Ravi Belagere
Welcome to my website
ಕೆಲವೊಮ್ಮೆ ಬಂಧುಗಳ, ಸ್ನೇಹಿತರ, ಪರಿಚಿತರ ಮನೆಗೆ ಹೋಗಲೇಬೇಕಾಗುತ್ತದೆ. ಎರಡು ದಿನದ ಮಟ್ಟಿಗೆ ಹೋಗಿದ್ದು ಬರುವುದಾದರೆ ಆ ಮಾತು ಬೇರೆ. ಆದರೆ ತಿಂಗಳುಗಟ್ಟಲೆ ಇರುವ ಪ್ರಸಂಗ ಬಂದರೆ? ನೀವು ಚಿಕ್ಕವರಾಗಿದ್ದಾಗ ಸಂಬಂಧಿಕರ ಮನೆಯಲ್ಲಿ, ಮತ್ಯಾವುದೋ ಕಾರಣಕ್ಕೆ ಒಂದಷ್ಟು ದಿನ ಇನ್ನೊಬ್ಬರ ಮನೆಯಲ್ಲಿ ಉಳಿದುಕೊಂಡ ಪ್ರಸಂಗವಿರಬಹುದು. ಆಗ ಮುಜುಗರ, ಸಂಕೋಚ, ಬೇಸರ ಎಲ್ಲವೂ ಆಗಿರಬಹುದು. ಯಾರಿಗೆ ಗೊತ್ತು? ನೀವು ಖುಷಿಯಿಂದಲೇ ಇದ್ದಿರಬಹುದು. ಹೀಗೆ ನಿಮ್ಮ ಅನುಭವಗಳನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ನಿಮ್ಮ ಫೊಟೋ ಜೊತೆ, ಚಿಕ್ಕದಾಗಿ ಮತ್ತು ಚೊಕ್ಕವಾಗಿ ಬರೆದು ಕಳಿಸಿ. ಈ ಮೇಲ್ ಮೂಲಕ ಕಳಿಸುವವರು [email protected] ಗೆ ಕಳಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಸ್ವಚ್ಛ ಭಾರತ ಮಾಡಲು ಹೊರಟಿರುವವರ ಮನಸ್ಸು ಶುದ್ಧವೇ?

ಸಿದ್ದರಾಮಯ್ಯನವರ ಸರ್ಕಾರ ರಾಜ್ಯದ ಮಠ ಮಾನ್ಯಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಹೊರಟಿದೆ. ಹಾಗಂತ ಬಿಜೆಪಿಯವರು ಎಬ್ಬಿಸಿದ ಕೂಗು ಹೇಗಿತ್ತೆಂದರೆ, ಇನ್ನೇನು ರಾಜ್ಯದ ಎಲ್ಲ ಮಠ ಮಾನ್ಯಗಳನ್ನು ಸರ್ಕಾರ ತನ್ನ ಹಿಡಿತಕ್ಕೆ ಪಡೆದುಕೊಂಡು ಬಿಡುತ್ತದೆ. ಮೊದಲೇ ಮೂಢನಂಬಿಕೆಯನ್ನು ನಿಷೇಧ ಮಾಡುವ ಹೆಸರಿನಲ್ಲಿ ಕಾಯ್ದೆಯನ್ನು ತರಬೇಕು ಅಂದಿದ್ದ ಸರ್ಕಾರವಲ್ಲವೇ? ಹೀಗಾಗಿ ಇದೂ ನಿಜವಿರಬೇಕು ಎಂಬ ಮಟ್ಟಕ್ಕೆ ಜನ ಯೋಚಿಸಿದರು. ಆದರೆ ಬಿಜೆಪಿಯವರೇ ಆದ ರಾಮಾ ಜೋಯಿಸ್ ಈ ಸಂಬಂಧ ಕೊಟ್ಟ ವರದಿ ಏನು ಹೇಳಿತ್ತೆಂದರೆ, ಪ್ರತಿದಿನದ ಲೆಕ್ಕಾಚಾರವನ್ನೂ ಅವು ಕೊಡಬೇಕು. ಪ್ರತಿವರ್ಷ ಬಂದ ಬಂಗಾರ ಮತ್ತಿತರ ಒಡವೆಗಳ ಲೆಕ್ಕ ಎಷ್ಟು ಎಂಬುದನ್ನು ಕೊಡಬೇಕು ಎಂದು ಹೇಳಿತ್ತು.

ಹಾಗೆ ನೋಡಿದರೆ ಸಿದ್ದರಾಮಯ್ಯನವರ ಸರ್ಕಾರ ಮೊನ್ನೆ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಿದ ಧಾರ್ಮಿಕ ದತ್ತಿ ತಿದ್ದುಪಡಿ ವಿಧೇಯಕ ಆ ಮಟ್ಟಿನ ಬಿಗಿಯನ್ನೇನೂ ತರಲು ಹೋಗಿರಲಿಲ್ಲ. ಬದಲಿಗೆ ಯಾವುದಾದರೂ ಮಠ ತನ್ನದೇ ಆಂತರಿಕ ಗೊಂದಲದಲ್ಲಿ ಸಿಲುಕಿಕೊಂಡರೆ ಆಡಳಿತಾಧಿಕಾರಿಯನ್ನು ನೇಮಕ ಮಾಡುವ ಶಕ್ತಿ ಪಡೆಯಲು ಹೊರಟಿತ್ತು. ಅದು ಕೂಡ ಅಂತಹ ಮಠಗಳು ಬಯಸಿದರೆ. ಸೋಸಲೆ ಮಠ ಹಾಗೂ ಕೂಡ್ಲಿಯ ಶೃಂಗೇರಿ ಮಠಗಳು ತಮಗೆ ಇಂತಹ ಆಡಳಿತಾಧಿಕಾರಿ ಬೇಕು ಎನ್ನುತ್ತಿವೆ. ಕಾರಣ ಹೇಳಲು ಹೋದರೆ ಅದೇ ಒಂದು ದೊಡ್ಡ ಕತೆ. ಅರೇಸ್ಕಿ. ರಾಜ್ಯದ ಯಾವುದೇ ಮಠ ಮಾನ್ಯಗಳು ತಮ್ಮ ಆಸ್ತಿಯನ್ನು ಇನ್ನೊಬ್ಬರು ಕೊಳ್ಳೆ ಹೊಡೆಯಲು ಹೊರಟಿದ್ದಾರೆ ಎಂದೋ, ಉತ್ತರಾಧಿಕಾರಿಯ ಸಮಸ್ಯೆ ಎದುರಿಸಿದಾಗಲೋ ಸರ್ಕಾರದ ಆಡಳಿತಾಧಿಕಾರಿ ತಾತ್ಕಾಲಿಕವಾಗಿ ಬಂದು ಕೂರುವುದರಲ್ಲಿ ತಪ್ಪೇನಿದೆ? ಅಷ್ಟಕ್ಕೇ ಬಿಜೆಪಿಯವರು ಅಯ್ಯೋ, ಮಠ ಮಾನ್ಯಗಳನ್ನು ವಶಕ್ಕೆ ಪಡೆಯಲು ಸರ್ಕಾರ ಹೊರಟಿದೆ ಎಂದು ಕೂಗು ಹಾಕುವ ಅಗತ್ಯವೇನಿದೆ?

ಕುತೂಹಲವೆಂದರೆ, ಒಂದು ಕಾಯ್ದೆಯ ಸಾಧಕ ಬಾಧಕಗಳ ಕುರಿತು ಸಮಗ್ರ ಚರ್ಚೆ ನಡೆಯಬೇಕು. ಅದೇ ರೀತಿ ಸರ್ಕಾರ ವಿಧಾನಮಂಡಲದಲ್ಲಿ ಮಂಡಿಸಿದ ಸದರಿ ತಿದ್ದುಪಡಿ ವಿಧೇಯಕದ ಕುರಿತು ಕೂಲಂಕಷ ಚರ್ಚೆ ಮಾಡಬೇಕಾದ ಅನಿವಾರ್ಯತೆ ಕೂಡ ಇತ್ತು. ಆದರೆ ಸರ್ಕಾರ ಒಂದು ಕಾಲಿಟ್ಟಿದ್ದೇ ತಡ, ಈ ಕಾಯ್ದೆಯ ಕಾರಣ ಪುರುಷರು ತಾವೇ ಎಂಬುದನ್ನೂ ಮರೆತು ಬಿಜೆಪಿಯವರು ದಾಳಿಗಿಳಿದುಬಿಟ್ಟರು. ನನಗನ್ನಿಸುವ ಪ್ರಕಾರ, ಎಲ್ಲ ಮಠ ಮಾನ್ಯಗಳ ಕುರಿತು ನಾನು ಟೀಕಿಸುವುದಿಲ್ಲ. ಆದರೆ ಬಹುತೇಕ ಮಠ ಮಾನ್ಯಗಳು ದುಡ್ಡು ಮಾಡಲು ಹಲವು ಮಾರ್ಗಗಳನ್ನು ಕಂಡುಕೊಂಡಿವೆ. ಅಗತ್ಯ ಬಿತ್ತು ಎಂದರೆ ಸರ್ಕಾರದ ಖರ್ಚಿನಲ್ಲಿ ರಸ್ತೆಯಿಂದ ಹಿಡಿದು ಅದೇನೇನು ಕಾಮಗಾರಿ ಮಾಡಿಸಿಕೊಳ್ಳಬೇಕೋ ಅದನ್ನು ಮಾಡುತ್ತವೆ. ಹೀಗಿರುವಾಗ ಅಂತಹ ಮಠಗಳು ತಮ್ಮ ಆದಾಯದ ವಿವರ ನೀಡುವ ಉತ್ತರ ದಾಯಿತ್ವವನ್ನು ಹೊಂದಿರಬೇಕೋ, ಬೇಡವೋ? ಆಳದಲ್ಲಿ ಕೆದಕಿ ನೋಡಿ. ಹಲವು ಮಠಗಳ ಅಂತರಂಗದಲ್ಲೀಗ ದುಡ್ಡಿಗಾಗಿ ಹಾಹಾಕಾರವೇ ನಡೆಯುತ್ತಿದೆ. ಅಯ್ಯೋ, ಮಠಗಳು ಒಳ್ಳೆಯ ಕೆಲಸ ಮಾಡುತ್ತಿವೆ. ಅದನ್ನು ವಶಪಡಿಸಿಕೊಳ್ಳಲು ಸರ್ಕಾರ ಹೊರಟಿದೆಯಲ್ಲ ಅಕಟಕಟಾ ಎಂದು ಕೂಗು ಹಾಕುವ ಬದಲು ಯಾವ್ಯಾವ ಮಠಗಳಲ್ಲಿ ದುಡ್ಡಿಗಾಗಿ, ಆಸ್ತಿಗಾಗಿ ಬಡಿದಾಟ ನಡೆಯುತ್ತಿದೆ ಎಂಬುದನ್ನು ನೋಡಬೇಕಲ್ಲ?

ಹೀಗೆ ಬಡಿದಾಟ ನಡೆಯುವಾಗ ತನ್ನ ಮಠದ ಆಸ್ತಿ ಉಳಿಯಲಿ ಎಂದು ಪ್ರಾಮಾಣಿಕವಾಗಿ ಮಠ ಬಯಸಿದರೆ, ಅದು ಬಯಸಿದಾಗ ತಾತ್ಕಾಲಿಕವಾಗಿ ಆಡಳಿತಾಧಿಕಾರಿಗಳನ್ನು ಸರ್ಕಾರ ನೇಮಕ ಮಾಡಿದರೆ ತಪ್ಪೇನು? ಎಲ್ಲಕ್ಕಿಂತ ಮುಖ್ಯವಾಗಿ ಈ ತಿದ್ದುಪಡಿ ವಿಧೇಯಕ ಮಂಡಿಸುವ ಮುನ್ನ ರಾಜ್ಯದಲ್ಲಿ ಆರು ಧಾರ್ಮಿಕ ದತ್ತಿ ವಿಧೇಯಕಗಳಿದ್ದವು. ಒಂದೊಂದು ಭಾಗದ ವಿಧೇಯಕಕ್ಕೆ ಒಂದೊಂದು ರೂಪ. ಯಾವಾಗ ಹೈಕೋರ್ಟ್‌ನ ವಿಭಾಗೀಯ ಪೀಠ ಹಿಡಿದು ಜಾಡಿಸಿತೋ, ಆಗ ಸರ್ಕಾರ ಮುನ್ನಡಿ ಇಡುವ ಪರಿಸ್ಥಿತಿ ಬಂತು. ರಾಮಾ ಜೋಯಿಸರ ಅಧ್ಯಕ್ಷತೆಯ ಒಂದು ಸಮಿತಿ ರಚನೆಯಾಯಿತು. ಅದು ಒಂದು ಶಿಫಾರಸು ಕೊಟ್ಟಿತು. ಆ ಶಿಫಾರಸಿನ ಕಾಲು ಭಾಗದಷ್ಟು ಶಿಫಾರಸುಗಳನ್ನೂ ತೆಗೆದುಕೊಳ್ಳದೆ, ನಮಗೇಕೆ ಸಹವಾಸ ಎಂಬಂತೆ, ಮಠ ಬಯಸಿದರೆ ಮಾತ್ರ ಆಡಳಿತಾಧಿಕಾರಿಯನ್ನು ನೇಮಕ ಮಾಡುತ್ತೇವೆ ಎಂಬ ಅಂಶವನ್ನುಳ್ಳ ಕಾಯ್ದೆಯನ್ನು ಸರ್ಕಾರ ರೂಪಿಸಿತು. ಇದನ್ನು ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲಿ ಮಂಡಿಸಿತು. ಇದಕ್ಕಿದ್ದ ಮುಖ್ಯ ಕಾರಣ ತರಾತುರಿಯಲ್ಲ. ಜನವರಿ ಹದಿಮೂರರಂದು ಸುಪ್ರೀಂ ಕೋರ್ಟ್ ಈ ಕುರಿತು ಏನು ಬೆಳವಣಿಗೆಯಾಗಿದೆ ಎಂದು ಕೇಳುತ್ತದೆ. ಈಗ ಬಿಜೆಪಿಯವರು ಹಾಕಿರುವ ಕೂಗು ಕೇಳಿ ಕಂಗಾಲಾದ ಕಾಂಗ್ರೆಸ್ ಸರ್ಕಾರವೇನೋ, ತಿದ್ದುಪಡಿ ವಿಧೇಯಕವನ್ನು ಹಿಂಪಡೆಯಲು ನಿರ್ಧರಿಸಿದೆ.

ಆದರೆ ನಾಳೆ ಸುಪ್ರೀಂ ಕೋರ್ಟಿನ ಮುಂದೆ ಸರ್ಕಾರ ಏನು ಹೇಳಬೇಕು? ಸದರಿ ತಿದ್ದುಪಡಿ ವಿಧೇಯಕವನ್ನು ಹಿಂಪಡೆಯುತ್ತೇವೆ ಎಂದು ಹೇಳಿದರೆ ಅದು ಸರ್ಕಾರದ ವಿರುದ್ಧವೇ ನ್ಯಾಯಾಂಗ ನಿಂದನೆಯ ಆರೋಪ ಹೊರಿಸಬಹುದು. ಆಗ ಯಾವ ಕಾಯ್ದೆಯೂ ಅಸ್ತಿತ್ವದಲ್ಲಿಲ್ಲದಂತಾಗಿ ಒಂದು ರೀತಿಯ ಅರಾಜಕತೆ ಸೃಷ್ಟಿಯಾಗುತ್ತದೆ. ಆಗ ಗತಿ ಏನು? ಅಂದ ಹಾಗೆ ಒಂದು ಪ್ರತಿಪಕ್ಷ ಕೇವಲ ರಾಜಕೀಯ ಲಾಭಕ್ಕಾಗಿ ನಾಟಕ ಆಡಬಾರದು. ಬದಲಿಗೆ ಅವರ ಪಕ್ಷದವರೇ ಆದ ರಾಮಾ ಜೋಯಿಸ್ ಏನು ಶಿಫಾರಸು ಕೊಟ್ಟಿದ್ದರು? ಆದರೆ ಈಗಿನ ಸರ್ಕಾರ ಯಾವ ರೀತಿಯ ತಿದ್ದುಪಡಿ ತಂದಿದೆ? ಎಂಬುದನ್ನು ಪರಿಶೀಲಿಸಿ ಚರ್ಚೆಗಿಳಿಯಬೇಕಿತ್ತು. ಆದರೆ ಸಿದ್ದರಾಮಯ್ಯನವರ ಸರ್ಕಾರ ಯಾವುದೇ ಜನಪರ ಉದ್ದೇಶಗಳನ್ನುಳ್ಳ ಕಾಯ್ದೆಯನ್ನು ಜಾರಿಗೆ ತರಲು ಹೊರಡಲಿ, ಆಗ ಬಿಜೆಪಿಯ ಅಪಸ್ವರ ಹೊರಟೇ ಹೊರಡುತ್ತದೆ. ಕೋಟ್ಯಂತರ ರುಪಾಯಿ ವೆಚ್ಚ ಮಾಡಿ ನಡೆಸುವ ಅದ್ದೂರಿ ಮದುವೆಗಳ ನಿಯಂತ್ರಣ ತಿದ್ದುಪಡಿ ಮಸೂದೆ ತರಲು ಸರ್ಕಾರ ಯೋಚಿಸಿದ್ದೇ ತಡ. ಬಿಜೆಪಿಯವರು ಹೋ ಅಂತ ಕೂಗು ಹಾಕಿದರು. ಅರೇ, ಕೋಟ್ಯಂತರ ರುಪಾಯಿ ವೆಚ್ಚ ಮಾಡಿ ಒಬ್ಬರು ಮದುವೆ ಮಾಡುತ್ತಾರೆ ಎಂದರೆ ಅವರಿಂದ ಇಂತಿಷ್ಟು ಪ್ರಮಾಣದ ಟ್ಯಾಕ್ಸು ಅಂತ ಹೇರಿದರೆ ಏನು ತಪ್ಪು? ಸಮಾಜದಿಂದ ಮಾಡಿದ ದುಡ್ಡನ್ನು ಸಮಾಜಕ್ಕೆ ಕೊಡುತ್ತಾರೆ ಅಷ್ಟೇ. ಈ ವಿಷಯದಲ್ಲಿ ಬಿಜೆಪಿ ಮುಂದೆ ನಿಂತು ರೈಟ್, ನೀವು ಹೇಳುವುದು ಸರಿಯಾಗಿದೆ. ದುಂದು ವೆಚ್ಚ ಮಾಡಿ ಮದುವೆ ಮಾಡುವವರಿಗೆ ಬ್ರೇಕ್ ಹಾಕಬೇಕು ಅಂದಿದ್ದರೆ ಅದಕ್ಕೊಂದು ಶಕ್ತಿ ಬರುತ್ತಿತ್ತು. ಅಯ್ಯೋ, ಅವರವರ ದುಡ್ಡು ಏನು ಬೇಕಾದರೂ ಮಾಡಿಕೊಳ್ಳಲಿ. ಇದಕ್ಕೇಕೆ ಸರ್ಕಾರ ಮೂಗು ತೂರಿಸಬೇಕು ಅಂತ ಬಿಜೆಪಿಯವರು ಗೋಳಾಡಿದರು.

ಸರಿ, ಇದೇ ರೀತಿ ಮೂಢನಂಬಿಕೆಗಳ ನಿಷೇಧ ಕಾಯ್ದೆಯನ್ನು ತರಬೇಕು ಅಂತ ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದೇ ತಡ ಹೋ, ಅಂತ ಹುಯಿಲೆಬ್ಬಿಸಿಬಿಟ್ಟರು. ಅವರವರ ನಂಬುಗೆ ಅವರಿಗೆ. ಹೀಗಾಗಿ ಮೂಢನಂಬಿಕೆಗಳ ನಿಷೇಧ ಕಾಯ್ದೆ ಜಾರಿಗೆ ತಂದರೆ ಹೇಗೆ ಅನ್ನಲು ಶುರು ಮಾಡಿದರು. ಅರೇ, ಮೂಢನಂಬಿಕೆಗಳು ಅಂದರೆ ಯಾವುದು ಅಂತ ಸರ್ಕಾರ ಹೇಳಿತ್ತೋ ಆ ಪೈಕಿ ಯಾವುದನ್ನು ಜಾರಿಗೆ ತರಬಹುದು, ಯಾವುದನ್ನು ತರಲು ಸಾಧ್ಯವಿಲ್ಲ ಅಂತ ಕೂತು ಚರ್ಚಿಸಬಹುದಲ್ಲ? ಇಲ್ಲ, ಬಿಜೆಪಿಗೆ ಅದು ಬೇಕಾಗಿಯೇ ಇರಲಿಲ್ಲ. ಬಿಜೆಪಿ ನಾಯಕರು ರಾಜ್ಯವನ್ನು ಒಂದು ಸುತ್ತು ಹೊಡೆಯುವುದು ಬೇಡ. ಸುಮ್ಮನೆ ನಮ್ಮ ಅನೇಕ ಟೀವಿ ಛಾನಲ್ಲುಗಳಲ್ಲಿ ಬರುವ ಜ್ಯೋತಿಷ್ಯ ಮತ್ತಿತರ ಕಾರ್ಯಕ್ರಮಗಳನ್ನು ನೋಡಲಿ. ಒಬ್ಬ ಮಹಾನುಭಾವ ಇಂತಹ ರಾಶಿಯ ಜನ ತಮಗೆ ಹುಟ್ಟಿದ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಎಸಗಬಹುದು ಎಂದು ಖುಲ್ಲಂಖುಲ್ಲಾ ಕತೆ ಹೇಳುತ್ತಾನೆ. ಅದಕ್ಕೆ ಪರಿಹಾರ ಅಂತ ಒಂದು ಮಂತ್ರವನ್ನೂ ಒಗೆದುಬಿಡುತ್ತಾನೆ. ಇವನ ಹಣೆ ಬರಹಕ್ಕೆ, ಒಂದೇ ಒಂದು ಸಲವಾದರೂ ಇಂತಿಂಥ ವರ್ಷ ಇಂತಿಂಥವರು ಮುಖ್ಯಮಂತ್ರಿಯಾಗುತ್ತಾರೆ ಎಂದು ಆತ ಹೇಳಿದ್ದರೆ ಕೇಳಿ. ಈತನನ್ನು ನಂಬಿ ಅಮಾಯಕ ಜನ ಭವಿಷ್ಯ ಕೇಳಲು ಹೋಗುತ್ತಾರೆ. ಅವನ ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳಲು ಜನ ನಾಲ್ಕು ನಾಲ್ಕು ತಿಂಗಳು ಕಾಯಬೇಕಂತೆ. ಇವನೇನು ಜಯದೇವ ಆಸ್ಪತ್ರೆಯ ಛೀಫ್ ಮಂಜುನಾಥ್ ಥರ, ವಿವೇಕ್ ಜವಳಿ, ವಿಕ್ಟೋರಿಯಾ ಆಸ್ಪತ್ರೆಯ ನ್ಯೂರಾಲಜಿ ವಿಭಾಗದ ಛೀಫ್ ಆಗಿದ್ದ ಡಾ||ವೆಂಕಟೇಶ್ ಥರ ಲಕ್ಷಾಂತರ ಜೀವಗಳನ್ನು ಉಳಿಸಿದವನು ನೋಡಿ.

ಆದರೆ ಅವರ ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳಲು ನಿಮಗೆ ಒಂದು ದಿನವೂ ಬೇಕಿಲ್ಲ. ಲಕ್ಷಾಂತರ ಜನರ ಜೀವ ಉಳಿಸುವವರ ಅಪಾಯಿಂಟ್‌ಮೆಂಟ್ ನಿಮಗೆ ಸುಲಭವಾಗಿ ದಕ್ಕಿ ಬಿಡುತ್ತದೆ. ಆದರೆ ಇಂತಹ ದಗಲ್‌ಬಾಜಿ ಜ್ಯೋತಿಷಿಗಳನೇಕರ ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳಲು ನಾಲ್ಕು ನಾಲ್ಕು ತಿಂಗಳು ಬೇಕು. ಇಂತಹ ಬದ್ಮಾಷ್‌ಗಳನ್ನು ಬಡಿದು ಹಾಕಲು ಮೂಢನಂಬಿಕೆ ನಿಷೇಧ ಕಾಯ್ದೆಯಂತಹ ಒಂದು ಜನಪರ ಕಾಯ್ದೆಯ ಅಗತ್ಯವಿದೆಯೋ ಇಲ್ಲವೋ? ಇನ್ನೊಬ್ಬ ಹಂಡಬೆರಕಿ ಜ್ಯೋತಿಷಿ ಇದ್ದಾನೆ. ಇವನು ಈ ಹಿಂದೆ, ಯಾವ ಕಾರಣಕ್ಕೂ ಯಡಿಯೂರಪ್ಪ ಈ ಜೀವನದಲ್ಲೇ ಸಿಎಂ ಆಗಲು ಸಾಧ್ಯವಿಲ್ಲ. ನನ್ನ ಬಾಯಿಂದ ಬರುತ್ತಿರುವುದು ಜಗನ್ಮಾತೆಯ ನುಡಿ ಎಂದು ಕೊಚ್ಚಿಕೊಂಡಿದ್ದ. ಆದರೆ ಜಗನ್ಮಾತೆ ಯಡಿಯೂರಪ್ಪನವರ ಪರ ನಿಂತುಬಿಟ್ಟಳು. ಆದರೆ ಈ ಹಂಡಬೆರಕಿ ಈಗಲೂ ತನ್ನ ಮಹಾನ್ ಜ್ಯೋತಿಷ್ಯ ಹೇಳುತ್ತಾ, ಅಮಾಯಕರ ಬಳಿ ಕಾಸು ಪೀಕುತ್ತಾ ನೆಮ್ಮದಿಯಿಂದಿದ್ದಾನೆ. ಇದನ್ನು ಮೂಢನಂಬಿಕೆ ಎನ್ನದೇ ಇನ್ನೇನನ್ನಬೇಕು? ಇವರೆಲ್ಲ ಮಾಡಿದ ಗಲಭೆಗಾಗಿ ಮೂಢನಂಬಿಕೆ ನಿಷೇಧ ಮಸೂದೆಯೂ ನಿಂತುಹೋಯಿತು. ಈಗ ನೋಡಿದರೆ ಮಠ ಮಾನ್ಯಗಳು ಇಷ್ಟ ಪಟ್ಟರೆ ಮಾತ್ರ ಆಡಳಿತಾಧಿಕಾರಿಯನ್ನು ಹಾಕುತ್ತೇವೆ ಎಂದರೆ, ನೋ ಎಂದು ಇವರೇ ಹೇಳುತ್ತಾರೆ. ಇವರು ನರೇಂದ್ರ ಮೋದಿ ಹೇಳಿದಂತೆ ಸ್ವಚ್ಛ ಭಾರತ ಮಾಡುವವರು? ಮೊದಲಿಗೆ ಯಾವುದೇ ಕಾಯ್ದೆ ತರಬೇಕು ಅಂತ ಹೊರಟಾಗ ಸ್ವಚ್ಛ ಮನಸ್ಸಿನಿಂದ ಅದರ ಸಾಧಕ ಬಾಧಕಗಳನ್ನು ಕುರಿತು ಚರ್ಚೆ ಮಾಡುವ ಧೀಶಕ್ತಿ ಬಿಜೆಪಿಯವರಿಗಿರಬೇಕು. ಏನೇ ಮಸೂದೆ ತರಲು ಹೊರಟರೂ ರಾಜಕೀಯ ಲಾಭ ಮಾಡಿಕೊಳ್ಳುವ ಮಲಿನ ಮನಸ್ಸಿದ್ದರೆ ಇವರು ಏನನ್ನು ಸಾಧಿಸುತ್ತಾರೆ?

ಅಂದ ಹಾಗೆ ಒಂದು ಮಾತನ್ನು ನೆನಪಿಡಿ. ಈ ಸಮಾಜದಲ್ಲಿರುವ ಮನಸ್ಸುಗಳು ಎಲ್ಲಿಯ ತನಕ ಸ್ವಚ್ಛವಾಗುವುದಿಲ್ಲವೋ ಅಲ್ಲಿಯ ತನಕ ಭಾರತವನ್ನು ಸ್ವಚ್ಛ ಮಾಡಲು ಸಾಧ್ಯವಿಲ್ಲ. ಆ ದೃಷ್ಟಿಯಿಂದ ನೋಡಿದರೆ ಮೋದಿಯ ಸ್ವಚ್ಛ ಭಾರತ ಅಭಿಯಾನಕ್ಕೆ ಮೊದಲ ವಿರೋಧಿಗಳೇ ಇವರು. ಸ್ವಚ್ಛ ಭಾರತ ಬೇರೆ ಮಾಡುತ್ತಾರಂತೆ. ಮುಂದಿನ ಕೆಲ ವರ್ಷಗಳಲ್ಲಿ ಇವರು ಈ ದೇಶವನ್ನು ಯಾವ ರೀತಿ ಮಾಡಿಬಿಡುತ್ತಾರೆ ಎಂಬುದನ್ನು ಮತ್ತೊಂದು ಸಲ ವಿವರವಾಗಿ ಹೇಳುತ್ತೇನೆ. ಈ ಸಲ ಇಷ್ಟು ಸಾಕು ಬಿಡಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 07 January, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books