Ravi Belagere
Welcome to my website
ನಿಮ್ಮದು ಎಂಥ ಮ್ಯಾರೇಜು? ಶುದ್ಧ ಅರೇಂಜ್‌ಡಾ? ನೀವೇ ಮಾಡಿಕೊಂಡ ಲವ್ ಮ್ಯಾರೇಜಾ? live in relationshipನಂತಹ  ಗಾಂಧರ್ವ ವಿವಾಹನಾ? ‘ಲವ್ ಕಮ್ ಅರೇಂಜ್ಡ್’ ಮದುವೆಯಾ? ಅಂತರ್‌ಜಾತೀಯ ವಿವಾಹವಾ? ಅಂತರ್‌ಧರ್ಮೀಯ ವಿವಾಹವಾ? (Request :ಜಾತಿಗಳ ಪುಸ್ತಾಪ ಮಾಡಬೇಡಿ) Love, run and marry ಎಂಬಂತೆ ಮನೆಗಳನ್ನು ಬಿಟ್ಟು ಹೋಗಿ ಆದ ಮದುವೆಯಾ? ಎಂಥ ಮದುವೆಯಾಗಿದ್ದರೂ ಅಡ್ಡಿಯಿಲ್ಲ. ಅದಕ್ಕೆ ಗೌರವವಿದೆ. ಒಂದು inland letterನಷ್ಟು ಬರವಣಿಗೆಯನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆಯಿರಿ. ಜೊತೆಗೆ ಇಬ್ಬರೂ ಇರುವ ಫೊಟೋ ಕಳಿಸಿ. mail ಮಾಡೋದಾದರೆ [email protected]ಗೆ ಮಾಡಿ.
Home About Us Gallery Books Feedback Prarthana Contact Us

Buy Ravi Belagere Books online

ರಣಭೀಕರ ಸಂಗ್ರಾಮವೊಂದು ಸ್ವದೇಶಿಯರ ಮಧ್ಯೆಯೇ ನಡೆಯುವುದು ಖಚಿತ

ಕರ್ನಾಟಕದ ನೆಲ ಒಂದು ಮಹಾಸಂಗ್ರಾಮಕ್ಕೆ ಅಣಿಯಾಗುತ್ತಿದೆಯೇ? ಹಾಗೆಂಬುದೊಂದು ಅನುಮಾನ ನನ್ನನ್ನು ಕಾಡುತ್ತಿದೆ. ಒಂದು ಕಡೆಯಿಂದ ದಶಕದಷ್ಟು ಸುದೀರ್ಘ ಕಾಲ ಕರ್ನಾಟಕದ ಗಣಿ ಸಾಮ್ರಾಜ್ಯದ ಅಧಿಪತಿಯಾಗಿದ್ದ ಜನಾರ್ದನ ರೆಡ್ಡಿ ಅವರಿಗೆ ನ್ಯಾಯಾಲಯ ಜಾಮೀನು ಕೊಟ್ಟಿದೆ. ಅಂದರೆ ಬೋನಿನಿಂದ ಹೊರಗೆ ಬರಲು ಹುಲಿ ಅಣಿಯಾಗಿದೆ. ಇದೇ ಕಾಲಕ್ಕೆ ದಿಲ್ಲಿ ಗದ್ದುಗೆಯ ಮೇಲೆ ಕುಳಿತಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ, ಕಬ್ಬಿಣದ ಅದಿರು ಸೇರಿದಂತೆ ನಾಲ್ಕು ನಮೂನೆಯ ಅದಿರುಗಳನ್ನು ಹರಾಜಿನ ಮೂಲಕವೇ ಕೊಡಬೇಕು ಎಂಬ ಕಾಯ್ದೆ ರೂಪಿಸಿದೆ. ಅಲ್ಲಿಗೆ ನೋ ಡೌಟ್, ಕರ್ನಾಟಕ ಹಾಗೂ ಉತ್ತರ ಭಾರತೀಯರ ನಡುವೆ ಒಂದು ಮಹಾಸಂಗ್ರಾಮಕ್ಕೆ ವೇದಿಕೆ ಅಣಿಯಾಗುತ್ತಿದೆ ಎಂದೇ ಅರ್ಥ.

ಯಾಕೆಂದರೆ ಕೇಂದ್ರ ಸರ್ಕಾರ ಈ ಥರದ್ದೊಂದು ಕಾಯ್ದೆ ಮಾಡಿದ್ದೇ ತಡ, ಉತ್ತರ ಭಾರತದ ಕೆಲ ಉದ್ಯಮಿಗಳು ಕರ್ನಾಟಕದ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರ ಮನೆಗೇ ಲಗ್ಗೆ ಹಾಕಿದರು. ಗಣಿಗಳ ಹರಾಜು ಪ್ರಕ್ರಿಯೆಯನ್ನು ಯಾವಾಗ ಆರಂಭಿಸುತ್ತೀರಿ ಎಂಬುದೊಂದೇ ಅವರು ಕೇಳಿದ ಮಾತು. ಅಷ್ಟೇ ಅಲ್ಲ, ಆದಷ್ಟು ಬೇಗ ಈ ಪ್ರಕ್ರಿಯೆಯನ್ನು ಶುರು ಮಾಡಿ ಎಂಬುದು ಅವರ ಆಗ್ರಹ. ಒಂದು ಸಲ ರಾಜ್ಯ ಸರ್ಕಾರ ಕರ್ನಾಟಕದಲ್ಲಿರುವ ಗಣಿಗಳನ್ನು ಹರಾಜು ಮೂಲಕವೇ ಗಣಿಗಾರಿಕೆ ಪ್ರದೇಶವನ್ನು ಕೊಡಲು ಹೊರಟರೆ ಇಲ್ಲಿ ಸರ್ಕಾರಿ ಸ್ವಾಮ್ಯದ ಎಂಎಸ್‌ಐಎಲ್ ಹಾಗೂ ವಿಐಎಸ್‌ಎಲ್ ಸೇರಿದಂತೆ ಹಲವು ಸರ್ಕಾರಿ ಸ್ವಾಮ್ಯದ, ಖಾಸಗಿ ಸ್ವಾಮ್ಯದಲ್ಲಿರುವ ಕಾರ್ಖಾನೆಗಳು ಹಳ್ಳ ಹಿಡಿದು ಹೋಗುತ್ತವೆ. ಯಾಕೆಂದರೆ ಈ ಗಣಿಗಾರಿಕೆ ಪ್ರದೇಶಗಳನ್ನು ಮೋದಿಗೆ ಹತ್ತಿರವಾಗಿರುವ ಉದ್ಯಮಿಗಳನ್ನು ಬಿಟ್ಟು ಬೇರೆ ಯಾರೂ ಹರಾಜಿನಲ್ಲಿ ಕೊಳ್ಳುವ ಶಕ್ತಿ ಹೊಂದಿಲ್ಲ.

ಹೀಗಿರುವಾಗ ನಾಳೆ ಗಣಿಗಾರಿಕೆ ಪ್ರದೇಶದ ಮೇಲೆ ಏಕಸ್ವಾಮ್ಯ ಸಾಧಿಸುವ ಉತ್ತರ ಭಾರತೀಯ ಉದ್ಯಮಿಗಳು ಯಾವುದೇ ಮುಲಾಜಿಲ್ಲದೆ ಇಲ್ಲಿನ ಸರ್ಕಾರದ ಮೇಲೆ ಅಧಿಪತ್ಯ ಸಾಧಿಸುತ್ತಾರೆ. ಒಂದು ಸಲ ಸರ್ಕಾರವನ್ನು ಇಳಿಸುವ, ತಮಗೆ ಬೇಕಾದ ಸರ್ಕಾರವನ್ನು ಏರಿಸುವ ಅವಕಾಶ ಅವರಿಗೆ ಸಿಕ್ಕಿತು ಎಂದರೆ ಕನ್ನಡಿಗರ ಶಕ್ತಿ ನೆಲ ಕಚ್ಚಿತು ಎಂದೇ ಅರ್ಥ. ಇಲ್ಲಿಯ ತನಕ ಯಾರೇ ಗಣಿಗಾರಿಕೆ ಮಾಡಿರಲಿ, ಆದರೆ ನಿಜವಾದ ಯುದ್ಧ ಅಂತ ನಡೆದಿದ್ದು ಗಣಿರೆಡ್ಡಿಗಳು ಹಾಗೂ ಬಲ್ಡೋಟಾ ಎಂಬ ಉದ್ಯಮಿಯ ನಡುವೆ. ಅವರಿಬ್ಬರ ಮಧ್ಯೆ ನಡೆದ ಯುದ್ಧದಲ್ಲಿ ಕರ್ನಾಟಕದ ರಾಜಕೀಯ ಯಾವ ರೀತಿ ಹಳ್ಳ ಹಿಡಿದು ಹೋಗಿತ್ತು ಎಂಬುದನ್ನು ನೆನಪಿಸಿಕೊಳ್ಳಿ. ಹೀಗಿರುವಾಗ ಹಲವು ಲಕ್ಷ ಕೋಟಿ ರುಪಾಯಿಗಳಷ್ಟು ಹಣ ಉತ್ತರ ಭಾರತೀಯರ ಕೈ ಸೇರಿದರೆ ಇಲ್ಲಿನ ಜನ ಆರಿಸಿರುವ ಸರ್ಕಾರವನ್ನು ಅಲುಗಾಡಿಸಲು ಅವರಿಗೆಷ್ಟು ಹೊತ್ತು ಬೇಕು?

ಇವತ್ತು ನಾವು ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣ ಅನ್ನುತ್ತೇವಲ್ಲ? ಈ ಹಗರಣದಲ್ಲಿ ಡಿನೋಟಿಫೈ ಆದ ಭೂಮಿಯ ಪೈಕಿ ಬಹುತೇಕ ಭೂಮಿಯ ಮೇಲೆ ಬಂದು ಕೂತಿರುವವರು ಉತ್ತರ ಭಾರತೀಯರು. ಅಲ್ಲಿ ಕಟ್ಟಿರುವ ಫ್ಲ್ಯಾಟುಗಳನ್ನು ಒಮ್ಮೆ ನೋಡಿಕೊಂಡು ಬನ್ನಿ. ಈ ಫ್ಲ್ಯಾಟುಗಳಲ್ಲಿ ಕೂತಿರುವವರು ಯಾರು ಅಂತ ವಿಚಾರಿಸಿಕೊಂಡು ಬನ್ನಿ. ಶೇಕಡಾ ತೊಂಬತ್ತಕ್ಕೂ ಹೆಚ್ಚು ಮಂದಿ ಉತ್ತರ ಭಾರತೀಯರು. ಅರ್ಥಾತ್, ಬೆಂಗಳೂರಿನ ಹೊರಭಾಗವನ್ನು ಒಂದೆಡೆಯಿಂದ ಆಕ್ರಮಿಸಿಕೊಂಡಿರುವ ಉತ್ತರ ಭಾರತೀಯರು, ನಗರದ ಆಯಕಟ್ಟಿನ ಪ್ರದೇಶಗಳಲ್ಲಿ ನಿರುಮ್ಮಳವಾಗಿ ಬಂದು ಕೂತಿದ್ದಾರೆ. ತುಂಬ ದೂರ ಏಕೆ ಹೋಗುತ್ತೀರಿ? ಬೆಂಗಳೂರಿನ ಶಿವಾನಂದ ಸರ್ಕಲ್ಲಿನಲ್ಲಿರುವ, ಹಿಂದೆ ಫಿಲಂ ಲ್ಯಾಂಡಿನ ಪಾಲಿಗೆ ಅಡ್ಡೆಯಾಗಿದ್ದ ಒಂದು ಹೊಟೇಲಿದೆ. ಊಟಕ್ಕೆ, ತಿಂಡಿಗೆ, ಮಸಾಲೆ ದೋಸೆಗೆ, ಕರಿದ ತಿಂಡಿ ಪದಾರ್ಥಗಳಿಗೆ ಬಹಳ ಫೇಮಸ್ಸಾದ ಹೊಟೇಲ್ಲದು. ಆ ಹೋಟೆಲಿನಲ್ಲಿ ಖಾಯಂ ಗಿರಾಕಿಗಳ ಪೈಕಿ ನೈಂಟಿ ಪರ್ಸೆಂಟು ಉತ್ತರ ಭಾರತೀಯರೇ. ಆದರೆ ಈಗವರು ಹೊರಭಾಗವನ್ನು ಆವರಿಸಿಕೊಳ್ಳುತ್ತಾ ಬರುತ್ತಿದ್ದಾರೆ.

ಈ ಮಾತು ಹೇಳುವಾಗ ನನಗೊಂದು ಮಾತು ನೆನಪಿಗೆ ಬರುತ್ತಿದೆ. ಹಿಂದೆ ಒಬ್ಬ ರಾಜ, ತನ್ನ ರಾಜ್ಯ ವಿಸ್ತರಿಸುವ ಸಮಯದಲ್ಲಿ ಯುದ್ಧಕ್ಕೆ ಅಂತ ಹೋಗುವುದು, ಹೊಡೆತ ತಿಂದು ಬರುವುದು ಆರಂಭದ ದಿನಗಳಲ್ಲಿ ಮಾಮೂಲಾಗಿ ಹೋಗಿರುತ್ತದೆ. ಒಂದು ದಿನ ರಾತ್ರಿ ರಾಜ ಇದೇ ಯೋಚನೆಯಲ್ಲಿ ವಾಪಸ್ ಬರುತ್ತಿದ್ದಾಗ ಒಂದು ಹಳ್ಳಿ ತಲುಪುತ್ತಾನೆ. ವಿಪರೀತ ಹಸಿವು. ಹಾಗಂತಲೇ ಅಲ್ಲಿದ್ದ ಒಂದು ಗುಡಿಸಲಿಗೆ ಹೋಗಿ ಅಲ್ಲಿರುವ ಮುದುಕಿಯ ಬಳಿ, ಏನಾದರೂ ತಿನ್ನಲು ಕೊಡುವಂತೆ ಕೇಳಿಕೊಳ್ಳುತ್ತಾನೆ. ಆ ಮುದುಕಿ, ಈತನನ್ನು ಒಳಗೆ ಕೂರಿಸಿ ಊಟ ಬಡಿಸುತ್ತಾಳೆ. ಆತ ಊಟ ಮಾಡುವ ಟೈಮಿನಲ್ಲಿ ಸುಮ್ಮನೆ ಕೂತಿರುವುದು ಹೇಗೆ? ಹಾಗಂತ ಮಾತನಾಡುತ್ತಾಳೆ. ನೀನು ಏನಾದರೂ ಹೇಳಪ್ಪ. ನಮ್ಮ ರಾಜನಿಗೆ ಬುದ್ಧಿ ಕಡಿಮೆ ಎನ್ನುತ್ತಾಳೆ. ಮಾರುವೇಷದಲ್ಲಿದ್ದ ರಾಜನಿಗೆ ಆಶ್ಚರ್ಯ. ಯಾಕೆ ಅಜ್ಜಿ ಎಂದು ಕೇಳುತ್ತಾನೆ. ಅದಕ್ಕೆ ಆ ಮುದುಕಿ ಹೇಳುತ್ತಾಳೆ. ಅಲ್ಲಾ, ನೆರೆ ರಾಜ್ಯಗಳನ್ನು ಗೆಲ್ಲಬೇಕೆಂದರೆ ಮೊದಲು ಒಂದು ನೀಲನಕ್ಷೆ ರೂಪಿಸಬೇಕು. ಆ ಪ್ರದೇಶದ ಒಳಭಾಗದಲ್ಲಿರುವವರ ವಿರುದ್ಧ ಕಾದಾಡುವ ಬದಲು, ಮೊದಲು ಹೊರಭಾಗದಲ್ಲಿರುವವರ ವಿರುದ್ಧ ಕಾದಾಡಿ ಅವರ ರಾಜ್ಯವನ್ನು ವಶಪಡಿಸಿಕೊಳ್ಳಬೇಕು. ಹೀಗೆ ಒಂದು ಕಡೆಯಿಂದ ಹೊರವರ್ತುಲವನ್ನು ಆವರಿಸಿಕೊಳ್ಳುತ್ತಾ ಶಕ್ತಿ ಹೆಚ್ಚಿಸಿಕೊಂಡರೆ ಒಳಭಾಗದಲ್ಲಿರುವವರು ಏನು ಮಾಡಲು ಸಾಧ್ಯ? ಅತ್ತ ದರಿ, ಇತ್ತ ಪುಲಿ ಎಂಬಂತಾಗುತ್ತದೆ. ಇಷ್ಟು ಕನಿಷ್ಟ ಪ್ರಜ್ಞೆಯೂ ನಮ್ಮ ರಾಜನಿಗಿಲ್ಲ ಎನ್ನುತ್ತಾಳೆ. ಈ ಮಾತು ಕೇಳಿದ ರಾಜ ಖುಷಿಯಿಂದ ಅಜ್ಜಿಗೆ ವಂದನೆ ಸಲ್ಲಿಸಿ ಹೋಗುತ್ತಾನೆ. ಮರುದಿನದಿಂದ ಆತನ ಯುದ್ಧದ ನೀಲನಕ್ಷೆಯೇ ಬೇರೆಯಾಗುತ್ತದೆ. ಮೊದಲು ಹೊರರಾಜ್ಯಗಳನ್ನು ಗೆಲ್ಲುತ್ತಾ, ಒಳಭಾಗದಲ್ಲಿರುವವರನ್ನು ಅತಂತ್ರ ಸ್ಥಿತಿಗೆ ತಳ್ಳುತ್ತಾನೆ. ಮುಂದೆ ಅವರೆಲ್ಲ ಹೆಚ್ಚಿನ ಪ್ರತಿರೋಧ ತೋರದೆ ರಾಜನಿಗೆ ಶರಣಾಗುತ್ತಾರೆ. ಅಂತಹುದೇ ಟೆಕ್ನಿಕ್ಕು ಇವತ್ತು ಕರ್ನಾಟಕದ ಮೇಲೆ, ದೇಶದ ಮೇಲೆ ಪ್ರಯೋಗವಾಗುತ್ತಿದೆ.

ಅಂದ ಹಾಗೆ ಇಂತಹ ಟೆಕ್ನಿಕ್ಕುಗಳನ್ನು ತಮಿಳ್ನಾಡು, ಮಹಾರಾಷ್ಟ್ರದ ಜನ ನೋಡಿದವರೇ. ಹೀಗಾಗಿ ಏಟಿಗೆ ತಿರುಗೇಟು ನೀಡುವುದು ಅವರಿಗೆ ಗೊತ್ತಿದೆ. ೧೯೧೬ರಲ್ಲೇ ತಮಿಳುನಾಡಿನ ಜನ ಉತ್ತರ ಭಾರತೀಯರ ಅಟಾಟೋಪ ಜಾಸ್ತಿಯಾಗುತ್ತದೆ ಎಂಬ ಕಾರಣಕ್ಕಾಗಿ ಜಸ್ಟೀಸ್ ಪಾರ್ಟಿ ಕಟ್ಟಿದರು. ಅದರ ಸ್ಥಾಪಕ ರಾಮಸ್ವಾಮಿ ಅಯ್ಯರ್. ಸರ್ಕಾರಿ ಕೆಲಸಗಳಿಂದ ಹಿಡಿದು ಎಲ್ಲ ಕಡೆ ಉತ್ತರ ಭಾರತೀಯರ ಹಿತ ರಕ್ಷಣೆಯಾಗುತ್ತಿದೆಯೇ ಹೊರತು ತಮಿಳರ ಹಿತ ರಕ್ಷಣೆಯಾಗುತ್ತಿಲ್ಲ, ಬದಲಿಗೆ ಉತ್ತರ ಭಾರತೀಯರ ರಕ್ಷಣೆಯಾಗುತ್ತಿದೆ ಎಂದು ಆಕ್ರೋಶ ಭುಗಿಲೆದ್ದ ಪರಿಣಾಮವಾಗಿ ಹುಟ್ಟಿದ ಪಾರ್ಟಿ ಅದು. ಆನಂತರದ ದಿನಗಳಲ್ಲಿ ಪೆರಿಯಾರ್, ಅಣ್ಣಾ ದೊರೈ ಅವರಂತಹ ಘಟಾನುಘಟಿಗಳು ಆ ಪಾರ್ಟಿಯ ರೂಪ ಬದಲಿಸುತ್ತಾ ಹೋಗುತ್ತಾರೆ. ಮುಂದೆ ಡಿಎಂಕೆಯ ನಾಯಕತ್ವದ ವಿಷಯದಲ್ಲಿ ಕರುಣಾನಿಧಿ, ಎಂ.ಜಿ.ರಾಮಚಂದ್ರನ್ ಮಧ್ಯೆ ವಿವಾದ ಬಂದ ನಂತರ ಅಲ್ಲಿ ಡಿಎಂಕೆ ಹಾಗೂ ಎಐಎಡಿಎಂಕೆ ಎರಡು ಬಿಳಲುಗಳಂತೆ ತಮಿಳುನಾಡಿಗೆ ನೇತು ಬೀಳುತ್ತವೆ. ಹೀಗೆ ನೇತುಬಿದ್ದ ಎರಡು ಪಕ್ಷಗಳೂ ರಾಜಕೀಯವಾಗಿ ವಿರೋಧ ಹೊಂದಿರಬಹುದು. ಆದರೆ ತಮಿಳರ ಹಿತರಕ್ಷಣೆಯ ವಿಷಯ ಬಂದಾಗ ಒಬ್ಬರಿಗಿಂತ ಒಬ್ಬರು ಮುಂದು.

ಇದೇ ರೀತಿ ಮಹಾರಾಷ್ಟ್ರದಲ್ಲಿ ಉತ್ತರ ಭಾರತೀಯರ ದಬ್ಬಾಳಿಕೆ ಹೆಚ್ಚಾದಾಗ ಒಬ್ಬ ಕಾರ್ಟೂನಿಸ್ಟ್ ಬಾಳ್ ಠಾಕ್ರೆ ಮೇಲೆದ್ದು ನಿಂತು ಶಿವಸೇನೆ ಹುಟ್ಟಲು ಕಾರಣರಾಗುತ್ತಾರೆ. ಪರಿಣಾಮವಾಗಿ ಅಲ್ಲಿಯವರೆಗೆ ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳಿಗೆ ರಾಜಧಾನಿಯಾಗಿದ್ದ ಮುಂಬೈ ಕೇವಲ ಮಹಾರಾಷ್ಟ್ರದ ರಾಜಧಾನಿಯಾಗುತ್ತದೆ. ಅಹ್ಮದಾಬಾದ್ ಗುಜರಾತ್‌ನ ರಾಜಧಾನಿಯಾಗುತ್ತದೆ. ಹೀಗೆ ಶುರುವಾಗಿದ್ದು ಮರಾಠಿ ಮಾಣೂಸ್ (ಮರಾಠಿ ಮನುಷ್ಯ)ಎಂಬ ಕೂಗು. ಅಲ್ಲಿಂದ ಮುಂದೆ ಮರಾಠಿಗರ ಹಿತಕ್ಕೆ ಧಕ್ಕೆ ಬಂದರೆ ಮುಲಾಜೇ ಇಲ್ಲದೆ ಅಲ್ಲಿ ಕೂಗು ಏಳುತ್ತದೆ. ಆದರೆ ಕರ್ನಾಟಕದಲ್ಲಿ ಹಾಗಾಗುವುದು ಕಷ್ಟ. ಒಂದು ಸಲ ಗೋಕಾಕ್ ಚಳವಳಿಗಾಗಿ ನಡೆದ ಹೋರಾಟವನ್ನು ಬಿಟ್ಟರೆ ಉತ್ತರ ಭಾರತೀಯರ ನಿರಂತರ ಒಳದಾಳಿಯನ್ನು ತಡೆಯುವ ಯತ್ನ ಆಗಲೇ ಇಲ್ಲ. ಇರುವ ಕನ್ನಡ ಪರ ಸಂಘಟನೆಗಳಿಂದಾಗಿ ಒಂದಷ್ಟು ಪ್ರದೇಶಗಳಲ್ಲಿ ಉತ್ತರ ಭಾರತೀಯರು ಹೆದರುವ ಸ್ಥಿತಿ ಇದೆ ಎಂಬುದನ್ನು ಬಿಟ್ಟರೆ ಉಳಿದೆಲ್ಲ ಕಡೆ ಅವರದು ಡಿಟ್ಟೋ ಹನುಮಂತನ ಬಾಲ. ಬೇಕಿದ್ದರೆ ನೀವು ನಿಮ್ಮ ನಿಮ್ಮ ಊರುಗಳ ಆಯಕಟ್ಟಿನ ಪ್ರದೇಶಗಳನ್ನು ನೋಡಿ. ಅಲ್ಲೆಲ್ಲ ಬಂದು ಕೂತಿರುವವರು, ಸೆಟ್ಲಾಗಿರುವವರು ಉತ್ತರ ಭಾರತೀಯರೇ. ಅವರು ಬಿಜಿನೆಸ್ ಕ್ಲಾಸಿನವರು. ನೋಡ ನೋಡುತ್ತಲೇ ನಿಮ್ಮ ಊರಿನ ಹೊರವಲಯಗಳನ್ನೂ ಆಕ್ರಮಿಸಿಕೊಳ್ಳುತ್ತಾರೆ. ಮುಂದೆ ಕೆಲವೇ ವರ್ಷಗಳಲ್ಲಿ ಬೆಂಗಳೂರಿನಿಂದ ಹಿಡಿದು ಎಲ್ಲ ಕಡೆ ಕನ್ನಡಿಗರೇ ಪರಕೀಯರಾಗುವ ಸ್ಥಿತಿ ಬರುತ್ತದೆ.

ಇಂತಹ ಕಾಲದಲ್ಲೇ ಉತ್ತರ ಭಾರತೀಯರ ಸಾಮ್ರಾಜ್ಯಕ್ಕೆ ಮತ್ತಷ್ಟು ಶಕ್ತಿ ತುಂಬಲು ಮೋದಿ ಸರ್ಕಾರ ಭೂ ಸ್ವಾಧೀನ ಕಾಯ್ದೆಗೆ ತಿದ್ದುಪಡಿ ಮಾಡಿದೆ. ಅದೇ ರೀತಿ ರಾಜ್ಯಗಳಲ್ಲಿರುವ ಗಣಿಗಾರಿಕೆ ಪ್ರದೇಶಗಳನ್ನು ಹರಾಜಿನ ಮೂಲಕ ಕೊಡಬೇಕು ಎಂದು ಕಟ್ಟಪ್ಪಣೆ ಮಾಡಿದೆ. ಒಂದು ಸಲ ಅದರ ಪ್ರಕಾರ ನಡೆದರೆ, ನಾಳೆ ರಾಜ್ಯ ಸರ್ಕಾರ ಕೂಡ ಅಸಹಾಯಕ. ತಮ್ಮ ಸ್ವಾಮ್ಯದಲ್ಲಿರುವ ಕಾರ್ಖಾನೆಗಳನ್ನೂ ಕರೆಂಟು ಉತ್ಪಾದನೆ ಮಾಡುವ ಘಟಕಗಳನ್ನಾಗಿಯೋ ಇನ್ನೇನೋ ಬಿಜಿನೆಸ್ ಕೇಂದ್ರಗಳನ್ನಾಗಿಯೋ ಪರಿವರ್ತಿಸುವುದು ಅದಕ್ಕೆ ಅನಿವಾರ್ಯ. ಅದಕ್ಕಿಂತ ಅಪಾಯವೆಂದರೆ ಇಂತಹ ಜಾಗಗಳನ್ನು ಸ್ಥಳೀಯರಿಗಿಂತ ಹೆಚ್ಚಿನ ಮೊತ್ತಕ್ಕೆ ಬಿಡ್ ಮಾಡುವ ಉತ್ತರ ಭಾರತೀಯರು ನಿರಾಯಾಸವಾಗಿ ಬಂದು ನಮ್ಮ ಸಂಪತ್ತನ್ನು ವಶಪಡಿಸಿಕೊಳ್ಳುತ್ತಾರೆ. ಆಗ ಶುರುವಾಗುವುದೇ ನಿಜವಾದ ಯುದ್ಧ. ಈಗದು ಕನ್ನಡಿಗರು-ಉತ್ತರ ಭಾರತೀಯರ ರೂಪದಲ್ಲಿ ಏಳಬಹುದಾದ ಕದನದಂತೆ ಕಾಣುತ್ತಿದೆ. ಮುಂದೆ ಅದು ಯಾವ್ಯಾವ ತಿರುವುಗಳನ್ನು ಪಡೆಯುತ್ತದೋ ಹೇಳಲು ಸಾಧ್ಯವಿಲ್ಲ. ಹೀಗಾಗಿ ರಾಜ್ಯ ಸರ್ಕಾರ ತಕ್ಷಣವೇ ಎಚ್ಚೆತ್ತು ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಯ ಮೂಲಕ ನಿರ್ದಿಷ್ಟ ಸಮುದಾಯದ ವಶಕ್ಕೆ ರಾಜ್ಯಗಳನ್ನು ಕೊಡಲು ಹೊರಟಿರುವ ಕ್ರಮವನ್ನು ವಿರೋಧಿಸಲಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 26 January, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books