Ravi Belagere
Welcome to my website
ಕೆಲವೊಮ್ಮೆ ಬಂಧುಗಳ, ಸ್ನೇಹಿತರ, ಪರಿಚಿತರ ಮನೆಗೆ ಹೋಗಲೇಬೇಕಾಗುತ್ತದೆ. ಎರಡು ದಿನದ ಮಟ್ಟಿಗೆ ಹೋಗಿದ್ದು ಬರುವುದಾದರೆ ಆ ಮಾತು ಬೇರೆ. ಆದರೆ ತಿಂಗಳುಗಟ್ಟಲೆ ಇರುವ ಪ್ರಸಂಗ ಬಂದರೆ? ನೀವು ಚಿಕ್ಕವರಾಗಿದ್ದಾಗ ಸಂಬಂಧಿಕರ ಮನೆಯಲ್ಲಿ, ಮತ್ಯಾವುದೋ ಕಾರಣಕ್ಕೆ ಒಂದಷ್ಟು ದಿನ ಇನ್ನೊಬ್ಬರ ಮನೆಯಲ್ಲಿ ಉಳಿದುಕೊಂಡ ಪ್ರಸಂಗವಿರಬಹುದು. ಆಗ ಮುಜುಗರ, ಸಂಕೋಚ, ಬೇಸರ ಎಲ್ಲವೂ ಆಗಿರಬಹುದು. ಯಾರಿಗೆ ಗೊತ್ತು? ನೀವು ಖುಷಿಯಿಂದಲೇ ಇದ್ದಿರಬಹುದು. ಹೀಗೆ ನಿಮ್ಮ ಅನುಭವಗಳನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ನಿಮ್ಮ ಫೊಟೋ ಜೊತೆ, ಚಿಕ್ಕದಾಗಿ ಮತ್ತು ಚೊಕ್ಕವಾಗಿ ಬರೆದು ಕಳಿಸಿ. ಈ ಮೇಲ್ ಮೂಲಕ ಕಳಿಸುವವರು [email protected] ಗೆ ಕಳಿಸಿ.
Home About Us Gallery Books Feedback Prarthana Contact Us

Buy Ravi Belagere Books online

ನೋಡನೋಡ್ತಾ ಕಳಚಿ ಬಿದ್ದ ಆ ಬಾಲಚಂದಿರ!

It's very rare.
ಆದರೆ ಅದರ ತೀವ್ರತೆ ಕೆಲವು ಸಲ ಉತ್ಕಟವಾಗುತ್ತದೆ. ಅದು ನನ್ನ fancy ಅಲ್ಲ. ನಾನು by and large ಯಾರದೂ ಅಭಿಮಾನಿಯಲ್ಲ. ನನಗೆ ಯಾರೋ ದೊಡ್ಡವರ ಪಕ್ಕದಲ್ಲಿ ನಿಂತು ಫೊಟೋ ತೆಗೆಸಿಕೊಳ್ಳುವ craze ಹಿಂದೂ ಇರಲಿಲ್ಲ. ಈಗಂತೂ ಇಲ್ಲವೇ ಇಲ್ಲ. ಆದರೆ ಕೆಲವು (ಕೆಲವೇ) ವ್ಯಕ್ತಿತ್ವಗಳಿವೆ. They are personalities. ಖುಷ್ವಂತ್ ಸಿಂಗ್, ಶಾಮರಾಯರು, N.T.R ಇವರೆಲ್ಲ ಈಗ ದಿವಂಗತರು. ಆದರೆ ಮನಸ್ಸಿನಲ್ಲಿ ನನಗೆ ಅವರೆಡೆಗೆ ಅದೇ ಭಾವ. ಖುಷ್ವಂತ್, ನಕ್ಸಲ್ ನಾಯಕ ಕೊಂಡಪಲ್ಲಿ ಸೀತಾರಾಮಯ್ಯ, ಶಾಮರಾಯರು, ಮನೋಹರ ಮಳಗಾಂವಕರ್, ರಾಘವೇಂದ್ರ ಖಾಸನೀಸ ಮುಂತಾದವರ ಸಾನ್ನಿಧ್ಯ ಅವರ ಇಳಿಗಾಲದಲ್ಲಿ ಸಿಕ್ಕಿತು. ಕೆಲವರಿಗೆ ಶುದ್ಧ ಮಗನಂತೆ ಎಲ್ಲ ತರಹದ ಸೇವೆ ಮಾಡಿದೆ. ಅವರೊಂದಿಗೇ ರಾತ್ರಿಗಳಲ್ಲಿ ಇದ್ದು, ಅವರ ಕಾಲು ಒತ್ತಿದೆ. ಊಟ ತಿನ್ನಿಸಿದೆ. ಮಳಗಾಂವಕರ್ ಅವರ ಮಾತು ಒತ್ತಟ್ಟಿಗಿರಲಿ. ಕೊಂಡಪಲ್ಲಿ ಸೀತಾರಾಮಯ್ಯನವರು ನನ್ನ ಮನೆಯಲ್ಲಿ ತಿಂಗಳುಗಟ್ಟಲೆ ಇದ್ದರು. ಆಂಧ್ರದ ಇಡೀ ಪೊಲೀಸ್ ವ್ಯವಸ್ಥೆ ಅವರನ್ನು ಹುಡುಕುತ್ತಿತ್ತು. ಕಣ್ಣಿಗೆ ಕಂಡರೆ ಮುಲಾಜೇ ಇಲ್ಲ. ನೇರವಾಗಿ shoot encounter ಎಂಬ ಕಥೆ. ಇವರಿಗೋ ವಿಪರೀತ ಅನಾರೋಗ್ಯ. ಅವರನ್ನಾಗಲೇ ಪಾರ್ಕಿನ್‌ಸನ್ಸ್ ಖಾಯಿಲೆ ನುಂಗಲಾರಂಭಿಸಿತ್ತು. ಶೌಚಕ್ಕೆ ಅವರು ಹೋದರೆ ಕೊನೆಗೆ ನಾನೇ ಹೋಗಿ ನೀರು ಹಾಕಿ ಬರುತ್ತಿದ್ದೆ. ಇತ್ತೀಚೆಗೆ ತೀರಿಕೊಂಡ ನನ್ನ ಸೋದರ ಮಾವ ಬೆಳಗೆರೆ ಕೃಷ್ಣಶಾಸ್ತ್ರಿಗಳ ವಿಷಯ ನಿಮಗೆ ಗೊತ್ತಿದೆ. ಅವರಿಗೆ ನಾನು ಸೇವೆ ಮಾಡಲಿಲ್ಲ. ಅದನ್ನೆಲ್ಲ ಲಲಿತೆ ಮಾಡಿದಳು. ಹಾಗೆ ಹಿರಿಯರನ್ನು ಗೌರವಿಸುವುದು, ಅವರ ಜೊತೆಗಿರುವುದು, ಅವರೊಂದಿಗೆ ಮಾತು -ಇತ್ಯಾದಿಗಳೆಲ್ಲ ನನಗೆ ತುಂಬ ಇಷ್ಟ ಮತ್ತು ಅದೊಂದು ಆಪರ್ಚ್ಯುನಿಟಿ.

ಈಗ ಏನಾಗಿದೆಯೋ ನೋಡಿ, ಅವರು great personalities. ಹಾಗೆಲ್ಲ ದಿನಗಟ್ಟಲೆ ಅವರೆದುರಿಗೆ ಕೂತೇ ಇರುವುದು ಸಾಧ್ಯವಿಲ್ಲ. ಆದರೆ ಒಂದು ‘ಹಾಯ್’ ಹೇಳಬಹುದಲ್ಲ? ಕೈ ಕುಲುಕು, ಕೈ ಹಿಡಿದು ನಡೆಸುವಿಕೆ, ಅವರದೇ ಕೃತಿಯ ಮೇಲೆ ಅವರದೊಂದು ಸಹಿ ಪಡೆಯುವಿಕೆ! ನನಗೆ ಅಷ್ಟು ಸಾಕು. ಆ ಪೈಕಿ ನನ್ನ ಮೊದಲ ಪ್ರಯಾರಿಟಿಯಲ್ಲಿ ಇರುವುದು ಹಿಂದಿ ಕವಿ, ನಿರ್ದೇಶಕ, ಗೀತ ರಚನೆಕಾರ ಇತ್ಯಾದಿಗಳೆಲ್ಲ ಆಗಿರುವ ಗುಲ್ಜಾರ್ ಸಾಹೇಬರು! ತೀರಾ ಎದುರಾ-ಎದುರು ಸಿಕ್ಕುಬಿಟ್ಟರೆ, ನನ್ನ ನಿರೀಶ್ವರ ವಾದಕ್ಕೆ ಗೋಲಿಮಾರ್. ನೇರವಾಗಿ ಉದ್ದಂಡ ನಮಸ್ಕಾರ ಮಾಡಿಯೇ ಬಿಡುತ್ತೇನೆ. ಚಿತ್ರ ನಿರ್ದೇಶಕ ಆಷುತೋಷ್ ಗೌರೀಕರ್, ಗೆಳೆಯ ಪ್ರಕಾಶ್ ರೈ, ಇನ್ನೊಬ್ಬ ಹಿಂದಿ ನಟ-ಮಿತ್ರ ರವಿ ಕಾಳೆ, ನಾನಾ ಪಾಟೇಕರ್ ಮುಂತಾದವರನ್ನೆಲ್ಲ ಅಂಗಲಾಚಿದ್ದೇನೆ. “ನೀವು ಒಂದೇ ಒಂದು ದಿನ ಮುಂಚಿತವಾಗಿ ತಿಳಿಸಿ. ಜಗತ್ತಿನಲ್ಲಿ ಎಲಿದ್ದರೂ ಸರಿ, ನೀವು ಕರೆದಲ್ಲಿಗೆ ಬರುತ್ತೇನೆ. ಅವರನ್ನು ಪರಿಚಯ ಮಾಡಿಕೊಡಿ" ಎಂಬುದು ನನ್ನ ನಿರಂತರ ರಗಳೆ. ಈ ಬಗ್ಗೆ ನಟ ರವಿ ಕಾಳೆಯಂತೂ ನಾನು ಕೇಳುವ ಮುನ್ನವೇ ‘ಹಾಂ, ರವೀ ಸಾಬ್, ನನಗೆ ನೆನಪಿದೆ, ನೀವು ಹೇಳಿದ್ದು. ಖಂಡಿತ ಮಾಡಿಕೊಡುತ್ತೇನೆ’ ಅನ್ನುತ್ತಾನೆ. ರವಿ ಕಾಳೆ ಮತ್ತು ನಾನು ಸುಮಾರು ಐವತ್ತು ದಿನ ಒಂದು ಸಿನೆಮಾಕ್ಕೆ ಕೆಲಸ ಮಾಡಿದ್ದೇವೆ; ‘ಮಾದೇಶ’.

ಅದೇಕೋ, ಘಳಿಗೆ ಕೂಡಿ ಬರುತ್ತಿಲ್ಲ. ಗುಲ್ಜಾರ್ ಸಾಹೇಬರು ಕಣ್ಣಿಗೆ ಸಿಗುತ್ತಿಲ್ಲ. ಇದು ಕೆಲಬಾರಿ ಹೀಗೇ ಆಗುತ್ತದೆ. ನನ್ನ ಗೆಳತಿಯೊಬ್ಬಳು ಆಮೆರಿಕದಲ್ಲಿದ್ದಾಳೆ. ಸಾವಿರ ಸಲ ಕೇಳಿದ್ದೆ. ವಿನಂತಿಸಿದ್ದೆ. ಗದರಿಸಿದ್ದೆ. “ನೀನು date fix ಮಾಡು. ಅಲ್ಲಿಗೆ ನಾನೇ ಬರುತ್ತೇನೆ. Any day. ಒಂದೇ ಒಂದು ಸಲ ಮಹಾನ್ ಲೇಖಕ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್‌ರನ್ನು ಭೇಟಿ ಮಾಡಿಸು" ಅಂದಿದ್ದೆ. ಅವಳು “ಬಿಡು ರವೀ, it is my responsibility. ಪದೇಪದೆ ನೆನಪಿಸಬೇಡ!" ಅಂದಿದ್ದಳು. ಇವತ್ತಿಗೂ ಅಮೆರಿಕದಲ್ಲಿದ್ದಾಳೆ ಹಾಳಾದವಳು. ಮಾರ್ಕ್ವೆಜ್ ಮಾತ್ರ ಕಾಣದ ಲೋಕಕ್ಕೆ ನಡೆದು ಹೋದರು. ಹೀಗಾದರೆ, ನಾನು ಪರಿತಪಿಸಿ ಏನುಪಯೋಗ?
ಆಗಿನ್ನೂ ನಾನು ಕಿರಿಯ. ಆದರೆ ಆ ಲೇಖಕರ ಒಂದೊಂದು, ಒಂದೊಂದು ಕೃತಿಯನ್ನು ಓದಿ ಓದಿ ಓದಿ, ಅದ್ಯಾವ ಪರಿ ಚಡಪಡಿಕೆ ಅನುಭವಿಸಿದೆ ಅಂದರೆ ಮನೆಯಲ್ಲಿದ್ದ ಅಷ್ಟೂ ಬಿಡಿಗಾಸು ಕಿಸೆಯಲ್ಲಿಟ್ಟುಕೊಂಡು ತಮಿಳು ಸೀಮೆಯ ಅರುಣಾಚಲಂ ಎಂಬ ಊರಿಗೆ ಹೋಗೇಬಿಟ್ಟೆ. ನನ್ನ ವಿಪರೀತ feverish ಮತ್ತು emotional ದಿನಗಳವು. ಅಲ್ಲಿದ್ದ ಆ ಮಹಾನ್ ಲೇಖಕರ ಕೈ ಹಿಡಿದು ಪಕ್ಕದಲ್ಲಿ ಕುಳಿತೆ. ಅಕ್ಕರೆಯಿಂದ ಮಾತನಾಡಿದೆ. ಪಾಪ, ಅವರ ಎರಡೂ ಕಣ್ಣು ಕುರುಡಾಗಿದ್ದವು. ಕೈ ಹಿಡಿದುಕೊಂಡು ಅತ್ತರು. “ನನ್ನನ್ನು ನೋಡಲಿಕ್ಕೆ ನೀನು ಅಷ್ಟು ದೂರದಿಂದ ಬಂದಿದೀಯ. ನಿನ್ನನ್ನು ನೋಡೋಕೆ ನನಗೇ ಕಣ್ಣಿಲ್ಲವಲ್ಲಪ್ಪ...." ಅಂದರು. ಅವರ ಹೆಸರು, ತೆಲುಗಿನ ಮಹಾನ್ ಲೇಖಕ ಗುಡಿಪಾಟು ವೆಂಕಟಚಲಂ. ಆ ನಂತರ ಅವರು ಬದುಕಿದ್ದು ಕೆಲವೇ ದಿನ. ಅಕಸ್ಮಾತ್ ನಾನು ಹೋಗದೇ ಇದ್ದಿದ್ದರೆ?

ಈಗ ಅದೇ ಆಗಿದೆ. ತೆಲುಗಿನ ‘ಮರೋಚರಿತ್ರ’ ನೋಡಿದ ತಕ್ಷಣ ಇದೇ ತರಹದ ತಪನೆ ನನಗೆ ಸುಮಾರು ೧೯೮೦ರಲ್ಲಿ ಶುರುವಾಗಿತ್ತು. ನಾನು ಬಯಸಿದ್ದು ಬಾಲಚಂದರ್ ಅವರ ಭೇಟಿ. ಆ groupನ ಅಷ್ಟೂ ಜನರನ್ನು ನಾನು ನೋಡಿದ್ದೇನೆ. ಕಮಲ ಹಾಸನ್, ರಜನೀಕಾಂತ್, ಸರಿತಾ, ಗೀತಾ- you name it. ಅವರನ್ನೆಲ್ಲ ನೋಡಿದ್ದೇನೆ. ಮಾತನಾಡಿದ್ದೇನೆ. Even, ಎಲ್.ಆರ್. ಈಶ್ವರಿ! ಅಂದರೆ ಅಂಥ ಆರ್ಡಿನರಿ ಹುಡುಗ-ಹುಡುಗಿಯರನ್ನು ತಂದು ಮಹಾನ್ ಗೊಮ್ಮಟಾ ಮೂರ್ತಿಗಳನ್ನು ಸೃಷ್ಟಿಸಿದ ಆ ಶಿಲ್ಪಿ ಕೆ.ಬಾಲಚಂದರ್ ಅವರನ್ನು ಇಲ್ಲೇ ಪಕ್ಕದಲ್ಲಿರುವ ಚನ್ನೈನಲ್ಲಿ ಹೋಗಿ ನೋಡಲು ನನ್ನಿಂದ ಸಾಧ್ಯವಾಗಲಿಲ್ಲ. ಅವರು ನಿರ್ಗಮಿಸಿದ ಸುದ್ದಿ ಕೇಳಿದಾಗಿನಿಂದ ನಾನು ಮಂಕಾಗಿಬಿಟ್ಟಿದ್ದೇನೆ.

ಅವರು ತುಂಬ ಹಿರಿಯರು. ಎಂಬತ್ತಮೂರೋ-ಎಂಬತ್ತನಾಲ್ಕೋ ವಯಸ್ಸು. ಹೆಚ್ಚಾಗಿ ಅವರು ಮಾಡಿದ್ದು ತಮಿಳು ಸಿನೆಮಾಗಳನ್ನು. ಸುಮಾರು ಒಂದು ನೂರು ಸಿನೆಮಾಗಳಲ್ಲಿ ತಮ್ಮ ಛಾಪು ಮೂಡಿಸಿದರು. ನನ್ನ ದೊಡ್ಡ ಸಮಸ್ಯೆ ಅಂದರೆ, ತಮಿಳು! ಇವತ್ತಿಗೂ ನನಗೆ ತಮಿಳು ಬರುವುದಿಲ್ಲ.ಆದರೂ ಅವರ ಸಿನೆಮಾಗಳಿಗೆ ಹೋಗಿ ಕೂಡುತ್ತಿದ್ದೆ. ಒಟ್ಟಾರೆಯಾಗಿ, ಅವುಗಳ ಕಥೆ ಅರ್ಥವಾಗುತ್ತಿತ್ತು. ಇನ್ನೂ ಸಂಭಾಷಣೆ, ಕಾಮಿಡಿ ದೃಶ್ಯಗಳು, ಹಾಡುಗಳು-ನಮ್ಮಪ್ಪನಾಣೆ, ಇವತ್ತಿಗೂ ಅರ್ಥವಾಗುವುದಿಲ್ಲ. ಕಮಲ ಹಾಸನ್ ಮೊದಲು ಬಾಲನಟ. ಹದಿನಾರೋ, ಹದಿನೆಂಟೋ ವಯಸ್ಸಿನಲ್ಲಿ ಆತ ಹೀರೋ ಪಾತ್ರ ಮಾಡಿದ್ದ. ಆತನ ಮೊದಲ ಸಿನೆಮಾನಾ? I doubt. ತುಂಬ ಚೆನ್ನಾಗಿ ನಟಿಸಿದ್ದ. ಸಿನೆಮಾದ ಹೆಸರು: ಉನರ್ಚಿಗಳ್. ಅದನ್ನು ಬಾಲಚಂದರ್ ಡೈರೆಕ್ಟ್ ಮಾಡಿದ್ದರಾ? ಗೊತ್ತಿಲ್ಲ. ಅದು ನನ್ನ ತಮಿಳು ಸಿನೆಮಾ ಅಭಿಯಾನದ ಆರಂಭ. ಒಂದಷ್ಟು ಸಿನೆಮಾ ನೋಡಿದೆ. ‘ಸರ್ವರ್ ಸುಂದರಮ್’ ನೋಡಿದೆ. ನಂತರ ಅದನ್ನು ಹಿಂದಿ ನಗೆ ನಟ ಮೆಹಮೂದ್ ಮಾಡಿದ. ಅದರಿಂದ ಕಥೆ ಪೂರ್ತಿ ಅರ್ಥವಾಯಿತೇ ಹೊರತು, ತಮಿಳಿನ original ಸಿನೆಮಾದಿಂದಾಗಿ ಅಲ್ಲ. ಅದರ ಮುಖ್ಯ ಪಾತ್ರಧಾರಿಯಾಗಿದ್ದು ನಗೆ ನಟ ತಾಯ್ ನಾಗೇಶ್ ಅಂತ ನೆನಪು. ಮುಂದೆ ನಾನು ನೋಡಿದ ಬಾಲಚಂದರ್ ಸಿನೆಮಾಗಳು ಅಂದರೆ ಅವುಗಳದೊಂದು ಪಟ್ಟಿಯೇ ಇದೆ. ಆ ಕಾಲದ ಸಾವುಕಾರ್ ಜಾನಕಿ, ರೇಖಾಳ ಅಪ್ಪ ಜೆಮಿನಿ ಗಣೇಶನ್, ಆವಾಗಿನ ಜಯಲಲಿತಾ- ಇವರನ್ನೆಲ್ಲ ಹಾಕಿಕೊಂಡು ಬಾಲಚಂದರ್ ಮಾಡಿದ ತಮಿಳು ಸಿನೆಮಾಗಳನ್ನು ನಾನು ನೋಡಿಲ್ಲ. ಅವೆಲ್ಲವೂ ನಾನು ಹುಟ್ಟಿ ನನಗೆ ಎರಡು ಮೂರು ವರ್ಷಗಳಾದ ಆಸುಪಾಸಿಗೆ ಬಂದ ಚಿತ್ರಗಳು. ಆದರೆ ಚೆನ್ನಾಗಿ ನೆನಪಿದೆ ನನಗೆ, ಅವರ ‘ಅರಂಗೇಟ್ರಮ್’ ಎಂಬ ಸಿನೆಮಾ. ಈ ವ್ಯಕ್ತಿಯ ಒಂದು ಗುಣವೆಂದರೆ, ಅವರು ಎಲ್ಲಿಂದಲೂ, ಯಾವುದರಿಂದಲೂ, ಏನನ್ನೂ ಕದಿಯುತ್ತಿರಲಿಲ್ಲ. ಅವರ ಸೃಷ್ಟಿಗಳೆಂದರೆ, ಎಲ್ಲವೂ fresh and original. ಹಾಗೇನೇ ಅವರ ಎಲ್ಲ ಚಿತ್ರಗಳೂ ಒಂದು ಕಾಂಪ್ಲೆಕ್ಸ್ ಕಥೆಯನ್ನು ಹೊಂದಿರುತ್ತಿದ್ದವು. ಒಂದು ಸಂಸಾರ, ಮನುಷ್ಯ ಸಂಬಂಧಿ ವಿಷಯಗಳು, ಆ ಕಾಲಕ್ಕೆ ತಕ್ಕಂತಹ ಸಮಸ್ಯೆಗಳು, ಹೆಣ್ಣಿನ ಗತಿಸ್ಥಿತಿ, ವಿಪರೀತದ ನಿರುದ್ಯೋಗ, ವೇಶ್ಯೆಯರ ಬದುಕು, ಅಸಾಧ್ಯ ಕಾಮಿಡಿ, ತುಂಬ ಗಂಭೀರ ರೀತಿಯ subjectನೊಂದಿಗೇ ಮಿಳಿತವಾಗಿರುತ್ತಿದ್ದ ಚೆಂದದ ಕಾಮಿಡಿ-ಹೀಗೆ ಅವರು ಸದಾಕಾಲಕ್ಕೂ fresh ಅನ್ನಿಸುವಂತಹ, ಮನಮುಟ್ಟುವಂತಹ ಚಿತ್ರಗಳನ್ನೇ ಮಾಡಿದರು. ಅವರ ಚಿತ್ರಗಳಲ್ಲಿ ಹೀರೋಯಿನ್ ಬಲಹೀನಳಲ್ಲ, She is bold, darling ಮತ್ತು ಸ್ವಾಭಿಮಾನಿ! ಪುಟ್ಟಣ್ಣ ಕಣಗಾಲರೂ ಹಾಗೇ ಸಿನೆಮಾಗಳನ್ನು ಮಾಡಿದರು. ಆದರೆ ಅವರದು ಕೊಂಚ ಆರ್ಭಟ ಜಾಸ್ತಿ. ವಿಪರೀತ emotional subject. ಗಮನಿಸಿ ನೋಡಿ: ‘ನಾಗರ ಹಾವು’ ಥರದ್ದವನ್ನು ತುಂಬ ಚೆನ್ನಾಗಿ ಮಾಡಿದರು. ಆದರೆ ಕಲ್ಪನಾಳ ಕೈಲಿ ಅದೆಷ್ಟು over acting ಮಾಡಿಸಿದರೋ ನೋಡಿ. Even ಆರತಿ. ಆಕೆಯಿಂದಲೂ over act ಮಾಡಿಸಿದರು. ಬಾಲಚಂದರ್ ಸಿನೆಮಾಗಳ ದುಃಖವಿದೆಯಲ್ಲ? ಅದು ಇಡೀ ಪ್ರಪಂಚದ ದುಃಖ. ಕಣಗಾಲರ ದುಃಖ ಅದು ಪರ್ಸನಲ್ ದುಃಖವಷ್ಟೇ ಅಲ್ಲ, ಇಡೀ ಪ್ರಪಂಚ ಅದನ್ನು ಅನುಭವಿಸಲೇಬೇಕು ಅಂತ ಹಟ ಹಿಡಿಯುವ ದುಃಖ.

ಇವತ್ತು ಮಾಳವಿಕಾ ಜೊತೆ ಮಾತಾಡಿದೆ. ಅವಳು ಬಾಲಚಂದರ್ ಅವರ ‘ಅಣ್ಣಿ’ ಚಿತ್ರದಲ್ಲಿ ನಟಿಸಿದಳು. ‘ಅಣ್ಣಿ’ ನಂತರ ಬಾಲಚಂದರ್ ಮತ್ಯಾವುದೇ ದೊಡ್ಡ projectಗೆ ಕೈ ಹಾಕಲಿಲ್ಲ. ಕೆಲ ಚಿತ್ರಗಳಿವೆ, ಅವರವು. ನೋಡಿದರೆ ಈ ಮನುಷ್ಯ ಪಕ್ಕಾ ಕಮ್ಯುನಿಸ್ಟಾ? ಅಂತ ಅನ್ನಿಸುತ್ತದೆ. ಅವರಿಗೆ ಅದೇನೂ ಇರಲಿಲ್ಲ. ಅವರು ಲೆಫ್ಟೂ ಅಲ್ಲ, ಕಮ್ಯುನಿಸ್ಟೂ ಅಲ್ಲ. ಆದರೆ ಕೆಲವು ಧಾರ್ಮಿಕ ನಂಬಿಕೆಗಳ ವಿರೋಧಿ. ಒಟ್ಟಾರೆ, ವ್ಯವಸ್ಥೆಯ ವಿರೋಧಿ. ಇದನ್ನೇನೋ ಮಾಡಿ ಇಡೀ ಸಮಾಜವನ್ನು ಸರಿಪಡಿಸಬೇಕು ಎಂಬ ತಹತಹ. ಆದರೆ ಒಮ್ಮೆ ಬೆಳಗಿನ ಜಾವ ಐದೂವರೆಗೆ ಹೋಗಿ ನೋಡಿ? ಅವರು ಆ ಹೊತ್ತಿನಲ್ಲೇ ಅವರಿವರನ್ನು ನೋಡುತ್ತಿದ್ದುದು. ನೋಡಿದರೆ, ಇಡೀ ಮುಖದ ತುಂಬ ವಿಭೂತಿ, ನಾಮ, ಕುಂಕುಮ. ಈ ತೆರನಾದ ವೈರುಧ್ಯಗಳು, contradictions ಅನೇಕರಲ್ಲಿರುತ್ತದೆ. Can't help. ಆದರೆ ಅವರು ಯಾವತ್ತಿದ್ದರೂ ಬದಲಾವಣೆಯ, ಶತಮಾನಗಳ ಮೌಢ್ಯಗಳ ಪಕ್ಕಾ ವಿರೋಧಿ. ಅವರ ಮೊದಲ ಚಿತ್ರದ ಹೆಸರೇ ‘ಎದುರ್ ನೀಚಲ್’. ಅಂದರೆ ಪ್ರವಾಹದ ವಿರುದ್ಧ ಈಜು. ಅವರ ಸಿನೆಮಾಗಳಿರುತ್ತಿದ್ದುದೂ ಅದೇ: ಪ್ರವಾಹದ ವಿರುದ್ಧದ ಈಜು.

ಕುಡಿಯುತ್ತಿರಲಿಲ್ಲ ಬಾಲಚಂದರ್. ಮೊದಲು ವಿಪರೀತ ಸಿಗರೇಟು ಸೇದುತ್ತಿದ್ದರು. ಮೊದಲ ಹೃದಯಾಘಾತ ನಂತರ ಬಿಟ್ಟುಬಿಟ್ಟರು. ಅವರಿಗೆ ಸರಿತಾ ಅಂದರೆ ಪ್ರೀತಿ, ನಟಿ ಗೀತಾ ಅಂದರೆ ಇಷ್ಟ. ಹಾಗಂತ ಸಿಕ್ಕ ಹೆಣ್ಣುಗಳ ಬೆನ್ನು ಬೀಳುತ್ತಿರಲಿಲ್ಲ. ಈ ಕನ್ನಡದ ಹಡಬೆಗಳಿವೆಯಲ್ಲ: ಓಂಪ್ರಕಾಶ್ ರಾವ್, ಗುರುದೇಶಪಾಂಡೆ-ಬಹುಶಃ ಬಾಲಚಂದರ್ ಅವರ ಕಾಲು ಇಡೀ ದಿನ ನೆಕ್ಕಿದರೂ, ಅದರಲ್ಲಿನ ಒಂದು ಪೈಸೆಯ ಸಂಸ್ಕಾರವೂ ಇವುಗಳಿಗೆ ಬರಲು ಸಾಧ್ಯವಿಲ್ಲ.
ಯಾಕೆ ಹೋಲಿಕೆ? ವಿಪರೀತ ಶಿಸ್ತಿನವರು ಬಾಲಚಂದರ್. ಅಂತೆಯೇ ತುಂಬ ಸಾತ್ವಿಕರು. ರಜನೀಕಾಂತ್, ಕಮಲಹಾಸನ್ ಇತ್ಯಾದಿ fat boys ಇದ್ದಾರಲ್ಲ. ಅವರನ್ನು ಬೆಳೆಸಿದವರೇ ಬಾಲಚಂದರ್ ಅನ್ನುತ್ತಾರೆ. Please believe me: ಅವರು ತಮಿಳು, ಕನ್ನಡ, ತೆಲುಗು, ಹಿಂದಿ ಮುಂತಾದ ಭಾಷೆಗಳಲ್ಲೆಲ್ಲ ಸಿನೆಮಾ ಮಾಡಿದರಲ್ಲ? ತೀರ ಕಡಿಮೆ ಅಂದರೂ ಅಂಥ ನೂರು ಜನ ನಟರನ್ನ, ಟೆಕ್ನೀಷಿಯನ್‌ಗಳನ್ನು ತೆರೆಗೆ ಪರಿಚಯಿಸಿದ್ದಾರೆ. ಆ listನಲ್ಲಿ ನಮ್ಮ ಪ್ರಕಾಶ್ ರೈ ಹೆಸರಿದೆ. ಬೆಳಿಗ್ಗೆ ಮಾಳವಿಕಾಗೆ ಫೋನ್ ಮಾಡಿದೆ: “ನನ್ನ ಗುರುಗಳು ರವೀ, ಅವರ ಪಾರ್ಥಿವ ಶರೀರದ ಮುಂದೆಯೇ ಇದ್ದೇನೆ" ಅಂದಳು. ಕನ್ನಡದ ರಮೇಶ್ ಅರವಿಂದ್ ಕೂಡ ಹೋಗಿದ್ದರಂತೆ. ಸರಿಯಾಗಿ ಎಣಿಸಿ ಒಂದೂವರೆ ನಿಮಿಷ ನಿಂತು, ನಾಪತ್ತೆಯಾದರು. ಪ್ರಕಾಶ ರೈ ಇದ್ದ. ರಜನೀಕಾಂತ್, ಕಮಲ್ ಇತ್ಯಾದಿ ಫಲಾನುಭವಿಗಳೆಲ್ಲ ಅಷ್ಟೆ.
ಆಯ್ತು ಬಿಡಿ, ಇದು ಬಾಲಚಂದರ್ ಅವರಿಗೆ ಗೊತ್ತೇನೂ ಆಗುವುದಿಲ್ಲ. ನಾವಷ್ಟೇ ಬೇಸರಪಡುತ್ತೇವೆ. ಆ ಬಾಲಚಂದಿರ ನಭದಿಂದ ಕಳಚಿಬಿದ್ದ. ಇನ್ನು ಹುಣ್ಣಿಮೆಯ ಮಾತು ದೂರ!

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 30 December, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books