Ravi Belagere
Welcome to my website
ಕೆಲವೊಮ್ಮೆ ಬಂಧುಗಳ, ಸ್ನೇಹಿತರ, ಪರಿಚಿತರ ಮನೆಗೆ ಹೋಗಲೇಬೇಕಾಗುತ್ತದೆ. ಎರಡು ದಿನದ ಮಟ್ಟಿಗೆ ಹೋಗಿದ್ದು ಬರುವುದಾದರೆ ಆ ಮಾತು ಬೇರೆ. ಆದರೆ ತಿಂಗಳುಗಟ್ಟಲೆ ಇರುವ ಪ್ರಸಂಗ ಬಂದರೆ? ನೀವು ಚಿಕ್ಕವರಾಗಿದ್ದಾಗ ಸಂಬಂಧಿಕರ ಮನೆಯಲ್ಲಿ, ಮತ್ಯಾವುದೋ ಕಾರಣಕ್ಕೆ ಒಂದಷ್ಟು ದಿನ ಇನ್ನೊಬ್ಬರ ಮನೆಯಲ್ಲಿ ಉಳಿದುಕೊಂಡ ಪ್ರಸಂಗವಿರಬಹುದು. ಆಗ ಮುಜುಗರ, ಸಂಕೋಚ, ಬೇಸರ ಎಲ್ಲವೂ ಆಗಿರಬಹುದು. ಯಾರಿಗೆ ಗೊತ್ತು? ನೀವು ಖುಷಿಯಿಂದಲೇ ಇದ್ದಿರಬಹುದು. ಹೀಗೆ ನಿಮ್ಮ ಅನುಭವಗಳನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ನಿಮ್ಮ ಫೊಟೋ ಜೊತೆ, ಚಿಕ್ಕದಾಗಿ ಮತ್ತು ಚೊಕ್ಕವಾಗಿ ಬರೆದು ಕಳಿಸಿ. ಈ ಮೇಲ್ ಮೂಲಕ ಕಳಿಸುವವರು [email protected] ಗೆ ಕಳಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಮುತ್ತಿಗೆ ಹಾಕುವ ಮೊದಲು ತಟ್ಟಿ ನೋಡಿಕೊಳ್ಳಿ!

ರಾಜ್ಯ ವಿಧಾನಮಂಡಲದ ಅಧಿವೇಶನ ಡಿಸೆಂಬರ್ ಒಂಬತ್ತರಂದು ಶುರುವಾಗುತ್ತದೆ. ಅಷ್ಟರಲ್ಲೇ ಬಿಜೆಪಿಯವರ ಬತ್ತಳಿಕೆಯಲ್ಲಿ ಬ್ರಹ್ಮಾಸ್ತ್ರಗಳು ಸೇರಿಬಿಟ್ಟಿವೆಯಂತೆ. ಹೀಗಾಗಿ ಸರ್ಕಾರದ ವೈಫಲ್ಯವನ್ನು ವಿರೋಧಿಸಿ ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತಾರಂತೆ. ಹೀಗೆ ಹೇಳುವ ಬಿಜೆಪಿಯವರ ಪ್ರಾಮಾಣಿಕತೆಯನ್ನು ನಾವು ನಂಬಬೇಕು. ಅರೇ ನಂಬಲೇಬೇಕು ಕಣ್ರೀ. ನಮ್ಮ ಹೋರಾಟ ನೋಡಿದ ಮೇಲೂ ನಂಬದಿದ್ದರೆ ಹೇಗೆ ಅಂತ ಇವರು ಕೇಳುತ್ತಾರೆ. ನಿಜ, ಒಂದು ವಿಧಾನಮಂಡಲ ಅಧಿವೇಶನ ನಡೆಯುವಾಗ ಪ್ರತಿಪಕ್ಷಗಳು ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸಬೇಕು. ಅದು ಸರಿ ದಾರಿಯಲ್ಲಿ ನಡೆಯಲು ಏನು ಮಾಡಬೇಕು ಅಂತ ತಿಳಿಸಿ ಹೇಳಬೇಕು. ಅದಕ್ಕಾಗಿ ಹೋರಾಟ ಅನಿವಾರ್ಯ. ಮಾಡಲಿ. ಆದರೆ ಈಗ ಕಾಲ ಬದಲಾಗಿದೆ. ಸಂಸತ್ತಿನಲ್ಲೀಗ ರಾಮಮನೋಹರ ಲೋಹಿಯಾ ಅವರಂತಹವರೋ, ಇಲ್ಲ ಶಾಂತವೇರಿ ಗೋಪಾಲಗೌಡರ ಥರವೋ ಮಾತನಾಡುವ, ನುಡಿದಂತೆ ಬದುಕುವ ಜನರನ್ನು ತೋರಿಸಿ ನೋಡೋಣ. ಕೆಲವರು ಮಾತ್ರ ತಮ್ಮನ್ನು ತಾವು ಪರಮ ಪ್ರಾಮಾಣಿಕರು ಎಂದು ಬಿಂಬಿಸಿಕೊಳ್ಳಬಹುದು. ಆದರೆ ಫಲವೇನು? ಇದು ಮಾಹಿತಿ ತಂತ್ರಜ್ಞಾನದ ಯುಗ. ಜನ ಈ ಹಿಂದಿನಂತೆ ಪ್ರತಿಪಕ್ಷಗಳ ಹೋರಾಟವನ್ನು ನೋಡಿ ಸರ್ಕಾರದ ಬಗ್ಗೆ ವ್ಯತಿರಿಕ್ತ ಭಾವನೆ ಬೆಳೆಸಿಕೊಳ್ಳುವುದಿಲ್ಲ. ಅಯ್ಯೋ, ಸಿದ್ದರಾಮಯ್ಯನವರ ಸಂಪುಟದಲ್ಲಿ ಭ್ರಷ್ಟ ಸಚಿವರಿದ್ದಾರೆ. ಅವರನ್ನು ಕೈ ಬಿಡಬೇಕು. ಇಲ್ಲದಿದ್ದರೆ ನಾವು ಬಿಡೋಲ್ಲ ಎಂದು ಬಿಜೆಪಿ ಕೂಗಾಡುತ್ತದೆ.

ಯಡಿಯೂರಪ್ಪನವರ ಸಂಪುಟದಲ್ಲಿ, ಸದಾನಂದಗೌಡರ ಸಂಪುಟದಲ್ಲಿ, ಜಗದೀಶ್ ಶೆಟ್ಟರ್ ಅವರ ಸಂಪುಟದಲ್ಲಿ ಕಳಂಕಿತ ಸಚಿವರು ಇರಲಿಲ್ಲವೇ? ಹೋಗಲಿ, ಇವರು ಕಳಂಕಿತರು ಅನ್ನುತ್ತಿರುವುದಾದರೂ ಯಾರನ್ನು? ತಾವು ಖರೀದಿಸದ ಜಾಗದಲ್ಲಿ, ತಮ್ಮ ಕುಟುಂಬಕ್ಕೆ ಸೇರಿದ ೧೦.೯ ಎಕರೆ ಜಮೀನು ಒತ್ತುವರಿ ಅಂತ ಹೇಳಿದಾಗ ಆಹಾರ ಸಚಿವ ದಿನೇಶ್ ಗುಂಡೂರಾವ್ ಅದನ್ನು ಬಿಟ್ಟುಕೊಟ್ಟಿದ್ದಾರೆ. ಇಲ್ಲ, ಹೀಗೆ ಭೂಮಿಯನ್ನು ವಾಪಸು ಕೊಟ್ಟಿದ್ದಾರೆ ಎಂದರೆ ಅವರ ಕೈಲಿ ಇಷ್ಟು ದಿನ ಅಕ್ರಮವಾಗಿ ಒತ್ತುವರಿ ಮಾಡಿದ ಭೂಮಿ ಇತ್ತಲ್ಲ? ಎಂದು ಬಿಜೆಪಿಯವರು ವಾದಿಸುತ್ತಾರೆ. ಅರೇ, ಖರೀದಿ ಮಾಡಿದ್ದು ಅವರ ತಂದೆ ಗುಂಡೂರಾವ್. ಇನಾಂ ಭೂಮಿಯನ್ನು ಹಂಚಿಕೆ ಮಾಡಿದ ಸಂದರ್ಭದಲ್ಲಿ ಹಲವರಿಗೆ ಅದು ಮಂಜೂರಾಯಿತು. ಹೀಗೆ ಮಂಜೂರಾದವರ ಕಡೆಯಿಂದ ಖರೀದಿಸಿದ ಭೂಮಿ ಇದು. ಮಂತ್ರಿಯಾದಾಗ ಅಲ್ಲ, ಶಾಸಕರಾಗಿರುವಾಗಲೇ ದಿನೇಶ್ ಗುಂಡೂರಾವ್, ಈ ಭೂಮಿಯಲ್ಲಿ ಹೆಚ್ಚುವರಿ ಭೂಮಿ ಅಂತಿದ್ದರೆ ಸರ್ವೇ ಮಾಡಿ ಪಡೆದುಕೊಳ್ಳಿ ಅಂತ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಅಷ್ಟೇ ಅಲ್ಲ, ಗಡಿ ಗುರುತಿಸಲು ಪೋಡಿ ಮಾಡಿ ಅಂತ ಲೆಟರ್ರು ಕೊಟ್ಟು ಹಲ ತಿಂಗಳೇ ಕಳೆದಿವೆ.

ಮೊದಲನೆಯದಾಗಿ ದಿನೇಶ್ ಗುಂಡೂರಾವ್ ಭೂಮಿಯನ್ನೇ ಖರೀದಿ ಮಾಡಿಲ್ಲ. ಆ ಜಾಗದಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ಮಾಡಿಲ್ಲ. ಹೋಗಲಿ, ಮಂತ್ರಿಯಾದ ಮೇಲೆ ಹಿಂದೆ ಖರೀದಿಸಿದ್ದ ಜಾಗವನ್ನು ಆಕ್ರಮಿಸಿ ಹೆಚ್ಚುವರಿಯಾಗಿ ಬೇಲಿ ಹಾಕಿಕೊಂಡಿದ್ದಾರಾ? ಇಲ್ಲ. ಅಂದ ಮೇಲೆ, ಈ ಎಲ್ಲ ಅಂಶಗಳು ನಿಜ ಎಂದಾದ ಮೇಲೆ ನೀವು ರಾಜೀನಾಮೆ ಕೊಡಲೇಬೇಕು ಎಂದು ಕೂಗುವುದು ಟೈಮು ವೇಸ್ಟು ಮಾಡುವ ಕೆಲಸವಲ್ಲವೇ? ಇನ್ನು ಕಾನೂನು ಸುವ್ಯವಸ್ಥೆ ಕಾಪಾಡುವ ವಿಷಯದಲ್ಲಿ ಜಾರ್ಜ್ ರಾಜೀನಾಮೆ ಕೊಡಬೇಕು ಅಂತ ಬಿಜೆಪಿಯವರು ಹೇಳುತ್ತಾರೆ. ಅರೇ ನಗರೀಕರಣದ ಫಲವಾಗಿ ಇವತ್ತು ಬೆಂಗಳೂರು ಒಂದರಲ್ಲೇ ಜನಸಂಖ್ಯೆ ಒಂದು ಕೋಟಿಯಷ್ಟಾಗಿದೆ. ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವ ಕೆಲಸ ಬಿಜೆಪಿಯವರ ಕಾಲದಲ್ಲೇ ಆಗಿದ್ದರೆ ಸ್ಥಿತಿ ಇನ್ನಷ್ಟು ಚೆನ್ನಾಗಿರುತ್ತಿತ್ತು. ಆದರೆ ನಾಲ್ಕು, ನಲ್ವತ್ತು ಪೊಲೀಸರನ್ನಿಟ್ಟುಕೊಂಡು ಬೆಂಗಳೂರು ಕಾಯಬೇಕು, ರಾಜ್ಯ ಕಾಯಬೇಕು ಎಂದರೆ ಹೇಗೆ? ಸರ್ಕಾರ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವಿಧಾನಮಂಡಲ ಅಧಿವೇಶನದಲ್ಲಿ ಇವರು ಸಲಹೆ ನೀಡಲಿ. ಅದನ್ನು ಬಿಟ್ಟು ರಂಪ ರಾಮಾಯಣ ಮಾಡಿ, ಅವರು ರಾಜೀನಾಮೆ ಕೊಡಬೇಕು, ಇವರು ರಾಜೀನಾಮೆ ಕೊಡಬೇಕು ಅಂದರೆ ನಿಜವಾದ ವಿಷಯಗಳು ಸತ್ತು ಹೋಗುತ್ತವೆ.

ಈಗ ಉದಾಹರಣೆಗೆ ಕಬ್ಬು ಬೆಳೆಗಾರರನ್ನೇ ತೆಗೆದುಕೊಳ್ಳಿ. ಯಾವುದೇ ಅನುಮಾನವಿಲ್ಲದಂತೆ ಹೇಳಬಹುದು. ಸರ್ಕಾರ ಸಕ್ಕರೆ ಕಾರ್ಖಾನೆ ಲಾಬಿಗೆ ಮಣಿದಿದೆ. ನೋ ಡೌಟ್. ನೀವು ಕೇಂದ್ರ ಸರ್ಕಾರ ನಿಗದಿ ಮಾಡಿದ್ದಕ್ಕಿಂತ ಇನ್ನೂರು ರುಪಾಯಿ ಜಾಸ್ತಿ ಕೊಡಿ. ನಾವು ನಿಮಗೆ ಕೊಟ್ಟಿರುವ ರಿಯಾಯ್ತಿಯನ್ನು ಎರಡು ವರ್ಷ ಮುಂದುವರಿಸಿ ಇನ್ನೂ ಆರು ನೂರು ಕೋಟಿ ರುಪಾಯಿಗಳಷ್ಟು ಹಣ ನಿಮಗೆ ಉಳಿಯುವಂತೆ ಮಾಡುತ್ತೇವೆ. ಅದನ್ನು ನೀವೇ ವರ್ಷಕ್ಕೆ ನೂರು ರುಪಾಯಿಗಳಂತೆ ರೈತರಿಗೆ ಕೊಡಿ ಎಂದು ಸರ್ಕಾರ ಹೇಳಿದೆ. ಇದಕ್ಕೆ ಕಾರಣ, ಸಕ್ಕರೆ ಕಾರ್ಖಾನೆಗಳ ಲಾಬಿಯಲ್ಲಿ ಕಾಂಗ್ರೆಸ್ ಪಕ್ಷದವರಿದ್ದಾರೆ. ಒಬ್ಬಿಬ್ಬರಲ್ಲ, ಹಲವರಿದ್ದಾರೆ. ಆದರೆ ಬಿಜೆಪಿಯಲ್ಲಿ ಈ ಲಾಬಿಯ ಜನ ಇಲ್ಲವೇ? ಇವತ್ತು ಬಿಜೆಪಿಯ ಮಾಜಿ ಸಚಿವರಾಗಿರುವವರೊಬ್ಬರು ತಮ್ಮ ಸಕ್ಕರೆ ಕಾರ್ಖಾನೆಯಿಂದ ರೈತರಿಗೆ ಕೊಡಬೇಕಾದ ಬಾಕಿ ಪ್ರಮಾಣ ತೊಂಬತ್ತು ಕೋಟಿ. ಇದೇ ರೀತಿ ಮಾಜಿ ಸಚಿವರಾಗಿರುವ ಮತ್ತೊಬ್ಬರು ತಮ್ಮ ಕೈಲೊಂದು, ತಮ್ಮ ಸಹೋದರನ ಕೈಲೊಂದು ಸಕ್ಕರೆ ಕಾರ್ಖಾನೆ ಇರುವಂತೆ ನೋಡಿಕೊಂಡಿದ್ದಾರೆ. ಇವರೂ ರೈತರಿಗೆ ಬಾಕಿ ಕೊಡಬೇಕು. ಈಗ ಕೇಂದ್ರದಲ್ಲಿ ಮಂತ್ರಿಯಾಗಿರುವ ರಾಜ್ಯಸಭಾ ಸದಸ್ಯರೊಬ್ಬರು ಹಳೇ ಮೈಸೂರು ಭಾಗದಲ್ಲಿ ಒಂದು ಸಕ್ಕರೆ ಕಾರ್ಖಾನೆಯನ್ನು ಬೇನಾಮಿಯಾಗಿ ಖರೀದಿಸಿದ್ದಾರೆ. ಕಬ್ಬು ಬೆಳೆದ ರೈತರಿಗೆ ಅವರೂ ಬಾಕಿ ಕೊಡಬೇಕು.

ಇದೇ ರೀತಿ ಮುಂಬಯಿ-ಕರ್ನಾಟಕ ಭಾಗದಲ್ಲಿರುವ ಬಿಜೆಪಿಯ ಮಾಜಿ ಸಚಿವರೊಬ್ಬರು ಸಕ್ಕರೆ ಕಾರ್ಖಾನೆಯ ಮೇಲೆ ಹಿಡಿತ ಇಟ್ಟುಕೊಂಡು ರಾಜಕೀಯ ಮಾಡುತ್ತಾರೆ. ಅದರ ಕತೆಯೂ ಇದೆ. ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ನಾಯಕರೊಬ್ಬರ ಹಿಡಿತದಲ್ಲಿರುವ ಸಕ್ಕರೆ ಕಾರ್ಖಾನೆಯೂ ರೈತರಿಗೆ ಬಾಕಿ ಕೊಡಬೇಕು. ಅಂದರೆ? ಸಕ್ಕರೆ ಲಾಬಿಯಲ್ಲಿ ಬಿಜೆಪಿಯ ಹಲ ನಾಯಕರಿದ್ದಾರೆ. ಬಿಜೆಪಿಗೆ ನಿಜವಾದ ಪ್ರಾಮಾಣಿಕತೆ ಅಂತ ಇದ್ದರೆ ಮೊದಲು ಇಂತಹವರನ್ನು ಕರೆಸಿ, ಒಂದೋ ರೈತರ ಬಾಕಿ ಹಣ ಕೊಡಿ, ಇಲ್ಲವಾದರೆ ಪಕ್ಷ ಬಿಟ್ಟು ಹೋಗಿ ಎನ್ನಬೇಕು. ಆದರೆ ಇದುವರೆಗೂ ಇವರು ಈ ಕೆಲಸ ಮಾಡಿಲ್ಲ. ತಮ್ಮ ಸರ್ಕಾರ ಇದ್ದಾಗ ಕಳಂಕಿತ ಸಚಿವರಿದ್ದರಲ್ಲ? ಅವರ ಬಗ್ಗೆ ಚಕಾರ ಎತ್ತುವುದಿಲ್ಲ. ಇನ್ನು ಕ್ಯಾಪಿಟೇಶನ್ ಮಾಫಿಯಾ ವಿಷಯಕ್ಕೆ ಬನ್ನಿ. ಎರಡೂ ರಾಜಕೀಯ ಪಕ್ಷಗಳಲ್ಲಿ ಮಹಾನ್ ಮಹಾನ್ ಶಿಕ್ಷಣ ಸಂಸ್ಥೆಗಳನ್ನು ನಡೆಸುವವರಿದ್ದಾರೆ. ಮೆಡಿಕಲ್ ಕಾಲೇಜು, ಇಂಜಿನೀರಿಂಗ್ ಕಾಲೇಜು, ಆ ಕಾಲೇಜು, ಈ ಕಾಲೇಜು ಅಂತ ಸರ್ಕಾರದಿಂದ ಮಂಜೂರು ಮಾಡಿಸಿಕೊಂಡು ರಸಗವಳ ಉಂಡು ರೌಂಡಾಗಿ ಕುಂತಿದ್ದಾರೆ. ಆದರೆ ಇವರೆಲ್ಲ ಖಾಸಗಿ ಕಾಲೇಜುಗಳವರು.

ಆದರೆ ಇವರ ಪೈಕಿ ಯಾರ‍್ಯಾರು ಮೆಡಿಕಲ್ ಸೀಟುಗಳನ್ನು ಮಾರಿಕೊಳ್ಳುತ್ತಾರೆ, ಎಂಜಿನೀರಿಂಗ್ ಸೀಟುಗಳು ನಮ್ಮ ಬಡ-ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಸಿಗದಂತೆ ಮಾಡುತ್ತಾರೆ, ಇದಕ್ಕಾಗಿ ಸರ್ಕಾರವನ್ನು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ಕೆದಕುತ್ತಾ ಹೋದರೆ ನಿಮಗೆ ರೋಚಕ ಸಂಗತಿಗಳು ಸಿಗುತ್ತವೆ. ಒಂದೇ ಉದಾಹರಣೆ ಕೊಡುತ್ತೇನೆ. ಇವತ್ತು ರಾಜ್ಯದ ಬಹುತೇಕ ಖಾಸಗಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಆಫ್ ಲೈನ್ ಪದ್ಧತಿ ಇದೆ. ಇದು ಹಿಂದೆ ಸರ್ಕಾರವೇ ಅಳವಡಿಸಿಕೊಂಡಿದ್ದ ಯಶಸ್ವಿ ಪದ್ಧತಿ. ಆದರೆ ಇವತ್ತು ಅದನ್ನು ಖಾಸಗಿಯವರ ಪೈಕಿ ಬಹುತೇಕರು ಅಳವಡಿಸಿಕೊಂಡಿದ್ದಾರೆ. ಈ ಪದ್ಧತಿಯಲ್ಲಿ ಒಬ್ಬ ವಿದ್ಯಾರ್ಥಿ ತನಗೆ ಬೇಕಾದ ಸೀಟು, ಕೋರ್ಸು ಆಯ್ಕೆ ಮಾಡಿಕೊಳ್ಳಲು ಅವಕಾಶವಿರುತ್ತದೆ. ಆದರೆ ನಮ್ಮ ಸರ್ಕಾರ ಆನ್ ಲೈನ್ ಪದ್ಧತಿಯನ್ನು ಜಾರಿಗೆ ತಂದಿದೆ. ಯಾವ ಆಧಾರದ ಮೇಲೆ, ಕನಿಷ್ಠ ಪಕ್ಷ ಮಕ್ಕಳು ಪಡೆದ ರ‍್ಯಾಂಕಿಂಗ್ ಆಧಾರದ ಮೇಲೆ ಅವರಿಗೆ ಇಂತಹ ಕಾಲೇಜುಗಳಲ್ಲಿ ಸೀಟು ಸಿಗುತ್ತದೆ ಎಂಬುದನ್ನು ತಿಳಿಹೇಳುವ ಕೆಲಸವೂ ಸರ್ಕಾರದಿಂದ ನಡೆಯುವುದಿಲ್ಲ. ಅದರ ಮೇಲೆ ಆನ್ ಲೈನ್ ಪದ್ಧತಿ ಬೇರೆ.

ಸರ್ಕಾರದ ಕೆಲಸಗಳು ಹೈಟೆಕ್ ಆಗಬೇಕು ನಿಜ. ಆದರೆ ವಿದ್ಯಾರ್ಥಿಗಳ ಸದ್ಯದ ಸಮಸ್ಯೆಯನ್ನು ಗಮನಿಸಿ ಅದರ ಪರಿಹಾರಕ್ಕೆ ಸೂತ್ರ ರಚಿಸಬೇಕು. ನಮ್ಮ ಹಳ್ಳಿಗಾಡಿನ ಮಕ್ಕಳು ಈ ಸಲ ಇವರು ಜಾರಿಗೆ ತಂದ ಆನ್ ಲೈನ್ ಪದ್ಧತಿಯಿಂದ ಕಂಗಾಲಾಗಿ ಹೋದರು. ದುಡ್ಡಿದ್ದವರು ತಮಗೆ ಬೇಕಾದ ಕಾಲೇಜು, ಸಿಗಬೇಕಿರುವ ಕಾಲೇಜುಗಳನ್ನು ಗುರುತಿಸಿ, ತಮಗೆ ಬೇಕಾದ ಸೀಟುಗಳನ್ನು ಪಡೆದುಕೊಂಡು ಅಲ್ಲಿಗೆ ಹೋದರು. ಆದರೆ ಬಡ ವಿದ್ಯಾರ್ಥಿಗಳ ಗತಿ ಏನು? ಇದರ ಅಸಲಿಯತ್ತೇನು ಅಂತ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿದ್ದಾಗ ರಶ್ಮಿ ಅವರಂತಹ ಪ್ರಾಮಾಣಿಕ ಅಧಿಕಾರಿಗಳು ಆಳ ಕೆದಕಿದರು. ವಿವಿಧ ಪಕ್ಷಗಳಿಗೆ ಸೇರಿದ ಹಲವು ಮಂದಿ ಶಿಕ್ಷಣ ಸಂಸ್ಥೆಗಳವರ ಬಣ್ಣ ಬಯಲಿಗೆಳೆದರು. ಇಷ್ಟಾಗಿದ್ದೇ ತಡ, ತಮ್ಮ ಬುಡಕ್ಕೆ ಬರುತ್ತದೆ ಎಂಬ ಕಾರಣಕ್ಕಾಗಿ ಈ ಜನ, ಅಂತಹ ಪ್ರಾಮಾಣಿಕ ಅಧಿಕಾರಿಯನ್ನೇ ಆ ಜಾಗದಿಂದ ಎತ್ತಂಗಡಿ ಮಾಡಿಸಿದರು. ಬಿಜೆಪಿಯವರಿಗೆ ನಿಜಕ್ಕೂ ಜನರ ಮೇಲೆ ಕಾಳಜಿಯಿದ್ದರೆ ತಮ್ಮಲ್ಲಿರುವ ಶಿಕ್ಷಣ ಸಂಸ್ಥೆಗಳ ಮಾಲೀಕರನ್ನು ಕರೆಸಿ, ಒಂದೋ ನಮ್ಮ ಮಕ್ಕಳಿಗೆ ಸೀಟು ಸಿಗುವಂತೆ ನೋಡಿಕೊಳ್ಳಿ, ಇಲ್ಲವಾದರೆ ಪಕ್ಷ ಬಿಟ್ಟು ಹೊರಗೆ ಹೋಗಿ ಎನ್ನಬಹುದಲ್ಲ? ಯಾವತ್ತಾದರೂ ಇವರು ಆ ಕೆಲಸ ಮಾಡಿದ್ದಾರಾ? ಇಲ್ಲವಲ್ಲ?

ಕಬ್ಬು ಬೆಳೆಗಾರರಿಗೆ ಅನ್ಯಾಯ ಮಾಡುತ್ತಿರುವವರಲ್ಲಿ ಇವರ ಪಕ್ಷದವರೂ ಇದ್ದಾರೆ. ಹೀಗಿರುವಾಗ ಅಂತಹವರನ್ನು ಕರೆಸಿ, ರೈತರ ಬಾಕಿ ಕೊಡಿ, ಇಲ್ಲವಾದರೆ ಪಕ್ಷ ಬಿಟ್ಟು ಹೊರಡಿ ಎಂದು ಇವರು ಹೇಳಬಹುದಿತ್ತು. ಈ ತನಕ ಅಂತಹ ಕೆಲಸ ಮಾಡಲಿಲ್ಲ. ಈಗ ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತಾರಂತೆ. ವಿಧಾನಸೌಧದ ಒಳಗೆ ಭಾರೀ ಪ್ರತಿಭಟನೆ ನಡೆಸುತ್ತಾರಂತೆ. ಪ್ರತಿಭಟನೆ ನಡೆಸುವುದೇ ಆದರೆ ಬೀದಿಯಲ್ಲಿ ಮಾಡಲಿ. ಅಧಿವೇಶನದಲ್ಲಿ ವಿಷಯದ ಗಾಂಭೀರ್ಯವನ್ನು ಅರಿತು ಅದರ ಹೂರಣವನ್ನು ಕೆದಕಲಿ. ಕೇವಲ ಹೋ! ಅಂತ ಕಿರುಚಿ, ಸರ್ಕಾರ ಆಡಳಿತ ನಡೆಸುವಲ್ಲಿ ವಿಫಲವಾಗಿದೆ ಅಂದರೆ ಸಾಲದು. ನಿಜವಾದ ಪ್ರತಿಪಕ್ಷ ಎಂದರೆ ಸರ್ಕಾರ ಯಾವ್ಯಾವ ವಿಷಯಗಳಲ್ಲಿ ವೈಫಲ್ಯ ಅನುಭವಿಸುತ್ತಿದೆ, ಆ ವೈಫಲ್ಯ ಸರಿಪಡಿಸಲು ಇರುವ ಮಾರ್ಗವೇನು ಅನ್ನುವುದರ ಕುರಿತು ಕೂಲಂಕಷವಾಗಿ ಚರ್ಚಿಸಬೇಕು. ಕೇವಲ ಕೂಗಾಡಿ, ವಿಧಾನಮಂಡಲ ಅಧಿವೇಶನವೇ ನಡೆಯದಂತೆ ಮಾಡಲು ಜನ ದುಡ್ಡು ಕೊಡುವುದಿಲ್ಲ. ರಾಜ್ಯ ಎದುರಿಸುತ್ತಿರುವ ತಕ್ಷಣದ ಸಮಸ್ಯೆಯೇನು, ಅದರ ಪರಿಹಾರ ಹೇಗೆ ಅಂತ ಚರ್ಚೆಯ ಮೂಲಕ ಕಂಡುಕೊಳ್ಳಬೇಕು. ಅಗತ್ಯ ಬಿದ್ದರೆ ಶಾಸನಗಳಿಗೆ ತಿದ್ದುಪಡಿ ಮಾಡಿ ಅಥವಾ ಹೊಸ ಶಾಸನವನ್ನೇ ರೂಪಿಸಿ ರಾಜ್ಯ ಎಂಬ ರೈಲು ಸರಿಯಾದ ಹಳಿಗಳ ಮೇಲೆ ಓಡುವಂತೆ ಮಾಡಬೇಕು. ಅದನ್ನು ಬಿಟ್ಟು, ನೀವು ರೈತರಿಗೆ ಕೊಡಬೇಕಾದ ಬಾಕಿ ಕೊಟ್ಟಿಲ್ಲ. ಲಾಬಿಗಳಿಗೆ ಮಣಿದಿದ್ದೀರಿ ಎಂದು ಕೂಗಾಡಿದರೆ ಜನ ನಂಬುವುದಿಲ್ಲ. ಯಾಕೆಂದರೆ ಈ ಲಾಬಿಯಲ್ಲಿ ಬಿಜೆಪಿಯವರೂ ಇದ್ದಾರಲ್ಲ?

ನಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ವಿಷಯದಲ್ಲಿ ಫೇಲ್ ಆಗಿದ್ದೀರಿ. ಕ್ಯಾಪಿಟೇಶನ್ ಮಾಫಿಯಾ ಕೈಗೆ ಸಿಲುಕಿದ್ದೀರಿ ಎಂದು ಕೂಗುವುದಲ್ಲ? ಯಾಕೆಂದರೆ ಈ ಮಾಫಿಯಾದ ಹಲ ಮಂದಿ ಬಿಜೆಪಿಯ ಆಯಕಟ್ಟಿನ ಜಾಗದಲ್ಲೇ ಕುಳಿತುಕೊಂಡಿದ್ದಾರಲ್ಲ? ಇವೆಲ್ಲ ಜನರಿಗೀಗ ಸುಲಭವಾಗಿ ಅರ್ಥವಾಗುತ್ತದೆ. ಇವತ್ತು ನರೇಂದ್ರ ಮೋದಿಯ ಭಕ್ತರು ನೋಡಿ, ಮೋದಿ ಪ್ರಧಾನಿಯಾದ ಕೂಡಲೇ ಪೆಟ್ರೋಲು, ಡೀಸೆಲು ಬೆಲೆಯನ್ನು ಎಂಟು ಸಲ ಕೆಳಕ್ಕಿಳಿಸಿದರು ಎನ್ನುತ್ತಾರೆ. ಆದರೆ ಅದು ಮೋದಿ ಕೊಡುಗೆಯಲ್ಲ. ಪೆಟ್ರೋಲು ಉತ್ಪಾದಿಸುವ ಒಪೆಕ್ ರಾಷ್ಟ್ರಗಳು ಅಗತ್ಯಕ್ಕಿಂತ ಜಾಸ್ತಿ ತೈಲವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಹೀಗಾಗಿ ನೂರಾ ಹದಿನಾಲ್ಕು ಡಾಲರುಗಳಷ್ಟಿದ್ದ ಒಂದು ಬ್ಯಾರಲ್ ಕಚ್ಚಾ ತೈಲದ ಬೆಲೆ ಎಪ್ಪತ್ತು ಡಾಲರುಗಳಿಗೆ ಇಳಿದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಾದ ಈ ಬೆಳವಣಿಗೆಯಿಂದ ಪೆಟ್ರೋಲು, ಡೀಸೆಲು ರೇಟು ಕಡಿಮೆಯಾಗಿದೆ. ಇದು ನಮ್ಮ ಸಾಧನೆ ಅಂತ ಯಾರಾದರೂ ಬಿಜೆಪಿ ನಾಯಕರು ಹೇಳಿಕೊಂಡರೆ ಅವರು, ಜನರನ್ನು ಇನ್ನೂ ಗುಗ್ಗುಗಳು, ನಾವು ಹೇಳಿದ್ದೆಲ್ಲ ನಂಬುತ್ತಾರೆ ಅಂತ ಭಾವಿಸಿರಬೇಕು.

ಆದರೆ ಜನರಿಗೆ ಪ್ರತಿಯೊಂದು ವಿಷಯದ ಆಳ-ಅಗಲ ಅರ್ಥವಾಗುತ್ತಿದೆ. ಕಚ್ಚಾ ಬ್ಯಾರಲ್ ತೈಲದ ಬೆಲೆ ನಾಳೆ ನೂರು ಡಾಲರು ದಾಟಲಿ ನೋಡಿ. ತೈಲ ಪೂರೈಕೆ ಕಂಪನಿಗಳು ಬೊಂಬಡಾ ಹೊಡೆಯುತ್ತವೆ. ದೂಸರಾ ಮಾತನಾಡದೆ ಮೋದಿ ದರ ಏರಿಕೆ ಮಾಡುತ್ತಾರೆ. ಹೀಗಾಗಿಯೇ ಹೇಳಿದ್ದು, ಲಾಬಿಗಳು ಅಂತ ಇವತ್ತು ನಾವೇನು ಹೇಳುತ್ತೇವೆ? ಅಂತಹ ಲಾಬಿಗಳನ್ನು ಬಿಜೆಪಿ ಮೊದಲು ತನ್ನ ಪಕ್ಷದೊಳಗೇ ಕೂರಿಸಿಕೊಂಡು ಬಗ್ಗು ಬಡಿಯಲಿ. ಆಮೇಲೆ ವಿಧಾನಮಂಡಲ ಅಧಿವೇಶನದಲ್ಲಿ ಕೂತು ಸರ್ಕಾರದ ವೈಫಲ್ಯದ ಕತೆ ಹೇಳಲಿ. ಅದನ್ನು ಬಿಟ್ಟು ನಾವು ಪ್ರತಿಪಕ್ಷಗಳು, ಸರ್ಕಾರದ ವಿರುದ್ಧ ಹೋರಾಡುತ್ತೇವೆ. ಇಂತಹ ಮಂತ್ರಿಗಳು ರಾಜೀನಾಮೆ ಕೊಡಬೇಕು. ಕಬ್ಬು ಬೆಳೆಗಾರರಿಗೆ ನ್ಯಾಯ ಒದಗಿಸಬೇಕು ಅಂತೆಲ್ಲ ಕತೆ ಹೇಳುತ್ತಾ ಕೂತರೆ ಜನ ಬರೀ ನಗುವುದಿಲ್ಲ. ಸುವರ್ಣ ವಿಧಾನಸೌಧದಲ್ಲಿ ನಡೆಯುವ ನಾಟಕವನ್ನು ಕಂಡು ಹೇಸಿಗೆ ಪಡುತ್ತಾರೆ. ಅದು ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ.

ಮೊದಲು ತಮ್ಮ ತಟ್ಟೆಯಲ್ಲಿ ಸತ್ತು ಬಿದ್ದಿರುವ ಆನೆಯನ್ನು ಎತ್ತಿ ಹಾಕಿ, ಆನಂತರ ಎದುರುಗಡೆ ಕೂತವರ ತಟ್ಟೆಯಲ್ಲಿ ನೊಣ ಸತ್ತು ಬಿದ್ದಿದೆ ಎಂಬುದನ್ನು ತೋರಿಸಬೇಕು. ನಮ್ಮ ಪ್ರತಿಪಕ್ಷಗಳು ಹಾಗಿರಬೇಕು ಎಂದು ನಾವು ಬಯಸುತ್ತೇವೆ. ಬಿಜೆಪಿಯವರು ಈ ಅಂಶವನ್ನು ಗಮನಿಸಿ ಅಧಿವೇಶನಕ್ಕೆ ಹೋಗಲಿ, ಅದಕ್ಕೊಂದು ಅರ್ಥ ಬರುವಂತೆ ನಡೆದುಕೊಳ್ಳಲಿ. ಬೇಕೆಂದೇ ಗಲಭೆ ಎಬ್ಬಿಸಿ, ನಾಲ್ಕು ದಿನಕ್ಕೇ ಅಧಿವೇಶನ ಮುಗಿಸಿ ಓಡಿ ಬರದಿರಲಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 08 December, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books