Ravi Belagere
Welcome to my website
ನಿಮ್ಮದು ಎಂಥ ಮ್ಯಾರೇಜು? ಶುದ್ಧ ಅರೇಂಜ್‌ಡಾ? ನೀವೇ ಮಾಡಿಕೊಂಡ ಲವ್ ಮ್ಯಾರೇಜಾ? live in relationshipನಂತಹ  ಗಾಂಧರ್ವ ವಿವಾಹನಾ? ‘ಲವ್ ಕಮ್ ಅರೇಂಜ್ಡ್’ ಮದುವೆಯಾ? ಅಂತರ್‌ಜಾತೀಯ ವಿವಾಹವಾ? ಅಂತರ್‌ಧರ್ಮೀಯ ವಿವಾಹವಾ? (Request :ಜಾತಿಗಳ ಪುಸ್ತಾಪ ಮಾಡಬೇಡಿ) Love, run and marry ಎಂಬಂತೆ ಮನೆಗಳನ್ನು ಬಿಟ್ಟು ಹೋಗಿ ಆದ ಮದುವೆಯಾ? ಎಂಥ ಮದುವೆಯಾಗಿದ್ದರೂ ಅಡ್ಡಿಯಿಲ್ಲ. ಅದಕ್ಕೆ ಗೌರವವಿದೆ. ಒಂದು inland letterನಷ್ಟು ಬರವಣಿಗೆಯನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆಯಿರಿ. ಜೊತೆಗೆ ಇಬ್ಬರೂ ಇರುವ ಫೊಟೋ ಕಳಿಸಿ. mail ಮಾಡೋದಾದರೆ [email protected]ಗೆ ಮಾಡಿ.
Home About Us Gallery Books Feedback Prarthana Contact Us

Buy Ravi Belagere Books online

ಸೂತಕದ ಮನೆಯಲ್ಲಿ ಮಾತಿಗೇನು ಕೆಲಸ?

ನಡುರಸ್ತೆಯಲ್ಲೇ ರೌಡಿಯ ಕೊಲೆಯಾಗಿದೆ. ಅವನ ತಾಯಿ ಆ ರಕ್ತಸಿಕ್ತ ದೇಹದ ಮುಂದೆ ಕುಳಿತು ರೋದಿಸುತ್ತಿದ್ದಾಳೆ. ಟೀವಿ ಚಾನೆಲ್ ವರದಿಗಾರ ಆಕೆಯ ಮುಂದೆ ಮೈಕ್ ಹಿಡಿಯುತ್ತಾನೆ. ಆಕೆ ಅವನನ್ನು ಒಮ್ಮೆ ದಿಟ್ಟಿಸಿ ನೋಡಿ ಅಲ್ಲಿಂದ ಎದ್ದು ಹೋಗುತ್ತಾಳೆ. ವರದಿಗಾರ ಆಕೆಯನ್ನು ಹಿಂಬಾಲಿಸುತ್ತಾನೆ. ನೀವು ಆತನನ್ನುin sensitive ಎಂದು ಜರೆಯಬಹುದು, ಮಗನನ್ನು ಕಳಕೊಂಡ ದುಃಖದಲ್ಲಿರುವ ತಾಯಿಯ ಪ್ರತಿಕ್ರಿಯೆ ಕೇಳುವುದೇ ಒಂದು ಕ್ರೌರ್ಯ ಎಂದು ಟೀಕಿಸಬಹುದು. ಆದರೆ ಆತನ ಪ್ರಕಾರ ಇದು ಕರ್ತವ್ಯ. ಹೀ ಈಸ್ ಆನ್ ಡ್ಯೂಟಿ. ಬೇರೆ ಚಾನೆಲ್ಲುಗಳ ವರದಿಗಾರನಿಗೇನಾದರೂ ಆ ತಾಯಿಯ ಪ್ರತಿಕ್ರಿಯೆ ಸಿಕ್ಕಿದರೆ ಈತನ ಉದ್ಯೋಗಕ್ಕೇ ಸಂಚಕಾರ ಬರಬಹುದು.

ಇನ್ನೊಬ್ಬರ ಅಳಿವಿನಲ್ಲೇ ನಮ್ಮ ಉಳಿವನ್ನು ಹುಡುಕುವ ವಿಚಿತ್ರ ಕಾಲಘಟ್ಟವಿದು. ನಮ್ಮ ನಡವಳಿಕೆಯಿಂದ ಇನ್ನೊಬ್ಬರಿಗಾಗುವ ಮಾನಸಿಕ ಆಘಾತದ ಬಗ್ಗೆ ಯಾರೂ ಯೋಚನೆ ಮಾಡುವುದಿಲ್ಲ. ಅವನು ಏನಾದರೂ ಅಂದುಕೊಳ್ಳಲಿ, ಬೇಕಿದ್ದರೆ ನಾಲ್ಕೇಟು ಹೊಡೆಯಲಿ, ನಮ್ಮ ಕೆಲಸ ಆದರೆ ಸಾಕು ಅನ್ನುವ ಧೋರಣೆ. ಈಗ ಯಾರ ಖಾಸಗಿ ಬದುಕಿಗೂ ಕಿಟಿಕಿ ಬಾಗಿಲುಗಳಿಲ್ಲ. ಗೋಮಾಳಕ್ಕೆ ಹಸುಗಳು ನುಗ್ಗಿದ ಹಾಗೆ ಪರಿಚಿತರು, ಅಪರಿಚಿತರು ಎಲ್ಲರೂ ನಮ್ಮ ಖಾಸಗಿ ವಲಯದೊಳಗೆ ನುಗ್ಗುತ್ತಲೇ ಇದ್ದಾರೆ. ಉದಾಹರಣೆಗೆ ಇಂಥಾದ್ದೊಂದು ದೃಶ್ಯವನ್ನು ಕಲ್ಪಿಸಿಕೊಳ್ಳಿ:
ಆತ ನಿಮ್ಮ ಸ್ನೇಹಿತನಲ್ಲ, ಹತ್ತಿರದ ನೆಂಟನೂ ಅಲ್ಲ. ಆದರೆ ಪರಿಚಿತ, ಒಂದೆರಡು ಸಲ ಎಲ್ಲೋ ಆತನನ್ನು ಭೇಟಿಯಾಗಿದ್ದೀರಿ. ಸಾಹಿತ್ಯ, ರಾಜಕೀಯ ಅದೂ ಇದೂ ಅಂತ ಸ್ವಲ್ಪ ಹೊತ್ತು ಆತನ ಜೊತೆ ಕಾಲ ಕಳೆದಿದ್ದೀರಿ. ಈಗ, ಅದೆಷ್ಟೋ ದಿನಗಳ ನಂತರ ಆತ ನಿಮ್ಮನ್ನು ಭೇಟಿಯಾಗುವುದಕ್ಕೆ ಬಂದಿದ್ದಾನೆ. ನೀವಿನ್ನೂ ಹಲೋ ಅಂದಿಲ್ಲ, ಅಷ್ಟರಲ್ಲೇ ಆತ ವಿಪರೀತ ಗಾಬರಿಗೆ ಬಿದ್ದವನಂತೆ ಕಿರುಚುತ್ತಾನೆ.
‘ಅಯ್ಯೋ, ಎಷ್ಟೊಂದು ವೀಕ್ ಆಗಿದ್ದೀರಲ್ರೀ, ಯಾಕೆ ಹುಷಾರಿಲ್ವಾ?’
ಇದೊಂದು ಮಾತು ಸಾಕು, ನಿಮ್ಮ ಇಡೀ ದಿನದ ಉತ್ಸಾಹವನ್ನು ಕೊಲ್ಲುವುದಕ್ಕೆ. ನೀವೇನಾದರೂ ಗಲಿಬಿಲಿಗೊಂಡು ಸುಮ್ಮನಿದ್ದರೆ ನಿಮ್ಮ ಕತೆ ಮುಗೀತು ಅಂತಾನೇ ಲೆಕ್ಕ. ಆತ ತನಗೆ ಗೊತ್ತಿರುವ ಡಾಕ್ಟರ್ ಹೆಸರು ಹೇಳುತ್ತಾನೆ, ಒಂದ್ಸಾರಿ ಚೆಕಪ್ ಮಾಡಿಸಿಕೊಂಡು ಬನ್ನಿ ಎಂದು ಸಲಹೆ ನೀಡುತ್ತಾನೆ. ನಿಮಗೆ ಡೆಂಗ್ಯೂ ಇರಬಹುದು ಅನ್ನುತ್ತಾನೆ, ಇನ್ನೂ ಕೆಲವರು ಇನ್ನೊಂದು ಹೆಜ್ಜೆ ಮುಂದೆ ಹೋಗಿ ಈ ಥರ ಸೊರಗುತ್ತಾ ಹೋಗುವುದು ಕ್ಯಾನ್ಸರ್‌ನ ಮೊದಲ ಸೂಚನೆ ಎಂದು ಡಿಕ್ಲೇರ್ ಮಾಡುತ್ತಾರೆ. ನೀವೇನಾದರೂ ದುರ್ಬಲ ಮನಸ್ಸಿನವರಾದರೆ ಆತ ಹೇಳುತ್ತಿರುವುದು ನಿಜವಿರಬಹುದೇನೋ ಎಂದು ಭಯಭೀತರಾಗುತ್ತೀರಿ, ಆತ ಹೋದ ತಕ್ಷಣ ಕನ್ನಡಿಯಲ್ಲೊಂದು ಸಾರಿ ನಿಮ್ಮ ಮುಖ ನೋಡಿಕೊಳ್ಳುತ್ತೀರಿ. ನಾಳೆಯೇ ಡಾಕ್ಟರ್ ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳಬೇಕು ಎಂದು ಅಂದುಕೊಳ್ಳುತ್ತೀರಿ.

ಆದರೆ ನಿಜವಾದ ಸಮಸ್ಯೆಯಿರುವುದು ನಿಮ್ಮಲ್ಲಲ್ಲ, ಆತನ ನಡವಳಿಕೆಯಲ್ಲಿ. ಇದು ಬ್ಯಾಡ್ ಮ್ಯಾನರ್ಸ್. ವೀಕ್ ಆಗುವುದಕ್ಕೂ ಸ್ಲಿಮ್ ಆಗುವುದಕ್ಕೂ ವ್ಯತ್ಯಾಸವಿದೆ ಎಂದು ಆ ಮೂರ್ಖನಿಗೆ ಗೊತ್ತಿಲ್ಲ. ಹಾಗೆಂದು ಅದನ್ನೆಲ್ಲಾ ಆತನ ಮುಂದೆ ವಿವರಿಸಬೇಕಾದ ಅಗತ್ಯ ನಿಮಗೆ ಕಾಣಿಸುವುದಿಲ್ಲ. ಹಾಗಂತ ಆತನ ಒಂದು ಮಾತಿನಿಂದಾಗಿ ನಿಮ್ಮ ಮೂಡ್ ಕೆಟ್ಟುಹೋಗಿದ್ದನ್ನು ಅಲ್ಲಗೆಳೆಯುವುದಕ್ಕಾಗುತ್ತಾ? ಮನೆಬಾಗಿಲಿಗೆ ಬಂದು ನಿಂತವನ ಮೇಲೆ ರೇಗುವ ಹಾಗಿಲ್ಲ, ಸುಮ್ಮನಿರುವ ಹಾಗಿಲ್ಲ. ಇಂಥಾ ಫಜೀತಿಗಳನ್ನು ತಂದಿಡುವುದರಲ್ಲೇ ಸುಖ ಕಾಣುವ ಒಂದು ವರ್ಗದ ಜನರಿದ್ದಾರೆ. ಅವರನ್ನು ವಿಘ್ನಸಂತೋಷಿಗಳು ಎಂದು ಕರೆಯಬಹುದು. ಹಾಗಂತ ಎಲ್ಲರೂ ಉದ್ದೇಶಪೂರ್ವಕವಾಗಿಯೇ ಹೀಗೆ ಆಡುತ್ತಾರೆ ಎಂದು ಹೇಳುವುದಕ್ಕಾಗುವುದಿಲ್ಲ. ಕೆಲವರಿಗೆ ಮಾತು ಶುರು ಮಾಡುವುದಕ್ಕೆ ಒಂದು ನೆಪ ಬೇಕಾಗಿರುತ್ತದೆ. ಅದಕ್ಕೋಸ್ಕರ ಏನೋ ಒಂದು ಅಪದ್ಧ ಮಾತಾಡಿಬಿಡುತ್ತಾರೆ. ಅದರಿಂದ ನಿಮ್ಮ ಮನಸ್ಸಿನ ಮೇಲಾಗುವ ಪರಿಣಾಮದ ಕಡೆ ಅವರಿಗೆ ಲಕ್ಷ್ಯವಿರುವುದಿಲ್ಲ. ಆಗಷ್ಟೇ ನೌಕರಿ ಕಳಕೊಂಡು ದುಃಖದಲ್ಲಿ ಕುಳಿತಿರುವವನ ಬಳಿ ‘ನೀವೇ ರಾಜಿನಾಮೆ ನೀಡಿದ್ರಾ ಅಥವಾ ಕಂಪನಿಯೇ ನಿಮ್ಮನ್ನು ಕಿತ್ತು ಹಾಕಿತಾ’ ಎಂದು ಕೇಳಿದರೆ ಹೇಗಿರುತ್ತದೆ?

ಪ್ರತಿಯೊಬ್ಬರಲ್ಲೂ ಒಂದು ವೀಕ್ ಪಾಯಿಂಟ್ ಇದ್ದೇ ಇರುತ್ತದೆ. ನಾನು ದಪ್ಪಗಿದ್ದೇನೆ, ಕಪ್ಪಗಿದ್ದೇನೆ, ಕುಳ್ಳಗಿದ್ದೇನೆ, ಜಾಸ್ತಿ ಓದಿಲ್ಲ, ಒಳ್ಳೇ ಕೆಲಸದಲ್ಲಿಲ್ಲ, ಇತ್ಯಾದಿ. ಅದನ್ನೇ ಗುರಿಯಾಗಿಸಿಕೊಂಡು ಕಾಮೆಂಟು ಮಾಡುವುದು ಕ್ರೌರ್ಯವಾಗುತ್ತದೆ. ಜಗತ್ತಿನಲ್ಲಿ ಮಾತಾಡುವುದಕ್ಕೆ ಬೇರೆ ಎಷ್ಟೋ ಸಂಗತಿಗಳಿವೆ. ಕೆಟ್ಟಸುದ್ದಿಯೇ ನಿಮ್ಮ ಆಯ್ಕೆಯಾದರೆ ನಿತ್ಯಾನಂದನ ಪುರುಷತ್ವ ಪರೀಕ್ಷೆಯಿಂದ ಹಿಡಿದು, ಯಾವುದೋ ಸ್ವಾಮೀಜಿಯೊಬ್ಬನ ಅತ್ಯಾಚಾರ ಪ್ರಸಂಗದ ತನಕ ಹರಟೆ ಹೊಡೆಯಬಹುದು. ಒಳ್ಳೆಯ ಸುದ್ದಿ ಬೇಕಾದರೆ ಈಗಷ್ಟೇ ಮಾರುಕಟ್ಟೆಗೆ ಬಂದಿರುವ ಗುಲಾಂ ಆಲಿಯ ಹಾಡುಗಳ ಡಿವಿಡಿ ಬಗ್ಗೆ, ಇತ್ತೀಚೆಗೆ ಬಿಡುಗಡೆಯಾದ ಮೇರಿ ಕೋಮ್ ಸಿನೆಮಾದ ಬಗ್ಗೆ ಮಾತಾಡಬಹುದು. ಇವೆರಡೂ ಬೇಡ ಅಂದರೆ ಬೆಂಗಳೂರಿನ ಹವಾಮಾನದ ಬಗ್ಗೆ ಮಾತಾಡಬಹುದು. ನಿಮ್ಮಿಬ್ಬರ ಅಭಿರುಚಿ, ಆಸಕ್ತಿಯನ್ನು ಹೊಂದಿಕೊಂಡು ಮಾತುಕತೆಯ ಸಬ್ಜೆಕ್ಟು ನಿರ್ಧಾರವಾಗುತ್ತದೆ. ಆಗ ಅದು ಬರೀ ಕಾಡುಹರಟೆಯಾಗಿ ಉಳಿಯುವುದಿಲ್ಲ, ಮಾಹಿತಿಗಳ ವಿನಿಮಯಕ್ಕೆ ಹಾದಿ ಮಾಡಿಕೊಡುತ್ತದೆ. ಅದರಿಂದ ಮನಸ್ಸು ಉಲ್ಲಾಸಗೊಳ್ಳುತ್ತದೆ, ಜ್ಞಾನದಿಗಂತ ವಿಸ್ತಾರವಾಗುತ್ತದೆ.

ಮಾತು ಶುರು ಮಾಡುವುದು ಹೇಗೆ? ಈ ಗೊಂದಲ ನಮ್ಮೆಲ್ಲರನ್ನೂ ಯಾವುದೋ ಒಂದು ಸಂದರ್ಭದಲ್ಲಿ ಕಾಡುತ್ತದೆ. ಹಳೆಯ ಗೆಳೆಯನಾದರೆ ತಬ್ಬಿಕೊಳ್ಳಬಹುದು, ಹಿರಿಯರಾದರೆ ಕಾಲಿಗೆ ನಮಸ್ಕರಿಸಬಹುದು, ಕಿರಿಯನಾದರೆ ಬೆನ್ನು ಚಪ್ಪರಿಸಬಹುದು, ಹೊಸಬನಾದರೆ ಕೈಕುಲುಕಬಹುದು. ಆದರೆ ಸಾವಿನಮನೆಯಲ್ಲಿ ಏನು ಮಾತಾಡುವುದು? ಆಪ್ತ ಗೆಳೆಯ ತೀರಿಕೊಂಡಿದ್ದಾನೆ, ಅಂತಿಮ ದರ್ಶನಕ್ಕೆಂದು ನೀವು ಆತನ ಮನೆಗೆ ಹೋಗಿದ್ದೀರಿ. ಮೂಕಪ್ರೇಕ್ಷಕನಾಗುವ ಹಾಗಿಲ್ಲ. ಯಾಕೆಂದರೆ ಆತನ ಪತ್ನಿಗೆ ಸಾಂತ್ವನ ಹೇಳುವ ಜವಾಬ್ದಾರಿ ನಿಮ್ಮ ಮೇಲಿದೆ. ಏನೂಂತ ಮಾತಾಡುತ್ತೀರಿ? ಸತ್ತುಹೋದ ಗೆಳೆಯನ ಗುಣಗಾನ ಮಾಡಿದರೆ ಆಭಾಸವಾಗುತ್ತದೆ. ನಿಮ್ಮ ಪ್ರಬುದ್ಧತೆ ಪ್ರಕಟವಾಗುವುದೇ ಇಂಥಾ ಸಂದರ್ಭದಲ್ಲಿ. ಇಲ್ಲಿ ಮಾತೇ ಬೇಕಾಗಿಲ್ಲ, ಸುಮ್ಮನೇ ಸ್ವಲ್ಪಹೊತ್ತು ಆಕೆಯ ಕೈಹಿಡಿದುಕೊಳ್ಳಿ. ನಾನೂ ನಿಮ್ಮ ದುಃಖದಲ್ಲಿ ಪಾಲುದಾರ ಅನ್ನುವುದನ್ನು ಆ ಒಂದು ಗೆಸ್ಚರ್ ಹೇಳುತ್ತದೆ. ಕರಾವಳಿ ಕಡೆಯಲ್ಲಿ ಒಂದು ಸಂಪ್ರದಾಯವಿದೆ. ಯಾರೇ ಮನೆಗೆ ಬಂದರೂ ಮನೆಯಾತ ಅವರನ್ನು ‘ಏನು’ ಎಂಬ ಪ್ರಶ್ನೆ ಕೇಳುತ್ತಾ ಬರಮಾಡಿಕೊಳ್ಳುತ್ತಾನೆ. ಏನು ಅನ್ನುವುದು ಚೆನ್ನಾಗಿದ್ದೀರಾ ಅನ್ನುವುದಕ್ಕೆ ಪರ್ಯಾಯ ಪದ. ಸಂವಹನ ಅನ್ನುವುದು ಒಂದು ಕಲೆ. ಇಬ್ಬರೇ ಎದುರುಬದುರಾಗಿ ಮಾತಾಡುವುದು ಬೇರೆ, ಗುಂಪಲ್ಲಿ ಮಾತಾಡುವುದು ಬೇರೆ. ಸುದೀಪ್ ನಿಮಗೆ ಏಕವಚನದ ಗೆಳೆಯನೇ ಆಗಿರಬಹುದು, ಆದರೆ ಹತ್ತು ಜನರ ಮುಂದೆ ಅವರನ್ನು ಏನಲೋ ಎಂದು ಮಾತಾಡಿಸುವುದು ತಪ್ಪಾಗುತ್ತದೆ. ಸಲಿಗೆ ಅನ್ನುವುದು ಸಾರ್ವಜನಿಕವಾಗಿ ಪ್ರದರ್ಶನ ಆಗಬಾರದು. ಯಾರಾದರೊಬ್ಬರು ಅಪರೂಪಕ್ಕೆ ಸಿಕ್ಕಾಗ ಒಂದೊಳ್ಳೇ ಮಾತಿನೊಂದಿಗೆ ಮಾತುಕತೆ ಶುರು ಮಾಡುವುದು ಸೌಜನ್ಯ. ಒಂದು ಮುಗುಳ್ನಗು, ಒಂದು ಹಲೋ, ಒಂದು ಶೇಕ್ ಹ್ಯಾಂಡ್, ಚೆನ್ನಾಗಿದ್ದೀರಾ ಎಂಬ ಔಪಚಾರಿಕ ವಿಚಾರಣೆ. ಇದರಲ್ಲಿ ಯಾವುದೋ ಒಂದನ್ನು ಅನುಸರಿಸಿದರೆ ನಿಮ್ಮ ಗಂಟೇನೂ ಹೋಗುವುದಿಲ್ಲ. ಹಾಗಂತ ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿರುವ ರೋಗಿಯ ಮುಂದೆ ನಿಂತು ‘ನೀವು ಚೆನ್ನಾಗಿದ್ದೀರಾ’ ಎಂದು ಕೇಳುವುದು ಕಾಮನ್‌ಸೆನ್ಸ್ ಅಲ್ಲ. ಸಮಯ, ಸಂದರ್ಭಕ್ಕೆ ಅನುಗುಣವಾಗಿ ನಮ್ಮ ನಡೆನುಡಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ.

ಈಗ ಮತ್ತೆ ಮೊದಲಿನ ಪ್ರಸಂಗವನ್ನೇ ಇನ್ನೊಂದು ದೃಷ್ಟಿಕೋನದಲ್ಲಿ ನೋಡೋಣ. ನಿಮ್ಮ ಮುಂದಿರುವ ವ್ಯಕ್ತಿ ನಿಜಕ್ಕೂ ವೀಕ್ ಆಗಿದ್ದಾನೆ ಎಂದು ನಿಮಗೆ ಅನಿಸಿದರೆ ಅದನ್ನು ಬೇರೆಯೇ ರೀತಿಯಲ್ಲಿ ಕೇಳಬಹುದು. ‘ಏನ್ಸಾರ್, ಇಷ್ಟೊಂದು ಸ್ಲಿಮ್ ಆಗಿದ್ದೀರಾ’ ಎಂದುಬಿಡಿ. ಆಗ ಮುಂದಿರುವ ವ್ಯಕ್ತಿಯ ಮುಖ ಅರಳುತ್ತದೆ. ಸಂದರ್ಶನಕ್ಕೆ ಹೊರಟು ನಿಂತಿರುವ ಹುಡುಗನ ಮುಂದೆ ‘ಯೂ ಆರ್ ಲುಕ್ಕಿಂಗ್ ಫ್ರೆಶ್’ ಅಂದರೆ ಆತನ ಆತ್ಮವಿಶ್ವಾಸ ದ್ವಿಗುಣಗೊಳ್ಳುತ್ತದೆ. ಹಾಸಿಗೆ ಹಿಡಿದಿರುವ ಗೆಳೆಯನ ಮುಂದೆ ‘ನಿನಗೇನೂ ಆಗೋಲ್ಲ ಕಣೋ, ನೂರು ವರ್ಷ ಬದುಕ್ತೀಯಾ ಪಾಪಿ’ ಅನ್ನಿ. ಆತ ಎದ್ದು ಕುಳಿತುಕೊಳ್ಳುತ್ತಾನೆ.

ಯಾರು ಯಾವ ಮಾತನ್ನು ಆಡಬಹುದು ಅನ್ನುವುದರ ಮೇಲೆಯೂ ನಮ್ಮ ಪ್ರತಿಕ್ರಿಯೆ ನಿರ್ಧಾರವಾಗುತ್ತದೆ. ಸಿಗರೇಟು ಸೇದಬೇಡಿ, ಅದರಿಂದ ನಿಮ್ಮ ಆರೋಗ್ಯ ಹಾಳಾಗುತ್ತದೆ ಎಂದು ಡಾಕ್ಟರ್ ಒಬ್ಬರು ಹೇಳಿದರೆ ನೀವು ಸುಮ್ಮನಿರಲೇಬೇಕು. ಯಾಕೆಂದರೆ ಡಾಕ್ಟರ್‌ಗೆ ಆ ಅಧಿಕಾರ ಇದೆ. ಅದೇ ಮಾತನ್ನು ಗುರುತು ಪರಿಚಯ ಇಲ್ಲದೇ ಇರುವ ವ್ಯಕ್ತಿ ಹೇಳಿದರೆ ಪಿತ್ತ ನೆತ್ತಿಗೇರುತ್ತದೆ. ‘ಅದು ನಂಗೂ ಗೊತ್ತಯ್ಯಾ, ನೀನ್ಯಾವ ದೊಣೆನಾಯಕ ಇದನ್ನು ಹೇಳೋದಕ್ಕೆ’ ಅಂತ ನೀವು ಗುರ್ ಅಂತೀರಿ. ಫೋನ್‌ನಲ್ಲಿ ಮಾತಾಡುವುದೂ ಒಂದು ಕಲೆ. ಬಹಳಷ್ಟು ಜನ ಮಾಡುವ ತಪ್ಪೇನೆಂದರೆ ತಾವೇ ಫೋನ್ ಮಾಡಿ, ಕನೆಕ್ಟ್ ಆದ ತಕ್ಷಣ ‘ಹಲೋ ಯಾರು ಮಾತಾಡ್ತಿರೋದು’ ಎಂದು ಕೇಳುತ್ತಾರೆ. ಇದು ಅಧಿಕಪ್ರಸಂಗ. ಮೊದಲಿಗೆ ನೀವ್ಯಾರು ಅನ್ನೋದನ್ನು ಹೇಳಿ. ಸ್ವಲ್ಪ ಮಾತಾಡಬೇಕಾಗಿತ್ತು, ಎರಡು ನಿಮಿಷ ಕಾಲಾವಕಾಶ ಇದೆಯಾ ಎಂದು ವಿಚಾರಿಸಿ. ಹೊಸಬರಿಗೆ ಫೋನ್ ಮಾಡುವದಕ್ಕೂ ಮುಂಚೆ ಒಂದು ಎಸ್ಸೆಮ್ಮೆಸ್ಸು ಕಳಿಸುವುದು ಇನ್ನೂ ಒಳ್ಳೇ ನಡವಳಿಕೆ.

ಸಹಾಯ ಕೇಳುವುದಕ್ಕೆ ಗೆಳೆಯನ ಮನೆಗೆ ಹೋದಾಗ ಆರಂಭದಲ್ಲೇ ನಿಮ್ಮ ಕಷ್ಟನಷ್ಟಗಳ ಕತೆ ಹೇಳಿಕೊಳ್ಳಬೇಡಿ. ಮೊದಲು ಆತನ ಸುಖ-ದುಃಖ ವಿಚಾರಿಸಿ. ಆತನ ಬಗ್ಗೆ ನಿಮಗೆ ಕಾಳಜಿ ಇದೆ ಅನ್ನುವುದು ನಿಮ್ಮ ಮಾತಲ್ಲಿ ವ್ಯಕ್ತವಾಗಲಿ. ಅನಂತರ ನಿಧಾನಕ್ಕೆ ವಿಷಯಕ್ಕೆ ಬನ್ನಿ. ಅಫ್‌ಕೋರ್ಸ್, ಖಾಸಾ ಗೆಳೆಯರ ಮುಂದೆ ಇಂಥಾ ಔಪಚಾರಿಕತೆಗಳು ಬೇಕಾಗಿಲ್ಲ. ದರ್ಶಿನಿ ಹೊಟೇಲ್ಲಿಗೆ ನುಗ್ಗಿ ಇಡ್ಲಿ ಇದೆಯಾ ಎಂದು ಕೇಳುವುದಕ್ಕೂ, ಯಾರದೋ ಮನೆಗೆ ಹೋಗಿ ಕುಡಿಯುವುದಕ್ಕೆ ಒಂದು ಲೋಟ ನೀರು ಕೇಳುವುದಕ್ಕೂ ವ್ಯತ್ಯಾಸ ಇದೆ. ಇಲ್ಲದೇ ಇದ್ದರೆ ಕೆಲವು ಟೀವಿ ಚಾನೆಲ್ಲುಗಳ ವರದಿಗಾರರಿಗೂ ನಿಮಗೂ ಏನೂ ವ್ಯತ್ಯಾಸವಿರುವುದಿಲ್ಲ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 28 January, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books