Ravi Belagere
Welcome to my website
ನಿಮ್ಮದು ಎಂಥ ಮ್ಯಾರೇಜು? ಶುದ್ಧ ಅರೇಂಜ್‌ಡಾ? ನೀವೇ ಮಾಡಿಕೊಂಡ ಲವ್ ಮ್ಯಾರೇಜಾ? live in relationshipನಂತಹ  ಗಾಂಧರ್ವ ವಿವಾಹನಾ? ‘ಲವ್ ಕಮ್ ಅರೇಂಜ್ಡ್’ ಮದುವೆಯಾ? ಅಂತರ್‌ಜಾತೀಯ ವಿವಾಹವಾ? ಅಂತರ್‌ಧರ್ಮೀಯ ವಿವಾಹವಾ? (Request :ಜಾತಿಗಳ ಪುಸ್ತಾಪ ಮಾಡಬೇಡಿ) Love, run and marry ಎಂಬಂತೆ ಮನೆಗಳನ್ನು ಬಿಟ್ಟು ಹೋಗಿ ಆದ ಮದುವೆಯಾ? ಎಂಥ ಮದುವೆಯಾಗಿದ್ದರೂ ಅಡ್ಡಿಯಿಲ್ಲ. ಅದಕ್ಕೆ ಗೌರವವಿದೆ. ಒಂದು inland letterನಷ್ಟು ಬರವಣಿಗೆಯನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆಯಿರಿ. ಜೊತೆಗೆ ಇಬ್ಬರೂ ಇರುವ ಫೊಟೋ ಕಳಿಸಿ. mail ಮಾಡೋದಾದರೆ [email protected]ಗೆ ಮಾಡಿ.
Home About Us Gallery Books Feedback Prarthana Contact Us

Buy Ravi Belagere Books online

ಅದೆಲ್ಲ ಹಾಗೆ ಅವತ್ತೇ ಕೆದರಿ ಬರೆದು ಬಿಸಾಕುವುದು ಆಗದ ಮಾತು!

ಇದು ಸಾಧ್ಯವಾದೀತು ಅಥವಾ ಇಷ್ಟು ಬೇಗನೆ ಸಾಧ್ಯವಾದೀತು ಅಂತ ನಾನು ಖಂಡಿತವಾಗಿಯೂ ಅಂದುಕೊಂಡಿರಲಿಲ್ಲ. ಮೊದಲನೆಯದಾಗಿ, ಅದೊಂದು ಮ್ಯಾಗಝೀನ್. ಅಜಮಾಸು ಅರವತ್ತು ವರ್ಷಗಳಿಂದ ಪ್ರಕಟವಾಗುತ್ತಿದ್ದ ನಿಯತಕಾಲಿಕೆ. ನನ್ನ ಕೈಗೆ ಸಿಕ್ಕಿದ್ದು ಆ ಪತ್ರಿಕೆಯ ವಿಶೇಷಾಂಕವಾ? ಇದ್ದರೂ ಇರಬಹುದು. ಯಾಕೆ ಹೀಗಂತೀನಿ ಅಂದರೆ ನನ್ನ ಕೈಗೆ ಸಿಕ್ಕ ಸಂಚಿಕೆಯ ಸಂಪಾದಕ ಆರ್.ಜೆ.ಬೆಯ್ಲಿ. ತೀರ ಇತ್ತೀಚೆಗೆ, ಅಂದರೆ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಈ ಸಂಚಿಕೆಯನ್ನು ರೂಪಿಸಲಾಗಿದೆ. ಆ ವೇಳೆಗಾಗಲೇ ಪತ್ರಿಕೆ ಕಣ್ಮುಚ್ಚಿಕೊಂಡು ನಲವತ್ತು ವರ್ಷಗಳಾಗಿದ್ದವು. ಪತ್ರಿಕೆಯ ಹೆಸರು BLOD.

ನೀವು ಕಂಪಾಲಾದಲ್ಲಿ ಇಳಿದು ರೂಮು-ಗೀಮು ಮಾಡಿಕೊಂಡು ತುಂಬ ದೂರದಿಂದ ಬಂದ ಕಾರಣಕ್ಕೆ ಸುಸ್ತಾಗಿರುತ್ತೀರಾದ್ದರಿಂದ ಒಂದಷ್ಟು ರೆಸ್ಟ್ ತಗೋತೀರಿ. ಆ ನಂತರ ಎದ್ದು ‘ಏಳು ಬೆಟ್ಟಗಳ ಸುಂದರಿ’ ಕಂಪಾಲಾ ನಗರದ ರಸ್ತೆಯಲ್ಲಿ ಸುಮ್ಮನೆ ಒಂದು ಸಿಗರೇಟು ಹಚ್ಚಿಕೊಂಡು ಅಷ್ಟು ದೂರಕ್ಕೆ ನಡೆಯುತ್ತೀರಿ, ಅಲ್ವಾ? ಹಾಗೆ ನಡೀತಾ ನಡೀತಾ ಸಿಗರೇಟನ್ನು ಸೇದೀ ಸೇದೀ, ಗಿಡ್ಡ ಮಾಡುತ್ತೀರಲ್ವಾ? ಅನತಿ ದೂರಕ್ಕೆ ನಡೆದ ಮೇಲೆ ನನ್ನ ಬೆರಳ ಮಧ್ಯೆ ಉಳಿದದ್ದು ‘ಕುಳ್ಳ ಸಿಗರೇಟ್!’ ಸರಿಯಾಗಿ ಅದನ್ನು stub ಮಾಡಿ ಎರಡು ಹೆಜ್ಜೆ ನಡೆದೆ ನೋಡಿ? ನನ್ನ ಕಣ್ಣು ಬಿದ್ದದ್ದು ಫುಟ್‌ಪಾತ್‌ನ ಮೇಲೆ ಹರಡಿಕೊಂಡ ಒಂದು ಹಳೇ ಪುಸ್ತಕದ ಅಂಗಡಿ: ಅದರಲ್ಲಿ ಈ Blod ಪತ್ರಿಕೆಯ ವಿಶೇಷಾಂಕ! ಅಂದ್ಹಾಗೆ, ಕಂಪಾಲಾ ಎಂಬುದು ಉಗಾಂಡಾದ ರಾಜಧಾನಿ. ಆ ನಗರಿ ಸರಿಯಾಗಿ ಏಳು ಬೆಟ್ಟಗಳ ಮೇಲೆ ಮೈ ಚೆಲ್ಲಿಕೊಂಡಿದೆ. ಅದರ ಏರ್‌ಪೋರ್ಟ್ ಬಗ್ಗೆ ಹದಿನೈದು ವರ್ಷಗಳ ಹಿಂದೆ ಬರೆದಿದ್ದೆ. ಆಫ್ರಿಕಾದ ಒಂದಷ್ಟು ಸುಂದರ ನಗರಿಗಳ ಪೈಕಿ ಕಂಪಾಲಾ ಕೂಡ ಒಂದು. ಆದರೆ ಅದರ ಏರ್‌ಪೋರ್ಟ್? ಅದು ನಮ್ಮ ಚಳ್ಳಕೆರೆ ಅಥವಾ ಸುಳ್ಯದ ಬಸ್‌ಸ್ಟ್ಯಾಂಡ್ ಹಾಗಿತ್ತು!

ಅದಿರಲಿ ಬಿಡಿ. ನಾನು ಮೊಟ್ಟಮೊದಲು ವಿಮಾನ ಅಂತ ಹತ್ತಿದ್ದು ಅಸ್ಸಾಂ-ಅರುಣಾಚಲ ಪ್ರದೇಶ್‌ನ ಗಡಿಯಲ್ಲೇ ಇರುವ ತೇಜ್‌ಪುರ್‌ನಿಂದ. ಅಲ್ಲಿಂದ ಕಲ್ಕತ್ತಾಗೆ ಹೋಗಿ ಇಳಿದೆ. ಅಲ್ಲಿ ನನ್ನ ‘ನಕ್ಸಲ್’ ಕಾಲದ ಗೆಳೆಯ ಸರ್ವಜಿತ್ ಮುಖರ್ಜಿ ಸಿಕ್ಕಿದ್ದ. ನನಗೂ ಬಿಡುವಿತ್ತು. ಅಷ್ಟು ದೂರ ಕಲ್ಕತ್ತಾದ ರಸ್ತೆಯೊಂದರಗುಂಟ ಕಾಲು ಬಿಸಾಡಿಕೊಂಡು ಓಡಾಡಿದ್ದೆವು. ಆ ನಂತರ ಬೆಂಗಳೂರಿನ ವಿಮಾನ ಹತ್ತಿ ಇಲ್ಲಿಗೆ ತಲುಪಿಕೊಂಡಿದ್ದೆ. ನಾನಾಗ ‘ಕನ್ನಡ ಪ್ರಭ’ದಲ್ಲಿ ಉಪಸಂಪಾದಕ. ಇದು ವಿಮಾನಯಾನದ ಸಂಗತಿಯಾಯಿತು. ಆದರೆ ವಿಮಾನ ಹತ್ತಿ ಮತ್ತೊಂದು ದೇಶಕ್ಕೆ ಅಂತ ಹೋದದ್ದು ಇಸವಿ ೨೦೦೦ದಲ್ಲಿ. ಜುಲೈ ತಿಂಗಳು ಅದು. ಆಗ ನನ್ನಲ್ಲಿ ಅಂಡರ್‌ವರ್ಲ್ಡ್‌ನೆಡೆಗೆ ಒಂದು ಸೆಳವಿತ್ತು. ನಾನು ಮುತ್ತಪ್ಪ ರೈ ಭೇಟಿಗೆಂದು ದುಬೈಗೆ ಹೋದೆ. ಅಲ್ಲಿ ಆತನ ಸಂದರ್ಶನ. In a way, ಸುದೀರ್ಘವಾಗಿ ನಾವು ಮಾತನಾಡಿದ್ದು ಹೌದಾದರೂ, ಅದೇಕೋ ಮಾತುಕತೆ ಅಪೂರ್ಣ ಅನ್ನಿಸಿತ್ತು. “ನೀವೂ ಒಂದಷ್ಟು ದೂರ ಬನ್ನಿ, ನನಗೊಂದಿಷ್ಟು ಕಂಪೆನಿಯಾಗುತ್ತೆ" ಅಂದೆ. ದುಬೈನಿಂದ ಇಬ್ಬರೂ ಹೊರಟೆವು. ತಲುಪಿದ್ದು ದರ್-ಎ-ಸಲಾಮ್ ಏರ್‌ಪೋರ್ಟಿಗೆ. ಅಲ್ಲಿ ನನ್ನ ವಿಮಾನ ಹತ್ತಲಿಕ್ಕೆ ಸುಮಾರು ಸಮಯವಿತ್ತು. ಒಂದು ಪಬ್‌ನಲ್ಲಿ ಕುಳಿತು ಮತ್ತೆ ಸಂದರ್ಶನ continued. “ಸರಿ, ನಾನು ಹೊರಡ್ತೇನೆ" ಅಂದೆ. ರೈ ಕಳಚಿಕೊಂಡ. ನಾನು ಕನಸು ಮನಸಿನಲ್ಲೂ ಅಂದುಕೊಂಡಿರಲಿಲ್ಲ. ನನ್ನ ಸುದೀರ್ಘ ಕಾದಂಬರಿ ‘ಹಿಮಾಗ್ನಿ’ಯಲ್ಲಿ ಆತ ಮತ್ತು ಆತನ ಪತ್ನಿ ಎರಡು ಪಾತ್ರಗಳಾಗಬಹುದು ಅಂತ. ದರ್-ಎ-ಸಲಾಮ್‌ನಲ್ಲಿ ವಿಮಾನ ಹತ್ತಿದವನೇ ಉಗಾಂಡಾಕ್ಕೆ ಹೋದೆ. ಅದೇ ಬೀಸಿನಲ್ಲಿ ಕೀನ್ಯಾಕ್ಕೆ ಹೋದೆ. ಟಾನ್ಜೇನಿಯಾಕ್ಕೆ ಹೋದೆ. ಹೇಗೂ ಬಂದಿದ್ದೇನೆ, ದೂರವಾದರೂ ಸರಿಯೇ, ಕಾಂಗೋಗೆ ಯಾಕೆ ಹೋಗಬಾರದು ಅನ್ನಿಸಿತು. ಮತ್ತೆ ವಿಮಾನ ಹತ್ತಿದೆ. ಮುತ್ತಪ್ಪ ರೈಗೆ ಕೊಂಚ ಸುಳಿವು ಸಿಕ್ಕಿದ್ದರೂ ಸಿಕ್ಕಿದ್ದಿರಬಹುದು, ನಾನು ಚೇಷ್ಟೆ ಮಾಡಿಲಿಕ್ಕೇನೂ ಹೋಗಿರಲಿಲ್ಲ. ಉಗಾಂಡಾದ ರಾಜಧಾನಿ ಕಂಪಾಲಾಕ್ಕೆ ಹೋದ ನನಗೆ ಮುಂಬೈ ಅಂಡರ್‌ವರ್ಲ್ಡ್‌ನ ಒಂದು ಸಣ್ಣ ಲಿಂಕ್ ಸಿಗುವುದಿತ್ತು. ಇಲ್ಲಿ ಭಾರತದಲ್ಲಿ ತುಂಬ ಸೀರಿಯಸ್ ಆದ ಕ್ರೈಂಗಳನ್ನು ಮಾಡಿದವರು ಪೊಲೀಸರ ಕೈಗೆ ಸಿಕ್ಕರೆ, ಅದರಲ್ಲೂ ಮುಂಬಯಿಯಲ್ಲಿ ಸಿಕ್ಕರೆ ಪೊಲೀಸರು ಕೋರ್ಟು, ಜೈಲು, ಜಾಮೀನು ಇತ್ಯಾದಿ ರಗಳೆಗಳಿಗೆ ಹೋಗುವುದೇ ಇಲ್ಲ. ಒಂದೇ ಒಂದು ಬುಲೆಟ್, bump off!,

ಎನ್‌ಕೌಂಟರ್ ಮಾಡಿಬಿಡುತ್ತಾರೆ. ಹೀಗಾಗಿ, ಭೂಗತರು ಏನೋ ಪಡಿಪಾಟಲು ಪಟ್ಟು ಒಂದು ಬೇನಾಮಿ ಪಾಸ್‌ಪೋರ್ಟ್ ಮಾಡಿಸಿಕೊಂಡು ಹೊರದೇಶಗಳಿಗೆ ಹಾರಿಬಿಡುತ್ತಾರೆ. ಹಾಗಂತ, ಅವರೇನೂ ಅಮೆರಿಕ ಅಥವಾ ಇಂಗ್ಲಂಡಿಗೆ ಹೋಗುವುದಿಲ್ಲ. ಇಲ್ಲಿಲ್ಲೇ- ಮೊಬೈಲಿಗೆ ಸಿಕ್ಕುವಷ್ಟು ದೂರದಲ್ಲಿರುವ ದುಬೈ, ಸೌದಿ ಅರೇಬಿಯಾ, ಸಿಂಗಪೂರ್, ಥಾಯ್ಲಂಡ್‌ಮುಂತಾದ ದೇಶಗಳಲ್ಲಿ ತಾತ್ಕಾಲಿಕವಾಗಿ ಸೆಟ್ಲ್ ಆಗುತ್ತಾರೆ. ಒಬ್ಬ ಛೋಟಾ ರಾಜನ್ ಮಾತ್ರ ಸಾಕಷ್ಟು ದೂರದ, ಯುರೋಪಿಯನ್ ದೇಶವೊಂದರಲ್ಲಿ ನೆಲೆಗೊಂಡಿದ್ದಾನೆ. ಅಷ್ಟೇಕೆ, ದಾವೂದ್ ಇಬ್ರಾಹಿಂ ಅದಿನ್ಯಾವ ದೂರದಲ್ಲಿದ್ದಾನೆ. ಇಲ್ಲೇ ಜೋರಾಗಿ ಕೂಗಿದರೆ ಕೇಳಿಸುವಂತಿರುವ ಪಾಕಿಸ್ತಾನದ ಕರಾಚಿಯಲ್ಲಿದ್ದಾನೆ. ನನ್ನ ಅನುಮಾನ ನಿಜವೇ ಆಗಿದ್ದಲ್ಲಿ, ಮುತ್ತಪ್ಪ ರೈ ಕೆಲವು ಕಾಲ ಆಸ್ಟ್ರೇಲಿಯಾದಲ್ಲಿದ್ದ. ನೀವು ವರ್ಷಗಟ್ಟಲೆ ದುಬೈನಂತಹ ಆಕ್ಟೀವ್ ಆದ ಮತ್ತು ವೈಬ್ರಂಟ್ ಆದ ದೇಶದಲ್ಲಿದ್ದು ಅಲ್ಲಿಂದ ನೆಟ್ಟಗೆ ಆಸ್ಟ್ರೇಲಿಯಾಕ್ಕೆ ಹೋಗಿಬಿಟ್ಟರೆ ಅದೊಂದು ಶುದ್ಧ punishment! ಆಸ್ಟ್ರೇಲಿಯಾದಷ್ಟು ಬೋರ್ ಹೊಡೆಸುವ ದೇಶ, ಈ ಪ್ಲಾನೆಟ್‌ನಲ್ಲಿ ಇನ್ನೊಂದಿರಲಾರದು. ಆ ಥರದ ಬೋರ್ ಸಹಿಸಿಕೊಳ್ಳಲಾಗದೆ ಮುತ್ತಪ್ಪ ರೈ ದುಬೈಗೆ ಬಂದು ಅಲ್ಲಿ ಬಂಧಿತನಾದನಾ? ನನ್ನ ತಮಾಷೆಯ ಊಹೆ ಇದು.
ಸರಿ, ಕಂಪಾಲಾದ ಫುಟ್‌ಪಾತ್‌ನ ಸುದ್ದಿ ಹೇಳಿ ಮುಗಿಸುತ್ತೇನೆ. ನೋಡಿ, ಇದು ನೀವೂ ಅನುಭವಿಸಿರುತ್ತೀರಿ. ಒಂದ್ಯಾವುದೋ ವಸ್ತುವಿನ ಕುರಿತು ಆಸಕ್ತಿ ಹೊಂದಿರುತ್ತೀರಿ. ಅದಕ್ಕಾಗಿ ವಿಪರೀತ ಹುಡುಕಾಟ ಕೂಡ ಮಾಡಿರುತ್ತೀರಿ. ಬಿಡು, ಅದಿನ್ನು ಸಿಗಲಾರದು ಅಂದುಕೊಂಡು ಸುಮ್ಮನಾಗಿಬಿಡುತ್ತೀರಿ. ಆದರೆ one fine day, ಇಷ್ಟಗಲ ಕಣ್ಣು ಅಗಲಿಸಿಕೊಂಡು, ‘ಯಾಹೂ..’ ಅಂತ ಕಿರುಚಿ, ಕುಣಿಯುವಂತೆ ಆ ವಸ್ತು ತುಂಬ ಅನಿರೀಕ್ಷಿತವಾಗಿ ಸಿಕ್ಕುಬಿಡುತ್ತದೆ. ಅದೂ ಏನು, ಈ ವಸ್ತು ಇಂಥ ಕಡೆ ಸಿಕ್ಕೀತು ಅಂದು ಕೂಡ ಅಂದುಕೊಂಡಿರುವುದಿಲ್ಲ. ಅದೊಂಥರಾ ಇಸ್ಪೀಟ್ ಆಟದಲ್ಲಿ ಇದ್ದಕ್ಕಿದ್ದಂತೆ ಜಾಕ್‌ಪಾಟ್ ಹೊಡೆದಂತೆ. ಕಿಕ್ಕಿರಿದ ಸಂತೆಯಲ್ಲಿ ಸೋದರಮಾವ ಸಿಕ್ಕಂತೆ! ಇಂಥ ಅನುಭವ ನನಗೆ ಅನೇಕ ಸಲ ಆಗಿದೆ. ಇನ್ನೊಂದು ವಿಷಯ; ಹಿಂದೊಮ್ಮೆ ನಾನು ಅದರ ಪ್ರಸ್ತಾಪ ಕೂಡ ಮಾಡಿದ್ದೆ. ಅದೂ ಕೂಡ ಪುಸ್ತಕಕ್ಕೆ ಸಂಬಂಧಿಸಿದ್ದೇ. ಒಬ್ಬ ನಟಿಯ ಬಗ್ಗೆ ಬರೆದ ಪುಸ್ತಕ. ನಾನು ಅದನ್ನು ಹುಡುಕಿದೆ. ಸಾಕಷ್ಟು ವರ್ಷಗಳ ಹಿಂದೆ ಪ್ರಕಟವಾಗಿದ್ದರಿಂದಲೋ ಏನೋ, ಯಾವ ಪುಸ್ತಕದ ಅಂಗಡಿಯಲ್ಲೂ ಅದರ ಸ್ಟಾಕು ಇರಲಿಲ್ಲ. ಕಡೆಗೆ, ಇದ್ದೇ ಇದೆಯಲ್ಲ ಇಂಟರ್‌ನೆಟ್? ಅದರಲ್ಲಿ ತಡಕಾಡಿದೆ. ‘ಹಾಂ, ಅದು ನನ್ನಲ್ಲಿದೆ’ ಅಂತ ಯಾವುದೋ ವ್ಯಕ್ತಿ ಹೇಳಿಕೊಂಡಿದ್ದ. ‘ಓಕೆ ನನಗದು ಬೇಕು, ಕೊಡ್ತೀಯಾ?" ಅಂತ mail ಕಳಿಸಿದ್ದೆ. ಆತ ಎಷ್ಟು ಕೇಳಿದ ಗೊತ್ತೆ? ಇಪ್ಪತ್ತೈದು ಸಾವಿರ ರುಪಾಯಿ! ಅದು ಬೇರಿನ್ನೆಲ್ಲೂ ಸಿಗುವುದಿಲ್ಲ ಅಂತ ಗೊತ್ತಾಗಿ, ಆ ಪರಿ ರೇಟು ಕೇಳುತ್ತಿದ್ದ. ಅಂಥದ್ದು, ನನ್ನ ಸಹೋದ್ಯೋಗಿ ಹಾಗೂ ಶುದ್ಧ ಮನಸಿನ ಗೆಳೆಯ ಮಹೇಶ್ ನನ್ನೊಂದಿಗೆ ಬೇರಿನ್ನೇನೋ ಹರಟುತ್ತಿದ್ದವನು, “ಸರ್, ಆ ಪುಸ್ತಕನಾ? ಅದು ನನ್ನ ಹತ್ತಿರವೇ ಇದೆ!" ಅಂದುಬಿಟ್ಟ. ತಂದು ಕೊಟ್ಟೂಬಿಟ್ಟ.

ಇದಾಯಿತಲ್ಲ? ಒಮ್ಮೆ ಬಾಂಬೆಗೆ ಹೋಗಿದ್ದೆ. ಈ ಬಗ್ಗೆ ನಿಮಗೆ ಹೇಳಿಯೂ ಇದ್ದೇನೆ. ಬಾಂಬೆಯಲ್ಲಿ ಕಾರಿನಿಂದ ಇಳಿದು ಫುಟ್‌ಪಾತ್‌ನ ಮೇಲೆ ನಡೆಯುತ್ತಿದ್ದೆ. ಒಂದೆಡೆ ಯಾರೋ ಹಳೆಯ ಪುಸ್ತಕ ಹರಡಿಕೊಂಡಿದ್ದರು, ಮಾರಲಿಕ್ಕೆ. ನಾನಿನ್ನೂ ಅದರ ಹತ್ತಿರಕ್ಕೆ ಹೋಗಿರಲಿಲ್ಲ. ನನ್ನ ಕಣ್ಣು ನೆಟ್ಟಗೆ ಹೋಗಿ ಅದರ ಮೇಲೆಯೇ ಬಿತ್ತು! ಆತ ಅದಿನ್ಯಾವ ರೇಟು ಹೇಳುತ್ತಾನೋ ಅಂದುಕೊಂಡೇ ಹತ್ತಿರಕ್ಕೆ ಹೋದೆ. ಎಷ್ಟು ರುಪಾಯಿ ಕೇಳಿರಬಹುದು ಹೇಳಿ? ಆತ ಒಂದು ಅಂಕಿ ಹೇಳಿದ್ದ. ಪುಣ್ಯಾತ್ಮ ನನ್ನ ಡ್ರೈವರ್ ಅಷ್ಟಕ್ಕೆ ಭಯಂಕರವಾಗಿ ಚೌಕಾಸಿ ಮಾಡಿ ಅದನ್ನು ಕೊಡಿಸಿಯೇಬಿಟ್ಟ! ಬರೀ ಅರವತ್ತು ರುಪಾಯಿ! ಎಲ್ಲಿಯ ಇಪ್ಪತ್ತೈದು ಸಾವಿರ? ಎಲ್ಲಿ ಅರವತ್ತು ರುಪಾಯಿ? ಇಂಟರ್‌ನೆಟ್‌ನಲ್ಲಾದರೆ ಇಪ್ಪತ್ತೈದು ಸಾವಿರ, ಫುಟ್‌ಪಾತ್ ಮೇಲೆ ಖರೀದಿಸಿದರೆ, ಅರವತ್ತು ರುಪಾಯಿ! sometimes ಹೀಗೂ ಆಗುತ್ತದೆ.

“ನಿಮ್ಮ ಹಾಬಿಗಳೇನು?" ಅಂತ ಟೀವಿಯೊಂದರ ವರದಿಗಾರ್ತಿ ಮೊನ್ನೆ ಕೇಳುತ್ತಿದ್ದಳು. ಏನಂತ ಹೇಳಲಿ? ನನಗೆ ಸಾವಿರದೆಂಟು ಹಾಬಿಗಳಿವೆ. museಗಳಿವೆ. ಆದರೂ ಮೂರೇಮೂರು ವಿಚಿತ್ರ ಹಾಬಿಗಳಿವೆ. ಯಾವುದಾದರೂ ಮನೆಗೆ ಹೋದರೆ, ಅದು ಹಳೆಯ ಮನೆಯಾಗಿದ್ದರೆ, ನಾನು ತಿಕ್ಕಲು ಪ್ರಾಣಿಯಂತೆ ಎಲ್ಲಿಗೆ ನುಗ್ಗುತ್ತೇನೆ ಗೊತ್ತಾ? ನಗಬೇಡಿ. ನೇರವಾಗಿ ಆ ಮನೆಯ ಅಡಕಲು ಕೋಣೆಗೆ! ಅದಕ್ಕೆ ನೀವು ಏನಂತೀರೋ ಗೊತ್ತಿಲ್ಲ; Waste room? ಕೆಲವರು ಲಂಬರ್ ರೂಮ್ ಅಂತಲೂ ಅಂತಾರೆ. ಕೆಲಸಕ್ಕೆ ಬಾರದ, ಬಿಸಾಡಲು ಮನಸೂ ಬಾರದ ಹಳೇ ಸಾಮಾನುಗಳನ್ನೆಲ್ಲ ತುಂಬಿಸಿದ ಕೋಣೆ. ಶುದ್ಧ junk. ಭಾರತದ ಹೆಣ್ಣುಮಕ್ಕಳಿಗೆ ಮನೆಯಲ್ಲಿ ಡಿ-ಜಂಕ್ ಮಾಡಬೇಕು ಎಂಬುದು ಸಮ್ಮತವಲ್ಲದ ಸಂಗತಿ. “ಇದ್ಯಾಕಮ್ಮಾ ಇಟ್ಟುಕೊಂಡಿದ್ದಿಯಾ? ಯಾರಿಗಾದರೂ ಕೊಡು ಅಥವಾ ಮಾರಿಬಿಡು. ಈ ಹಂಡೆ, ಕೊಳದಪ್ಪಲೆ, ಕಬ್ಬಿಣದ ಸೌಟು-ಇವೆಲ್ಲ ಏನು ಕೆಲಸಕ್ಕೆ ಬರ‍್ತವೆ?" ಅಂದರೆ, ನನ್ನ ತಾಯಿ ಸಿಟ್ಟಿಗೇಳುತ್ತಿದ್ದಳು. “ಸುಮ್ನಿರು, ನಾಳೆ ಚೇತನಳ ಮದುವೆಗೆ ಇವು ಬೇಕೇಬೇಕು" ಅಂದಿದ್ದಳು ನನ್ನ ಅಮ್ಮ. Exactly, ಚೇತನಾಳ ಮದುವೆಗೆ ಅಂತ ಆ ಛತ್ರದೊಳಕ್ಕೆ ಹೋದ ತಕ್ಷಣ ನನಗೆ ನೆನಪಾದದ್ದೇ ಅಮ್ಮ ಮತ್ತು ಆಕೆಯ ಮಾತು. ಅದಿನ್ಯಾವ ಕೊಳದಪ್ಪಲೆಯಲ್ಲಿ ಆ ಮದುವೆಯ ಊಟ ಬೇಯಿಸಲಾದೀತು? ಮದುವೆಗೆ ಬಂದವರ ಸಂಖ್ಯೆ ಹದಿನೈದು ಸಾವಿರ! ಆ ಕೊಳದಪ್ಪಲೆಯಲ್ಲಿ ಬೆಂದೀತಾ, ಹದಿನೈದು ಸಾವಿರ ಜನಕ್ಕೆ- ಅನ್ನ?

Fun ಅಂದ್ರೆ, ನನಗೆ ಯಾವ ಮನೆಗೇ ಹೋದರೂ, ಅದರ ಅಡಕಲ ಕೋಣೆ ಕಡೆ ಸೆಳೆತ. ನೀವೇ ಅನುಭವಿಸಿ; ಅಡಕಲ ಕೋಣೆ ಹೊಕ್ಕರೆ ಇವೆಲ್ಲ ಸಾಮಾನು ನಮ್ಮ ಮನೆಯಲ್ಲಿ ಇದ್ದವಾ? “ಅರೆ ಇಲ್ಲಿದೆಯಾ ಇದೂ? ನಾನು ಇಡೀ ಮನೆ ಹುಡುಕಿದ್ದೆ. ಕಡೆಗೆ ಇಲ್ಲೇ ಸಿಕ್ತು" ಎಂದು ಉದ್ಗರಿಸುವಂಥ ಪ್ರಸಂಗಗಳು ಬರುತ್ತವೆ. ತುಂಬ ಹಳೆಯದೊಂದು ಕಾಡಿಗೆ ಡಬ್ಬ ಸಿಕ್ಕರೆ, ತಕ್ಷಣ ಅಕ್ಕ ನೆನಪಾಗುತ್ತಾಳೆ. ನಾವು ಪೂರ್ತಿ ಮರೆತೇ ಹೋದ ಆ ‘ಭೃಂಗಾಮಲಕ’ ಬ್ರಾಂಡ್ ಎಣ್ಣೆಯ ಖಾಲಿ ಬಾಟಲಿ ಸಿಗುತ್ತದೆ. ಮೊದಲೆಲ್ಲ ನಮ್ಮ ಮನೆಗಳಲ್ಲಿ, post card ಚುಚ್ಚಿ ಇಡುವ, ಕೊಕ್ಕೆಯಾಕಾರದ ಒಂದು ಐಟಮ್ ಇರುತ್ತಿತ್ತು. ನಮಗೆ ನೆಂಟರಿಷ್ಟರಿಂದ ಬಂದ ಕಾರ್ಡ್‌ಗಳನ್ನೆಲ್ಲ ಅದಕ್ಕೆ ಚುಚ್ಚಿ ನೇತು ಹಾಕುವ ಪರಿಪಾಠವಿರುತ್ತಿತ್ತು. ಈಗ ಪೋಸ್ಟ್ ಕಾರ್ಡುಗಳನ್ನು ನೋಡಿ ಅಥವಾ ಬಳಸಿ ಅದ್ಯಾವ ಕಾಲವಾಯಿತೋ? ಆ ಕೊಕ್ಕೆಯಾಕಾರದ ಪೋಸ್ಟ್ ಕಾರ್ಡ್ ಸ್ಟ್ಯಾಂಡ್‌ಗೆ ಕಾರ್ಡ್ ಒಂದೇ ಅಲ್ಲ, ಕರೆಂಟ್ ಬಿಲ್, ವಾಟರ್ ಬಿಲ್‌ಗಳನ್ನೂ ಚುಚ್ಚಿಡುತ್ತಿದ್ದೆವು. ಆದರೆ ಅಪ್ಪಿತಪ್ಪಿ ಕೂಡ ಯಾರದೋ ಸಾವಿನ ಸುದ್ದಿ ಹೊತ್ತು ಬರುತ್ತಿದ್ದ ಕಾರ್ಡುಗಳನ್ನು ಚುಚ್ಚಿಡುತ್ತಿರಲಿಲ್ಲ. ಅದನ್ನು ಹರಿದೆಸೆಯುವ ರೂಢಿ. ಅಕಸ್ಮಾತ್ ನಿಮ್ಮ ಕೈಗೆ ಆ ಥರದ ಕೊಕ್ಕೆ (spike) ಸಿಕ್ಕರೆ ಒಂದು ಭಾನುವಾರದ ಬಿಡುವಿನ ಮಧ್ಯಾಹ್ನದಲ್ಲಿ ಕುಳಿತು ಅವೆಲ್ಲ ಪತ್ರಗಳನ್ನೂ ಓದಿ ನೋಡಿ? ಅದು, ಸರೋವರದ ಆಳದಲ್ಲಿ ಅನಿರೀಕ್ಷಿತವಾಗಿ ಒಂದು ಬಳ್ಳಿ ಪಾದಕ್ಕೆ ತಾಕಿ ಪುಳಕವುಂಟಾಗುತ್ತದಲ್ಲ? Exactly, ಅಂಥದ್ದೇ ಅನುಭವ.

ಇದು ಅಡಕಲ ಕೋಣೆಯ ಸಂಗತಿಯಾಯ್ತಾ? ಎರಡನೆಯದು ಇಂಟರ್‌ನೆಟ್! ನೀವೂ ಹಾಗೇ ಮಾಡ್ತಿರೇನೋ? ನನ್ನ ಲ್ಯಾಪ್‌ಟಾಪ್ ಅಥವಾ ಐ-ಪ್ಯಾಡ್ ಬಿಚ್ಚಿಕೊಂಡು ಕುಳಿತರೆ ಸಾಕು, ಇಡೀ ಪ್ರಪಂಚವನ್ನೇ ಮರೆತುಬಿಡುತ್ತೇನೆ. ಅದೂ ಏನ್ರೀ, ಕೆಲವು ಗಂಟೆಗಳ ಕಾಲ net surf ಮಾಡುತ್ತಲೇ ಇರುತ್ತೇನೆ. ನಾನು ಲ್ಯಾಪ್‌ಟಾಪ್ ಬಿಚ್ಚಿಕೊಂಡು ಕುಳಿತರೆ ಸಾಕು, ನನ್ನ ಸಿಬ್ಬಂದಿಯವರು “ಆಯ್ತು, ಒಂದಷ್ಟು ಹೊತ್ತು ಅಣ್ಣ ನಮ್ಮನ್ನು ಕರೆಯೋದಿಲ್ಲ" ಅಂತ ಮಾತನಾಡಿಕೊಳ್ಳುತ್ತಾರೆ. Surfing ಎಂಬುದು ನಿಜಕ್ಕೂ ಆತಂಕ ಮೂಡಿಸುವ ಸಂಗತಿಯೇ! ನಮಗೆ ಅರಿವಿಗೇ ಬಾರದೆ ಗಂಟೆಗಟ್ಟಲೆ ಕಳೆದು ಹೋಗುವಂತಹ ಅಡಿಕ್ಷನ್. ಬರವಣಿಗೆಗೆ ಸಂಬಂಧಿಸಿದಂತೆ, ನಾನು ನನ್ನ ಅಧ್ಯಯನವನ್ನು ಕಂಪ್ಯೂಟರಿನಲ್ಲಿ ಮಾಡುತ್ತೇನೆ. ಇವೆರಡರ ನಂತರ ನನಗಿರುವ ‘ಹಾಬಿ’ ಅಂದರೆ, ಕಾಡು. ಈಗ್ಗೆ ಒಂದೂ-ಒಂದು ಕಾಲು ವರ್ಷಗಳಿಂದೀಚೆಗೆ ಕಾಡು-ಸುಡುಗಾಡು ಅಂತ ಹೋಗಿಲ್ಲ. ಮುಖ್ಯವಾಗಿ ಅನಾರೋಗ್ಯವೆಂಬ ಪೀಡೆ. ಬರೆಯುವುದೆಲ್ಲ ಮುಗಿದು ‘ಪತ್ರಿಕೆ’ ಪ್ರಿಂಟಿಗೆ ಹೋದರೆ ಸಾಕು, ಅತಿಕಾಮಿಯೊಬ್ಬನನ್ನು ವೇಶ್ಯೆ ಸೆಳೆಯುವಂತೆ ನನ್ನ ಜೊಯಿಡಾ, ನನ್ನ ಮುಂದುರ್ಲಿ ನನ್ನನ್ನು ಸೆಳೆಯುತ್ತಿದ್ದವು. ಈಗಲೂ ಹುಡುಗರು ಪ್ರಿಂಟಿಗೆ ಹೊರಡುತ್ತಿದ್ದಂತೆಯೇ ನನಗೆ ಜೊಯಿಡಾ ನೆನಪಾಗುತ್ತದೆ. ಗಮನಿಸಿ ನೋಡಿ, ಅದೆಷ್ಟು ಅಲೆದರೂ ಕಾಡೆಂಬುದು ತನ್ನ ನಿಗೂಢತೆಯನ್ನು ತೆರೆದುಕೊಳ್ಳುತ್ತ ಹೋಗುತ್ತದೆ. ಹಾಗಂತ, ನಾನು ಕಾಡಿನಲ್ಲಿ ಟ್ರೆಕ್ಕಿಂಗು, ಚಾರಣ ಅಂತೆಲ್ಲ ಏನೂ ಮಾಡುವುದಿಲ್ಲ. ಸುಮ್ಮನೆ ನಡೆಯುತ್ತಾ ಹೋಗುತ್ತೇನೆ. ಅಷ್ಟು ಸಾಕು, ಮನಸ್ಸಿಗೆ ತುಂಬ ಹಿತವಾಗುತ್ತದೆ.

ನನಗಿರುವ ಹಾಬಿಗಳನ್ನೆಲ್ಲ ವಿವರಿಸಿದರೆ, ಅದೊಂದು ಪುಸ್ತಕವೇ ಆದೀತು. Once again, ಮಾತು ಕಂಪಾಲಾದ ಫುಟ್‌ಪಾತ್‌ನ ಕಡೆಗೆ ಹೊರಳಲಿ. ಆ ಹಳೇ ಪುಸ್ತಕದ ಅಂಗಡಿಯ ಮುಂದೆ ಕುಕ್ಕರಗಾಲಿನಲ್ಲಿ ಕುಳಿತೆ. ಇಂಥದ್ದೇ ಬೇಕು ಅಂತಿರಲಿಲ್ಲ. ಪುಸ್ತಕ ಕೆದಕುತ್ತಾ ಹೋದೆ. ನನ್ನ ಅಭಿರುಚಿಯನ್ನು ಅಂಗಡಿಯವನು ಗಮನಿಸುತ್ತಾ ಇದ್ದ. ಆಮೇಲೆ ಸಟಕ್ಕನೆ ಆ ರಾಶಿಯಿಂದ ಒಂದು ಮ್ಯಾಗಝೀನ್ ಹಿರಿದು, “ಇದು ಬೇಕಾ?" ಅಂದ. ಹೆಚ್ಚೆಂದರೆ, ಇನ್ನೂರೈವತ್ತು-ಮುನ್ನೂರು ರುಪಾಯಿ ಇರಬಹುದು ಅದು. ಸುಮ್ಮನೆ ತಿರುವಿ ಹಾಕಿ, ‘ಕೊಟ್ಟೇಬಿಡು’ ಅಂದೆ. ಅದೇ ‘Blod’ ವಿಶೇಷಾಂಕ. ಉಗಾಂಡಾದಿಂದ ತಂದವನು, ಅದನ್ನೊಂದು ಜಾಗೆಯಲ್ಲಿರಿಸಿದೆ. ತಕ್ಷಣ ಅದರ ಬಗ್ಗೆ ಬರೆಯಲಿಲ್ಲ. ಹಾಗೆ ಬರೆಯಲೂಬಾರದು. ಒಂದು ಸಬ್ಜೆಕ್ಟ್ ಕೈಗೆ ನಿಲುಕಿತೋ? ಅದನ್ನು ಸುಮಾರು ಕಾಲ ಮಾವಿನ ಕಾಯಿಯಂತೆ ‘ಅಡ’ ಹಾಕಬೇಕು. ಆ ಬಗ್ಗೆ ತಕ್ಷಣಕ್ಕೆ ನೀವು ಬರೆದುಬಿಟ್ಟಿರಿ ಅಂತಿಟ್ಟುಕೊಳ್ಳಿ. ಅದು ನಿಗೂಢ ಮತ್ತು ಚೆಂದದ ಹುಡುಗಿ ತನ್ನ ಬಹಿರಂಗ-ಅಂತರಂಗದ ರಹಸ್ಯಗಳನ್ನೆಲ್ಲ ಒಂದೊಂದಾಗಿ ಹೊರ ಹಾಕುತ್ತಾಳಲ್ಲ? ಹಾಗೆ ಆಗುವುದಿಲ್ಲ. ಫಕ್ಕನೆ ಸಂತೆಯ ಸೂಳೆಯೊಬ್ಬಳು ಹಲ್ಲು ಕಿರಿದು, ಎದೆಯ ಮೇಲಿನ ಸೆರಗು ಜಾರಿಸಿಬಿಟ್ಟಂತಾಗುತ್ತದೆ. ಇದ್ದಕ್ಕಿದ್ದಂತೆ ‘Blod’ ವಿಶೇಷಾಂಕ ಹುಡುಕಲಾರಂಭಿಸಿದೆ. ಅದು ಪಶ್ಚಿಮ ಆಫ್ರಿಕಾದ ವಜ್ರ ಮತ್ತು ವಜ್ರಕ್ಕಾಗಿ ನಡೆದ ಯುದ್ಧಗಳ ಕುರಿತಾದ ಅದ್ಭುತ ವಿಶೇಷಾಂಕ. All about diamond wars. ಉಗಾಂಡಕ್ಕೆ ಹೋಗಿ ಬಂದು ಸುಮಾರು ಹದಿನಾಲ್ಕು ವರ್ಷಗಳಾಗಿವೆ. ಈಗ ಯಾಕೆ ಕೆದರಿಕೊಂಡಿದ್ದೇನೋ ಗೊತ್ತಿಲ್ಲ. ಖಾಯಿಲೆಯಿಂದ ಎದ್ದು ಕುಳಿತ ನಂತರ, ಮೊದಲ ಬಾರಿಗೆ ತುಂಬ ಶ್ರದ್ಧೆಯಿಂದ ಆ ಕೆಲಸಕ್ಕೆ ಕುಳಿತಿದ್ದೇನೆ.

ಆ ಬಗ್ಗೆ ಸಾಕಷ್ಟು leg work ಮಾಡಿದ್ದೇನೆ. ಆದರೆ ಅದೊಂದು ವಿಶೇಷವಾದ ಮ್ಯಾಗಝೀನ್‌ನ special issue ಬೇಕು. ಅದಿಲ್ಲದೆ ನಾನು ಅತ್ಯಂತ ಪ್ರೀತಿಯ ಆ subject ಬಗ್ಗೆ ತೋಳಗಾತ್ರದ ಕೃತಿ ಬರೆಯಲಾರೆ. ಆದರೆ, ಎಷ್ಟು ಹುಡುಕಿದರೂ ಅದು ಸಿಗುತ್ತಿಲ್ಲ. ಸಾಮಾನ್ಯವಾಗಿ ಒಂದು ದೇಶಕ್ಕೆ ಹೋದರೆ ಅದರ ಪತ್ರಿಕೆ, ಅಲ್ಲಿನ ಪುಸ್ತಕಗಳು, ಫೊಟೋಗಳು ಮುಂತಾದ ಏನ್ನೆಲ್ಲ ನನ್ನೊಂದಿಗೆ ಗುಡ್ಡೆ ಮಾಡಿ ಹಿಡಿದುಕೊಂಡು ಬರುತ್ತೇನೆ. ಹಿಂತಿರುಗಿದ ದಿನವೇ ಆದ್ಯ ಕರ್ತವ್ಯವೆಂಬ ಹಾಗೆ, ಅವೆಲ್ಲವುಗಳನ್ನೂ ಒಂದೆಡೆ ಸೇರಿಸಿ, ಕಟ್ಟಿನ boxಗೆ ಹಾಕಿ, ಅದರ ಮೇಲೆ ಆ ದೇಶದ ಹೆಸರು ಬರೆದು ಎತ್ತಿಡುತ್ತೇನೆ. ಅದು ಹೇಗಾಯಿತೋ ಗೊತ್ತಿಲ್ಲ. ಉಳಿದವೆಲ್ಲ ಇವೆ: ‘Blod’ ಹೊರತು. ಇಂಟರ್‌ನೆಟ್‌ನಲ್ಲಿ ಹುಡುಕಿ ಖರೀದಿಸೋಣವೆಂದರೆ ಸುಮಾರು ಸಾವಿರ ಡಾಲರ್‌ನಷ್ಟು ರೇಟು ಹೇಳುತ್ತಾರೆ. ಉಗಾಂಡಾದಲ್ಲಿರುವ ಕನ್ನಡದ ಕುಟುಂಬವೊಂದಕ್ಕೆ mail ಕಳಿಸಿ ವಿನಂತಿಸಲಾ? ಅದೇಕೋ, ಕೊಂಚ ಸಂಕೋಚ. ಹೀಗೆ ವಿಲಗುಟ್ಟುವ ಪರಿಸ್ಥಿತಿಯಲ್ಲೇ ನನ್ನ ಸಹೋದ್ಯೋಗಿ ವೀರೇಶ್ ಹೊಗೆಸೊಪ್ಪಿನವರನನ್ನು ಕರೆದು “ಎಲ್ಲಾದರೂ ಈ ಭಯಂಕರ ರಾಶಿಯಲ್ಲಿ ‘Blod’ ಸಿಕ್ತದೇನೋ ನೋಡಪ್ಪಾ..." ಅಂದೆ. ಅಂದವನು ಮತ್ತೇನೋ ಕೆಲಸದಲ್ಲಿ ಮುಳುಗಿ ಹೋದೆ. ಬರೀ ಹದಿನೈದು ನಿಮಿಷ: “ಸರ್, ಇದೇನಾ ನೀವು ಹುಡುಕ್ತಿರೋದು!" ಅಂತ ಕೈಯಲ್ಲಿ ಹಿಡಿದುಕೊಂಡು ಬಂದೇಬಿಟ್ಟ. I am thrilled. ಇಷ್ಟು ಬೇಗ ಸಿಕ್ಕಬಹುದು ಅಂತ ಖಂಡಿತ ಅಂದುಕೊಂಡಿರಲಿಲ್ಲ. ಅದು ಸಿಕ್ಕ ಮೇಲೆ ಇನ್ನೇನಿದೆ? simple ಆದ ಹುರುಪು.

ಮೊನ್ನೆ ಅದ್ಯಾರೋ ಸಂಪಾದಕ ಬರೆದಿದ್ದನಂತೆ. ಎಸ್ಸೆಂ ಕೃಷ್ಣ ಅವರ ಜೊತೆ ನಾನು ಇಸ್ರೈಲ್‌ಗೆ ಹೋಗಿದ್ದೆ. ತಕ್ಷಣ ಇಸ್ರೈಲ್ ಬಗ್ಗೆ ಬರೆದೆ. ಅಲ್ಲಿ ನಡೆದ ಪ್ರತೀ ಪತ್ರಿಕಾಗೋಷ್ಠಿಯ ಬಗ್ಗೆಯೂ ಅಂದೇ ವರದಿ ಮಾಡಿದೆ. ಆದರೆ ನನ್ನೊಂದಿಗೆ ಬಂದಿದ್ದ ವಾರ ಪತ್ರಿಕೆಯೊಂದರ ಸಂಪಾದಕ ಸುದ್ದಿಗೋಷ್ಠಿಗಳಿಗೆ ಬರುತ್ತಲೇ ಇರಲಿಲ್ಲ. ಆತ ಏನನ್ನೂ ಬರೆಯಲಿಲ್ಲ. ರೂಮು ಸೇರಿ ಗುಂಡು ಹಾಕಿ ಮಲಗುತ್ತಿದ್ದ ಅಂತೆಲ್ಲ ಬರೆದಿದ್ದಾನೆ ಎಂದು ನಮ್ಮ ಹುಡುಗರು ಹೇಳಿದರು. ಆತನ ಸಂಪಾದಕತ್ವದ ಆ ದಿನಪತ್ರಿಕೆ ಅಸಲಿಗೆ ಇನ್ನೂ ಬರುತ್ತಿದೆಯಾ? ಗೊತ್ತಿಲ್ಲ. ಉಳಿದೆಲ್ಲ ಪತ್ರಿಕೆ ತರಿಸುತ್ತೇನೆ. ಓದುತ್ತೇನೆ. ಅವನ ದಿನಪತ್ರಿಕೆ ನನ್ನ ಕಣ್ಣಿಗೆ ನಿಜವಾಗ್ಯೂ ಬಿದ್ದಿಲ್ಲ.

ಆದರೆ ಆತ ಎಸ್ಸೆಂ ಕೃಷ್ಣರೊಂದಿಗೆ ಇಸ್ರೈಲ್‌ಗೆ ಬಂದದ್ದು ನೆನಪಿದೆ. ಉಳಿದೆಲ್ಲ ಪತ್ರಿಕೆಗಳ ಪ್ರತಿನಿಧಿಗಳು ಕೃಷ್ಣ ಅವರೊಂದಿಗೆ ಭಾರತಕ್ಕೆ ಹಿಂತಿರುಗಿಬಿಟ್ಟರು. ಅವರದು ಒಂದೂವರೆ ದಿನದ ವಿಸಿಟ್. ಆದರೆ, ನಾನು ಇಸ್ರೈಲ್‌ಗೆ ಹೋದವನು ಅಲ್ಲಿ ವಾರಗಟ್ಟಲೆ ಇದ್ದೆ. ‘ನೆತ್ತರು ಮೆತ್ತಿದ ಗೋಡೆಯಾಚೆಗೆ’ ಕಾದಂಬರಿಗೆ ಸಂಬಂಧಿಸಿದಂತೆ ತುಂಬ ಮಾಹಿತಿ ಕಲೆ ಹಾಕಿದೆ. ಗೆಳೆಯರನ್ನು ಸೃಷ್ಟಿಸಿಕೊಂಡೆ. ಈಗಲೂ ಅವರ ಸಂಪರ್ಕದಲ್ಲಿದ್ದೇನೆ. ನೂರಾರು ಪುಟಗಳ ಟಿಪ್ಟಣಿ ಮಾಡಿಕೊಂಡಿದ್ದೇನೆ. ಹೇಳಿದೆನಲ್ಲ? ಮಾವು ‘ಮಾಯ’ ಬೇಕು. ಮಾಗಿದ ಹಣ್ಣು ತಿಂದರೇನೇ ಚೆನ್ನ. ಹೋದ ದಿನವೇ ಕೆದರಿ ಮುಗಿಸಿದರೆ, ಅಷ್ಟು ಮಾತ್ರದ ಕೆಲಸಕ್ಕೆ ಪತ್ರಿಕೆಯ ಸಂಪಾದಕರೇ ಹೋಗಬೇಕಾ ಇಸ್ರೈಲ್‌ಗೆ? ಒಬ್ಬ ಆಫೀಸ್ ಬಾಯ್ ಹೋದರೂ ಸಾಕು.
ಅಲ್ವಾ?

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 18 February, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books