Ravi Belagere
Welcome to my website
ನಿಮ್ಮದು ಎಂಥ ಮ್ಯಾರೇಜು? ಶುದ್ಧ ಅರೇಂಜ್‌ಡಾ? ನೀವೇ ಮಾಡಿಕೊಂಡ ಲವ್ ಮ್ಯಾರೇಜಾ? live in relationshipನಂತಹ  ಗಾಂಧರ್ವ ವಿವಾಹನಾ? ‘ಲವ್ ಕಮ್ ಅರೇಂಜ್ಡ್’ ಮದುವೆಯಾ? ಅಂತರ್‌ಜಾತೀಯ ವಿವಾಹವಾ? ಅಂತರ್‌ಧರ್ಮೀಯ ವಿವಾಹವಾ? (Request :ಜಾತಿಗಳ ಪುಸ್ತಾಪ ಮಾಡಬೇಡಿ) Love, run and marry ಎಂಬಂತೆ ಮನೆಗಳನ್ನು ಬಿಟ್ಟು ಹೋಗಿ ಆದ ಮದುವೆಯಾ? ಎಂಥ ಮದುವೆಯಾಗಿದ್ದರೂ ಅಡ್ಡಿಯಿಲ್ಲ. ಅದಕ್ಕೆ ಗೌರವವಿದೆ. ಒಂದು inland letterನಷ್ಟು ಬರವಣಿಗೆಯನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆಯಿರಿ. ಜೊತೆಗೆ ಇಬ್ಬರೂ ಇರುವ ಫೊಟೋ ಕಳಿಸಿ. mail ಮಾಡೋದಾದರೆ [email protected]ಗೆ ಮಾಡಿ.
Home About Us Gallery Books Feedback Prarthana Contact Us

Buy Ravi Belagere Books online

ಜಾತಿ ಎಂಬ ಕನ್ನಡಿಯನ್ನು ಒಡೆದು ಈಗ ಅರಚಿದರೆ ಕೇಳುವವರ‍್ಯಾರು?

ಸಿಎಂ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದಿಂದ ಮಾಡಿಸುತ್ತಿರುವ ಜಾತಿ ಗಣತಿಯ ವಿರುದ್ಧ ಕೆಲ ವೀರಶೈವ, ಲಿಂಗಾಯತ ನಾಯಕರು ಧ್ವನಿ ಎತ್ತಿದ್ದಾರೆ. ಇದೇನಾದರೂ ನಡೆದರೆ ನಮ್ಮ ಜಾತಿಯೇ ಒಡೆದು ಹೋಗುತ್ತದೆ ಎಂದು ಅರಚುತ್ತಿದ್ದಾರೆ.

ಅಂದ ಹಾಗೆ ಜಾತಿ ಗಣತಿಗೆ ಯಾಕೆ ಇವರು ಇಷ್ಟು ಹೆದರಿಕೊಂಡಿದ್ದಾರೆ? ಗಣತಿಯ ಸಂದರ್ಭದಲ್ಲಿ ಒಳಪಂಗಡಗಳು ತಮ್ಮ ತಮ್ಮ ವೈವಿಧ್ಯತೆಯನ್ನು ಹೇಳಿಕೊಂಡರೂ ಅಂತಿಮವಾಗಿ ಜಾತಿಯ ಲೆಕ್ಕಕ್ಕೆ ಒಂದೇ ಅಲ್ಲವೇ? ಒಳಪಂಗಡಗಳು ಯಾವ ಜಾತಿಯಲ್ಲಿಲ್ಲ? ಒಕ್ಕಲಿಗರನ್ನು ತೆಗೆದುಕೊಳ್ಳಿ. ಗಂಗಟಕಾರ, ಮರಸು, ಕುಂಚಿಟಿಗ, ದಾಸ ಹೀಗೆ ಹಲ ಒಳಪಂಗಡಗಳಿವೆ. ದಲಿತ ಸಮುದಾಯದಲ್ಲಿ ಎಡ-ಬಲ ಎಂಬ ಒಳಪಂಗಡಗಳಿವೆ. ಬೋವಿ, ಲಂಬಾಣಿ ಜಾತಿಗಳೂ ಪರಿಶಿಷ್ಟರ ಪಟ್ಟಿಗೆ ಸೇರಿವೆ. ಹಿಂದುಳಿದ ವರ್ಗಗಳ ಪಟ್ಟಿಯನ್ನಂತೂ ಬಿಡಿ. ಹೋಗಲಿ, ಬ್ರಾಹ್ಮಣರನ್ನಾದರೂ ಈ ಒಳಪಂಗಡಗಳ ವಿಷಯ ಬಿಟ್ಟಿದೆಯೇ? ಸ್ಮಾರ್ತ, ಮಾಧ್ವ ಅಂತ ಹಲ ಬಗೆಯ ಒಳಪಂಗಡಗಳಿವೆ. ಅಲ್ಪಸಂಖ್ಯಾತರಲ್ಲಿಲ್ಲವೇ? ಆದ್ದರಿಂದ ಇವತ್ತು ಯಾರಿಗೂ ಆಗದ ಆತಂಕ ವೀರಶೈವ ಧರ್ಮದ ಕೆಲವರಿಗೇ ಏಕೆ ಆಗುತ್ತಿದೆ?

ಮೊನ್ನೆ ಯಡಿಯೂರಪ್ಪ ಅವರು ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಒಂದು ಸಮಾರಂಭದಲ್ಲಿ ಮಾತನಾಡುತ್ತಾ, ಎಲ್ಲ ಮಠಾಧೀಶರು ಒಂದಾಗಿ, ಒಬ್ಬ ಮಠಾಧೀಶರನ್ನು ತಮ್ಮ ಮುಂದಿಟ್ಟುಕೊಳ್ಳಲಿ ಎಂದರು. ಅವರ ಮಾತಿನ ಹಿಂದಿನ ಮರ್ಮ ಎಂಥವರಿಗಾದರೂ ಅರ್ಥವಾಗುವಂತಹದೇ. ಒಳಪಂಗಡಗಳು ಹೆಚ್ಚಿದಷ್ಟೂ ಅವರನ್ನು ಓಲೈಸುವ ಪರಿ ಬೇರೆಯಾಗುತ್ತದೆ. ಹೆಚ್ಚಾಗುತ್ತದೆ. ಹೀಗಾಗಿ ಧರ್ಮಕ್ಕೆ ಒಂದೇ ಮಠಾಧೀಶರು ಮುಂಚೂಣಿಯಲ್ಲಿದ್ದರೆ ತಮ್ಮ ಕೆಲಸ ಸುಲಭ ಎಂಬುದು ಯಡಿಯೂರಪ್ಪ ಅವರ ಇಂಗಿತ. ಇಷ್ಟು ವರ್ಷಗಳ ರಾಜಕೀಯ ಇತಿಹಾಸದಲ್ಲಿ ಮುಖ್ಯಮಂತ್ರಿ ಪಟ್ಟದಿಂದ ಹಿಡಿದು, ಮಂತ್ರಿಗಳು, ಶಾಸಕರನ್ನು ಹೆಚ್ಚಾಗಿ ಕೊಟ್ಟ ಸಮುದಾಯ ಯಾವುದು? ಹಣ ಮತ್ತು ಅಧಿಕಾರ ಜನಸಂಖ್ಯೆಗನುಗುಣವಾಗಿ ಆಗಬೇಕಲ್ಲ!

ದೇಶದ ಸಂಪತ್ತಿನ ಪೈಕಿ ಶೇಕಡಾ ತೊಂಭತ್ತಕ್ಕೂ ಹೆಚ್ಚರಷ್ಟು ಪ್ರಮಾಣ ಶೇಕಡಾ ಐದರಷ್ಟು ಜನರ ಕೈಲಿದೆ. ಹತ್ತಕ್ಕೂ ಕಡಿಮೆ ಪ್ರಮಾಣದ ಸಂಪತ್ತು ಉಳಿದ ತೊಂಭತ್ತೈದು ಪರ್ಸೆಂಟು ಜನರ ಕೈಲಿದೆ ಎಂದರೆ ಅದು ಅಸಮಾನತೆ ಅಲ್ಲವೇ? ಹಾಗೆಯೇ ಜಾತಿ ಆಧಾರದ ಮೇಲೆ ದಲಿತರು ಶೇಕಡಾ ಇಪ್ಪತ್ತೆರಡಕ್ಕಿಂತ ಹೆಚ್ಚಿದ್ದಾರೆ. ಆದರೆ ಇದುವರೆಗೆ ಒಬ್ಬರು ಮುಖ್ಯಮಂತ್ರಿಯಾಗಲು ಸಾಧ್ಯವಾಗಿಲ್ಲ. ಬಿ.ರಾಚಯ್ಯ ಅವರಿರಬಹುದು, ಬಸವಲಿಂಗಪ್ಪ ಇರಬಹುದು, ಖರ್ಗೆ ಇರಬಹುದು, ಪರಮೇಶ್ವರ್ ಇರಬಹುದು. ಹೀಗೆ ಮುಖ್ಯಮಂತ್ರಿ ಪಟ್ಟಕ್ಕೆ ಯಾರ‍್ಯಾರು ಬರಲು ಸಾಧ್ಯವೋ, ಅವರ‍್ಯಾರೂ ಬರಲಿಲ್ಲ. ಅರ್ಥಾತ್, ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿರುವ ಪಟ್ಟಭದ್ರ ಹಿತಾಸಕ್ತಿಗಳು ದಲಿತರನ್ನು ಸಿಎಂ ಹುದ್ದೆಯ ಮೇಲೆ ಕೂರಲು ಬಿಡುತ್ತಿಲ್ಲ. ಯಾವುದೇ ಧರ್ಮದವರಿರಲಿ, ಒಳ ಪಂಗಡದವರಿರಲಿ, ಮಾತನಾಡಿದರೆ ಸಾಕು, ಮೂವತ್ತು ಲಕ್ಷದಷ್ಟಿರುವ ನಮ್ಮ ಜನಸಂಖ್ಯೆಗೆ ಒಂದು ಎಮ್ಮೆಲ್ಸಿ ಸೀಟೂ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಹೀಗೆ ವಿವಿಧ ಜಾತಿಯ ಒಳಪಂಗಡಗಳ ನಾಯಕರು ತಮ್ಮ ತಮ್ಮ ಜನಸಂಖ್ಯೆಯ ವಿವರ ನೀಡುತ್ತಿರುವುದನ್ನು ಪರಿಗಣಿಸಿದರೆ ಕರ್ನಾಟಕದ ಜನಸಂಖ್ಯೆ ಹತ್ತು ಕೋಟಿ ಮೀರುತ್ತದೆ. ಹೋಗಲಿ,ಈ ರೀತಿ ಹೇಳುವವರು ತಮ್ಮ ಜಾತಿಯಲ್ಲಿರುವ ಜನರ ಗಣತಿಯನ್ನಾದರೂ ಮಾಡಿದ್ದಾರಾ? ಇಲ್ಲವಲ್ಲ! ಹೀಗಿರುವಾಗ ಎಲ್ಲವೂ ಬರೀ ಬಾಯಿ ಮಾತಿನಲ್ಲಿ ನಡೆಯುವುದು ವೈಜ್ಞಾನಿಕವಲ್ಲ. ಒಂದು ಸಲ ಜಾತಿ ಜನಗಣತಿ ಅಂತ ಆಗಲಿ, ಅವರ ಆರ್ಥಿಕ ಸ್ಥಿತಿ ಗತಿಗಳು ಹೇಗಿವೆ ಎಂಬುದು ಗೊತ್ತಾಗಲಿ. ಇದು ಎಲ್ಲಿಯ ತನಕ ಆಗುವುದಿಲ್ಲವೋ ಅಲ್ಲಿಯ ತನಕ ರಾಜಕೀಯ ಹಾಗೂ ಆರ್ಥಿಕ ಅಧಿಕಾರವನ್ನು ಸಮರ್ಥವಾಗಿ ಹಂಚಿಕೆ ಮಾಡುವುದು ಸಾಧ್ಯವಿಲ್ಲ. ಸಾಮಾಜಿಕ ನ್ಯಾಯದ ಮಾತನಾಡುವವರು ಮೊದಲು ಸಮಾಜದ ಸಂರಚನೆಯನ್ನು ಅರ್ಥ ಮಾಡಿಕೊಳ್ಳಬೇಕಲ್ಲ? ಇದು ಅರಿವಾಗುವುದೇ ಬೇಡ, ನಮಗೇ ಎಲ್ಲ ಗೊತ್ತಿದೆ ಎಂದು ರಾಜಕೀಯ ಒತ್ತಡ ಹೇರುತ್ತಾ ಹೋದರೆ ಹೇಗೆ? ನಮ್ಮದು ಪ್ರಬಲ ಜಾತಿ, ನಮಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬೇಕು, ನಮಗೆ ಮುಖ್ಯಮಂತ್ರಿ ಪದವಿ ಬೇಕು, ಮಂತ್ರಿಗಿರಿ ಕೊಡ್ಲೇಬೇಕು, ಶಾಸಕರಾಗಲೇಬೇಕು ಎಂದು ಹೇಳುವ ಮುನ್ನ ಇದೊಂದು ಗಣತಿ ಆಗಲು ವಿರೋಧ ವ್ಯಕ್ತಪಡಿಸುವುದೇಕೆ?

ಜಾತಿಗಳು ಇರಬೇಕೆಂದಿಲ್ಲ. ಜಾತಿಗಳು ನಿರ್ಮೂಲನೆಯಾಗಬೇಕು. ಆದರೆ ದಿನ ಕಳೆದಂತೆ ಜಾತಿ ವ್ಯವಸ್ಥೆ ಗಟ್ಟಿಯಾಗುತ್ತಿದೆಯೇ ಹೊರತು, ಜಾತಿಯ ಹೆಸರಿನಲ್ಲಿ ಕ್ಲೈಮು ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆಯೇ ಹೊರತು ಇನ್ನೇನೂ ಆಗುತ್ತಿಲ್ಲ. ನಿಜ ಹೇಳಬೇಕೆಂದರೆ, ಬಲಿಷ್ಠ ಜಾತಿಗಳು ಒಗ್ಗೂಡಿ ಶೋಷಿತ ವರ್ಗಕ್ಕೆ ಸಮಪಾಲು ಸಿಗುವಂತೆ ನೋಡಿಕೊಳ್ಳಬೇಕು. ಅದನ್ನು ಬಿಟ್ಟು ನಮಗೇ ಅತಿ ಹೆಚ್ಚು ಪಾಲು ಸಲ್ಲಬೇಕು. ನಾವೇ ಹೈಯೆಸ್ಟು ಎಂದು ಕತೆ ಹೇಳುತ್ತಾ ಕುಳಿತರೆ ಆಗುತ್ತದೆಯೇ? ಈ ಹಿಂದೆ ದೇವರಾಜ ಅರಸು ಶೋಷಿತ ವರ್ಗಗಳನ್ನು ಆರ್ಥಿಕ ಹಾಗೂ ರಾಜಕೀಯವಾಗಿ ಮುಂಚೂಣಿಗೆ ತರುವ ಯತ್ನ ಮಾಡಿದರು. ಅವರು ಜಾರಿಗೆ ತಂದ ಭೂ ಸುಧಾರಣಾ ಕಾಯ್ದೆ ಉತ್ತರ ಕರ್ನಾಟಕ ಭಾಗದಲ್ಲಿ ಯಶಸ್ವಿಯಾಗಲಿಲ್ಲ. ಯಾಕೆ ಎಂದು ಯಾರಾದರೂ ಕೇಳಿದ್ದಾರೆಯೇ? ಈಗ ನಮ್ಮನ್ನು ಒಡೆದು ಆಳುವ ನೀತಿ ಶುರುವಾಗಿದೆ ಎಂದರೆ, ಸಮಾಜದಲ್ಲಿ ಪರಿವರ್ತನೆ ತರಬೇಕು ಎಂದರೆ, ಮೊದಲು ಯಾವ್ಯಾವ ಜಾತಿಯ ಜನ ಎಷ್ಟಿದ್ದಾರೆ ಎಂಬುದು ಅರ್ಥವಾಗಬೇಕು. ವೀರಶೈವ ಇರಲಿ, ಲಿಂಗಾಯತ ಇರಲಿ, ಒಂದಲ್ಲ ಎಂದು ಕೆಲವರು ವಾದಿಸುತ್ತಿರಬಹುದು. ಅಂತಹ ವಾದ ಎಲ್ಲ ಸಮುದಾಯಗಳಲ್ಲೂ ಇದೆ. ದಲಿತರ ಪೈಕಿ ಎಡಗೈ ಗುಂಪಿನವರು ಒಳ ಮೀಸಲಾತಿ ಬೇಕು ಅಂತ ಹೋರಾಟ ಮಾಡುತ್ತಿದ್ದಾರೆ. ಹಿಂದುಳಿದ ಜಾತಿಗಳ ಪೈಕಿ ಅನೇಕ ಜಾತಿಗಳು ತಮಗೆ ಒಳ ಮೀಸಲಾತಿ ದಕ್ಕಬೇಕು ಎಂದು ಕೂಗು ಹಾಕುತ್ತಿವೆ. ಅದರರ್ಥ ಏನು ಅಂದರೆ ರಾಜಕೀಯ ಹಾಗೂ ಆರ್ಥಿಕ ಸಂಪತ್ತಿನ ವಿಕೇಂದ್ರೀಕರಣ ಸರಿಯಾಗಿ ನಡೆದಿಲ್ಲ ಅಂತ. ದೇವರಾಜ ಅರಸು ಇದಕ್ಕಾಗಿ ಒಂದು ಟ್ರೈ ಕೊಟ್ಟರು. ಮುಂದಿನವರು ಅಂತಹ ಪ್ರಯತ್ನವನ್ನು ನಡೆಸಿಕೊಂಡು ಹೋಗಬೇಕಿತ್ತು. ಆದರೆ ಅಂತಹ ಪ್ರಯತ್ನವೇ ನಡೆಯಲಿಲ್ಲ. ಈಗ ಕನಿಷ್ಟ ಪಕ್ಷ ಸಿದ್ಧರಾಮಯ್ಯ ಅವರ ಕಾಲದಲ್ಲಿ ಜಾತಿವಾರು ಗಣತಿಯಾದರೂ ನಡೆಯುತ್ತಿದೆ. ಆ ಮೂಲಕ ಅವರ ಆರ್ಥಿಕ, ಶೈಕ್ಷಣಿಕ ಸ್ಥಿತಿ ಗತಿಯ ಕುರಿತು ಅರ್ಥವಾಗುತ್ತದೆ.

ಇಟ್ಸ್ ಫೈನ್, ಇದರಲ್ಲೇನು ತಪ್ಪಿದೆ? ಇದುವರೆಗೂ ಸಮಾಜವನ್ನು ಒಡೆಯುತ್ತಾ ಬಂದವರು ರಾಜಕಾರಣಿಗಳು ಹಾಗೂ ಕೆಲ ಧರ್ಮ ಗುರುಗಳೇ ಹೊರತು ಜನರಲ್ಲ. ತಮ್ಮ ತಮ್ಮ ಲಾಭಕ್ಕಾಗಿ, ಹೀಗೆ ಜನರನ್ನು ಒಡೆದವರು ಇದೇ ಗುಂಪಿನ ಜನ. ಮೊದಲು ಕನ್ನಡಿ ಒಡೆದು ಹಾಕಿ ತಮ್ಮ ಮುಖ ಯಾವ್ಯಾವ ಭಂಗಿಯಲ್ಲಿ ಚೆನ್ನಾಗಿ ಕಾಣುತ್ತದೆ ಎಂಬುದನ್ನು ನೋಡಿಕೊಂಡು, ಈಗ ಕನ್ನಡಿ ಒಂದಾಗಬೇಕು ಎಂದರೆ? ಅದಕ್ಕಾದರೂ ಒಂದು ಗಣತಿ ನಡೆಯಬೇಕಲ್ಲ? ಕರ್ನಾಟಕದ ಇತ್ತೀಚಿನ ರಾಜಕೀಯ ಇತಿಹಾಸ ಕಂಡ ಮಹಾನ್ ನಾಯಕರಾದ ಜೆ.ಹೆಚ್.ಪಟೇಲ್ ಒಂದು ಮಾತು ಹೇಳಿದ್ದರು. ಹೀಗೆ ಕಂಡ ಕಂಡಲ್ಲಿ ಧರ್ಮಗುರುಗಳು ಹುಟ್ಟಿಕೊಂಡರೆ ಅವರನ್ನೆಲ್ಲ ಓಲೈಸುತ್ತಾ ಕೂರಲು ಸಾಧ್ಯವಿಲ್ಲ. ಯಾರಾದರೂ ಒಬ್ಬರು ಧಾರ್ಮಿಕ ಮುಖಂಡರು ಅಂತ ಬನ್ನಿ. ಸಮಸ್ಯೆ ಹೇಳಿ. ಪರಿಹರಿಸೋಣ. ಅದನ್ನು ಬಿಟ್ಟು ನೂರಾರು ಮಂದಿ ಬಂದರೆ ಅಂತವರ ಜತೆ ಮಾತನಾಡಲೂ ನಾನು ರೆಡಿಯಿಲ್ಲ ಎಂದರು.

ಚಿಕಿತ್ಸೆ ಕೊಡುವ ಡಾಕ್ಟರು ಆಡುವ ಮಾತು ಅದು. ರಾಜಕೀಯ ರೋಗ ಎಂಬುದು ಜಾತಿಯ ಮೂಲಕ ಬೆಳೆಯುತ್ತಾ ಹೋದರೆ ಅದಕ್ಕೆ ಟ್ರೀಟ್‌ಮೆಂಟ್ ಕೊಡುವುದು ಅನಿವಾರ್ಯ. ಪಟೇಲರಿಗೆ ಇಂತಹ ಚಿಕಿತ್ಸಕ ಗುಣವಿತ್ತು. ಹಲವರು ಅವರನ್ನು ಆಗ ತಮಾಷೆ ಪ್ರವೃತ್ತಿಯವರು ಎಂದು ನೋಡಿದರು. ಆದರೆ ಇವತ್ತು ಪಟೇಲರಲ್ಲಿದ್ದ ಚಿಕಿತ್ಸಕ ಗುಣ ಎಲ್ಲರಿಗೂ ಅರಿವಾಗುತ್ತಿದೆ. ಮೊದಲನೆಯದಾಗಿ ಪಟೇಲರನ್ನು ನಾವು ಅರ್ಥ ಮಾಡಿಕೊಳ್ಳಲು ವಿಫಲರಾದೆವೋ ಅಥವಾ ನಮ್ಮ ಲೆವೆಲ್ಲಿಗೆ ಇಳಿಯಲು ಅವರಿಗೆ ಸಾಧ್ಯವಾಗಲಿಲ್ಲವೋ ಗೊತ್ತಿಲ್ಲ. ಆದರೆ ಯಾವುದೇ ವಿಷಯವನ್ನಾದರೂ ಈ ರೀತಿ ತಮಾಷೆಯ ಧಾಟಿಯಲ್ಲಿ ಚಿಕಿತ್ಸಕ ಗುಣದಿಂದ ನೋಡುವ ಶಕ್ತಿ ಅವರಿಗಿತ್ತು. ಅಂತಹ ಗುಣವನ್ನು ಬೇರೆ ನಾಯಕರೂ ಬೆಳೆಸಿಕೊಂಡಿದ್ದರೆ ಇವತ್ತು ಕತೆಯೇ ಬೇರೆ ಆಗುತ್ತಿತ್ತು.

ಈಗ ಒಂದು ವ್ಯವಸ್ಥೆಯನ್ನು ಜಾತಿಯ ಹೆಸರಿನಲ್ಲಿ ಎಷ್ಟು ಒಡೆಯಲು ಸಾಧ್ಯವೋ ಅಷ್ಟು ಒಡೆಯಲಾಗಿದೆ. ನೂರು ಚೂರು ಮಾಡಿ ಈಗ ಅವೆಲ್ಲ ಒಂದಾಗಬೇಕು ಅನ್ನುವಂತೆ ಮಾತನಾಡಿದರೆ ಅಂತವರ ಬಗ್ಗೆ ವಿಷಾದ ಪಡಬೇಕೇ ವಿನಾ ಇನ್ನೇನೂ ಮಾಡಲು ಸಾಧ್ಯವಿಲ್ಲ. ಈಗ ಒಡೆದು ಹೋದ ಚೂರುಗಳಿಗೂ ರಾಜಕೀಯ ಪ್ರಜ್ಞೆ ಬಂದಿದೆ. ಹೀಗಾಗಿ ಸಹಜವಾಗಿ ಯಾರ‍್ಯಾರು ಯಾವ್ಯಾವ ಸಂಖ್ಯೆಯಲ್ಲಿದ್ದಾರೋ ಅಷ್ಟರಮಟ್ಟಿಗೆ ಅಧಿಕಾರ, ಸಂಪತ್ತು ಹಂಚಿಕೆಯಾಗಲಿ ಎಂದು ಹೇಳುತ್ತಿದ್ದಾರೆ. ಇದರಲ್ಲಿ ತಪ್ಪೇನಿದೆ?

ಜಾಗತೀಕರಣದ ಈ ಕಾಲಘಟ್ಟದಲ್ಲಿ ಒಬ್ಬ ವ್ಯಕ್ತಿ ಜಾತಿಯನ್ನು ಮೀರಿ ಬೆಳೆಯುವುದು, ಆರ್ಥಿಕವಾಗಿ ಸದೃಢನಾಗುವುದು, ರಾಜಕೀಯ ಅಧಿಕಾರ ಪಡೆಯುವುದು ಬೇರೆ. ಅದರಲ್ಲಿ ಇರುವ ಒಂದು ರೀತಿಯ ಅಪಾಯವನ್ನು ಜನರೇ ಆರಿಸಿದ ಸರ್ಕಾರ ಸರಿಪಡಿಸಲು ಯತ್ನಿಸಬೇಕಲ್ಲ? ಅದೂ ಮಾಡಬಾರದು ಎಂದರೆ ಜಾಗತೀಕರಣ ಎಂಬ ಭೂತದ ಕೈಗೆ ಸಿಕ್ಕು ಶಕ್ತಿ ಇಲ್ಲದವರೆಲ್ಲ ನಿರ್ನಾಮವಾಗಬೇಕು ಎಂದೇ? ದಿಲ್ಲಿಯಲ್ಲಿ ಬಂದು ಕೂತಿರುವ ಮೋದಿ ಸರ್ಕಾರ ವ್ಯಾಪಾರಿಗಳ ಪರವಾಗಿರುವ ಸರ್ಕಾರ ಎಂಬುದನ್ನು ಗಮನದಲ್ಲಿಡಿ.
ಅದೇ ಕಾಲಕ್ಕೆ ಕರ್ನಾಟಕದಲ್ಲಿ ಜಾತಿ ಗಣತಿ ಅಂತ ನಡೆದರೆ ಪರರಾಜ್ಯದವರು ಯಾವ ಪ್ರಮಾಣದಲ್ಲಿ ಬಂದು ನೆಲೆಸಿದ್ದಾರೆ ಎಂಬ ಲೆಕ್ಕ ಸಿಗುತ್ತದೆ. ಜಾತಿಗಣತಿ ಈ ಕಾರಣದಿಂದಲೂ ನಡೆಯುವುದು ಮುಖ್ಯ.

ಜಾಗತೀಕರಣದ ಓಟದಲ್ಲಿ ನಮಗಿಂತ ಮುಂದೆ ಓಡಬಲ್ಲ ಸಮುದಾಯವೊಂದು ಬೆಳೆಯುತ್ತಿದೆ ಎಂದರೆ, ಮುಲಾಜೇ ಇಲ್ಲದೆ ನಮ್ಮನ್ನು ಬಡಿದು ತಾನು ಲಾಭ ಮಾಡಿಕೊಳ್ಳುತ್ತಿದೆ ಎಂದರೆ, ಅದನ್ನು ನಿಯಂತ್ರಿಸುವ ಕೆಲಸ ನಡೆಯಬೇಕು. ಇಲ್ಲದಿದ್ದರೆ ಮುಂದಿನ ಕೆಲ ವರ್ಷಗಳಲ್ಲಿ ಆ ಜಾತಿ, ಈ ಜಾತಿ ಎನ್ನದೆ ನಿಜವಾದ ಸ್ಥಳೀಯರು ಒಕ್ಕಲೇಳುವ ಸ್ಥಿತಿ ಬರುತ್ತದೆ. ಹಾಗಾಗದಿರಲಿ, ಯಾರೋ ಕೆಲ ಮಂದಿ ತಮ್ಮ ಲಾಭಕ್ಕಾಗಿ ಜಾತಿ ಗಣತಿಯನ್ನು ವಿರೋಧಿಸಬಹುದು. ಈ ಬಗ್ಗೆ ಕಲ್ಪನೆಯಿಲ್ಲದ ಜನರನ್ನು ಕರೆತಂದು ಹೋರಾಟವನ್ನೂ ಮಾಡಬಹುದು. ಆದರೆ ಅದು ಸ್ವಂತ ಹಿತದ ಹೋರಾಟ. ಹೋರಾಟ ಮಾಡಲು ಹೊರಟರೆ ಎಲ್ಲ ಜಾತಿಗಳೂ ಈಗ ಹೋರಾಟಕ್ಕೆ ಅಣಿಯಾಗುತ್ತವೆ. ಹೀಗಾಗಿ ಮುಂಚಿನಂತೆ ನಾವು ಈ ಗಾತ್ರದವರು, ನಮಗೆ ಸಿಎಂ ಸೀಟು ಬೇಕು. ರಾಜಕೀಯ ಪಕ್ಷಗಳ ಅಧ್ಯಕ್ಷಗಿರಿ ಬೇಕು. ಆ ಮೂಲಕ ಸರ್ಕಾರದ ಸಂಪತ್ತು ಯಾವ ಕಡೆ ಹರಿಯಬೇಕು ಅನ್ನುವುದನ್ನು ನಾವು ನಿರ್ಧರಿಸಬೇಕು ಎನ್ನಲು ಹೋದರೆ ಈಗ್ಯಾರೂ ಕಿವಿಯ ಮೇಲೆ ಲಾಲ್‌ಬಾಗ್ ಇಟ್ಟುಕೊಂಡಿಲ್ಲ.

ಹೀಗಾಗಿ ಜಾತಿವಾರು ಜನಗಣತಿ ನಡೆಯಲಿ. ಜನಸಂಖ್ಯೆಯ ಆಧಾರದ ಮೇಲೆ ರಾಜಕೀಯ, ಆರ್ಥಿಕ ಸಂಪತ್ತು ಹಂಚಿಕೆಯಾಗಲಿ. ಆ ಮೂಲಕ ನಿಜವಾದ ಸ್ಥಳೀಯರು ಯಾರು ಎಂಬುದೂ ನಿರ್ಧಾರವಾಗಲಿ.ಅಲ್ಲವೇ?

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 11 February, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books