Ravi Belagere
Welcome to my website
ಕೆಲವೊಮ್ಮೆ ಬಂಧುಗಳ, ಸ್ನೇಹಿತರ, ಪರಿಚಿತರ ಮನೆಗೆ ಹೋಗಲೇಬೇಕಾಗುತ್ತದೆ. ಎರಡು ದಿನದ ಮಟ್ಟಿಗೆ ಹೋಗಿದ್ದು ಬರುವುದಾದರೆ ಆ ಮಾತು ಬೇರೆ. ಆದರೆ ತಿಂಗಳುಗಟ್ಟಲೆ ಇರುವ ಪ್ರಸಂಗ ಬಂದರೆ? ನೀವು ಚಿಕ್ಕವರಾಗಿದ್ದಾಗ ಸಂಬಂಧಿಕರ ಮನೆಯಲ್ಲಿ, ಮತ್ಯಾವುದೋ ಕಾರಣಕ್ಕೆ ಒಂದಷ್ಟು ದಿನ ಇನ್ನೊಬ್ಬರ ಮನೆಯಲ್ಲಿ ಉಳಿದುಕೊಂಡ ಪ್ರಸಂಗವಿರಬಹುದು. ಆಗ ಮುಜುಗರ, ಸಂಕೋಚ, ಬೇಸರ ಎಲ್ಲವೂ ಆಗಿರಬಹುದು. ಯಾರಿಗೆ ಗೊತ್ತು? ನೀವು ಖುಷಿಯಿಂದಲೇ ಇದ್ದಿರಬಹುದು. ಹೀಗೆ ನಿಮ್ಮ ಅನುಭವಗಳನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ನಿಮ್ಮ ಫೊಟೋ ಜೊತೆ, ಚಿಕ್ಕದಾಗಿ ಮತ್ತು ಚೊಕ್ಕವಾಗಿ ಬರೆದು ಕಳಿಸಿ. ಈ ಮೇಲ್ ಮೂಲಕ ಕಳಿಸುವವರು [email protected] ಗೆ ಕಳಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಅವತ್ತು ಅವರು ರೇಗಿದ್ದು ಕೂಡ ನಂಗೆ ನಗು ತರಿಸಿತ್ತು!

ರತ್ನಮಾಲಾ ಪ್ರಕಾಶ್.
ನನ್ನ ಹತ್ತಿರದ ಸೀಟಿನಲ್ಲೇ ಅವರು ಕುಳಿತಿದ್ದರು. ವಿಮಾನ ಸಿಂಗಪೂರ್‌ಗೆ ಹೊರಟಿತ್ತು. ಅಲ್ಲಿ ‘ಎಂದೂ ಮರೆಯದ ಹಾಡು’ ತರಹದ ಒಂದು ಕಾರ್ಯಕ್ರಮ. ಅವರೆಲ್ಲ ಅಂದರೆ ರತ್ನಮಾಲಾ, ಮಾಲತಿ, ಜೋಗಿ ಖ್ಯಾತಿಯ ಸುನೀತ, ನಮ್ಮ ಎಂ.ಆರ್.ಕಮಲಾ, ಅವರ ಮಗಳು ಸ್ಪರ್ಶ, ಕೃಷ್ಣ ಮುಂತಾದವರೆಲ್ಲ ಸೇರಿ ಎರಡು ದಿನ ಹಾಡೋದು, ಅದಕ್ಕೆ ಪ್ರತೀ ಹಾಡಿನ ಮಧ್ಯೆ ನಾನು ಮಾತನಾಡುತ್ತ ಹೋಗೋದು: ಹಾಗೊಂದು ಕಾರ್ಯಕ್ರಮ. ನನಗೆ ಸಿಂಗಪೂರ್ ಹೊಸದೂ ಅಲ್ಲ: ಹಾಗೆಲ್ಲ ಫಾರಿನ್ನಿಗೆ ಯಾರದೋ ಖರ್ಚಿನಲ್ಲಿ ಹೋಗುವ ಚಟವೂ ನನಗಿಲ್ಲ. “ನೀವು ಹೋಗ್ತಿಲ್ಲವಾ? ತುಂಬ ಜನ ಹೊರಟಿದ್ದಾರೆ ಅಮೆರಿಕದ ‘ಅಕ್ಕ’ ಸಮ್ಮೇಳನಕ್ಕೆ. ನೀವೂ ಹೋಗ್ತಿದೀರೇನೋ ಅಂದುಕೊಂಡೆ" ಅಂತ ಸ್ನೇಹಿತರ‍್ಯಾರೋ ಕೇಳುತ್ತಿದ್ದರು. “ಅದು ಲಾಸ್ಟ್ ರೆಸಾರ್ಟ್!" ಅನ್ನುತ್ತಾ ನಕ್ಕೆ. “ನಾನು ಹೋಗಬೇಕು ಅಂದುಕೊಂಡಿರುವ ದೇಶಗಳ ಪಟ್ಟಿ ಇದೆಯಲ್ಲ? ಅದರಲ್ಲಿ ಕಟ್ಟಕಡೆಯ ದೇಶ ಅಂತ ಇರೋದು ಅಮೆರಿಕ" ಅಂತಲೂ ಅಂದೆ. ನಿಮಗೆ ಹಿಂದೆಂದೋ ಹೇಳಬೇಕು ಅಂದುಕೊಂಡಿದ್ದೆ. ಹೇಳಿದೆನೋ ಇಲ್ಲವೋ ಗೊತ್ತಿಲ್ಲ. “ಹೀಗೇ ದೇಶ ದೇಶ ತಿರುಗುತ್ತಾ ಇರೋಣ. ಕೊನೆಗೆ ಸ್ಮಶಾನಕ್ಕೆ ಹಗಿ ನೆಲಕ್ಕೆ ತಲೆಯೂರುತ್ತೀವಲ್ಲ, ಅಷ್ಟರೊಳಗಾಗಿ ನೂರು ದೇಶ ನೋಡಿರಬೇಕು" ಎಂಬುದು ನಾನು ಮತ್ತು ಜರ್ಮನಿಯಲ್ಲಿ ನೆಲೆಗೊಂಡಿರುವ ದತ್ತಾ ಹೆಗಡೆ ಮಾಡಿಕೊಂಡಿರುವ ಒಪ್ಪಂದ. “Hit hundred countries before you hit the grave!" ಇದು ಇಡೀ ಪ್ಲಾನ್‌ನ ಹಿಂದಿರುವ ಘೋಷವಾಕ್ಯ. ಹೀಗೆಲ್ಲ ಅಂದುಕೊಳ್ಳೋದೂ, ಅವಕಾಶ ಸಿಕ್ಕಿದ ತಕ್ಷಣ ಹೊರಟು ಬಿಡೋದೂ-ಇವು ನನ್ನ ಆರೋಗ್ಯವಂತ ತಿಕ್ಕಲುಗಳ ಪೈಕಿ ಕೆಲವು. ನನ್ನ ಹೆಂಡತಿ-ಮಕ್ಕಳು “ಅದೇನು ತಿರುಗಿ ತಿಪ್ಪರಲಾಗ ಹಾಕ್ತೀಯೋ ಹಾಕು ಅತ್ಲಾಗೆ" ಎಂಬಂತೆ ಸುಮ್ಮನಾಗಿ ಬಿಟ್ಟಿದ್ದಾರೆ. ಅಮೆರಿಕಕ್ಕೆ ಹೋಗಲು ನನಗೆ ದಾರಿಗಳು ಮತ್ತು ಕಾರಣಗಳು-ಎರಡೂ ಇವೆ. ನನ್ನ ಮೈಸೂರಿನ ಅಣ್ಣನ ಮಗ ಮನೋಹರ ಅಲ್ಲಿದ್ದಾನೆ. ನಾವು ಓರಗೆಯವರು ಮತ್ತು ಜೊತೆ ಜೊತೆಯಾಗಿ ಬೆಳೆದವರು. ಚಿಕ್ಕಂದಿನಲ್ಲಿ ನಾವು ಸದಾ ಜೊತೆಯಲ್ಲಿರುತ್ತಿದ್ದೆವು. ಆತ್ಮೀಯತೆಯೂ ಇತ್ತು. ಅದೇನು ತಂತು ತುಂಡಾಯಿತೋ, ಯಾವಾಗ ಆಯಿತೋ-ಗೊತ್ತಿಲ್ಲ. ಒಂಥರಾ ಅವನು stiff ಆಗಿಬಿಟ್ಟ. ಮಾತನಾಡುವುದಕ್ಕೂ ಅವನು ತೂಕ ಹಾಕಿ ಮಾತನಾಡತೊಡಗಿದ.“To hell with you" ಅಂದುಕೊಂಡು ನಾನೂ ಸುಮ್ಮನಾದೆ. ಇದು ನಿನ್ನೆ ಮೊನ್ನೆಯ ಮಾತಲ್ಲ. ಮನೋಹರನ ಮುಖ ನೋಡಿ ದಶಕಗಳೇ ಆಗಿವೆ. ಆದರೆ ಅಮೆರಿಕದ ಉದ್ದಗಲಕ್ಕೂ ಗೆಳೆಯರು, ಗೆಳತಿಯರು ಇದ್ದಾರೆ. ಈಗ್ಗೆ ಒಂದೆರಡು ವರ್ಷಗಳ ಹಿಂದೆ ನನ್ನ ಗೆಳತಿಯೊಬ್ಬಳು ಫೋನ್ ಮಾಡಿದ್ದಳು. ಇದ್ದಕ್ಕಿದ್ದಂತೆ ಆಕೆಯ ಯಜಮಾನರಿಗೆ ಖಾಯಿಲೆ. ಈಕೆಗೆ ಭಯಂಕರ ಧಾವಂತ, ಗಾಬರಿ, ಅನಿಶ್ಚಿತಭಾವ. “ನೋಡೂ, ನನಗೆ ಅಮೆರಿಕ ಹೊಸತು. ವಿಮಾನ ಇಳಿಯುತ್ತಿದ್ದಂತೆಯೇ ನೀನು ಬಂದು ಕರೆದುಕೊಂಡು ಹೋಗಬೇಕು ನಿನ್ನ ಮನೆಗೆ. ಅಷ್ಟು ಸಾಕು. ಪತ್ರಿಕೋದ್ಯಮವೆಂಬುದು ಮೊದಲಿನಂತಿಲ್ಲ. ಎಷ್ಟು ಸಾವಿರ ಕಿಲೋಮೀಟರು ದೂರ ಕುಳಿತರೂ, ಅಲ್ಲಿ ಕುಳಿತೇ ಪತ್ರಿಕೆ ಮಾಡಬಹುದು. ನಾನು ಬಂದು ನಿನ್ನ ಮನೆಯಲ್ಲಿರುತ್ತೇನೆ. I will be useful to you. ತುಂಬ ಅಲ್ಲದಿದ್ದರೂ, ಕಲಿತಿರುವ ಕೆಲವು ಅಡುಗೆಗಳನ್ನೇ ತುಂಬ ಚೆನ್ನಾಗಿ ಮಾಡುತ್ತೇನೆ. ನಿನ್ನ ತಲೆ ತಿನ್ನುವುದಿಲ್ಲ. ಮೊದಲಿನಂತೆ ಕುಡಿಯುವುದಿಲ್ಲ. ನನಗೆ ನಿನ್ನ ಮಡಿ-ಮೈಲಿಗೆ ಅರ್ಥವಾಗುತ್ತವೆ. ಮನೆ ಮಂದಿಗೆಲ್ಲ first class ಅಡುಗೆ ಮಾಡಿ ಬಡಿಸುತ್ತೇನೆ. ನಿನ್ನ ಮನೆಯವರಿಗೆ ಚಿಕ್ಕಪುಟ್ಟ ಸೇವೆ ಮಾಡೋದು ನಂಗೆ ಬರುತ್ತೆ. ಗಂಡಸರಿಗೆ ಇನ್ನೊಬ್ಬ ಗಂಡಸಿನಿಂದ ಸೇವೆ ಮಾಡಿಸಿಕೊಳ್ಳುವುದು ಕಷ್ಟವೇನಲ್ಲ. I can be a good nurse. ಯಾವಾಗ ವಿಮಾನ ಹತ್ತು ಅಂತೀಯೋ ಅನ್ನು. ನಾನು ಬರ‍್ತೀನಿ" ಅಂದಿದ್ದೆ. ಹೋಗಲಿಕ್ಕೆ ನಿಜಕ್ಕೂ ಸಿದ್ಧನಿದ್ದೆ. ಅಷ್ಟರಲ್ಲಿ ಆಕೆಯ ಯಜಮಾನರು ಒಂದು ಪವಾಡವೋ ಎಂಬಂತೆ ಪೂರ್ತಿ ಖಾಯಿಲೆ ಬಿಟ್ಟು ಹೋಗಿ ಎದ್ದು ಓಡಾಡತೊಡಗಿದರು. ಈ ತರಹದ ಆತ್ಮೀಯ ಬಂಧಗಳು ನನಗೆ ಅಲ್ಲಿ ಅನೇಕವಿವೆ. ಆದರೆ ನಾನಾಗಿ ಹೋಗಿ, ಅಲ್ಲಿ ಡಿಂಗ್-ಡಾಂಗ್ ಮಾಡಲಿಕ್ಕೆ ನಾನು ಒಲ್ಲೆ. ಅವೆಲ್ಲವನ್ನೂ ಇಲ್ಲೇ ಮಾಡಬಲ್ಲೆ. ಆದರೆ ನನಗೆ ಕುಪ್ಪಳಿಸಿಕೊಂಡು ಹೋಗಿ ನೋಡಲಿಕ್ಕೆ ಅನೇಕ ದೇಶಗಳಿವೆ. ಈಜಿಪ್ಟ್ ಇದೆ. ಲೆಬನಾನ್, ಕಾಂಬೋಡಿಯಾ, ಬಾಂಗ್ಲಾದೇಶ, ಸೈಪ್ರಸ್, ಟರ್ಕಿ, ಸಿರಿಯಾ-ಹೀಗೆ ಸಾಲು ಸಾಲು ದೇಶಗಳಿವೆ. ಅಲ್ಲಿಗೆ ಯಾರೂ ಹೆಚ್ಚಾಗಿ ಹೋಗುವುದಿಲ್ಲ. ಅಮೆರಿಕದ ಹಂಗು ನನಗ್ಯಾಕೆ? ತೀರ ವಯಸ್ಸಾಗಿ, ಈಗಿರುವ ಖಾಯಿಲೆಗಳೇ ಅತಿರೇಕಕ್ಕೆ ಹೋದ ಮೇಲೆ ಮಕ್ಕಳು ಅಮೆರಿಕಕ್ಕೆ ಕರೆದುಕೊಂಡು ಹೋಗುವುದಿಲ್ಲವೆ? ಈಗ ಹೋಗಿ, ನನ್ನ ರೊಕ್ಕ ನಾನ್ಯಾಕೆ ಖರ್ಚು ಮಾಡಲಿ? ಅಲ್ವಾ?

ಹ್ಞಾಂ, ಸಿಂಗಪೂರ್ ಅಂದೆನಲ್ಲ? ಆ ಪ್ರಯಾಣದಲ್ಲಿ ರತ್ನಮಾಲಾ ನನಗೊಂದು ವಿಷಯ ಹೇಳಿದರು. ಅದು ಅಡಿಗರ ನಿರ್ಗಮನದ ಘಳಿಗೆಗೆ ಸಂಬಂಧಿಸಿದ್ದು. ಗೋಪಾಲಕೃಷ್ಣ ಅಡಿಗರು ತೀರಿಕೊಂಡಾಗ ನಾನಿನ್ನೂ ಬೆಂಗಳೂರಿಗೆ ಬಂದಿರಲಿಲ್ಲ. ಈಗಿನಂತೆ ಅದು ಮೊಬೈಲ್‌ಗಳ ಕಾಲವೂ ಅಲ್ಲ. ಮನೆಯಲ್ಲಿ ಲ್ಯಾಂಡ್ ಫೋನ್ ಇಟ್ಟುಕೊಳ್ಳುವಷ್ಟು ನನ್ನಲ್ಲಿ ಹಣವಿರಲಿಲ್ಲ. ಅದರ ಅವಶ್ಯಕತೆಯೂ ಇರಲಿಲ್ಲ. ಹೀಗೆ ಯಾರಾದರೂ ತೀರಿಕೊಂಡರೆ ನಾವು ಮರುದಿನದ ಪತ್ರಿಕೆಯಲ್ಲಿ ಓದಿಕೊಂಡೇ ತಿಳಿದುಕೊಳ್ಳಬೇಕು.


“ಅಡಿಗರು ತೀರಿಕೊಂಡ ಬಗ್ಗೆ ಮಾತಾಡ್ತಿದ್ದೆವಲ್ಲ? ನನಗೆ ಅದನ್ನು ಮರಿಯೋಕೆ ಸಾಧ್ಯವೇ ಇಲ್ಲ. ಅವರ ಮನೆ ಇದಿರು ಅಡಿಗರ ಶವ ಇರಿಸಿದ್ದರು. ತುಂಬ ಜನ ಸಾಹಿತಿಗಳು ಬಂದಿದ್ದರು. ಆಗ ನಾನು ಹೋದೆ. ಅವರ ಪಾರ್ಥಿವ ಶರೀರದ ಪಕ್ಕದಲ್ಲೇ ಕುಳಿತೆ. ಬೇರೆ ಯಾವುದೂ ಅಲ್ಲ: ಅವರ ಯಾವ ಮೋಹನ ಮುರಲಿ ಕರೆಯಿತೋ ಭಾವಗೀತೆಯನ್ನು ತುಂಬ ತನ್ಮಯಳಾಗಿ ಹಾಡಿದೆ. ನಂಗೆ ಅಂಥದೊಂದು ಅವಕಾಶ ಸಿಕ್ಕಿತಲ್ಲ? ಅದ್ಯಾವುದೋ ಧನ್ಯತಾ ಭಾವ" ಅಂದರು ರತ್ನಮಾಲಾ. ಒಬ್ಬ ಗಾಯಕಿಯ ಜೀವನದಲ್ಲಿ ಈ ತೆರನಾದ ಘಟನೆಗಳು ತುಂಬ ನಡೆಯುವುದಿಲ್ಲ. ರತ್ನಮಾಲಾ ಅಂದರೆ ನಂಗೆ ತುಂಬ ಇಷ್ಟ, ಗೌರವ. ಭಾವಗೀತ ಗಾಯನದ ವಿಷಯಕ್ಕೆ ಬಂದೆ, I rate her very high. ಮೊನ್ನೆ ಮೊನ್ನೆ ಅದೊಂದು ಸಂಜೆ ಅವರಿಗೆ ಫೋನ್ ಮಾಡಿ, “ಲಲಿತಾ ಇಲ್ಲೇ ಪಕ್ಕದಲ್ಲಿದ್ದಾಳೆ. ಇವತ್ತು ನಮ್ಮ ಮದುವೆಯ ಹಬ್ಬ. ಅವಳಿಗೊಂದು ಸಂಭ್ರಮದ ಕೊಡುಗೆ ಕೊಡಬೇಕು. ನೀವು ದಯವಿಟ್ಟು ಕವಿ ನರಸಿಂಹಸ್ವಾಮಿಗಳ ಒಂದು ಗೀತೆಯನ್ನು ಹೀಗೇ ಫೋನ್‌ನಲ್ಲೇ ಹಾಡ್ತೀರಾ? please. ನಾಲ್ಕೇ ನಾಲ್ಕು ಸಾಲು ಹಾಡಿದರೂ ಸಾಕು" ಅಂದೆ. ರತ್ನಮಾಲಾ instant ಆಗಿ ಹಾಡಿದರು.ಲಲಿತಳ ಮುಖ ಸೂರ್ಯ ಪಾನದ ಹೂವಿನಷ್ಟು ಅಗಲ. ಹೇಳಿದೆನಲ್ಲ? ನನಗೆ ರತ್ನಮಾಲಾ ಅಂದರೆ ತುಂಬ ಇಷ್ಟ. ಬಹುಶಃ ನರಸಿಂಹ ಸ್ವಾಮಿಗಳೇ ಅಂದಿರಬೇಕು: “ಆಕೆ ನಮ್ಮ ಕರ್ನಾಟಕದ ಪರ್ವೀನ್ ಸುಲ್ತಾನಾ" ಅಂತ. ಈಗೆಲ್ಲ ಹಾಡುಗಾರರಿಗೆ ತುಂಬ ಸುಲಭವಾಗಿ ಖ್ಯಾತಿ ಸಿಗುತ್ತೆ. ಬೆಳಕು ಹರಿಯೋದರ ಹೊತ್ತಿಗೆ ಖ್ಯಾತನಾಮರಾಗಿ ಬಿಡುತ್ತಾರೆ. ಆದರೆ ರತ್ನಮಾಲಾ ಹಾಡತೊಡಗಿ ಯಾವ ಕಾಲವಾಯಿತು? ಆಗಷ್ಟೇ ಬಹುಶಃ ಟೇಪ್‌ರೆಕಾರ್ಡರ್ ಬಂದಿರಬೇಕು. ಗ್ರಾಮಾಫೋನ್ ಪಕ್ಕಕ್ಕೆ ಸರಿದು ಕೆಸೆಟ್‌ಗಳು ಎದ್ದು ಕುಳಿತ ಕಾಲ. ನೀವು ನಂಬಲಿಕ್ಕಿಲ್ಲ. ನನ್ನ ಬಳಿ ಸುಮಾರು ಇನ್ನೂರ ಐವತ್ತು ಕೆಸೆಟ್‌ಗಳಿವೆ. ಆದರೆ ಅವುಗಳನ್ನು ಏನು ಮಾಡಬೇಕು? ಅಸಲು ಟೇಪ್‌ರೆಕಾರ್ಡರ್‌ಗಳೇ ಇಲ್ಲವಲ್ಲ? ಈಗೆಲ್ಲ ಡಿಸ್ಕುಗಳು, ಪೆನ್‌ಡ್ರೈವ್‌ಗಳು! ನಾಳೆ ಇವೂ ಹೋಗಿ ಮತ್ತೇನೋ ಬರುತ್ತವೆ. ಸುಮಾರು ವರ್ಷಗಳ ಹಿಂದೆ ನಾನು ಬ್ಯಾಂಕಾಕ್‌ಗೆ ಹೋದಾಗ ಸರಿಯಾಗಿ ಒಂದು ಲಕ್ಷ ರುಪಾಯಿ ಕೊಟ್ಟು ಒಂದು ಭಾರೀ ಕೆಮೆರಾ ತಂದಿದ್ದೆ. ಅದನ್ನೇನು ಮಾಡಲಿ, ನೀವೇ ಹೇಳಿ. ಆ ರೀಲೂ ಸಿಗುವುದಿಲ್ಲ. ರೀಲು ತೊಳೆದು ಪ್ರಿಂಟ್ ಹಾಕಲಿಕ್ಕೆ ಡಾರ್ಕ್‌ರೂಮ್ ಇರುವ ಸ್ಟುಡಿಯೋಗಳೂ ಇಲ್ಲ. ಒಂದು ‘ದುಷ್ಟ ಸಂತೋಷ’ದ ಸಂಗತಿಯೆಂದರೆ ಪೂರ್ಣಚಂದ್ರ ತೇಜಸ್ವಿಯವರ ಬಳಿ ಆ ತರಹದ ಮೂರು ನಾಲ್ಕು ಕೆಮೆರಾಗಳಿದ್ದವು. ಒಮ್ಮೆ ಅವೆಲ್ಲವನ್ನೂ ಗುಡ್ಡೆ ಹಾಕಿಕೊಂಡು ಕುಳಿತು, “ಇವುಗಳ್ನ ಇಟ್ಕೊಂಡು ಏನಯ್ಯಾ ಮಾಡಲಿ?" ಅಂತ ಹಲುಬಿದ್ದರು. “ಬೇಜಾರು ಮಾಡ್ಕಬೇಡಿ. ಇಂಥದ್ದು ನನ್ನ ಹತ್ರಾನೂ ಒಂದಿದೆ" ಅಂದಿದ್ದೆ. ಈಗ ದತ್ತಾ ಹೆಗಡೆಯ ಮೇಲೆ ಸಿಟ್ಟಿಗೆ ಬಂದು, ಹ್ಯಾಂವಕ್ಕೆ ಬಿದ್ದು ಅನಾಮತ್ತು ಐದು ಲಕ್ಷ ರುಪಾಯಿ ಕೊಟ್ಟು ಒಂದು ಕೆಮೆರಾ, ಲೆನ್ಸ್‌ಗಳು ಮುಂತಾದವುಗಳನ್ನೆಲ್ಲ ತಂದಿಟ್ಟುಕೊಂಡಿದ್ದೇನೆ. ಮೊದಲೆಲ್ಲ, “ಅವರು ಬಿಡು, Great photographer" ಅನ್ನುತ್ತಿದ್ದೆವು. ಈಗ ಗ್ರೇಟು-ಪಾಟು ಅಂತ ಇಲ್ಲವೇ ಇಲ್ಲ. Great camera ಇದ್ದರೆ ಸಾಕು. ಇದೆಲ್ಲ ಬಿಡಿ, ಸುಮಾರು ನಾಲ್ಕು ತಿಂಗಳ ಹಿಂದೆ ನನ್ನ ಹಳೇ ರಿವಾಲ್ವರ್ ಮಾರಿ, ಇನ್ನೊಂದಿಷ್ಟು ಹಣ ಸೇರಿಸಿಕೊಟ್ಟು ಚೆಂದನೆಯದೊಂದು ಜರ್ಮನ್ ಮೇಡ್ ರಿವಾಲ್ವರ್ ಖರೀದಿಸಿದೆ. ಮತ್ತೇನೂ ಬೇಡ; ಟೆಸ್ಟ್ ಮಾಡಲಿಕ್ಕಾದರೂ ಒಂದಷ್ಟು fire ಮಾಡೋದು ಬೇಡವೇ? Not a single round! ಒಂದೇ ಒಂದು ಗುಂಡೂ ಹಾರಿಸಿಲ್ಲ. ಇನ್ನು ಕೆಮೆರಾಗಳ ಲೆಕ್ಕ ಎಲ್ಲಿಯದು? ಅವು ಯಾವಾಗ ನಿಷ್ಠೆ ಬದಲಿಸಿ, ಕುಂಟಲಗಿತ್ತಿಯರಂತೆ ನೇಪಥ್ಯಕ್ಕೆ ಸರಿದು ಹೊಚ್ಚ ಹೊಸ ಹಾದರಗಿತ್ತಿಯನ್ನು ತಂದು ಎದುರಿಗೆ ನಿಲ್ಲಿಸುತ್ತವೋ?

ಇದನ್ನೆಲ್ಲ ಯಾಕೆ ಹೀಗೆ ಹೇಳುತ್ತಿದ್ದೇನೆಂದರೆ, ಮೊನ್ನೆ ಆ ಸುದ್ದಿ ಬಂತು. ಅನಂತಮೂರ್ತಿಗಳು ತೀರಿಕೊಂಡಿದ್ದರು. ಮೊನ್ನೆಮೊನ್ನೆ ವಿಮರ್ಶಕರಾದ ಅಮೂರ ಅವರು ಸಿಕ್ಕಿದ್ದರು. “ಯಾಕೋ ನಿನ್ನ ಹೆಸರು ಪ್ರಸ್ತಾಪಕ್ಕೆ ಬಂತು. ಅನಂತಮೂರ್ತಿಯವರ ಜೊತೆ ಮಾತನಾಡುತ್ತಿದ್ದೆ. ನಾನು ರವಿ ಬೆಳಗೆರೆ ಅಂದ ಕೂಡಲೇ ‘ಪಾಪ, ಅವ್ನು ಒಳ್ಳೇವ್ನು ಕಣ್ರೀ’ ಅಂದರು ಅನಂತಮೂರ್ತಿ" ಅಂತ ಅಮೂರ ಹೇಳಿದ್ದರು. ಅದ್ಯಾಕೆ ನಾನು ‘ಒಳ್ಳೆಯವನು’ ಅಂತ ಅವರಿಗೆ ಅನ್ನಿಸಿತೋ ಗೊತ್ತಿಲ್ಲ.

ಅವರೊಂದಿಗೆ ನನಗೆ ತುಂಬಾ ಒಡನಾಟ ಇರಲಿಲ್ಲ. ಅವರನ್ನು ಮೊಟ್ಟಮೊದಲ ಸಲ ನಾನು ನೋಡಿದ್ದು ರವೀಂದ್ರ ಕಲಾಕ್ಷೇತ್ರದಲ್ಲಿ. ಆಗ ನಾನಿನ್ನೂ ಚಿಕ್ಕವನು. ಬಹುಶಃ ಅಷ್ಟು ಚಿಕ್ಕ ವಯಸ್ಸಿಗೆ ‘ಕರ್ನಾಟಕ ಸಾಹಿತ್ಯ ಅಕ್ಯಾಡೆಮಿ’ ಪ್ರಶಸ್ತಿ ಪಡೆದದ್ದು ನಾನೇ ಇರಬೇಕು. ಆ ಪ್ರಶಸ್ತಿ ಬಂದದ್ದು, ನನ್ನ ಮೆಚ್ಚಿನ ಕವಿ ಕೆ.ಎಸ್.ನಿಸಾರ್ ಅಹ್ಮದರು ಅಕ್ಯಾಡೆಮಿಯ ಅಧ್ಯಕ್ಷರಾಗಿದ್ದ ಕಾಲದಲ್ಲಿ. ಅವರನ್ನೂ ಆ ತನಕ ನಾನು ನೋಡಿರಲಿಲ್ಲ. ನನಗೆ ಸಭೆಯಲ್ಲಿ ಪ್ರಶಸ್ತಿ ನೀಡಿ, ಶಾಲು ಹೊದಿಸಿದ್ದು ಅನಂತಮೂರ್ತಿಗಳು. ಆಗಿನ್ನೂ ನನಗೆ ಮದುವೆಯಾದ ಹೊಸತು. ಲಲಿತಳನ್ನೂ ಕರೆದುಕೊಂಡು ಬೆಂಗಳೂರಿಗೆ ಬಂದಿದ್ದೆ. ಆ ಸಭೆಯಲ್ಲೇ ನನಗೆ ಆಲನಹಳ್ಳಿ ಕೃಷ್ಣ ಪರಿಚಯವಾದ. ನಾನು ಆಗ ಬಳ್ಳಾರಿಯ ಹುಡುಗೀರ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕನಾಗಿದ್ದೆ. ನನ್ನ ಸಂಬಳ ಒಂದು ನೂರ ಇಪ್ಪತ್ತು ರುಪಾಯಿ. ಬಂದ ಅಕ್ಯಾಡೆಮಿ ಪ್ರಶಸ್ತಿ ಎರಡು ಸಾವಿರ ರುಪಾಯಿಗಳದು.

ಇಲ್ಲ, ದಯವಿಟ್ಟು ಕ್ಷಮಿಸಿ. ಅನಂತಮೂರ್ತಿಯವರನ್ನು ಆಗ ನೋಡಿದೆನಲ್ಲ? ಅದು ಮೊದಲ ಸಲವಲ್ಲ. ಅವರನ್ನು ಮೊದಲ ಸಲ ನೋಡಿದ್ದು ಧಾರವಾಡದಲ್ಲಿ. ನಾನು ಎಂ.ಎ ಮಾಡುತ್ತಿದ್ದೆ. ಕರ್ನಾಟಕ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಕ್ಕೆ ನಾನು cultural secretary. ಅನಂತಮೂರ್ತಿಗಳನ್ನು ವಿದ್ಯಾರ್ಥಿ ಸಂಘಕ್ಕೆ ಅತಿಥಿಯನ್ನಾಗಿ ಕರೆಸಿದ್ದೆವು. ಬೆಳಗಿನ ಭಾಷಣ ಮುಗಿದಿತ್ತು. ತುಂಬ ಚೆನ್ನಾಗಿ ಅವರು ಮಾತನಾಡಿದ್ದರು. ಅದು ಮುಗಿದ ಮೇಲೆ, “ನಾನು ಕೊಂಚ ರೆಸ್ಟ್ ತಗೋಬೇಕು ಕಣ್ರೀ" ಅಂದರು ಮೂರ್ತಿಗಳು. “ಸರ್, ನೀವು ನನ್ನ ರೂಮಿಗೇ ಬನ್ನಿ" ಅಂದೆ. ಕ್ಯಾಂಪಸ್ಸಿನ ಕೊನೆಯ ಕಟ್ಟಡ ನನ್ನ “ಶಾಲ್ಮಲಾ ಹಾಸ್ಟೆಲ್"ನದು. ಅಲ್ಲಿಯ ತನಕ ನಡೆದುಕೊಂಡೇ ಹೋದೆವು. “ನಿಮ್ಮ ರೂಮಿನಲ್ಲಿ ಸಿಗರೇಟು ಸೇದಬಹುದಾ?" ಅಂದರು. “ಅದಕ್ಕೇನು ಸರ್, ನಾನೂ ಸೇದ್ತೀನಿ" ಅಂದೆ. “ಅಲ್ಲ, ನಾನು ಗಾಂಜಾ ಸೇದ್ತೀನಿ" ಅಂದರು. “ಸರ್, ಅದಕ್ಕೂ ಸಮಸ್ಯೆ ಇಲ್ಲ" ಅಂದೆ. ನಾನು ತುಂಬ enjoy ಮಾಡಿಕೊಂಡು ಯಾವತ್ತೂ ಗಾಂಜಾ ಸೇದಿದವನಲ್ಲ. ಗೆಳೆಯರೊಂದಿಗಿದ್ದಾಗ ಒಂದೋ ಎರಡೂ drag ಸೇದುತ್ತಿದ್ದೆ. ಆದರೆ ನನ್ನ room mate ಧಾರಾಳವಾಗಿ ಸೇದುತ್ತಿದ್ದ. ಅವನು ಗಾಂಜಾ stock ಕೂಡ ಇಟ್ಟುಕೊಂಡಿರುತ್ತಿದ್ದ. ಅನಂತಮೂರ್ತಿಗಳು ರೂಮಿಗೆ ಬಂದು ಮಂಚದ ಮೇಲೆ ಕುಳಿತು ನೆಮ್ಮದಿಯಾಗಿ ಸಿಗರೇಟಿಗೆ ಅದನ್ನು ತುಂಬಿಕೊಂಡು ಸೇದಿದರು.

ಈ ಘಟನೆಯ ನಂತರ ಅವರನ್ನು ನಾನು ನೋಡಿದ್ದು, ರವೀಂದ್ರ ಕಲಾಕ್ಷೇತ್ರದಲ್ಲೇ. ಆನಂತರ ಒಂದೆರಡು ಭೇಟಿಗಳಾದವು. ಒಮ್ಮೆ, “ಸರ್, ನೀವು ಸಿಗರೇಟು ಬಿಟ್ಟುಬಿಟ್ರಾ?" ಅಂದೆ. “ಹೂಂ ಕಣಯ್ಯಾ.. ಬಿಟ್ಟೆ. ಆದರೆ ನಶ್ಯ ಹಾಕ್ತೀನಿ" ಅಂದರು. ನಾನು ಅವರ proseನ ಆರಾಧಕ. ಕಾದಂಬರಿಗಳ ಮಾತು ಬಿಡಿ. ಅವರ ಕತೆಗಳು ನನ್ನಲ್ಲಿ ದೊಡ್ಡ ಅಚ್ಚರಿ ಉಂಟು ಮಾಡುತ್ತಿದ್ದವು. ಭಾಷಣಕ್ಕೆ ನಿಂತರೆ ಆ ಪರಿಯ ಇನ್ನೊಬ್ಬ charmerನ ನಾನು ನೋಡಿಲ್ಲ. ನಿಜವಾದ ಮೋಡಿಗಾರ ಅವರು. ಅವರ ಕವಿತೆಗಳೂ ನನಗಿಷ್ಟವಾಗುತ್ತಿದ್ದವು. ‘ಅಜ್ಜನ ಹೆಗಲ ಸುಕ್ಕುಗಳು’ ಸಂಕಲನವನ್ನು ನಾನು ಮೂರ‍್ನಾಲ್ಕು ಸಲ ಓದಿದ್ದೇನೆ. ಇದೆಲ್ಲದರ ನಡುವೆ ಬಂದದ್ದೇ ಅವರ ಕಿರುಕಾದಂಬರಿ ‘ಭವ’. ನಾನಾಗ ‘ಕರ್ಮವೀರ’ದ ಸಂಪಾದಕ. ಅವರ ಸಂದರ್ಶನವನ್ನೂ ಮಾಡಿದ್ದೆ. ಅವರ ಅಳಿಯ ವಿವೇಕ್‌ನ ಮನೆಯಲ್ಲಿ. ಬರೆಯಲು ಕುಳಿತಾಗ ವಿಷಯದ ಕೊರತೆ ಖಂಡಿತಾ ಇರಲಿಲ್ಲ. ನಾನು ತುಂಬ ಪ್ರೀತಿಯಿಂದ ಬರೆದೆ. ಆದರೆ ‘ಭವ’ ಕಾದಂಬರಿಯ ಬಗ್ಗೆ ನನಗ ತಕರಾರಿತ್ತು. ಜ್ನಾನಪೀಠಕ್ಕೆ ಇವರು ಲಾಬಿ ಮಾಡಿದಂತಿದೆ. ಪ್ರಶಸ್ತಿ ಕೊಡುವಾಗ ಈ ಲೇಖಕರು ಏನೇನು ಬರೆದಿದ್ದಾರೆ ಅಂತ ನೋಡುವುದಕ್ಕಿಂತ, ಈ ವರ್ಷ ಏನು ಬರೆದಿದ್ದಾರೆ ಎಂಬುದನ್ನು ನೋಡುತ್ತಾರೆ. ಹೀಗಾಗಿ ‘ಭವ’ ಕಾದಂಬರಿ, ಬರೆದಿದ್ದಾರೆ, ಅವಸರದಲ್ಲಿ. ಅದಲ್ಲದೆ, ಅಷ್ಟು ಚಿಕ್ಕ ಕಾದಂಬರಿಯನ್ನು ಆ ಕಡೆ-ಈ ಕಡೆ ವಿನಾಕಾರಣವಾಗಿ ಖಾಲಿ ಪುಟಗಳನ್ನು ಜೋಡಿಸಿ, ಒಂಥರಾ ಮಾಡಿ ಪ್ರಕಟಿಸಿದ್ದಾರೆ, ಸುಮ್ಮನೆ ಪೇಪರ್ ವೇಸ್ಟು- ಎಂಬರ್ಥದಲ್ಲಿ ಒಂದು ಪುಟ್ಟ ಬಾಕ್ಸ್ ಐಟಂ ಬರೆದಿದ್ದೆ. ಅದನ್ನು ಅವರು ಹೇಗೆ ರಿಸೀವ್ ಮಾಡುತ್ತಾರೆ ಅಂತ ನಾನು ಯೋಚನೆ ಕೂಡ ಮಾಡಿರಲಿಲ್ಲ. It was just a remark.

ದುರಂತವೆಂದರೆ, ಅನಂತಮೂರ್ತಿಯವರ ಫೊಟೋ ಮುಖಪುಟದಲ್ಲಿ ಯಾಕೆ ಹಾಕಿದೆ ಅಂತ ಶಾಮರಾಯರು ನನ್ನನ್ನು ಹಿಗ್ಗಾಮುಗ್ಗಾ ಬೈದಿದ್ದರು. “ಅದೊಂದು ಕರ್ಮ" ನನ್ನ ಪಾಲಿಗೆ. ಆ ಸಂಚಿಕೆ ಅಚ್ಚಾಗಿ ಮೂರ‍್ನಾಲ್ಕು ವಾರಗಳಾಗಿರಬಹುದು. ಒಂದು ಕಾರ್ಯಕ್ರಮಕ್ಕೆ ಅವರೂ ಅತಿಥಿ, ನಾನೂ ಅತಿಥಿ. ಮೊದಲು ಸಭಾಂಗಣದಲ್ಲಿ ಕುಳಿತಿದ್ದೆವು. ಸಂಘಟಕರು “ಅತಿಥಿಗಳು ದಯವಿಟ್ಟು ವೇದಿಕೆಗೆ ಬರಬೇಕು" ಅಂತ ಆಹ್ವಾನಿಸಿದರು. ನಾನು ಮತ್ತು ಮೂರ್ತಿಗಳು ಜೊತೆ ಜೊತೆಯಾಗೇ ಹೋದೆವು. ಗುರುತು ಹಿಡೀಲಿಕ್ಕಿಲ್ಲ ಅನ್ನಿಸಿ, ಮೆಟ್ಟಿಲೇರುವಾಗ ನಾನು “ನಮಸ್ಕಾರ. ರವಿ ಬೆಳಗೆರೆ ನಾನು" ಅಂದೆ. ಫಕ್ಕನೆ ನಿಂತವರೇ.

“I know, you are an evil person. ದುಷ್ಟ ನೀನು. ಹಾಗಂತ ನಾನು ಎಲ್ಲರಿಗೂ ಹೇಳ್ತೀನಿ. Evil person!" ಅಂತ ರೇಗಿಬಿಟ್ಟರು. ಆ ಮಾತು ಬೇರೆ ಯಾರಿಗೂ ಕೇಳಿಸುವಂತಿರಲಿಲ್ಲ. ಕೇವಲ ಪಿಸುಮಾತು. ನಾನು ಕೊಂಚ ಅವಾಕ್ಕಾದೆ. ಆನಂತರ ನನಗೆ ನಗು ಬಂದು ಬಿಟ್ಟಿತು. ನಕ್ಕೆ!
ಪಾಪ, ಅವರು ನನ್ನ ವಿರುದ್ಧ ಯಾರಿಗೂ ಹೇಳಲಿಲ್ಲ. ಅಂದರು: ಅಂದು ಮರೆತರು. ಒಮ್ಮೆ ಡಿ.ಆರ್.ನಾಗರಾಜ್ ಮನೆಯಲ್ಲಿ ನಾವೆಲ್ಲ ಗುಂಡು ಹಾಕಿದೆವು. ಆ ಹೊತ್ತಿಗೆ ನಾನು ಲಂಕೇಶ್ ಪತ್ರಿಕೆಯಲ್ಲಿ ಮೂರ್ತಿಗಳ ವಿರುದ್ಧ ಬರೆದಿದ್ದೆ. ಅದರ ನೆನಪೂ ಅವರಿಗಿರಲಿಲ್ಲ. “ಹೆಚ್ಚು ಕುಡಿಯಲ್ಲ. ಒಂದೇ ಒಂದು ತೊಟ್ಟು ಕೊಡು" ಅಂತ ಪತ್ನಿಯನ್ನು ಚಿಕ್ಕ ಮಕ್ಕಳಂತೆ ಕೇಳುತ್ತಿದ್ದರು. ನನಗದು ಕಣ್ಣಿಗೆ ಕಟ್ಟಿದ ಹಾಗೆ ನೆನಪಿದೆ.
ಮುಂದಿನದು ಬಿಡಿ, ‘ಹಾಯ್ ಬೆಂಗಳೂರ್!’ನಲ್ಲಿ ನಾನು ಸಾಕಷ್ಟು ಟೀಕಿಸಿದೆ. ಅಂತೆಯೇ ಅವರ ಉತ್ತಮ ಲೇಖನವೊಂದನ್ನು ಓದಿದಾಗ “ಸರ್, ಇದೆಲ್ಲ ನಿಮಗೆ ಹೇಗೆ ಹೊಳೀತಿವೆ? ತುಂಬ ಅದ್ಭುತವಾಗಿ ಬರೆದಿದ್ದೀರಿ" ಅಂತ ಫೋನು ಮಾಡಿ ಹೇಳುತ್ತಿದ್ದೆ. “ಅಲ್ವೇ?" ಅಂತ ಅಮಾಯಕವಾಗಿ ಅಂದು ಸಂತೋಷ ಪಡುತ್ತಿದ್ದರು. “ನಿಮ್ಮ ಶ್ರೀಮಂತಿಕೆ, ಡಾಲರುಗಳು, ಸಾಫ್ಟ್‌ವೇರು, ಜಾಗತೀಕರಣ ಇವೆಲ್ಲ ಇರಲಿ. ಆದರೆ, ಒಬ್ಬ ಅಜ್ಜ-ಅಜ್ಜಿ, ನಿಮ್ಮ ನೂರು ಅಡಿ ರಸ್ತೆ ದಾಟಲಿಕ್ಕೆ ಹೆದರುವಂತೆ ಮಾಡಿದರೆ, ನಿಮ್ಮ ಶ್ರೀಮಂತಿಕೆ, ಡೆವಲಪ್‌ಮೆಂಟು ಇವುಗಳನ್ನೆಲ್ಲ ಅಸಹ್ಯದಿಂದ ನೋಡುತ್ತೇನೆ" ಅಂತ ಅವರು ಪತ್ರಿಕೆಯೊಂದರಲ್ಲಿ ಬರೆದದ್ದು ನನಗೆ ಈ ಕ್ಷಣಕ್ಕೂ ನೆನಪಿದೆ.

ಅವರಿಗೆ, ಅವರ ಸಾಹಿತ್ಯಕ್ಕೆ, ವ್ಯಕ್ತಿತ್ವಕ್ಕೆ ಸಂಬಂಧಿಸಿದಂತೆ ನನ್ನ ಮಿತ್ರರು ತುಂಬ ಚೆನ್ನಾಗಿ ಬರೆದಿದ್ದಾರೆ. ಅದನ್ನೇ ನಾನೂ ಬರೆದು ನಿಮ್ಮ ತಲೆ ತಿನ್ನುವುದಿಲ್ಲ. ಮೂರ್ತಿಗಳು ಒಂದರ್ಥದಲ್ಲಿ king size life lead ಮಾಡಿ, ಆರಾಮಾಗಿ ತೀರಿಕೊಂಡಿದ್ದಾರೆ. ಹಣ, ಅಧಿಕಾರ, ಖ್ಯಾತಿ, ಚೆಲುವು, ಹೊಗಳಿಕೆ, ಪಾಂಡಿತ್ಯ, ಗೆಳತಿಯರು -ಹೀಗೆ ಎಲ್ಲವನ್ನೂ ಸವಿದು, ಅನುಭವಿಸಿ ಬದುಕಿಗೆ ವಿದಾಯ ಹೇಳಿದ್ದಾರೆ. ಏಕೋ ಕಾಣೆ, ಈ ನಡುವೆ ನನಗೆ ‘ಅಂತಿಮ ದರ್ಶನ’ಗಳಿಗೆ ಹೋಗಲು ಮನಸ್ಸಾಗುತ್ತಿಲ್ಲ. ಹಾಗಂತ ಹೆದರಿಕೆ-ಪದರಿಕೆ ಅಂತೇನೂ ಇಲ್ಲ. ಆದರೆ ಶವಸಂಸ್ಕಾರಗಳು ನನ್ನಲ್ಲೊಂದು ಮ್ಲಾನಭಾವ ಮೂಡಿಸುತ್ತವೆ. ಇಡೀ ದಿನ ಒಂಥರಾ ಖಿನ್ನನಾಗುತ್ತೇನೆ. ಹೀಗಾಗಿ, ಮೂರ್ತಿಗಳನ್ನು ಕಳಿಸಿ ಬರಲು ನನ್ನಿಂದ ಸಾಧ್ಯವಾಗಲಿಲ್ಲ. ಅನಂತಮೂರ್ತಿಗಳು ಕ್ಷಮಿಸುತ್ತಾರೆಂದು ಭಾವಿಸಿದ್ದೇನೆ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 17 December, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books