Ravi Belagere
Welcome to my website
ನಿಮ್ಮದು ಎಂಥ ಮ್ಯಾರೇಜು? ಶುದ್ಧ ಅರೇಂಜ್‌ಡಾ? ನೀವೇ ಮಾಡಿಕೊಂಡ ಲವ್ ಮ್ಯಾರೇಜಾ? live in relationshipನಂತಹ  ಗಾಂಧರ್ವ ವಿವಾಹನಾ? ‘ಲವ್ ಕಮ್ ಅರೇಂಜ್ಡ್’ ಮದುವೆಯಾ? ಅಂತರ್‌ಜಾತೀಯ ವಿವಾಹವಾ? ಅಂತರ್‌ಧರ್ಮೀಯ ವಿವಾಹವಾ? (Request :ಜಾತಿಗಳ ಪುಸ್ತಾಪ ಮಾಡಬೇಡಿ) Love, run and marry ಎಂಬಂತೆ ಮನೆಗಳನ್ನು ಬಿಟ್ಟು ಹೋಗಿ ಆದ ಮದುವೆಯಾ? ಎಂಥ ಮದುವೆಯಾಗಿದ್ದರೂ ಅಡ್ಡಿಯಿಲ್ಲ. ಅದಕ್ಕೆ ಗೌರವವಿದೆ. ಒಂದು inland letterನಷ್ಟು ಬರವಣಿಗೆಯನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆಯಿರಿ. ಜೊತೆಗೆ ಇಬ್ಬರೂ ಇರುವ ಫೊಟೋ ಕಳಿಸಿ. mail ಮಾಡೋದಾದರೆ [email protected]ಗೆ ಮಾಡಿ.
Home About Us Gallery Books Feedback Prarthana Contact Us

Buy Ravi Belagere Books online

ಅವನು ಒಳ್ಳೆಯ ಫೊಟೋಗ್ರಾಫರ್ ಅಲ್ವಾ ಅನ್ನೋ ಕಾಲ ಹೋಗೇಬಿಟ್ಟಿತು ನೋಡಿ?

ತೀರ ಹೀಗಲ್ಲದಿದ್ದರೂ, ಇದಕ್ಕೆ ಒಂದಲ್ಲ ಒಂದು ದಿನ ಏನಾದರೂ ಆಗಿ, ಗತಿ ಕಾಣಿಸುವವರು ಸಿಕ್ಕೇಸಿಗುತ್ತಾರೆ ಅಂದುಕೊಂಡಿದ್ದೆ. ಆಗೇಬಿಟ್ಟಿತಲ್ಲ? ನಾನು ಫೇಸ್‌ಬುಕ್ ಬಗ್ಗೆ ಬರೆಯುತ್ತಿದ್ದೇನೆ. ‘ಅಯ್ಯೋ, ನಿನ್ನಂಥ ಸೆಲೆಬ್ರಿಟೀಸ್‌ಗೆ ಫೇಸ್‌ಬುಕ್‌ಗಿಂತ ಟ್ವೀಟರ್ ಅಕೌಂಟ್ ಇರಬೇಕು’ ಅಂತ ಯಾರೋ ಅಂದರು. ‘ಒಲ್ಲೆ’ ಅಂದೆ. ಇರೋ ಕೆಲಸಗಳ ಮಧ್ಯೆ ಈ ಫೇಸ್‌ಬುಕ್‌ನ ಕಡೆಗೆ ಹಣಿಕಿ ಹಾಕುವುದೇ ಸಾಕು-ಬೇಕು ಎಂಬಂತಾಗಿರುತ್ತದೆ. ಅಂಥದರಲ್ಲಿ ‘ಟ್ವೀಟರ್’ನ ಮೈಮೇಲೆ ಎಳೆದುಕೊಂಡು ಒದ್ದಾಡಲಾ? ಈ ಹಿಂದೆ ‘ಆರ್ಕುಟ್’ ಇತ್ತು. ನನ್ನ ಮೂರೂ ಮಕ್ಕಳು ಅದರಲ್ಲಿ ತಮ್ಮ ಅಕೌಂಟ್ ಇಟ್ಟುಕೊಂಡಿದ್ದರು. ‘ಆರ್ಕುಟ್’ ಎಂಬುದು ಹೇಗಿರುತ್ತೆ ಅಂತ ಕೂಡ ತಿಳಿದುಕೊಳ್ಳಲು ನಾನು ಹೋಗಲಿಲ್ಲ. ಮುಂದೆ ಅದು ಸತ್ತೇ ಹೋಯಿತು ಅಂತ ಅದ್ಯಾರೋ ಅಂದರು.
ಇವು ಸಾಮಾಜಿಕ ಜಾಲತಾಣಗಳು. ಆರ್ಕುಟ್, ಫೇಸ್‌ಬುಕ್, ಟ್ವಿಟರ್-ಎಲ್ಲವೂ ಅವೇ. ಕಂಪ್ಯೂಟರ್ ಇರಬೇಕು. ಅದಕ್ಕೆ ಇಂಟರ್‌ನೆಟ್ ಕನೆಕ್ಷನ್ ತಾಕಬೇಕು. ಅದಕ್ಕೆ ನೀವು ಅಕೌಂಟ್ ತೆರೆದಿಟ್ಟುಕೊಳ್ಳಬೇಕು. ಈಗ ಕಂಪ್ಯೂಟರೂ ಬೇಡ; ನಿಮ್ಮ ಮೊಬೈಲ್‌ನಲ್ಲೇ ಫೇಸ್‌ಬುಕ್‌ನ ಸ್ವರ್ಗ ಕಂಡುಬಿಡಬಹುದು. ಅದರಿಂದ ನಿಮಗೆ ಖರ್ಚಿಲ್ಲ. ಒಂದು ನಯಾಪೈಸೆ ಕಟ್ಟಬೇಕಿಲ್ಲ, ತೋಚಿದ್ದನ್ನು ಬರೀಬಹುದು, ಬೇಕಾದ ಹಾಗೆ ಫೊಟೋಗಳನ್ನು ಅದರ ಬಾಯಿಗೆ ಹಾಕಬಹುದು; ಹೀಗಾಗಿ ಅಗಾಧ ಸಂಖ್ಯೆಯಲ್ಲಿ ಫೇಸ್‌ಬುಕ್‌ಗೆ ಸದಸ್ಯರಾಗಿದ್ದಾರೆ. ‘ನೀವು ಬೇಕಾದ್ದು ಮಾಡಬಹುದು’ ಅಂದೆನಲ್ಲ? ಅದರ ಜೊತೆಗೆ ಮತ್ತೂ ಒಂದು ಸಂಗತಿ ನಿಮಗೆ ಹೇಳಬೇಕು. ಸದರಿ ಫೇಸ್‌ಬುಕ್‌ಗೆ ಅಪ್ಪ-ಅಮ್ಮ ಇಬ್ಬರೂ ಇಲ್ಲ. ಅದರಲ್ಲಿ ಬೇಕಾದ್ದು ಬರೆಯಬಹುದು ಅಂದೆನಲ್ಲ? ಯಾವನೋ ಒಬ್ಬ ಅವಿವೇಕಿ ಫೇಸ್‌ಬುಕ್‌ನಲ್ಲಿ ‘ನಿಮ್ಮ ಬಗ್ಗೆ’ಯೂ ಬೇಕಾದ್ದು ಬರೆಯಬಹುದು! ನೀವು ಅವನನ್ನು ಕರೆದು ಕಪಾಳಕ್ಕೂ ಹೊಡೆಯಲಾರಿರಿ!
ಅದು ಪರಿಸ್ಥಿತಿ.

ನಿಮಗೆ ನೆನಪಿದ್ದೇ ಇರುತ್ತದೆ: ನನ್ನ ಮತ್ತು ಇನ್ನೊಬ್ಬ ಪತ್ರಕರ್ತನ ನಡುವೆ ನಡೆದ ಶರಂಪರ ಜಗಳ. ‘ಇದು ತೀರ ಈ ಮಟ್ಟಕ್ಕೆ ಹೋಗಬಾರದಿತ್ತು’ ಅಂತ ಇಬ್ಬರಿಗೂ ಅನ್ನಿಸಿತ್ತು. ಆದರೂ ಆ ಮಟ್ಟಕ್ಕೆ ಹೋಯಿತು. ಅದಕ್ಕೆ ಕಾರಣಗಳಿದ್ದವು. ಆ ಪೈಕಿ ಮುಖ್ಯವಾದದ್ದು ಅಂದರೆ ಇದೇ ಫೇಸ್‌ಬುಕ್! ಯಾವನೋ ಅನಾಮಧೇಯ, ತೋಚಿದ ಎಂಥದೋ ಹೆಸರಿನಲ್ಲಿ ಒಂದು ಫೇಸ್‌ಬುಕ್ ಅಕೌಂಟ್ ತೆರೆಯುತ್ತಾನೆ. ಕೈಗೆ ಸಿಕ್ಕಿದ ಒಂದು ಫೊಟೋ, ಅದು ತನ್ನದೇ ಎಂಬಂತೆ ಹಾಕುತ್ತಾನೆ. ಆ ನಂತರ ಶುರುವಾಗುತ್ತೆ ನೋಡಿ, ಛದ್ಮ ಯುದ್ಧ? ಅದಕ್ಕೊಂದು ಮಿತಿಯೇ ಇರುವುದಿಲ್ಲ. ‘ಅಮ್ಮ-ಅಕ್ಕ’ ಅಂತ ಬೈದರೂ ಸರಿಯೇ. ‘ಪತ್ರಿಕೆ’ಯಲ್ಲಿ ನಾವೂ ಟೀಕಿಸುತ್ತೇವೆ, ಖಂಡಿಸುತ್ತೇವೆ, ಕೆಲವೊಮ್ಮೆ ಬೈಗುಳ ಕೂಡ ನುಸುಳುತ್ತವೆ. ಆದರೆ, ‘ಪತ್ರಿಕೆ’ಯಲ್ಲಿ ಪ್ರಕಟವಾದ ಪ್ರತಿ ಅಕ್ಷರಕ್ಕೂ ನಾವು ಹೊಣೆಗಾರರು. ಎಂಥ ಪ್ರಾಣ ಹೋಗತುವ ಪರಿಸ್ಥಿತಿಯೇ ಇರಬಹುದು. ಆದರೆ ನಾವು, I mean ಸಂಪಾದಕನಾದ ನಾನು ನ್ಯಾಯಾಲಯಕ್ಕೆ ಹೋಗಲೇಬೇಕು. ನಾನು ಸಾವಿರಗಟ್ಟಲೆ ಕಿಲೋಮೀಟರು ಹೋಗುತ್ತೇನೆ. ನ್ಯಾಯಾಲಯ ಕೇಳಿದ ಪ್ರತಿಯೊಂದಕ್ಕೂ ಉತ್ತರ ನೀಡಬೇಕು; ನೀಡುತ್ತೇನೆ. ಆ ಜಂಜಡಗಳ್ಯಾವೂ ಫೇಸ್‌ಬುಕ್‌ಗೆ ಇಲ್ಲ. ಅಸಲು ಅದಕ್ಕೆ ಸಂಪಾದಕನೇ ಇಲ್ಲವಲ್ಲ? Of course, ಅದನ್ನು ನಡೆಸುವ ಯಾವುದೋ ಅಗೋಚರ ಶರೀರಕ್ಕೆ ನೀವು ‘ರಿಪೋರ್ಟ್’ ಮಾಡಬಹುದು. ಹಾಗೆ ಮಾಡಿಬಿಟ್ಟರೆ ನಿಮ್ಮನ್ನು ಆ ಪರಿ ಬೈದವನಿಗೆ ಏನಾದರೂ ಶಿಕ್ಷೆ ಆಗುತ್ತದಾ? ಇಲ್ಲ. ಹೀಗೆಲ್ಲ ಬರೆದರೆ, ನಾಳೆ ಬೆಳಿಗ್ಗೆ ಯಾರೋ ಬಂದು ಮನೆಯೆದುರು ಗಲಾಟೆ ಮಾಡುತ್ತಾರೆ ಅಂತ ಇಲ್ಲವೇ ಇಲ್ಲವಲ್ಲ? ಹೀಗಾಗಿ ಮನೆಯ ಒಂದು ರೂಮಿನಲ್ಲಿ ಕುಳಿತ ಪುರುಷ ಪುಂಗವನಿಗೆ ಇದ್ದಕ್ಕಿದ್ದಂತೆ ಭೀಮಬಲ! ಅವನು ಬಾಯಿಗೆ ಸಿಕ್ಕಿದ್ದು ಬರೆಯುತ್ತಾನೆ. ನೀವು ಸೌಮ್ಯವಾಗಿಯೇ ಅದಕ್ಕೆ ಪ್ರತಿಕ್ರಿಯೆ ನೀಡಿ. ‘ನೋಡಿದ್ಯಾ, ಹೇಗೆ ಹೆದರಿಸಿದೆ’ ಅಂದುಕೊಂಡ ಭೂಪ ಅಥವಾ ‘ಭೂಪಿ’ ಇನ್ನೂ ಅಸಹ್ಯವಾಗಿ ಬೈಯುತ್ತೆ! ನಾವು, ಇರೋ ಕೆಲಸವೆಲ್ಲ ಬಿಟ್ಟು ಅವರಿಗೆ ಹೇಗೆ ಉತ್ತರಿಸಿ, ಸುಮ್ಮನಾಗಿಸಬೇಕು ಅಂತ ತಲೆ-ಗಡ್ಡ ಕೆರೆದುಕೊಂಡು ಕೂಡಬೇಕು. ಇದು ಯಾರಿಗೆ ಬೇಕು?
ನನ್ನ ಪಾಲಿಗೆ ಫೇಸ್‌ಬುಕ್ ಅನ್ನೋದು ಸ್ನೇಹ-ಸಂತಸ-ಅನಿಸಿಕೆ ಮುಂತಾದವುಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ಚೆಂದದ ತಾಣ. ಗಮನಿಸುತ್ತಿರುತ್ತೇನಲ್ಲ? ‘My child’ ಅಂತ ಬರೆದು ಹೆಣ್ಣುಮಗಳೊಬ್ಬಳು ಅದರ ಫೊಟೋ ಹಾಕಿ ಒಂದೆರಡು ಸಾಲು ಬರೆದಿರುತ್ತಾಳೆ. ಒಬ್ಬ ಯುವಕ ನನ್ನ ಎಂಗೇಜ್‌ಮೆಂಟ್ ಆಯ್ತು ಅಂತ ಬರೆಯುತ್ತಾನೆ. ಅವನ ಗೆಳೆಯರು ‘Congrats’ ಅಂತ ಪ್ರತಿಕ್ರಿಯಿಸುತ್ತಾರೆ. ನನ್ನ ಅಪ್ಪ ತೀರಿ ಹೋದರು ಅಂತಲೋ, ನನ್ನ ಅಮ್ಮ ಇನ್ನಿಲ್ಲ ಅಂತಲೋ ಬರೆದದ್ದಕ್ಕೆ, Oh, sorry ಅಥವಾ Rest in peace ಅಂತಲೋ ಪ್ರತಿಕ್ರಿಯಿಸುತ್ತಾರೆ. ಕೆಲವು ಸಲ ಇದು ಭಯಂಕರ ‘ನಾರ್ಸಿಸಿಸಮ್’ ಕಣ್ರೀ ಅಂದುಕೊಳ್ಳುತ್ತೇನೆ. ಅದರರ್ಥ ಸ್ವ-ರತಿ. My child, My dad,My car, My bull, My shit ಅಂತೆಲ್ಲ ಬರೆದು ಆತ್ಮರತಿಯ ಪರಮಾವಧಿ ತಲುಪಿಬಿಡುವುದೂ ಉಂಟು. ಫೇಸ್‌ಬುಕ್‌ನ ಪದರುಗಳಲ್ಲಿ ಗರಿಗೆದರುವ ಪ್ರೇಮಗಳು ಅವೆಷ್ಟೋ? ಮೂಡಿದ ಮರುದಿನವೇ ‘ಬ್ರೇಕ್‌ಅಪ್’ ಆಗುವ ಪುಗಸಟ್ಟೆ ಅಫೇರ್‌ಗಳೆಷ್ಟೋ? ಗಮನಿಸಿ, ಇದೆಲ್ಲವೂ ಕೇವಲ ಐದು ಸಾವಿರ ಮಂದಿಯ ಮಧ್ಯೆ ತಿರುಗುವ ಪುಟ್ಟ ತಿರುಗಣಿಯ ಬೀಸೋ ಕಲ್ಲಿನ ವ್ಯವಹಾರ. ಐದು ಸಾವಿರಕ್ಕಿಂತ ಹೆಚ್ಚಿನ ಗೆಳೆಯರನ್ನು ಹೊಂದುವಂತಿಲ್ಲ. ನನ್ನ ಪಾಲಿನ ಐದು ಸಾವಿರ ಸಂಖ್ಯೆ ಮುಗಿದು ಯಾವುದೋ ಕಾಲವೇ ಆಗಿದೆ.

ಇಷ್ಟಾಗಿ, ಪರಿಚಯವಿಲ್ಲದ-ಸಂಬಂಧ ಪಡದ ಯಾವನೊಂದಿಗೋ ಹಾಗೆ ಜಗಳ-ಕದನ ಆಡಲಿಕ್ಕೆ ನನ್ನಿಂದ ಸಾಧ್ಯವೇ ಇಲ್ಲ. ಅವನ್ಯಾರೋ ಅಯೋಗ್ಯ ನನ್ನನ್ನು ವಾಚಾಮಗೋಚರವಾಗಿ ಬೈಯ್ಯುತ್ತಾನೆ ಅಂತ ಇಟ್ಟುಕೊಳ್ಳಿ. ಅವನ ಮಟ್ಟಕ್ಕೇ ಇಳಿದು, ಅವನಿಗಿಂತ ಅಸಹ್ಯಕರವಾಗಿ ನಾನು ಬೈಯಬೇಕಲ್ಲ? ಅದನ್ನು ಓದಿದವರು ನನ್ನದು ಅದಿನ್ನೆಂಥ ಟೇಸ್ಟು ಅಂದುಕೊಳ್ಳೋದಿಲ್ಲವಾ? ಈಗ ಬಿಡಿ; ನಾನು ಅಂಥ ಬರಹಗಳನ್ನು ಪೂರ್ತಿ ಓದಲಿಕ್ಕೇ ಹೋಗುವುದಿಲ್ಲ. ಯಾವನಾದರೂ ಇದಿರಿಗೆ ಬಂದು ಬೈದು ಹಲ್ಲು ತೋರಿಸುತ್ತಾನಾ? ಖಂಡಿತವಾಗ್ಯೂ ನಾನು ಈ ಜನ್ಮದಲ್ಲೇ ಯಾರನ್ನೂ ಬೇರೆ ಯಾರಿಂದಲೋ ಒದೆಸಿಲ್ಲ. ಒದಿಸುವುದೂ ಇಲ್ಲ. ಸಿಟ್ಟು ತಡೆದುಕೊಳ್ಳಲಾಗದಿದ್ದರೆ, ತೋಳು ಮಡಚಿ ಮೇಲಕ್ಕೆದ್ದು ನಾನೇ ದನಕ್ಕೆ ಒದೆಯುವಂತೆ ಒದ್ದು ಕೈ ಬಿಡುತ್ತೇನೆ. ಈಗ ಬಿಡಿ, ಐವತ್ತೇಳು ವರ್ಷ ಅಂದರೆ ಇದಿನ್ನೇನು ರಸ್ತೆಗಿಳಿದು ಅಂಗಿ ಹಿಡಿದು ಜಗಳವಾಡುವ ವಯಸ್ಸಾ? ಅದೇನಾಯಿತೋ ಗೊತ್ತಿಲ್ಲ; ಬಲುಬೇಗ ಸಿಟ್ಟಿಗೆದ್ದು, ಹೋ ಅಂತ ಕಿರಿಚಾಡುತ್ತಿದ್ದ ನನಗೆ ಧರ್ಮರಾಯ ಮತ್ತು ಏಸುಮಹಾಪ್ರಭುವಿನ ಪೂರ್ತಿ ಡಿಕಾಕ್ಷನ್ನೇ ಬಸಿದು ಒಳಕ್ಕೆ ಇಳಿದಿದೆಯೇನೋ ಎಂಬಂತೆ ನನಗೇ ಅಶ್ಚರ್ಯವಾಗುವಷ್ಟು ಸಹನೆ, ಶಾಂತಿ, ನೆಮ್ಮದಿ ಮೈಗೂಡಿಬಿಟ್ಟಿವೆ! ಹೀಗಾಗಿ no BP.

ಈ ‘ಫೇಸ್‌ಬುಕ್’ನ ಛದ್ಮ ಯುದ್ಧವಿದೆಯಲ್ಲ? ಅದಕ್ಕೆ ಬಲಿಯಾಗಿ ಇತ್ತೀಚೆಗೊಬ್ಬ ಪ್ರಾಣಿ ಭಯಂಕರ ಗೂಸಾ ತಿಂದ. ಅದರ ವಿವರವಾದ ವರದಿಯೂ ‘ಪತ್ರಿಕೆ’ಯಲ್ಲಿ ಪ್ರಕಟವಾಗಿತ್ತು. ಅವನು ಯಾರೆಂಬುದೇ ನನಗೆ ಗೊತ್ತಿಲ್ಲ. ಹೆಸರು ವಿ.ಆರ್.ಭಟ್ ಅಂತ ಕೆಲವು ತಿಂಗಳುಗಳ ಹಿಂದೆ, ಅವನು ಯಾತರದೋ ಕ್ಯಾತೆ ತೆಗೆದಿದ್ದ. ‘ರವಿ ಬೆಳಗೆರೆ ಹೀಗೆ ಮಾಡಬಹುದಾ? ಅದೂ ಹಬ್ಬದ ಮರುದಿನ. ಛೆ, ನಲವತ್ತೊಂಬತ್ತು ಮಕ್ಕಳನ್ನು ಶಾಲೆಯಿಂದ ಹೊರಕ್ಕೆ ಹಾಕಿಬಿಟ್ಟಿದ್ದಾನೆ’ ಅಂತ ಬರೆದಿದ್ದ ನಾನು ಉತ್ತರಿಸಲಿಲ್ಲ. ಆದರೆ ಅವನ್ಯಾರು ಅಂತ ಕಂಪ್ಯೂಟರಿನಲ್ಲೇ ಹುಡುಕಿದೆ. ಆಶ್ಚರ್ಯ ಅಂದರೆ, ಅದೇ ಆಸಾಮಿ ಹಾಗೆ ಬರೆಯುವ ಕೆಲವು ದಿನಗಳ ಹಿಂದೆ, ‘ನನ್ನ ಮಗುವಿನ ಮುಂಜಿ ಇದೆ, ನೀವು ಬಂದು ಹರಸಿ’ ಎಂದು ಆಮಂತ್ರಣ ನೀಡಿದ್ದ. ಮದುವೆಗಳಿಗೇ ನಾನು ಹೋಗುವುದಿಲ್ಲ. ಇನ್ನು ಉಪನಯನಗಳಿಗೆಲ್ಲಿ ಹೋಗಲಿ? ಆದರೆ ಇವನು ನಲವತ್ತೊಂಬತ್ತು ಮಕ್ಕಳನ್ನು ಹೊರಹಾಕಿದ ಸಂಗತಿ ಎತ್ತಿದನಲ್ಲ? ‘ಅದಕ್ಕೆ ಹೌದೇನ್ರೀ..ಬೆಳಗೆರೆ ಎಂಥ ನೀಚ!’ ಎಂದು ಸಂಬಂಧವೇ ಇಲ್ಲದ ಗುಂಪೊಂದು ಕವಕವ ಅನ್ನತೊಡಗಿತು. ಅದಕ್ಕೆ ‘ಮುಚ್ಕಂಡು ಕೂಡ್ರಿ’ ಎಂಬಂತೆ ಕೆಲವರು ಉತ್ತರಿಸಿದರು. ಅಲ್ಲದೆ, ‘ಪ್ರಾರ್ಥನಾ ಸ್ಕೂಲ್’ನ ಕೆಲವು ಮಕ್ಕಳ ತಂದೆತಾಯಿ ಅಲ್ಲೇ ಫೇಸ್‌ಬುಕ್‌ನಲ್ಲೇ ಭಟ್ಟನ ಜನ್ಮ ಜಾಲಾಡತೊಡಗಿದರು.

ನಿಜ, ನಲವತ್ತೊಂಬತ್ತು ಮಕ್ಕಳನ್ನು ನಾನು suspend ಮಾಡಿದ್ದು ನಿಜ, ನಮ್ಮ ಉಮೇಶ ಹೆಗಡೆ ಮತ್ತು ಶಾಲೆಯ ಅಡ್ಮಿನಿಸ್ಟ್ರೇಟಿವ್ ಸಿಬ್ಬಂದಿಯವರು ತಲಾ ಒಬ್ಬೊಬ್ಬ ತಂದೆ-ತಾಯಿಯರಿಗೆ ಮಿನಿಮಮ್ ‘ನೂರು’ ಸಲ ಫೋನ್ ಮಾಡಿದ್ದರು. ದಯವಿಟ್ಟು ಮಗುವಿನ ಫೀ ಕಟ್ಟಿರಿ ಅಂತ. ಕೆಲವರಂತೂ, ಶಾಲೆಯ ನಂಬರು ಮೂಡಿದರೆ ಆ ಫೋನ್ ರಿಸೀವ್ ಮಾಡುವುದನ್ನೇ ಬಿಟ್ಟುಬಿಟ್ಟರು. ಮತ್ತೇನಿಲ್ಲ, ಶಾಲೆಗೆ ಅಡ್ಮಿಷನ್ ಮಾಡಿಸುವಾಗ ಕೆಲವರು ಬ್ಯಾಂಕಿನಿಂದ ಡಿ.ಡಿ ತಂದು ಕೊಡುವುದಿಲ್ಲ. ‘ವಿಪರೀತ ಬ್ಯುಸಿ ನಾನು: ಈ ಚೆಕ್ ತಗಳ್ಳಿ’ ಅನ್ನುತ್ತಾರೆ. ಆ ಚೆಕ್ ಮರುದಿನವೇ ಬೌನ್ಸ್ ಆಗುತ್ತೆ. ಬಿತ್ತಲ್ಲ ಟೋಪಿ? ಅವತ್ತಿನಿಂದ ಶುರು; ನಾವು ದುಂಬಾಲು ಬಿದ್ದು ಅವರನ್ನು ವಿನಂತಿಸಿ ಗೋಗರೆಯಬೇಕು. ಉಹುಂ, ಅವರು ಬಂದು ಹಣ ಕಟ್ಟಿದರೆ ಕೇಳಿ. ಅದೂ ಏನು, ಒಂದೆರಡು ದಿನದ ಮಾತಲ್ಲ. ಸರಿಯಾಗಿ ಆರು ತಿಂಗಳು! ಅವರ ಮಗು ಶಾಲೆಗೆ ಬರುತ್ತಲೇ ಇದೆ: ಅದಕ್ಕೆ ನಾವು ಉಚಿತವಾಗಿ ಸ್ಕೂಲ್ ಬ್ಯಾಗ್, ಪುಸ್ತಕ, ಪೆನ್ಸಿಲ್, ಅದರ ಮೆಂಡರ್ ಎಲ್ಲವನ್ನೂ (ಅದು ‘ಪ್ರಾರ್ಥನಾ’ದ ನಿಯಮ) ಕೊಟ್ಟಿದ್ದೇವೆ. ಮಗು ಆಡುವಾಗ ಬಿತ್ತಾ? ನಾವೇ ಔಷಧಿ ಕೊಡಿಸಿದ್ದೇವೆ. ಇತ್ತ ನಲವತ್ತೊಂಬತ್ತು ಚೆಕ್‌ಗಳು ಬೌನ್ಸ್ ಆಗಿ ಬೆಚ್ಚಗೆ ಶಾಲೆಯಲ್ಲಿ ಕುಳಿತಿವೆ. ಇದು ನೂರೋ ಇನ್ನೂರೋ ಮಕ್ಕಳಿರುವ ಸಂಸ್ಥೆಯಲ್ಲ. ಈ ಸಲವಂತೂ ಆಲ್‌ಮೋಸ್ಟ್ ಎಂಟು ಸಾವಿರ ಮಕ್ಕಳು! ಯಾರನ್ನಾ ಅಂತ ನಾನು ಬೆನ್ನತ್ತಿ ಮಕ್ಕಳ ಫೀ ವಸೂಲು ಮಾಡಲಿ? ಪೂರ್ತಿ ಆರು ತಿಂಗಳು ಸುಮ್ಮನಿದ್ದೆ. ಸಹನೆ ಮೀರಿತು.

“ನೋಡಿ, ಮಕ್ಕಳಿಗೆ ಯಾವುದೂ ಗೊತ್ತಾಗಬಾರದು. Inspection ಇದೆ ಅಂತ ನವಿರಾಗಿ ಹೇಳಿ ಅವರ ಬ್ಯಾಗ್, ಪುಸ್ತಕ ಎತ್ತಿಟ್ಟುಕೊಳ್ಳಿ. ನಾನು ಬರೆದ ಪತ್ರವನ್ನು ಒಂದು ಕವರ್‌ಗೆ ಹಾಕಿ, ಅದನ್ನು ಗಮ್ ಮಾಡಿ, ‘ಮನೇಲಿ ಕೊಡಿ’ ಅಂತ ಮಕ್ಕಳಿಗೆ ಹೇಳಿ ಕಳಿಸಿ" ಅಂತ ಸಿಬ್ಬಂದಿಯವರಿಗೆ ತಿಳಿಸಿದೆ. ಅವರು ಚಾಚೂ ತಪ್ಪದೆ ಹಾಗೇ ಮಾಡಿದರು. ಮರುದಿನವೇ ಒಬ್ಬ ಮಹಿಷಾಸುರ ಬಂದಂತೆ ಬಂದನಲ್ಲಾ? ‘ಬ್ಯಾಗ್ ಹೆಂಗ್ರೀ ಕಿತ್ಕೊಂಡ್ರೀ ನನ್ನ ಮಗಂದೂ?" ಅಂತ ಅಬ್ಬರಿಸಿದ. ಆತನನ್ನು ನಾನೇ ಕರೆಸಿ ಮಾತಾಡಿದೆ. “ಬೌನ್ಸ್ ಆದದ್ದು ನಿಜ. ಹಾಗಂತ ನನ್ನ ಮಗುವಿನ ಬ್ಯಾಗು..."ಅಂದ. ‘’ಏಯ್, ಮೆತ್ತಗೆ ಮಾತಾಡು. ಮಗು ನಿಂದೆ. ಆದರೆ ಬ್ಯಾಗ್ ನಂದು" ಅಂದೆ. ಆತನ ಉಸಿರೇ off! ಈ ಸುದ್ದಿ ಇತರೆ ಪೋಷಕರಿಗೂ ತಲುಪಿತು. ಎಲ್ಲರೂ ಸರದಿಯಲ್ಲಿ ಬಂದು ಫೀ ಕಟ್ಟಿದರಲ್ಲ? ಕೇವಲ ಇಬ್ಬರು ಕಟ್ಟಲಿಲ್ಲ. ಅವರೂ ಪತ್ತೆಯಿಲ್ಲ. ಪಾಪ, ಮಕ್ಕಳದು ಏನು ಪಾಡಾಯಿತೋ? ಈಗ ನಮಗೂ ಬುದ್ಧಿ ಬಂದಿದೆ. ಯಾವ ಕಾರಣಕ್ಕೂ ನಾವು ಚೆಕ್ ಅಂಗೀಕರಿಸುವುದಿಲ್ಲ. ಇದೆಲ್ಲ ಲಕ್ಷಾಂತರ ರುಪಾಯಿಗಳ ವ್ಯವಹಾರ. ಅದಕ್ಕಿಂತ ಹೆಚ್ಚಾಗಿ ಶಾಲೆಯ ಡಿಸಿಪ್ಲೀನ್ ಗತಿ ಏನಾಗಬೇಕು?

‘ಸರಿ, ರವಿ ಬೆಳಗೆರೆ ಹಬ್ಬದ ದಿನವೇ ಹೀಗೆಲ್ಲ ಮಾಡಿದನಂತೆ’ ಎಂದು ಈ ಹೈಂದವ ಶ್ರೇಷ್ಠನಾದ ವಿ.ಆರ್.ಭಟ್ಟ ಫೇಸ್‌ಬುಕ್‌ನಲ್ಲಿ ರಗಳೆ ತೆಗೆದ. ಯಾಕೆ ಸ್ವಾಮಿ, ಹಬ್ಬದ ಮರುದಿನ ಮಲಗಿದರೆ ಮಕ್ಕಳಾಗಲ್ವ ಎಂದು ಬರೆಯೋಣ ಅಂದುಕೊಂಡೆ. ‘ಪೀಡೆ ಇದು’ ಅನ್ನಿಸಿ ignore ಮಾಡಿದೆ. ಆದರೆ ವಿ.ಆರ್.ಭಟ್ಟನಿಗೆ ಅದೇನು ಬಾಣಂತಿ ಖಾಯಿಲೆಯೋ ಗೊತ್ತಿಲ್ಲ. ಪ್ರಭಾ ಎನ್. ಬೆಳವಂಗಲ ಎಂಬ ಹೆಣ್ಣುಮಗಳೊಂದಿಗೆ ಕದನಕ್ಕೆ ಬಿದ್ದ. ಆಗಷ್ಟೇ ವಿಬ್‌ಗಯಾರ್ ಶಾಲೆಯಲ್ಲಿ ಆರು ವರ್ಷದ ಮಗುವೊಂದರ ಮೇಲೆ ಅತ್ಯಾಚಾರವಾಗಿತ್ತು. ಆಕೆ ತಮಗನ್ನಿಸಿದ್ದನ್ನು ಬರೆದಿದ್ದರು. ಹೇಳಿಕೇಳಿ ಆ ಹೆಣ್ಣುಮಗಳು ಎಡಪಂಥೀಯ ಸಂಘಟನೆಯಲ್ಲಿ ದುಡಿಯುತ್ತಿರುವವರು. ‘ಇರಲಾರದೆ ಇರುವೆ ಬಿಟ್ಕಂಡ’ ಎಂಬಂತೆ ಸದರಿ ಭಟ್ಟ, ‘ಹೌದ್ರೀ, ನಿಮ್ಮಂಥವರನ್ನು ಜುಟ್ಟು ಹಿಡಿದು ಎಳಕೊಂಡು ಹೋಗಿ ಅತ್ಯಾಚಾರ ಮಾಡುವವರ ಕೈಗೆ ಕೊಡಬೇಕು’ ಅಂತ ಬರೆದುಬಿಡೋದಾ? ನನ್ನಂತೆ ಆಕೆ ignore ಮಾಡಲಿಲ್ಲ. ನೆಟ್ಟಗೆ ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ಹೋಗಿ, ಖುದ್ದಾಗಿ ಬರೆದು ತಾವೇ ಕಂಪ್ಲೇಂಟ್ ಕೊಟ್ಟು ಬಿಟ್ಟರು. ಅದು ಸಾಲದು ಎಂಬಂತೆ, ಗೌರಿ ಲಂಕೇಶ್ ಬಸವನಗುಡಿ ಠಾಣೆಯಲ್ಲಿ ತಮ್ಮದೊಂದು ಕಂಪ್ಲೇಂಟ್ ಕೊಟ್ಟುಬಿಟ್ಟರು.

“ಅಯ್ಯೋ, ಎಮೋಶನಲ್ ಅಗಿ ಏನೋ ಬರೆದುಬಿಟ್ಟೆ" ಅಂದ ಭಟ್ಟ. ನಿಜ, ಬೈಗುಳ ಬಾಯಿಗೆ ಬರೋದೇ ಎಮೋಶನಲ್ ಆದಾಗ. ಇನ್ನೇನು ಮನೆ ಕೆಲಸದವಳಿಗೆ ಕದ್ದು ಮುತ್ತು ಕೊಡುವಾಗ ಬರುತ್ತದಾ? ಸುಮ್ಮನೆ ಕಂಪ್ಲೇಂಟು, ವಿಚಾರಣೆ ಅಂತೆಲ್ಲ ಆಗಿ ಅದು ನಿಲ್ಲಲಿಲ್ಲ. ‘ಭಟ್ಟನ ಮೇಲೆ ಗೂಂಡಾ ಕಾಯಿದೆ ಹಾಕಲಿದ್ದಾರೆ’ ಅಂತ ಸುದ್ದಿ ಹೊರಬಿತ್ತು. ಭಟ್ಟನನ್ನು ಪೊಲೀಸರು ಅದೇನು ಹುರಿದು ತಿಂದರೋ ಗೊತ್ತಿಲ್ಲ. ಅವರು ಬಂಧಿಸದೆ ಹಾಗೇ ಗದರಿಸಿಬಿಟ್ಟು ಕಳಿಸುವ ಸಾಧ್ಯತೆಗಳಿರಲಿಲ್ಲ, ಉಳಿದ ಹತ್ತಾರು ಸಂಘಟನೆಗಳು ಗುರ್ರೆನ್ನತೊಡಗಿದ್ದವು. ನಾವು ಪತ್ರಕರ್ತರು ಸುಮ್ಮನಿರುತ್ತೇವಾ? ಪೊಲೀಸರು ಅವನನ್ನು ಹುಡುಕಾಡಿ ಬಂಧಿಸಿ, ಪರಪ್ಪನ ಅಗ್ರಹಾರಕ್ಕೆ ಖುದ್ದಾಗಿ ಹೋಗಿ ಬಿಟ್ಟು ಬಂದರು. ಖಲ್ಲಾಸ್! ಭಟ್ಟನ ಮೇಲೆ ಬಿದ್ದದ್ದು ಎರಡು ಕೇಸು. ಆದರೆ ಐ.ಪಿ.ಸಿಯ ಅದ್ಯಾವ್ಯಾವ ಕಾಯಿದೆ ಹಾಕಿ pack ಮಾಡಲಾಯಿತೋ? ಗೊತ್ತಿಲ್ಲ. ಗೂಂಡಾ ಕಾಯ್ದೆ ಹಾಕಿದ್ದಿದ್ದರೆ ಅನಾಮತ್ತು ಒಂದು ವರ್ಷ ಜಾಮೀನಿಲ್ಲದೆ ಅಗ್ರಹಾರದಲ್ಲೇ ಇರಬೇಕಾಗುತ್ತಿತ್ತು. ಅದೆಷ್ಟು ದಿನ ಇದ್ದನೋ ಕಾಣೆ, ಉಪದ್ವ್ಯಾಪಿ ಭಟ್ಟ ಜೈಲಿನಲ್ಲಂತೂ ಇದ್ದ. ಹೇಳಿ, ಇದೆಲ್ಲ ಬೇಕಿತ್ತಾ?

ಈಗ ಯಾಕದು ನೆನಪಾಯಿತು ಅಂದರೆ, ನಾನು ಸುಮಾರು ಸಲ ಫೇಸ್‌ಬುಕ್‌ನಲ್ಲಿ ಅಲೆಯುತ್ತೇನೆ, regular ಆಗಿ. ಅದಕ್ಕೆ ಕಾರಣವೂ ಇದೆ. ಯಾವಾಗಲಾದರೂ ಹೇಳಿಯೇನು. ಆದರೆ ‘ಇಂತಿಷ್ಟು ಹೊತ್ತು’ ಅಂತ ಅದಕ್ಕೆ ಫಿಕ್ಸ್ ಮಾಡಿ, ಅಷ್ಟು ಹೊತ್ತು ಕಳೆದು ಹೊರಬರುತ್ತೇನೆ. ಹೆಂಡ, ಡ್ರಗ್ಸು ಅಂತೀವಲ್ಲ? ಅವುಗಳಷ್ಟೇ ಕೆಟ್ಟ ಅಡಿಕ್ಷನ್ ಫೇಸ್‌ಬುಕ್‌ನದು. ಹುಶಾರಾಗಿರಬೇಕು. ಅಂತೆಯೇ ಫೇಸ್‌ಬುಕ್‌ಗೆ ಏನು ಬರೆಯಬೇಕು ಮತ್ತು ಬಾರದು ಎಂಬುದು ನಿಮಗೆ ಗೊತ್ತಿರಬೇಕು. ಬೀದಿಯಲ್ಲಿ ನೀವು ಅಂಗಂಗಿ ಹಿಡಿದು ಜಗಳ ಮಾಡಿ: ಆಗಲೂ ಕೇಸ್ ಆಗುತ್ತದೆ. ಆದರೆ ಕೋರ್ಟಿನಲ್ಲಿ ವಿಚಾರಣೆಗೆ ಬರುವಾಗ ಸಾಕ್ಷ್ಯಗಳೇ ನಾಪತ್ತೆಯಾಗಿಬಿಡಬಹುದು. ಅಂಥ ಸಾವಿರಾರು ಕೇಸು ನಾನು ನೋಡಿದ್ದೇನೆ. ಆದರ ಫೇಸ್‌ಬುಕ್‌ನಲ್ಲಿ ಅಡ್ಡಾದಿಡ್ಡಿ ಬೈದು ನೋಡಿ? ಅದು ಪಕ್ಕಾ ದಾಖಲೆಯಾಗಿ, ಶಿಕ್ಷೆಯೂ ಆಗಿ ಜೈಲಿಗೆ ಒಯ್ಯುತ್ತದೆ. ಹಾಗಂತ ಗೊತ್ತು ಮಾಡಿಕೊಟ್ಟ ಹೆಣ್ಣುಮಗಳೇ ಪ್ರಭಾ ಎನ್. ಬೆಳವಂಗಲ ಮತ್ತು ಗೌರಿ ಲಂಕೇಶ್. ಈಗ ಬೆಟರು. ಬಾಯಿಗೆ ಸಿಕ್ಕಂತೆ ಬರೆಯುವಾಗ ಕೊಂಚ ಎಚ್ಚರವಾಗಿರುತ್ತಾರೆ.

ನೆನಪಿಡಿ, ಮೊಬೈಲ್ ಟೆಲಿಫೋನ್‌ನದೂ ಅದೇ ಅಪಾಯ. ಕೊಂಚ ಕುಡಿದಾಗ ಕೈಗೆ ಮೊಬೈಲ್ ಸಿಕ್ಕುಬಿಟ್ಟರೆ ಎಂತೆಂಥದೋ ಅಕ್ಕಸ ನೆನಪಾಗಿ, ಮೈಯೆಲ್ಲ ಉರಕೊಂಡು ಬಂದು, ಅದ್ಯಾರಿಗೋ ಫೋನ್ ಮಾಡಿ ಸಿಕ್ಕಂತೆ ಬೈದಾಡುವವರಿದ್ದಾರೆ. ಅದಕ್ಕೆ ಉಳಿದ ಕಾರಣಗಳೆಲ್ಲ ಏನಿದ್ದವೋ ಕಾಣೆ. ಒಬ್ಬ ಇಳಿವಯಸ್ಸಿನವನ ಕೊಲೆ ಆಯಿತು. ‘ಅದನ್ಯಾಕೆ ಮಾಡಿಸಿದ?’ ಅಂತ ಆ ಭೂಗತನನ್ನು ಕೇಳಿದೆ. ‘ಏನಿಲ್ಲ, ಫೋನ್‌ನಲ್ಲಿ ಮಾತಾಡಿದೆ. ಅವನು ಭಯಂಕರ ಸಿಟ್ಟಿಗೆದ್ದು ಬಾಸ್ಟರ್ಡ್ ಅಂತ ಬೈದುಬಿಟ್ಟ! ಹುಡುಗರಿಗೆ ಹೇಳಿದೆ, ಅವನನ್ನು ಮುಗಿಸಿಬಿಡಿ ಅಂತ!’ ಅಂದ. ಅದೆಲ್ಲ ಕುಡಿದಾಗಿನ ಮಾತು ಅನ್ನಬಹುದು ನೀವು. ಆದರೆ ಇಡೀ ಜಗತ್ತು ಕುಡಿದಿರುವುದಿಲ್ಲವಲ್ಲ? ಈಗ ಕಾಲವೆಂಬುದು ನಿಜಕ್ಕೂ ತುಟ್ಟಿ, ಕಂಡವರಿಗೆಲ್ಲ ಕೆಮೆರಾಗಳು ಸಿಗುತ್ತವೆ. ಮೊಬೈಲುಗಳಲ್ಲೇ ಕೆಮೆರಾಗಳಿರುತ್ತವಲ್ಲ? ಮೊದಲೆಲ್ಲ ಒಳ್ಳೆಯ ಫೊಟೋಗ್ರಾಫರ್ ಅನ್ನುತ್ತಿದ್ದೆವು. ಈಗ ಒಳ್ಳೆಯ ಕೆಮೆರಾ ಇದ್ದರೆ ಸಾಕು. ಆಗೆಲ್ಲ ಹುಡುಗ ಹುಡುಗಿಯರು ಆಟೋಗ್ರಾಫ್ ಕೊಡಿ ಅನ್ನುತ್ತಿದ್ದರು. ಈಗದು ಸಿಂಪಲ್ ಆಗಿ photograph! ಫೊಟೋ ತೆಗೆಯುತ್ತಿರುವಾಗ ‘ನಾನು ಚೆನ್ನಾಗಿ ಬರ‍್ತೀನಾ?’ ಅಂತ ಕೇಳುವ ಕೇಳಿಕೊಳ್ಳುವ ಕಾಲ ಹೋಗಿದೆ.
ನನ್ನ ಮೈಮೇಲಿನ ಬಟ್ಟೆ ಸರಿ ಇದೆಯಾ?
ಅಷ್ಟು ಕೇಳಿಕೊಂಡರೆ ಸಾಕು!

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 24 March, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books