Ravi Belagere
Welcome to my website
ಕೆಲವೊಮ್ಮೆ ಬಂಧುಗಳ, ಸ್ನೇಹಿತರ, ಪರಿಚಿತರ ಮನೆಗೆ ಹೋಗಲೇಬೇಕಾಗುತ್ತದೆ. ಎರಡು ದಿನದ ಮಟ್ಟಿಗೆ ಹೋಗಿದ್ದು ಬರುವುದಾದರೆ ಆ ಮಾತು ಬೇರೆ. ಆದರೆ ತಿಂಗಳುಗಟ್ಟಲೆ ಇರುವ ಪ್ರಸಂಗ ಬಂದರೆ? ನೀವು ಚಿಕ್ಕವರಾಗಿದ್ದಾಗ ಸಂಬಂಧಿಕರ ಮನೆಯಲ್ಲಿ, ಮತ್ಯಾವುದೋ ಕಾರಣಕ್ಕೆ ಒಂದಷ್ಟು ದಿನ ಇನ್ನೊಬ್ಬರ ಮನೆಯಲ್ಲಿ ಉಳಿದುಕೊಂಡ ಪ್ರಸಂಗವಿರಬಹುದು. ಆಗ ಮುಜುಗರ, ಸಂಕೋಚ, ಬೇಸರ ಎಲ್ಲವೂ ಆಗಿರಬಹುದು. ಯಾರಿಗೆ ಗೊತ್ತು? ನೀವು ಖುಷಿಯಿಂದಲೇ ಇದ್ದಿರಬಹುದು. ಹೀಗೆ ನಿಮ್ಮ ಅನುಭವಗಳನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ನಿಮ್ಮ ಫೊಟೋ ಜೊತೆ, ಚಿಕ್ಕದಾಗಿ ಮತ್ತು ಚೊಕ್ಕವಾಗಿ ಬರೆದು ಕಳಿಸಿ. ಈ ಮೇಲ್ ಮೂಲಕ ಕಳಿಸುವವರು [email protected] ಗೆ ಕಳಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಚಪ್ಪಾಳೆಯಿಂದ ದೇಶ ಕಟ್ಟಲು ಸಾಧ್ಯವಿಲ್ಲ ಕಣ್ರೀ...

ದೇಶ ಉದ್ಧಾರವಾಗಬೇಕು. ನಿಜ, ಹಾಗಂತ ಅದರ ನೆಪದಲ್ಲಿ ಉದ್ಯಮಿಗಳ ಬಾಲ ಬಡುಕರಾಗುತ್ತಾ ಹೋಗಿ ರೈತರನ್ನು ಬೀದಿ ಪಾಲು ಮಾಡಿದರೆ? ಕೇಂದ್ರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ನೋಡಿದರೆ ಹೀಗೇ ಅನ್ನಿಸುತ್ತಿದೆ. ಹಳೆಯ ಕಾನೂನುಗಳ ಪೈಕಿ ಬಹಳಷ್ಟು ಓಲ್ಡ್ ಡೇಟೆಡು ಅಂತ ನಾಟಕ ಮಾಡಿ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತಂದರು. ಅದರ ಪ್ರಕಾರ ರಸ್ತೆ, ಉದ್ಯಮದಿಂದ ಹಿಡಿದು ಐದು ಅಂಶಗಳ ಆಧಾರದ ಮೇಲೆ ಭೂ ಸ್ವಾಧೀನ ಮಾಡಿಕೊಳ್ಳುವಾಗ ರೈತರ ಪರ್ಮೀಶನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಅಂದರೆ, ತನ್ನ ಭೂಮಿಯ ಮೇಲೆ ರೈತನಿಗೇ ಹಕ್ಕಿಲ್ಲ, ನೀನ್ಯಾವ ತೋಲ್ಯಾಂಡಿ ಅಂತ ಪರೋಕ್ಷವಾಗಿ ಹೇಳಿದಂತೆ ಇದು.

ಅಲ್ರೀ, ದೇಶಕ್ಕೆ ಕೈಗಾರಿಕೆಗಳು ಬರಬೇಕು ನಿಜ. ಹಾಗಂತ ಹತ್ತೆಕರೆಯಲ್ಲಿ ಪೂರ್ಣವಾಗುವ ಒಂದು ಯೋಜನೆಗೆ ನೂರಿನ್ನೂರು ಎಕರೆಯಷ್ಟು ಭೂಮಿಯನ್ನು ಕೊಡುವುದು ಎಂದರೆ ನೋ ಡೌಟ್, ಇದು ರಿಯಲ್ ಎಸ್ಟೇಟ್ ಮಾಫಿಯಾವನ್ನು ಪೋಷಿಸುವ ಕೇಂದ್ರ ಸರ್ಕಾರ. ಯಾವುದೇ ಸರ್ಕಾರ ಅಧಿಕಾರಕ್ಕೆ ಬರಲಿ, ಬಂದಾಗ ಜನ ಎದುರಿಸುತ್ತಿರುವ ಸದ್ಯದ ಸಮಸ್ಯೆಯನ್ನು ಪರಿಹರಿಸುವುದರ ಜತೆಗೆ ಮುಂದಿನ ದಿನಗಳಲ್ಲಿ ಎದುರಾಗುವ ಸಮಸ್ಯೆಗಳಿಗೂ ಪರಿಹಾರ ಕಂಡು ಹಿಡಿಯಬೇಕು. ಇವತ್ತು ದೇಶದಲ್ಲಿ ಓದಿದ ಮಕ್ಕಳಿಗೆ ಕೆಲಸ ಸಿಗಬೇಕು. ಹಾಗಾಗಿ ಉದ್ಯಮಗಳು ಬರಬೇಕು. ಹೀಗೆ ಮಕ್ಕಳಿಗೆ ಕೆಲಸ ಕೊಡಬೇಕು ಅಂತ ಇಷ್ಟ ಬಂದಂತೆ ರೈತರ ಭೂಮಿಯನ್ನು ವಶಪಡಿಸಿಕೊಂಡು ಉದ್ಯಮಿಗಳಿಗೆ ಕೊಡಬೇಕು ಎಂದಲ್ಲ. ಈ ವಿಷಯದಲ್ಲಿ ಸಿದ್ದರಾಮಯ್ಯ ಸರ್ಕಾರ ಒಂದು ಒಳ್ಳೆಯ ಕೆಲಸ ಮಾಡಿದೆ. ತನ್ನ ಹೊಸ ಕೈಗಾರಿಕಾ ನೀತಿಯಲ್ಲಿ, ಉದ್ಯಮ ಪ್ರಾರಂಭಿಸುವ ಯಾರೇ ಆದರೂ ಒಂದು ಎಕರೆ ಭೂಮಿಯಲ್ಲಿ ಸಾವಿರ ಉದ್ಯೋಗಳನ್ನು ಸೃಷ್ಟಿಸಬೇಕು ಎಂಬ ಕರಾರು ಹಾಕಿದೆ. ಸಾವಿರ ಜನರಿಗೆ ಕೆಲಸ ಕೊಟ್ಟರೆ ಇನ್ನೂರು ಕುಟುಂಬಗಳಿಗೆ ಕೆಲಸ ಸಿಕ್ಕಿದಂತೆ. ದಟ್ ಈಸ್ ಫೈನ್.

ಆದರೆ ಇಂತಿಂತಹ ಯೋಜನೆಗಳ ವಿಷಯದಲ್ಲಿ ನಮಗಿಷ್ಟ ಬಂದಂತೆ ಭೂಮಿ ವಶಪಡಿಸಿಕೊಳ್ಳುತ್ತೇವೆ. ಕೇಳಲು ನೀನ್ಯಾವ ಹಲಗಪ್ಪ ಎನ್ನುವಂತೆ ರೈತರನ್ನು ಸೈಡಿಗೆ ಸರಿಸಲು ನೋಡಿದರೆ ಮುಂದಿನ ಕೆಲವೇ ದಿನಗಳಲ್ಲಿ ಅತೃಪ್ತಿ ಎಂಬುದು ದಾವಾನಲವಾಗಿ ಹೋಗುತ್ತದೆ. ಆಮೇಲೆ ಮೋದಿ ಸರ್ಕಾರ ಒಂದು ವಿಷಯ ನೆನಪಿನಲ್ಲಿಟ್ಟುಕೊಳ್ಳಬೇಕು. ದೇಶದ ಯಾವುದಾದರೂ ಟೀವಿಯನ್ನೋ, ಪತ್ರಿಕೆಗಳನ್ನೋ ನೆಚ್ಚಿಕೊಂಡು ಇಂತಹದೆಲ್ಲ ಮಾಡಿ ಅದ್ದೂರಿ ಪ್ರಚಾರ ಗಿಟ್ಟಿಸಿಕೊಳ್ಳಬಹುದು ಎಂಬುದು ಭ್ರಮೆ. ಇಲ್ಲಿ ಎಸ್ಸೆಂ ಕೃಷ್ಣ ಕೂಡ ಅದೇ ಮಾಡಿದರು. ಆದರೆ ಏನೇ ಮಾಡಿದರೂ ಒಂದು ಟರ್ಮಿಗಿಂತ ಹೆಚ್ಚು ಮುಂದುವರಿಯಲು ಸಾಧ್ಯವಾಗಲಿಲ್ಲ. ಹೀಗಾಗಿ ಪೇಪರ್ ಟೈಗರ್ ಆದರೆ, ಟೀವಿ ಲಯನ್ ಆದರೆ ಪ್ರಯೋಜನವಿಲ್ಲ. ಅಂದ ಹಾಗೆ ಬಿಜೆಪಿಯವರನ್ನು ಕೇಳಿದರೆ ಮೋದಿ ಸಂಪೂರ್ಣವಾಗಿ ಮಾಧ್ಯಮದವರನ್ನು ದೂರ ಇಟ್ಟಿದ್ದಾರೆ. ಕನಿಷ್ಟ ಇಂಟರ್ ವ್ಯೂ ಕೂಡ ಕೊಡಲ್ಲ ಗೊತ್ತಾ? ಅಂತ ಪುಂಗ್ಲು ಹೊಡೆಯುತ್ತಾರೆ. ಆದರೆ ದೇಶದ ಬಹುತೇಕ ಮಾಧ್ಯಮಗಳು ಇರುವುದೇ ಉದ್ಯಮಿಗಳ ಕೈಯ್ಯಲ್ಲಿ. ಅವರೇ ಮೋದಿಯ ಕೈಲಿರುವಾಗ ಮಾಧ್ಯಮಗಳು ಮೋದಿ ಕರೆಯದಿದ್ದರೂ ಓಡಿ ಹೋಗಿ ಪ್ರಚಾರ ಮಾಡುತ್ತವೆ. ಹೀಗಾಗಿ ಮೋದಿ ಮಾಧ್ಯಮಗಳಿಂದ ದೂರ ನಿಂತು ತಮ್ಮ ಕೆಲಸ ಮಾಡುತ್ತಿದ್ದಾರೆ ಎಂದು ಯಾರಾದರೂ ಕತೆ ಹೇಳಿದರೆ ಐ ಯಾಮ್ ಸಾರಿ.

ಅಂದ ಹಾಗೆ ಈ ಮುಂಚೆ ಇದ್ದ ಯುಪಿಎ ಸರ್ಕಾರ ಭೂ ಸ್ವಾಧೀನ ಕಾಯ್ದೆಯನ್ನು ಜಾರಿಗೆ ತಂದು, ಯಾವುದೇ ಯೋಜನೆಗೆ ಭೂಮಿ ಪಡೆಯಲು ರೈತರ ಒಪ್ಪಿಗೆ ಬೇಕು ಎಂದು ಕರಾರು ಹಾಕಿತ್ತು. ನಿಜಕ್ಕೂ ಅದು ಒಳ್ಳೆಯ ಕಾನೂನು. ದೇಶಕ್ಕೆ ಜಾಗತೀಕರಣವನ್ನು ನುಗ್ಗಿಸಿದ್ದೇ ಕಾಂಗ್ರೆಸ್ ಸರ್ಕಾರ ಎಂಬುದು ಬಿಜೆಪಿಗೆ ನೆನಪಿನಲ್ಲಿದ್ದರೆ ಒಳ್ಳೆಯದು. ಹತ್ತು ಮಂದಿ ಭ್ರಷ್ಟಾಚಾರ ಮಾಡಿದ್ದು ಹೌದಾದರೂ ಈಗ ಆರಂಭವಾಗಿರುವುದು ಏನು? ಉದ್ಯಮಿಗಳ ಏಳಿಗೆ. ಹತ್ತು ಮಂದಿಯ ಭ್ರಷ್ಟಾಚಾರವನ್ನು ಸಹಿಸಬಹುದು, ಶಿಕ್ಷೆ ಕೊಟ್ಟು ದಂಡಿಸಬಹುದು. ಆದರೆ ಉದ್ಯಮಿಗಳಿಗಾಗಿ ದೇಶವನ್ನೇ ಮಾರಲು ಅಣಿಯಾಗುವುದಿದೆಯಲ್ಲ? ಅದು ಬ್ರಿಟಿಷ್ ನೀತಿಗಿಂತ ಬೇರೆಯಲ್ಲ. ಇರುವುದೆಲ್ಲ ನಮಗೇ ಬೇಕು ಎಂಬ ಸಾಮ್ರಾಜ್ಯವಾದಿ ಮನಸ್ಥಿತಿಗೆ ಕುಮ್ಮಕ್ಕು ನೀಡುವಂತಹದು. ಈಗ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರದ ಕೆಲಸವನ್ನೇ ನೋಡಿ. ಚುನಾವಣೆಗೂ ಮುನ್ನ, ಅಯ್ಯೋ ಆಧಾರ್ ಕಾರ್ಡ್‌ನಲ್ಲಿ ಭಾರೀ ಹಗರಣ ನಡೆದಿದೆ. ನಾವು ಅಧಿಕಾರಕ್ಕೆ ಬಂದರೆ ಯೋಜನೆಯನ್ನೇ ರದ್ದು ಮಾಡುತ್ತೇವೆ ಅಂತ ಕತೆ ಹೊಡೆದರು.

ಈಗ ಪರವಾಗಿಲ್ಲ ಕಣ್ರೀ, ಒಳ್ಳೆಯ ಯೋಜನೆ. ಹೀಗಾಗಿ ಇದನ್ನು ಕಡ್ಡಾಯ ಮಾಡೋಣ ಎಂದು ಜನರಿಗೆ ಹಿಂಸೆ ನೀಡುವ ಕೆಲಸ ಮಾಡುತ್ತಿದ್ದಾರೆ. ಹಿಪೋಕ್ರಸಿ ಎಂದರೆ ಇದೇ. ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಗ್ಯಾಸ್ ಬಳಕೆದಾರರಿಗೆ ಮೆಸೇಜುಗಳ ಮೇಲೆ ಮೆಸೇಜು. ದೇಶ ಕಟ್ಟೋಣ. ನಿಮಗೆ ಕೊಡುವ ಸಬ್ಸಿಡಿಯನ್ನು ಕೈ ಬಿಡುವ ಯೋಜನೆಗೆ ಸೇರಿಕೊಳ್ಳಿ ಅಂತ. ಅದೇನು ಮಹಾ ಸುಡುಗಾಡು ಸಬ್ಸಿಡಿ ಕೊಡುತ್ತಿರುವುದು. ಒಂದು ಡಾಲರ್ ಕಚ್ಚಾ ಬ್ಯಾರಲ್ ತೈಲದ ಬೆಲೆ ನೂರಾ ಮೂವತ್ನಾಲ್ಕು ಡಾಲರ್ ಇದ್ದಾಗ, ಜೀವನಾವಶ್ಯಕ ವಸ್ತುಗಳ ಬೆಲೆ ಏರಲು ಯುಪಿಎ ಸರ್ಕಾರವೇ ಕಾರಣ ಎಂದು ಸುಳ್ಳು ಬೊಗಳಿದರು. ಆದರೆ ಈಗ ಕಚ್ಚಾ ಬ್ಯಾರಲ್ ತೈಲದ ಬೆಲೆ ಐವತ್ತು ಡಾಲರ್ ಗಡಿಗೆ ಬಂದು ನಿಂತಿದೆ. ಅದರ ಪ್ರಕಾರ ಒಂದು ಲೀಟರ್ ಪೆಟ್ರೋಲ್‌ಗೆ ಹದಿನಾರು ರುಪಾಯಿ ಐವತ್ತು ಪೈಸೆಯಷ್ಟು ಬೀಳುತ್ತದೆ. ಆದರೆ ಇವರು ಅರವತ್ತೆಂಟು ರುಪಾಯಿಗೆ ನಮಗೆ ಕೊಡುತ್ತಿದ್ದಾರೆ. ಈ ಬಾಬತ್ತಿನಲ್ಲಿ ಕೇಂದ್ರ ಸರ್ಕಾರ ಪಡೆಯುತ್ತಿದ್ದ ಸುಂಕದ ಪ್ರಮಾಣ ಇಪ್ಪತ್ತೈದು ರುಪಾಯಿಗಳಷ್ಟಿದೆ. ಇದು ಹಗಲು ದರೋಡೆಯಲ್ಲದೇ ಮತ್ತೇನು?

ರಾಜ್ಯದಲ್ಲಿ ಬಸ್ ದರ ಇಳಿಸಿಲ್ಲ ಎಂದು ಬಿಜೆಪಿಯವರು ಆಂದೋಲನ ಶುರು ಮಾಡುತ್ತಾರಂತೆ. ನಾಚಿಕೆಯಾಗಬೇಕು ಇವರ ಜನ್ಮಕ್ಕೆ. ಹೋಗಿ ಮೋದಿ ಬಳಿ ಕುಳಿತು, ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಕಡಿಮೆಯಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಈ ವಿಷಯದಲ್ಲಿ ಅಧಿಕ ಸುಂಕ ವಸೂಲು ಮಾಡಿಕೊಳ್ಳುವ ಬದಲು ಕಡಿಮೆ ಸುಂಕ ವಿಧಿಸಲಿ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಬಸ್ ಪ್ರಯಾಣ ದರ ಇಳಿಸಲಿ ಎಂದು ಹೇಳಬೇಕು. ಆದರೆ ಆ ಕೆಲಸ ಬಿಟ್ಟು ಕರ್ನಾಟಕವೇ ದರ ಇಳಿಸಲಿ ಎಂದು ಕತೆ ಹೇಳುತ್ತಿದ್ದಾರೆ. ಈ ಕತೆಯನ್ನು ಬಿಜೆಪಿಯವರು ಹೇಳಬೇಕಿಲ್ಲ. ಜನ ಹೇಳಿದರೆ ಸಾಕು. ಆದರೆ ರಾಜಕೀಯ ಲಾಭಕ್ಕಾಗಿ ಬಿಜೆಪಿ ಏನು ಬೇಕಾದರೂ ಮಾಡಲು ರೆಡಿ ಎಂಬುದಕ್ಕೆ ಇದೊಂದು ನಿದರ್ಶನ ಅಷ್ಟೇ. ಸಿಬಿಐ ಎಂಬ ಸಂಸ್ಥೆಯನ್ನು ಯುಪಿಎ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇದು ಸಿಬಿಐ ಅಲ್ಲ, ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಎಂದು ಕೂಗಾಡಿದವರು ಇದೇ ಬಿಜೆಪಿ ನಾಯಕರು. ಈಗ ಸಿಬಿಐ ವಿಷಯದಲ್ಲಿ ಅಪಾರ ಪ್ರೀತಿ. ಏನೇ ಮಾತನಾಡಿದರೂ ಸಿಬಿಐ ತನಿಖೆಗೆ ಕೊಡಿ ಎನ್ನುತ್ತಾರೆ. ಯಾಕೆಂದರೆ ದಿಲ್ಲಿಯಲ್ಲಿರುವುದು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವಲ್ಲವೇ? ಈಗ ಸಿಬಿಐ ಹೆಸರು ಏನಂತ ಬದಲಾಗಿದೆ? ಇದಕ್ಕೆ ಉತ್ತರ ನೀಡಬೇಕಲ್ಲ? ನೋಡುತ್ತಾ ಹೋಗಿ. ಮುಂದಿನ ಕೆಲವೇ ದಿನಗಳಲ್ಲಿ ಬಿಜೆಪಿ ನಾಯಕರ ಮೇಲಿರುವ ಸಿಬಿಐ ಆರೋಪಗಳೆಲ್ಲ ಮಣ್ಣು ಪಾಲಾಗಿ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ನಾಯಕರು ಸಿಬಿಐ ಬಲೆಗೆ ಸಿಗೆಹಾಕಿಕೊಳ್ಳುತ್ತಾರೆ.

ಅಂದ ಹಾಗೆ ಕನಿಷ್ಟ ಬೆಂಬಲ ಬೆಲೆಯ ಆಧಾರದ ಮೇಲೆ ಯಾವುದೇ ಆಹಾರ ಪದಾರ್ಥ ಖರೀದಿಸಿದರೂ ಅದನ್ನು ಪಡಿತರ ವ್ಯವಸ್ಥೆಯಡಿ ನೀಡಬೇಕು. ಇಲ್ಲವಾದರೆ ಈ ಯೋಜನೆಯಡಿ ನೀವು ಖರೀದಿಸಿದ ಬೆಳೆಗಳನ್ನು ನಾವು ಖರೀದಿಸುವುದಿಲ್ಲ ಎಂದು ಮುಖಕ್ಕೆ ಹೊಡೆದಂತೆ ಕೇಂದ್ರ ಸರ್ಕಾರ ಹೇಳಿದೆ. ಹಾಗಿದ್ದರೆ ರಾಜ್ಯ ಸರ್ಕಾರ ತನಗಿರುವ ಸೀಮಿತ ಸಂಪನ್ಮೂಲದಲ್ಲಿ ರೈತರ ಬೆಳೆಯ ಬೆಲೆ ಕುಸಿದಾಗ ಹೇಗೆ ಖರೀದಿಗೆ ಮುಂದಾಗಬೇಕು? ಈ ಹಿಂದೆ ಆಗಿದ್ದರೆ ರೈತರ ಮೆಕ್ಕೆ ಜೋಳವನ್ನೋ, ಭತ್ತವನ್ನೋ, ಮತ್ಯಾವುದೋ ಬೆಳೆಯನ್ನೋ ರಾಜ್ಯ ಸರ್ಕಾರ ಬೆಂಬಲ ಬೆಲೆ ನೀಡಿ ಖರೀದಿಸುತ್ತಿತ್ತು. ಉದಾಹರಣೆಗೆ ಭತ್ತವನ್ನೇ ತೆಗೆದುಕೊಳ್ಳಿ. ಕೇಂದ್ರ ಸರ್ಕಾರ ಪ್ರತಿ ಕ್ವಿಂಟಾಲ್ ಭತ್ತಕ್ಕೆ ಒಂದು ಸಾವಿರದ ಮುನ್ನೂರಾ ಹತ್ತು ರುಪಾಯಿ ನಿಗದಿ ಮಾಡಿದ್ದರೆ, ಅದಕ್ಕೆ ಇನ್ನೂ ಇನ್ನೂರಾ ತೊಂಬತ್ತು ರುಪಾಯಿಗಳನ್ನು ತನ್ನ ಬೊಕ್ಕಸದಿಂದ ತೆಗೆದುಕೊಡುವ ಕೆಲಸ ಕಾಂಗ್ರೆಸ್ ಸರ್ಕಾರದಿಂದ ಆಗುತ್ತಿತ್ತು. ರೈತರೂ ಖುಷಿಯಾಗಿದ್ದರು.


ಆದರೆ ಈಗ ರಾಜ್ಯ ಸರ್ಕಾರ ತಾನು ಬೆಂಬಲ ಬೆಲೆ ನೀಡಿ ಖರೀದಿಸುವ ಬೆಳೆಯನ್ನು ಪಡಿತರ ಪದ್ಧತಿಯಲ್ಲಿ ವಿತರಿಸಬೇಕು. ಇಲ್ಲವಾದರೆ ಕೇಂದ್ರ ಸರ್ಕಾರ ಈ ಯೋಜನೆಯಲ್ಲಿಯೇ ಭಾಗವಹಿಸುವುದಿಲ್ಲ ಎನ್ನುತ್ತಿದೆ. ಇದು ವಿಶ್ವಬ್ಯಾಂಕ್ ನೀತಿಯ ಮತ್ತೊಂದು ಮುಖ. ಒಂದೇ ಸಲ ಷಾಕ್ ಕೊಟ್ಟರೆ ಜನ ತಿರುಗಿ ಬೀಳುತ್ತಾರೆ ಅಂತ ಹಂತ ಹಂತವಾಗಿ ಷಾಕ್ ಕೊಡುತ್ತಾ ಸೆಟ್ ಮಾಡಿಕೊಳ್ಳುವುದು. ಇದಕ್ಕೆ ಬಿಜೆಪಿಯವರು ಬೇಕಿರಲಿಲ್ಲ. ಇವರು ಅಧಿಕಾರಕ್ಕೆ ಬಂದ ಮೇಲೆ ನಮ್ಮ ರಾಜ್ಯ ಉದ್ಧಾರವಾಯಿತು ಎಂದು ಯಾವ ರಾಜ್ಯವಾದರೂ ಹೇಳಿಕೊಳ್ಳುತ್ತಿದೆಯಾ? ಇಲ್ಲ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಸ್ವಯಂಘೋಷಿತ ಭಟ್ಟಂಗಿಗಳು ಈ ಮಾತನ್ನಾಡಬೇಕೇ ವಿನಾ ಬಡ-ಮಧ್ಯಮ ವರ್ಗದ ಜನರಲ್ಲ. ಕೇಳಿದರೆ ಡಬ್ಲ್ಯೂಟಿಓ ಒಪ್ಪಂದದ ವಿಷಯದಲ್ಲಿ ನಾವು ತಿರುಗಿಬಿದ್ದು ನಮ್ಮ ರೈತರ ಹಿತ ರಕ್ಷಿಸಿದ್ದೇವೆ. ಅಮೆರಿಕ ನಮ್ಮ ಬೆದರಿಕೆಗೆ ಕಂಗಾಲಾಯಿತು ಎಂದು ಕತೆ ಹೇಳುತ್ತಾರೆ. ಫೈನಲಿ, ರಿಸಲ್ಟು ಏನು ಅನ್ನುವುದು ಮುಖ್ಯವೇ ಹೊರತು ಮಾತಲ್ಲ.

ನೋಡುತ್ತಿರಿ, ಮುಂದಿನ ಕೆಲವೇ ದಿನಗಳಲ್ಲಿ ನೀವು ತೆಗೆದುಕೊಳ್ಳುವ ಅಡುಗೆ ಅನಿಲದ ಮೇಲಿನ ಸಬ್ಸಿಡಿಯನ್ನು ಮೋದಿ ಸರ್ಕಾರ ಕಟ್ ಮಾಡುತ್ತದೆ. ನಿಮಗೆ ಕೊಡುವ ಗ್ಯಾಸ್ ಸಬ್ಸಿಡಿಯನ್ನು ಕಟ್ ಮಾಡುವುದು ದೇಶ ಉಳಿಸಲು. ಸಿಕ್ಕ ಸಿಕ್ಕ ಭೂಮಿಯನ್ನು ವಶಪಡಿಸಿಕೊಳ್ಳುವುದು ದೇಶ ಉದ್ಧಾರ ಮಾಡಲು. ಅದೇನು ಮೋದಿ ಅಮೆರಿಕದಲ್ಲಿ ಭಾಷಣ ಮಾಡಿದರಂತೆ. ಅಯ್ಯೋ, ಸಾವಿರಾರು ಜನ ಕಿಕ್ಕಿರಿದು ಸೇರಿ ಚಪ್ಪಾಳೆ ಹೊಡೆದರಂತೆ. ಆಸ್ಟ್ರೇಲಿಯಾದ ಮ್ಯಾಡಿಸನ್ ಚೌಕದಲ್ಲಿ ಭಾಷಣ ಹೊಡೆದರಂತೆ. ಅಲ್ಲೂ ಸಾವಿರಾರು ಜನ ಕಿಕ್ಕಿರಿದು ಸೇರಿದರಂತೆ. ಅಲ್ರೀ, ಯಾವ ಜಾಗದಲ್ಲಿ ಯಾವ ರೀತಿಯ ಆರ್ಥಿಕ, ಸಾಮಾಜಿಕ ಹಿನ್ನೆಲೆಯ ಜನ ಇರುತ್ತಾರೋ, ಅಂತಲ್ಲಿ ಆ ರೀತಿಯ ಚಪ್ಪಾಳೆ ಸಹಜ. ಸಿಟಿ ಮಾರ್ಕೆಟ್ ಬಸ್‌ಸ್ಟ್ಯಾಂಡಿನಲ್ಲಿ ನಿಂತು ಟಿಪ್ಪು ಸುಲ್ತಾನ್ ಬಗ್ಗೆ ಪ್ರಶಂಸೆಯ ಮಾತನಾಡಿದರೆ ಸಾವಿರಾರು ಜನ ಚಪ್ಪಾಳೆ ತಟ್ಟುತ್ತಾರೆ. ಇನ್ಯಾವುದೋ ಸಂಘಿಗಳ ಜಾಗದಲ್ಲಿ ನಿಂತು ಟಿಪ್ಪು ಸುಲ್ತಾನ್ ವಿರುದ್ಧ ಮಾತನಾಡಿದರೆ ಸಾವಿರಾರು ಜನ ಅಲ್ಲಿಯೂ ಚಪ್ಪಾಳೆ ತಟ್ಟುತ್ತಾರೆ. ಇಂತಹ ಚಪ್ಪಾಳೆಗಳಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿಲ್ಲ. ಇವೆಲ್ಲ ಆಯಾ ಟೈಮಿಗೆ ಬೀಳುವ ಚಪ್ಪಾಳೆಗಳು. ಚಪ್ಪಾಳೆಯಿಂದ ದೇಶ ಕಟ್ಟಲು ಸಾಧ್ಯವಿಲ್ಲ ಎಂಬುದು ದೇಶದ ಮತದಾರರಿಗೆ ಗೊತ್ತಾಗುವ ಕಾಲ ಹತ್ತಿರವಾಗುತ್ತಿದೆ. ಮೋದಿ ಸರ್ಕಾರ ಸಾಂಗೋಪಸಾಂಗವಾಗಿ ಆ ಕೆಲಸ ಮಾಡುತ್ತಿದೆ. ಮಾಡಲಿ. ನೋಡೋಣ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 19 January, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books