Ravi Belagere
Welcome to my website
ನಿಮ್ಮದು ಎಂಥ ಮ್ಯಾರೇಜು? ಶುದ್ಧ ಅರೇಂಜ್‌ಡಾ? ನೀವೇ ಮಾಡಿಕೊಂಡ ಲವ್ ಮ್ಯಾರೇಜಾ? live in relationshipನಂತಹ  ಗಾಂಧರ್ವ ವಿವಾಹನಾ? ‘ಲವ್ ಕಮ್ ಅರೇಂಜ್ಡ್’ ಮದುವೆಯಾ? ಅಂತರ್‌ಜಾತೀಯ ವಿವಾಹವಾ? ಅಂತರ್‌ಧರ್ಮೀಯ ವಿವಾಹವಾ? (Request :ಜಾತಿಗಳ ಪುಸ್ತಾಪ ಮಾಡಬೇಡಿ) Love, run and marry ಎಂಬಂತೆ ಮನೆಗಳನ್ನು ಬಿಟ್ಟು ಹೋಗಿ ಆದ ಮದುವೆಯಾ? ಎಂಥ ಮದುವೆಯಾಗಿದ್ದರೂ ಅಡ್ಡಿಯಿಲ್ಲ. ಅದಕ್ಕೆ ಗೌರವವಿದೆ. ಒಂದು inland letterನಷ್ಟು ಬರವಣಿಗೆಯನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆಯಿರಿ. ಜೊತೆಗೆ ಇಬ್ಬರೂ ಇರುವ ಫೊಟೋ ಕಳಿಸಿ. mail ಮಾಡೋದಾದರೆ [email protected]ಗೆ ಮಾಡಿ.
Home About Us Gallery Books Feedback Prarthana Contact Us

Buy Ravi Belagere Books online

ಜಾತಿ-ಮತಗಳ ಗೊಡವೆ ಇಲ್ಲದೆ ದಲಿತರ ಪಡೆ ಬೆಳೆಯುತ್ತಿದೆ ನೋಡಿ

ನಿಮಗೊಂದು ಉದಾಹರಣೆಯ ಮೂಲಕ ಇತ್ತೀಚಿನ ಬೆಳವಣಿಗೆಗಳನ್ನೆಲ್ಲ ಹೇಳ­­ಬೇಕು ಅನ್ನಿಸುತ್ತಿದೆ. ಅದು ಸ್ವಾತಂತ್ರ್ಯ ಹೋರಾಟದ ಕಾಲ. ಮಹಾತ್ಮಾ ಗಾಂಧಿ ಬ್ರಿಟಿಷರ ವಿರುದ್ಧದ ಹೋರಾಟವನ್ನು ತೀವ್ರಗೊಳಿಸುತ್ತಾ ಹೋಗುತ್ತಾರೆ. ಅದೇ ಕಾಲಕ್ಕೆ ಅಂಬೇಡ್ಕರ್, ದೇಶಕ್ಕೆ ಒಂದು ಬಗೆಯ ಸ್ವಾತಂತ್ರ್ಯ ಸಿಕ್ಕಿದರೆ ಸಾಲದು, ಎರಡು ಬಗೆಯ ಸ್ವಾತಂತ್ರ್ಯ ದಕ್ಕಲೇಬೇಕು. ಕೇವಲ ಬ್ರಿಟಿಷರ ದಾಸ್ಯದಿಂದ ಮುಕ್ತರಾದರೆ ಸಾಲದು ಎನ್ನುತ್ತಾರೆ. ಅರ್ಥಾತ್, ಸಾವಿರಾರು ವರ್ಷಗಳಿಂದ ಭಾರತದಲ್ಲಿ ನೆಲೆಯೂರಿದ ಒಳದಾಸ್ಯ ಏನಿದೆ? ಅದನ್ನು ಮೊದಲು ತೊಡೆದು ಹಾಕಬೇಕಲ್ಲ? ಭಾರತದಲ್ಲಿ ನೆಲೆಯೂರಿದ್ದ ಮೊಘಲ್ ಸಾಮ್ರಾಜ್ಯವನ್ನು ಕಿತ್ತು ಹಾಕಿ, ಸಣ್ಣಪುಟ್ಟ ಸಂಸ್ಥಾನಗಳನ್ನು ವಕ್ಕಲೆಬ್ಬಿಸಿ ಬ್ರಿಟಿಷರು ನೂರಾರು ವರ್ಷಗಳ ಕಾಲ ದೇಶ ಆಳಿದರು ಎಂಬುದೇನೋ ನಿಜ ಮತ್ತು ಅಂತಹ ದಾಸ್ಯದಿಂದ ಭಾರತ ಮುಕ್ತವಾಗಬೇಕು ಎಂಬುದೇನೋ ನಿಜ. ಆದರೆ ಸಾವಿರಾರು ವರ್ಷಗಳಿಂದ ವರ್ಣಾಶ್ರಮ ವ್ಯವಸ್ಥೆಯಡಿ ಸಿಲುಕಿ ದಾಸ್ಯ ಅನುಭವಿಸುತ್ತಿರುವ ಕೋಟ್ಯಂತರ ಭಾರತೀಯರಿದ್ದಾರಲ್ಲ? ಅವರನ್ನು ದಾಸ್ಯದಿಂದ ಬಿಡಿಸುವುದು ಹೇಗೆ?

ಹೀಗೆ ಅವತ್ತು ಎರಡು ಬಗೆಯ ಸ್ವಾತಂತ್ರ್ಯ ಹೋರಾಟಗಳು ನಡೆಯುತ್ತವೆ. ಒಂದು ಬ್ರಿಟಿಷರ ವಿರುದ್ಧ. ಅದು ದೈಹಿಕ ಸಮರ. ಆದರೆ ಎರಡನೆಯದು ಮಾನಸಿಕ ಸಮರ. ಮೊದಲನೆಯದೇನೋ ನಿಂತಿತು. ೧೯೪೭ರಲ್ಲಿ ಬ್ರಿಟಿಷರಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಅವರ ಗುಲಾಮಗಿರಿ ತಪ್ಪಿತು. ಆದರೆ ಎರಡನೆಯದು? ಅದು ದಿನದಿಂದ ದಿನಕ್ಕೆ ಮತ್ತಷ್ಟು ಘೋರವಾಗುವ ಲಕ್ಷಣಗಳು ಕಾಣುತ್ತಿವೆ. ಈಗ ಖುದ್ದು ಸಿದ್ದರಾಮಯ್ಯ ಕೂಡ, ನಾನೂ ದಲಿತನೇ ಎನ್ನುತ್ತಿದ್ದಾರೆ. ದಲಿತ ಎಂಬ ಪದ ಶೋಷಿತರ ಪ್ರತಿಬಿಂಬ ಎಂಬ ಅರವಿಂದ ಮಾಲಗತ್ತಿಯವರ ಮಾತು ನಿಜ. ಮೊನ್ನೆ ಒಂದು ಸಮಾರಂಭದಲ್ಲಿ ಮಾತನಾಡುತ್ತಾ ಅವರು ಹೇಳಿದ ಈ ಮಾತು ಅರ್ಥಪೂರ್ಣವಷ್ಟೇ ಅಲ್ಲ, ದೇಶ ಮತ್ತೊಮ್ಮೆ ದಾಸ್ಯಕ್ಕೆ ಹೋಗುವುದರ ಸಂಕೇತವಾಗಿಯೂ ಕಾಣಿಸಿತು. ಕಾರಣ; ಸಿಎಂ ಸಿದ್ದರಾಮಯ್ಯನವರ ಮಾತನ್ನೇನೂ ಸುಲಭವಾಗಿ ತಳ್ಳಿ ಹಾಕುವಂತಿಲ್ಲ. ನಾನೂ ದಲಿತ ಎಂಬ ಪದವನ್ನು ಅವರು ದಲಿತ ಸಿಎಂ ಎಂಬ ಕೂಗಿಗಾಗಿ ಮಾತ್ರ ಆಡಿದ್ದಲ್ಲ. ನಾನು ಕೂಡ ಶೋಷಿತ ವರ್ಗದಿಂದ ಬಂದವನು ಎಂಬುದು ಅವರ ಮಾತು.

ದಿನ ಕಳೆದಂತೆ ಇಂತಹ ಶೋಷಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆಯಲ್ಲವೇ? ಬ್ರಿಟಿಷರ ಕಾಲದಲ್ಲಿ ನಮ್ಮ ಜನಸಂಖ್ಯೆ ಮೂವತ್ಮೂರು ಕೋಟಿಯಷ್ಟಿತ್ತು. ಈಗ ನೂರಿಪ್ಪತ್ತಾರು ಕೋಟಿಯಷ್ಟಿದೆ. ಆಗ ಇದ್ದ ಶೋಷಿತರ ಸಂಖ್ಯೆ ಇಪ್ಪತ್ತು ಕೋಟಿ ಇರಬಹುದು. ಆದರೆ ಅದೀಗ ನೂರು ಕೋಟಿಯ ಗಡಿ ತಲುಪುತ್ತಿದೆ. ಆಗ ಭಾರತವನ್ನು ಮಾನಸಿಕ ದಾಸ್ಯಕ್ಕೆ ತಳ್ಳಿದವರಲ್ಲೇ ಈಗ ಶೋಷಿತರು ಜನಿಸಿದ್ದಾರೆ. ನೋಡುತ್ತಾ ಹೋದರೆ ಬ್ರಾಹ್ಮಣ, ವಕ್ಕಲಿಗ, ಲಿಂಗಾಯತ, ಹಿಂದುಳಿದ, ಅಲ್ಪಸಂಖ್ಯಾತ ಹೀಗೆ ಎಲ್ಲ ವರ್ಗಗಳಲ್ಲೂ ದಲಿತ ಅವತರಿಸಿದ್ದಾನೆ. ಉಳಿದಂತೆ ವ್ಯವಸ್ಥೆಯ ಮೇಲ್ಪದರಲ್ಲಿ ಇರುವ ಜನ ಕೆಲವೇ ಕೋಟಿಗಳಷ್ಟು. ಇದಕ್ಕೆ ಕಾರಣ, ದೇಶದಲ್ಲಿ ಆರಂಭವಾಗಿರುವ ಎಕನಾಮಿಕಲ್ ವಾರ್. ಬೇಕಿದ್ದರೆ ನೋಡಿ, ನೀವು ಸ್ಟ್ರೀಟ್ ಫೈಟರ್ಸ್ ಳನ್ನು ಸಡಿಲಗೊಳಿಸಬಹುದು. ಆದರೆ ಈ ಎಕನಾಮಿಕಲ್ ವಾರಿಯರ್ಸ್ ಇದ್ದಾರಲ್ಲ? ಇವರು ಮೋಸ್ಟ್ ಡೇಂಜರಸ್. ಇವರು ಕಾಲ ಕ್ರಮೇಣ ದೇಶವನ್ನು ಆವರಿಸಿಕೊಳ್ಳುತ್ತಾರೆ. ಬಂಡವಾಳ ಹೂಡಿ, ನಿಮ್ಮ ಮಕ್ಕಳಿಗೆ ಕೆಲಸ ಕೊಡಲು ಕೈಗಾರಿಕೆಗಳು ಬೇಡವೇ? ಉದ್ಯಮಗಳು ತಲೆ ಎತ್ತಬೇಡವೇ? ಎಂದು ಕತೆ ಹೇಳುತ್ತಾ ನಿಮಗರಿವಿಲ್ಲದೇ ಬಂದು ನಿಮ್ಮ ಅಕ್ಕಪಕ್ಕ ಪ್ರತಿಷ್ಠಾಪಿತರಾಗುತ್ತಾರೆ. ದಿಲ್ಲಿ ಗದ್ದುಗೆಯ ಮೇಲೆ ಬಂದು ಕೂತಿರುವ ನರೇಂದ್ರ ಮೋದಿ ಸರ್ಕಾರದಿಂದ ಬೆಳೆಯುತ್ತಿರುವುದು ಇಂತಹ ಎಕನಾಮಿಕಲ್ ವಾರಿಯರ್ಸ್ ವರ್ಗ. ಇದೇ ಕಾರಣಕ್ಕಾಗಿ ದಲಿತ ಸಮುದಾಯ ಎಲ್ಲ ವರ್ಗಗಳಲ್ಲೂ ಬೆಳೆಯುತ್ತಲೇ ಹೋಗುತ್ತಿದೆ.

ನಿಮಗೆ ಸಣ್ಣದೊಂದು ಉದಾಹರಣೆ ಹೇಳುತ್ತೇನೆ.ಇದೇ ಮೋದಿ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನಕ್ಕೆ ಬಂದು ಭಾಷಣ ಮಾಡುವಾಗ, ಒಂದು ಅಂತ ಬರೆದು ಅದರ ಮುಂದೆ ಸೊನ್ನೆ ಹಾಕುತ್ತಾ ಹೋದರೆ ಅದು ದಿಲ್ಲಿಯ ಜನಪಥ್ ರಸ್ತೆಯಲ್ಲಿರುವ ಸೋನಿಯಾ ಮನೆಗೆ ತಲುಪುತ್ತದೆ ಎಂಬಂತೆ ಮಾತನಾಡಿದ್ದರು. ಆದರೆ ಈಗ ಒಂದರ ಪಕ್ಕ ಸೊನ್ನೆ ಹಾಕುತ್ತಾ ಹೋದರೆ ಅದು ಬರಾಕ್ ಒಬಾಮಾ ಅವರ ಶ್ವೇತ ಭವನಕ್ಕೆ ಹೋಗಿ ತಲುಪುವ ಕಾಲ ದೂರವಿಲ್ಲ ಎನ್ನಿಸುತ್ತಿದೆ. ಅಧಿಕಾರಕ್ಕೆ ಬಂದು ಒಂದು ವರ್ಷವಾಗಿಲ್ಲ, ಆಗಲೇ ದೇಶದ ವಿವಿಧ ರಾಜ್ಯಗಳಿಗೆ ಕೊಡುವ ಸಬ್ಸಿಡಿ ಪ್ರಮಾಣವನ್ನು ಮೋದಿ ಸರ್ಕಾರ ಕಡಿಮೆ ಮಾಡಿಬಿಟ್ಟಿದೆ. ಅದು ಸಣ್ಣ ಪ್ರಮಾಣದಲ್ಲೇನಲ್ಲ? ಮೂರು ಲಕ್ಷ ಎಪ್ಪತ್ತು ಸಾವಿರ ಕೋಟಿ ರುಪಾಯಿಗಳಷ್ಟು ಪ್ರಮಾಣದಲ್ಲಿ ಈ ಸಬ್ಸಿಡಿ ಪ್ರಮಾಣ ಕಡಿಮೆಯಾಗಿದೆ. ಮನಮೋಹನ್ ಸಿಂಗ್ ಕಾಲದಲ್ಲಿ ಮಾಡಿದ್ದರೆ ಇದೇ ಮೋದಿ ಗ್ಯಾಂಗು, ಇದು ದೇಶ ಒಡೆಯುವ ಕೆಲಸ ಅನ್ನುತ್ತಿತ್ತು. ಈಗ ಒಂದರ ಹಿಂದೊಂದರಂತೆ ಸಬ್ಸಿಡಿಗಳನ್ನು ಕಿತ್ತು ಹಾಕುತ್ತಿದೆ. ಕೇಳಿದರೆ ಇದು ದೇಶ ಕಟ್ಟುವ ಕೆಲಸ ಎನ್ನುತ್ತಿದೆ. ಇದೇನು ದೇಶ ಕಟ್ಟುವ ಕೆಲಸವೇ? ಎಕನಾಮಿಕಲ್ ವಾರಿಯರರ್ಸ್ ಗಳನ್ನು ಬೆಳೆಸುವ ಕೆಲಸವೇ? ಎಂಬುದು ಕಣ್ಣ ಮುಂದೇ ಸ್ಪಷ್ಟವಾಗಿ ಬಿಡುತ್ತದೆ.

ಆದರೆ ಇವರ ಗಿಮಿಕ್ಕುಗಳು ನೋಡಿ. ದೇಶದ ಯಾವ ಪ್ರಧಾನಿಯೂ ಸಂಸತ್ತಿನ ಕ್ಯಾಂಟೀನಿನಲ್ಲಿ ಊಟ ಮಾಡಿರಲಿಲ್ಲವಂತೆ. ಆದರೆ ಮೋದಿ ಬಂದು ಇಪ್ಪತ್ತೊಂಬತ್ತು ರುಪಾಯಿ ಊಟ ಮಾಡಿದರಂತೆ. ಇದೇನು ಘನಂದಾರಿ ಕೆಲಸವೇ? ಇವತ್ತು ದೇಶದ ಕೋಟ್ಯಂತರ ಜನ ತಿನ್ನಲು ಎರಡು ಹೊತ್ತಿನ ಅನ್ನವಿಲ್ಲದೆ ಪರದಾಡುತ್ತಿದ್ದಾರೆ. ಅವರ ಕಡೆ ನೋಡಿ ಅಯ್ಯೋ ಅನ್ನುವ ಬದಲು, ಅವರ ಹೊಟ್ಟೆ ತುಂಬುವ ತನಕ ನಾನು ಸಿಂಪಲ್ಲಾಗಿ ಬದುಕುತ್ತೇನೆ ಎಂದು ತೋರಿಸಿದ್ದಿದ್ದರೆ ಮೋದಿ ಏನೋ ಸಾಧಿಸಲು ಹೊರಟಿದ್ದಾರೆ ಅನ್ನಬಹುದು. ದೇಶದ ಕೋಟ್ಯಂತರ ಜನರಿಗೆ ಮೈತುಂಬ ಹಾಕಿಕೊಳ್ಳಲು ಬಟ್ಟೆಯಿಲ್ಲ ಎಂಬ ಕಾರಣಕ್ಕಾಗಿ ಮಮ್ಮಲ ಮರುಗಿದ ಗಾಂಧಿ, ಅವರಿಗೆ ಮೈತುಂಬ ಬಟ್ಟೆ ಸಿಗುವ ತನಕ ನಾನು ಲಂಗೋಟಿ ಹಾಕಿಕೊಂಡು ಬದುಕುತ್ತೇನೆ ಎಂದು ಶಪಥ ಮಾಡಿದರು. ನಾಯಕ ಎಂದರೆ ಹಾಗಿರಬೇಕು. ನಿಮ್ಮ ಜೊತೆ ನಾನಿದ್ದೇನೆ ಎಂದು ತೋರಿಸುವ ಮೂಲಕ ಬ್ರ್ಯಾಂಡ್ ಆಗಬೇಕು.

ದೇಶ ಕ್ಷಾಮದಿಂದ ನರಳುತ್ತಿದ್ದಾಗ ದೇಶದ ಪ್ರಧಾನಿಯಾಗಿದ್ದ ಲಾಲ್ ಬಹಾದ್ದೂರ್ ಶಾಸ್ತ್ರಿ ಒಂದೊತ್ತಿನ ಊಟವನ್ನು ಬಿಡಿ ಎಂದು ಕರೆ ನೀಡಿದರು. ಬರೀ ಕರೆ ನೀಡಲಿಲ್ಲ. ತಾವೂ ಅದನ್ನು ಪಾಲಿಸಿದರು. ಆದರೆ ಅಂತಹ ಮಹಾನ್ ಮುಖಂಡರ ಎದುರು ಮೋದಿಯ ಕ್ಯಾಂಟೀನ್ ಊಟವನ್ನು ವೈಭವೀಕರಿಸುವ ಮಾತನಾಡುತ್ತಾರಲ್ಲ? ಇದೇ ಮೋದಿಯ ಸೂಟು ಕೋಟ್ಯಂತರ ರುಪಾಯಿಗೆ ಹರಾಜು ಹಾಕಲಾಯಿತು. ಕೇಳಿದರೆ ಅದನ್ನು ದೇಶದ ಉದ್ಧಾರಕ್ಕೆ ಕೊಡುತ್ತಾರಂತೆ. ಅಲ್ಲಾ, ದೇಶದ ಉದ್ಧಾರ ಮಾಡುವವರು ಸ್ಟ್ರೀಟ್ ಫೈಟರ್ಸ್ ಮುಂದೆ ನಿಲ್ಲಲಾಗದೆ ತೊಳ್ಳೆ ನಡುಗಿಸಿಕೊಂಡು ಓಡಿ ಹೋಗುತ್ತಿದ್ದರಲ್ಲ? ಆ ತೊಳ್ಳೆ ನಡುಗುವ ವರ್ಗಕ್ಕಿರುವ ಎಕನಾಮಿಕಲ್ ವಾರಿಯರ್ಸ್ ಗುಣವನ್ನು ಎತ್ತಿ ಹಿಡಿಯಲು ಹೊರಟಿದ್ದಲ್ಲವೇ ಮೋದಿ? ಅಧಿಕಾರಕ್ಕೆ ಬರ ಬರುತ್ತಿದ್ದಂತೆಯೇ ಜನಸಾಮಾನ್ಯರಿಗೆ ಕೊಡುತ್ತಿದ್ದ ಸಬ್ಸಿಡಿಗಳನ್ನು ಕಿತ್ತು ಹಾಕುತ್ತಾ ಹೋಗಿ ಆಗಲೇ ಮೂರು ಲಕ್ಷ ಎಪ್ಪತ್ತು ಸಾವಿರ ಕೋಟಿ ರುಪಾಯಿಗಳನ್ನು ಉಳಿಸಿದ್ದಾರಲ್ಲ? ಇವೆಲ್ಲ ಬಡವರ ಉದ್ಧಾರಕ್ಕೆಂದು ಬಳಕೆಯಾಗುತ್ತದೆಯೇ? ಅಥವಾ ಶ್ರೀಮಂತರ ಜೇಬು ಗಟ್ಟಿ ಮಾಡುತ್ತದೆಯೇ?

ನಿಮಗೊಂದು ಸಣ್ಣ ಉದಾಹರಣೆ ಹೇಳುತ್ತೇನೆ. ಮೋದಿ ಪ್ರಧಾನಿಯಾದ ಕೂಡಲೇ ದೇಶದಲ್ಲಿ ನೂರು ಸ್ಮಾರ್ಟ್ ಸಿಟಿ ಸ್ಥಾಪಿಸುತ್ತೇವೆ ಎಂದರು. ಅದರ ವ್ಯಾಪ್ತಿಯಲ್ಲಿ ಕರ್ನಾಟಕದ ಆರು ನಗರಗಳು ಬರುತ್ತವೆ. ಅದರ ಡಿಟೇಲು ಕೊಡಿ ಎಂದರು. ಕೊಟ್ಟರೆ ಇವರು ಸ್ಮಾರ್ಟ್ ಸಿಟಿ ಮಾಡಲು ನಿಗದಿ ಮಾಡಿದ ಹಣವೆಷ್ಟು ಗೊತ್ತೇ? ಕೇವಲ ಐನೂರು ಕೋಟಿ ರುಪಾಯಿ. ಇವರು ಮಾಡಿದ ಪ್ಲಾನಿನ ಪ್ರಕಾರ ಒಂದೊಂದು ಸ್ಮಾರ್ಟ್ ಸಿಟಿಗೆ ಐದು ಸಾವಿರ ಕೋಟಿ ರುಪಾಯಿ ಬೇಕು. ಅದರ ಪ್ರಕಾರ ಮೂವತ್ತು ಸಾವಿರ ಕೋಟಿ ರುಪಾಯಿ ಕೊಡಬೇಕು. ಆದರೆ ಇವರು ಕೊಟ್ಟಿದ್ದು ಐದುನೂರು ಕೋಟಿ ರುಪಾಯಿ ಮಾತ್ರ. ಬೆಂಗಳೂರಿನ ಚರಂಡಿ, ರಸ್ತೆಗಳನ್ನು ನೆಟ್ಟಗೆ ಮಾಡಲು ಈ ಹಣ ಸಾಲುವುದಿಲ್ಲ. ಸ್ಮಾರ್ಟ್ ಸಿಟಿಯ ಕತೆ ಬೇರೆ. ಅಂದ ಹಾಗೆ ಮೊನ್ನೆ ಇದ್ದಕ್ಕಿದ್ದಂತೆ, ಇನ್ನು ಮುಂದೆ ರಾಜ್ಯಗಳಿಗೆ ಕೊಡುವ ಪಾಲನ್ನು ಹೆಚ್ಚಿಸಿಬಿಡುತ್ತೇವೆ ಅಂದರು ಮೋದಿ. ಅದರ ಪ್ರಕಾರ, ರಾಜ್ಯಕ್ಕೆ ಇನ್ನು ಮುಂದೆ ಕೇಂದ್ರ ಸರ್ಕಾರದಿಂದ ಹತ್ತು ಸಾವಿರ ಕೋಟಿ ರುಪಾಯಿ ಹೆಚ್ಚಾಗಿ ಬರುತ್ತದೆ.

ಆದರೆ ನೆನಪಿಡಿ, ಈ ಹಿಂದಿದ್ದ ಸರ್ಕಾರಗಳು ವಿವಿಧ ಯೋಜನೆಗಳ ಅಡಿಯಲ್ಲಿ ನಮಗೆ ಕೊಡುತ್ತಿದ್ದ ವಾರ್ಷಿಕ ಹಣದ ಪ್ರಮಾಣ ಮೂವತ್ತು ಸಾವಿರ ಕೋಟಿ ರುಪಾಯಿಗಳಿಗಿಂತ ಜಾಸ್ತಿ. ಇದನ್ನೂ ಅವರು ಧರ್ಮಕ್ಕೇನೂ ಕೊಡುತ್ತಿರಲಿಲ್ಲ. ಆದಾಯ ತೆರಿಗೆಯಿಂದ ಹಿಡಿದು ಹಲವು ರೀತಿಯ ತೆರಿಗೆಗಳ ಮೂಲಕ ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ ಅರವತ್ತು ಸಾವಿರ ಕೋಟಿ ರುಪಾಯಿಗಳಷ್ಟು ಹಣ ಪ್ರತಿ ವರ್ಷ ಹೋಗುತ್ತದೆ. ಈಗ ಕೇಂದ್ರ ಸರ್ಕಾರದಿಂದ ವಿವಿಧ ಯೋಜನೆಗಳಿಗೆ ಬರುವ ಹಣವನ್ನು ಕಟ್ ಮಾಡಿ, ಮೇಲ್ನೋಟಕ್ಕೆ ಹತ್ತು ಸಾವಿರ ಕೋಟಿ ರುಪಾಯಿ ಎಕ್ಸ್‌ಟ್ರಾ ಕೊಡುತ್ತೇವೆ ಎಂದರೆ ನಂಬಲು ಯಾರೂ ಕಿವಿಯ ಮೇಲೆ ಪಾರ್ಕು ಮಡಗಿಕೊಂಡಿಲ್ಲ. ಅಂದ ಹಾಗೆ ಇಡೀ ದೇಶವನ್ನು ಆವರಿಸಿರುತ್ತಿರುವ ಎಕನಾಮಿಕಲ್ ವಾರಿಯರ್‌ಗಳ ಪೈಕಿ ಬಹುತೇಕರ ಕೈಲಿ ಮಾಧ್ಯಮಗಳಿವೆ. ಈ ಮಾಧ್ಯಮಗಳು ಮೋದಿಯನ್ನು ಪುಂಖಾನುಪುಂಖವಾಗಿ ಹೊಗಳುತ್ತವೆ. ಮೋದಿಗಿಂತ ಇಂದಿರ ಇಲ್ಲ, ಮೋದಿಗಿಂತ ಚಂದಿರ ಇಲ್ಲ. ದಿನ ಬೆಳಗಾದರೆ ಇದೇ ಕತೆ. ಕೇಳಿ ಕೇಳಿ ಕಿವಿ ಕೆಪ್ಪಾಗಿ ಹೋಗಬೇಕು. ಹಾಗೆ ಕೆಪ್ಪಾಗಲಿ ಎಂಬುದೇ ಇವರ ಬಯಕೆ. ಹಾಗೆ ಕೆಪ್ಪಾದಾಗ ಏನೇ ಸೌಂಡ್ ಆದರೂ ಜನ ತೆಪ್ಪಗಿರುತ್ತಾರೆ. ಆಗ ನಮಗೆ ಬೇಕಾದಂತೆ ದೇಶವನ್ನು ಆವರಿಸಿಕೊಳ್ಳಬಹುದು ಎಂಬುದು ಅವರ ಲೆಕ್ಕಾಚಾರ.

ಇದರ ಪರಿಣಾಮವಾಗಿಯೇ ಕರ್ನಾಟಕದಲ್ಲಿರುವ ಪ್ರಭಾವಿ ಬಂದರುಗಳಿಂದ ಹಿಡಿದು ದೇಶದ ಸಾರ್ವಜನಿಕ ಸ್ವಾಮ್ಯದ ಹಲವು ಉದ್ದಿಮೆಗಳು ಖಾಸಗಿಯವರ ಕೈಗೆ ತಲುಪಲು ಸಿದ್ಧವಾಗಿ ನಿಂತಿವೆ. ಮಾತನಾಡಿದರೆ, ನಿಮ್ಮ ಮಕ್ಕಳಿಗೆ ಕೆಲಸಬೇಡವಾ, ಕೈಗಾರಿಕೆಗಳು ಹೆಚ್ಚಬೇಡವಾ, ಉದ್ಯಮಿಗಳು ಮುಂದೆ ಬರಬೇಡವಾ ಅನ್ನುತ್ತಾರೆ. ಇಂತಹ ಸಂದರ್ಭದಲ್ಲಿ ಶ್ರೀಮಂತ ವರ್ಗ ಹೇಗೋ ಬಚಾವಾಗುತ್ತದೆ. ಆದರೆ ಬಡ, ಮಧ್ಯಮ ವರ್ಗದವರು ಶೋಷಿತರ ಲೆಕ್ಕಕ್ಕೆ ಸೇರುತ್ತಾ ಹೋಗುತ್ತಾರೆ. ಈ ಶೋಷಿತರು ಜಾತಿ, ಮತ, ಪಂಥಗಳಿಗೆ ಸೇರಿದವರಲ್ಲ. ಎಲ್ಲ ವರ್ಗಗಳಿಗೂ ಸೇರಿದವರು. ಹೀಗಾಗಿ ಇಂತಹ ಎಕನಾಮಿಕಲ್ ವಾರಿಯರ್‌ಗಳ ಬಗ್ಗೆ, ಇಂಥವರ ಪ್ರತಿನಿಧಿಯಾಗಿರುವ ಮೋದಿಯ ಬಗ್ಗೆ ಎಚ್ಚರದಿಂದಿರುತ್ತಲೇ ಸಿಎಂ ಸಿದ್ದರಾಮಯ್ಯ ಈ ಸಲದ ತಮ್ಮ ಬಜೆಟ್ ಬಡ, ಮಧ್ಯಮ ವರ್ಗದ ಪಾಲಿಗೆ ಅನುಕೂಲ ಒದಗಿಸಿಕೊಡುವಂತೆ ಮಾಡಬೇಕು. ಅದೇ ಎಲ್ಲರ ನಿರೀಕ್ಷೆ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 13 March, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books