿದುಕೊಂಡು ಟಾಪ್ ಆಂಗಲ್‌ನಲ್ಲಿ ತನ್ನದೇ ಒಂದು ಫೊಟೋ ತೆಗೆಯುತ್ತಾಳೆ. ಫೋನ್ ಸ್ಕ್ರೀನ್ ಮೇಲೆ ಕಣ್ಣು ಹಾಯಿಸುತ್ತಾಳೆ. ಪರ್ಫೆಕ್ಟ್ ಎಂದು ಅಂದುಕೊಳ್ಳುತ್ತಾಳೆ. ಮನಸ್ಸಿಗೆ ಸಮಾಧಾನ ಆಗದೇ ಇದ್ದರೆ, ಇನ್ನೊಮ್ಮೆ ಕ್ಲಿಕ್ಕಿಸಬಹುದು. ಗೋಡೆಗೆ ಒರಗಿಕೊಂಡು, ಹಾಸಿಗೆಯಲ್ಲಿ ಮಲಗಿಕೊಂಡು, ಸೋಫಾದಲ್ಲಿ ಕುಳಿತುಕೊಂಡು... ಒಂದು ಸಾರಿ ಬಟನ್ ಒತ್ತಿದರೆ ಸಾಲುಸಾಲಾಗಿ ಹತ್ತು ಫೊಟೋಗಳನ್ನು ನಿಮ್ಮ ಮುಂದೆ ತಂದು ನಿಲ್ಲಿಸುವ ಮೊಬೈಲ್ ಫೋನುಗಳಿವೆ. ಆ ಫೊಟೋಗಳನ್ನೇನೂ ಲ್ಯಾಬಲ್ಲಿ ಪ್ರಿಂಟ್ ಹಾಕಿಸಬೇಕಾಗಿಲ್ಲ, ಯಾವಾಗ ಬರುತ್ತೋ ಎಂದು ಕಾಯುತ್ತಾ ಕೂರಬೇಕಾಗಿಲ್ಲ, ಇನ್‌ಸ್ಟೆಂಟ್ ಫೊಟೋಗಳು. ಆ ಪೈಕಿ ಅವಳಿಗಿಷ್ಟವಾದ ಒಂದು ಫೊಟೋನ ಫೇಸ್‌ಬುಕ್ಕಿಗೆ ಹಾಕುತ್ತಾಳೆ, ಅದಾಗಿ ಸ್ವಲ್ಪ ಹೊತ್ತಲ್ಲಿ ಲೈಕುಗಳ ಸುರಿಮಳೆಯಾಗುತ್ತದೆ. ಲವ್ಲೀ, ಬ್ಯೂಟಿಫುಲ್, ಕ್ಯೂಟ್, ಚಾರ್ಮಿಂಗ್ ಹೀಗೇ ಹತ್ತಾರು ಕಾಮೆಂಟುಗಳೂ ಹರಿದುಬರುತ್ತವೆ. ಹುಡುಗಿ ಬೀಗುತ್ತಾಳೆ. ಅವಳಿಗೆ ಈಗ ಕನ್ನಡಿಯ ಹಂಗಿಲ್ಲ. ಒಂದು ಕನ್ನಡಿ ಹೇಳುವ ಮಾತನ್ನು ನೂರು ಲೈಕುಗಳು ಹೇಳುತ್ತಿವೆ.

ಆಕೆ ಮೊಬೈಲನ್ನೇ ಪ್ರೀತಿಸುವ ಹುಡುಗಿ.
ಒಂದು ಸರ್ವೇ ಪ್ರಕಾರ ೨೦೧೩ನೇ ಇಸ್ವಿಯಲ್ಲಿ ಚಾಲ್ತಿಯಲ್ಲಿದ್ದ ಅತ್ಯಂತ ಜನಪ್ರಿಯ ಪದವೆಂದರೆ ಸೆಲ್ಫೀ (selfie). ಈ ವರ್ಷ ಅದು ಇನ್ನಷ್ಟು ಫೇಮಸ್ ಆಗಿದೆ. ನಿಘಂಟಿನಲ್ಲಿ ಈ ಪದದ ಅರ್ಥ ಹೀಗಿದೆ: ಸ್ಮಾರ್ಟ್ ಫೋನ್ ಅಥವಾ ವೆಬ್ ಕ್ಯಾಮ್ ಮೂಲಕ ಒಬ್ಬ ವ್ಯಕ್ತಿ ತನ್ನ ಫೊಟೋವನ್ನು ತಾನೇ ತೆಗೆದು ಅದನ್ನು ಫೇಸ್‌ಬುಕ್‌ನಂಥಾ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡುವುದನ್ನು ಸೆಲ್ಫೀ ಅನ್ನುತ್ತಾರೆ. A selfie is a self portrait photograph. ಈ ಫೊಟೋ ತೆಗೆಯುವುದಕ್ಕೆ ಇನ್ನೊಬ್ಬರ ಸಹಾಯ ಯಾಚಿಸಬೇಕಾಗಿಲ್ಲ, ಇದೊಂಥರ ಸೆಲ್ಫ್ ಸರ್ವಿಸ್, ಸೆಲ್ಫ್ ಕಾನ್ಶಿಯಸ್ ಅವಸ್ಥೆಯಿಂದ ಹೊರಬರುವುದಕ್ಕಿರುವ ಸುಲಭ ರಹದಾರಿ. ಹಾಗಾಗಿ ಎಲ್ಲಾ ಮೊಬೈಲುಗಳೂ ಈಗ ಕೆಮೆರಾಗಳಾಗಿಯೂ ಕೆಲಸ ಮಾಡುತ್ತಿವೆ. ಸ್ಟುಡಿಯೋಗಳು ಬಾಗಿಲು ಹಾಕುತ್ತಿವೆ. ಜೀವನದಲ್ಲಿ ಒಂದೇ ಒಂದು ಸಾರಿ ಕೆಮೆರಾ ಹಿಡಿಯದೇ ಇರುವವರೂ ಫೊಟೋಗ್ರಾಫರ್‌ಗಳಾಗುತ್ತಿದ್ದಾರೆ. ಅಫ್‌ಕೋರ್ಸ್, ಅವರು ತೆಗೆಯುವುದು ತಮ್ಮದೇ ಫೊಟೋ. ಮೊದಲು ತಾವೇ ಮೆಚ್ಚಿಕೊಳ್ಳಬೇಕು, ಆಮೇಲೆ ಮಿಕ್ಕವರು ಮೆಚ್ಚಿ ಅಹುದಹುದು ಎನಬೇಕು. ಎಂಬಲ್ಲಿಗೆ ಜೀವನ ಸಾರ್ಥಕ.

ಸೆಲ್ಫೀಯನ್ನು ಸದ್ಯಕ್ಕೆ ಟೀನೇಜ್ ಕಲ್ಚರ್ ಎಂದು ಕರೆಯಲಾಗುತ್ತಿದೆ. ಮೊಬೈಲ್ ಕೈಯಲ್ಲಿದ್ದೂ ಸೆಲ್ಫೀ ತೆಗೆಯದೇ ಇರುವ ಹುಡುಗ ಅಥವಾ ಹುಡುಗಿಯರು ಅವರ ಓರಗೆಯವರ ಕಣ್ಣಲ್ಲಿ ವೇಸ್ಟ್ ಬಾಡಿಗಳು. ಈ ಕಾರಣಕ್ಕೇ ತನಗೊಂದು ಮೊಬೈಲು ಕೊಡಿಸೂ ಎಂದು ಹೆತ್ತವರಿಗೆ ಗಂಟು ಬೀಳುವ ಹುಡುಗ-ಹುಡುಗಿಯರ ಸಂಖ್ಯೆ ಜಾಸ್ತಿಯಾಗಿದೆ. ಹೋಗ್ಲಿ ಬಿಡಿ, ಅಂತ ಕೊಡಿಸಿದರೆ ಅವಳು ಮೂರೂ ಹೊತ್ತೂ ಅದರಲ್ಲೇ ಮಗ್ನಳಾಗಿರುತ್ತಾಳೆ. ಸೆಲ್ಫೀ ತೆಗೆಯುತ್ತಾಳೆ, ಫೇಸ್‌ಬುಕ್ಕಿಗೆ ಹಾಕುತ್ತಾಳೆ. ಅಲ್ಲಿ ಲೈಕುಗಳು ಅವಳಿಗೋಸ್ಕರ ಕಾಯುತ್ತಿವೆ. ತನ್ನ ಮಗಳು ಫೇಸ್‌ಬುಕ್ಕಲ್ಲಿ ಸ್ಟಾರ್ ಆಗಿರುವುದು ಅಪ್ಪನಿಗೆ ಗೊತ್ತೇ ಇರುವುದಿಲ್ಲ. ಯಾಕೆಂದರೆ ಅವಳ ಫ್ರೆಂಡ್ ಗ್ರೂಪಲ್ಲಿ ಇವನಿಲ್ಲ. ಅವಳಿಗದು ಬೇಕೂ ಇಲ್ಲ. ಅವಳು ಇವತ್ತು ಕಾಲೇಜಲ್ಲೇನಾಯಿತು ಅನ್ನುವುದನ್ನು ಅಮ್ಮನ ಮುಂದೆ ಹೇಳಿಕೊಳ್ಳುವುದಿಲ್ಲ, ಫ್ರೆಂಡ್ ಜೊತೆ ಶೇರ್ ಮಾಡಿಕೊಳ್ಳುತ್ತಾಳೆ. ನಂಜಿಕೊಳ್ಳುವುದಕ್ಕೆ ಸೆಲ್ಫೀ ಇರುತ್ತದೆ. ಕ್ಯಾಂಟೀನ್‌ನಲ್ಲಿ ಗೆಳತಿಯರ ಗುಂಪಿನ ಜೊತೆ ತೆಗೆದ ಸೆಲ್ಫೀ, ಸಿನಿಮಾ ಥಿಯೇಟರು ಮುಂದೆ ಪಾಪ್ ಕಾರ್ನ್ ತಿನ್ನುತ್ತಾ ತೆಗೆದ ಸೆಲ್ಫೀ, ನಾಯಿಯನ್ನು ತೊಡೆಯ ಮೇಲೆ ಕೂರಿಸಿಕೊಂಡು ತೆಗೆದ ಸೆಲ್ಫೀ...ಎಲ್ಲದಕ್ಕೂ ಕಡ್ಡಾಯವಾಗಿ ಲೈಕ್ ಬಿದ್ದೇ ಬೀಳುತ್ತದೆ.

ಸೆಲ್ಫೀಗೆ ಅಂಟಿಕೊಂಡ ಮೇಲೆ ಅವಳ ನಡವಳಿಕೆಯೇ ಬದಲಾಗಿದೆ. ಮೊದಲಿನಂತೆ ಟೀವಿ ಮುಂದೆ ತಾಸುಗಟ್ಟಲೆ ಕೂರುವುದಿಲ್ಲ, ಕಿವಿಗೆ ವೈರ್ ಹಾಕಿ ಹಾಡು ಕೇಳುವುದಿಲ್ಲ, ಪುಸ್ತಕ ಓದುವ ಸೀನ್ ಅಂತೂ ಇಲ್ಲವೇ ಇಲ್ಲ. ಆಕೆ ಕನಸಿನ ಲೋಕದಲ್ಲಿ ವಿಹರಿಸುವ ಕನ್ಯೆಯಂತೆ ಕಾಣಿಸುತ್ತಿದ್ದಾಳೆ. ಆದರೆ ಅವಳ ಕೈಯಲ್ಲಿ ಅಳಿಲಮರಿಯಂತೆ ಬೆಚ್ಚಗೆ ಕುಳಿತಿದೆ ಮೊಬೈಲ್. ಟಾಯ್ಲೆಟ್ಟಿಗೆ ಹೋಗುವಾಗಲೂ ಆಕೆ ಮೊಬೈಲನ್ನು ಬಿಡಲಾರಳು.ತಾನು ಯಾವ ಡ್ರೆಸ್ಸಲ್ಲಿ ಚೆಂದ ಕಾಣಿಸುತ್ತೇನೆ ಅನ್ನುವುದು ಅವಳಿಗೀಗ ಗೊತ್ತಾಗಿದೆ, ಯಾವ ಆಂಗಲ್‌ನಲ್ಲಿ ಚೆನ್ನಾಗಿ ಕಾಣುತ್ತೇನೆ ಅನ್ನುವ ರಹಸ್ಯವೂ ಪತ್ತೆಯಾಗಿದೆ, ಸೌಂದರ್ಯ ಪ್ರಜ್ಞೆ ಸದಾ ಜಾಗೃತವಾಗಿರುತ್ತದೆ. ಅಲ್ಲೆಲ್ಲೋ ದೂರದಲ್ಲಿ ಕುಳಿತು ಕಾಮೆಂಟು ಹಾಕಿದ ಅಪರಿಚಿತ ಅಭಿಮಾನಿ ಆಕೆಯ ಪ್ಲಸ್ ಮೈನಸ್ಸುಗಳನ್ನು ಪಟ್ಟಿ ಮಾಡಿ ಕಳಿಸಿದ್ದಾನೆ. ಆಕೆ ಅದನ್ನು ಫಾಲೋ ಮಾಡುತ್ತಿದ್ದಾಳೆ.

ಸೆಲ್ಫೀ ತೆಗೆದರೆ ತಪ್ಪೇನು? ಅದನ್ನು ಶೇರ್ ಮಾಡಿಕೊಂಡರೆ ತಪ್ಪೇನು? ಮೇಲ್ನೋಟಕ್ಕೆ ಯಾವ ತಪ್ಪೂ ಕಾಣಿಸುವುದಿಲ್ಲ. ಸೆಲ್ಫ್ ಮಾರ್ಕೆಟಿಂಗ್ ಥರ, ತಮ್ಮನ್ನು ತಾವೇ ಪ್ರೊಜೆಕ್ಟ್ ಮಾಡಿಕೊಳ್ಳುವುದು ಈಗಿನ ಕಾಲದ ಟ್ರೆಂಡು. ಅದರಿಂದ ನಿಮ್ಮ ಆತ್ಮವಿಶ್ವಾಸ ಚಿಗುರುತ್ತದೆ, ತಾನು ಸುಂದರವಾಗಿದ್ದೇನೆ ಅನ್ನುವ ಭಾವನೆಯನ್ನು ಮೂಡಿಸುತ್ತದೆ, ನಿಮ್ಮ ಗೆಳೆಯರ ಅಥವಾ ಗೆಳತಿಯರ ಬಳಗ ವಿಸ್ತಾರವಾಗುತ್ತದೆ. ಆದರೆ ಸೆಲ್ಫೀಯ ಅಪಾಯವೆಂದರೆ ಅದು ಬಹಳ ಬೇಗನೇ ನಿಮ್ಮನ್ನು ಆವರಿಸಿಕೊಳ್ಳುತ್ತದೆ, ಮುಂದೆ ಅದೇ ಚಟವಾಗುತ್ತದೆ, ಆತ್ಮರತಿಗೆ ದೂಡುತ್ತದೆ, ಫೇಸ್‌ಬುಕ್ಕಲ್ಲಿರುವ ದುಷ್ಟರು ನಿಮ್ಮ ಫೊಟೋಗಳನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಯಿರುತ್ತದೆ, ನಿಮ್ಮಿಂದ ದೂರವಾದ ಪ್ರೇಮಿ ನಿಮ್ಮ ಫೊಟೋಗಳನ್ನೇ ಬಳಸಿಕೊಂಡು ಸೇಡು ತೀರಿಸಿಕೊಳ್ಳಬಹುದು.


ಸೆಲ್ಫೀಯ ದೊಡ್ಡ ಸಮಸ್ಯೆಯೆಂದರೆ ಫೇಸ್‌ಬುಕ್ಕಲ್ಲಿ ನೀವು ಯಾರು, ನಿಮ್ಮ ಸಾಧನೆಯೇನು ಅನ್ನುವುದರ ಮೇಲೆ ನಿಮಗೆ ಲೈಕುಗಳು ಬೀಳುವುದಿಲ್ಲ, ನೀವು ಹೇಗೆ ಕಾಣಿಸುತ್ತಿದ್ದೀರಿ ಅನ್ನುವದರ ಮೇಲೆ ಲೈಕ್ ಬೀಳುತ್ತವೆ. ನಿಮ್ಮ ಲುಕ್ ಅಷ್ಟೇ ನಿಮ್ಮ ಐಡೆಂಟಿಟಿ. ಒಂದು ದಿನ ಲೈಕ್ಸ್ ಕಡಿಮೆಯಾದರೆ ನಿಮ್ಮನ್ನು ಹತಾಶೆ ಆವರಿಸಿಕೊಳ್ಳಬಹುದು, ನಿಮ್ಮ ಸ್ನೇಹಿತೆಯ ಸೆಲ್ಫೀಗೆ ನಿಮಗಿಂತ ಜಾಸ್ತಿ ಲೈಕ್ಸ್ ಬಿದ್ದರೆ ಅಸೂಯೆ ಹೆಡೆಯೆತ್ತಬಹುದು. ನನ್ನನ್ನು ಎಲ್ಲರೂ ಇಷ್ಟಪಡಬೇಕು ಅನ್ನುವ ಆಸೆಯೇ ದುಃಖಕ್ಕೆ ಕಾರಣವಾದೀತು. ನಿಮ್ಮ ಮುಖಬೆಲೆಯನ್ನು ಅಳೆಯವವರು ಬೇರೆಯವರು ಆಗಿರುವುದರಿಂದ ನಿಮ್ಮ ನಿಜವಾದ ಯೋಗ್ಯತೆ ಏನು ಅನ್ನುವುದು ನಿಮಗೆ ಗೊತ್ತಾಗುವುದೇ ಇಲ್ಲ.

ತಾನು ಹೇಗೆ ಕಾಣಿಸುತ್ತಿದ್ದೇನೆ ಅನ್ನುವುದೇ ಮುಖ್ಯವಾದಾಗ ಇತರೇ ವಿಷಯಗಳ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಾ ಹೋಗುತ್ತದೆ. ಪದೇಪದೆ ಸೆಲ್ಫೀಗಳನ್ನು ಪೋಸ್ಟ್ ಮಾಡುವ ಹುಡುಗಿಯರು ಕೊಂಚ ಕೀಳರಿಮೆಯಿಂದ ಬಳಲುತ್ತಿರುತ್ತಾರೆ ಅನ್ನುತ್ತದೆ ಸೈಕಾಲಜಿ. ಅವರು ಲೈಕ್‌ಗಳಿಗೋಸ್ಕರ ಹಪಹಪಿಸುತ್ತಾರೆ. ಸೆಲ್ಫೀಯನ್ನೇ ದಿನಚರಿ ಆಗಿಸಿಕೊಂಡವರು ತಮ್ಮನ್ನು ತಾವೇ ಒಂದು ಪ್ರಶ್ನೆ ಕೇಳಿಕೊಳ್ಳಬೇಕು. ಇದು ಬರೀ ತಮಾಷೆಗಷ್ಟೇನಾ ಅಥವಾ ಕಾಮೆಂಟುಗಳಿಗೋಸ್ಕರವಾ? ನೀವು ಎರಡನೇ ಕೆಟಗರಿಗೆ ಸೇರಿದವರಾಗಿದ್ದರೆ ಡೇಂಜರ್ ಝೋನ್‌ನಲ್ಲಿದ್ದೀರಿ ಎಂದೇ ಅರ್ಥ. ತಕ್ಷಣ ಸೆಲ್ಫೀ ಕಡಿಮೆ ಮಾಡಿ ಅಥವಾ ಅದನ್ನು ತಮಾಷೆಗೆ ಬಳಸಿ. ಸಾಮಾಜಿಕ ಜಾಲದಲ್ಲಿ ನೀವು ಏನೇನು ಪೋಸ್ಟ್ ಮಾಡುತ್ತೀರೋ ಅದು ನಿಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ ಅನ್ನೋದು ನೆನಪಿರಲಿ. ನಿಮ್ಮ ಒಟ್ಟಾರೆ ವ್ಯಕ್ತಿತ್ವದಲ್ಲಿ ಇನ್ನೇನೇನೋ ಪ್ಲಸ್ಸುಗಳು ಅಡಕವಾಗಿರಬಹುದು. ಉದಾಹರಣೆಗೆ ನಿಮಗೆ ಪ್ರವಾಸ ಇಷ್ಟವಾಗಿರಬಹುದು. ಓದು, ಡ್ಯಾನ್ಸ್, ಅನಿಮೇಷನ್, ಥರದ ಇತರೇ ಚಟುವಟಿಕೆಗಳಲ್ಲಿ ನೀವು ಮುಂದಿರಬಹುದು. ಅವುಗಳನ್ನೇ ಪೋಸ್ಟ್ ಮಾಡಿ.

ಸೆಲ್ಫೀ ಬಗ್ಗೆ ಪೋಷಕರು ಹೆಚ್ಚು ಎಚ್ಚರವಾಗಿರಬೇಕು. ನಿಮ್ಮ ಮಗ ಅಥವಾ ಮಗಳು ಕಿವಿ ಕೇಳದವರಂತೆ ವರ್ತಿಸುತ್ತಿದ್ದರೆ, ಸದಾ ಮೊಬೈಲಿಗೇ ಅಂಟಿಕೊಂಡಿದ್ದರೆ, ಓದುವುದರಲ್ಲಿ ಹಿಂದೆ ಬಿದ್ದಿದ್ದರೆ, ಬೆಡ್ ರೂಮ್‌ನಲ್ಲೋ ಟಾಯ್ಲೆಟ್ಟಲ್ಲೋ ಜಾಸ್ತಿ ಹೊತ್ತು ಕಳೆಯುತ್ತಿದ್ದರೆ, ಅವರಿಗೆ ಸೆಲ್ಫೀ ಭೂತ ಅಮರಿಕೊಂಡಿರುವ ಸಾಧ್ಯತೆ ಇದೆ. ಆಗಾಗ ಅವರ ಮೊಬೈಲನ್ನು ನೋಡುತ್ತಾ ಇರಿ, ಮೊಬೈಲಿಗೂ ಪಾಸ್‌ವರ್ಡ್ ಹಾಕುವ ಚಟ ಅವರಿಗಿದ್ದರೆ ಮೊದಲು ಅದನ್ನು ಬಿಡಿಸಿ. ಅವರ ಫ್ರೆಂಡ್ಸ್ ಗ್ರೂಪಲ್ಲಿ ಯಾರ‍್ಯಾರು ಇದ್ದಾರೆ ಅನ್ನುವುದನ್ನು ತಿಳಿದುಕೊಳ್ಳಿ. ಅವರ ಸೆಲ್ಫೀಗಳು ಸಭ್ಯತೆಯ ಗಡಿಯೊಳಗೇ ಇರುವಂತೆ ನೋಡಿಕೊಳ್ಳಿ. ಯಾವುದೇ ಕಾರಣಕ್ಕೂ ಸ್ಕೂಲ್ ಅಥವಾ ಕಾಲೇಜಿಗೆ ಮೊಬೈಲು ತೆಗೆದುಕೊಂಡು ಹೋಗದಂತೆ ತಾಕೀತು ಮಾಡಿ.
ಸೆಲ್ಫೀ ಅನ್ನುವುದು ಮಿತಿಮೀರಿದರೆ ಮದ್ದಿಲ್ಲದ ಖಾಯಿಲೆಯಾಗುತ್ತದೆ ಅನ್ನುವುದು ನೆನಪಿರಲಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 27 March, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books