Ravi Belagere
Welcome to my website
ನಿಮ್ಮದು ಎಂಥ ಮ್ಯಾರೇಜು? ಶುದ್ಧ ಅರೇಂಜ್‌ಡಾ? ನೀವೇ ಮಾಡಿಕೊಂಡ ಲವ್ ಮ್ಯಾರೇಜಾ? live in relationshipನಂತಹ  ಗಾಂಧರ್ವ ವಿವಾಹನಾ? ‘ಲವ್ ಕಮ್ ಅರೇಂಜ್ಡ್’ ಮದುವೆಯಾ? ಅಂತರ್‌ಜಾತೀಯ ವಿವಾಹವಾ? ಅಂತರ್‌ಧರ್ಮೀಯ ವಿವಾಹವಾ? (Request :ಜಾತಿಗಳ ಪುಸ್ತಾಪ ಮಾಡಬೇಡಿ) Love, run and marry ಎಂಬಂತೆ ಮನೆಗಳನ್ನು ಬಿಟ್ಟು ಹೋಗಿ ಆದ ಮದುವೆಯಾ? ಎಂಥ ಮದುವೆಯಾಗಿದ್ದರೂ ಅಡ್ಡಿಯಿಲ್ಲ. ಅದಕ್ಕೆ ಗೌರವವಿದೆ. ಒಂದು inland letterನಷ್ಟು ಬರವಣಿಗೆಯನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆಯಿರಿ. ಜೊತೆಗೆ ಇಬ್ಬರೂ ಇರುವ ಫೊಟೋ ಕಳಿಸಿ. mail ಮಾಡೋದಾದರೆ [email protected]ಗೆ ಮಾಡಿ.
Home About Us Gallery Books Feedback Prarthana Contact Us

Buy Ravi Belagere Books online

ಸಂಭ್ರಮಿಸುವ ಗುಣವನ್ನು ನಾವು ಕಳಕೊಂಡಿದ್ದಾದರೂ ಎಲ್ಲಿ?

‘ಬಡೇ ಬಡೇ ದೇಶೋಂ ಮೆ.. ಮುಂದಿನದು ನಿಮಗೆ ಗೊತ್ತಲ್ವಾ...’
ಒಬಾಮಾ ಮಾತಿಗೆ ಸಿರಿ ಫೋರ್ಟ್ ಸಭಾಂಗಣದಲ್ಲಿ ಚಪ್ಪಾಳೆಯ ಸುರಿಮಳೆಯಾಯಿತು. ಅಲ್ಲಿದ್ದ ಸಾವಿರಾರು ಜನರು ಪುಳಕಿತರಾಗಿದ್ದರಲ್ಲಿ ಅಚ್ಚರಿಯೇನೂ ಇಲ್ಲ. ಅಮೆರಿಕಾದ ಅಧ್ಯಕ್ಷನ ಬಾಯಲ್ಲಿ ಹಿಂದಿ ಡೈಲಾಗು, ಅದೂ ಶಾರೂಖ್ ಖಾನ್ ಡೈಲಾಗು, ಎಲ್ಲಾದರೂ ಉಂಟಾ? ವಾವ್ ಕ್ಯಾ ಬಾತ್ ಹೈ!
ಇದು ನಮ್ಮ ರಕ್ತದ ಗುಣ. ಮನೆಗೆ ಬಂದ ಅತಿಥಿ ಏನು ಮಾಡಿದರೂ ಚಂದ, ಏನು ಮಾತಾಡಿದರೂ ಚಂದ. ಅವನು ಜೋಕು ಹೇಳುವುದಕ್ಕೆ ಮುಂಚೆಯೇ ನಾವು ನಗುವುದಕ್ಕೆ ತಯಾರಾಗಿ ನಿಂತಿರುತ್ತೇವೆ. ಅವನು ಒಂದು ಕೈ ಚಾಚಿದರೆ ನಾವು ಅದನ್ನು ಎರಡೂ ಕೈಗಳಲ್ಲಿ ಹಿಡಿದು ಕುಲುಕುತ್ತೇವೆ, ನಮ್ಮ ದೇಹವೂ ಕುಲುಕುತ್ತದೆ. ಒಟ್ಟಲ್ಲಿ ಅತಿಥಿ ಸಂಪ್ರೀತನಾಗಬೇಕು, ನಮ್ಮ ಆತಿಥ್ಯದಲ್ಲಿ ಯಾವುದೇ ಅರೆಕೊರೆ ಕಾಣಿಸಬಾರದು. ನಾಳೆ ಅವನು ತನ್ನೂರಿಗೆ ತೆರಳಿ ನಮ್ಮ ಆತಿಥ್ಯದ ಬಗ್ಗೆ ಕೊಂಡಾಡಬೇಕು. ಅಲ್ಲಿಗೆ ನಾವು ಧನ್ಯರು.

ಆದರೆ ಇತ್ತೀಚೆಗೆ ನಮ್ಮ ರಕ್ತದಲ್ಲೂ ಯಾಕೋ ಕಲಬೆರಕೆಯಾದಂತಿದೆ. ನಮ್ಮನೆಗೆ ಯಾರೇ ಬರಲಿ, ಆತನ ನಡೆನುಡಿಯನ್ನು ನಾವು ಅನುಮಾಸ್ಪದವಾಗಿ ನೋಡುವುದನ್ನು ರೂಢಿ ಮಾಡಿಕೊಂಡಿದ್ದೇವೆ. ಅದಕ್ಕೆ ಪ್ರಗತಿಪರ ಚಿಂತನೆ ಎಂಬ ಲೇಬಲ್ಲನ್ನೂ ಅಂಟಿಸಿದ್ದೇವೆ. ಒಬಾಮಾ ಯಾಕೆ ಹಿಂದಿಯಲ್ಲಿ ಮಾತಾಡಬೇಕಿತ್ತು? ಅವನಿಗೆ ಎರಡೇ ದಿನದಲ್ಲಿ ಹಿಂದಿ ಕಲಿಸಿದವರಾರು? ಅವನು ದಿಲ್ ವಾಲೇ ದುಲ್ಹಾನಿಯಾ ಲೇ ಜಾಯೆಂಗೇ ಸಿನಿಮಾ ನೋಡಿದ್ನಾ? ತಾನು ಹೇಳಿದ ಸಿನಿಮಾ ಡೈಲಾಗಿನ ಅರ್ಥ ಏನೂಂತ ಅವನಿಗೇನಾದರೂ ಗೊತ್ತಿದೆಯಾ? ಇದೆಲ್ಲಾ ಅವನಿಗೆ ಭಾಷಣ ಬರೆದುಕೊಟ್ಟವರ ಹಿಕಮತ್ತು ಇರಬಹುದಾ? ಇಂಥಾ ಪ್ರಶ್ನೆಗಳೆಲ್ಲಾ after effect ರೂಪದಲ್ಲಿ ನಮ್ಮ ಮನಸ್ಸೊಳಗೆ ಮಿಸುಕಾಡುತ್ತವೆ. so what, ಒಬಾಮಾ ಆ ಮಾತನ್ನಾಡಿದಾಗ ನೀವೆಲ್ಲರೂ ಒಂದು ಕ್ಷಣ ಮೈಮರೆತಿದ್ದು ನಿಜವಲ್ಲವೇ? ಒಂದು ಸಣ್ಣ ಮೆಚ್ಚುಗೆಯ ಭಾವ ಆತನೆಡೆಗೆ ಹರಿದದ್ದು ನಿಜವಲ್ಲವೇ? ಕೊನೆಗೆ ಮುಖ್ಯವಾಗುವುದು ಅದೇ. ದೂರದೂರಿಂದ ಬಂದ ಅತಿಥಿ ನಮ್ಮನೇ ಬಾಳೆಲೆಯ ಊಟ ಮಾಡಿ ಅಮ್ಮನ ಅಡುಗೆಯ ರುಚಿ ಬಗ್ಗೆ ನಾಲ್ಕು ಹೊಗಳಿಕೆಯ ಮಾತಾಡಿದರೆ ನಾವು ಸಂತೋಷ ಪಡೋದಿಲ್ವೇ? ಇಂಥಾ ಸಂದರ್ಭಗಳಲ್ಲಿ ನಾವು ಗಮನಿಸಬೇಕಾಗಿರುವುದು ಅತಿಥಿಯ ಸೌಜನ್ಯವನ್ನು. ಅದರ ಹಿಂದುಮುಂದಿನ ಉದ್ದೇಶವೇನು ಅನ್ನುವುದರ ಬಗ್ಗೆ ವಿಮರ್ಶೆ ಮಾಡುತ್ತಾ ಕೂರಬಾರದು. ಅದು ಸೌಜನ್ಯ ಅಲ್ಲ, ನಮ್ಮ ಸಂಸ್ಕೃತಿಯೂ ಅಲ್ಲ.

ಕಳೆದ ಸಾರಿ ಒಬಾಮಾ ದಂಪತಿ ಭಾರತಕ್ಕೆ ಬಂದಿದ್ದಾಗ ಮುಂಬೈ ಮಕ್ಕಳ ಜೊತೆ ಡಾನ್ಸ್ ಮಾಡಿದ್ದರು. ಈ ಬಾರಿ ಅದು ಸಾಧ್ಯವಾಗದೇ ಇದ್ದಿದ್ದಕ್ಕೆ ಒಬಾಮಾ ದಿಲ್ ವಾಲೆ ದುಲ್ಹಾನಿಯಾ ಲೇಜಾಯೆಂಗೆ ಚಿತ್ರದ ಡೈಲಾಗನ್ನು ನೆನಪಿಸಿಕೊಂಡ. ಈ ವಾಕ್ಯವನ್ನು ಟ್ವೀಟ್ ಮೂಲಕ ಪೂರ್ಣಗೊಳಿಸಿದ್ದು ಮೋದಿ. ಗಣರಾಜ್ಯೋತ್ಸವದ ಪೆರೇಡ್ ಸಂದರ್ಭದಲ್ಲಿ ಮಳೆ ಬಂದಿದ್ದಕ್ಕೆ ಮೋದಿ ನೀಡಿದ ಕಾರಣವೆಂದರೆ ಮತ್ತದೇ ‘ಬಡೇ ಬಡೇ ದೇಶೋಂ ಮೇ ಐಸಿ ಚೋಟಿ ಬಾತ್ ಹೋತೀ ರಹತೀ ಹೈ’.
ದೊಡ್ಡ ದೊಡ್ಡ ದೇಶಗಳಲ್ಲಿ ಇಂಥಾ ಚಿಕ್ಕ-ಚಿಕ್ಕ ಸಂಗತಿಗಳು ನಡೀತಾ ಇರುತ್ತವೆ. ನಾವು ಅದನ್ನು ದೊಡ್ಡದು ಮಾಡಬಾರದು. ಗಣರಾಜ್ಯೋತ್ಸವ ಪೆರೇಡನ್ನು ಮೋದಿ ಜೊತೆ ಕುಳಿತು ವೀಕ್ಷಿಸುವ ಸಂದರ್ಭದಲ್ಲಿ ಒಬಾಮಾ ಚ್ಯೂಯಿಂಗ್ ಗಮ್ ಜಗಿಯುತ್ತಿದ್ದ ಅನ್ನುವುದು ಕೂಡಾ ಚಿಕ್ಕ ಸಂಗತಿಯೇ. ಆದರೆ ಮಾಧ್ಯಮಗಳಲ್ಲಿ ಅದು ದೊಡ್ಡದಾಯಿತು. ಅದರ ಬಗ್ಗೆ ಒಂದು ಚರ್ಚೆಯೇ ನಡೆಯಿತು. ಒಬಾಮಾ ಗಮ್ ಜಗಿಯುವುದನ್ನು ಮತ್ತೆ ಮತ್ತೆ ತೋರಿಸಲಾಯಿತು. ಅದು ಮ್ಯಾನರ್ಸ್ ಅಲ್ಲ ಎಂದು ಕೆಲವರು ಟೀಕಿಸಿದರೆ, ಆ ಚ್ಯೂಯಿಂಗ್ ಗಮ್ಮಲ್ಲಿ ನಿಕೋಟಿನ್ ಇದೆ, ಸಿಗರೇಟು ಚಟದಿಂದ ಹೊರಗೆ ಬರುವುದಕ್ಕೋಸ್ಕರ ಒಬಾಮಾ ಅದನ್ನು ಜಗಿಯುತ್ತಿದ್ದಾರೆ ಎಂದು ಇನ್ಯಾರೋ ಸಂಶೋಧನೆ ಮಾಡಿದರು. ಒಬಾಮಾ ಈ ಹಿಂದೆಯೂ ಇದೇ ರೀತಿ ಚ್ಯೂಯಿಂಗ್ ಗಮ್ ಜಗಿಯುತ್ತಾ ಕುಳಿತಿದ್ದ ಅನ್ನುವುದು ಫಾಲೋ ಅಪ್ ಸ್ಟೋರಿ. ಕೊನೆಗೆ ಚ್ಯೂಯಿಂಗ್ ಗಮ್ ಏನಾಯಿತು. ಒಬಾಮಾ ಅದನ್ನು ನುಂಗಿದ್ನಾ ಅಥವಾ ಕುರ್ಚಿಯ ಕೈಗೆ ಅಂಟಿಸಿದ್ನಾ ಅನ್ನುವುದು ಗೊತ್ತಾಗಲಿಲ್ಲ. ಬಡೇ ಬಡೇ ದೇಶೋ ಮೇ...

ಯಾವುದೋ ಬೀದಿನಾಯಿ ಇದ್ದಕ್ಕಿದ್ದ ಹಾಗೆ ಮೈದಾನದೊಳಗೆ ನುಗ್ಗಿತು. ಅಲ್ಲಿದ್ದ ಜನಸಾಗರವನ್ನು ಕಂಡು ಕಕ್ಕಾಬಿಕ್ಕಿಯಾಗಿ ಓಡಾಡಿತು. ಟೀವಿ ಕೆಮೆರಾಗಳು ನಾಯಿಯೊಂದು ಉಗ್ರಗಾಮಿಯೋ ಎಂಬಂತೆ ಆ ದೃಶ್ಯವನ್ನು ಸೆರೆಹಿಡಿದವು. ಗಣರಾಜ್ಯೋತ್ಸವದ ಪೆರೇಡಿಗೆ ನಾಯಿ ಹೇಗೆ ನುಗ್ಗಿತು? ಇದು ಭದ್ರತಾ ವ್ಯವಸ್ಥೆಯಲ್ಲಾದ ದೊಡ್ಡ ಲೋಪವಲ್ಲವೇ? ಆ ನಾಯಿ ಕಾಲಿಗೆ ಯಾರಾದರೂ ಬಾಂಬ್ ಕಟ್ಟಿದ್ದರೆ ಸಾವಿರಾರು ಜನ ಸಾಯುತ್ತಿರಲಿಲ್ಲವೇ? ಹಾಗಂತ ಕೆಲವು ನಾಯಕರು ಪ್ರಶ್ನಿಸಿದರು. ಮಾರನೇ ದಿನದ ಪತ್ರಿಕೆಗಳಲ್ಲಿ ನಾಯಿಗೂ ಒಂದು ಜಾಗ ಸಿಕ್ಕಿತು!

ಹೈದರಾಬಾದ್ ಹೌಸ್‌ನಲ್ಲಿ ಮೋದಿ ಮತ್ತು ಒಬಾಮಾ ನಡುವೆ ಚಾಯ್ ಪೇ ಚರ್ಚಾ. ಮೋದಿ ತಾನೇ ಸ್ವತಃ ಚಹಾ ತಯಾರಿಸಿ ಬೆಳ್ಳಿ ಕಪ್ಪಿಗೆ ಸುರಿದು ಒಬಾಮಾಗೆ ನೀಡಿದರು. ಆದರೆ ಟೇಬಲ್ ಮೇಲೆ ಕಾಫಿ ಪಾಟ್ ಇತ್ತು. ಸರಿ, ಚಾನೆಲ್ಲುಗಳಿಗೆ ಇದೇ ಆಹಾರವಾಯಿತು. ಒಬಾಮಾ ಚಹಾ ಕುಡಿದದ್ದೇ ನಿಜವಾದರೆ, ಕಾಫಿ ಪಾಟ್ ಯಾಕೆ ಟೇಬಲ್ ಮೇಲೆ ಇತ್ತು ಅನ್ನುವ ಅಪಸ್ವರ ಕೇಳಿಬಂತು.
ಇದು ನಮ್ಮ ಕೆಲವು ಪ್ರಗತಿಪರರ ಜಾಯಮಾನ. ಅವರಿಗೆ ಸಂಭ್ರಮಿಸುವುದಕ್ಕೆ ಬರುವುದಿಲ್ಲ. ಇನ್ಯಾರಾದರೂ ಸಂಭ್ರಮಿಸುತ್ತಿದ್ದರೆ ಅದರಲ್ಲೊಂದು ಅಪಸ್ವರವನ್ನು ಹುಡುಕಿ ತೆಗೆಯುವುದರಲ್ಲೇ ಬ್ರಹ್ಮಾನಂದ ಕಾಣುತ್ತಾರೆ. ಅವರ ವಾದದ ಧಾಟಿ ಹೇಗಿರುತ್ತದೆ ಅನ್ನುವುದಕ್ಕೆ ಒಂದೆರಡು ಸ್ಯಾಂಪಲ್?

ಒಬಾಮಾನ ಆಗಮನದ ಬಗ್ಗೆ ಇಷ್ಟೊಂದು ಪ್ರಚಾರ ನೀಡುವ ಅಗತ್ಯವೇನಿತ್ತು? ಆತ ನಮ್ಮ ದೇಶಕ್ಕೆ ಬಂದಿದ್ದು ವ್ಯಾಪಾರ ಮಾಡುವುದಕ್ಕೆ. ಲಾಭವಿಲ್ಲದೇ ಸುಮ್ಮಸುಮ್ಮನೇ ಅವನು ಬರುತ್ತಿದ್ದನಾ? ಸರಿಯಪ್ಪಾ, ಹಾಗಿದ್ದರೆ ನಾನೂ ಕೇಳುತ್ತೇನೆ. ಮೋದಿ ಅಮೆರಿಕಾಗೆ ಹೋಗಿದ್ದು ಯಾಕೆ? ವ್ಯಾಪಾರ ಮಾಡುವುದಕ್ಕೆ ಅಲ್ವಾ? ಅಷ್ಟಕ್ಕೂ ನಮ್ಮನೇ ಕಾರ್ಯಕ್ರಮಕ್ಕೆ ಬಂದು ಉಂಡು ಹೋಗುವುದಕ್ಕೆ ಒಬಾಮಾ ನಮ್ಮ ಸೋದರಮಾವನ ಮಗ ಅಲ್ವಲ್ಲಾ. ಎಲ್ಲಾ ರಾಜತಾಂತ್ರಿಕ ಸಂಬಂಧಗಳ ಹಿಂದೆ, ಭೇಟಿಯ ಹಿಂದೆ ಒಂದು ರಾಜಕೀಯ ಅಜೆಂಡಾ ಇದ್ದೇ ಇರುತ್ತದೆ. ಅದೇನೂ ದೊಡ್ಡ ರಹಸ್ಯವಲ್ಲ.
ಇನ್ನೊಂದು ಟೀಕೆ ಹೀಗೆ ಸಾಗುತ್ತದೆ -ಒಬಾಮಾ ಭಾರತಕ್ಕೆ ಬಂದಿದ್ದು ನಮಗಷ್ಟೇ ದೊಡ್ಡ ಸುದ್ದಿ. ಅಮೆರಿಕಾದ ಪತ್ರಿಕೆಗಳಲ್ಲಿ ಇದು ಅಂಥಾ ದೊಡ್ಡ ಸುದ್ದಿಯಾಗಲಿಲ್ಲ. ಅವರೆಲ್ಲಾ ಸೌದಿ ಅರೇಬಿಯಾದ ದೊರೆಯ ಸಾವಿನ ಸುದ್ದಿಗೇ ಹೆಚ್ಚು ಒತ್ತು ಕೊಟ್ಟಿದ್ದರು. ಇದೇ ಪತ್ರಿಕೆಗಳು ಮೋದಿ ಅಮೆರಿಕಾಗೆ ಭೇಟಿ ನೀಡಿದಾಗ ಪುಟಗಟ್ಟಲೆ ಬರೆದದ್ದು ಯಾಕೆ ಸ್ವಾಮೀ ನಿಮಗೆ ನೆನಪಾಗುತ್ತಿಲ್ಲ?


ಸುದ್ದಿಯ ಹಿಂದಿನ ಸತ್ಯವನ್ನು ಹುಡುಕುವುದು ಪತ್ರಕರ್ತನ ಕೆಲಸ ನಿಜ. ಹಾಗಂತ ಪ್ರತಿಯೊಂದರಲ್ಲೂ ಕೊಂಕು ಹುಡುಕುತ್ತಾ ಟೀವಿ ಸೀರಿಯಲ್ಲುಗಳ ಅತ್ತೆ ಪಾತ್ರದಂತೆ ಆಡುವುದು ಸರಿಯಲ್ಲ. ಮೋದಿ ಪ್ರಧಾನಿಯಾದಾಗ ಅವರ ಹಿನ್ನೆಲೆ, ಬೆಳೆದು ಬಂದ ದಾರಿ ನಮಗೆ ಮುಖ್ಯವಾಗಲಿಲ್ಲ. ಬದಲಾಗಿ ಅವರು ತನ್ನ ಪತ್ನಿಯಿಂದ ದೂರವಿದ್ದಾರೆ ಅನ್ನುವುದು ಸುದ್ದಿಯಾಯಿತು. ಕಿರಣ್ ಬೇಡಿಯನ್ನು ದೆಹಲಿಯ ಮುಖ್ಯಮಂತ್ರಿ ಕ್ಯಾಂಡಿಡೇಟ್ ಆಗಿ ಬಿಜೆಪಿ ಆಯ್ಕೆ ಮಾಡಿದಾಗ, ಇದ್ದಕ್ಕಿದ್ದ ಹಾಗೆ ಆಕೆಯ ಗಂಡನ ಸಂದರ್ಶನ ಪ್ರಕಟವಾಯಿತು. ಮೋದಿಯ ಪತ್ನಿಯನ್ನು ಪತ್ತೆ ಹಚ್ಚಿದಷ್ಟೇ ವೇಗವಾಗಿ ಬೇಡಿಯ ಗಂಡನನ್ನೂ ಪತ್ತೆ ಮಾಡಲಾಯಿತು. ಬೇಡಿಗೂ ಆಕೆಯ ಗಂಡನಿಗೂ ಅಷ್ಟಕ್ಕಷ್ಟೆ ಅನ್ನುವ ಸುದ್ದಿಗೆ ಭಾರೀ ಪ್ರಚಾರ ಸಿಕ್ಕಿತು. ತನ್ನ ಗಂಡನನ್ನೇ ಚೆನ್ನಾಗಿ ನೋಡಿಕೊಳ್ಳದೇ ಇದ್ದವಳು ದೆಹಲಿಯ ಪ್ರಜೆಗಳನ್ನು ಹೇಗೆ ಚೆನ್ನಾಗಿ ನೋಡಿಕೊಳ್ಳುವುದಕ್ಕೆ ಸಾಧ್ಯ ಅನ್ನುವ ಪ್ರಶ್ನೆಯೇ ವಿರೋಧಪಕ್ಷಗಳಿಗೆ ಅಸ್ತ್ರವಾಯಿತು.

ಒಬಾಮಾ ಬಂದಾಗ ಮೋದಿ ಹಲವು ಬಗೆಯ ದಿರಿಸುಗಳಲ್ಲಿ ಮಿಂಚಿದರು. ಛೆಛೆ, ಪ್ರಧಾನಿ ಇಷ್ಟೊಂದು ದುಬಾರಿ ಬಟ್ಟೆ ಹಾಕಿಕೊಳ್ಳುವುದಾ, ಅವರು ಸಿಂಪ್ಲಿಸಿಟಿಯನ್ನು ಮೆರೆಯಬೇಕಾಗಿತ್ತು ಅನ್ನುವ ಕಾಮೆಂಟು ತಕ್ಷಣ ಬಂತು. ದೇಶದ ಪ್ರಧಾನಿಯಾಗಿ ಒಂದೊಳ್ಳೆ ಬಟ್ಟೆ ಹಾಕುವುದು ತಪ್ಪಾ? ಅವರು ಕಳಪೆ ಬಟ್ಟೆ ಧರಿಸಿದ್ದರೆ ನಮ್ಮ ದೇಶದ ಮರ್ಯಾದೆಯನ್ನು ಹರಾಜು ಹಾಕಿದರು ಎಂದು ನೀವೇ ಬೈಯ್ಯುತ್ತಿರಲಿಲ್ಲವೇ? ನಾವು ಯಾಕೆ ಹೀಗೆ ಎಲ್ಲವನ್ನೂ ವಕ್ರವಾಗಿ ನೋಡುತ್ತೇವೆ? ಯಾಕೆ ಪ್ರತಿಯೊಂದರಲ್ಲೂ ತಪ್ಪನ್ನೇ ಕಾಣುತ್ತೇವೆ? ಒಂದು ಚಪ್ಪಾಳೆ, ಒಂದು ಮಂದಹಾಸ, ಒಂದು ಪುಟ್ಟ ಸಂಭ್ರಮ, ಇದರಿಂದ ನಾವು ಕಳಕೊಳ್ಳುವುದಕ್ಕೇನಿದೆ?
ಒಬಾಮಾ ದಂಪತಿ ಅಮೆರಿಕಾಗೆ ವಾಪಸ್ ಹೋದ ನಂತರ ಪತ್ರಿಕೆಗಳಲ್ಲಿ ಒಂದು ಫೊಟೋ ನೋಡಿದೆ. ಮಿಶೆಲ್ ಒಬಾಮಾ ಒಂದು ಪುಟ್ಟ ಹುಡುಗಿಯ ಕತ್ತು ಬಳಸಿ ನಿಂತಿರುವ ಫೊಟೋ ಅದು. ಆಕೆಯ ಮಟ್ಟಿಗೆ ಅದೊಂದು ಗೆಸ್ಚರ್ ಇರಬಹುದು, ಆದರೆ ನನಗೆ ಕಾಣಿಸಿದ್ದು ಅಲ್ಲೊಬ್ಬ ಮಮತಾಮಯಿ ತಾಯಿ. ಕೆಲವೊಮ್ಮೆ ಪಂಥ, ಸಿದ್ಧಾಂತಗಳನ್ನು ಮರೆಯುವುದರಲ್ಲೂ ಸುಖವಿದೆ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 06 February, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books