Ravi Belagere
Welcome to my website
ಕೆಲವೊಮ್ಮೆ ಬಂಧುಗಳ, ಸ್ನೇಹಿತರ, ಪರಿಚಿತರ ಮನೆಗೆ ಹೋಗಲೇಬೇಕಾಗುತ್ತದೆ. ಎರಡು ದಿನದ ಮಟ್ಟಿಗೆ ಹೋಗಿದ್ದು ಬರುವುದಾದರೆ ಆ ಮಾತು ಬೇರೆ. ಆದರೆ ತಿಂಗಳುಗಟ್ಟಲೆ ಇರುವ ಪ್ರಸಂಗ ಬಂದರೆ? ನೀವು ಚಿಕ್ಕವರಾಗಿದ್ದಾಗ ಸಂಬಂಧಿಕರ ಮನೆಯಲ್ಲಿ, ಮತ್ಯಾವುದೋ ಕಾರಣಕ್ಕೆ ಒಂದಷ್ಟು ದಿನ ಇನ್ನೊಬ್ಬರ ಮನೆಯಲ್ಲಿ ಉಳಿದುಕೊಂಡ ಪ್ರಸಂಗವಿರಬಹುದು. ಆಗ ಮುಜುಗರ, ಸಂಕೋಚ, ಬೇಸರ ಎಲ್ಲವೂ ಆಗಿರಬಹುದು. ಯಾರಿಗೆ ಗೊತ್ತು? ನೀವು ಖುಷಿಯಿಂದಲೇ ಇದ್ದಿರಬಹುದು. ಹೀಗೆ ನಿಮ್ಮ ಅನುಭವಗಳನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ನಿಮ್ಮ ಫೊಟೋ ಜೊತೆ, ಚಿಕ್ಕದಾಗಿ ಮತ್ತು ಚೊಕ್ಕವಾಗಿ ಬರೆದು ಕಳಿಸಿ. ಈ ಮೇಲ್ ಮೂಲಕ ಕಳಿಸುವವರು [email protected] ಗೆ ಕಳಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಅಧಿವೇಶನದ ಹೆಸರಿನಲ್ಲಿ ಶುದ್ಧ ಯಲ್ಲಮ್ಮನ ಜಾತ್ರೆ!

ನಮ್ಮ ಜನಪ್ರತಿನಿಧಿಗಳಿಗೆ ಅದೇನು ರೋಗ ಬಡಿದಿದೆ? ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವಿಧಾನಮಂಡಲ ಅಧಿವೇಶನ ನಡೆಸುತ್ತೇವೆ ಅಂತ ಹೋಗಿ ವಿನಾಕಾರಣ ಟೈಮು ಕಳೆಯುತ್ತಿದ್ದಾರೆ. ಇಂತಹ ಅಧಿವೇಶನ ನಡೆಸುವ ಬದಲು ಸುಮ್ಮನೆ ತಮ್ಮ ತಮ್ಮ ಕ್ಷೇತ್ರಗಳಲ್ಲಿ ತಿರುಗಿ ಕೆಲಸ ಮಾಡಿದ್ದರೆ ಚೆನ್ನಾಗಿರುತ್ತಿತ್ತೇನೋ. ಆದರೆ ಕ್ಷೇತ್ರದಲ್ಲಿದ್ದರೆ ಹಲವು ಸಮಸ್ಯೆಗಳು ಕೇಳಿ ಬರುತ್ತವೆ. ಹೀಗಾಗಿ ಅಲ್ಲಿಂದ ತಪ್ಪಿಸಿಕೊಳ್ಳಲು ಇಂತಹ ಅಧಿವೇಶನಗಳು ನೆರವಾಗುತ್ತವೆ ಎಂಬ ಭಾವನೆ ಹಲವರಿಗಿದೆ.
ನಿಜ ಹೇಳಬೇಕೆಂದರೆ ಕಳೆದೊಂದು ದಶಕದಲ್ಲಿ ವಿಧಾನಮಂಡಲ ಅಧಿವೇಶನದ ಕಳೆಯೇ ಹೋಗಿಬಿಟ್ಟಿದೆ. ಎಸ್ಸೆಂ ಕೃಷ್ಣ ಮುಖ್ಯಮಂತ್ರಿಯಾಗಿದ್ದ ಕಾಲವೇ ಕೊನೆ. ಅದಾದ ನಂತರದ ದಿನಗಳಲ್ಲಿ ಅತ್ಯಂತ ಮಹತ್ವದ ಚರ್ಚೆ ನಡೆದು ರಾಜ್ಯದ ಯಾವುದಾದರೂ ಸಮಸ್ಯೆಯನ್ನು ಬಗೆಹರಿಸಿದ ಉದಾಹರಣೆ ಇದೆಯೇ? ರೈತರ ಬೆಳೆಗಳಿಗೆ ಬೆಂಬಲ ಬೆಲೆ ಕೊಡುವುದು ಅಥವಾ ಇನ್ನೇನೋ ಪರಿಹಾರವನ್ನು ಸರ್ಕಾರ ಸೂಚಿಸುವುದಕ್ಕೆ ವಿಧಾನಮಂಡಲ ಅಧಿವೇಶನವೇನೂ ನಡೆಯಬೇಕಿಲ್ಲ. ಒಂದು ಸರ್ಕಾರ ತನಗಿರುವ ಶಕ್ತಿಯಿಂದಲೇ ಆ ಕೆಲಸ ಮಾಡಬಹುದು. ಸಚಿವ ಸಂಪುಟ ಸಭೆಯಲ್ಲಿ ಒಂದು ತೀರ್ಮಾನ ತೆಗೆದುಕೊಂಡೋ, ಅಗತ್ಯ ಬಿದ್ದರೆ ಸುಗ್ರೀವಾಜ್ಞೆ ಹೊರಡಿಸಿಯೋ ನಿರ್ಧಾರ ತೆಗೆದುಕೊಳ್ಳಬಹುದು. ಇದಕ್ಕಾಗಿ ವಿಧಾನಮಂಡಲ ಅಧಿವೇಶನ ನಡೆಯುವುದೇನೂ ಬೇಕಾಗಿಲ್ಲ. ಯಾಕೆಂದರೆ ಒಂದು ದಿನದ ವಿಧಾನಮಂಡಲ ಅಧಿವೇಶನ ನಡೆಸುವುದಕ್ಕೆ ಹೆಚ್ಚು ಕಡಿಮೆ ಒಂದು ಕೋಟಿ ರುಪಾಯಿಗಳಷ್ಟು ಜನರ ತೆರಿಗೆ ಹಣ ವ್ಯಯವಾಗುತ್ತದೆ. ಇಷ್ಟು ಹಣ ವ್ಯಯವಾಗುತ್ತದೆ ಎಂದರೆ ಆಯ(ಗಳಿಕೆ)ವಾದರೂ ಇರಬೇಕಲ್ಲ? ಆದರೆ ಇತ್ತೀಚಿನ ದಿನಗಳಲ್ಲಿ ಆಯವೇ ಇಲ್ಲ, ಬರೀ ವ್ಯಯ ಮಾತ್ರ.

ಅಂದಹಾಗೆ ವಿಧಾನಸಭೆಯಲ್ಲಿ ಯಾರೋ ಮೊಬೈಲು ನೋಡಿದರು. ಅದಕ್ಕೇ ದೊಡ್ಡ ಕೂಗಾಟ, ಚೀರಾಟ. ಅರೇಸ್ಕೀ, ಇಂತಹ ವಿಷಯಗಳು ಗಮನಕ್ಕೆ ಬಂದರೆ ಸದನದ ಅಧ್ಯಕ್ಷರಿರುತ್ತಾರೆ, ಬಿಜಿನೆಸ್ ಅಡ್ವೈಸರಿ ಕಮಿಟಿ ಇರುತ್ತದೆ. ಅಲ್ಲಿ ಕೂತು ಚರ್ಚಿಸಿ. ಇನ್ನು ಮುಂದೆ ಈ ರೀತಿ ಮೊಬೈಲ್ ತರಕೂಡದು, ತಂದರೆ ಈ ಸದನದ ಅವಧಿಯಲ್ಲಿ ನಿಮ್ಮನ್ನು ಅಮಾನತುಗೊಳಿಸಬೇಕಾಗುತ್ತದೆ ಎಂದೋ, ಹೊರಗೆ ಕಳಿಸುತ್ತೇವೆ ಎಂದೋ ಹೇಳಬೇಕು. ಅದನ್ನು ಬಿಟ್ಟು ಜನ ಕಷ್ಟಪಟ್ಟು ತೆರಿಗೆ ಕೊಡುತ್ತಾರೆ ಎಂದು ರಾಜಕೀಯ ಮಾಡಲು ವಿಧಾನಮಂಡಲ ಅಧಿವೇಶನವನ್ನೇ ವೇದಿಕೆ ಮಾಡಿಕೊಂಡರೆ ಇದಕ್ಕಿಂತ ಅಸಹ್ಯದ ಸಂಗತಿ ಬೇರೆ ಇದೆಯೇ? ವಿಧಾನಮಂಡಲ ಇರುವುದು ರಾಜ್ಯದ ಹಿತ ಕಾಪಾಡಲು, ಜನರ ಹಿತ ರಕ್ಷಣೆಗೆ ಸಂಬಂಧಿಸಿದ ಕಾನೂನುಗಳನ್ನು ರೂಪಿಸಲು. ಆದರೆ ಆ ಕೆಲಸ ಮಾಡುವುದನ್ನು ಬಿಟ್ಟು ನೀನು ಕಳ್ಳ, ನೀನು ಕಳ್ಳ ಅನ್ನುತ್ತಾ ಕೂತರೆ ವಿಧಾನಮಂಡಲ ಅಧಿವೇಶನಕ್ಕೆ ಏನು ಅರ್ಥ? ಕ್ಯಾಪಿಟೇಶನ್ ಮಾಫಿಯಾ, ಲ್ಯಾಂಡ್ ಮಾಫಿಯಾ, ಶುಗರ್ ಮಾಫಿಯಾ ಸೇರಿದಂತೆ ಕೇವಲ ಮಾಫಿಯಾಗಳಿಗೆ ಅನುಕೂಲವಾಗುವ ಕೆಲಸ ಮಾಡುತ್ತಾ ಕೂತರೆ, ಈ ಕುರಿತು ಕೂಲಂಕಷ ಚರ್ಚೆಯನ್ನೂ ನಡೆಸದೆ ಪ್ರತಿಪಕ್ಷಗಳು ಗಲಭೆ ಮಾಡುವುದು, ಅವರ ಗಲಭೆಯ ಮಧ್ಯೆ ತಮಗೆ ಬೇಕಾದ ಕಾನೂನುಗಳನ್ನು ಸರ್ಕಾರ ಅಂಗೀಕಾರ ಮಾಡಿಸಿಕೊಳ್ಳುವುದು ನಡೆದರೆ ನಿಜವಾಗಿ ಜನರ ಕೆಲಸ ಆಗುವುದು ಹೇಗೆ?
ಒಂದು ಪ್ರತಿಪಕ್ಷ ಎಂದರೆ ಅದು ಸರ್ಕಾರಕ್ಕೆ ಕೌಂಟರ್ ಇದ್ದಂತೆ. ಪ್ರತಿಪಕ್ಷದ ನಾಯಕರಾಗಿರುವವರು ರಾಜ್ಯವ್ಯಾಪಿ ಪ್ರವಾಸ ಮಾಡಿ, ಜನರ ಕಷ್ಟಗಳು ಏನೇನು ಅಂತ ತಿಳಿದುಕೊಂಡು ಸದನಕ್ಕೆ ಬರಬೇಕು. ಆ ವಿಷಯವನ್ನು ಚರ್ಚೆಗಿಟ್ಟುಕೊಂಡು ಪರಿಹಾರ ಪಡೆಯಬೇಕು. ಒಂದು ಸರ್ಕಾರ ತನಗಿರುವ ಶಕ್ತಿಯಲ್ಲಿ ಎಲ್ಲವನ್ನೂ ಬಗೆಹರಿಸಲು ಸಾಧ್ಯವಿಲ್ಲ. ಆದರೆ ಇಂತಹದೊಂದು ಸಮಸ್ಯೆ ಇದೆ, ಅದನ್ನು ಪರಿಹರಿಸಲು ಏನು ಮಾಡಬೇಕು ಅನ್ನುವ ಕುರಿತಾದರೂ ಚರ್ಚೆ ನಡೆಯಬೇಕಲ್ಲ? ಹಿಂದೆ ಶಾಂತವೇರಿ ಗೋಪಾಲಗೌಡರಿಂದ ಹಿಡಿದು ಮಹಾನ್ ಮಹಾನ್ ನಾಯಕರು ವಿಧಾನಸಭೆ ಮತ್ತು ವಿಧಾನಪರಿಷತ್ತುಗಳಿಗೆ ಬರುತ್ತಿದ್ದರು. ಒಂದೊಂದು ಸಮಸ್ಯೆಯನ್ನೂ ಕಬ್ಬಿನ ಗಾಣದಲ್ಲಿ ಅರೆಯುವಂತೆ ಅರಿದು ಸರ್ಕಾರದಿಂದ ಅದಕ್ಕೆ ಪರಿಹಾರ ಕಂಡು ಹಿಡಿಯುತ್ತಿದ್ದರು. ಆದರೆ ಕಳೆದ ಒಂದು ದಶಕವನ್ನೇ ನೋಡಿ. ಯಾವಾಗ ಗಂಭೀರ ಚರ್ಚೆ ನಡೆದಿದೆ. ಯಡಿಯೂರಪ್ಪನವರ ಕಾಲದಲ್ಲಿ ಸದನ ಯಾವತ್ತೂ ನೆಟ್ಟಗೆ ನಡೆಯಲಿಲ್ಲ. ಯಾವಾಗ ನೋಡಿದರೂ ಹೋ, ಹಾ ಅಂತ ಕೂಗಾಡುವುದು, ಚೀರಾಡುವುದು, ಸದನವನ್ನು ಮುಂದೂಡಿ ಮನೆ ಕಡೆ ಹೋಗುವುದು ಇದೇ ಕೆಲಸ.
ಆನಂತರ ಬಂದ ಸದಾನಂದಗೌಡ ಹಾಗೂ ಜಗದೀಶ್ ಶೆಟ್ಟರ್ ಕಾಲದಲ್ಲಿ ಸ್ವಲ್ಪ ಮಟ್ಟಿನ ಚರ್ಚೆ ನಡೆದರೂ ಆ ಚರ್ಚೆಯಲ್ಲಿ ಶಕ್ತಿಯೇ ಇರಲಿಲ್ಲ. ಯಾವುದೇ ವಿಷಯ ಇರಲಿ, ಅದನ್ನು ಕೂಲಂಕಷವಾಗಿ ಅಧ್ಯಯನ ಮಾಡಿಕೊಂಡು ಬಂದು ಹೊಸ ಬೆಳಕು ಚೆಲ್ಲುವ ಕೆಲಸ ವಿಧಾನಸಭೆ ಹಾಗೂ ವಿಧಾನಪರಿಷತ್ ಸದಸ್ಯರಿಂದ ನಡೆಯಬೇಕು. ಆದರೆ ಪ್ರಭು ಚೌಹಾಣ್ ಅವರು ಸದನದಲ್ಲಿ ಕುಳಿತು ಮೊಬೈಲ್ ನೋಡಿದರು ಎಂಬ ಕಾರಣಕ್ಕಾಗಿ, ಅಂಬರೀಷ್ ಮತ್ತು ಮಲ್ಲಿಕಾರ್ಜುನ್ ಕೂಡ ಅದೇ ಕೆಲಸ ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧವೂ ಕ್ರಮ ಕೈಗೊಳ್ಳಿ ಎಂದು ಕೂಗಾಟ. ಅರೇ, ಇವೆಲ್ಲ ಕಾಮನ್ ಸೆನ್ಸ್. ಮೊಬೈಲು, ಫೇಸ್ ಬುಕ್ಕು, ಟ್ವಿಟರ್ರು ಅಂತೆಲ್ಲ ಬಂದು ನಮ್ಮ ಮಕ್ಕಳೇ ಮಾತನಾಡುವುದನ್ನು ಕಡಿಮೆ ಮಾಡಿದ್ದಾರೆ. ಹೀಗಿರುವಾಗ ಅದಕ್ಕೆ ಅಡಿಕ್ಟ್ ಆದವರು ವಿಧಾನಮಂಡಲ ಅಧಿವೇಶನಕ್ಕೆ ಬಂದರೆ ಇನ್ನೇನು ಚರ್ಚೆ ಮಾಡುತ್ತಾರೆ? ಆದ್ದರಿಂದ ಬಿ.ಎ.ಸಿ. (ಬಿಜಿನೆಸ್ ಅಡ್ವೈಸರಿ ಕಮಿಟಿ) ಕೇವಲ ಮೊಬೈಲುಗಳನ್ನು ತರದಂತೆ ನಿಷೇಧಿಸಿದರೆ ಸಾಲುವುದಿಲ್ಲ. ಪ್ರತಿಯೊಬ್ಬ ಸದಸ್ಯರಿಗೂ ತಮ್ಮ ತಮ್ಮ ಕ್ಷೇತ್ರದ ಕುರಿತು ಚರ್ಚೆ ಮಾಡಲು ದಾರಿ ಮಾಡಿಕೊಡಬೇಕು.

ಇವತ್ತು ಕರ್ನಾಟಕದಲ್ಲಿ ಮಾತೃಭಾಷಾ ಶಿಕ್ಷಣ ಬೇಕು ಅಂತ ಸರ್ಕಾರ ಪಟ್ಟು ಹಿಡಿದು ಕುಳಿತರೆ ಸುಪ್ರೀಂ ಕೋರ್ಟ್, ಯಾವ ಭಾಷೆಯಲ್ಲಿ ಕಲಿಸಬೇಕು ಎಂಬುದನ್ನು ನಿರ್ಧರಿಸುವುದು ಪೋಷಕರ ಹಕ್ಕು ಎಂದು ಉಲ್ಟಾ ಹೊಡೆದಿದೆ. ಈ ಕುರಿತು ಸದನದಲ್ಲಿ ಚರ್ಚಿಸಬೇಕು. ಈ ಹಿಂದೆ ಗುಂಡೂರಾಯರ ಕಾಲದಲ್ಲಿ ಸ್ವಾಮೀಜಿಯೊಬ್ಬರು ಹೇಳಿದರು ಅಂತ ಸಂಸ್ಕೃತವನ್ನು ಪ್ರಥಮ ಭಾಷೆಯನ್ನಾಗಿ ಕಲಿಸಬೇಕು ಅಂತ ಸರ್ಕಾರ ಹೊರಟಿತಲ್ಲ? ಇದೇ ಉದ್ದೇಶಕ್ಕಾಗಿ ಅದು ಗೋಕಾಕ್ ಸಮಿತಿಯನ್ನು ರಚಿಸಿತು. ಆದರೆ ಗೋಕಾಕ್ ಸಮಿತಿ ರಾಜ್ಯದ ಉದ್ದಗಲಕ್ಕೂ ಸಂಚರಿಸಿ, ಕರ್ನಾಟಕದಲ್ಲಿ ಕನ್ನಡವೇ ಪ್ರಥಮ ಭಾಷೆಯಾಗಬೇಕು ಎಂದು ವರದಿ ನೀಡಿತು. ಆ ವರದಿಯನ್ನು ಜಾರಿಗೆ ತರಲು ಸರ್ಕಾರ ಹಿಂದೆ ಮುಂದೆ ನೋಡಿದಾಗ ದಂಗೆ ಶುರುವಾಯಿತು. ಕನ್ನಡವನ್ನು ಉಳಿಸಲು ಪಾಟೀಲ್ ಪುಟ್ಟಪ್ಪ ಅವರಂತಹ ಸೇನಾನಿಗಳು ಮೇಲೆದ್ದು ನಿಂತರು. ಗಂಗೂಬಾಯಿ ಹಾನಗಲ್ ಅವರಂತಹವರು ಅಕಾಡೆಮಿಯ ಅಧ್ಯಕ್ಷ ಸ್ಥಾನಕ್ಕೇ ರಾಜೀನಾಮೆ ಬಿಸಾಡಿ ಬಂದರು. ಹೇಳಿದರೆ ಅದೊಂದು ರೋಚಕ ತ್ಯಾಗದ ಕತೆ. ಮುಂದೆ ರಾಜ್‌ಕುಮಾರ್ ಅವರೂ ಈ ಚಳವಳಿಯಲ್ಲಿ ಧುಮುಕಿ ಗೋಕಾಕ್ ವರದಿ ಜಾರಿಗೆ ತರುತ್ತೇವೆ ಎಂದು ಸರ್ಕಾರ ಹೇಳುವಂತೆ ಮಾಡಿದರು. ಇವರೆಲ್ಲ ಬೆಳಗಾವಿಗೆ ಹೋಗಿದ್ದಾರಲ್ಲ? ಅದೇ ಊರಿನ ಪಕ್ಕ ನಡೆದಾಡುವ ವಿಶ್ವಕೋಶ ಎಂದೇ ಹೆಸರಾಗಿರುವ ಪಾಟೀಲ ಪುಟ್ಟಪ್ಪ ಇದ್ದಾರೆ. ಕನ್ನಡಕ್ಕಾಗಿ ಅವತ್ತು ಏನೇನ್ನೆಲ್ಲ ಹೋರಾಟ ನಡೆಸಬೇಕಾಯಿತು, ಏನೇನು ತ್ಯಾಗ ಮಾಡಬೇಕಾಯಿತು ಎಂಬುದನ್ನು ನಮ್ಮ ಜನಪ್ರತಿನಿಧಿಗಳು ಅವರ ಬಳಿ ಹೋಗಿ ಕೇಳಿಕೊಂಡು ಬರಲಿ.

ಇದೇ ರೀತಿ ಕಬ್ಬು ಬೆಳೆಗಾರರ ಸಮಸ್ಯೆ, ಶುಗರ್ ಲಾಬಿ ಎಂಬುದು ಕಾಂಗ್ರೆಸ್ ಹಾಗೂ ಬಿಜೆಪಿಯನ್ನೇ ಆವರಿಸಿದೆಯಲ್ಲ? ಬಿಜೆಪಿಯಲ್ಲಿರುವ ಒಬ್ಬ ಮಾಜಿ ಮಂತ್ರಿ ತನ್ನ ಕಾರ್ಖಾನೆಯಿಂದಲೇ ರೈತರಿಗೆ ತೊಂಬತ್ತು ಕೋಟಿ ರುಪಾಯಿ ಬಾಕಿ ಕೊಡಬೇಕು. ಆದರೆ ಆ ಪುಣ್ಯಾತ್ಮ ರೈತರಿಗೆ ನ್ಯಾಯ ಕೊಡಿಸಬೇಕು. ಹೋರಾಟಕ್ಕೆ ಬನ್ನಿ ಎಂದು ಮುಧೋಳದಂತಹ ಊರಿಗೆ ಹೋಗಿ ಜನರನ್ನು ಆಹ್ವಾನಿಸುತ್ತಾನೆ. ಇದಕ್ಕಿಂತ ಅಸಹ್ಯ ಏನಾದರೂ ಇದೆಯೇ? ಇದೇ ರೀತಿ ಅಕ್ರಮ ಭೂ ಒತ್ತುವರಿ ಪ್ರಕರಣ ಇರಬಹುದು. ಕೆರೆಗಳ ಅತಿಕ್ರಮಣದ ವಿಷಯವೇ ಇರಬಹುದು. ರೈತರು ಅನುಭವಿಸುತ್ತಿರುವ ಸಂಕಷ್ಟಗಳೇ ಇರಬಹುದು. ಓದುತ್ತಿರುವ ಮಕ್ಕಳಿಗೆ ಕ್ಯಾಪಿಟೇಶನ್ ಲಾಬಿಯ ಮೂಲಕ ಆಗುತ್ತಿರುವ ಅನ್ಯಾಯವೇ ಇರಬಹುದು. ಈ ಎಲ್ಲ ಅಂಶಗಳ ಕುರಿತು ಚರ್ಚೆ ನಡೆಯಬೇಕಲ್ಲವೇ? ಆದರೆ ನೆಟ್ಟಗೆ ಚರ್ಚೆಯನ್ನೇ ಮಾಡದೆ ಪರಸ್ಪರರು ಬೈದಾಡಿಕೊಂಡು ಕುಳಿತರೆ ಜನರ ತೆರಿಗೆ ದುಡ್ಡು ಹಾಳು ಮಾಡಿದಂತಲ್ಲವೇ? ಯಾರದೋ ದುಡ್ಡು, ಎಲ್ಲಮ್ಮನ ಜಾತ್ರೆ ಅನ್ನುವುದು ಇಂತಹ ಕಾರಣಕ್ಕಾಗಿಯೇ.

ಕೇಂದ್ರ ಸರ್ಕಾರ ಒಂದು ಆದೇಶ ಹೊರಡಿಸಿ, ಅರಣ್ಯದ ಸ್ವರೂಪ ಇರುವ ಭೂಮಿಯೆಲ್ಲ ಡೀಮ್ಡ್ ಅರಣ್ಯ ಎಂದು ಹೇಳಿದೆ. ಈ ಕುರಿತು ಸರ್ವೇ ನಡೆಸಿ ವರದಿ ನೀಡಬೇಕು. ಇದರ ಕತೆ ಏನಾಗಿದೆ ಅಂತ ಕೇಳಬೇಕಲ್ಲ? ಯಾಕೆಂದರೆ ರಾಜ್ಯದಲ್ಲಿ ಡೀಮ್ಡ್ ಅರಣ್ಯ ಅಂತ ಗುರುತಿಸಿರುವ ಪ್ರದೇಶದ ಗಾತ್ರ ಹನ್ನೊಂದು ಲಕ್ಷ ಎಕರೆಗೂ ಜಾಸ್ತಿ. ಈಗೀಗ ಸುಪ್ರೀಂ ಕೋರ್ಟ್ ಕೊಟ್ಟಿರುವ ತೀರ್ಪಿನ ಹಿನ್ನೆಲೆಯಲ್ಲಿ ಅಸಂಖ್ಯಾತ ಜನ ಸಮಸ್ಯೆಗೆ ಗುರಿಯಾಗಿದ್ದಾರೆ. ಅವರ ಕತೆ ಕೇಳುವವವರು ಯಾರು? ಹೇಳುತ್ತಾ ಹೋದರೆ ನೂರಾ ಎಂಟು ವಿಷಯಗಳಿವೆ. ಆದರೆ ನಮ್ಮ ಜನಪ್ರತಿನಿಧಿಗಳಿಗೆ ಚರ್ಚೆ ಮಾಡುವ ಆಸಕ್ತಿಯೇ ಇಲ್ಲ. ಬದಲಿಗೆ ರಾಜಕೀಯ ಲಾಭ ಪಡೆಯುವುದನ್ನು ಬಿಟ್ಟರೆ ಜನಪರ ಚಿಂತನೆಗಳೇ ಕಡಿಮೆಯಾಗಿ ಹೋಗಿದೆ. ಜನರ ಕಷ್ಟ ಯಾವತ್ತೂ ಇದ್ದಿದ್ದೇ. ಅದನ್ನು ಪರಿಹರಿಸಿದರೂ ಅಷ್ಟೇ, ಬಿಟ್ಟರೂ ಅಷ್ಟೇ ಎಂಬ ಉದಾಸೀನ ಜನಪ್ರತಿನಿಧಿಗಳಲ್ಲೇ ಕಾಣಿಸಿದರೆ ಏನನ್ನಬೇಕು?

ಯಾವುದೇ ವಿಧಾನಮಂಡಲ ಅಧಿವೇಶನ ಮುಗಿದಾಗ, ಮುಂದಿನ ಅಧಿವೇಶನದ ಒಳಗಾಗಿ ಪ್ರತಿಯೊಬ್ಬ ಜನಪ್ರತಿನಿಧಿ ತನ್ನ ಕ್ಷೇತ್ರದಲ್ಲಿ ಪರಿಹಾರವಾಗದೇ ಉಳಿದಿರುವ ಸಮಸ್ಯೆ ಏನು ಅನ್ನುವುದನ್ನು ಕಂಡುಕೊಳ್ಳಬೇಕು. ಅದೇ ರೀತಿ ಪರಿಹಾರವಾಗುವಂತಹ ಸಣ್ಣಪುಟ್ಟ ಸಮಸ್ಯೆಗಳಿದ್ದರೆ ತಕ್ಷಣ ಪರಿಹರಿಸಬೇಕು. ಕಷ್ಟ ಅಂದಾಗ ಸೀದಾ ವಿಧಾನಮಂಡಲ ಅಧಿವೇಶನದಲ್ಲಿ ಮಾತನಾಡಿ ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕು. ಅದ್ಯಾವುದನ್ನೂ ಮಾಡದೆ ಯಾರೋ ಮೊಬೈಲ್ ಫೋನಿನಲ್ಲಿ ಏನೋ ನೋಡುವುದು, ಇನ್ಯಾರೋ ಅದನ್ನೇ ಎತ್ತಿ ಮಾತನಾಡುವುದು ಇವೆಲ್ಲ ನೋಡುವವರಿಗೆ ಹೇಸಿಗೆ ಹುಟ್ಟಿಸುವ ಸಂಗತಿಗಳು. ಇಂತಹ ಘಟನೆಗಳಿಗೆ ಬ್ರೇಕ್ ಹಾಕಿ ಮೊದಲು ರಾಜ್ಯದ ಎಲ್ಲ ಸ್ತರದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ದೇಗುಲವಾಗಿ ವಿಧಾನಸೌಧ, ಸುವರ್ಣ ವಿಧಾನಸೌಧ ರೂಪುಗೊಳ್ಳಬೇಕು. ಇಂತಹ ವಾತಾವರಣವನ್ನು ನಿರ್ಮಿಸದೇ ಹೋದರೆ ಜನಪ್ರತಿನಿಧಿಗಳು ಬರೀ ತಪ್ಪು ಮಾಡುವುದಿಲ್ಲ. ಮುಂದಿನ ಪೀಳಿಗೆಗೆ ಕೆಟ್ಟ ಸಂಪ್ರದಾಯವನ್ನು ಉಳಿಸಿ ಹೋಗುತ್ತಾರೆ.

ನೈಸರ್ಗಿಕ ನಿಯಮ ಎಂದರೆ, ನಾವು ನಮ್ಮ ಮುಂದಿನ ಪೀಳಿಗೆಗೆ ಒಳ್ಳೆಯದನ್ನು ಬಿಟ್ಟು ಹೋಗಬೇಕು. ಕೆಟ್ಟದನ್ನು ಬಿಟ್ಟು ಹೋದರೆ ಅದನ್ನು ಸರಿಪಡಿಸಿಕೊಳ್ಳಲು ಅವರು ಬಹಳ ವರ್ಷ ಒದ್ದಾಡಬೇಕಾಗುತ್ತದೆ. ಅವರ ಮನೆಯ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆದರೆ ಸುಮ್ಮನಿರುತ್ತಾರಾ, ಇವರ ಮನೆಯ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಸಿದರೆ ಸುಮ್ಮನಿರುತ್ತಾರಾ ಅಂತ ವೀರಾವೇಶದಿಂದ ಕೂಗುವವರು ತಾವು ಮುಂದಿನ ಪೀಳಿಗೆಗಾಗಿ ಏನನ್ನು ಉಳಿಸಿ ಹೋಗುತ್ತೇವೆ ಅನ್ನುವ ಬಗೆಗೂ ಯೋಚಿಸಬೇಕಲ್ಲವೇ?

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 22 December, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books