Ravi Belagere
Welcome to my website
ಕೆಲವೊಮ್ಮೆ ಬಂಧುಗಳ, ಸ್ನೇಹಿತರ, ಪರಿಚಿತರ ಮನೆಗೆ ಹೋಗಲೇಬೇಕಾಗುತ್ತದೆ. ಎರಡು ದಿನದ ಮಟ್ಟಿಗೆ ಹೋಗಿದ್ದು ಬರುವುದಾದರೆ ಆ ಮಾತು ಬೇರೆ. ಆದರೆ ತಿಂಗಳುಗಟ್ಟಲೆ ಇರುವ ಪ್ರಸಂಗ ಬಂದರೆ? ನೀವು ಚಿಕ್ಕವರಾಗಿದ್ದಾಗ ಸಂಬಂಧಿಕರ ಮನೆಯಲ್ಲಿ, ಮತ್ಯಾವುದೋ ಕಾರಣಕ್ಕೆ ಒಂದಷ್ಟು ದಿನ ಇನ್ನೊಬ್ಬರ ಮನೆಯಲ್ಲಿ ಉಳಿದುಕೊಂಡ ಪ್ರಸಂಗವಿರಬಹುದು. ಆಗ ಮುಜುಗರ, ಸಂಕೋಚ, ಬೇಸರ ಎಲ್ಲವೂ ಆಗಿರಬಹುದು. ಯಾರಿಗೆ ಗೊತ್ತು? ನೀವು ಖುಷಿಯಿಂದಲೇ ಇದ್ದಿರಬಹುದು. ಹೀಗೆ ನಿಮ್ಮ ಅನುಭವಗಳನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ನಿಮ್ಮ ಫೊಟೋ ಜೊತೆ, ಚಿಕ್ಕದಾಗಿ ಮತ್ತು ಚೊಕ್ಕವಾಗಿ ಬರೆದು ಕಳಿಸಿ. ಈ ಮೇಲ್ ಮೂಲಕ ಕಳಿಸುವವರು [email protected] ಗೆ ಕಳಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಅದು ವಿಪರೀತ ಹೀಟು ಅನ್ನುತ್ತಾರಲ್ಲಾ: ಖಂಡಿತವಾಗಿಯೂ ಅದು ಹೀಟಲ್ಲ!

ನಿನ್ನೆ ಬಂದೆ.
ನಿನ್ನೆಯಾ? ಮೊನ್ನೆಯಾ? ಉಹುಂ, ಸರಿಯಾಗಿ ನೆನಪಿಲ್ಲ. “sleeping pattern ಹಳ್ಳ ಹಿಡಿದು ಹೋಗಿದೆ ಅನ್ನಿಸುತ್ತೆ" ಅಂತ ಆಸ್ಟ್ರೇಲಿಯಾ ಸೇರಿರುವ ಗೆಳೆಯ ಗಿರೀಶ್ ಹಂಪಾಳಿ, ಫೇಸ್‌ಬುಕ್‌ನಲ್ಲಿ ಮೆಸೇಜ್ ಬಿಟ್ಟಿದ್ದ. ಅದು ಖಂಡಿತವಾಗ್ಯೂ ನಿಜ. ಸಾಮಾನ್ಯವಾಗಿ ನಮ್ಮಂತಹ ಹುಲುಮಾನವರಿಗೆ ನಿದ್ರೆಯ ಒಂದು ಪ್ಯಾಟರ್ನ್ ಅಥವಾ ನಿಶ್ಚಿತ ನಮೂನೆ ಇರುತ್ತದೆ. ರಾತ್ರಿ ಹತ್ತೂವರೆಗೆ ಮಲಗುತ್ತೇವೆ. ಬೆಳಿಗ್ಗೆ ಆರು ಗಂಟೆಗೆ ಏಳುತ್ತೇವೆ. ನನ್ನದು “ಹೀಗೇ..." ಅಂತ ಹೇಳಲು ಸಾಧ್ಯವಿಲ್ಲದಷ್ಟು ಹಳ್ಳ ಹಿಡಿದು ಹೋಗಿದೆ. ರಾತ್ರಿ ಹತ್ತೂವರೆ-ಹನ್ನೊಂದಕ್ಕೆ ಊಟವೇನೋ ಮಾಡುತ್ತೇನೆ. ಆನಂತರ ಒಂದಷ್ಟು ಮಾತ್ರೆ ತೆಗೆದುಕೊಳ್ಳುತ್ತೇನೆ. ಆಮೇಲೆ ತೆಪ್ಪಗೆ ಮಲಗಬೇಕು ತಾನೆ? ನೀವು ಬಂದು ನೋಡಿ. ಹನ್ನೆರಡಕ್ಕೆ ಎದ್ದಿರುತ್ತೇನೆ. ಒಂದೂವರೆಗೆ ಬರೆಯುತ್ತಿರುತ್ತೇನೆ. ಮೂರು ಗಂಟೆ ಹೊತ್ತಿಗೆ ಇಣುಕಿ; ಓದುತ್ತಿರುತ್ತೇನೆ. ನಾಲ್ಕೂವರೆಗೆ? ಕಂಪ್ಯೂಟರಿನ ಮುಂದಿರುತ್ತೇನೆ. ಕೆಲವು ಸಲ ಬೆಳಿಗ್ಗೆ ಗಡಿಯಾರದಲ್ಲಿ ಆರು ಹೊಡೆದು, ಪಕ್ಕದ ರಸ್ತೆಯಲ್ಲಿ ಮರಳಿನ ಗಾಡಿ ಹೋಗಿ, ಯಾವುದೋ ದೇವಸ್ಥಾನದಲ್ಲಿ ಗಂಟೆ ಹೊಡೆದು, ಆಟೋ ರಿಕ್ಷಾಗಳು ತಿರುಗಲಾರಂಭಿಸುತ್ತವಲ್ಲ? ಆ ಟೈಮಿಗೆ ಒಂದು ಸಿಗರೇಟು ಸೇದಿ ಅದ್ಯಾವಾಗ ನಿದ್ದೆ ಮಾಡಿರುತ್ತೇನೋ ಏನೋ?

“ಹಾಗಾದರೆ ಏಳೋದು?" ಅಂತ ಕೇಳಬೇಡಿ. ಸಿದ್ದನಿಗೆ ಎದ್ದದ್ದೇ ಹೊತ್ತು. ಹನ್ನೆರಡೂವರೆ-ಒಂದು ಗಂಟೆ ಹೊತ್ತಿಗೆ ಎದ್ದು ಗಟಾ ಗಟಾ ಗಟಾ ಅಂತ ಮೇಲಿಂದ ಮೇಲೆ ಆರೇಳು ಕಪ್ ಕಾಫಿ ಕುಡಿದು, ಪ್ರತಿ ಕಾಫಿಯ ಬೆನ್ನಿಗೆ ಒಂದು ಸಿಗರೇಟು ಸೇದಿ ನನ್ನ ದಿನಚರಿ ಆರಂಭಿಸುತ್ತೇನೆ. ಇದೂ ಕೂಡ ಹೀಗೇ ತರ್ಕಬದ್ಧವಾಗಿ ಪ್ರತಿನಿತ್ಯ ನಡೆಯುವಂತಹುದು ಅಂದುಕೊಳ್ಳಬೇಡಿ. ಕೆಲವು ಸಲ ಬೆಳಿಗ್ಗೆ ಹನ್ನೊಂದಕ್ಕೂ ಅಡ್ಡಬಿದ್ದು ಮಲಗಿರುತ್ತೇನೆ. ಒಂದು ಸಲ ದಿಂಬಿಗೆ ತಲೆ ಚೆಲ್ಲಿದೆ ಅಂತ ಇಟ್ಟುಕೊಳ್ಳಿ: ಆಮೇಲೆ ನಾಲ್ಕೂವರೆ ತಾಸು ಕರಾರುವಾಕ್ಕಾಗಿ ‘ಗಟ್ಟಿ ನಿದ್ರೆ’ ಮಾಡುತ್ತೇನೆ. ಮಲಗಿರುವಾಗ ಯಾರೂ ಗಲಾಟೆ ಮಾಡಬಾರದು: disturb ಮಾಡಬಾರದು ಅಂತೆಲ್ಲ ಏನೂ ಇಲ್ಲ. ಆದರೆ ‘ಗಟ್ಟಿ ನಿದ್ದೆ’ ಅಂತ ಅನ್ನಿಸಿಕೊಂಡಿರುವುದೇ ಆ ಕಾರಣಕ್ಕೆ. ಪಕ್ಕದಲ್ಲಿ ಮೊಹರಂ ಹಬ್ಬದ ಕೊನೇ ದಿನ ಆಚರಿಸಿದರೂ ನನ್ನ ತಕರಾರಿಲ್ಲ. ನಿದ್ದೆ ಅಂದರೆ ನನ್ನ ಇಡೀ ಶರೀರ off! ಆದರೆ ತೀರಾ ಆರೆಂಟು ಗಂಟೆ ನಿದ್ರೆ ಮಾಡುವ ಶರೀರ ನನ್ನದಲ್ಲ. perfect ಆಗಿ ನಾಲ್ಕೂವರೆ ತಾಸು. ಬಹುಶಃ ನನ್ನ ವಯಸ್ಸಿಗೆ ಅಷ್ಟು ಸಾಕು. ಮೊನ್ನೆ ಯಾಕೋ ಅವನು ನೆನಪಾದ, ಕಾಫಿ ರಾಘು. ಪತ್ರಿಕೆಯ ಆರಂಭದ ದಿನಗಳಲ್ಲಿ ತುಂಬ ಹತ್ತಿರವಾದವನು. “ರಾಘೂ, ಕಂಪ್ಯೂಟರುಗಳಲ್ಲಿ ಕೆಲಸ ನಡೆದಿದೆ. ಸ್ವಲ್ಪ ನೋಡ್ತಿರು. ನಾನು ಇಪ್ಪತ್ತು ನಿಮಿಷ ನಿದ್ರೆ ಮಾಡಿ, ಎದ್ದು ಬಂದುಬಿಡುತ್ತೇನೆ" ಅಂದು ಅಲ್ಲೇ ಒಂದು ಕೋಣೆಯಲ್ಲಿ ಜಮಖಾನ ಹಾಸಿಕೊಂಡು ದಿಂಬಿಗೆ ತಲೆ ಚೆಲ್ಲುತ್ತಿದ್ದೆ. ಕರಾರುವಾಕ್ಕಾಗಿ ಇಪ್ಪತ್ತು ನಿಮಿಷ. “ಇದು ಹ್ಯಾಗೆ ಸಾಧ್ಯ ಸರ್?" ಅನ್ನುತ್ತಿದ್ದ ಕಾಫಿ ರಾಘು. ಇವತ್ತು ತೀರಾ ಅಷ್ಟು perfect ಆಗಿ, ಗೆರೆ ಗೀಚಿದಂತೆ ಎದ್ದೇಳುವುದು ಮತ್ತು ನಿದ್ರೆಗೆ ಜಾರುವುದು ಸಾಧ್ಯವಾಗಲಾರದು. ಹಿಂದೊಮ್ಮೆ ಹೇಳಿದ್ದೆ: ಅದನ್ನು ಗುಢಾಕೇಶ ಅನ್ನುತ್ತಾರೆ. ಅವನು ಅರ್ಜುನ. ಬಿಟ್ಟ ಕಣ್ಣು ಒಂದೇ ಒಂದು ಸಲಕ್ಕೂ ಮುಚ್ಚದೆ, ಬರೋಬ್ಬರಿ ಏಳು ದಿನ ರಥ ಓಡಿಸಿಕೊಂಡು ಹಸ್ತಿನಾವತಿಗೆ ಬಂದಿದ್ದನಂತೆ. ಅವನಿಗೆ ಕೃಷ್ಣ ‘ಗುಢಾಕೇಶ’ ಅಂತ ಹೆಸರಿಟ್ಟಿದ್ದನಂತೆ. ಇದನ್ನು ವಿವರಿಸಿದಾಗ ರಾಮಚಂದ್ರಾಪುರ ಮಠದ ಆಕಳು ಸ್ವಾಮಿ, “ಇದೇನ್ರೀ ಇದೂ? ತೀರ ಪಂಡಿತರು ಅನ್ನಿಸಿಕೊಂಡವರಿಗೇ ಈ ವಿಷಯ ಗೊತ್ತಿರುವುದಿಲ್ಲ. ನೀವು ಇಷ್ಟೆಲ್ಲ ತಿಳಿದುಕೊಂಡಿದ್ದೀರಿ..." ಅಂದಿದ್ದ.

ಇದೆಲ್ಲ ‘ಮಲಗೋ ಪುರಾಣ’ದ ಬಗ್ಗೆ ಯಾಕೆ ಹೇಳಿದೆ ಅಂದರೆ, ಒಂದಿಡೀ ರಾತ್ರಿ ಬೆಂಗಳೂರಿನಿಂದ ಸರಿಸುಮಾರು ಐನೂರು- ಕಿಲೋಮೀಟರು ಪ್ರಯಾಣ ಮಾಡಿ ಬಾಗಲಕೋಟೆಗೆ ತಲುಪಿದೆ. ಅಲ್ಲಿ ನನಗೆ ಕೆಲಸವಿತ್ತು. ಕೆಲಸ ಅಂದರೆ ಏನೂ? ಒಂದೇ ಒಂದು ನಿಮಿಷ: ಅಂದರೆ ಅರವತ್ತು ಸೆಕೆಂಡಿನ ಕೆಲಸ. ಆಮೇಲೆ ಬಾಗಲಕೋಟೆಯ ಕೆಲವು ಗೆಳೆಯರು, ಅಲ್ಲಿಂದ ಒಂದಷ್ಟು ದೂರದಲ್ಲಿರುವ ಹುನಗುಂದ, ಅಮ್ಮೀನಗಡ, ಇಳಕಲ್ಲು ಮುಂತಾದ ಕಡೆ ಸಿಗುವ ಗೆಳೆಯರು- ಅವರೆಲ್ಲರೊಂದಿಗೆ ಅಷ್ಟಷ್ಟು ನಿಮಿಷ ಹರಟೆ, ಇಳಕಲ್ಲಿನಲ್ಲಿ ಗೆಳೆಯ ರವಿಯೊಂದಿಗೆ ಊಟ-ಇಷ್ಟೆಲ್ಲ ಮುಗಿಸಿ ಮತ್ತೆ ಅದೇ ಅಜಮಾಸು ಐನೂರು ಕಿಲೋಮೀಟರು ಓಡುತ್ತಾ ಬಂದು ಬೆಂಗಳೂರು ತಲುಪಿಕೊಂಡೆ. ನೀವು ಏನೇ ಅನ್ನಿ: ಅದು ಯಾವ ಇಂದ್ರ ರಥದಂತಹ ಕಾರಿನಲ್ಲಿ ಹೋಗಿ ಬಂದರೂ ಮೈಕೈ ಕೊಂಚ ಹೈರಾಣಾಗುತ್ತದೆ. ಸರಿಸುಮಾರು ಮೂವತ್ತಾರು ತಾಸು ಮತ್ತು ಒಂದು ಸಾವಿರ ಕಿಲೋಮೀಟರು-ಪ್ರಯಾಣಿಸಿದರೆ ಮೈಕೈ ಮೆತ್ತಗಾಗದೆ ಮತ್ತೇನಾದೀತು?

ಮೊದಲಿನ ಕಥೆ ಬಿಡಿ. ಬೀದರ್, ಗುಲಬರ್ಗ ಅಫಜಲ್ಪುರ, ಈ ಕಡೆ ಆಂಧ್ರದ ತುತ್ತುದಿಯಲ್ಲಿರುವ ಪಾರ್ವತೀಪುರಂ ತನಕ ಏನೇನೂ ಗೊಣಗಾಟವಿಲ್ಲದೆ ನಾನೇ ಡ್ರೈವ್ ಮಾಡುತ್ತಿದ್ದೆ. ನನ್ನದು ಭಯಂಕರ ಹುಚ್ಚು ವೇಗ. ಅದೇಕೆ ಬದಲಿಸಿದೆನೋ, ಗೊತ್ತಿಲ್ಲ. ಇವತ್ತಿಗೆ ಹನ್ನೆರಡು ವರ್ಷಗಳಿಗೆ ಸರಿಯಾಗಿ ಡ್ರೈವಿಂಗ್ ಬಿಟ್ಟು ಬಿಟ್ಟೆ. ನನ್ನ ಸಾರಥಿ ರಾಜೂಗೆ ಕಾರಿನ ಸ್ಟೀರಿಂಗ್ ಕೊಟ್ಟೆ. ಓಡಿಸಲು ಕುಳಿತರೆ ಅವನದೂ ಭಯಂಕರ ವೇಗ. ಆದರೆ ಈಗ್ಗೆ ಒಂದೆರಡು ವರ್ಷಕ್ಕೆ ಮುನ್ನ “ಅಣ್ಣಾ, ನಂಗೆ ಶುರುವಾಗೋಯ್ತು ಸುಗರ್ರು" ಅಂದ. ಡಯಾಬಿಟೀಸ್ ಶುರುವಾಗಿತ್ತು. ಹೀಗಾಗಿ ದೂರದ ಊರುಗಳಿಗೆ ಬರಲು ಅವನು ಒಲ್ಲ. ನನ್ನ ಕಾರನ್ನು ಹಾಗೆಲ್ಲ ನಾನು ಅವರಿವರಿಗೆ ಡ್ರೈವ್ ಮಾಡಲು ಬಿಡುವುದಿಲ್ಲ. ರಾಜು ಹೊರತಾಗಿ ನಾನು ಬೇರೆಯವರನ್ನು ನಂಬುವುದಿಲ್ಲ. ಈಗ taxi ತರಿಸಿಕೊಳ್ಳುತ್ತೇನೆ. I am fine with that.

ಅಷ್ಟು ದೂರ ಪ್ರಯಾಣ ಮಾಡಿಯೂ ತೀರ ಮೆತ್ತಗೇನೂ ಆಗಲಿಲ್ಲ. ಆರಾಮಾಗಿ ಒಂದು ‘ಗಟ್ಟಿ ನಿದ್ರೆ’ ಮಾಡಿ ಎದ್ದು ಕುಳಿತೆ. ಇದನ್ನೆಲ್ಲ ನಾನು ದೇಹದ effeciency ಪರೀಕ್ಷೆ ಎಂಬರ್ಥದಲ್ಲಿ ಮಾಡುತ್ತಿರುತ್ತೇನೆ. ನಡೆಯುವುದು, ಊಟದ ಕೆಪ್ಯಾಸಿಟಿ, ಓದುವ ತಾಕತ್ತು ಮಿಲನ ಮಹೋತ್ಸವದ ಅವಧಿ, ನೆನಪಿನ ಶಕ್ತಿ, ನಿದ್ರೆಯ length, ಪ್ರತಿನಿತ್ಯದ ವಿಸರ್ಜನೆಗಳು-ಇವುಗಳನ್ನೆಲ್ಲ ನಾವು check ಮಾಡಿಕೊಳ್ಳುತ್ತಿರಬೇಕು. ಇವುಗಳಲ್ಲಿ ಕೆಲವು ನಮ್ಮ ದೇಹದ, ಅಂಗಾಂಗಗಳ ರಿಫ್ಲೆಕ್ಸ್‌ಗಳಿಗೆ ಸಂಬಂಧಪಟ್ಟಂಥವು. ಹದಿನೆಂಟು ವರ್ಷಗಳ ಹಿಂದೆ ಸಾಕಷ್ಟು ಹಿರಿಯರಾದ ಡಾಕ್ಟರೊಬ್ಬರು ನನಗೆ ಹೇಳಿದ್ದರು. “ಅದು ವೃಥಾ ಮಾತಲ್ಲ. ನೀವು sex ಮಾಡಿ. ಪ್ರತೀನಿತ್ಯ ತಪ್ಪದಂತೆ ಮಾಡಿ. ನಿಮಗೇ ಗೊತ್ತಿಲ್ಲದೆ ನಿಮಗೆ ಅದರಿಂದ ಉಪಯೋಗಗಳಾಗುತ್ತವೆ. ಅನೇಕ ಸಮಸ್ಯೆಗಳು ಕಾಡದಂತೆ ಅದು ನಿಮ್ಮನ್ನು ನೋಡಿಕೊಳ್ಳುತ್ತದೆ. ದೇಹಕ್ಕೆ ವಾಕಿಂಗು, ಕಸರತ್ತು ಮುಂತಾದವು ನೀಡುವಂಥ ಹಿತ ಮತ್ತು fitnessಗಳನ್ನು ಆ ಮಿಲನ ಮಹೋತ್ಸವ ನೀಡುತ್ತದೆ." ಇದನ್ನೆಲ್ಲ ಸಾಮಾನ್ಯವಾಗಿ ಡಾಕ್ಟರುಗಳು ಹೇಳುವುದಿಲ್ಲ. ಯಾವ ಸಮಸ್ಯೆಯನ್ನು ನಾವು ಹೇಳಿಕೊಳ್ಳುತ್ತೇವೆಯೋ ಆ ಸಮಸ್ಯೆಗೆ ಚಿಕಿತ್ಸೆ ಕೊಟ್ಟು ಕಳಿಸಿ ಬಿಡುತ್ತಾರೆ.

ಮಿಲನ ಮಹೋತ್ಸವದ ಮಾತು ಬಿಡಿ. ನೀರು ಕುಡಿಯಲು ನಿಮಗೆ ಯಾವುದಾದರೂ ಡಾಕ್ಟರು ಹೇಳಿದ್ದಾರಾ? “ಬೆಳಿಗ್ಗೆ ಎದ್ದ ಕೂಡಲೆ ಒಂದು ಚೊಂಬಿನಷ್ಟು ನೀರು ಕುಡೀತೇನೆ. ನನ್ನ ಆರೋಗ್ಯ ಚೆನ್ನಾಗಿದೆ" ಅಂತ ಕೆಲವರು ಅನ್ನುತ್ತಿರುತ್ತಾರೆ. ಆದರೆ ಒಂದು ಚೊಂಬಿಗೇ ಅದು ನಿಂತು ಹೋಗುವ ಮಾತಲ್ಲ. ಒಂದು ಖಾಲಿ ಬಿಸ್ಲೇರಿ ಬಾಟಲ್ ತೆಗೆದುಕೊಳ್ಳಿ. ಅದರೊಳಕ್ಕೆ ಸ್ವಚ್ಛವಾಗಿರುವ ನೀರು ತುಂಬಿ. ಅದಿಷ್ಟನ್ನೂ ನೀವು ಮಧ್ಯಾಹ್ನದ ಹತ್ತಿಗೆ ಕುಡಿದು ಮುಗಿಸಬೇಕು. ಮಧ್ಯಾಹ್ನ ಮತ್ತೆ ಬಾಟಲು ತುಂಬಿಸಿಕೊಳ್ಳಿ. ನೀವು ರಾತ್ರಿ ಊಟಕ್ಕೆ ಅರ್ಧ ಗಂಟೆ ಮುಂಚೆ ಅದನ್ನು ಕುಡಿದು ಮುಗಿಸಿರಬೇಕು. ಅಲ್ಲಿಗೆ ಎರಡು ಲೀಟರ್ ಕುಡಿದಂತಾಯಿತು. ಇದಕ್ಕಿಂಥ ಜಾಸ್ತಿ ಕುಡಿಯಲು ನಿಮಗೆ ಸಾಧ್ಯವಾದರೆ that's great. ಕೆಲವರು ಹೀಗೆ ಒಂದಿಡೀ ದಿನದಲ್ಲಿ ಐದು ಲೀಟರ್ ನೀರು ಕುಡಿಯುತ್ತಾರೆ.


ಆಯಿತಾ? ನಿಮಗೆ ಅಸಿಡಿಟಿಯ ಸಮಸ್ಯೆ ಇದೆಯಾ? ಅಂಗಡಿಯಿಂದ ಬೆಳ್ಳುಳ್ಳಿ ತರಿಸಿ. ಬೆಳ್ಳುಳ್ಳಿಯನ್ನು ನೆಲದ ಮೇಲಿಟ್ಟು ಮುಷ್ಟಿಯಿಂದ ಗುದ್ದಿದರೆ ಅದರ ಹತ್ತಿಪ್ಪತ್ತು ಎಸಳುಗಳು ಚೆಲ್ಲಾಪಿಲ್ಲಿಯಾಗುತ್ತವೆ. ಹಳ್ಳಿಯ ಜನ “ಗಿಡ್ಡೀನ ಬಡಿದರೆ ಮನೆ ತುಂಬ ಮಕ್ಕಳು" ಅಂತ ಗಾದೆ ಹೇಳುತ್ತಾರೆ. ನೀವು ಮುಷ್ಟಿಯಿಂದ ಗುದ್ದಿದಾಗ ಚೆಲ್ಲಾಪಿಲ್ಲಿಯಾಗುವ ಎಸಳುಗಳ ಪೈಕಿ ಒಂದೇ ಒಂದು ಎಸಳು ಎತ್ತಿಕೊಂಡು ಬೆಳಿಗ್ಗೆ ಎದ್ದ ತಕ್ಷಣ ಅದನ್ನು ನೀರಿನ ಜೊತೆಯಲ್ಲಿ ಸುಮ್ಮನೆ ನುಂಗಿಬಿಡಿ. ಕಚ್ಚಬೇಡಿ. ಅದರ ತೆಳುವಾದ ಸಿಪ್ಪೆ ಬಿಡಿಸಿ, ಮಾತ್ರೆ ನುಂಗಿದ ಹಾಗೆ ನುಂಗಿ ಬಿಡಿ. ಕೆಲವು ದಿನ ಹೀಗೆ ಮಾಡಿದರೆ, ನಿಮಗೆ ವರ್ಷಗಟ್ಟಲೆ ಅಸಿಡಿಟಿ ಸಮಸ್ಯೆ ಬರುವುದಿಲ್ಲ. ನಮ್ಮ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದ ಹೆಣ್ಣು ಮಗಳೊಬ್ಬಾಕೆ ನನಗೆ ಇದನ್ನು ಹೇಳಿದ್ದಳು. ಈಗ ನಾನು ಅಸಿಡಿಟಿ ಮಾತ್ರೆ ಅಥವಾ ಜೆಲ್ಯೂಸಿಲ್ ಇಟ್ಟುಕೊಳ್ಳುವುದಿಲ್ಲ.

Of course, ನಾನು ಅರ್ಹ ವೈದ್ಯರು ಕೊಡುವ ಇಂಗ್ಲಿಷ್ ಔಷಧಿಗಳನ್ನು ಬಿಟ್ಟು ಬೇರೆ ಯಾವ ಮಾತ್ರೆಯನ್ನೂ ನುಂಗುವುದಿಲ್ಲ. ಕಷಾಯ, ಖಾಡೆ, ಆಯುರ್ವೇದಿಕ್ ಭಸ್ಮ, ಚೂರ್ಣ, ಔಷಧಯುಕ್ತ ಪೌಡರು, ಹೋಮಿಯೋಪತಿ ವೈದ್ಯರು ಕೊಡುವ ಆ ಚಿಕ್ಕ ಚಿಕ್ಕ ಬಿಳೀ ಮಾತ್ರೆಗಳು- ಇಂಥ ಯಾವುದನ್ನೂ ಬಲಗೈಯಿಂದ ಮುಟ್ಟುವುದೂ ಇಲ್ಲ. ಆದರೆ ಇಂಥ ನಾನು (!) ಕೆಲವು ಬಾರಿ ಈ ಶಪಥ ಮುರಿಯುತ್ತೇನೆ. ಉದಾಹರಣೆಗೆ: ಕಾಮಾಲೆ ರೋಗ. ಅದಕ್ಕೆ ಇಂಗ್ಲಿಷ್ ವೈದ್ಯರ ಹತ್ತಿರ ಚಿಕಿತ್ಸೆ ಇಲ್ಲ. ನೀವು ಕೇಳಿ ನೋಡಿ? ಅವರು ಲಿವ್-೫೨ ಎಂಬ ಟಾನಿಕ್‌ನಂತಹ ಔಷಧಿ ಬರೆದುಕೊಡುತ್ತಾರೆ. ಒಂದು ಬಾಟಲಿಯಲ್ಲ: ಆ ಲಿವ್-೫೨ ದ್ರವವನ್ನು ನೀವು ಒಂದಿಡೀ ಬಕೆಟ್ ತುಂಬ ಸುರುವಿ, ಚೊಂಬಿನಲ್ಲಿ ತುಂಬಿಕೊಂಡು ಕುಡಿದರೂ ನಿಮ್ಮ ಕಾಮಾಲೆ ವಾಸಿಯಾಗುವುದಿಲ್ಲ. ಅದನ್ನು ನೀವು ಕೊಂಡು, ಕುಡಿದರೆ ‘ಹಿಮಾಲಯ ಡ್ರಗ್ಸ್’ ಎಂಬ ಕಂಪೆನಿಗೆ ಲಾಭವಾಗುತ್ತದೆ, ಅಷ್ಟೆ. ಕಾಮಾಲೆಗೆ ಅದೇನಿದ್ದರೂ ಆ ‘ಹಸಿರು ಔಷಧಿಯೇ ಸರಿ. ಒಂದೇ ಒಂದು ಅಕ್ಷರ ಓದಿರದ ಹಳ್ಳಿಗಳಲ್ಲಿನ ಅಜ್ಜಿಯರು ಖುದ್ದಾಗಿ ಹೋಗಿ ಅದೆಂಥದೋ ಸೊಪ್ಪುಗಳನ್ನು ತಂದು, ಅರೆದು, ನೀರು ಬೆರೆಸಿ ಕೆಲವು ಸಲ ಕುಡಿಯಲು ಕೊಡುತ್ತಾರೆ. ಮತ್ತೆ ಕೆಲವು ಅಜ್ಜಿಯರು ಆ ರಸವನ್ನು ಮೂಗಿನಲ್ಲಿ ಹಿಂಡುತ್ತಾರೆ. ಅದು ಯಾವ ಸೊಪ್ಪು, ಎಂಥ ಬೇರು, ರಸ ತಯಾರಿಸುವುದು ಹೇಗೆ ಅಂತ ಕೇಳಿ ನೋಡಿ? “ಕಾಡಿನ ಸೊಪ್ಪು ಸ್ವಾಮಿ.." ಅನ್ನುತ್ತಾರೆಯೇ ಹೊರತು ಗುಟ್ಟು ಬಿಟ್ಟುಕೊಡುವುದಿಲ್ಲ. ಆ ಹಸಿರು ಔಷಧಿ ಮಾತ್ರ ಈ ಕಾಮಾಲೆ ಖಾಯಿಲೆಯನ್ನು ವಾಸಿ ಮಾಡುತ್ತದೆ : not liv-೫೨. ಒಂದು ನೆಮ್ಮದಿಯ ಸಂಗತಿಯೆಂದರೆ, ಸಾಯುವ ಮುನ್ನ ಆ ಅಜ್ಜಿಯರು ಒಬ್ಬರ‍್ಯಾರಿಗೋ ತಮ್ಮ ರಹಸ್ಯ ವಿದ್ಯೆಯನ್ನು ಹೇಳಿಕೊಟ್ಟು ಹೋಗಿರುತ್ತಾರೆ.

ಬೆಳ್ಳುಳ್ಳಿಯ ಬಗ್ಗೆ ಹೇಳಿದೆನಲ್ಲ? ನೀವು ರಾತ್ರಿ ಮಲಗುತ್ತೀರಿ. ಬೆಳಗಿನ ಜಾವ ನಾಲ್ಕೋ-ಐದೋ, ಆರೋ ಗಂಟೆಗೆ ಏಳಿ. ಬ್ರಷ್ ಮಾಡಬೇಡಿ. ಆಗಲೇ ಹೇಳಿದಂತೆ ಎರಡು ಎಸಳು ಬೆಳ್ಳುಳ್ಳಿ ತೆಗೆದುಕೊಳ್ಳಿ. ಒಂದೇ ಒಂದು ಲವಂಗ ತೆಗೆದುಕೊಳ್ಳಿ. ಎರಡು ಬೆಳ್ಳುಳ್ಳಿ ಎಸಳುಗಳ ಮಧ್ಯೆ ಒಂದು ಲವಂಗ ಇಟ್ಟು ಅಮುಕಿ. ಅದು ಕಚ್ಚಿಕೊಳ್ಳುತ್ತದೆ. ಅದಿಷ್ಟನ್ನೂ ಚೆನ್ನಾಗಿ ಅಗೆದು ತಿಂದುಬಿಡಿ. ಆಮೇಲೆ ಆರಾಮಾಗಿ ಮಲಗಿ, ಎಂಟೋ-ಒಂಬತ್ತೋ ಗಂಟೆಗೆ ಎದ್ದು ಎಂದಿನಂತೆ ಬ್ರಷ್ ಮಾಡಿ. ಅದರ ಅಡ್ಡ ವಾಸನೆ ಆಗ ಇರುವುದಿಲ್ಲ. ಇದನ್ನು ಇಂತಿಷ್ಟು ದಿನ ಅಂತ ಹೇಳುವುದಿಲ್ಲ. ನಿರಂತರವಾಗಿ ಮಾಡಿ: ನಿಮಗೆ ಹೃದಯದ ಸಮಸ್ಯೆ ಸಾಮಾನ್ಯವಾಗಿ ಬರುವುದಿಲ್ಲ. ಬೆಳ್ಳುಳ್ಳಿ ಎಂಬುದು ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ವಿಶೇಷವೆಂದರೆ, ನೀವು ಬೆಳ್ಳುಳ್ಳಿಯನ್ನು ಹಸಿಯಾಗಿ ತಿನ್ನಿ, ಹುರಿದುಕೊಂಡು ತಿನ್ನಿ, ಕುಕ್ಕರ್‌ನಲ್ಲಿ ಅಕ್ಕಿಯ ಜೊತೆಗೆ ಬೇಯಿಸಿ ತಿನ್ನಿ - ಬೆಳ್ಳುಳ್ಳಿಯ ಸತ್ವ, ಗುಣ-ಯಾವುದೂ ಮಾಯವಾಗಿರುವುದಿಲ್ಲ. ಬೇರೆ ಏನೂ ಬೇಡ ಅಥವಾ ಬೇರೆಯದೇನೂ ಇಲ್ಲ ಅಂತ ಮನೆಯಾಕೆ ಹೇಳಿದಾಗ “ಸರಿ, ಬೆಳ್ಳುಳ್ಳಿ fry ಮಾಡಿ ಊಟದ ಜೊತೆ ಕೊಡು" ಅನ್ನುತ್ತೇನೆ. ಕುಡಿಯುತ್ತಿದ್ದ ಕಾಲದಲ್ಲಿ ನನಗೆ ಅದೇ fry ಬೇಕಾಗುತ್ತಿತ್ತು. ನನ್ನ ಪಾಲಿಗೆ ಅದೇ snacks.

“ಅದು ತುಂಬ ಹೀಟು" ಅನ್ನುತ್ತಾರೆ. ಖಂಡಿತ ಅಲ್ಲ. ಆಂಧ್ರದವರು ಅಕ್ಷರಶಃ ಬೆಳ್ಳುಳ್ಳಿ ಪಲ್ಯೆ ಮಾಡಿ, ಊಟದುದ್ದಕ್ಕೂ ತಿನ್ನುತ್ತಾರೆ: ನಾವು ಬೆಂಡೆ ಕಾಯಿ ಪಲ್ಯೆ ತಿಂದಂತೆ. Heat ಎಂಬುದು ನಿಮಗೂ ಆಗುವುದಿಲ್ಲ: ಬೆಳ್ಳುಳ್ಳಿಗೂ ಆಗುವುದಿಲ್ಲ. ಆದರೆ ವಿಪರೀತ ಮಡಿವಂತ ಬ್ರಾಹ್ಮಣರು, ಅದರಲ್ಲೂ ಮಾಧ್ವರು ಬೆಳ್ಳುಳ್ಳಿ ತಿನ್ನುವುದಿಲ್ಲ. “ನೆಲದ ಒಳಗೆ" ಬೆಳೆದ ಯಾವುದನ್ನೂ ಅವರು ತಿನ್ನುವುದಿಲ್ಲ. ಈರುಳ್ಳಿ, ಆಲೂಗಡ್ಡೆ, ಗೆಣಸು ಮುಂತಾದ ಯಾವುದನ್ನೂ ತಿನ್ನುವುದಿಲ್ಲ. ಅಷ್ಟೊಂದು ರುಚಿಯಾದ ಕೆಸವಿನ ಗಡ್ಡೆ ಕೂಡ ಅವರು ತಿನ್ನುವುದಿಲ್ಲ. ನೀವು ಪರೀಕ್ಷಿಸಿ ನೋಡಿ: ಉತ್ತರ ಕರ್ನಾಟಕದ ಅತಿ ಹೆಚ್ಚಿನ ಮನೆಗಳಲ್ಲಿ ಈರುಳ್ಳಿ, ಬೆಳ್ಳುಳ್ಳಿ, ಹಸೀ ಮೆಂತ್ಯದ ಸೊಪ್ಪು ಮುಂತಾದವುಗಳು ಇಲ್ಲದೆ ಊಟವೇ ಆಗುವುದಿಲ್ಲ.

ನನ್ನ ಗೆಳೆಯನೊಬ್ಬ ವಿಪರೀತವಾಗಿ ಹಸಿ ಈರುಳ್ಳಿ ತಿನ್ನುತ್ತಿದ್ದ. “ಯಾಕೋ ಇದು, ಈಪರಿ ತಿಂತೀಯ?" ಅಂತ ಕೇಳಿದರೆ, “ನಿಂಗೊತ್ತಿಲ್ಲ. ಇದು ‘ಅದಕ್ಕೆ’ ತುಂಬ ಒಳ್ಳೆಯದು ಅನ್ನುತ್ತಿದ್ದ. ಅಸಲಿಗೆ ಈರುಳ್ಳಿಗೂ ‘ಅದಕ್ಕೂ’ ಎಲ್ಲಿಂದೆಲ್ಲಿಯ ಸಂಬಂಧ? ಆದರೆ ಹೇಳಿದ್ದನ್ನೆಲ್ಲ ನಂಬುವವರು ಅದನ್ನು ‘ಬಾಬು ಟಾನಿಕ್’ ಅಂತಾರೆ. ಅದನ್ನು ಚಡಾ-ಬಡಾ ತಿನ್ನುತ್ತಾರೆ. ‘ಟಾನಿಕ್’ ಕೆಲಸ ಮಾಡಿತಾ? ಒಬ್ಬನೂ ಎದ್ದು ಬಂದು ವರದಿ ಒಪ್ಪಿಸುವುದಿಲ್ಲ.
ಇದನ್ನೆಲ್ಲ ಬರಿಯೋದಕ್ಕೆ ಶುರು ಮಾಡಿದ್ನಲ್ರೀ ಅನ್ನುತ್ತೀರೇನೋ? ನನಗೂ ಆ ಉಮ್ಮೇದಿ ಇರಲಿಲ್ಲ. ಬೇರೇನೋ ಬರೆಯುವ ಇರಾದೆಯಲ್ಲಿದ್ದೆ. ಆದರೆ ಇಳಕಲ್ಲಿನ ಗೆಳೆಯ ರವಿ ಅಲ್ಲೊಂದು ಊಟ ಮಾಡಿಸಿದ. ಪಕ್ಕಾ ಉತ್ತರ ಕರ್ನಾಟಕದ ರೊಟ್ಟಿ ಊಟ. ಅದರ ರೆಫರೆನ್ಸೇ ಇದನ್ನೆಲ್ಲ ಬರೆಯುವಂತೆ ಮಾಡಿತು.

In fact, ಅದೊಂದು ಚಟ. ಅಸಲಿಗೆ ಯಾವ ಡಿಗ್ರಿಯೂ ಇರದ, ಸರಿಯಾಗಿ ತಿಳಿದುಕೊಂಡೂ ಇರದ ಮಂದಿಯ ಎದಿರು, “ಯಾಕೋ ಬೆನ್ನು ನೋವು" ಅಂದುಬಿಡಿ. ಅಲ್ಲಿ ನಾಲ್ಕೈದು ಜನ ಇದ್ದರಂತೂ ಮುಗಿದೇ ಹೋಯಿತು. ತಲೆಗೊಂದರಂತೆ ಚಿಕಿತ್ಸಾ ನಮೂನೆಗಳನ್ನು ಭಯಂಕರ ಬುದ್ಧಿವಂತರಂತೆ ಹೇಳತೊಡಗುತ್ತಾರೆ. ಅವರಿಗೆ ಹೋಗಬೇಕಾದದ್ದಾದರೂ ಏನಿದೆ? “ನಂಗೆ ಕಾಫಿ ಕೊಡಿ. ಅದಕ್ಕೆ ಸಕ್ಕರೆ ಹಾಕಬೇಡಿ" ಅನ್ನುತ್ತಿದ್ದಂತೆಯೇ ಶುರು. ನೀವು ಒಂದ್ಕೆಲ್ಸಾ ಮಾಡಿ. ಹಾಗಲಕಾಯಿ ರಸಕ್ಕೆ, ಬನ್ನಿ ಎಲೆಯ ರಸ ಸೇರಿಸೀ..." ಅಂತ ಕೆಲಸಕ್ಕೆ ಬಾರದ ‘ಶಾಣ್ಯಾತನ’ ಮಾಡಲಾರಂಭಿಸುತ್ತಾರೆ. “ಆ ಖಾಯಿಲೆ ಬಂದಾಗ ನೀನಿನ್ನೂ ಹುಟ್ಟಿರಲಿಲ್ಲ: ಅಮಿಕ್ಕಂಡು ಕೂತ್ಕಳಪ್ಪ" ಅಂದು ಎದ್ದು ಬರುತ್ತೇನೆ.

ಈ ಬಗ್ಗೆ ಆಚಾರ್ಯ ರಜನೀಶ್ ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿ ಒಂದು ಅದ್ಭುತವಾದ ಮಾತು ಹೇಳಿದ್ದಾರೆ. “ಹತ್ತು ಜನ ನಿಷ್ಣಾತ ವೈದ್ಯರನ್ನೂ ಟೇಬಲ್ಲಿನ ಸುತ್ತ ಕೂಡಿಸಿ, ಆರೋಗ್ಯದ ಬಗ್ಗೆ ಮಾತನಾಡಿ ಅನ್ನಿ. ಒಬ್ಬರಾದ ಮೇಲೊಬ್ಬರಂತೆ ಆ ಡಾಕ್ಟರುಗಳು ಖಾಯಿಲೆಗಳ ಬಗ್ಗೆ ಮಾತನಾಡುತ್ತಾರೆ!"
ಇದು ಅಪ್ಪಟ ಸತ್ಯವಲ್ಲವೆ?

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 02 December, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books