Ravi Belagere
Welcome to my website
ನಿಮ್ಮದು ಎಂಥ ಮ್ಯಾರೇಜು? ಶುದ್ಧ ಅರೇಂಜ್‌ಡಾ? ನೀವೇ ಮಾಡಿಕೊಂಡ ಲವ್ ಮ್ಯಾರೇಜಾ? live in relationshipನಂತಹ  ಗಾಂಧರ್ವ ವಿವಾಹನಾ? ‘ಲವ್ ಕಮ್ ಅರೇಂಜ್ಡ್’ ಮದುವೆಯಾ? ಅಂತರ್‌ಜಾತೀಯ ವಿವಾಹವಾ? ಅಂತರ್‌ಧರ್ಮೀಯ ವಿವಾಹವಾ? (Request :ಜಾತಿಗಳ ಪುಸ್ತಾಪ ಮಾಡಬೇಡಿ) Love, run and marry ಎಂಬಂತೆ ಮನೆಗಳನ್ನು ಬಿಟ್ಟು ಹೋಗಿ ಆದ ಮದುವೆಯಾ? ಎಂಥ ಮದುವೆಯಾಗಿದ್ದರೂ ಅಡ್ಡಿಯಿಲ್ಲ. ಅದಕ್ಕೆ ಗೌರವವಿದೆ. ಒಂದು inland letterನಷ್ಟು ಬರವಣಿಗೆಯನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆಯಿರಿ. ಜೊತೆಗೆ ಇಬ್ಬರೂ ಇರುವ ಫೊಟೋ ಕಳಿಸಿ. mail ಮಾಡೋದಾದರೆ [email protected]ಗೆ ಮಾಡಿ.
Home About Us Gallery Books Feedback Prarthana Contact Us

Buy Ravi Belagere Books online

ಪಾಕಿಸ್ತಾನವನ್ನು ಹುಣ್ಣು ಎಂಬಂತೆ ನೋಡಿ. ಅದರ ಸೋಲಿಗೆ ಮರುಕ ಪಡಬೇಡಿ

ಭಾರತದ ಪಕ್ಕದಲ್ಲೇ ಹುಣ್ಣಿನಂತೆ ಕುಳಿತಿರುವ ಪಾಕಿಸ್ತಾನವನ್ನು ನೀವು ಒಂದು ಧರ್ಮಕ್ಕೆ ಸಂಬಂಧಿಸಿದ ದೇಶ ಅಂತ ನೋಡಬೇಡಿ. ಆಗ ನೀವಾಗಿಯೇ ಹಲವು ಅಪಾಯಗಳಿಗೆ ಆಹ್ವಾನ ಕೊಡುತ್ತೀರಿ. ಹೀಗಾಗಿ ಅದನ್ನು ಒಂದು ಹುಣ್ಣು ಎಂಬಂತೆಯೇ ನೋಡಿ. ಇಡೀ ದೇಶ ಒಂದಾಗಿ ಆ ಹುಣ್ಣಿನಿಂದಾಗುವ ಬಾಧೆಯನ್ನು ನಿವಾರಿಸಬೇಕು ಎಂಬುದನ್ನು ನಿಕ್ಕಿ ಮಾಡಿಕೊಳ್ಳಿ. ಆಗ ನೀವು ಸೂಪರ್ ಪವರ್ ಆಗುತ್ತೀರೋ ಇಲ್ಲವೋ, ಆದರೆ ದಶಕಗಳ ಕಾಲದಿಂದ ಬೆಳೆದು ನಿಂತಿರುವ ಆ ಹುಣ್ಣಿನ ಕಾಟದಿಂದ ಮುಕ್ತಿ ಪಡೆಯುವ ದಾರಿಯಲ್ಲಿ ನೀವು ನಿಶ್ಚಿತವಾಗಿಯೂ ನಡೆಯುತ್ತೀರಿ.

ಹಾಗಂತ ಮೊನ್ನೆ ನನ್ನ ಮುಂದೆ ಕುಳಿತ ಹುಡುಗನಿಗೆ ಹೇಳಿದೆ. ಅಂದಹಾಗೆ ಮೊನ್ನೆ ಪಾಕಿಸ್ತಾನದ ವಿರುದ್ಧ ನಡೆದ ವಿಶ್ವಕಪ್ ಪಂದ್ಯಾವಳಿಯಲ್ಲಿ ನಮ್ಮ ಹುಡುಗರು ಸಖತ್ತಾಗಿ ಆಡಿದರು. ಗೆದ್ದರು. ನಿಸ್ಸಂಶಯವಾಗಿ ಇದು ಹಬ್ಬದಂತೆ ಖುಷಿ ಪಡಬೇಕಾದ ವಿಷಯ. ಆದರೆ ಅವರ‍್ಯಾರೋ ಪಾಕಿಸ್ತಾನದ ಮೇಲೆ ಮರುಕ ತೋರಿದರಂತೆ. ಅರೇಸ್ಕೀ.. ಇದರಲ್ಲಿ ಮರುಕ ಏನು ಬಂತು? ಯುದ್ಧ ಮತ್ತು ಆಟದಲ್ಲಿ ಎದುರಾಳಿ ಎದುರಾಳಿಯೇ. ದಂಡಿನಲ್ಲಿ ಸೋದರ ಮಾವನೇ ಎಂಬಂತೆ ಗಾದೆಯೇ ಇಲ್ಲವೇ?

ಹೀಗಾಗಿ ಯುದ್ಧ ಮಾಡುವಾಗ, ಆಟ ಆಡುವಾಗ ಮಮಕಾರದಿಂದ ನಡೆದುಕೊಳ್ಳಬೇಡಿ. ಶತಮಾನಗಳ ಹಿಂದೆ ಇದೇ ತಪ್ಪನ್ನು ಮಾಡಿ ನಮ್ಮ ಹಿರಿಯರು ಗಂಡಾಂತರವನ್ನು ದೇಶದೊಳಗೇ ಆಹ್ವಾನಿಸಿದರು. ಪೃಥ್ವಿರಾಜ್ ಚೌಹಾಣ್ ಮಹಾನ್ ಧೀರ. ದಂಡೆತ್ತಿ ಬಂದ ಘೋರಿ ಮಹಮ್ಮದ್‌ನನ್ನೂ ಕ್ಷಮಿಸಿದ ಉದಾರಿ. ಹೀಗೆ ಉದಾರವಾಗಿ ಕ್ಷಮಿಸಿದ ಫಲ ಏನಾಯಿತು? ಹೇಳಲು ಹೋದರೆ ಇಂತಹ ನೂರಾರು ಉದಾಹರಣೆಯನ್ನು ನೋಡಬಹುದು. ಶತ್ರುವಿನ ಮೇಲೆ ಕನಿಕರ ತೋರಿಸಿ ಬಿಡುವುದು ಮೂರ್ಖತನ. ಯಾಕೆಂದರೆ ಆತ ಮತ್ತಷ್ಟು ಗಟ್ಟಿಯಾಗಿ ಬಂದು ನಿಮ್ಮನ್ನೇ ಹೊಡೆಯುತ್ತಾನೆ. ಹೊಡೆತ ತಿಂದ ಕೂಡಲೇ ಚೇಂಜ್ ಆಗುವುದು ಕನ್ನಡ ಚಿತ್ರಗಳಲ್ಲಿ ಮಾತ್ರ. ಹುಡುಗ ಬಡವ-ಹುಡುಗಿ ಶ್ರೀಮಂತೆ. ಇವರಿಬ್ಬರ ಮದುವೆಗೆ ಹುಡುಗಿಯ ಅಪ್ಪ ಒಪ್ಪುವುದಿಲ್ಲ. ಆಗ ಹುಡುಗ ರಣಭೀಷಣವಾಗಿ ಹೋರಾಡುತ್ತಾನೆ. ಅವರ ಹೋರಾಟದ ಪರಿ ಕಂಡೇ ಅವನಿಗೆ ಹುಡುಗಿಯನ್ನು ಕೊಟ್ಟು ಮದುವೆ ಮಾಡಿ ಬಿಡುತ್ತಾರೆ.

ಮೇಲೆ ಹೇಳಿದ ಕತೆಯನ್ನು ಆಧಾರವಾಗಿಟ್ಟುಕೊಂಡ ಕಾಗಕ್ಕ-ಗುಬ್ಬಕ್ಕನ ಪಿಕ್ಚರುಗಳನ್ನು ದಂಡಿಯಾಗಿ ನೋಡಿದ್ದೇವೆ. ಆದರೆ ವಾಸ್ತವದಲ್ಲಿ ಇವೆಲ್ಲ ಆಗದ ಹೋಗದ ಕೆಲಸಗಳು. ಇಂತಹ ಘಟನೆ ನಡೆದಾಗ ಹುಡುಗ-ಹುಡುಗಿ ಓಡಿ ಹೋಗಬೇಕು. ಸಾವಿರಕ್ಕೆ ನಾಲ್ಕೋ ಐದೋ ಕೇಸುಗಳಲ್ಲಿ, ಸಾಯಲಿ ಬಿಡು ಎಂಬ ಧೋರಣೆ ಪೋಷಕರಿಗೆ ಬರಬಹುದೇ ವಿನಃ ಉಳಿದಂತೆ ಅವೆಲ್ಲ ಆಗದ ಮಾತು. ಸಾಮಾನ್ಯ ಬದುಕಿನಲ್ಲೇ ಈ ತರಹ ಇದ್ದಾಗ ಯುದ್ಧದಂತಹ ವಿಷಯದಲ್ಲಿ ನಮ್ಮ ಖ್ಯಾತನಾಮ ರಾಜ ಮಹಾರಾಜರೆಲ್ಲ ದಂಡೆತ್ತಿ ಬಂದವರ ವಿರುದ್ಧ ಕನಿಕರ ತೋರಿದರು. ಉದಾರವಾಗಿ ನಡೆದುಕೊಂಡರು. ಪರಿಣಾಮ ಅವರು ಮಾತ್ರವಲ್ಲ, ದೇಶವೇ ಎದುರಿಸಬೇಕಾಯಿತು.

ಹೀಗಾಗಿ ನನಗನ್ನಿಸುವ ಪ್ರಕಾರ ನಾವು ಅಗ್ರೆಸಿವ್ ಆಗಿರಲೇಬೇಕು. ನಿಮ್ಮ ಮಮಕಾರ ಏನಿದ್ದರೂ ಯುದ್ಧದಲ್ಲಿರಬಾರದು. ಆಟದಲ್ಲಿರಬಾರದು. ತೀರಾ ವೈಯಕ್ತಿಕ ಬದುಕಿನಲ್ಲಿ ಇವೆಲ್ಲ ಓಕೆ. ನನ್ನ ಮಗ ಕರ್ಣ ಚಿಕ್ಕವನಿದ್ದಾಗ ಆಗಾಗ, ಅಪ್ಪಾ.. ಬಾ ಕುಸ್ತಿ ಆಡೋಣ ಎಂದು ಆಹ್ವಾನಿಸುತ್ತಿದ್ದ. ಆಗೆಲ್ಲ ನಾನು ಕುಸ್ತಿ ಮಾಡಿದಂತೆ ನಟಿಸುವುದು. ಕೆಲವೇ ಹೊತ್ತಿನಲ್ಲಿ ನೆಲಕ್ಕೆ ಬಿದ್ದು, ಓ.. ನೀನು ಬಹಳ ಗಟ್ಟಿ ಕಣೋ, ನಿನ್ನ ಜತೆ ಕುಸ್ತಿ ಮಾಡಲು ಆಗುವುದಿಲ್ಲಪ್ಪ, ಸೋತು ಬಿಟ್ಟೆ ಎಂದರೆ ಅವನಿಗೋ ಅಪರಿಮಿತ ಸಂತೋಷ. ನೋಡಿದೆಯಾ, ಅಪ್ಪನನ್ನೇ ಕುಸ್ತಿಯಲ್ಲಿ ಸೋಲಿಸಿಬಿಟ್ಟೆ ಎಂದು ಅವರಮ್ಮನ ಬಳಿ ಕೊಚ್ಚಿಕೊಳ್ಳುತ್ತಿದ್ದ. ಅದು ಸೋಲಲ್ಲ. ನಿಜವಾಗಿಯೂ ನಮ್ಮ ಗೆಲುವು. ಅವರ ಸಂತೋಷವೇ ನಮಗೆ ಮುಖ್ಯವಾಗಿರುತ್ತದೆ. ಹೀಗಾಗಿ ಅವರು ಸಂತೋಷಪಡಲಿ ಎಂದು ಬೇಕೆಂದೇ ಸೋತಿರುತ್ತೇವೆ. ಸೋಲಿನಲ್ಲೂ ಗೆಲುವಿನ ಆನಂದ ಸಿಗುವುದು ಇಂತಹ ವಿಷಯಗಳಲ್ಲಿ ಮಾತ್ರ. ಇದನ್ನು ನಾನು ಮಾತ್ರ ಅಂತಲ್ಲ. ಬಹುತೇಕ ಎಲ್ಲ ಪೋಷಕರೂ ಅನುಭವಿಸಿರುತ್ತಾರೆ. ಆದರೆ ಪಾಕಿಸ್ತಾನದ ಮೇಲೆ ನಾವು ಅಂತಹ ಮಷ್ಕಿರಿ ಮಾಡಲು ಸಾಧ್ಯವೇ? ನೋ ಚಾನ್ಸ್. ಹೇಗಾದರೂ ಮಾಡಿ ಕಾಶ್ಮೀರವನ್ನು ನುಂಗಬೇಕು ಎಂದು ಹವಣಿಸುತ್ತಿರುವ ದೇಶ ಅದು. ಇದಕ್ಕಾಗಿ ಪಾಕಿಸ್ತಾನದ ಜನಕ ಮಹಮ್ಮದಾಲಿ ಜಿನ್ನಾನಿಂದ ಹಿಡಿದು ಈಗ ಬಂದು ಕೂತಿರುವ ನವಾಜ್ ಷರೀಫ್ ತನಕ ಎಲ್ಲರ ಬಳಿ ನಾವು ಮಾಡಿದ್ದು ಕಾದಾಟವೇ.
ಭಾರತದ ಮೇಲೆ ಯುದ್ಧ ಮಾಡಿ ಗೆಲ್ಲುವ ತ್ರಾಣವಿಲ್ಲದ ಪಾಕಿಸ್ತಾನ ಇದೇ ಕಾರಣಕ್ಕಾಗಿ ಜನರಲ್ ಜಿಯಾ ಉಲ್ ಹಕ್ ಕಾಲದಲ್ಲಿ ಒಂದು ಯೋಜನೆ ರೂಪಿಸಿತು. ಆ ಯೋಜನೆಯ ಮೂಲ ಅಂಶ ಏನು ಗೊತ್ತೇ? ಭಾರತದ ಮೇಲೆ ನೇರ ಯುದ್ಧ ಮಾಡುವ ಬದಲು ಗೆರಿಲ್ಲಾ ವಾರ್ ಮಾಡುವುದು. ಇಡೀ ಭಾರತ ಗಾಯಗಳಿಂದ ನರಳುವಂತೆ ಮಾಡುವುದು ಅದರ ಉದ್ದೇಶ. ಇದೇ ಕೆಲಸವನ್ನು ಅದು ಮಾಡುತ್ತಾ ಬಂದಿದೆ. ಹೀಗಾಗಿ ಅದನ್ನು ಒಂದು ಪರಿಪೂರ್ಣ ಮನಃಸ್ಥಿತಿಯೊಂದಿಗೆ ನಾವು ಎದುರಿಸಲೇಬೇಕು. ಹಾಗೆ ಎದುರಿಸಬೇಕೆಂದರೆ ಅದನ್ನು ಒಂದು ಧರ್ಮದ ಆಧಾರದ ಮೇಲೆ ನೋಡಬಾರದು. ಬದಲಿಗೆ ಒಂದು ಹುಣ್ಣು ಎದ್ದರೆ ಹೇಗೆ ದೇಹದ ರೋಗ ನಿರೋಧಕ ಶಕ್ತಿ ಒಗ್ಗೂಡಿ ಅದರ ವಿರುದ್ಧ ಹೋರಾಡುತ್ತದೋ, ಹಾಗೆ ಹೋರಾಡಬೇಕು.

ಅದರಲ್ಲೂ ಪಾಕಿಸ್ತಾನದ ವಿಷಯ ಬಂದರೆ ಅಪ್ಪಿತಪ್ಪಿಯೂ ನೀವು ಹಿಂದೆ ಮುಂದೆ ನೋಡಬಾರದು. ಸದಾಕಾಲ ಭಾರತವನ್ನು ಪುಡಿ ಮಾಡಲು ಕನಸು ಕಾಣುತ್ತಿರುವ ದೇಶ ಆಟವನ್ನೇ ಆಡಲಿ, ಯುದ್ಧವನ್ನೇ ಮಾಡಲಿ, ಅದನ್ನು ಪರಿಪೂರ್ಣವಾಗಿ ಎದುರಿಸಲೇಬೇಕು. ನಮ್ಮ ‘ಪತ್ರಿಕೆ’ಯ ಧೋರಣೆ ತೀರಾ ಸ್ಪಷ್ಟ. ಅದು ಜಾತಿ, ಮತ, ಪಂಥಗಳ ಆಧಾರದ ಮೇಲೆ ಕೆಲಸ ಮಾಡುವುದಿಲ್ಲ. ಇಲ್ಲಿ ಎಲ್ಲ ಜಾತಿ, ಮತ, ಪಂಥಗಳವರು ಸಹೋದರ ಸಹೋದರಿಯರಂತಿದ್ದಾರೆ. ನಾವು ಒಳ್ಳೆಯದು ಮತ್ತು ಕೆಟ್ಟದನ್ನು ಮಾತ್ರ ವಿಂಗಡಿಸಿ ನೋಡುತ್ತೇವೆ. ಒಳ್ಳೆಯದು ಎಲ್ಲ ಜಾತಿ, ಮತ, ಪಂಥಗಳಲ್ಲಿ ಹೇಗೆ ಇರುತ್ತದೋ ಹಾಗೆಯೇ ಕೆಟ್ಟದು ಕೂಡಾ ಇರುತ್ತದೆ. ಅದನ್ನು ನೋಡುವ ದೃಷ್ಟಿ ನಿಚ್ಚಳವಾಗಿರಬೇಕು. ಒಂದು ಜಾತಿ, ಒಂದು ಮತ ಅಥವಾ ಒಂದು ಪಂಥ ಮಾತ್ರವೇ ಕೆಟ್ಟದು ಎಂಬಂತೆ ನಾವು ನೋಡಲು ಹೊರಟರೆ ದೇಶವನ್ನು ಒಗ್ಗೂಡಿಸಿಕೊಂಡು ಹುಣ್ಣನ್ನು ನಿವಾರಿಸಿಕೊಳ್ಳಲು ಆಗುವುದಿಲ್ಲ. ಅದು ಸರಿಯೂ ಅಲ್ಲ.

ನಿಮಗೆ ಒಂದು ವಿಷಯ ಹೇಳುತ್ತೇನೆ. ನಾನು ಮತ್ತು ನಮ್ಮ ವರದಿಗಾರ ಆರ್.ಟಿ.ವಿಠ್ಠಲಮೂರ್ತಿ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಇಲ್ಲಿಂದ ದಿಲ್ಲಿಗೆ, ಅಲ್ಲಿಂದ ಶ್ರೀನಗರಕ್ಕೆ ಹೋದೆವು. ಯುದ್ಧಭೂಮಿಗೆ ತೆರಳುವ ಮುನ್ನ ಒಂದು ಸಲ ಶ್ರೀನಗರದಲ್ಲಿರುವ ಕಾಶ್ಮೀರಿ ಪಂಡಿತರ ಕಾಲೋನಿಗೆ ಹೋದೆವು. ಅದರ ಗತಿ ನೋಡಿ ಕಣ್ಣೀರಾದೆವು. ಅದೆಂಥಾ ಘೋರ ದೃಶ್ಯ ಎನ್ನುತ್ತೀರಿ. ಎಷ್ಟೋ ಮನೆಗಳನ್ನು ಕಾಶ್ಮೀರದ ಪುಂಡರನೇಕರ ಜತೆಗೂಡಿ ಪಾಕಿಸ್ತಾನದ ಉಗ್ರರು ಸುಟ್ಟು ಹಾಕಿದ್ದಾರೆ. ಅವರ ದೌರ್ಜನ್ಯಕ್ಕೆ ಬಲಿಯಾದ ಸಾವಿರಾರು ಮಂದಿ ಕಾಶ್ಮೀರಿ ಪಂಡಿತರು ಜಮ್ಮುವಿಗೋ, ದೆಹಲಿಗೋ ಓಡಿ ಹೋಗಿದ್ದಾರೆ. ಓಡಿ ಹೋಗುವ ಮುನ್ನ ಚಿಲ್ಲರೆ ರೇಟಿಗೆ ತಮ್ಮ ಆಸ್ತಿ ಪಾಸ್ತಿಗಳನ್ನು ಮಾರಿಕೊಂಡು ಹೋಗಿದ್ದಾರೆ. ಅವರು ಅನುಭವಿಸುತ್ತಿರುವ ಕಷ್ಟವನ್ನು ತಂದೊಡ್ಡಿದ್ದು ಪಾಕಿಸ್ತಾನ. ಇದನ್ನು ನಾವು ಮರೆಯಲು ಸಾಧ್ಯವಿಲ್ಲ. ಕೇವಲ ಕಾಶ್ಮೀರ ಒಂದೇ ಅಲ್ಲ, ದೇಶದ ಹಲವಾರು ಭಾಗಗಳಲ್ಲಿ ವಿಧ್ವಂಸಕ ಕೃತ್ಯಗಳು ನಡೆಯಲು ಪಾಕಿಸ್ತಾನವೇ ಕಾರಣ ಎಂಬುದು ಕಣ್ಣಿಗೇ ಕಾಣುತ್ತದೆ.

ಇಂತಹ ದುಷ್ಕೃತ್ಯಗಳನ್ನು ನಡೆಸಲು ಪಾಪಿ ಪಾಕಿಸ್ತಾನ ಸಾವಿರಾರು ಕೋಟಿ ರುಪಾಯಿಗಳನ್ನು ಸುರಿದಿದೆ. ಇವತ್ತಿಗೂ ಅಮೆರಿಕದಿಂದ ಭಿಕ್ಷೆ ಬೇಡಿ ಹಣ ಪಡೆದಾದರೂ ಭಾರತದಲ್ಲಿ ಉಗ್ರಗಾಮಿ ಕೃತ್ಯಗಳನ್ನು ನಡೆಸುತ್ತದೆ.ಇದನ್ನೆಲ್ಲ ಮರೆಯಲು ಒಬ್ಬ ಭಾರತೀಯನಿಗೆ ಸಾಧ್ಯವೇ? ಸಾಧ್ಯ ಎಂದಾದರೆ ಅವಕ್ಕೆ ತಲೆಯಲ್ಲಿ ಮಿದುಳಿಲ್ಲ ಎಂದೇ ತೀರ್ಮಾನಿಸಬೇಕಾಗುತ್ತದೆ. ಅಂದಹಾಗೆ ನಾವೇನು ಇಡೀ ಪಾಕಿಸ್ತಾನವನ್ನೇ ವಿರೋಧಿಸುತ್ತೇವೆ ಅಂದಲ್ಲ. ಅಲ್ಲಿರುವ ಗಾಯಕರಿಂದ ಹಿಡಿದು ಹಲವು ಅಂಶಗಳನ್ನು ನಾನು ಪ್ರೀತಿಸುತ್ತೇನೆ. ಹಾಗಂದ ಮಾತ್ರಕ್ಕೆ ಅವುಗಳಿಗಾಗಿ ನನ್ನ ದೇಶದ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದು ಸಾಧ್ಯವಿಲ್ಲ. ನೀವೇ ಗಮನಿಸಿ ನೋಡಿ. ಪಾಕಿಸ್ತಾನ ಯಾವತ್ತಾದರೂ ಕ್ರೀಡಾ ಮನೋಭಾವದಿಂದ ನಮ್ಮ ಜತೆ ಕ್ರಿಕೆಟ್ ಇರಲಿ, ಯಾವುದೇ ಆಟವಿರಲಿ, ಆಡುತ್ತದೆಯೇ? ಆ ಆಟಗಾರನನ್ನು ನೋಡಿ, ಈ ಆಟಗಾರ ಮುಗುಳ್ನಕ್ಕ. ಕ್ರೀಡಾ ಸ್ಫೂರ್ತಿ ಮೆರೆದ ಎಂಬಂತಹ ಮಾತುಗಳನ್ನು ನಾವು ಆಗಾಗ ಕೇಳಬಹುದು. ಆದರೆ ಆಟಕ್ಕಾಗಿ ದೇಶದ ಘನತೆಯ ವಿಷಯದಲ್ಲಿ ಹೊಂದಿಕೊಂಡು ಹೋಗಲು ಸಾಧ್ಯವಿಲ್ಲ. ಆಟ ಆಡುವುದೇ ಗೆಲ್ಲಲು. ಆ ರೀತಿ ಗೆದ್ದಾಗ ಸಂಭ್ರಮ ಪಡುವುದು ಸಹಜ. ಚಿಕ್ಕ ವಯಸ್ಸಿನವರಿರಲಿ, ನನಗೇ ಮೊನ್ನಿನ ಆಟ ನೋಡಿ ಖುಷಿಯಾಗಿ ಹೋಯಿತು.
ಅರೇ, ನಮ್ಮವರು ವಿಶ್ವಕಪ್ ಗೆಲ್ಲುತ್ತಾರೋ ಇಲ್ಲವೋ? ಆದರೆ ಪಾಕಿಸ್ತಾನದ ಮೇಲೆ ಗೆದ್ದರೆ ಸಾಕು. ಉಳಿದಂತೆ ಕಪ್ಪೂ ಬೇಡ. ಚಿಪ್ಪೂ ಬೇಡ ಅಂತ ಬಯಸಿದ ನಮ್ಮ ಮಕ್ಕಳ ಮನಸ್ಸಿನಲ್ಲಿ ಪಾಕಿಸ್ತಾನ ಎಂದರೆ ಯಾವ ಮಟ್ಟಿನ ಆಕ್ರೋಶ ಇರಬಹುದು. ಇದು ದೇಶ ಅಗ್ರೆಸಿವ್ ಆಗುತ್ತಿದೆ ಎಂಬುದರ ಲಕ್ಷಣ. ನಮ್ಮ ಹಿರಿಯರು ಶತ್ರುಗಳ ವಿಷಯದಲ್ಲಿ ಉದಾರಿಗಳಾಗಿದ್ದರು. ಅದಕ್ಕಾಗಿ ದೇಶವನ್ನು ಹೆಚ್ಚು ಕಡಿಮೆ ಎಂಟು ನೂರು ವರ್ಷಗಳ ಕಾಲ ಪರಕೀಯರ ದಬ್ಬಾಳಿಕೆಗೆ ಸಿಲುಕುವಂತೆ ಮಾಡಿದರು. ಹೀಗೆ ಪರಕೀಯರ ದಬ್ಬಾಳಿಕೆಗೆ ಸಿಲುಕುವಂತಹ ಉದಾರತೆ ಯಾಕೆ ಬೇಕು? ನಾನು ಮೊಘಲ್ ದೊರೆಗಳಲ್ಲಿದ್ದ ಒಂದು ಗುಣವನ್ನು ಮೆಚ್ಚುತ್ತೇನೆ. ಅವರು ಶತ್ರುಗಳಿಗೆ ಎರಡನೇ ಅವಕಾಶವನ್ನೇ ಕೊಡುತ್ತಿರಲಿಲ್ಲ. ನಿರ್ದಾಕ್ಷಿಣ್ಯವಾಗಿ ರುಂಡ ಹಾರಿಸಿಬಿಡುತ್ತಿದ್ದರು. ಯುದ್ಧ ಮಾಡಬೇಕು ಎಂದರೆ ಹಾಗೆ ಮಾಡಬೇಕು.

ಅದೇ ಮನಃಸ್ಥಿತಿ ಇಷ್ಟು ಶತಮಾನಗಳ ನಂತರ ನಮ್ಮಲ್ಲಿ ಬೇರೂರಿದೆ. ಯುದ್ಧವನ್ನೂ ಉದಾರ ಮನೋಭಾವದಿಂದ ಮಾಡಲು ಬಯಸುವುದಿಲ್ಲ. ಆಟವನ್ನೂ ಉದಾರ ಮನೋಭಾವದಿಂದ ಆಡಲು ಬಯಸುವುದಿಲ್ಲ. ಇದೇ ಪಾಕಿಸ್ತಾನದಲ್ಲಿ ಅಬ್ದುಲ್ ಖಾದಿರ್ ಅಂತ ಒಬ್ಬ ಬೌಲರು ಇದ್ದ. ಅವತ್ತಿನ ಸ್ಥಿತಿಯಲ್ಲಿ ಡಲ್ಲಾಗಿದ್ದ ಒಂದು ದೇಶದ ತಂಡದ ಬ್ಯಾಟ್ಸ್‌ಮನ್‌ಗಳು ಆತನ ಯರ್ಕಿ ಫಿರ್ಕಿ ಬೌಲಿಂಗಿಗೆ ದಬ ದಬ ಅಂತ ಔಟಾಗಿ ಬಿಟ್ಟರು. ಆಗ ಅಬ್ದುಲ್ ಖಾದಿರ್ ಸೇರಿದಂತೆ ಪಾಕಿಸ್ತಾನದ ಹಲ ಆಟಗಾರರ ಬಾಡಿ ಲಾಂಗ್ವೇಜ್ ನೋಡಬೇಕಿತ್ತು. ಒಂದೊಂದು ವಿಕೆಟ್ ಬಿದ್ದಾಗಲೂ ಅಬ್ದುಲ್ ಖಾದಿರ್ ಬಿದ್ದು ಬಿದ್ದು ನಗುತ್ತಿದ್ದ. ಅವನ ಜತೆ ಸೇರಿ ಪಾಕಿಸ್ತಾನ ತಂಡದ ಹಲ ಆಟಗಾರರು ಗಹಗಹಿಸಿ ನಗುತ್ತಿದ್ದರು. ಇದು ಅವರಾಡುವ ಆಟ, ಆಟವನ್ನು ಎಂಜಾಯ್ ಮಾಡುವ ಪರಿ. ಇಂತಹವರ ಜತೆ ಆಡುವಾಗ ನಾವು ಅವರಿಗಿಂತ ಟಫ್ ಆಗಬೇಕು. ಹಾಗೆ ಟಫ್ ಆಗಿಯೇ ಆಡಿ ಗೆಲ್ಲಬೇಕು. ಅಂದಹಾಗೆ ನಮ್ಮ ಹುಡುಗರು ಗೆದ್ದಾಗ ನಾವು ಸಂಭ್ರಮಿಸುತ್ತೇವೆ. ಸೋತಾಗ ಬೇಸರ ಮಾಡಿಕೊಳ್ಳುತ್ತೇವೆ. ತೀರಾ ಪಾಕಿಸ್ತಾನದಲ್ಲಿ ನಡೆಯುವಂತೆ ನಮ್ಮಲ್ಲಿ ಸೋಲನ್ನು ಖಂಡಿಸಿ ಬಾಂಬ್ ಸ್ಫೋಟಿಸುವಂತಹ ಘಟನೆಗಳು ನಡೆಯುವುದಿಲ್ಲ.

ಅಷ್ಟು ಘೋರವಾಗಿರುವ ದೇಶವನ್ನು ಯಾವ ರೀತಿಯಲ್ಲಿ ಸಹಿಸಿಕೊಳ್ಳಬೇಕು ಮತ್ತು ಯಾಕಾಗಿ ಮರುಕ ಪಡಬೇಕು ಹೇಳಿ? ಮೊದಲನೆಯದಾಗಿ ಅವರು ಭಾರತವನ್ನೇ ಚೂರು ಚೂರನ್ನಾಗಿ ಮಾಡಲು ಬಯಸಿದ ದೇಶದ ಜನ. ಎಲ್ಲರೂ ಕೆಟ್ಟವರು ಅಂತಲ್ಲ. ಆಡಳಿತ ನಡೆಸುವವರು ಮಿಲಿಟರಿಯ ಕೈಲಿರುವುದರಿಂದ ಹೀಗಾಗುತ್ತಿದೆ ಎಂದು ವಾದಿಸಬಹುದು. ಆದರೆ ಇವೆಲ್ಲ ಎಷ್ಟು ವರ್ಷ? ನೀವು ಗಮನಿಸಿ ನೋಡಿ. ವೆಸ್ಟ್ ಇಂಡೀಸ್ ತಂಡದ ವಿರುದ್ಧವೋ, ನ್ಯೂಜಿಲೆಂಡ್ ತಂಡದ ವಿರುದ್ಧವೋ ಸೋತರೆ ನಮ್ಮ ಪ್ರತಿಕ್ರಿಯೆ ಹೇಗಿರುತ್ತದೆ? ಏ ಥೋ.. ನಮ್ಮ ಹುಡುಗರು ಇನ್ನೂ ಚೆನ್ನಾಗಿ ಆಡಬೇಕಿತ್ತು ಕಣ್ರೀ ಎನ್ನುತ್ತೇವೆಯೇ ಹೊರತು ವೆಸ್ಟ್ ಇಂಡೀಸ್ ತಂಡದ ಮೇಲೋ, ನ್ಯೂಜಿಲೆಂಡ್ ತಂಡದ ಮೇಲೋ ಸಿಟ್ಟು ಮಾಡಿಕೊಳ್ಳುವುದಿಲ್ಲ. ಯಾಕೆಂದರೆ ಅವರು ಭಾರತದ ಮೇಲೆ ಗೆದ್ದರೆ ಐದು ನಿಮಿಷ ಸಂಭ್ರಮ ಆಚರಿಸುತ್ತಾರೆ. ಉಳಿದಂತೆ ಅಪ್ಪಿತಪ್ಪಿಯೂ ಒಂದು ವ್ಯಂಗ್ಯದ ಗೆರೆ ಅವರ ಮುಖಗಳಲ್ಲಿ ಕಾಣುವುದಿಲ್ಲ. ಆಟವನ್ನು ಆಟದಂತೆ ನೋಡಬೇಕು ಎಂಬುದು ಅಲ್ಲಿ ಸರಿ.

ಆದರೆ ನಮ್ಮನ್ನೇ ಚೂರನ್ನಾಗಿ ಮಾಡಬೇಕು ಎಂಬ ದೇಶದ ವಿರುದ್ಧ ಕ್ರಿಕೆಟ್ ಅಲ್ಲ, ಚಿನ್ನಿ-ದಾಂಡು ಆಟದಲ್ಲೂ ಸೋಲಲು ನಾವು ಬಯಸುವುದಿಲ್ಲ. ಬಯಸಬಾರದು. ಹಾಗೆ ಮರುಕಪಡುವುದೇ ಸೆಕ್ಯೂಲರಿಸಂ ಎಂದಾದರೆ ಅಂತಹ ಸುಡುಗಾಡು ಸೆಕ್ಯೂಲರಿಸಂ ನಮಗೆ ಬೇಡವೂ ಬೇಡ. ನಮ್ಮ ದೃಷ್ಟಿಯಲ್ಲಿ ಒಳ್ಳೆಯದೆಲ್ಲ ಸೆಕ್ಯೂಲರಿಸಮ್ಮೇ. ಕೆಟ್ಟದೆಲ್ಲಾ ಕೋಮುವಾದವೇ. ಹೀಗೆ ನಾವು ಹಾಕಿಕೊಳ್ಳುವ ಕನ್ನಡಕದಲ್ಲಿ ಒಳ್ಳೆಯದು, ಕೆಟ್ಟದು ಎಂಬುದನ್ನು ವಿಂಗಡಿಸುವ ಲೆನ್ಸು ಸರಿಯಾಗಿ ಕೂತು ಬಿಡಬೇಕು. ಇಲ್ಲದೇ ಹೋದರೆ ಪಾಕಿಸ್ತಾನ ಆಟದಲ್ಲಿ ಸೋತಿದೆ ಅಂತ ಅಷ್ಟೆಲ್ಲ ಖುಷಿಪಡುವ ಅಗತ್ಯವಿಲ್ಲ ಎಂಬಂತಹ ಅಸಡ್ಡಾಳ ಮಾತುಗಳು ಹೊರಬರುತ್ತವೆ.
ಅಂತಹ ಅಸಡ್ಡಾಳ ಮಾತುಗಳನ್ನು ಕೇಳಲು ನಾವೂ ತಯಾರಿಲ್ಲ, ನಮ್ಮ ಹುಡುಗರೂ ತಯಾರಿಲ್ಲ. ಇದೆಲ್ಲ ಕ್ಲಿಯರ್ ಆಗಿರಲಿ. ಗೊಂದಲ ಬೇಡ ಎಂಬ ಕಾರಣಕ್ಕಾಗಿ ಇದನ್ನೆಲ್ಲ ಆ ಹುಡುಗನಿಗೆ ಹೇಳಿದೆ. ಅದನ್ನೇ ನಿಮ್ಮೆದುರು ಹೇಳಿಕೊಂಡೆ. ಯಾಕೆಂದರೆ ನಾವೆಲ್ಲ ಭಾರತೀಯರು. ನೂರಾ ಇಪ್ಪತ್ತಾರು ಕೋಟಿ ಜನರೂ ಅಷ್ಟೇ. ಎಲ್ಲರೂ ಒಂದೇ. ಯುದ್ಧದಲ್ಲೇ ಆಗಲಿ, ಆಟದಲ್ಲೇ ಆಗಲಿ, ಪಾಕಿಸ್ತಾನ ನಮ್ಮ ಎದುರಾಳಿಯೇ. ಉಳಿದ ತಂಡಗಳನ್ನೇ ನಾವು ಎದುರಾಳಿ ಎಂದು ನೋಡುತ್ತೇವೆ ಎಂದಾಗ ಪಾಕಿಸ್ತಾನದ ಬಗ್ಗೆ ಮರುಕ ತೋರಲು ಸಾಧ್ಯವೇ? ಬುಲ್ ಶಿಟ್.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 28 February, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books