Ravi Belagere
Welcome to my website
ನಿಮ್ಮದು ಎಂಥ ಮ್ಯಾರೇಜು? ಶುದ್ಧ ಅರೇಂಜ್‌ಡಾ? ನೀವೇ ಮಾಡಿಕೊಂಡ ಲವ್ ಮ್ಯಾರೇಜಾ? live in relationshipನಂತಹ  ಗಾಂಧರ್ವ ವಿವಾಹನಾ? ‘ಲವ್ ಕಮ್ ಅರೇಂಜ್ಡ್’ ಮದುವೆಯಾ? ಅಂತರ್‌ಜಾತೀಯ ವಿವಾಹವಾ? ಅಂತರ್‌ಧರ್ಮೀಯ ವಿವಾಹವಾ? (Request :ಜಾತಿಗಳ ಪುಸ್ತಾಪ ಮಾಡಬೇಡಿ) Love, run and marry ಎಂಬಂತೆ ಮನೆಗಳನ್ನು ಬಿಟ್ಟು ಹೋಗಿ ಆದ ಮದುವೆಯಾ? ಎಂಥ ಮದುವೆಯಾಗಿದ್ದರೂ ಅಡ್ಡಿಯಿಲ್ಲ. ಅದಕ್ಕೆ ಗೌರವವಿದೆ. ಒಂದು inland letterನಷ್ಟು ಬರವಣಿಗೆಯನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆಯಿರಿ. ಜೊತೆಗೆ ಇಬ್ಬರೂ ಇರುವ ಫೊಟೋ ಕಳಿಸಿ. mail ಮಾಡೋದಾದರೆ [email protected]ಗೆ ಮಾಡಿ.
Home About Us Gallery Books Feedback Prarthana Contact Us

Buy Ravi Belagere Books online

ಪ್ರಧಾನಿ ಮೋದಿ ಹಾರಿಸಿದರು ಝಂಡಾ; ಒಪೆಕ್ ರಾಷ್ಟ್ರಗಳು ಥಂಡಾ!

ನರೇಂದ್ರ ಮೋದಿ ಪ್ರಧಾನಿಯಾದ ನಂತರ ಹಲವು ಮಹತ್ವದ ಬೆಳವಣಿಗೆಗಳು ಸಂಭವಿಸುತ್ತಿವೆ. ಇಟ್ ಈಸ್ ಫೈನ್. ಮೊನ್ನೆ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಭಾರತಕ್ಕೆ ಬಂದು ಹೋದರು. ಮನಮೋಹನ್ ಸಿಂಗ್ ಕಾಲದಲ್ಲಿ ಆದ ಅಣುಬಂಧ ಒಪ್ಪಂದಕ್ಕೆ ಇದ್ದ ಕೆಲವು ತಕರಾರುಗಳನ್ನು ಬಗೆಹರಿಸಿಕೊಂಡು ಹೋದರು. ಅಣು ಪೂರೈಕೆ ಮಾಡುವ ರಾಷ್ಟ್ರಗಳು ಕೊಡುವ ಯುರೇನಿಯಂ ಅನ್ನು ಬಳಸಿ ನಾವು ದೇಶದಲ್ಲಿ ಸ್ಥಾಪಿಸುವ ಯಾವುದೇ ಘಟಕಗಳಿರಬಹುದು ಅಲ್ಲಿ ಅವಘಡವಾದರೆ ನೀವೇ ಜವಾಬ್ದಾರಿ ಎಂದು ಅಮೆರಿಕ ಪಟ್ಟು ಹಿಡಿದಿತ್ತು. ಆದರೆ ಇದರ ವಿರುದ್ಧ ತಿರುಗಿ ಬಿದ್ದ ಭಾರತ, ಒಪ್ಪಂದದ ಪ್ರಕಾರ ಪೂರೈಕೆ ಮಾಡುವ ರಾಷ್ಟ್ರಗಳೂ ಅವಘಡದ ಹಾನಿಯನ್ನು ಭರ್ತಿ ಮಾಡಿಕೊಳ್ಳುವ ವಿಷಯದಲ್ಲಿ ಜವಾಬ್ದಾರಿ ಹೊರಬೇಕು ಎಂದಿತ್ತು. ಬಹಳ ವರ್ಷಗಳ ಕಾಲ ಈ ವಿಷಯದಲ್ಲಿ ಅಮೆರಿಕವೂ ಬಗ್ಗಿರಲಿಲ್ಲ, ಭಾರತವೂ ಬಗ್ಗಿರಲಿಲ್ಲ.

ಆದರೆ ಫೈನಲಿ, ಅದು ದೂಸುರಾ ಮಾತನಾಡದೆ ಭಾರತದ ನಿಲುವನ್ನು ಒಪ್ಪಬೇಕಾಯಿತು. ಹೀಗಾಗಿ ಮುಂದಿನ ದಿನಗಳಲ್ಲಿ ವಿದ್ಯುತ್ ಉತ್ಪಾದನೆ ಇರಬಹುದು, ವಾಣಿಜ್ಯ ಚಟುವಟಿಕೆಗಳಿಗೇ ಇರಬಹುದು, ಇದುವರೆಗೆ ಭಾರತ ಯಾವ ಪ್ರಮಾಣದಲ್ಲಿ ಪೆಟ್ರೋಲ್ ಹಾಗೂ ಡಿಸೇಲನ್ನು ನಂಬಿಕೊಂಡಿತ್ತೋ ಆ ಪ್ರಮಾಣದ ಅವಲಂಬನೆ ಬೇಕಿಲ್ಲ. ಇದರಷ್ಟೇ ಮುಖ್ಯವಾದ ಮತ್ತೊಂದು ಅಂಶವೆಂದರೆ ಕಚ್ಚಾ ತೈಲ ಪೂರೈಕೆಗೆ ಒಪೆಕ್ ರಾಷ್ಟ್ರಗಳನ್ನು (ತೈಲ ಉತ್ಪಾದಿಸುವ ರಾಷ್ಟ್ರಗಳು)ನಾವು ಬಹುತೇಕ ಅವಲಂಬಿಸಬೇಕಿತ್ತು. ಈ ಹಿಂದೆ ವಿಶ್ವದಲ್ಲಿ ಅತ್ಯಂತ ದೊಡ್ಡ ಪ್ರಮಾಣದಲ್ಲಿ ತೈಲ ಬಳಸುತ್ತಿದ್ದ ರಾಷ್ಟ್ರವೆಂದರೆ ಅಮೆರಿಕ. ಹೀಗಾಗಿ ಅವರು ಒಪೆಕ್ ರಾಷ್ಟ್ರಗಳನ್ನು ಹೆದರಿಸಲು, ಇಸ್ರೈಲ್ ಅನ್ನು ಶಸ್ತ್ರವಾಗಿ ಮಾಡಿಕೊಂಡಿದ್ದರು. ನೋಡುವವರಿಗೆ ಜೀಸಸ್ ಕ್ರೈಸ್ಟ್ ನಾಡಿನ ಹಿತ ಕಾಯುವುದು ಅಮೆರಿಕದ ಮುಖ್ಯ ಉದ್ದೇಶವಾಗಿತ್ತು ಅನ್ನಿಸಬೇಕು.

ಆದರೆ ನಿಜವಾದ ಕಾರಣವೆಂದರೆ ಒಪೆಕ್ ರಾಷ್ಟ್ರಗಳು ಸ್ವಲ್ಪ ಹಾರಾಡಿದರೆ ಅವುಗಳನ್ನು ಬಗ್ಗು ಬಡಿಯುವುದು ಮತ್ತು ಸದಾಕಾಲ ಒಂದು ಹೆದರಿಕೆ ಇಟ್ಟಿರುವುದು ಅಮೆರಿಕಕ್ಕೆ ಬೇಕಾಗಿತ್ತು. ತನ್ನ ದೇಶಕ್ಕೆ ಅಗತ್ಯವಾದ ತೈಲವನ್ನು ಪಡೆಯಬೇಕೆಂದರೆ ಇಂತಹ ಹೆದರಿಕೆಯನ್ನು ನೆಲೆಯಾಗಿಟ್ಟಿರುವುದು ಅದಕ್ಕೆ ಬೇಕಾಗಿತ್ತು. ಹೀಗಾಗಿ ಅಮೆರಿಕದಲ್ಲಿ ತಯಾರಾಗುವ ಯಾವುದೇ ಪ್ರಚಂಡ ಅಸ್ತ್ರಗಳು ಮೊದಲು ಇಸ್ರೈಲ್ ಪಾಲಾಗುತ್ತಿದ್ದವು. ಇಸ್ರೈಲ್ ಹೇಳಿ ಕೇಳಿ ಯುದ್ಧ ಪ್ರಿಯ ದೇಶ. ತಮ್ಮ ದೇಶದ ಒಬ್ಬ ವ್ಯಕ್ತಿಗೆ ಆಗುವ ತೊಂದರೆಯನ್ನೂ ಅದು ರಾಷ್ಟ್ರೀಯ ಸಮಸ್ಯೆ ಎಂದು ಪರಿಗಣಿಸುತ್ತದೆ. ಹೀಗಾಗಿ ಇಸ್ರೈಲ್ ಸ್ಥಾಪನೆಯಾದ ಶುರುವಿನಲ್ಲಿ ಅದರ ಸುತ್ತ ಇದ್ದ ಐದು ರಾಷ್ಟ್ರಗಳು ಏಕಾಏಕಿ ದಾಳಿ ಮಾಡಿದರೂ ಅಂಜದೆ ಒಂದೇ ದಿನ ಐವತ್ತಕ್ಕಿಂತ ಹೆಚ್ಚು ಶತ್ರು ವಿಮಾನಗಳನ್ನು ಅದು ಚಿಂದಿ ಚಿತ್ರಾನ್ನ ಮಾಡಿತು. ಹೀಗಾಗಿ ಒಪೆಕ್ ರಾಷ್ಟ್ರಗಳಿಂದ ಹಿಡಿದು, ಸುತ್ತ-ಮುತ್ತ ಇರುವ ಎಲ್ಲ ದೇಶಗಳಿಗೂ ಇಸ್ರೈಲ್ ಎಂಬುದು ದೊಡ್ಡ ತಲೆ ನೋವು. ಹೀಗಾಗಿ ಸೌದಿ ಅರೇಬಿಯಾದಂತಹ ದೇಶ ತನ್ನ ದೇಶ ಕಾಯಲು ಅಮೆರಿಕಕ್ಕೆ ಹೊರಗುತ್ತಿಗೆ ನೀಡಿ, ತನ್ನಲ್ಲಿರುವ ತೈಲವನ್ನು ತೆಗೆಯುವ ಅವಕಾಶವನ್ನು ಅದಕ್ಕೇ ನೀಡಿ, ಅದು ಕೊಡುವ ದುಡ್ಡನ್ನು ಪಡೆದುಕೊಂಡು ಸುಖವಾಗಿರಲು ಯತ್ನಿಸಿತು.

ಆದರೆ ಬಹುತೇಕ ಒಪೆಕ್ ರಾಷ್ಟ್ರಗಳು ತಮ್ಮಲ್ಲಿದ್ದ ತೈಲ ಸಂಪತ್ತನ್ನು ಬಳಸಿ ಮೆರೆದಾಡಿದವು. ಜಗತ್ತಿನ ತುಂಬ ಒಂದೇ ಧರ್ಮ ಸ್ಥಾಪನೆ ಮಾಡಿಬಿಡುತ್ತೇವೆ ಎಂದು ಕೊಚ್ಚಿಕೊಳ್ಳುತ್ತಿದ್ದ ಉಗ್ರರಿಗೆ ಹಣ ಪೂರೈಸಿದವು. ಹೀಗೆ ಜಗತ್ತಿನ ಹಲವು ದೇಶಗಳಲ್ಲಿ ಭಯೋತ್ಪಾದನೆ ನಡೆಯಲು ಈ ಹಣದಲ್ಲಿ ದೊಡ್ಡ ಪಾಲು ಉಗ್ರರಿಗೆ ಹೋಗುತ್ತಿತ್ತು. ಹೀಗಾಗಿ ಒಪೆಕ್ ರಾಷ್ಟ್ರಗಳು ಮನಬಂದಂತೆ ಕಚ್ಚಾ ಬ್ಯಾರಲ್ ತೈಲದ ಬೆಲೆಯನ್ನು ಏರಿಸಿದವು. ಒಂದು ಕಚ್ಚಾ ಬ್ಯಾರಲ್ ತೈಲದ ಬೆಲೆ ನೂರಾ ಮೂವತ್ನಾಲ್ಕು ಡಾಲರ್‌ಗಳಿಗೇರಿತ್ತು ಎಂದರೆ ಒಪೆಕ್ ರಾಷ್ಟ್ರಗಳ ಖದರ್ರು ಹೇಗಿತ್ತೋ ಊಹಿಸಿ. ಒಂದು ಕಚ್ಚಾ ಬ್ಯಾರಲ್ ತೈಲ ಎಂದರೆ ನೂರಾ ನಲವತ್ತೊಂಬತ್ತು ಲೀಟರ್. ಈ ಕಚ್ಚಾ ತೈಲವನ್ನು ಪಡೆದುಕೊಂಡು ಬಂದ ನಾವು ಪೆಟ್ರೋಲು, ಡಿಸೇಲು, ಗ್ರೀಸು ಅಂತ ವಿಂಗಡಣೆ ಮಾಡಿಕೊಂಡು ಮಾರಬೇಕಿತ್ತು. ಇದರ ಪರಿಣಾಮ ಎರಡು ರೀತಿಯಲ್ಲಿ ಭಾರತವನ್ನು ಕಂಗೆಡಿಸುತ್ತಿತ್ತು. ಒಂದು ಅಪಾರ ಪ್ರಮಾಣದ ವಿದೇಶಿ ವಿನಿಮಯ ನಡೆಯಬೇಕಿತ್ತು.

ಅಂದ ಹಾಗೆ ಒಪೆಕ್ ರಾಷ್ಟ್ರಗಳು ಡಾಲರ್ ಲೆಕ್ಕದಲ್ಲಿ ಹಣ ಪಡೆಯುತ್ತಿದ್ದವು. ಡಾಲರ್ ಹೊರತುಪಡಿಸಿ ಬೇರೆ ಯಾವ ಕರೆನ್ಸಿಯ ರೂಪದಲ್ಲೂ ನಿಮ್ಮ ಹಣ ಬೇಕಿಲ್ಲ ಎಂದು ಅವು ನಿರ್ದಾಕ್ಷಿಣ್ಯವಾಗಿ ಹೇಳುತ್ತಿದ್ದವು. ಹೀಗಾಗಿ ನಮ್ಮ ಬೊಕ್ಕಸದಲ್ಲಿ ಡಾಲರ್ ಸಂಗ್ರಹಿಸುವ ಸಲುವಾಗಿ ನಾವು ಪರದಾಡುವ ಸ್ಥಿತಿ ಬರುತ್ತಿತ್ತು. ಹೀಗೇ ಡಾಲರುಗಳಿಗೆ ಡಿಮ್ಯಾಂಡು ಜಾಸ್ತಿಯಾದ ಕೂಡಲೇ ಅದರ ಗಡಿ ಅರವತ್ತು ರುಪಾಯಿ ದಾಟಿ, ಎಪ್ಪತ್ತರ ಹತ್ತಿರ ಹೋಗುತ್ತಿತ್ತು. ಹೀಗೆ ಮಾಡುತ್ತಾ ಒಂದು ಕಡೆಯಿಂದ ಒಪೆಕ್ ರಾಷ್ಟ್ರಗಳು ದುಡ್ಡು ಸಂಪಾದಿಸುತ್ತಿದ್ದವು. ಈ ಪೈಕಿ ದೊಡ್ಡ ಮೊತ್ತವನ್ನು ಉಗ್ರರಿಗೆ ನೀಡಿ ಅವರ ಕೈಯ್ಯನ್ನೂ ಬಲಪಡಿಸಿ ನಮಗೆ ಹಿಂಸೆ ಕೊಡುತ್ತಿದ್ದವು. ಅತ್ತ ಅಮೆರಿಕ ಕೂಡ ತನಗೆ ಬೇಕಾದ ಕಚ್ಚಾ ತೈಲದ ವಿಷಯದಲ್ಲಿ ಸ್ವಾವಲಂಬನೆ ಸಾಧಿಸಿದ್ದಲ್ಲದೇ, ಒಪೆಕ್ ರಾಷ್ಟ್ರಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಂಡಿತು.

ಯಾವಾಗ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದರೋ, ಆನಂತರ ಶುರುವಾಯಿತು ಪಕ್ಕಾ ವ್ಯವಹಾರ. ಒಪೆಕ್ ರಾಷ್ಟ್ರಗಳಿಂದ ನಾವು ಅವರು ಹೇಳಿದಷ್ಟು ಹಣ ಕೊಟ್ಟು ತೈಲ ಖರೀದಿ ಮಾಡಬೇಕು. ಇದಕ್ಕಾಗಿ ಡಾಲರ್ ಸಂಗ್ರಹಿಸಿಟ್ಟುಕೊಳ್ಳಬೇಕು. ಹೀಗೆ ಡಾಲರುಗಳನ್ನು ದಂಡಿಯಾಗಿ ಕೊಟ್ಟು ತಮ್ಮ ವಿರುದ್ಧದ ಭಯೋತ್ಪಾದನೆಗೆ ಅನೇಕ ದೇಶಗಳು ಕುಮ್ಮಕ್ಕು ಕೊಡುವುದನ್ನೂ ಸಹಿಸಿಕೊಳ್ಳಬೇಕು. ಹೀಗಾಗಿ ರಷ್ಯಾದ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಬಂದಾಗ ಮಾತುಕತೆ ನಡೆಸಿದ ಮೋದಿ, ಇದುವರೆಗೆ ರಷ್ಯಾದಿಂದ ಭಾರತಕ್ಕೆ ಎಷ್ಟು ತೈಲ ಆಮದಾಗುತ್ತಿತ್ತೋ, ಅದನ್ನು ನಲವತ್ತು ಪಟ್ಟು ಹೆಚ್ಚಳ ಮಾಡಲು ಒಪ್ಪಂದ ಮಾಡಿಕೊಂಡರು. ಇದಕ್ಕಾಗಿ ನೀವು ಡಾಲರು ಕೊಡಬೇಕಿಲ್ಲ. ನಿಮ್ಮ ಭಾರತದ ಕರೆನ್ಸಿಯನ್ನೇ ಅಂದರೆ ರುಪಾಯಿಯನ್ನೇ ಕೊಡಿ ಎಂದು ರಷ್ಯಾ ಹೇಳಿತು. ಅಲ್ಲಿಗೆ ನಾವು ಕಲೆಕ್ಟು ಮಾಡಬೇಕಿರುವ ಡಾಲರುಗಳ ಪ್ರಮಾಣ ದೊಡ್ಡ ಮಟ್ಟದಲ್ಲಿ ಕುಸಿಯಿತು. ಯಾವಾಗ ಭಾರತ ತನ್ನ ಪಕ್ಕದ ರಷ್ಯಾದ ಜತೆ ಒಪ್ಪಂದ ಮಾಡಿಕೊಂಡು ತೈಲ ರಫ್ತಿನ ಪ್ರಮಾಣವನ್ನು ಹೆಚ್ಚಿಸಿಕೊಂಡಿತೋ, ಆಗ ನೆರೆಯ ಚೀನಾ ಕೂಡ ಅದೇ ಕೆಲಸ ಮಾಡಿತು. ನಾವು ನಮ್ಮ ಕರೆನ್ಸಿ ಯೂನ್ ಅನ್ನು ಕೊಡುತ್ತೇವೆ. ತೈಲ ಕೊಡಿ ಎಂದು ಒಪ್ಪಂದ ಮಾಡಿಕೊಂಡಿತು.

ಇವತ್ತು ಜಗತ್ತಿನಲ್ಲಿ ಅತ್ಯಂತ ಹೆಚ್ಚು ತೈಲ ಬಳಸುವ ಎರಡು ರಾಷ್ಟ್ರಗಳೆಂದರೆ ಚೀನಾ ಹಾಗೂ ಭಾರತ. ಇವೆರಡೇ ರಾಷ್ಟ್ರಗಳು ಸೇರಿ ಒಪೆಕ್ ರಾಷ್ಟ್ರಗಳಿಂದ ಉತ್ಪಾದನೆಯಾಗುವ ತೈಲದ ಅರ್ಧದಷ್ಟು ಪ್ರಮಾಣವನ್ನು ಆಮದು ಮಾಡಿಕೊಳ್ಳುತ್ತಿದ್ದವು ಎಂದರೆ ಊಹಿಸಿ. ಹೀಗೆ ಯಾವಾಗ ಒಪೆಕ್ ರಾಷ್ಟ್ರಗಳ ಜತೆಗಿನ ವ್ಯವಹಾರದಲ್ಲಿ ಗಣನೀಯ ಪ್ರಮಾಣದ ತಗ್ಗುವಿಕೆ ಆಯಿತೋ, ಆಗ ಒಪೆಕ್ ರಾಷ್ಟ್ರಗಳಲ್ಲಿ ಉತ್ಪಾದನೆಯಾಗುವ ತೈಲಕ್ಕೆ ದೊಡ್ಡ ಮಾರುಕಟ್ಟೆ ಇಲ್ಲದಂತಾಯಿತು. ಬೇಡಿಕೆಯೇ ಕಡಿಮೆಯಾದ ಮೇಲೆ ಉತ್ಪಾದಿಸುವ ತೈಲವನ್ನು ಏನು ಮಾಡಬೇಕು? ಒಂದು ಕಡೆಯಿಂದ ಅಮೆರಿಕ, ಮತ್ತೊಂದು ಕಡೆಯಿಂದ ರಷ್ಯಾ, ಮಗದೊಂದು ಕಡೆಯಿಂದ ಚೀನಾ ಹಾಗೂ ಭಾರತ ತಾವು ಆಮದು ಮಾಡಿಕೊಳ್ಳುತ್ತಿದ್ದ ತೈಲದ ಪ್ರಮಾಣವನ್ನು ಕುಗ್ಗಿಸಿದವೋ, ಆಗ ಒಪೆಕ್ ರಾಷ್ಟ್ರಗಳು ಕಂಗಾಲಾದವು. ಹೀಗಾಗಿ ಅವರು ಉತ್ಪಾದಿಸುವ ತೈಲಕ್ಕೆ ಈ ಮುಂಚೆ ಇದ್ದ ಬೇಡಿಕೆ ಇಲ್ಲ. ಒಂದು ಕಚ್ಚಾ ಬ್ಯಾರಲ್ ತೈಲಕ್ಕೆ ನೂರಾ ಮೂವತ್ನಾಲ್ಕು ಡಾಲರುಗಳನ್ನು ಕೊಡುವ ಜಾಗದಲ್ಲಿ ಐವತ್ತು ಡಾಲರುಗಳಿಗಿಂತ ಕಡಿಮೆ ದುಡ್ಡು ಹುಟ್ಟುತ್ತಿದೆ ಎಂದರೆ ಅವೇನು ಮಾಡಬೇಕು?

ನೆನಪಿಡಿ, ಒಪೆಕ್ ರಾಷ್ಟ್ರಗಳಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ಇಪ್ಪತ್ತು ರುಪಾಯಿ. ಆದರೆ ಒಂದು ಲೀಟರ್ ಕುಡಿಯುವ ನೀರಿನ ಬೆಲೆ ಎಂಬತ್ತು ರುಪಾಯಿ. ದಶಕಗಳ ಕಾಲ ದಂಡಿಯಾಗಿ ಹರಿದು ಬರುತ್ತಿದ್ದ ಹಣದಿಂದ ಮೋಜು-ಮಸ್ತಿ ಮಾಡಿದ್ದಾಯಿತು. ಟೈಮ್‌ಪಾಸಿಗೆ ಅಂತ ಉಗ್ರರನ್ನು ಪೋಷಿಸುವ ಕೆಲಸವೂ ಹಲ ರಾಷ್ಟ್ರಗಳಿಂದ ನಡೆಯಿತು. ಆದರೆ ಈಗ? ಅವರು ಉತ್ಪಾದಿಸುವ ತೈಲದ ಬೆಲೆ ಶೇಕಡಾ ಅರವತ್ತರಷ್ಟು ಕುಸಿದಿದೆ. ಮುಂಚೆಲ್ಲಾ ಪರಿಸ್ಥಿತಿಯನ್ನು ಗಮನಿಸಿ ಒಪೆಕ್ ರಾಷ್ಟ್ರಗಳು ಸಭೆ ಸೇರಿ, ಈ ಪ್ರಮಾಣದಲ್ಲಿ ಕಚ್ಚಾ ಬ್ಯಾರಲ್ ತೈಲದ ಬೆಲೆ ಹೆಚ್ಚು ಮಾಡಿದ್ದೇವೆ. ಕೊಡಬೇಕು ಅಷ್ಟೇ ಎಂದು ದಬಾಸ್‌ಗಿರಿ ಮಾಡುತ್ತಿದ್ದವು. ಆದರೆ ಈಗ ದಬಾಸ್‌ಗಿರಿಯೂ ಇಲ್ಲ, ಮಾರುಕಟ್ಟೆಯ ಗಾತ್ರವೂ ಹೆಚ್ಚಾಗುತ್ತಿಲ್ಲ. ಈಗಿನ ಸ್ಥಿತಿಯಲ್ಲಿ ನಮ್ಮ ನಮ್ಮ ರಾಷ್ಟ್ರಗಳಲ್ಲಿ ಎಷ್ಟು ಉತ್ಪಾದನೆಯಾಗುತ್ತದೋ, ಅಷ್ಟು ತೈಲವನ್ನು ಉತ್ಪಾದನೆ ಮಾಡಿಕೊಳ್ಳೋಣ ಎಂಬ ಮನಸ್ಥಿತಿ ಚೀನಾ ಹಾಗೂ ಭಾರತಕ್ಕೆ ಬಂದಿದೆ. ಜಗತ್ತಿನ ಆರು ನೂರು ಕೋಟಿ ಜನಸಂಖ್ಯೆಯ ಪೈಕಿ ಇನ್ನೂರಾ ಎಪ್ಪತ್ತು ಕೋಟಿ ಜನಸಂಖ್ಯೆ ಇರುವುದೇ ಈ ಎರಡು ದೇಶಗಳಲ್ಲಿ. ಇಂತಹ ಮಾರುಕಟ್ಟೆಗಳೇ ತೈಲಕ್ಕಾಗಿ ಬೇರೆ ದೇಶವನ್ನು ಅವಲಂಬಿಸಿದಾಗ, ತನ್ನಲ್ಲೇ ಇಂತಹ ಸಂಪನ್ಮೂಲವನ್ನು ಅರಸತೊಡಗಿದಾಗ ಒಪೆಕ್ ರಾಷ್ಟ್ರಗಳು ಏನು ಮಾಡಬೇಕು?

ಮೊದಲನೆಯದಾಗಿ ರಟ್ಟೆ ಮುರಿಯುವಂತೆ ದುಡಿದು ಅಭ್ಯಾಸವಿಲ್ಲ. ಎರಡನೆಯದಾಗಿ ಸರಳವಾಗಿ ಬದುಕಿ ಅಭ್ಯಾಸವಿಲ್ಲ. ಹೀಗಾಗಿ ಏನು ಮಾಡಬೇಕು? ಉಗ್ರರಿಗೆ ಹಣ ಪೂರೈಕೆ ಮಾಡುವುದು ಬೇರೆ ಮಾತು. ದುಡ್ಡು ಸುಖಾಸುಮ್ಮನೆ ದಂಡಿಯಾಗಿ ಹರಿಯುತ್ತಿರುವಾಗ ಬೇರೆಯವರಿಗೆ ಕೊಡಬಹುದು. ಆದರೆ ತಮ್ಮ ಮನೆಯೇ ದುಡ್ಡಿಗಾಗಿ ಪರದಾಡುವ ಸ್ಥಿತಿ ಬಂದಾಗ ಉಗ್ರರನ್ನು ಪೋಷಿಸುವ ಕೆಲಸ ಈಗ ಬಹುತೇಕ ರಾಷ್ಟ್ರಗಳ ಕೈಲಿ ಆಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬರಾಕ್ ಒಬಾಮಾ ಬಂದು ಅಣುಬಂಧ ಒಪ್ಪಂದದ ರೂಪುರೇಷೆಗಳನ್ನು, ಅದಕ್ಕಿರುವ ಅಡ್ಡಿಗಳನ್ನು ನಿವಾರಿಸಿ ಹೋಗಿದ್ದಾರೆ. ಹೀಗಾಗಿ ಭಾರತ ಈ ಮುಂಚಿನಂತೆ ಇಂಧನಕ್ಕಾಗಿ ಪರದಾಡಬೇಕಿಲ್ಲ. ಅಣುಬಂಧ ಒಪ್ಪಂದದ ನಂತರ ದಂಡಿಯಾಗಿ ವಿದ್ಯುತ್ ತಯಾರಿಸಲು ಸಾಧ್ಯವಾಗುವಾಗ, ವಾಣಿಜ್ಯ ಚಟುವಟಿಕೆಗಳಿಗೆ ಅನುಕೂಲವಾಗುವಾಗ ಕ್ರಮೇಣ ಬೇರೆ ದೇಶಗಳ ಮೇಲಿನ ಅವಲಂಬನೆ ತಗ್ಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಡಾಲರುಗಳ ಆಟದಿಂದ ವಿದೇಶಿ ವಿನಿಮಯಕ್ಕೆ ಆಗುವ ದೊಡ್ಡ ಹೊಡೆತವೂ ತಪ್ಪುತ್ತದೆ. ಪರಿಣಾಮವಾಗಿ ಒಪೆಕ್ ರಾಷ್ಟ್ರಗಳು ಸ್ವಲ್ಪ ದಿನಗಳಲ್ಲಿ ಸುಸ್ತಾಗಿ ಹೋಗುತ್ತವೆ. ಭಾರತ ಹಾಗೂ ಚೀನಾದಂತಹ ಮಾರುಕಟ್ಟೆಯನ್ನು ಕಳೆದುಕೊಂಡರೆ ಆಗುವ ಅನಾಹುತವನ್ನು ಈಗ ಒಪೆಕ್ ರಾಷ್ಟ್ರಗಳು ಅರಿಯುತ್ತಿವೆ.

ಒಂದು ವೇಳೆ ಇದೇ ಸಂದರ್ಭದಲ್ಲಿ ಗೋದಾವರಿ ನದಿ ವ್ಯಾಪ್ತಿಯಲ್ಲಿ ತೈಲ ನಿಕ್ಷೇಪವನ್ನು ಕಂಡು ಹಿಡಿದಂತೆ ಇನ್ನೆಲ್ಲಾದಾರೂ ತೈಲ ನಿಕ್ಷೇಪವನ್ನು ಭಾರತ ಹುಡುಕಿಕೊಂಡರೆ ಅನುಮಾನವೇ ಬೇಡ. ಒಪೆಕ್ ರಾಷ್ಟ್ರಗಳ ಕಬಂಧ ಬಾಹುಗಳಲ್ಲಿ ಶಕ್ತಿಯೇ ಉಳಿದಿರುವುದಿಲ್ಲ. ಆ ಮಟ್ಟಿಗೆ ಮೋದಿ ಮತ್ತವರ ಥಿಂಕ್ ಟ್ಯಾಂಕ್‌ನ ವ್ಯವಹಾರ ಚಾತುರ್ಯವನ್ನು ಮೆಚ್ಚಬೇಕು. ನೋ ಡೌಟ್.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 07 February, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books