Ravi Belagere
Welcome to my website
ಕೆಲವೊಮ್ಮೆ ಬಂಧುಗಳ, ಸ್ನೇಹಿತರ, ಪರಿಚಿತರ ಮನೆಗೆ ಹೋಗಲೇಬೇಕಾಗುತ್ತದೆ. ಎರಡು ದಿನದ ಮಟ್ಟಿಗೆ ಹೋಗಿದ್ದು ಬರುವುದಾದರೆ ಆ ಮಾತು ಬೇರೆ. ಆದರೆ ತಿಂಗಳುಗಟ್ಟಲೆ ಇರುವ ಪ್ರಸಂಗ ಬಂದರೆ? ನೀವು ಚಿಕ್ಕವರಾಗಿದ್ದಾಗ ಸಂಬಂಧಿಕರ ಮನೆಯಲ್ಲಿ, ಮತ್ಯಾವುದೋ ಕಾರಣಕ್ಕೆ ಒಂದಷ್ಟು ದಿನ ಇನ್ನೊಬ್ಬರ ಮನೆಯಲ್ಲಿ ಉಳಿದುಕೊಂಡ ಪ್ರಸಂಗವಿರಬಹುದು. ಆಗ ಮುಜುಗರ, ಸಂಕೋಚ, ಬೇಸರ ಎಲ್ಲವೂ ಆಗಿರಬಹುದು. ಯಾರಿಗೆ ಗೊತ್ತು? ನೀವು ಖುಷಿಯಿಂದಲೇ ಇದ್ದಿರಬಹುದು. ಹೀಗೆ ನಿಮ್ಮ ಅನುಭವಗಳನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ನಿಮ್ಮ ಫೊಟೋ ಜೊತೆ, ಚಿಕ್ಕದಾಗಿ ಮತ್ತು ಚೊಕ್ಕವಾಗಿ ಬರೆದು ಕಳಿಸಿ. ಈ ಮೇಲ್ ಮೂಲಕ ಕಳಿಸುವವರು [email protected] ಗೆ ಕಳಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಅಮಿತ್ ಷಾ ಆಗಮನ; ಸಿದ್ದು ಪಾಳಯದಲ್ಲಿ ಪಲಾಯನ?

ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಬೆಂಗಳೂರಿಗೆ ಕಾಲಿಡುವ ಮುನ್ನವೇ ರಾಜ್ಯ ಕಾಂಗ್ರೆಸ್ ನಾಯಕರು ಕೂಗಾಡುತ್ತಿರುವ ರೀತಿ ನೋಡಿದರೆ ಎಂತಹವರೂ ದಿಗಿಲಾಗಬೇಕು. ಅವರು ಬರುತ್ತಿರುವುದೇ ಸರ್ಕಾರ ಅಸ್ಥಿರಗೊಳಿಸಲು ಎಂಬುದರಿಂದ ಹಿಡಿದು, ಸಿಬಿಐ ಅನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದರ ತನಕ ಕಾಂಗ್ರೆಸ್ ನಾಯಕರು ಟೀಕಿಸಿದರು. ಅರೇ, ಅಮಿತ್ ಷಾ ಅವರೇನು ಕಾಂಗ್ರೆಸ್ ಪಕ್ಷ ಬೆಳೆಸಲು, ಕಾಂಗ್ರೆಸ್ ಸರ್ಕಾರ ಗಟ್ಟಿ ಮಾಡಲು ಕರ್ನಾಟಕಕ್ಕೆ ಬರುತ್ತಾರಾ? ಅವರು ಬರುವುದೇ ಬಿಜೆಪಿಯನ್ನು ಗಟ್ಟಿಗೊಳಿಸಲು ಮತ್ತು ಸಿದ್ದರಾಮಯ್ಯನವರ ಸರ್ಕಾರವನ್ನು ದುರ್ಬಲಗೊಳಿಸಲು ಎಂಬುದು ಶ್ರೀಸಾಮಾನ್ಯನಿಗೂ ಗೊತ್ತಿರುವ ವಿಷಯ. ಅಂದ ಹಾಗೆ ಇದ್ದಕ್ಕಿದ್ದಂತೆ ಸಿಬಿಐ ಅನ್ನು ದೂರುತ್ತಿರುವುದಿದೆಯಲ್ಲ? ಮತ್ತು ಮುಕ್ತವಾಗಿರಬೇಕಾದ ಆ ಸಂಸ್ಥೆಯನ್ನು ಎರಡು ರಾಷ್ಟ್ರೀಯ ಪಕ್ಷಗಳು ದುರುಪಯೋಗ ಮಾಡಿಕೊಳ್ಳುತ್ತಿರುವುದಿದೆಯಲ್ಲ? ಅದು ಮಾತ್ರ ಅಕ್ಷಮ್ಯ.

ಅಂದಹಾಗೆ ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ ಬಂದ ಕೂಡಲೇ ಸಿಬಿಐ ಒಂದೊಂದಾಗಿ ಬಿಜೆಪಿ ನಾಯಕರ ವಿರುದ್ಧದ ಪ್ರಕರಣಗಳಿಗೆ ಎಳ್ಳು-ನೀರು ಬಿಡುತ್ತಿದೆ. ಅಮಿತ್ ಷಾಗೆ ಕ್ಲೀನ್ ಚಿಟ್ ಕೊಟ್ಟಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಅವರ ಸಹೋದರನ ಬ್ಯಾಂಕ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಕೈ ತೊಳೆದುಕೊಂಡಿದ್ದು, ಹೀಗೆ ಹೇಳುತ್ತಾ ಹೋದರೆ ಈಗ ಸಿಬಿಐ ಸಂಸ್ಥೆಯದು ಫುಲ್ಲು ಉಲ್ಟಾ ಕೆಲಸ. ಒಬ್ಬರು ಬಂದು ಬಾವಿ ತೋಡುವುದು, ಇನ್ನೊಬ್ಬರು ಬಂದು ತೆರೆದ ಬಾವಿಯನ್ನು ಮುಚ್ಚಿಸುವುದು, ಇದು ಎರಡೂ ರಾಷ್ಟ್ರೀಯ ಪಕ್ಷಗಳ ದಂಧೆಯೇ ಆಗಿ ಹೋಗಿದೆ. ಇದೇ ಸಿಬಿಐ ಅನ್ನು ಬಳಸಿಕೊಂಡು ದಿಲ್ಲಿಯ ಕಾಂಗ್ರೆಸ್ ನಾಯಕರು ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದರು. ಯಡಿಯೂರಪ್ಪನವರನ್ನು ಬಿಜೆಪಿಯಿಂದ ಕೆಜೆಪಿಯ ಕಡೆ ಕಳಿಸಿ ಲಿಂಗಾಯತ ಮತದಾರರನ್ನು ಒಡೆದರು. ಅದೇ ರೀತಿ ಶ್ರೀರಾಮುಲು ಅವರನ್ನು ಸ್ವಾಭಿಮಾನದ ಹೆಸರಿನಲ್ಲಿ ಹೊರಕ್ಕೆ ಕಳಿಸಿ ಬಿಎಸ್ಸಾರ್ ಕಾಂಗ್ರೆಸ್ ಪಕ್ಷ ಕಟ್ಟುವಂತೆ ಮಾಡಿ ವಾಲ್ಮೀಕಿ ಸಮುದಾಯದ ಮತಗಳನ್ನು ಒಡೆದರು. ಪರಿಣಾಮವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಹೀಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಿಬಿಐ ಎಂಬ ಸಂಸ್ಥೆಯ ಕೃಪಾಕಟಾಕ್ಷ ಪಡೆದ ಕಾಂಗ್ರೆಸ್ ಇದೀಗ ಸಿಬಿಐ ಅನ್ನು ಬಿಜೆಪಿ ದುರ್ಬಲಗೊಳಿಸುತ್ತಿರುವ ಕುರಿತು ಮಾತನಾಡುತ್ತಿದೆ. ಜನ ನಗಬಾರದ ಕಡೆಯಿಂದೆಲ್ಲ ನಗುವುದು ಇಂತಹ ಮಾತುಗಳನ್ನು ಕೇಳಿಯೇ.

ಅಂದ ಹಾಗೆ ಕರ್ನಾಟಕದಲ್ಲಿ ಮಧ್ಯಂತರ ವಿಧಾನಸಭಾ ಚುನಾವಣೆ ಬರುವಂತೆ ಮಾಡಬೇಕು ಎಂಬುದು ಬಿಜೆಪಿಯ ಸಡನ್ ಅಜೆಂಡಾ ಏನಲ್ಲ. ಅದು ಹಿಡನ್ ಅಜೆಂಡಾ. ಅದನ್ನು ಆ ಪಕ್ಷದ ನಾಯಕರು ಹಂತ ಹಂತವಾಗಿ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಸಿದ್ದರಾಮಯ್ಯ ಹಾಗೂ ಅವರ ಪಡೆಗೆ ಅರ್ಥವಾಗಬೇಕಿರುವುದು ಎಂದರೆ ತಮ್ಮ ಪಕ್ಷದಲ್ಲೇ ಅಸ್ಥಿರತೆ ಇದೆ ಎಂಬುದು. ಮೊದಲನೆಯದಾಗಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಫೌಂಡೇಷನ್ನೇ ಕುಸಿದು ಬೀಳುತ್ತಿರುವಾಗ ಇನ್ನು ಸರ್ಕಾರವನ್ನು ಬೀಳಿಸುವುದು ಯಾವ ದೊಡ್ಡ ಲೆಕ್ಕಾಚಾರ? ಕಳೆದ ಹತ್ತೊಂಬತ್ತು ತಿಂಗಳ ಅವಧಿಯಲ್ಲಿ ಸಿದ್ದರಾಮಯ್ಯ ಯಾರಾದರೂ ಹೊಸ ಗೆಳೆಯರನ್ನು ಸಂಪಾದಿಸಿದ್ದಾರಾ? ದೇವರಾಜ ಅರಸು ತಮ್ಮ ರಾಜಕೀಯ ಲಾಭಕ್ಕಾದರೂ, ಪ್ರಬಲ ಸಮುದಾಯಗಳು ಕಟ್ಟಿದ ಪಕ್ಷದೆದುರು ಸೆಟೆದು ನಿಲ್ಲುವ ಸಲುವಾಗಿ ಅಹಿಂದ ವರ್ಗಗಳಿಗಾಗಿ ಕಾರ್ಯಕ್ರಮವನ್ನಾದರೂ ರೂಪಿಸಿದರು. ಅದು ಅವರಿಗೆ ಅನಿವಾರ್ಯವಾಗಿತ್ತು. ಇಲ್ಲದೇ ಹೋಗಿದ್ದರೆ ನಿಜಲಿಂಗಪ್ಪ, ರಾಮಕೃಷ್ಣ ಹೆಗಡೆ, ವೀರೇಂದ್ರ ಪಾಟೀಲ್, ದೇವೆಗೌಡ ಸೇರಿದಂತೆ ಪ್ರಬಲ ವರ್ಗದ ನಾಯಕರು ದೇವರಾಜ ಅರಸರನ್ನು ನುಂಗಿ ಬಿಡುತ್ತಿದ್ದರು. ಇಂತಹ ಟೈಮಿನಲ್ಲಿ ಲಿಂಗಾಯತ ಹಾಗೂ ವಕ್ಕಲಿಗ ಸಮುದಾಯಗಳ ಶಕ್ತಿಯನ್ನು ಎದುರಿಸಲು ದೇವರಾಜ ಅರಸರು ಕ್ರಾಂತಿಕಾರಿ ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೆ ತಂದರು. ಉಳುವವನೇ ಹೊಲದೊಡೆಯನಾಗುವಂತೆ ಮಾಡಿದರು.

ಆದರೆ ಈ ಕಾಯ್ದೆ ಹಳೇ ಮೈಸೂರಿನಲ್ಲಿ ಜಾರಿಗೆ ಬಂದಷ್ಟು ಪರಿಣಾಮಕಾರಿಯಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಅನುಷ್ಠಾನವಾಗಲಿಲ್ಲ ಎಂಬುದು ಬೇರೆ ಮಾತು. ಆದರೆ ತಮ್ಮ ಹಲವು ಕಾರ್ಯಕ್ರಮಗಳ ಮೂಲಕ ದೇವರಾಜ ಅರಸರು ಅಹಿಂದ ವರ್ಗಗಳ ಛಾಂಪಿಯನ್ ಅನ್ನಿಸಿಕೊಂಡರು. ಅದೇ ರೀತಿ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ ಸಮುದಾಯದ ಅನೇಕರನ್ನು ಗುರುತಿಸಿ ಕರೆತಂದರು. ಹೆಕ್ಕಿಹೆಕ್ಕಿ ಆರಿಸಿದರು, ನಾಯಕರನ್ನಾಗಿ ಬೆಳೆಸಿದರು. ಪರಿಣಾಮವಾಗಿ ೧೯೭೮ರಲ್ಲಿ ಇಡೀ ದೇಶದಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಇದ್ದರೂ ಕರ್ನಾಟಕದಲ್ಲಿ ಕಾಂಗ್ರೆಸ್ ಬಹುಮತದಿಂದ ಜಯ ಗಳಿಸಿತು. ಹಾಗೆ ನೋಡಿದರೆ ದೇವರಾಜ ಅರಸರು ತಮ್ಮ ರಾಜಕೀಯ ಲಾಭ ಎಲ್ಲಿದೆ ಅನ್ನುವುದನ್ನು ಸ್ಪಷ್ಟವಾಗಿ ಗುರುತಿಸಿದ್ದರು. ಉಳುವವನೇ ಹೊಲದೊಡೆಯನಾಗುವಂತೆ ಮಾಡಿ ಕರ್ನಾಟಕದಲ್ಲಿ ಸಮಾಜವಾದಿ ಪಕ್ಷವನ್ನು ಬುಡಸಮೇತ ಉರುಳಿಸಿದ್ದರು. ಆದರೆ ಭಟ್ಟಂಗಿಗಳ ಕೈಲಿ ಅಭಿನವ ದೇವರಾಜ ಅರಸು ಅನ್ನಿಸಿಕೊಂಡ ಸಿದ್ದರಾಮಯ್ಯ ಯಾರನ್ನು ಬೆಳೆಸುತ್ತಿದ್ದಾರೆ? ಅರಸರ ಕೈಲಿ ಬಂಗಾರಪ್ಪ, ಮೊಯ್ಲಿ, ಖರ್ಗೆ, ಧರ್ಮಸಿಂಗ್ ಅವರಂತಹ ನಾಯಕರು ಬೆಳೆದರು. ಆದರೆ ಸಿದ್ದರಾಮಯ್ಯ ಭವಿಷ್ಯದಲ್ಲಿ ಸಿಎಂ ಮೆಟೀರಿಯಲ್ ಆಗುವ ಒಬ್ಬೇ ಒಬ್ಬರನ್ನು ಬೆಳೆಸುತ್ತಿದ್ದಾರಾ ನೋಡಿ?
ಹಾಗೆಯೇ ರಾಜಕೀಯ ಲಾಭಕ್ಕಾದರೂ ಕಾರ್ಯಕ್ರಮಗಳನ್ನು ರೂಪಿಸುವುದು ಸಿದ್ದರಾಮಯ್ಯನವರಿಗೆ ಗೊತ್ತಿರಬೇಕು. ಇವತ್ತು ಜಾಗತೀಕರಣದ ಕಾಲಘಟ್ಟದಲ್ಲಿ ಬಡತನ ಎಂಬುದು ಎಲ್ಲ ಜಾತಿಗಳಲ್ಲೂ ಮೇಲೆದ್ದು ಕಾಣುತ್ತಿದೆ. ಅನ್ನಭಾಗ್ಯ, ಕ್ಷೀರಭಾಗ್ಯ ಅಂತ ಕತೆ ಹೇಳಿಕೊಂಡು ಕುಳಿತರೆ ಸರ್ಕಾರಕ್ಕೆ ದೊಡ್ಡ ಹೆಸರು ಬಂದು ಬಿಡುವುದಿಲ್ಲ. ಕನಿಷ್ಟ ಪಕ್ಷ ತಮಿಳ್ನಾಡಿನಲ್ಲಿ ಜಯಲಲಿತಾ ಮಾಡಿದಂತಹ ಜನಪರ ಕೆಲಸವನ್ನು ಮಾಡಿದ್ದರೂ ಸಾಕಿತ್ತು. ಅಲ್ಲಿ ನೋಡಿ. ಬಡವರಿಗಾಗಿ ಅಮ್ಮಾ ಕ್ಯಾಂಟೀನ್ ಶುರು ಮಾಡುವುದರಿಂದ ಹಿಡಿದು ನೂರಾ ತೊಂಬತ್ತು ರುಪಾಯಿಗೆ ಒಂದು ಮೂಟೆಯಂತೆ ಸಿಮೆಂಟ್ ಕೊಡುವ ಯೋಜನೆಗಳನ್ನು ತಂದಿದ್ದಾರೆ. ಇದಕ್ಕೆಲ್ಲ ಸಂಪನ್ಮೂಲ ಕ್ರೋಢೀಕರಣ ಎಲ್ಲಿಂದ ಗೊತ್ತೇ ಸಿದ್ದರಾಮಯ್ಯನವರೇ? ಆ ರಾಜ್ಯದಲ್ಲಿರುವ ಶ್ರೀಮಂತ ವರ್ಗದಿಂದ ಈ ಹಣವನ್ನು ಸಂಗ್ರಹಿಸಲಾಗುತ್ತಿದೆ. ಒಂದು ಫ್ಯಾಕ್ಟರಿ ಬಂತು ಅನ್ನಿ. ಸದರಿ ಫ್ಯಾಕ್ಟರಿ ತಮಿಳರಿಗಾಗಿ ಇಷ್ಟು ಕೆಲಸ ಮಾಡಲೇಬೇಕು. ಅದು ತನ್ನ ಉತ್ಪಾದನೆಯಲ್ಲಿ ಪಾಲು ಕೊಡುತ್ತದೋ? ಅಥವಾ ಬೊಕ್ಕಸಕ್ಕೆ ತೆರಿಗೆ ಕಟ್ಟುತ್ತದೋ? ಮುಲಾಜೇ ಇಲ್ಲ. ತಮಿಳ್ನಾಡಿನಲ್ಲಿ ಕಾಲಿಡುವ ಯಾರೇ ಆಗಲಿ, ಆ ರಾಜ್ಯದ ಹಿತಕ್ಕೆ ತಕ್ಕಂತೆ ರೂಪುಗೊಳ್ಳಬೇಕು. ತಾವೂ ಸ್ವಲ್ಪ ಲಾಭ ಮಾಡಿಕೊಂಡು ರಾಜ್ಯಕ್ಕೂ ಲಾಭ ಮಾಡಿಕೊಡಬೇಕು. ಇಲ್ಲದಿದ್ದರೆ ಮುಲಾಜೇ ಇಲ್ಲದೆ ಗೇಟ್‌ಪಾಸ್.

ಅಂದ ಹಾಗೆ ಕೇಂದ್ರದ ಮೋದಿ ಸರ್ಕಾರದ ಬಗ್ಗೆ ರಾಜ್ಯದ ಯಾವುದೇ ರೈತ ಖುಷಿಯಾಗುವಂತಹದೇನಾದರೂ ಇದೆಯೇನ್ರೀ ಸಿದ್ದರಾಮಯ್ಯ? ಹಿಂದೆ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರ, ರೈತ ಸ್ನೇಹಿಯಾದ ಒಂದು ವಿಧೇಯಕವನ್ನು ರೂಪಿಸಿತ್ತು. ಅದರ ಪ್ರಕಾರ, ರೈತರ ಭೂಮಿಯನ್ನು ವಶಪಡಿಸಿಕೊಳ್ಳಬೇಕೆಂದರೆ ಅವರ ಒಪ್ಪಿಗೆ ಪಡೆಯಬೇಕಿತ್ತು. ಅದೇ ರೀತಿ ವಶಪಡಿಸಿಕೊಳ್ಳುವ ಭೂಮಿಯಲ್ಲಿ ಇಂತಿಷ್ಟು ಭೂಮಿ ಮತ್ತು ಪರಿಹಾರ ಅಂತ ನೀಡಬೇಕಿತ್ತು. ಈಗ ಮೋದಿ ಸರ್ಕಾರ ಬಂದು ಏನು ಮಾಡಿದೆ ಗೊತ್ತಾ? ಕೈಗಾರಿಕೆಗಳಿರಬಹುದು, ಸರ್ಕಾರಿ ಯೋಜನೆಗಳಿರಬಹುದು, ಒಟ್ಟಿನಲ್ಲಿ ಐದು ತೆರನಾದ ಯೋಜನೆಗಳಿಗೆ ಭೂಮಿ ಪಡೆಯಲು ರೈತರ ಅನುಮತಿಯೇ ಬೇಕಿಲ್ಲ. ಸಂಸತ್ತಿನಲ್ಲಿ ಈ ಕಾಯ್ದೆಗೆ ಗ್ರೀನ್ ಸಿಗ್ನಲ್ ಸಿಕ್ಕ ಕೂಡಲೇ ಆಗುವುದೇನು ಗೊತ್ತಾ? ಸರ್ಕಾರದ ವಶಕ್ಕೆ, ಆ ಮೂಲಕ ಬಂಡವಾಳಷಾಹಿಗಳ ವಶಕ್ಕೆ ಹೋಗುವ ತಮ್ಮ ಭೂಮಿಯನ್ನು ಮರಳಿ ಪಡೆಯಲು ರೈತರು ಕೋರ್ಟಿಗೂ ಹೋಗುವಂತಿಲ್ಲ. ಅರ್ಥಾತ್, ಮೋದಿ ಸರ್ಕಾರ ರೈತ ಸಮುದಾಯದ ಮುಂಡಾ ಮೋಚಿ ದಂಡೆ ಕಟ್ಟಲು ಹೊರಟಿದೆ. ಹೇಳಿ ಕೇಳಿ ಅದು ಬ್ರಾಹ್ಮಣ-ಬನಿಯಾ ಸರ್ಕಾರ. ಯಾವುದೇ ಮುಲಾಜು ನೋಡದೆ ವ್ಯಾಪಾರಸ್ಥರ ಅನುಕೂಲಕ್ಕೆ ತಕ್ಕಂತೆ ನಿರ್ಣಯಗಳನ್ನು ಕೈಗೊಳ್ಳುತ್ತದೆ. ಇಷ್ಟು ನೇರವಾಗಿ ಬಿಜೆಪಿ ಸರ್ಕಾರ ತನ್ನ ದಗಲ್ಭಾಜಿತನ ತೋರಿಸುತ್ತಿರುವಾಗ ಸಿದ್ದರಾಮಯ್ಯ ಸರ್ಕಾರ ಏನು ಕಡಲೆಪುರಿ ತಿನ್ನುತ್ತಿದೆಯಾ? ಈ ವಿಷಯಕ್ಕೆ ಸಂಬಂಧಿಸಿದಂತೆ ದೇಶದ ಗಮನ ಸೆಳೆಯುವಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಕೆಲಸ ಆಗಬೇಕಲ್ಲ? ಇವತ್ತಿನ ತನಕ ಸಿದ್ದರಾಮಯ್ಯ ಆಗಲೀ, ಅವರ ಪಕ್ಕ ಇರುವವರ ತಲೆಗೆ ಈ ವಿಷಯವೇ ಹೋಗಿಲ್ಲ.

ಇನ್ನು ಬಸ್ ಪ್ರಯಾಣ ದರ ಇಳಿಸಬೇಕು ಅನ್ನುವ ಬಿಜೆಪಿಯ ಕೂಗು ಫೈನ್. ಆದರೆ ದೇಶದ ಹಲವು ರಾಜ್ಯಗಳಲ್ಲಿ ಬಿಜೆಪಿಯೇ ಅಧಿಕಾರದಲ್ಲಿದೆಯಲ್ಲ? ಆ ರಾಜ್ಯಗಳಲ್ಲಿ ಎಷ್ಟು ದರ ಇಳಿಸಲಾಗಿದೆ. ನೋ ಛಾನ್ಸ್. ಒಂದೇ ಒಂದು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಸ್ ಪ್ರಯಾಣ ದರವನ್ನು ಇಳಿಸಿಲ್ಲ. ಹೀಗಾಗಿ ಒಂದು ಸಲ ದರ ಇಳಿಸಿ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಏನು ಮಾಡುತ್ತಿದೆ ಅನ್ನುವುದರ ಬಂಡವಾಳವನ್ನು ಬಯಲಿಗಿಡಬಹುದಲ್ಲ? ಇವತ್ತು ನೂರಾ ನಲವತ್ತೊಂಬತ್ತು ಲೀಟರು ತೂಗುವ ಒಂದು ಬ್ಯಾರಲ್ ಕಚ್ಚಾ ತೈಲದ ಬೆಲೆ ಐವತ್ತು ಪ್ಲಸ್ ಡಾಲರುಗಳಿಗಿಳಿದಿದೆ. ಲೆಕ್ಕ ಹಾಕಿ ನೋಡಿದರೆ ಕೇಂದ್ರ ಸರ್ಕಾರ ಪೆಟ್ರೋಲು, ಡೀಸೆಲು ದರಗಳನ್ನು ಕನಿಷ್ಟ ಪಕ್ಷ ಇಪ್ಪತ್ತು ರುಪಾಯಿಗಳನ್ನು ಇಳಿಸಬಹುದಿತ್ತು. ಆದರೆ ತೈಲದ ಮೇಲೆ ಸುಂಕ ಹೇರಿ ದಂಡಿಯಾಗಿ ಹಣ ದೋಚುತ್ತಿರುವ ಮೋದಿ ಸರ್ಕಾರ ತನ್ನ ಪಾಡಿಗೆ ತಾವು ಆಟ ಆಡುತ್ತಿದ್ದರೆ ಅದನ್ನು ಎತ್ತಿ ತೋರಿಸುವ ತಾಕತ್ತೂ ಸಿದ್ದರಾಮಯ್ಯನವರ ಸರ್ಕಾರಕ್ಕಿಲ್ಲ.
ಇದೇ ತಿಂಗಳ ಹತ್ತರಿಂದ ಬಿಜೆಪಿಯವರು ಮೂರು ವಿಷಯಗಳನ್ನು ಹಿಡಿದುಕೊಂಡು ಜನಾಂದೋಲನ ಶುರು ಮಾಡುತ್ತಾರಂತೆ. ಆ ಮೂರೂ ವಿಷಯಗಳಲ್ಲಿ ಅವರಿಗೆ ಮೊದಲು ಸ್ಪಷ್ಟತೆ ಇದೆಯಾ ಎಂಬುದನ್ನು ನೋಡಬೇಕು. ಅಲ್ರೀ, ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಬಿಜೆಪಿ ನಾಯಕರು ಬೀದಿಗಿಳಿದರೆ ಅವರನ್ನು ಹಚಾ ಎಂದು ಓಡಿಸಬೇಕು. ಆಪರೇಷನ್ ಕಮಲ ಕಾರ್ಯಾಚರಣೆ ಮಾಡಿ, ಒಂದೊಂದು ಉಪಚುನಾವಣೆಗೂ ಹದಿನೈದಿಪ್ಪತ್ತು ಕೋಟಿ ರುಪಾಯಿ ಬೇಕಾಗುವಂತೆ ಮಾಡಿದವರು ಅವರು. ಇವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರಂತೆ. ಒಗ್ಗೂಡಿ ಎದುರಿಸಲು ಸಿದ್ದರಾಮಯ್ಯ ಗ್ಯಾಂಗಿಗೆ ಯಾಕೆ ಆಗುತ್ತಿಲ್ಲ? ಯಾಕೆಂದರೆ ಇವರು ತಮ್ಮ ಪಕ್ಷದವರನ್ನೇ ನೆಟ್ಟಗಿಟ್ಟುಕೊಂಡಿಲ್ಲ. ಪರಮೇಶ್ವರ್ ಅವರಿಂದ ಹಿಡಿದು ಖರ್ಗೆ ತನಕ ಯಾವುದೇ ನಾಯಕರನ್ನು ನೋಡಿ. ಸಿದ್ದರಾಮಯ್ಯನವರನ್ನು ಕಂಡರೆ ಮುಖ ಸಿಂಡರಿಸಿಕೊಳ್ಳುತ್ತಾರೆ. ಯಾಕೆಂದರೆ ಸಿದ್ದರಾಮಯ್ಯ ಕೂತು ದೇವರಾಜ ಅರಸರು ಮಾಡಿದ ನಾಲ್ಕಾಣೆ ಕೆಲಸವನ್ನೂ ಮಾಡುತ್ತಿಲ್ಲ. ಬದಲಿಗೆ ತಮ್ಮ ಭಟ್ಟಂಗಿಗಳಿಗೆ, ನೀವೇ ದೇವರಾಜ ಅರಸು ಇದ್ದಂತೆ ಅಂತ ಹೊಗಳುವ ಒಂದಷ್ಟು ಹೊಗಳುಭಟ್ಟರಿಗೆ, ತಮ್ಮ ರಾಜಕೀಯ ವಿರೋಧಿಗಳನ್ನು ಹಣಿಯಲು ಬಳಕೆಯಾಗುವ ಕೃಪಾಪೋಷಿತ ನಾಟಕ ಮಂಡಳಿಯ ಪಾತ್ರಧಾರಿಗಳಿಗೆ ಬೇಕಾದ ನಾಯಕರಾಗಿ ಅವರು ರೂಪುಗೊಂಡಿದ್ದಾರೆಯೇ ವಿನಾ ಮೂಲ ಕಾಂಗ್ರೆಸ್ ನಾಯಕರ ಪಾಲಿಗೆ ಅವರು ನಾಯಕರೇ ಆಗಿಲ್ಲ.

ಅಂದ ಹಾಗೆ ಕೆ.ಪಿ.ಎಸ್.ಸಿ. ಕುರಿತು ಇವರು ಹೇಳಿದ ಕತೆಯನ್ನು ನೋಡಿದರೆ ಓ, ಇನ್ನೇನು ಆ ಸಂಸ್ಥೆಗೆ ಹರಿಶ್ಚಂದ್ರರಂತಹವರು ಬಂದು ಕೂರುತ್ತಾರೆ ಅನ್ನಿಸಿತ್ತು. ಆದರೆ ಈಗ ನೋಡಿದರೆ ಲಂಚ ತಿಂದು ಲೋಕಾಯುಕ್ತದ ಕೈಗೆ ಸಿಗೆ ಹಾಕಿ ಬಿದ್ದವರು, ಸುಳ್ಳು ಜಾತಿ ಪ್ರಮಾಣ ಪತ್ರ ಕೊಟ್ಟು ಲಾಭ ಮಾಡಿಕೊಂಡವರು ಇವರ ಪಟ್ಟಿಯಲ್ಲಿದ್ದಾರೆ. ಇಂತಹವರಿಗೆ ಪಕ್ಷದಲ್ಲೇ ಬೆಂಬಲ ಸಿಗುವುದಿಲ್ಲ ಎಂದ ಮೇಲೆ ಬಿಜೆಪಿಯ ವಿರುದ್ಧ ಹೋರಾಡಲು ಎಲ್ಲಿಂದ ಬೆಂಬಲ ಸಿಗಬೇಕು? ಹೀಗಾಗಿ ಬಿಜೆಪಿಯ ಕಿತಾಪತಿಗೆ ಉತ್ತರ ಕೊಡುವ ಶಕ್ತಿಯೂ ಅವರ ಸರ್ಕಾರಕ್ಕಿಲ್ಲದಂತಾಗಿದೆ. ನಿಜವಾದ ನಾಯಕನಿಗೆ ಅನ್ಯಾಯದ ವಿರುದ್ಧ ಹೋರಾಡುವ ಶಕ್ತಿ ಸಿಗುವುದು ಅನ್ಯಾಯದ ವಿರುದ್ಧ ನಿಲ್ಲಬಲ್ಲ ಪ್ರಾಮಾಣಿಕತೆ ಇದ್ದಾಗ. ದೇವರಾಜ ಅರಸರಿಗೆ ಕನಿಷ್ಟ ಪಕ್ಷ ರಾಜಕೀಯ ಲಾಭಕ್ಕಾದರೂ ಅಹಿಂದ ವರ್ಗಗಳಿಗೆ ನ್ಯಾಯ ದೊರಕಿಸಿಕೊಡುವ ಮನಸ್ಸಿತ್ತು. ಆದರೆ ಸಿದ್ದರಾಮಯ್ಯ ಇರೋರಿಗೆಲ್ಲ ಅಕ್ಕಿ ಕೊಟ್ಟು ಬಿಟ್ಟರೆ ಸಾಕು ಎಂದುಕೊಂಡಿದ್ದಾರೆ. ಬಡ ರೈತನ ಭೂಮಿಗೆ ಕೇಂದ್ರ ಸರ್ಕಾರ ಹಾಕುತ್ತಿರುವ ಕನ್ನ, ರಾಜ್ಯದಲ್ಲಿ ಬೆಳೆಯುತ್ತಿರುವ ಪರ ರಾಜ್ಯದ ಬಿಜಿನೆಸ್‌ಮೆನ್‌ಗಳ ಕಾಟ, ಇವೆಲ್ಲದರ ಮೂಲಕ ನಿಜವಾದ ಕನ್ನಡಿಗನಿಗೆ ಆಗುವ ಅನ್ಯಾಯದ ಮೇಲೆ ಅವರಿಗೆ ಗಮನವೇ ಇಲ್ಲ.

ಹೀಗಾಗಿ ಅಮಿತ್ ಷಾ ಬಂದ ಕೂಡಲೇ ಕರಡಿ ನೋಡಿದಂತೆ ಹೆದರಿ ಕೂಗುತ್ತಿದ್ದಾರೆ. ಈ ರೀತಿ ಹೆದರಿ ಕೂಗುವ ಬದಲು ತಮ್ಮವರನ್ನೇ ವಿಶ್ವಾಸಕ್ಕೆ ತೆಗೆದುಕೊಂಡು, ಬಿಜೆಪಿಯಿಂದ ಆಗುತ್ತಿರುವ ಅನ್ಯಾಯಗಳ ವಿರುದ್ಧ ಸೆಟೆದೆದ್ದಿದ್ದರೆ ಆಟವೇ ಬೇರೆ ಆಗುತ್ತಿತ್ತು. ಆದರೆ ಸಿದ್ದು ನಡೆಯುತ್ತಿರುವ ದಾರಿ ನೋಡಿದರೆ ಅಂತಹದೇನಾದರೂ ಆಗುತ್ತದೆ ಎಂಬ ಕುರುಹೂ ಕಾಣುತ್ತಿಲ್ಲ. ಇಂತಹವರು ಹೆದರಿಕೆಯಿಂದ ಕೂಗದೆ ಇನ್ನೇನು ಮಾಡುತ್ತಾರೆ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 13 January, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books