Ravi Belagere
Welcome to my website
ಕೆಲವೊಮ್ಮೆ ಬಂಧುಗಳ, ಸ್ನೇಹಿತರ, ಪರಿಚಿತರ ಮನೆಗೆ ಹೋಗಲೇಬೇಕಾಗುತ್ತದೆ. ಎರಡು ದಿನದ ಮಟ್ಟಿಗೆ ಹೋಗಿದ್ದು ಬರುವುದಾದರೆ ಆ ಮಾತು ಬೇರೆ. ಆದರೆ ತಿಂಗಳುಗಟ್ಟಲೆ ಇರುವ ಪ್ರಸಂಗ ಬಂದರೆ? ನೀವು ಚಿಕ್ಕವರಾಗಿದ್ದಾಗ ಸಂಬಂಧಿಕರ ಮನೆಯಲ್ಲಿ, ಮತ್ಯಾವುದೋ ಕಾರಣಕ್ಕೆ ಒಂದಷ್ಟು ದಿನ ಇನ್ನೊಬ್ಬರ ಮನೆಯಲ್ಲಿ ಉಳಿದುಕೊಂಡ ಪ್ರಸಂಗವಿರಬಹುದು. ಆಗ ಮುಜುಗರ, ಸಂಕೋಚ, ಬೇಸರ ಎಲ್ಲವೂ ಆಗಿರಬಹುದು. ಯಾರಿಗೆ ಗೊತ್ತು? ನೀವು ಖುಷಿಯಿಂದಲೇ ಇದ್ದಿರಬಹುದು. ಹೀಗೆ ನಿಮ್ಮ ಅನುಭವಗಳನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ನಿಮ್ಮ ಫೊಟೋ ಜೊತೆ, ಚಿಕ್ಕದಾಗಿ ಮತ್ತು ಚೊಕ್ಕವಾಗಿ ಬರೆದು ಕಳಿಸಿ. ಈ ಮೇಲ್ ಮೂಲಕ ಕಳಿಸುವವರು [email protected] ಗೆ ಕಳಿಸಿ.
Home About Us Gallery Books Feedback Prarthana Contact Us

Buy Ravi Belagere Books online

ನಾಳೆ ಬೆಳಕು ಹರಿಯಬೇಕಷ್ಟೆ; ನನ್ನ ಪ್ರೀತಿಯ ಅಮ್ಮ ಬರುತ್ತಾಳೆ...

ಹೌದು, ಅಮ್ಮ ಬರುತ್ತಾಳೆ. ಕರಾರುವಾಕ್ಕಾಗಿ ಸೆಪ್ಟೆಂಬರ್ ೪ ಬೆಳಿಗ್ಗೆ ನಾನು ನಿದ್ರೆಯಿಂದ ಏಳುವ ಹೊತ್ತಿಗೆ ಅಮ್ಮ ಬಂದಿರುತ್ತಾಳೆ. ‘ಅಮ್ಮ ಸಿಕ್ಕಿದ್ಲು’ ಎಂಬ ಪುಟ್ಟ ಕಾದಂಬರಿ ಬರೆದೆ. ಓದಿದ್ದಿರಬೇಕು ನೀವು. ಇಂಗ್ಲಿಷ್ ಕಾದಂಬರಿಯೊಂದರ ಅತ್ಯಂತ ಚಿಕ್ಕ ಮತ್ತು ಸೂಕ್ಷ್ಮವಾದ ಒಂದೇ ಒಂದು ಎಳೆಯನ್ನಿಟ್ಟುಕೊಂಡು ಬರೆದ ಕಾದಂಬರಿ ಅದು. ಅದರಲ್ಲಿ ನಾನಿದ್ದೇನಾ? ಗೊತ್ತಿಲ್ಲ. ಅದರ ನಾಯಕ ಒಬ್ಬ ಪತ್ರಕರ್ತ. ವಿಪರೀತ ಕುಡುಕ. ಬದುಕು ಇನ್ನೂ ಐವತ್ತರ ಆಚೆಗೆ, ಕೊಂಚ ಈಚೆಗೆ ಇರುವುದು ಅವನಿಗೆ ಗೊತ್ತು. ಅದಿನ್ಯಾವ ಪರಿ ಕುಡುಕನೆಂದರೆ, ಆಫೀಸಿನ ಪಾಲಿಗೆ ಮತ್ತು ಅವನು ಬಲ್ಲ ಎಲ್ಲರ ಪಾಲಿಗೆ, ಅವನು written off. ಮುಗಿದೇ ಹೋದ, ಅಬ್ಬಬ್ಬಾ ಅಂದ್ರೆ ಇನ್ನೊಂದು ಎರಡು ಮೂರು ವರ್ಷ; ಅದಕ್ಕಿಂತ ಹೆಚ್ಚು ಬದುಕಿರಲಾರ, ಅಕಸ್ಮಾತ್ ಬದುಕಿದ್ದರೂ ಉಪಯೋಗವೇನು? waste body. ಹಾಗಂತ ಅವರಿವರು ಮಾತನಾಡಿಕೊಳ್ಳುವುದಿರಲಿ; ಅವನ ಹೆಂಡತಿಗೂ ಹಾಗೆ ಅನ್ನಿಸಿತ್ತು. ಅವನು ಬಿಟ್ಟನೋ? ಅವನ ಹೆಂಡತಿಯೇ ಹೆಣಗಲಾಗದೆ ಅವನನ್ನು ಬಿಟ್ಟು ನಡೆದಳೋ, ಗೊತ್ತಿಲ್ಲ. She walked out. ಹೀಗೆ ತುಂಬ ನನ್ನನ್ನು, I mean ನನ್ನ ಗತಕಾಲದ ಬದುಕನ್ನು ಹೋಲುವ ಒಂದಷ್ಟು ಪಾತ್ರ, ಘಟನೆಗಳು, ಅವುಗಳಿಗೊಂದಿಷ್ಟು ವಿಟಮಿನ್ ತುಂಬಿ ಕೇವಲ ಮೂರು ದಿನಗಳಲ್ಲಿ ‘ಅಮ್ಮ ಸಿಕ್ಕಿದ್ಲು’ ಕಾದಂಬರಿ ಮುಗಿಸಿ ಪ್ರಿಂಟಿಗೆ ಕೊಟ್ಟೆ. ಅದನ್ನೇನು ಜಾಯಮಾನ ಅಂತೀರೋ, ‘ತೀರ ಅತೀ ಆಯ್ತು ನಿಂದು’ ಅನ್ನುತ್ತೀರೋ? ಗೊತ್ತಿಲ್ಲ. ನಾನು ಬರೆಯುವುದೇ ಹಾಗೆ. ಅಫ್‌ಕೋರ್ಸ್ ಕೆಲವು ಪುಸ್ತಕಗಳಿವೆ; ಅವುಗಳನ್ನು ಈ ಕಾದಂಬರಿ ಬರೆದ ಹಾಗೆ ಮೂರು-ನಾಲ್ಕು ದಿನದೊಳಗಾಗಿ ಬರೆದು ಮುಗಿಸಲು ಸಾಧ್ಯವಿಲ್ಲ. ನನ್ನ ಕೃತಿಗಳೇ ಆದ ಹಿಮಾಲಯನ್ ಬ್ಲಂಡರ್, ಮುಸ್ಲಿಂ, ಹಿಮಾಗ್ನಿ ಮುಂತಾದವುಗಳನ್ನು ಹಾಗೆಲ್ಲ ಅವಸರದಲ್ಲಿ ಬರೆಯಲು ಸಾಧ್ಯವಿಲ್ಲ. ಆ ತರಹದ ಬರವಣಿಗೆ ಮಾಡಿ ಮುಗಿಸಲು ವಿಪರೀತವಾದ ನೋಟ್ಸು, ರಿಸರ್ಚು, ಮನನ, ತಿರುಗಾಟ ಮುಂತಾದವೆಲ್ಲ ಬೇಕು. ತಿಂಗಳುಗಟ್ಟಲೆ ಯಾರಿಗೂ ಹೇಳದೆ ನನ್ನ ಪಾಡಿಗೆ ನಾನು ಆ ಕೆಲಸ ಮಾಡುತ್ತಾ ಇರುತ್ತೇನೆ. “ಮ್.. ಆಯ್ತಲ್ಲ? ಬುತ್ತಿ ಪರ್‌ಫೆಕ್ಟಾಗಿ ಕಟ್ಟಿದ್ದೀಯ" ಅಂತ ನನ್ನ ಮನಸ್ಸು ಹೇಳಬೇಕು. ಅದೆಷ್ಟೇ ಇಂಪಾಸಿಬ್ಲ್ ಅಂದರೂ, ನನ್ನ ಹುಚ್ಚಾಟ, ನನ್ನ ಕುಸಿವಿಷ್ಟೆ ಅಂತ ಅವರಿವರಿಗೆ ಅನ್ನಿಸಿದರೂ ನಾನು ಒಂದಷ್ಟು stupid ಆದ ಸಿದ್ಧತೆ ಮತ್ತು packing ಮಾಡಿಕೊಳ್ಳುತ್ತೇನೆ.

ಮುಖ್ಯವಾಗಿ ದುಡ್ಡು. ಮೂರು track pant ಮತ್ತು ಟಿ-ಷರ್ಟು, ನನ್ನ ಔಷಧಿಗಳು, ಹಾಡಿನ ಸಿ.ಡಿಗಳು, ಸರಿಯಾಗಿ ಒಂದು ಡಜನ್ ಪೆನ್ನುಗಳು, ಆ ಥರದ್ದು ಬಿಟ್ಟರೆ ಬೇರೆ ಇನ್ಯಾವ ಹಾಳೆಯ ಮೇಲೂ ನಾನು ಬರೆಯುವುದಿಲ್ಲ ಎಂದು ಶಪಥ ಮಾಡಿದ್ದೇನಲ್ಲ? ಆ ತರಹದ ಹಾಳೆಗಳಿರುವ ಒಂದಷ್ಟು padಗಳು, ತೊಡೆಯ ಮೇಲಿಟ್ಟುಕೊಂಡು ಬರೆಯುವುದಕ್ಕೆ ಬೇಕಾದ ಒಂದು ಕಾರ್ಡ್‌ಬೋರ್ಡ್, ಬರೋಬ್ಬರಿ ಒಂದು ಕೋಟಾ (quota) ಸಿಗರೇಟು, ಅರ್ಧ ಡಜನ್ lighterಗಳು, ಒಂದು ಪಾಕೆಟ್ ಚ್ಯೂಯಿಂಗ್ ಗಮ್, ಹುಣಸೇ ಹಣ್ಣಿನ ಚಿಗಳಿಯಂತಹ ‘ಇಮ್ಲಿ’ brandನ ಒಂದು ದೊಡ್ಡ ಪಾಕೀಟು, ನನ್ನ notesನ ಕಂತೆ, ಒಂದು lap top -ಮುಂತಾದವುಗಳನ್ನು ನಾನೇ ಖುದ್ದಾಗಿ pack ಮಾಡಿಕೊಳ್ಳುತ್ತೇನೆ. ಇವೆಲ್ಲವುಗಳ ಮಧ್ಯೆ ಒಂದು ಬೆಂಕಿಪೊಟ್ಟಣ (not for smoking) ತರಿಸುತ್ತೇನೆ. ಅದೂ ಏನು, ಪ್ಲಾಸ್ಟಿಕ್ ಅಥವಾ ವ್ಯಾಕ್ಸ್‌ನ ಕಡ್ಡಿಗಳೇ ಆಗಿರಬೇಕು. ಅದನ್ನೂ ಒಯ್ಯುತ್ತೇನೆ. ಆ ತರಹದ ಬೆಂಕಿಪೊಟ್ಟಣ ತರುವ ಹುಡುಗರೇ ಪೊಟ್ಟಣ ಬಿಚ್ಚಿ ಅದರ ಕಡ್ಡಿಗಳಿಗೆ ಒಂದು ‘ಸಂಸ್ಕಾರ’ ಮಾಡಿರುತ್ತಾರೆ. ಮತ್ತೇನಿಲ್ಲ, ಬೆಂಕಿ ಕಡ್ಡಿಯ ತುದಿಯಲ್ಲಿ ಬೆಂಕಿ ಹೊತ್ತಿಸುವ ಕಪ್ಪನೆಯ ಮದ್ದು ಇರುತ್ತದಲ್ಲ? ಆ ಮದ್ದನ್ನು chop off ಮಾಡಿರುತ್ತಾರೆ. ಅದನ್ನು ಹಾಗೆ ತೆಗೆದುಬಿಟ್ಟರೆ ಬರೀ ಒಂದು ವ್ಯಾಕ್ಸ್ ಕಡ್ಡಿ ಉಳಿಯುತ್ತದೆ. ವಿಮಾನಗಳಲ್ಲಿ ಬೆಂಕಿಪೊಟ್ಟಣ(ಮುಖ್ಯವಾಗಿ, ಅದರೊಳಗಿನ ಮದ್ದು ಇರುವಂತಹ)ಗಳನ್ನು allow ಮಾಡುವುದಿಲ್ಲ. ಸೆಕ್ಯುರಿಟಿ ಚೆಕ್‌ನ ಗೇಟಿನಲ್ಲೇ ಅವರು ಕಿತ್ತಿಟ್ಟುಕೊಂಡು ಬಿಡುತ್ತಾರೆ. ಆದರೆ ಮದ್ದೇ ಇಲ್ಲದ ವ್ಯಾಕ್ಸ್ ಕಡ್ಡಿಗಳಿಗೆ ನಿರ್ಬಂಧವಿಲ್ಲವಲ್ಲ? ಅಂಥ ಕಡ್ಡಿಗಳನ್ನು ಶ್ರದ್ಧೆಯಿಂದ ಒಯ್ಯುವುದೇಕೆ ಗೊತ್ತೇ? ಹಲ್ಲಿನ ಸಂದಿಯಲ್ಲಿ ಸಿಕ್ಕಿಕೊಳ್ಳುವ ಅಡಿಕೆ ನುಸಿಯಂಥದ್ದನ್ನು ಚುಚ್ಚಿ ಹೊರತೆಗೆಯಲಿಕ್ಕೆ ಅದಕ್ಕಿಂತ ಅದ್ಭುತವಾದ ಆಯುಧ ಬೇರಿಲ್ಲ. ಅಂಥ ವ್ಯಾಕ್ಸ್ ಕಡ್ಡಿಯಲ್ಲಿ ಒಮ್ಮೆ ಹಲ್ಲು ಸಾಫ್ ಮಾಡಿಕೊಂಡುಬಿಡಿ, ಆಮೇಲೆ ನೀವು ಬಂಗಾರದಲ್ಲಿ ಮಾಡಿದ ಟೂಥ್‌ಪಿಕ್ ಕೊಟ್ಟರೂ ಒಲ್ಲೆ ಎನ್ನುತ್ತೀರಿ. ತುಂಬ ಮೃದುವಾಗಿ, ತುಂಬ ನಯವಾಗಿ ಹಲ್ಲು ಸಂದಿಗೆ ನುಗ್ಗುವ ಆ ವ್ಯಾಕ್ಸ್ ಕಡ್ಡಿ ನಿಮ್ಮ ಒಸಡುಗಳನ್ನು ಚೂರೂ hurt ಮಾಡುವುದಿಲ್ಲ. ಬೇರೆ ತರಹದ, ಹೊಟೇಲುಗಳಲ್ಲಿ ಕೊಡುವ ತುಂಬ sharp ಆಗಿರುವ ಕಟ್ಟಿಗೆಯ ಟೂಥ್‌ಪಿಕ್‌ಗಳು ಆ ವಿಪರೀತ ಚೂಪಿನಿಂದಾಗಿ ಪ್ರಾಣ ಹೋಗೋಷ್ಟು ನೋವುಂಟು ಮಾಡುತ್ತವೆ. ಕೆಲಬಾರಿ ರಕ್ತ ಬಂದರೂ ಬಂತೇ. ತುಂಬ ವಯಸ್ಸಾದ ಅಜ್ಜಿಯರು ತಮ್ಮ ಎಲಡಿಕೆಯ ಚೆಂಚಿಯಲ್ಲಿ ಒಂದು ಬೆಳ್ಳಿಯ ಟೂಥ್‌ಪಿಕ್ ಇಟ್ಟುಕೊಂಡಿರುತ್ತಾರೆ. ಅದೂ ಒಸಡಿಗೆ ತಾಕಿದರೆ ತುಂಬ ನೋವಾಗುತ್ತದೆ. ನಿಮಗೆ ತಮಾಷೆ ಅನ್ನಿಸಬಹುದು. ಕೆಲವು ಸಲ ವ್ಯಾಕ್ಸ್ ಕಡ್ಡಿ ಸಿಗುವುದಿಲ್ಲ. ಅದರಲ್ಲೂ ನಿಮ್ಮ smile ಅನ್ನು ಚೆಂದಗೊಳಿಸುವ ಮುಂದಿನ ಹಲ್ಲುಗಳ ನಡುವೆ ಅಡಿಕೆಯ ನುಸಿಯಂತಹುದು ಸಿಕ್ಕಿಕೊಂಡುಬಿಟ್ಟರೆ ಅದನ್ನು ಶತಾಯಗತಾಯ ಆಚೆಗೆ ಹಾಕುವ ತನಕ ಸಮಾಧಾನವಿರುವುದಿಲ್ಲ. ಅದಕ್ಕೆ best ಅಂದ್ರೆ, ಮಾತ್ರೆ ಬಿಚ್ಚಿಕೊಂಡು ನುಂಗಿದ ಮೇಲೆ ಅದರ packing material ಅಥವಾ foil ಉಳಿದಿರುತ್ತದಲ್ಲ? ಅದರಿಂದ ಅಡಿಕೆ ನುಸಿಯನ್ನು ತೆಗೆಯಿರಿ. ಅದೂ ಒಂದು ತರಹದ ಮರಣಾನಂದವೇ! ಆದರೆ ಕೆಲವು ಸಲ ಅದೂ hurt ಮಾಡುತ್ತದೆ.

ಹೀಗೆ ಪ್ರತಿಯೊಂದನ್ನೂ ಪಟ್ಟಿ ಮಾಡಿ, ಸೂಟ್‌ಕೇಸಿನಲ್ಲಿ ಯಾವ ಜಾಗದಲ್ಲಿ ಏನಿಟ್ಟಿದ್ದೇನೆ ಎಂಬುದನ್ನು ನೆನಪಿಟ್ಟುಕೊಂಡು, ಎಲ್ಲ ಬಂದೋಬಸ್ತ್ ಆಯಿತು ಅನ್ನಿಸಿದ ಮೇಲೆ ನಾನು ಉಗ್ರರಾವಣನಂತೆ ದಂಡಯಾತ್ರೆಗೆ ಹೊರಡುತ್ತೇನೆ. ಭಾರತದಲ್ಲಿ ಎಲ್ಲೇ ಕುಳಿತು ಬರೆದರೂ ಅದು ಹೆಚ್ಚಿನ ಖರ್ಚು ಮಾಡಿಸುವುದಿಲ್ಲ. ಆದರೆ ಕುಸಿವಿಷ್ಟೆ? I mean ‘ನಖರೆ’ಗೆ ಏನೂ ಕಡಿಮೆ ಇಲ್ಲವಲ್ಲ? ಛೆ, ಇದನ್ನು ನಾನು ಜರ್ಮನಿಯಲ್ಲೇ ಬರೆಯಬೇಕು ಅಂತ ತೀರ್ಮಾನಿಸಿ ದತ್ತಾ ಹೆಗಡೆಯವರ ಪ್ರಾಣ ತಿಂದು, ಇಲ್ಲಿ ವಿಮಾನ ಹತ್ತಿ ಫ್ರಾಂಕ್‌ಫರ್ಟ್‌ಗೆ ಹೊರಟುಬಿಟ್ಟರೆ, ಖಲ್ಲಾಸ್! ಮುಲಾಜಿಲ್ಲದೆ ನಾಲ್ಕೂವರೆಯಿಂದ ಐದು ಲಕ್ಷ ರುಪಾಯಿ ಕೈ ಬಿಡುತ್ತದೆ. ಆ ವಿಷಯದಲ್ಲಿ ನಾನು ನಿಜಕ್ಕೂ ಅದೃಷ್ಟವಂತ, ಇದೆಲ್ಲವನ್ನೂ ಚೌಕಾಸಿಯಿಲ್ಲದೆ ನಡೆಸಿಕೊಡುವ ನನ್ನ ದೇವರು, ನನ್ನ ದೊರೆ, ನನ್ನ ಧಣಿ ಬೆನ್ನ ಹಿಂದೆ ಇದ್ದಾನೆ. ಪುಸ್ತಕ ಪ್ರಿಂಟಾಗಿ ಹೊರಬಿದ್ದರೆ ಸಾಕು; ಕೆಲವೇ ದಿನಗಳಲ್ಲಿ ಪುಸ್ತಕದ ಪ್ರತಿಗಳು ಖಲ್ಲಾಸ್. ಹಾಗಂತ ನನ್ನ ಧಣಿಗೆ ನಾನೂ ಮೋಸ ಮಾಡುವುದಿಲ್ಲ. ಹಣ ಕೊಟ್ಟು ಪುಸ್ತಕ ಖರೀದಿಸುವ ಓದುಗ ದೊರೆಗೆ ಅದನ್ನು ಓದಿ ಸಂತೋಷವಾಗಬೇಕು, ಹಾಗೆ ಬರೆದಿರುತ್ತೇನೆ. ಇಲ್ಲದೆ ಇದ್ದರೆ ಹೀಗೆ ಹದಿನೆಂಟು ವರ್ಷ ಅನಾಮತ್ತಾಗಿ ಯಾವ ಧಣಿಯೇ ಆದರೂ ಕೆಲಸಕ್ಕೆ ಇಟ್ಟುಕೊಂಡಿರುತ್ತಾನಾ? ಓದಿ ಸಂತುಷ್ಟನಾದ ಆ ದೊರೆ ಕಡೇಪಕ್ಷ ತನಗೆ ತಾನೇ ಹೇಳಿಕೊಂಡಿರುತ್ತಾನೆ: ಬಿಡಪ್ಪಾ, ಕೊಟ್ಟ ದುಡ್ಡಿಗೆ ಮೋಸವಿಲ್ಲ; ಪೈಸಾ ವಸೂಲ್!

ಸರಿ ಮಾರಾಯಾ... ಪುಸ್ತಕಕ್ಕೆ ಮಾಡಿಕೊಳ್ಳುವ ನೋಟ್ಸ್, ನಿನ್ನ ಪ್ಯಾಕಿಂಗು, ಹಲ್ಲು ಚುಚ್ಚಿಕೊಳ್ಳುವ ವ್ಯಾಕ್ಸ್ ಕಡ್ಡಿಯಂತಹ ಚಿಲ್ರಾತಿ ಚಿಲ್ರೆ ವಿವರಗಳನ್ನೆಲ್ಲ ನಮಗೆ ಹೇಳಿ ಯಾಕೆ ಪ್ರಾಣ ತಿಂತಿದೀಯ ಅನ್ನುತ್ತಿದ್ದೀರಾ? Exactly, ಕುಸಿವಿಷ್ಟೆ ಅಥವಾ ಕುಸುಬಿಷ್ಟೆ ಎಂಬುದಕ್ಕೆ ‘ಈ ಎಲ್ಲವೂ’ apply ಆಗುತ್ತವೆ. ಒಣಜಂಬ, ಒಂಥರಹದ ನಸ್‌ನಸೆ, ಪ್ರತಿಯೊಂದಕ್ಕೂ ತನ್ನ ಅಸಮ್ಮತಿ ಅಥವಾ ‘ಕಿರಿಕ್’ ಮಾಡುವುದು -ಈ ತರಹದ ಎಲ್ಲ ನಖರೆಗಳನ್ನು ಕೂಡ ಕುಸಿವಿಷ್ಟೆ ಅಥವಾ ಕುಸುಬಿಷ್ಟೆ ಅನ್ನುತ್ತಾರೆ. ಇದು ಬ್ರಾಹ್ಮಣರ ಮನೆಯಲ್ಲಿ ಆಗಾಗ ಕೇಳಲು ಸಿಗುವ ಶಬ್ದ. ಆದರೆ ಇದು ಕನ್ನಡವೇ ಹೌದಾ? ತೆಲುಗು ಅಲ್ಲ ತಾನೇ? ಎಂದೆಲ್ಲ ಗಾಬರಿಯಾಗಿ ಕಡೆಗೆ ವೆಂಕಟಸುಬ್ಬಯ್ಯನವರ ನಿಘಂಟಿಗೇ ಗಂಟುಬಿದ್ದು ನಾನು ಬರೆಯುತ್ತಿರುವುದು ಸರಿ ಅಂತಾದ ಮೇಲೆಯೇ ನಿರಾಳದ ಉಸಿರುಬಿಟ್ಟೆ.
ಈ ತರಹದ ಸ್ವಭಾವ ನನಗೆ ಬಂದಿದ್ದೇ ಅಮ್ಮನಿಂದ! ಆಕೆಯಷ್ಟು ಮಟ್ಟಸದ ಜೀವಿಯನ್ನು ನಾನು ಖಂಡಿತ ನೋಡಿಲ್ಲ. “ನಿಂದು ಒಂಥರದ ಅತಿರೇಕ ಅನ್ನಿಸುವಂತಹ perfectionism" ಅಂತ ನಾನೇ ಅನ್ನುತ್ತಿದ್ದೆ. ಆಕೆ ನಗುತ್ತಿದ್ದಳು. ಒಂದು ಪ್ಯಾಂಟು ಹಾಕಿಕೊಳ್ಳುತ್ತೀರಿ. ಅದಕ್ಕೆ ಅಂಗಿ ಹುಡುಕುವಾಗ ಇದಕ್ಕೆ ಆ ಷರ್ಟು ಮ್ಯಾಚ್ ಆಗುತ್ತಾ ಅಂತ ನೋಡುತ್ತೇವೆ. ಆದರೆ ತೀರ ಬಚ್ಚಲು ಮನೆಯಲ್ಲಿರುವ ಬಕೀಟಿಗೆ ಈ mug ಮ್ಯಾಚ್ ಆಗುತ್ತಾ ಅಂತ ನೋಡುವುದು ಮಾತ್ತು ಆ ತರಹ ಮಗ್ ಕೊಳ್ಳಲು ಬೀದಿಬೀದಿ ಅಲೆದು, ಹತ್ತಾರು ಅಂಗಡಿಗಳಲ್ಲಿ ಅಡವ್ಯಾಡಿ atleast ಬಕೀಟಿನ ಬಣ್ಣಕ್ಕೆ ಹತ್ತತ್ತಿರ ಬಣ್ಣದ ಮಗ್ ಹುಡುಕಿ, ‘ಸದ್ಯ’ ಅಂತ ನಿಟ್ಟುಸಿರುಬಿಡುವುದಿದೆಯಲ್ಲಾ? ಅದು ಮಾತ್ರ ಕುಸಿವಿಷ್ಟೆಯೇ! ಹಾಗಂತ ಅಂದರೆ, ಆ ತರಹದ ಮಾತು ಎಷ್ಟೇ ಸಲ ಅಂದರೂ ಅಮ್ಮ ಸಿಟ್ಟು ಮಾಡಿಕೊಳ್ಳುತ್ತಿರಲಿಲ್ಲ. ಅದು ಬಿಡಿ, ನಾನು ತುಂಬ ಚಿಕ್ಕ ವಯಸ್ಸಿನಲ್ಲಿಯೇ ಸಿಗರೇಟು ಸೇದಿದೆ. ಆಕೆಯ ಇದಿರಲ್ಲೇ ಸೇದಿದೆ. ಕುಡಿತ ಕಲಿತೆ. ಆಕೆಗೆ ಗೊತ್ತಾಗುವ ರೀತಿಯಲ್ಲೇ ಕುಡಿದೆ. ಅಮ್ಮ ಸಿಟ್ಟು ಮಾಡಿಕೊಳ್ಳಲೇ ಇಲ್ಲ. ಆದರೆ ತುಂಬ ನೊಂದುಕೊಳ್ಳುತ್ತಿದ್ದಳು. ಅದು ನನಗೆ ಗೊತ್ತಾಗುತ್ತಿತ್ತು. ಆದರೂ ಅವನ್ನೆಲ್ಲ ಮಾಡಿದೆ. ಈಗ ಕಂಗಾಲಾಗುತ್ತೇನೆ. ಅಮ್ಮನ ಕ್ಷಮೆ ಕೇಳಬೇಕು. ಆದರೆ ಎಲ್ಲಿಗೆ ಹೋಗಿ ಕೇಳಲಿ? ನನ್ನ ಕರ್ಮ ಅಂತ ಏನಾದರೂ ಇದ್ದರೆ, ಅದು ಇದೊಂದೇ.

ಅಮ್ಮನ ಕಣ್ಣ ಮುಂದೆಯೇ ಎಲ್ಲವೂ ಆಯಿತು. ನಾನು ತುಂಬ ಚಿಕ್ಕವನಾಗಿದ್ದಾಗಲೇ ನನ್ನ ತುಂಟಾಟ, ಒರಟು ಚೇಷ್ಟೆಗಳು, ಸಿಗರೇಟು, ಕುಡಿತ, ಹುಡುಗಿಯರ ಗೆಳೆತನ, ವಿಪರೀತ ಸಿಟ್ಟು, ಬೀದಿ ಜಗಳಗಳು, ರೌಡಿ ಚೇಷ್ಟೆಗಳು, ಕೆಟ್ಟ ಗೆಳೆತನಗಳು- ಎಲ್ಲವೂ ಆಕೆಯ ಇದಿರಲ್ಲೇ ಆದವು. ಕೆಲವು ಸಲ ಕ್ಷಮೆ ಕೇಳುತ್ತಿದ್ದೆ. ಆಕೆಯ ಮಡಿಲಲ್ಲಿ ಮಲಗಿ ಅಳುತ್ತಿದ್ದೆ. ನಾಳೆಯಿಂದ ಸರಿ ಹೋಗುತ್ತೇನೆ ಅನ್ನುತ್ತಿದ್ದೆ. ಈ ಜಗಳ ಸಾಕು, ‘ನನ್ನನ್ನು ಮನ್ನಿಸು’ ಅನ್ನುತ್ತಿದ್ದೆ. ಅದರ ಮರುದಿನವೇ ಇನ್ನೊಂದೇನೋ ಮಾಡಿ ಆಕೆ ನೊಂದುಕೊಳ್ಳುವಂತೆ ಮಾಡುತ್ತಿದ್ದೆ. ಸಮಾಧಾನದ ಇನ್ನೊಂದು ಸಂಗತಿಯೆಂದರೆ, ಅದು ಕೆಟ್ಟದ್ದೋ-ಒಳ್ಳೆಯದೋ ಏನೇ ಇರಲಿ; ಅದನ್ನು ಕೊಂಚವೂ ಮುಚ್ಚಿಡದೆ ಅಮ್ಮನಿಗೆ ಹೇಳುತ್ತಿದ್ದೆ. ಗೊತ್ತಾಗೋದು ಅದೇನೇ ಇದ್ದರೂ, ನನಗೆ ನಿನ್ನಿಂದಲೇ ಗೊತ್ತಾಗಬೇಕು; not from others. ಹಾಗಂತ ಅಮ್ಮ ಕರಾರುಮಾಡಿದ್ದಳು. ಒಂದರ್ಥದಲ್ಲಿ ಇವತ್ತಿನ ನನ್ನ frank and open hearted ವರ್ತನೆಗಳಿವೆಯಲ್ಲ? ಇವುಗಳಿಗೆ ಅಮ್ಮನೇ ಕಾರಣ. ಹಾಗಂತ ಸುಮ್ಮನೆ ಪೋಲಿಬಿದ್ದು, ಅಲೆದಾಡಿಕೊಂಡಿರಲು ಬಿಟ್ಟಳು ಅಂದುಕೊಳ್ಳಬೇಡಿ ‘ಆಯ್ತಲ್ಲ? ಹೀಗೆಲ್ಲ ಮಾಡಿದೆಯಲ್ಲಪ್ಪಾ? ಇದೆಲ್ಲ ಸರೀನಾ?’ ಅಂತ ಶುದ್ಧ ನೈತಿಕತೆಯ ಪ್ರಶ್ನೆಯನ್ನು ನನ್ನ ಮುಂದಿಡುತ್ತಿದ್ದಳು. ಆ ಕ್ಷಣದಲ್ಲಿ ಆಕೆಯ ಕಣ್ಣುಗಳು ಎಷ್ಟು ತೀವ್ರವಾಗಿರುತ್ತಿದ್ದವು ಅಂದರೆ, ನನಗೆ ಅಮ್ಮನ ಕಣ್ಣು ನೋಡಿ ಮಾತನಾಡುವ ಧೈರ್ಯವಾಗುತ್ತಿರಲಿಲ್ಲ.
ಎಲ್ಲಾದರೂ ಹೋದಾಗ ನನಗೆ ಓದುಗರು ಸಿಗುತ್ತಾರೆ. ನನಗೂ ನನ್ನ ಹಚ್ಚ ಹರೆಯ ಓದುಗರು ಸಿಕ್ಕರೆ ಭಯಂಕರ ಖುಷಿ. ಅವರೇನು ಕಡಿಮೆ ವರ್ಷ ನನ್ನ ಬರಹಗಳನ್ನು ಓದುತ್ತ ಬಂದಿದ್ದಾರಾ? ಓದಲಾರಂಭಿಸಿದಾಗ, ಅವರಿನ್ನೂ ಯುವಕರು. ಈಗ ಅವರಿಗೂ ವಯಸ್ಸಾಗಿದೆ. “ನೀವು ಬಿಡಿ ಮಾರಾಯರೇ, ನೀವು ವಿಪರೀತ ಓಪನ್. ಯಾವುದನ್ನೂ ಮುಚ್ಚಿಡದೆ ಎಲ್ಲವನ್ನೂ frank ಆಗಿ ಬರೆದು ಬಿಡುತ್ತೀರಿ. ಅದಿನ್ನೆಂಥ ಧೈರ್ಯವೋ ನಿಮಗೆ!" ಅನ್ನುತ್ತಿರುತ್ತಾರೆ. ಇಲ್ಲ, ಅದು ಧೈರ್ಯಕ್ಕೆ, franknessಗೆ ಅಥವಾ ಗುಂಡಿಗೆಗೆ ಸಂಬಂಧಿಸಿದ ಸಂಗತಿಯಲ್ಲ. ಆ ತೆರನಾದ ಮುಕ್ತ ಮನಸ್ಸು-ಮುಕ್ತ ಸ್ವಭಾವಗಳನ್ನು ನಾವು ಬುದ್ಧಿಪೂರ್ವಕವಾಗಿ ಬೆಳೆಸಿಕೊಳ್ಳಬೇಕು. ಬೆಳೆಸಿಕೊಂಡದ್ದು ನಾನೇ ಆದರೂ, ಆ ಪುಟ್ಟ ಸಸಿಗೆ ಮೊದಲ ಬೊಗಸೆ ನೀರು ಹರಿಸಿದವಳು ನನ್ನ ಅಮ್ಮ.

ನೀವು ಬ್ರಾಹ್ಮಣರ ಮನೆಯಲ್ಲಿ ಶ್ರಾದ್ಧ ಅಥವಾ ತಿಥಿ, ಬೊಜ್ಜ, ದಿನ ಇದನ್ನೆಲ್ಲ ನೋಡಿದ್ದೀರೋ ಇಲ್ಲವೋ ಗೊತ್ತಿಲ್ಲ. ಶ್ರಾದ್ಧಕ್ಕೆ ಅವೆಲ್ಲ ಹೆಸರುಗಳಿವೆ. ಶ್ರಾದ್ಧ ಮಾಡುವವರ ಫಜೀತಿ, ಅದರ ಹಿಂದಿನ ದಿನವೇ ಶುರುವಾಗಿರುತ್ತದೆ. ಅದರ ಹಿಂದಿನ ದಿನವೇ ‘ಒಪ್ಪತ್ತು’. ಅಂದರೆ, ಹಿಂದಿನ ರಾತ್ರಿ ಊಟ ಮಾಡುವಂತಿಲ್ಲ. ಬೆಳಿಗ್ಗೆ ತಿಥಿ ಮಾಡಿಸುವ ಬ್ರಾಹ್ಮಣರು ಬರುತ್ತಾರೆ. ಇವರು ನಾನಾಕಾರಣ ಹೇಳಿ ಆಫೀಸಿಗೆ ರಜೆ ಹಾಕಿರುತ್ತಾರೆ. ಅಕಸ್ಮಾತ್ ಶ್ರಾದ್ಧದ ದಿನಕ್ಕೆ ಸರಿಯಾಗಿ ಹೆಂಡತಿ ಮುಟ್ಟಾದಳೋ, ಪರಿಸ್ಥಿತಿ ಶೋಚನೀಯ. ಇವರು ಹಿಂದಿನ ರಾತ್ರಿಯೇ ಉಪವಾಸ ಆರಂಭಿಸಿರುತ್ತಾರಲ್ಲ? ಬೆಳಿಗ್ಗೆ ಕಾಫಿ, ತಿಂಡಿ ಏನೇನೂ ಇಲ್ಲ. ಮೊದಲೇ ಆತ ಅಬಲಿಷ್ಟ. ಅಂದರೆ ನರಪೇತಲ. ಸಾಲದೆಂಬಂತೆ, ಉಪವಾಸ. ಹೊತ್ತು ಏರತೊಡಗುತ್ತದೆ. ಅದಕ್ಕೆ ಸರಿಸಮಾನವಾಗಿ ಆತನ ಸಿಟ್ಟೂ ಏರತೊಡಗುತ್ತದೆ. ಅದು ಕೈಲಾಗದತನದಿಂದಾಗಿ ಏರುವ ಸಿಟ್ಟು. ಮಟಮಟ ಮಧ್ಯಾಹ್ನ ಸೂರ್ಯ ಅಕ್ಷಮ್ಯವಾದ ರೀತಿಯ ಟಾರ್ಚರ್ ಕೊಡುತ್ತಿರುತ್ತಾನೆ. ರೇಗೋಣವೆಂದರೆ, ಹೆಂಡತಿಗೆ ಮುಟ್ಟು. ಸತ್ತವರ ತಿಥಿ ಹಾಗಿರಲಿ; ಮಾಡಿ ಮುಗಿಸುವ ಹೊತ್ತಿಗೆ ಈತನದೇ ಶ್ರಾದ್ಧವಾಗಿ ಹೋಗಿರುತ್ತದೆ. ಶ್ರಾದ್ಧ ಎಂಬ ಶಬ್ದದ ಹಿಂದೆ ‘ಶ್ರದ್ಧೆ’ ಎಂಬ ಅರ್ಥವಿದೆ. ನೀವು ಆರೆಂಟು ಮನೆಗಳ ಶ್ರಾದ್ಧವನ್ನು ನೋಡಿ ಬನ್ನಿ. ಯಾರೋ ಕೆಲವರು ಅದನ್ನು ತುಂಬ ಶ್ರದ್ಧೆಯಿಂದ ಮಾಡುತ್ತಾರೆ. ಉಳಿದವರ ವರ್ತನೆಯಲ್ಲಿ ನಯಾಪೈಸೆಯ ಶ್ರದ್ಧೆ ಇರುವುದಿಲ್ಲ.

ನನಗೆ ತಾರೀಕು ಗೊತ್ತಿಲ್ಲ. ಆದರೆ ವರಮಹಾಲಕ್ಷ್ಮಿಹಬ್ಬ ಶುಕ್ರವಾರವಷ್ಟೆ ಕರಾರುವಕ್ಕಾಗಿ ಬರುತ್ತದೆ. ಅದು ಅಮ್ಮನ birthday. ವರಮಹಾಲಕ್ಷ್ಮಿಹಬ್ಬದಂದು ಹುಟ್ಟಿದ್ದರಿಂದ ಅಮ್ಮನಿಗೆ ‘ಜಯಲಕ್ಷ್ಮಿ’ ಅಂತ ಹೆಸರಿಟ್ಟಿದ್ದರಂತೆ. ಮುಂದೆ ಅದ್ಯಾವಾಗ ‘ಪಾರ್ವತಿ’ ಅಂತ ಆಯಿತೋ ಕಾಣೆ. ಒಂದು ಪರಿಪಾಠವೆಂದರೆ, ಆ ದಿನದಂದು ‘ಪಾರ್ಥನಾ ಸ್ಕೂಲ್’ನ ಅಷ್ಟೂ ಶಿಕ್ಷಕ-ಶಿಕ್ಷಕಿಯರಿಗೆ ಶುಕ್ರವಾರ ಅಕ್ಕ ತಂಗಿಯರಿಗೆ ಕೊಡುತ್ತಾರಲ್ಲ ‘ಕುಂಕುಮ ಕೊಡೋದು’ ಅಂತ? ಹಾಗೆ ಅವತ್ತು ಶಿಕ್ಷಕರಿಗೆ ಪ್ಯಾಂಟ್-ಷರ್ಟ್ ಕೊಡುತ್ತೇನೆ. ಶಿಕ್ಷಕಿಯರಿಗೆ ಸೀರೆ. ಅದೆಲ್ಲದರ ವ್ಯವಸ್ಥೆಯನ್ನು ನಮ್ಮ CEO ಉಮೇಶ್ ಮತ್ತು ಶೀಲಕ್ಕ ನೋಡಿಕೊಳ್ಳುತ್ತಾರೆ. ಅದು teaching staff. ಸೆಪ್ಟಂಬರ್ ೪. ಅದು ಅಮ್ಮ ತೀರಿಕೊಂಡ ದಿನ. ನಾನು ನಮ್ಮ non-teaching staffನ ಕರೆಯುತ್ತೇನೆ. ಅದರಲ್ಲಿ ಆಯಾ ಅಂದರೆ helperಗಳು, ಸೆಕ್ಯುರಿಟಿ ಗಾರ್ಡ್‌ಗಳು, ಡ್ರೈವರುಗಳು ಮುಂತಾದವರು ಬರುತ್ತಾರೆ. ಅವರಿಗೆ ಒಂದು ಕುಟುಂಬಕ್ಕೆ, ಒಂದು ದಿನಕ್ಕೆ ಆಗುವಷ್ಟು ಅಕ್ಕಿ, ಬೇಳೆ, ಬೆಲ್ಲ, ಹಾಲು, ಮೊಸರು ಇವುಗಳನ್ನೆಲ್ಲ ಮನೆಗೆ ಒಯ್ಯಲಿಕ್ಕೆ ಒಂದು ಚೀಲ- ಹೀಗೆ ಎಲ್ಲವನ್ನೂ pack ಮಾಡಿಸಿಟ್ಟಿರುತ್ತೇನೆ. ಈ ಪೈಕಿ ಆಯಾಗಳಿಗೆ ಒಂದು ಸೀರೆ ಮತ್ತು ಸೆಕ್ಯುರಿಟಿ ಗಾರ್ಡ್ ಮುಂತಾದ ಪುರುಷ ಸಿಬ್ಬಂದಿಗೆ ಬಟ್ಟೆ ಕೊಡುತ್ತೇನೆ. ಇದಕ್ಕೆ ಯಾವ ಸಲವೂ ತಪ್ಪಿಸದಂತೆ ಲಲಿತೆ ಬರುತ್ತಾಳೆ. ಮಕ್ಕಳೂ ಬರುತ್ತಾರೆ. ತುಂಬ ಶ್ರದ್ಧೆಯಿಂದ ನಾವು ಮಾಡುವ family function ಅದು. ನಮ್ಮಲ್ಲಿ ಈ ವರ್ಷ ಇನ್ನೂರಾ ತೊಂಬತ್ತೈದು ಜನ teaching staff ಇದ್ದಾರೆ. ಉಳಿದಂತೆ ಆಯಾಗಳು ಮುಂತಾದವರು ಒಂದುನೂರ ಮೂವತ್ತೆಂಟು ಜನ ಇದ್ದಾರೆ. ಒಟ್ಟು ೪೩೩ ಜನರಿದ್ದಾರೆ. ಶಾಲೆ ಸ್ಥಾಪನೆಯಾದ ದಿನದಿಂದ ಪ್ರತೀ ವರ್ಷ ಮಾಡಿಕೊಂಡು ಬಂದ ‘ಶ್ರದ್ಧೆ’ ಇದು. ಅಮ್ಮನಿಗೆ ಇದು ಖುಷಿಕೊಡುತ್ತದೆ ಅಂದುಕೊಂಡಿದ್ದೇನೆ. In fact, ಆಕೆ ಕೂಡ ವಿಪರೀತ ಮಡಿ, ಅತಿರೇಕದ ಪೂಜೆ-ಪುನಸ್ಕಾರ, ಜಾತಿ ತಾರತಮ್ಯ ಮುಂತಾದವನ್ನೆಲ್ಲ ನಂಬಿದವಳಲ್ಲ. ಆಕೆ ಶುದ್ಧ ಮಾನವತಾವಾದಿ. ನನಗೊಂದು ಮಾತೂ ಹೇಳದೆ ಆಕೆ ನಡೆದು ಹೋಗಿ ನಾಳೆಗೆ ಇಪ್ಪತ್ತಾರು ವರ್ಷ. ನನಗೆ ಈ ತೆರನಾಗಿ ಬಟ್ಟೆ, ದಿನಸಿ ಮುಂತಾದವನ್ನು ಶಾಲೆಯ ಸಿಬ್ಬಂದಿಯವರಿಗೆ ಕೊಡುವುದು ತುಂಬ ತೃಪ್ತಿ, ಸಂತೋಷ ನೀಡುತ್ತವೆ. ನನ್ನ ನಂತರ ಇದನ್ನು ನಡೆಸಿಕೊಂಡು ಹೋಗುವ ಜವಾಬ್ದಾರಿ ಕರ್ಣನದು. ಇದೆಲ್ಲವನ್ನೂ ಆಕೆ ನೋಡಿ ಸಂತೋಷ ಪಡುತ್ತಾಳೆ ಅಂತೀರಾ? ಗೊತ್ತಿಲ್ಲ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 20 January, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books