Ravi Belagere
Welcome to my website
ಕೆಲವೊಮ್ಮೆ ಬಂಧುಗಳ, ಸ್ನೇಹಿತರ, ಪರಿಚಿತರ ಮನೆಗೆ ಹೋಗಲೇಬೇಕಾಗುತ್ತದೆ. ಎರಡು ದಿನದ ಮಟ್ಟಿಗೆ ಹೋಗಿದ್ದು ಬರುವುದಾದರೆ ಆ ಮಾತು ಬೇರೆ. ಆದರೆ ತಿಂಗಳುಗಟ್ಟಲೆ ಇರುವ ಪ್ರಸಂಗ ಬಂದರೆ? ನೀವು ಚಿಕ್ಕವರಾಗಿದ್ದಾಗ ಸಂಬಂಧಿಕರ ಮನೆಯಲ್ಲಿ, ಮತ್ಯಾವುದೋ ಕಾರಣಕ್ಕೆ ಒಂದಷ್ಟು ದಿನ ಇನ್ನೊಬ್ಬರ ಮನೆಯಲ್ಲಿ ಉಳಿದುಕೊಂಡ ಪ್ರಸಂಗವಿರಬಹುದು. ಆಗ ಮುಜುಗರ, ಸಂಕೋಚ, ಬೇಸರ ಎಲ್ಲವೂ ಆಗಿರಬಹುದು. ಯಾರಿಗೆ ಗೊತ್ತು? ನೀವು ಖುಷಿಯಿಂದಲೇ ಇದ್ದಿರಬಹುದು. ಹೀಗೆ ನಿಮ್ಮ ಅನುಭವಗಳನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ನಿಮ್ಮ ಫೊಟೋ ಜೊತೆ, ಚಿಕ್ಕದಾಗಿ ಮತ್ತು ಚೊಕ್ಕವಾಗಿ ಬರೆದು ಕಳಿಸಿ. ಈ ಮೇಲ್ ಮೂಲಕ ಕಳಿಸುವವರು [email protected] ಗೆ ಕಳಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಅವು ಯಾರ ಲೀಲೆಗೋ ಯಾರೋ ಗುರಿಯಿಲ್ಲದೆ ಬಿಟ್ಟ ಬಾಣಗಳು

ಒಂದೀಷ್ಟು ರಜೆ. ಸಾಲು ಸಾಲಾಗೇ ಬಂದವಲ್ಲ? ಅದೆಲ್ಲ ಮುಗಿಸಿ ನೀವು ಮತ್ತೆ ದುಡಿಮೆಯೆಂಬ ತಿರುಗಣಿಗೆ ಬಿದ್ದಿರಬೇಕಲ್ಲ? ನನಗೆ ಯಾಕೆ ಹಾಗಾಗುತ್ತದೋ ಗೊತ್ತಿಲ್ಲ: ನಾನು ಯಾವತ್ತಿಗೂ ರಜೆ enjoy ಮಾಡಿದವನಲ್ಲ. ಬಳ್ಳಾರಿಯ ಕಡೆಗೆ ನನ್ನ ಗೆಳೆಯರಿಗೆ ಹೀಗೆ ಸಾಲು ಹಿಡಿದು ರಜೆ ಬಂದವೆಂದರೆ, ಅವುಗಳಿಗೆ ಒಂದು ತಿಂಗಳ ಮುಂಚೆಯೇ ಸಭೆ ಸೇರಿ ಯಾವ್ಯಾವ ದಿನ ಏನೇನು ಮಾಡಬೇಕು, ಯಾವ ದಿನದಂದು ಯಾವ ಊರಿಗೆ ಹೋಗಬೇಕು, ಯಾರ ಮನೆಯಲ್ಲಿ ಮಾಂಸದ ಅಡುಗೆ ಮಾಡಿಸಿ ಆ ಭಕ್ಷ್ಯಗಳನ್ನು ಒಯ್ಯಬೇಕು: ಹಾಕುವ ‘ಗುಂಡಿನ’ ಜೊತೆಗೆ ಬಾಯಿಗೆ ಹಾಕಿಕೊಳ್ಳಲಿಕ್ಕೆ snacks ಬೇಕಲ್ಲ? ಅದು ಬ್ರಾಹ್ಮಣ ಗೆಳೆಯರ ಜವಾಬ್ದಾರಿ. ಅವಲಕ್ಕಿ, ಮಂಡಕ್ಕಿ, ವಡೆ, ಕೋಡುಬಳೆ, ರವೆ ಉಂಡೆ ಇತ್ಯಾದಿಗಳನ್ನು pack ಮಾಡಿಸಿ ತರುವುದು ಸದ್ಬ್ರಾಹ್ಮಣರಾದ ನಮ್ಮ ಜವಾಬ್ದಾರಿ. ನಮ್ಮ ಗುಂಪಿನಲ್ಲಿ ಒಂದಷ್ಟು ಜನ ಶೆಟ್ಟರೂ ಇದ್ದರಲ್ಲ. ಅವರ ಮನೆಯ ನಿಪ್ಪಟ್ಟು ತಿನ್ನದವನೇ ಪಾಪಿ! ಹೀಗೆ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡು, ಜೊತೆಗೊಂದು ಟವಲು ಮತ್ತು ಚೆಡ್ಡಿ ಇಟ್ಟುಕೊಂಡು ಹೊರಡುತ್ತಿದ್ದೆವಲ್ಲ? ಆ ಹುರುಪೇ ಹುರುಪು. ನಮ್ಮಲ್ಲಿ ಇಸ್ಪೀಟು ಆಡುವವರೂ ಇದ್ದರು. ಅವರು ಹಾಸಿಕೊಳ್ಳಲು ಜಮಖಾನ, ಒರಗಲು ದಿಂಬು, ಹೊಚ್ಚ ಹೊಸ ಇಸ್ಪೀಟಿನ ಪ್ಯಾಕು ಇತ್ಯಾದಿಗಳನ್ನೆಲ್ಲ ಕಟ್ಟಿಕೊಂಡು ರಜೆಯ ಹಿಂದಿನ ದಿನವೇ “ಜೈ ಭಜರಂಗ ಬಲಿ" ಎಂಬಂತೆ ರೆಡಿಯಾಗಿ ಬಿಡುತ್ತಿದ್ದೆವು. ಇಷ್ಟೆಲ್ಲ ಅಲ್ಲದಿದ್ದರೂ ಇದ್ದುದರಲ್ಲೇ ಒಂದಷ್ಟು ಹಣ ಪಟ್ಟಿ ಹಾಕಿ ಬಿಯರ್ ಬಾಟಲಿ ಕಟ್ಟಿಕೊಂಡು ಸೈಕಲ್ಲಿನ ಮೇಲೆ ಯಾತ್ರೆ ಹೊರಡುವುದೂ ಒಂದು ಪರಿಪಾಠವಾಗಿತ್ತು.

ನಿಧಾನವಾಗಿ ವಯಸ್ಸು, ಷೋಕಿ, ದುಡ್ಡು, ತಿಮಿರು-ಎಲ್ಲ ಬೆಳೆದುವಲ್ಲ? ಸಾಲು ಸಾಲಾಗಿ ಎಲ್ಲರೂ ಮನೆಯ ಗರಾಜುಗಳಿಂದ ತಂತಮ್ಮ ಮೊಬೈಕ್‌ಗಳನ್ನು ಈಚೆಗೆ ತೆಗೆಯಲಾರಂಭಿಸಿದೆವು. ಚಿಕ್ಕಂದಿನ ಮಾತು ಬಿಡಿ, ನಾನು ಹದಿನೆಂಟು-ಇಪ್ಪತ್ತರ ತಾರುಣ್ಯದಲ್ಲಿದ್ದಾಗಲೂ ಮೊಳಕಾಲುದ್ದದ ನೀರು ಕಂಡರೆ ಸಾಕು ಧುಮುಕಿ ಈಜಿಬಿಡುತ್ತಿದ್ದೆ. ನನ್ನಂಥವರು ಒಂದಷ್ಟು ಗೆಳೆಯರಿದ್ದರು. ನಾವು ಮಾತ್ರ extra, ಟವಲು ಒಯ್ಯುತ್ತಿದ್ದೆವು. ಈ ಇಸ್ಪೀಟಿನ gang ಇತ್ತಲ್ಲ? ಅವರಿಗೆ ಜಮಖಾನ, ಇಸ್ಪೀಟಿನ ಎಲೆ ಸಿಕ್ಕರೆ ಬೇರೆ ಪ್ರಪಂಚವೇ ಬೇಡ. “ಮೊದಲು ಆ ರವೀನ ಕರೀರಲೇ. ಅವನು ಪಕ್ಕದಲ್ಲಿ ಕುಳಿತರೆ ಭಯಂಕರ ಲಕ್ಕು" ಅನ್ನುತ್ತಿದ್ದ ಕಾಲವಿತ್ತು. ಅದಿನ್ನೆಂಥ ಲಕ್ಕೋ ದೇವರೇ ಬಲ್ಲ. ಅಷ್ಟೆಲ್ಲ ಲಕ್ ಇದ್ದರೆ ಅವರಿವರೇಕೆ, ನಾನೇ ಇಸ್ಪೀಟು ಕಲಿತು ಆಡಲು ಅಣಿಯಾಗುತ್ತಿರಲಿಲ್ಲವೆ? ಅದೇಕೋ ಕಾಣೆ, ನಾನು ಜನ್ಮದಲ್ಲೇ ಎರಡು ಕೆಲಸ ಮಾಡಲಿಲ್ಲ, ಕಲಿಯೋಣವಾ ಎಂಬ ಯೋಚನೆಯನ್ನೇ ಮಾಡಲಿಲ್ಲ. ಅದರಲ್ಲಿ ಮೊದಲನೆಯದು ಇಸ್ಪೀಟು: ಎರಡನೆಯದು ಪಲ್ಲಂಗ ಸುಖ! ಉಳಿದಂತೆ ಮಾಂಸ-ಮಡ್ಡಿ ತಿಂದೆ, ನಾನಾ ಊರು-ದೇಶ ಸುತ್ತಿದೆ, ತೀರ ಬೀದಿಯಲ್ಲಿ ನಿಂತು ರಾಣಾರಂಪವಾಗುವಂತೆ ಬಡಿದಾಡಿದೆ, ನನಗೆ ಜೀವನದುದ್ದಕ್ಕೂ ಗೆಳತಿಯರಿದ್ದರು-ಇದೆಲ್ಲ ಸರಿಯೇ. ಆದರೆ ಇಸ್ಪೀಟು ಆಡಲಿಲ್ಲ. ಇಸ್ಪೀಟೊಂದೇ ಅಲ್ಲ: ಚಿಕ್ಕದೊಂದು bet ಕೂಡ ಕಟ್ಟಲಿಲ್ಲ. ಇನ್ಯಾವುದೇ ತರಹದ ಜೂಜಿಗೆ ನಾನು ಕೈ ಹಾಕಲಿಲ್ಲ. ನನ್ನ ಪ್ರಕಾರ, ಅದು ದುರಾಸೆಯ ಸಂಕೇತ. ಮತ್ತೊಬ್ಬರ ದುಡ್ಡು ಅಥವಾ ಸಂಪತ್ತು ಕೆದರಿ ತಿನ್ನುವ ಬಲಹೀನತೆ. ಇದಕ್ಕಿಂತ ಜಿಗುಪ್ಸಾಕರವಾದದ್ದು ವೇಶ್ಯೆಯರ ಸಂಗ. ಅದರ ಅವಶ್ಯಕತೆ ನನಗೆ ಜೀವನದಲ್ಲಿ ಯಾವಾಗಲೂ ಬರಲಿಲ್ಲ. ನಾನೇನೂ ಶ್ರೀರಾಮಚಂದ್ರ ಅಂತ ಅಲ್ಲ. ಮೊದಲನೆಯದಾಗಿ ನನಗೆ ಅದರ ಅವಶ್ಯಕತೆ ಬರಲಿಲ್ಲ. ತೀರ ಇಪ್ಪತ್ತೊಂದನೆಯ ವಯಸ್ಸಿಗೇ ಮದುವೆಯಾದೆ. ನನ್ನನ್ನು ತುಂಬ ಪ್ರೀತಿಸುವ, ಮನಸ್ಸನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವ ಗೆಳತಿಯರು ಜೀವನದುದ್ದಕ್ಕೂ ಇದ್ದರು. ಒಂದಿಷ್ಟಾದರೂ ಪ್ರೀತಿಸದೆ ಯಾರೇ ಸ್ತ್ರೀಯರೊಂದಿಗೆ ಪಲ್ಲಂಗ ಹಂಚಿಕೊಳ್ಳಲು ಸಾಧ್ಯವಾಗುತ್ತದಾದರೂ ಹೇಗೆ? I can't understand. ನಾನು ಎಂದಿಗೂ ‘ಮಾಂಸ’ ಖರೀದಿಸಲಿಲ್ಲ. ನನ್ನ ಪ್ರಕಾರ ಒಬ್ಬ ಗಂಡಸು ತನ್ನ ಇಷ್ಟದ ಹೆಣ್ಣನ್ನು ತಾನು ದುಡಿಯಲಾಗದಿದ್ದರೆ, ಆಕೆಯಲ್ಲಿ ತೀವ್ರವಾದ ಪ್ರೀತಿಯ ಸೆಲೆಯೊಡೆಯದಂತೆ ಮಾಡಲಾಗದಿದ್ದರೆ- ಅವನು ಮಾತ್ರ ಈ ಪಲ್ಲಂಗ ಖರೀದಿ ಕೆಲಸಕ್ಕೆ ಮುಂದಾಗುತ್ತಾನೆ. ಅದೂ ಏನು, ನೆಟ್ಟಗೆ ಹೋಗಿ ವೇಶ್ಯೆಯರನ್ನು ಕರೆಯಲಾಗುವುದಿಲ್ಲ. ಸುಗಂಧ, ತುಂಬ ಚೆಂದಗಿನ ಬಟ್ಟೆ, ಚೈನು, ಬ್ರೆಸ್‌ಲೆಟ್ಟು, ಮಲ್ಲಿಗೆ ಹೂವು ಇವೇ ಮುಂತಾದ ನೆಸೆಸಿಟಿಗಳ ಸಾಲಿನಲ್ಲಿ ಸರಿಯಾದ ವೇಶ್ಯೆಯನ್ನು ಹುಡುಕಿಕೊಡುವ ಪಿಂಪ್ ಕೂಡ ಬೇಕು. ಶುದ್ಧ nonsense. ಅದನ್ನೆಲ್ಲ ಮಾಡುವ ವ್ಯವಧಾನ ಮತ್ತು ಸಮಯ ಇದ್ದಿದ್ದರೆ, ನಾನು ಇನ್ನೊಂದೆರಡು ಕಾದಂಬರಿ ಬರೆಯುತ್ತಿದ್ದೆ. ಆ ಹೆಂಗಸರ ಸುದ್ದಿ ಕೇಳಿದರೆ ಸಾಕು, ಒಂದು ತೆರನಾದ ರೇಜಿಗೆ ಹುಟ್ಟುತ್ತದೆ. ಹೀಗಾಗಿ ಭಯಂಕರವಾದ ಎರಡು ವಿನಾಶಕಾರಿ ಚಟಗಳಿಂದ ನಾನು ಬಚಾವಾದೆ.

ನನಗೊಬ್ಬ ಗೆಳೆಯನಿದ್ದ. ಈಗಲೂ ಇದ್ದಾನೆ. ಶುದ್ಧ ಹಿಮದಷ್ಟು ಬಿಳಿಯ ಅಂಗಿ, ಪ್ಯಾಂಟು ಹಾಕಿಕೊಂಡು ಅವನು ನಡೆದು ಬರುತ್ತಿದ್ದರೆ, ನಾವು ಪುರಾಣದ ಓದಿನಲ್ಲಿ ಕಿನ್ನರ-ಕಿಂಪುರುಷ ಅಂತ ಓದುತ್ತಿದ್ದೆವಲ್ಲ? Exactly ಕಿಂಪುರುಷರಂತೆಯೇ ಕಾಣುತ್ತಿದ್ದ. ಅಂಥ ರೂಪು ಅವನದು. ಅವನಿಗೆ ಅಪಾರವಾದ ಶ್ರೀಮಂತಿಕೆ ಈಗಲೂ ಇದೆ. ಕಾಲೇಜು, ಓದು -ಉಹುಂ ಕೇಳಬೇಡಿ. ಸಂಜೆ ಕರಾರುವಾಕ್ಕಾಗಿ ನಮ್ಮೊಂದಿಗೆ ಕುಡಿಯುತ್ತಿದ್ದ. ನಮ್ಮದು ಬೆಳತನಕ ನಡೆಯುವ ಪಾರ್ಟಿಗಳು. ಆದರೆ ಅವನಿಗೆ ಅಷ್ಟಿಷ್ಟು ಗೆಳತಿಯರು ಇದ್ದರೇನೋ? ಇದ್ದಿರಲೂಬಹುದು. ಆದರೆ ಈ ಇಸ್ಪೀಟಿನ ಚಟ ಮಾತ್ರ ಮೈತುಂಬ ಇತ್ತು. ನನಗೆ ಅರ್ಥವಾಗದ ಸಂಗತಿಯೆಂದರೆ ಇಸ್ಪೀಟು ಆಡಲಿಕ್ಕೆ ಹೆಚ್ಚಿನವರು ಊರಿಂದ ಊರಿಗೆ, ಹೊಲ-ತೋಟಗಳಿಗೆ ಯಾಕೆ ಹೋಗುತ್ತಾರೆ. ಮೊನ್ನೆ ಬೆಂಗಳೂರಿನಲ್ಲಿ ಒಂದು ಸುಪ್ರಸಿದ್ಧ ಲಾಡ್ಜ್‌ನಲ್ಲಿ ಸುಮಾರು ಐವತ್ತು ಮಂದಿ ಇಸ್ಪೀಟುಕೋರರು ಪೊಲೀಸರಿಗೆ ಸಿಕ್ಕುಬಿದ್ದರು. ಆ ಪೈಕಿ ಯಾರೂ ಬೆಂಗಳೂರಿನವರಲ್ಲ. ರಾಜಸ್ತಾನದವರ? mostly ಗುಜರಾತದವರಿರಬೇಕು. ಆ ಪರಿ ದೂರದಿಂದ ಕೇವಲ ಇಸ್ಪೀಟಾಡಲಿಕ್ಕೆಂದೇ ಬಂದಿದ್ದರು. ಯಾಕೆ, ಗುಜರಾತದ ಯಾವುದೇ ಊರಿನಲ್ಲಿ ಆಡಲಿಕ್ಕೆ ಆಗುತ್ತಿರಲಿಲ್ಲವಾ? “ಗೊತ್ತಿಲ್ಲ ಸರ್, ಅವರು ತಿಂಗಳು-ಎರಡು ತಿಂಗಳಿಗೊಮ್ಮೆ ಹೀಗೆ ಬಸ್ಸುಗಟ್ಟಲೆ ಜನ ಬರುತ್ತಾರೆ. ವಿಪರೀತ ಹಣ ತಂದು ಪಣಕ್ಕಿಡುತ್ತಾರೆ. ಇಸ್ಪೀಟಿಗೆ ಕುಳಿತರೆಂದರೆ ಬೇರೆ ಪ್ರಪಂಚದ ಪರಿವೆಯೇ ಇರುವುದಿಲ್ಲ" ಅಂತ ಪೊಲೀಸ್ ಪೇದೆಯೊಬ್ಬ ಹೇಳುತ್ತಿದ್ದ.

ನನ್ನ ಈ ಗೆಳೆಯನಿಗೂ ಅದೇ ರೋಗ. ತುಂಬ ಹಣ ತೆಗೆದುಕೊಂಡು ಅವನು ಇಸ್ಪೀಟಾಡಲು ಹೋಗಿಬಿಡುತ್ತಿದ್ದ. ಅದೊಂದು ದಿನ ಎಲ್ಲಿಗೋ ಹೋದ. ಅವನು ಹೋದ ಒಂದೆರಡು ದಿನದಲ್ಲೇ ಅನಾರೋಗ್ಯದಿಂದಿದ್ದ ಅವನು ತಾಯಿ ತೀರಿಕೊಂಡುಬಿಟ್ಟರು. ಅವನಿಗೆ ಒಬ್ಬ ಸೋದರಿಯಿದ್ದಳು, ನನಗೆ ಗೊತ್ತು. ಆದರೆ ಅಣ್ಣತಮ್ಮಂದಿರಿದ್ದುದು ಕಾಣೆ. ಬಹುಶಃ ಇರಲಿಲ್ಲ. ತಾಯಿಗೆ ಮಣ್ಣು ಕೊಡಲಿಕ್ಕೆ ಈ ಮಗ ಬರಬೇಕಲ್ಲ? ಅದೆಲ್ಲಿಂದ ಬಂದಾನು? ಅವನ ತಂದೆ ಮಗನನ್ನು ಹುಡುಕಲೆಂದೇ ಒಂದಷ್ಟು ಜನರನ್ನು ಅಟ್ಟಿದರು. ಅದು ಮೊಬೈಲ್ ಫೋನ್‌ಗಳಿದ್ದ ಕಾಲವೂ ಅಲ್ಲ. ಸಾಮಾನ್ಯವಾಗಿ ಇವನು ಹೋಗುವ ಕ್ಲಬ್‌ಗಳು, ನಗರದ ಆಸುಪಾಸಿನ ಹೊಲ-ತೋಟಗಳು, ಕರ್ನಾಟಕವಷ್ಟೇ ಅಲ್ಲ-ಆಂಧ್ರದ ಕೆಲವು ಊರುಗಳು, ಹೀಗೆ ತಮಗೆ ತೋಚಿದ ಕಡೆಗಳಿಗೆಲ್ಲ ಹೋಗಿ ಬಂದರು. ಹೆಚ್ಚಿನದಾಗಿ ಅವನು ಯಾರ‍್ಯಾರ ಜೊತೆಯಲ್ಲಿ ಬೆರೆಯುತ್ತಿದ್ದನೋ ಅವರನ್ನೆಲ್ಲ ವಿಚಾರಿಸಿದರು. ಇನ್ನೊಂದೆಡೆ, ತಾಯಿಯ ಪ್ರಾಣ ಹೋಗಿದೆ. ಮೊದಲೇ ನಮ್ಮದು ರಣ ಬಿಸಿಲಿನ ಊರು. ಏನೇ ಮಂಜುಗಡ್ಡೆ ತರಿಸಿ ಇಟ್ಟರೂ, ಕೊಳೆಯುವ ಶವ ಕೊಳೆತು ತೀರುತ್ತದೆ. ವಾಸನೆ ಬರಲಾರಂಭಿಸುತ್ತದೆ. ಹಾಗೆ ಅನಾಮತ್ತು ಮೂರು ದಿನ ಆಕೆಯ ಶವವನ್ನು ಇಟ್ಟು ಜೋಪಾನ ಮಾಡಿದರೂ ಇವನ ಪತ್ತೆ ಆಗಲೇ ಇಲ್ಲ. ಹುಡುಕಲು ಹೋದವರೆಲ್ಲ ಬರಿಗೈಲಿ ತಿರುಗಿ ಬಂದರು. ಆವತ್ತಿಗೆ ತಾಯಿ ತೀರಿಕೊಂಡು ಮೂರು ದಿನ ಕಂಪ್ಲೀಟಾಗಿದ್ದವು. ಆಗಲೂ ಈ ಮಹಾಶಯ ಬರಲಿಲ್ಲ. ಅವರಾದರೂ ಏನು ಮಾಡಿಯಾರು. ಇನ್ನೂ ಇಟ್ಟರೆ ತೀರ ಕಿರಿಕಿರಿಯಾಗುತ್ತದೆ ಅನ್ನಿಸಿ ಶವವನ್ನು ಮಣ್ಣು ಮಾಡಿಬಿಟ್ಟರು.

ನಾಲ್ಕನೆಯ ದಿನ ಕಾರಿನಿಂದ ಇಳಿದನಲ್ಲ? ಮನೆಯಲ್ಲಿ ಒಂದೇ ರೋದನ. ನನಗೆ ಇವತ್ತಿಗೂ ಅದನ್ನೆಲ್ಲ ನೆನಪು ಮಾಡಿಕೊಂಡರೆ ಜೀವ ವಿಲಗುಟ್ಟುತ್ತದೆ. ಆದರೆ ಇವನು ವಿಲಾಸಿ. ತಾಯಿ ತೀರಿಕೊಂಡರೆ ಏನಂತೆ? ಎಲ್ಲರೂ ಒಂದಲ್ಲ ಒಂದು ದಿನ ಸಾಯಲೇಬೇಕು. ಮನೆಯ ಮಗ ನಾನು. ಇದ್ದರೆ ಇದ್ದೆ. ನಾನೇನು ಬೇಕಂತಲೇ ಹೋಗಿದ್ದೆನಾ? ಇಸ್ಪೀಟಿಗೆ ಹೋಗೋದು ಇದ್ದೇ ಇದೆ. ತಾಯಿ ತೀರಿಕೊಂಡರೆಂಬುದು ನನಗೇನು ಕನಸು ಬಿದ್ದು ಗೊತ್ತಾಗಬೇಕಾ- ಅನ್ನುವಂತಹ ಒರಟನೇ ಈ ಮಿತ್ರ. ಆದರೆ ಅವತ್ತು ತಾಯಿ ಇಲ್ಲದ ಆ ಬಂಗಲೆಯೊಳಕ್ಕೆ ಅವನು ಕಾಲಿಟ್ಟಿದ್ದೊಂದೇ ಗೊತ್ತು. ಅವನ ಮನಸ್ಸಿನಲ್ಲಿ ಏನಾಯಿತು? ಏನು ಯೋಚಿಸಿದ? ಎಷ್ಟು ದುಃಖ? ಎಂಥ ಮನೋಕ್ಷೋಭೆ? ಯಾವ ತೆರನಾದ ರೂಪಾಂತರ? ಗೊತ್ತಿಲ್ಲ- ನಮಗೆ ಅಸಲು ನಂಬಲಿಕ್ಕೆ ಸಾಧ್ಯವೇ ಇಲ್ಲದಂತಹ ಸಂಗತಿಯದು. “ಆ ಪರಿ ಆಡ್ತಿದ್ನಲ್ಲಪ್ಪಾ? ಧಣಿ ಇಸ್ಪೀಟು ಬಿಟ್ಟೇಬಿಟ್ಟ!" ಅಂತ ಗೆಳೆಯನೊಬ್ಬ ಹೇಳಿದ. ಅಷ್ಟೇ ಅಲ್ಲ, ಅವನ ಕೈಯಲ್ಲಿ ಮತ್ಯಾರೂ, ಯಾವತ್ತೂ ಇಸ್ಪೀಟಿನ ಎಲೆ ನೋಡಲೇ ಇಲ್ಲ. Totally off. ಕೆಲವು ಘಟನೆಗಳು ಕೆಲವು ಸಲ ಹೇಗೆ ಬದುಕಿನ turning pointsಗಳಾಗಿ ಬಿಡುತ್ತವಲ್ಲವೇ? ಮದುವೆಯಾದ ಮೇಲೆ ಕೆಲಕಾಲ ಅವನಿಗೆ ಮಕ್ಕಳಾಗಲಿಲ್ಲ. “ತಾಯಿಯ ಮಣ್ಣಿಗೇ ಬರಲಿಲ್ಲ ಧಣಿ. ಆಕೆಯದೇ ಶಾಪ. ಮಕ್ಕಳಾಗಲಿಲ್ಲ ನೋಡು" ಅಂತ ತಲೆಗೊಬ್ಬರಂತೆ ಮಾತನಾಡಿದರು. ಅಂಥ ಮಾತುಗಳಿಗೆಲ್ಲ ಎಂಥ ತರ್ಕ ಇದ್ದೀತು. ಇತ್ತೀಚೆಗೊಂದು ದಿನ ನನ್ನ ವಕೀಲರು-ಅದಕ್ಕಿಂತ ಹೆಚ್ಚಾಗಿ ನನ್ನ ಹಿರಿಯ ಗೆಳೆಯರಾದವರೊಬ್ಬರ ಜೊತೆಗೆ ಮಾತನಾಡುತ್ತಾ ಕುಳಿತಿದ್ದೆ. ಈ ಗೆಳೆಯ ಬಂದೇ ಬಿಟ್ಟನಲ್ಲ? ಇರುತ್ತವಲ್ಲ, ಆಸ್ತಿ-ಪಾಸ್ತಿಯ ಲಿಟಿಗೇಶನ್ನುಗಳು? ಅದಕ್ಕಾಗಿ ವಕೀಲರಲ್ಲಿಗೆ ಬಂದಿದ್ದ. ಕೊಂಚ ದಪ್ಪಗಾದ ಆನ್ನಿಸಿತು. “ಯಾವುದೂ ಚಟಗಳಿಲ್ಲಲ್ಲಪ್ಪಾ? ಅದಕ್ಕೇ ಮೈ ಬಂದು ಬಿಟ್ಟೈತೆ" ಅಂದ. ಅದೇ ಶುಭ್ರ ಬಿಳಿ ದಿರಿಸು. ಅವನು ಸಂತೋಷವಾಗಿ ಬದುಕುತ್ತಿದ್ದಾನೆ ಅನ್ನಿಸಿತು.

ಅದೇ ಗುಂಪಿನವನು ಈ “ಅಶೋಕ ಹೋಟ್ಲಿನ ರಾಮು!". ಅವನು ನನ್ನದೇ ಓರಗೆಯವನು. ಒಂದು ಕಾಲಕ್ಕೆ ಚಿತ್ರನಟ ಜೈಜಗದೀಶ್‌ನನ್ನೇ ಹೋಲುತ್ತಿದ್ದ. ಬಳ್ಳಾರಿಯಲ್ಲಿ ತುಂಬ ಜನದಟ್ಟಣೆ ಇರುವ ಜಾಗದಲ್ಲಿದ್ದುದು ಅಶೋಕ ಹೊಟೇಲ್. ಅದು ಬಳ್ಳಾರಿಯ ಜಿಲ್ಲಾಧಿಕಾರಿಗಳ ಅದ್ಭುತವಾದ ಅರಮನೆಯಂತಹ ಆಫೀಸಿನ ಎದುರಿಗೇ ಇತ್ತು. ಮೊದಲೇ ಚಿಕ್ಕ ಊರು. ಆ ಹೊಟೇಲಿನ ಆಸುಪಾಸಿನಲ್ಲೇ ಅನೇಕ ಕಚೇರಿಗಳಿದ್ದುದರಿಂದ ಊರಿನ ಪ್ರತಿಯೊಬ್ಬರೂ ದಿವಸದ ಒಂದಲ್ಲ ಒಂದು ಸಮಯದಲ್ಲಿ ಹೋಗಲೇಬೇಕು. ಹೀಗಾಗಿ ಅಶೋಕ ಹೊಟೇಲಿಗೆ ಭರ್ಜರಿ ವ್ಯಾಪಾರ. ಅದನ್ನು ಕಟ್ಟಿಸಿದ್ದು, ವ್ಯಾಪಾರವನ್ನು ಮಟ್ಟಸವಾದ ರೀತಿಯಲ್ಲಿ establish ಮಾಡಿದ್ದು ರಾಮು ತಂದೆ. ಅವರ ಹೆಸರೇನೋ? ಮರೆತಿದೆ. ಬಹುಶಃ ಅವರು ಕುಂದಾಪುರದ ಕಡೆಯವರು. ಓಡಾಡಲಿಕ್ಕೆ ಬೂದು ಬಣ್ಣದ ಒಂದು ವೆಸ್ಪ ಸ್ಕೂಟರ್ ಇಟ್ಟುಕೊಂಡಿದ್ದರು. ಬಿಳೀ ಪಂಚೆ, ಬಿಳೀ ಷರಟು. ‘ಅಶೋಕಾ ಹೋಟ್ಲು ಸಾವ್ಕಾರ್ರಿಗೆ ಮೋಕಾದಲ್ಲಿ ಒಂದು ಸ್ಟೆಪ್ನಿ ಐತಂತೆ" ಎಂದು ಜನ ಮಾತನಾಡುತ್ತಿದ್ದರು. ಸ್ಟೆಪ್ನಿ ಅಂದರೆ ಉಪ ಪತ್ನಿ. ಆ ಕಾಲಕ್ಕೆ ಮೋಕಾ ಒಂದು ಗ್ರಾಮ, ಕೊಂಚ ದೊಡ್ಡ ಗ್ರಾಮ. ಈಗ ನೋಡಿದರೆ ಅದೊಂದು ವಿಧಾನಸಭಾ ಕ್ಷೇತ್ರ! ಹಾಗೆ ಬೆಳೆದಿದೆ.

ಅಂಥ ಹೊಟೇಲಿನ ಸಾವ್ಕಾರ್ರು ಅದೊಂದು ದಿನ ತಮ್ಮದೇ ಸ್ಕೂಟರಿನಲ್ಲಿ, ತಮ್ಮ ಅಶೋಕಾ ಹೊಟೇಲಿನ ಮುಂದೆಯೇ, just ಅದರ ಅಂಗಳದೆದುರಿನಲ್ಲೇ ಲಾರಿಯೊಂದರ ಕೆಳಗೆ ಸ್ಕೂಟರಿನ ಸಮೇತ ಬಿದ್ದು ಸತ್ತು ಹೋದರು. ಅವರ ಪತ್ನಿ, ಅಂದರೆ ರಾಮೂನ ತಾಯಿ ತುಂಬ ಒಳ್ಳೆಯ ಹೆಣ್ಣುಮಗಳು. ನಾವೆಲ್ಲ ಆಕೆಯನ್ನು ‘ಅಮ್ಮ’ ಅಂತಲೇ ಅನ್ನುತ್ತಿದ್ದೆವು. very pious lady. ಗಂಡ ತೀರಿಹೋದರು. ಆದರೆ ಹೊಟೇಲ್ ನಡೆಸಲು ಯಾರಾದರೂ ಬೇಕಲ್ಲ! ಈ ಮಾತು ಹಿಂದೊಮ್ಮೆ ಬರೆದಿದ್ದೆ. “ಹದಿನೇಳು ವರ್ಷಕ್ಕೆ ಹಿರಿತನ ಸಿಗಬಾರದು, ಎಪ್ಪತ್ತನೇ ಮುಪ್ಪಿನಲ್ಲಿ ಮದುವೆಯಾಗಬಾರದು!" ಅಂತ. ರಾಮುವಿಗೆ ಆದದ್ದೇ ಅದು. ಅವನಿಗೆ ಭಯಂಕರ ಹುಡುಗಾಟ. ಎಣಿಸಿದರೆ ಪ್ರತಿರೋಮಕ್ಕೂ ಒಂದು ಚಟ. ಹೈಸ್ಕೂಲು ಮುಗಿಸುವ ಹೊತ್ತಿಗಾಗಲೇ ಅವನಿಗೆ ಊರಿನ ಅಷ್ಟೂ ವೇಶ್ಯೆಯರು ಪರಿಚಯವಾಗಿದ್ದರು. ‘ಮಾಮಾ, ಬಳ್ಳಾರಿ ಸೂಳೇರೆಲ್ಲ ಮುಗಿದರು. ಅವೇ ಮುಖಗಳನ್ನ ನೋಡಿ ನೋಡಿ ಶುದ್ಧ ಬೋರ್. ಒಂದು ರೌಂಡ್ ಹೊಸಪೇಟೆಗೆ ಹೋಗಿ ಬರಬೇಕು" ಅನ್ನುತ್ತಿದ್ದ. ತಮಾಷೆಯೆಂದರೆ, ಅದೊಂದು ಟ್ರಯಾಂಗಲ್. ಬಳ್ಳಾರಿ-ಹೊಸಪೇಟೆ-ಗುಂತಕಲ್ಲು! ಒಬ್ಬ ವೇಶ್ಯೆ ಈ ಮೂರು ಊರುಗಳಲ್ಲೇ turn by turn ‘ಸೇವೆ’ ಮಾಡುತ್ತಿದ್ದಳು. ರಾಮು ಈ ಮೂರೂ ಬೇಸರವಾಗಿ ಇದೇ ಕೆಲಸಕ್ಕೆಂದು ಬೆಂಗಳೂರಿಗೆ ಹೋಗುತ್ತಿದ್ದ. ಆದರೆ ಇದಕ್ಕೆಲ್ಲ ಹೆಚ್ಚು ಖರ್ಚಾಗುತ್ತಿರಲಿಲ್ಲ. ಆ ಕಾಲಕ್ಕೆ ರಾಮು ಕೈಯಲ್ಲಿ ಸಾವಿರಗಟ್ಟಲೆ ಹಣವಿರುತ್ತಿತ್ತು. ಆದರೆ ಇವನು ಇಸ್ಪೀಟಿಗೆ ಕುಳಿತು ಬಿಟ್ಟ. ಸೋಲುವುದು ಅಂದರೆ ಅದಿನ್ಯಾವ ಪರಿ ಸೋಲೋದು? ಮಹರಾಯ ಚೆಕ್‌ಬುಕ್ಕು - ಪಾಸ್‌ಬುಕ್ಕು ಇಟ್ಟುಕೊಂಡು ಇಸ್ಪೀಟಾಡುತ್ತಿದ್ದ. ಇವೆರಡು ಚಟಗಳು ಸಾಲವು ಎಂಬಂತೆ ಅವನಿಗೆ ಆಕ್ಸಿಡೆಂಟಿನದೊಂದು ಚಟವಿತ್ತು! ಕಾರು ಹತ್ತಿಬಿಟ್ಟರೆ, ಭರ್ಜರಿ ಕುಡಿದೇ ಹತ್ತುತ್ತಿದ್ದ. ಒಂದಲ್ಲ ಒಂದು ರಸ್ತೆಯಲ್ಲಿ ಯಾರಿಗೋ ಹೆಟ್ಟಿ, ಅವರಿಗಿಂತ ಹೆಚ್ಚಾಗಿ ಇವನೇ ಲಬಲಬ ಬಾಯಿ ಬಡಿದುಕೊಳ್ಳುತ್ತಿದ್ದ! ಆವಾಗ ಯಾರ‍್ಯಾರು ಪೊಲೀಸ್ ಅಧಿಕಾರಿಗಳಿದ್ದರೋ ಅವರೆಲ್ಲ ತಿಂದು ತೇಗಿದ್ದು ‘ರಾಮು ಸಾವ್ಕಾರ’ನ ಹಣದಲ್ಲಿ. ಹಾಗೆ ರಾಮು ಸರ್ವಚಟ ಸಂಪನ್ನನಾಗಿ ಹೋದ. ಎಂಥ ವ್ಯಾಪಾರವಿದ್ದರೂ, ತಳಕ್ಕೆ ತೂತು ಬಿದ್ದರೆ ಏನು ಗತಿಯಾಗಬೇಕು? ಇವನಿಂದ ಹೊಟೇಲು ನಡೆಸುವುದಾಗಲಿಲ್ಲ. ಇವನ ಅಕ್ಕನ ಗಂಡ ಬಂದು ಗಲ್ಲಾದ ಮೇಲೆ ಕುಳಿತ. ಆತತಾನೇ ಈ ಪುಂಡನನ್ನು ಹೇಗೆ ನಿಯಂತ್ರಿಸಿಯಾನು? ಆತನೂ ಒಂದರ್ಥದಲ್ಲಿ ಜೇನು ಕಿತ್ತ. ಬೆರಳೂ ನೆಕ್ಕಿದ. ರಾಮುವಿನ ಕುಡಿತ, ಇಸ್ಪೀಟು, ಸೂಳೆಗಾರಿಕೆ, ದಿನಗಟ್ಟಲೆ ಮನೆ ಸೇರದಿರುವಿಕೆ -ಇದನ್ನೆಲ್ಲ ಸಹಿಸಲಾಗದೆ ರಾಮುವಿನ ಪತ್ನಿ ತವರಿಗೆ ಹೋಗಿಬಿಟ್ಟಳು. ಆಕೆ ಹಿರಿಯ ಅಧಿಕಾರಿಯೊಬ್ಬರ ಮಗಳು ಅಂತ ನೆನಪಿದೆ. ಆದರೆ, ರಾಮುವಿನ ತಾಯಿಯೇ ಹೋಗಿ ಆಕೆಯನ್ನ ವಾಪಸ್ ಕರೆತಂದರು. ಈ ಎರಡನೇ entry ನಿಜಕ್ಕೂ ಅನಾಹುತಕಾರಿಯಾಗಿತ್ತು. ಆಕೆ ಒಂದೊಂದು ರೀತಿಯಲ್ಲಿ ಹಣಿಯಲಿಲ್ಲ. ಇವನ ಕೈಗೆ ಸಾವಿರಾರು ರುಪಾಯಿಗಳ ಮಾತಿರಲಿ, ಬೀಡಿ-ಸಿಗರೇಟಿನ ಖರ್ಚಿಗೂ ಒಂದು ರುಪಾಯಿ ಸಿಗದಂತೆ ಮಾಡಿದಳು. ಆ ಹೊತ್ತಿಗಾಗಲೇ ಹೊಟೇಲು ಕೈ ಬಿಟ್ಟಿತ್ತು. ಆ ಕಟ್ಟಡದಲ್ಲೇ ಒಂದು ಚಿಕ್ಕ ಜಾಗ ಮಾಡಿಕೊಂಡು ಇವನು ಖುದ್ದಾಗಿ ನಿಂತು ಝರಾಕ್ಸ್ ಅಂಗಡಿ ನಡೆಸುತ್ತಿದ್ದ. ಮೊದಲಿನ ಯಾವ ಐಭೋಗವೂ ಉಳಿದಿರಲಿಲ್ಲ. ಅದೊಂದು ದಿನ ನನಗೆ ಫೋನ್ ಮಾಡಿದ. “ಮಾಮಾ ಮಾಮಾ, ಅಂಗಡಿಗೇ ಬಂದು ನನ್ನ ಹೆಂಡ್ತಿ ಚಪ್ಲಿ ಕಿತ್ತಿ ಹೊಡೆದು ಬಿಟ್ಲಲೇ ಮಾಮಾ..." ಎಂದು ಗೋಳು ಕರೆದ. ಅವರಿಬ್ಬರಿಗೂ ರಾಜಿ ಮಾಡಿಸಲು ಅನೇಕ ಗೆಳೆಯರು ಪ್ರಯತ್ನಿಸಿದರು. ‘ಅಣ್ಣಾ, ನನ್ನ ಮಕ್ಕಳು ಬೆಳೆದಿದ್ದಾರೆ. ಅವರು ಇಂಜಿನಿಯರೋ, ಡಾಕ್ಟರೋ ಆಗಬೇಕು ಅಂತ ನನಗೆ ಆಸೆಯಿಲ್ಲ. ಇದ್ದಾನಲ್ಲ ಈ ಸೂಳೇಮಗ? ಇವನ್ನ ರಾಯಲ್ ಸರ್ಕಲ್‌ನಲ್ಲಿ ಕೊಲೆ ಮಾಡಿ, ಅವತ್ತು ರಾತ್ರಿ ನಿನ್ನ ಕ್ರೈಂ ಡೈರಿಯೊಳಗೆ ಬರಬೇಕು ನೋಡು!" ಅಂದಳು. ಇನ್ನೆಲ್ಲಿಯ ರಾಜಿ?

ಬರಬರುತ್ತಾ ರಾಮು ಒಂದು ತೆರನಾದ, ಟಾಲರೇಟ್ ಮಾಡಲಿಕ್ಕೆ ಸಾಧ್ಯವೇ ಇಲ್ಲದಂಥ ಮನುಷ್ಯನಾಗಿಬಿಟ್ಟ. ಅವನಿಗೆ ಎಂತೆಂಥವೋ ಗಾಯ, ಅಲರ್ಜಿಗಳು. ಕೆಲಕಾಲ ಬಿಟ್ಟವನು ಮತ್ತೆ ಕುಡಿಯಲಾರಂಭಿಸಿದ. ‘ರಾಮು ಕೆಟ್ಟವನು’ ಅಂತ ಇವತ್ತಿಗೂ ನಾನು ಅನ್ನುವುದಿಲ್ಲ. ಬಳ್ಳಾರಿಯಲ್ಲಿ ಯಾರೂ ಅನ್ನುವುದಿಲ್ಲ. ಆದರೆ ಹತ್ತಿರಕ್ಕೆ ಬಿಟ್ಟುಕೊಳ್ಳಲು ಸಾಧ್ಯವೇ ಇಲ್ಲ ಎಂಬಂತಾಗಿ ಬಿಟ್ಟ.
ಮೊನ್ನೆ ಬಳ್ಳಾರಿಯಿಂದ ಗೆಳೆಯರು ಬಂದಿದ್ದರು. ರಾಮು ಬಗ್ಗೆ ಪ್ರಸ್ತಾಪ ಬಂತು. “ಇನ್ನೆಲ್ಲಪ್ಪ ರಾಮು? ಸತ್ತು ಹೋದನಲ್ಲ?" ಅಂದರು. ಅವನು ಅಲ್ಲಿಗೆ ಹೋದದ್ದಾದರೂ ಯಾಕೋ? ಹುಬ್ಬಳ್ಳಿಗೆ ಹೋದವನು ಅಲ್ಲೇ ಬಸ್ ನಿಲ್ದಾಣದಲ್ಲಿ ಎದೆ ನೋವು ಬಂದು ಕುಸಿದು ಬಿದ್ದು ಸತ್ತನಂತೆ.
ಬದುಕು ಯಾವ್ಯಾವ ತರಹದ ಮಾಯೆ-ಮಾಟ ತೋರಿಸುತ್ತದೋ ಬಲ್ಲವರ‍್ಯಾರು. ಬೆಳೆಯುವಾಗ ಗೆಳೆಯರಾಗೇ, ಚೆನ್ನಾಗಿ ಉಂಡು-ನಕ್ಕು ಬೆಳೆಯುತ್ತೇವೆ. ವರ್ಷಗಳು ನವೆಯುತ್ತ ಸರಿದು ಹೋಗುತ್ತವೆ. ಯಾರನ್ನು ಎಲ್ಲಿಗೆ ಕರೆದೊಯ್ಯುತ್ತವೋ?

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 09 December, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books