Ravi Belagere
Welcome to my website
ನಿಮ್ಮದು ಎಂಥ ಮ್ಯಾರೇಜು? ಶುದ್ಧ ಅರೇಂಜ್‌ಡಾ? ನೀವೇ ಮಾಡಿಕೊಂಡ ಲವ್ ಮ್ಯಾರೇಜಾ? live in relationshipನಂತಹ  ಗಾಂಧರ್ವ ವಿವಾಹನಾ? ‘ಲವ್ ಕಮ್ ಅರೇಂಜ್ಡ್’ ಮದುವೆಯಾ? ಅಂತರ್‌ಜಾತೀಯ ವಿವಾಹವಾ? ಅಂತರ್‌ಧರ್ಮೀಯ ವಿವಾಹವಾ? (Request :ಜಾತಿಗಳ ಪುಸ್ತಾಪ ಮಾಡಬೇಡಿ) Love, run and marry ಎಂಬಂತೆ ಮನೆಗಳನ್ನು ಬಿಟ್ಟು ಹೋಗಿ ಆದ ಮದುವೆಯಾ? ಎಂಥ ಮದುವೆಯಾಗಿದ್ದರೂ ಅಡ್ಡಿಯಿಲ್ಲ. ಅದಕ್ಕೆ ಗೌರವವಿದೆ. ಒಂದು inland letterನಷ್ಟು ಬರವಣಿಗೆಯನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆಯಿರಿ. ಜೊತೆಗೆ ಇಬ್ಬರೂ ಇರುವ ಫೊಟೋ ಕಳಿಸಿ. mail ಮಾಡೋದಾದರೆ [email protected]ಗೆ ಮಾಡಿ.
Home About Us Gallery Books Feedback Prarthana Contact Us

Buy Ravi Belagere Books online

ನಾನು ಟೀಚರ್ ಆಗಬೇಕು ಅನ್ನುವ ಮಗುವನ್ನು ಹುಡುಕುತ್ತಾ...


“ನಾನು ಓದಿದ್ದು ನಮ್ಮ ಹಳ್ಳಿಯ ಸರ್ಕಾರಿ ಶಾಲೆಯಲ್ಲಿ. ಆ ಶಾಲೆಗೂ ನಮ್ಮನೆಗೂ ಅಬ್ಬಬ್ಬಾ ಅಂದರೆ ಎರಡು ಫರ್ಲಾಂಗು ದೂರ. ಆದರೆ ನನ್ನ ಕೆಲವು ಗೆಳೆಯರು ನಾಲ್ಕೈದು ಮೈಲು ನಡೆದುಕೊಂಡೇ ಶಾಲೆಗೆ ಬರುತ್ತಿದ್ದರು. ಮಳೆಗಾಲ ಬಂತು ಅಂದರೆ ಸಾಕು, ನಮಗೆಲ್ಲಾ ಶಾಲೆಗೆ ಹೋಗೋದಕ್ಕೆ ಬೇಜಾರು. ಹಾಗಾಗಿ ಹೊಟ್ಟೆ ನೋವಿನ ನೆಪ ಹೇಳಿ ಮನೆಯಲ್ಲೇ ಕುಳಿತುಕೊಳ್ಳುತ್ತಿದ್ದೆವು. ಆದರೆ ಮೇಷ್ಟ್ರುಗಳು ಬಿಡಬೇಕಲ್ವಾ. ಅವರಿಗೆ ನಮ್ಮ ಕಂತ್ರಿ ಬುದ್ಧಿ ಚೆನ್ನಾಗಿ ಗೊತ್ತಿತ್ತು. ಹಾಗಾಗಿ ಅವರು ಶಾಲೆಗೆ ಹೋಗುವಾಗ ದಾರಿಯಲ್ಲಿ ನಮ್ಮ ಮನೆಗೆ ಬಂದು ನಮ್ಮ ಕಿವಿ ಹಿಂಡಿ ದರದರ ಎಳೆದುಕೊಂಡೇ ಕರೆದುಕೊಂಡು ಹೋಗುತ್ತಿದ್ದರು. ಅವರ ಈ ವರ್ತನೆಗೆ ಅಪ್ಪ-ಅಮ್ಮನಿಂದ ಯಾವುದೇ ಆಕ್ಷೇಪಣೆ ಇರುತ್ತಿರಲಿಲ್ಲ. ಯಾಕೆಂದರೆ ಮೇಷ್ಟ್ರು ಹೊಡೆದರಷ್ಟೇ ನಮ್ಮ ಮಕ್ಕಳು ಉದ್ಧಾರವಾಗುತ್ತಾರೆ ಎಂದು ಅವರು ನಂಬಿದ್ದರು. ಬೆಂಗಳೂರಿಗೆ ಬಂದ ಮೇಲೆ ನನಗೆ ಆಘಾತ ಕಾದಿತ್ತು. ಇಲ್ಲಿ ಮೇಷ್ಟ್ರುಗಳು ಮನೆಗೆ ಬರೋದಿಲ್ಲ, ಅಪ್ಪ-ಅಮ್ಮನೇ ತಮ್ಮ ಮಕ್ಕಳನ್ನು ಸ್ಕೂಲಿಗೆ ಬಿಡಬೇಕು ಅಥವಾ ಸ್ಕೂಲ್ ವ್ಯಾನಲ್ಲಿ ಕಳಿಸಿಕೊಡಬೇಕು. ಅದಕ್ಕಿಂತ ಹಿಂಸೆಯ ಸಂಗತಿ ಎಂದರೆ ಪ್ರತಿಷ್ಠಿತ ಶಾಲೆಗಳಲ್ಲಿ ಅಪ್ಲಿಕೇಷನ್ ಫಾರ್ಮ್ ಪಡೆಯುವುದಕ್ಕೋಸ್ಕರ ರಾತ್ರಿಯಿಡೀ ಶಾಲೆಯ ಕಾಂಪೌಂಡಿನಾಚೆ ಕ್ಯೂ ನಿಲ್ಲಬೇಕು. ಲಕ್ಷಾಂತರ ರುಪಾಯಿ ಡೊನೇಷನ್ ಕೊಟ್ಟು ಮಕ್ಕಳನ್ನು ಸ್ಕೂಲಿಗೆ ಸೇರಿಸಬೇಕು. ಇಲ್ಲಿ ಟೀಚರುಗಳು ಮಕ್ಕಳನ್ನು ಹೊಡೆಯುವ ಹಾಗಿಲ್ಲ. ಅಪ್ಪಿತಪ್ಪಿ ಒಂದೇಟು ಹಾಕಿದರೆ ಅದು ಟೀವಿಯಲ್ಲಿ ಪ್ರಸಾರ ಆಗುತ್ತದೆ. ಎಜುಕೇಷನ್ ಅನ್ನೋದು ಇಷ್ಟೊಂದು ಕಷ್ಟ ಅಂತ ನನಗೆ ಗೊತ್ತಿರಲಿಲ್ಲ ಮಾರಾಯಾ.."

ನನ್ನ ಗೆಳೆಯ ಅಚ್ಚರಿ ಮತ್ತು ವಿಷಾದದಿಂದ ಹೇಳಿದ. ಅವನ ಇಬ್ಬರು ಮಕ್ಕಳಲ್ಲಿ ಒಬ್ಬ ಇಂಜಿನೀರಿಂಗ್ ಮತ್ತು ಇನ್ನೊಬ್ಬ ಮೆಡಿಕಲ್ ಓದುತ್ತಿದ್ದಾರೆ. ಸಂಬಳದ ಮುಕ್ಕಾಲು ಭಾಗ ಮಕ್ಕಳ ಫೀಸಿಗೆ ಖರ್ಚಾಗುತ್ತಿದೆ, ಪ್ರೈವೇಟ್ ಟ್ಯೂಷನ್‌ಗೆ ಅಂತ ಇನ್ನೊಂದಿಷ್ಟು ಸಾವಿರ ಹೋಗುತ್ತದೆ. ಮಕ್ಕಳನ್ನು ಓದಿಸುವ ಸಲುವಾಗಿ ಮೈತುಂಬಾ ಸಾಲ ಮಾಡಿಕೊಂಡಿದ್ದಾನೆ. ಅವನ ಪ್ರಕಾರ ಅದು ಇನ್ವೆಸ್ಟ್‌ಮೆಂಟು. ಮುಂದೊಂದು ದಿನ ಮಕ್ಕಳು ಕೆಲಸಕ್ಕೆ ಸೇರಿ ತಾನು ಮಾಡಿದ ಸಾಲ ತೀರಿಸುತ್ತಾರೆ, ಆಗ ತಾನು ರಿಟೈರ್ ಆಗಿ ನೆಮ್ಮದಿಯ ಜೀವನ ಸಾಗಿಸಬಹುದು ಎಂಬ ಕನಸು ಅವನದು. ಅಷ್ಟೊತ್ತಿಗೆ ಈತನಿಗೆಷ್ಟು ವಯಸ್ಸಾಗಿರುತ್ತದೆ? ಬದುಕಿರುತ್ತಾನೋ ಇಲ್ಲವೋ? ಮಕ್ಕಳೇನಾದರೂ ಈತನನ್ನು ಬಿಟ್ಟು ಅಮೆರಿಕಾದಲ್ಲೋ, ಇಂಗ್ಲಂಡಲ್ಲೋ ಸೆಟ್ಲ್ ಆದರೆ ಈತನ ಗತಿ ಏನಾಗಬಹುದು? ನನ್ನ ಮನಸ್ಸು ಹೀಗೆ ಕೆಟ್ಟದಾಗಿ ಯೋಚಿಸುತ್ತಿರುವ ಬಗ್ಗೆ ನನಗೇ ನಾಚಿಕೆಯಾಯಿತು. ಆದರೆ ಮಕ್ಕಳ ಭವಿಷ್ಯದ ಬಗ್ಗೆ ಅತಿಯಾದ ಕನಸು ಕಾಣುವ ಪೋಷಕರೆಲ್ಲರೂ ತಮ್ಮ ವರ್ತಮಾನವನ್ನು ಹಾಳು ಮಾಡಿಕೊಳ್ಳುತ್ತಿರುವುದು ವಾಸ್ತವ.

ಅಮೆರಿಕಾದಲ್ಲಿರುವ ನನ್ನ ಇನ್ನೊಬ್ಬ ಗೆಳೆಯ, ತನ್ನ ಮಗನನ್ನು ಸ್ಕೂಲಿಗೆ ಸೇರಿಸಿದ ರೀತಿಯನ್ನು ವರ್ಣಿಸಿ ಒಂದು ಮೇಲ್ ಕಳಿಸಿದ್ದ. ಅದು ತುಂಬಾ ಇಂಟರೆಸ್ಟಿಂಗ್ ಆಗಿದೆ. ಅಲ್ಲಿ ಖಾಸಗಿ ಮತ್ತು ಸರ್ಕಾರಿ ಶಾಲೆಗಳೆರಡರಲ್ಲೂ ಒಂದೇ ರೀತಿಯ ಮೂಲಭೂತ ಸೌಕರ್ಯಗಳಿರುತ್ತವೆ. ಆದರೆ ಪಠ್ಯದ ವಿಚಾರದಲ್ಲಿ ಸರ್ಕಾರಿ ಶಾಲೆ ತನ್ನ ವಿದ್ಯಾರ್ಥಿಗಳಿಗೆ ಹೆಚ್ಚು ಒತ್ತಡ ಹೇರುವುದಿಲ್ಲ. ಹಾಗಾಗಿ ಮಕ್ಕಳು ನಾಲ್ಕನೇ ತರಗತಿಯವರೆಗೆ ಹಾಯಾಗಿ ತಿಂದುಂಡು ಆಟ ಆಡುತ್ತಾ ಬೆಳೆಯುತ್ತವೆ. ಮಕ್ಕಳ ವಿದ್ಯಾಭ್ಯಾಸದ ಖರ್ಚು, ಸಾರಿಗೆ ಭತ್ಯೆ, ಊಟ, ಪುಸ್ತಕ ಇವೆಲ್ಲದಕ್ಕೂ ಹಣವನ್ನು ಸರ್ಕಾರ ನೀಡುತ್ತದೆ. ಖಾಸಗಿ ಶಾಲೆಗಳಿಗಿಂತಲೂ ದೊಡ್ಡದಾದ ಆಟದ ಮೈದಾನ, ಲೈಬ್ರೆರಿ ಸರ್ಕಾರಿ ಶಾಲೆಗಳಲ್ಲಿರುತ್ತದೆ.

ಹೀಗಿದ್ದರೂ ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯರು ಹೆಚ್ಚು ಹಣ ನೀಡಿಯಾದರೂ ಖಾಸಗಿ ಶಾಲೆಗಳಿಗೇ ಮಕ್ಕಳನ್ನು ಸೇರಿಸುವುದಕ್ಕೆ ಇಷ್ಟಪಡುತ್ತಾರಂತೆ. ಅದಕ್ಕೆ ಕಾರಣ ಪಬ್ಲಿಕ್ ಸ್ಕೂಲುಗಳಲ್ಲಿ ಪಠ್ಯಕ್ಕಿಂತ ಆಟಕ್ಕೆ ಹೆಚ್ಚು ಒತ್ತು ನೀಡುತ್ತಾರೆ ಅನ್ನುವುದು. ಅಮೆರಿಕಾದಲ್ಲಿ ಪಾಸು-ಫೇಲು ಮುಖ್ಯವಲ್ಲ, ಶಾಲೆಯಲ್ಲಿ ಮಗು ಸದಾ ಒಂದಲ್ಲ ಒಂದು ಚಟುವಟಿಕೆಯಲ್ಲಿ ನಿರತವಾಗಿರಬೇಕು ಅನ್ನುವುದು ಅಲ್ಲಿಯ ಸರ್ಕಾರಿ ಶಾಲೆಗಳ ನೀತಿ. ಹಾಗಾಗಿ ಅಮೆರಿಕಾದ ಶೇಕಡಾ ಎಂಬತ್ತೆಂಟರಷ್ಟು ಮಕ್ಕಳು ಸರ್ಕಾರಿ ಶಾಲೆಗಳಲ್ಲೇ ಓದುತ್ತಾರೆ. ಆದರೆ ಇಲ್ಲಿಂದ ವಲಸೆ ಹೋದವರು ನೂರಾರು ಡಾಲರುಗಳನ್ನು ಖರ್ಚು ಮಾಡಿ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುತ್ತಾರೆ.

ಅಮೆರಿಕಾದಲ್ಲಿ ಪ್ರತಿ ಸರ್ಕಾರಿ ಶಾಲೆಯೂ ಒಂದು ವೆಬ್‌ಸೈಟನ್ನು ಹೊಂದಿರುತ್ತದೆ. ಅದರಲ್ಲಿ ಶಾಲೆಯ ಧ್ಯೇಯೋದ್ದೇಶ, ಪೋಷಕರ ಪಾತ್ರ, ಬಸ್ ವೇಳಾಪಟ್ಟಿ, ಜೊತೆಗೆ ಶಾಲೆಯ ಎಲ್ಲಾ ಸಿಬ್ಬಂದಿಯ ಫೋನ್ ಮತ್ತು ಈಮೇಲ್ ವಿಳಾಸವಿರುತ್ತದೆ. ಪ್ರಾಂಶುಪಾಲರು ಮತ್ತು ಟೀಚರುಗಳು ತಮ್ಮ ಪೂರ್ವಾಪರಗಳನ್ನು ಮುಕ್ತವಾಗಿ ಅಲ್ಲಿ ದಾಖಲಿಸುತ್ತಾರೆ. ಉದಾಹರಣೆಗೆ ಒಬ್ಬ ಮಹಿಳಾ ಪ್ರಿನ್ಸಿಪಾಲ್ ಸ್ಕೂಲ್ ವೆಬ್‌ಸೈಟಲ್ಲಿ ಹೀಗೆ ಬರೆದುಕೊಂಡಿದ್ದರು. “ನಾನು ನನ್ನ ಬಾಲ್ಯವನ್ನು ಮನೆಯ ಹೊರಗೆ ಕಾಣಿಸುತ್ತಿದ್ದ ಮಿಂಚುಹುಳಗಳನ್ನು ನೋಡಿ ಆನಂದಿಸುತ್ತಾ ಕಳೆದೆ. ಇಪ್ಪತ್ತೈದನೇ ವಯಸ್ಸಲ್ಲಿ ಮದುವೆಯಾದೆ, ನನಗೆ ಇಬ್ಬರು ಮಕ್ಕಳು. ಒಬ್ಬ ಕಾಲೇಜು ಓದುತ್ತಿದ್ದಾನೆ. ನಮ್ಮದು ಸುಖಿ ಕುಟುಂಬ. ಈ ಶಾಲೆಯ ಪ್ರಿನ್ಸಿಪಾಲ್ ಆಗಿ ನಾನು ಹೇಳುವುದೇನೆಂದರೆ ನೀವು, ನಿಮ್ಮ ಮಕ್ಕಳು ಮತ್ತು ನಾವು ಒಟ್ಟಾಗಿ ಸೇರಿ ಹೊಸತನವನ್ನು ಸೃಷ್ಟಿಸಬಹುದು. ನಾವೆಲ್ಲ ಈ ಮಕ್ಕಳ ಭವಿಷ್ಯ ರೂಪಿಸುವ ಕಡೆ ಮುನ್ನಡೆಯೋಣ" ಇಂಥಾ ಟೀಚರುಗಳ ಸಂತತಿ ಇಲ್ಲೂ ಬೆಳೆಯಲಿ.

ಅದು ಅಸಾಧ್ಯದ ಕೆಲಸವೇನಲ್ಲ. ಆದರೆ ಯಾರೂ ಸಿಲಬಸ್ಸಿನಾಚೆ ಜಿಗಿಯಬಾರದು ಅನ್ನುವ ನಮ್ಮ ವ್ಯವಸ್ಥೆ ಶಿಕ್ಷಕರ ಮುಂದೆ ಒಂದು ಲಕ್ಷ್ಮಣರೇಖೆಯನ್ನು ಎಳೆದುಬಿಟ್ಟಿದೆ. ಪಠ್ಯದಲ್ಲಿರುವುದನ್ನು ಚಾಚೂ ತಪ್ಪದೆ ಮಕ್ಕಳ ಮಿದುಳಿಗೆ ರವಾನಿಸುವ ಕೆಲಸ ಮಾಡುವವರೇ ಒಳ್ಳೇ ಟೀಚರ್. ಮಗು C for cat ಎಂದೇ ಹೇಳಬೇಕು, C for cricket ಅಂದರೆ ಅದು ತಪ್ಪು. ಮಕ್ಕಳ ಪೋಷಕರು ಬಯಸುವುದೂ ಅದನ್ನೇ. ಸ್ಕೂಲ್ ಮೀಟಿಂಗು ಅನ್ನುವುದು ಪೋಷಕರ ಪಾಲಿಗೆ ದೂರು ನೀಡುವುದಕ್ಕೊಂದು ವೇದಿಕೆ, ಶಿಕ್ಷಕರ ಪಾಲಿಗೆ ಇದು ಪೋಷಕರನ್ನು ಸಂತೈಸುವ ಕಾರ್ಯಕ್ರಮ. ರಚನಾತ್ಮಕ ಸಲಹೆಗಳಾಗಲಿ, ಒಂದು ಪ್ರಶಂಸೆಯ ಮಾತಾಗಲಿ ಕೇಳಿಸುವುದು ಅಪರೂಪ.

ಅಮೆರಿಕಾದ ಸಿಲಿಕಾನ್ ವ್ಯಾಲಿಯಲ್ಲಿ ಕೆಲಸ ಮಾಡುತ್ತಿರುವ ಸಾಫ್ಟ್‌ವೇರ್ ಇಂಜಿನೀರುಗಳ ಪೈಕಿ ಹೆಚ್ಚಿನವರು ಬೆಂಗಳೂರಲ್ಲೇ ತಯಾರಾದವರು ಎಂದು ನಾವು ಹೆಮ್ಮೆ ಪಡುತ್ತೇವೆ. ಇನ್ನೊಂದೆಡೆ ನೂರಾ ಇಪ್ಪತ್ತೈದು ಕೋಟಿ ಜನಸಂಖ್ಯೆಯನ್ನು ಹೊಂದಿರುವ ನಮ್ಮ ದೇಶ ಒಲಿಂಪಿಕ್ಸ್ ನಲ್ಲಿ ಒಂದು ಚಿನ್ನದ ಪದಕ ಗೆಲ್ಲುವುದಕ್ಕೂ ಸಾಧ್ಯವಾಗುವುದಿಲ್ಲ ಎಂದು ದುಃಖಿಸುತ್ತೇವೆ. ಕಾರಣ ಸ್ಪಷ್ಟ. ಮಗ ತೊಂಬತ್ತು ಪರ್ಸೆಂಟು ತೆಗೆದರೆ ಹೆಮ್ಮೆ ಪಡುವ ಅಪ್ಪ, ಅದೇ ಮಗ ವಾಲಿಬಾಲ್‌ನಲ್ಲೋ, ಚೆಸ್‌ನಲ್ಲೋ ಗೆದ್ದರೆ ಆ ಪರಿ ಹೆಮ್ಮೆ ಪಡುವುದಿಲ್ಲ. ಬೇಕಿದ್ದರೆ ನಿಮ್ಮ ಅಕ್ಕಪಕ್ಕದ ಮನೆಗಳಲ್ಲಿರುವ ಮಕ್ಕಳನ್ನು ಕೇಳಿ ನೋಡಿ. ಎಲ್ ಕೇಜಿಯಲ್ಲಿದ್ದಾಗ ಅದ್ಭುತವಾಗಿ ಡ್ರಾಯಿಂಗ್ ಮಾಡುತ್ತಿದ್ದ ಮಗು ಈಗ ಪೇಂಟಿಂಗ್ ಬಾಕ್ಸನ್ನು ಅಪ್ಪಿತಪ್ಪಿಯೂ ಮುಟ್ಟುವುದಿಲ್ಲ. ದಿನಾ ಸಂಜೆ ಕ್ರಿಕೆಟ್ ಆಡುತ್ತಿದ್ದ ಹುಡುಗ ಈಗ ಬ್ಯಾಟು-ಬಾಲನ್ನು ಅಟ್ಟದಲ್ಲಿ ಬಿಸಾಕಿದ್ದಾನೆ. ಇದರ ಹಿಂದೆ ಆ ಮಕ್ಕಳ ಹೆತ್ತವರ ಪಿತೂರಿ ಇದೆ. ಕ್ರೀಡೆ ಅಥವಾ ಕಲೆ ಬದುಕನ್ನು ರೂಪಿಸುವುದಿಲ್ಲ, ಹೊಟ್ಟೆ ತುಂಬಿಸುವುದಿಲ್ಲ ಎಂಬ ಸಿದ್ಧಾಂತ ಅವರದು. ಹೋಗಲಿ, ಅಮೆರಿಕಾವನ್ನು ಉದ್ಧಾರ ಮಾಡುತ್ತಿರುವ ನಮ್ಮ ಸಾಫ್ಟ್ ವೇರುಗಳು ತಮಗೆ ಪಾಠ ಕಲಿಸಿದ ಈ ದೇಶದ ಋಣಸಂದಾಯ ಮಾಡುತ್ತಾರಾ? ತಮ್ಮ ಸಂಬಳದಲ್ಲಿ ಅರ್ಧದಷ್ಟನ್ನು ತೆಗೆದಿರಿಸಿಕೊಂಡು ಬೆಂಗಳೂರಲ್ಲಿ ಸೈಟುಗಳನ್ನು ಖರೀದಿ ಮಾಡುತ್ತಾರೆ.

ಪ್ರಸಿದ್ಧ ಸಂಗೀತ ನಿರ್ದೇಶಕ ಎಸ್.ಡಿ. ಬರ್ಮನ್ ಸುಮಾರು ಆರು ದಶಕಗಳ ಹಿಂದೆ ತನ್ನ ಅಪ್ಪನ ಮಾತನ್ನು ಕೇಳಿದ್ದರೆ ಇಂದು ನಾವು ನೂರಾರು ಮಧುರ ಗೀತೆಗಳಿಂದ ವಂಚಿತರಾಗುತ್ತಿದ್ದೆವು. ಅವರದು ರಾಜರ ಮನೆತನ. ಮಗ ಚೆನ್ನಾಗಿ ಓದಿ ಲಾಯರ್ ಆಗಿ ವಿದೇಶಗಳಲ್ಲಿ ಪ್ರಾಕ್ಟೀಸು ಮಾಡುವಂಥಾಗಬೇಕು ಎಂದು ತಂದೆ ಬಯಸುತ್ತಾರೆ. ಆದರೆ ಮಗ ಹೊಲ-ಗದ್ದೆಗಳಲ್ಲಿ ಓಡಾಡುತ್ತಾ, ಅಲ್ಲಿನ ಬಡ ಹೆಣ್ಮಕ್ಕಳು ಹಾಡುವ ಜನಪದ ಗೀತೆಗಳನ್ನು ಕೇಳುತ್ತಾ ಬೆಳೆಯುತ್ತಾನೆ. ಆತನಿಗೆ ಸಂಗೀತ ಇಷ್ಟ. ಅಪ್ಪ ನಿರಾಶನಾಗುತ್ತಾನೆ. ಮಗ ಕೋಟ್ಯಂತರ ಜನರ ಮನಸ್ಸು ಗೆಲ್ಲುತ್ತಾನೆ.

ಜಗತ್ತಿನ ಎಲ್ಲಾ ಅಪ್ಪಂದಿರಿಗೂ ತಮ್ಮ ಮಗನೋ, ಮಗಳೋ ತಮ್ಮಿಚ್ಛೆಯಿಂದ ಬೆಳೆಯಬೇಕು ಎಂಬ ಹಟ. ಚೆನ್ನಾಗಿ ಓದಿ, ಚೆನ್ನಾಗಿ ಕಾಸು ಸಂಪಾದನೆ ಮಾಡು ಅನ್ನುವುದು ಅವರ ಹಿತವಚನ. ಈ ಕಾರಣಕ್ಕೆ ನಮ್ಮ ಶಾಲೆಗಳಲ್ಲಿ ಸಂಗೀತ, ಕ್ರೀಡೆ, ಮೊದಲಾದ ವಿಭಾಗಗಳಲ್ಲಿ ನಿಪುಣತೆ ಹೊಂದಿರುವ ಟೀಚರುಗಳು ಇರುವುದು ಅಪರೂಪ. ಪೀಟಿ ಟೀಚರ್ ಇದ್ದರೂ ಅವರಿಗೆ ಮಿಕ್ಕ ಟೀಚರುಗಳಿಗಿರುವ ಸ್ಥಾನಮಾನವಿಲ್ಲ. ಸಂಗೀತದಂಥ ಇತರೇ ಚಟುವಟಿಕೆಗಳು ಪಠ್ಯ ಕಲಿಕೆಯ ನಡುವೆ ಬರುವ ಮಧ್ಯಂತರದಂತೆ. ಇವತ್ತು ಸ್ಕೂಲಲ್ಲಿ ನೀನೇನು ಆಟ ಆಡಿದೆ ಅಥವಾ ಯಾವ ಹಾಡು ಹಾಡಿದೆ ಮಗಳೇ ಎಂದು ಕೇಳುವ ಹೆತ್ತವರಿಲ್ಲ. ಏನು ಓದಿದೆ ಅಂತ ಕೇಳುವವರೇ ಜಾಸ್ತಿ. ಈ ಕಾಟದಿಂದಾಗಿಯೇ ಮಕ್ಕಳು ಮೊಬೈಲಿಗೆ ಮೊರೆ ಹೋಗುತ್ತಾರೆ, ಕ್ಲಾಸಿಗೆ ಬಂಕ್ ಹಾಕಿ ಸಿನೆಮಾ ನೋಡುವುದಕ್ಕೆ ಹೋಗುತ್ತಾರೆ, ಸುಳ್ಳು ಹೇಳುವುದಕ್ಕೆ ಕಲಿಯುತ್ತಾರೆ. ಪೋಷಕರು ಮನೆಯಲ್ಲೇ ಕುಳಿತು ಟೀಚರುಗಳಿಗೆ ಹಿಡಿ ಶಾಪ ಹಾಕುತ್ತಾರೆ. ಅವರಾದರೂ ಏನು ಮಾಡುತ್ತಾರೆ. ಅದೇ ಸಿಲಬಸ್ಸು, ಅದೇ ಮಕ್ಕಳು. ಎಲ್ಲರಿಗೂ ಅದೇ ಪಾಠವನ್ನು ಹೇಳಿದರೂ ಎಲ್ಲರೂ ಯಾಕೆ ತೊಂಬತ್ತೈದು ಪರ್ಸೆಂಟು ಅಂಕ ತೆಗೆಯುವುದಿಲ್ಲ?

ಶಿಕ್ಷಣ ಅಂದರೆ ಪಠ್ಯ ಪುಸ್ತಕದಲ್ಲಿರುವ ಅಕ್ಷರಗಳನ್ನು ಮಿದುಳಲ್ಲಿ ಸೇವ್ ಮಾಡಿಕೊಳ್ಳುವುದು ಎಂಬ ಮನಸ್ಥಿತಿಯಿಂದ ನಾವು ತುರ್ತಾಗಿ ಹೊರಗೆ ಬರಬೇಕಾಗಿದೆ. ನಾಳೆ ಟೀಚರ್ಸ್ ಡೇ ಅನ್ನುವುದನ್ನು ನೆಪವಾಗಿಟ್ಟುಕೊಂಡು ಇದನ್ನು ಬರೆದಿದ್ದೇನೆ. ಕೈಯಲ್ಲಿ ಬೆತ್ತ ಹಿಡಿದುಕೊಂಡೇ ನನ್ನಂಥ ಲಕ್ಷಾಂತರ ಜನರ ಬದುಕಿಗೆ ದಾರಿ ತೋರಿದ ಹಳ್ಳಿ ಮೇಷ್ಟ್ರುಗಳಿಗೆ ನನ್ನದೊಂದು ನಮಸ್ಕಾರ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 21 January, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books