Ravi Belagere
Welcome to my website
ಕೆಲವೊಮ್ಮೆ ಬಂಧುಗಳ, ಸ್ನೇಹಿತರ, ಪರಿಚಿತರ ಮನೆಗೆ ಹೋಗಲೇಬೇಕಾಗುತ್ತದೆ. ಎರಡು ದಿನದ ಮಟ್ಟಿಗೆ ಹೋಗಿದ್ದು ಬರುವುದಾದರೆ ಆ ಮಾತು ಬೇರೆ. ಆದರೆ ತಿಂಗಳುಗಟ್ಟಲೆ ಇರುವ ಪ್ರಸಂಗ ಬಂದರೆ? ನೀವು ಚಿಕ್ಕವರಾಗಿದ್ದಾಗ ಸಂಬಂಧಿಕರ ಮನೆಯಲ್ಲಿ, ಮತ್ಯಾವುದೋ ಕಾರಣಕ್ಕೆ ಒಂದಷ್ಟು ದಿನ ಇನ್ನೊಬ್ಬರ ಮನೆಯಲ್ಲಿ ಉಳಿದುಕೊಂಡ ಪ್ರಸಂಗವಿರಬಹುದು. ಆಗ ಮುಜುಗರ, ಸಂಕೋಚ, ಬೇಸರ ಎಲ್ಲವೂ ಆಗಿರಬಹುದು. ಯಾರಿಗೆ ಗೊತ್ತು? ನೀವು ಖುಷಿಯಿಂದಲೇ ಇದ್ದಿರಬಹುದು. ಹೀಗೆ ನಿಮ್ಮ ಅನುಭವಗಳನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ನಿಮ್ಮ ಫೊಟೋ ಜೊತೆ, ಚಿಕ್ಕದಾಗಿ ಮತ್ತು ಚೊಕ್ಕವಾಗಿ ಬರೆದು ಕಳಿಸಿ. ಈ ಮೇಲ್ ಮೂಲಕ ಕಳಿಸುವವರು [email protected] ಗೆ ಕಳಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಮಕ್ಕಳನ್ನು ಛಡಿ ಹಿಡಿದು ಶಾಲೆಗೆ ತರುತ್ತಾರೆ: ಪೋಷಕರನ್ನು ಜೈಲಿಗೆ ಹಾಕ್ತಾರೆ!


ಇದು ಎಂಥ ಅಸಂಬದ್ಧ!
ಒಂದು ಕಡೆ ಸಿದ್ದರಾಮಯ್ಯನ ನಿರಾಸಕ್ತಿ. ಇನ್ನೊಂದು ಕಡೆ ಕಿಮ್ಮನೆ ರತ್ನಾಕರರ ಉಡಾಫೆ ಮಿಶ್ರಿತ ಅಮಾಯಕತೆ. ಅವರು ತುಂಬ ಪ್ರಾಮಾಣಿಕರು. ಅದು ಹಳೆಯ ವಿಷಯ. ಅವರು ಮಂತ್ರಿಯಾದಾಗ ನನಗೆ ಖುಷಿಯಾಗಿತ್ತು. ಅವರು ಮಂತ್ರಿ-ಶಾಸಕ ಇತ್ಯಾದಿಗಳೆಲ್ಲ ಆದರಲ್ಲ? ಅದಕ್ಕೆ ತುಂಬಾನೇ ಹಿಂದೆ ಕಿಮ್ಮನೆಯವರು, ನನ್ನ ಮತ್ತು ‘ಪತ್ರಿಕೆ’ಯ ಪಾಲಿನ ವಕೀಲರು! ತೀರ್ಥಹಳ್ಳಿಯ ಒಂದೆರಡು ಕೇಸ್‌ಗಳನ್ನು ಅವರೇ ನಡೆಸುತ್ತಿದ್ದರು. ಆದರೆ ಈತನಕ ನಾವು ಪರಸ್ಪರ ಮಾತಾಡಿಲ್ಲ. ಅವರ ಮುಖ ಪರಿಚಯ ನನಗೆ, ನನ್ನ ಮುಖ ಪರಿಚಯ ಅವರಿಗೆ-ಇಲ್ಲವೇ ಇಲ್ಲ. ಅವರು ನನ್ನ ವಕೀಲರು ಅಷ್ಟೆ.

ನನ್ನದೊಂದು ದೊಡ್ಡ ಸಮಸ್ಯೆ ಅಂದರೆ ಕೋರ್ಟುಗಳು! ಆಗಂತೂ ತುಂಬ ಕೇಸುಗಳಿದ್ದವು: ಬರೀ ಮಾನನಷ್ಟ ಮೊಕದ್ದಮೆಗಳು. ಹಾಗೆ ಅಂತ ಅವುಗಳನ್ನು ನಾನು ನೆಗ್ಲೆಕ್ಟ್ ಮಾಡುವಂತಿಲ್ಲ. ಕೇಸು ಎಲ್ಲೇ ಇದ್ದರೂ ಆ dateಗೆ ಸರಿಯಾಗಿ ಹಾಜರಿರಬೇಕು. ನನಗೆ ಅದು ಕಷ್ಟವಲ್ಲ. ಹೋಗುವುದರಿಂದ ನನ್ನ ದಾರಿ ಖರ್ಚು ಬಿಟ್ಟರೆ, ಬೇರೆ ದೊಡ್ಡ ಖರ್ಚುಗಳೂ ಇರುವುದಿಲ್ಲ. ಆದರೆ ಯಾವ ಪರಿ ಇಲ್ಲಿ ಕೆಲಸ ಮೈಮೇಲೆ ಎಳೆದುಕೊಂಡಿರುತ್ತೇನೆಂದರೆ, ರಾತ್ರಿ ನನ್ನ ಮನೆಗೂ ತಿಂಗಳಗಟ್ಟಲೆ ನಾನು ಹೋಗಲು ಸಾಧ್ಯವಾಗಿರುವುದಿಲ್ಲ. ಹೀಗಾಗಿ ಕೆಲವು ಸಲ ಕೋರ್ಟುಗಳಿಗೆ ಹೋಗಲಾಗಿರುವುದಿಲ್ಲ. ಅವರು ಈ ವಿಷಯದಲ್ಲಿ ಎಷ್ಟು ಬೇಸರಗೊಂಡಿದ್ದರೆಂದರೆ ಒಂದು ಪುಟ್ಟ ಕಾರ್ಡಿನಲ್ಲಿ ನಾಲ್ಕೇ ಸಾಲು ಬರೆದು ನನಗೆ post ಮಾಡಿದ್ದರು. “ರವಿ ಬೆಳಗೆರೆಯವರೇ, ನಿಮಗೆ ಕೇಸು ನಡೆಸುವ ಆಸಕ್ತಿಯೇ ಇಲ್ಲ. ಎಷ್ಟು ಸಲ ಜ್ಞಾಪಕ ಮಾಡಿದರೂ ನೀವು ಕೋರ್ಟು ಕೊಟ್ಟ dateಗಳಿಗೆ ಹಾಜರಾಗಿಲ್ಲ. ಇಂಥ ನಿರಾಸಕ್ತಿಯನ್ನು ಅಥವಾ ಬೇಜವಾಬ್ದಾರಿಯನ್ನು ನನ್ನ ಯಾವ ಕ್ಲಯಿಂಟೂ ತೋರ್ಪಡಿಸಿಲ್ಲ. ಹೀಗಾಗಿ, ನಿಮ್ಮ ವಕೀಲನಾಗಿ ನನಗೆ ಮುಂದುವರೆಯಲು ಸಾಧ್ಯವಿಲ್ಲ. ಬೇರೆ ಯಾರನ್ನಾದರೂ ನೇಮಿಸಿಕೊಳ್ಳಿ" ಅಂತ ನಾಲ್ಕೇ ಸಾಲು ಬರೆದು, ಅದಕ್ಕೆ No objection certificate ಕೂಡ ರೆಡಿ ಮಾಡಿ ನಮ್ಮ ವರದಿಗಾರ ಶೃಂಗೇಶ್ ಕೈಗೆ ತಲುಪಿಸಿ, ಕೈ ತೊಳೆದುಕೊಂಡು ಬಿಟ್ಟರು! ಅಂಥ ಶಿಸ್ತು ಅವರದು.

ಆದರೆ ಪ್ರಾಮಾಣಿಕತೆ ಮತ್ತು ನೈತಿಕ ಶಿಸ್ತು ಇವೆರಡೇ ಆದರೆ ಅದರಲ್ಲಿ ಇವತ್ತಿನ ರಾಜಕಾರಣ ನಡೆಯುವುದಿಲ್ಲ. ಪರಮ ಪ್ರಾಮಾಣಿಕ ಅಂತ ಹೇಳಿಕೊಂಡು ತಿರುಗಿ, ಅಭಿವೃದ್ಧಿ ಕೆಲಸವೇ ಮಾಡದಿದ್ದರೆ ಅವರನ್ನು ತೆಗೆದುಕೊಂಡು ಏನು ಮಾಡುತ್ತೀರಿ? ಈ ಹಿಂದೆ ಯಡ್ಡಿ ಸರಕಾರದಲ್ಲಿ ವಿದ್ಯಾಮಂತ್ರಿಯಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಇದ್ದರು. ಅವರೂ ನನ್ನ ಸ್ನೇಹಿತರೇ. ಅವರಿಗೆ ಪ್ರಾಮಾಣಿಕತೆಯೂ ಇರಲಿಲ್ಲ. ಕೆಲಸ ಮಾಡಿಸುವ ಛಾತಿಯೂ ಇರಲಿಲ್ಲ. ಸರ್ವೀಸಿನಲ್ಲಿ ಅವರು ಮಾಡಿದ ಒಂದು ಮಹಾನ್ ಕೆಲಸವೆಂದರೆ, ಕೆಲವು ಸರ್ಕಾರಿ ಶಾಲೆಗಳನ್ನು ಮುಚ್ಚಲಿದ್ದೇನೆ ಅಂದದ್ದು! ಆ ದರಿದ್ರದ ಕೆಲಸಕ್ಕೆ ವಿದ್ಯಾಮಂತ್ರಿಯಾದ ಕಾಗೇರಿಯವರೇ ಬೇಕಾ? nonsense.
ತುಂಬ ವರ್ಷಗಳಿಂದ ನಾನು ವಿದ್ಯಾಮಂತ್ರಿಗಳನ್ನು ಗಮನಿಸುತ್ತಿದ್ದೇನೆ. ಆ ಸಾಲಿನಲ್ಲಿ ನಮ್ಮ ಗೋವಿಂದೇಗೌಡರು ಎಕ್ಸಲೆಂಟ್. ಇನ್ನೊಬ್ಬರ ದುಡ್ಡೂ ಮುಟ್ಟಲಿಲ್ಲ, ಅಯೋಗ್ಯ ಅಧಿಕಾರಿಗಳನ್ನೂ ಬಿಡದೆ, ಅವರಿಗೆ ಬೆನ್ನ ಕೆಳಗೆ ಲಾತಾ ಕೊಟ್ಟು ಬರೋಬ್ಬರಿ ಕೆಲಸ ತೆಗೆಯುತ್ತಿದ್ದರು. ಮತ್ತೊಬ್ಬರು ವಿಶ್ವನಾಥ್. ಅವರು ವಿಪರೀತ ಪ್ರಾಮಾಣಿಕರು ಅಂತ ಅಡ್ಡ ಪಂಚೆ ಉಟ್ಟುಕೊಂಡು, ಒಪ್ಪತ್ತೇ ಊಟ ಮಾಡುತ್ತಿದ್ದರು ಎಂದು ನಾನು ಹೇಳುವುದಿಲ್ಲ. ಆದರೆ ಪಕ್ಕಾ task ಮಾಸ್ಟರ್! ಮುಖ್ಯಮಂತ್ರಿ ಎಸ್ಸೆಂ. ಕೃಷ್ಣರನ್ನೂ ಪಕ್ಕಕ್ಕೆ ಸರಿಸಿ, ಇಡೀ education mafia ವಿರುದ್ಧ, ಮಠ ಪ್ರಭುಗಳ ವಿರುದ್ಧ ರಣಕಹಳೆ ಊದಿಬಿಟ್ಟಿದ್ದರು. ನಂಗೆ ಗೊತ್ತಿದೆ, ವಿಶ್ವನಾಥ್ ತೀರ ಅಸಹ್ಯಕರ ರೀತಿಯಲ್ಲಿ ದುಡ್ಡು ಮಾಡಲಿಲ್ಲ.

ಆದರೆ ಕಿಮ್ಮನೆಯವರು ಇದ್ಯಾವುದನ್ನೂ ಮಾಡಲಿಲ್ಲ. ಮಾಡಿದ್ದು ಅದೇ, ದೇವರ ಮುಂದೆ ಪ್ರಮಾಣ! ಅಲ್ಲಿ ತೀರ್ಥಹಳ್ಳಿ, ಆ ಕಡೆ ಮಂಗಳೂರು, ಉಡುಪಿ ಮುಂತಾದೆಡೆ ಜನ ಆಣೆ ಪ್ರಮಾಣಗಳನ್ನು ಶ್ರದ್ಧೆಯಿಂದ ನಂಬುತ್ತಾರೆ. ಧರ್ಮಸ್ಥಳಕ್ಕೆ ಇವರೇ ಹೋಗಿದ್ದರಲ್ಲ ಯಡಿಯೂರಪ್ಪ-ಕುಮಾರಸ್ವಾಮಿ? ಹಾಗೆ ಕಿಮ್ಮನೆಯವರೂ ಆಣೆ- ಎಂಟಾಣೆ ಮಾಡಿ ಕೊಂಚ ಮೈಲೇಜ್ ಗಿಟ್ಟಿಸಿಕೊಂಡರು: ನಂದಿತಾ ಸಾವಿನ ಪ್ರಕರಣದಲ್ಲಿ. ಅದೇ ಕೊನೆ, ಅವರು ಮತ್ತೇನೂ ಮಾಡಲೇ ಇಲ್ಲ: ಶಿಕ್ಷಣ ರಂಗದಲ್ಲಿ.

ಹಿಂದೆ ಕೇಂದ್ರ ಸರ್ಕಾರದಲ್ಲಿ ಕಪಿಲ್ ಸಿಬಲ್ ಇದ್ದರು. ಅವರೇನು ಈ ಆರ್.ಟಿ.ಇ. ಕಾಯ್ದೆಯ ಪ್ರಕಾರ, ಎಲ್ಲಾ ಖಾಸಗಿ ಶಾಲೆಗಳಲ್ಲಿ ಇಪ್ಪತ್ತೈದು ಪರ್ಸೆಂಟ್ ಲೆಕ್ಕದಲ್ಲಿ ಬಡಮಕ್ಕಳಿಗೆ ಕಡ್ಡಾಯವಾಗಿ ಸೀಟು ಕೊಡಬೇಕು, ಉಚಿತ ಅಂತ ಕಾನೂನು ಮಾಡಿದರಲ್ಲ? ಆ ಕೆಲಸವನ್ನು ನಾನು ಬುದ್ಧಿಪೂರ್ವಕವಾಗಿ, ಹದಿಮೂರು ವರ್ಷಗಳ ಹಿಂದೆಯೇ ‘ಪ್ರಾರ್ಥನಾ ಸ್ಕೂಲ್’ನಲ್ಲಿ ಮಾಡಿದ್ದೆ. ಹೀಗಾಗಿ, ಕಪಿಲ್ ಸಿಬಲ್ ಹೂಂಕಾರವೆಂಬುದು ನನ್ನಲ್ಲಿ ಗಾಬರಿ ಹುಟ್ಟಿಸಲೇ ಇಲ್ಲ. ಆದರೆ ಅನೇಕ ಶಾಲೆಗಳ ಮಾಲೀಕರು ಬಾಯಿ ಬಡಿದುಕೊಂಡು ಬಿಟ್ಟರು. ಭರ್ತಿ ಶ್ರೀಮಂತ ಮಕ್ಕಳನ್ನ ಸೇರಿಸಿ ಕೋಟ್ಯಂತರ ಡೊನೇಶನ್ ಎತ್ತಿಬಿಡುತ್ತಿದ್ದರಲ್ಲ? ಅವರಿಗೆ ಕಂಗಾಲಾಗುವ ಸ್ಥಿತಿ ಬಂತು. “ಅಲ್ರೀ, ಈ ಶ್ರೀಮಂತ, ಬುದ್ಧಿವಂತ, ಮುದ್ದಾಗಿಯೂ ಇರುವ ಮಕ್ಕಳ ಜೊತೆಯಲ್ಲಿ ಕೊಳಚೆ ಪ್ರದೇಶಗಳ ಕೊಳಕು ಮಕ್ಕಳನ್ನು ಕೂಡಿಸಿ, ಪಾಠ ಮಾಡೋಕಾಗುತ್ತಾ?" ಅಂತ ಬೊಬ್ಬೆ ಹೊಡೆದರು. ‘ಪ್ರಾರ್ಥನಾ’ಗೆ ಒಮ್ಮೆ ಬಂದು ನೋಡಿ? ಅದರಲ್ಲಿ slumನ ಮಕ್ಕಳು ಯಾರಿದ್ದಾರೆ ಅಂತ ನಿಮಗೆ ಖಂಡಿತವಾಗ್ಯೂ ಗೊತ್ತಾಗುವುದಿಲ್ಲ. ಏಕೆಂದರೆ, ಅವರ ಯೂನಿಫಾರ್ಮ್, ಪುಸ್ತಕ, ಬ್ಯಾಗು-ಎಲ್ಲವನ್ನೂ ನಾನೇ ಕೊಡುತ್ತೇನೆ. ಎಲ್ಲಿ ವ್ಯತ್ಯಾಸ ಕಾಣಲು ಸಾಧ್ಯ? ಆರಂಭದಲ್ಲಿ ಒಂದಷ್ಟು ದಿನ ಈ ಮಕ್ಕಳ ಮತ್ತು ಸ್ಲಮ್‌ನಿಂದ ಬಂದ ಮಕ್ಕಳ ವರ್ತನೆ ಮತ್ತು cultural related ಸಮಸ್ಯೆಗಳು ಕಂಡು ಬಂದವು. ಅವೆಲ್ಲ ಎಷ್ಟು ದಿನ? ಆ ಕೊಳಗೇರಿ ಮಕ್ಕಳು ಸರಾಗವಾಗಿ ಹೊಸ ಸಂಸ್ಕೃತಿಗೆ ಪೂರ್ತಿಯಾಗಿ ಹೊಂದಿಕೊಂಡು ಬಿಟ್ಟವು. ಒಂದು ಮಾತನ್ನು ಸ್ವತಃ ನಕ್ಸಲೀಯರೂ ಸೇರಿದಂತೆ ಎಲ್ಲ ಎಡಪಂಥೀಯರೂ ಒಂದು ಮಾತು ಒಪ್ಪಿದ್ದಾರೆ. ನಾವು ಶ್ರೀಮಂತ, ಮಧ್ಯಮವರ್ಗ, ಕೆಳಮಧ್ಯಮ ಅಂತೆಲ್ಲ classify ಮಾಡುತ್ತೇವಲ್ಲ? ಉಹುಂ, ವಿದ್ಯಾರ್ಥಿಗಳು ಅದ್ಯಾರ ಮನೆಯಿಂದಲೇ ಬರಲಿ: ಅವರಿಗೆ ‘ವರ್ಗ’ ಅಂತ ಹೆಸರಿಡಲು ಸಾಧ್ಯವಿಲ್ಲ. "A student does not have any class " ಅಂತ ಅನೇಕ ದಶಕಗಳಿಂದ ಪಾಲಿಸಿಕೊಂಡು ಬಂದಿದ್ದಾರೆ. ವಿದ್ಯಾರ್ಥಿಗೆ ‘ವರ್ಗ’ ಅಂತ ಇರುವುದಿಲ್ಲ ಎಂಬ ಮಾತಿಗೆ ನಾನು ಇನ್ನೂ ಮುಂದಕ್ಕೆ ಹೋಗಿ class ಮಾತ್ರವಲ್ಲ: ಅವನಿಗೆ caste ಕೂಡ ಇಲ್ಲ ಎಂದು ನಿರ್ಧರಿಸಿದ್ದೇನೆ? ಒಂದೇ ಒಂದು ಸಲ ನಮ್ಮ campusನೊಳಕ್ಕೆ ಮಗು ಬಂತಾ? ಅದು ಕೇವಲ ‘ಪ್ರಾರ್ಥನಾ’ ಮಗು. ಅದರದು ‘ಪ್ರಾರ್ಥನಾ’ ಭಾಷೆ, ಪ್ರಾರ್ಥನಾ ಶಿಸ್ತು, ಅದೇ ಸಂಸ್ಕೃತಿ. Finish.

ಚಿಕ್ಕದೇನಲ್ಲ: ಹತ್ತತ್ತಿರ ಎಂಟು ಸಾವಿರ ಮಕ್ಕಳಿದ್ದಾರೆ ನಮ್ಮಲ್ಲಿ. ಸಂಭಾಳಿಸುವುದು ಸುಮ್ಮನೆ ಮಾತಲ್ಲ. ತೀರ ಇತ್ತೀಚೆಗೆ ‘ಅವರು’ ಸಿಕ್ಕಿದ್ದರು: ನನ್ನ ಎರಡೂ ಪತ್ರಿಕೆಗಳು, ಪುಸ್ತಕಗಳು ಅದ್ಯಾವುದರ ಪ್ರಸ್ತಾಪನೆಯನ್ನೂ ಮಾಡಲಿಲ್ಲ. “ತುಂಬ ಒಳ್ಳೆ ಸಂಸ್ಥೆ ಕಟ್ಟಿದ್ದೀರಪ್ಪಾ, ಅದರ ಬಗ್ಗೆ ನನಗೆ ಹೆಮ್ಮೆ ಇದೆ!" ಅಂದರು. ಅವರ ಹೆಸರು ಹರದನಹಳ್ಳಿ ದೊಡ್ಡೇಗೌಡರ ಮಗ ದೇವೇಗೌಡ! ಉಳಿದಿದ್ದನ್ನು ನೀವೇ ಊಹಿಸಿಕೊಳ್ಳಿ. ಶಾಲೆಗೆ ಬರುವ ಮಕ್ಕಳು ಅಕ್ಷರಶಃ ಕುಣಕೊಂಡು ಬರುತ್ತಾರೆ. ಯಾವ ಮಗುವನ್ನೂ ಎಳಕೊಂಡು ಬರಲು ಸಾಧ್ಯವಿಲ್ಲ. ಮಗು ಶಾಲೆಗೆ ಬರಲಿಲ್ಲ ಅಂತ ಗೊತ್ತಾದರೆ ಸಾಕು: ಅದರ ಪೋಷಕರಿಗೆ reminder ಕಳಿಸುತ್ತೇವೆ. ಆ ಮಗು ಮರುದಿನದಿಂದ ಬಂದೇ ಬರುತ್ತದೆ.

ಆದರೆ, ಸಿದ್ದರಾಮಯ್ಯ ಅವರ ದಿವ್ಯ ಆಡಳಿತ ಏನು ಮಾಡಿದೆಯೋ ನೋಡಿ. ಸಿದ್ದರಾಮಯ್ಯನವರ ತವರು ಜಿಲ್ಲೆ ಮೈಸೂರಿನಲ್ಲೇ ೫೯೨೧ ಮಕ್ಕಳು ಶಾಲೆಗೆ ಬಂದಿಲ್ಲ! ಆಯ್ತಾ? ಆ ಮಕ್ಕಳ ಮನೆಗಳಿಗೆ ಹೋಗಿ, ಮಕ್ಕಳ ಪೋಷಕರಿಗೆ ‘ಅರಿವು’ ಮೂಡಿಸಿ ಬರಬೇಕಂತೆ, ಶಿಕ್ಷಕರು. ಆಗ್ಯೂ ಮಕ್ಕಳು ಬರದಿದ್ದರೆ, ನೋಟೀಸು ನೀಡುತ್ತಾರಂತೆ, ಪೋಷಕರಿಗೆ. ಅದೂ ವ್ಯರ್ಥವಾದರೆ ಎರಡನೇ ನೋಟೀಸ್! ಆದರೂ ಮಗು ಬರದಿದ್ದರೆ ಪರಿಸ್ಥಿತಿ ಭಯಂಕರ. ಪೋಷಕರ ಮೇಲೆ ಪೊಲೀಸ್ ಕಂಪ್ಲೇಂಟ್ ಕೊಡುತ್ತಾರಂತೆ!
ಇದು ಆಡಳಿತವಾ? ಮೊದಲಿಗೆ, ಶಿಕ್ಷಕರನ್ನು ಅಥವಾ ಅಧಿಕಾರಿಗಳನ್ನು ಈ ಮನೆಮನೆ ತಿರುಗುವುದಕ್ಕೆ ಬಳಸುವುದೇ ಅಪರಾಧ. ಜನ ಗಣತಿ, ಎಲೆಕ್ಷನ್ ಡ್ಯೂಟಿ, ದನ ಗಣತಿ, ಹೆಣ ಗಣತಿ(!)-ಹೀಗೆ ಶಿಕ್ಷಣ ವ್ಯವಸ್ಥೆಗೆ ಸಂಬಂಧವೇ ಇಲ್ಲದ ಕೆಲಸಗಳಿಗೆ ಶಿಕ್ಷಕರನ್ನು ಬಳಸುತ್ತಾರೆ. ಅದು ಇನ್ನೂ ತಪ್ಪು. ಯಾವುದಕ್ಕೇ ಆಯ್ತು! ಸೇರಬೇಕಾದ ಜನ ಸಭೆಗೆ ಬಂದಿಲ್ಲ ಅಂತಾದರೆ, “ಏಯ್ ಕರೀರೀ ಮೇಸ್ಟ್ರುಗಳನ್ನ, ಮೇಡಮ್ಮುಗಳನ್ನ!" ಅನ್ನುತ್ತಾರೆ ಮಂತ್ರಿ ಮಾಗಧರು. ಇದು ಎಂಥ ಅಪರಾಧವೆಂಬುದು ಗೊತ್ತಿಲ್ಲವೆ? ಅಸಹ್ಯಕರವೆಂದರೆ, ಈಗ ಮಕ್ಕಳ ಪೋಷಕರನ್ನು ಪೊಲೀಸ್ ಠಾಣೆಗೆ ಎಳೆತಂದು, ಬಟ್ಟೆ ಬಿಚ್ಚಿಸಿ, ಲಾಕಪ್ಪಿಗೆ ಹಾಕುವ ಹುನ್ನಾರ ಶುರುವಾಗಿದೆ.

ಈ ಸರ್ಕಾರ ಬೆಳಿಗ್ಗೆ ಎದ್ದು ಹೊಟ್ಟೆಗೆ ಏನನ್ನು ತಿನ್ನುತ್ತದೆ? ನಮ್ಮ ಶಾಲೆಗೆ nearly ಎಂಟು ಸಾವಿರ ಮಕ್ಕಳು ಕುಣಕೊಂಡು ಬರುತ್ತವೆ. ಇದು ಸರ್ಕಾರಿ ಶಾಲೆಗಳಲ್ಲಿ ಏಕೆ ನಡೆಯುವುದಿಲ್ಲ? ನೀವು ಎಲ್ಲಾ ಗಣತಿಗಳಿಗೂ ಶಿಕ್ಷಕರನ್ನು ಕರೆಯುತ್ತೀರಿ. ನಿಮಗೆ ಬೇರೆ ಜನವಿಲ್ಲವಾ? ಹಾಗಾದರೆ, ನಿಮ್ಮ ಎಲ್ಲಾ ಎಲೆಕ್ಷನ್‌ಗಳಿಗೆ ಓಡಾಡಲು ಸಾವಿರಾರು ಮಂದಿ ಬೆನ್ನು ಹತ್ತಿ ಬರುತ್ತಾರಲ್ಲ? ಅವರು ಸಡನ್ನಾಗಿ ಎಲ್ಲಿಗೆ ಹೋಗಿಬಿಟ್ಟರು? ಅವರನ್ನ ಈ ಕ್ರಿಯಾಶೀಲ ಕೆಲಸಗಳಿಗೆ ಕರೆಯಲಾಗುವುದಿಲ್ಲವಾ? ಸ್ವಾಮೀ ಮಂತ್ರಿ ಮಾಗಧರೇ, ನೀವು ಅನ್ನದ ತುತ್ತು ಎಲ್ಲಿಗಿಟ್ಟುಕೊಳ್ಳುತ್ತೀರಿ? “ರೀ, ಇದು ಸರ್ಕಾರದ ಕೆಲಸ ಕಣ್ರೀ, ಅವರನ್ನೆಲ್ಲಾ ಇದಕ್ಕೆ ಕರಿಯೋಕಾಗುತ್ತಾ?" ಅಂತೀರಿ. Good, ಹಾಗಾದರೆ ನಿಮ್ಮದೇ ಆಡಳಿತದಲ್ಲಿರುವ ಸ್ತ್ರೀ ಶಕ್ತಿ, ಹೋಮ್ ಗಾರ್ಡ್ಸ್, NC C, Scouts-Guides, NSS, ಸೇವಾದಳ- ಇವೆಲ್ಲ ಅದೆಲ್ಲಿಗೆ ಹಾಳಾಗಿ ಹೋಗಿವೆ? ಅವರನ್ನೇಕೆ ಕರೆಯುತ್ತಿಲ್ಲ?

ನಿಮಗೆ ಮಿನಿಮಮ್ ನಾಚಿಕೆ ಇರಬೇಕು. “ಹಾಗಲ್ಲ, ಇದು ಕೇಂದ್ರದಿಂದ ಬಂದಿರುವ ಆದೇಶ" ಅನ್ನುತ್ತೀರಾ? ಅಲ್ಲಿ ಕೂಡ ಮನುಷ್ಯರೇ ಇದ್ದಾರೆ. ಇಂದ್ರ-ಚಂದ್ರ-ದೇವೇಂದ್ರರಿಲ್ಲ. ಶಿಕ್ಷಣ ಇಲಾಖೆ ಪೂರ್ತಿಯಾಗಿ ನಿಮ್ಮ ರಾಜ್ಯಾಡಳಿತದ ಕೈಯ್ಯಲ್ಲಿದೆ. ಅದು ಕೇಂದ್ರದ ಕೈಲಿಲ್ಲ: ಅದು ಕನ್‌ಕರೆಂಟ್ ಲಿಸ್ಟ್‌ನಲ್ಲೂ ಇಲ್ಲ. ನೀವು ಕಡ್ಡಾಯ ಶಿಕ್ಷಣದ ನೆಪದಲ್ಲಿ ಪೋಷಕರನ್ನು ಜೈಲಿಗೆ ಹಾಕುವ ಇಂಥ Draconian, ಭೀಕರ ಕಾಯಿದೆಗಳನ್ನು ಏಕೆ ತರುತ್ತೀರಿ?

ಸ್ವಾಮೀ, ಕಿಮ್ಮನೆಯವರೇ: ನಿಮ್ಮ ಬಿಸಿಯೂಟ, ಬಾಡೂಟ ಇತ್ಯಾದಿಗಳು ಮಗುವನ್ನು ಮಣಿಸುವುದಿಲ್ಲ. ಪೊಲೀಸರು ಪೋಷಕರನ್ನು ಜೈಲಿಗೆ ಕಳಿಸಿದರೆ, ಮಕ್ಕಳನ್ನೇನು ಮಂತ್ರಿಗಳು ಎತ್ತಿಕೊಂಡು ತಿರುಗಿ, ಅವುಗಳ ಕಕ್ಕ ತೊಳೆಯುತ್ತಾರಾ? sorry sir, ಮಕ್ಕಳನ್ನು ಶಾಲೆಗೆ ಬರುವಂತೆ ಪ್ರೇರೇಪಿಸುವುದು ಕೇವಲ ಅಲ್ಲಿನ environment. ಅವರಿಗೆ ಕಂಪ್ಯೂಟರು, ಆಟ, ಹಾಡು, ನೃತ್ಯ, ಆಟಿಕೆ ಜೊತೆಗೆ ಪ್ರೀತಿಯಿಂದ ಕಾಣುವ ಶಿಕ್ಷಕ ವೃಂದ ಬೇಕು. ಅಲ್ಲೇನಿದೆ? ‘ಆಸತ್ತು ಬ್ಯಾಸತ್ತು ಅಕ್ಕನ ಮನೆಗೆ ಹೋದ್ರೆ ಅಕ್ಕನ ಗಂಡ ತೆಕ್ಕೆ ಬಡಕೊಂಡ’ ಅಂತ ಒಂದು ಗಾದೆ ಇದೆ. ಹಾಗೆ, ಶಾಲೆಗೆ ಹೋದ ಆ ಎಳೇ ಮಕ್ಕಳನ್ನು ಮೇಷ್ಟ್ರುಗಳೇ ತಿಂದು ಮುಗಿಸುತ್ತಾರೆ! ನಮ್ಮ ಶಾಲೆಗಳಲ್ಲಿ for your information-smart classಗಳಿವೆ. Edu sat ವ್ಯವಸ್ಥೆ ಇದೆ. ತುಂಬ ಆಟಿಕೆಗಳಿವೆ. ದೇಶದಲ್ಲಿ(ನಾನು ನೋಡಿದಂತೆ) ಎಲ್ಲೂ ‘ಆಟದ ಸಾಮಾನಿನ ಲೈಬ್ರರಿ ಇಲ್ಲ’ ನನ್ನ ‘ಪ್ರಾರ್ಥನಾ’ದಲ್ಲಿ ಅದು ಇದೆ. ನಿಜಕ್ಕೂ Wonderful library!

ಇಂಥದ್ದೆಲ್ಲವನ್ನೂ ಸರ್ಕಾರ ಸಲೀಸಾಗಿ, ಶ್ರಮವೇ ಇಲ್ಲದೆ-ಮಾಡಿಬಿಡಬಹುದು. ಇವು ಕಮ್ಮನೆ, ಘಮ್ಮನೆ ಮುಂತಾದವರಿಗೆ ಗೊತ್ತಿಲ್ಲವಾ? ಅಥವಾ ತೋಚುವುದಿಲ್ಲವಾ? ಹಿಂದೆ ಬಸವರಾಜ ಹರಟ್ಟಿ ಶಿಕ್ಷಣ ಸಚಿವರಾಗಿದ್ದರು. ನಾವಿಬ್ಬರೂ ಏಕವಚನದ ಗೆಳೆಯರು. ಆಗ ಬೇರ‍್ಯಾವುದೋ ಕಾರಣಕ್ಕೆ ನನ್ನ ಆಫೀಸಿಗೆ ಬಂದಿದ್ದರು. “ದೋಸ್ತ್, ನನ್ನ ಶಾಲೆಯ ಕೇವಲ ಒಂದು ಬಿಲ್ಡಿಂಗ್ ನೋಡು. ಶಾಲೆಯನ್ನ ಹೇಗೆ ನಡೆಸಬೇಕಾಗುತ್ತೆ ಅನ್ನೋದು ತಿಳಿಯುತ್ತೆ" ಅಂದಿದ್ದೆ. ಹೊರಟ್ಟಿ ನಿಜಕ್ಕೂ ಆಶ್ಚರ್ಯಪಟ್ಟಿದ್ದರು.
ಹಾಗೆ ಶಾಲೆಗಳನ್ನು ಸರ್ಕಾರ ಎಲ್ಲೂ ನಡೆಸುವುದಿಲ್ಲ. ಯಾಕೆ? ಛಡಿ ಹಿಡಿದುಕೊಂಡು ಮಗುವನ್ನು ಶಾಲೆಗೆ ತರಲಾಗುತ್ತದೆಯಾ? ತಲೆಯಲ್ಲಿ ಮಿದುಳು ಎಂಬ ಪದಾರ್ಥವಿದ್ದರೆ, ಅವರು ಉತ್ತರ ಕೊಡಲಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 16 December, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books