Ravi Belagere
Welcome to my website
ನಿಮ್ಮದು ಎಂಥ ಮ್ಯಾರೇಜು? ಶುದ್ಧ ಅರೇಂಜ್‌ಡಾ? ನೀವೇ ಮಾಡಿಕೊಂಡ ಲವ್ ಮ್ಯಾರೇಜಾ? live in relationshipನಂತಹ  ಗಾಂಧರ್ವ ವಿವಾಹನಾ? ‘ಲವ್ ಕಮ್ ಅರೇಂಜ್ಡ್’ ಮದುವೆಯಾ? ಅಂತರ್‌ಜಾತೀಯ ವಿವಾಹವಾ? ಅಂತರ್‌ಧರ್ಮೀಯ ವಿವಾಹವಾ? (Request :ಜಾತಿಗಳ ಪುಸ್ತಾಪ ಮಾಡಬೇಡಿ) Love, run and marry ಎಂಬಂತೆ ಮನೆಗಳನ್ನು ಬಿಟ್ಟು ಹೋಗಿ ಆದ ಮದುವೆಯಾ? ಎಂಥ ಮದುವೆಯಾಗಿದ್ದರೂ ಅಡ್ಡಿಯಿಲ್ಲ. ಅದಕ್ಕೆ ಗೌರವವಿದೆ. ಒಂದು inland letterನಷ್ಟು ಬರವಣಿಗೆಯನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆಯಿರಿ. ಜೊತೆಗೆ ಇಬ್ಬರೂ ಇರುವ ಫೊಟೋ ಕಳಿಸಿ. mail ಮಾಡೋದಾದರೆ [email protected]ಗೆ ಮಾಡಿ.
Home About Us Gallery Books Feedback Prarthana Contact Us

Buy Ravi Belagere Books online

ಇತಿಹಾಸದಿಂದ ಪಾಠ ಕಲಿಯದ ಕಾಂಗ್ರೆಸ್‌ಗೆ ಏನನ್ನಬೇಕು?

ಕರ್ನಾಟಕಕ್ಕೊಬ್ಬ ದಲಿತ ಸಿಎಂ ಬೇಕು ಎಂಬ ಕೂಗು ದಿನ ಕಳೆದಂತೆಲ್ಲ ವ್ಯಾಪಕವಾಗತೊಡಗಿದೆ. ಇವತ್ತು ಚರ್ಚೆಯ ನೆಲೆ ಬೇರೆ ಬೇರೆ ದಿಕ್ಕುಗಳಲ್ಲಿ ವ್ಯಾಪಿಸುತ್ತಿರಬಹುದು. ಆದರೆ ನೇರವಾಗಿ ಹೇಳುವುದಾದರೆ ಯಾವಾಗ ಪರಮೇಶ್ವರ್ ಅವರನ್ನು ಸಿದ್ಧರಾಮಯ್ಯ ತಮ್ಮ ಸಂಪುಟದಲ್ಲಿ ಉಪಮುಖ್ಯಮಂತ್ರಿ ಮಾಡಲು ಒಪ್ಪಲಿಲ್ಲವೋ, ಆಗ ಇಂತಹದೊಂದು ಕೂಗಿಗೆ ದಾರಿ ಮಾಡಿಕೊಟ್ಟಂತಾಯಿತು.
ಅಂದಹಾಗೆ ಪರಮೇಶ್ವರ್ ಡಿಸಿಎಂ ಹುದ್ದೆಗೆ ಅರ್ಹರಿರಲಿಲ್ಲವೇ? ನೋ ಡೌಟ್, ಅತ್ಯಂತ ಅರ್ಹರಾಗಿದ್ದರು. ಇಲ್ಲದಿದ್ದರೆ ಅವರು ನನಗೆ ಪರ್ಯಾಯ ನಾಯಕನಾಗುತ್ತಾರೆ. ಹೀಗಾಗಿ ಅವರು ಡಿಸಿಎಂ ಆಗುವುದು ಬೇಡ ಎಂದು ಸಿದ್ಧರಾಮಯ್ಯ ಯಾಕೆ ಭಾವಿಸುತ್ತಿದ್ದರು? ಇವತ್ತು ಪ್ರತಿಪಕ್ಷದ ನಾಯಕರಾಗಿರುವ ಜಗದೀಶ್ ಶೆಟ್ಟರ್ ಅವರನ್ನು ಈ ಹಿಂದೆ ಸಿಎಂ ಆಗಿದ್ದ ಯಡಿಯೂರಪ್ಪ ಕೂಡಾ ಇದೇ ರೀತಿ ಪ್ರತಿಸ್ಪರ್ಧಿಯಂತೆ ನೋಡುತ್ತಿದ್ದರು. ಖುದ್ದು ಜಗದೀಶ್ ಶೆಟ್ಟರ್ ಅವರೇ ಯಡಿಯೂರಪ್ಪ ಅವರ ಹತ್ತಿರ ಹೋಗಿ, ಸಾರ್, ಎಲ್ಲಿಯ ತನಕ ನೀವು ಫ್ರಂಟ್ ಲೈನ್‌ನಲ್ಲಿರುತ್ತೀರೋ, ಅಲ್ಲಿಯ ತನಕ ನಿಮಗೆ ಪರ್ಯಾಯವಾಗುವ ಚಿಂತನೆಯೇ ನನಗಿಲ್ಲ ಎಂದರೂ ಯಡ್ಡಿ ಅದನ್ನೊಪ್ಪಲಿಲ್ಲ.

ಹೀಗಾಗಿ ಬಿಜೆಪಿ ಅಧಿಕಾರಕ್ಕೆ ಬಂದ ಶುರುವಿನಲ್ಲಿ ಹಠ ಹಿಡಿದು ಜಗದೀಶ್ ಶೆಟ್ಟರ್ ಒಲ್ಲೆನೆಂದರೂ ಬಿಡದೆ ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ತಂದರು. ಹಾಗಂತ ಈ ಜಾಗ ಒಳ್ಳೆಯದಲ್ಲ ಎಂದೇನಲ್ಲ. ಆದರೆ ಜನರ ಮಧ್ಯೆ ನೇರವಾಗಿ ಹೋಗುವುದು, ರಾಜಕೀಯವನ್ನು ಹೊರತುಪಡಿಸಿದ ವಿಷಯಗಳಿಗೆ ಸೀಮಿತವಾಗುವುದು ಒಬ್ಬ ರಾಜಕಾರಣಿಗೆ ಕಷ್ಟ. ಇದೇ ಕಾರಣಕ್ಕಾಗಿ ಜಗದೀಶ್ ಶೆಟ್ಟರ್ ಇನ್ನಿಲ್ಲದಂತೆ ಹೇಳಿದರು; ನಾನೊಬ್ಬ ಶಾಸಕನಾಗಿ, ಸಾಮಾನ್ಯ ಕಾರ್ಯಕರ್ತನಾಗಿ ಉಳಿದುಬಿಡುತ್ತೇನೆ, ನನಗೆ ವಿಧಾನಸಭಾಧ್ಯಕ್ಷ ಸ್ಥಾನ ಬೇಡ ಎಂದು. ಆದರೆ ಯಡ್ಡಿ ಕೇಳಲಿಲ್ಲ. ಹೈಕಮಾಂಡ್ ಮೇಲೆ ಒತ್ತಡ ಹೇರಿ, ಜಗದೀಶ್ ಶೆಟ್ಟರ್ ಅವರನ್ನು ಬಲವಂತವಾಗಿ ಆ ಸ್ಥಾನಕ್ಕೆ ತಂದರು. ಶೆಟ್ಟರ್‌ಗೆ ಅದು ಸಹ್ಯವಾಗಲಿಲ್ಲ. ಹೀಗಾಗಿ ಮೌನವಾದರು. ಮುಂದೆ ಯಡಿಯೂರಪ್ಪ ಅವರ ವಿರುದ್ಧ ಗಣಿ ರೆಡ್ಡಿಗಳು ತಿರುಗಿ ಬಿದ್ದರಲ್ಲ? ಅವರಿಗೆ ಓರ್ವ ಲಿಂಗಾಯತ ನಾಯಕ ಫ್ರಂಟ್ ಲೈನ್‌ನಲ್ಲಿರಬೇಕಿತ್ತು. ಹೀಗಾಗಿ ಹಿಂದೆ ಮುಂದೆ ನೋಡದೆ ಶೆಟ್ಟರ್ ಜತೆ ನಿಂತರು. ಶೆಟ್ಟರ್ರೇ ಸಿಎಂ ಆಗಬೇಕು. ಯಡ್ಡಿ ಕೆಳಗಿಳಿಯಬೇಕು ಎಂದು ದೆಹಲಿಯ ತನಕ ಹೋದರು. ಆಗ ಯಡಿಯೂರಪ್ಪ ಅವರೇ ಕಾಡಿ ಬೇಡಿ ಸಿಎಂ ಹುದ್ದೆಯಲ್ಲಿ ಉಳಿದುಕೊಳ್ಳುವ, ಶೋಭಾ ಕರಂದ್ಲಾಜೆಯನ್ನು ಸಂಪುಟದಿಂದ ಕಿತ್ತು ಹಾಕುವ ಮೂಲಕ ಬಚಾವಾಗಬೇಕಾಯಿತು. ಅದಕ್ಕಿಂತ ಮುಖ್ಯವಾಗಿ ಯಾರು ತಮಗೆ ಪರ್ಯಾಯ ಎಂದುಕೊಂಡರೋ, ಅವರನ್ನೇ ತಮ್ಮ ಸಚಿವ ಸಂಪುಟಕ್ಕೆ ಸೇರಿಸಿಕೊಂಡು ತಣ್ಣಗಾಗಬೇಕಾಯಿತು. ಇದನ್ನು ಮಾಡುವ ಬದಲು ಆರಂಭದಲ್ಲೇ ಶೆಟ್ಟರ್ ಅವರನ್ನು ತಮ್ಮ ಮಗ್ಗುಲಲ್ಲಿ ಕೂರಿಸಿಕೊಂಡು, ನನ್ನ ನಂತರ ನೀವೆಲ್ಲ ಬೆಳೆಯಬೇಕು ಕಣ್ರೀ, ನೀವೇ ಭವಿಷ್ಯದ ನಾಯಕರು ಎನ್ನುವ ಮಾತು ಹೇಳಿದ್ದರೆ ಯಡಿಯೂರಪ್ಪ ಇಷ್ಟೆಲ್ಲ ಕಷ್ಟ ಎದುರಿಸುವ ಸ್ಥಿತಿಯೇ ಬರುತ್ತಿರಲಿಲ್ಲ.

ಈಗ ಇತಿಹಾಸ ಗೊತ್ತಿದ್ದೂ ಸಿದ್ಧರಾಮಯ್ಯ ಅಂತಹದೇ ತಪ್ಪು ಮಾಡುತ್ತಿದ್ದಾರೆ. ಉದ್ದೇಶಪೂರ್ವಕವಾಗಿ ಪರಮೇಶ್ವರ್ ಅವರನ್ನು ಪರ್ಯಾಯ ನಾಯಕನಾಗಿ ಬೆಳೆದು ಬಿಡುತ್ತಾರೆ ಎಂಬ ಆತಂಕದಲ್ಲಿ ದೂರ ಇಡುವ ಕೆಲಸವನ್ನು ಮಾಡುತ್ತಿದ್ದಾರೆ. ಅಂದಹಾಗೆ ಈ ಸಲ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದು ಸಿಬಿಐ ಕೃಪಾಕಟಾಕ್ಷದಿಂದ ಎಂಬುದು ರಹಸ್ಯದ ಸಂಗತಿಯೇನಲ್ಲ. ಒಂದು ವೇಳೆ ಆಕ್ರಮ ಗಣಿಗಾರಿಕೆಯ ವಿಷಯ ಹಿಡಿದು ಅದು ಯಡಿಯೂರಪ್ಪ ಹಾಗೂ ಶ್ರೀರಾಮುಲು ಅವರನ್ನು ಬಿಜೆಪಿಯಿಂದ ಹೊರಹಾಕದೇ ಇದ್ದಿದ್ದರೆ ಕಾಂಗ್ರೆಸ್ ಈಗ ರಾಜ್ಯದಲ್ಲಿ ಅಧಿಕಾರ ಸೂತ್ರ ಹಿಡಿದಿರುತ್ತಿರಲಿಲ್ಲ. ಬದಲಿಗೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಸರ್ಕಾರ ಅಧಿಕಾರದಲ್ಲಿರುತ್ತಿತ್ತು. ಹಾಗಂತ ಸಿದ್ಧರಾಮಯ್ಯ, ಪರಮೇಶ್ವರ್ ಏನೂ ಮಾಡಿಲ್ಲವೇ? ಮಾಡಿದ್ದಾರೆ. ಸೊರಗಿದ ಸೋರೆಕಾಯಿಯಂತಾಗಿದ್ದ ಪಕ್ಷಕ್ಕೆ ಜೀವನ್ ಟೋನ್ ಕೊಟ್ಟು ಪರಮೇಶ್ವರ್ ಅದನ್ನು ಬಲಿಷ್ಠಗೊಳಿಸಿದರೆ, ತಮ್ಮ ಹೋರಾಟಗಳ ಮೂಲಕ ಸಿದ್ಧರಾಮಯ್ಯ ಕಾಂಗ್ರೆಸ್‌ಗೆ ಶಕ್ತಿ ತುಂಬಿದ್ದಾರೆ. ಹಾಗಂತ ಜನಾದೇಶ ಎಂಬುದು ಯಾವುದೇ ವ್ಯಕ್ತಿಯ ಪರವಾಗಿರಲಿಲ್ಲ ಎಂಬುದು ನಿಚ್ಚಳ.

೧೯೮೫ರಲ್ಲಿ ರಾಮಕೃಷ್ಣ ಹೆಗಡೆ ಪರವಾಗಿ, ೧೯೮೯ರಲ್ಲಿ ವೀರೇಂದ್ರ ಪಾಟೀಲರ ಪರವಾಗಿ, ೧೯೯೪ರಲ್ಲಿ ದೇವೆಗೌಡರ ಪರವಾಗಿ, ೧೯೯೯ರಲ್ಲಿ ಎಸ್.ಎಂ.ಕೃಷ್ಣ ಅವರ ಪರವಾಗಿ, ೨೦೦೮ರಲ್ಲಿ ಯಡಿಯೂರಪ್ಪ ಅವರ ಪರವಾಗಿ ಜನಾದೇಶ ಬಂದಿತ್ತು. ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿಗೆ ನೂರಾ ಹತ್ತು ಸೀಟುಗಳು ಬಂದವು. ಹೀಗಾಗಿ ಸ್ಪಷ್ಟ ಬಹುಮತ ಬಂದಿರಲಿಲ್ಲ ಎನ್ನಬಹುದು. ಆದರೆ ಅದು ಯಡಿಯೂರಪ್ಪ ಅವರ ನಾಯಕತ್ವಕ್ಕೆ ಪೂರಕವಾದ ಫಲಿತಾಂಶ ಎಂಬುದು ನಿಜ. ಹೀಗಾಗಿ ಈ ಸಲ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಪರಮೇಶ್ವರ್ ಅವರನ್ನು ಡಿಸಿಎಂ ಮಾಡಿಬಿಟ್ಟಿದ್ದರೆ ಸಿದ್ಧರಾಮಯ್ಯ ಎರಡು ಅಪಾಯದಿಂದ ಪಾರಾಗುತ್ತಿದ್ದರು. ಒಂದು, ದಲಿತ ಸಿಎಂ ಎಂಬ ವಿಷಯ ಚರ್ಚೆಗೇ ಬರುತ್ತಿರಲಿಲ್ಲ. ಎರಡು, ಅಧಿಕಾರದಿಂದ ಕೆಳಗಿಳಿಯುವ ಭೀತಿ ಅವರಿಗೆ ಶುರುವಾಗುತ್ತಿರಲಿಲ್ಲ.


ಹೇಳಿ ಕೇಳಿ ಪರಮೇಶ್ವರ್ ಸಾಫ್ಟ್ ನೇಚರ್ ನಾಯಕ. ಅವರೆಂದೂ ಪಕ್ಷದ ವಿರುದ್ಧ ಬಹಿರಂಗವಾಗಿ ತೊಡೆ ತಟ್ಟಿದವರಲ್ಲ. ಸಿದ್ಧರಾಮಯ್ಯ ಅವರಾದರೂ ಈ ಕೆಲಸ ಮಾಡಿದ್ದರು. ಬಿಜೆಪಿ ಅಧಿಕಾರದಲ್ಲಿದ್ದಾಗ ಹೈಕಮಾಂಡ್ ಸಿ.ಎಂ.ಇಬ್ರಾಹಿಂ ಅವರಿಗೆ ವಿಧಾನಪರಿಷತ್ತಿಗೆ ಸ್ಪರ್ಧಿಸಲು ಟಿಕೆಟ್ ಕೊಡಲಿಲ್ಲ ಎಂಬ ಕಾರಣಕ್ಕಾಗಿ, ಖರ್ಗೆ ಆಪ್ತರಾದ ಇಕ್ಬಾಲ್ ಅಹ್ಮದ್ ಸರಡಗಿ ಅವರಿಗೆ ಟಿಕೆಟ್ ಕೊಟ್ಟರು ಎಂಬ ಕಾರಣಕ್ಕಾಗಿ ತಿರುಗಿ ಬಿದ್ದರು. ಪರಿಣಾಮವಾಗಿ ಇಕ್ಬಾಲ್ ಅಹ್ಮದ್ ಸರಡಗಿ ಸೋತು ಭೈರತಿ ಸುರೇಶ್ ಗೆಲ್ಲುವ ಸ್ಥಿತಿ ನಿರ್ಮಾಣವಾಯಿತು. ಅಂತಹ ಒಂದೇ ಒಂದು ಟ್ರ್ಯಾಕ್ ರೆಕಾರ್ಡ್ ಪರಮೇಶ್ವರ್‌ಗಿಲ್ಲ. ಪಕ್ಷ ಅಧಿಕಾರಕ್ಕೆ ಬರಲು ಸಹಕಾರ ನೀಡಿದ ಪರಮೇಶ್ವರ್ ಅವರನ್ನು ಡಿಸಿಎಂ ಮಾಡಿ ಎಂಬ ಕೂಗು ಆರಂಭದಲ್ಲೇ ಕೇಳಿ ಬಂತು. ಆಗೆಲ್ಲ ಕೇಂದ್ರದಲ್ಲಿ ಯುಪಿಎ ಸರ್ಕಾರವೂ ಅಧಿಕಾರದಲ್ಲಿತ್ತು. ಹೋಗಲಿ, ಕಾಂಗ್ರೆಸ್‌ನಲ್ಲಿ ಡಿಸಿಎಂ ಸಂಪ್ರದಾಯವೇ ಇಲ್ಲ ಎಂದರೆ ಬೇರೆ ಮಾತು. ಆದರೆ ವೀರಪ್ಪ ಮೊಯ್ಲಿ ಸಿಎಂ ಆಗಿದ್ದ ಕಾಲದಲ್ಲಿ ಇದೇ ಎಸ್.ಎಂ.ಕೃಷ್ಣ ಡಿಸಿಎಂ ಆಗಿರಲಿಲ್ಲವೇ?

ಇದೇ ರೀತಿ ಪರಮೇಶ್ವರ್ ಅವರಿಗೂ ಡಿಸಿಎಂ ಹುದ್ದೆ ನೀಡಿದ್ದರೆ ಸರ್ಕಾರದ ಔಟ್‌ಲುಕ್ ಮಾತ್ರವಲ್ಲ, ಇನ್‌ಲುಕ್ ಕೂಡಾ ಬದಲಾಗುತ್ತಿತ್ತು. ಆದರೆ ಯಾರೋ ಹೇಳಿದರು ಎಂಬ ಕಾರಣಕ್ಕಾಗಿ ಸಿದ್ಧರಾಮಯ್ಯ ನಿರಂತರವಾಗಿ ಪರಮೇಶ್ವರ್ ಅವರನ್ನು ದೂರವಿಡುತ್ತಾ ಬಂದರು. ಆರಂಭದಲ್ಲಿ ಖುದ್ದು ಸೋನಿಯಾಗಾಂಧಿ ಅವರೇ ಪರಮೇಶ್ವರ್ ಅವರನ್ನು ಡಿಸಿಎಂ ಮಾಡಲು ಉತ್ಸಾಹ ತೋರಿದ್ದರು. ಅದರನುಸಾರ ದಿಗ್ವಿಜಯ್‌ಸಿಂಗ್ ಕೂಡಾ ಒಂದಲ್ಲ ಎರಡು ಬಾರಿ ಸಿದ್ಧರಾಮಯ್ಯ ಅವರಿಗೆ ಹೇಳಿ ನೋಡಿದರು. ಆದರೆ ಸಿದ್ಧರಾಮಯ್ಯ ಏನೆಂದರೂ ಜಪ್ಪಯ್ಯ ಅನ್ನಲಿಲ್ಲ. ಪರಿಣಾಮವಾಗಿ ಶುರುವಾಯಿತು, ಪರಮೇಶ್ವರ್‌ಗೆ ಡಿಸಿಎಂ ಹುದ್ದೆ ಕೊಡಬೇಕು ಎಂಬ ಕೂಗು. ಸ್ವತಃ ಪರಮೇಶ್ವರ್ ಅವರೇ ತಮ್ಮ ಬಯಕೆ ತೋಡಿಕೊಂಡರು. ಈ ರೀತಿ ಡಿಸಿಎಂ ಆದರೆ ದಲಿತ ಸಮುದಾಯಕ್ಕೆ ಒಳ್ಳೆಯ ಮೆಸೇಜು ಹೋಗುತ್ತದೆ ಎಂದರು. ಆ ಸಂದರ್ಭದಲ್ಲಾದರೂ ಸಿದ್ಧರಾಮಯ್ಯ ಆಂತರಿಕ ಚರ್ಚೆ ನಡೆಸಿ ವಿಷಯ ಸೆಟ್ಲ್ ಮಾಡಬೇಕಿತ್ತು. ಆದರೆ ಅವರು ಯಥಾಪ್ರಕಾರ ಆ ವಿಷಯದಲ್ಲಿ ಮತ್ತಷ್ಟು ಕಟುವಾದರು. ಬೇಕಿದ್ದರೆ ಯಾವುದೇ ಖಾತೆ ಕೇಳಲಿ ಕೊಡುತ್ತೇನೆ, ಆದರೆ ಡಿಸಿಎಂ ಹುದ್ದೆ ಮಾತ್ರ ಬೇಡ ಎಂದು ಹೇಳಿದರು.

ಈ ನಾಡಿನಲ್ಲಿ ಶೇಕಡಾ ಒಂದರಷ್ಟು ಜನಸಂಖ್ಯೆ ಹೊಂದಿರದ ವರ್ಗದವರೂ ಸಿಎಂ ಆಗಿದ್ದಾರೆ. ಹದಿನೈದು, ಹದಿನಾರು ಪರ್ಸೆಂಟು ಅನ್ನುವವರು ಸಿಎಂ ಆಗಿದ್ದಾರೆ. ಆದರೆ ಶೇಕಡಾ ಇಪ್ಪತ್ನಾಲ್ಕು ಪರ್ಸೆಂಟಿಗಿಂತ ಹೆಚ್ಚಿರುವವರು ಸಿಎಂ ಆಗಬಾರದೇ? ಆಗಲೇಬೇಕು ಎಂಬ ಕೂಗು ಯಾವಾಗ ಶುರುವಾಯಿತೋ, ಆಗ ಕಾಂಗ್ರೆಸ್ ಹೈಕಮಾಂಡ್ ಖುದ್ದಾಗಿ ಓಡಿ ಬಂದಿದೆ. ಈಗಲಾದರೂ ಡಿಸಿಎಂ ಹುದ್ದೆಯ ಮೇಲೆ ಪರಮೇಶ್ವರ್ ಅವರನ್ನು ಕೂರಿಸದಿದ್ದರೆ ಮುಂಬರುವ ಚುನಾವಣೆಯಲ್ಲಿ ಅನುಮಾನವೇ ಬೇಡ. ಕಾಂಗ್ರೆಸ್ ಬಕಾಬೋರಲು ಬಿದ್ದು ಹೋಗುತ್ತದೆ.

೧೯೯೦ರಲ್ಲಿ ವೀರೇಂದ್ರ ಪಾಟೀಲರನ್ನು ಕೆಳಗಿಳಿಸಿದ ಕಾರಣಕ್ಕಾಗಿ, ೧೯೯೨ರಲ್ಲಿ ಬಂಗಾರಪ್ಪ ಅವರನ್ನು ಕೆಳಗಿಳಿಸಿ ಒಕ್ಕಲಿಗ ನಾಯಕ ಎಸ್.ಎಂ.ಕೃಷ್ಣ ಅವರನ್ನು ಸಿಎಂ ಮಾಡಲಿಲ್ಲ ಎಂಬ ಕಾರಣಕ್ಕಾಗಿ ಆ ವರ್ಗಗಳು ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದವು. ಪರಿಣಾಮವಾಗಿ ಇತಿಹಾಸದ ಅತ್ಯಂತ ದಯನೀಯ ಸೋಲನ್ನು ಕಾಂಗ್ರೆಸ್ ಕಾಣಬೇಕಾಯಿತು. ಈಗ ಸಿದ್ಧರಾಮಯ್ಯ ಅವರ ಹಟ, ದಲಿತರ ಆಕ್ರೋಶ ನೋಡಿದರೆ ಯಥಾಪ್ರಕಾರ ಕಾಂಗ್ರೆಸ್ ಅದೇ ಮಾರ್ಗದಲ್ಲಿ ಸಾಗುತ್ತಿರುವಂತಿದೆ. ಇನ್ನಾದರೂ ಪರಿಸ್ಥಿತಿಯನ್ನು ಸರಿ ಮಾಡದಿದ್ದರೆ ಮತ್ತದು ೧೯೯೪ರ ಫಲಿತಾಂಶವನ್ನು ನೋಡುವ ಸ್ಥಿತಿ ಬರುತ್ತದೆ. ಇತಿಹಾಸದ ತಪ್ಪುಗಳಿಂದ ಪಾಠ ಕಲಿಯದವರು ಇನ್ನೇನು ಫಲಿತಾಂಶ ನಿರೀಕ್ಷಿಸಲು ಸಾಧ್ಯ?

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 06 March, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books