Ravi Belagere
Welcome to my website
ನಿಮ್ಮದು ಎಂಥ ಮ್ಯಾರೇಜು? ಶುದ್ಧ ಅರೇಂಜ್‌ಡಾ? ನೀವೇ ಮಾಡಿಕೊಂಡ ಲವ್ ಮ್ಯಾರೇಜಾ? live in relationshipನಂತಹ  ಗಾಂಧರ್ವ ವಿವಾಹನಾ? ‘ಲವ್ ಕಮ್ ಅರೇಂಜ್ಡ್’ ಮದುವೆಯಾ? ಅಂತರ್‌ಜಾತೀಯ ವಿವಾಹವಾ? ಅಂತರ್‌ಧರ್ಮೀಯ ವಿವಾಹವಾ? (Request :ಜಾತಿಗಳ ಪುಸ್ತಾಪ ಮಾಡಬೇಡಿ) Love, run and marry ಎಂಬಂತೆ ಮನೆಗಳನ್ನು ಬಿಟ್ಟು ಹೋಗಿ ಆದ ಮದುವೆಯಾ? ಎಂಥ ಮದುವೆಯಾಗಿದ್ದರೂ ಅಡ್ಡಿಯಿಲ್ಲ. ಅದಕ್ಕೆ ಗೌರವವಿದೆ. ಒಂದು inland letterನಷ್ಟು ಬರವಣಿಗೆಯನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆಯಿರಿ. ಜೊತೆಗೆ ಇಬ್ಬರೂ ಇರುವ ಫೊಟೋ ಕಳಿಸಿ. mail ಮಾಡೋದಾದರೆ [email protected]ಗೆ ಮಾಡಿ.
Home About Us Gallery Books Feedback Prarthana Contact Us

Buy Ravi Belagere Books online

ದೇಶವನ್ನೇ ಅಡ ಇಡಲು ಹೊರಟರೆ ಜನ ಕೇಳುತ್ತಾರಾ ಮೋದೀಜಿ?

ಇದು ಎಚ್ಚರಿಕೆ ಎಂಬ ಗಂಟೆಯ ಮೊದಲ ಸದ್ದು!
ದಿಲ್ಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿಯ ಗೆಲುವನ್ನು ನೋಡಿದ ಯಾರಿಗೇ ಆದರೂ ಅನ್ನಿಸುವುದು ಇದೇ. ಕಾಂಗ್ರೆಸ್ ಬಕಾಬೋರಲು ಮಲಗಿರುವ ಪಕ್ಷ ಎಂಬುದು ಗೊತ್ತಿತ್ತು ಬಿಡಿ. ಆದರೆ ದೇಶವನ್ನು ಆಳುವ ಜಾಗಕ್ಕೆ ಬಂದು ಕೂತ ಬಿಜೆಪಿಗೆ ಈ ಥರದ ಹೊಡೆತ ಬೀಳುತ್ತದೆ ಎಂಬುದನ್ನು ಆಮ್ ಆದ್ಮಿ ಪಕ್ಷವೂ ಊಹಿಸಿರಲು ಸಾಧ್ಯವಿಲ್ಲ. ಅದರರ್ಥ, ಆಮ್ ಆದ್ಮಿ ಪಕ್ಷದ ಪರವಾಗಿಯೇ ಜನ ಈ ಪರಿ ಮುಗಿಬಿದ್ದಿದ್ದಾರೆ ಎಂದಲ್ಲ. ಬದಲಿಗೆ ಬಿಜೆಪಿಯ ವಿರುದ್ಧ ತಿರುಗಿ ಬಿದ್ದಿದ್ದಾರೆ. ತಮಾಷೆ ಎಂದರೆ, ಸಾಮಾಜಿಕ ಜಾಲ ತಾಣಗಳನ್ನು ಪಾರ್ಲಿಮೆಂಟ್ ಚುನಾವಣೆಯಲ್ಲಿ ಅದ್ಭುತವಾಗಿ ಪ್ರಯೋಗಿಸಿದ ಬಿಜೆಪಿ ದಿಲ್ಲಿ ಗದ್ದುಗೆಯನ್ನೇರಿದ್ದೇನೋ ನಿಜ. ಆದರೆ ಅವತ್ತು ಅದರ ಹುಳುಕು ಗೊತ್ತಿರಲಿಲ್ಲ. ಆದರೆ ಮೋದಿ ಬಂದ ನಂತರ ಒಂದರ ಹಿಂದೊಂದು ರಾಜ್ಯಗಳಲ್ಲಿ ವಿಧಾನಸಭೆಗಳನ್ನು ಗೆಲ್ಲುತ್ತಾ, ತಾವು ಹೇಳಿದಂತೆ ಕೇಳುವ ಕ್ಯಾಂಡಿಡೇಟುಗಳನ್ನು ಸಿಎಂ ಮಾಡುತ್ತಾ ಮೋದಿ-ಅಮಿತ್ ಷಾ ಮಾಡಿದ ಹಾವಳಿ ಇದೆಯಲ್ಲ? ಇದನ್ನು ಮೊದಲು ತಿರಸ್ಕರಿಸಿದವರು ದೆಹಲಿಯ ಜನ. ದೇಶದ ಇತರರೆಲ್ಲರಿಗಿಂತ ಮುಂಚೆ ದಿಲ್ಲಿಯ ಜನರಿಗೆ ಒಂದು ವಿಷಯ ಅರ್ಥವಾಗಿದೆ. ದಿಲ್ಲಿ ಗದ್ದುಗೆಯ ಮೇಲೆ ಬಂದು ಕೂತಿರುವ ಗುಜ್ಜಿಗಳು ಭಾರತವನ್ನು ಮತ್ತೊಂದು ಗುಜರಾತ್ ಮಾಡುವುದು ನಿಕ್ಕಿಯೇ ಹೊರತು ಇದರ ಮೂಲ ಸತ್ವವಾದ ಸಮಾಜವಾದಿ ಪ್ರಜಾಪ್ರಭುತ್ವವನ್ನು ಕಾಪಾಡುವುದಲ್ಲ ಎಂಬುದು.

ಗುಜರಾತ್‌ನಲ್ಲಿ ಏನೋ ಮಹಾಕ್ರಾಂತಿಯಾಗಿದೆ ಎಂಬಂತೆ ವರ್ಣಿಸಿದ ಬಿಜೆಪಿ ಅದನ್ನೇ ರೋಲ್ ಮಾಡೆಲ್ಲು ಅಂತ ದೇಶದ ತುಂಬೆಲ್ಲ ಹೇಳತೊಡಗಿತು. ಅದೃಷ್ಟವಶಾತ್ ದಿಲ್ಲಿ ಗದ್ದುಗೆಯ ಮೇಲೆ ಬಂದು ಕೂತ ಮೋದಿ ಹಾಗೂ ಅಮಿತ್ ಷಾ ಜೋಡಿಗೆ ಸಹಜವಾಗಿಯೇ ವ್ಯಾಪಾರಿ ಕಲೆ ಗೊತ್ತು. ಹಾಗೆ ನೋಡಿದರೆ ಗುಜರಾತಿಗಳಿಗೆ ಗೊತ್ತಿರುವಷ್ಟು ಚೆನ್ನಾಗಿ ವ್ಯಾಪಾರಿ ಕಲೆ ದೇಶದ ಬೇರೆ ಯಾವ ರಾಜ್ಯದ ಜನರಿಗೂ ಗೊತ್ತಿಲ್ಲ. ಹೀಗಾಗಿ ಬಂದು ದಿಲ್ಲಿ ಗದ್ದುಗೆಯ ಮೇಲೆ ಕುಳಿತ ಕೂಡಲೇ ಮೋದಿ-ಷಾ ಜೋಡಿ ವ್ಯಾಪಾರಕ್ಕೇ ಇಳಿಯಿತು. ನೋಡ ನೋಡುತ್ತಿದ್ದಂತೆಯೇ ಜಪಾನ್‌ನಿಂದ ಹಿಡಿದು ಆಸ್ಟೇಲಿಯಾ ತನಕ, ಅಮೆರಿಕಾದಿಂದ ಹಿಡಿದು ಚೀನಾದ ತನಕ ಎಲ್ಲೆಲ್ಲೂ ಮೋದಿಯ ಕೀರ್ತಿ ಪತಾಕೆ ಹಾರಾಡಿದ್ದೇ ಹಾರಾಡಿದ್ದು. ಇದಕ್ಕೆ ತಕ್ಕಂತೆ ಕಚ್ಚಾ ತೈಲದ ವ್ಯವಹಾರದಲ್ಲಿ ಸಕ್ಸಸ್ ಆದ ಮೋದಿ, ಮುಂಚೆಲ್ಲ ಒಪೆಕ್ ರಾಷ್ಟ್ರಗಳ ಮೇಲೆ ತೈಲದ ಮೇಲಿದ್ದ ಅವಲಂಬನೆಯನ್ನು ಕಡಿಮೆ ಮಾಡಿಕೊಂಡರು. ನೆರೆಯ ರಷ್ಯಾದ ಜೊತೆ ಬಾಂಧವ್ಯ ಕುದುರಿಸಿಕೊಂಡರು. ಚೀನಾ ಕೂಡ ಅದೇ ದಾರಿ ಹಿಡಿಯಿತು. ಪರಿಣಾಮವಾಗಿ ಒಪೆಕ್ ರಾಷ್ಟ್ರಗಳು ಉತ್ಪಾದಿಸುವ ತೈಲದ ಬೆಲೆ ಕುಸಿಯಿತು.

ಜಗತ್ತಿನಲ್ಲಿ ಅತ್ಯಂತ ಹೆಚ್ಚಿನ ತೈಲ ಬಳಸುವ ರಾಷ್ಟ್ರಗಳ ಪೈಕಿ ನಂಬರ್ ಒನ್ ಚೀನಾ. ಎರಡನೇ ಸ್ಥಾನದಲ್ಲಿರುವುದೇ ಭಾರತ. ಯಾವಾಗ ಕಚ್ಚಾ ತೈಲದ ಬೆಲೆ ನೂರಾ ಮೂವತ್ತೈದು ಡಾಲರುಗಳಿಂದ ನಲವತ್ತೈದು ಡಾಲರುಗಳ ಲೆಕ್ಕಕ್ಕೆ ಇಳಿಯಿತೋ? ಆಗ ದೇಶದ ವಿದೇಶಿ ವಿನಿಮಯ ಪ್ರಮಾಣದಲ್ಲಿ ಗಮನಾರ್ಹ ಬದಲಾವಣೆ ಕಂಡು ಬಂತು. ಹಾಗೆ ನೋಡಿದರೆ ಇದು ಮೆಚ್ಚಬೇಕಾದ ವಿಷಯವೇ. ಒಂದು ಸರ್ಕಾರಕ್ಕೆ ವ್ಯಾಪಾರಿ ಮನೋಧರ್ಮವಿರಬೇಕು. ಆದರೆ ಪ್ರಜೆಗಳ ಜತೆಗೂ ವ್ಯಾಪಾರಿ ಮನೋಭಾವವನ್ನೇ ತೋರಿದರೆ? ಒಂದು ಬ್ಯಾರಲ್ ಕಚ್ಚಾ ತೈಲದ ಬೆಲೆ ನೂರಾ ಮೂವತ್ತೈದು ಡಾಲರುಗಳಷ್ಟಿದ್ದಾಗ ಯುಪಿಎ ಸರ್ಕಾರವೇ ಎಂಬತ್ತೈದು ರುಪಾಯಿ ಗಡಿಗೆ ತಂದು ಪೆಟ್ರೋಲ್ ಬೆಲೆ ನಿಲ್ಲುವಂತೆ ಮಾಡಿತ್ತು. ಈಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶೇಕಡಾ ಅರವತ್ತೈದರಷ್ಟು ರೇಟು ಇಳಿದಿದೆ. ಇವರು ಕನಿಷ್ಟ ಪಕ್ಷ ಪೆಟ್ರೋಲ್ ರೇಟನ್ನು ಐವತ್ತು ರುಪಾಯಿ, ಡೀಸೆಲ್ ರೇಟನ್ನು ನಲವತ್ತು ರುಪಾಯಿಗೆ ಮಾರಬಹುದಿತ್ತು. ಆದರೆ ಅಲ್ಲೂ ವ್ಯಾಪಾರಿ ಬುದ್ಧಿ. ಹೀಗಾಗಿ ಒಂದಲ್ಲ, ನಾಲ್ಕು ಸಲ ತೈಲದ ಮೇಲಿನ ಅಬಕಾರಿ ಸುಂಕವನ್ನು ಏರಿಸಿದರು. ಹೀಗಾಗಿ ಜನರಿಗೆ ಅಚ್ಛೇ ದಿನ್ ಎಂಬುದು ಹತ್ತಿರ ಕಾಣಿಸಿತೇ ವಿನಾ ವಾಸ್ತವದಲ್ಲಿ ಆ ದಿನಗಳನ್ನು ಅನುಭವಿಸುವ ಸ್ಥಿತಿ ದಕ್ಕಲಿಲ್ಲ.

ಇದು ಸಾಲದೆಂಬಂತೆ ರಾಜ್ಯಗಳ ಮೇಲೆ ರಾಜ್ಯವನ್ನು ಗೆದ್ದುಕೊಂಡ ಸಂಭ್ರಮ ಮೋದಿ ಹಾಗೂ ಅಮಿತ್ ಷಾ ಜೋಡಿಯಲ್ಲಿ ಯಾವ ಪರಿಯ ದುರಹಂಕಾರವನ್ನು ಬೆಳೆಸಿತು ಎಂದರೆ, ಪಕ್ಷದ ಪಾಲಿನ ಭೀಷ್ಮ ಅನ್ನಿಸಿಕೊಂಡ ಅಡ್ವಾಣಿಯಿಂದ ಹಿಡಿದು ಎಲ್ಲರೂ ಮೂಲೆಗುಂಪಾಗಿ ಹೋದರು. ಹೀಗಾಗಿ ಮೋದಿ, ಅಮಿತ್ ಷಾ ಹೇಳಿದ್ದಕ್ಕೆ ಯೆಸ್ ಅನ್ನುವವರಷ್ಟೇ ಫ್ರಂಟ್ ಲೈನಿಗೆ ಬರುತ್ತಾ, ಮೊನ್ನೆ ಮೊನ್ನೆ ಸಣ್ಣದೊಂದು ಮಾಧ್ಯಮ ಸಂದರ್ಶನಕ್ಕೂ ಅಂಗಲಾಚುತ್ತಿದ್ದ ರಾಮ್ ಮಾಧವ್ ಥರದವರು ಇವರ ಥಿಂಕ್ ಟ್ಯಾಂಕ್‌ನ ಫ್ರಂಟ್ ಲೈನಿಗೆ ಬಂದುಬಿಟ್ಟರು. ಯಾವಾಗ ಈ ಥಿಂಕ್ ಟ್ಯಾಂಕು ಅಮೆರಿಕಾದ ಮ್ಯಾಡಿಸನ್ ಚೌಕದಲ್ಲಿ ಇಪ್ಪತ್ತು ಸಾವಿರದಷ್ಟು ಜನರನ್ನು ಸೇರಿಸಿತೋ, ಆಗ ರಷ್ಯಾಕ್ಕೆ ಹೋಗುವ ಪ್ಲಾನು ಹಾಕಿಕೊಂಡ ಮೋದಿ, ಅಲ್ಲಿ ಎರಡು ಲಕ್ಷ ಜನರನ್ನು ಸೇರಿಸಿ, ನನ್ನ ಲೆವೆಲ್ಲು ಏನು ಅಂತ ವ್ಲಾಡಿಮಿರ್ ಪುಟಿನ್‌ಗೇ ಗೊತ್ತಾಗಲಿ ಎನ್ನುವ ಹಂತ ತಲುಪಿದರು. ಈಗ ಆ ಸಂಭ್ರಮಕ್ಕೆ ಕೊಂಬು, ಕಹಳೆ ರೆಡಿ ಮಾಡಬೇಕು ಎನ್ನುವಷ್ಟರಲ್ಲಿ ದಿಲ್ಲಿ ವಿಧಾನಸಭೆಗೆ ನಡೆದ ಚುನಾವಣೆ ಬಿಜೆಪಿಯನ್ನು ಅಡ್ಡಡ್ಡ ಮಲಗಿಸಿದೆ. ಕೇಜ್ರೀವಾಲ್‌ರ ಆಮ್ ಆದ್ಮಿ ಪಕ್ಷ ಎಡಗೈಯಿಂದ ಬಾರಿಸಿದ ಹೊಡೆತಕ್ಕೆ ಅಮಿತ್ ಷಾ ಹೋಗಿ ಗುಜರಾತ್‌ನಲ್ಲಿ ಬಿದ್ದರೆ, ಬಲಗೈಯಲ್ಲಿ ಬಾರಿಸಿದ ಹೊಡೆತಕ್ಕೆ ದೂಸುರಾ ಮಾತನಾಡಲಾಗದೆ ಮೋದಿ ಹೋಗಿ ಹಿಮಾಚಲ ಪ್ರದೇಶದಲ್ಲಿ ಬಿದ್ದಿದ್ದಾರೆ.

ಇರುವ ಎಪ್ಪತ್ತು ಸೀಟುಗಳ ಪೈಕಿ ಬಿಜೆಪಿ ಗೆದ್ದಿದ್ದು ಮೂರೇ ಮೂರು. ದಿಲ್ಲಿಯ ಇತಿಹಾಸದಲ್ಲಿ ಕೊನೆಯ ಮೊಘಲ್ ದೊರೆ ಬಹಾದ್ದೂರ್ ಷಾ ಜಫರ್ ಕೂಡ ಬ್ರಿಟಿಷರಿಂದ ಇಂತಹ ಮುಖಭಂಗವನ್ನು ಎದುರಿಸಿರಲಿಲ್ಲವೇನೋ? ಕನಿಷ್ಟ ಪಕ್ಷ ಆತನಿಗೆ ಬ್ರಿಟಿಷರಿಂದ ಉಂಬಳಿಯಾದರೂ ಸಿಗುತ್ತಿತ್ತು. ಆದರೆ ಇವರಿಗೆ ಕಂಬಳಿಯೂ ಸಿಗಲಿಲ್ಲ. ಸಾಲದೆಂಬಂತೆ ಇವರಿಗೆ ಪ್ರತಿಪಕ್ಷದ ಸ್ಥಾನ ಬೇರೆ ಬೇಕಂತೆ. ಸಂಸತ್ತಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪ್ರತಿಪಕ್ಷದ ಸ್ಥಾನ ನೀಡಿ, ಆಡಳಿತ ಪಕ್ಷಕ್ಕೊಂದು ಪ್ರತಿಪಕ್ಷ ಇರಬೇಕು ಎಂಬ ಹೊಸ ಸಂಪ್ರದಾಯ ಶುರು ಮಾಡಿದ್ದರೆ, ಈ ಬಾರಿಯೂ ಪ್ರತಿಪಕ್ಷದ ಸ್ಥಾನವನ್ನು ಕೇಳಬಹುದಿತ್ತೇನೋ? ಆದರೆ ಈಗ ಕೇಳಿದರೆ ಜನ ನಗುತ್ತಾರೆ ಅಷ್ಟೇ. ಅಂದ ಹಾಗೆ ಈ ಪರಿಯ ಸೋಲಿಗೆ ಕೇಜ್ರೀವಾಲ್ ಬಗೆಗಿನ ಕ್ರೇಜ್ ಕಾರಣವಲ್ಲ. ಬದಲಿಗೆ ತಮ್ಮ ದುರಹಂಕಾರ ಎಂಬುದು, ವ್ಯಾಪಾರಿ ಮನೋವೃತ್ತಿಯನ್ನು ದೇಶದಲ್ಲಿ ಬೆಳೆಸುತ್ತಿರುವ ರೀತಿಯನ್ನು ಕಂಡು ಜನ ಸಿಟ್ಟಿಗೇಳುತ್ತಿದ್ದಾರೆ ಎಂಬುದು ಮೋದಿ-ಅಮಿತ್ ಷಾ ಜೋಡಿಗೆ ಅರ್ಥವಾಗಬೇಕು.

ಹಾಸ್ಯಾಸ್ಪದ ಸಂಗತಿ ಎಂದರೆ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತನ್ನ ಪಾಲಿನ ಮೂವತ್ಮೂರು ಪರ್ಸೆಂಟ್ ಮತಗಳನ್ನು ಉಳಿಸಿಕೊಂಡಿದೆಯಂತೆ. ಅದೇ ಕಾಲಕ್ಕೆ ಕಾಂಗ್ರೆಸ್ ಮುಕ್ತ ಭಾರತ ಮಾಡಬೇಕು ಎಂಬ ಅದರ ಕನಸು ಈಡೇರಿದೆಯಂತೆ. ಇಂತಹ ಅಸಂಬದ್ಧ ತರ್ಕಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಪಾದಿಸುವ ತಗಡುಗಳು ನಿರಂತರವಾಗಿ ತೌಡು ಕುಟ್ಟುತ್ತಿವೆ. ಆದರೆ ಗಮನಿಸಿ ನೋಡಿ. ಅರವತ್ತೇಳು ಪರ್ಸೆಂಟು ಜನ ಬಿಜೆಪಿಯ ವಿರುದ್ಧವಾಗಿದ್ದಾರೆ ಎಂದರ್ಥ. ಕಾಂಗ್ರೆಸ್ ವೋಟುಗಳನ್ನು ಆಮ್ ಆದ್ಮಿ ಕಿತ್ತುಕೊಂಡು ಬಿಟ್ಟಿತಂತೆ. ಅದಕ್ಕಾಗಿ ಬಿಜೆಪಿಗೆ ಇಂತಹ ಸೋಲು ಬಂತಂತೆ. ಇದು ಕೂಡ ಯಥಾಪ್ರಕಾರ ಸಾಮಾಜಿಕ ಜಾಲತಾಣಗಳಲ್ಲಿ ಕಾಣ ಸಿಗುವ ತೌಡು. ಇದನ್ನು ಕಲಸಿ ಎಮ್ಮೆಗಳಿಗೆ ತಿನ್ನಿಸಬಹುದೇ ಹೊರತು ಜನರಿಗಲ್ಲ. ದಿಲ್ಲಿಯ ಜನ ಕಾಂಗ್ರೆಸ್ ಬದಲಿಗೆ ಆಮ್ ಆದ್ಮಿ ಪಕ್ಷಕ್ಕೆ ವೋಟು ಹಾಕಿರುವುದು ನಿಜ. ಆದರೆ ಯಾಕೆ? ಬಿಜೆಪಿ ಮುಕ್ತ ದಿಲ್ಲಿ ಮಾಡಬೇಕೆಂದರೆ ತಕ್ಕ ಪ್ರತಿಸ್ಪರ್ಧಿಯ ಜತೆ ನಿಲ್ಲಬೇಕು ಎಂಬ ಕಾಮನ್ ಸೆನ್ಸ್‌ಗಾಗಿ.

ನಿಮಗೆ ಒಂದು ಉದಾಹರಣೆ ಹೇಳುತ್ತೇನೆ. ದಲಿತ ವರ್ಗದ ಎಡಗೈ ಸಮುದಾಯ ಸಾಂಪ್ರದಾಯಿಕವಾಗಿ ಬಹುಜನ ಸಮಾಜ ಪಕ್ಷಕ್ಕೆ ಬೆಂಬಲ ನೀಡುತ್ತವೆ. ಅರ್ಥಾತ್, ಒಳ ಮೀಸಲಾತಿಗೆ ವಿರುದ್ಧವಾಗಿರುವ ಕಾಂಗ್ರೆಸ್ ವಿರುದ್ಧ ಆ ಸಮುದಾಯಕ್ಕೆ ಸಿಟ್ಟಿದೆ. ಹೀಗಾಗಿ ಎಲ್ಲೆಲ್ಲಿ ಬಿಎಸ್‌ಪಿ ಗಟ್ಟಿಯಿದೆಯೋ, ಅಲ್ಲಿ ಬಿಎಸ್‌ಪಿಗೆ ಮತ ನೀಡುತ್ತವೆ. ಆದರೆ ಕರ್ನಾಟಕದಲ್ಲಿ ಬಿಜೆಪಿಗೆ ಮತ ನೀಡುತ್ತವೆ. ಯಾಕೆಂದರೆ ಕಾಂಗ್ರೆಸ್ ವಿರುದ್ಧ ತೊಡೆ ತಟ್ಟಿ ನಿಲ್ಲಲು ಸಾಧ್ಯವಾಗುವುದು ಬಿಜೆಪಿಗೇ ವಿನಾ ಜೆಡಿಎಸ್‌ಗಲ್ಲ ಎಂಬುದು ಅದರ ನಂಬಿಕೆ. ಹೀಗಾಗಿ ೨೦೦೪ರ ವಿಧಾನಸಭಾ ಚುನಾವಣೆಯಿಂದ ಹಿಡಿದು ಇಲ್ಲಿಯ ತನಕ ಅದರ ಬೆಂಬಲ ಬಿಜೆಪಿಗೇ ದಕ್ಕಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಬ್ಬ ದಲಿತ ಸಿಎಂ ಆಗಬಹುದು ಎಂಬ ಕಾರಣಕ್ಕಾಗಿ ಆ ಸಮುದಾಯದ ಗಣನೀಯ ಮತಗಳು ಕಾಂಗ್ರೆಸ್ ಕಡೆ ವಾಲಿದವು ಎಂಬುದನ್ನು ಬಿಟ್ಟರೆ, ಕಳೆದ ಲೋಕಸಭಾ ಚುನಾವಣೆಯಲ್ಲೂ ಆ ಸಮುದಾಯದ ಮತ ದಕ್ಕಿದ್ದು ಬಿಜೆಪಿಗೆ. ಹೀಗೆ ಒಬ್ಬ ಪೈಲ್ವಾನನನ್ನು ಎದುರಿಸಬಲ್ಲ ಮತ್ತೊಬ್ಬ ಪೈಲ್ವಾನನಿಗೆ ಮತಗಳು ಪಲ್ಲಟವಾಗುತ್ತವೆಯೇ ವಿನಾ ಕಾಂಗ್ರೆಸ್‌ನ ವೋಟುಗಳನ್ನು ಆಮ್ ಆದ್ಮಿ ಪಾರ್ಟಿ ಕಿತ್ತುಕೊಂಡು ಬಿಟ್ಟಿತು. ಅದಕ್ಕಾಗಿ ಬಿಜೆಪಿ ಸೋತಿತು ಎಂಬುದು ಕಾಗಕ್ಕ-ಗುಬ್ಬಕ್ಕನ ಕತೆ.

ಮೋದಿ ಅಧಿಕಾರಕ್ಕೆ ಬಂದ ನಂತರ ದಿಲ್ಲಿ ಗದ್ದುಗೆಯ ಮೇಲೆ ಕುಳಿತ ಬಿಜೆಪಿ ಸರ್ಕಾರದ ದುರಹಂಕಾರ ಯಾವ ಮಟ್ಟಕ್ಕೆ ಬೆಳೆದಿತ್ತು ಎಂದರೆ, ಐದು ಅಂಶಗಳಿಗೆ ಸಂಬಂಧಿಸಿದಂತೆ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವಾಗ ರೈತರ ಅನುಮತಿ ಕೇಳುವ ಅಗತ್ಯವೇ ಇಲ್ಲ ಎಂಬಷ್ಟರ ಮಟ್ಟಿಗೆ ಸುಗ್ರೀವಾಜ್ಞೆ ಹೊರಡಿಸಿದರು. ರಾಜ್ಯಗಳಲ್ಲಿರುವ ಗಣಿಗಳನ್ನು ಹರಾಜು ಹಾಕಬೇಕು ಎಂಬುದಕ್ಕೂ ಒಂದು ಸುಗ್ರೀವಾಜ್ಞೆ ಹೊರಡಿಸಿದರು. ಅದರರ್ಥ ಏನು? ಭೂಮಿ, ಗಣಿ ಸೇರಿದಂತೆ ಎಲ್ಲವೂ ವ್ಯಾಪಾರಿಗಳ ಕೈಗೇ ಸಿಗಬೇಕು ಎಂದೇ ಹೊರತು, ಇನ್ನೇನಲ್ಲ. ತೋರಿಸಲು ಹೇಗಿದ್ದರೂ ಒಂದು ಅಸ್ತ್ರ ಇದೆಯಲ್ಲ? ನಮ್ಮ ಮಕ್ಕಳಿಗೆ ಕೆಲಸ ಕೊಡಬೇಕು. ಕೈಗಾರಿಕೆಗಳು ಸ್ಥಾಪನೆಯಾಗದಿದ್ದರೆ ಕೆಲಸ ಕೊಡುವುದು ಹೇಗೆ? ಅದಕ್ಕಾಗಿ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ನೀಡುವಂತೆ, ದೇಶದ ಎಲ್ಲ ರಾಜ್ಯಗಳಲ್ಲಿ ಇದುವರೆಗೆ ಕೈಗಾರಿಕೆಗೆ ಅಂತ ಕೊಟ್ಟಿರುವ ಭೂಮಿಯಲ್ಲಿ ನಿಜವಾದ ಕೈಗಾರಿಕೆಗಳು ಎಷ್ಟರ ಮಟ್ಟಿಗೆ ಪ್ರಾರಂಭವಾಗಿವೆ? ಕೈಗಾರಿಕೆಗಳನ್ನು ಸ್ಥಾಪಿಸುತ್ತೇವೆ ಅಂತ ಭೂಮಿ ಪಡೆದು ಅರ್ಧದಲ್ಲೇ ಕೈ ಎತ್ತಿ, ಭೂಮಿಯನ್ನು ಮಾರಿಕೊಂಡು ಹೋದವರ ಸಂಖ್ಯೆ ಎಷ್ಟಿದೆ? ಇವನ್ನೆಲ್ಲ ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಕರ್ನಾಟಕದಲ್ಲೇ ಇಂತಹ ನೂರಾರು ಉದಾಹರಣೆಗಳಿವೆ. ಕೈಗಾರಿಕೆಗಳನ್ನು ಸ್ಥಾಪಿಸುತ್ತೇವೆ ಅಂತ ಭೂಮಿ ಪಡೆದು ಕೊನೆಗೆ ರಿಯಲ್ ಎಸ್ಟೇಟ್ ಧಂದೆಗೆ ಅದನ್ನು ಬಳಸಿದ ಉದಾಹರಣೆಗಳಿವೆ. ಬರೀ ನೂರಾರು ಎಕರೆಯಲ್ಲ, ಸಾವಿರಾರು ಎಕರೆ. ಬೆಂಗಳೂರಿನಲ್ಲೇ ಹುಡುಕಿದರೆ ಕೈಗಾರಿಕೆಗಳು ಏಳುವ ಜಾಗದಲ್ಲಿ ಸಾವಿರಾರು ಅಪಾರ್ಟ್‌ಮೆಂಟ್‌ಗಳು ಎದ್ದು ನಿಂತಿವೆ. ಇಂತಹ ಧಂದೆಯಲ್ಲಿ ಹಣ ಹೂಡುವ ಶಕ್ತಿ ಇರುವುದು ವ್ಯಾಪಾರಿ ವರ್ಗಕ್ಕೇ ತಾನೇ? ಇಂತಹ ವ್ಯಾಪಾರಿ ವರ್ಗಕ್ಕೇ ದೇಶವನ್ನು ಕೊಳ್ಳೆ ಹೊಡೆಯಲು ಮತ್ತೊಂದು ಅವಕಾಶ ಕೊಡುತ್ತೇವೆ ಅಂತ ಮೋದಿ ಸರ್ಕಾರ ಹೊರಟರೆ ಜನ ಯಗಾದಿಗಾ ತಪರಾಕಿ ಹೊಡೆಯದೇ ಏನು ಮಾಡುತ್ತಾರೆ? ಇಂದಿರಾಗಾಂಧಿಯಂತಹ ಇಂದಿರಾಗಾಂಧಿಯನ್ನು ಮನೆಗೆ ಕಳಿಸಿದ ದೇಶ ಇದು. ಹಾಗೆ ನೋಡಿದರೆ ಇಂದಿರಾಗೆ ಈ ಥರ ದೇಶವನ್ನು ವ್ಯಾಪಾರಿಗಳಿಗೆ ಕೊಡುವ ಮನೋಧರ್ಮ ಇರಲಿಲ್ಲ. ಸರ್ವಾಧಿಕಾರಿ ಧೋರಣೆಯಿತ್ತು. ಆದರೆ ಮೋದಿಯದು ಅತಿಯಾಯಿತು. ಸರ್ವಾಧಿಕಾರಿ ಧೋರಣೆಯ ಜತೆಗೆ ದೇಶವನ್ನು ವ್ಯಾಪಾರಿಗಳಿಗೆ ಬಿಟ್ಟು ಕೊಡುತ್ತೇನೆ ಎಂಬಂತಹ ಮನೋಭಾವ. ಸರ್ಕಾರಕ್ಕೇನೋ ವ್ಯಾಪಾರಿ ಮನೋಭಾವ ಇರಬೇಕು. ಆದರೆ ಸರ್ಕಾರ ತಾನೇ ವ್ಯಾಪಾರಿಯಂತೆ ವರ್ತಿಸಲು ಶುರು ಮಾಡಿದರೆ? ಬಿಟ್ಟ ನೋಡಿ ತಪರಾಕಿ. ಬ್ರಿಟಿಷರು ಈಸ್ಟ್ ಇಂಡಿಯಾ ಕಂಪನಿ ಮಾಡಿ ಭಾರತಕ್ಕೆ ಲಗ್ಗೆ ಇಟ್ಟರು. ಮೋದಿ-ಅಮಿತ್ ಷಾ ಜೋಡಿಯನ್ನು ಹೀಗೇ ಬಿಟ್ಟರೆ ಈಸ್ಟು, ವೆಸ್ಟು, ಕೋಸ್ಟು, ಸೌತು, ನಾರ್ತು ಅಂತೆಲ್ಲ ಕಂಪನಿಗಳನ್ನು ಸ್ಥಾಪಿಸಿಬಿಟ್ಟಾರು ಎಂಬ ಆಕ್ರೋಶ ಅದು.

ಒಬ್ಬ ಸರ್ವಾಧಿಕಾರಿಗೆ, ದೇಶವನ್ನು ವ್ಯಾಪಾರಿಗಳ ಕೈಗಿಟ್ಟು ಹೀರೋ ಆಗಲು ಹೊರಟವರಿಗೆ ಇದೇ ಗತಿ. ಈಗ ಬಿದ್ದಿರುವ ತಪರಾಕಿ ಸಣ್ಣದೇನಲ್ಲ. ಇನ್ನು ಮುಂದೆ ಶುರುವಾಗುತ್ತವೆ ನೋಡಿ. ತಪರಾಕಿಗಳ ಸುರಿಮಳೆ. ಎಷ್ಟೇ ಆದರೂ ಬಿಜೆಪಿಯ ಹಿಂದಿರುವ ಶಕ್ತಿ ಎಂದರೆ ವ್ಯಾಪಾರಿಗಳದೇ ಎಂಬುದು ಗೊತ್ತಿತ್ತು. ಆದರೆ ಬಂದ ಕೆಲವೇ ತಿಂಗಳಲ್ಲಿ ದೇಶವನ್ನೇ ವ್ಯಾಪಾರಿಗಳ ಕೈಗೆ ಸಿಲುಕುವಂತೆ ಮಾಡಲು ಪ್ಲಾನು ಹಾಕಿದರೆ ಜನ ಬಿಡುತ್ತಾರಾ? ಹೊಸಕಿ ಹಾಕುತ್ತಾರೆ. ಯಾಕೆಂದರೆ ಗಾಂಧಿಯಂತಹ ಮಹಾನುಭಾವರು ವರ್ಷಾನುಗಟ್ಟಲೆ ಹೋರಾಡಿ ಸ್ವಾತಂತ್ರ್ಯ ಪಡೆದ ನಾಡಿದು. ಅದನ್ನು ವಿದೇಶಿಯರಿಗೆ ಮಾರಿದರೇನು? ನಮ್ಮಲ್ಲೇ ಇರುವ ಬಿಜಿನೆಸ್‌ಮನ್‌ಗಳಿಗೆ ಮಾರಿದರೇನು? ಪರಿಣಾಮದಲ್ಲಿ ಎರಡೂ ಒಂದೇ ಅಲ್ಲವೇ?

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 16 February, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books