Ravi Belagere
Welcome to my website
ನಿಮ್ಮದು ಎಂಥ ಮ್ಯಾರೇಜು? ಶುದ್ಧ ಅರೇಂಜ್‌ಡಾ? ನೀವೇ ಮಾಡಿಕೊಂಡ ಲವ್ ಮ್ಯಾರೇಜಾ? live in relationshipನಂತಹ  ಗಾಂಧರ್ವ ವಿವಾಹನಾ? ‘ಲವ್ ಕಮ್ ಅರೇಂಜ್ಡ್’ ಮದುವೆಯಾ? ಅಂತರ್‌ಜಾತೀಯ ವಿವಾಹವಾ? ಅಂತರ್‌ಧರ್ಮೀಯ ವಿವಾಹವಾ? (Request :ಜಾತಿಗಳ ಪುಸ್ತಾಪ ಮಾಡಬೇಡಿ) Love, run and marry ಎಂಬಂತೆ ಮನೆಗಳನ್ನು ಬಿಟ್ಟು ಹೋಗಿ ಆದ ಮದುವೆಯಾ? ಎಂಥ ಮದುವೆಯಾಗಿದ್ದರೂ ಅಡ್ಡಿಯಿಲ್ಲ. ಅದಕ್ಕೆ ಗೌರವವಿದೆ. ಒಂದು inland letterನಷ್ಟು ಬರವಣಿಗೆಯನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆಯಿರಿ. ಜೊತೆಗೆ ಇಬ್ಬರೂ ಇರುವ ಫೊಟೋ ಕಳಿಸಿ. mail ಮಾಡೋದಾದರೆ [email protected]ಗೆ ಮಾಡಿ.
Home About Us Gallery Books Feedback Prarthana Contact Us

Buy Ravi Belagere Books online

ಒಮ್ಮೆ ಒಳ ಹೊಕ್ಕ ತೇಜಸ್ವಿ ಕಂಪ್ಯೂಟರಿನಿಂದ ಹೊರಕ್ಕೇ ಬರಲಿಲ್ಲ ಅಲ್ವೆ?

ಅದು ನಿದ್ರೆಯ ಕ್ರಮ. ಸ್ಲೀಪಿಂಗ್ ಪ್ಯಾಟರ್ನ್ ಅಂತಾರೆ. ಅವನು ಗಿರೀಶ್ ಹಂಪಾಳಿ, ಮೊನ್ನೆ chat ಮಾಡುವಾಗ ಅದೇ ಅಂದ. ನಿನ್ನ ಸ್ಲೀಪಿಂಗ್ ಪ್ಯಾಟರ್ನ್ ಮುಂಚಿನಂತೆ ಆಗಲೇ ಇಲ್ಲ ಧಣೀ. ಅದನ್ನು ಸರಿ ಮಾಡಿಕೋ ಅಂದ. ಅವನೀಗ ಆಸ್ಟ್ರೇಲಿಯಾದ ಸಿಡ್ನಿಯಲ್ಲಿದ್ದಾನೆ. ಆರೇಳು ತಿಂಗಳು ಅಲ್ಲೇ ಇರುತ್ತಾನೆ ಅಂತ ಕಾಣುತ್ತೆ. ಕೆಲವೊಮ್ಮೆ ಫೋನ್ ಮಾಡುತ್ತಾನೆ. ಅಥವಾ ಇಬ್ಬರೂ ಕಂಪ್ಯೂಟರ್‌ಗಳ ಮುಂದೆ ಕುಳಿತು chat ಮಾಡುತ್ತಿರುತ್ತೇವೆ. ಅದೊಂದು ಜಮಾನಾ ಇತ್ತು. ನನಗೆ ಕಂಪ್ಯೂಟರ್ ಕಂಡರೆ ಆಗುತ್ತಿರಲಿಲ್ಲ. ಒಮ್ಮೆ ಮೂಡಿಗೆರೆಗೆ ಹೋದವನು, ಅಲ್ಲೇ ಸನಿಹದಲ್ಲೇ ಇದ್ದ, ತೇಜಸ್ವಿ ಅವರ ತೋಟದ ಮನೆಗೆ ಹೋಗಿದ್ದೆ. ಅವರು ತುಂಬ ಏಕಾಗ್ರತೆಯಿಂದ ಕಂಪ್ಯೂಟರಿನ ಮುಂದೆ ಕುಳಿತು ಕೆಲಸ ಮಾಡುತ್ತಿದ್ದರು. ಅದು ಮುಗಿಯಲಿ, disturb ಮಾಡೋದು ಬೇಡ ಅಂತ ನಾನು ಸುಮ್ಮನೆ ಕುಳಿತುಕೊಂಡೆ. ಅದು ಮುಗಿಯಿತು. 'ಏನ್ರೀ, ಯಾವಾಗ ಬಂದ್ರಿ? ಪಾಪಿಗಳು ಕಣ್ರೀ ನೀವು.... ಫೋನ್ ಮಾಡಿ, ತಿಳಿಸಿ ಬರೋದಲ್ವಾ? ಹೀಗೆ ಅಡ್ಡಾದಿಡ್ಡಿ ಬಂದ್ರೆ ಗತಿ?' ಅಂದರು. ಮನೆಯವರನ್ನು ಕರೆದು, ಪರಿಚಯಿಸಿ ಅವರಿಗೆ ಕಾಫಿ ಮಾಡಲು ಹೇಳಿ ನಮ್ಮೊಂದಿಗೆ ಹರಟೆಗೆ ಕುಳಿತರು.
“ಯಾಕೋ ನನಗೆ ಹಾಗಂತ ಅನ್ನಿಸ್ತಾ ಇದೆ. ಒಂದರ್ಥದಲ್ಲಿ ನೀವೇ ತಪ್ಪು ಮಾಡಿದಿರಿ. ನಿಮ್ಮ ‘ಕಿರಗೂರಿನ ಗಯ್ಯಾಳಿಗಳು’, ‘ಕರ್ವಾಲೋ’, ‘ಕುಬಿ ಮತ್ತು ಇಯಾಲಾ’ ಮುಂತಾದವೆಲ್ಲ ಎಷ್ಟು ಚೆನ್ನಾಗಿದ್ದವು. ತೀರ ಮ್ಯಾಗ್ನಮ್ ಓಪಸ್ ಅನ್ನೋ ಹಾಗೆ ನೀವು ‘ರಾಮಾಯಣ ದರ್ಶನಂ’ ತರಹದ, ರೆಟ್ಟೆ ಗಾತ್ರದ ಕೃತಿ ಬರೀಬೇಕು ಅಂತ ನಾನು ಹೇಳ್ತಿಲ್ಲ. ಚಿಕ್ಕದಾಗಿ ಏನೋ ಬರೆದರೆ ಅದರಲ್ಲಿ ಒಂದು ಹೊಳಪು, ಒಂದು ಅಚ್ಚರಿ ಇರುತ್ತಿದ್ದವು. ಆದರೆ ನೀವು ಪೆನ್ನು ಮುಟ್ಟಲೇ ಇಲ್ಲ. ಈ ಕಂಪ್ಯೂಟರಿಗೆ ಗಂಟು ಬಿದ್ದಿರಿ. ಈ ಮಾತು ನೀವು ಒಪ್ತೀರೋ ಇಲ್ಲವೋ ಗೊತ್ತಿಲ್ಲ. ಕಂಪ್ಯೂಟರು ನಿಮ್ಮ ಕ್ರಿಯಾಶೀಲತೆಯನ್ನು ಹಾಳು ಮಾಡಿತು. ಆಮೇಲೂ ನೀವು ಬರೆದಿರಿ: ಕಂಪ್ಯೂಟರಿನಲ್ಲಿ. ಅದ್ಯಾವುದರಲ್ಲೂ ಮೊದಲಿನ ರುಚಿ ಉಳಿಯಲಿಲ್ಲ. ನನ್ನ ಕುತೂಹಲವನ್ನ ಅವು sustain ಮಾಡಲಿಲ್ಲ" ಅಂದೆ. ತೇಜಸ್ವಿಗೆ ಕೊಂಚ ಸಿಟ್ಟು ಬಂತು. “ಏನ್ರೀ ಹೀಗೆಲ್ಲ ಮಾತಾಡ್ತೀರಿ?" ಅಂದರು.

I think, ತೇಜಸ್ವಿ ತೀರ ಆ ಪರಿ ಕಂಪ್ಯೂಟರಿಗೆ ತಮ್ಮನ್ನು ತಾವು ಅರ್ಪಿಸಿಕೊಳ್ಳಬಾರದಿತ್ತು. ಅನಂತಮೂರ್ತಿಯವರು ಕೊಂಚ ಕಂಪ್ಯೂಟರಿನ ಕಡೆಗೆ ವಾಲಿದ್ದರು. ಆದರೆ ಈ ಪರಿ ಅದಕ್ಕೆ ಬಲಿಯಾಗಲಿಲ್ಲ. ಲಂಕೇಶರ ಮಾತು ಬಿಡಿ. ನನಗೆ ಗೊತ್ತಿದ್ದಂತೆ ಅವರು ಕಂಪ್ಯೂಟರ್ ಮುಟ್ಟಲೇ ಇಲ್ಲ. Atleast ಅದರಲ್ಲಿ ಏನನ್ನೂ ಬರೆಯಲಿಲ್ಲ. ಒಂದು ಅಚ್ಚರಿಯ ಸಂಗತಿಯೆಂದರೆ, ನನ್ನ ಗೆಳೆಯರಾದ ಜೋಗಿ, ಉದಯ ಮರಕಿಣಿ, ವಸುಧೇಂದ್ರ ಮುಂತಾದವರೆಲ್ಲ ಕಂಪ್ಯೂಟರಿನಲ್ಲೇ ಕತೆ, ಕವಿತೆ, ವರದಿ, ಕಾದಂಬರಿ-ಇತ್ಯಾದಿಗಳನ್ನೆಲ್ಲ ಬರೆಯುತ್ತಾರೆ. ಅವನು, ವಸುಧೇಂದ್ರ ಇದ್ದಾನಲ್ಲ? ಕಾರಿನಲ್ಲಿ ಕುಳಿತು ಆಫೀಸಿಗೆ ಹೋಗುತ್ತಾ ದಾರಿಯುದ್ದಕ್ಕೂ ಕಥೆ ಬರೆಯುತ್ತಾನೆ! ಹೀಗಾಗಿ ಒಂದ್ಯಾವುದೋ ಸಂಕಲನವನ್ನು ಅವನು ಕಥೆ ಬರೆಯಲು ಸಹಾಯ ಮಾಡಿದ ತನ್ನ ಕಾರಿನ ಡ್ರೈವರ್‌ಗೆ ಅರ್ಪಣೆ ಮಾಡಿದ್ದ. ‘ಇದೇನೋ ಮಾರಾಯಾ? ಅಂತ ಉದ್ಗರಿಸಿದ್ದೆ. ವಸುಧೇಂದ್ರ ನನ್ನ ಜಿಲ್ಲೆಯ ಸಂಡೂರಿನಲ್ಲಿ ಬೆಳೆದವನು. ಅದಕ್ಕಿಂತ ಹೆಚ್ಚಾಗಿ ಅವನು ನನ್ನ ಪಕ್ಕದ ಮನೆಯ ಹುಡುಗ. ಅವನ ಹತ್ತಿರದ ಬಂಧುವೊಬ್ಬರು ನನ್ನ ಪಕ್ಕದ ಮನೆಯಲ್ಲೇ ಇದ್ದರು. ರಜಾದಿನಗಳಲ್ಲಿ, ಅವರ ಮನೆಗೆ ಬರುತ್ತಿದ್ದನಂತೆ. “ಆವಾಗ ನನ್ನನ್ನು ಮಾತನಾಡಿಸಬಾರದಿತ್ತೇನೋ?" ಅಂತ ಕೇಳಿದ್ದಕ್ಕೆ, “ಅಪ್ಪಾ ಮಾರಾಯ, ನಿನ್ನ ಹತ್ರಕ್ಕೆ ಬರಲಿಕ್ಕೇ ನಮಗೆ ಭಯ ಆಗ್ತಿತ್ತು. ಹಾಗಿದ್ದೆ ನೀನು. ಒಳ್ಳೆ ರಾವಣಾಸುರ ಇದ್ಹಾಂಗೆ ಇದ್ದೆ" ಅಂದು ಮೊನ್ನೆ ಯಾವಾಗಲೋ ನಕ್ಕ. ನಿಜ, ಅವನು ನನಗಿಂತ ಸಾಕಷ್ಟು ಚಿಕ್ಕವನು. ಅಲ್ಲದೆ, ಆಗ ನನ್ನ ಬಗ್ಗೆ ಧಾರಾಕಾರವಾಗಿ ಗುಮಾನಿ, ಭಯ, ಅಚ್ಚರಿ, ವದಂತಿ ಮುಂತಾದವೆಲ್ಲ ಹುಟ್ಟಿಕೊಂಡಿದ್ದವು. ಆಸುಪಾಸಿನಲ್ಲಿ ಯಾವುದೇ ಹುಡುಗಿ ‘ದೊಡ್ಡವಳಾದರೂ’ ಸಾಕು, ಅವಳ ತಾಯಿ, ಹುಡುಗಿಗೆ ಮೊದಲು ನೀಡುತ್ತಿದ್ದ ಎಚ್ಚರಿಕೆ ಅಂದರೆ, “ಟೀಚರ್ ಮಗ ರವಿ ಇದ್ದಾನಲ್ಲ? ಅವನ ಹತ್ತಿರಕ್ಕೆ ಮಾತ್ರ ಹೋಗಬೇಡ. ಎದುರಿಗೆ ಬಂದರೆ ಅವನನ್ನ ಮಾತೂ ಆಡಿಸಬೇಡ!"

“ಹೌದಾ, ಯಾಕೆ ಮಾತನಾಡಿಸಬಾರದು? ಅದೇನಾಗುತ್ತೋ ನೋಡೇಬಿಡೋಣ" ಅಂತ ಆ ಹುಡುಗಿಯರು ನನ್ನ ಹತ್ತಿರಕ್ಕೆ ಬರುತ್ತಿದ್ದರು. ಯಾವುದನ್ನು ಮಾಡಕೂಡದು ಅನ್ನುತ್ತಾರೋ, ಅದನ್ನೇ ಮಾಡುವುದು ಮನುಷ್ಯನ ಸಹಜ ಸ್ವಭಾವ. ಆ ಕಾಲದ ನನ್ನ ಗೆಳತಿಯರು, ದಟ್ಟ ಬೆಳದಿಂಗಳಿನಲ್ಲಿ, ತುಂಗಭದ್ರೆಯ ಪಕ್ಕದ ಸಕ್ಕರೆ ಮರಳಲ್ಲಿ ಆಡುತ್ತಿದ್ದ ಪಾರಿಜಾತದ ಹೂವಿನಂತಹವರು. ತಬ್ಬಿ ನಿಲ್ಲುತ್ತಿದ್ದ, ಅಕ್ಕರೆಯ ಧಾರೆ ಎರೆಯುತ್ತಿದ್ದ ಆ ಚೆಂದನೆಯ ಗೆಳತಿಯರನ್ನು ಏನು ಮಾಡಬೇಕು ಅಂತ ಗೊತ್ತಾಗದೆ ಗೊಂದಲದಲ್ಲಿರುತ್ತಿದ್ದೆ ನಾನು. ಈಗ ನೆನೆಸಿಕೊಂಡರೆ ಏನಿದೆ? ಆ ಗೆಳತಿಯರೂ ಇಲ್ಲ, ತುಂಗಭದ್ರೆಯ ತೀರದಲ್ಲಿ ಆ ಸಕ್ಕರೆ ಮರಳೂ ಇಲ್ಲ. ಆ ದಟ್ಟ ಬೆಳದಿಂಗಳೂ ಇಲ್ಲ. ನನ್ನ ಇಷ್ಟ-ಅನಿಷ್ಟಗಳು ತನಗೆ ಸಂಬಂಧವೇ ಇಲ್ಲವೇನೋ ಎಂಬಂತೆ ಬದುಕು ಸಾಗುತ್ತಿದೆ.

ಬಿಡಿ, ಕಂಪ್ಯೂಟರಿನ ಸಂಗತಿಗೆ ಬರೋಣ. ನನ್ನ ಗೆಳೆಯರಾದ ಜೋಗಿ ಮತ್ತು ಮರಕಿಣಿ ಮೊದಲೆಲ್ಲ ಪೆನ್ನು ಹಿಡಿದು ಬರೆಯುತ್ತಿದ್ದರು. ಅದು ಹೇಗೆ ಕಂಪ್ಯೂಟರಿನ ಕಡೆಗೆ ಹೊರಳಿದರೋ ಗೊತ್ತಿಲ್ಲ. ಅದರ ಮೇಲೆಯೇ hammer ಮಾಡುತ್ತಾರೆ. ಚೆನ್ನಾಗಿಯೇ ಬರೆಯುತ್ತಾರೆ. ಇತ್ತೀಚೆಗೆ ನಮ್ಮ ರಾಜಕೀಯ ವರದಿಗಾರ ಆರ್.ಟಿ.ವಿಠ್ಠಲಮೂರ್ತಿ ಕೂಡ ಕಂಪ್ಯೂಟರಿನಲ್ಲಿ ಬರೆಯತೊಡಗಿದ್ದಾನೆ. ಒಂದರ್ಥದಲ್ಲಿ ಅದು ಅನುಕೂಲವೂ ಆಗಿದೆ. ಪುಣ್ಯಾತ್ಮನ ಕೈ ಬರಹ ನೋಡಬೇಕಿತ್ತು. ಅವನು ವರದಿ ಬರೆದು ಕೊಡುತ್ತಿದ್ದ, ಹೊರಳಿ ಅವನಿಗೇ ಓದಲು ಕೊಟ್ಟರೆ ದೇವರಾಣೆ, ಅವನಿಗೇ ಅದೇನು ಬರೆದಿದ್ದಾನೆ ಅಂತ ಗೊತ್ತಾಗುತ್ತಿರಲಿಲ್ಲ. ಅಂಥ ಚೆಲುವಾದ ಹ್ಯಾಂಡ್‌ರೈಟಿಂಗ್ ಅದು. ಆದರೆ ಇವರೆಲ್ಲ ಕಂಪ್ಯೂಟರಿನ ಮೇಲೆ ಅಧಿಪತ್ಯ ಸಾಧಿಸಿ, ಸಾಕಷ್ಟು ಕ್ರಿಯೇಟಿವ್ ಆಗಿದ್ದಾರೆ. ನಮ್ಮ ಚಂದ್ರಶೇಖರ ಆಲೂರು ಮತ್ತು ನಾಗತಿಹಳ್ಳಿ ಮಾತ್ರ ಇವತ್ತಿಗೂ ನನ್ನ ಪಾರ್ಟಿ. ಅವರು ಕೈಯಲ್ಲೇ ಬರೆಯುತ್ತಾರೆ, ನನ್ನ ಹಾಗೆ. ಅದ್ಯಾವಾಗಲೋ, ಯಾರೋ ಹೇಳಿದ ನೆನಪು. ಕೈ ಬರಹಕ್ಕೂ, ನಿಮ್ಮ ಕ್ರಿಯೇಟಿವಿಟಿಗೂ ಒಂದು ಸೈಂಟಿಫಿಕ್ ಆದ ಸಂಬಂಧವಿದೆ. ನೀವು ಮೇಜಿನ ಮೇಲೆ ಹಾಳೆಯಿಟ್ಟುಕೊಂಡು ಪೆನ್ನಿನಿಂದ ಬರೆಯುತ್ತೀರಲ್ಲವಾ? ಹಾಗೆ ಪೆನ್ನು-ಹಾಳೆ ಬಳಸುತ್ತಿದ್ದಂತೆಯೇ ಮಿದುಳಿನಲ್ಲಿ ಯಾವುದೋ ಒಂದು ತೆರನಾದ ಸ್ರಾವ ಆಗುತ್ತದೆ. ಅದೇ ನಿಮ್ಮನ್ನು creative ಆಗಿ ಇಡುತ್ತದೆ. ಇದು ಕಂಪ್ಯೂಟರಿನಲ್ಲಿ ಟೈಪ್ ಕುಟ್ಟಿದಾಗ ಆಗುವುದಿಲ್ಲ ಎಂದು ಹೇಳಿದ್ದರು. ಇದನ್ನೆಲ್ಲ ನಾನು ಎಷ್ಟರಮಟ್ಟಿಗೆ ನಂಬುತ್ತೇನೆ ಎಂಬುದು ಬೇರೆ ಮಾತು. ಈ ಮಧ್ಯೆ ಒಮ್ಮೆ ತೇಜಸ್ವಿ ಫೋನ್ ಮಾಡಿದ್ದರು. “ಇಲ್ಲಿಗೆ ಬನ್ರೀ ನೀವೂ, ಒಂದು surprise ಕೊಡ್ತೀನೀ.." ಅಂದರು. ಅವರು ಕರೆದುದು ಮೂಡಿಗೆರೆಗಲ್ಲ. ಇಲ್ಲೇ ಬೆಂಗಳೂರಿನ ನಮ್ಮ ಪ್ರೆಸ್‌ಕ್ಲಬ್ ಹತ್ತಿರದ ಒಂದು ಕಟ್ಟಡದ ನೆಲಮಾಳಿಗೆಗೆ ಬನ್ನಿ ಅಂದಿದ್ದರು. ಆಯ್ತು ಅಂತ ನಾನು -ಮಮತಾ ಸಾಗರ್, ಅವಳ ಪತಿ ಶ್ಯಾಮ್ ಮುಂತಾದವರೆಲ್ಲ ಹೋದೆವು. ಮಮತಾಳ ಗಂಡ ತುಂಬ ಹೆಸರಾಂತ ಚಿತ್ರಗಾರ ಮತ್ತು ಶಿಲ್ಪಿ. ಅಲ್ಲಿಗೆ ಹೋಗಿ ನೋಡಿದರೆ, ಅದು ತೇಜಸ್ವಿಯವರ ಪೆಯಿಂಟಿಂಗ್‌ಗಳ ಎಗ್ಸಿಬಿಷನ್! ನಾನು ‘ಬಳಿರೇ ಭಳಾಪ್ಪ!’ ಅಂದೆ. ತೇಜಸ್ವಿ ವಿಚಿತ್ರ ಖಯಾಲಿಗಳ ಒಡೆಯ. ಅವರು ತುಂಬ ಚೆನ್ನಾಗಿ ಫೊಟೋ ತೆಗೆಯುತ್ತಿದ್ದರು. ಗ್ರೀಟಿಂಗ್ ಕಾರ್ಡ್ ಮಾಡುತ್ತಿದ್ದರು. ಅವರಿಗೆ ಬೇಟೆಯ ಖಯಾಲಿ ಇತ್ತು. ಸ್ಕೂಟರ್ ರಿಪೇರಿ ಮಾಡುತ್ತಿದ್ದರು. ಜೊತೆಗೆ ಕೃಷಿ! ಆದರೆ ನಿಜ ಹೇಳ್ತೀನಿ, ಹೀಗೆ ಯಾವತ್ತೋ ಒಂದು ದಿನ ಆರ್ಟಿಸ್ಟ್ ಆಗಿ ಹೊಸ ಅವತಾರವೆತ್ತಿ ನಿಂತುಬಿಡುತ್ತಾರೆ ಅಂದುಕೊಂಡಿರಲಿಲ್ಲ. ನಿಜಕ್ಕೂ ಅವರು ಚಿತ್ರಕಲಾವಿದರಾಗಿದ್ದಿದ್ದರೆ ನನಗೆ ತಕರಾರಿರುತ್ತಿರಲಿಲ್ಲ. ಅವರು ಪ್ರದರ್ಶನಕ್ಕೆ ಇಟ್ಟಿದ್ದ ಪ್ರತಿ ಚಿತ್ರವೂ ಕಂಪ್ಯೂಟರಿನಿಂದ ಹೊರ ತೆಗೆದಂಥವಾಗಿದ್ದವು. ಒಬ್ಬ ಚಿಕ್ಕ ಹುಡುಗನನ್ನು ಕಂಪ್ಯೂಟರಿನ ಮುಂದೆ ಕೂಡಿಸಿ ನೋಡಿ. photoshopನಲ್ಲಿ ಅವನು ಎಂಥ ಚಿತ್ರ-ಎಂಥ ಬಣ್ಣ ಬೇಕಾದರೂ ಮಾಡಿ ಮುಂದಿಡುತ್ತಾನೆ! ತೇಜಸ್ವಿ ಮಾಡಿದುದೂ ಅದನ್ನೇ. ಕಂಪ್ಯೂಟರ್ ಎಂಬುದು ಆ ಪರಿಯಾಗಿ ಅವರನ್ನು ಆವರಿಸಿಕೊಂಡುಬಿಟ್ಟಿತ್ತು. ಕುವೆಂಪು ಕೈ ಬರಹದ ‘ರಾಮಾಯಣ ದರ್ಶನಂ’ ಇದು ಅಂತ ಒಂದು ರೆಟ್ಟೆ ಗಾತ್ರದ ಗ್ರಂಥ ಹೊರ ತಂದರಲ್ಲ? ಅದೂ ಕೂಡ ಈ ಕಂಪ್ಯೂಟರ್ ಎಂಬ ಮಾಯಾವಿಯ ಕೆಟ್ಟ ಸಂತಾನವೇ! ನನಗೆ ಕಂಪ್ಯೂಟರ್ ಇಷ್ಟವಿಲ್ಲ ಅಂತೇನಿಲ್ಲ. ಬಂದು ನೋಡಿ, ತುಂಬ ಅದ್ಭುತವಾದ ‘ಮ್ಯಾಕ್’ ಇದೆ. ಸ್ಪೀಕರ್‌ಗಳಿವೆ. ಐ-ಪಾಡ್‌ಗಳಿವೆ, ಐ ಪ್ಯಾಡ್‌ಗಳಿವೆ, ಲ್ಯಾಪ್‌ಟಾಪ್ ಇದೆ. ಐ-ಫೋನ್‌ಗಳಿವೆ. You name it. ಅವೆಲ್ಲವೂ ನನ್ನಲ್ಲಿವೆ. ನಾನೇ ಬಳಸುತ್ತೇನೆ. ಆದರೆ, ಜಪ್ಪಯ್ಯ ಅಂದರೂ ಕೈ ಬರಹ ಬಿಟ್ಟು ಅವುಗಳ ಮೇಲೆ ಬರೆಯುವುದಿಲ್ಲ: never! ಕಂಪ್ಯೂಟರ್ ಎಂಬುದು ತುಂಬ ಚೆಂದದ ಸಂಗಾತಿ. ನಾನೇ ಒಮ್ಮೆ ಕಂಪ್ಯೂಟರಿನ ಮುಂದೆ ಕುಳಿತರೆ ಐದಾರು ಗಂಟೆ ಅದರಲ್ಲಿ ಮುಳುಗಿ ಹೋಗುತ್ತೇನೆ. ಇಂಟರ್‌ನೆಟ್ ಎಂಬುದು ಯಾರೂ ಊಹಿಸದ ಮಾಯಾಲೋಕ. ಅದನ್ನು ಬಳಸಬಹುದು, ನೆರವು ಪಡೆದು ಅಧ್ಯಯನ ಮಾಡಬಹುದು, ಸಾವಿರ-ಸಾವಿರ ಕೌತುಕಗಳನ್ನು ಕಾಣಬಹುದು. ಇಲ್ಲಿಯೇ ಕುಳಿತು ಜಗತ್ತಿನ ಯಾವ ಮೂಲೆ, ಯಾವ ದೇಶ, ಯಾವ ಭಾಷೆ? Yes, ಎಲ್ಲಿಂದಲ್ಲಿಗೆ ಬೇಕಾದರೂ ಗಾಳ ಹಾಕಬಹುದು. ನೀವು ಇದನ್ನೆಲ್ಲ ಮಾಡಿ. ಆದರೆ ನೀವು ಅದನ್ನೇ ಮೈಮೇಲೆ ಸುರಿದುಕೊಂಡು, ಅದರಿಂದಲೇ ಆಯ್ದು, ಅದನ್ನೇ ಬಳಸಿ, ಅದರಿಂದಲೇ ಬರೆದು, ಏನೂ ಗುಟ್ಟು ಬಿಟ್ಟು ಕೊಡದೆ, “ನಾನು ಭಯಂಕರ ಕ್ರಿಯಾಶೀಲ" ಎಂಬಂತೆ ಪೋಸು ಕೊಟ್ಟರೆ? No. ಅದೆಲ್ಲ ಮಾಡಬಾರದು.


ಅಂಥವರನ್ನು ನಾನು ಕರೆಯುವುದೇ ‘copy and paste writers’ ಅಂತ. ಆ ಸಾಲಿನಲ್ಲಿ ನಿಂತ ನಮ್ಮದೇ ಹುಡುಗ ಮಣಿಕಾಂತ. ಅವನು ನನಗೆ ತುಂಬ ಇಷ್ಟದ ಹುಡುಗ. ಕೊಂಚ ಶ್ರವಣ ದೋಷವಿದೆ. ಆದರೆ ವಿಪರೀತ ದುಡಿಯುವ ತಾಕತ್ತು-ಶ್ರದ್ಧೆ ಎರಡೂ ಇವೆ. ಹಾಗೆ ಶ್ರವಣ ದೋಷ ಇದ್ದಾಗ್ಯೂ ಅವನು ಅನೇಕರನ್ನ, ಅದರಲ್ಲೂ ಚಿತ್ರ ಜಗತ್ತಿನ ನಾಯಕ-ನಾಯಕಿಯರನ್ನು ಸಂದರ್ಶಿಸಿ ಬರೆದದ್ದು ನೋಡಿದಾಗ, ತುಂಬ ಖುಷಿಯಾಗಿತ್ತು. ಬಹುಶಃ ಆ ಕಾರಣದಿಂದಾಗಿಯೇ ಅವನು ಇಂಜಿನೀರಿಂಗ್ ಮುಗಿಸಲಾಗಲಿಲ್ಲ. ಮೊದಲು ಅವನು ತನ್ನದೇ ಊರಾದ ಮಂಡ್ಯದಲ್ಲಿದ್ದ. ತಂದೆಯೊಂದಿಗೆ ಏನೋ ವಿರಸ. ಮಂಡ್ಯದಿಂದ ಹೊರಟವನು ಬೆಂಗಳೂರಿಗೆ ಬಂದ. ನೇರವಾಗಿ ನನ್ನ ಮನೆಗೇ ಬಂದ. ಹೀಗೆ ಬಂದು ಕೊರಳಿಗೆ ಬೀಳುವವರು ಅನೇಕರಿದ್ದಾರೆ. ಆದರೆ ನನಗೆ ಉಳಿದೆಲ್ಲರಿಗಿಂತ ಇಷ್ಟವಾದವನು ಮಣಿಕಾಂತ. ಅವನು ಕಷ್ಟಪಡುತ್ತಾನೆ, ಬರೆಯುತ್ತಾನೆ ಎಂಬುದು ಒಂದು ಕಾರಣವಾದರೆ, ಅವನಿಗಿದ್ದ ಇತರೆ ಸಮಸ್ಯೆಗಳು, ಅವುಗಳನ್ನು ಮೀರಲಿಕ್ಕೆ ಅಡ್ಡ ಬರುತ್ತಿದ್ದ ಆ ದೈಹಿಕ ಸಮಸ್ಯೆ-ಇದು ಎರಡನೇ ಕಾರಣ. ಉಳಿದೆಲ್ಲರ ಮೇಲೆ ಕೂಗಾಡಿದಂತೆ ಅವನನ್ನೂ ಬಯ್ಯುತ್ತಿದ್ದೆ. ಅವನೂ ನನ್ನ ಸಿಟ್ಟು ಅರ್ಥ ಮಾಡಿಕೊಂಡು ಎಂದಿನಂತೆಯೇ ಪಕ್ಕದ ಟೇಬಲ್ಲಿನ ಮುಂದೆ ಕೂತು ಬರೆಯುತ್ತಿದ್ದ. ಕೆಲವು ಬಾರಿ ಎದುರಿಗೆ ನಿಂತು ಹೇಳಿಕೊಳ್ಳಲಾಗದೆ ಚೀಟಿ ಬರೆದು ಕೊಡುತ್ತಿದ್ದ. “ಏನಯ್ಯಾ ನಿಂದು ಚೀಟಿ ವ್ಯವಹಾರ?" ಅಂತ ನಗೆಯಾಡುತ್ತಿದ್ದೆ. ಅವನಿಗೆ ಮುಂದೆ ದಿನಪತ್ರಿಕೆಯೊಂದರಲ್ಲಿ ಒಂದಿಬ್ಬರು ಗೆಳೆಯರಿಗೆ ಹೇಳಿ ಕೆಲಸ ಕೊಡಿಸಿದೆ. ಅವನ ಮದುವೆಗೂ ನಾನೇ ಸಾಕ್ಷಿ. ಅವನ ಮಗಳಿಗೆ ಹೆಸರಿಟ್ಟವನೂ ನಾನೇ. ಈಗೊಂದೆರಡು ವರ್ಷಗಳ ಹಿಂದೆ ಅವನದೊಂದು ಪುಸ್ತಕ ಬಿಡುಗಡೆಯಾಯಿತು. ಆ ಸಭೆಗೆ ನೀವು ಬರಲೇಬೇಕು ಅಂದ. ಗೆಳೆಯ ಪ್ರಕಾಶ್ ರೈ ಸಭೆಗೆ ಅಂತಲೇ ಮದರಾಸಿನಿಂದ ಬಂದಿದ್ದ. ಪುಸ್ತಕ ಬಿಡುಗಡೆಯೂ ಆಯಿತು. ನಿಜ ಹೇಳುವುದಾದರೆ, ಅವನು ದಿನಪತ್ರಿಕೆಯಲ್ಲಿ ಏನಾದರೂ ಲೇಖನ ಬರೆದರೆ ನಾನು ಅಷ್ಟಾಗಿ ಗಮನಿಸುತ್ತಿರಲಿಲ್ಲ. ಚಲನಚಿತ್ರ ಗೀತೆಗಳ ಕುರಿತು ಒಂದು ಅಂಕಣ ಕೂಡ ಮಣಿಕಾಂತ್ ಬರೆಯುತ್ತಿದ್ದ. ಅದನ್ನೂ ನಾನು ಓದಿರಲಿಲ್ಲ. ಕಡೆಗೆ, ಅವೆಲ್ಲ ಲೇಖನಗಳನ್ನು ಸೇರಿಸಿ ‘ಅಮ್ಮ ಹೇಳಿದ ಸುಳ್ಳುಗಳು’ ಅಂತ ಪುಸ್ತಕ ಮಾಡಿದನಲ್ಲ? ಆ ಸಮಾರಂಭಕ್ಕೇ ನಾನು, ಪ್ರಕಾಶ್ ರೈ ಎಲ್ಲ ಹೋದದ್ದು.

ಕೈಗೆ ಒಂದು ಗೊಂಚಲದಂತೆ ಮಾಡಿ ಒಂದು ಪುಸ್ತಕ ಕೊಟ್ಟಾಗ ಓದದೆ ಇರುವುದಾಗುವುದಿಲ್ಲ ನೋಡಿ? ಹೀಗಾಗಿ ಒಂದೇ ಮಧ್ಯಾಹ್ನದಲ್ಲಿ ಆ ಪುಸ್ತಕ ಓದಿ ಮುಗಿಸಿದೆ. ಅವೆಲ್ಲ ಅವನವೇ ಬಿಡಿ ಬರಹಗಳು. In fact, ಒಂದ್ಯಾವುದಾದರೂ ಪುಸ್ತಕ ಓದಿದರೆ ಖುಷಿಯಾಗಬೇಕು. ಆದರೆ ನನಗೆ ಮಣಿಕಾಂತನ ಮೇಲೆ ಸಿಟ್ಟು ಬಂತು. ಸಿಟ್ಟಿಗಿಂತ ಹೆಚ್ಚಾಗಿ, ಅದೊಂದು ತೆರನಾದ ಬೇಸರ ಬಂದುಬಿಟ್ಟಿತ್ತು. ಬರವಣಿಗೆಗೆ ಸಂಬಂಧಿಸಿದಂತೆ, ನನಗೆ ಕೆಲವು ಕರಾರುಗಳಿವೆ. ಶೀಲ ಕಾಪಾಡಿಕೊಂಡು ಬಂದಂತೆ ನಾನು ಅವುಗಳನ್ನು ಕಾಪಾಡಿಕೊಂಡು ಬಂದಿದ್ದೇನೆ. ನೀವೂ ಅನೇಕ ವರ್ಷಗಳಿಂದ ನನ್ನ ಬರಹಗಳನ್ನು ಓದುತ್ತ ಬಂದಿದ್ದೀರಿ. ನಾನು ಹೆಚ್ಚಾಗಿ ಅನುವಾದ ಮಾಡುವುದಿಲ್ಲ. ಬದಲಿಗೆ ಭಾವಾನುವಾದ ಮಾಡುತ್ತೇನೆ. ಅದು transcreation. ಶಬ್ದಕ್ಕೆ ಶಬ್ದ ಅನುವಾದ ಮಾಡಿದರೆ, ಮೂಲ ಕೃತಿಯ ಹದ ಮತ್ತು ರುಚಿ ಹೊರಟು ಹೋಗುತ್ತವೆ. ಹಾಗೆ ಭಾವಾನುವಾದ ಮಾಡಿದ ಮೇಲೆ ‘ಇದರ ಮೂಲವಿರುವುದು ಇಂಗ್ಲಿಷಿನ ಈ ಕೃತಿಯಲ್ಲಿ’ ಅಂತ ಸ್ಪಷ್ಟವಾಗಿ ಬರೆದಿರುತ್ತೇನೆ. ನನ್ನ ಪ್ರಕಾರ ಓದುಗರು ನಿಜಕ್ಕೂ ಬುದ್ಧಿವಂತರು. ಅವರು ಇಂಗ್ಲಿಷ್‌ನ ಕೃತಿಗಳನ್ನೂ ಓದುತ್ತಾರೆ. ಕೊಂಚ ಹಾದಿ ತಪ್ಪಿದರೂ ಅದರ ಜಾಡು-ವಾಸನೆ ಹಿಡಿದುಬಿಡುತ್ತಾರೆ. “ಈ ಕೃತಿಯನ್ನು ಅವರೆಲ್ಲಿಂದ ಓದಿಯಾರು?" ಅಂತ ಯಾಕಂದುಕೊಳ್ಳುತ್ತೀರಿ? ಸಿಕ್ಕಿ ಬೀಳುವುದು ಎಷ್ಟು ಹೊತ್ತಿನ ಮಾತು? ಹಾಗೆ ಸಿಕ್ಕುಬಿದ್ದ ಮೇಲೆ ಅನುಭವಿಸುವ ಅವಮಾನ, ಹಿಂಸೆ ಹೇಗಿದ್ದಾವು? ಬದಲಿಗೆ, ‘ಇಂಥ ಕೃತಿ, ಇದರ ಮೂಲ ಇಲ್ಲಿದೆ’ ಅಂತ ಬರೆದು ಬಿಟ್ಟರೆ ಮುಗಿದೇ ಹೋಯಿತಲ್ಲ? ಅನುವಾದ ಮಾಡಿದರೆ ಅಥವಾ ಒಂದ್ಯಾವುದೋ ಕೃತಿಯಿಂದ ಪ್ರೇರಣೆ ಪಡೆದರೆ ತಪ್ಪೇನಿದೆ? ನಿಮಗೆ ಸ್ವತಂತ್ರವಾಗಿ ಬರೆಯಲು ಸಾಧ್ಯವಾ? Fine, ಬರೆಯಿರಿ. ಇಂಟರ್‌ನೆಟ್ ದೊಗೆದು, ಅದರಿಂದ ಹೂರಣ ಕದ್ದು, ಅದನ್ನೇ ಉಣಬಡಿಸಿ ‘ಇದೆಲ್ಲ ನಂದೇ, ನನ್ನದೇ ಚಿಂತನೆ, ನನ್ನದೇ ಕ್ರಿಯಾಶೀಲತೆ’ ಅಂತ ಯಾಕೆ project ಮಾಡಿಕೊಳ್ಳುತ್ತೀರಿ? ತುಂಬ ತಪ್ಪು ಅದು. ನಾನದನ್ನು intellectual dishonesty ಅಥವಾ ಬೌದ್ಧಿಕ ಕಳ್ಳತನ ಅಂತೇನೆ. ಸುಮಾರು ಎರಡು-ಮೂರು ವರ್ಷದ ಹಿಂದೆ ‘ವಿಜಯ ಕರ್ನಾಟಕ’ದಲ್ಲಿ ಅದ್ಯಾರೋ ಚೈತನ್ಯ ಹೆಗಡೆ ಅನ್ನೋರು ಇಂಗ್ಲಿಷ್ ಮ್ಯಾಗಝೀನ್‌ನಲ್ಲಿ ಪ್ರಕಟವಾದ ಲೇಖನವೊಂದನ್ನು ಕದ್ದು, ಅನುವಾದಿಸಿ, ‘ಇದು ಸ್ವಂತ ಸಂಶೋಧನೆ’ ಎಂಬಂತೆ ಪ್ರಕಟಿಸಿದ್ದರು! ಹೀಗೆ ಮಾಡೋದು ಖಂಡಿತ ತಪ್ಪು ಅಂತ ನಾನು ಟೀಕಿಸಿದೆ. ಆ ಕೆಲಸವನ್ನು ನನ್ನ ಮಗ ಮಾಡಿದರೂ ನಾನು ಸಹಿಸಿಕೊಳ್ಳುವುದಿಲ್ಲ.

ಅದನ್ನು ನನ್ನ ಮಗನಷ್ಟೇ ಆತ್ಮೀಯನಾಗಿದ್ದ ಮಣಿಕಾಂತ್ ಮಾಡಿದ್ದ. ಅದೇ ಇಂಟರ್‌ನೆಟ್‌ನಿಂದ ಕದ್ದು, ಬಸಿದುಕೊಳ್ಳುವ ಮೂರ್ಖ ಕೆಲಸ. ‘ಇದು ಇಂಗ್ಲಿಷ್‌ನಲ್ಲಿದೆ. ಇಂಥವರು ಮೂಲ ಲೇಖಕರು. ನಾನು ಅನುವಾದಿಸಿದ್ದೇನೆ. ಇದು-ಮೂಲ ಲೇಖಕರ ಹೆಸರು’ ಅಂತ ಪುಸ್ತಕದಲ್ಲಿ ಒಂದು note ಹಾಕಿ ಬಿಟ್ಟಿದ್ದರೆ ನನಗೆ ಖಂಡಿತ ಸಂತೋಷವಾಗುತ್ತಿತ್ತು. ಇದ್ಯಾತರ copy paste ಕೆಲಸ? ಹಾಗೆ ಅನ್ನಿಸಿದ ಮೇಲೆ ನಾನು ಮಣಿಕಾಂತನನ್ನು ಹತ್ತಿರಕ್ಕೆ ಸೇರಿಸಲಿಲ್ಲ. ಬಿಡಿ, ಇದೆಲ್ಲ ಬರೆದು ಸುಖಿಸುವವರ, ಕದ್ದು ಸಿಕ್ಕು ಬೀಳುವವರ ಜಗತ್ತಿನ ಸಂಗತಿಗಳು. ಆದರೆ ಇಂಥ ಕೆಲಸಗಳನ್ನು ತುಂಬ ಹೆಸರಾಂತ ಕಾದಂಬರಿಕಾರರು, ಕವಿಗಳು ಮಾಡುತ್ತಾರೆ. ಅಂಥ ದರ್ದು ಯಾಕಿರುತ್ತದೆಯೋ? I feel sorry about them. “ಆಯ್ತಯ್ಯಾ, ಅಕ್ಷರ ರಾಕ್ಷಸಾ... ನೀನು ಹೇಳಿದ್ದೆಲ್ಲ ನಿಜವಿರಬಹುದು. ಆದರೆ ನೀನು ಒಂದೇ ಹೊಸ ಪುಸ್ತಕ ಕೊಟ್ಟು ಎಷ್ಟು ದಿನಗಳಾದವು? ಬೇರೆ ತರಲೆ ಮಾಡೋದೆಲ್ಲ ಬಿಟ್ಟು, ತೆಪ್ಪಗೆ ಪುಸ್ತಕ ಬರೆದುಕೊಡು" ಅಂತ ನೀವನ್ನುತ್ತೀರಿ. ಯಾಕೆ ಬೈಸಿಕೊಳ್ಳಲಿ? ಇಷ್ಟರಲ್ಲೇ ಬರೆಯುತ್ತೇನೆ. I mean ಪುಸ್ತಕ-ಕಾದಂಬರಿ, ಜೀವನ ಚರಿತ್ರೆ-ಏನೋ ಒಂದು. ರುಚ್ ರುಚಿಯಾಗಂತೂ ಇರುತ್ತದೆ. ಖಂಡಿತ ಕೊಡುತ್ತೇನೆ. ರೊಕ್ಕದ ಖರ್ಚಿಗೆ ನೀವು ಸಿದ್ಧರಾಗಿರಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 17 February, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books